ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಓದುವ ವಿಷಯವು ಪ್ರಾಮುಖ್ಯವಾದದ್ದೊ?

ನಾನು ಓದುವ ವಿಷಯವು ಪ್ರಾಮುಖ್ಯವಾದದ್ದೊ?

ಅಧ್ಯಾಯ 35

ನಾನು ಓದುವ ವಿಷಯವು ಪ್ರಾಮುಖ್ಯವಾದದ್ದೊ?

ರಾಜ ಸೊಲೊಮೋನನು ಎಚ್ಚರಿಸಿದ್ದು: “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಓದುವುದನ್ನು ಪ್ರೋತ್ಸಾಹಿಸದಿರಲು ಸೊಲೊಮೋನನು ಪ್ರಯತ್ನಿಸುತ್ತಿರಲಿಲ್ಲ; ಕೇವಲ ನೀವು ಆರಿಸಿಕೊಳ್ಳುವವರಾಗಿರುವಂತೆ ಅವನು ಬುದ್ಧಿಹೇಳುತ್ತಿದ್ದನು.

ಹದಿನೇಳನೆಯ ಶತಮಾನದ ಫ್ರೆಂಚ್‌ ತತ್ವಜ್ಞಾನಿ ರೆನೆ ಡೆಕಾರ್ಟಸ್‌ ಹೇಳಿದ್ದು: “ಒಬ್ಬನು ಒಳ್ಳೆಯ ಪುಸ್ತಕಗಳನ್ನು ಓದುವಾಗ, ಅದು ಗತಕಾಲದಲ್ಲಿ ಜೀವಿಸಿದ ಸುಶಿಕ್ಷಿತ ಪುರುಷರೊಂದಿಗೆ ಒಂದು ಸಂಭಾಷಣೆಯನ್ನು ನಡೆಸುತ್ತಿರುವಂತಿದೆ. ಅದನ್ನು ಆರಿಸಿತೆಗೆದ ಸಂಭಾಷಣೆಯೆಂತಲೂ ನಾವು ಕರೆಯಬಹುದು, ಅದರಲ್ಲಿ ಗ್ರಂಥಕರ್ತನು ತನ್ನ ಅತಿ ಉದಾತ್ತ ಆಲೋಚನೆಗಳನ್ನು ಮಾತ್ರ ವ್ಯಕ್ತಪಡಿಸುತ್ತಾನೆ.” ಆದರೂ ಎಲ್ಲ ಬರಹಗಾರರು, ‘ಸಂಭಾಷಣೆ ನಡೆಸುವುದಕ್ಕೆ’ ಯೋಗ್ಯರಾಗಿರುವುದಿಲ್ಲ, ಇಲ್ಲವೆ ಅವರ ಎಲ್ಲ ಆಲೋಚನೆಗಳು ನಿಜವಾಗಿಯೂ “ಉದಾತ್ತ”ವಾಗಿರುವುದಿಲ್ಲ.

ಆದುದರಿಂದ ಪದೇ ಪದೇ ಉದ್ಧರಿಸಲ್ಪಟ್ಟಿರುವ ಬೈಬಲ್‌ ಸೂತ್ರವು ಪುನಃ ಕಾರ್ಯಾಚರಣೆಗೆ ಬರುತ್ತದೆ: “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಹೌದು, ನೀವು ಯಾರೊಂದಿಗೆ ಸಹವಾಸಿಸುತ್ತೀರೊ ಆ ಜನರು ನಿಮ್ಮ ವ್ಯಕ್ತಿತ್ವವನ್ನು ರೂಪಿಸಬಲ್ಲರು. ನೀವು ಸ್ವತಃ ನಿಮ್ಮ ಸ್ನೇಹಿತನಂತೆಯೇ ಕ್ರಿಯೆಗೈಯಲು, ಮಾತಾಡಲು, ಮತ್ತು ಆಲೋಚಿಸಲು ಕೂಡ ತೊಡಗಿದ್ದೀರೆಂದು ಕಂಡುಕೊಳ್ಳುವಷ್ಟು ಹೆಚ್ಚು ಸಮಯವನ್ನು ನೀವು ಎಂದಾದರೂ ಒಬ್ಬ ಸ್ನೇಹಿತನೊಂದಿಗೆ ವ್ಯಯಿಸಿದ್ದೀರೊ? ಒಳ್ಳೇದು, ಒಂದು ಪುಸ್ತಕವನ್ನು ಓದುವುದು, ಅದನ್ನು ಬರೆದ ವ್ಯಕ್ತಿಯೊಂದಿಗೆ ಸಂಭಾಷಿಸುತ್ತಾ ಅನೇಕ ತಾಸುಗಳನ್ನು ವ್ಯಯಿಸುವಂತಿದೆ.

ಹೀಗೆ ಯೇಸು ಮತ್ತಾಯ 24:15ರಲ್ಲಿ (NW) ತಿಳಿಸಿದಂತಹ ಸೂತ್ರವು ಸಮಂಜಸವಾಗಿದೆ: “ಓದುವವನು ವಿವೇಚನಾಶಕ್ತಿಯನ್ನು ಉಪಯೋಗಿಸಲಿ.” ನೀವು ಓದುವಂತಹ ವಿಷಯವನ್ನು ವಿಶ್ಲೇಷಿಸಲು ಮತ್ತು ತೂಗಿನೋಡಲು ಕಲಿಯಿರಿ. ಎಲ್ಲ ಮಾನವರು ಒಂದಿಷ್ಟು ಪ್ರಮಾಣದ ಪಕ್ಷಪಾತದಿಂದ ಬಾಧಿತರಾಗಿರುತ್ತಾರೆ ಮತ್ತು ನಿಜಾಂಶಗಳ ತಮ್ಮ ವರ್ಣನೆಯಲ್ಲಿ ಯಾವಾಗಲೂ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುವುದಿಲ್ಲ. ಆದುದರಿಂದ, ನೀವು ಓದುವಂತಹ ಅಥವಾ ಕೇಳುವಂತಹ ಪ್ರತಿಯೊಂದು ವಿಷಯವನ್ನು ನಿರ್ವಿವಾದವಾಗಿ ಸ್ವೀಕರಿಸಬೇಡಿ: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.

ಜೀವಿತದ ತತ್ವಜ್ಞಾನವನ್ನು ನಿರೂಪಿಸುವ ಯಾವುದೇ ವಿಷಯವನ್ನು ಓದುವುದರ ಕುರಿತು ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಉದಾಹರಣೆಗೆ, ಹದಿವಯಸ್ಕ ಪತ್ರಿಕೆಗಳು ಪ್ರತಿಯೊಂದು ವಿಷಯದ ಕುರಿತು—ಡೇಟಿಂಗ್‌ ಇಂದ ಹಿಡಿದು ವಿವಾಹಪೂರ್ವ ಸಂಭೋಗದ ವರೆಗೆ—ಬುದ್ಧಿವಾದದಿಂದ ತುಂಬಿವೆ, ಆದರೆ ಇವು ಕ್ರೈಸ್ತನೊಬ್ಬನು ಯಾವಾಗಲೂ ಉಪಯೋಗಿಸಬೇಕಾದ ಬುದ್ಧಿವಾದವಾಗಿರುವುದಿಲ್ಲ. ಮತ್ತು ಗಂಭೀರವಾದ ತತ್ವಜ್ಞಾನ ಸಂಬಂಧಿತ ಪ್ರಶ್ನೆಗಳೊಳಗೆ ಧುಮುಕುವ ಪುಸ್ತಕಗಳ ಕುರಿತೇನು?

ಬೈಬಲ್‌ ಎಚ್ಚರಿಸುವುದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ . . . ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) ಬೈಬಲ್‌ ಮತ್ತು ಈ ಪುಸ್ತಕದಂತಹ ಬೈಬಲಾಧಾರಿತ ಪ್ರಕಾಶನಗಳು, ಹೆಚ್ಚು ಉತ್ತಮವಾದ ಬುದ್ಧಿವಾದವನ್ನು ನೀಡುತ್ತವೆ.—2 ತಿಮೊಥೆಯ 3:16.

ಪ್ರಣಯ ಕಾದಂಬರಿಗಳು—ಹಾನಿರಹಿತ ಓದುವಿಕೆಯೊ?

ಪ್ರಣಯ ಕಾದಂಬರಿಗಳನ್ನು ಓದುವುದು, ಕೇವಲ ಅಮೆರಿಕದಲ್ಲೇ ಸುಮಾರು 200 ಲಕ್ಷ ಜನರಿಗೆ ಒಂದು ಗೀಳಿನ ಚಟವಾಗಿದೆ. ಪುರುಷ ಮತ್ತು ಸ್ತ್ರೀಯಲ್ಲಿ, ಪ್ರೀತಿಸಿ ವಿವಾಹವಾಗುವ ಬಯಕೆಯನ್ನು ಸ್ವತಃ ದೇವರೇ ಇರಿಸಿದ್ದಾನೆಂಬುದು ನಿಶ್ಚಯ. (ಆದಿಕಾಂಡ 1:27, 28; 2:23, 24) ಹಾಗಾದರೆ, ಪ್ರಣಯವು ಹೆಚ್ಚಿನ ಕಲ್ಪನಾ ಕಥೆಗಳಲ್ಲಿ ಪ್ರಧಾನವಾಗಿ ಪ್ರದರ್ಶಿಸಲ್ಪಟ್ಟಿರುವುದು ಆಶ್ಚರ್ಯಕರವೇನೂ ಅಲ್ಲ, ಮತ್ತು ಇದು ಆಕ್ಷೇಪಣೀಯವಾಗಿರಬೇಕೆಂದಿಲ್ಲ. ಕೆಲವು ಪ್ರಣಯ ಕಾದಂಬರಿಗಳು ಉತ್ತಮ ಸಾಹಿತ್ಯದ ದರ್ಜೆಯನ್ನೂ ಪಡೆದಿವೆ. ಆದರೆ ಈ ಹಳೆಯ ಕಾದಂಬರಿಗಳು ಆಧುನಿಕ ಮಟ್ಟಗಳಿಗನುಸಾರ ನಿಸ್ಸಾರವಾಗಿ ಪರಿಗಣಿಸಲ್ಪಟ್ಟಿರುವುದರಿಂದ, ಇತ್ತೀಚೆಗೆ ಒಂದು ಹೊಸ ವರ್ಗದ ಪ್ರಣಯ ಕಾದಂಬರಿಗಳನ್ನು ಉತ್ಪಾದಿಸುವುದನ್ನು ಬರಹಗಾರರು ಲಾಭಕರವಾಗಿ ಕಂಡುಕೊಂಡಿದ್ದಾರೆ. ಕಥೆಗೆ ರೂಪಕ ಹಾಗೂ ಭಾವನೆಯನ್ನು ಕೂಡಿಸಲು ಕೆಲವರು ಐತಿಹಾಸಿಕ ಅಥವಾ ಮಧ್ಯಯುಗದ ಹಿನ್ನೆಲೆಗಳನ್ನು ಇನ್ನೂ ಬಳಸುತ್ತಾರೆ. ಇತರರು ಶೈಲಿ ಮತ್ತು ಹಿನ್ನೆಲೆಯಲ್ಲಿ ಸಮಕಾಲಿಕರಾಗಿದ್ದಾರೆ. ಆದರೂ, ಕೆಲವು ಚಿಕ್ಕಪುಟ್ಟ ವ್ಯತ್ಯಾಸಗಳೊಂದಿಗೆ, ಈ ಆಧುನಿಕ ಪ್ರಣಯ ಕಾದಂಬರಿಗಳು ಸಂಪೂರ್ಣವಾಗಿ ಮುಂತಿಳಿಸಬಹುದಾದ ಸೂತ್ರವನ್ನು ಅನುಸರಿಸುತ್ತವೆ: ಚಿಗುರುತ್ತಿರುವ ತಮ್ಮ ಪ್ರಣಯವನ್ನು ಬೆದರಿಸುವ ದುಸ್ಸಾಧ್ಯ ಅಡೆತಡೆಗಳನ್ನು ಎದುರಿಸಿ ದಾಟುವ ನಾಯಕರು ಮತ್ತು ನಾಯಕಿಯರು.

ಲಾಕ್ಷಣಿಕವಾಗಿ, ನಾಯಕನು ಬಲಿಷ್ಠ, ದುರಹಂಕಾರಿಯೂ ಆದ, ಆತ್ಮವಿಶ್ವಾಸವನ್ನು ಹೊರಸೂಸುವ ಪುರುಷನಾಗಿದ್ದಾನೆ. ಆದರೆ ನಾಯಕಿಯು ಬಹುಶಃ ನಾಜೂಕಾಗಿಯೂ ಸುಲಭಭೇದ್ಯಳಾಗಿಯೂ ಇದ್ದು, ಅನೇಕ ವೇಳೆ ನಾಯಕನಿಗಿಂತ 10 ಅಥವಾ 15 ವರ್ಷಗಳು ಚಿಕ್ಕವಳಾಗಿರುತ್ತಾಳೆ. ಮತ್ತು ಅನೇಕ ವೇಳೆ ಅವನು ಆಕೆಯನ್ನು ತುಚ್ಛವಾಗಿ ನಡೆಸಿಕೊಂಡರೂ, ಆಕೆ ಅವನ ಕಡೆಗೆ ತಡೆಯಲಾಗದ ರೀತಿಯಲ್ಲಿ ಆಕರ್ಷಿತಳಾಗುತ್ತಾಳೆ.

ಅನೇಕ ವೇಳೆ ಒಬ್ಬ ಪ್ರತಿಸ್ಪರ್ಧಿ ವಿವಾಹಾರ್ಥಿ ಇರುತ್ತಾನೆ. ಅವನು ದಯಾಪರನೂ ವಿಚಾರಪೂರ್ಣನೂ ಆಗಿರುವುದಾದರೂ, ನಾಯಕಿಯನ್ನು ಪ್ರಚೋದಿಸಲು ಅಥವಾ ಆಸಕ್ತಿವಹಿಸುವಂತೆ ಮಾಡಲು ವಿಫಲನಾಗುತ್ತಾನೆ. ಆದುದರಿಂದ ತನ್ನ ಅನಾಸಕ್ತ ನಾಯಕನನ್ನು ಸೌಮ್ಯ ಸ್ವರೂಪಿಯಾಗಿ ರೂಪಿಸಲು ಆಕೆ ತನ್ನ ಮೋಹಕ ಲಾವಣ್ಯವನ್ನು ಬಳಸುತ್ತಾಳೆ, ಈಗ ಅವನು ತನ್ನ ಸ್ಥಿರವಾದ ಪ್ರೀತಿಯನ್ನು ಮುಕ್ತವಾಗಿ ಪ್ರಕಟಿಸುತ್ತಾನೆ. ಎಲ್ಲ ಹಿಂದಿನ ಸಂಶಯಗಳು ಸ್ಪಷ್ಟಗೊಳಿಸಲ್ಪಟ್ಟು, ಕ್ಷಮಿಸಲ್ಪಟ್ಟ ನಂತರ, ಅವರು ಪರಮಾನಂದದಿಂದ ವಿವಾಹವಾಗಿ, ಎಂದೆಂದಿಗೂ ಸಂತೋಷದಿಂದ ಜೀವಿಸುತ್ತಾರೆ . . .

ಪ್ರೇಮವು ಪ್ರೇಮ ಕಥೆಗಳಂತಿದೆಯೊ?

ಇಂತಹ ಕಾಲ್ಪನಿಕ ಕಥೆಗಳ ಓದುವಿಕೆಯು ವಾಸ್ತವಿಕತೆಯ ಕುರಿತಾದ ನಿಮ್ಮ ನೋಟವನ್ನು ಮಬ್ಬುಗವಿಸಸಾಧ್ಯವೊ? 16ರ ಪ್ರಾಯದಲ್ಲಿ ಪ್ರಣಯ ಕಾದಂಬರಿಗಳನ್ನು ಓದಲು ತೊಡಗಿದ ಬಾನಿ ಜ್ಞಾಪಿಸಿಕೊಳ್ಳುವುದು: “ನಾನು ನೀಳಕಾಯದ, ಕಂದು ಬಣ್ಣದ ಮತ್ತು ಸುಂದರನಾದ, ಯಾರು ದರ್ಪದ ವ್ಯಕ್ತಿತ್ವವುಳ್ಳನಾಗಿದ್ದು, ಉದ್ವೇಗಕಾರಿಯಾಗಿದ್ದನೊ ಅಂತಹ ಒಬ್ಬ ಯುವ ಪುರುಷನಿಗಾಗಿ ಹುಡುಕಿದೆ.” ಅವಳು ಒಪ್ಪಿಕೊಂಡದ್ದು: “ನಾನು ಒಬ್ಬ ಯುವ ಪುರುಷನೊಂದಿಗೆ ಡೇಟಿಂಗ್‌ಗೆ ಹೋಗುವಲ್ಲಿ, ಅವನು ವಿಚಾರಪೂರ್ಣನೂ ದಯಾಪರನೂ ಆಗಿದ್ದರೂ, ಚುಂಬಿಸಲು ಹಾಗೂ ಸ್ಪರ್ಶಿಸಲು ಬಯಸದಿದ್ದಲ್ಲಿ, ಉತ್ಸಾಹಶೂನ್ಯನಾಗಿದ್ದನು. ನಾನು ಕಾದಂಬರಿಗಳಲ್ಲಿ ಓದಿದ್ದ ಉದ್ರೇಕವನ್ನು ಬಯಸಿದೆ.”

ಬಾನಿ ತನ್ನ ವಿವಾಹದ ನಂತರ ಪ್ರಣಯ ಕಾದಂಬರಿಗಳನ್ನು ಓದುವುದನ್ನು ಮುಂದುವರಿಸಿದಳು ಮತ್ತು ಹೀಗೆ ಹೇಳುತ್ತಾಳೆ: “ನನಗೊಂದು ಒಳ್ಳೆಯ ಮನೆ ಹಾಗೂ ಕುಟುಂಬವಿತ್ತು, ಆದರೆ ಅದು ಹೇಗೊ ಸಾಕಾಗಿರಲಿಲ್ಲ . . . ಕಾದಂಬರಿಗಳಲ್ಲಿ ಅಷ್ಟೊಂದು ಆಕರ್ಷಕವಾಗಿ ವರ್ಣಿಸಲ್ಪಟ್ಟ ಸಾಹಸ, ಉದ್ರೇಕ ಮತ್ತು ಪುಳಕವನ್ನು ನಾನು ಬಯಸಿದೆ. ನನ್ನ ವಿವಾಹದಲ್ಲಿ ಏನೊ ದೋಷವಿದೆಯೆಂದು ನನಗನಿಸಿತು.” ಆದರೆ ಗಂಡನೊಬ್ಬನು ತನ್ನ ಹೆಂಡತಿಗೆ ಮೋಹ ಅಥವಾ “ಉದ್ರೇಕ”ಕ್ಕಿಂತಲೂ ಹೆಚ್ಚಿನದ್ದನ್ನು ನೀಡಬೇಕೆಂಬುದನ್ನು ಗಣ್ಯಮಾಡುವಂತೆ ಬೈಬಲು ಬಾನಿಗೆ ಸಹಾಯ ಮಾಡಿತು. ಅದು ಹೇಳುವುದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.”—ಎಫೆಸೆ 5:28, 29.

ಮತ್ತು ಪ್ರಣಯ ಕಾದಂಬರಿಗಳಿಗೆ ಬಹಳಷ್ಟು ಸಾಮಾನ್ಯವಾಗಿರುವ ಮುಖ್ಯವಿಷಯ—ಆದರ್ಶ ಸಮಾಪ್ತಿಗಳು ಮತ್ತು ಭಿನ್ನಾಭಿಪ್ರಾಯಗಳ ಸುಲಭವಾದ ತೀರ್ಮಾನ—ಗಳ ಕುರಿತೇನು? ಒಳ್ಳೇದು, ಅವು ವಾಸ್ತವಿಕತೆಯಿಂದ ಬಹಳ ದೂರವಾಗಿವೆ. ಬಾನಿ ಜ್ಞಾಪಿಸಿಕೊಳ್ಳುವುದು: “ನನ್ನ ಗಂಡನೊಂದಿಗೆ ನನಗೊಂದು ಭಿನ್ನಾಭಿಪ್ರಾಯವಿದ್ದಾಗ ಅದನ್ನು ಅವನೊಂದಿಗೆ ಮಾತಾಡುವುದರ ಬದಲಿಗೆ, ನಾಯಕಿಯಿಂದ ಉಪಯೋಗಿಸಲ್ಪಟ್ಟ ಹೂಟಗಳನ್ನು ನಾನು ನಕಲು ಮಾಡುತ್ತಿದ್ದೆ. ನಾಯಕನು ಪ್ರತಿಕ್ರಿಯಿಸಿದ ವಿಧದಲ್ಲಿ ನನ್ನ ಗಂಡನು ಪ್ರತಿಕ್ರಿಯಿಸದಿದ್ದಾಗ, ನಾನು ಮುನಿಸಿಕೊಂಡೆ.” ಬೈಬಲು ಹೆಂಡತಿಯರಿಗೆ, “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ,” ಎಂಬುದಾಗಿ ಹೇಳುವಾಗ, ಅದರ ಸಲಹೆಯು ಹೆಚ್ಚು ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವುದಿಲ್ಲವೆ?—ಕೊಲೊಸ್ಸೆ 3:18.

ಲೈಂಗಿಕ ವಿಷಯ

ಆಸಕ್ತಿಕರವಾಗಿ, ಲೈಂಗಿಕವಾಗಿ ಸ್ಪಷ್ಟವಾಗಿರುವ ಪ್ರಣಯ ಕಾದಂಬರಿಗಳು, ಹದಿವಯಸ್ಕರಿಂದ ಹೆಚ್ಚಾಗಿ ವಿನಂತಿಸಿಕೊಳ್ಳಲ್ಪಡುವ ಕಾದಂಬರಿಗಳಾಗಿವೆ. ಇವು, ಕೆಲವು ನಗರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿವೆ. ಅವು ನಿಮ್ಮನ್ನು ಹಾನಿಗೊಳಿಸಬಲ್ಲವೊ? 18 ವರ್ಷ ಪ್ರಾಯದ ಕ್ಯಾರನ್‌ ವಿವರಿಸುವುದು: “ಆ ಪುಸ್ತಕಗಳು ನಿಜವಾಗಿಯೂ ನನ್ನಲ್ಲಿ ಬಲವಾದ ಲೈಂಗಿಕ ಭಾವನೆಗಳನ್ನು ಮತ್ತು ಕುತೂಹಲವನ್ನು ಕೆರಳಿಸಿದವು. ನಾಯಕನೊಂದಿಗಿನ ಗಾಢಾನುರಕ್ತ ಸಮಾಗಮಗಳಲ್ಲಿ ನಾಯಕಿಯಿಂದ ಅನುಭವಿಸಲ್ಪಟ್ಟ ಹರ್ಷೋನ್ಮಾದ ಹಾಗೂ ಕ್ಷೇಮಭಾವದ ಅನಿಸಿಕೆಗಳು, ಆ ಅನಿಸಿಕೆಗಳನ್ನು ನಾನು ಸಹ ಬಯಸುವಂತೆ ಮಾಡಿದವು. ಆದುದರಿಂದ ನಾನು ಡೇಟಿಂಗ್‌ ಮಾಡುತ್ತಿದ್ದಾಗ, ಆ ಭಾವನೆಗಳನ್ನು ಪುನಃಸೃಷ್ಟಿಸಲು ನಾನು ಪ್ರಯತ್ನಿಸಿದೆ. ಇದು ಹಾದರವನ್ನು ಗೈಯುವಂತೆ ನನ್ನನ್ನು ನಡೆಸಿತು,” ಎಂಬುದಾಗಿ ಆಕೆ ಮುಂದುವರಿಸುತ್ತಾಳೆ. ಆದರೆ ಆಕೆಯ ಅನುಭವವು, ಆಕೆ ಓದಿ, ಕನಸುಕಂಡಿದ್ದ ನಾಯಕಿಯರ ಅನುಭವದಂತೆ ಇತ್ತೊ? ಕ್ಯಾರನ್‌ ಕಂಡುಹಿಡಿದದ್ದು: “ಈ ಭಾವನೆಗಳು ಬರಹಗಾರರ ಮನಸ್ಸುಗಳಲ್ಲಿ ಸೃಷ್ಟಿಸಲ್ಪಡುತ್ತವೆ. ಅವು ವಾಸ್ತವವಾಗಿರುವುದಿಲ್ಲ.”

ಲೈಂಗಿಕ ಭ್ರಾಂತಿಗಳನ್ನು ಸೃಷ್ಟಿಸುವುದು, ನಿಶ್ಚಯವಾಗಿಯೂ ಕೆಲವು ಲೇಖಕರ ಉದ್ದೇಶವಾಗಿದೆ. ಪ್ರಕಾಶಕನೊಬ್ಬನು ಪ್ರಣಯ ಕಾದಂಬರಿ ಲೇಖಕರಿಗೆ ಕೊಡುವ ಸೂಚನೆಗಳನ್ನು ಪರಿಗಣಿಸಿರಿ: “ಲೈಂಗಿಕ ಸಮಾಗಮಗಳು, ಕಾಮೋದ್ರೇಕ ಮತ್ತು ನಾಯಕನ ಮುತ್ತುಗಳು ಮತ್ತು ಪ್ರೀತಿಸ್ಪರ್ಶಗಳ ಮೂಲಕ ಕೆರಳಿಸಲ್ಪಟ್ಟ ಕಾಮಸಂಬಂಧವಾದ ಸಂವೇದನೆಗಳ ಮೇಲೆ ಕೇಂದ್ರೀಕರಿಸಬೇಕು.” ಪ್ರೇಮ ಕಥೆಗಳು “ಓದುಗನಲ್ಲಿ ಉದ್ರೇಕ, ಉದ್ವೇಗ ಮತ್ತು ಒಂದು ಗಾಢವಾದ ಭಾವನಾತ್ಮಕ ಹಾಗೂ ಸ್ವೇಚ್ಛಾಪ್ರವೃತ್ತಿಯ ಪ್ರತಿಕ್ರಿಯೆಯನ್ನು ಉಂಟುಮಾಡಬೇಕು” ಎಂಬುದಾಗಿ ಬರಹಗಾರರು ಇನ್ನೂ ಹೆಚ್ಚಾಗಿ ತಿಳಿಸಲ್ಪಡುತ್ತಾರೆ. ಸ್ಪಷ್ಟವಾಗಿಯೇ, ಇಂತಹ ವಿಷಯವನ್ನು ಓದುವುದು, “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ” ಎಂಬ ಬೈಬಲಿನ ಬುದ್ಧಿವಾದವನ್ನು ಅನುಸರಿಸಲು ಒಬ್ಬನಿಗೆ ಸಹಾಯಮಾಡಲಾರದು.—ಕೊಲೊಸ್ಸೆ 3:5.

ಆರಿಸಿಕೊಳ್ಳುವವರಾಗಿರುವುದು

ಹಾಗಾದರೆ, ಅನೈತಿಕ ಭಾವನೆಗಳನ್ನು ಕೆರಳಿಸುವ ಅಥವಾ ಅವಾಸ್ತವಿಕವಾದ ನಿರೀಕ್ಷಣೆಗಳನ್ನು ಉಂಟುಮಾಡುವ ಕಾದಂಬರಿಗಳನ್ನು ದೂರವಿರಿಸುವುದು ಅತ್ಯುತ್ತಮವಾದದ್ದು. ಮನಸ್ಸನ್ನು ಬೇರೆ ಕಡೆಗೆ ತಿರುಗಿಸಿ, ಇತಿಹಾಸ ಅಥವಾ ವಿಜ್ಞಾನ ಪುಸ್ತಕಗಳಂತಹ ಇತರ ರೀತಿಯ ಪುಸ್ತಕಗಳನ್ನು ಓದುವುದನ್ನು ಏಕೆ ಪ್ರಯತ್ನಿಸಬಾರದು? ಕಲ್ಪನಾ ಕಥೆಯು ನಿಷಿದ್ಧವಾದ ವಿಷಯವೆಂದಲ್ಲ, ಅದರಲ್ಲಿ ಮನೋರಂಜಕ ಮಾತ್ರವಲ್ಲ ಶೈಕ್ಷಣಿಕವೂ ಆಗಿರುವ ಕಾಲ್ಪನಿಕ ಕೃತಿಗಳು ಕೆಲವಿವೆ. ಆದರೆ ಕಾದಂಬರಿಯೊಂದು ಸಂಭೋಗ, ಅವಿವೇಕದ ಹಿಂಸಾಕೃತ್ಯ, ಮಾಂತ್ರಿಕ ಆಚರಣೆಗಳು, ಅಥವಾ ಸ್ವೇಚ್ಛಾಸಂಪರ್ಕವುಳ್ಳ, ಕರುಣೆಯಿಲ್ಲದ, ಅಥವಾ ಲೋಭಿಗಳೂ ಆಗಿರುವ “ನಾಯಕರನ್ನು” ಪ್ರದರ್ಶಿಸುವಾಗ, ಅದನ್ನು ಓದುತ್ತಾ ನೀವು ನಿಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯಬೇಕೊ?

ಆದುದರಿಂದ ಎಚ್ಚರಿಕೆವಹಿಸಿರಿ. ಒಂದು ಪುಸ್ತಕವನ್ನು ಓದುವ ಮುಂಚೆ, ಪುಸ್ತಕದ ಕುರಿತು ಯಾವುದೇ ಆಕ್ಷೇಪಣೀಯ ವಿಷಯವಿದೆಯೊ ಎಂಬುದನ್ನು ಅವಲೋಕಿಸಲು ಅದರ ಮೇಲಿನ ರಟ್ಟು ಮತ್ತು ಪುಸ್ತಕದ ಹೊರಹೊದಿಕೆಯನ್ನು ಪರಿಶೀಲಿಸಿರಿ. ಮತ್ತು ಎಚ್ಚರಿಕೆಗಳ ಹೊರತೂ ಪುಸ್ತಕವೊಂದು ಅಹಿತಕರವಾಗಿ ಪರಿಣಮಿಸುವಲ್ಲಿ, ಆ ಪುಸ್ತಕ ಓದುವುದನ್ನು ನಿಲ್ಲಿಸುವ ನೀತಿಬಲ ನಿಮ್ಮಲ್ಲಿರಲಿ.

ವೈದೃಶ್ಯವಾಗಿ, ಬೈಬಲ್‌ ಮತ್ತು ಬೈಬಲ್‌ ಸಂಬಂಧಿತ ಪ್ರಕಾಶನಗಳನ್ನು ಓದುವುದು ನಿಮಗೆ ಹಾನಿಯನ್ನಲ್ಲ, ಸಹಾಯವನ್ನು ಮಾಡುವುದು. ಉದಾಹರಣೆಗೆ, ಜಪಾನಿನ ಹುಡುಗಿಯೊಬ್ಬಳು ಹೇಳುವುದೇನೆಂದರೆ, ಬೈಬಲನ್ನು ಓದುವುದು—ಅನೇಕ ವೇಳೆ ಯುವ ಜನರಿಗೆ ಒಂದು ಸಮಸ್ಯೆಯಾಗಿರುವ, ಕಾಮದಿಂದ ತನ್ನ ಮನಸ್ಸನ್ನು ವಿಮುಖಗೊಳಿಸುವಂತೆ ಸಹಾಯಮಾಡಿತು. “ನಾನು ಯಾವಾಗಲೂ ಬೈಬಲನ್ನು ನನ್ನ ಮಂಚದ ಹತ್ತಿರ ಇಟ್ಟುಕೊಳ್ಳುತ್ತೇನೆ ಮತ್ತು ಮಲಗುವ ಮುಂಚೆ ಅದನ್ನು ಓದುವುದನ್ನು ಖಚಿತಮಾಡಿಕೊಳ್ಳುತ್ತೇನೆ” ಎಂದು ಆಕೆ ಹೇಳುತ್ತಾಳೆ. “ನಾನು ಒಬ್ಬಂಟಿಗಳಾಗಿರುವಾಗ ಮತ್ತು ಮಾಡಲು ಯಾವ ಕೆಲಸವೂ ಇಲ್ಲದಿರುವಾಗ (ಮಲಗುವ ಸಮಯದಂತಹ ಸಂದರ್ಭದಲ್ಲಿ) ನನ್ನ ಮನಸ್ಸು ಕೆಲವೊಮ್ಮೆ ಕಾಮದ ಕಡೆಗೆ ಓಲುತ್ತದೆ. ಆದುದರಿಂದ ಬೈಬಲನ್ನು ಓದುವುದು ನಿಜವಾಗಿಯೂ ನನಗೆ ಸಹಾಯ ಮಾಡುತ್ತದೆ!” ಹೌದು, ಬೈಬಲಿನಲ್ಲಿ ಬರೆಯಲ್ಪಟ್ಟಿರುವ ನಂಬಿಕೆಯ ಜನರೊಂದಿಗೆ “ಸಂಭಾಷಿಸುವುದು” ನಿಮಗೆ ನಿಜವಾದ ನೈತಿಕ ಸ್ವತವನ್ನು ನೀಡಿ, ನಿಮ್ಮ ಸಂತೋಷಕ್ಕೆ ಮಹತ್ತರವಾಗಿ ಕೂಡಿಸಬಲ್ಲದು.—ರೋಮಾಪುರ 15:4.

ಚರ್ಚೆಗಾಗಿ ಪ್ರಶ್ನೆಗಳು

◻ ನೀವು ಓದುವಂತಹ ವಿಷಯದ ಕುರಿತು ಏಕೆ ಆರಿಸಿಕೊಳ್ಳುವವರಾಗಿರಬೇಕು?

◻ ಪ್ರಣಯ ಕಾದಂಬರಿಗಳು ಅನೇಕ ಯುವ ಜನರಿಗೆ ಅಷ್ಟು ಆಕರ್ಷಕವಾಗಿರುವುದೇಕೆ? ಆದರೆ ಅವುಗಳ ಅಪಾಯಗಳಾವುವು?

◻ ಯೋಗ್ಯವಾದ ಓದುವ ವಿಷಯವನ್ನು ನೀವು ಹೇಗೆ ಆರಿಸಿಕೊಳ್ಳಬಲ್ಲಿರಿ?

◻ ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ಓದುವುದರಿಂದ ಆಗುವ ಕೆಲವು ಪ್ರಯೋಜನಗಳಾವುವು?

[ಪುಟ 287 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನಗೊಂದು ಒಳ್ಳೆಯ ಮನೆ ಹಾಗೂ ಕುಟುಂಬವಿತ್ತು, ಆದರೆ ಅದು ಹೇಗೊ ಸಾಕಾಗಿರಲಿಲ್ಲ . . . ಕಾದಂಬರಿಗಳಲ್ಲಿ ಅಷ್ಟೊಂದು ಆಕರ್ಷಕವಾಗಿ ವರ್ಣಿಸಲ್ಪಟ್ಟ ಸಾಹಸ, ಉದ್ರೇಕ ಮತ್ತು ಪುಳಕವನ್ನು ನಾನು ಬಯಸಿದೆ. ನನ್ನ ವಿವಾಹದಲ್ಲಿ ಏನೊ ದೋಷವಿದೆಯೆಂದು ನನಗನಿಸಿತು.”

[ಪುಟ 283 ರಲ್ಲಿರುವ ಚಿತ್ರಗಳು]

ಅನೇಕ ಸಾವಿರಾರು ಪುಸ್ತಕಗಳು ಲಭ್ಯವಿರುವಾಗ, ನೀವು ಆರಿಸಿತೆಗೆಯುವವರಾಗಿರಬೇಕು

[ಪುಟ 285 ರಲ್ಲಿರುವ ಚಿತ್ರಗಳು]

ಪ್ರಣಯ ಕಾದಂಬರಿಗಳು ಮಗ್ನಗೊಳಿಸುವ ಓದುವಿಕೆಯನ್ನು ಅನುಮತಿಸಬಹುದು, ಆದರೆ ಅವು ಪ್ರೀತಿ ಮತ್ತು ವಿವಾಹದ ಕುರಿತು ಹಿತಕರವಾದ ನೋಟವನ್ನು ಕಲಿಸುತ್ತವೊ?