ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ನನ್ನನ್ನೇ ಇಷ್ಟಪಡುವುದಿಲ್ಲವೇಕೆ?

ನಾನು ನನ್ನನ್ನೇ ಇಷ್ಟಪಡುವುದಿಲ್ಲವೇಕೆ?

ಅಧ್ಯಾಯ 12

ನಾನು ನನ್ನನ್ನೇ ಇಷ್ಟಪಡುವುದಿಲ್ಲವೇಕೆ?

“ನಾನೊಬ್ಬ ವಿಶೇಷ ವ್ಯಕ್ತಿಯೆಂಬ ಅನಿಸಿಕೆ ನನಗಾಗುವುದೇ ಇಲ್ಲ” ಎಂಬುದಾಗಿ ಲುಈಸ್‌ ಪ್ರಲಾಪಿಸಿದಳು. ನಿಮಗೂ ಆಗಾಗ್ಗೆ ನಿಮ್ಮ ಕುರಿತಾಗಿ ಕೆಟ್ಟ ಅನಿಸಿಕೆಯಾಗುತ್ತದೊ?

ನಿಜವಾಗಿಯೂ, ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಪ್ರಮಾಣದ ಆತ್ಮಾಭಿಮಾನದ ಅಗತ್ಯವಿದೆ. ಅದು “ಮಾನವ ಅಸ್ತಿತ್ವಕ್ಕೆ ಘನತೆಯನ್ನು ಕೊಡುವಂತಹ ಘಟಕ”ವೆಂದು ಕರೆಯಲ್ಪಟ್ಟಿದೆ. ಇದಲ್ಲದೆ, ಬೈಬಲು ಹೇಳುವುದು: “ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ಪ್ರೀತಿ ಮಾಡಬೇಕು.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 19:19) ಮತ್ತು ನಿಮ್ಮ ಕುರಿತಾಗಿಯೇ ನೀವು ಕೆಟ್ಟದ್ದಾಗಿ ಭಾವಿಸುವುದಾದರೆ, ಇತರರ ಕುರಿತಾಗಿಯೂ ನೀವು ಬಹುಶಃ ಕೆಟ್ಟದ್ದಾಗಿ ಭಾವಿಸುವವರಾಗಿರುವಿರಿ.

‘ನಾನು ಏನೊಂದನ್ನೂ ಸರಿಯಾಗಿ ಮಾಡಲಾರೆ!’

ನಿಮ್ಮ ಕುರಿತಾಗಿಯೇ ನಿಮಗೆ ಈ ನಕಾರಾತ್ಮಕ ಅನಿಸಿಕೆಗಳು ಏಕೆ ಇರಬಹುದು? ಒಂದು ಕಾರಣವೇನೆಂದರೆ, ನಿಮ್ಮ ದೌರ್ಬಲ್ಯಗಳು ನಿಮ್ಮನ್ನು ಆಶಾಭಂಗಪಡಿಸಬಹುದು. ನೀವು ಬೆಳೆಯುತ್ತಿದ್ದೀರಿ, ಮತ್ತು ಅನೇಕವೇಳೆ ಮುಜುಗರಪಡುವ ಕಾಲಾವಧಿಯಿರುತ್ತದೆ. ಆಗ ವಸ್ತುಗಳನ್ನು ಬೀಳಿಸುವುದಾಗಲಿ ಅವುಗಳಿಗೆ ಡಿಕ್ಕಿಹೊಡೆಯುವುದಾಗಲಿ ದೈನಂದಿನ ಒಂದು ಪೇಚಾಟವಾಗಿರುತ್ತದೆ. ಅದಲ್ಲದೆ, ಆಶಾಭಂಗಗಳಿಂದ ಚೇತರಿಸಿಕೊಳ್ಳುವುದರಲ್ಲಿ ನಿಮಗೆ ಒಬ್ಬ ವಯಸ್ಕನ ಅನುಭವವು ಇರುವುದಿಲ್ಲ. ಮತ್ತು ನಿಮ್ಮ “ಗ್ರಹಿಸುವ ಶಕ್ತಿಗಳು” “ಉಪಯೋಗದಿಂದಾಗಿ” ಸಾಕಷ್ಟು ಮಟ್ಟಿಗೆ ತರಬೇತು ಹೊಂದಿರದೆ ಇರುವುದರಿಂದ, ನೀವು ಯಾವಾಗಲೂ ಅತ್ಯಂತ ವಿವೇಕಯುತವಾದ ನಿರ್ಣಯಗಳನ್ನು ಮಾಡದಿರಬಹುದು. (ಇಬ್ರಿಯ 5:14, NW) ಕೆಲವೊಮ್ಮೆ ನೀವು ಏನೊಂದನ್ನೂ ಸರಿಯಾಗಿ ಮಾಡಲಾರಿರಿ ಎಂದು ನಿಮಗನಿಸಬಹುದು!

ಒಬ್ಬನ ಹೆತ್ತವರ ನಿರೀಕ್ಷಣೆಗಳನ್ನು ತಲಪಲು ಅಸಫಲರಾಗುವುದು, ಕಡಿಮೆ ಆತ್ಮಾಭಿಮಾನಕ್ಕೆ ಇನ್ನೊಂದು ಕಾರಣವಾಗಿರಸಾಧ್ಯವಿದೆ. “ಶಾಲೆಯಲ್ಲಿ ನಾನು ‘ಎ ಮೈನಸ್‌’ ದರ್ಜೆಯನ್ನು ಪಡೆದುಕೊಂಡಲ್ಲಿ, ‘ಎ’ ದರ್ಜೆಯನ್ನು ಏಕೆ ಪಡೆದುಕೊಳ್ಳಲಿಲ್ಲ ಎಂಬುದನ್ನು ತಿಳಿದುಕೊಳ್ಳಲು ನನ್ನ ಹೆತ್ತವರು ಬಯಸುತ್ತಾರೆ ಮತ್ತು ನಾನು ಅಸಮರ್ಥನೆಂದು ಅವರು ಹೇಳುತ್ತಾರೆ” ಎಂಬುದಾಗಿ ಒಬ್ಬ ಯುವಕನು ಹೇಳುತ್ತಾನೆ. ತಮ್ಮ ಮಕ್ಕಳಿಗೆ ಆದಷ್ಟು ಅತ್ಯುತ್ತಮವಾದುದನ್ನು ಮಾಡುವಂತೆ ಪ್ರಚೋದಿಸುವುದು, ಹೆತ್ತವರ ಸಹಜ ಪ್ರವೃತ್ತಿಯಾಗಿದೆ ನಿಶ್ಚಯ. ಮತ್ತು ನೀವು ಸಮಂಜಸವಾದ ನಿರೀಕ್ಷಣೆಗಳ ಗುರಿಮುಟ್ಟದಿರುವಾಗ, ಇದಕ್ಕಾಗಿ ನಿಮಗೆ ತಕ್ಕ ಶಾಸ್ತಿಯಾಗುತ್ತದೆ ಎಂಬುದರ ಕುರಿತು ನೀವು ಖಾತ್ರಿಯಿಂದಿರಸಾಧ್ಯವಿದೆ. ಬೈಬಲಿನ ಸಲಹೆಯೇನಂದರೆ: “ಮಗನೇ [ಅಥವಾ ಮಗಳೇ], ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ನಿರುತ್ಸಾಹಗೊಳ್ಳುವ ಬದಲಿಗೆ, ಕ್ಷೋಭೆಗೊಳ್ಳದೆ ಟೀಕೆಯನ್ನು ಸ್ವೀಕರಿಸಿ, ಅದರಿಂದ ಪಾಠವನ್ನು ಕಲಿತುಕೊಳ್ಳಿರಿ.

ಆದರೂ, ಒಬ್ಬನ ಹೆತ್ತವರು ತರವಲ್ಲದ ಹೋಲಿಕೆಗಳನ್ನು ಮಾಡುವುದಾದರೆ ಆಗೇನು? (“ನೀನು ಏಕೆ ನಿನ್ನ ಅಣ್ಣನಾದ ಪೌಲ್‌ನಂತಿರಲಾರೆ? ಅವನು ಯಾವಾಗಲೂ ಒಬ್ಬ ಭೂಷಣಪ್ರಾಯ ವಿದ್ಯಾರ್ಥಿಯಾಗಿದ್ದ.”) ಇಂತಹ ಹೋಲಿಕೆಗಳು, ಆ ಸಮಯದಲ್ಲಿ ನೋವನ್ನು ಉಂಟುಮಾಡುವಂತಹವುಗಳಾಗಿ ಕಂಡುಬರಬಹುದಾದರೂ, ಅನೇಕವೇಳೆ ಅವು ನ್ಯಾಯಸಮ್ಮತವಾಗಿರುತ್ತವೆ. ನಿಮ್ಮ ಹೆತ್ತವರು ನಿಮಗಾಗಿ ಅತ್ಯುತ್ತಮವಾದುದನ್ನೇ ಬಯಸುತ್ತಾರೆ. ಮತ್ತು ಅವರು ನಿಮ್ಮನ್ನು ಬಹಳ ಕಟುವಾಗಿ ಟೀಕಿಸುವವರಾಗಿದ್ದಾರೆಂದು ನಿಮಗೆ ಅನಿಸುವುದಾದರೆ, ನೀವು ಶಾಂತವಾಗಿ ಆ ವಿಚಾರಗಳನ್ನು ಅವರೊಂದಿಗೆ ಏಕೆ ಚರ್ಚಿಸಬಾರದು?

ಸ್ವಗೌರವವನ್ನು ಬೆಳೆಸಿಕೊಳ್ಳುವುದು

ಕ್ಷೀಣಿಸುತ್ತಿರುವ ಆತ್ಮಾಭಿಮಾನಕ್ಕೆ ನೀವು ಹೇಗೆ ಆಸರೆಕೊಡಸಾಧ್ಯವಿದೆ? ಮೊದಲಾಗಿ, ನಿಮ್ಮ ಗುಣಗಳು ಹಾಗೂ ಹೊಣೆಗಾರಿಕೆಗಳ ಕಡೆಗೆ ಪ್ರಾಮಾಣಿಕವಾಗಿ ದೃಷ್ಟಿಹರಿಸಿರಿ. ಹೊಣೆಗಾರಿಕೆಗಳೆಂದು ಕರೆಯಲ್ಪಡುವ ನಿಮ್ಮ ಅನೇಕ ವಿಷಯಗಳು ತೀರ ಕ್ಷುಲ್ಲಕವಾದವುಗಳೆಂದು ನೀವು ಕಂಡುಕೊಳ್ಳುವಿರಿ. ಮುಂಗೋಪ ಅಥವಾ ಸ್ವಾರ್ಥತೆಯಂತಹ ಗಂಭೀರ ಲೋಪದೋಷಗಳ ಕುರಿತಾಗಿ ಏನು? ಈ ಸಮಸ್ಯೆಗಳ ವಿಷಯದಲ್ಲಿ ಶುದ್ಧಾಂತಃಕರಣದಿಂದ ಕಾರ್ಯನಡಿಸಿರಿ ಮತ್ತು ಆಗ ನಿಮ್ಮ ಸ್ವಗೌರವವು ಖಂಡಿತವಾಗಿಯೂ ವೃದ್ಧಿಗೊಳ್ಳುವುದು.

ಇದಲ್ಲದೆ, ನಿಮಗೆ ಈಗಾಗಲೇ ಗುಣಲಕ್ಷಣಗಳಿವೆ ಎಂಬ ವಾಸ್ತವಾಂಶಕ್ಕೆ ನಿಮ್ಮನ್ನು ಕುರುಡರನ್ನಾಗಿಸಿಕೊಳ್ಳಬೇಡಿರಿ! ಅಡುಗೆಮಾಡಲು ಅಥವಾ ಗಾಳಿಯಿಲ್ಲದ ಟಯರನ್ನು ತೆಗೆದು ಬೇರೆ ಟಯರನ್ನು ಅಳವಡಿಸಲು ಶಕ್ತರಾಗಿರುವುದು, ಅಷ್ಟೊಂದು ಪ್ರಾಮುಖ್ಯವಾದ ವಿಷಯವೆಂದು ನೀವು ಭಾವಿಸದಿರಬಹುದು. ಆದರೆ ನಿಮಗೆ ಅಂತಹ ಕೌಶಲಗಳಿರುವುದಕ್ಕಾಗಿ, ಹಸಿದ ಒಬ್ಬ ವ್ಯಕ್ತಿಯೊ ಇಕ್ಕಟ್ಟಿಗೆ ಸಿಲುಕಿರುವ ಒಬ್ಬ ಮೋಟಾರಿಗನೊ ನಿಮ್ಮನ್ನು ಹೊಗಳುವನು! ನಿಮ್ಮ ಸದ್ಗುಣಗಳ ಕುರಿತೂ ಆಲೋಚಿಸಿರಿ. ನೀವು ವ್ಯಾಸಂಗನಿಷ್ಠರೊ? ತಾಳ್ಮೆಯುಳ್ಳವರೊ? ಸಹಾನುಭೂತಿಯುಳ್ಳವರೊ? ಉದಾರಿಗಳೊ? ದಯಾಪರರೊ? ಈ ಗುಣಗಳು ಸಣ್ಣಪುಟ್ಟ ಲೋಪದೋಷಗಳಿಗಿಂತ ಹೆಚ್ಚು ಪ್ರಭಾವಯುತವಾಗಿರುತ್ತವೆ.

ಈ ಸಂಕ್ಷಿಪ್ತ ತಾಳೆಪಟ್ಟಿಯನ್ನು ಪರಿಗಣಿಸುವುದು ಸಹ ಸಹಾಯ ಮಾಡಬಹುದು:

ವಾಸ್ತವವಾದ ಗುರಿಗಳನ್ನಿಡಿರಿ: ನೀವು ಯಾವಾಗಲೂ ನಕ್ಷತ್ರಗಳ ಕಡೆಗೆ ಗುರಿಯಿಡುವುದಾದರೆ, ತೀವ್ರವಾದ ಆಶಾಭಂಗವನ್ನು ಅನುಭವಿಸಸಾಧ್ಯವಿದೆ. ಸಾಧಿಸಬಲ್ಲಂತಹ ಗುರಿಗಳನ್ನಿಡಿರಿ. ಟೈಪಿಂಗ್‌ನಂತಹ ಒಂದು ಕೌಶಲವನ್ನು ಕಲಿಯುವುದರ ಕುರಿತಾಗಿ ಏನು? ಒಂದು ಸಂಗೀತ ವಾದ್ಯವನ್ನು ನುಡಿಸಲು ಅಥವಾ ಬೇರೊಂದು ಭಾಷೆಯನ್ನು ಮಾತಾಡಲು ಕಲಿಯಿರಿ. ನಿಮ್ಮ ವಾಚನದಲ್ಲಿ ಪ್ರಗತಿ ಮಾಡಿರಿ ಅಥವಾ ಬೇರೆ ಬೇರೆ ವಿಷಯಗಳನ್ನು ಓದಿರಿ. ಸಾಧನೆಯ ಪ್ರಯೋಜನಕರವಾದ ಉಪಫಲವು ಸ್ವಗೌರವವಾಗಿದೆ.

ಒಳ್ಳೆಯದಾಗಿ ಕೆಲಸವನ್ನು ಮಾಡಿರಿ: ನೀವು ಕಳಪೆಯಾದ ಕೆಲಸವನ್ನು ಮಾಡುವುದಾದರೆ, ನಿಮ್ಮ ಕುರಿತಾಗಿ ನಿಮಗೆ ಒಳ್ಳೆಯ ಭಾವನೆಯಿರುವುದಿಲ್ಲ. ದೇವರು ತನ್ನ ಸೃಷ್ಟಿಯ ಕಾರ್ಯಗಳಲ್ಲಿ ಸುಖಾನುಭವವನ್ನು ಪಡೆದುಕೊಂಡನು ಮತ್ತು ಸೃಷ್ಟಿಯ ಯುಗಾರಂಭಗಳನ್ನು ಪೂರ್ಣಗೊಳಿಸಿದಾಗ, ಅವುಗಳನ್ನು “ಒಳ್ಳೇದೆಂದು” ಘೋಷಿಸಿದನು. (ಆದಿಕಾಂಡ 1:3-31) ನೀವು ಸಹ ಮನೆಯಲ್ಲಿ ಅಥವಾ ಶಾಲೆಯಲ್ಲಿ ಯಾವುದೇ ಕೆಲಸವನ್ನು ಮಾಡಲಿ, ಅದನ್ನು ಚಾತುರ್ಯದಿಂದಲೂ ಶುದ್ಧಾಂತಃಕರಣದಿಂದಲೂ ಮಾಡುವುದರಿಂದ ಸುಖಾನುಭವವನ್ನು ಪಡೆದುಕೊಳ್ಳಬಲ್ಲಿರಿ.—ಜ್ಞಾನೋಕ್ತಿ 22:29ನ್ನು ನೋಡಿರಿ.

ಇತರರಿಗೆ ಸಹಾಯ ಮಾಡಿರಿ: ಸುಮ್ಮನೆ ಕುಳಿತುಕೊಂಡು, ಇತರರು ನಿಮ್ಮ ಚಾಕರಿಮಾಡುವಂತೆ ಕಾಯುವುದರಿಂದ ಸ್ವಗೌರವವು ಸಂಪಾದಿಸಲ್ಪಡುವುದಿಲ್ಲ. “ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು . . . ಸೇವಕನಾಗಿರಬೇಕು,” ಅಥವಾ ಇತರರಿಗೆ ದಾಸನಾಗಿರಬೇಕು ಎಂಬುದಾಗಿ ಯೇಸು ಹೇಳಿದನು.—ಮಾರ್ಕ 10:43-45.

ಉದಾಹರಣೆಗಾಗಿ, 17 ವರ್ಷ ಪ್ರಾಯದ ಕಿಮ್‌, ಬೇಸಗೆ ರಜೆಯ ಪ್ರತಿಯೊಂದು ತಿಂಗಳು 60 ತಾಸುಗಳನ್ನು, ಬೈಬಲ್‌ ಸತ್ಯತೆಗಳನ್ನು ಕಲಿಯುವಂತೆ ಇತರರಿಗೆ ಸಹಾಯ ಮಾಡುವುದಕ್ಕಾಗಿ ವಿನಿಯೋಗಿಸಿದಳು. ಅವಳನ್ನುವುದು: “ಇದು ನನಗೆ ಯೆಹೋವನೊಂದಿಗೆ ಹೆಚ್ಚು ಆಪ್ತ ಸಂಬಂಧವನ್ನು ಹೊಂದುವಂತೆ ಮಾಡಿದೆ. ಇದು ನಾನು ಜನರಿಗಾಗಿ ನೈಜ ಪ್ರೀತಿಯನ್ನು ವಿಕಸಿಸಿಕೊಳ್ಳುವಂತೆಯೂ ಸಹಾಯ ಮಾಡಿದೆ.” ಈ ಸಂತೋಷಭರಿತ ಯುವತಿಯು ಸ್ವಗೌರವದ ಕೊರತೆಯುಳ್ಳವಳಾಗಿರುವುದು ಅಸಂಭವನೀಯ!

ನಿಮ್ಮ ಸ್ನೇಹಿತರನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿರಿ: “ಸ್ವತಃ ನನ್ನೊಂದಿಗಿನ ನನ್ನ ಸಂಬಂಧವು ಹೆಚ್ಚು ಅಸಂತೋಷಕರವಾದದ್ದಾಗಿದೆ” ಎಂದು 17 ವರ್ಷ ಪ್ರಾಯದ ಬಾರ್ಬರ ಹೇಳಿದಳು. “ನನ್ನಲ್ಲಿ ಭರವಸೆಯುಳ್ಳ ಜನರೊಂದಿಗೆ ಇರುವಾಗ, ನಾನು ಒಳ್ಳೆಯ ಕೆಲಸವನ್ನು ಮಾಡುತ್ತೇನೆ. ನನ್ನನ್ನು ಸಾಧನ ಸಾಮಗ್ರಿಯೋಪಾದಿ ಉಪಚರಿಸುವವರೊಂದಿಗೆ, ನಾನು ಮೂರ್ಖಳಾಗುತ್ತೇನೆ.”

ಅಹಂಭಾವದ ಅಥವಾ ಅವಮಾನಿಸುವವರಾಗಿರುವ ಜನರು, ವಾಸ್ತವವಾಗಿ ನಿಮ್ಮ ಕುರಿತಾಗಿ ನೀವೇ ಕೆಟ್ಟದ್ದಾಗಿ ಭಾವಿಸುವಂತೆ ಮಾಡಬಲ್ಲರು. ಆದುದರಿಂದ ನಿಮ್ಮ ಕ್ಷೇಮದಲ್ಲಿ ನಿಜವಾಗಿಯೂ ಆಸಕ್ತರಾಗಿರುವ ಸ್ನೇಹಿತರನ್ನು, ನಿಮ್ಮ ಆತ್ಮೋನ್ನತಿಮಾಡುವ ಸ್ನೇಹಿತರನ್ನು ಆರಿಸಿಕೊಳ್ಳಿರಿ.—ಜ್ಞಾನೋಕ್ತಿ 13:20.

ದೇವರನ್ನು ನಿಮ್ಮ ಅತ್ಯಂತ ಆಪ್ತ ಸ್ನೇಹಿತನನ್ನಾಗಿ ಮಾಡಿಕೊಳ್ಳಿರಿ: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ . . . ಆಗಿದ್ದಾನೆ” ಎಂದು ಕೀರ್ತನೆಗಾರನಾದ ದಾವೀದನು ಘೋಷಿಸಿದನು. (ಕೀರ್ತನೆ 18:2) ಅವನ ದೃಢವಿಶ್ವಾಸವು ತನ್ನ ಸ್ವಂತ ಸಾಮರ್ಥ್ಯಗಳ ಮೇಲಲ್ಲ, ಬದಲಾಗಿ ಯೆಹೋವನೊಂದಿಗಿನ ಅವನ ಆಪ್ತ ಸಂಬಂಧದ ಮೇಲಿತ್ತು. ಹೀಗೆ, ಸಮಯಾನಂತರ ಅವನ ಮೇಲೆ ವಿಪತ್ತು ಬಡಿದಾಗ, ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಳ್ಳದೆ ತೀವ್ರವಾದ ಟೀಕೆಯನ್ನು ಅವನು ತಾಳಿಕೊಳ್ಳಸಾಧ್ಯವಾಯಿತು. (2 ಸಮುವೇಲ 16:7, 10) ನೀವು ಸಹ ‘ದೇವರ ಸಮೀಪಕ್ಕೆ ಬರ’ಸಾಧ್ಯವಿದೆ ಮತ್ತು ಹೀಗೆ ಸ್ವತಃ ನಿಮ್ಮಲ್ಲಿ ಅಲ್ಲ, ಬದಲಾಗಿ ಯೆಹೋವನಲ್ಲಿ “ಹೆಚ್ಚಳಪಡ”ಸಾಧ್ಯವಿದೆ!—ಯಾಕೋಬ 2:21-23; 4:8; 1 ಕೊರಿಂಥ 1:31.

ಕುರುಡು ಕೊನೆಗಳು

ಒಬ್ಬ ಬರಹಗಾರನು ಹೇಳಿದ್ದು: “ಕೆಲವೊಮ್ಮೆ ದುರ್ಬಲ ವ್ಯಕ್ತಿತ್ವ ಮತ್ತು ಕಡಿಮೆ ಆತ್ಮಾಭಿಮಾನವುಳ್ಳ ಹರೆಯದವನು, ಲೋಕವನ್ನು ಎದುರಿಸಲಿಕ್ಕಾಗಿ ಒಂದು ಹುಸಿ ವೇಷವನ್ನು ಅಥವಾ ಕೃತಕ ಮುಖಭಾವವನ್ನು ವಿಕಸಿಸಿಕೊಳ್ಳಲು ಪ್ರಯತ್ನಿಸುತ್ತಾನೆ.” ಕೆಲವರು ಧರಿಸುವ ಪಾತ್ರಗಳು ಚಿರಪರಿಚಿತವಾಗಿವೆ: “ಗಡುಸು ಮನುಷ್ಯ,” ಸ್ವೇಚ್ಛಾಚಾರದ ಗಣ್ಯವ್ಯಕ್ತಿ, ಅಶ್ಲೀಲ ಉಡುಪು ತೊಟ್ಟುಕೊಂಡ ಪಂಕ್‌ ರಾಕರ್‌ ಸಂಗೀತಗಾರ. ಆದರೆ ಈ ಕೃತಕ ಮುಖಭಾವಗಳ ಕೆಳಗೆ, ಅಂತಹ ಯುವ ಜನರು ಇನ್ನೂ ಕೀಳರಿಮೆಯ ಅನಿಸಿಕೆಗಳನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿರುತ್ತಾರೆ.—ಜ್ಞಾನೋಕ್ತಿ 14:13.

ಉದಾಹರಣೆಗಾಗಿ, “ಖಿನ್ನತೆಯ ಅನಿಸಿಕೆಗಳನ್ನು ದೂರಮಾಡಲಿಕ್ಕಾಗಿ, [ತಮ್ಮ ಅಗತ್ಯವಿದೆ ಎಂದು ಭಾವಿಸಿಕೊಳ್ಳುವ ಮೂಲಕ] ಆತ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ, ಅಕ್ರಮ ಸಂಬಂಧವನ್ನು ಗಳಿಸಿಕೊಳ್ಳಲಿಕ್ಕಾಗಿ, ಮತ್ತು ಗರ್ಭಧಾರಣೆಯಿಂದ ಮತ್ತೊಬ್ಬ ಮಾನವ ಜೀವಿಯ—ಒಂದು ಮಗುವಿನ—ಪ್ರೀತಿ ಹಾಗೂ ನಿರಾಕ್ಷೇಪಣೀಯ ಅಂಗೀಕಾರವನ್ನು ಪಡೆದುಕೊಳ್ಳಲಿಕ್ಕಾಗಿ” ಸ್ವೇಚ್ಛಾಚಾರದಲ್ಲಿ ತೊಡಗುವವರನ್ನು ಪರಿಗಣಿಸಿರಿ. (ಹದಿಪ್ರಾಯದ ಖಿನ್ನತೆಯನ್ನು ನಿಭಾಯಿಸುವುದು, ಇಂಗ್ಲಿಷ್‌) ನಿರ್ಮೋಹಿತಳಾದ ಯುವತಿಯೊಬ್ಬಳು ಬರೆದುದು: “ನನ್ನ ಸೃಷ್ಟಿಕರ್ತನೊಂದಿಗೆ ಒಂದು ದೃಢವಾದ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೆ ಬದಲಾಗಿ, ನಾನು ಲೈಂಗಿಕ ಅಕ್ರಮ ಸಂಬಂಧವನ್ನು ಒಂದು ಸಾಂತ್ವನದೋಪಾದಿ ಬದಲಿಯಾಗಿ ಮಾಡಿಕೊಳ್ಳಲು ಪ್ರಯತ್ನಿಸಿದೆ. ನಾನು ಬೆಳೆಸಿಕೊಂಡದ್ದೆಲ್ಲವೂ, ಶೂನ್ಯತೆ, ಒಂಟಿತನ ಹಾಗೂ ಹೆಚ್ಚು ಖಿನ್ನತೆಯಾಗಿತ್ತು.” ಆದುದರಿಂದ, ಅಂತಹ ಕುರುಡು ಕೊನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ.

ಎಚ್ಚರಿಕೆಯ ಒಂದು ಮಾತು

ಆಸಕ್ತಿಕರವಾಗಿ, ಒಬ್ಬನು ತನ್ನ ವಿಷಯದಲ್ಲಿ ಬಹಳ ಅತಿಶಯವಾಗಿ ಭಾವಿಸಿಕೊಳ್ಳುವುದರ ಕುರಿತಾಗಿ ಶಾಸ್ತ್ರಗಳು ಆಗಿಂದಾಗ್ಗೆ ಎಚ್ಚರಿಕೆ ಕೊಡುತ್ತವೆ! ಇದಕ್ಕೆ ಕಾರಣವೇನು? ನಮ್ಮಲ್ಲಿ ಅಧಿಕಾಂಶ ಮಂದಿ, ಆತ್ಮವಿಶ್ವಾಸವನ್ನು ಪಡೆದುಕೊಳ್ಳುವ ನಮ್ಮ ಪ್ರಯತ್ನಗಳಲ್ಲಿ, ಅದನ್ನು ಮೀರಿಹೋಗುವ ಪ್ರವೃತ್ತಿಯುಳ್ಳವರಾಗಿರುವ ಕಾರಣದಿಂದಲೇ ಎಂಬುದು ಸುವ್ಯಕ್ತ. ಅನೇಕರು ಆತ್ಮದುರಭಿಮಾನಿಗಳಾಗಿ ಪರಿಣಮಿಸಿ, ತಮ್ಮ ಕೌಶಲಗಳು ಹಾಗೂ ಸಾಮರ್ಥ್ಯಗಳನ್ನು ತೀರ ಅತಿಶಯಿಸಿ ಹೇಳುತ್ತಾರೆ. ಕೆಲವರು ಇತರರನ್ನು ಕಡೆಗಣಿಸುವ ಮೂಲಕ ತಮ್ಮನ್ನು ಹೆಚ್ಚಿಸಿಕೊಳ್ಳುತ್ತಾರೆ.

ಪ್ರಥಮ ಶತಮಾನದಲ್ಲಿ, ಯೆಹೂದ್ಯರು ಹಾಗೂ ಅನ್ಯಜನರ (ಯೆಹೂದ್ಯೇತರರು) ನಡುವೆಯಿದ್ದ ತೀವ್ರವಾದ ಪ್ರತಿಸ್ಪರ್ಧೆಯು, ರೋಮ್‌ನಲ್ಲಿದ್ದ ಒಂದು ಕ್ರೈಸ್ತ ಸಭೆಯನ್ನು ಬಾಧಿಸಿತು. ಆದುದರಿಂದ, ದೇವರ “ದಯೆ”ಯ ಮೂಲಕವಾಗಿ ಮಾತ್ರವೇ ಅವರು ದೇವರ ಅನುಗ್ರಹದ ಸ್ಥಾನದೊಳಗೆ “ಕಸಿಕಟ್ಟ”ಲ್ಪಟ್ಟಿದ್ದರೆಂದು ಅಪೊಸ್ತಲ ಪೌಲನು ಅನ್ಯ ಜನರಿಗೆ ಜ್ಞಾಪಕ ಹುಟ್ಟಿಸಿದನು. (ರೋಮಾಪುರ 11:17-36) ಸ್ವನೀತಿವಂತರಾದ ಯೆಹೂದ್ಯರು ಸಹ, ತಮ್ಮ ಅಪರಿಪೂರ್ಣತೆಗಳನ್ನು ಎದುರಿಸಬೇಕಿತ್ತು. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂಬುದಾಗಿ ಪೌಲನು ಹೇಳಿದನು.—ರೋಮಾಪುರ 3:23.

ಪೌಲನು ಅವರ ಆತ್ಮಾಭಿಮಾನಕ್ಕೆ ಧಕ್ಕೆತರಲಿಲ್ಲ, ಬದಲಾಗಿ ಹೇಳಿದ್ದು: “ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ [“ಅಗತ್ಯವಿರುವುದಕ್ಕಿಂತಲೂ ಹೆಚ್ಚಾಗಿ,” NW] ತನ್ನನ್ನು ಭಾವಿಸಿಕೊಳ್ಳದೆ” ಇರಲಿ. (ರೋಮಾಪುರ 12:3) ಆದುದರಿಂದ ಸ್ವಲ್ಪ ಮಟ್ಟಿಗಿನ ಸ್ವಗೌರವವನ್ನು ಹೊಂದಿರುವುದು “ಅಗತ್ಯ”ವಾಗಿರುವಾಗ, ಈ ವಿಷಯದಲ್ಲಿ ಒಬ್ಬನು ವಿಪರೀತಕ್ಕೆ ಹೋಗಬಾರದು.

ಡಾ. ಆ್ಯಲನ್‌ ಫ್ರಾಮ್‌ ಅಭಿಪ್ರಯಿಸುವಂತೆ: “ಸ್ವತಃ ತನ್ನ ಕುರಿತಾಗಿ ಸಾಕಷ್ಟು ಕಲ್ಪನೆಯುಳ್ಳ ವ್ಯಕ್ತಿಯೊಬ್ಬನು ದುಃಖಿತನಾಗಿರುವುದಿಲ್ಲ, ಆದರೆ ಅವನು ಭಾವೋದ್ರಿಕ್ತವಾಗಿ ಸಂತೋಷವುಳ್ಳವನಾಗಿರಬೇಕೆಂದಿಲ್ಲ. . . . ಅವನು ಅಶುಭ ಪ್ರತೀಕ್ಷೆಯುಳ್ಳವನಾಗಿಲ್ಲ, ಆದರೆ ಅವನ ಆಶಾವಾದಕ್ಕೆ ಕಡಿವಾಣವಿರುತ್ತದೆ. ಅವನು ಹುಚ್ಚು ಸಾಹಸಿಯೂ ಅಲ್ಲ ಅಥವಾ ನಿರ್ದಿಷ್ಟ ಭಯಗಳಿಂದ ಮುಕ್ತನೂ ಅಲ್ಲ . . . ತಾನು ಎಲ್ಲಾ ಸಮಯದಲ್ಲಿ ಪ್ರಧಾನವಾಗಿ ಸಾಫಲ್ಯವನ್ನು ಪಡೆಯುವವನೂ ಅಲ್ಲ ಅಥವಾ ಸದಾ [ನಿರಂತರ] ಸೋಲನ್ನು ಪಡೆಯುವವನೂ ಅಲ್ಲವೆಂದು ಅವನು ಗ್ರಹಿಸುತ್ತಾನೆ.”

ಆದುದರಿಂದ ಇತಿಮಿತಿಯುಳ್ಳವರಾಗಿರಿ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:6) ನಿಮ್ಮ ಸುಗುಣಗಳನ್ನು ಒಪ್ಪಿಕೊಳ್ಳಿರಿ, ಆದರೆ ನಿಮ್ಮ ತಪ್ಪುಗಳನ್ನು ಅಲಕ್ಷಿಸಬೇಡಿರಿ. ಬದಲಾಗಿ, ಅವುಗಳನ್ನು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿರಿ. ಆಗಿಂದಾಗ್ಗೆ ನೀವು ಇನ್ನೂ ನಿಮ್ಮ ಕುರಿತಾಗಿ ಸಂಶಯಪಡುವಿರಿ. ಆದರೆ ನೀವು ನಿಮ್ಮ ಸ್ವಯೋಗ್ಯತೆಯನ್ನು ಅಥವಾ ದೇವರು ನಿಮ್ಮ ಕಾಳಜಿ ವಹಿಸುತ್ತಾನೆ ಎಂಬುದನ್ನು ಎಂದಿಗೂ ಸಂಶಯಿಸುವ ಅಗತ್ಯವಿಲ್ಲ. ಏಕೆಂದರೆ, “ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ.”—1 ಕೊರಿಂಥ 8:3.

ಚರ್ಚೆಗಾಗಿ ಪ್ರಶ್ನೆಗಳು

◻ ಕೆಲವು ಯುವ ಜನರಿಗೆ ಸ್ವತಃ ತಮ್ಮ ಕುರಿತಾಗಿ ನಕಾರಾತ್ಮಕವಾದ ಭಾವನೆಗಳು ಏಕೆ ಇವೆ? ಅವರಿಗೆ ಸಹಾನುಭೂತಿ ತೋರಿಸಬಲ್ಲಿರೊ?

◻ ನಿಮ್ಮ ಹೆತ್ತವರ ಕೇಳಿಕೆಗಳನ್ನು ನೀವು ಹೇಗೆ ನಿರ್ವಹಿಸಬಹುದು?

◻ ಸ್ವಗೌರವವನ್ನು ಬೆಳೆಸಿಕೊಳ್ಳಲಿಕ್ಕಾಗಿ ಇರುವ ಕೆಲವು ಮಾರ್ಗಗಳು ಯಾವುವು?

◻ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವಾಗ ಇರುವ ಕೆಲವು ಕುರುಡು ಕೊನೆಗಳು ಯಾವುವು?

◻ ಸ್ವತಃ ನಿಮ್ಮ ಕುರಿತು ವಿಪರೀತವಾಗಿ ಭಾವಿಸಿಕೊಳ್ಳದಿರುವಂತೆ ನೀವು ಏಕೆ ಎಚ್ಚರಿಕೆಯಿಂದಿರಬೇಕು?

[ಪುಟ 98 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಆತ್ಮಾಭಿಮಾನವು, “ಮಾನವ ಅಸ್ತಿತ್ವಕ್ಕೆ ಘನತೆಯನ್ನು ಕೊಡುವಂತಹ ಘಟಕ”ವೆಂದು ಕರೆಯಲ್ಪಟ್ಟಿದೆ

[ಪುಟ 99 ರಲ್ಲಿರುವ ಚಿತ್ರ]

ನಿಮಗೆ ನಿರುತ್ಸಾಹಗೊಳಿಸಲ್ಪಟ್ಟ, ನಿಕೃಷ್ಟವಾದ ಅನಿಸಿಕೆಯಾಗುತ್ತದೊ? ಒಂದು ಪರಿಹಾರವಿದೆ

[ಪುಟ 101 ರಲ್ಲಿರುವ ಚಿತ್ರ]

ಒಬ್ಬ ಗರ್ವಿಯಾಗಿ ಅಥವಾ ಬಡಾಯಿಕೋರನಾಗಿ ಪರಿಣಮಿಸುವುದು, ಕಡಿಮೆ ಆತ್ಮಾಭಿಮಾನವನ್ನು ಹೊಂದಿರುವುದಕ್ಕೆ ಪರಿಹಾರವಾಗಿರುವುದಿಲ್ಲ

[ಪುಟ 102 ರಲ್ಲಿರುವ ಚಿತ್ರ]

ಕೆಲವೊಮ್ಮೆ ನಿಮಗೆ, ನೀವು ಯಾವುದನ್ನೂ ಸರಿಯಾಗಿ ಮಾಡಲಾರಿರಿ ಎಂಬ ಅನಿಸಿಕೆಯಾಗುತ್ತದೊ?