ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳಬೇಕು?

ನಾನು ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳಬೇಕು?

ಅಧ್ಯಾಯ 22

ನಾನು ಯಾವ ಜೀವನವೃತ್ತಿಯನ್ನು ಆರಿಸಿಕೊಳ್ಳಬೇಕು?

‘ನನ್ನ ಜೀವಿತದ ಉಳಿದ ಸಮಯವೆಲ್ಲಾ ನಾನು ಏನು ಮಾಡಲಿ?’ ಇಂದೋ ಮುಂದೋ, ನೀವು ಈ ಪಂಥಾಹ್ವಾನದಾಯಕ ಪ್ರಶ್ನೆಯನ್ನು ಎದುರಿಸುತ್ತೀರಿ. ಗೊಂದಲಮಯವಾದ ಆಯ್ಕೆಗಳ ಪಂಕ್ತಿಯು ನಿಮ್ಮ ಮುಂದೆ ಗೋಚರಿಸುತ್ತದೆ—ವೈದ್ಯವೃತ್ತಿ, ವ್ಯಾಪಾರ, ಕಲೆ, ವಿದ್ಯಾಭ್ಯಾಸ, ಕಂಪ್ಯೂಟರ್‌ ಸೈಎನ್ಸ್‌, ಇಂಜಿನಿಯರಿಂಗ್‌, ವಾಣಿಜ್ಯವೃತ್ತಿಗಳು. ಮತ್ತು ಹೀಗೆ ಹೇಳಿದ ಯುವಕನಿಗಾದ ಅನಿಸಿಕೆ ನಿಮಗಾಗಬಹುದು: “ನೀವು ಯಾವುದರೊಂದಿಗೆ ಬೆಳೆದುಬಂದಿದ್ದೀರೊ ಆ ಹಿತಕರ ಮಟ್ಟವನ್ನು ಕಾಪಾಡಿಕೊಳ್ಳುವುದನ್ನೇ . . . ನಾನು ಸಾಫಲ್ಯವೆಂದು ಪರಿಗಣಿಸುತ್ತೇನೆ.” ಅಥವಾ ಇತರರಂತೆ, ಜೀವಿತದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವ ವಿಷಯದಲ್ಲಿ ನೀವು ಕನಸು ಕಾಣಬಹುದು.

ಆದರೆ ಸಾಫಲ್ಯಕ್ಕೆ ಪ್ರಾಪಂಚಿಕ ಲಾಭಕ್ಕಿಂತಲೂ ಹೆಚ್ಚಿನದ್ದು ಇದೆಯೊ? ಯಾವುದೇ ಐಹಿಕ ಜೀವನವೃತ್ತಿಯು ನಿಮಗೆ ನಿಜವಾದ ಸಾಧನೆಯನ್ನು ತರಬಲ್ಲದೊ?

‘ಅದಕ್ಕೆ ಯಾವ ಅರ್ಥವೂ ಇರಲಿಲ್ಲ’

ಮೋಹಕ, ಉದ್ರೇಕಕಾರಿ, ಲಾಭದಾಯಕ! ಚಲನ ಚಿತ್ರಗಳು, ಟಿವಿ ಮತ್ತು ಪುಸ್ತಕಗಳು ಅನೇಕವೇಳೆ ಐಹಿಕ ಜೀವನವೃತ್ತಿಗಳನ್ನು ಅದೇ ರೀತಿ ವರ್ಣಿಸುತ್ತವೆ. ಆದರೆ ಯಾವುದನ್ನು ಯಶಸ್ಸೆಂದು ಕರೆಯಲಾಗುತ್ತದೋ ಅದನ್ನು ಗಳಿಸಲು, ಜೀವನವೃತ್ತಿಯ ಆರೋಹಕರು, ಅಂಗೀಕಾರಕ್ಕಾಗಿ ಒಬ್ಬರು ಇನ್ನೊಬ್ಬರೊಂದಿಗೆ ಜೀವಮರಣಗಳ ಹೋರಾಟದಲ್ಲಿ ಅನೇಕವೇಳೆ ಸ್ಪರ್ಧಿಸಲೇಬೇಕು. “ಶೀಘ್ರಪ್ರಗತಿ, ಉನ್ನತ ಯಂತ್ರಕಲಾವಿಜ್ಞಾನದ ಜೀವನವೃತ್ತಿಗಳು” ಇರುವ ಅನೇಕ ಯುವ ವಯಸ್ಕರು, “ಅಸಂತೃಪ್ತಿ, ಕಳವಳ, ಖಿನ್ನತೆ, ಶೂನ್ಯಭಾವ, ಮತಿಭ್ರಂಶದ ಭಾವನೆಗಳನ್ನು, ಹಾಗೂ ಎಲ್ಲಾ ರೀತಿಯ ಶಾರೀರಿಕ ಅಸ್ವಸ್ಥತೆಗಳನ್ನು ಹೇಗೆ ವರದಿಸುತ್ತಾರೆ” ಎಂಬುದನ್ನು ಡಾ. ಡಗ್ಲಸ್‌ ಲಬಿಯರ್‌ ತಿಳಿಸುತ್ತಾರೆ.

ಬಹಳ ಸಮಯದ ಹಿಂದೆ, ಬರಿಯ ಲೌಕಿಕ ಯಶಸ್ಸಿನ ವ್ಯರ್ಥತೆಯನ್ನು ರಾಜ ಸೊಲೊಮೋನನು ಹೊರಗೆಡವಿದನು. ಕಾರ್ಯತಃ ಅಪಾರ ಸಂಪನ್ಮೂಲಗಳ ಬೆಂಬಲ ದೊರಕಿದವನಾಗಿ, ಸೊಲೊಮೋನನು ಜೀವನವೃತ್ತಿ ಸಾಧನೆಗಳ ಬೆರಗುಗೊಳಿಸುವ ಪಟ್ಟಿಯನ್ನು ಒದಗಿಸಿದನು. (ಪ್ರಸಂಗಿ 2:4-10ನ್ನು ಓದಿರಿ.) ಆದರೂ ಸೊಲೊಮೋನನು ತೀರ್ಮಾನಿಸಿದ್ದು: “ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಷ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು [“ಅದಕ್ಕೆ ಯಾವ ಅರ್ಥವೂ ಇರಲಿಲ್ಲ ಎಂಬುದನ್ನು ನಾನು ಗ್ರಹಿಸಿಕೊಂಡೆ,” ಟುಡೇಸ್‌ ಇಂಗ್ಲಿಷ್‌ ವರ್ಷನ್‌].”—ಪ್ರಸಂಗಿ 2:11.

ಒಂದು ಕೆಲಸವು ಐಶ್ವರ್ಯವನ್ನು ಹಾಗೂ ಮಾನ್ಯತೆಯನ್ನು ತರಬಹುದಾದರೂ, ಅದು ಒಬ್ಬನ ‘ಆತ್ಮಿಕ ಆವಶ್ಯಕತೆಗಳ’ನ್ನು ತೃಪ್ತಿಪಡಿಸಸಾಧ್ಯವಿಲ್ಲ. (ಮತ್ತಾಯ 5:3) ಹೀಗೆ ಯಾರು ಐಹಿಕ ಸಾಧನೆಯ ಸುತ್ತಲೂ ಸಂಪೂರ್ಣವಾಗಿ ತಮ್ಮ ಜೀವಿತಗಳನ್ನು ಕಟ್ಟುತ್ತಾರೋ ಅವರಿಗೆ ಸಂತೃಪ್ತಿಯು ಇಲ್ಲವಾಗುತ್ತದೆ.

ಸಂತೃಪ್ತಿನೀಡುವ ಒಂದು ಜೀವನವೃತ್ತಿ

ರಾಜ ಸೊಲೊಮೋನನು ಬುದ್ಧಿಹೇಳುವುದು: “ವಿಷಯವು ತೀರಿತು, ಎಲ್ಲವೂ ಕೇಳಿ ಮುಗಿಯಿತು, ಅದೇನೆಂದರೆ: ಸತ್ಯ ದೇವರಿಗೆ ಭಯಪಟ್ಟು, ಆತನ ಆಜ್ಞೆಗಳನ್ನು ಕೈಕೊಳ್ಳು. ಏಕೆಂದರೆ ಮನುಷ್ಯನ ಸಂಪೂರ್ಣ ಹಂಗು ಇದೇ.” (ಪ್ರಸಂಗಿ 12:13, NW) ಇಂದು ಕ್ರೈಸ್ತರ ಪ್ರಮುಖ ಹಂಗು, ರಾಜ್ಯ ಸಂದೇಶವನ್ನು ಸಾರುವುದೇ ಆಗಿದೆ. (ಮತ್ತಾಯ 24:14) ಮತ್ತು ದೇವರ ಮುಂದೆ ತಮ್ಮ ಹಂಗನ್ನು ಗಂಭೀರವಾಗಿ ಪರಿಗಣಿಸುವ ಯುವ ಜನರು, ಸ್ವಾಭಾವಿಕವಾಗಿ ಸಾರುವ ಪ್ರವೃತ್ತಿ ಇಲ್ಲದವರಾಗಿದ್ದರೂ, ಈ ಕೆಲಸದಲ್ಲಿ ಸಾಧ್ಯವಾದಷ್ಟು ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಪ್ರೇರಿಸಲ್ಪಡುತ್ತಾರೆ. (2 ಕೊರಿಂಥ 5:14ನ್ನು ಹೋಲಿಸಿರಿ.) ಪೂರ್ಣ ಸಮಯದ ಐಹಿಕ ಕೆಲಸಗಳನ್ನು ಬೆನ್ನಟ್ಟುವುದಕ್ಕೆ ಬದಲಾಗಿ, ಸಾವಿರಾರು ಮಂದಿ ಪೂರ್ಣ ಸಮಯದ ಪಯನೀಯರ್‌ ಸೌವಾರ್ತಿಕರೋಪಾದಿ ಸೇವೆಮಾಡುವ ಆಯ್ಕೆಮಾಡಿದ್ದಾರೆ. ಇತರರು ವಿದೇಶೀಯ ಮಿಷನೆರಿಗಳೋಪಾದಿ ಅಥವಾ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸುಗಳಲ್ಲಿ ಸೇವೆಮಾಡುತ್ತಾರೆ.

ಪಯನೀಯರಳಾಗಲಿಕ್ಕಾಗಿ, ತನ್ನ ಕಾರ್ಯನಿರ್ವಾಹಕ ಸೆಕ್ರಿಟರಿಯ ಜೀವನವೃತ್ತಿಯನ್ನು ತೊರೆದ ಎಮಿಲಿ ಹೇಳುವುದು: “ಈ ಕೆಲಸಕ್ಕಾಗಿ ನಾನು ನಿಜವಾದ ಪ್ರೀತಿಯನ್ನು ಬೆಳೆಸಿಕೊಂಡಿದ್ದೇನೆ.” ಹೌದು, ಪೂರ್ಣ ಸಮಯದ ಶುಶ್ರೂಷೆಯು, ಊಹಿಸಸಾಧ್ಯವಿರುವ ಅತ್ಯಂತ ಸಂತೃಪ್ತಿದಾಯಕ, ರೋಮಾಂಚಕ ಜೀವನವೃತ್ತಿಯಾಗಿದೆ! ಮತ್ತು “ದೇವರ ಜೊತೆಕೆಲಸದವ”ರಾಗಿರುವುದಕ್ಕಿಂತ ಹೆಚ್ಚಾಗಿ ಒಬ್ಬನು ಇನ್ನಾವ ಮಹತ್ತರ ಸುಯೋಗವನ್ನು ಪಡೆದುಕೊಳ್ಳಸಾಧ್ಯವಿದೆ?—1 ಕೊರಿಂಥ 3:9.

ವಿಶ್ವವಿದ್ಯಾನಿಲಯದ ಶಿಕ್ಷಣ—ಲಾಭದಾಯಕವೊ?

ಅಧಿಕಾಂಶ ಪಯನೀಯರ್‌ ಶುಶ್ರೂಷಕರು, ಅಂಶಕಾಲಿಕ ಕೆಲಸದಿಂದ ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಆದರೆ ಕಾಲಕ್ರಮದಲ್ಲಿ ನೀವು ಒಂದು ಕುಟುಂಬವನ್ನು ಪೋಷಿಸುವ ಅಗತ್ಯವಿದ್ದರೆ ಆಗೇನು? ಒಬ್ಬನು ತನ್ನ ಯೌವನಭರಿತ ವರ್ಷಗಳನ್ನು ದೇವರ ಸೇವೆಗಾಗಿ ಮೀಸಲಾಗಿಟ್ಟಿದ್ದಕ್ಕಾಗಿ ಎಂದಿಗೂ ವಿಷಾದಿಸಲಾರನು ಎಂಬುದು ನಿಶ್ಚಯ! ಆದರೂ, ಯುವ ವ್ಯಕ್ತಿಯೊಬ್ಬನು ಮೊದಲಾಗಿ ವಿಶ್ವವಿದ್ಯಾನಿಲಯದ ಡಿಗ್ರಿಯನ್ನು ಪಡೆದುಕೊಂಡು, ಬಹುಶಃ ತದನಂತರ ಶುಶ್ರೂಷೆಯನ್ನು ಬೆನ್ನಟ್ಟುವುದು ಯುಕ್ತವಾದದ್ದಲ್ಲವೊ?

ನಿಶ್ಚಯವಾಗಿಯೂ, ಕ್ರೈಸ್ತ ಯುವ ವ್ಯಕ್ತಿಯೊಬ್ಬನು ನಿಖರವಾಗಿ ಎಷ್ಟು ವರ್ಷಗಳ ಶಾಲಾ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂಬ ವಿಷಯವನ್ನು ಬೈಬಲು ವಿವರವಾಗಿ ಹೇಳುವುದಿಲ್ಲ. ಅಥವಾ ಅದು ಶಿಕ್ಷಣವನ್ನು ಖಂಡಿಸುವುದಿಲ್ಲ. “ಮಹಾ ಉಪದೇಶಕ”ನಾದ (NW) ಯೆಹೋವನು, ಚೆನ್ನಾಗಿ ಓದುವಂತೆ ಹಾಗೂ ಸ್ವತಃ ತಮ್ಮನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಕೊಳ್ಳುವಂತೆ ತನ್ನ ಜನರನ್ನು ಉತ್ತೇಜಿಸುತ್ತಾನೆ. (ಯೆಶಾಯ 30:20; ಕೀರ್ತನೆ 1:2; ಇಬ್ರಿಯ 5:12) ಅಲ್ಲದೆ, ಶಿಕ್ಷಣವು ಜನರ ಹಾಗೂ ನಾವು ಜೀವಿಸುತ್ತಿರುವ ಲೋಕದ ಕುರಿತಾದ ನಮ್ಮ ತಿಳಿವಳಿಕೆಯನ್ನು ವಿಸ್ತರಿಸಬಲ್ಲದು.

ಆದರೂ, ಒಂದು ವಿಶ್ವವಿದ್ಯಾನಿಲಯದ ಡಿಗ್ರಿಯು, ಅದು ಕಡ್ಡಾಯಪಡಿಸುವ ಸಮಯ ಹಾಗೂ ಹಣದ ಬೃಹತ್‌ ಕಟ್ಟುಪಾಡಿಗೆ ಯಾವಾಗಲೂ ಅರ್ಹವಾಗಿರುತ್ತದೊ? * ಪ್ರೌಢಶಾಲೆಯ ಪದವೀಧರರಿಗಿಂತಲೂ ವಿಶ್ವವಿದ್ಯಾನಿಲಯದ ಪದವೀಧರರು ಹೆಚ್ಚು ಮೊತ್ತದ ವೇತನಗಳನ್ನು ಸಂಪಾದಿಸುತ್ತಾರೆ ಮತ್ತು ಕಡಿಮೆ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಾರೆಂದು ಸಂಖ್ಯಾಸಂಗ್ರಹಣಗಳು ಸೂಚಿಸುತ್ತವಾದರೂ, ನಿಮ್ಮ ಕಾಲೇಜ್‌ ಶಿಕ್ಷಣವನ್ನು ಯೋಜಿಸುವುದು (ಇಂಗ್ಲಿಷ್‌) ಎಂಬ ಪುಸ್ತಕವು, ಈ ಸಂಖ್ಯಾಸಂಗ್ರಹಣಗಳು ಕೇವಲ ಸರಾಸರಿ ಸಂಖ್ಯೆಗಳಾಗಿವೆ ಎಂದು ನಮಗೆ ಜ್ಞಾಪಕನೀಡುತ್ತದೆ. ನಿಜವಾಗಿ ಹೇಳುವುದಾದರೆ, ವಿಶ್ವವಿದ್ಯಾನಿಲಯದ ಪದವೀಧರರಲ್ಲಿ ಅಲ್ಪಸಂಖ್ಯಾತರು ಮಾತ್ರವೇ, ಗಗನಮುಟ್ಟುವ ವೇತನಗಳನ್ನು ಪಡೆದುಕೊಳ್ಳುತ್ತಾರೆ. ಉಳಿದವರಿಗೆ ತೀರ ಕೆಳಮಟ್ಟದ ಸಂಬಳಗಳನ್ನು ಕೊಡಲಾಗುತ್ತದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ಪದವೀಧರರಿಗೆ ಮಾತ್ರವೇ ಮೀಸಲಾಗಿರಿಸಲ್ಪಟ್ಟ ಅಧಿಕ ಆದಾಯಗಳು, “ಅಸಾಮಾನ್ಯ ಸಾಮರ್ಥ್ಯಗಳು, ಪ್ರೇರಕಶಕ್ತಿ, ಉದ್ಯೋಗದ ಕ್ಷೇತ್ರಾವಕಾಶಗಳು . . . ವಿಶೇಷ ಸಹಜ ಶಕ್ತಿ”ಗಳಂತಹ ಅಂಶಗಳಿಂದಲೂ ಫಲಿಸಬಹುದು. ಆದರೆ ಅದು ಕೇವಲ ಅವರ ಶಿಕ್ಷಣದ ಮಟ್ಟದ ಫಲಿತಾಂಶವಾಗಿರುವುದಿಲ್ಲ.

“ಒಂದು [ವಿಶ್ವವಿದ್ಯಾನಿಲಯ]ದ ಡಿಗ್ರಿಯು, ಉದ್ಯೋಗ ಮಾರುಕಟ್ಟೆಯಲ್ಲಿ ಈಗ ಯಶಸ್ಸಿನ ಖಾತ್ರಿನೀಡುವುದಿಲ್ಲ” ಎಂದು ಯು.ಎಸ್‌. ಕಾರ್ಮಿಕರ ಇಲಾಖೆಯು ಹೇಳುತ್ತದೆ. “ವೃತ್ತಿಪರ, ತಾಂತ್ರಿಕ, ಹಾಗೂ ನಿರ್ವಾಹಕ ಕಸಬುಗಳಲ್ಲಿ ಉದ್ಯೋಗಸ್ಥರಾಗಿರುವ [ವಿಶ್ವವಿದ್ಯಾನಿಲಯದ ಪದವೀಧರರ] ಅನುಪಾತವು . . . ಇಳಿಮುಖವಾಗಿದೆ. ಏಕೆಂದರೆ, ಈ ಕಸಬುಗಳು, ಪದವೀಧರರ ಹೆಚ್ಚುತ್ತಿದ್ದ ಸಂಖ್ಯೆಯನ್ನು ಹೀರಿಕೊಳ್ಳುವಷ್ಟು ಶೀಘ್ರವಾಗಿ ವಿಕಾಸಗೊಳ್ಳಲಿಲ್ಲ. ಫಲಿತಾಂಶವಾಗಿ, 1970 ಮತ್ತು 1984ರ ನಡುವೆ ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸಿದ [ವಿಶ್ವವಿದ್ಯಾನಿಲಯದ] ಸರಾಸರಿ 5 ಪದವೀಧರರಲ್ಲಿ ಒಬ್ಬನು, ಸಾಮಾನ್ಯವಾಗಿ ಒಂದು ಡಿಗ್ರಿಯ ಅಗತ್ಯವಿದ್ದಿಲ್ಲದ ಕೆಲಸಕ್ಕೆ ಸೇರಿಕೊಂಡನು. ಪದವೀಧರರ ಈ ಮಿತಿಮೀರಿದ ಸಂಖ್ಯೆಯು, 1990ಗಳ ಮಧ್ಯಭಾಗದಲ್ಲಿ ಮುಂದುವರಿಯುವುದು ಸಂಭವನೀಯ.”

ಪರ್ಯಾಲೋಚಿಸಲಿಕ್ಕಾಗಿ ಇನ್ನೂ ಹೆಚ್ಚಿನ ಸಂಗತಿಗಳು

ಒಂದು ವಿಶ್ವವಿದ್ಯಾನಿಲಯದ ಡಿಗ್ರಿಯು, ನಿಮ್ಮ ಉದ್ಯೋಗ ಪ್ರತೀಕ್ಷೆಗಳನ್ನು ಉತ್ತಮಗೊಳಿಸಬಹುದು ಅಥವಾ ಉತ್ತಮಗೊಳಿಸದಿರಬಹುದು. ಆದರೆ ಒಂದು ಸಂಗತಿಯಂತೂ ನಿರ್ವಿವಾದಾತ್ಮಕ: “ಉಳಿದಿರುವಂತಹ ಸಮಯವು ಕೊಂಚವಾಗಿದೆ”! (1 ಕೊರಿಂಥ 7:29, NW) ಅದರ ಎಲ್ಲಾ ಪೂರ್ವಕಲ್ಪಿತ ಪ್ರಯೋಜನಗಳಿಗಾಗಿ, ಒಂದು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ಅಥವಾ ಹೆಚ್ಚಿನ ವರ್ಷಗಳನ್ನು ಕಳೆಯುವುದು, ಆ ಉಳಿದಿರುವ ಸಮಯದ ಅತ್ಯುತ್ತಮ ಉಪಯೋಗವಾಗಿರಸಾಧ್ಯವೊ?—ಎಫೆಸ 5:16.

ಒಂದು ವಿಶ್ವವಿದ್ಯಾನಿಲಯದ ಶಿಕ್ಷಣವು ನಿಮ್ಮನ್ನು, ನಿಮ್ಮ ಗುರಿಗಳ ಕಡೆಗೆ ತಿರುಗಿಸುವುದೊ ಅಥವಾ ಅವುಗಳಿಂದ ದೂರಸರಿಸುವುದೊ? ಅಧಿಕ ಆದಾಯವು ಕ್ರೈಸ್ತ ಆದ್ಯತೆಯಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. (1 ತಿಮೊಥೆಯ 6:7, 8) ಆದರೂ, ಯು.ಎಸ್‌. ವಿಶ್ವವಿದ್ಯಾನಿಲಯದ ಆಡಳಿತಗಾರರ ಒಂದು ಸಮೀಕ್ಷೆಯು, ಇಂದಿನ ವಿದ್ಯಾರ್ಥಿಗಳನ್ನು ‘ವೃತ್ತಿ ಅಭಿಮುಖರು, ಪ್ರಾಪಂಚಿಕ ಯಶಸ್ಸಿನ ಚಿಂತೆಯುಳ್ಳವರು, ಸ್ವಾರ್ಥಾಸಕ್ತಿಯುಳ್ಳವರು’ ಎಂದು ವರ್ಣಿಸಿತು. ವಿದ್ಯಾರ್ಥಿಗಳ ಒಂದು ಗುಂಪು ಹೇಳಿದ್ದು: “ಹಣ. ನಾವು ಚರ್ಚಿಸುವುದೆಲ್ಲವೂ ಹಣದ ಬಗ್ಗೆಯೇ ಎಂಬಂತೆ ತೋರುತ್ತದೆ.” ತೀವ್ರ ಸ್ಪರ್ಧೆ ಹಾಗೂ ಸ್ವಾರ್ಥಭರಿತ ಪ್ರಾಪಂಚಿಕತೆಯ ವಾತಾವರಣದಲ್ಲಿ ಮುಳುಗಿಸಲ್ಪಟ್ಟಿರುವುದು, ನಿಮ್ಮನ್ನು ಹೇಗೆ ಬಾಧಿಸಬಹುದು?

ಈಗ ವಿಶ್ವವಿದ್ಯಾನಿಲಯಗಳಲ್ಲಿ 1960ಗಳ ಗಲಭೆಯ ದೃಶ್ಯಗಳು ಕಂಡುಬರದಿರಬಹುದು. ಆದರೆ ವಿಶ್ವವಿದ್ಯಾನಿಲಯದ ಗಲಾಟೆಯು ಕಡಿಮೆಯಾಗಿರುವುದು, ಕ್ಯಾಂಪಸ್‌ನ ಪರಿಸರವು ಹಿತಕರವಾಗಿರುತ್ತದೆ ಎಂಬುದನ್ನು ಅರ್ಥೈಸುವುದಿಲ್ಲ. ಕ್ಯಾಂಪಸ್‌ ಜೀವಿತದ ಒಂದು ಅಧ್ಯಯನವು ತೀರ್ಮಾನಿಸಿದ್ದು: “ವಿದ್ಯಾರ್ಥಿಗಳಿಗೆ ಇನ್ನು ಕೂಡ ವೈಯಕ್ತಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಬಹುಮಟ್ಟಿಗೆ ಅಪರಿಮಿತ ಸ್ವಾತಂತ್ರ್ಯವಿದೆ.” ಅಮಲೌಷಧಗಳು ಹಾಗೂ ಮದ್ಯಪಾನವು ಸ್ವಚ್ಛಂದವಾಗಿ ಉಪಯೋಗಿಸಲ್ಪಡುತ್ತದೆ. ಮತ್ತು ಸ್ವೇಚ್ಛಾಲೈಂಗಿಕತೆಯು ಅಪವಾದವಲ್ಲ, ನಿಯಮವಾಗಿದೆ. ನಿಮ್ಮ ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳ ವಿಷಯದಲ್ಲಿ ಇದು ಸತ್ಯವಾಗಿರುವುದಾದರೆ, ಅಲ್ಲಿ ವಾಸಿಸುವುದು, ನೈತಿಕವಾಗಿ ಶುದ್ಧರಾಗಿ ಉಳಿಯಲು ನೀವು ಮಾಡುವ ಪ್ರಯತ್ನಗಳಿಗೆ ಅಡ್ಡಿಯನ್ನುಂಟುಮಾಡಬಹುದೊ?—1 ಕೊರಿಂಥ 6:18.

ಇನ್ನೊಂದು ಚಿಂತೆಯು, ಪ್ರೌಢ ಶಿಕ್ಷಣಕ್ಕೆ ಒಡ್ಡಲ್ಪಡುವಿಕೆಯೊಂದಿಗೆ, “ಕೇಂದ್ರೀಯ ಧಾರ್ಮಿಕ ಸಿದ್ಧಾಂತಗಳಿಗೆ” ಕಡಮೆ ಅಂಟಿಕೊಳ್ಳುವುದಕ್ಕಿರುವ ಸಂಬಂಧವೇ. (ದ ಸೇಕ್ರೆಡ್‌ ಇನ್‌ ಎ ಸೆಕ್ಯುಲರ್‌ ಏಜ್‌) ಉನ್ನತ ದರ್ಜೆಗಳನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಒತ್ತಡವು, ಕೆಲವು ಕ್ರೈಸ್ತ ಯುವ ಜನರು ತಮ್ಮ ಆತ್ಮಿಕ ಚಟುವಟಿಕೆಗಳನ್ನು ಅಲಕ್ಷಿಸುವಂತೆ ಮಾಡಿದೆ. ಮತ್ತು ಹೀಗೆ ಅವರು ವಿಶ್ವವಿದ್ಯಾನಿಲಯಗಳಿಂದ ಪ್ರವರ್ಧಿಸಲ್ಪಡುವ ಐಹಿಕ ಆಲೋಚನೆಯ ಆಕ್ರಮಣಕ್ಕೆ ಸುಲಭಭೇದ್ಯರಾಗಿದ್ದಾರೆ. ಕೆಲವರು ತಮ್ಮ ನಂಬಿಕೆಯ ಸಂಬಂಧದಲ್ಲಿ ಹಡಗೊಡೆತವನ್ನು ಅನುಭವಿಸಿದ್ದಾರೆ.—ಕೊಲೊಸ್ಸೆ 2:8.

ವಿಶ್ವವಿದ್ಯಾನಿಲಯದ ಶಿಕ್ಷಣಕ್ಕೆ ಬದಲಿಗಳು

ಈ ಸಂಗತಿಗಳ ನೋಟದಲ್ಲಿ, ಅನೇಕ ಕ್ರೈಸ್ತ ಯುವ ಜನರು ವಿಶ್ವವಿದ್ಯಾನಿಲಯದ ಶಿಕ್ಷಣವನ್ನು ಪಡೆದುಕೊಳ್ಳದಿರುವ ನಿರ್ಧಾರ ಮಾಡಿದ್ದಾರೆ. ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಕೊಡಲ್ಪಡುವ ತರಬೇತು—ವಿಶೇಷವಾಗಿ ಸಾಪ್ತಾಹಿಕ ದೇವಪ್ರಭುತ್ವ ಶುಶ್ರೂಷಾ ಶಾಲೆ—ಉದ್ಯೋಗವನ್ನು ಕಂಡುಕೊಳ್ಳುವುದರಲ್ಲಿ ಒಂದು ನಿಜವಾದ ಪ್ರಯೋಜನವನ್ನು ತಮಗೆ ನೀಡಿದೆ ಎಂದು ಅನೇಕರು ಕಂಡುಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಡಿಗ್ರಿಯನ್ನು ಪಡೆದುಕೊಂಡಿರುವುದಿಲ್ಲವಾದರೂ, ಅಂತಹ ಯುವ ಜನರು ಸಮಚಿತ್ತರಾಗಿರಲು ಕಲಿಯುತ್ತಾರೆ, ತಮ್ಮನ್ನು ವ್ಯಕ್ತಪಡಿಸಿಕೊಳ್ಳುವುದರಲ್ಲಿ ಪ್ರವೀಣರಾಗಿರುತ್ತಾರೆ, ಮತ್ತು ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ಬಹಳ ಸಮರ್ಥರಾಗಿರುತ್ತಾರೆ. ಇದಲ್ಲದೆ, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಕೆಲವರು, ಟೈಪಿಂಗ್‌, ಕಂಪ್ಯೂಟರ್‌ ಪ್ರೋಗ್ರ್ಯಾಮಿಂಗ್‌, ಆಟೋ ರಿಪೇರಿ, ಮಷಿನ್‌-ಶಾಪ್‌ ಕೆಲಸ, ಮುಂತಾದ ಕೋರ್ಸ್‌ಗಳನ್ನು ಮಾಡುತ್ತಾರೆ. ಅಂತಹ ಕೌಶಲಗಳು ಅವರಿಗೆ, ಅಂಶಕಾಲಿಕ ಉದ್ಯೋಗ ಹಾಗೂ ಅನೇಕವೇಳೆ ತುಂಬಾ ಬೇಡಿಕೆಯಿರುವ ಕೆಲಸಗಳನ್ನು ದೊರಕಿಸಬಹುದು. ಮತ್ತು ಅನೇಕ ಯುವ ಜನರು ‘ಕೈಯಿಂದ ಯಾವುದಾದರೊಂದು ಉದ್ಯೋಗವನ್ನು ಮಾಡಲು’ ಉಪೇಕ್ಷಿಸುವುದಾದರೂ, ಬೈಬಲು “ಶ್ರಮದ ಕೆಲಸ” (NW) ಮಾಡುವುದಕ್ಕೆ ಮಹತ್ವಕೊಡುತ್ತದೆ. (ಎಫೆಸ 4:28; ಜ್ಞಾನೋಕ್ತಿ 22:29ನ್ನು ಹೋಲಿಸಿರಿ.) ಅಷ್ಟೇಕೆ, ಯೇಸು ಕ್ರಿಸ್ತನು ತಾನೇ ಒಂದು ವೃತ್ತಿಯನ್ನು ಎಷ್ಟು ಚೆನ್ನಾಗಿ ಕಲಿತುಕೊಂಡಿದ್ದನೆಂದರೆ, ಅವನು “ಬಡಗಿ”ಯೆಂದು ಕರೆಯಲ್ಪಟ್ಟನು!—ಮಾರ್ಕ 6:3.

ಕೆಲವು ದೇಶಗಳಲ್ಲಿ ವಿಶ್ವವಿದ್ಯಾನಿಲಯದ ಪದವೀಧರರು ಎಷ್ಟರ ಮಟ್ಟಿಗೆ ಉದ್ಯೋಗ ಮಾರುಕಟ್ಟೆಗೆ ಪ್ರವಹಿಸಿದ್ದಾರೆಂದರೆ, ಹೆಚ್ಚಿನ ಕೆಲಸ ತರಬೇತಿಯಿಲ್ಲದೆ, ಸಾಧಾರಣಮಾತ್ರದ ಕೆಲಸಗಳನ್ನು ದೊರಕಿಸಿಕೊಳ್ಳುವುದೂ ಅವರಿಗೆ ಕಷ್ಟಕರವಾಗಿದೆ ಎಂಬುದು ನಿಜ. ಆದರೆ ಅನೇಕವೇಳೆ ಅಪ್ರೆಂಟಿಸ್‌ಶಿಫ್‌ (ಉದ್ಯೋಗಾರ್ಥಿ) ಕಾರ್ಯಕ್ರಮಗಳು, ಸಹಾಯಕ ಅಥವಾ ತಾಂತ್ರಿಕ ಶಾಲೆಗಳು, ಮತ್ತು ಅಲ್ಪಾವಧಿಯ ವಿಶ್ವವಿದ್ಯಾನಿಲಯದ ಕೋರ್ಸ್‌ಗಳು ಇರುತ್ತವೆ. ಇವು ಕನಿಷ್ಠ ಪ್ರಮಾಣದ ಸಮಯ ಹಾಗೂ ಹಣದ ಬಂಡವಾಳದೊಂದಿಗೆ, ಉದ್ಯೋಗ ಮಾರುಕಟ್ಟೆಗೆ ಅನುಕೂಲಕರವಾದ ಕೌಶಲಗಳನ್ನು ಕಲಿಸುತ್ತವೆ. ಉದ್ಯೋಗ ಸಂಖ್ಯಾಸಂಗ್ರಹಣಗಳು ಪರಿಗಣಿಸದ ಒಂದು ಸಂಗತಿಯಿದೆ ಎಂಬುದನ್ನು ಎಂದಿಗೂ ಮರೆಯದಿರಿ: ಆತ್ಮಿಕ ಅಭಿರುಚಿಗಳಿಗೆ ಪ್ರಾಧಾನ್ಯವನ್ನು ಕೊಡುವವರಿಗಾಗಿ ದೇವರು ಒದಗಿಸುವ ವಾಗ್ದಾನಮಾಡಿದ್ದಾನೆ.—ಮತ್ತಾಯ 6:33.

ಉದ್ಯೋಗ ಪ್ರತೀಕ್ಷೆಗಳು ಹಾಗೂ ಶೈಕ್ಷಣಿಕ ವ್ಯವಸ್ಥೆಗಳು, ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯಿರುತ್ತವೆ. ಯುವ ಜನರಿಗೆ ವಿಭಿನ್ನವಾದ ಸಾಮರ್ಥ್ಯಗಳು ಹಾಗೂ ಪ್ರವೃತ್ತಿಗಳು ಇರುತ್ತವೆ. ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿನ ಒಂದು ಜೀವನವೃತ್ತಿಯು ಪ್ರಯೋಜನದಾಯಕವೆಂದು ಶಿಫಾರಸ್ಸು ಮಾಡಲ್ಪಡುವಾಗಲೂ, ಇದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಹೀಗೆ ನೀವು ಹಾಗೂ ನಿಮ್ಮ ಹೆತ್ತವರು, ನಿಮಗೆ ಎಷ್ಟು ಶಿಕ್ಷಣವು ಯೋಗ್ಯವಾಗಿದೆ ಎಂಬುದನ್ನು ನಿರ್ಧರಿಸುವುದರಲ್ಲಿ ಒಳಗೂಡಿರುವ ಎಲ್ಲ ಸಂಗತಿಗಳನ್ನು ಜಾಗರೂಕತೆಯಿಂದ ತೂಗಿನೋಡಬೇಕು. ಅಂತಹ ನಿರ್ಧಾರಗಳನ್ನು ಮಾಡುವುದರಲ್ಲಿ ‘ಪ್ರತಿಯೊಬ್ಬನೂ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.’—ಗಲಾತ್ಯ 6:5.

ಉದಾಹರಣೆಗಾಗಿ, ನೀವು ವಿಶ್ವವಿದ್ಯಾನಿಲಯಕ್ಕೆ ಹೋಗಲೇಬೇಕೆಂದು ನಿಮ್ಮ ಹೆತ್ತವರು ಒತ್ತಾಯಿಸುವಲ್ಲಿ, ನಿಮಗೆ ಯಾವುದೇ ಮಾರ್ಗವಿಲ್ಲ. ನೀವು ಅವರ ಮೇಲ್ವಿಚಾರಣೆಯ ಕೆಳಗೆ ಜೀವಿಸುವ ವರೆಗೆ ಅವರಿಗೆ ವಿಧೇಯರಾಗಬೇಕು. * (ಎಫೆಸ 6:1-3) ಬಹುಶಃ ನೀವು ಮನೆಯಲ್ಲಿಯೇ ವಾಸಿಸುವುದನ್ನು ಮುಂದುವರಿಸಸಾಧ್ಯವಿದೆ, ಮತ್ತು ವಿಶ್ವವಿದ್ಯಾನಿಲಯ ರಂಗದಲ್ಲಿ ಸಿಕ್ಕಿಬೀಳುವುದನ್ನು ತಪ್ಪಿಸಸಾಧ್ಯವಿದೆ. ನಿಮ್ಮ ಜೀವನೋದ್ಯೋಗಗಳ ವಿಷಯದಲ್ಲಿ ಆಯ್ಕೆಮಾಡುವವರಾಗಿರಿ. ಉದಾಹರಣೆಗೆ, ಲೌಕಿಕ ತತ್ವಜ್ಞಾನಗಳಿಗೆ ಬದಲಾಗಿ ಕೆಲಸದ ಕೌಶಲಗಳನ್ನು ಕಲಿತುಕೊಳ್ಳುವುದರಲ್ಲಿ ಕೇಂದ್ರೀಕರಿಸಿರಿ. ನಿಮ್ಮ ಸಹವಾಸಗಳ ಕುರಿತು ಎಚ್ಚರಿಕೆಯಿಂದಿರಿ. (1 ಕೊರಿಂಥ 15:33) ಕೂಟದ ಹಾಜರಿ, ಕ್ಷೇತ್ರ ಸೇವೆ, ಮತ್ತು ವೈಯಕ್ತಿಕ ಅಭ್ಯಾಸದ ಮೂಲಕ ನಿಮ್ಮನ್ನು ಆತ್ಮಿಕವಾಗಿ ಬಲವಾಗಿರಿಸಿಕೊಳ್ಳಿರಿ. ವಿಶ್ವವಿದ್ಯಾನಿಲಯಕ್ಕೆ ಹೋಗುವಂತಹ ಹಂಗಿಗೊಳಗಾಗಿರುವ ಕೆಲವು ಯುವ ಜನರು, ಪಯನೀಯರ್‌ ಸೇವೆಯನ್ನು ಮಾಡುವಂತೆ ಸಾಧ್ಯಮಾಡಿದ ಕೋರ್ಸುಗಳ ಕಾರ್ಯತಖ್ತೆಯನ್ನು ಆರಿಸಿಕೊಳ್ಳುವ ಮೂಲಕ, ಪಯನೀಯರ್‌ ಸೇವೆಯನ್ನು ಮಾಡಲೂ ಶಕ್ತರಾಗಿದ್ದಾರೆ.

ನಿಮ್ಮ ಜೀವನವೃತ್ತಿಯನ್ನು ಜಾಗರೂಕತೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಆರಿಸಿಕೊಳ್ಳಿರಿ. ಇದರಿಂದಾಗಿ ಸ್ವತಃ ನಿಮಗೆ ವೈಯಕ್ತಿಕ ಸಂತೋಷವು ದೊರಕುತ್ತದೆ ಮಾತ್ರವಲ್ಲ, ನೀವು ‘ಪರಲೋಕರಾಜ್ಯದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಲು’ ನಿಮ್ಮನ್ನು ಶಕ್ತರನ್ನಾಗಿ ಮಾಡುವುದು.—ಮತ್ತಾಯ 6:20.

[ಅಧ್ಯಯನ ಪ್ರಶ್ನೆಗಳು]

^ ಅಮೆರಿಕದಲ್ಲಿ, ವಿಶ್ವವಿದ್ಯಾನಿಲಯದ ವೆಚ್ಚಗಳು, ಒಂದು ವರ್ಷಕ್ಕೆ ಸರಾಸರಿ 10,000 ಡಾಲರ್‌ಗಳಿಗಿಂತಲೂ ಹೆಚ್ಚಾಗಿರುತ್ತವೆ! ಅನೇಕವೇಳೆ ತಮ್ಮ ಋಣಬದ್ಧತೆಯನ್ನು ಹಿಂದಿರುಗಿಸಲು ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳು ಹಿಡಿಯುತ್ತವೆ.

^ ನಿಮ್ಮ ಹೆತ್ತವರನ್ನು ಸಂತೃಪ್ತಿಪಡಿಸಲಿಕ್ಕಾಗಿ ನಾಲ್ಕು ವರ್ಷದ ಡಿಗ್ರಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿರಲಿಕ್ಕಿಲ್ಲ. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಅಸೋಸಿಯೇಟ್‌ ಡಿಗ್ರಿಯು, ಅನೇಕ ವೃತ್ತಿಪರ ಹಾಗೂ ಸೇವಾಸಂಬಂಧಿತ ಕ್ಷೇತ್ರಗಳಲ್ಲಿನ ಉದ್ಯೋಗಸ್ಥರಿಗೆ ಅಂಗೀಕಾರಾರ್ಹವಾಗಿದೆ. ಮತ್ತು ಅದನ್ನು ಎರಡೇ ವರ್ಷಗಳಲ್ಲಿ ಪಡೆದುಕೊಳ್ಳಸಾಧ್ಯವಿದೆ.

ಚರ್ಚೆಗಾಗಿ ಪ್ರಶ್ನೆಗಳು

◻ ಐಹಿಕ ಜೀವನವೃತ್ತಿಗಳು ವೈಯಕ್ತಿಕ ಸಂತೋಷವನ್ನು ತರುವುದರಲ್ಲಿ ಅನೇಕವೇಳೆ ಏಕೆ ಅಸಫಲಗೊಳ್ಳುತ್ತವೆ?

◻ ದೇವಭಯವುಳ್ಳ ಎಲ್ಲಾ ಯುವ ಜನರು, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಒಂದು ಜೀವನವೃತ್ತಿಯನ್ನು ಏಕೆ ಪರಿಗಣಿಸಬೇಕು?

◻ ಅತ್ಯುನ್ನತ ಶಿಕ್ಷಣದ ಪ್ರತಿಪಾದಿತ ಪ್ರಯೋಜನಗಳು ಯಾವುವು, ಮತ್ತು ಅಂತಹ ಪ್ರತಿಪಾದನೆಗಳು ಯಾವಾಗಲೂ ಸತ್ಯವಾಗಿರುತ್ತವೊ?

◻ ವಿಶ್ವವಿದ್ಯಾನಿಲಯದ ಶಿಕ್ಷಣವು ಯಾವ ಅಪಾಯಗಳನ್ನು ಒಡ್ಡಬಹುದು?

◻ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕಿರುವ ಯಾವ ಬದಲಿಗಳನ್ನು ಯುವ ವ್ಯಕ್ತಿಯೊಬ್ಬನು ಪರಿಗಣಿಸಸಾಧ್ಯವಿದೆ?

[ಪುಟ 175ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕೆಲಸವೊಂದು ಐಶ್ವರ್ಯವನ್ನು ಹಾಗೂ ಮಾನ್ಯತೆಯನ್ನು ತರಬಹುದಾದರೂ, ಅದು ಒಬ್ಬನ ‘ಆತ್ಮಿಕ ಆವಶ್ಯಕತೆಗಳ’ನ್ನು ತೃಪ್ತಿಪಡಿಸಸಾಧ್ಯವಿಲ್ಲ

[ಪುಟ 177 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಒಂದು [ವಿಶ್ವವಿದ್ಯಾನಿಲಯದ] ಡಿಗ್ರಿಯು, ಉದ್ಯೋಗ ಮಾರುಕಟ್ಟೆಯಲ್ಲಿ ಈಗ ಯಶಸ್ಸಿನ ಖಾತ್ರಿನೀಡುವುದಿಲ್ಲ”