ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವಾಗಲಾದರೊಮ್ಮೆ ನಾನೊಂದು ಸುಸಮಯವನ್ನು ಏಕೆ ಅನುಭವಿಸಸಾಧ್ಯವಿಲ್ಲ?

ಯಾವಾಗಲಾದರೊಮ್ಮೆ ನಾನೊಂದು ಸುಸಮಯವನ್ನು ಏಕೆ ಅನುಭವಿಸಸಾಧ್ಯವಿಲ್ಲ?

ಅಧ್ಯಾಯ 37

ಯಾವಾಗಲಾದರೊಮ್ಮೆ ನಾನೊಂದು ಸುಸಮಯವನ್ನು ಏಕೆ ಅನುಭವಿಸಸಾಧ್ಯವಿಲ್ಲ?

ಶುಕ್ರವಾರ ಸಂಜೆಗಳಂದು, ಪೌಲೀನ್‌ * ಕ್ರೈಸ್ತ ಕೂಟಗಳಿಗೆ ಹೋಗುತ್ತಿದ್ದಳು. ಆಕೆ ಚರ್ಚೆಗಳಲ್ಲಿ ಆನಂದಿಸಿದಳು, ಆದರೆ ತಾನಲ್ಲಿರುವಾಗ ತನ್ನ ಶಾಲಾ ಮಿತ್ರರು ಹೊರಗೆ ಒಂದು ಸುಸಮಯವನ್ನು ಅನುಭವಿಸುತ್ತಾ ಇದ್ದರೆಂಬ ನಿಜತ್ವದಿಂದ ಕೆಲವೊಮ್ಮೆ ಆಕೆ ಬಹಳ ಅಸಮಾಧಾನಪಡುತ್ತಿದ್ದಳು.

ಕೂಟವು ಮುಗಿದ ತರುವಾಯ, ಮನೆಗೆ ಹಿಂದಿರುಗುವ ದಾರಿಯಲ್ಲಿ ಪೌಲೀನ್‌, ಹದಿವಯಸ್ಕರು ಒಟ್ಟುಗೂಡುವ ಒಂದು ಸ್ಥಳೀಯ ವಾಸಸ್ಥಾನವನ್ನು ಹಾದುಹೋಗುತ್ತಿದ್ದಳು. ಆಕೆ ಜ್ಞಾಪಿಸಿಕೊಳ್ಳುವುದು: “ಗಟ್ಟಿಯಾದ ಸಂಗೀತ ಮತ್ತು ಮಿನುಗುವ ಬೆಳಕುಗಳಿಂದ ಆಕರ್ಷಿತಳಾಗಿ, ನಾವು ಹಾದುಹೋದಂತೆ ಕಿಟಕಿಗೆ ನನ್ನ ಮೂಗನ್ನು ಒತ್ತಿ, ಅವರು ಅನುಭವಿಸುತ್ತಾ ಇರುವ ವಿನೋದವನ್ನು ಅತ್ಯಾಕಾಂಕ್ಷೆಯಿಂದ ನಾನು ಕಲ್ಪಿಸಿಕೊಳ್ಳುತ್ತಿದ್ದೆ.” ಸಕಾಲದಲ್ಲಿ, ತನ್ನ ಮಿತ್ರರೊಂದಿಗೆ ತಾನೂ ಆನಂದಿಸಬೇಕೆಂಬ ಬಯಕೆಯು, ಆಕೆಯ ಜೀವನದ ಅತ್ಯಂತ ಪ್ರಾಮುಖ್ಯ ವಿಷಯವಾಯಿತು.

ಪೌಲೀನಳಂತೆ, ನೀವು ಒಬ್ಬ ಕ್ರೈಸ್ತರಾಗಿರುವ ಕಾರಣ, ಏನನ್ನೊ ಕಳೆದುಕೊಳ್ಳುತ್ತಿದ್ದೀರಿ ಎಂದು ಕೆಲವೊಮ್ಮೆ ನಿಮಗನಿಸಬಹುದು. ಯಾವ ಟಿವಿ ಪ್ರದರ್ಶನದ ಕುರಿತು ಇತರರೆಲ್ಲರೂ ಮಾತಾಡುತ್ತಿದ್ದಾರೊ ಅದನ್ನು ನೀವು ವೀಕ್ಷಿಸಬಯಸುತ್ತೀರಿ, ಆದರೆ ಅದು ಬಹಳ ಹಿಂಸಾತ್ಮಕವಾಗಿದೆ ಎಂದು ನಿಮ್ಮ ಹೆತ್ತವರು ಹೇಳುತ್ತಾರೆ. ಶಾಲೆಯಲ್ಲಿನ ಮಕ್ಕಳೊಂದಿಗೆ ಶಾಪಿಂಗ್‌ ಕ್ಷೇತ್ರಕ್ಕೆ ಹೋಗಿ, ಅಲ್ಲಿ ಸುತ್ತಾಡಲು ನೀವು ಬಯಸುತ್ತೀರಿ, ಆದರೆ ಅವರನ್ನು ನಿಮ್ಮ ಹೆತ್ತವರು “ದುಸ್ಸಹವಾಸ” ಎಂದು ಕರೆಯುತ್ತಾರೆ. (1 ಕೊರಿಂಥ 15:33) ನಿಮ್ಮ ಶಾಲಾಸಂಗಾತಿಗಳೆಲ್ಲರೂ ಹಾಜರಾಗಲಿರುವ ಆ ಪಾರ್ಟಿಗೆ ನೀವು ಹೋಗಬಯಸುತ್ತೀರಿ, ಆದರೆ ಅಮ್ಮ ಅಪ್ಪ ಬೇಡವೆನ್ನುತ್ತಾರೆ.

ನಿಮ್ಮ ಶಾಲಾಸಂಗಾತಿಗಳು ತಮ್ಮ ಹೆತ್ತವರ ಅಡ್ಡೈಸುವಿಕೆಯಿಲ್ಲದೆ, ಚಲನ ಚಿತ್ರಗಳಿಗೆ ಹೋಗುತ್ತಾ, ನಸುಕಿನ ವರೆಗೆ ಪಾರ್ಟಿಮಾಡುತ್ತಾ ತಮಗೆ ಇಷ್ಟಬಂದಂತೆ ಓಡಾಡುತ್ತಿರುವುದು ಕಂಡುಬರುತ್ತದೆ. ಆದುದರಿಂದ ನೀವು ಅವರ ಸ್ವಾತಂತ್ರ್ಯವನ್ನು ಕಂಡು ಅಸೂಯೆಪಡಬಹುದು. ನೀವು ಯಾವುದೊ ಕೆಟ್ಟ ವಿಷಯವನ್ನು ಮಾಡಬಯಸುತ್ತೀರಿ ಎಂದಲ್ಲ. ಯಾವಾಗಲಾದರೊಮ್ಮೆ ಒಂದು ಸುಸಮಯವನ್ನು ನೀವು ಅನುಭವಿಸಬಯಸುತ್ತೀರಿ ಅಷ್ಟೇ.

ಮನೋರಂಜನೆ—ದೇವರ ದೃಷ್ಟಿಕೋನ

ಸ್ವತಃ ಆನಂದಿಸಲು ಬಯಸುವುದರಲ್ಲಿ ಯಾವ ತಪ್ಪೂ ಇರುವುದಿಲ್ಲ ಎಂಬುದರ ಕುರಿತು ನಿಶ್ಚಿತರಾಗಿರಿ. ಎಷ್ಟೆಂದರೂ, ಯೆಹೋವನು “ಸಂತೋಷವುಳ್ಳ ದೇವರು” ಆಗಿದ್ದಾನೆ. (1 ತಿಮೊಥೆಯ 1:11, NW) ಮತ್ತು ವಿವೇಕಿ ಮನುಷ್ಯನಾದ ಸೊಲೊಮೋನನ ಮುಖಾಂತರ, ಆತನು ಹೇಳುವುದು: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.” ಹಾಗಿದ್ದರೂ, ಸೊಲೊಮೋನನು ಅನಂತರ ಎಚ್ಚರಿಸಿದ್ದು: “ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.”—ಪ್ರಸಂಗಿ 11:9, 10.

ದೇವರು ನಿಮ್ಮ ಕ್ರಿಯೆಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೆಂದು ತಿಳಿದಿರುವುದು, ಮನೋರಂಜನೆಯನ್ನು ತೀರ ಭಿನ್ನವಾದ ಬೆಳಕಿನಲ್ಲಿ ಇರಿಸುತ್ತದೆ. ಒಂದು ಸುಸಮಯವನ್ನು ಅನುಭವಿಸಿದುದಕ್ಕಾಗಿ ದೇವರು ಒಬ್ಬನನ್ನು ಖಂಡಿಸುವುದಿಲ್ಲವಾದರೂ, ‘ಸುಖಾನುಭವವನ್ನು ಪ್ರೀತಿಸುವ’ ಒಬ್ಬನನ್ನು, ಮುಂದಿನ ಸುಸಮಯಕ್ಕಾಗಿ ಮಾತ್ರ ಜೀವಿಸುವ ಒಬ್ಬ ವ್ಯಕ್ತಿಯನ್ನು ಆತನು ಅನುಮೋದಿಸುವುದಿಲ್ಲ. (2 ತಿಮೊಥೆಯ 3:1, 4, NW) ಏಕೆ? ರಾಜ ಸೊಲೊಮೋನನನ್ನು ಪರಿಗಣಿಸಿರಿ. ತನ್ನ ಅಪಾರ ಸಂಪನ್ಮೂಲಗಳನ್ನು ಉಪಯೋಗಿಸುತ್ತಾ, ಊಹಿಸಸಾಧ್ಯವಿರುವ ಪ್ರತಿಯೊಂದು ಮಾನವ ಸುಖಾನುಭವವನ್ನು ಅವನು ಅನುಭವಿಸಿದನು. ಅವನು ಹೇಳುವುದು: “ನನ್ನ ಕಣ್ಣು ಬಯಿಸಿದ್ದೆಲ್ಲವನ್ನೂ ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ; ಯಾವ ಸಂತೋಷವನ್ನನುಭವಿಸುವದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ.” ಪರಿಣಾಮವು ಏನಾಗಿತ್ತು? “ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು.” (ಪ್ರಸಂಗಿ 2:10, 11) ಹೌದು, ಕಟ್ಟಕಡೆಗೆ, ಸುಖಾನುಭವವನ್ನು ಅರಸುವ ಒಂದು ಜೀವನವು ನಿಮ್ಮನ್ನು ಕೇವಲ ಬರಿದಾಗಿಯೂ ಆಶಾಭಂಗಗೊಳ್ಳುವಂತೆಯೂ ಮಾಡುತ್ತದೆಂದು ದೇವರಿಗೆ ತಿಳಿದಿದೆ.

ಅಮಲೌಷಧದ ಅಪಪ್ರಯೋಗ ಮತ್ತು ವಿವಾಹಪೂರ್ವ ಸಂಭೋಗದಂತಹ ಅಶುದ್ಧಗೊಳಿಸುವ ಆಚರಣೆಗಳಿಂದ ನೀವು ಮುಕ್ತರಾಗಿ ಉಳಿಯುವಂತೆಯೂ ದೇವರು ಕೇಳಿಕೊಳ್ಳುತ್ತಾನೆ. (2 ಕೊರಿಂಥ 7:1) ಆದರೂ, ವಿನೋದಕ್ಕಾಗಿ ಹದಿವಯಸ್ಕರು ಮಾಡುವಂತಹ ಅನೇಕ ವಿಷಯಗಳು, ಈ ಆಚರಣೆಗಳಲ್ಲಿ ಒಬ್ಬನು ಸಿಲುಕಿಕೊಳ್ಳುವುದಕ್ಕೆ ನಡೆಸಬಲ್ಲವು. ಉದಾಹರಣೆಗೆ, ಯುವ ಹುಡುಗಿಯೊಬ್ಬಳು, ಕೆಲವು ಶಾಲಾಸಂಗಾತಿಗಳ ಪಾಲಿಕಸಹಚರಿಯಿಲ್ಲದ ಒಂದು ಒಟ್ಟುಗೂಡುವಿಕೆಗೆ ಉಪಸ್ಥಿತಳಾಗಲು ನಿರ್ಧರಿಸಿದಳು. “ಸ್ಟಿಯರಿಯೊದಿಂದ ತೇಲಿಬರುತ್ತಿದ್ದ ಸಂಗೀತವು ಉತ್ಕೃಷ್ಟವಾಗಿತ್ತು, ನೃತ್ಯವು ಅಸಾಧಾರಣವಾಗಿತ್ತು, ಅಲ್ಪಾಹಾರವು ಅಚ್ಚುಕಟ್ಟಾಗಿತ್ತು ಮತ್ತು ಬಹಳಷ್ಟು ತಮಾಷೆಯಿತ್ತು,” ಎಂದು ಆಕೆ ಜ್ಞಾಪಿಸಿಕೊಳ್ಳುತ್ತಾಳೆ. ಆದರೆ ಆಗ, “ಯಾರೊ ಒಬ್ಬರು ಮಾರಿವಾನ ತಂದರು. ಅನಂತರ ಕುಡಿತವೂ ಬಂತು. ಎಲ್ಲವೂ ನಿಯಂತ್ರಣ ತಪ್ಪಿಹೋದದ್ದು ಆಗಲೇ.” ಲೈಂಗಿಕ ಅನೈತಿಕತೆಯು ಪರಿಣಮಿಸಿತು. ಹುಡುಗಿಯು ಒಪ್ಪಿಕೊಂಡದ್ದು: “ಅಂದಿನಿಂದ ನಾನು ದುಃಖಾರ್ತಳೂ ಖಿನ್ನಳೂ ಆಗಿದ್ದೇನೆ.” ವಯಸ್ಕ ಮೇಲ್ವಿಚಾರಣೆಯಿಲ್ಲದೆ, ಇಂತಹ ಒಟ್ಟುಗೂಡುವಿಕೆಗಳು ಎಷ್ಟು ಸುಲಭವಾಗಿ “ಉನ್ಮತ್ತ ಗೋಷ್ಠಿಗಳು,” ಅಥವಾ ವಿಲಾಸಕೂಟಗಳಾಗಿ ಪರಿಣಮಿಸುತ್ತವೆ!—ಗಲಾತ್ಯ 5:21, ಬೈಯಿಂಗ್ಟನ್‌.

ನಿಮ್ಮ ಬಿಡುವಿನ ಸಮಯವನ್ನು ನೀವು ಹೇಗೆ ವ್ಯಯಿಸುತ್ತೀರಿ ಎಂಬುದರ ಕುರಿತು—ಬಹುಶಃ ನೀವು ಹೋಗಸಾಧ್ಯವಿರುವ ಸ್ಥಳಗಳನ್ನು ಮತ್ತು ನೀವು ಸಹವಸಿಸಸಾಧ್ಯವಿರುವ ಜನರ ವಿಷಯದಲ್ಲಿ ನಿರ್ಬಂಧಗಳನ್ನು ಹೇರುತ್ತಾ—ನಿಮ್ಮ ಹೆತ್ತವರು ಬಹಳ ಚಿಂತಿತರಾಗಿರಬಹುದು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರ ಉದ್ದೇಶ? ದೇವರ ಈ ಎಚ್ಚರಿಕೆಗೆ ನೀವು ಲಕ್ಷ್ಯಕೊಡುವಂತೆ ಸಹಾಯ ಮಾಡುವುದೇ: “ನಿನ್ನ ಹೃದಯದಿಂದ ಕರಕರೆಯನ್ನೂ ದೇಹದಿಂದ ಶ್ರಮೆಯನ್ನೂ ತೊಲಗಿಸು; ಬಾಲ್ಯವೂ ಪ್ರಾಯವೂ ವ್ಯರ್ಥವಷ್ಟೆ.”—ಪ್ರಸಂಗಿ 11:10.

ಸುಖಾನುಭವವನ್ನು ಅರಸುವವರ ಬಗ್ಗೆ ಅಸೂಯೆಪಡಬೇಕೊ?

ಇದನ್ನೆಲ್ಲ ಮರೆತು, ಕೆಲವು ಯುವ ಜನರು ಅನುಭವಿಸುತ್ತಿರುವಂತೆ ತೋರುವ ಸ್ವಾತಂತ್ರ್ಯವನ್ನು ಕಂಡು ಅಸೂಯೆಪಡುವುದು ಸುಲಭ. ಪೌಲೀನ್‌ ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸಿ, ಸುಖಾನುಭವವನ್ನು ಅರಸುವ ಗುಂಪಿನೊಂದಿಗೆ ಸೇರಿಕೊಂಡಳು. “ನಾನು ಯಾವ ವಿಷಯವಾಗಿ ಎಚ್ಚರಿಸಲ್ಪಟ್ಟಿದ್ದೆನೊ ಆ ಎಲ್ಲ ತಪ್ಪು ಕೆಲಸಗಳನ್ನು ಸ್ವತಃ ಆಚರಿಸುತ್ತಿರುವುದನ್ನು ಕಂಡುಕೊಂಡೆ,” ಎಂಬುದಾಗಿ ಆಕೆ ಜ್ಞಾಪಿಸಿಕೊಳ್ಳುತ್ತಾಳೆ. ಪೌಲೀನಳ ಸುಖಾನುಭವದ ಕೇಳಿಯು ಕಟ್ಟಕಡೆಗೆ ಆಕೆಯ ದಸ್ತಗಿರಿಯಲ್ಲಿ ಮತ್ತು ಮೊಂಡ ಹುಡುಗಿಯರಿಗಾಗಿರುವ ಒಂದು ಶಾಲೆಯಲ್ಲಿ ಹಾಕಲ್ಪಡುವುದಕ್ಕೆ ನಡೆಸಿತು!

ಬಹಳ ಸಮಯದ ಹಿಂದೆ, 73ನೇ ಕೀರ್ತನೆಯನ್ನು ಬರೆದ ಬರಹಗಾರನಿಗೆ ಪೌಲೀನಳಂತಹದ್ದೇ ಅನಿಸಿಕೆಗಳಿದ್ದವು. “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು,” ಎಂಬುದಾಗಿ ಅವನು ಒಪ್ಪಿಕೊಂಡನು. ನೀತಿಯ ಮೂಲತತ್ವಗಳನುಸಾರ ಜೀವಿಸುವುದರ ಮೌಲ್ಯವನ್ನೂ ಅವನು ಸಂದೇಹಿಸತೊಡಗಿದನು. “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ,” ಎಂದನವನು. ಆದರೆ ಅನಂತರ ಅವನಿಗೊಂದು ಅಗಾಧವಾದ ಒಳನೋಟವು ವ್ಯಕ್ತವಾಯಿತು: ದುಷ್ಟರು ವಿಪತ್ತಿನ ಅಂಚಿನ ಮೇಲೆ ಓಲಾಡುತ್ತಾ, ‘ಜಾರುವ ನೆಲದ ಮೇಲೆ’ ಇದ್ದಾರೆ!—ಕೀರ್ತನೆ 73:3, 13, 18, NW.

ಪೌಲೀನ್‌ ಇದನ್ನು ಕಹಿಯಾದ ಅನುಭವದಿಂದ ಕಲಿತುಕೊಂಡಳು. ಆಕೆಯ ಲೌಕಿಕ ಒಳಗೊಳ್ಳುವಿಕೆಯ ನಂತರ, ದೇವರ ಅನುಗ್ರಹವನ್ನು ಪುನಃ ಪಡೆಯುವ ಸಲುವಾಗಿ ಆಕೆ ತನ್ನ ಜೀವಿತದಲ್ಲಿ ಪ್ರಚಂಡವಾದ ಬದಲಾವಣೆಗಳನ್ನು ಮಾಡಿದಳು. ಮತ್ತೊಂದು ಕಡೆಯಲ್ಲಿ ನೀವು, ಒಂದು ‘ಸುಸಮಯ’ದ ಬೆಲೆಯು ಅತಿ ಹೆಚ್ಚಾಗಿರಸಾಧ್ಯವಿದೆ ಎಂಬುದನ್ನು ಗ್ರಹಿಸಲು, ದಸ್ತಗಿರಿಯನ್ನು ಅನುಭವಿಸಬೇಕಾಗಿಲ್ಲ, ರತಿ ರವಾನಿತ ರೋಗವನ್ನು ಹತ್ತಿಸಿಕೊಳ್ಳಬೇಕಾಗಿಲ್ಲ, ಅಥವಾ ಅಮಲೌಷಧ ತ್ಯಜನದ ಸಂಕಟಗಳನ್ನು ಅನುಭವಿಸಬೇಕಾಗಿಲ್ಲ. ಸ್ವತಃ ಆನಂದಪಟ್ಟುಕೊಳ್ಳಲು, ಇಂತಹ ಅಪಾಯಗಳಿಂದ ಮುಕ್ತವಾಗಿರುವ ಅನೇಕ ಹಿತಕರ, ಭಕ್ತಿವೃದ್ಧಿಮಾಡುವ ವಿಧಾನಗಳಿವೆ. ಅವುಗಳಲ್ಲಿ ಕೆಲವು ಯಾವುವು?

ಹಿತಕರವಾದ ಸುಸಮಯಗಳು

ಹದಿವಯಸ್ಕರು “ಕುಟುಂಬದೊಂದಿಗೆ ಪ್ರಾಸಂಗಿಕವಾದ ವಾಯುವಿಹಾರ ಮತ್ತು ಚಟುವಟಿಕೆಗಳಲ್ಲಿ ಆನಂದಿಸುತ್ತಾರೆ” ಎಂಬುದಾಗಿ ಅಮೆರಿಕನ್‌ ಯುವ ಜನರ ಒಂದು ಸಮೀಕ್ಷೆಯು ಪ್ರಕಟಿಸಿತು. ಕುಟುಂಬವಾಗಿ ವಿಷಯಗಳನ್ನು ಒಟ್ಟಿಗೆ ಮಾಡುವುದು ವಿನೋದಕರ ಮಾತ್ರವಲ್ಲ, ಅದು ಕುಟುಂಬ ಐಕ್ಯವನ್ನೂ ವೃದ್ಧಿಸಬಲ್ಲದು.

ಇದು ಟಿವಿಯನ್ನು ಒಟ್ಟಿಗೆ ವೀಕ್ಷಿಸುವುದಕ್ಕಿಂತ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ಡಾ. ಆ್ಯಂಟನಿ ಪಿಯೆಟ್ರೊಪಿಂಟೊ ಹೇಳುವುದು: “ಟೆಲಿವಿಷನ್‌ ವೀಕ್ಷಣೆಯೊಂದಿಗಿರುವ ಸಮಸ್ಯೆಯೇನೆಂದರೆ, ಅದನ್ನು ಇತರರ ಸಹವಾಸದಲ್ಲಿ ಮಾಡಬಹುದಾದರೂ, ಅದು ಮೂಲತಃ ಒಂದು ಏಕಾಂತ ಚಟುವಟಿಕೆಯಾಗಿದೆ. . . . ಆದರೂ, ಟೆಲಿವಿಷನ್‌ನೊಂದಿಗೆ ಆಧುನಿಕ ಕುಟುಂಬದ ನಿಷ್ಕ್ರಿಯ ಕಾರ್ಯಮಗ್ನತೆಗಿಂತ, ಒಳಾಂಗಣ ಆಟಗಳು, ಹಿತ್ತಲು ಕ್ರೀಡೆಗಳು, ಅಡುಗೆಮಾಡಿ ಸತ್ಕರಿಸುವುದು, ಹಸ್ತಕೌಶಲಗಳು, ಮತ್ತು ಗಟ್ಟಿಯಾಗಿ ಓದುವಂತಹ ಕಾಲಕ್ಷೇಪಗಳು, ಸಂವಾದ, ಸಹಕಾರ, ಮತ್ತು ಬೌದ್ಧಿಕ ಪ್ರಚೋದನೆಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತವೆ.” ಏಳು ಮಕ್ಕಳ ತಂದೆಯಾದ ಜಾನ್‌ ಹೇಳುವಂತೆ, ‘ಕುಟುಂಬವಾಗಿ ಮಾಡಲ್ಪಡುವಾಗ, ಹಿತ್ತಲನ್ನು ಸ್ವಚ್ಛಗೊಳಿಸುವುದು ಅಥವಾ ಮನೆಗೆ ಬಣ್ಣಹಚ್ಚುವುದೂ ವಿನೋದವಾಗಿರಬಲ್ಲದು.’

ನಿಮ್ಮ ಕುಟುಂಬವು ಇಂತಹ ವಿಷಯಗಳನ್ನು ಈಗಾಗಲೇ ಒಟ್ಟಿಗೆ ಮಾಡದೆ ಇರುವಲ್ಲಿ, ಆರಂಭ ಹೆಜ್ಜೆಯನ್ನು ತೆಗೆದುಕೊಂಡು, ಅವುಗಳನ್ನು ನಿಮ್ಮ ಹೆತ್ತವರಿಗೆ ಸೂಚಿಸಿರಿ. ಕುಟುಂಬ ವಾಯುವಿಹಾರ ಅಥವಾ ಯೋಜನೆಗಳಿಗಾಗಿ ಕೆಲವು ಆಸಕ್ತಿಕರ ಹಾಗೂ ಉತ್ತೇಜಕ ವಿಚಾರಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿರಿ.

ಸ್ವತಃ ಆನಂದಿಸಲು ನೀವು ಯಾವಾಗಲೂ ಇತರರೊಂದಿಗೆ ಇರಬೇಕೆಂದಿಲ್ಲ. ತನ್ನ ಸಂಗಡಿಗರನ್ನು ಎಚ್ಚರಿಕೆಯಿಂದ ಗಮನಿಸುವ ಮೇರಿ ಎಂಬ ಯುವತಿಯು, ಒಬ್ಬಂಟಿಗಳಾಗಿ ತನ್ನ ಬಿಡುವಿನ ಸಮಯಗಳನ್ನು ಆನಂದಿಸುವ ವಿಧವನ್ನು ಕಲಿತುಕೊಂಡಿದ್ದಾಳೆ. “ನಾನು ಪಿಯಾನೊ ಮತ್ತು ಪಿಟೀಲನ್ನು ನುಡಿಸುತ್ತೇನೆ, ಮತ್ತು ಅವುಗಳ ಅಭ್ಯಾಸಮಾಡುತ್ತಾ ನಾನು ಒಂದಿಷ್ಟು ಸಮಯವನ್ನು ಕಳೆಯುತ್ತೇನೆ,” ಎಂದು ಆಕೆ ಹೇಳುತ್ತಾಳೆ. ಮತ್ತೊಬ್ಬ ಹದಿವಯಸ್ಕ ಹುಡುಗಿಯಾದ ಮೆಲಿಸ್ಸಾ ತದ್ರೀತಿಯಲ್ಲಿ ಹೇಳುವುದು: “ನನ್ನ ಸ್ವಂತ ಆನಂದಕ್ಕಾಗಿ ನಾನು ಕಥೆಗಳನ್ನು ಇಲ್ಲವೆ ಕವನಗಳನ್ನು ಬರೆಯುತ್ತಾ ಕೆಲವೊಮ್ಮೆ ಕಾಲಕಳೆಯುತ್ತೇನೆ.” ಓದುವುದು, ಮರಗೆಲಸ, ಅಥವಾ ಒಂದು ಸಂಗೀತ ವಾದ್ಯವನ್ನು ನುಡಿಸುವಂತಹ ಕೌಶಲಗಳನ್ನು ವಿಕಸಿಸಿಕೊಳ್ಳುವ ಮೂಲಕ, ನೀವೂ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಕಲಿಯಬಲ್ಲಿರಿ.

ಕ್ರೈಸ್ತ ಒಟ್ಟುಗೂಡುವಿಕೆಗಳು

ಆಗಾಗ ಮಿತ್ರರೊಂದಿಗೆ ಜೊತೆಸೇರುವುದು ಸಹ ಆನಂದದಾಯಕವಾಗಿರುತ್ತದೆ. ಮತ್ತು ಅನೇಕ ಕ್ಷೇತ್ರಗಳಲ್ಲಿ ನೀವು ಆನಂದಿಸಸಾಧ್ಯವಿರುವ ಹಲವಾರು ಹಿತಕರ ಚಟುವಟಿಕೆಗಳಿವೆ. ಚೆಂಡೆಸೆಯುವುದು, ಸ್ಕೇಟಿಂಗ್‌, ಸೈಕಲ್‌ ಸವಾರಿ, ಬೇಸ್‌ಬಾಲ್‌, ಮತ್ತು ಬಾಸ್ಕೆಟ್‌ಬಾಲ್‌ ಉತ್ತರ ಅಮೆರಿಕದಲ್ಲಿನ ಜನಪ್ರಿಯ ಚಟುವಟಿಕೆಗಳಾಗಿವೆ. ನೀವು ಈ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ, ಒಂದು ವಸ್ತುಸಂಗ್ರಹಾಲಯ ಅಥವಾ ಪ್ರಾಣಿಸಂಗ್ರಹಾಲಯವನ್ನು ಸಂದರ್ಶಿಸುವುದನ್ನು ಪ್ರಯತ್ನಿಸಬಹುದು. ಮತ್ತು, ಹೌದು, ಒಟ್ಟಿಗೆ ಜೊತೆಸೇರಿ ಸಂಗೀತದ ರೆಕಾರ್ಡ್‌ಗಳನ್ನು ಆಲಿಸುವುದು ಅಥವಾ ಜೊತೆಕ್ರೈಸ್ತ ಯುವ ಜನರೊಂದಿಗೆ ಹಿತಕರವಾದ ಟಿವಿ ಪ್ರದರ್ಶನವೊಂದನ್ನು ವೀಕ್ಷಿಸುವುದಕ್ಕೆ ಒಂದು ಅವಕಾಶವಿದೆ.

ಹೆಚ್ಚು ಔಪಚಾರಿಕವಾದ ನೆರವಿಯೊಂದನ್ನು ಯೋಜಿಸಲು ನಿಮಗೆ ಸಹಾಯ ಮಾಡುವಂತೆ ನೀವು ನಿಮ್ಮ ಹೆತ್ತವರಲ್ಲಿಯೂ ಕೇಳಿಕೊಳ್ಳಬಹುದು. ಗೋಷ್ಠಿಯ ಆಟಗಳು ಮತ್ತು ಸಮೂಹ ಗಾನಗಳಂತಹ ವಿಭಿನ್ನ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಅದನ್ನು ಆಸಕ್ತಿಕರವಾಗಿ ಮಾಡಿರಿ. ನಿಮ್ಮ ಮಿತ್ರರಲ್ಲಿ ಕೆಲವರಿಗೆ ಸಂಗೀತದ ಹುಟ್ಟು ಸಾಮರ್ಥ್ಯಗಳಿರುವಲ್ಲಿ, ಬಹುಶಃ ಒಂದಿಷ್ಟು ನುಡಿಸುವಂತೆ ಅವರು ಪುಸಲಾಯಿಸಲ್ಪಡಬಲ್ಲರು. ಒಳ್ಳೆಯ ಆಹಾರವೂ ಒಂದು ಸಂದರ್ಭಕ್ಕೆ ಹೆಚ್ಚನ್ನು ಕೂಡಿಸುತ್ತದೆ, ಆದರೆ ಅದು ಚಿತ್ರವಿಚಿತ್ರವಾದದ್ದೂ ದುಬಾರಿ ವೆಚ್ಚದ್ದೂ ಆಗಿರಬೇಕಾಗಿಲ್ಲ. ಕೆಲವೊಮ್ಮೆ ಅತಿಥಿಗಳು ವಿಭಿನ್ನ ಆಹಾರ ಪದಾರ್ಥಗಳನ್ನು ತರಸಾಧ್ಯವಿದೆ.

ಚೆಂಡಾಟ ಆಡುವುದು ಇಲ್ಲವೆ ಈಜುವಂತಹ ಚಟುವಟಿಕೆಗಳನ್ನು ಅನುಮತಿಸುವ ಉದ್ಯಾನವನ ಅಥವಾ ಹೊರಾಂಗಣ ಕ್ಷೇತ್ರವು ಹತ್ತಿರದಲ್ಲಿದೆಯೊ? ಒಂದು ಪಿಕ್‌ನಿಕ್‌ ಅನ್ನು ಏಕೆ ಯೋಜಿಸಬಾರದು? ಯಾರೊಬ್ಬರ ಮೇಲೆಯೂ ಹಣಕಾಸಿನ ಹೊರೆ ಬೀಳದಂತೆ, ಕುಟುಂಬಗಳು ಊಟವನ್ನು ತರುವುದರಲ್ಲಿ ಪಾಲಿಗರಾಗಸಾಧ್ಯವಿದೆ.

ಮಿತವರ್ತನೆಯು ಕೀಲಿ ಕೈಯಾಗಿದೆ. ಸಂಗೀತದಿಂದ ಆನಂದವನ್ನು ಪಡೆದುಕೊಳ್ಳಲು ಅದು ಕಿವಿ ಒಡೆಯುವಷ್ಟು ಜೋರಾಗಿರುವ ಅಗತ್ಯವಿಲ್ಲ, ಇಲ್ಲವೆ ವಿನೋದವನ್ನು ಪಡೆದುಕೊಳ್ಳಲು ನೃತ್ಯವು ಅಸಭ್ಯವಾಗಿಯೂ ಉದ್ರೇಕಕಾರಿಯಾಗಿಯೂ ಇರಬೇಕಾಗಿಲ್ಲ. ತದ್ರೀತಿಯಲ್ಲಿ, ಹೊರಾಂಗಣದ ಆಟಗಳನ್ನು ಅತಿರೇಕದ ಸ್ಪರ್ಧೆಯಿಲ್ಲದೆ ಆನಂದಿಸಸಾಧ್ಯವಿದೆ. ಆದರೂ, ಹೆತ್ತವರಲ್ಲೊಬ್ಬರು ವರದಿಸುವುದು: “ಕೆಲವೊಮ್ಮೆ ಕೆಲವು ಯುವ ಜನರು ಜಗಳವಾಡುವ ಮಟ್ಟಿಗೆ ವಾದಿಸುತ್ತಾರೆ.” ‘ಒಬ್ಬರು ಮತ್ತೊಬ್ಬರೊಂದಿಗೆ ಸ್ಪರ್ಧಿಸುವುದನ್ನು’ ದೂರವಿರಿಸಬೇಕೆಂಬ ಬೈಬಲಿನ ಬುದ್ಧಿವಾದವನ್ನು ಅನುಸರಿಸುವ ಮೂಲಕ ಇಂತಹ ಚಟುವಟಿಕೆಗಳನ್ನು ಆನಂದದಾಯಕವಾಗಿಡಿರಿ.—ಗಲಾತ್ಯ 5:26, NW.

ನೀವು ಯಾರನ್ನು ಆಮಂತ್ರಿಸಬೇಕು? ಬೈಬಲ್‌ ಹೇಳುವುದು, “ಸಹೋದರರ ಇಡೀ ಸಹವಾಸಕ್ಕಾಗಿ ಪ್ರೀತಿಯಿರಲಿ.” (1 ಪೇತ್ರ 2:17, NW) ನಿಮ್ಮ ಒಟ್ಟುಗೂಡುವಿಕೆಗಳನ್ನು ಸಮಾನಸ್ಥರಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು? ನಿಮ್ಮ ಸಹವಾಸದ ವಿಷಯದಲ್ಲಿ ವಿಸ್ತರಿಸಿರಿ. (2 ಕೊರಿಂಥ 6:13ನ್ನು ಹೋಲಿಸಿರಿ.) ಹೆತ್ತವರಲ್ಲೊಬ್ಬರು ಗಮನಿಸಿದ್ದು: “ವಯಸ್ಸಾದವರಿಗೆ ಕೆಲವೊಂದು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರೂ, ಅವರು ಅಲ್ಲಿಗೆ ಬಂದು, ಆಗುಹೋಗುಗಳನ್ನು ವೀಕ್ಷಿಸುವುದರಲ್ಲಿ ಆನಂದಿಸುತ್ತಾರೆ.” ವಯಸ್ಕರ ಉಪಸ್ಥಿತಿಯು, ವಿಷಯಗಳು ಕೈಮೀರಿ ಹೋಗುವುದರಿಂದ ತಡೆಗಟ್ಟಲು ಅನೇಕ ವೇಳೆ ಸಹಾಯ ಮಾಡುತ್ತದೆ. ಆದರೂ “ಇಡೀ ಸಹವಾಸ”ವನ್ನು ಯಾವುದೇ ಒಂದು ಒಟ್ಟುಗೂಡುವಿಕೆಗೆ ಆಮಂತ್ರಿಸುವುದು ಅಸಾಧ್ಯ. ಅಲ್ಲದೆ, ಚಿಕ್ಕ ಒಟ್ಟುಗೂಡುವಿಕೆಗಳನ್ನು ನಿಯಂತ್ರಿಸುವುದು ಸುಲಭ.

ಕ್ರೈಸ್ತ ಒಟ್ಟುಗೂಡುವಿಕೆಗಳು ಒಬ್ಬರನ್ನೊಬ್ಬರು ಆತ್ಮಿಕವಾಗಿ ಕಟ್ಟುವ ಅವಕಾಶವನ್ನೂ ಪ್ರಸ್ತುತಪಡಿಸುತ್ತವೆ. ಒಂದು ಒಟ್ಟುಗೂಡುವಿಕೆಗೆ ಆತ್ಮಿಕತೆಯನ್ನು ಕೂಡಿಸುವುದು ಅದರಿಂದ ವಿನೋದವನ್ನು ತೆಗೆದುಬಿಡುತ್ತದೆ ಎಂದು ಕೆಲವು ಯುವ ಜನರಿಗೆ ಅನಿಸುತ್ತದೆ, ನಿಜ. “ಒಂದು ಒಟ್ಟುಗೂಡುವಿಕೆಗೆ ನಾವು ಕೂಡಿಬರುವಾಗ, ಅದು, ಕುಳಿತುಕೊಳ್ಳಿ, ನಿಮ್ಮ ಬೈಬಲನ್ನು ಹೊರಗೆ ತೆಗೆಯಿರಿ ಮತ್ತು ಬೈಬಲ್‌ ಆಟಗಳನ್ನು ಆಡಿರಿ, ಎಂದಾಗಿರುತ್ತದೆ,” ಎಂಬುದಾಗಿ ಕ್ರೈಸ್ತ ಹುಡುಗನೊಬ್ಬನು ದೂರಿದನು. ಆದರೆ ಕೀರ್ತನೆಗಾರನು ಹೇಳಿದ್ದು: ‘ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತಾನೊ . . . ಅವನು ಎಷ್ಟೋ ಧನ್ಯನು.’ (ಕೀರ್ತನೆ 1:1, 2) ಬೈಬಲಿನ ಸುತ್ತಲೂ ಕೇಂದ್ರೀಕರಿಸುವ ಚರ್ಚೆಗಳು—ಆಟಗಳು ಸಹ—ಬಹಳ ಆನಂದದಾಯಕವಾಗಿರಬಲ್ಲವು. ಬಹುಶಃ ಹೆಚ್ಚು ಪೂರ್ಣವಾಗಿ ಭಾಗವಹಿಸಲು ಶಕ್ತರಾಗುವುದಕ್ಕೆ ನೀವು, ಶಾಸ್ತ್ರಗಳ ನಿಮ್ಮ ಜ್ಞಾನವನ್ನು ಕೇವಲ ತೀಕ್ಷ್ಣಗೊಳಿಸಿಕೊಳ್ಳುವ ಅಗತ್ಯವಿದೆ.

ತಾವು ಹೇಗೆ ಕ್ರೈಸ್ತರಾದರೆಂಬುದನ್ನು ಅನೇಕರಿಂದ ಹೇಳಿಸುವುದು ಮತ್ತೊಂದು ಉಪಾಯವಾಗಿದೆ. ಅಥವಾ ಹಾಸ್ಯಮಯ ಕಥೆಗಳನ್ನು ಹೇಳುವಂತೆ ಕೆಲವರನ್ನು ಆಮಂತ್ರಿಸುವ ಮೂಲಕ ಒಂದಿಷ್ಟು ಉತ್ಸಾಹ ಮತ್ತು ತಮಾಷೆಯನ್ನು ಸೇರಿಸಿರಿ. ಅನೇಕ ವೇಳೆ ಇವು ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ. ಒಂದು ನೆರವಿಯಲ್ಲಿನ ಆಸಕ್ತಿಕರ ಗುಂಪು ಚರ್ಚೆಗಾಗಿ, ಈ ಪುಸ್ತಕದಲ್ಲಿನ ಕೆಲವು ಅಧ್ಯಾಯಗಳು ಕೂಡ ಒಂದು ಆಧಾರವಾಗಬಲ್ಲವು.

ಮನೋರಂಜನೆಯನ್ನು ಸಮತೂಕದಲ್ಲಿಡಿ!

ಯಾವಾಗಲಾದರೊಮ್ಮೆ ಒಂದು ಸುಸಮಯವನ್ನು ಅನುಭವಿಸುವುದಕ್ಕೆ ಯೇಸು ಕ್ರಿಸ್ತನು ನಿಶ್ಚಯವಾಗಿಯೂ ಒಂದು ಅಪವಾದವಾಗಿರಲಿಲ್ಲ. ಕಾನಾದಲ್ಲಿ ಒಂದು ವಿವಾಹೋತ್ಸವವನ್ನು ಅವನು ಹಾಜರಾದ ಕುರಿತು ಬೈಬಲ್‌ ತಿಳಿಸುತ್ತದೆ. ಅಲ್ಲಿ ಆಹಾರ, ಸಂಗೀತ, ನೃತ್ಯ, ಮತ್ತು ಭಕ್ತಿವೃದ್ಧಿಮಾಡುವ ಸಹವಾಸ ನಿಸ್ಸಂದೇಹವಾಗಿ ತುಂಬಿತುಳುಕಿದವು. ಅದ್ಭುತಕರವಾಗಿ ದ್ರಾಕ್ಷಾಮದ್ಯವನ್ನು ಒದಗಿಸುವ ಮೂಲಕ ಯೇಸು ವಿವಾಹೋತ್ಸವದ ಯಶಸ್ಸಿಗೆ ನೆರವು ನೀಡಿದನು ಸಹ!—ಯೋಹಾನ 2:3-11.

ಆದರೆ ಯೇಸುವಿನ ಜೀವನ ತಡೆರಹಿತ ಗೋಷ್ಠಿಯಾಗಿರಲಿಲ್ಲ. ಜನರಿಗೆ ದೇವರ ಚಿತ್ತವನ್ನು ಕಲಿಸುತ್ತಾ, ತನ್ನ ಹೆಚ್ಚಿನ ಸಮಯವನ್ನು ಅವನು ಆತ್ಮಿಕ ಅಭಿರುಚಿಗಳನ್ನು ಬೆನ್ನಟ್ಟುತ್ತಾ ಕಳೆದನು. ಅವನಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಯೇಸುವಿಗೆ ದೇವರ ಚಿತ್ತದ ಮಾಡುವಿಕೆಯು, ಯಾವುದೊ ತಾತ್ಕಾಲಿಕ ವಿನೋದವು ತರಸಾಧ್ಯವಿದ್ದುದಕ್ಕಿಂತಲೂ ಅತಿ ಹೆಚ್ಚಿನ ಬಾಳುವ ಆಹ್ಲಾದವನ್ನು ತಂದಿತು. ಇಂದು, “ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟು” (NW) ಇನ್ನೂ ಇದೆ. (1 ಕೊರಿಂಥ 15:58, ಮತ್ತಾಯ 24:14) ಆದರೆ ಆಗಾಗ ನಿಮಗೆ ಒಂದಿಷ್ಟು ಮನೋರಂಜನೆಯ ಅಗತ್ಯ ಅನಿಸುವಾಗ, ಅದನ್ನು ಸಮತೂಕವುಳ್ಳ, ಹಿತಕರವಾದ ವಿಧದಲ್ಲಿ ಆನಂದಿಸಿರಿ. ಒಬ್ಬ ಬರಹಗಾರನು ಅದನ್ನು ವ್ಯಕ್ತಪಡಿಸಿದಂತೆ: “ಜೀವನವು ಯಾವಾಗಲೂ ಕಾರ್ಯಾಚರಣೆ ಹಾಗೂ ಉದ್ರೇಕದಿಂದ ಕಿಕ್ಕಿರಿದು ತುಂಬಿರಸಾಧ್ಯವಿಲ್ಲ—ಮತ್ತು ಅದು ಹಾಗಿರುವಲ್ಲಿ ನೀವು ಬಹುಶಃ ಬಳಲಿಹೋಗಿರುವಿರಿ!”

[ಅಧ್ಯಯನ ಪ್ರಶ್ನೆಗಳು]

^ ಆಕೆಯ ನಿಜವಾದ ಹೆಸರಲ್ಲ.

ಚರ್ಚೆಗಾಗಿ ಪ್ರಶ್ನೆಗಳು

◻ ಕೆಲವು ಕ್ರೈಸ್ತ ಯುವ ಜನರು ಲೋಕದ ಯುವ ಜನರನ್ನು ಕಂಡು ಅಸೂಯೆಪಡುವುದೇಕೆ? ನಿಮಗೆ ಆ ರೀತಿ ಎಂದಾದರೂ ಅನಿಸಿದೆಯೊ?

◻ ತಮ್ಮ ನಡತೆಯ ಕುರಿತು ಯಾವ ಎಚ್ಚರಿಕೆಯನ್ನು ದೇವರು ಯುವ ಜನರಿಗೆ ಕೊಡುತ್ತಾನೆ, ಮತ್ತು ಇದು ಮನೋರಂಜನೆಯ ವಿಷಯದಲ್ಲಿ ಅವರು ಮಾಡುವ ಆಯ್ಕೆಯನ್ನು ಹೇಗೆ ಪ್ರಭಾವಿಸಬೇಕು?

◻ ದೇವರ ನಿಯಮಗಳು ಮತ್ತು ಮೂಲತತ್ವಗಳನ್ನು ಉಲ್ಲಂಘಿಸುವ ಯುವ ಜನರನ್ನು ಕಂಡು ಅಸೂಯೆಪಡುವುದು ಮೂರ್ಖತನವೇಕೆ?

◻ (1) ಕುಟುಂಬ ಸದಸ್ಯರೊಂದಿಗೆ, (2) ಒಬ್ಬಂಟಿಗರಾಗಿ, ಮತ್ತು (3) ಜೊತೆ ಕ್ರೈಸ್ತರೊಂದಿಗೆ ಹಿತಕರವಾದ ಮನೋರಂಜನೆಯನ್ನು ಅನುಭವಿಸುವ ಕೆಲವು ವಿಧಗಳಾವುವು?

◻ ಮನೋರಂಜನೆಯ ವಿಷಯದಲ್ಲಿ ಸಮತೂಕವನ್ನಿಡುವುದರ ಬಗ್ಗೆ ಯೇಸು ಕ್ರಿಸ್ತನು ಒಂದು ಮಾದರಿಯನ್ನಿಟ್ಟದ್ದು ಹೇಗೆ?

[ಪುಟ 297 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಗಟ್ಟಿಯಾದ ಸಂಗೀತ ಮತ್ತು ಮಿನುಗುವ ಬೆಳಕುಗಳಿಂದ ಆಕರ್ಷಿತಳಾಗಿ, ನಾವು ಹಾದುಹೋದಂತೆ ಕಿಟಕಿಗೆ ನನ್ನ ಮೂಗನ್ನು ನಾನು ಒತ್ತಿ, ಅವರು ಅನುಭವಿಸುತ್ತಾ ಇರುವ ವಿನೋದವನ್ನು ಅತ್ಯಾಕಾಂಕ್ಷೆಯಿಂದ ನಾನು ಕಲ್ಪಿಸಿಕೊಳ್ಳುತ್ತಿದ್ದೆ”

[ಪುಟ 302 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಯಾರೊ ಒಬ್ಬರು ಮಾರಿವಾನ ತಂದರು. ಅನಂತರ ಕುಡಿತವೂ ಬಂತು. ಎಲ್ಲವೂ ನಿಯಂತ್ರಣ ತಪ್ಪಿಹೋದದ್ದು ಆಗಲೇ”

[ಪುಟ 299 ರಲ್ಲಿರುವ ಚಿತ್ರಗಳು]

ಬೈಬಲ್‌ ಮೂಲತತ್ವಗಳನ್ನು ಅನುಸರಿಸುವ ಯುವ ಜನರು ನಿಜವಾಗಿಯೂ ಸುಸಮಯಾನುಭವವನ್ನು ಕಳೆದುಕೊಳ್ಳುತ್ತಾರೊ?

[ಪುಟ 300 ರಲ್ಲಿರುವ ಚಿತ್ರಗಳು]

ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವ ಒಂದು ಹಿತಕರವಾದ ವಿಧವು, ಒಂದು ಹವ್ಯಾಸವನ್ನು ಆರಂಭಿಸುವುದಾಗಿದೆ

[ಪುಟ 301 ರಲ್ಲಿರುವ ಚಿತ್ರಗಳು]

ಹಲವಾರು ಚಟುವಟಿಕೆಗಳು ಯೋಜಿಸಲ್ಪಟ್ಟು, ವಿಭಿನ್ನ ವಯೋಮಿತಿಗಳ ಜನರು ಆಮಂತ್ರಿಸಲ್ಪಟ್ಟಲ್ಲಿ ಕ್ರೈಸ್ತ ನೆರವಿಗಳು ಹೆಚ್ಚು ಆನಂದದಾಯಕವಾಗುತ್ತವೆ