ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಷ್ಟಿಮೈಥುನ—ಅದೆಷ್ಟು ಗಂಭೀರವಾಗಿದೆ?

ಮುಷ್ಟಿಮೈಥುನ—ಅದೆಷ್ಟು ಗಂಭೀರವಾಗಿದೆ?

ಅಧ್ಯಾಯ 25

ಮುಷ್ಟಿಮೈಥುನ—ಅದೆಷ್ಟು ಗಂಭೀರವಾಗಿದೆ?

“ಮುಷ್ಟಿಮೈಥುನವು ದೇವರ ದೃಷ್ಟಿಯಲ್ಲಿ ತಪ್ಪಾಗಿದೆಯೇ ಎಂದು ನಾನು ಚಿಂತಾಕ್ರಾಂತಳಾಗಿದ್ದೇನೆ. ಅದು ಭವಿಷ್ಯತ್ತಿನಲ್ಲಿ ನನ್ನ ಶಾರೀರಿಕ ಮತ್ತು/ಅಥವಾ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೊ? ಮತ್ತು ನಾನೆಂದಾದರೂ ವಿವಾಹವಾದಲ್ಲಿ ಅದರಿಂದ ತೊಂದರೆಯಾಗುವುದೊ?”—ಹದಿನೈದು ವರ್ಷ ಪ್ರಾಯದ ಮೆಲಿಸ.

ಈ ಆಲೋಚನೆಗಳು ಅನೇಕ ಯುವ ಜನರನ್ನು ಪೀಡಿಸಿವೆ. ಕಾರಣವೇನು? ಮುಷ್ಟಿಮೈಥುನವು ವ್ಯಾಪಕವಾಗಿದೆ. ವರದಿಗನುಸಾರ, ಪುರುಷರಲ್ಲಿ ಸುಮಾರು 97 ಪ್ರತಿಶತ ಮಂದಿ ಮತ್ತು ಸ್ತ್ರೀಯರಲ್ಲಿ 90ಕ್ಕಿಂತಲೂ ಹೆಚ್ಚು ಪ್ರತಿಶತ ಮಂದಿ, 21ರ ಪ್ರಾಯದಷ್ಟಕ್ಕೆ ಮುಷ್ಟಿಮೈಥುನ ಮಾಡಿದ್ದಾರೆ. ಇದಲ್ಲದೆ, ಈ ದುರಭ್ಯಾಸವು, ವಾರ್ಟ್‌ (ಚರ್ಮದ ಮೇಲಿನ ಗಂಟು)ಗಳು ಮತ್ತು ಕೆಂಪು ಕಣ್‌ರೆಪ್ಪೆಗಳಿಂದ ಹಿಡಿದು, ಮೂರ್ಛೆರೋಗ ಮತ್ತು ಮಾನಸಿಕ ಅನಾರೋಗ್ಯದ ವರೆಗಿನ ಎಲ್ಲಾ ವಿಧದ ಕೆಡುಕುಗಳಿಗೆ ಕಾರಣವೆಂದು ದೋಷಾರೋಪಣೆಗೊಳಗಾಗಿದೆ.

ಇಪ್ಪತ್ತನೆಯ ಶತಮಾನದ ವೈದ್ಯಕೀಯ ಸಂಶೋಧಕರು ಈಗ ಅಂತಹ ಗಾಬರಿಹುಟ್ಟಿಸುವ ಪ್ರತಿಪಾದನೆಗಳನ್ನು ಮಾಡುವುದಿಲ್ಲ. ವಾಸ್ತವವಾಗಿ ಇಂದು, ಮುಷ್ಟಿಮೈಥುನದಿಂದ ಯಾವುದೇ ರೀತಿಯ ಶಾರೀರಿಕ ಅನಾರೋಗ್ಯವು ಉಂಟಾಗುವುದಿಲ್ಲವೆಂದು ವೈದ್ಯರು ನಂಬುತ್ತಾರೆ. ಸಂಶೋಧಕರಾದ ವಿಲಿಯಮ್‌ ಮಾಸ್ಟರ್ಸ್‌ ಮತ್ತು ವರ್ಜಿನಿಯ ಜಾನ್ಸನ್‌ ಕೂಡಿಸಿದ್ದೇನಂದರೆ, “ಮುಷ್ಟಿಮೈಥುನವನ್ನು ಅನೇಕಾವರ್ತಿ ಮಾಡುವುದಾದರೂ ಅದು ಮಾನಸಿಕ ಅನಾರೋಗ್ಯಕ್ಕೆ ನಡಿಸುತ್ತದೆಂಬುದಕ್ಕೆ ಯಾವುದೇ ಸ್ಥಾಪಿತ ವೈದ್ಯಕೀಯ ಮಾಹಿತಿ ಇಲ್ಲ.” ಆದರೂ, ಇನ್ನಿತರ ದುಷ್ಪರಿಣಾಮಗಳು ಇವೆ! ಮತ್ತು ಅನೇಕ ಕ್ರೈಸ್ತ ಯುವ ಜನರು, ಈ ದುರಭ್ಯಾಸದ ಕುರಿತು ಚಿಂತೆಯುಳ್ಳವರಾಗಿರುವುದು ಸೂಕ್ತವಾದದ್ದಾಗಿದೆ. “ನಾನು [ಮುಷ್ಟಿಮೈಥುನ]ಕ್ಕೆ ಒಳಗಾದಾಗ, ನಾನು ಯೆಹೋವ ದೇವರನ್ನು ನಿರಾಶೆಗೊಳಿಸುತ್ತಿದ್ದೆನೋ ಎಂಬಂತಹ ಅನಿಸಿಕೆ ನನಗಾಗುತ್ತಿತ್ತು” ಎಂದು ಯುವ ವ್ಯಕ್ತಿಯೊಬ್ಬನು ಬರೆದನು. “ಕೆಲವೊಮ್ಮೆ ನಾನು ತುಂಬ ಖಿನ್ನನಾದೆ.”

ಮುಷ್ಟಿಮೈಥುನ ಎಂದರೇನು? ಅದೆಷ್ಟು ಗಂಭೀರವಾಗಿದೆ, ಮತ್ತು ಅಷ್ಟೊಂದು ಯುವ ಜನರು ಅದನ್ನು ನಿಲ್ಲಿಸಿಬಿಡಲು ಕಷ್ಟಕರವಾದ ಒಂದು ಅಭ್ಯಾಸವನ್ನಾಗಿ ಏಕೆ ಕಂಡುಕೊಳ್ಳುತ್ತಾರೆ?

ಯುವ ಜನರು ಸುಲಭಭೇದ್ಯರಾಗಿರುವುದಕ್ಕೆ ಕಾರಣ

ಲೈಂಗಿಕ ಉದ್ರೇಕವನ್ನು ಉಂಟುಮಾಡಲಿಕ್ಕಾಗಿ, ಉದ್ದೇಶಪೂರ್ವಕವಾದ ಸ್ವಪ್ರಚೋದನೆಯೇ ಮುಷ್ಟಿಮೈಥುನವಾಗಿದೆ. ಯೌವನಾವಸ್ಥೆಯಲ್ಲಿ ಲೈಂಗಿಕ ಬಯಕೆಗಳು ಬಹಳ ಪ್ರಬಲವಾಗುತ್ತವೆ. ಸಂತಾನೋತ್ಪತ್ತಿಮಾಡುವ ಅಂಗಾಂಗಗಳನ್ನು ಬಾಧಿಸುವ ಪ್ರಬಲವಾದ ಹಾರ್ಮೋನುಗಳು ಬಿಡುಗಡೆಮಾಡಲ್ಪಡುತ್ತವೆ. ಹೀಗೆ ಈ ಅಂಗಾಂಗಗಳು ಸುಖಾನುಭವದ ಭಾವೋದ್ರೇಕತೆಗಳನ್ನು ಉತ್ಪಾದಿಸಲು ಸಮರ್ಥವಾಗಿವೆ ಎಂಬುದು ಒಬ್ಬ ಯುವ ವ್ಯಕ್ತಿಗೆ ತಿಳಿದುಬರುತ್ತದೆ. ಮತ್ತು ಕೆಲವೊಮ್ಮೆ ಸಂಭೋಗದ ವಿಷಯವಾಗಿ ಆಲೋಚಿಸದಿರುವಾಗಲೂ ಯುವ ವ್ಯಕ್ತಿಗಳು ಲೈಂಗಿಕವಾಗಿ ಉತ್ತೇಜಿತರಾಗಬಹುದು.

ಉದಾಹರಣೆಗಾಗಿ, ವಿವಿಧ ಚಿಂತೆಗಳು, ಭಯಗಳು, ಅಥವಾ ಆಶಾಭಂಗಗಳಿಂದ ಉಂಟಾದ ಉದ್ವೇಗಗಳು, ಹುಡುಗನೊಬ್ಬನ ಸಂವೇದನಾಶೀಲ ನರವ್ಯೂಹವನ್ನು ಬಾಧಿಸಿ, ಲೈಂಗಿಕ ಉದ್ರೇಕವನ್ನು ಉಂಟುಮಾಡಬಲ್ಲವು. ವೀರ್ಯದ ಶೇಖರಣೆಯು, ಅನುಕ್ರಮವಾಗಿ ಅವನು ಲೈಂಗಿಕವಾಗಿ ಉತ್ತೇಜಿತನಾಗಿ ಎಚ್ಚರಗೊಳ್ಳುವಂತೆ ಮಾಡಬಹುದು. ಅಥವಾ ಸಾಮಾನ್ಯವಾಗಿ ಪ್ರಣಯಾತ್ಮಕವಾದ ಒಂದು ಸ್ವಪ್ನದಿಂದ ಜೊತೆಗೂಡಿದ, ರಾತ್ರಿಯ ವಿಸರ್ಜನೆಯನ್ನು ಅದು ಉತ್ಪಾದಿಸಬಹುದು. ತದ್ರೀತಿಯಲ್ಲಿ, ಕೆಲವು ಯುವ ಹುಡುಗಿಯರು ತಮ್ಮನ್ನು ಅನುದ್ದೇಶಪೂರ್ವಕವಾದ ಪ್ರಚೋದಿತ ಸ್ಥಿತಿಯಲ್ಲಿ ಕಂಡುಕೊಳ್ಳಬಹುದು. ಅನೇಕರಿಗೆ ತಮ್ಮ ಋತುಸ್ರಾವದ ಸಮಯಾವಧಿಗೆ ಸ್ವಲ್ಪ ಮೊದಲು ಅಥವಾ ನಂತರ, ಪ್ರಬಲವಾದ ಲೈಂಗಿಕ ಬಯಕೆ ಇರುತ್ತದೆ.

ಆದುದರಿಂದ, ನೀವು ಅಂತಹ ಉದ್ರೇಕವನ್ನು ಅನುಭವಿಸಿರುವುದಾದರೆ, ನಿಮ್ಮಲ್ಲಿ ಯಾವ ದೋಷವೂ ಇಲ್ಲ. ಇದು ಯೌವನಭರಿತ ದೇಹದ ಒಂದು ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಅಂತಹ ಸಂವೇದನೆಗಳು ಬಹಳ ತೀವ್ರವಾಗಿರುವುದಾದರೂ, ಅವು ಮುಷ್ಟಿಮೈಥುನದಂತಹ ಸಂವೇದನೆಗಳೇ ಆಗಿರುವುದಿಲ್ಲ. ಏಕೆಂದರೆ ಅವು ಹೆಚ್ಚಾಗಿ ಅನೈಚ್ಛಿಕವಾಗಿವೆ. ಮತ್ತು ನೀವು ದೊಡ್ಡವರಾಗುತ್ತಾ ಹೋದಂತೆ, ಈ ಹೊಸ ಸಂವೇದನೆಗಳ ತೀವ್ರತೆಯು ತಗ್ಗುತ್ತದೆ.

ಆದರೂ, ಈ ಹೊಸ ಸಂವೇದನೆಗಳ ಕುರಿತಾದ ಕುತೂಹಲ ಹಾಗೂ ಹೊಸತನವು, ಕೆಲವು ಯುವ ಜನರನ್ನು ತಮ್ಮ ಲೈಂಗಿಕ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗಿಸುವಂತೆ ಅಥವಾ ಅವುಗಳೊಂದಿಗೆ ಆಡುವಂತೆ ಮುನ್ನಡಿಸುತ್ತದೆ.

‘ಮಾನಸಿಕ ಇಂಧನ’

ಸ್ವೇಚ್ಛಾಚಾರಿಯಾದ ಒಬ್ಬ ಸ್ತ್ರೀಯನ್ನು ಸಂಧಿಸುವ ಯುವ ಪುರುಷನೊಬ್ಬನ ಕುರಿತಾಗಿ ಬೈಬಲು ವರ್ಣಿಸುತ್ತದೆ. ಅವಳು ಅವನಿಗೆ ಮುದ್ದಿಟ್ಟು, ಹೀಗೆ ಹೇಳುತ್ತಾಳೆ: “ಬಾ, . . . ಕಾಮವಿಲಾಸಗಳಿಂದ ಸಂತೋಷಿಸುವ.” ಆಗ ಏನು ಸಂಭವಿಸುತ್ತದೆ? “ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ . . . ತಟ್ಟನೆ ಅವಳ ಹಿಂದೆ ಹೋಗುತ್ತಾನೆ.” (ಜ್ಞಾನೋಕ್ತಿ 7:7-22) ಈ ಯುವ ವ್ಯಕ್ತಿಯ ಕಾಮೋದ್ರೇಕಗಳು, ಅವನ ಹಾರ್ಮೋನುಗಳು ಕಾರ್ಯನಡಿಸುತ್ತಿದ್ದುದರಿಂದ ಮಾತ್ರವಲ್ಲ, ಅವನು ನೋಡಿದ ಹಾಗೂ ಕೇಳಿಸಿಕೊಂಡ ವಿಷಯಗಳಿಂದಲೂ ಕೆರಳಿಸಲ್ಪಟ್ಟವು.

ಅದೇ ರೀತಿಯಲ್ಲಿ, ಒಬ್ಬ ಯುವ ವ್ಯಕ್ತಿಯು ಒಪ್ಪಿಕೊಳ್ಳುವುದು: ‘ಮುಷ್ಟಿಮೈಥುನದ ನನ್ನ ಇಡೀ ಸಮಸ್ಯೆಯ ಮೂಲವು, ನಾನು ಮನಸ್ಸಿಗೆ ತುಂಬಿಕೊಳ್ಳುತ್ತಿದ್ದ ವಿಷಯವಾಗಿತ್ತು. ಅನೈತಿಕತೆಯನ್ನು ಒಳಗೊಂಡಿದ್ದ ಟಿವಿ ಕಾರ್ಯಕ್ರಮಗಳನ್ನು ನಾನು ನೋಡುತ್ತಿದ್ದೆ. ಮತ್ತು ಕೆಲವು ವಿದ್ಯಮಾನಗಳಲ್ಲಿ ನಗ್ನತೆಯನ್ನು ತೋರಿಸುತ್ತಿದ್ದ, ಕೇಬ್‌ಲ್‌ ಟಿವಿಯಲ್ಲಿನ ಕಾರ್ಯಕ್ರಮಗಳನ್ನು ನೋಡುತ್ತಿದ್ದೆ. ಅಂತಹ ದೃಶ್ಯಗಳು ಎಷ್ಟು ಆಘಾತಕರವಾಗಿರುತ್ತವೆಂದರೆ, ಅವು ನಿಮ್ಮ ಮನಸ್ಸಿನಲ್ಲಿಯೇ ಉಳಿಯುತ್ತವೆ. ಮುಷ್ಟಿಮೈಥುನದಲ್ಲಿ ಒಳಗೂಡಲು ಅಗತ್ಯವಾದ ಮಾನಸಿಕ ಇಂಧನವನ್ನು ಒದಗಿಸುತ್ತಾ, ಅವು ಪುನಃ ನನ್ನ ಮನಃಪಟಲದ ಮೇಲೆ ಮೂಡಿಬರುತ್ತಿದ್ದವು.’

ಹೌದು, ಅನೇಕವೇಳೆ ಒಬ್ಬನು ಏನನ್ನು ಓದುತ್ತಾನೋ, ನೋಡುತ್ತಾನೋ, ಅಥವಾ ಆಲಿಸುತ್ತಾನೋ ಅದು, ಹಾಗೂ ಒಬ್ಬನು ಯಾವುದರ ಕುರಿತಾಗಿ ಮಾತಾಡುತ್ತಾನೋ ಅಥವಾ ಧ್ಯಾನಿಸುತ್ತಾನೋ ಅದು ತಾನೇ ಮುಷ್ಟಿಮೈಥುನವನ್ನು ಉಂಟುಮಾಡುತ್ತದೆ. ಒಬ್ಬ 25 ವರ್ಷ ಪ್ರಾಯದ ಸ್ತ್ರೀಯು ಒಪ್ಪಿಕೊಂಡಿದ್ದು: “ನಾನು ಈ ಅಭ್ಯಾಸವನ್ನು ನಿಲ್ಲಿಸಸಾಧ್ಯವಿಲ್ಲ ಎಂಬಂತೆ ಭಾಸವಾಯಿತು. ಆದರೂ ನಾನು ಯಾವಾಗಲೂ ಪ್ರಣಯ ಕಾದಂಬರಿಗಳನ್ನು ಓದುತ್ತಿದ್ದೆ, ಮತ್ತು ಇದು ಸಮಸ್ಯೆಗೆ ಹೆಚ್ಚನ್ನು ಕೂಡಿಸಿತು.”

ಒಂದು “ಉಪಶಮನಕಾರಿ”

ಈ ಅಭ್ಯಾಸವನ್ನು ನಿಲ್ಲಿಸಿಬಿಡುವುದು ಏಕೆ ಇಷ್ಟು ಕಷ್ಟಕರವಾಗಿರಬಲ್ಲದು ಎಂಬುದಕ್ಕೆ, ನಿಸ್ಸಂಶಯವಾಗಿ ಯಾವುದು ಅತ್ಯಂತ ದೊಡ್ಡ ಕಾರಣವಾಗಿದೆ ಎಂಬುದನ್ನು ಈ ಯುವತಿಯ ಅನುಭವವು ತೋರಿಸುತ್ತದೆ. ಅವಳು ಮುಂದುವರಿಸುವುದು: “ಸಾಮಾನ್ಯವಾಗಿ ನಾನು ಒತ್ತಡ, ಉದ್ವೇಗ, ಅಥವಾ ವ್ಯಾಕುಲತೆಯಿಂದ ಮುಕ್ತನಾಗಲಿಕ್ಕಾಗಿ ಮುಷ್ಟಿಮೈಥುನ ಮಾಡಿದೆ. ಆ ಕ್ಷಣಿಕ ಸುಖಾನುಭವವು, ತನ್ನ ನರಗಳನ್ನು ಶಾಂತಗೊಳಿಸಲಿಕ್ಕಾಗಿ ಮದ್ಯವ್ಯಸನಿಯು ಸೇವಿಸುವ ಮದ್ಯಪಾನದಂತಿತ್ತು.”

ಸಂಶೋಧಕಿಯಾದ ಸೂಸ್ಯಾನ್‌ ಮತ್ತು ಅರ್ವಿಂಗ್‌ ಸಾರ್ನೊಫ್‌ ಬರೆಯುವುದು: “ಕೆಲವು ಜನರಿಗಾದರೋ ಮುಷ್ಟಿಮೈಥುನವು ಒಂದು ಅಭ್ಯಾಸವಾಗಿ ಪರಿಣಮಿಸಬಹುದು. ಅವರು ಯಾವುದಾದರೊಂದು ವಿಷಯದ ಕುರಿತು ಮುಖಭಂಗಮಾಡಲ್ಪಡುವಾಗ ಅಥವಾ ಭಯಪಡುವಾಗಲೆಲ್ಲಾ, ದುಃಖೋಪಶಮನಕ್ಕಾಗಿ ಇದರ ಕಡೆಗೆ ತಿರುಗುತ್ತಾರೆ. ಇತರರಾದರೋ, ತಾವು ಅತ್ಯಂತ ಉತ್ಕಟವಾದ ಭಾವನಾತ್ಮಕ ಉದ್ವೇಗದ ಕೆಳಗಿರುವಾಗ, ಕೇವಲ ಸಾಂದರ್ಭಿಕವಾಗಿ ಈ ರೀತಿಯಲ್ಲಿ ವಿಮುಖರಾಗಬಹುದು.” ತದ್ರೀತಿಯಲ್ಲಿ ಇತರರು ತಾವು ಕ್ಷೋಭೆಗೊಂಡಿರುವಾಗ, ಖಿನ್ನರಾಗಿರುವಾಗ, ಒಬ್ಬೊಂಟಿಗರಾಗಿರುವಾಗ, ಅಥವಾ ಅಧಿಕ ಉದ್ವೇಗದ ಕೆಳಗಿರುವಾಗ, ಆ ಅಭ್ಯಾಸಕ್ಕೆ ಮೊರೆಹೋಗುತ್ತಾರೆ ಎಂಬುದು ಸುವ್ಯಕ್ತ. ಅದು ಅವರ ತೊಂದರೆಗಳನ್ನು ಅಳಿಸಿಹಾಕುವ “ಉಪಶಮನಕಾರಿ”ಯಾಗಿ ಪರಿಣಮಿಸುತ್ತದೆ.

ಬೈಬಲ್‌ ಏನು ಹೇಳುತ್ತದೆ?

ಒಬ್ಬ ಯುವ ವ್ಯಕ್ತಿಯು ಕೇಳಿದ್ದು: “ಮುಷ್ಟಿಮೈಥುನವು ಅಕ್ಷಮ್ಯ ಪಾಪವೊ?” ಮುಷ್ಟಿಮೈಥುನವು ಬೈಬಲಿನಲ್ಲಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ. * ಬೈಬಲ್‌ ಸಮಯಗಳಲ್ಲಿ ಗ್ರೀಕ್‌ ಭಾಷೆಯನ್ನು ಮಾತಾಡುತ್ತಿದ್ದ ಲೋಕದಲ್ಲಿ ಆ ಪದ್ಧತಿಯು ಸಾಮಾನ್ಯವಾಗಿತ್ತು. ಮತ್ತು ಈ ರೂಢಿಯನ್ನು ವರ್ಣಿಸಲು ಅನೇಕ ಗ್ರೀಕ್‌ ಶಬ್ದಗಳು ಉಪಯೋಗಿಸಲ್ಪಟ್ಟವು. ಆದರೆ ಬೈಬಲಿನಲ್ಲಿ ಈ ಶಬ್ದಗಳಲ್ಲಿ ಒಂದು ಶಬ್ದವೂ ಉಪಯೋಗಿಸಲ್ಪಟ್ಟಿಲ್ಲ.

ಬೈಬಲಿನಲ್ಲಿ ಮುಷ್ಟಿಮೈಥುನವು ನೇರವಾಗಿ ಖಂಡಿಸಲ್ಪಡದಿರುವುದರಿಂದ, ಇದು ಹಾನಿರಹಿತವಾಗಿದೆ ಎಂದು ಇದರ ಅರ್ಥವೊ? ನಿಶ್ಚಯವಾಗಿಯೂ ಇಲ್ಲ! ಮುಷ್ಟಿಮೈಥುನವು ಜಾರತ್ವದಂತಹ ಗಂಭೀರ ಪಾಪಗಳೊಂದಿಗೆ ವರ್ಗೀಕರಿಸಲ್ಪಟ್ಟಿಲ್ಲದಿದ್ದಾಗ್ಯೂ, ಖಂಡಿತವಾಗಿ ಅದು ಅಶುದ್ಧ ಅಭ್ಯಾಸವಾಗಿದೆ. (ಎಫೆಸ 4:19) ಹೀಗೆ ದೇವರ ವಾಕ್ಯದ ಮೂಲತತ್ವಗಳು ಸೂಚಿಸುವುದೇನಂದರೆ, ಈ ಅಶುದ್ಧ ಅಭ್ಯಾಸವನ್ನು ಬಲವಾಗಿ ಪ್ರತಿರೋಧಿಸುವ ಮೂಲಕ ನೀವು “ಸ್ವತಃ ಪ್ರಯೋಜನಪಡೆದುಕೊಳ್ಳುವಿರಿ” (NW).—ಯೆಶಾಯ 48:17.

“ಲೈಂಗಿಕ ಅಭಿಲಾಷೆ”ಯನ್ನು ಉದ್ರೇಕಿಸುವುದು

“ಆದುದರಿಂದ, ಲೈಂಗಿಕ ಅಭಿಲಾಷೆಯ . . . ಸಂಬಂಧದಲ್ಲಿ, ನಿಮ್ಮ ಶರೀರದ ಅಂಗಗಳನ್ನು ನಿಶ್ಚೇತನಗೊಳಿಸಿರಿ” ಎಂದು ಬೈಬಲು ಪ್ರಚೋದಿಸುತ್ತದೆ. (ಕೊಲೊಸ್ಸೆ 3:5, NW) “ಲೈಂಗಿಕ ಅಭಿಲಾಷೆ” ಎಂಬುದು, ಸಾಮಾನ್ಯವಾದ ಲೈಂಗಿಕ ಭಾವನೆಗಳಿಗಲ್ಲ, ಬದಲಾಗಿ ನಿಯಂತ್ರಣಕ್ಕೆ ಮೀರಿದ ಕಾಮೋದ್ರೇಕಕ್ಕೆ ಸೂಚಿತವಾಗಿದೆ. ಹೀಗೆ ಅಂತಹ “ಲೈಂಗಿಕ ಅಭಿಲಾಷೆ”ಯು, ರೋಮಾಪುರ 1:26, 27ರಲ್ಲಿ ಪೌಲನಿಂದ ವಿವರಿಸಲ್ಪಟ್ಟಿರುವಂತೆ, ಗಂಭೀರವಾದ ಕೃತ್ಯಗಳಲ್ಲಿ ಒಳಗೂಡುವಂತೆ ಒಬ್ಬನನ್ನು ಮುನ್ನಡಿಸಬಲ್ಲದು.

ಆದರೆ ಮುಷ್ಟಿಮೈಥುನವು ಈ ಬಯಕೆಗಳನ್ನು ‘ಸಾಯಿಸು’ವುದಿಲ್ಲವೊ? ಇಲ್ಲ. ಇದಕ್ಕೆ ಬದಲಾಗಿ, ಒಬ್ಬ ಯುವ ವ್ಯಕ್ತಿಯು ಒಪ್ಪಿಕೊಂಡಂತೆ: “ನೀವು ಮುಷ್ಟಿಮೈಥುನ ಮಾಡುವಾಗ, ಮಾನಸಿಕವಾಗಿ ಕೆಟ್ಟ ಬಯಕೆಗಳ ಕುರಿತು ಚಿಂತಿಸುತ್ತೀರಿ. ಮತ್ತು ಅದು ಆ ಬಯಕೆಗಳಿಗಾಗಿರುವ ನಿಮ್ಮ ಅಭಿಲಾಷೆಯನ್ನು ಹೆಚ್ಚಿಸುತ್ತದೆ ಅಷ್ಟೆ.” ಅನೇಕವೇಳೆ ಲೈಂಗಿಕ ಸುಖಾನುಭವವನ್ನು ಹೆಚ್ಚಿಸಲಿಕ್ಕಾಗಿ ಅನೈತಿಕ ಭ್ರಾಂತಿಯನ್ನು ಉಪಯೋಗಿಸಲಾಗುತ್ತದೆ. (ಮತ್ತಾಯ 5:27, 28) ಆದುದರಿಂದ, ಸೂಕ್ತವಾದ ಸಂದರ್ಭಗಳು ದೊರೆತಾಗ, ಒಬ್ಬನು ಸುಲಭವಾಗಿ ಅನೈತಿಕತೆಯೊಳಗೆ ಬೀಳಸಾಧ್ಯವಿದೆ. ಇದು ಒಬ್ಬ ಯುವ ವ್ಯಕ್ತಿಗೆ ಸಂಭವಿಸಿತು. ಅವನು ಒಪ್ಪಿಕೊಳ್ಳುವುದು: “ಒಂದು ಸಮಯದಲ್ಲಿ, ಮುಷ್ಟಿಮೈಥುನವು, ಒಂದು ಹೆಣ್ಣಿನೊಂದಿಗೆ ಸಂಭೋಗ ಮಾಡದೇ ಆಶಾಭಂಗವನ್ನು ಇಲ್ಲವಾಗುವಂತೆ ಮಾಡಸಾಧ್ಯವಿದೆಯೆಂದು ನಾನು ಭಾವಿಸಿದೆ. ಆದರೂ ಮುಷ್ಟಿಮೈಥುನ ಮಾಡುವುದಕ್ಕಾಗಿ ನಾನು ಸಹಿಸಲಾಗದಷ್ಟು ತೀವ್ರವಾದ ಬಯಕೆಯನ್ನು ಬೆಳೆಸಿಕೊಂಡೆ.” ಅವನು ಜಾರತ್ವಮಾಡಿದನು. ಮುಷ್ಟಿಮೈಥುನ ಮಾಡಿದ ಪ್ರೌಢರಲ್ಲಿ ಅಧಿಕಾಂಶ ಮಂದಿ ಜಾರತ್ವವನ್ನೂ ಮಾಡುತ್ತಿದ್ದರು, ಎಂಬುದಾಗಿ ರಾಷ್ಟ್ರವ್ಯಾಪಕವಾದ ಒಂದು ಅಧ್ಯಯನವು ತೋರಿಸಿರುವುದು ಆಶ್ಚರ್ಯಕರವಾಗಿರುವುದಿಲ್ಲ. ಅವರು ಸಂಭೋಗ ಮಾಡದಿದ್ದವರ ಸಂಖ್ಯೆಗಿಂತ 50 ಪ್ರತಿಶತ ಹೆಚ್ಚಾಗಿದ್ದರು!

ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಅಪವಿತ್ರಗೊಳಿಸುತ್ತದೆ

ಮುಷ್ಟಿಮೈಥುನವು, ಮಾನಸಿಕವಾಗಿ ಭ್ರಷ್ಟತೆಯನ್ನುಂಟುಮಾಡುವ ಕೆಲವು ಮನೋಭಾವಗಳನ್ನು ಸಹ ಮನಸ್ಸಿನಲ್ಲಿ ತುಂಬುತ್ತದೆ. (2 ಕೊರಿಂಥ 11:3ನ್ನು ಹೋಲಿಸಿರಿ.) ಮುಷ್ಟಿಮೈಥುನ ಮಾಡುತ್ತಿರುವಾಗ, ಒಬ್ಬ ವ್ಯಕ್ತಿಯು ಅವಳ ಅಥವಾ ಅವನ ಸ್ವಂತ ದೈಹಿಕ ಸಂವೇದನೆಗಳಲ್ಲಿ ಮುಳುಗಿರುತ್ತಾನೆ. ಸಂಪೂರ್ಣವಾಗಿ ಸ್ವಾರ್ಥಮಗ್ನನಾಗಿರುತ್ತಾನೆ. ಲೈಂಗಿಕತೆಯು ಪ್ರೀತಿಯಿಂದ ಪ್ರತ್ಯೇಕವಾಗಿ, ಅದು ಉದ್ವೇಗವನ್ನು ಹೊರಸೂಸುವ ಪ್ರತಿಕ್ರಿಯೆಗೆ ಒಳಗಾಗುತ್ತದೆ. ಆದರೆ ಲೈಂಗಿಕ ಬಯಕೆಗಳು ಲೈಂಗಿಕ ಸಂಭೋಗಗಳಲ್ಲಿ ಮಾತ್ರವೇ ತೃಪ್ತಿಪಡಿಸಲ್ಪಡಬೇಕೆಂದು ದೇವರು ಉದ್ದೇಶಿಸಿದನು. ಇದು ಒಬ್ಬ ಪುರುಷನ ಹಾಗೂ ಅವನ ಪತ್ನಿಯ ನಡುವಿನ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ.—ಜ್ಞಾನೋಕ್ತಿ 5:15-19.

ಮುಷ್ಟಿಮೈಥುನ ಮಾಡುವ ಒಬ್ಬ ವ್ಯಕ್ತಿಯು, ವಿರುದ್ಧ ಲಿಂಗಜಾತಿಯವರನ್ನು ಕೇವಲ ಲೈಂಗಿಕ ವಸ್ತುಗಳೋಪಾದಿ, ಲೈಂಗಿಕ ಸಂತೃಪ್ತಿಗಾಗಿರುವ ಸಾಧನಗಳೋಪಾದಿ ವೀಕ್ಷಿಸುವ ಪ್ರವೃತ್ತಿಯುಳ್ಳವನಾಗಿರಲೂಬಹುದು. ಹೀಗೆ ಮುಷ್ಟಿಮೈಥುನದ ಮೂಲಕ ಕಲಿಸಲ್ಪಡುವ ಕೆಟ್ಟ ಮನೋಭಾವಗಳು, ಒಬ್ಬನ “ಆತ್ಮ”ವನ್ನು ಅಥವಾ ಪ್ರಬಲವಾದ ಮಾನಸಿಕ ಪ್ರವೃತ್ತಿಯನ್ನು ಅಪವಿತ್ರಗೊಳಿಸುತ್ತವೆ. ಕೆಲವು ವಿದ್ಯಮಾನಗಳಲ್ಲಿ, ಮುಷ್ಟಿಮೈಥುನದಿಂದ ಉಂಟಾಗುವ ಸಮಸ್ಯೆಗಳು, ವಿವಾಹದ ಬಳಿಕವೂ ಇರುತ್ತವೆ! ಸಕಾರಣದಿಂದಲೇ, ದೇವರ ವಾಕ್ಯವು ಪ್ರೇರೇಪಿಸುವುದು: “ಪ್ರಿಯರೇ, . . . ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿ”ಕೊಳ್ಳೋಣ.—2 ಕೊರಿಂಥ 7:1.

ದೋಷಿಭಾವದ ಕುರಿತು ಒಂದು ಸಮತೂಕದ ನೋಟ

ಅನೇಕ ಯುವ ಜನರು, ಸಾಮಾನ್ಯವಾಗಿ ಈ ದುರಭ್ಯಾಸವನ್ನು ಜಯಿಸುವುದರಲ್ಲಿ ಯಶಸ್ವಿಗಳಾಗಿದ್ದಾರಾದರೂ, ಸಾಂದರ್ಭಿಕವಾಗಿ ಅದಕ್ಕೆ ವಶರಾಗುತ್ತಾರೆ. ಸಂತೋಷಕರವಾಗಿ, ದೇವರು ತುಂಬಾ ಕರುಣಾಳುವಾಗಿದ್ದಾನೆ. “ಕರ್ತನೇ [“ಯೆಹೋವನೇ,” NW] ನೀನು ಒಳ್ಳೆಯವನೂ ಕ್ಷಮಿಸುವವನೂ . . . ಆಗಿದ್ದೀಯಲ್ಲಾ” ಎಂದು ಕೀರ್ತನೆಗಾರನು ಹೇಳಿದನು. (ಕೀರ್ತನೆ 86:5) ಕ್ರೈಸ್ತನೊಬ್ಬನು ಮುಷ್ಟಿಮೈಥುನಕ್ಕೆ ತುತ್ತಾಗುವಾಗ, ಅವನ ಹೃದಯವು ಅನೇಕವೇಳೆ ಆತ್ಮದೂಷಕವಾಗಿರುತ್ತದೆ. ಆದರೂ, “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ” ಎಂದು ಬೈಬಲು ಹೇಳುತ್ತದೆ. (1 ಯೋಹಾನ 3:20) ದೇವರು ನಮ್ಮ ಪಾಪಗಳಿಗಿಂತಲೂ ಹೆಚ್ಚಿನದ್ದನ್ನು ನೋಡುತ್ತಾನೆ. ಆತನ ಜ್ಞಾನದ ಹಿರಿಮೆಯು, ಕ್ಷಮೆಗಾಗಿರುವ ನಮ್ಮ ಮನಃಪೂರ್ವಕ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸುವಂತೆ ಆತನನ್ನು ಶಕ್ತನನ್ನಾಗಿ ಮಾಡುತ್ತವೆ. ಒಬ್ಬ ಯುವತಿಯು ಬರೆದಂತೆ: “ನನಗೆ ಸ್ವಲ್ಪಮಟ್ಟಿಗಿನ ದೋಷಿಭಾವ ಉಂಟಾಗಿದೆ. ಆದರೆ ಯೆಹೋವ ದೇವರು ಎಂತಹ ಪ್ರೀತಿಪರ ದೇವರಾಗಿದ್ದಾನೆ ಮತ್ತು ಆತನು ನನ್ನ ಹೃದಯವನ್ನು ಓದಬಲ್ಲನು ಮತ್ತು ನನ್ನ ಎಲ್ಲಾ ಪ್ರಯತ್ನಗಳನ್ನೂ ಇಂಗಿತಗಳನ್ನೂ ಆತನು ಅರಿತವನಾಗಿದ್ದಾನೆ ಎಂಬುದನ್ನು ತಿಳಿದಿರುವುದು, ನಾನು ಕೆಲವೊಮ್ಮೆ ತಪ್ಪಿಹೋಗುವಾಗ ತೀರ ಖಿನ್ನಳಾಗುವುದರಿಂದ ನನ್ನನ್ನು ಕಾಪಾಡುತ್ತದೆ.” ಮುಷ್ಟಿಮೈಥುನ ಮಾಡುವ ಬಯಕೆಯ ವಿರುದ್ಧ ನೀವು ಹೋರಾಡುವುದಾದರೆ, ಜಾರತ್ವದ ಗಂಭೀರ ಪಾಪವನ್ನು ನೀವು ಮಾಡುವಿರಿ ಎಂಬುದು ಅಸಂಭವನೀಯ.

ಸೆಪ್ಟೆಂಬರ್‌ 1, 1959ರ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯು ಹೇಳಿದ್ದು: “ಯಾವುದೋ ಒಂದು ದುರಭ್ಯಾಸದಲ್ಲಿ ನಾವು ಅನೇಕ ಬಾರಿ ಮುಗ್ಗರಿಸುತ್ತಿರುವವರಾಗಿಯೂ ಬೀಳುತ್ತಿರುವವರಾಗಿಯೂ ಕಂಡುಬರ[ಬಹುದು]. ಆ ಅಭ್ಯಾಸವು ನಮ್ಮ ಹಿಂದಣ ಜೀವನ ರೀತಿಯಲ್ಲಿ ನಾವು ಗ್ರಹಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಗಾಢವಾಗಿ ಒಗ್ಗಿಹೋಗಿರಬಹುದು. . . . ನಿರಾಶರಾಗಬೇಡಿರಿ. ನೀವು ಅಕ್ಷಮ್ಯ ಪಾಪವನ್ನು ಮಾಡಿದ್ದೀರೆಂಬ ನಿರ್ಧಾರಕ್ಕೆ ಬರಬೇಡಿ. ನೀವು ಇದೇ ರೀತಿ ತರ್ಕಿಸುವಂತೆ ಸೈತಾನನು ಇಷ್ಟಪಡುತ್ತಾನೆ. ನೀವು ನಿಮ್ಮಲ್ಲಿಯೇ ಸಂತಾಪಪಟ್ಟಿದ್ದೀರಿ ಮತ್ತು ಕ್ಷೋಭೆಗೊಂಡಿದ್ದೀರಿ ಎಂಬ ವಾಸ್ತವಾಂಶವು ತಾನೇ, ನೀವು ವಿಪರೀತಕ್ಕೆ ಹೋಗಿಲ್ಲ ಎಂಬುದಕ್ಕೆ ರುಜುವಾತಾಗಿದೆ. ದೀನಭಾವದಿಂದ ಹಾಗೂ ಮನಃಪೂರ್ವಕವಾಗಿ ದೇವರ ಕಡೆಗೆ ತಿರುಗಿ, ಆತನ ಕ್ಷಮೆ, ಶುದ್ಧೀಕರಿಸುವಿಕೆ ಹಾಗೂ ಸಹಾಯಕ್ಕಾಗಿ ಪ್ರಯತ್ನಿಸುವುದರಲ್ಲಿ ಎಂದೂ ಬೇಸರಗೊಳ್ಳಬೇಡಿರಿ. ತೊಂದರೆಯಲ್ಲಿರುವಾಗ ಮಗುವೊಂದು ತನ್ನ ತಂದೆಯ ಬಳಿಗೆ ಹೋಗುವಂತೆ, ಒಂದೇ ದೌರ್ಬಲ್ಯದ ಕುರಿತು ಎಷ್ಟೇ ಸಲವಾದರೂ ಆತನನ್ನು ಸಮೀಪಿಸಿರಿ. ತನ್ನ ಅಪಾತ್ರ ದಯೆಯ ಕಾರಣದಿಂದಾಗಿ ಯೆಹೋವನು ನಿಮಗೆ ಕೃಪಾಭಾವದಿಂದ ಸಹಾಯ ನೀಡುವನು. ಮತ್ತು ನೀವು ಯಥಾರ್ಥ ಭಾವದವರಾಗಿರುವಲ್ಲಿ, ಆತನು ನಿಮಗೆ ಶುದ್ಧೀಕರಿಸಲ್ಪಟ್ಟ ಮನಸ್ಸಾಕ್ಷಿಯ ಗ್ರಹಿಕೆಯನ್ನು ಕೊಡುವನು.”

ಆ “ಶುದ್ಧೀಕರಿಸಲ್ಪಟ್ಟ ಮನಸ್ಸಾಕ್ಷಿ”ಯನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

^ ಓನಾನನು ‘ತನ್ನ ವೀರ್ಯವನ್ನು ನೆಲದ ಪಾಲು ಮಾಡಿ’ದ್ದಕ್ಕಾಗಿ ದೇವರು ಅವನನ್ನು ವಧಿಸಿದನು. ಆದರೆ, ಅಲ್ಲಿ ಸಂಭೋಗವು ಮಾತ್ರ ನಿಲ್ಲಿಸಲ್ಪಟ್ಟಿತ್ತು, ಅದರಲ್ಲಿ ಮುಷ್ಟಿಮೈಥುನವು ಒಳಗೂಡಿರಲಿಲ್ಲ. ಇದಲ್ಲದೆ, ಓನಾನನು ವಧಿಸಲ್ಪಡಲು ಕಾರಣವೇನಂದರೆ, ತನ್ನ ಮೃತ ಅಣ್ಣನ ಸಂತತಿಯನ್ನು ಮುಂದುವರಿಸುವ ಸಲುವಾಗಿ, ಮೈದುನಧರ್ಮದ ವಿವಾಹವನ್ನು ನಿರ್ವಹಿಸಲು ಅವನು ಸ್ವಾರ್ಥದಿಂದ ತಪ್ಪಿಹೋದದ್ದೇ. (ಆದಿಕಾಂಡ 38:1-10) ಯಾಜಕಕಾಂಡ 15:16-18ರಲ್ಲಿ ಉಲ್ಲೇಖಿಸಲಾಗಿರುವ “ವೀರ್ಯಸ್ಖಲನ”ದ ಕುರಿತಾಗಿ ಏನು? ಸುವ್ಯಕ್ತವಾಗಿ ಇದು ಮುಷ್ಟಿಮೈಥುನಕ್ಕಲ್ಲ, ಬದಲಾಗಿ ರಾತ್ರಿಯ ವಿಸರ್ಜನೆಗೆ ಹಾಗೂ ವೈವಾಹಿಕ ಲೈಂಗಿಕ ಸಂಬಂಧಗಳಿಗೆ ಸೂಚಿತವಾಗಿದೆ.

ಚರ್ಚೆಗಾಗಿ ಪ್ರಶ್ನೆಗಳು

◻ ಮುಷ್ಟಿಮೈಥುನ ಎಂದರೇನು, ಮತ್ತು ಅದರ ಕುರಿತಾದ ಕೆಲವು ಜನಪ್ರಿಯ ತಪ್ಪುಗ್ರಹಿಕೆಗಳು ಯಾವುವು?

◻ ಅನೇಕವೇಳೆ ಯುವ ಜನರು, ತುಂಬ ಪ್ರಬಲವಾದ ಲೈಂಗಿಕ ಬಯಕೆಗಳನ್ನು ಏಕೆ ಅನುಭವಿಸುತ್ತಾರೆ? ಇದು ತಪ್ಪಾಗಿದೆಯೆಂದು ನೀವು ನೆನಸುತ್ತೀರೋ?

◻ ಮುಷ್ಟಿಮೈಥುನ ಮಾಡಲಿಕ್ಕಾಗಿರುವ ಬಯಕೆಯನ್ನು ಯಾವ ಇಂಧನಗಳು ಹೆಚ್ಚಿಸಬಲ್ಲವು?

◻ ಮುಷ್ಟಿಮೈಥುನವು ಯುವ ವ್ಯಕ್ತಿಯೊಬ್ಬನಿಗೆ ಯಾವ ಹಾನಿಯನ್ನಾದರೂ ಉಂಟುಮಾಡುತ್ತದೊ?

◻ ಮುಷ್ಟಿಮೈಥುನವು ಎಷ್ಟು ಗಂಭೀರವಾದ ಪಾಪವಾಗಿದೆಯೆಂದು ನೀವು ಭಾವಿಸುತ್ತೀರಿ? ಅದರ ವಿರುದ್ಧವಾಗಿ ಹೆಣಗಾಡುತ್ತಿರುವಾಗಲೂ, ಅದನ್ನು ಜಯಿಸುವುದರಲ್ಲಿ ಸಮಸ್ಯೆಗಳನ್ನು ಎದುರಿಸಬಹುದಾದ ಒಬ್ಬ ಯುವ ವ್ಯಕ್ತಿಯನ್ನು ಯೆಹೋವನು ಯಾವ ದೃಷ್ಟಿಯಲ್ಲಿ ನೋಡುತ್ತಾನೆ?

[ಪುಟ 200 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕೆಲವರು ಒತ್ತಡದ ಕೆಳಗಿರುವಾಗ ಅಥವಾ ಉದ್ವೇಗಗೊಂಡಿರುವಾಗ, ಒಬ್ಬೊಂಟಿಗರಾಗಿರುವಾಗ, ಅಥವಾ ಖಿನ್ನರಾಗಿರುವಾಗ, ಅವರಿಗೆ ಮುಷ್ಟಿಮೈಥುನಮಾಡುವ ಪ್ರಚೋದನೆಯಾಗುತ್ತದೆ

[ಪುಟ 202 ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಮುಷ್ಟಿಮೈಥುನದ ನನ್ನ ಇಡೀ ಸಮಸ್ಯೆಯ ಮೂಲವು, ನಾನು ಮನಸ್ಸಿನಲ್ಲಿ ಹಾಕಿಕೊಳ್ಳುತ್ತಿದ್ದ ವಿಷಯವಾಗಿತ್ತು’

[ಪುಟ 204 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು [ಮುಷ್ಟಿಮೈಥುನ]ಕ್ಕೆ ಒಳಗಾದಾಗ, ನಾನು ಯೆಹೋವ ದೇವರನ್ನು ನಿರಾಶೆಗೊಳಿಸುತ್ತಿದ್ದೆನೋ ಎಂಬಂತಹ ಅನಿಸಿಕೆ ನನಗಾಗುತ್ತಿತ್ತು”

[ಪುಟ 198 ರಲ್ಲಿರುವ ಚಿತ್ರಗಳು]

ಮುಷ್ಟಿಮೈಥುನವು ಪ್ರಬಲವಾದ ದೋಷಿಭಾವಗಳನ್ನು ಉಂಟುಮಾಡಬಹುದಾದರೂ, ದೇವರ ಕ್ಷಮೆಗಾಗಿ ಶ್ರದ್ಧಾಪೂರ್ವಕವಾದ ಪ್ರಾರ್ಥನೆ ಮತ್ತು ಆ ಅಭ್ಯಾಸವನ್ನು ಪ್ರತಿರೋಧಿಸಲು ಕಷ್ಟಪಟ್ಟು ಕೆಲಸಮಾಡುವುದು, ಒಬ್ಬನಿಗೆ ಒಳ್ಳೆಯ ಮನಸ್ಸಾಕ್ಷಿಯನ್ನು ನೀಡಬಲ್ಲದು

[ಪುಟ 203 ರಲ್ಲಿರುವ ಚಿತ್ರಗಳು]

ಪ್ರಣಯಾತ್ಮಕವಾದ ಚಲನ ಚಿತ್ರಗಳು, ಪುಸ್ತಕಗಳು, ಮತ್ತು ಟಿವಿ ಪ್ರದರ್ಶನಗಳು, ಅನೇಕವೇಳೆ ಮುಷ್ಟಿಮೈಥುನಕ್ಕಾಗಿರುವ ‘ಮಾನಸಿಕ ಇಂಧನ’ವಾಗಿವೆ