ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ದೇವರ ಸಮೀಪಕ್ಕೆ ಹೇಗೆ ಬರಬಲ್ಲೆ?

ನಾನು ದೇವರ ಸಮೀಪಕ್ಕೆ ಹೇಗೆ ಬರಬಲ್ಲೆ?

ಅಧ್ಯಾಯ 39

ನಾನು ದೇವರ ಸಮೀಪಕ್ಕೆ ಹೇಗೆ ಬರಬಲ್ಲೆ?

ದೇವರ ಸಮೀಪಕ್ಕೊ? ಅನೇಕ ಜನರಿಗೆ, ದೇವರು ಒಬ್ಬ ಪ್ರತ್ಯೇಕವಾದ, ದೂರದ ಮೂರ್ತಿ, ಒಂದು ವ್ಯಕ್ತಿಸ್ವರೂಪವಿಲ್ಲದ ‘ಪ್ರಥಮ ಕಾರಣ’ನಾಗಿರುವಂತೆ ತೋರುತ್ತಾನೆ. ಹೀಗೆ ಆತನಿಗೆ ಸಮೀಪವಾಗಿರುವ ವಿಚಾರವು ನಿಮಗೆ ಕಳವಳವುಂಟುಮಾಡುವುದಾಗಿ, ಹೆದರಿಸುವಂತಹದ್ದಾಗಿಯೂ ತೋರಬಹುದು.

ಇಲ್ಲವೆ, ನಿಮ್ಮ ಅನುಭವವು ಲಿಂಡ ಎಂಬ ಹೆಸರಿನ ಒಬ್ಬ ಯುವ ಸ್ತ್ರೀಯ ಅನುಭವದಂತಿರಬಹುದು. ಲಿಂಡ ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟಿದ್ದಳು ಮತ್ತು ಆಕೆ ಜ್ಞಾಪಿಸಿಕೊಳ್ಳುವುದು: “ಎಲ್ಲ [ನನ್ನ ಹದಿವಯಸ್ಕ] ವರ್ಷಗಳಲ್ಲಿ, ನಾನು ಕ್ರೈಸ್ತ ಕೂಟವನ್ನು ತಪ್ಪಿಸಿದ್ದೇ ವಿರಳ, ಮತ್ತು ಒಂದು ತಿಂಗಳೂ ನಾನು ಸಾರುವ ಚಟುವಟಿಕೆಯನ್ನು ತಪ್ಪಿಸಲಿಲ್ಲ, ಆದರೂ ನಾನೆಂದೂ ಯೆಹೋವನೊಂದಿಗೆ ಒಂದು ಆಪ್ತವಾದ ವೈಯಕ್ತಿಕ ಸಂಬಂಧವನ್ನು ನಿಜವಾಗಿಯೂ ಬೆಳೆಸಿಕೊಳ್ಳಲಿಲ್ಲ.”

ಆದರೂ, ನಿಮ್ಮ ಭವಿಷ್ಯತ್ತು ತಾನೇ, ನೀವು ದೇವರ ಸಮೀಪಕ್ಕೆ ಬರುವುದರ ಮೇಲೆ ಅವಲಂಬಿಸುತ್ತದೆ. ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನೇ ಸತ್ಯ ದೇವರಾದ ನಿನ್ನ . . . ಜ್ಞಾನವನ್ನು ಅವರು ಪಡೆದುಕೊಳ್ಳುವುದು—ಇದೇ ನಿತ್ಯಜೀವವು.” (ಯೋಹಾನ 17:3, NW) ಈ “ಜ್ಞಾನ”ವು, ವಾಸ್ತವಾಂಶಗಳನ್ನು ಕಲಿಯುವ ಅಥವಾ ಪಠಿಸುವ ಸಾಮರ್ಥ್ಯ—ಅದನ್ನು ಒಬ್ಬ ನಾಸ್ತಿಕನೂ ಮಾಡಸಾಧ್ಯವಿದೆ—ಕ್ಕಿಂತಲೂ ಹೆಚ್ಚಿನ ವಿಷಯವಾಗಿದೆ. ಅದು ದೇವರ ಮಿತ್ರರಾಗುತ್ತಾ, ಆತನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವುದನ್ನು ಒಳಗೊಳ್ಳುತ್ತದೆ. (ಹೋಲಿಸಿ ಯಾಕೋಬ 2:23.) ಸಮೀಪಿಸಲು ಸಾಧ್ಯವಿರದ ವ್ಯಕ್ತಿಯಾಗಿರುವುದಕ್ಕೆ ಪ್ರತಿಯಾಗಿ, ದೇವರು “ತನ್ನನ್ನು ಹುಡುಕು”ವಂತೆ ಮತ್ತು ನಿಜವಾಗಿ “ಕಂಡು”ಕೊಳ್ಳುವಂತೆ ನಮ್ಮನ್ನು ಆಮಂತ್ರಿಸುತ್ತಾನೆ, ಏಕೆಂದರೆ “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”—ಅ. ಕೃತ್ಯಗಳು 17:27.

ದೇವರನ್ನು ನೀವು ತಿಳಿಯಸಾಧ್ಯವಿರುವ ವಿಧ

ನೀವು ಎಂದಾದರೂ ದೂರದ ನಕ್ಷತ್ರಗಳನ್ನು ದಿಟ್ಟಿಸಿ ನೋಡಿ, ಭೋರ್ಗರೆಯುವ ಸಮುದ್ರಕ್ಕೆ ಆಶ್ಚರ್ಯದಿಂದ ಕಿವಿಗೊಟ್ಟು, ಒಂದು ಚಿತ್ತಾಕರ್ಷಕ ಚಿಟ್ಟೆಯಿಂದ ಮೋಹಗೊಂಡು, ಇಲ್ಲವೆ ಒಂದು ಪುಟ್ಟ ಎಲೆಯ ನಾಜೂಕಾದ ಸೌಂದರ್ಯದಿಂದ ವಿಸ್ಮಯಗೊಂಡಿದ್ದೀರೊ? ದೇವರ ಈ ಕೆಲಸಗಳೆಲ್ಲ, ಆತನ ಅಪರಿಮಿತ ಶಕ್ತಿ, ವಿವೇಕ, ಮತ್ತು ಪ್ರೀತಿಯ ಒಂದು ನಸುನೋಟವನ್ನು ಮಾತ್ರ ನೀಡುತ್ತವೆ. ದೇವರ “ಕಣ್ಣಿಗೆ ಕಾಣದಿರುವ . . . ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ . . . ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:19, 20.

ಹಾಗಿದ್ದರೂ, ದೇವರ ಕುರಿತು ಸೃಷ್ಟಿಯು ಮಾತ್ರ ಪ್ರಕಟಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳುವ ಅಗತ್ಯ ನಿಮಗಿದೆ. ಆದುದರಿಂದ ದೇವರು ತನ್ನ ಲಿಖಿತ ವಾಕ್ಯವನ್ನು ಒದಗಿಸಿದ್ದಾನೆ. ಆ ಪುಸ್ತಕವು ದೇವರನ್ನು, ಯಾವುದೊ ನಾಮರಹಿತ ಅಸ್ತಿತ್ವ ಅಥವಾ ವ್ಯಕ್ತಿಸ್ವರೂಪವಿಲ್ಲದ ಶಕ್ತಿಯಾಗಿ ಅಲ್ಲ, ಬದಲಿಗೆ ಒಂದು ನಾಮವಿರುವ, ವಾಸ್ತವವಾದ ವ್ಯಕ್ತಿಯಾಗಿ ಪ್ರಕಟಿಸುತ್ತದೆ. “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ” ಎಂಬುದಾಗಿ ಕೀರ್ತನೆಗಾರನು ಪ್ರಕಟಿಸುತ್ತಾನೆ. (ಕೀರ್ತನೆ 100:3) ಆ ನಾಮದ ಮರೆಯಲ್ಲಿರುವ ವ್ಯಕ್ತಿಯನ್ನೂ ಬೈಬಲು ಪ್ರಕಟಪಡಿಸುತ್ತದೆ: “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ವಿಮೋಚನಕಾಂಡ 34:6) ಮಾನವಕುಲದೊಂದಿಗೆ ದೇವರ ವ್ಯವಹಾರಗಳ ಕುರಿತಾದ ಅದರ ವಿಸ್ತೃತ ದಾಖಲೆಯು, ಕಾರ್ಯತಃ, ದೇವರನ್ನು ಕಾರ್ಯದಲ್ಲಿ ನೋಡುವಂತೆ ನಮಗೆ ಅನುಮತಿ ನೀಡುತ್ತದೆ! ಹೀಗೆ ಬೈಬಲಿನ ವಾಚನಮಾಡುವುದು, ದೇವರ ಸಮೀಪಕ್ಕೆ ಬರುವುದರ ಒಂದು ಆವಶ್ಯಕ ಭಾಗವಾಗಿದೆ.

ಬೈಬಲ್‌ ವಾಚನವನ್ನು ಆಹ್ಲಾದಕರವಾಗಿ ಮಾಡುವುದು

ಸರ್ವಸಮ್ಮತವಾಗಿರುವಂತೆ, ವಾಚನಕ್ಕಾಗಿ ಬೈಬಲು ಒಂದು ದೀರ್ಘವಾದ ಪುಸ್ತಕವಾಗಿದೆ. ಅದರ ಗಾತ್ರವು ತಾನೇ ಅದರ ವಾಚನಮಾಡುವುದರಿಂದ ಅನೇಕ ವೇಳೆ ಯುವ ಜನರನ್ನು ಹೆದರಿಸಿಬಿಡುತ್ತದೆ. ಬೈಬಲು ಬೇಸರಹಿಡಿಸುವಂತಹದ್ದೆಂದೂ ಕೆಲವರು ದೂರುತ್ತಾರೆ. ಬೈಬಲಾದರೊ, ಮನುಷ್ಯನಿಗಾಗಿ ಇರುವ ದೇವರ ಪ್ರಕಟನೆಯಾಗಿದೆ. ನಾವು ಇಲ್ಲಿಗೆ ಹೇಗೆ ಬಂದೆವು ಮತ್ತು ನಾವೆಲ್ಲಿಗೆ ಹೋಗುತ್ತಿದ್ದೇವೆಂದು ಅದು ನಮಗೆ ತಿಳಿಸುತ್ತದೆ. ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಲು ನಾವು ಏನು ಮಾಡಬೇಕೆಂಬುದನ್ನು ಅದು ನಿಖರವಾಗಿ ಬಿಡಿಸಿಹೇಳುತ್ತದೆ. ಅದು ಹೇಗೆ ತಾನೆ ಬೇಸರಹಿಡಿಸುವಂತಹದ್ದಾಗಿರಸಾಧ್ಯ? ಬೈಬಲು ಲಘು ವಾಚನವಾಗಿರುವುದಿಲ್ಲ ಮತ್ತು ಅದರಲ್ಲಿ “ಕೆಲವು ಮಾತುಗಳು ತಿಳಿಯುವದಕ್ಕೆ ಕಷ್ಟವಾಗಿವೆ” ಎಂಬುದು ಒಪ್ಪತಕ್ಕ ಮಾತು. (2 ಪೇತ್ರ 3:16) ಆದರೆ ಬೈಬಲ್‌ ವಾಚನವು ಮನವೊಪ್ಪದ ಕೆಲಸವಾಗಿರಬೇಕಾಗಿಲ್ಲ.

ಬೈಬಲ್‌ ವಾಚನವನ್ನು ಹೆಚ್ಚು ಆಸಕ್ತಿಕರವಾಗಿ ಮಾಡುವ ಒಂದು ಪ್ರಾಯೋಗಿಕ ವಿಧವನ್ನು, ಹೀಗೆ ಹೇಳುತ್ತಾ, ಯುವ ಮರ್ವಿನ್‌ ನೀಡುತ್ತಾನೆ: “ನಾನು ಸನ್ನಿವೇಶವನ್ನು ಚಿತ್ರಿಸಿಕೊಳ್ಳಲು ಮತ್ತು ನನ್ನನ್ನು ಅಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.” ದೃಷ್ಟಾಂತಕ್ಕಾಗಿ, ದಾನಿಯೇಲ 6ನೆಯ ಅಧ್ಯಾಯದಲ್ಲಿರುವ ವೃತ್ತಾಂತವನ್ನು ಪರಿಗಣಿಸಿರಿ. ನಿಷ್ಕ್ರಿಯವಾಗಿ ಅದರ ವಾಚನಮಾಡುವ ಬದಲಿಗೆ, ನೀವು ದಾನಿಯೇಲರೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸಿರಿ. ನಿಮ್ಮ ದೇವರಿಗೆ ಪ್ರಾರ್ಥಿಸಿದುದರ ಘೋರ ಆರೋಪದ ಮೇಲೆ ನೀವು ದಸ್ತಗಿರಿಮಾಡಲ್ಪಟ್ಟಿದ್ದೀರಿ. ದಂಡನೆಯು ಏನಾಗಿದೆ? ಮರಣ! ಪರ್ಷಿಯನ್‌ ಸೈನಿಕರು ನಿಮ್ಮನ್ನು ನಿಮ್ಮ ಸಮಾಧಿ—ಹಸಿದಿರುವ ಸಿಂಹಗಳಿಂದ ತುಂಬಿದ ಒಂದು ಗುಂಡಿ—ಗೆ ಒರಟಾಗಿ ಎಳೆದುಕೊಂಡು ಹೋಗುತ್ತಾರೆ.

ತಗ್ಗು ದನಿಯ ಗಡಗಡ ಸದ್ದಿನೊಂದಿಗೆ, ಗುಂಡಿಯನ್ನು ಮುಚ್ಚಿರುವ ದೊಡ್ಡ ಕಲ್ಲನ್ನು ಹಿಂದಕ್ಕೆ ಸರಿಸಲಾಗುತ್ತದೆ. ಕೆಳಗಿರುವ ಸಿಂಹಗಳು ಮೈಜುಮ್ಮೆನ್ನುವಂತೆ ಗರ್ಜಿಸುತ್ತವೆ. ನೀವು ಭೀತಿಯಲ್ಲಿ ಹಿಮ್ಮೆಟ್ಟುತ್ತೀರಿ, ಆದರೆ ರಾಜನ ಸೈನಿಕರಿಂದ ತಡೆಯಲ್ಪಡುತ್ತೀರಿ; ಅವರು ಸಾವಿನ ಆ ಗುಂಡಿಯೊಳಕ್ಕೆ ನಿಮ್ಮನ್ನು ಹಾಕಿ, ಗುಂಡಿಯ ಮೇಲೆ ಕಲ್ಲನ್ನು ಮತ್ತೆ ಸರಿಸಿಬಿಡುತ್ತಾರೆ. ಮತ್ತು ಸಂಪೂರ್ಣ ಕತ್ತಲೆಯಲ್ಲಿ, ತುಪ್ಪುಳು ಚರ್ಮವುಳ್ಳ ಒಂದು ಜೀವಿಯು ನಿಮ್ಮನ್ನು ಉಜ್ಜುತ್ತದೆ . . .

ಬೇಸರಹಿಡಿಸುವಂತಹದ್ದೊ? ಖಂಡಿತವಾಗಿಯೂ ಇಲ್ಲ! ಆದರೆ ನೆನಪಿನಲ್ಲಿಡಿ: ನೀವು ರಂಜಿಸಲ್ಪಡಲಿಕ್ಕಾಗಿ ವಾಚನಮಾಡುತ್ತಿಲ್ಲ. ಆ ವೃತ್ತಾಂತವು ಯೆಹೋವನ ಕುರಿತು ಏನನ್ನು ಕಲಿಸುತ್ತದೆ ಎಂಬುದನ್ನು ವಿವೇಚಿಸಲು ಪ್ರಯತ್ನಿಸಿರಿ. ಉದಾಹರಣೆಗೆ, ತನ್ನ ಸೇವಕರು ಕಷ್ಟಕರ ಪರೀಕ್ಷೆಗಳನ್ನು ಎದುರಿಸುವಂತೆ, ಯೆಹೋವನು ಅನುಮತಿಸುತ್ತಾನೆಂಬುದನ್ನು ದಾನಿಯೇಲನ ಅನುಭವಗಳು ಪ್ರದರ್ಶಿಸುವುದಿಲ್ಲವೊ?

ಕ್ರಮವಾದ ವಾಚನ ತಖ್ತೆಯೊಂದನ್ನು ಸಹ ಪಡೆದಿರಲು ಪ್ರಯತ್ನಿಸಿರಿ. ಅಷ್ಟೇಕೆ, ಬೈಬಲಿನ ವಾಚನಮಾಡುತ್ತಾ ದಿನಕ್ಕೆ ಕೇವಲ 15 ನಿಮಿಷಗಳನ್ನು ನೀವು ವ್ಯಯಿಸುವುದಾದರೆ, ಅದನ್ನು ನೀವು ಸುಮಾರು ಒಂದು ವರ್ಷದೊಳಗೆ ಪೂರ್ತಿಗೊಳಿಸಲು ಶಕ್ತರಾಗಿರುವಿರಿ! ಟಿವಿ ವೀಕ್ಷಣೆಯಂತಹ ಕಡಿಮೆ ಪ್ರಮುಖತೆಯುಳ್ಳ ಚಟುವಟಿಕೆಯಿಂದ ‘ಸಮಯವನ್ನು ಕೊಂಡುಕೊಳ್ಳಿ.’ (NW) (ಎಫೆಸ 5:16) ಬೈಬಲ್‌ ವಾಚನಕ್ಕೆ ನಿಮ್ಮನ್ನು ನೀವು ಅನ್ವಯಿಸಿಕೊಂಡ ಹಾಗೆ, ಹಿಂದೆಂದಿಗಿಂತಲೂ ದೇವರಿಗೆ ಹೆಚ್ಚು ಸಮೀಪವಾಗಿರುವ ಅನಿಸಿಕೆ ನಿಮಗೆ ಖಂಡಿತವಾಗಿಯೂ ಆಗುವುದು.—ಜ್ಞಾನೋಕ್ತಿ 2:1, 5.

ಪ್ರಾರ್ಥನೆಯು ನಿಮ್ಮನ್ನು ಆತನ ಸಮೀಪಕ್ಕೆ ಸೆಳೆಯುತ್ತದೆ

ಲ್ಯಾವರ್ನ್‌ ಎಂಬ ಹೆಸರಿನ ಒಬ್ಬ ಹದಿವಯಸ್ಕ ಹುಡುಗಿಯು ಗಮನಿಸಿದ್ದು, “ನೀವು ವ್ಯಕ್ತಿಯೊಬ್ಬನೊಂದಿಗೆ ಮಾತಾಡದಿದ್ದಲ್ಲಿ ನಿಮಗೆ ನಿಜವಾಗಿಯೂ ಅವನೊಂದಿಗೆ ಒಂದು ವೈಯಕ್ತಿಕ ಸಂಬಂಧವಿದೆ ಎಂದು ಹೇಳುವುದು ಕಷ್ಟಕರ.” “ಪ್ರಾರ್ಥನೆಯನ್ನು ಕೇಳುವವ”ನೋಪಾದಿ ಯೆಹೋವನು, ತನ್ನೊಂದಿಗೆ ಮಾತಾಡುವಂತೆ ನಮ್ಮನ್ನು ಆಮಂತ್ರಿಸುತ್ತಾನೆ. (ಕೀರ್ತನೆ 65:2) ನಾವು ನಂಬಿಕೆಯಿಂದ ಆತನಿಗೆ ಪ್ರಾರ್ಥಿಸುವುದಾದರೆ, “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.”—1 ಯೋಹಾನ 5:14.

(ಈ ಮುಂಚೆ ಉಲ್ಲೇಖಿಸಲ್ಪಟ್ಟ) ಲಿಂಡ ಇದನ್ನು ವೈಯಕ್ತಿಕ ಅನುಭವದಿಂದ ಕಲಿತುಕೊಂಡಳು. ತನ್ನ ಜೀವನದ ಒಂದು ನಿರ್ದಿಷ್ಟ ಹಂತದಲ್ಲಿ, ಸಮಸ್ಯೆಗಳು ಹಾಗೂ ಒತ್ತಡಗಳು ಹೆಚ್ಚಾಗುತ್ತಾ ಇದ್ದ ಸಮಯದಲ್ಲಿ, ಆಕೆ ‘ತನ್ನ ಸಮಸ್ಯೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲಿಕ್ಕಾಗಿ ಹಲವಾರು ದಿನಗಳ ವರೆಗೆ ಎಡೆಬಿಡದೆ ಪ್ರಾರ್ಥಿಸಿದಳೆಂದು’ ಆಕೆ ಜ್ಞಾಪಿಸಿಕೊಳ್ಳುತ್ತಾಳೆ. ಈ ಮುಂಚೆ ಬಹಳಷ್ಟು ದೂರದಲ್ಲಿರುವಂತೆ ತೋರಿದ್ದ ದೇವರು, ತನ್ನ ಕಷ್ಟಗಳನ್ನು ನಿಭಾಯಿಸಲು ಆಕೆ ಬಲವನ್ನು ಪಡೆದಂತೆ ಅವಳಿಗೆ ಹತ್ತಿರವಿರುವಂತೆ ತೋರತೊಡಗಿದನು. ಕೇ ಎಂಬ ಹೆಸರಿನ ಮತ್ತೊಬ್ಬ ಯುವತಿಯು, ತದ್ರೀತಿಯಲ್ಲಿ ಪ್ರಾರ್ಥನೆಯ ಮೌಲ್ಯವನ್ನು ಕಲಿತುಕೊಂಡಳು: “ಕೆಲವೊಮ್ಮೆ ನಿಮ್ಮ ಆಂತರಿಕ ಅನಿಸಿಕೆಗಳನ್ನು ಯಾರೊಂದಿಗಾದರೂ ವ್ಯಕ್ತಪಡಿಸಿಕೊಳ್ಳಬೇಕೆಂದು ನಿಮಗನಿಸುತ್ತದೆ, ಮತ್ತು ಅವುಗಳನ್ನು ವ್ಯಕ್ತಪಡಿಸಲು ಯೆಹೋವನಿಗಿಂತ ಉತ್ತಮವಾದ ಮತ್ತೊಬ್ಬನು ಇರುವುದಿಲ್ಲ, ಏಕೆಂದರೆ ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಿಮಗೆ ನಿಜವಾಗಿಯೂ ಸಹಾಯಮಾಡಬಲ್ಲ ಏಕೈಕ ವ್ಯಕ್ತಿ ಆತನಾಗಿದ್ದಾನೆಂದು ನಿಮಗೆ ಗೊತ್ತಿದೆ.”

ಆದರೆ ಪ್ರಾರ್ಥನೆಯು ಭಾವನಾತ್ಮಕ ಉಪಶಮನವನ್ನು ಮಾತ್ರ ಒದಗಿಸುತ್ತದೊ? ಇಲ್ಲ, ವಿಭಿನ್ನ ಪರೀಕ್ಷೆಗಳನ್ನು ಎದುರಿಸುವಾಗ ನಾವು “ದೇವರನ್ನು ಕೇಳಿಕೊಳ್ಳ”ಬೇಕು, “ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ” ಎಂದು ಯಾಕೋಬ 1:2-5 ನಮಗೆ ಆಶ್ವಾಸನೆ ನೀಡುತ್ತದೆ. ದೇವರು ಒಂದು ಸಂಕಷ್ಟದಿಂದ ಬಿಡುಗಡೆಯನ್ನು ಒದಗಿಸದಿರಬಹುದು, ಆದರೆ ಆ ಸಂಕಷ್ಟವನ್ನು ನಿರ್ವಹಿಸಲು ವಿವೇಕವನ್ನು ಆತನು ನಮಗೆ ಕೊಡುವುದಾಗಿ ಖಾತ್ರಿನೀಡುತ್ತಾನೆ! ವಿಷಯಕ್ಕೆ ಸಂಬಂಧಿಸುವ ಬೈಬಲ್‌ ಮೂಲತತ್ವಗಳನ್ನು ಆತನು ನಿಮ್ಮ ನೆನಪಿಗೆ ತರಬಹುದು. (ಹೋಲಿಸಿ ಯೋಹಾನ 14:26.) ಅಥವಾ ಕೆಲವೊಂದು ವಿಷಯಗಳು, ಬೈಬಲಿನ ನಿಮ್ಮ ವೈಯಕ್ತಿಕ ಅಧ್ಯಯನದ ಮೂಲಕ ಇಲ್ಲವೆ ಕ್ರೈಸ್ತ ಕೂಟಗಳಲ್ಲಿ ನಿಮ್ಮ ಗಮನಕ್ಕೆ ತರಲ್ಪಡುತ್ತವೆ ಎಂಬುದನ್ನು ಆತನು ಖಚಿತಪಡಿಸಿಕೊಳ್ಳಬಹುದು. ಮತ್ತು “ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ . . . ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡು”ವನೆಂಬುದನ್ನು ಮರೆಯಬೇಡಿರಿ. ಹೌದು, ಆತನು ನಿಮ್ಮ ‘ಕೈಬಿಡು’ವುದಿಲ್ಲ. (1 ಕೊರಿಂಥ 10:13; 2 ಕೊರಿಂಥ 4:9) ಒಂದು ಪರೀಕ್ಷೆಯನ್ನು ನಿಭಾಯಿಸುವುದರಲ್ಲಿ ಆತನ ಸಹಾಯವನ್ನು ಅನುಭವಿಸಿದ ಕಾರಣ, ದೇವರಿಗೆ ಹೆಚ್ಚು ಸಮೀಪವಾಗಿರುವ ಅನಿಸಿಕೆಯು ನಿಮಗಾಗದೊ?

ಆದರೆ ವೈಯಕ್ತಿಕ ಸಮಸ್ಯೆಗಳ ಕುರಿತಾಗಿ ಮಾತ್ರ ಪ್ರಾರ್ಥಿಸಬೇಡಿರಿ. ತನ್ನ ಮಾದರಿ ಪ್ರಾರ್ಥನೆಯಲ್ಲಿ, ಯೇಸು ಯೆಹೋವನ ನಾಮದ ಪವಿತ್ರೀಕರಣಕ್ಕೆ, ಆತನ ರಾಜ್ಯದ ಬರೋಣಕ್ಕೆ, ಮತ್ತು ದೇವರ ಚಿತ್ತದ ಸಾಧಿಸುವಿಕೆಗೆ ಆದ್ಯ ಪ್ರಮುಖತೆಯನ್ನು ನೀಡಿದನು. (ಮತ್ತಾಯ 6:9-13) ‘ಪ್ರಾರ್ಥನೆವಿಜ್ಞಾಪನೆಗಳೊಂದಿಗೆ ಕೃತಜ್ಞತಾಸ್ತುತಿಯು’ ಕೂಡ, ಪ್ರಾರ್ಥನೆಯಲ್ಲಿನ ಒಂದು ಮುಖ್ಯವಾದ ಘಟಕಾಂಶವಾಗಿದೆ.—ಫಿಲಿಪ್ಪಿ 4:6.

ನೀವು ಪ್ರಾರ್ಥನೆಯನ್ನೇ ಮುಜುಗರದ ವಿಷಯವಾಗಿ ಕಂಡುಕೊಂಡಲ್ಲಿ ಆಗೇನು? ಅದರ ಕುರಿತಾಗಿ ಪ್ರಾರ್ಥಿಸಿರಿ! ಆತನ ಎದುರಿನಲ್ಲಿ ನಿಮ್ಮ ಹೃದಯವನ್ನು ತೆರೆಯುವಂತೆ ನಿಮಗೆ ಸಹಾಯ ಮಾಡಲು ದೇವರಲ್ಲಿ ಕೇಳಿಕೊಳ್ಳಿ. “ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ,” ಮತ್ತು ಸಕಾಲದಲ್ಲಿ ನೀವು ಒಬ್ಬ ಆಪ್ತ ಮಿತ್ರನೊಂದಿಗೆ ಮಾತಾಡುವಂತೆಯೇ ಯೆಹೋವನೊಂದಿಗೆ ಮುಕ್ತವಾಗಿ ಮಾತಾಡಬಲ್ಲಿರೆಂದು ಕಂಡುಕೊಳ್ಳುವಿರಿ. (ರೋಮಾಪುರ 12:12) “ನನಗೆ ಒಂದು ಸಮಸ್ಯೆಯಿರುವಾಗಲೆಲ್ಲ, ನಾನು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗಬಲ್ಲೆ ಮತ್ತು ಆತನು ನನಗೆ ಸಹಾಯ ಮಾಡುವನೆಂದು ನನಗೆ ಗೊತ್ತಿದೆ,” ಎಂಬುದಾಗಿ ಯುವ ಮರೀಯ ಹೇಳುತ್ತಾಳೆ.

ದೇವರನ್ನು ಅಲಂಕರಿಸಿದ ಇಲ್ಲವೆ ಆಡಂಬರದ ಭಾಷೆಯಿಂದ ಸಂಬೋಧಿಸುವ ಅಗತ್ಯ ಇರುವುದಿಲ್ಲ. “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ,” ಎಂಬುದಾಗಿ ಕೀರ್ತನೆಗಾರನು ಹೇಳಿದನು. (ಕೀರ್ತನೆ 62:8) ನಿಮ್ಮ ಅನಿಸಿಕೆಗಳು, ನಿಮ್ಮ ಚಿಂತೆಗಳನ್ನು ಆತನಿಗೆ ತಿಳಿಯಪಡಿಸಿರಿ. ನಿಮ್ಮ ಬಲಹೀನತೆಗಳೊಂದಿಗೆ ನಿರ್ವಹಿಸಲು ಸಹಾಯಕ್ಕಾಗಿ ಆತನಲ್ಲಿ ಕೇಳಿಕೊಳ್ಳಿರಿ. ನಿಮ್ಮ ಕುಟುಂಬದ ಮೇಲೆ ಮತ್ತು ಜೊತೆ ಕ್ರೈಸ್ತರ ಮೇಲೆ ಆತನ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ. ನೀವು ತಪ್ಪುಮಾಡುವಾಗ ಕ್ಷಮಾಪಣೆಗಾಗಿ ಆತನಲ್ಲಿ ಬೇಡಿಕೊಳ್ಳಿರಿ. ಜೀವದ ಕೊಡುಗೆಗಾಗಿ ದಿನನಿತ್ಯವೂ ಆತನಿಗೆ ಉಪಕಾರ ಸಲ್ಲಿಸಿರಿ. ಪ್ರಾರ್ಥನೆಯು ನಿಮ್ಮ ಜೀವಿತದ ಕ್ರಮವಾದ ಭಾಗವಾಗುವಾಗ, ಅದು ನಿಮ್ಮನ್ನು ಯೆಹೋವ ದೇವರೊಂದಿಗೆ ಒಂದು ಆಪ್ತವಾದ ಹಾಗೂ ಸಂತೋಷಕರವಾದ ಸಂಬಂಧದೊಳಗೆ ತರಬಲ್ಲದು.

ದೇವರೊಂದಿಗಿನ ನಿಮ್ಮ ಸ್ನೇಹವನ್ನು ಬಹಿರಂಗವಾಗಿ ಪ್ರಕಟಿಸುವುದು

ದೇವರೊಂದಿಗಿನ ಸ್ನೇಹವನ್ನು ಅನುಭವಿಸಲು ತೊಡಗಿದ್ದರಿಂದ, ಅಮೂಲ್ಯವಾದ ಆ ಸಂಬಂಧವನ್ನು ಇತರರು ಕೂಡ ಗಳಿಸುವಂತೆ ಸಹಾಯ ಮಾಡಲು ನೀವು ಉತ್ಸುಕರಾಗಿರಬಾರದೊ? ನಿಶ್ಚಯವಾಗಿಯೂ, ದೇವರ ಸ್ನೇಹಿತರಾಗಿರಲು ಬಯಸುವವರೆಲ್ಲರಿಗೆ, ತಾವು ‘ರಕ್ಷಣೆಗಾಗಿ ಬಹಿರಂಗ ಪ್ರಕಟನೆಯನ್ನು’ (NW) ಮಾಡುವುದು ಒಂದು ಆವಶ್ಯಕತೆಯಾಗಿದೆ.—ರೋಮಾಪುರ 10:10.

ಅನೇಕರು, ಶಾಲಾಸಂಗಾತಿಗಳು, ನೆರೆಯವರು ಮತ್ತು ಸಂಬಂಧಿಕರೊಂದಿಗೆ ಮಾತಾಡುತ್ತಾ, ಅನೌಪಚಾರಿಕವಾಗಿ ತಮ್ಮ ನಂಬಿಕೆಯನ್ನು ಹಂಚಿಕೊಳ್ಳಲು ತೊಡಗುತ್ತಾರೆ. ತದನಂತರ, “ಮನೆಮನೆಯ” ಸಾರುವ ಕಾರ್ಯದಲ್ಲಿ ಅವರು ಯೆಹೋವನ ಸಾಕ್ಷಿಗಳನ್ನು ಜೊತೆಸೇರುತ್ತಾರೆ. (ಅ. ಕೃತ್ಯಗಳು 5:42) ಕೆಲವು ಯುವ ಜನರಿಗಾದರೊ ಈ ಸಾರ್ವಜನಿಕ ಕೆಲಸವು ಎಡವುಕಲ್ಲಾಗಿದೆ. “ಬಹಳಷ್ಟು ಯುವ ಜನರು ಮನೆಯಿಂದ ಮನೆಗೆ ಹೋಗಲು ಸಂಕೋಚಪಡುತ್ತಾರೆಂದು ನನಗನಿಸುತ್ತದೆ,” ಎಂಬುದಾಗಿ ಒಬ್ಬ ಯುವ ಕ್ರೈಸ್ತನು ಹೇಳುತ್ತಾನೆ. “ತಮ್ಮ ಸ್ನೇಹಿತರು ತಮ್ಮನ್ನು ಹೇಗೆ ದೃಷ್ಟಿಸುವರೆಂಬುದರ ಕುರಿತಾಗಿ ಅವರು ಭಯಪಡುತ್ತಾರೆ.”

ಆದರೆ ಯಾರ ಸಮ್ಮತಿಯನ್ನು ನೀವು ನಿಜವಾಗಿಯೂ ಮೌಲ್ಯವುಳ್ಳದ್ದೆಂದೆಣಿಸುತ್ತೀರಿ—ನಿಮ್ಮ ಸಮಾನಸ್ಥರ ಸಮ್ಮತಿಯನ್ನೊ ಇಲ್ಲವೆ ನಿಮ್ಮ ಸ್ವರ್ಗೀಯ ಸ್ನೇಹಿತನಾದ ಯೆಹೋವನ ಸಮ್ಮತಿಯನ್ನೊ? ರಕ್ಷಣೆಯನ್ನು ಪಡೆಯುವುದರಿಂದ ಭಯ ಅಥವಾ ಸಂಕೋಚವು ನಿಮ್ಮನ್ನು ತಡೆಯುವಂತೆ ನೀವು ಬಿಡಬೇಕೊ? “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ,” ಎಂಬುದಾಗಿ ಅಪೊಸ್ತಲ ಪೌಲನು ಪ್ರೇರಿಸುತ್ತಾನೆ. (ಇಬ್ರಿಯ 10:23) ಮತ್ತು ಸಾಕಷ್ಟು ತರಬೇತಿ ಹಾಗೂ ತಯಾರಿಯೊಂದಿಗೆ, ಸಾರುವ ಕೆಲಸದಲ್ಲಿ ನೀವು ನಿಜವಾದ ಆನಂದವನ್ನು ಕಂಡುಕೊಳ್ಳಲು ಆರಂಭಿಸಬಲ್ಲಿರೆಂದು ನೀವು ಕಾಣುವಿರಿ!—1 ಪೇತ್ರ 3:15.

ತಕ್ಕ ಸಮಯದಲ್ಲಿ ನಿಮ್ಮ ಸ್ವರ್ಗೀಯ ಸ್ನೇಹಿತನಿಗಾಗಿರುವ ನಿಮ್ಮ ಗಣ್ಯತೆಯು, ದೇವರಿಗೆ ಮೀಸಲಾಗಿರಿಸದ ಸಮರ್ಪಣೆಯನ್ನು ಮಾಡುವಂತೆ ಮತ್ತು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸುವಂತೆ ನಿಮ್ಮನ್ನು ಪ್ರೇರಿಸಬೇಕು. (ರೋಮಾಪುರ 12:1; ಮತ್ತಾಯ 28:19, 20) ಕ್ರಿಸ್ತನ ಸ್ನಾತ ಶಿಷ್ಯನಾಗಲು ಒಂದು ಬಹಿರಂಗ ಪ್ರಕಟನೆಯನ್ನು ಮಾಡುವುದು, ಲಘುವಾಗಿ ಎಣಿಸಲ್ಪಡಬೇಕಾದ ವಿಷಯವಾಗಿರುವುದಿಲ್ಲ. ಅದು ‘ತನ್ನನ್ನು ನಿರಾಕರಿಸಿಕೊಳ್ಳುವುದನ್ನು’—ವೈಯಕ್ತಿಕ ಹೆಬ್ಬಯಕೆಗಳನ್ನು ಬದಿಗಿರಿಸುವುದು ಮತ್ತು ಪ್ರಥಮವಾಗಿ ಯೆಹೋವ ದೇವರ ಅಭಿರುಚಿಗಳನ್ನು ಹುಡುಕುವುದನ್ನು—ಒಳಗೊಳ್ಳುತ್ತದೆ. (ಮಾರ್ಕ 8:34) ಅದು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಂಸ್ಥೆಯೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವುದನ್ನೂ ಒಳಗೊಳ್ಳುತ್ತದೆ.

“ಬಹಳಷ್ಟು ಯುವ ಜನರು ದೀಕ್ಷಾಸ್ನಾನ ಪಡೆದುಕೊಳ್ಳಲು ಹಿಂಜರಿಯುತ್ತಾರೆಂದು ನನಗನಿಸುತ್ತದೆ,” ಎಂಬುದಾಗಿ ರಾಬರ್ಟ್‌ ಎಂಬ ಹೆಸರಿನ ಯುವಕನೊಬ್ಬನು ಗಮನಿಸಿದನು. “ಅವರು ಹಿಮ್ಮೆಟ್ಟಲು ಸಾಧ್ಯವಿರದ ಅಂತಿಮ ಹೆಜ್ಜೆಯು ಅದಾಗಿದೆಯೆಂದು ಅವರು ಭಯಪಡುತ್ತಾರೆ.” ನಿಜ, ಒಬ್ಬನು ದೇವರಿಗೆ ಮಾಡಿದ ಸಮರ್ಪಣೆಯಿಂದ ಹಿಮ್ಮೆಟ್ಟಲು ಸಾಧ್ಯವಿಲ್ಲ. (ಹೋಲಿಸಿ ಪ್ರಸಂಗಿ 5:4.) ಆದರೆ, ಸ್ನಾತನಾಗಿರಲಿ ಅಸ್ನಾತನಾಗಿರಲಿ, “ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ”! (ಯಾಕೋಬ 4:17) ವಿವಾದಾಂಶವು, ದೇವರ ಸ್ನೇಹವನ್ನು ನೀವು ಗಣ್ಯಮಾಡುತ್ತೀರೊ? ಆತನನ್ನು ಸದಾಕಾಲ ಸೇವಿಸಲು ಬಯಸುವಂತೆ ನೀವು ಪ್ರೇರಿಸಲ್ಪಟ್ಟಿದ್ದೀರೊ? ಎಂದಾಗಿದೆ. ಹಾಗಾದರೆ, ನಿಮ್ಮನ್ನು ದೇವರ ಸ್ನೇಹಿತನೆಂದು ಘೋಷಿಸಿಕೊಳ್ಳುವುದರಿಂದ ಭಯವು ನಿಮ್ಮನ್ನು ತಡೆಯುವಂತೆ ಬಿಡಬೇಡಿರಿ!

ದೇವರ ಸ್ನೇಹಿತರಿಗಾಗಿರುವ ಅನಂತ ಪ್ರಯೋಜನಗಳು!

ದೇವರ ಸ್ನೇಹವನ್ನು ಆರಿಸಿಕೊಳ್ಳುವುದು ನಿಮ್ಮನ್ನು ಇಡೀ ಲೋಕದೊಂದಿಗೆ ಪ್ರತಿಕೂಲವಾಗಿರುವಂತೆ ಮಾಡುವುದು. (ಯೋಹಾನ 15:19) ನೀವು ಅಪಹಾಸ್ಯಕ್ಕೆ ಗುರಿಯಾಗಬಹುದು. ಕಷ್ಟಗಳು, ಸಮಸ್ಯೆಗಳು ಮತ್ತು ಶೋಧನೆಗಳು ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ಆದರೆ ದೇವರೊಂದಿಗಿನ ನಿಮ್ಮ ಸಂಬಂಧವನ್ನು ಯಾವನೇ ವ್ಯಕ್ತಿ ಅಥವಾ ಯಾವುದೇ ವಿಷಯವು ಕಸಿದುಕೊಳ್ಳುವಂತೆ ಬಿಡಬೇಡಿರಿ. ಹೀಗೆ ಹೇಳುತ್ತಾ, ಆತನು ತನ್ನ ವಿಫಲವಾಗದ ಬೆಂಬಲವನ್ನು ವಾಗ್ದಾನಿಸುತ್ತಾನೆ: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.”—ಇಬ್ರಿಯ 13:5.

ನಿಮ್ಮ ಅನಂತ ಕ್ಷೇಮದಲ್ಲಿ ಯೆಹೋವನಿಗೆ ಮತ್ತು ಆತನ ಸಂಸ್ಥೆಗಿರುವ ಆಸಕ್ತಿಯ ಒಂದು ಪ್ರಮಾಣವು ಈ ಪುಸ್ತಕವಾಗಿದೆ. ಮತ್ತು ಈ ಪುಟಗಳಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳ ಮತ್ತು ಸಮಸ್ಯೆಗಳ ಕುರಿತಾಗಿ ಹೇಳಲು ಸಾಧ್ಯವಾಗಿರದಿದ್ದಾಗ್ಯೂ, ಬೈಬಲು ವಿವೇಕದ ಎಂತಹ ಅಕ್ಷಯ ಮೂಲವಾಗಿದೆ ಎಂಬುದನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನೀವು ಗಣ್ಯಮಾಡುತ್ತೀರಿ ಖಂಡಿತ! (2 ತಿಮೊಥೆಯ 3:16, 17) ಸಮಸ್ಯೆಗಳು ನಿಮ್ಮನ್ನು ಗಾಬರಿಪಡಿಸುವಾಗ, ಆ ಪವಿತ್ರ ಗ್ರಂಥವನ್ನು ಪರಿಶೋಧಿಸಿರಿ. (ಜ್ಞಾನೋಕ್ತಿ 2:4, 5) ನಿಮಗೆ ದೇವಭಯವುಳ್ಳ ಹೆತ್ತವರು ಇರುವಲ್ಲಿ, ನಿಮಗೆ ಆತ್ಮಿಕ ವಿವೇಕ ಮತ್ತು ಬೆಂಬಲದ ಮತ್ತೊಂದು ಮೂಲವಿದೆ—ಅವರೊಂದಿಗೆ ನೀವು ಮನಸ್ಸು ಬಿಚ್ಚಿ ಮಾತಾಡುವುದಾದರೆ ಮಾತ್ರ.

ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವ ದೇವರಲ್ಲಿ ಎಲ್ಲ ಉತ್ತರಗಳಿವೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಆತನು “ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು,” ಮತ್ತು ಆತನು ನಿಮ್ಮನ್ನು ಯಾವುದೇ ಕಷ್ಟದಿಂದ ಹೊರಬರುವಂತೆಯೂ ಮಾರ್ಗದರ್ಶಿಸಬಲ್ಲನು. (ಕೀರ್ತನೆ 46:1) ಆದುದರಿಂದ “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” (ಪ್ರಸಂಗಿ 12:1) ಯೆಹೋವನ ಹೃದಯವನ್ನು ಸಂತೋಷಪಡಿಸುವ ಮಾರ್ಗವು ಅದೇ ಆಗಿದೆ. (ಜ್ಞಾನೋಕ್ತಿ 27:11) ಮತ್ತು ಎಂದೂ ಬಾಡದ ಪ್ರಮೋದವನದಲ್ಲಿ ಅನಂತ ಜೀವ—ತನ್ನ ಸ್ನೇಹಿತರಾಗಿರುವವರಿಗಾಗಿ ದೇವರು ಕಾದಿರಿಸಿರುವ ಬಹುಮಾನ—ವನ್ನು ಪಡೆದುಕೊಳ್ಳುವ ಮಾರ್ಗವು ಅದಾಗಿದೆ.

ಚರ್ಚೆಗಾಗಿ ಪ್ರಶ್ನೆಗಳು

◻ ನೀವು ದೇವರೊಂದಿಗೆ ಒಂದು ಆಪ್ತವಾದ ಸಂಬಂಧವನ್ನು ಪಡೆದಿರುವುದು ಏಕೆ ಪ್ರಾಮುಖ್ಯವಾಗಿದೆ?

◻ ದೇವರ ಕುರಿತು ಬೈಬಲು ಏನನ್ನು ಪ್ರಕಟಿಸುತ್ತದೆ?

◻ ಬೈಬಲ್‌ ವಾಚನವನ್ನು ನೀವು ಆಹ್ಲಾದಕರವಾಗಿಯೂ ಉತ್ಪನ್ನಕಾರಿಯಾಗಿಯೂ ಹೇಗೆ ಮಾಡಬಲ್ಲಿರಿ?

◻ ನಿಮ್ಮ ನಂಬಿಕೆಯ “ಬಹಿರಂಗ ಪ್ರಕಟನೆಯನ್ನು” ಮಾಡುವುದು ಏನನ್ನು ಒಳಗೊಳ್ಳುತ್ತದೆ? ಹಾಗೆ ಮಾಡುವಂತೆ ನೀವು ಪ್ರೇರಿಸಲ್ಪಟ್ಟಿದ್ದೀರೊ? ಏಕೆ?

◻ ದೇವರ ಸಮೀಪಕ್ಕೆ ಬರುವುದರಲ್ಲಿ ಕೂಟಗಳು ಯಾವ ಪಾತ್ರವನ್ನು ವಹಿಸುತ್ತವೆ, ಮತ್ತು ಅವುಗಳಿಂದ ನೀವು ಹೆಚ್ಚನ್ನು ಹೇಗೆ ಪಡೆದುಕೊಳ್ಳಬಲ್ಲಿರಿ?

◻ ದೇವರ ಸ್ನೇಹಿತನಾಗಿರುವುದರ ಪ್ರಯೋಜನಗಳಾವುವು?

[ಪುಟ 311 ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರಿಗೆ ಸಮೀಪವಾಗಿರಲು ನನಗೆ ನಿಜವಾಗಿಯೂ ಸಾಧ್ಯವೊ?

[ಪುಟ 312 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬೈಬಲು ಮನುಷ್ಯನಿಗಾಗಿರುವ ದೇವರ ಪ್ರಕಟನೆಯಾಗಿದೆ. ನಾವು ಇಲ್ಲಿಗೆ ಹೇಗೆ ಬಂದೆವು ಮತ್ತು ನಾವೆಲ್ಲಿಗೆ ಹೋಗುತ್ತಿದ್ದೇವೆಂದು ಅದು ನಮಗೆ ಹೇಳುತ್ತದೆ

[ಪುಟ 316,317ರಲ್ಲಿರುವಚೌಕ]

ಕೂಟಗಳು—ದೇವರ ಸಮೀಪಕ್ಕೆ ಬರುವ ವಿಷಯದಲ್ಲಿ ಒಂದು ನೆರವು

“ಯೆಹೋವನನ್ನು ಪ್ರೀತಿಸುವ ಇತರರೊಂದಿಗಿನ ನಿಕಟವಾದ ಸಹವಾಸವು, ಆತನಿಗೆ ಸಮೀಪವಾಗಿ ಉಳಿಯಲು ನನಗೆ ಸಹಾಯ ಮಾಡುತ್ತದೆಂದು ನಾನು ಕಂಡುಕೊಂಡಿದ್ದೇನೆ.” ಹಾಗೆಂದು ಒಬ್ಬ ಯುವ ನೈಜೀರಿಯನ್‌ ಯೌವನಸ್ಥನು ಹೇಳಿದನು. ಯೆಹೋವನ ಸಾಕ್ಷಿಗಳು ತಮ್ಮ ಸ್ಥಳೀಯ ರಾಜ್ಯ ಸಭಾಗೃಹಗಳಲ್ಲಿ, ಸಹವಾಸದ ಇಂತಹ ಅವಧಿಗಳಿಗಾಗಿ ಏರ್ಪಡಿಸುತ್ತಾರೆ. (ಇಬ್ರಿಯ 10:23-25) 16 ವರ್ಷ ಪ್ರಾಯದ ಅನಿಟ ಹೇಳಿದ್ದು: “ರಾಜ್ಯ ಸಭಾಗೃಹದಲ್ಲಿ ನಾನು ನಿಜ ಮಿತ್ರರನ್ನು ಕಂಡುಕೊಂಡೆ.”

ಹಾಗಿದ್ದರೂ, ಅಂತಹ ನೆರವಿಗಳು ಬರಿಯ ಸಾಮಾಜಿಕ ಗೋಷ್ಠಿಗಳಾಗಿರುವುದಿಲ್ಲ. ರಾಜ್ಯ ಸಭಾಗೃಹಗಳು ಬೈಬಲ್‌ ಶಿಕ್ಷಣದ ಒಂದು ಪಾಠಕ್ರಮವನ್ನು ಪ್ರಸ್ತುತಪಡಿಸುತ್ತವೆ—ಇದರಲ್ಲಿ ಐದು ಸಾಪ್ತಾಹಿಕ ಕೂಟಗಳು ಸೇರಿವೆ. ವಿಷಯಗಳ ಒಂದು ವಿಶಾಲವಾದ ಶ್ರೇಣಿಯು ಆವರಿಸಲ್ಪಡುತ್ತದೆ: ಕುಟುಂಬ ಜೀವನ, ಬೈಬಲ್‌ ಪ್ರವಾದನೆ, ನಡತೆ, ಸಿದ್ಧಾಂತ, ಮತ್ತು ಕ್ರೈಸ್ತ ಶುಶ್ರೂಷೆ—ಹೀಗೆ ಕೆಲವನ್ನು ಹೆಸರಿಸಬಹುದು. ಇಂತಹ ಕೂಟಗಳು ವಿಶದವಾದ ರಂಗಸ್ಥಳದ ತಯಾರಿಕೆಗಳಾಗಿರದಿದ್ದರೂ, ಆಸಕ್ತಿ ಹುಟ್ಟಿಸುವ ವಿಧದಲ್ಲಿ ಪ್ರಸ್ತುತಗೊಳಿಸಲ್ಪಡುತ್ತವೆ. ಭಾಷಣಗಳು ಮತ್ತು ಗುಂಪು ಚರ್ಚೆಗಳು, ಅನೇಕ ವೇಳೆ ಇಂಟರ್‌ವ್ಯೂಗಳು ಮತ್ತು ಸ್ವಾರಸ್ಯಕರವಾದ ದೃಶ್ಯಗಳಿಂದ ಸಮ್ಮಿಶ್ರಗೊಳಿಸಲ್ಪಡುತ್ತವೆ. ದೇವಪ್ರಭುತ್ವ ಶುಶ್ರೂಷಾ ಶಾಲೆಯು, ಸಾವಿರಾರು ಜನರನ್ನು ಪರಿಣಾಮಕಾರಿ ಸಾರ್ವಜನಿಕ ಭಾಷಣಕರ್ತರಾಗಿ ತರಬೇತುಗೊಳಿಸಿದುದರಲ್ಲಿ ವಿಶೇಷವಾಗಿ ಎದ್ದುಕಾಣುವಂತಹದ್ದಾಗಿದೆ.

ನೀವು ಕೂಟಗಳನ್ನು ಈಗಾಗಲೇ ಹಾಜರಾಗುತ್ತಿರುವಲ್ಲಿ, ಆಗೇನು? ಅವುಗಳಿಂದ ಹೆಚ್ಚನ್ನು ಪಡೆದುಕೊಳ್ಳಲು ಪ್ರಯಾಸಪಡಿರಿ. (1) ತಯಾರಿಸಿರಿ: “ನಾವು ಕೂಟಗಳಲ್ಲಿ ಉಪಯೋಗಿಸುವ ಪುಸ್ತಕಗಳನ್ನು ಅಭ್ಯಸಿಸಲು ನಾನು ನಿಗದಿತ ಸಮಯಗಳನ್ನು ಮೀಸಲಾಗಿಟ್ಟಿದ್ದೇನೆ,” ಎಂದು ಅನಿಟ ಹೇಳುತ್ತಾಳೆ. ಇದು ನೀವು ಸುಲಭವಾಗಿ ಭಾಗವಹಿಸುವಂತೆ ಮಾಡುವುದು. (2) ಭಾಗವಹಿಸಿರಿ: ಯೌವನಸ್ಥನೋಪಾದಿ ಯೇಸು, ಮಂದಿರದಲ್ಲಿ ಆತ್ಮಿಕ ವಿಷಯಗಳು ಚರ್ಚಿಸಲ್ಪಟ್ಟಾಗ, ಸಕ್ರಿಯವಾಗಿ ಆಲಿಸಿದನು, ಪ್ರಶ್ನೆಗಳನ್ನು ಕೇಳಿದನು ಮತ್ತು ಉತ್ತರಗಳನ್ನು ನೀಡಿದನು. (ಲೂಕ 2:46, 47) ನೀವು ಸಹ ನಿಮ್ಮ ಮನಸ್ಸನ್ನು ವಿಷಯಗಳ ಮೇಲಿಡಲು ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಾ, “ಕೇಳಿಸಿಕೊಳ್ಳಲ್ಪಡುವ ವಿಷಯಗಳಿಗೆ ಸಾಮಾನ್ಯವಾದುದಕ್ಕಿಂತಲೂ ಹೆಚ್ಚಿನ ಗಮನವನ್ನು ಸಲ್ಲಿಸ”ಸಾಧ್ಯವಿದೆ. (ಇಬ್ರಿಯ 2:1, NW) ಸಭಿಕರ ಭಾಗವಹಿಸುವಿಕೆಯು ಕೇಳಿಕೊಳ್ಳಲ್ಪಡುವಾಗ, ಹೇಳಿಕೆಗಳನ್ನು ಮಾಡುವುದರಲ್ಲಿ ಪಾಲ್ಗೊಳ್ಳಿರಿ.

ಮತ್ತೊಂದು ಸಹಾಯಕಾರಿ ಸೂಚನೆ ಏನೆಂದರೆ, (3) ನೀವು ಕಲಿಯುವಂತಹದ್ದನ್ನು ಕಾರ್ಯರೂಪಕ್ಕೆ ಹಾಕಿರಿ: ನೀವು ಕಲಿಯುವಂತಹ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಿರಿ. ಹೆಚ್ಚು ಪ್ರಾಮುಖ್ಯವಾಗಿ, ಅಗತ್ಯವಿರುವಲ್ಲಿ ಬದಲಾವಣೆಗಳನ್ನು ಮಾಡುತ್ತಾ, ನೀವು ಕಲಿಯುವಂತಹ ವಿಷಯಗಳನ್ನು ನಿಮ್ಮ ಜೀವಿತಕ್ಕೆ ಅನ್ವಯಿಸಿಕೊಳ್ಳಿರಿ. ಸತ್ಯವು “ನಿಮ್ಮೊಳಗೆ . . . ಕೆಲಸ ನಡಿಸುತ್ತದೆ” ಎಂಬುದನ್ನು ತೋರಿಸಿಕೊಡಿರಿ.—1 ಥೆಸಲೊನೀಕ 2:13.

ಕೂಟಗಳಿಗೆ ಆದ್ಯತೆಯನ್ನು ಕೊಡಿರಿ. ನಿಮಗೆ ವಿಪರೀತ ಶಾಲಾಮನೆಗೆಲಸದ ಹೊರೆಯಿರುವಲ್ಲಿ, ಕೂಟದ ಮೊದಲು ಅದನ್ನು ಮಾಡಲು ಪ್ರಯತ್ನಿಸಿರಿ. “ಕೂಟಗಳ ನಂತರ ಹರಟೆ ಹೊಡೆಯಲು ಮತ್ತು ಕೊನೆಯ ತನಕ ಉಳಿಯಲು ನಾನು ಇಷ್ಟಪಡುತ್ತೇನೆ,” ಎಂಬುದಾಗಿ ಸಿಮಿಯೋನ್‌ ಎಂಬ ಹೆಸರಿನ ಒಬ್ಬ ಯೌವನಸ್ಥನು ಹೇಳುತ್ತಾನೆ. “ಆದರೆ ನನಗೆ ಶಾಲಾಕೆಲಸವಿರುವಾಗ, ನನ್ನ ಕೆಲಸವನ್ನು ಮಾಡಲು ನಾನು ತಡಮಾಡದೆ ಹೊರಡುತ್ತೇನೆ.” ವಿಷಯಗಳನ್ನು ಬಗೆಹರಿಸುವ ನಿಮ್ಮ ವಿಧಾನವು ಏನೇ ಆಗಿರಲಿ, ಕ್ರಮವಾಗಿ ಕೂಟಗಳಲ್ಲಿರಲು ನಿಮ್ಮಿಂದ ಸಾಧ್ಯವಾಗಿರುವುದನ್ನು ಮಾಡಿರಿ. ಅವು ನಿಮ್ಮ ಆತ್ಮಿಕ ಬೆಳವಣಿಗೆಗೆ ಪ್ರಮುಖವಾಗಿವೆ.

[ಪುಟ 315 ರಲ್ಲಿರುವ ಚಿತ್ರಗಳು]

ಬೈಬಲಿನ ವಾಚನಮಾಡುವುದು, ದೇವರೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದಕ್ಕೆ ಆವಶ್ಯಕವಾಗಿದೆ

[ಪುಟ 318 ರಲ್ಲಿರುವ ಚಿತ್ರಗಳು]

“ನನಗೆ ಒಂದು ಸಮಸ್ಯೆಯಿರುವಾಗಲೆಲ್ಲ, ನಾನು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗಬಲ್ಲೆ ಮತ್ತು ಆತನು ನನಗೆ ಸಹಾಯ ಮಾಡುವನೆಂದು ನನಗೆ ಗೊತ್ತಿದೆ”