ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಟಿವಿ ವೀಕ್ಷಣಾ ಹವ್ಯಾಸಗಳನ್ನು ನಾನು ಹೇಗೆ ನಿಯಂತ್ರಿಸಬಲ್ಲೆ?

ನನ್ನ ಟಿವಿ ವೀಕ್ಷಣಾ ಹವ್ಯಾಸಗಳನ್ನು ನಾನು ಹೇಗೆ ನಿಯಂತ್ರಿಸಬಲ್ಲೆ?

ಅಧ್ಯಾಯ 36

ನನ್ನ ಟಿವಿ ವೀಕ್ಷಣಾ ಹವ್ಯಾಸಗಳನ್ನು ನಾನು ಹೇಗೆ ನಿಯಂತ್ರಿಸಬಲ್ಲೆ?

ಅನೇಕ ಆಬಾಲವೃದ್ಧರಿಗೆ, ಟಿವಿ ವೀಕ್ಷಣೆಯು ಒಂದು ಗಂಭೀರವಾದ ವ್ಯಸನಕ್ಕೆ ಸಮಾನವಾಗಿದೆ. 18ರ ಪ್ರಾಯದೊಳಗಾಗಿ ಸರಾಸರಿ ಅಮೆರಿಕನ್‌ ಯುವಕನೊಬ್ಬನು ಸುಮಾರು 15,000 ತಾಸುಗಳಷ್ಟು ಟಿವಿಯನ್ನು ವೀಕ್ಷಿಸಿರುವನೆಂದು ಸಮೀಕ್ಷೆಗಳು ಸೂಚಿಸುತ್ತವೆ! ಮತ್ತು ಖಾಯಂ ವೀಕ್ಷಕರು ಹವ್ಯಾಸವನ್ನು ಹೊಡೆದೋಡಿಸಲು ಪ್ರಯತ್ನಿಸುವಾಗ, ನಿಜವಾದೊಂದು ವ್ಯಸನವು ಒಳಗೊಂಡಿದೆಯೆಂಬುದು ಸ್ಪಷ್ಟವಾಗುತ್ತದೆ.

“ಟೆಲಿವಿಷನ್‌ ಅನ್ನು ನಾನು ಬಹುಮಟ್ಟಿಗೆ ತಡೆಯಲಾಗದಂತಹ ಸಂಗತಿಯಾಗಿ ಕಂಡುಕೊಳ್ಳುತ್ತೇನೆ. ಅದು ಆನ್‌ ಆಗಿರುವಾಗ, ಅದನ್ನು ಅಲಕ್ಷಿಸಲು ನನ್ನಿಂದ ಸಾಧ್ಯವಿಲ್ಲ. ಅದನ್ನು ಆಫ್‌ ಮಾಡಲು ನನ್ನಿಂದಾಗದು. . . . ಟಿವಿ ಸೆಟ್ಟನ್ನು ಆಫ್‌ ಮಾಡಲು ನಾನು ಎಟಕಿದಂತೆ, ನನ್ನ ತೋಳುಗಳಲ್ಲಿ ಬಲವೇ ಇರುವುದಿಲ್ಲ. ಆದುದರಿಂದ ನಾನು ತಾಸುಗಟ್ಟಲೆ ಅಲ್ಲಿಯೇ ಕುಳಿತುಕೊಳ್ಳುತ್ತೇನೆ.” ಒಬ್ಬ ಅಪಕ್ವ ಯುವಕನೊ? ಇಲ್ಲ, ಇವರು ಕಾಲೇಜಿನ ಒಬ್ಬ ಇಂಗ್ಲಿಷ್‌ ಉಪನ್ಯಾಸಕರು! ಆದರೆ ಯುವ ಜನರೂ ಟಿವಿ ವ್ಯಸನಿಗಳಾಗಿರಸಾಧ್ಯವಿದೆ. “ಟಿವಿ ನಿಷೇಧ ಸಪ್ತಾಹ”ಕ್ಕೆ ಸಮ್ಮತಿಸಿದ ಕೆಲವರ ಪ್ರತಿಕ್ರಿಯೆಗಳನ್ನು ಗಮನಿಸಿರಿ:

“ನಾನೊಂದು ಖಿನ್ನತೆಯ ಅವಸ್ಥೆಯಲ್ಲಿದ್ದೇನೆ . . . ನನಗೆ ಚಿತ್ತಭ್ರಮಣೆ ಆಗುತ್ತಿದೆ.”—ಹನ್ನೆರಡು ವರ್ಷ ಪ್ರಾಯದ ಸೂಸನ್‌.

“ಹವ್ಯಾಸವನ್ನು ಹೊಡೆದೋಡಿಸಲು ನಾನು ಶಕ್ತಳಾಗಿರುವೆನೆಂದು ನನಗೆ ಅನಿಸುವುದಿಲ್ಲ. ನಾನು ಟಿವಿಯನ್ನು ಬಹಳ ಪ್ರೀತಿಸುತ್ತೇನೆ.”—ಹದಿಮೂರು ವರ್ಷ ಪ್ರಾಯದ ಲಿಂಡ.

“ಒತ್ತಡವು ಭಯಂಕರವಾಗಿತ್ತು. ಆ ಪ್ರಚೋದನೆಯು ನಿರಂತರವಾಗಿ ನನ್ನಲ್ಲಿತ್ತು. ಅತ್ಯಂತ ಕಷ್ಟಕರವಾದ ಸಮಯವು, ರಾತ್ರಿ ಎಂಟು ಗಂಟೆಯಿಂದ ಹತ್ತು ಗಂಟೆಯ ನಡುವಿನ ಸಮಯವಾಗಿತ್ತು.”—ಹನ್ನೊಂದು ವರ್ಷ ಪ್ರಾಯದ ಲೋವಿ.

ಹಾಗಾದರೆ, “ಟಿವಿ ನಿಷೇಧ ಸಪ್ತಾಹ”ದ ಸಮಾಪ್ತಿಯನ್ನು, ಒಳಗೊಂಡ ಯುವ ಜನರಲ್ಲಿ ಹೆಚ್ಚಿನವರು ಟಿವಿ ಸೆಟ್ಟಿನ ಕಡೆಗೆ ವೇಗವಾಗಿ ಧಾವಿಸುವುದರೊಂದಿಗೆ ಆಚರಿಸಿದರೆಂಬುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಆದರೆ ಕೇವಲ ನಗುವ ವಿಷಯವಾಗಿರುವುದಕ್ಕಿಂತಲೂ, ಟಿವಿ ವ್ಯಸನವು ಅದರೊಂದಿಗೆ ಸಂಭಾವ್ಯ ಸಮಸ್ಯೆಗಳ ಒಂದು ಸಮೂಹವನ್ನು ತರುತ್ತದೆ. ಅವುಗಳಲ್ಲಿ ಕೆಲವನ್ನು ಮಾತ್ರ ಪರಿಗಣಿಸಿರಿ:

ಇಳಿಮುಖವಾಗುತ್ತಿರುವ ದರ್ಜೆಗಳು: ಮಾನಸಿಕ ಆರೋಗ್ಯದ ರಾಷ್ಟ್ರೀಯ ಸಂಸ್ಥೆಯು (ಯು.ಎಸ್‌.) ವರದಿಸಿದ್ದೇನೆಂದರೆ, ವಿಪರೀತ ಟಿವಿ ವೀಕ್ಷಣೆಯು, “ವಿಶೇಷವಾಗಿ ಓದುವಿಕೆಯಲ್ಲಿ, ಕಡಿಮೆ ಶಾಲಾ ಸಾಧನಕ್ಕೆ” ನಡೆಸಬಲ್ಲದು. ದ ಲಿಟೆರಸಿ ಹೋಕ್ಸ್‌ ಎಂಬ ಪುಸ್ತಕವು ಇನ್ನೂ ಹೆಚ್ಚಾಗಿ ಆರೋಪಿಸುವುದು: “ಮಕ್ಕಳ ಮೇಲೆ ಟೆಲಿವಿಷನ್‌ನ ಪ್ರಭಾವವು, ಕಲಿಕೆಯು ಸುಲಭವೂ, ಪ್ರಯತ್ನರಹಿತವೂ, ಮನೋರಂಜಕವೂ ಆಗಿರಬೇಕೆಂಬ ನಿರೀಕ್ಷೆಯನ್ನು ಸೃಷ್ಟಿಸುವುದಾಗಿದೆ.” ಹೀಗೆ ಟಿವಿ ವ್ಯಸನಿಯು ಅಭ್ಯಸಿಸುವುದನ್ನು ಒಂದು ಕಠಿನ ಪರೀಕ್ಷೆಯಾಗಿ ಕಂಡುಕೊಳ್ಳಬಹುದು.

ನ್ಯೂನ ಓದುವ ಹವ್ಯಾಸಗಳು: ಕಳೆದ ಸಲ ನೀವು ಒಂದು ಪುಸ್ತಕವನ್ನು ಎತ್ತಿಕೊಂಡು, ಅದನ್ನು ಆದ್ಯಂತವಾಗಿ ಓದಿದ್ದು ಯಾವಾಗ? ಪಶ್ಚಿಮ ಜರ್ಮನಿಯ ಪುಸ್ತಕ ವಿತರಕರ ಒಕ್ಕೂಟಕ್ಕಾಗಿರುವ ಒಬ್ಬ ವದನಕನು ಪ್ರಲಾಪಿಸಿದ್ದು: “ನಾವು ಕೆಲಸದ ನಂತರ ಮನೆಗೆ ಹೋಗಿ, ಟೆಲಿವಿಷನ್‌ನ ಮುಂದೆ ನಿದ್ರೆಹೋಗುವ ಜನರ ಒಂದು ರಾಷ್ಟ್ರವಾಗಿ ಪರಿಣಮಿಸಿದ್ದೇವೆ. ನಾವು ಬಹಳ ಕಡಿಮೆ ಓದುತ್ತಿದ್ದೇವೆ.” ಆಸ್ಟ್ರೇಲಿಯದ ಒಂದು ವರದಿಯು ತದ್ರೀತಿಯಲ್ಲಿ ಹೇಳಿದ್ದು: “ಓದುತ್ತಾ ವ್ಯಯಿಸಿದ ಪ್ರತಿಯೊಂದು ತಾಸಿಗೆ, ಸರಾಸರಿ ಆಸ್ಟ್ರೇಲಿಯನ್‌ ಮಗುವು ಏಳು ತಾಸುಗಳ ಟೆಲಿವಿಷನ್‌ ಅನ್ನು ನೋಡಿರುವುದು.”

ಕುಗ್ಗಿಹೋದ ಕುಟುಂಬ ಜೀವನ: ಕ್ರೈಸ್ತ ಸ್ತ್ರೀಯೊಬ್ಬಳು ಬರೆದುದು: “ವಿಪರೀತ ಟಿವಿ ವೀಕ್ಷಣೆಯ ಕಾರಣ . . . ನಾನು ಬಹಳ ಒಂಟಿಯಾಗಿದ್ದೆ ಮತ್ತು ಬೇರ್ಪಟ್ಟ ಅನಿಸಿಕೆಯುಳ್ಳವಳಾಗಿದ್ದೆ. ಅದು [ನನ್ನ] ಕುಟುಂಬದವರೆಲ್ಲರು ಅಪರಿಚಿತರಾಗಿದ್ದರೊ ಎಂಬಂತಿತ್ತು.” ತದ್ರೀತಿಯಲ್ಲಿ ಟಿವಿಯ ಕಾರಣ ನೀವು ನಿಮ್ಮ ಕುಟುಂಬದವರೊಂದಿಗೆ ಕಡಿಮೆ ಸಮಯವನ್ನು ವ್ಯಯಿಸುತ್ತಿರುವುದನ್ನು ಕಂಡುಕೊಳ್ಳುತ್ತೀರೊ?

ಸೋಮಾರಿತನ: ಟಿವಿಯ ನಿಷ್ಕ್ರಿಯತನವು ತಾನೇ “[ತನ್ನ] ಅಗತ್ಯಗಳು ಪ್ರಯತ್ನವಿಲ್ಲದೆ ಪೂರೈಸಲ್ಪಡುವವು ಎಂಬ [ಒಬ್ಬ ಯುವಕನ] ನಿರೀಕ್ಷಣೆಗೆ ಮತ್ತು ಜೀವನದ ಕಡೆಗೆ ಒಂದು ನಿಷ್ಕ್ರಿಯ ಸಮೀಪಿಸುವಿಕೆಗೆ ನಡೆಸಬಹುದು” ಎಂಬುದಾಗಿ ಕೆಲವರಿಗೆ ಅನಿಸುತ್ತದೆ.

ಅಹಿತಕರವಾದ ಪ್ರಭಾವಗಳಿಗೆ ಒಡ್ಡುವಿಕೆ: ಕೆಲವೊಂದು ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳು ಮನೆಯೊಳಗೆ ಅಶ್ಲೀಲತೆಯನ್ನು ತರುತ್ತವೆ. ಮತ್ತು ಕ್ರಮವಾದ ಉಪದೇಶ ಪ್ರಕ್ರಿಯೆಯು ಅನೇಕ ವೇಳೆ ಕಾರು ಅಪಘಾತಗಳು, ಸ್ಫೋಟನೆಗಳು, ಇರಿತಗಳು, ಗುಂಡುಹಾರಿಸುವಿಕೆಗಳು, ಮತ್ತು ಕರಾಟೆ ಒದೆತಗಳ ಏಕಪ್ರಕಾರದ ಪಥ್ಯವನ್ನು ಒದಗಿಸುತ್ತದೆ. ಒಂದು ಅಂದಾಜಿಗನುಸಾರ, ಅಮೆರಿಕದಲ್ಲಿರುವ ಒಬ್ಬ ಯುವ ವ್ಯಕ್ತಿಯು, ತಾನು 14 ವರ್ಷ ಪ್ರಾಯದವನಾಗಿರುವ ಸಮಯದೊಳಗೆ ಟಿವಿಯಲ್ಲಿ—ಮುಷ್ಟಿಹೊಡೆತಗಳು ಮತ್ತು ವಿಧ್ವಂಸಕತೆಯನ್ನು ಬಿಟ್ಟು—18,000 ಜನರ ಕೊಲ್ಲುವಿಕೆಯನ್ನು ಕಣ್ಣಾರೆ ನೋಡಿರುವನು.

ಬ್ರಿಟಿಷ್‌ ಸಂಶೋಧಕ ವಿಲಿಯಮ್‌ ಬೆಲ್ಸನ್‌ ಕಂಡುಕೊಂಡಿದ್ದೇನೆಂದರೆ, ಹಿಂಸಾತ್ಮಕ ಟಿವಿ ಪ್ರದರ್ಶನಗಳಿಂದ ಪೋಷಿಸಲ್ಪಟ್ಟ ಹುಡುಗರು, “ಗಂಭೀರ ರೀತಿಯ ಹಿಂಸಾಚಾರದಲ್ಲಿ ತೊಡಗುವ” ಸಾಧ್ಯತೆ ಹೆಚ್ಚಾಗಿತ್ತು. ಟಿವಿ ಹಿಂಸಾಚಾರವು, “ಆಣೆಯಿಡುವುದು ಮತ್ತು ದುರ್ಭಾಷೆಯ ಉಪಯೋಗ, ಕ್ರೀಡೆ ಅಥವಾ ಆಟದಲ್ಲಿ ಆಕ್ರಮಣಕಾರಿತ್ವ, ಮತ್ತೊಬ್ಬ ಹುಡುಗನ ಮೇಲೆ ಹಿಂಸಾಚಾರವನ್ನು ಉಪಯೋಗಿಸುವ ಬೆದರಿಕೆಯನ್ನೀಡುವುದು, ಗೋಡೆಗಳ ಮೇಲೆ ಗುರಿನುಡಿಗಳನ್ನು ಬರೆಯುವುದು, [ಮತ್ತು] ಕಿಟಕಿಗಳನ್ನು ಮುರಿದುಹಾಕುವುದನ್ನು” ಪ್ರಚೋದಿಸಸಾಧ್ಯವಿತ್ತು ಎಂಬ ವಿಷಯವನ್ನೂ ಅವರು ಪ್ರತಿಪಾದಿಸಿದರು. ಇಂತಹ ಪ್ರಭಾವಗಳಿಂದ ನೀವು ರಕ್ಷಿತರೆಂದು ನೀವು ಯೋಚಿಸುವಾಗ, ಬೆಲ್ಸನ್‌ನ ಅಧ್ಯಯನವು ಕಂಡುಕೊಂಡಿದ್ದೇನೆಂದರೆ, ಟಿವಿ ಹಿಂಸಾಚಾರಕ್ಕೆ ಒಡ್ಡುವಿಕೆಯು, ಹಿಂಸಾಚಾರದ “ಕಡೆಗೆ ಹುಡುಗರ ಪ್ರಜ್ಞಾಪೂರ್ವಕ ಮನೋಭಾವಗಳನ್ನು ಬದಲಾಯಿಸ”ಲಿಲ್ಲ. ಹಿಂಸಾಚಾರದ ಏಕಪ್ರಕಾರವಾದ ಪಥ್ಯವು, ಅವರ ಉಪಪ್ರಜ್ಞೆಯ ಮಟ್ಟದಲ್ಲಿ, ಹಿಂಸಾಚಾರದ ವಿರುದ್ಧವಿದ್ದ ಪ್ರತಿಬಂಧಗಳನ್ನು ಸ್ಪಷ್ಟವಾಗಿ ಕಡಿದುಹಾಕಿತು.

ಆದರೆ ಇನ್ನೂ ಹೆಚ್ಚಿನ ಚಿಂತೆಯ ವಿಷಯವು, “ಹಿಂಸಾಚಾರವನ್ನು ಪ್ರೀತಿಸುವ ಯಾವನೇ ವ್ಯಕ್ತಿಯನ್ನು ದ್ವೇಷಿಸುವ” ದೇವರೊಂದಿಗಿನ ಒಬ್ಬನ ಸಂಬಂಧದ ಮೇಲೆ, ಟಿವಿ ಹಿಂಸಾಚಾರಕ್ಕಿರುವ ವ್ಯಸನವು ಬೀರಬಲ್ಲ ಪರಿಣಾಮದ ಕುರಿತಾಗಿದೆ.—ಕೀರ್ತನೆ 11:5, NW.

ನನ್ನ ವೀಕ್ಷಣೆಯನ್ನು ನಾನು ಹೇಗೆ ನಿಯಂತ್ರಿಸಬಲ್ಲೆ?

ಟಿವಿಯು ಸಹಜವಾಗಿಯೇ ದುಷ್ಟವಾದ ವಿಷಯದೋಪಾದಿ ವೀಕ್ಷಿಸಲ್ಪಡಬೇಕೆಂಬುದನ್ನು ಇದು ಅವಶ್ಯವಾಗಿ ಅರ್ಥೈಸುವುದಿಲ್ಲ. ಬರಹಗಾರ ವ್ಯಾನ್ಸ್‌ ಪಾಕರ್ಡ್‌ ಸೂಚಿಸಿ ಹೇಳುವುದು: “ಅಮೆರಿಕದ ಟೆಲಿವಿಷನ್‌ನಲ್ಲಿ ಮೂಡಿಬರುವ ಹೆಚ್ಚಿನ ವಿಷಯವು ಪ್ರತಿಫಲದಾಯಕವಾಗಿರಸಾಧ್ಯವಿದೆ . . . ಅನೇಕ ವೇಳೆ ನಿಸರ್ಗವು ಕಾರ್ಯಮಾಡುತ್ತಿರುವುದನ್ನು—ಬಾವಲಿಗಳು, ಉಭಯಚರದಂಶಕಗಳು, ಕಾಡೆಮ್ಮೆಗಳ ಚಟುವಟಿಕೆಗಳಿಂದ ಹಿಡಿದು ಉಬ್ಬುಮೀನಿನ ಚಟುವಟಿಕೆಯ ವರೆಗೆ—ತೋರಿಸುವ ಛಾಯಾಚಿತ್ರದಲ್ಲಿ ಅದ್ಭುತವಾದ ಸಾಧನೆಗಳಾಗಿರುವ ಸಾಯಂಕಾಲದ ಆದಿಭಾಗದ ಕಾರ್ಯಕ್ರಮಗಳಿರುತ್ತವೆ. ಸಾರ್ವಜನಿಕ ಟೆಲಿವಿಷನ್‌ನಲ್ಲಿ ಮೈಮರೆಸುವ ನೃತ್ಯರೂಪಕ, ಸಂಗೀತನಾಟಕ, ಮತ್ತು ಗೃಹಸಂಗೀತವಿರುತ್ತದೆ. ಪ್ರಾಮುಖ್ಯ ಘಟನೆಗಳನ್ನು ಆವರಿಸುವುದರಲ್ಲಿ ಟಿವಿ ಬಹಳ ಸಮರ್ಪಕವಾಗಿದೆ . . . ಸಾಂದರ್ಭಿಕವಾಗಿ ಪ್ರಕಾಶಮಾನವಾದ ನಾಟಕೀಯ ಕಾರ್ಯಕ್ರಮಗಳನ್ನು ಟಿವಿಯು ಪ್ರಸಾರಮಾಡುತ್ತದೆ.”

ಆದರೂ, ಹೆಚ್ಚು ಪ್ರಮಾಣದ ಒಳ್ಳೆಯ ವಿಷಯವೂ ಹಾನಿಕರವಾಗಿರಬಲ್ಲದು. (ಹೋಲಿಸಿ ಜ್ಞಾನೋಕ್ತಿ 25:27.) ಮತ್ತು ಹಾನಿಕಾರಕ ಪ್ರದರ್ಶನಗಳನ್ನು ಆಫ್‌ ಮಾಡುವ ಆತ್ಮನಿಯಂತ್ರಣದ ಕೊರತೆ ನಿಮ್ಮಲ್ಲಿರುವುದನ್ನು ನೀವು ಕಂಡುಕೊಳ್ಳುವುದಾದರೆ, ಅಪೊಸ್ತಲ ಪೌಲನ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು: “ನನ್ನನ್ನು ಅದರ ದಾಸನನ್ನಾಗಿ ಮಾಡುವಂತೆ ನಾನು ಯಾವುದನ್ನೂ ಅನುಮತಿಸಲಾರೆ.” (1 ಕೊರಿಂಥ 6:12, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ಹಾಗಾದರೆ, ನೀವು ಟಿವಿಗೆ ದಾಸರಾಗಿರುವುದರಿಂದ ಹೇಗೆ ಮುಕ್ತರಾಗಿ, ನಿಮ್ಮ ವೀಕ್ಷಣೆಯನ್ನು ನಿಯಂತ್ರಿಸಬಲ್ಲಿರಿ?

ಬರಹಗಾರ್ತಿ ಲಿಂಡ ನೀಲ್ಸನ್‌ ಗಮನಿಸುವುದು: “ಆತ್ಮನಿಯಂತ್ರಣವು ಗುರಿಗಳನ್ನು ಇಡಲು ಕಲಿಯುವ ಮೂಲಕ ಆರಂಭಗೊಳ್ಳುತ್ತದೆ.” ಪ್ರಥಮವಾಗಿ, ನಿಮ್ಮ ಪ್ರಚಲಿತ ಹವ್ಯಾಸಗಳನ್ನು ವಿಶ್ಲೇಷಿಸಿರಿ. ಒಂದು ವಾರದ ವರೆಗೆ, ನೀವು ಯಾವ ಪ್ರದರ್ಶನಗಳನ್ನು ವೀಕ್ಷಿಸುತ್ತೀರಿ ಮತ್ತು ಪ್ರತಿ ದಿನ ಟೆಲಿವಿಷನ್‌ನ ಮುಂದೆ ನೀವು ಎಷ್ಟು ಸಮಯವನ್ನು ಕಳೆಯುತ್ತೀರಿ ಎಂಬ ವಿಷಯದ ಕುರಿತು ಲೆಕ್ಕವಿಡಿರಿ. ನೀವು ಮನೆಗೆ ಬಂದ ನಿಮಿಷವೇ ಅದನ್ನು ಆನ್‌ ಮಾಡುತ್ತೀರೊ? ನೀವು ಅದನ್ನು ಯಾವಾಗ ಆಫ್‌ ಮಾಡುತ್ತೀರಿ? ಪ್ರತಿ ವಾರ ಎಷ್ಟು ಪ್ರದರ್ಶನಗಳು “ನೋಡಲೇಬೇಕಾದ” ಪ್ರದರ್ಶನಗಳಾಗಿವೆ? ಫಲಿತಾಂಶಗಳಿಂದ ನೀವು ತಲ್ಲಣಗೊಳ್ಳಬಹುದು.

ಅನಂತರ ನೀವು ವೀಕ್ಷಿಸುತ್ತಿದ್ದ ಪ್ರದರ್ಶನಗಳ ಕಡೆಗೆ ಒಂದು ಪರಿಶೀಲನಾ ನೋಟವನ್ನು ಬೀರಿರಿ. “ಅಂಗಳವು ಆಹಾರವನ್ನು ರುಚಿನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ,” ಎಂಬುದಾಗಿ ಬೈಬಲ್‌ ಹೇಳುತ್ತದೆ. (ಯೋಬ 12:11) ಆದುದರಿಂದ (ನಿಮ್ಮ ಹೆತ್ತವರ ಬುದ್ಧಿವಾದದೊಂದಿಗೆ) ವಿವೇಚನಾಶಕ್ತಿಯನ್ನು ಉಪಯೋಗಿಸಿರಿ ಮತ್ತು ಯಾವ ಪ್ರದರ್ಶನಗಳು ನಿಜವಾಗಿಯೂ ನೋಡಲು ಯೋಗ್ಯವಾಗಿವೆ ಎಂಬುದನ್ನು ಪರೀಕ್ಷಿಸಿರಿ. ಕೆಲವರು ತಾವು ಯಾವ ಪ್ರದರ್ಶನಗಳನ್ನು ವೀಕ್ಷಿಸುವೆವು ಎಂಬುದನ್ನು ಮುಂಚಿತವಾಗಿಯೇ ನಿಶ್ಚಯಿಸಿ, ಆ ಪ್ರದರ್ಶನಗಳನ್ನು ನೋಡಲು ಮಾತ್ರ ಟಿವಿಯನ್ನು ಆನ್‌ ಮಾಡುತ್ತಾರೆ! ಇತರರು ಶಾಲಾ ವಾರದ ಸಮಯದಲ್ಲಿ ಟೆಲಿವಿಷನ್‌ ನಿಷೇಧ ಎಂಬ ನಿಯಮಗಳನ್ನು ಅಥವಾ ದಿನಕ್ಕೆ ಒಂದು ತಾಸಿನ ಮಿತಿಗಳನ್ನು ಸ್ಥಾಪಿಸಿಕೊಳ್ಳುತ್ತಾ, ಹೆಚ್ಚು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಆದರೆ ಮೌನವಾದ ಟಿವಿ ಸೆಟ್ಟೊಂದು ಅತಿ ಪ್ರಲೋಭನೆಯ ವಿಷಯವಾಗಿ ಪರಿಣಮಿಸುವಲ್ಲಿ ಆಗೇನು? ಒಂದು ಕುಟುಂಬವು ಸಮಸ್ಯೆಯನ್ನು ಈ ರೀತಿಯಲ್ಲಿ ಬಗೆಹರಿಸಿತು: “ದೃಷ್ಟಿಯಿಂದ ದೂರವಿಡಲು, ನಾವು ನಮ್ಮ ಟಿವಿ ಸೆಟ್ಟನ್ನು ನೆಲಮಾಳಿಗೆಯಲ್ಲಿಡುತ್ತೇವೆ . . . ನೆಲಮಾಳಿಗೆಯಲ್ಲಿದ್ದರೆ, ನೀವು ಮನೆಯನ್ನು ಪ್ರವೇಶಿಸಿದ ಕೂಡಲೇ ಅದನ್ನು ಥಟ್ಟನೆ ಆನ್‌ ಮಾಡುವ ಪ್ರಲೋಭನೆ ಕಡಿಮೆಯಾಗಿರುತ್ತದೆ. ಏನನ್ನಾದರೂ ವೀಕ್ಷಿಸಲು ನೀವು ವಿಶೇಷವಾಗಿ ಅದಕ್ಕಾಗಿಯೇ ಕೆಳಗೆ ಇಳಿದುಹೋಗಬೇಕಾಗುತ್ತದೆ.” ನಿಮ್ಮ ಸೆಟ್ಟನ್ನು ಕಪಾಟಿನಲ್ಲಿ ಇಡುವುದು, ಅಥವಾ ಕೇವಲ ಅದರ ಪ್ಲಗ್ಗನ್ನು ತೆಗೆದುಹಾಕುವುದು, ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಡಿಸಬಹುದು.

ಕುತೂಹಲಕರವಾಗಿ, ತಮ್ಮ ಎಲ್ಲ ‘ತ್ಯಜನ ಯಾತನೆಗಳ’ ಮಧ್ಯೆ, “ಟಿವಿ ನಿಷೇಧ ಸಪ್ತಾಹ”ದಲ್ಲಿ ಭಾಗವಹಿಸುತ್ತಿರುವ ಯುವ ಜನರು ಟಿವಿಗೆ ಕೆಲವು ಇತ್ಯಾತ್ಮಕ ಬದಲಿಗಳನ್ನು ಕಂಡುಕೊಂಡರು. ಹುಡುಗಿಯೊಬ್ಬಳು ಜ್ಞಾಪಿಸಿಕೊಂಡದ್ದು: “ನಾನು ನನ್ನ ತಾಯಿಯೊಂದಿಗೆ ಮಾತಾಡಿದೆ. ನನ್ನ ನೋಟದಲ್ಲಿ ಅವರು ಬಹಳಷ್ಟು ಸ್ವಾರಸ್ಯಕರ ವ್ಯಕ್ತಿಯಾದರು, ಏಕೆಂದರೆ ನನ್ನ ಗಮನಗಳು ಅವರ ಮತ್ತು ಟೆಲಿವಿಷನ್‌ ಸೆಟ್ಟಿನ ನಡುವೆ ವಿಭಜಿತವಾಗಿರಲಿಲ್ಲ.” ಮತ್ತೊಬ್ಬ ಹುಡುಗಿಯು ಅಡಿಗೆಮಾಡಲು ಪ್ರಯತ್ನಿಸುತ್ತಾ ಸಮಯವನ್ನು ಕಳೆದಳು. ಜೇಸನ್‌ ಎಂಬ ಹೆಸರಿನ ಒಬ್ಬ ಯುವ ಹುಡುಗನು “ಟಿವಿಯನ್ನು ವೀಕ್ಷಿಸುವ ಬದಲಿಗೆ ಉದ್ಯಾನವನಕ್ಕೆ” ಹೋಗುವುದು—ಅಥವಾ ಮೀನು ಹಿಡಿಯುವುದು, ಓದುವುದು ಅಥವಾ ಕಡಲತೀರಕ್ಕೆ ಹೋಗುವುದು—ವಿನೋದವಾಗಿರಸಾಧ್ಯ ಎಂಬುದನ್ನೂ ಕಂಡುಹಿಡಿದನು.

“ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟನ್ನು” (NW) ಪಡೆದಿರುವುದು, ಟಿವಿ ವೀಕ್ಷಣೆಯನ್ನು ನಿಯಂತ್ರಿಸಲಿಕ್ಕಾಗಿರುವ ಮತ್ತೊಂದು ಕೀಲಿಕೈಯಾಗಿದೆ ಎಂಬುದನ್ನು ವೈಯಂಟ್‌ನ ಅನುಭವವು (“ನಾನೊಬ್ಬ ಟಿವಿ ವ್ಯಸನಿ ಆಗಿದ್ದೆ” ಎಂಬ ಶೀರ್ಷಿಕೆಯ ಪುರವಣಿಯನ್ನು ನೋಡಿರಿ) ದೃಷ್ಟಾಂತಿಸುತ್ತದೆ. (1 ಕೊರಿಂಥ 15:58) ದೇವರಿಗೆ ನಿಕಟವಾಗುವುದು, ಈಗ ಲಭ್ಯವಿರುವ ಅನೇಕ ಉತ್ತಮ ಪ್ರಕಾಶನಗಳ ಸಹಾಯದೊಂದಿಗೆ ಬೈಬಲನ್ನು ಅಭ್ಯಸಿಸುವುದು, ಮತ್ತು ದೇವರ ಕೆಲಸದಲ್ಲಿ ನಿಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳುವುದು, ಟಿವಿ ವ್ಯಸನವನ್ನು ಜಯಿಸುವಂತೆ ನಿಮಗೆ ಸಹಾಯ ಮಾಡುವುದೆಂಬುದನ್ನು ನೀವೂ ಕಂಡುಕೊಳ್ಳುವಿರಿ. (ಯಾಕೋಬ 4:8) ನಿಜ, ನಿಮ್ಮ ಟಿವಿ ವೀಕ್ಷಣೆಯನ್ನು ಸೀಮಿತಗೊಳಿಸುವುದು, ನಿಮ್ಮ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಕೆಲವನ್ನು ತಪ್ಪಿಸುವುದನ್ನು ಅರ್ಥೈಸುವುದು. ಆದರೆ ಪ್ರತಿಯೊಂದು ಕಾರ್ಯಕ್ರಮವನ್ನು ಗುಲಾಮರಂತೆ ಅನುಸರಿಸುತ್ತಾ, ನೀವು ಟಿವಿಯನ್ನು ಪೂರ್ಣವಾಗಿ ಏಕೆ ಬಳಸಿಕೊಳ್ಳಬೇಕು? (ನೋಡಿ 1 ಕೊರಿಂಥ 7:29, 31.) “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ” ಎಂಬುದಾಗಿ ಒಮ್ಮೆ ಹೇಳಿದ ಅಪೊಸ್ತಲ ಪೌಲನಂತೆ ಸ್ವತಃ ನಿಮ್ಮ ವಿಷಯದಲ್ಲಿ ‘ಕಠಿನರಾಗುವುದು’ ಉತ್ತಮ. (1 ಕೊರಿಂಥ 9:27) ಇದು ಒಂದು ಟಿವಿ ಸೆಟ್ಟಿಗೆ ದಾಸರಾಗಿರುವುದಕ್ಕಿಂತಲೂ ಉತ್ತಮವಾಗಿರುವುದಿಲ್ಲವೊ?

ಚರ್ಚೆಗಾಗಿ ಪ್ರಶ್ನೆಗಳು

◻ ಕೆಲವು ಯುವ ಜನರ ವಿಷಯದಲ್ಲಿ ಟಿವಿ ವೀಕ್ಷಣೆಯನ್ನು ಒಂದು ವ್ಯಸನವಾಗಿ ಏಕೆ ಕರೆಯಸಾಧ್ಯವಿದೆ?

◻ ವಿಪರೀತ ಟಿವಿ ವೀಕ್ಷಣೆಯ ಕೆಲವು ಸಂಭಾವ್ಯ ಹಾನಿಕಾರಕ ಪರಿಣಾಮಗಳಾವುವು?

◻ ಟಿವಿ ವೀಕ್ಷಣೆಯನ್ನು ನಿಯಂತ್ರಿಸುವ ಕೆಲವು ವಿಧಗಳಾವುವು?

◻ ಟಿವಿಯನ್ನು ವೀಕ್ಷಿಸುವ ಬದಲಿಗೆ ನೀವು ಏನು ಮಾಡಬಲ್ಲಿರಿ?

[ಪುಟ 285 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನೊಂದು ಖಿನ್ನತೆಯ ಅವಸ್ಥೆಯಲ್ಲಿದ್ದೇನೆ . . . ನನಗೆ ಚಿತ್ತಭ್ರಮಣೆ ಆಗುತ್ತಿದೆ.”—“ಟಿವಿ ನಿಷೇಧ ಸಪ್ತಾಹ”ದಲ್ಲಿ ಭಾಗವಹಿಸಿದ, ಹನ್ನೆರಡು ವರ್ಷ ಪ್ರಾಯದ ಸೂಸನ್‌

[Box on page 292, 293]

‘ನಾನೊಬ್ಬ ಟಿವಿ ವ್ಯಸನಿ ಆಗಿದ್ದೆ’—ಒಂದು ಸಂದರ್ಶನ

ಸಂದರ್ಶಕ: ನೀವು ಟಿವಿ ಚಟಕ್ಕೆ ಸಿಕ್ಕಿಕೊಂಡಾಗ ಎಷ್ಟು ಪ್ರಾಯದವರಾಗಿದ್ದಿರಿ?

ವೈಯಂಟ್‌: ಸುಮಾರು ಹತ್ತು ವರ್ಷ ಪ್ರಾಯದವನಾಗಿದ್ದೆ. ನಾನು ಶಾಲೆಯಿಂದ ಮನೆಗೆ ಬಂದ ಕೂಡಲೇ, ಟಿವಿಯನ್ನು ಆನ್‌ ಮಾಡುತ್ತಿದ್ದೆ. ಮೊದಲು ನಾನು ಕಾರ್ಟೂನ್‌ಗಳನ್ನು ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೆ. ಅನಂತರ ವಾರ್ತೆಗಳ ಪ್ರಸಾರವಾಗುತ್ತಿತ್ತು, . . . ಮತ್ತು ನಾನು ಅಡುಗೆಯ ಕೋಣೆಯೊಳಗೆ ಹೋಗಿ, ತಿನ್ನಲಿಕ್ಕೆ ಏನಾದರೂ ಇದೆಯೆ ಎಂದು ಹುಡುಕುತ್ತಿದ್ದೆ. ಅದರ ತರುವಾಯ, ನಾನು ಪುನಃ ಟಿವಿಯ ಎದುರಿನಲ್ಲಿ ಕುಳಿತುಕೊಂಡು, ಮಲಗಲು ಬಯಸುವ ತನಕ ವೀಕ್ಷಿಸುತ್ತಿದ್ದೆ.

ಸಂದರ್ಶಕ: ಆದರೆ ನಿಮ್ಮ ಸ್ನೇಹಿತರಿಗಾಗಿ ನಿಮ್ಮಲ್ಲಿ ಯಾವಾಗ ಸಮಯವಿರುತ್ತಿತ್ತು?

ವೈಯಂಟ್‌: ಟಿವಿಯು ನನ್ನ ಸ್ನೇಹಿತನಾಗಿತ್ತು.

ಸಂದರ್ಶಕ: ಹಾಗಾದರೆ ನಿಮಗೆ ಆಟಕ್ಕಾಗಿ ಅಥವಾ ಕ್ರೀಡೆಗಳಿಗಾಗಿ ಎಂದೂ ಸಮಯವಿರಲಿಲ್ಲವೊ?

ವೈಯಂಟ್‌: [ನಗುತ್ತಾ] ನನ್ನಲ್ಲಿ ಕ್ರೀಡಾ ಸಾಮರ್ಥ್ಯಗಳೇ ಇಲ್ಲ. ಎಲ್ಲ ಸಮಯ ನಾನು ಟಿವಿಯನ್ನು ವೀಕ್ಷಿಸಿದ ಕಾರಣ, ನಾನೆಂದೂ ಅವುಗಳನ್ನು ಬೆಳೆಸಿಕೊಳ್ಳಲಿಲ್ಲ. ನಾನೊಬ್ಬ ನಿಷ್ಪ್ರಯೋಜಕ ಬಾಸ್ಕೆಟ್‌ಬಾಲ್‌ ಆಟಗಾರ. ಮತ್ತು ವ್ಯಾಯಾಮದ ತರಗತಿಯಲ್ಲಿ, ಆರಿಸಲ್ಪಡುವವರಲ್ಲಿ ನಾನು ಯಾವಾಗಲೂ ಕೊನೆಯವನಾಗಿದ್ದೆ. ನನ್ನ ಕ್ರೀಡಾ ಸಾಮರ್ಥ್ಯಗಳನ್ನು ಒಂದಿಷ್ಟು ಹೆಚ್ಚು ವಿಕಸಿಸಿಕೊಂಡಿದ್ದರೆ ಚೆನ್ನಾಗಿತ್ತು—ಎಲ್ಲೆಡೆಯೂ ಜಂಬಕೊಚ್ಚಿಕೊಳ್ಳುತ್ತಾ ಇರಸಾಧ್ಯವಿತ್ತು ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಕಡಿಮೆಪಕ್ಷ ನಾನೇ ಆನಂದಪಟ್ಟುಕೊಳ್ಳಸಾಧ್ಯವಿತ್ತು ಎಂಬ ಕಾರಣಕ್ಕಾಗಿ.

ಸಂದರ್ಶಕ: ನಿಮ್ಮ ಶಾಲಾ ದರ್ಜೆಗಳ ಕುರಿತೇನು?

ವೈಯಂಟ್‌: ಪ್ರಾಥಮಿಕ ಶಾಲೆಯನ್ನು ನಾನು ಹೇಗೋ ಮುಗಿಸಿದೆ. ರಾತ್ರಿ ಬಹಳ ಸಮಯದ ವರೆಗೆ ಎಚ್ಚರವಾಗಿದ್ದು, ಕೊನೆಯ ಗಳಿಗೆಯಲ್ಲಿ ನನ್ನ ಶಾಲಾ ಮನೆಗೆಲಸವನ್ನು ಮಾಡುತ್ತಿದ್ದೆ. ಆದರೆ ಪ್ರೌಢ ಶಾಲೆಯಲ್ಲಿ ಅದು ಹೆಚ್ಚು ಕಷ್ಟಕರವಾಗಿತ್ತು, ಏಕೆಂದರೆ ನಾನು ನ್ಯೂನ ಅಭ್ಯಾಸ ರೂಢಿಗಳನ್ನು ವಿಕಸಿಸಿಕೊಂಡಿದ್ದೆ.

ಸಂದರ್ಶಕ: ಅಷ್ಟೊಂದು ಟಿವಿ ವೀಕ್ಷಣೆಯು ನಿಮ್ಮನ್ನು ಬಾಧಿಸಿದೆಯೊ?

ವೈಯಂಟ್‌: ಹೌದು. ಕೆಲವೊಮ್ಮೆ ನಾನು ಜನರ ಮಧ್ಯೆ ಇರುವಾಗ, ನಾನು ಸಂಭಾಷಣೆಯಲ್ಲಿ ಭಾಗವಹಿಸುವ ಬದಲು ಕೇವಲ ಅವರನ್ನು ವೀಕ್ಷಿಸುತ್ತಿರುವುದಾಗಿ ಕಂಡುಕೊಳ್ಳುತ್ತೇನೆ—ನಾನು ಒಂದು ಟಿವಿ ಚರ್ಚಾ ಪ್ರದರ್ಶನವನ್ನು ವೀಕ್ಷಿಸುತ್ತಿರುವೆನೊ ಎಂಬಂತೆ. ನನಗೆ ಜನರೊಂದಿಗೆ ಹೆಚ್ಚು ಉತ್ತಮವಾದ ಸಂಬಂಧವಿರುತ್ತಿದ್ದರೆ, ಒಳ್ಳೆಯದಿತ್ತು.

ಸಂದರ್ಶಕ: ಒಳ್ಳೆಯದು, ಈ ಸಂಭಾಷಣೆಯಲ್ಲಿ ನೀವು ಬಹಳ ಉತ್ತಮವಾಗಿ ಮಾತಾಡಿದ್ದೀರಿ. ಸ್ಪಷ್ಟವಾಗಿಯೇ ನೀವು ನಿಮ್ಮ ವ್ಯಸನವನ್ನು ಜಯಿಸಿದ್ದೀರಿ.

ವೈಯಂಟ್‌: ನಾನು ಪ್ರೌಢ ಶಾಲೆಯನ್ನು ಪ್ರವೇಶಿಸಿದ ತರುವಾಯ ಟಿವಿ ಚಟವನ್ನು ಬಿಡಿಸಿಕೊಳ್ಳಲು ತೊಡಗಿದೆ. . . . ನಾನು ಸಾಕ್ಷಿ ಯುವ ಜನರ ಸಹವಾಸವನ್ನು ಕೋರಿದೆ ಮತ್ತು ಆತ್ಮಿಕ ಪ್ರಗತಿಯನ್ನು ಮಾಡಲು ಆರಂಭಿಸಿದೆ.

ಸಂದರ್ಶಕ: ಆದರೆ ಇದಕ್ಕೂ ನಿಮ್ಮ ಟಿವಿ ವೀಕ್ಷಣೆಗೂ ಯಾವ ಸಂಬಂಧವಿತ್ತು?

ವೈಯಂಟ್‌: ಆತ್ಮಿಕ ವಿಷಯಗಳಿಗಾಗಿ ನನ್ನ ಗಣ್ಯತೆಯು ಬೆಳೆದಂತೆ, ನಾನು ವೀಕ್ಷಿಸುತ್ತಿದ್ದ ಪ್ರದರ್ಶನಗಳಲ್ಲಿ ಹೆಚ್ಚಿನವು ನಿಜವಾಗಿಯೂ ಕ್ರೈಸ್ತರಿಗಾಗಿರಲಿಲ್ಲ ಎಂಬುದನ್ನು ನಾನು ಗ್ರಹಿಸಿಕೊಂಡೆ. ಬೈಬಲಿನ ಹೆಚ್ಚಿನ ಅಧ್ಯಯನಮಾಡುವ ಮತ್ತು ಕ್ರೈಸ್ತ ಕೂಟಗಳಿಗಾಗಿ ತಯಾರಿಸುವ ಅಗತ್ಯವನ್ನೂ ನಾನು ಮನಗಂಡೆ. ಅದು ಟಿವಿ ವೀಕ್ಷಣೆಯ ಹೆಚ್ಚಿನ ಭಾಗದ ಕಡಿತವನ್ನು ಅರ್ಥೈಸಿತು. ಹಾಗಿದ್ದರೂ, ಅದು ಸುಲಭವಾಗಿರಲಿಲ್ಲ. ಶನಿವಾರ ಬೆಳಗ್ಗಿನ ಆ ಕಾರ್ಟೂನ್‌ಗಳನ್ನು ನಾನು ಬಹಳ ಇಷ್ಟಪಡುತ್ತಿದ್ದೆ. ಆದರೆ ಸಭೆಯಲ್ಲಿನ ಒಬ್ಬ ಕ್ರೈಸ್ತ ಸಹೋದರನು, ಶನಿವಾರ ಬೆಳಗ್ಗೆ ಸಾರುವ ಕೆಲಸದಲ್ಲಿ ಅವನೊಂದಿಗೆ ಮನೆಯಿಂದ ಮನೆಗೆ ಹೋಗುವಂತೆ ನನ್ನನ್ನು ಆಮಂತ್ರಿಸಿದನು. ಅದು ನನ್ನ ಶನಿವಾರ ಬೆಳಗ್ಗಿನ ಟಿವಿ ರೂಢಿಯನ್ನು ಮುರಿದುಬಿಟ್ಟಿತು. ಹೀಗೆ ಕಟ್ಟಕಡೆಗೆ ನನ್ನ ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಲು ನಾನು ನಿಜವಾಗಿಯೂ ಕಲಿತುಕೊಂಡೆ.

ಸಂದರ್ಶಕ: ಈ ದಿನದ ಕುರಿತೇನು?

ವೈಯಂಟ್‌: ಒಳ್ಳೇದು, ನನ್ನಲ್ಲಿ ಆ ಸಮಸ್ಯೆಯು ಇನ್ನೂ ಇದೆ, ಅದೇನೆಂದರೆ ಟಿವಿಯು ಆನ್‌ ಆಗಿರುವಾಗ, ಯಾವ ಕೆಲಸವನ್ನೂ ನಾನು ಪೂರೈಸಸಾಧ್ಯವಿಲ್ಲ. ಆದುದರಿಂದ ಹೆಚ್ಚಿನ ಸಮಯ ನಾನು ಅದನ್ನು ಆಫ್‌ ಮಾಡಿಯೇ ಇಡುತ್ತೇನೆ. ವಾಸ್ತವದಲ್ಲಿ, ನನ್ನ ಟಿವಿ ಕೆಲವು ತಿಂಗಳುಗಳ ಹಿಂದೆ ಕೆಟ್ಟುಹೋಯಿತು ಮತ್ತು ಅದನ್ನು ಸರಿಪಡಿಸುವ ಗೋಜಿಗೆ ನಾನು ಹೋಗಿಲ್ಲ.

[ಪುಟ 291 ರಲ್ಲಿರುವ ಚಿತ್ರಗಳು]

ಟಿವಿ ವೀಕ್ಷಣೆಯು ಕೆಲವರಿಗೆ ಒಂದು ಗಂಭೀರವಾದ ವ್ಯಸನವಾಗಿದೆ

[ಪುಟ 294 ರಲ್ಲಿರುವ ಚಿತ್ರಗಳು]

ಟೆಲಿವಿಷನ್‌ ಅನ್ನು ಒಂದು ಅನುಕೂಲಕರವಲ್ಲದ ಸ್ಥಾನದಲ್ಲಿ ಇರಿಸುವಾಗ, ಅದನ್ನು ಆನ್‌ ಮಾಡುವ ಪ್ರಲೋಭನೆ ಕಡಿಮೆ ಇರುತ್ತದೆ