ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಒಂಟಿತನವನ್ನು ನಾನು ಹೇಗೆ ದೂರಮಾಡಬಲ್ಲೆ?

ನನ್ನ ಒಂಟಿತನವನ್ನು ನಾನು ಹೇಗೆ ದೂರಮಾಡಬಲ್ಲೆ?

ಅಧ್ಯಾಯ 14

ನನ್ನ ಒಂಟಿತನವನ್ನು ನಾನು ಹೇಗೆ ದೂರಮಾಡಬಲ್ಲೆ?

ಅದು ಶನಿವಾರ ರಾತ್ರಿ. ಆ ಹುಡುಗನು ತನ್ನ ಕೋಣೆಯಲ್ಲಿ ಒಂಟಿಯಾಗಿ ಕುಳಿತುಕೊಂಡಿದ್ದಾನೆ.

“ನನಗೆ ವಾರಾಂತ್ಯಗಳೆಂದರೆ ಇಷ್ಟವೇ ಇಲ್ಲ!” ಎಂದು ಅವನು ಅಬ್ಬರಿಸುತ್ತಾನೆ. ಆದರೆ ಹೂಂಗುಟ್ಟಲು ಆ ಕೋಣೆಯಲ್ಲಿ ಯಾರೊಬ್ಬರೂ ಇಲ್ಲ. ಅವನು ಪತ್ರಿಕೆಯೊಂದನ್ನು ತೆಗೆದುಕೊಂಡು, ಸಮುದ್ರ ತೀರದಲ್ಲಿರುವ ಯುವ ಜನರ ಒಂದು ಗುಂಪಿನ ಚಿತ್ರವನ್ನು ನೋಡುತ್ತಾನೆ. ಅವನು ಆ ಪತ್ರಿಕೆಯನ್ನು ಗೋಡೆಗೆ ಅಪ್ಪಳಿಸುತ್ತಾನೆ. ಕಣ್ಣೀರು ಉಕ್ಕಿಹರಿಯುತ್ತದೆ. ಅವನು ತನ್ನ ಕೆಳದುಟಿಯನ್ನು ಕಚ್ಚಿಹಿಡಿಯುತ್ತಾನಾದರೂ, ಕಣ್ಣೀರು ಬಲವಂತವಾಗಿ ಸುರಿಯುತ್ತಿರುತ್ತದೆ. ಅದನ್ನು ಹೆಚ್ಚು ಸಮಯದ ವರೆಗೆ ತಡೆದುಕೊಳ್ಳಲು ಅಶಕ್ತನಾಗಿ, “ನಾನೇಕೆ ಯಾವಾಗಲೂ ಒಂಟಿಯಾಗಿ ಬಿಡಲ್ಪಡುತ್ತೇನೆ?” ಎಂದು ಬಿಕ್ಕುತ್ತಾ, ಅವನು ತನ್ನ ಹಾಸಿಗೆಯ ಮೇಲೆ ಉರುಳುತ್ತಾನೆ.

ಕೆಲವೊಮ್ಮೆ ನಿಮಗೂ ಆ ರೀತಿಯ—ಲೋಕದಿಂದ ತ್ಯಜಿಸಲ್ಪಟ್ಟ, ಒಂಟಿಯಾದ, ನಿಷ್ಪ್ರಯೋಜಕವಾದ, ಮತ್ತು ಶೂನ್ಯಭಾವದ—ಅನಿಸಿಕೆಯಾಗುತ್ತದೊ? ಹಾಗಿರುವಲ್ಲಿ, ನಿರಾಶೆಗೊಳ್ಳಬೇಡಿರಿ. ಏಕೆಂದರೆ ಒಂಟಿಯಾದ ಅನಿಸಿಕೆಯಾಗುವುದು ಹುಡುಗಾಟವಲ್ಲವಾದರೂ, ಅದೇನೊ ಮಾರಕ ರೋಗವಲ್ಲ. ಸರಳವಾಗಿ ಹೇಳುವುದಾದರೆ, ಒಂಟಿತನವು ಒಂದು ಎಚ್ಚರಿಕೆಯ ಸಂಕೇತವಾಗಿದೆ. ಹಸಿವೆಯು ನಿಮಗೆ ಆಹಾರದ ಅಗತ್ಯವಿದೆಯೆಂದು ಎಚ್ಚರಿಸುತ್ತದೆ. ಒಂಟಿತನವು ನಿಮಗೆ ಸಾಹಚರ್ಯ, ಆತ್ಮೀಯತೆ, ಆಪ್ತತೆಯ ಅಗತ್ಯವಿದೆಯೆಂಬುದನ್ನು ಎಚ್ಚರಿಸುತ್ತದೆ. ಚೆನ್ನಾಗಿ ಕಾರ್ಯನಡಿಸಲಿಕ್ಕಾಗಿ ನಮಗೆ ಆಹಾರದ ಅಗತ್ಯವಿದೆ. ತದ್ರೀತಿಯಲ್ಲಿ, ಹಾಯಾದ ಅನಿಸಿಕೆಯಾಗಲು ನಮಗೆ ಸಾಹಚರ್ಯದ ಅಗತ್ಯವಿದೆ.

ಕಾವಿನಿಂದ ಹೊಳೆಯುತ್ತಿರುವ ಕೆಂಡಗಳ ಕುಪ್ಪೆಯನ್ನು ನೀವು ಎಂದಾದರೂ ಗಮನಿಸಿದ್ದೀರೊ? ಆ ರಾಶಿಯಿಂದ ನೀವು ಒಂದು ಕೆಂಡವನ್ನು ಹೊರತೆಗೆದಾಗ, ಆ ಏಕ ಕೆಂಡದ ಹೊಳಪು ಆರಿಹೋಗುತ್ತದೆ. ಆದರೆ ಕೆಂಡವನ್ನು ಪುನಃ ರಾಶಿಯೊಳಗೆ ಹಾಕಿದ ಬಳಿಕ, ಅದು ಪುನಃ ಕಾವಿನಿಂದ ಹೊಳೆಯುತ್ತದೆ! ಪ್ರತ್ಯೇಕವಾಸದಲ್ಲಿ, ಬಹಳ ಸಮಯದ ವರೆಗೆ ಮನುಷ್ಯರಾದ ನಾವು ತದ್ರೀತಿಯಲ್ಲಿ “ಕಾವಿನಿಂದ ಹೊಳೆ”ಯುವುದಿಲ್ಲ, ಅಥವಾ ಚೆನ್ನಾಗಿ ಕಾರ್ಯನಡಿಸುವುದಿಲ್ಲ. ಸಾಹಚರ್ಯಕ್ಕಾಗಿರುವ ಅಗತ್ಯವು ನಮ್ಮ ರಚನೆಯಲ್ಲಿಯೇ ನಿರ್ಮಿತವಾಗಿದೆ.

ಏಕಾಂಗಿಯಾದರೂ ಒಂಟಿಯಲ್ಲ

ಪ್ರಬಂಧಕಾರರಾದ ಹೆನ್ರಿ ಡೇವಿಡ್‌ ಥರೋ ಬರೆದುದು: “ಏಕಾಂತತೆಯಷ್ಟು ಸ್ನೇಹಪರವಾದ ಸಹವಾಸಿಯನ್ನು ನಾನೆಂದೂ ಕಂಡುಕೊಂಡಿಲ್ಲ.” ನೀವು ಒಪ್ಪುತ್ತೀರೊ? “ಹೌದು,” ಎಂದು 20 ವರ್ಷ ವಯಸ್ಸಿನ ಬಿಲ್‌ ಹೇಳುತ್ತಾನೆ. “ನನಗೆ ನಿಸರ್ಗ ಇಷ್ಟ. ಕೆಲವೊಮ್ಮೆ ನಾನು ನನ್ನ ಚಿಕ್ಕ ದೋಣಿಯಲ್ಲಿ ಕುಳಿತುಕೊಂಡು, ಸರೋವರಕ್ಕೆ ಹೋಗುತ್ತೇನೆ. ಅಲ್ಲಿ ನಾನು ಅನೇಕ ತಾಸುಗಳ ವರೆಗೆ ಒಬ್ಬೊಂಟಿಗನಾಗಿಯೇ ಕುಳಿತುಕೊಳ್ಳುತ್ತೇನೆ. ನಾನು ನನ್ನ ಜೀವಿತದೊಂದಿಗೆ ಏನು ಮಾಡುತ್ತಿದ್ದೇನೆ ಎಂಬ ವಿಷಯದಲ್ಲಿ ಚಿಂತನೆಮಾಡಲು ಇದು ನನಗೆ ಸಮಯವನ್ನು ಕೊಡುತ್ತದೆ. ನಿಜವಾಗಿಯೂ ಅದು ಆನಂದವನ್ನು ತರುತ್ತದೆ.” ಇಪ್ಪತ್ತೊಂದು ವರ್ಷ ಪ್ರಾಯದ ಸ್ಟೀವನ್‌ ಒಪ್ಪಿಕೊಳ್ಳುತ್ತಾನೆ. “ನಾನು ಒಂದು ದೊಡ್ಡ ವಾಸದಕಟ್ಟಡದಲ್ಲಿ ವಾಸಿಸುತ್ತೇನೆ” ಎಂದು ಅವನನ್ನುತ್ತಾನೆ, “ಮತ್ತು ಕೇವಲ ಒಬ್ಬೊಂಟಿಗನಾಗಿರಲಿಕ್ಕಾಗಿ ನಾನು ಕೆಲವೊಮ್ಮೆ ಕಟ್ಟಡದ ಚಾವಣಿಗೆ ಹೋಗುತ್ತೇನೆ. ನಾನು ತುಸು ಆಲೋಚನೆಮಾಡಿ, ಪ್ರಾರ್ಥಿಸುತ್ತೇನೆ. ಅದು ಚೈತನ್ಯದಾಯಕವಾಗಿದೆ.”

ಹೌದು, ಏಕಾಂತತೆಯ ಕ್ಷಣಗಳನ್ನು ಉತ್ತಮವಾಗಿ ಉಪಯೋಗಿಸುವಲ್ಲಿ, ಅವು ಗಾಢವಾದ ಸಂತೃಪ್ತಿಯನ್ನು ನಮಗೆ ನೀಡಬಲ್ಲವು. ಯೇಸು ಸಹ ಅಂತಹ ಕ್ಷಣಗಳಲ್ಲಿ ಆನಂದಿಸಿದನು: “ಮುಂಜಾನೆಯಲ್ಲಿ, ಇನ್ನೂ ಕತ್ತಲಿದ್ದಾಗಲೇ, [ಯೇಸು] ಎದ್ದು, ಹೊರಗೆಹೋದನು ಮತ್ತು ಏಕಾಂತವಾದ ಒಂದು ಸ್ಥಳಕ್ಕೆ ಹೋಗಿ, ಅಲ್ಲಿ ಅವನು ಪ್ರಾರ್ಥಿಸತೊಡಗಿದನು.” (ಮಾರ್ಕ 1:35, NW) ‘ಮನುಷ್ಯನು ಕ್ಷಣಮಾತ್ರವೂ ಒಂಟಿಯಾಗಿರುವುದು ಅವನಿಗೆ ಒಳ್ಳೆಯದಲ್ಲ’ ಎಂದು ಯೆಹೋವನು ಹೇಳಲಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಬದಲಾಗಿ, ಮನುಷ್ಯನು “ಒಂಟಿಯಾಗಿಯೇ ಮುಂದುವರಿಯುವುದು” (NW) ಅವನಿಗೆ ಒಳ್ಳೆಯದಾಗಿರಲಿಲ್ಲವೆಂದು ದೇವರು ಹೇಳಿದನು. (ಆದಿಕಾಂಡ 2:18-23) ಆದುದರಿಂದ, ಪ್ರತ್ಯೇಕವಾಸದ ದೀರ್ಘ ಕಾಲಾವಧಿಗಳೇ ಒಂಟಿತನಕ್ಕೆ ನಡೆಸಬಹುದು. ಬೈಬಲು ಹೀಗೆ ಎಚ್ಚರಿಸುತ್ತದೆ: “ಜನರಲ್ಲಿ ಸೇರದವನು [“ತನ್ನನ್ನು ಪ್ರತ್ಯೇಕಿಸಿಕೊಳ್ಳುವವನು,” NW] ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.”—ಜ್ಞಾನೋಕ್ತಿ 18:1.

ತಾತ್ಕಾಲಿಕ ಒಂಟಿತನ

ಕೆಲವೊಮ್ಮೆ ನಮ್ಮ ಹತೋಟಿಗೆ ಮೀರಿದ, ಹೊಸ ಸ್ಥಳವೊಂದಕ್ಕೆ ಸ್ಥಳಾಂತರಮಾಡಿದುದರ ಫಲಿತಾಂಶವಾಗಿ, ಒಬ್ಬ ಆಪ್ತ ಸ್ನೇಹಿತನಿಂದ ದೂರವಿರುವಂತಹ ಸನ್ನಿವೇಶಗಳಿಂದ ನಮ್ಮ ಮೇಲೆ ಒಂಟಿತನವು ಹೊರಿಸಲ್ಪಡುತ್ತದೆ. ಸ್ಟೀವನ್‌ ಜ್ಞಾಪಿಸಿಕೊಳ್ಳುವುದು: “ಹಿಂದೆ ವಾಸಿಸುತ್ತಿದ್ದ ಮನೆಯಲ್ಲಿ ಜೇಮ್ಸ್‌ ಮತ್ತು ನಾನು ಸ್ನೇಹಿತರಾಗಿದ್ದೆವು, ಸಹೋದರರಿಗಿಂತಲೂ ಆಪ್ತರಾಗಿದ್ದೆವು. ನಾನು ಸ್ಥಳಾಂತರಮಾಡಿದಾಗ, ಅವನನ್ನು ಕಳೆದುಕೊಳ್ಳುವೆನೆಂಬುದು ನನಗೆ ಗೊತ್ತಿತ್ತು.” ಅಗಲಿಕೆಯ ಕ್ಷಣವನ್ನು ಮರುಕಲ್ಪಿಸಿಕೊಳ್ಳುತ್ತಿದ್ದಾನೋ ಎಂಬಂತೆ ಸ್ಟೀವನ್‌ ನಿಟ್ಟುಸಿರುಬಿಡುತ್ತಾನೆ. “ನಾನು ವಿಮಾನವನ್ನು ಹತ್ತಬೇಕಾದಾಗ, ನನಗೆ ಉಸಿರುಕಟ್ಟಿದಂತಾಯಿತು. ನಾವು ತಬ್ಬಿಕೊಂಡೆವು, ಮತ್ತು ನಾನು ಅಲ್ಲಿಂದ ಹೊರಟೆ. ಅಮೂಲ್ಯವಾದ ಏನೋ ಒಂದು ಇಲ್ಲವಾಯಿತೆಂಬ ಅನಿಸಿಕೆ ನನಗಾಯಿತು.”

ಸ್ಟೀವನ್‌ಗೆ ಅವನ ಹೊಸ ಪರಿಸರವು ಹೇಗೆ ಹಿಡಿಸಿತು? “ಅದು ಕಠಿನವಾಗಿತ್ತು” ಎಂದು ಅವನು ಹೇಳುತ್ತಾನೆ. “ಹಿಂದೆ ವಾಸಿಸುತ್ತಿದ್ದ ಮನೆಯಲ್ಲಿ ನನ್ನ ಸ್ನೇಹಿತರು ನನ್ನನ್ನು ಇಷ್ಟಪಡುತ್ತಿದ್ದರು, ಆದರೆ ಇಲ್ಲಿ ನಾನು ಯಾರೊಂದಿಗೆ ಕೆಲಸಮಾಡಿದೆನೋ ಅವರಲ್ಲಿ ಕೆಲವರು, ನಾನು ಕೆಲಸಕ್ಕೆ ಬಾರದವನೋ ಎಂಬಂತಹ ಭಾವನೆಯನ್ನು ನನ್ನಲ್ಲಿ ಉಂಟುಮಾಡಿದರು. ನಾನು ಗಡಿಯಾರದ ಕಡೆಗೆ ನೋಡುತ್ತಾ, ನಾಲ್ಕು ತಾಸುಗಳ (ಅದು ಸಮಯ ವ್ಯತ್ಯಾಸವಾಗಿತ್ತು)ನ್ನು ಹಿಂದಕ್ಕೆಣಿಸುತ್ತಾ, ಜೇಮ್ಸ್‌ ಮತ್ತು ನಾನು ಈ ಸಮಯದಲ್ಲಿ ಏನನ್ನು ಮಾಡುತ್ತಿದ್ದಿರಸಾಧ್ಯವಿತ್ತೆಂಬುದನ್ನು ಆಲೋಚಿಸುತ್ತಾ ಇದ್ದುದನ್ನು ಜ್ಞಾಪಿಸಿಕೊಳ್ಳುತ್ತೇನೆ. ನನಗೆ ಒಂಟಿಯಾದ ಅನಿಸಿಕೆಯಾಯಿತು.”

ವಿಷಯಗಳು ಸುಗಮವಾಗಿ ಸಾಗದಿರುವಾಗ, ನಾವು ಅನೇಕವೇಳೆ ಗತ ಸಮಯದಲ್ಲಿ ಅನುಭವಿಸಿದ್ದ ಹೆಚ್ಚು ಉತ್ತಮವಾದ ಸಮಯಗಳ ಕುರಿತು ಚಿಂತಿಸುತ್ತೇವೆ. ಹಾಗಿದ್ದರೂ, ಬೈಬಲು ಹೇಳುವುದು: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ.” (ಪ್ರಸಂಗಿ 7:10) ಈ ಬುದ್ಧಿವಾದವೇಕೆ?

ಒಂದು ಕಾರಣವೇನೆಂದರೆ, ಸನ್ನಿವೇಶಗಳು ಹೆಚ್ಚು ಉತ್ತಮ ಸ್ಥಿತಿಗೆ ಬದಲಾಗಬಲ್ಲವು. ಆ ಕಾರಣದಿಂದಲೇ ಸಂಶೋಧಕರು ಅನೇಕವೇಳೆ “ತಾತ್ಕಾಲಿಕ ಒಂಟಿತನ”ದ ಕುರಿತಾಗಿ ಮಾತಾಡುತ್ತಾರೆ. ಹೀಗೆ ಸ್ಟೀವನ್‌ ತನ್ನ ಒಂಟಿತನವನ್ನು ಜಯಿಸಸಾಧ್ಯವಿತ್ತು. ಹೇಗೆ? “ಕಾಳಜಿ ವಹಿಸುವ ಯಾರೊಂದಿಗಾದರೂ ನನ್ನ ಭಾವನೆಗಳ ಕುರಿತಾಗಿ ಮಾತಾಡುವುದು, ಸಹಾಯ ಮಾಡಿತು. ಗತ ಸಮಯದ ವಿಷಯಗಳನ್ನು ಚಿಂತಿಸುತ್ತಾ ನೀವು ಜೀವಿಸಲು ಸಾಧ್ಯವಿಲ್ಲ. ಬೇರೆ ಜನರನ್ನು ಸಂಧಿಸುವಂತೆ, ಅವರಲ್ಲಿ ಆಸಕ್ತಿಯನ್ನು ತೋರಿಸುವಂತೆ ನಾನು ಸ್ವತಃ ನೀಡಿಕೊಂಡೆ. ಅದು ಸಫಲವಾಯಿತು; ನಾನು ಹೊಸ ಸ್ನೇಹಿತರನ್ನು ಕಂಡುಕೊಂಡೆ.” ಮತ್ತು ಜೇಮ್ಸ್‌ನ ಕುರಿತಾಗಿ ಏನು? ‘ನನ್ನ ಎಣಿಕೆ ತಪ್ಪಾಗಿತ್ತು. ಸ್ಥಳಾಂತರಮಾಡಿದ್ದು ನಮ್ಮ ಗೆಳೆತನವನ್ನು ಕೊನೆಗಾಣಿಸಲಿಲ್ಲ. ಆ ದಿನ ನಾನು ಅವನಿಗೆ ಫೋನ್‌ ಮಾಡಿದೆ. ನಾವು ಒಂದು ಗಂಟೆ 15 ನಿಮಿಷಗಳ ವರೆಗೆ ಮಾತಾಡುತ್ತಲೇ ಇದ್ದೆವು.’

ಅಸ್ಥಿಗತ ಒಂಟಿತನ

ಕೆಲವೊಮ್ಮೆಯಾದರೊ, ಒಂಟಿತನದ ಕ್ಷಯಿಸಿಬಿಡುವಂತಹ ವೇದನೆಯು ಪಟ್ಟುಹಿಡಿಯುತ್ತದೆ, ಮತ್ತು ತಪ್ಪಿಸಿಕೊಳ್ಳುವ ಮಾರ್ಗವೇ ಇಲ್ಲದಿರುವಂತೆ ತೋರುತ್ತದೆ. ಪ್ರೌಢ ಶಾಲೆಯ ಒಬ್ಬ ವಿದ್ಯಾರ್ಥಿಯಾದ ರಾನಿ ಒಕ್ಕಣಿಸುವುದು: “ನಾನು ಈ ಕ್ಷೇತ್ರದಲ್ಲಿ ಎಂಟು ವರ್ಷಗಳಿಂದ ಶಾಲೆಗೆ ಹೋಗುತ್ತಿದ್ದೇನೆ, ಆದರೆ ಆ ಸಮಯದಲ್ಲೆಲ್ಲಾ ಒಬ್ಬನೇ ಒಬ್ಬ ಸ್ನೇಹಿತನನ್ನು ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ! . . . ನನಗೆ ಯಾವ ಅನಿಸಿಕೆಯಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ ಮತ್ತು ಯಾರೂ ನನ್ನ ಕಾಳಜಿ ವಹಿಸುವುದಿಲ್ಲ. ಕೆಲವೊಮ್ಮೆ ಅದನ್ನು ನಾನು ಇನ್ನೆಂದಿಗೂ ತಾಳಿಕೊಳ್ಳಲಾರೆ ಎಂದು ನಾನು ಆಲೋಚಿಸುತ್ತೇನೆ!”

ರಾನಿಯಂತೆ, ಅನೇಕವೇಳೆ ಯಾವುದು ಅಸ್ಥಿಗತ ಒಂಟಿತನವೆಂದು ಕರೆಯಲ್ಪಡುತ್ತದೋ ಅದನ್ನು ಅನೇಕ ಹದಿವಯಸ್ಕರು ಅನುಭವಿಸುತ್ತಾರೆ. ಇದು ತಾತ್ಕಾಲಿಕ ಒಂಟಿತನಕ್ಕಿಂತಲೂ ಹೆಚ್ಚು ಗಂಭೀರವಾದದ್ದಾಗಿದೆ. ವಾಸ್ತವವಾಗಿ, ಈ ಎರಡು ವಿಷಯಗಳು, “ಸಾಮಾನ್ಯ ನೆಗಡಿ ಹಾಗೂ ನ್ಯುಮೋನಿಯದಷ್ಟು ವಿಭಿನ್ನವಾಗಿವೆ” ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಆದರೆ ನ್ಯುಮೋನಿಯವನ್ನು ವಾಸಿಮಾಡಸಾಧ್ಯವಿರುವಂತೆಯೇ, ಅಸ್ಥಿಗತ ಒಂಟಿತನವನ್ನೂ ಹೊಡೆದೋಡಿಸಸಾಧ್ಯವಿದೆ. ಮೊದಲ ಹೆಜ್ಜೆಯು, ಅದರ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೇ ಆಗಿದೆ. (ಜ್ಞಾನೋಕ್ತಿ 1:5) ಮತ್ತು 16 ವರ್ಷ ಪ್ರಾಯದ ರ್ಹಾಂಡ, ಹೀಗೆ ಹೇಳುವ ಮೂಲಕ ಅಸ್ಥಿಗತ ಒಂಟಿತನದ ಅತ್ಯಂತ ಸಾಮಾನ್ಯ ಕಾರಣವನ್ನು ಸೂಕ್ಷ್ಮವಾಗಿ ಸೂಚಿಸುತ್ತಾಳೆ: “ನನಗೆ ಬಹಳ ಒಂಟಿತನದ ಅನಿಸಿಕೆಯಾಗುವುದಕ್ಕೆ ಇದು ಕಾರಣವಾಗಿರಬಹುದೆಂದು ನಾನು ಭಾವಿಸುತ್ತೇನೆ—ಸ್ವತಃ ನಿನ್ನ ಕುರಿತಾಗಿ ನಿನಗೆ ಕೆಟ್ಟ ಅನಿಸಿಕೆಯಾಗುವುದಾದರೆ ನಿನಗೆ ಸ್ನೇಹಿತರಿರಲಾರರು. ಮತ್ತು ನಾನು ನನ್ನನ್ನೇ ಹೆಚ್ಚು ಇಷ್ಟಪಡುವುದಿಲ್ಲವೆಂಬುದು ನನ್ನೆಣಿಕೆ.”—ಲೋನ್ಲಿ ಇನ್‌ ಅಮೆರಿಕ.

ರ್ಹಾಂಡಳ ಒಂಟಿತನವು ಅವಳ ಆಂತರ್ಯದಿಂದಲೇ ಬರುತ್ತದೆ. ಅವಳ ಕಡಿಮೆ ಆತ್ಮಾಭಿಮಾನವು, ಅವಳು ಬಿಚ್ಚುಮನಸ್ಸಿನವಳಾಗಿದ್ದು, ಸ್ನೇಹಿತರನ್ನು ಮಾಡಿಕೊಳ್ಳುವುದರಿಂದ ಅವಳನ್ನು ತಡೆಯುವ ಒಂದು ಅಡ್ಡಗಟ್ಟನ್ನು ರೂಪಿಸುತ್ತದೆ. ಒಬ್ಬ ಸಂಶೋಧಕನು ಹೇಳುವುದು: “ಅಸ್ಥಿಗತವಾಗಿ ಒಂಟಿಗರಾಗಿರುವವರಲ್ಲಿ, ‘ನಾನು ಅನಾಕರ್ಷಿತನು,’ ‘ಸ್ವಾರಸ್ಯವುಳ್ಳವನಲ್ಲ,’ ‘ನಿಷ್ಪ್ರಯೋಜಕನು’ ಎಂಬಂತಹ ಆಲೋಚನೆಗಳು ಸಾಮಾನ್ಯ ಮುಖ್ಯವಿಷಯಗಳಾಗಿವೆ.” ಹೀಗೆ ನಿಮ್ಮ ಒಂಟಿತನವನ್ನು ಜಯಿಸುವ ಕೀಲಿ ಕೈಯು, ನಿಮ್ಮ ಸ್ವಗೌರವವನ್ನು ವರ್ಧಿಸಿಕೊಳ್ಳುವುದರಲ್ಲಿಯೇ ಅಡಗಿರಬಹುದು. (12ನೆಯ ಅಧ್ಯಾಯವನ್ನು ನೋಡಿರಿ.) ದಯಾಪರತೆ, ದೀನಮನಸ್ಸು, ಮತ್ತು ಸೌಮ್ಯ ಸ್ವಭಾವದಿಂದ ವಿಶಿಷ್ಟವಾಗಿದ್ದು, ಯಾವುದನ್ನು ಬೈಬಲು “ನೂತನಸ್ವಭಾವ” ಎಂದು ಕರೆಯುತ್ತದೋ ಅದನ್ನು ವಿಕಸಿಸಿಕೊಳ್ಳುವ ಮೂಲಕ, ನಿಮ್ಮ ಸ್ವಗೌರವವು ಬೆಳೆಯುವುದು ನಿಶ್ಚಯ!—ಕೊಲೊಸ್ಸೆ 3:9-12.

ಇದಲ್ಲದೆ, ನೀವು ನಿಮ್ಮನ್ನು ಇಷ್ಟಪಡಲು ಕಲಿತಂತೆ, ಇತರರು ನಿಮ್ಮ ಆಕರ್ಷಕ ಗುಣಗಳ ಕಡೆಗೆ ಸೆಳೆಯಲ್ಪಡುವರು. ಆದರೆ ಒಂದು ಹೂವು ಅರಳಿದ ಬಳಿಕವೇ ನೀವು ಅದರ ಸಂಪೂರ್ಣ ವರ್ಣಗಳನ್ನು ನೋಡಸಾಧ್ಯವಿರುವಂತೆ, ನೀವು ಅವರೊಂದಿಗೆ ನಿಮ್ಮ ಕುರಿತಾಗಿ ಬಿಚ್ಚುಮನಸ್ಸಿನಿಂದ ಮಾತಾಡುವಲ್ಲಿ ಮಾತ್ರವೇ ಇತರರು ನಿಮ್ಮ ಗುಣಗಳನ್ನು ಪೂರ್ಣವಾಗಿ ಗಣ್ಯಮಾಡಸಾಧ್ಯವಿದೆ.

ಮಾತಾಡುವುದರಲ್ಲಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದು

‘ಒಂಟಿಯಾದ ವ್ಯಕ್ತಿಗಾಗಿ ಅತ್ಯುತ್ತಮ ಬುದ್ಧಿವಾದವು, ಬೇರೆ ಜನರೊಂದಿಗೆ ಜೊತೆಗೂಡುವುದೇ ಆಗಿದೆ’ ಎಂದು ಯು.ಎಸ್‌. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ನ ಇತ್ತೀಚಿನ ಪ್ರಕಾಶನವೊಂದು ಹೇಳುತ್ತದೆ. ಈ ಬುದ್ಧಿವಾದವು, ‘ವಿಶಾಲಗೊಳ್ಳು’ವಂತೆ ಮತ್ತು “ಸಹಭಾವ”ವನ್ನು (NW) ಅಥವಾ ಸಹಾನುಭೂತಿಯನ್ನು ತೋರಿಸುವಂತೆ ಹೇಳುವ ಬೈಬಲಿನ ಸಲಹೆಯೊಂದಿಗೆ ಸಹಮತದಲ್ಲಿದೆ. (2 ಕೊರಿಂಥ 6:11-13; 1 ಪೇತ್ರ 3:8) ಅದು ಕಾರ್ಯಸಾಧಕ. ಇತರರ ಕುರಿತು ಕಾಳಜಿ ವಹಿಸುವುದು, ನಿಮ್ಮ ಸ್ವಂತ ಒಂಟಿತನವನ್ನು ನಿಮ್ಮ ಮನಸ್ಸಿನಿಂದ ಹೊರಸೆಳೆಯುತ್ತದೆ ಮಾತ್ರವಲ್ಲ, ನಿಮ್ಮಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವಂತೆ ಇತರರನ್ನು ಪ್ರಚೋದಿಸುತ್ತದೆ.

ಹೀಗೆ ಹತ್ತೊಂಬತ್ತು ವರ್ಷ ಪ್ರಾಯದ ನ್ಯಾಟಲಿ, ಸುಮ್ಮನೆ ಕುಳಿತುಕೊಂಡು, ಜನರು ಹಾಯ್‌ ಎಂದು ಹೇಳುವ ವರೆಗೆ ಕಾಯುವ ಬದಲು, ತಾನು ಮುನ್ನೆಜ್ಜೆಯನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದಳು. ‘ನಾನು ಸ್ನೇಹಪರಳೂ ಆಗಿರಬೇಕು’ ಎಂದು ಅವಳನ್ನುತ್ತಾಳೆ. ‘ಇಲ್ಲದಿದ್ದರೆ ನಾನು ಅಹಂಕಾರಿಯೆಂದು ಜನರು ನೆನಸುವರು.’ ಆದುದರಿಂದ ಒಂದು ನಸುನಗೆಯಿಂದ ಆರಂಭಿಸಿರಿ. ಆ ವ್ಯಕ್ತಿಯೂ ನಿಮ್ಮನ್ನು ನೋಡಿ ನಸುನಗು ಬೀರಬಹುದು.

ತದನಂತರ, ಸಂಭಾಷಣೆಯೊಂದನ್ನು ಆರಂಭಿಸಿರಿ. 15 ವರ್ಷ ಪ್ರಾಯದ ಲಿಲ್ಯನ್‌ ಒಪ್ಪಿಕೊಳ್ಳುವುದು: “ಪ್ರಥಮ ಬಾರಿಗೆ ಅಪರಿಚಿತರನ್ನು ಸಮೀಪಿಸುವುದು, ನಿಜವಾಗಿಯೂ ಭಯಗೊಳಿಸುವಂತಹದ್ದಾಗಿತ್ತು. ಅವರು ನನ್ನನ್ನು ಅಂಗೀಕರಿಸುವುದಿಲ್ಲವೆಂದು ನಾನು ಭಯಗೊಂಡಿದ್ದೆ.” ಲಿಲ್ಯನ್‌ ಸಂಭಾಷಣೆಗಳನ್ನು ಹೇಗೆ ಆರಂಭಿಸುತ್ತಾಳೆ? ಅವಳನ್ನುವುದು: “‘ನೀವು ಎಲ್ಲಿಯವರು?’ ‘ಇಂತಿಂತಹವರ ಪರಿಚಯ ನಿಮಗಿದೆಯೊ?’ ಎಂಬಂತಹ ಸರಳವಾದ ಪ್ರಶ್ನೆಗಳನ್ನು ನಾನು ಕೇಳುತ್ತೇನೆ. ನಮಗಿಬ್ಬರಿಗೂ ಒಬ್ಬ ವ್ಯಕ್ತಿಯ ಪರಿಚಯವಿರಬಹುದು, ಮತ್ತು ತುಸುಹೊತ್ತಿನೊಳಗೇ ನಾವು ಮಾತುಕತೆಯಲ್ಲಿ ತೊಡಗಿರುತ್ತಿದ್ದೆವು.” ತದ್ರೀತಿಯಲ್ಲಿ ದಯಾಪರವಾದ ಕೃತ್ಯಗಳು ಮತ್ತು ಒಂದು ಉದಾರ ಮನೋಭಾವವು, ಅಮೂಲ್ಯವಾದ ಸ್ನೇಹವನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುವುದು.—ಜ್ಞಾನೋಕ್ತಿ 11:25.

ನಿಮ್ಮನ್ನು ಎಂದೂ ಆಶಾಭಂಗಪಡಿಸದ ಸ್ನೇಹಿತನೊಬ್ಬನನ್ನು ನೀವು ಪಡೆಯಬಲ್ಲಿರೆಂಬುದನ್ನು ಸಹ ನೆನಪಿನಲ್ಲಿಡಿರಿ. ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ.” (ಯೋಹಾನ 16:32) ಯೆಹೋವನು ಸಹ ನಿಮ್ಮ ಅತ್ಯಂತ ಆಪ್ತ ಸ್ನೇಹಿತನಾಗಬಲ್ಲನು. ಬೈಬಲನ್ನು ಓದುವ ಮೂಲಕ ಮತ್ತು ಆತನ ಸೃಷ್ಟಿಯನ್ನು ಗಮನಿಸುವ ಮೂಲಕ, ಆತನ ವ್ಯಕ್ತಿತ್ವವನ್ನು ತಿಳಿದುಕೊಳ್ಳಿರಿ. ಆತನೊಂದಿಗಿನ ನಿಮ್ಮ ಸ್ನೇಹವನ್ನು ಪ್ರಾರ್ಥನೆಯ ಮೂಲಕ ಬಲಪಡಿಸಿರಿ. ಅಂತಿಮವಾಗಿ, ಯೆಹೋವ ದೇವರೊಂದಿಗಿನ ಸ್ನೇಹವು, ಒಂಟಿತನಕ್ಕಾಗಿರುವ ಅತ್ಯುತ್ತಮ ಚಿಕಿತ್ಸೆಯಾಗಿದೆ.

ಆಗಿಂದಾಗ್ಗೆ ನಿಮಗೆ ಇನ್ನೂ ಒಂಟಿಯಾದ ಅನಿಸಿಕೆಯಾಗುವಲ್ಲಿ, ಬೇಸರಗೊಳ್ಳಬೇಡಿರಿ. ಅದು ತೀರ ಸಾಮಾನ್ಯವಾದ ವಿಷಯ. ಆದರೂ, ವಿಪರೀತವಾದ ನಾಚಿಕೆ ಸ್ವಭಾವವು, ಸ್ನೇಹಿತರನ್ನು ಮಾಡಿಕೊಳ್ಳುವುದರಿಂದ ಹಾಗೂ ಇತರರೊಂದಿಗೆ ಸೇರುವುದರಿಂದ ನಿಮ್ಮನ್ನು ತಡೆಯುತ್ತಿರುವುದಾದರೆ ಆಗೇನು?

ಚರ್ಚೆಗಾಗಿ ಪ್ರಶ್ನೆಗಳು

◻ ಒಂಟಿಯಾಗಿರುವುದು ಒಂದು ಕೆಟ್ಟ ವಿಷಯವಾಗಿರಬೇಕೆಂದಿದೆಯೊ? ಏಕಾಂತತೆಯಿಂದ ಪ್ರಯೋಜನಗಳಿವೆಯೊ?

◻ ಅಧಿಕಾಂಶ ಒಂಟಿತನವು ಏಕೆ ತಾತ್ಕಾಲಿಕವಾದದ್ದಾಗಿದೆ? ನಿಮ್ಮ ಸ್ವಂತ ವಿದ್ಯಮಾನದಲ್ಲಿ ಇದನ್ನು ಸತ್ಯವಾದದ್ದಾಗಿ ನೀವು ಕಂಡುಕೊಂಡಿದ್ದೀರೊ?

◻ ಅಸ್ಥಿಗತ ಒಂಟಿತನ ಎಂದರೇನು, ಮತ್ತು ನೀವದನ್ನು ಹೇಗೆ ಹೊಡೆದೋಡಿಸಬಲ್ಲಿರಿ?

◻ ಇತರರೊಂದಿಗೆ ‘ಮಾತಾಡುವುದರಲ್ಲಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದ’ರ ಕೆಲವು ವಿಧಗಳು ಯಾವುವು? ನಿಮ್ಮ ವಿಷಯದಲ್ಲಿ ಯಾವುದು ಕಾರ್ಯಗತವಾಗಿದೆ?

[ಪುಟ 220 ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಒಂಟಿಯಾದ ವ್ಯಕ್ತಿಗಾಗಿ ಅತ್ಯುತ್ತಮ ಬುದ್ಧಿವಾದವು, ಬೇರೆ ಜನರೊಂದಿಗೆ ಜೊತೆಗೂಡುವುದೇ ಆಗಿದೆ’ ಎಂದು ಯು.ಎಸ್‌. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಹೇಳುತ್ತದೆ

[ಪುಟ 116,117 ರಲ್ಲಿರುವ ಚಿತ್ರ]

ಸ್ನೇಹಿತರು ಬಹು ದೂರದಲ್ಲಿರುವುದಾದರೂ ಸಂಪರ್ಕವನ್ನಿಟ್ಟುಕೊಳ್ಳಸಾಧ್ಯವಿದೆ

[ಪುಟ 118 ರಲ್ಲಿರುವ ಚಿತ್ರ]

ಏಕಾಂತತೆಯ ಸಮಯಾವಧಿಗಳು ಆನಂದದಾಯಕವಾಗಿರಸಾಧ್ಯವಿದೆ