ಪ್ರಾಮಾಣಿಕತೆ—ಇದು ನಿಜವಾಗಿಯೂ ಅತ್ಯುತ್ತಮವಾದ ಧೋರಣೆಯೊ?
ಅಧ್ಯಾಯ 27
ಪ್ರಾಮಾಣಿಕತೆ—ಇದು ನಿಜವಾಗಿಯೂ ಅತ್ಯುತ್ತಮವಾದ ಧೋರಣೆಯೊ?
ನೀವೆಂದಾದರೂ ಸುಳ್ಳಾಡುವ ಶೋಧನೆಗೊಳಗಾಗಿದ್ದೀರೊ? ತಾನು ತನ್ನ ಕೊಠಡಿಯನ್ನು ಸ್ವಚ್ಛಗೊಳಿಸಿದ್ದೇನೆಂದು ಡಾನಲ್ಡ್ ತನ್ನ ತಾಯಿಗೆ ಹೇಳಿದನು. ವಾಸ್ತವದಲ್ಲಿ, ಅವನು ಪ್ರತಿಯೊಂದು ವಸ್ತುವನ್ನೂ ಮಂಚದ ಕೆಳಗೆ ಎಸೆದಿದ್ದನು. ತನ್ನ ಹೆತ್ತವರ ಕಣ್ಣಿಗೆ ಮಣ್ಣೆರಚುವ ಪ್ರಯತ್ನದಲ್ಲಿ, ರಿಚರ್ಡನು ಅದಕ್ಕೆ ಸಮನಾದ ಅನುಚಿತ ಪ್ರಯತ್ನವನ್ನು ಮಾಡಿದನು. ತಾನು ಅನುತ್ತೀರ್ಣ ದರ್ಜೆಯನ್ನು ಪಡೆದುಕೊಂಡದ್ದು, ಅಭ್ಯಾಸಮಾಡಿರದ ಕಾರಣದಿಂದಲ್ಲ, ಬದಲಾಗಿ ತಾನು ‘ತನ್ನ ಅಧ್ಯಾಪಕನೊಂದಿಗೆ ಹೊಂದಿಕೊಂಡು ಹೋಗದಿದ್ದ’ ಕಾರಣದಿಂದಲೇ ಎಂದು ಅವನು ಅವರಿಗೆ ಹೇಳಿದನು.
ಸಾಮಾನ್ಯವಾಗಿ ಹೆತ್ತವರು ಹಾಗೂ ಇತರ ವಯಸ್ಕರು ಅಂತಹ ಸ್ಪಷ್ಟವಾದ ಹುಡುಗಾಟದ ನಿಜ ರೂಪವನ್ನು ಕಂಡುಹಿಡಿಯುತ್ತಾರೆ. ಆದರೂ, ಅದು ಅನುಕೂಲಕರವಾಗಿ ಕಂಡುಬರುವಾಗ, ಕಡಿಮೆಪಕ್ಷ ಸುಳ್ಳಾಡಲು, ಸತ್ಯವನ್ನು ತಿರುಚಲು ಅಥವಾ ನಿರ್ದಾಕ್ಷಿಣ್ಯವಾಗಿ ಮೋಸಮಾಡಲು ಪ್ರಯತ್ನಿಸುತ್ತಿರುವುದರಿಂದ ಅದು ಅನೇಕ ಯುವ ಜನರನ್ನು ತಡೆಯುವುದಿಲ್ಲ. ಒಂದು ಕಾರಣವೇನಂದರೆ, ಹೆತ್ತವರು ಯಾವಾಗಲೂ ಬಿಕ್ಕಟ್ಟಿಗೆ ಶಾಂತಚಿತ್ತರಾಗಿ ಪ್ರತಿಕ್ರಿಯಿಸುವುದಿಲ್ಲ. ಮತ್ತು ನೀವು ಬರಬೇಕಾಗಿದ್ದುದಕ್ಕಿಂತಲೂ ಎರಡು ತಾಸುಗಳಷ್ಟು ತಡವಾಗಿ ಬರುವಾಗ, ನಿಮ್ಮ ಹೆತ್ತವರಿಗೆ ಕಿರಿಕಿರಿಯನ್ನುಂಟುಮಾಡುವ ಸತ್ಯವನ್ನು—ನೀವು ಸಮಯದ ಕಡೆಗೆ ಲಕ್ಷ್ಯಕೊಡಲಿಲ್ಲ ಎಂಬುದನ್ನು—ಹೇಳುವುದಕ್ಕೆ ಬದಲಾಗಿ, ಹೆದ್ದಾರಿಯಲ್ಲೊಂದು ದೊಡ್ಡ ಅಪಘಾತವಾಗಿತ್ತೆಂದು ಹೇಳುವ ಶೋಧನೆಗೆ ನೀವು ಒಳಗಾಗಬಹುದು.
ಪ್ರಾಮಾಣಿಕತೆಗೆ ಶಾಲೆಯು ಇನ್ನೊಂದು ಪಂಥಾಹ್ವಾನವನ್ನು ಒಡ್ಡಬಹುದು. ವಿದ್ಯಾರ್ಥಿಗಳು ಅನೇಕವೇಳೆ, ತಮಗೆ ಮಿತಿಮೀರಿದ ಶಾಲಾ ಮನೆಕೆಲಸವಿದೆ ಎಂದು ಭಾವಿಸುತ್ತಾರೆ. ಕೆಲವೊಮ್ಮೆ ತೀವ್ರ ಪೈಪೋಟಿ ಇರುತ್ತದೆ. ಅಷ್ಟೇಕೆ, ಅಮೆರಿಕದಲ್ಲಿ, ಎಲ್ಲಾ ವಿದ್ಯಾರ್ಥಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಮೋಸಮಾಡುತ್ತಾರೆ ಅಥವಾ ಮೋಸಮಾಡಿದ್ದಾರೆ ಎಂದು
ಸಮೀಕ್ಷೆಗಳು ತೋರಿಸುತ್ತವೆ. ಆದರೆ ಒಂದು ಸುಳ್ಳು ಆಕರ್ಷಕವಾಗಿಯೂ, ಮೋಸಮಾಡುವುದು ಸುಲಭವಾಗಿ ತಪ್ಪಿಸಿಕೊಳ್ಳುವ ಮಾರ್ಗವಾಗಿಯೂ ಕಂಡುಬರಬಹುದಾದರೂ, ಅಪ್ರಾಮಾಣಿಕರಾಗಿರುವುದು ನಿಜವಾಗಿಯೂ ಪ್ರಯೋಜನಕರವೋ?ಸುಳ್ಳಾಡುವುದು—ಅದರಿಂದ ಪ್ರಯೋಜನವಿಲ್ಲದಿರುವುದರ ಕಾರಣ
ಶಿಕ್ಷೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸುಳ್ಳಾಡುವುದು, ಆ ಸಮಯದಲ್ಲಿ ಅನುಕೂಲಕರವಾಗಿ ಕಾಣಬಹುದು. ಆದರೆ ಬೈಬಲು ಹೀಗೆ ಎಚ್ಚರಿಸುತ್ತದೆ: “ಸುಳ್ಳಾಡುವವನು ತಪ್ಪಿಸಿಕೊಳ್ಳನು.” (ಜ್ಞಾನೋಕ್ತಿ 19:5) ಹೇಗಾದರೂ ಆ ಸುಳ್ಳು ಬಯಲಾಗಿ, ಶಿಕ್ಷೆಯು ವಿಧಿಸಲ್ಪಡುವ ಸಂಭವನೀಯತೆಯು ಹೆಚ್ಚಾಗಿರುವುದು. ಆಗ ನಿಮ್ಮ ಮೊದಲ ಪಾಪದ ಕಾರಣದಿಂದಾಗಿ ಮಾತ್ರವಲ್ಲ, ನೀವು ಅವರಿಗೆ ಸುಳ್ಳಾಡಿದ್ದದರಿಂದಲೂ ನಿಮ್ಮ ಹೆತ್ತವರು ಕೋಪಗೊಳ್ಳುವರು!
ಶಾಲೆಯಲ್ಲಿ ಮೋಸಮಾಡುವುದರ ಕುರಿತಾಗಿ ಏನು? ಕ್ಯಾಂಪಸ್ ಜುಡಿಷಿಯಲ್ ಕಾರ್ಯಕ್ರಮಗಳ ನಿರ್ದೇಶಕನೊಬ್ಬನು ಹೇಳುವುದು: “ಶೈಕ್ಷಣಿಕ ಅಪ್ರಾಮಾಣಿಕತೆಯ ಕೃತ್ಯವನ್ನು ಗೈಯುವ ಯಾವನೇ ವಿದ್ಯಾರ್ಥಿಯು, ಭವಿಷ್ಯತ್ತಿನ ಶಿಕ್ಷಣ ಸಂಬಂಧವಾದ ಹಾಗೂ ಉದ್ಯೋಗದ ಅವಕಾಶಗಳನ್ನು ಹಾಳುಮಾಡಿಕೊಳ್ಳುವ ಗಂಭೀರ ಗಂಡಾಂತರಕ್ಕೆ ಈಡಾಗುತ್ತಾನೆ.”
ಅನೇಕರು ತಾವು ಸಿಕ್ಕಿಬೀಳುವುದಿಲ್ಲವೆಂದು ನೆನಸಬಹುದು ನಿಜ. ಮೋಸಮಾಡುವುದು ಆ ಉತ್ತೀರ್ಣ ದರ್ಜೆಯನ್ನು ನಿಮಗೆ ಸುಗಮವಾಗಿ ನೀಡಬಹುದಾದರೂ, ದೀರ್ಘಾವಧಿಯ
ಪರಿಣಾಮಗಳೇನು? ಈಜುವಿಕೆಯ ತರಗತಿಯಲ್ಲಿ, ಮೋಸಮಾಡಿ ತಪ್ಪಿಸಿಕೊಳ್ಳುವುದು ಮೂರ್ಖತನವೆಂದು ನೀವು ಒಪ್ಪುತ್ತೀರಿ ಎಂಬುದು ನಿಸ್ಸಂಶಯ. ಎಷ್ಟಾದರೂ ಬೇರೆ ಎಲ್ಲರೂ ನೀರಿನಲ್ಲಿ ಮಜಾಮಾಡುತ್ತಿರುವಾಗ, ನೆಲದ ಮೇಲೇ ನಿಂತಿರಲು ಯಾರು ತಾನೇ ಬಯಸುತ್ತಾರೆ! ಮತ್ತು ನೀವು ಕೊಳವೊಂದಕ್ಕೆ ನೂಕಲ್ಪಟ್ಟಾಗ, ನಿಮ್ಮ ಮೋಸದಾಯಕ ದುರಭ್ಯಾಸಗಳು ನಿಮ್ಮನ್ನು ಮುಳುಗುವಂತೆ ಮಾಡಸಾಧ್ಯವಿದೆ!ಆದರೆ ಗಣಿತ ಅಥವಾ ಓದುವಿಕೆಯ ಕುರಿತಾಗಿ ಮಾಡುವ ಮೋಸದ ವಿಷಯದಲ್ಲೇನು? ನಿಜ, ಆರಂಭದಲ್ಲಿ ಅದರ ಫಲಿತಾಂಶಗಳು ನಾಟಕೀಯವಾಗಿರಲಿಕ್ಕಿಲ್ಲ. ಆದರೂ, ನೀವು ಮೂಲಭೂತ ಶೈಕ್ಷಣಿಕ ಕೌಶಲಗಳನ್ನು ಬೆಳೆಸಿಕೊಂಡಿರುವುದಿಲ್ಲವಾದರೆ, ನೀವು ನಿಮ್ಮನ್ನು ಉದ್ಯೋಗ ಮಾರುಕಟ್ಟೆಯಲ್ಲಿ “ಮುಳುಗಿಹೋಗುತ್ತಿರು”ವವರಾಗಿ ಕಂಡುಕೊಳ್ಳಬಹುದು! ಹಾಗೂ ಮೋಸದಿಂದ ಗಳಿಸಿದ ಒಂದು ಡಿಪ್ಲೊಮಾ, ಜೀವ ಸಂರಕ್ಷಕವಾಗಿ ಪರಿಣಮಿಸದು. ಬೈಬಲು ಹೇಳುವುದು, “ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ ನಾಶಕರ.” (ಜ್ಞಾನೋಕ್ತಿ 21:6) ಸುಳ್ಳೊಂದು ತರಬಹುದಾದ ಯಾವುದೇ ಪ್ರಯೋಜನಗಳು, ಹಬೆಯಂತೆ ಅಲ್ಪಕಾಲ ಬಾಳುವಂಥವುಗಳಾಗಿವೆ. ಸುಳ್ಳಾಡುವುದು ಅಥವಾ ಶಾಲಾ ಜೀವಿತದುದ್ದಕ್ಕೂ ಮೋಸಮಾಡುವವರಾಗಿ ತೋರ್ಪಡಿಸಿಕೊಳ್ಳುವುದಕ್ಕೆ ಬದಲಾಗಿ, ನೀವು ಹುರುಪಿನಿಂದ ಸಜ್ಜಾಗಿ, ಅಭ್ಯಾಸಿಸುವುದು ಎಷ್ಟು ಹೆಚ್ಚು ಉತ್ತಮವಾದದ್ದಾಗಿರುವುದು! “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಎಂದು ಜ್ಞಾನೋಕ್ತಿ 21:5 ಹೇಳುತ್ತದೆ.
ಸುಳ್ಳಾಡುವುದು ಮತ್ತು ನಿಮ್ಮ ಮನಸ್ಸಾಕ್ಷಿ
ಮಿಷೆಲ್ ಎಂಬ ಹೆಸರಿನ ಹುಡುಗಿಯೊಬ್ಬಳು, ಬಹಳ ಸಮಯದಿಂದಲೂ ಇಟ್ಟುಕೊಂಡಿದ್ದ ಒಂದು ನಾಜೂಕಾದ ವಸ್ತುವನ್ನು ಮುರಿದುದಕ್ಕಾಗಿ ತನ್ನ ತಮ್ಮನ ಮೇಲೆ ಸುಳ್ಳಾಗಿ ಆರೋಪ ಹೊರಿಸಿದಳು. ಆದರೆ ತದನಂತರ ತನ್ನ ಹೆತ್ತವರಿಗೆ ತನ್ನ ಸುಳ್ಳನ್ನು ನಿವೇದಿಸಿಕೊಳ್ಳುವಂತೆ ಅವಳು ಒತ್ತಾಯಿಸಲ್ಪಟ್ಟಳು. “ಬಹುತೇಕ ಸಮಯ ನನಗೆ ನಿಜವಾಗಿಯೂ ಕೆಟ್ಟ ಅನಿಸಿಕೆಯಾಯಿತು” ರೋಮಾಪುರ 2:14, 15) ಮಿಷೆಲಳ ಮನಸ್ಸಾಕ್ಷಿಯು ಅವಳನ್ನು ದೋಷಿಭಾವಗಳಿಂದ ಪೀಡಿಸಿತು.
ಎಂದು ಮಿಷೆಲ್ ವಿವರಿಸುತ್ತಾಳೆ. “ನನ್ನ ಹೆತ್ತವರು ನನ್ನಲ್ಲಿ ಭರವಸೆಯಿಟ್ಟಿದ್ದರು. ಮತ್ತು ನಾನು ಅವರನ್ನು ಕಡೆಗಣಿಸಿದೆ.” ಇದು, ದೇವರು ಹೇಗೆ ಮಾನವಕುಲದೊಳಗೆ ಮನಸ್ಸಾಕ್ಷಿಯ ಸ್ವಾಭಾವಿಕ ಶಕ್ತಿಯನ್ನು ಇಟ್ಟಿದ್ದಾನೆ ಎಂಬುದನ್ನು ಚೆನ್ನಾಗಿ ದೃಷ್ಟಾಂತಿಸುತ್ತದೆ. (ನಿಶ್ಚಯವಾಗಿಯೂ, ವ್ಯಕ್ತಿಯೊಬ್ಬನು ತನ್ನ ಮನಸ್ಸಾಕ್ಷಿಯನ್ನು ಅಲಕ್ಷಿಸಲು ಆರಿಸಿಕೊಳ್ಳಸಾಧ್ಯವಿದೆ. ಆದರೆ ಅವನು ಸುಳ್ಳಾಡುವುದನ್ನು ಹೆಚ್ಚಾಗಿ ರೂಢಿಸಿಕೊಂಡಂತೆ, ಅವನು ತಪ್ಪು ಕಾರ್ಯಗಳಿಗೆ ಹೆಚ್ಚು ಅಸಂವೇದನಾಶೀಲನಾಗಿ ಪರಿಣಮಿಸುತ್ತಾನೆ. ಅವನು ‘ಸ್ವಂತ ಮನಸ್ಸಾಕ್ಷಿಯಲ್ಲಿ ಅಪರಾಧಿಯೆಂಬ ಬರೆಯುಳ್ಳವನಾಗಿ’ ಪರಿಣಮಿಸುತ್ತಾನೆ. (1 ತಿಮೊಥೆಯ 4:2) ನಿಜವಾಗಿಯೂ ಒಂದು ಜಡವಾದ ಮನಸ್ಸಾಕ್ಷಿಯನ್ನು ಹೊಂದಿರಲು ನೀವು ಬಯಸುತ್ತೀರೊ?
ಸುಳ್ಳಾಡುವುದರ ಕುರಿತಾದ ದೇವರ ನೋಟ
“ಯೆಹೋವನು ದ್ವೇಷಿಸುವ” (NW) ವಿಷಯಗಳಲ್ಲಿ ಒಂದು, “ಸುಳ್ಳಿನ ನಾಲಿಗೆ”ಯಾಗಿತ್ತು ಮತ್ತು ಆಗಿದೆ. (ಜ್ಞಾನೋಕ್ತಿ 6:16, 17) ಎಷ್ಟೆಂದರೂ, ಪಿಶಾಚನಾದ ಸೈತಾನನು ತಾನೇ “ಸುಳ್ಳಿಗೆ ಮೂಲಪುರುಷ”ನಾಗಿದ್ದಾನೆ. (ಯೋಹಾನ 8:44) ಸುಳ್ಳುಗಳು ಅಥವಾ ಸದುದ್ದೇಶದಿಂದ ಹೇಳಿದ ಕ್ಷಮಾರ್ಹ ಸುಳ್ಳುಗಳ ನಡುವೆ ಬೈಬಲು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. “ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವದಿಲ್ಲ.”—1 ಯೋಹಾನ 2:21.
ಹೀಗೆ ದೇವರ ಸ್ನೇಹಿತರಾಗಿರಲು ಬಯಸುವ ಯಾರಿಗೇ ಆಗಲಿ, ಪ್ರಾಮಾಣಿಕತೆಯು ಧೋರಣೆಯಾಗಿರಬೇಕು. 15ನೆಯ ಕೀರ್ತನೆಯು ಕೇಳುವುದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” (1ನೆಯ ವಚನ) ಮುಂದಿನ ನಾಲ್ಕು ವಚನಗಳಲ್ಲಿ ಕೊಡಲ್ಪಟ್ಟಿರುವ ಉತ್ತರವನ್ನು ನಾವು ಪರಿಗಣಿಸೋಣ:
“ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು.” (2ನೆಯ ವಚನ) ಅದು ಒಬ್ಬ ಅಂಗಡಿಕಳ್ಳನಂತೆ ಅಥವಾ ವಂಚಕನಂತೆ ಕೇಳಿಬರುತ್ತದೋ? ತನ್ನ ಹೆತ್ತವರೊಂದಿಗೆ ಸುಳ್ಳಾಡುವ ಯಾರಾದರೊಬ್ಬನು ಅಥವಾ ತಾನು ಎಂಥವನಲ್ಲವೊ ಅಂಥವನಾಗಿ ತೋರ್ಪಡಿಸಿಕೊಳ್ಳುವವನು ಅವನೊ? ಇಲ್ಲವೇ ಇಲ್ಲ! ಆದುದರಿಂದ ನೀವು ದೇವರ ಸ್ನೇಹಿತರಾಗಿರಲು ಬಯಸುವುದಾದರೆ, ನೀವು ಪ್ರಾಮಾಣಿಕರಾಗಿರುವ ಅಗತ್ಯವಿದೆ. ಕೇವಲ ನಿಮ್ಮ ಕ್ರಿಯೆಗಳಲ್ಲಿ ಮಾತ್ರವಲ್ಲ, ಬದಲಾಗಿ ನಿಮ್ಮ ಹೃದಯದಲ್ಲಿ ಸಹ ಪ್ರಾಮಾಣಿಕರಾಗಿರಬೇಕು.
“ಅವನು ಚಾಡಿಯನ್ನು ಹೇಳದವನೂ ಮತ್ತೊಬ್ಬರಿಗೆ ಅನ್ಯಾಯಮಾಡದವನೂ ಯಾರನ್ನೂ ನಿಂದಿಸದವನೂ ಆಗಿರಬೇಕು.” (3ನೆಯ ವಚನ) ಬೇರೆ ಯಾರಾದರೊಬ್ಬರ ಕುರಿತು ನಿರ್ದಾಕ್ಷಿಣ್ಯವಾದ, ಮನನೋಯಿಸುವ ಹೇಳಿಕೆಗಳನ್ನು ಮಾಡುತ್ತಿರುವ ಯುವ ಜನರ ಒಂದು ಗುಂಪಿನೊಂದಿಗೆ ಸೇರಿಕೊಳ್ಳುವಂತೆ ನೀವೆಂದಾದರೂ ನಿಮ್ಮನ್ನು
ಅನುಮತಿಸಿದ್ದೀರೊ? ಅಂತಹ ಮಾತುಕತೆಯಲ್ಲಿ ಭಾಗವಹಿಸುವುದನ್ನು ನಿರಾಕರಿಸಲಿಕ್ಕಾಗಿ ಸಂಯಮಶಕ್ತಿಯ ಬಲವನ್ನು ಬೆಳೆಸಿಕೊಳ್ಳಿರಿ!“ಅವನು ಭ್ರಷ್ಟರನ್ನು ಜರಿದುಬಿಟ್ಟವನೂ ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.” (4ನೆಯ ವಚನ) ಸುಳ್ಳಾಡುವ, ಮೋಸಮಾಡುವ, ಅಥವಾ ಅನೈತಿಕ ಸಾಹಸಗಳ ಕುರಿತು ಜಂಬಕೊಚ್ಚಿಕೊಳ್ಳುವ ಯಾವ ಯುವ ಜನರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಸಹ ಅವೇ ವಿಷಯಗಳನ್ನು ಮಾಡುವಂತೆ ಅವರು ನಿರೀಕ್ಷಿಸುವರು. ಬಾಬಿ ಎಂಬ ಹೆಸರಿನ ಯೌವನಸ್ಥನು ಗಮನಿಸಿದಂತೆ: “ನೀವು ಯಾರೊಂದಿಗೆ ಸುಳ್ಳಾಡುತ್ತೀರೋ ಅದೇ ಸ್ನೇಹಿತನು ನಿಮ್ಮನ್ನು ತೊಂದರೆಯಲ್ಲಿ ಸಿಕ್ಕಿಸುವನು. ನೀವು ಭರವಸೆಯಿಡಬಲ್ಲ ಸ್ನೇಹಿತನು ಅವನಾಗಿರುವುದಿಲ್ಲ.” ಪ್ರಾಮಾಣಿಕತೆಯ ಮಟ್ಟಗಳನ್ನು ಗೌರವಿಸುವ ಸ್ನೇಹಿತರನ್ನು ಹುಡುಕಿರಿ.—ಕೀರ್ತನೆ 26:4ನ್ನು ಹೋಲಿಸಿರಿ.
ತಮ್ಮ ಮಾತನ್ನು ಪರಿಪಾಲಿಸುವವರನ್ನು ಯೆಹೋವನು ಗಣ್ಯಮಾಡುತ್ತಾನೆ, ಅಥವಾ “ಸನ್ಮಾನಿಸು”ತ್ತಾನೆ ಎಂಬುದನ್ನು ನೀವು ಗಮನಿಸಿದಿರೊ? ನೀವು ಈ ಶನಿವಾರದಂದು ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತೇನೆಂದು ಪ್ರಾಯಶಃ ಮಾತುಕೊಟ್ಟಿರಬಹುದು. ಆದರೆ ಈಗ ಆ ದಿನ ಮಧ್ಯಾಹ್ನದಂದು ಚೆಂಡಾಟವನ್ನು ಆಡಲು ನಿಮಗೆ ಕರೆಬಂದಿದೆ. ಮನೆಗೆಲಸವನ್ನು ನಿಮ್ಮ ಹೆತ್ತವರೇ ಮಾಡುವಂತೆ ಬಿಟ್ಟು, ನೀವು ನಿಮ್ಮ ಮಾತನ್ನು ಹಗುರವಾಗಿ ಪರಿಗಣಿಸಿ, ನಿಮ್ಮ ಸ್ನೇಹಿತರೊಂದಿಗೆ ಹೋಗುವಿರೊ, ಅಥವಾ ನಿಮ್ಮ ಮಾತನ್ನು ಪರಿಪಾಲಿಸುವಿರೊ?
“ಅವನು ಸಾಲಕ್ಕೆ ಬಡ್ಡಿಕೇಳದವನೂ ನಿರಪರಾಧಿಯ ಕೇಡಿಗಾಗಿ ಲಂಚತೆಗೆದುಕೊಳ್ಳದವನೂ ಆಗಿರಬೇಕು. ಇಂಥವನು ಎಂದಿಗೂ ಕದಲುವದಿಲ್ಲ.” (5ನೆಯ ವಚನ) ಮೋಸಮಾಡುವುದಕ್ಕೆ ಹಾಗೂ ಅಪ್ರಾಮಾಣಿಕತೆಗೆ, ಲೋಭವು ಒಂದು ಪ್ರಮುಖವಾದ ಕಾರಣವಾಗಿರುವುದು ನಿಜವಲ್ಲವೊ? ಕಿರುಪರೀಕ್ಷೆಗಳಲ್ಲಿ ಮೋಸಮಾಡುವ ವಿದ್ಯಾರ್ಥಿಗಳು, ತಾವು ಅಭ್ಯಾಸಮಾಡದಿರುವ ದರ್ಜೆಗಳಿಗಾಗಿ ದುರಾಶೆಪಡುತ್ತಾರೆ. ಲಂಚಗಳನ್ನು ತೆಗೆದುಕೊಳ್ಳುವ ಜನರು, ನ್ಯಾಯಕ್ಕಿಂತಲೂ, ಹಣಕ್ಕೆ ಹೆಚ್ಚು ಬೆಲೆಕೊಡುತ್ತಾರೆ.
ನಿಜ, ತಮ್ಮ ಲಾಭಕ್ಕಾಗಿ ಪ್ರಾಮಾಣಿಕತೆಯ ನಿಯಮಗಳನ್ನು ತಿರುಚಿಹಾಕುವ ರಾಜಕೀಯ ಹಾಗೂ ವಾಣಿಜ್ಯ ಮುಖಂಡರ ಕಡೆಗೆ ಕೆಲವರು ಕೈತೋರಿಸುತ್ತಾರೆ. ಆದರೆ ಅಂತಹ ವ್ಯಕ್ತಿಗಳ ಯಶಸ್ಸು ಎಷ್ಟು ಸುದೃಢವಾದದ್ದಾಗಿದೆ? ಕೀರ್ತನೆ 37:2 ಉತ್ತರಿಸುವುದು: “ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.” ಬೇರೆಯವರಿಂದ ಹಿಡಿಯಲ್ಪಟ್ಟು, ಅವಮಾನಕ್ಕೆ ಒಳಗಾಗದಿರುವುದಾದರೂ, ಅಂತಿಮವಾಗಿ ಅವರು ಯೆಹೋವ ದೇವರ ನ್ಯಾಯತೀರ್ಪನ್ನು ಎದುರಿಸುತ್ತಾರೆ. ಆದರೂ, ದೇವರ ಸ್ನೇಹಿತರು “ಎಂದಿಗೂ ಕದಲುವುದಿಲ್ಲ.” ಅವರ ನಿತ್ಯವಾದ ಭವಿಷ್ಯತ್ತು ಅವರಿಗೆ ನಿಶ್ಚಿತವಾಗಿದೆ.
“ಪ್ರಾಮಾಣಿಕವಾದ ಮನಸ್ಸಾಕ್ಷಿ”ಯನ್ನು ಬೆಳೆಸಿಕೊಳ್ಳುವುದು
ಹಾಗಾದರೆ, ಯಾವುದೇ ರೀತಿಯ ಸುಳ್ಳಾಡುವಿಕೆಯನ್ನು ತೊರೆಯಲು ಬಲವಾದ ಕಾರಣವಿರುವುದಿಲ್ಲವೊ? ಸ್ವತಃ ತನ್ನ ಕುರಿತು ಹಾಗೂ ತನ್ನ ಸಂಗಡಿಗರ ಕುರಿತು ಅಪೊಸ್ತಲ ಪೌಲನು ಹೇಳಿದ್ದು: “ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿ [“ಪ್ರಾಮಾಣಿಕವಾದ ಮನಸ್ಸಾಕ್ಷಿ,” NW] ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.” (ಇಬ್ರಿಯ 13:18) ತದ್ರೀತಿಯಲ್ಲಿ ನಿಮ್ಮ ಮನಸ್ಸಾಕ್ಷಿಯು ಅಸತ್ಯಕ್ಕೆ ಸಂವೇದನಾತ್ಮಕವಾಗಿದೆಯೊ? ಇಲ್ಲದಿರುವಲ್ಲಿ, ಬೈಬಲನ್ನು ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಂತಹ ಬೈಬಲ್ ಆಧಾರಿತವಾದ ಸಾಹಿತ್ಯವನ್ನು ಅಭ್ಯಾಸಿಸುವ ಮೂಲಕ, ಅದನ್ನು ತರಬೇತುಗೊಳಿಸಿರಿ.
ಯುವ ಬಾಬಿ ಹಾಗೆ ಮಾಡಿದ್ದಾನೆ. ಮತ್ತು ಒಳ್ಳೆಯ ಫಲಿತಾಂಶಗಳು ದೊರಕಿವೆ. ಸುಳ್ಳಿನ ಕಂತೆಯಿಂದ ಸಮಸ್ಯೆಗಳನ್ನು ಮುಚ್ಚಬಾರದೆಂಬುದನ್ನು ಅವನು ಕಲಿತುಕೊಂಡಿದ್ದಾನೆ. ತನ್ನ ಹೆತ್ತವರನ್ನು ಸಮೀಪಿಸುವಂತೆ, ಮತ್ತು ವಿಷಯಗಳನ್ನು ಪ್ರಾಮಾಣಿಕವಾಗಿ ಚರ್ಚಿಸುವಂತೆ ಅವನ ಮನಸ್ಸಾಕ್ಷಿಯು ಅವನನ್ನು ಚುಚ್ಚುತ್ತದೆ. ಕೆಲವೊಮ್ಮೆ ಇದು ಅವನು ಶಿಸ್ತನ್ನು ಪಡೆದುಕೊಳ್ಳುವಂತೆ ಮಾಡಿದೆ. ಆದರೂ, ಪ್ರಾಮಾಣಿಕನಾಗಿದ್ದುದಕ್ಕಾಗಿ ತನಗೆ ‘ಆಂತರ್ಯದಲ್ಲಿ ಹೆಚ್ಚು ಒಳ್ಳೆಯ ಅನಿಸಿಕೆಯಾಗುತ್ತದೆ’ ಎಂದು ಅವನು ಒಪ್ಪಿಕೊಳ್ಳುತ್ತಾನೆ.
ಸತ್ಯವನ್ನಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಸತ್ಯವನ್ನು ಹೇಳುವ ನಿರ್ಧಾರವನ್ನು ಮಾಡುವ ಒಬ್ಬನು, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುತ್ತಾನೆ. ತನ್ನ ನಿಜ ಸ್ನೇಹಿತರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳುತ್ತಾನೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ದೇವರ ಗುಡಾರದಲ್ಲಿ “ಇಳುಕೊಂಡಿರು”ವವನಾಗಿರುವ ಸುಯೋಗವು ಅವನಿಗಿರುತ್ತದೆ! ಹಾಗಾದರೆ, ಪ್ರಾಮಾಣಿಕತೆಯು ಅತ್ಯುತ್ತಮವಾದ ಧೋರಣೆಯು ಮಾತ್ರವೇ ಅಲ್ಲ, ಅದು ಎಲ್ಲಾ ಕ್ರೈಸ್ತರಿಗಾಗಿರುವ ಸೂಕ್ತವಾದ ಧೋರಣೆಯಾಗಿದೆ.
ಚರ್ಚೆಗಾಗಿ ಪ್ರಶ್ನೆಗಳು
◻ ಸುಳ್ಳಾಡುವ ಶೋಧನೆಗೊಳಗಾಗುವಂತೆ ಕಂಡುಬರಬಹುದಾದ ಕೆಲವು ಸನ್ನಿವೇಶಗಳು ಯಾವುವು?
◻ ಸುಳ್ಳಾಡುವುದು ಅಥವಾ ಮೋಸಮಾಡುವುದು ಏಕೆ ಪ್ರಯೋಜನಕರವಲ್ಲ? ನೀವು ಇದನ್ನು ವೈಯಕ್ತಿಕ ಅವಲೋಕನ ಅಥವಾ ಅನುಭವದಿಂದ ದೃಷ್ಟಾಂತಿಸಬಲ್ಲಿರೊ?
◻ ಸುಳ್ಳುಗಾರನೊಬ್ಬನು ತನ್ನ ಮನಸ್ಸಾಕ್ಷಿಯನ್ನು ಹೇಗೆ ಹಾಳುಮಾಡಿಕೊಳ್ಳುತ್ತಾನೆ?
◻ 15ನೆಯ ಕೀರ್ತನೆಯನ್ನು ಓದಿರಿ. ಆ ವಚನಗಳು ಪ್ರಾಮಾಣಿಕತೆಯ ವಾದಾಂಶಕ್ಕೆ ಹೇಗೆ ಅನ್ವಯವಾಗುತ್ತವೆ?
◻ ಯುವ ವ್ಯಕ್ತಿಗಳು ಪ್ರಾಮಾಣಿಕವಾದ ಮನಸ್ಸಾಕ್ಷಿಯನ್ನು ಹೇಗೆ ವಿಕಸಿಸಿಕೊಳ್ಳಬಲ್ಲರು?
[ಪುಟ 212 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಶೈಕ್ಷಣಿಕ ಅಪ್ರಾಮಾಣಿಕತೆಯ ಕೃತ್ಯವನ್ನು ಗೈಯುವ ಯಾವನೇ ವಿದ್ಯಾರ್ಥಿಯು, ಭವಿಷ್ಯತ್ತಿನ ಶಿಕ್ಷಣ ಸಂಬಂಧವಾದ ಹಾಗೂ ಉದ್ಯೋಗದ ಅವಕಾಶಗಳನ್ನು ಹಾಳುಮಾಡಿಕೊಳ್ಳುವ ಗಂಭೀರ ಗಂಡಾಂತರಕ್ಕೆ ಈಡಾಗುತ್ತಾನೆ’
[ಪುಟ 216 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸುಳ್ಳುಗಳು ಅಥವಾ ಸದುದ್ದೇಶದಿಂದ ಹೇಳಿದ ಕ್ಷಮಾರ್ಹ ಸುಳ್ಳುಗಳ ನಡುವೆ ಬೈಬಲು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ
[ಪುಟ 214 ರಲ್ಲಿರುವ ಚಿತ್ರಗಳು]
ಅವಿಧೇಯತೆಯನ್ನು ವಿವರಿಸಲಿಕ್ಕಾಗಿ ಕೊಡಲ್ಪಡುವ ಕುಂಟು ನೆಪಗಳ ನಿಜ ರೂಪವನ್ನು ಹೆತ್ತವರು ಸಾಮಾನ್ಯವಾಗಿ ಕಂಡುಹಿಡಿಯುತ್ತಾರೆ