ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?

ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?

ಅಧ್ಯಾಯ 8

ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?

“ನಾನು ಈ ಕ್ಷೇತ್ರದಲ್ಲಿ ಎಂಟು ವರ್ಷಗಳಿಂದ ಶಾಲೆಗೆ ಹೋಗುತ್ತಿದ್ದೇನೆ, ಆದರೆ ಈ ಸಮಯದಲ್ಲೆಲ್ಲಾ ಒಬ್ಬನೇ ಒಬ್ಬ ಸ್ನೇಹಿತನನ್ನು ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ! ಒಬ್ಬ ಸ್ನೇಹಿತನನ್ನೂ ಮಾಡಿಕೊಂಡಿಲ್ಲ.” ಹೀಗೆಂದು ಪ್ರಲಾಪಿಸಿದನು ರಾನಿ ಎಂಬ ಹೆಸರಿನ ಒಬ್ಬ ಯೌವನಸ್ಥನು. ಪ್ರಾಯಶಃ ನೀವು ಕೆಲವೊಮ್ಮೆ ತದ್ರೀತಿಯಲ್ಲಿ ಸ್ನೇಹವೊಂದರಲ್ಲಿ ವೈಫಲ್ಯವನ್ನು ಅನುಭವಿಸಿದ್ದೀರಿ. ಆದರೆ ನಿಜ ಸ್ನೇಹಿತರು ಎಂದರೆ ಯಾರು? ಮತ್ತು ಅವರನ್ನು ಪಡೆದುಕೊಳ್ಳುವ ರಹಸ್ಯವೇನು?

ಒಂದು ಜ್ಞಾನೋಕ್ತಿಯು ಹೇಳುವುದು: “ಒಬ್ಬ ಮಿತ್ರನು ಎಲ್ಲಾ ಸಮಯಗಳಲ್ಲಿ ಪ್ರೀತಿಪರನಾಗಿದ್ದು, ಸಂಕಷ್ಟದ ಸಮಯಗಳಲ್ಲಿ ಒಬ್ಬ ಸಹೋದರನಾಗುತ್ತಾನೆ.” (ಜ್ಞಾನೋಕ್ತಿ 17:17, ದ ಬೈಬಲ್‌ ಇನ್‌ ಬೇಸಿಕ್‌ ಇಂಗ್ಲಿಷ್‌) ಆದರೆ ಸ್ನೇಹದಲ್ಲಿ, ಒರಗಿ ಅಳಲಿಕ್ಕಾಗಿ ಒಂದು ಭುಜವನ್ನು ಹೊಂದಿರುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಮಾರ್‌ವ್ಯ ಎಂಬ ಹೆಸರಿನ ಒಬ್ಬ ಯುವತಿಯು ಹೇಳುವುದು: “ಕೆಲವೊಮ್ಮೆ ನಾಮಮಾತ್ರದ ಸ್ನೇಹಿತೆಯೊಬ್ಬಳು, ನೀವು ಸಮಸ್ಯೆಯಲ್ಲಿ ಸಿಕ್ಕಿಬೀಳುತ್ತಿರುವುದನ್ನು ನೋಡಿ, ‘ನೀನು ಅದಕ್ಕೆ ಮುಂದುವರಿಯುತ್ತಿರುವುದನ್ನು ನೋಡಿದೆ, ಆದರೆ ನಿನಗೆ ಹೇಳಲು ಹೆದರಿದೆ’ ಎಂದು ಅನಂತರ ಹೇಳುತ್ತಾಳೆ. ಆದರೆ ಒಬ್ಬ ನಿಜವಾದ ಸ್ನೇಹಿತೆಯು ನೀವು ತಪ್ಪಾದ ಮಾರ್ಗದಲ್ಲಿ ಹೋಗುವುದನ್ನು ನೋಡುವಾಗ, ವೇಳೆ ಮೀರುವ ಮುಂಚೆಯೇ ನಿಮ್ಮನ್ನು ಎಚ್ಚರಿಸಲು ಪ್ರಯತ್ನಿಸುವಳು. ಅವಳು ಏನನ್ನು ಹೇಳುತ್ತಾಳೊ ಅದು ನಿಮಗೆ ಇಷ್ಟವಾಗಲಿಕ್ಕಿಲ್ಲವೆಂದು ಅವಳಿಗೆ ತಿಳಿದಿದ್ದರೂ ಅವಳು ಹಾಗೆ ಮಾಡುವಳು.”

ನಿಮಗೆ ಸತ್ಯವನ್ನು ಹೇಳುವಷ್ಟು ನಿಮ್ಮ ಕುರಿತಾಗಿ ಕಾಳಜಿವಹಿಸಿರುವ ಒಬ್ಬರನ್ನು ತಿರಸ್ಕರಿಸಲು, ಗಾಸಿಗೊಳಿಸಲ್ಪಟ್ಟ ಅಹಂ ಅನ್ನು ನೀವು ಅನುಮತಿಸುವಿರೊ? ಜ್ಞಾನೋಕ್ತಿ 27:6 ಹೇಳುವುದು: “ದ್ವೇಷಿಸುವವನೊಬ್ಬನಿಂದ ಬರುವ ಉಕ್ಕಿಹರಿಯುವ ಚುಂಬನಗಳಿಗಿಂತ, ಪ್ರೀತಿಸುವವನೊಬ್ಬನಿಂದ ಬರುವ ಜಜ್ಜುಗಾಯಗಳಲ್ಲಿ ಹೆಚ್ಚಿನ ಭರವಸೆ ಇದೆ.” (ಬೈಯಿಂಗ್ಟನ್‌) ಹೀಗೆ, ನಿಮ್ಮ ಸ್ನೇಹಿತನಾಗಿರಲು ನೀವು ಬಯಸುವಂತಹ ವ್ಯಕ್ತಿಯು, ಮುಚ್ಚುಮರೆಯಿಲ್ಲದೆ ಯೋಚಿಸುವ ಮತ್ತು ಮುಚ್ಚುಮರೆಯಿಲ್ಲದೆ ಮಾತಾಡುವ ಒಬ್ಬ ವ್ಯಕ್ತಿಯಾಗಿರಬೇಕು.

ನಿಜ ಸ್ನೇಹಿತರ ಪ್ರತಿಯಾಗಿ ನಕಲಿ ಸ್ನೇಹಿತರು

“ಎಲ್ಲ ‘ಸ್ನೇಹಿತರು’ ಉತ್ತಮ ಪ್ರಭಾವವಾಗಿರುವುದಿಲ್ಲ ಎಂಬುದಕ್ಕೆ ನನ್ನ ಜೀವಿತವು ರುಜುವಾತಾಗಿದೆ,” ಎಂದು 23 ವರ್ಷ ಪ್ರಾಯದ ಪೆಗಿ ತಿಳಿಸುತ್ತಾಳೆ. ಒಬ್ಬ ಹದಿವಯಸ್ಕಳೋಪಾದಿ ಪೆಗಿ, ಮನೆಯನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟಿದ್ದಳು. ಆದಾಗಲೂ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರಾದ ಬಿಲ್‌ ಮತ್ತು ಅವನ ಪತ್ನಿ ಲಾಯ್‌ ಅವಳ ಸ್ನೇಹ ಬೆಳೆಸಿದರು. ಅವರು ಪೆಗಿಯೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಿದರು. “ಅವರೊಂದಿಗೆ ನಾನು ಕಳೆದಂತಹ ತಿಂಗಳುಗಳು, ನಿಜವಾದ ಆನಂದ, ಸಂತೃಪ್ತಿ ಮತ್ತು ಶಾಂತಿಯಿಂದ ತುಂಬಿದ್ದವು,” ಎಂದು ಪೆಗಿ ಹೇಳಿದಳು. ಆದರೂ, ಅವಳು ಸಂಧಿಸಿದ್ದಂತಹ ಕೆಲವು ಯುವ ಜನರೊಂದಿಗೆ ಇರಲು ಅವಳು ಆಯ್ದುಕೊಂಡು, ಬಿಲ್‌ ಹಾಗೂ ಲಾಯ್‌ಳನ್ನು ಬಿಟ್ಟುಬಿಟ್ಟಳು.

ಪೆಗಿ ಮುಂದೆ ಜ್ಞಾಪಿಸಿಕೊಳ್ಳುವುದು: “ನನ್ನ ಹೊಸ ‘ಸ್ನೇಹಿತ’ರಿಂದ ನಾನು ಅನೇಕ ವಿಷಯಗಳನ್ನು—ಸ್ಟೀರಿಯೋಗಳನ್ನು ಕದಿಯುವುದು, ಖೋಟಾ ಚೆಕ್‌ಗಳ ನಗದುಪಡೆಯುವುದು, ಮಾರಿವಾನಾ ಸೇದುವುದು ಮತ್ತು ಕೊನೆಗೆ, ದಿನಕ್ಕೆ 200 ಡಾಲರುಗಳ ಮೊತ್ತದ ಅಮಲೌಷಧ ಹವ್ಯಾಸವನ್ನು ಪೋಷಿಸುವ ವಿಧವನ್ನು—ಕಲಿತುಕೊಂಡೆ.” 18ರ ವಯಸ್ಸಿನಲ್ಲಿ ಅವಳು ರೇ ಎಂಬ ಹೆಸರಿನ ಒಬ್ಬ ಯುವಕನನ್ನು ಭೇಟಿಯಾದಳು; ಅವನು ಅವಳಿಗೆ ಉಪಯೋಗಿಸಲು ಬೇಕಾದಷ್ಟು ಅಮಲೌಷಧಗಳನ್ನು ನೀಡಿದನು—ಉಚಿತವಾಗಿ. “ನನ್ನ ಎಲ್ಲಾ ಸಮಸ್ಯೆಗಳು ಮುಗಿದುಹೋದವು ಎಂದು ನಾನು ನೆನಸಿದೆ. ನಾನು ಇನ್ನೆಂದೂ ಕದಿಯಬೇಕಾಗಿಲ್ಲ, ಮೋಸಮಾಡಬೇಕಾಗಿಲ್ಲ,” ಎಂದು ಪೆಗಿ ಯೋಚಿಸಿದಳು. ಆದರೆ ರೇ ಅವಳನ್ನು ವೇಶ್ಯಾವಾಟಿಕೆಗೆ ಪರಿಚಯಿಸಿದನು. ಕಟ್ಟಕಡೆಗೆ ಪೆಗಿ ಆ ನಗರ ಮತ್ತು ತನ್ನ ದುರ್ವ್ಯಸನಿ “ಸ್ನೇಹಿತ”ರಿಂದ ದೂರ ಓಡಿಹೋದಳು.

ತನ್ನ ಹೊಸ ನಿವೇಶನದಲ್ಲಿ, ಒಂದು ದಿನ ಪೆಗಿ ಇಬ್ಬರು ಯೆಹೋವನ ಸಾಕ್ಷಿಗಳಿಂದ ಭೇಟಿಮಾಡಲ್ಪಟ್ಟಳು. “ಚಕಿತಗೊಂಡ ಆ ಇಬ್ಬರು ಸ್ತ್ರೀಯರನ್ನು ನಾನು ಆಲಿಂಗಿಸಿದಂತೆ, ಆನಂದಾಶ್ರುಗಳು ನನ್ನ ಕಣ್ಣುಗಳಲ್ಲಿ ತುಂಬಿಕೊಂಡವು,” ಎಂದು ಪೆಗಿ ವಿವರಿಸುತ್ತಾಳೆ. “ನನ್ನ ಹಿಂದಿನ ‘ಸ್ನೇಹಿತರ’ ಕಪಟಾಚಾರವನ್ನು ನಾನು ಹೇಸಲು ಆರಂಭಿಸಿದ್ದೆ, ಆದರೆ ನಿಜವಾಗಿ ಸ್ನೇಹಿತರಾಗಿದ್ದ ಜನರು ಇಲ್ಲಿದ್ದರು.” ತನ್ನ ಬೈಬಲ್‌ ಅಭ್ಯಾಸವನ್ನು ಪೆಗಿ ಪುನಃ ಆರಂಭಿಸಿದಳು.

ಆದರೂ, ದೇವರ ಮಾರ್ಗಗಳಿಗೆ ತನ್ನ ಜೀವಿತವನ್ನು ಹೊಂದಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಧೂಮಪಾನಮಾಡುವುದನ್ನು ನಿಲ್ಲಿಸಿಬಿಡುವುದು ವಿಶೇಷವಾಗಿ ಕಷ್ಟಕರವಾಗಿತ್ತು. ಆದಾಗಲೂ, ಒಬ್ಬ ಸಾಕ್ಷಿ ಸ್ನೇಹಿತೆಯು ಬುದ್ಧಿವಾದ ಹೇಳಿದ್ದು: “ನೀನು ತಪ್ಪಿಬಿದ್ದ ನಂತರ ಪ್ರಾರ್ಥಿಸಿ, ಕ್ಷಮಾಪಣೆಗಾಗಿ ಬೇಡಿಕೊಳ್ಳುವ ಬದಲಿಗೆ, ಮುಂಚೆಯೇ, ನಿನಗೆ ಧೂಮಪಾನಮಾಡಬೇಕೆಂಬ ಅನಿಸಿಕೆಯಾಗುವಾಗಲೇ ಬಲಕ್ಕಾಗಿ ಬೇಡುತ್ತಾ ಏಕೆ ಪ್ರಾರ್ಥಿಸಬಾರದು?” ಪೆಗಿ ಹೇಳುವುದು: “ಈ ದಯಾಪರ ಮತ್ತು ವ್ಯಾವಹಾರಿಕ ಸಲಹೆಯು ಕಾರ್ಯನಡಿಸಿತು. . . . ಹಲವಾರು ವರ್ಷಗಳ ನಂತರ ಪ್ರಥಮ ಬಾರಿ, ನನಗೆ ಆಂತರ್ಯದಲ್ಲಿ ಶುದ್ಧವಾಗಿರುವ ಅನಿಸಿಕೆಯಾಯಿತು ಮತ್ತು ಸ್ವಗೌರವವನ್ನು ಹೊಂದುವುದು ಏನನ್ನು ಅರ್ಥೈಸುತ್ತದೆಂಬುದು ನನಗೆ ತಿಳಿಯಿತು.”

ಪೆಗಿಯ ಅನುಭವವು, ಜ್ಞಾನೋಕ್ತಿ 13:20ರಲ್ಲಿನ ಬೈಬಲಿನ ಮಾತುಗಳ ಸತ್ಯತೆಯನ್ನು ಎತ್ತಿತೋರಿಸುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಪೆಗಿ ಹೇಳುವುದು: “ದೇವರನ್ನು ಪ್ರೀತಿಸಿದ ಆ ವ್ಯಕ್ತಿಗಳೊಂದಿಗೇ ನಾನು ನನ್ನ ಸ್ನೇಹವನ್ನು ಇಟ್ಟುಕೊಂಡಿರುತ್ತಿದ್ದಲ್ಲಿ, ಈಗ ಒಂದು ಅಸಹ್ಯವಾದ ಸ್ಮರಣೆಯಾಗಿರುವ ಆ ಎಲ್ಲಾ ವಿಷಯಗಳನ್ನು ನಾನು ತಪ್ಪಿಸಿಕೊಳ್ಳಬಹುದಿತ್ತು.”

ಸ್ನೇಹಿತರನ್ನು ಕಂಡುಕೊಳ್ಳುವುದು

ದೇವರನ್ನು ಪ್ರೀತಿಸುವ ಸ್ನೇಹಿತರನ್ನು ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಕ್ರೈಸ್ತ ಸಭೆಯೊಳಗೆ. ನಂಬಿಕೆಯ ಕುರಿತಾಗಿ ಕಂಠೋಕ್ತಿ ಹೇಳಿಕೆಯನ್ನು ಮಾತ್ರವಲ್ಲ, ತಮ್ಮ ನಂಬಿಕೆ ಮತ್ತು ಭಕ್ತಿಯನ್ನು ಸಮರ್ಥಿಸಿಕೊಳ್ಳಲು ಮಾಡುವ ಕಾರ್ಯಗಳೂ ಇರುವ ಯುವ ಜನರಿಗಾಗಿ ಹುಡುಕಿರಿ. (ಯಾಕೋಬ 2:26ನ್ನು ಹೋಲಿಸಿರಿ.) ಅಂತಹ ಯುವ ಜನರನ್ನು ಕಂಡುಕೊಳ್ಳುವುದು ಕಷ್ಟಕರವಾಗಿರುವುದಾದರೆ, ನಿಮಗಿಂತ ಹಿರಿಯರಾಗಿರುವ ಕೆಲವು ಕ್ರೈಸ್ತರ ಪರಿಚಯ ಮಾಡಿಕೊಳ್ಳಿರಿ. ಸ್ನೇಹಕ್ಕೆ ವಯಸ್ಸು ಒಂದು ತಡೆಯಾಗಿರುವ ಅಗತ್ಯವಿಲ್ಲ. ದಾವೀದ ಮತ್ತು ಯೋನಾತಾನರ ನಡುವಿನ ಆದರ್ಶಪ್ರಾಯ ಸ್ನೇಹದ ಕುರಿತಾಗಿ ಬೈಬಲ್‌ ಹೇಳುತ್ತದೆ—ಮತ್ತು ಯೋನಾತಾನನು ದಾವೀದನ ತಂದೆಯಾಗಿರುವಷ್ಟು ದೊಡ್ಡವನಾಗಿದ್ದನು!—1 ಸಮುವೇಲ 18:1.

ಆದಾಗಲೂ, ನೀವು ಸ್ನೇಹಗಳನ್ನು ಹೇಗೆ ಆರಂಭಿಸಸಾಧ್ಯವಿದೆ?

ಇತರರಲ್ಲಿ ಸಕ್ರಿಯ ಆಸಕ್ತಿ

ಯೇಸು ಕ್ರಿಸ್ತನು ಎಷ್ಟು ಬಲವಾದ ಸ್ನೇಹಗಳನ್ನು ಕಟ್ಟಿದನೆಂದರೆ ಅವನ ಸ್ನೇಹಿತರು ಅವನಿಗಾಗಿ ಸಾಯಲೂ ಸಿದ್ಧರಿದ್ದರು. ಯಾಕೆ? ಒಂದು ವಿಷಯವೇನಂದರೆ, ಯೇಸು ಜನರ ಕಾಳಜಿವಹಿಸಿದನು. ಅವನು ಮುಂದೆ ಹೋಗಿ, ಇತರರಿಗೆ ಸಹಾಯ ಮಾಡಿದನು. ಅವನಿಗೆ ಒಳಗೊಳ್ಳುವ ‘ಮನಸ್ಸಿತ್ತು.’ (ಮತ್ತಾಯ 8:3) ನಿಜವಾಗಿಯೂ, ಇತರರಲ್ಲಿ ಆಸಕ್ತಿಯನ್ನು ತೋರಿಸುವುದು, ಸ್ನೇಹಿತರನ್ನು ಮಾಡಿಕೊಳ್ಳುವ ವಿಷಯದಲ್ಲಿ ಮೊದಲ ಹೆಜ್ಜೆಯಾಗಿದೆ.

ಉದಾಹರಣೆಗಾಗಿ, “ಜನರಿಗಾಗಿ ನಿಜವಾದ ಪ್ರೀತಿಯನ್ನು ಹೊಂದಿದ್ದು, ಇತರರಲ್ಲಿ ಸಕ್ರಿಯವಾದ ಆಸಕ್ತಿಯನ್ನು ವಹಿಸುವ” ಕಾರಣದಿಂದಾಗಿ, ಸ್ನೇಹಿತರನ್ನು ಮಾಡಿಕೊಳ್ಳುವುದರಲ್ಲಿ ಯಶಸ್ಸನ್ನು ಪಡೆದೆನೆಂದು, ಡೇವಿಡ್‌ ಎಂಬ ಹೆಸರಿನ ಒಬ್ಬ ಯೌವನಸ್ಥನು ಹೇಳುತ್ತಾನೆ. ಅವನು ಕೂಡಿಸುವುದು: “ಅತಿ ದೊಡ್ಡ ವಿಷಯಗಳಲ್ಲಿ ಒಂದು, ಆ ವ್ಯಕ್ತಿಯ ಹೆಸರನ್ನು ತಿಳಿದುಕೊಳ್ಳುವುದೇ ಆಗಿದೆ. ತಮ್ಮ ಹೆಸರನ್ನು ನೆನಪಿನಲ್ಲಿಡುವಷ್ಟು ಆಸಕ್ತಿಯನ್ನು ನೀವು ವಹಿಸಿದ್ದಿರೆಂಬ ವಿಷಯದಿಂದ ಇತರರು ಅನೇಕ ವೇಳೆ ಪ್ರಭಾವಿತರಾಗುತ್ತಾರೆ. ಈ ಕಾರಣದಿಂದ ಅವರು ಯಾವುದೊ ಅನುಭವವನ್ನು ಅಥವಾ ಸಮಸ್ಯೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು ಮತ್ತು ಸ್ನೇಹವು ಬೆಳೆಯಲು ಆರಂಭವಾಗುತ್ತದೆ.”

ನೀವು ಕೈಕುಲುಕುವ ಬಾಹ್ಯಪ್ರವೃತ್ತಿಯುಳ್ಳವರು ಆಗಿರಬೇಕೆಂಬುದನ್ನು ಇದು ಅರ್ಥೈಸುವುದಿಲ್ಲ. ಯೇಸು “ದೀನ ಮನಸ್ಸುಳ್ಳವ”ನಾಗಿದ್ದನು, ಆಡಂಬರವುಳ್ಳವನು ಅಥವಾ ಬೆಡಗಿನವನು ಆಗಿರಲಿಲ್ಲ. (ಮತ್ತಾಯ 11:28, 29) ಇತರರಲ್ಲಿನ ಪ್ರಾಮಾಣಿಕ ಆಸಕ್ತಿಯೇ ಅವರನ್ನು ಆಕರ್ಷಿಸುವಂತಹ ವಿಷಯವಾಗಿದೆ. ಜೊತೆಯಾಗಿ ಒಂದು ಊಟದಲ್ಲಿ ಪಾಲಿಗರಾಗುವುದು ಅಥವಾ ಯಾರಾದರೊಬ್ಬರಿಗೆ ಒಂದು ಕೆಲಸವನ್ನು ಮಾಡಿಮುಗಿಸಲು ಸಹಾಯಮಾಡುವುದರಂತಹ ತೀರ ಸರಳವಾದ ಸಂಗತಿಗಳು, ಅನೇಕ ವೇಳೆ ಒಂದು ಸ್ನೇಹವನ್ನು ಗಾಢವಾಗಿಸಲು ಕಾರ್ಯನಡಿಸಬಲ್ಲವು.

‘ನೀವು ಹೇಗೆ ಕಿವಿಗೊಡಬೇಕು’

“ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ” ಎಂದು ಯೇಸು ಶಿಫಾರಸ್ಸು ಮಾಡಿದನು. (ಲೂಕ 8:18) ದೇವರ ಮಾತುಗಳಿಗೆ ಕಿವಿಗೊಡುವ ಮೌಲ್ಯವು ಅವನ ಮನಸ್ಸಿನಲ್ಲಿತ್ತಾದರೂ, ಆ ತತ್ತ್ವವು ಸಂಬಂಧಗಳನ್ನು ಬೆಳೆಸುವುದರಲ್ಲಿಯೂ ಚೆನ್ನಾಗಿ ಅನ್ವಯಿಸುತ್ತದೆ. ಒಬ್ಬ ಒಳ್ಳೆಯ ಕೇಳುಗರಾಗಿರುವುದು ಒಂದು ಸ್ನೇಹವನ್ನು ಕಟ್ಟುವುದರಲ್ಲಿ ಅತ್ಯಾವಶ್ಯಕವಾಗಿದೆ.

ಇತರರು ಏನನ್ನು ಹೇಳುತ್ತಾರೊ ಅದರಲ್ಲಿ ನಾವು ಪ್ರಾಮಾಣಿಕವಾಗಿ ಆಸಕ್ತರಾಗಿರುವಲ್ಲಿ, ಅವರು ಸಾಮಾನ್ಯವಾಗಿ ನಮ್ಮ ಕಡೆಗೆ ಸೆಳೆಯಲ್ಪಡುತ್ತಾರೆ. ಆದರೆ ಇದು ನೀವು “ಕೇವಲ ನಿಮ್ಮ ಸ್ವಂತ ವಿಷಯಗಳ ಮೇಲಿರುವ ವೈಯಕ್ತಿಕ ಆಸಕ್ತಿಯ [ಪ್ರಾಯಶಃ ಕೇವಲ ನೀವು ಏನನ್ನು ಹೇಳಲು ಬಯಸುತ್ತೀರೊ ಅದರ]ಲ್ಲಲ್ಲ, ಇತರರ ವಿಷಯಗಳ ಮೇಲಿರುವ ವೈಯಕ್ತಿಕ ಆಸಕ್ತಿಯಲ್ಲಿಯೂ ಕಣ್ಣಿ”ಡುವುದನ್ನು ಅವಶ್ಯಪಡಿಸುತ್ತದೆ.—ಫಿಲಿಪ್ಪಿ 2:4, NW.

ನಿಷ್ಠಾವಂತರಾಗಿರಿ

ಯೇಸು ತನ್ನ ಸ್ನೇಹಿತರಿಗೆ ಅಂಟಿಕೊಂಡನು. ಅವನು “ಅವರನ್ನು ಅಂತ್ಯದ ವರೆಗೂ ಪ್ರೀತಿಸಿದನು” (NW). (ಯೋಹಾನ 13:1) ಗೋರ್ಡನ್‌ ಎಂಬ ಒಬ್ಬ ಯುವ ಪುರುಷನು, ತನ್ನ ಸ್ನೇಹಿತರನ್ನು ತದ್ರೀತಿಯಲ್ಲಿ ಉಪಚರಿಸುತ್ತಾನೆ: “ಒಬ್ಬ ಸ್ನೇಹಿತನ ಮುಖ್ಯ ಗುಣವು ಅವನ ನಿಷ್ಠೆಯಾಗಿದೆ. ಸಮಯಗಳು ಕಷ್ಟಕರವಾಗಿ ಪರಿಣಮಿಸುವಾಗ ಅವನು ನಿಜವಾಗಿಯೂ ನಿಮ್ಮೊಂದಿಗೆ ಅಂಟಿಕೊಂಡಿರುವನೊ? ಇತರರು ಕೆಲವು ಹೀನೈಸುವ ಹೇಳಿಕೆಗಳನ್ನು ಹೇಳುವಲ್ಲಿ, ನನ್ನ ಸ್ನೇಹಿತನೂ ನಾನೂ ಒಬ್ಬರನ್ನೊಬ್ಬರನ್ನು ಸಮರ್ಥಿಸುತ್ತಿದ್ದೆವು. ನಾವು ನಿಜವಾಗಿ ಪರಸ್ಪರ ಅಂಟಿಕೊಂಡೆವು—ಆದರೆ ನಾವು ಸರಿಯಾದುದನ್ನು ಮಾಡಿದಾಗ ಮಾತ್ರ.”

ನಕಲಿ ಸ್ನೇಹಿತರಾದರೊ, ಒಬ್ಬರನ್ನೊಬ್ಬರನ್ನು ಕಪಟಾಚಾರದಿಂದ ಹಿಂದಿನಿಂದ ಇರಿಯುವುದರ ಕುರಿತಾಗಿ ಏನೂ ಚಿಂತೆ ಮಾಡುವುದಿಲ್ಲ. “ಒಬ್ಬರನ್ನೊಬ್ಬರು ಚೂರು ಚೂರಾಗಿ ಒಡೆಯುವ ಪ್ರವೃತ್ತಿಯುಳ್ಳ ಸಂಗಾತಿಗಳಿದ್ದಾರೆ” ಎಂದು ಜ್ಞಾನೋಕ್ತಿ 18:24 (NW) ಹೇಳುತ್ತದೆ. ದೂಷಿತ ಹರಟೆಯಲ್ಲಿ ಜೊತೆಗೂಡುವುದರ ಮೂಲಕ ಒಬ್ಬ ಸ್ನೇಹಿತನ ಖ್ಯಾತಿಯನ್ನು “ಒಡೆಯು”ವಿರೊ ಅಥವಾ ಅವನ ಪರವಾಗಿ ನಿಷ್ಠೆಯಿಂದ ಪಕ್ಷವಹಿಸುವಿರೊ?

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿರಿ

ತನ್ನ ಅತಿ ಗಾಢವಾದ ಭಾವನೆಗಳನ್ನು ಪ್ರಕಟಪಡಿಸುವ ಮೂಲಕ ಯೇಸು ಇನ್ನೂ ಹೆಚ್ಚಾಗಿ ತನ್ನನ್ನು ಇತರರಿಗೆ ಪ್ರೀತಿಪಾತ್ರನನ್ನಾಗಿ ಮಾಡಿಕೊಂಡನು. ಕೆಲವೊಮ್ಮೆ ತನಗೆ ‘ಕನಿಕರ,’ ‘ಪ್ರೀತಿ,’ ಅಥವಾ ‘ದುಃಖ’ ಅನಿಸಿದ್ದನ್ನು ತಿಳಿಯಪಡಿಸಿದನು. ಅವನು ಕಡಿಮೆಪಕ್ಷ ಒಂದು ಸಂದರ್ಭದಲ್ಲಿ “ಕಣ್ಣೀರು ಬಿಟ್ಟನು” ಕೂಡ. ಯೇಸು ತಾನು ಯಾರ ಮೇಲೆ ಭರವಸೆಯಿಟ್ಟನೊ ಅವರಿಗೆ ತನ್ನ ಹೃದಯದಲ್ಲಿರುವ ಭಾವಗಳನ್ನು ತೋರಿಸಲು ಮುಜುಗರಪಡಲಿಲ್ಲ.—ಮತ್ತಾಯ 9:36; 26:38; ಮಾರ್ಕ 10:21; ಯೋಹಾನ 11:35.

ನೀವು ಭೇಟಿಯಾಗುವ ಪ್ರತಿಯೊಬ್ಬರಿಗೆ ನೀವು ನಿಮ್ಮ ಭಾವನೆಗಳನ್ನು ತೋಡಿಕೊಳ್ಳಬೇಕೆಂಬುದನ್ನು ಇದು ಖಂಡಿತವಾಗಿಯೂ ಅರ್ಥೈಸುವುದಿಲ್ಲ! ಆದರೆ ನೀವು ಎಲ್ಲರೊಂದಿಗೆ ಪ್ರಾಮಾಣಿಕರಾಗಿರಬಲ್ಲಿರಿ. ಮತ್ತು ನಿಮಗೆ ಯಾರಾದರೊಬ್ಬರ ಪರಿಚಯವಾಗಿ, ಅವರ ಮೇಲೆ ಭರವಸೆ ಇಟ್ಟಂತೆ, ನೀವು ಕ್ರಮೇಣವಾಗಿ ನಿಮ್ಮ ತೀರ ಗಾಢವಾದ ಭಾವನೆಗಳಲ್ಲಿ ಹೆಚ್ಚನ್ನು ಹೊರಗೆಡಹಬಹುದು. ಅದೇ ಸಮಯದಲ್ಲಿ, ಇತರರಿಗಾಗಿ ಅನುಭೂತಿ ಮತ್ತು “ಸಹಾನುಭೂತಿ”ಯನ್ನು ಹೊಂದಲು ಕಲಿತುಕೊಳ್ಳುವುದು ಅರ್ಥಭರಿತ ಸ್ನೇಹಗಳಿಗೆ ಅತಿ ಪ್ರಾಮುಖ್ಯವಾಗಿದೆ.—1 ಪೇತ್ರ 3:8.

ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿರಿ

ಒಂದು ಸ್ನೇಹವು ಒಳ್ಳೆಯದಾಗಿ ಆರಂಭಿಸಿದಾಗಲೂ, ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿರಿ. “ನಾವೆಲ್ಲರೂ ಎಲ್ಲಾ ವಿಧಗಳಲ್ಲಿ ತಪ್ಪುಗಳನ್ನು ಮಾಡುತ್ತೇವೆ, ಆದರೆ ತಾನು ಎಂದೂ ತಪ್ಪಾದ ಸಂಗತಿಯನ್ನು ಹೇಳುವುದಿಲ್ಲವೆಂದು ಪ್ರತಿಪಾದಿಸುವ ಮನುಷ್ಯನು, ತನ್ನನ್ನು ಪರಿಪೂರ್ಣನೆಂದು ಪರಿಗಣಿಸಬಲ್ಲನು.” (ಯಾಕೋಬ 3:2, ಫಿಲಿಪ್ಸ್‌) ಇನ್ನೂ ಹೆಚ್ಚಾಗಿ, ಸ್ನೇಹಕ್ಕೆ ಸಮಯ ಮತ್ತು ಭಾವನೆಯ ವೆಚ್ಚ ತಗಲುತ್ತದೆ. “ನೀವು ಕೊಡಲು ಸಿದ್ಧರಾಗಿರಬೇಕು,” ಎಂದು ಪ್ರೆಸ್ಲಿ ಎಂಬ ಹೆಸರಿನ ಒಬ್ಬ ಯುವ ಪುರುಷನು ಹೇಳುತ್ತಾನೆ. “ಅದು ಸ್ನೇಹದ ಒಂದು ದೊಡ್ಡ ಭಾಗವಾಗಿದೆ. ವಿಷಯಗಳ ಕುರಿತಾಗಿ ನಿಮಗೆ ನಿಮ್ಮ ಸ್ವಂತ ಅನಿಸಿಕೆಗಳು ಇರುತ್ತವೆ, ಆದರೆ ನಿಮ್ಮ ಸ್ನೇಹಿತನ ಅನಿಸಿಕೆಗಳು ಮತ್ತು ಅಭಿಪ್ರಾಯಗಳಿಗೆ ಎಡೆಮಾಡಿಕೊಳ್ಳಲು ನೀವು ಸಿದ್ಧರಾಗಿರುತ್ತೀರಿ.”

ಆದರೂ, ಪ್ರೀತಿಸದೆ ಇರುವ—ಬರಿದಾದ ಒಂಟಿ ಜೀವನದ ಬೆಲೆಗೆ ಹೋಲಿಸುವಾಗ ಸ್ನೇಹದ ಬೆಲೆಯು ಏನೂ ಇಲ್ಲವಾಗಿದೆ. ಆದುದರಿಂದ ನಿಮಗಾಗಿ ಸ್ನೇಹಿತರನ್ನು ಮಾಡಿಕೊಳ್ಳಿರಿ. (ಲೂಕ 16:9ನ್ನು ಹೋಲಿಸಿರಿ.) ನಿಮ್ಮನ್ನೇ ನೀಡಿಕೊಳ್ಳಿರಿ. ಇತರರಿಗೆ ಕಿವಿಗೊಡಿರಿ ಮತ್ತು ಅವರಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ತೋರಿಸಿರಿ. ಯೇಸುವಿನಂತೆ, “ನೀವು ನನ್ನ ಸ್ನೇಹಿತರು” ಎಂದು ಹೇಳಿಕೊಳ್ಳಸಾಧ್ಯವಿರುವ ಅನೇಕ ಸ್ನೇಹಿತರು ಆಗ ನಿಮಗಿರಬಹುದು.—ಯೋಹಾನ 15:14.

ಚರ್ಚೆಗಾಗಿ ಪ್ರಶ್ನೆಗಳು

◻ ಒಬ್ಬ ನಿಜ ಸ್ನೇಹಿತನನ್ನು ನೀವು ಹೇಗೆ ಗುರುತಿಸಸಾಧ್ಯವಿದೆ? ಯಾವ ವಿಧದ ಸ್ನೇಹಿತರು ನಕಲಿ ಸ್ನೇಹಿತರಾಗಿದ್ದಾರೆ?

◻ ನೀವು ಸ್ನೇಹಿತರಿಗಾಗಿ ಎಲ್ಲಿ ಹುಡುಕಬಲ್ಲಿರಿ? ಅವರು ಯಾವಾಗಲೂ ನಿಮ್ಮ ವಯಸ್ಸಿನವರೇ ಆಗಿರಬೇಕೊ?

◻ ಒಬ್ಬ ಸ್ನೇಹಿತನು ಗಂಭೀರವಾದ ತೊಂದರೆಯಲ್ಲಿರುವಲ್ಲಿ ನೀವು ಏನು ಮಾಡತಕ್ಕದ್ದು?

◻ ಸ್ನೇಹಿತರನ್ನು ಮಾಡಿಕೊಳ್ಳಲಿಕ್ಕಾಗಿರುವ ನಾಲ್ಕು ವಿಧಗಳಾವುವು?

[ಪುಟ 77 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ಹೊಸ ‘ಸ್ನೇಹಿತ’ರಿಂದ ನಾನು ಅನೇಕ ವಿಷಯಗಳನ್ನು—ಸ್ಟೀರಿಯೋಗಳನ್ನು ಕದಿಯುವುದು, ಖೋಟಾ ಚೆಕ್‌ಗಳ ನಗದುಪಡೆಯುವುದು, ಮಾರಿವಾನಾ ಸೇದುವುದು ಮತ್ತು ಕೊನೆಗೆ, ದಿನಕ್ಕೆ 200 ಡಾಲರುಗಳ ಮೊತ್ತದ ಅಮಲೌಷಧ ಹವ್ಯಾಸವನ್ನು ಪೋಷಿಸುವ ವಿಧವನ್ನು—ಕಲಿತುಕೊಂಡೆ”

[ಪುಟ 68,69ರಲ್ಲಿರುವಚೌಕ]

ನನ್ನ ಸ್ನೇಹಿತನ ತಪ್ಪುಗಳನ್ನು ನಾನು ತಿಳಿಯಪಡಿಸಬೇಕೊ?

ಒಬ್ಬ ಸ್ನೇಹಿತನು ಅಮಲೌಷಧಗಳನ್ನು ಉಪಯೋಗಿಸುತ್ತಿದ್ದಾನೆ, ಕಾಮಸಂಬಂಧವಾದ ಪ್ರಯೋಗವನ್ನು ನಡಿಸುತ್ತಿದ್ದಾನೆ, ಮೋಸಮಾಡುತ್ತಿದ್ದಾನೆ ಅಥವಾ ಕದಿಯುತ್ತಿದ್ದಾನೆಂದು ನಿಮಗೆ ತಿಳಿದುಬರುವಲ್ಲಿ, ಜವಾಬ್ದಾರರಾಗಿರುವ ಯಾರಾದರೊಬ್ಬರಿಗೆ ನೀವು ಅದರ ಕುರಿತಾಗಿ ಹೇಳುವಿರೊ? ಯುವ ಜನರ ನಡುವೆ ಅನೇಕವೇಳೆ ಚಾಲ್ತಿಯಲ್ಲಿರುವ ಒಂದು ವಿಲಕ್ಷಣ ರೀತಿಯ ಮೌನ ನೀತಿಗೆ ಅಂಟಿಕೊಳ್ಳುತ್ತಾ, ಹೆಚ್ಚಿನವರು ಹಾಗೆ ಮಾಡಲಿಕ್ಕಿಲ್ಲ.

ಕೆಲವರು ತಮಗೆ “ಗುಟ್ಟನ್ನು ರಟ್ಟುಮಾಡುವವನು” ಎಂಬ ನಾಮಪಟ್ಟಿ ಹಾಕಲ್ಪಡುವುದರ ಕುರಿತಾಗಿ ಭಯಪಡುತ್ತಾರೆ. ಇತರರು ನಿಷ್ಠೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಶಿಸ್ತನ್ನು ಹಾನಿಕರವಾದ ವಿಷಯವನ್ನಾಗಿ ದೃಷ್ಟಿಸುತ್ತಾ, ತಮ್ಮ ಸ್ನೇಹಿತನ ಸಮಸ್ಯೆಗಳನ್ನು ಮುಚ್ಚಿಬಿಡುವ ಮೂಲಕ ಅವನಿಗೆ ಒಂದು ಉಪಕಾರವನ್ನು ಮಾಡುತ್ತೇವೆಂದು ಅವರು ಊಹಿಸಿಕೊಳ್ಳುತ್ತಾರೆ. ಇನ್ನೂ ಹೆಚ್ಚಾಗಿ, ಆ ಮೌನ ನೀತಿಯನ್ನು ಮುರಿಯುವುದು ಒಬ್ಬನನ್ನು, ಸಮಾನಸ್ಥರ ಕೀಟಲೆ ಮತ್ತು ಅವರ ಸ್ನೇಹದ ಸಂಭಾವ್ಯ ನಷ್ಟಕ್ಕೆ ಒಡ್ಡಬಲ್ಲದು.

ಹಾಗಿದ್ದರೂ, ಲೀ ಎಂಬ ಯೌವನಸ್ಥನಿಗೆ ತನ್ನ ಪರಮ ಸ್ನೇಹಿತನಾದ ಕ್ರಿಸ್‌ ಧೂಮಪಾನಮಾಡುತ್ತಿದ್ದಾನೆಂದು ತಿಳಿದುಬಂದಾಗ, ಅವನು ಕ್ರಿಯೆಗೈಯಲು ನಿರ್ಣಯಿಸಿದನು. ಲೀ ಹೇಳುವುದು: “ನನ್ನ ಮನಸ್ಸಾಕ್ಷಿಯು ನನ್ನನ್ನು ಕೊರೆಯುತ್ತಿತ್ತು, ಯಾಕಂದರೆ ನಾನು ಯಾರಿಗಾದರೂ ಹೇಳಬೇಕೆಂಬುದು ನನಗೆ ತಿಳಿದಿತ್ತು!” ಬೈಬಲ್‌ ಸಮಯಗಳಲ್ಲಿನ ಒಬ್ಬ ಯೌವನಸ್ಥನು ತದ್ರೀತಿಯ ಪರಿಸ್ಥಿತಿಯಿಂದ ಎದುರಿಸಲ್ಪಟ್ಟನು. “ಯೋಸೇಫನು ಹದಿನೇಳು ವರುಷದವನಾಗಿ ಇನ್ನೂ ಹುಡುಗನಾಗಿದ್ದು ತನ್ನ ಅಣ್ಣಂದಿರ ಜೊತೆಯಲ್ಲಿ . . . ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರು ಏನಾದರೂ ಕೆಟ್ಟ ಕೆಲಸ ಮಾಡುವಾಗ ಅವನು ತಂದೆಗೆ ತಿಳಿಸುತ್ತಿದ್ದನು.” (ಆದಿಕಾಂಡ 37:2) ತಾನು ಸುಮ್ಮನಿದ್ದರೆ, ತನ್ನ ಸಹೋದರರ ಆತ್ಮಿಕ ಕ್ಷೇಮವು ಅಪಾಯಕ್ಕೊಳಗಾಗುವುದೆಂದು ಯೋಸೇಫನಿಗೆ ತಿಳಿದಿತ್ತು.

ಪಾಪವು, ಕೊಳೆಯುವಂತೆ ಮಾಡುವ, ಭ್ರಷ್ಟಗೊಳಿಸುವ ಶಕ್ತಿಯಾಗಿದೆ. ತಪ್ಪುಮಾಡುತ್ತಿರುವ ಒಬ್ಬ ಸ್ನೇಹಿತನು ಸಹಾಯವನ್ನು—ಪ್ರಾಯಶಃ ದೃಢವಾದ ಆತ್ಮಿಕ ಶಿಸ್ತಿನ ರೂಪದಲ್ಲಿ—ಪಡೆಯುವ ಹೊರತು, ಅವನು ಅಥವಾ ಅವಳು ದುಷ್ಟತನದೊಳಗೆ ಇನ್ನೂ ಆಳವಾಗಿ ಇಳಿಯಬಹುದು. (ಪ್ರಸಂಗಿ 8:11) ಫಲಸ್ವರೂಪವಾಗಿ, ಒಬ್ಬ ಸ್ನೇಹಿತನ ತಪ್ಪು ಕೃತ್ಯವನ್ನು ಮುಚ್ಚಿಬಿಡುವುದು, ಯಾವ ಒಳಿತನ್ನೂ ಮಾಡದಿರುವುದು ಮಾತ್ರವಲ್ಲ, ಅದು ಸರಿಪಡಿಸಲಾಗದಂತಹ ಹಾನಿಯನ್ನೂ ಉಂಟುಮಾಡಬಹುದು.

ಆದುದರಿಂದ ಬೈಬಲ್‌ ಪ್ರೇರೇಪಿಸುವುದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ.” (ಗಲಾತ್ಯ 6:1) ತಪ್ಪುಮಾಡುತ್ತಿರುವ ಒಬ್ಬ ಸ್ನೇಹಿತನನ್ನು ತಿದ್ದಲು ನಿಮ್ಮಲ್ಲಿ ಆತ್ಮಿಕ ಅರ್ಹತೆಗಳಿವೆಯೆಂದು ನಿಮಗೆ ಅನಿಸಲಿಕ್ಕಿಲ್ಲ. ಆದರೆ ಸಹಾಯ ಮಾಡಲು ಅರ್ಹರಾಗಿರುವವರೊಬ್ಬರಿಗೆ ವಿಷಯವು ವರದಿಸಲ್ಪಡುವಂತೆ ನೋಡಿಕೊಳ್ಳುವುದು ಬುದ್ಧಿಯುತವಲ್ಲವೊ?

ಹೀಗಿರುವುದರಿಂದ, ನಿಮ್ಮ ಸ್ನೇಹಿತನನ್ನು ಸಮೀಪಿಸಿ, ಅವನ ದೋಷವನ್ನು ತೆರೆದಿಡುವುದು ಅವಶ್ಯ ಕರ್ತವ್ಯವಾಗಿದೆ. (ಮತ್ತಾಯ 18:15ನ್ನು ಹೋಲಿಸಿರಿ.) ಇದು ನಿಮ್ಮ ವತಿಯಿಂದ ಧೈರ್ಯ ಮತ್ತು ಸಾಹಸವನ್ನು ಕೇಳಿಕೊಳ್ಳುತ್ತದೆ. ನಿಮಗೆ ಏನು ತಿಳಿದಿದೆ ಮತ್ತು ನಿಮಗೆ ಅದು ಹೇಗೆ ತಿಳಿದುಬಂತೆಂಬುದನ್ನು ಸ್ಪಷ್ಟರೀತಿಯಲ್ಲಿ ತಿಳಿಸುತ್ತಾ, ಅವನ ಪಾಪದ ಕುರಿತಾಗಿ ಮನಗಾಣಿಸುವಂತಹ ರುಜುವಾತನ್ನು ಕೊಡುತ್ತಾ, ದೃಢಸಂಕಲ್ಪದವರಾಗಿರಿ. (ಯೋಹಾನ 16:8ನ್ನು ಹೋಲಿಸಿರಿ.) ನೀವು ಯಾರಿಗೂ ಹೇಳುವುದಿಲ್ಲವೆಂದು ಮಾತುಕೊಡಬೇಡಿರಿ, ಯಾಕಂದರೆ ಅಂತಹ ಮಾತುಕೊಡುವಿಕೆಯು, ತಪ್ಪನ್ನು ಅಡಗಿಸಿಡುವುದನ್ನು ಖಂಡಿಸುವ ದೇವರ ದೃಷ್ಟಿಯಲ್ಲಿ ನಿರರ್ಥಕವಾಗಿದೆ.—ಜ್ಞಾನೋಕ್ತಿ 28:13.

ಪ್ರಾಯಶಃ ಯಾವುದೊ ತಪ್ಪಭಿಪ್ರಾಯ ಸಂಭವಿಸಿದೆ. (ಜ್ಞಾನೋಕ್ತಿ 18:13) ಹಾಗಿರದಿದ್ದಲ್ಲಿ, ಮತ್ತು ತಪ್ಪುಮಾಡುವಿಕೆಯು ನಿಜವಾಗಿಯೂ ಒಳಗೂಡಿರುವಲ್ಲಿ, ತನ್ನ ಸಮಸ್ಯೆಯು ಬಹಿರಂಗವಾದುದಕ್ಕಾಗಿ ನಿಮ್ಮ ಸ್ನೇಹಿತನು ಉಪಶಮನಪಡೆಯಬಹುದು. ಒಬ್ಬ ಒಳ್ಳೆಯ ಕೇಳುಗರಾಗಿರಿ. (ಯಾಕೋಬ 1:19) “ನೀನು ಮಾಡಬಾರದಿತ್ತು!” ಎಂಬಂತಹ ತೀರ್ಮಾನಯುಕ್ತ ಅಭಿವ್ಯಕ್ತಿಗಳನ್ನು ಅಥವಾ “ನೀನು ಅದನ್ನು ಹೇಗೆ ಮಾಡಲು ಸಾಧ್ಯ!” ಎಂಬಂತಹ ಆಘಾತಕರ ಅಭಿವ್ಯಕ್ತಿಗಳನ್ನು ಉಪಯೋಗಿಸುವ ಮೂಲಕ ಅವನ ಭಾವನೆಗಳ ಸರಾಗವಾದ ಪ್ರವಾಹವನ್ನು ಅದುಮಬೇಡಿರಿ. ಅನುಭೂತಿಯನ್ನು ತೋರಿಸಿ, ನಿಮ್ಮ ಸ್ನೇಹಿತನಿಗೆ ಹೇಗನಿಸುತ್ತದೊ ಅದನ್ನು ಅರ್ಥ ಮಾಡಿಕೊಳ್ಳಿರಿ.—1 ಪೇತ್ರ 3:8.

ಅನೇಕವೇಳೆ ಸನ್ನಿವೇಶವು, ನೀವು ಕೊಡಶಕ್ತರಾಗಿರುವ ಸಹಾಯಕ್ಕಿಂತಲೂ ಹೆಚ್ಚಿನ ಸಹಾಯವನ್ನು ಅವಶ್ಯಪಡಿಸುತ್ತದೆ. ಆಗ, ನಿಮ್ಮ ಸ್ನೇಹಿತನು ತಪ್ಪನ್ನು ತನ್ನ ಹೆತ್ತವರಿಗೆ ಅಥವಾ ಇತರ ಜವಾಬ್ದಾರಿಯುತ ವಯಸ್ಕರಿಗೆ ಹೊರಗೆಡಹುವಂತೆ ಪಟ್ಟುಹಿಡಿಯಿರಿ. ಮತ್ತು ನಿಮ್ಮ ಸ್ನೇಹಿತನು ಹಾಗೆ ಮಾಡಲು ನಿರಾಕರಿಸುವಲ್ಲಿ? ಒಂದು ಸಮಂಜಸವಾದ ಸಮಯಾವಧಿಯ ಒಳಗೆ ಅವನು ವಿಷಯವನ್ನು ಇತ್ಯರ್ಥಗೊಳಿಸದಿದ್ದಲ್ಲಿ, ಅವನ ನಿಜವಾದ ಸ್ನೇಹಿತರೋಪಾದಿ ನೀವು, ಅವನ ಪರವಾಗಿ ಯಾರಾದರೊಬ್ಬರಿಗೆ ಹೋಗಿ ಹೇಳಲು ಹಂಗುಳ್ಳವರಾಗುವಿರೆಂದು ಅವನಿಗೆ ತಿಳಿಯಪಡಿಸಿರಿ.—ಜ್ಞಾನೋಕ್ತಿ 17:17.

ನೀವು ಅಂತಹ ಕ್ರಿಯೆಯನ್ನು ಏಕೆ ಕೈಗೊಂಡಿರೆಂಬುದು ನಿಮ್ಮ ಸ್ನೇಹಿತನಿಗೆ ಆರಂಭದಲ್ಲಿ ಅರ್ಥವಾಗಲಿಕ್ಕಿಲ್ಲ. ಅವನು ರೇಗಿ, ದುಡುಕಿನಿಂದ ನಿಮ್ಮ ಸ್ನೇಹವನ್ನು ಅಂತ್ಯಗೊಳಿಸಲೂಬಹುದು. ಆದರೆ ಲೀ ಹೇಳುವುದು: “ವಿಷಯವನ್ನು ಯಾರಿಗಾದರೂ ಒಬ್ಬರಿಗೆ ಹೇಳುವ ಮೂಲಕ ನಾನು ಸರಿಯಾದುದನ್ನು ಮಾಡಿದೆನೆಂದು ನನಗೆ ತಿಳಿದಿದೆ. ಕ್ರಿಸ್‌ಗೆ ಅಗತ್ಯವಿರುವ ಸಹಾಯ ಅವನಿಗೆ ಸಿಗುತ್ತಿದ್ದುದರಿಂದ ನನ್ನ ಮನಸ್ಸಾಕ್ಷಿಗೆ ತುಂಬ ಹಿತವೆನಿಸಿತು. ನಾನು ಮಾಡಿದ ವಿಷಯಕ್ಕಾಗಿ ಅವನು ನನ್ನ ಕುರಿತಾಗಿ ಕ್ಷೋಭೆಗೊಂಡಿರಲಿಲ್ಲವೆಂದು ಅವನು ತದನಂತರ ನನಗೆ ಬಂದು ಹೇಳಿದನು ಮತ್ತು ಇದು ಸಹ ನನ್ನನ್ನು ಹಾಯಾಗಿಸಿತು.”

ನಿಮ್ಮ ಪರಿಚಯಸ್ಥನು ನಿಮ್ಮ ಧೈರ್ಯಶಾಲಿ ಕ್ರಿಯೆಗಳ ವಿಷಯದಲ್ಲಿ ಅಸಮಾಧಾನಪಡುತ್ತಾ ಮುಂದುವರಿಯುವಲ್ಲಿ, ಅವನು ಅಥವಾ ಅವಳು ಮೊದಲಾಗಿ ಒಬ್ಬ ನಿಜ ಸ್ನೇಹಿತನೇ ಆಗಿರಲಿಲ್ಲವೆಂಬುದು ವ್ಯಕ್ತ. ಆದರೆ ನೀವು ದೇವರಿಗೆ ನಿಮ್ಮ ನಿಷ್ಠೆಯನ್ನು ರುಜುಪಡಿಸಿ, ನಿಮ್ಮನ್ನು ಒಬ್ಬ ನಿಜ ಸ್ನೇಹಿತನನ್ನಾಗಿ ತೋರಿಸಿಕೊಂಡಿದ್ದೀರೆಂಬ ತೃಪ್ತಿಯನ್ನು ಪಡೆಯುವಿರಿ.

[ಪುಟ 67 ರಲ್ಲಿರುವ ಚಿತ್ರ]

ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತದೊ?

[ಪುಟ 70 ರಲ್ಲಿರುವ ಚಿತ್ರ]

ಇತರರಲ್ಲಿ ಆಸಕ್ತಿಯನ್ನು ವಹಿಸುವುದು, ಸ್ನೇಹಗಳನ್ನು ಆರಂಭಿಸುವುದಕ್ಕೆ ಕೀಲಿ ಕೈಯಾಗಿದೆ