ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹುಡುಗರು ನನ್ನನ್ನು ನನ್ನಷ್ಟಕ್ಕೇ ಇರುವಂತೆ ಬಿಡುವುದಿಲ್ಲವೇಕೆ?

ಹುಡುಗರು ನನ್ನನ್ನು ನನ್ನಷ್ಟಕ್ಕೇ ಇರುವಂತೆ ಬಿಡುವುದಿಲ್ಲವೇಕೆ?

ಅಧ್ಯಾಯ 19

ಹುಡುಗರು ನನ್ನನ್ನು ನನ್ನಷ್ಟಕ್ಕೇ ಇರುವಂತೆ ಬಿಡುವುದಿಲ್ಲವೇಕೆ?

ಆ ಹುಡುಗನ ನಡಿಗೆಯು ಅವನೆಂತಹ ವ್ಯಕ್ತಿಯಾಗಿದ್ದಾನೆಂಬುದನ್ನು ಹೊರಗೆಡಹುತ್ತದೆ. ಉದ್ವೇಗಗೊಂಡಿದ್ದು, ತನ್ನ ಕುರಿತು ಅನಿಶ್ಚಿತನಾಗಿದ್ದು, ಅವನು ತನ್ನ ಹೊಸ ಪರಿಸರಗಳಿಂದ ತಬ್ಬಿಬ್ಬುಗೊಳಿಸಲ್ಪಟ್ಟಿದ್ದಾನೆಂಬುದು ಸುಸ್ಪಷ್ಟ. ಹಿರಿಯ ವಿದ್ಯಾರ್ಥಿಗಳು ಅವನು ಶಾಲೆಗೆ ಹೊಸಬನಾಗಿದ್ದಾನೆಂದು ಗುರುತಿಸುತ್ತಾರೆ. ಕೆಲವೊಂದು ಕ್ಷಣಗಳೊಳಗೇ ಅಶ್ಲೀಲ ಮಾತುಗಳಿಂದ ಅವನ ಮೇಲೆ ದಾಳಿಮಾಡಲು ಆರಂಭಿಸಿರುವ ಯುವ ಜನರಿಂದ ಅವನು ಸುತ್ತುವರಿಯಲ್ಪಡುತ್ತಾನೆ! ನಾಚಿಕೆಯಿಂದ ಕೆಂಪೇರಿದವನಾಗಿ, ಅವನು ಬಹು ಸಮೀಪದಲ್ಲಿದ್ದ ಆಶ್ರಯಸ್ಥಾನ—ಶೌಚಾಲಯಕ್ಕೆ ಪಲಾಯನಮಾಡುತ್ತಾನೆ. ನಗುವು ಗೋಡೆಗಳಲ್ಲಿ ಪ್ರತಿಧ್ವನಿಸುತ್ತದೆ.

ಇತರರನ್ನು ರೇಗಿಸುವುದು, ಕೀಟಲೆಮಾಡುವುದು, ಮತ್ತು ಅವಮಾನಿಸುವುದು—ಇವು ಅನೇಕ ಯುವ ಜನರ ಕ್ರೂರ ಕಾಲಕ್ಷೇಪಗಳಾಗಿವೆ. ಬೈಬಲ್‌ ಸಮಯಗಳಲ್ಲಿಯೂ, ಕೆಲವು ಯುವ ಜನರು ತುಚ್ಛವಾದ ಅನಿಯತತೆಯನ್ನು ಪ್ರದರ್ಶಿಸಿದರು. ಉದಾಹರಣೆಗೆ, ಎಳೆಯ ಹುಡುಗರ ಗುಂಪೊಂದು ಒಮ್ಮೆ ಪ್ರವಾದಿ ಎಲೀಷನನ್ನು ರೇಗಿಸಿತು. ಅವನ ಸ್ಥಾನಕ್ಕೆ ಅಗೌರವ ತೋರಿಸುತ್ತಾ, ಆ ಎಳೆಯರು ಅಗೌರವಯುತವಾಗಿ ಕೂಗಿದ್ದು: “ಬೋಳಮಂಡೆಯವನೇ, ಏರು; ಬೋಳಮಂಡೆಯವನೇ, ಏರು.” (2 ಅರಸು 2:23-25) ಇಂದು, ಅನೇಕ ಯುವ ಜನರು ತದ್ರೀತಿಯಲ್ಲಿ ಇತರರ ಕುರಿತು ಮುಖಭಂಗಮಾಡುವ, ನೋವನ್ನುಂಟುಮಾಡುವ ಹೇಳಿಕೆಗಳನ್ನು ಹೇಳುವ ಪ್ರವೃತ್ತಿಯವರಾಗಿದ್ದಾರೆ.

“ನನ್ನ ಒಂಬತ್ತನೆಯ ತರಗತಿಯಲ್ಲಿ ನಾನು ಗಿಡ್ಡನಾಗಿದ್ದೆ” ಎಂದು, ತರಗತಿ ಕೋಣೆಯಲ್ಲಿ ವೃದ್ಧಿಯಾಗುತ್ತಿರುವ ವೇದನೆಗಳು (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕರಲ್ಲಿ ಒಬ್ಬನು ನೆನಪಿಸಿಕೊಳ್ಳುತ್ತಾನೆ. “ತರಗತಿಯಲ್ಲಿ ಅತ್ಯಂತ ಬುದ್ಧಿವಂತ ಹುಡುಗನಾಗಿರುವುದು ಮತ್ತು ಅತ್ಯಂತ ಗಿಡ್ಡ ಹುಡುಗನಾಗಿರುವುದು, ಜೂನಿಯರ್‌ ಪ್ರೌಢಶಾಲೆಗೆ ಒಂದು ವಿಧ್ವಂಸಕ ಸಂಯೋಗವಾಗಿತ್ತು: ನಾನು ಗಿಡ್ಡನಾಗಿರುವುದಕ್ಕಾಗಿ ಮನನೋಯಿಸಲು ಬಯಸದಿದ್ದವರು, ನಾನು ಬುದ್ಧಿವಂತ ಹುಡುಗನಾಗಿದ್ದುದಕ್ಕಾಗಿ ಮನನೋಯಿಸಿದರು. ‘ನಾಲ್ಕು ಕಣ್ಣುಗಳು’ ಎಂದು ಕರೆಸಿಕೊಳ್ಳುವುದಕ್ಕೆ ಕೂಡಿಸಿ, ನನ್ನನ್ನು ‘ನಡೆದಾಡುವ ಶಬ್ದಕೋಶ’ವೆಂದೂ ಮತ್ತು ಇತರ 800 ವಿಶೇಷಣ [ನಿಂದಾತ್ಮಕ ಮಾತುಗಳು]ಗಳಿಂದಲೂ ಕರೆಯಲಾಯಿತು.” ಮಕ್ಕಳ ಒಂಟಿತನ (ಇಂಗ್ಲಿಷ್‌) ಎಂಬ ಪುಸ್ತಕದ ಲೇಖಕನು ಕೂಡಿಸುವುದು: “ಶಾರೀರಿಕ ಅಂಗವಿಕಲತೆ, ಮಾತಿನ ಸಮಸ್ಯೆಗಳು, ಅಥವಾ ಸುವ್ಯಕ್ತವಾದ ಶಾರೀರಿಕ ಹಾಗೂ ವರ್ತನಾ ವೈಲಕ್ಷಣ್ಯಗಳನ್ನು ಹೊಂದಿರುವ ಮಕ್ಕಳು, ಬೇರೆ ಮಕ್ಕಳಿಂದ ಕೀಟಲೆಮಾಡಲ್ಪಡಲು ಸುಲಭವಾದ ಗುರಿಹಲಗೆಗಳಾಗಿದ್ದಾರೆ.”

ಕೆಲವೊಮ್ಮೆ ಯುವ ಜನರು, ಯಾವುದು ಕ್ರೂರ ಸ್ಪರ್ಧೆಗೆ ಸಮನಾಗಿದೆಯೋ ಅದರಲ್ಲಿ ಸೇರುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ: ಒಬ್ಬರಿಗೊಬ್ಬರು ಅತ್ಯಧಿಕವಾಗಿ ನೋವನ್ನುಂಟುಮಾಡುವ ಹೀನೈಸುವ ಮಾತುಗಳನ್ನು (ಅನೇಕವೇಳೆ ಇನ್ನೊಬ್ಬರ ಹೆತ್ತವರ ಕುರಿತಾಗಿ) ಆಡುತ್ತಾರೆ. ಆದರೆ ಅನೇಕ ಯುವ ಜನರು ಸಮಾನಸ್ಥರ ರೇಗಿಸುವಿಕೆಯ ಎದುರಿನಲ್ಲಿ ರಕ್ಷಣೆರಹಿತರಾಗಿದ್ದಾರೆ. ಜೊತೆ ಸಹಪಾಠಿಗಳ ಕೀಟಲೆ ಹಾಗೂ ರೇಗಿಸುವಿಕೆಯ ಕಾರಣದಿಂದ, ಕೆಲವು ದಿವಸಗಳ ವರೆಗೆ ಅವನು ಎಷ್ಟು ಭಯಗೊಂಡನೆಂದರೆ ಹಾಗೂ ಅಸಂತೋಷಿತನಾದನೆಂದರೆ, ತಾನು ‘ವಾಂತಿಮಾಡುವೆನೆಂದು ಭಾವಿಸಿದ್ದೆ’ ಎಂದು ಒಬ್ಬ ಯೌವನಸ್ಥನು ನೆನಪಿಸಿಕೊಳ್ಳುತ್ತಾನೆ. ಇತರ ವಿದ್ಯಾರ್ಥಿಗಳು ತನಗೇನನ್ನು ಮಾಡುವರೆಂಬುದರ ಕುರಿತು ಚಿಂತಿಸುತ್ತಿದ್ದುದರಿಂದಾಗಿ, ಅವನಿಗೆ ತನ್ನ ಅಭ್ಯಾಸಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ.

ನಗುವ ವಿಷಯವಲ್ಲ

ನೀವೆಂದಾದರೂ ಸಮಾನಸ್ಥರ ಕ್ರೂರತ್ವಕ್ಕೆ ಗುರಿಯಾಗಿದ್ದೀರೊ? ಹಾಗಿದ್ದಲ್ಲಿ ದೇವರು ಅದನ್ನು ಒಂದು ನಗುವ ವಿಷಯವಾಗಿ ವೀಕ್ಷಿಸುವುದಿಲ್ಲವೆಂಬುದನ್ನು ತಿಳಿದುಕೊಳ್ಳಲು ನೀವು ಸಾಂತ್ವನಗೊಳ್ಳಬಹುದು. ಅಬ್ರಹಾಮನ ಮಗನಾದ ಇಸಾಕನು ಮೊಲೆಹಾಲುಬಿಟ್ಟ ದಿನವನ್ನು ಆಚರಿಸುವುದಕ್ಕಾಗಿ ಏರ್ಪಡಿಸಲ್ಪಟ್ಟ ಔತಣದ ಕುರಿತಾದ ಬೈಬಲ್‌ ವೃತ್ತಾಂತವನ್ನು ಪರಿಗಣಿಸಿರಿ. ಸುವ್ಯಕ್ತವಾಗಿಯೇ, ಇಸಾಕನು ಪಡೆದುಕೊಳ್ಳಲಿದ್ದ ಬಾಧ್ಯತೆಯ ಕುರಿತು ಈರ್ಷ್ಯೆಗೊಂಡವನಾಗಿ, ಅಬ್ರಹಾಮನ ಹಿರಿಯ ಮಗನಾದ ಇಷ್ಮಾಯೇಲನು, ಇಸಾಕನಿಗೆ “ತಮಾಷೆ ಮಾಡ”ಲಾರಂಭಿಸಿದನು (NW). ಆದರೂ ಒಳ್ಳೆಯ ಸ್ವರೂಪಲಕ್ಷಣದ ತಮಾಷೆಗೆ ಬದಲಾಗಿ, ಆ ಕೀಟಲೆಯು ‘ಹಿಂಸೆ’ಗೆ ಸರಿಸಮನಾಗಿತ್ತು. (ಗಲಾತ್ಯ 4:29) ಹೀಗೆ ಇಸಾಕನ ತಾಯಿಯಾದ ಸಾರಳು, ಕೀಟಲೆಯಲ್ಲಿದ್ದ ಹಗೆತನವನ್ನು ಅರ್ಥಮಾಡಿಕೊಂಡಳು. ತನ್ನ ಮಗನಾದ ಇಸಾಕನ ಮೂಲಕ, ಒಂದು “ಸಂತತಿ”ಯನ್ನು, ಅಥವಾ ಮೆಸ್ಸೀಯನನ್ನು ಹುಟ್ಟಿಸುವ ಯೆಹೋವನ ಉದ್ದೇಶಕ್ಕೆ ಒಂದು ಅವಮರ್ಯಾದೆಯೋಪಾದಿ ಅವಳದನ್ನು ಪರಿಗಣಿಸಿದಳು. ಸಾರಳ ಬಿನ್ನಹದಂತೆ, ಇಷ್ಮಾಯೇಲನೂ ಅವನ ತಾಯಿಯೂ ಅಬ್ರಹಾಮನ ಮನೆವಾರ್ತೆಯಿಂದ ಹೊರಹಾಕಲ್ಪಟ್ಟರು.—ಆದಿಕಾಂಡ 21:8-14.

ತದ್ರೀತಿಯಲ್ಲಿ, ಯುವ ಜನರು ನಿಮ್ಮನ್ನು ದುರುದ್ದೇಶದಿಂದ ರೇಗಿಸುವಾಗ—ವಿಶೇಷವಾಗಿ ನೀವು ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಪರಿಶ್ರಮಿಸುವುದರಿಂದ ಅವರು ನಿಮ್ಮನ್ನು ರೇಗಿಸುವಾಗ ಅದು ನಗುವ ವಿಷಯವಾಗಿರುವುದಿಲ್ಲ. ಉದಾಹರಣೆಗೆ, ಕ್ರೈಸ್ತ ಯುವ ಜನರು ಇತರರೊಂದಿಗೆ ತಮ್ಮ ನಂಬಿಕೆಯನ್ನು ಹಂಚಿಕೊಳ್ಳುವ ವಿಷಯದಲ್ಲಿ ಖ್ಯಾತರಾಗಿದ್ದಾರೆ. ಆದರೆ, ಯೆಹೋವನ ಯುವ ಸಾಕ್ಷಿಗಳ ಒಂದು ಗುಂಪು ಹೇಳಿದಂತೆ: “ನಾವು ಮನೆಯಿಂದ ಮನೆಗೆ ಸಾರುವುದರಿಂದ, ಶಾಲೆಯಲ್ಲಿನ ಹುಡುಗರು ನಮಗೆ ತಮಾಷೆ ಮಾಡುತ್ತಾರೆ, ಮತ್ತು ಅದಕ್ಕಾಗಿಯೇ ಅವರು ನಮ್ಮನ್ನು ಕಡೆಗಣಿಸುತ್ತಾರೆ.” ಹೌದು, ಪುರಾತನ ಸಮಯಗಳ ದೇವರ ನಂಬಿಗಸ್ತ ಸೇವಕರಂತೆ, ಅನೇಕ ಕ್ರೈಸ್ತ ಯುವ ಜನರು “ಅಪಹಾಸ್ಯದ ಪರೀಕ್ಷೆ”ಯನ್ನು (NW) ಅನುಭವಿಸುತ್ತಾರೆ. (ಇಬ್ರಿಯ 11:36) ಅಂತಹ ಅಪಮಾನಗಳನ್ನು ತಾಳಿಕೊಳ್ಳುವುದರಲ್ಲಿನ ಅವರ ಧೈರ್ಯಕ್ಕಾಗಿ ಅವರು ಪ್ರಶಂಸಿಸಲ್ಪಡಬೇಕು!

ಅವರದನ್ನು ಮಾಡುವ ಕಾರಣ

ಆದರೂ, ನಿಮ್ಮ ಪೀಡಕರು, ನಿಮ್ಮ ಗೋಜಿಗೆ ಬರದಂತೆ ಮಾಡುವುದು ಹೇಗೆ ಎಂದು ನೀವು ಕುತೂಹಲಪಡಬಹುದು. ಮೊದಲಾಗಿ, ಕೀಟಲೆಯು ಏಕೆ ಮಾಡಲ್ಪಡುತ್ತದೆ ಎಂಬುದನ್ನು ಪರಿಗಣಿಸಿರಿ. ಬೈಬಲು “ನಗುವಿನಲ್ಲಿಯೂ ಹೃದಯಕ್ಕೆ ವ್ಯಥೆಯಿರಬಹುದು” (NW) ಎಂದು, ಜ್ಞಾನೋಕ್ತಿ 14:13ರಲ್ಲಿ ಹೇಳುತ್ತದೆ. ಯುವ ಜನರ ಗುಂಪೊಂದು ಯಾರನ್ನಾದರೂ ರೇಗಿಸುವಾಗ ನಗುವು ಹೊರಹೊಮ್ಮುತ್ತದೆ. ಆದರೆ ಅವರು ‘ಹೃದಯಾನಂದದಿಂದ ಹರ್ಷಧ್ವನಿಗೈಯು’ತ್ತಿಲ್ಲ. (ಯೆಶಾಯ 65:14) ಅನೇಕವೇಳೆ ನಗುವು ಕೇವಲ ಆಂತರಿಕ ಸಂಕ್ಷೋಭೆಯನ್ನು ಮರೆಮಾಚುವಂತಹದ್ದಾಗಿರುತ್ತದೆ. ಶೌರ್ಯಾಟೋಪದ ಹಿಂದೆ, ಪೀಡಕರು ನಿಜವಾಗಿಯೂ ಹೀಗೆ ಹೇಳಿಕೊಳ್ಳುತ್ತಿರಬಹುದು: ‘ನಾವು ನಮ್ಮನ್ನೇ ಇಷ್ಟಪಡುವುದಿಲ್ಲ, ಆದರೆ ಯಾರನ್ನಾದರೂ ಕಡೆಗಣಿಸುವುದು ನಮಗೆ ಹೆಚ್ಚು ಉತ್ತಮವಾದ ಅನಿಸಿಕೆಯನ್ನುಂಟುಮಾಡುತ್ತದೆ.’

ಈರ್ಷ್ಯೆಯು ಸಹ ಆಕ್ರಮಣಗಳನ್ನು ಪ್ರವರ್ಧಿಸುತ್ತದೆ. ಹದಿವಯಸ್ಕನಾದ ಯೋಸೇಫನ ಕುರಿತಾದ ಬೈಬಲ್‌ ವೃತ್ತಾಂತವನ್ನು ನೆನಪಿಸಿಕೊಳ್ಳಿರಿ. ಅವನು ತನ್ನ ತಂದೆಯ ಅಚ್ಚುಮೆಚ್ಚಿನ ಮಗನಾಗಿದ್ದುದರಿಂದ, ಅವನ ಸ್ವಂತ ಸಹೋದರರೇ ಅವನ ಮೇಲೆ ತಿರುಗಿಬಿದ್ದರು. ತೀವ್ರವಾದ ಈರ್ಷ್ಯೆಯು ಕೇವಲ ಶಾಬ್ದಿಕ ನಿಂದೆಗೆ ಮಾತ್ರವಲ್ಲ, ಕೊಲೆಯ ಹಂಚಿಕೆಯ ವರೆಗೂ ಮುನ್ನಡಿಸಿತು! (ಆದಿಕಾಂಡ 37:4, 11, 20) ತದ್ರೀತಿಯಲ್ಲಿ ಇಂದು, ವಿಶೇಷವಾಗಿ ಚತುರನಾಗಿರುವ, ಅಥವಾ ಶಿಕ್ಷಕರಿಂದ ಬಹಳ ಇಷ್ಟಪಡಲ್ಪಡುವ ಒಬ್ಬ ವಿದ್ಯಾರ್ಥಿಯು, ತನ್ನ ಸಮಾನಸ್ಥರ ಈರ್ಷ್ಯೆಯನ್ನು ಕೆರಳಿಸಬಹುದು. ಮುಖಭಂಗಪಡಿಸುವ ಮಾತುಗಳು ‘ಅವನನ್ನು ತಕ್ಕ ಸ್ಥಳದಲ್ಲಿರಿ’ಸುವಂತೆ ತೋರುತ್ತವೆ.

ಹೀಗೆ ಅಭದ್ರತೆ, ಈರ್ಷ್ಯೆ, ಮತ್ತು ಕಡಿಮೆ ಆತ್ಮಾಭಿಮಾನಗಳು ಅನೇಕವೇಳೆ ಕುಚೋದ್ಯಕ್ಕೆ ಕಾರಣಗಳಾಗಿವೆ. ಹಾಗಾದರೆ, ಯಾವನೋ ಒಬ್ಬ ಅಭದ್ರ ಯೌವನಸ್ಥನು ತನ್ನ ಆತ್ಮಾಭಿಮಾನವನ್ನು ಕಳೆದುಕೊಂಡಿದ್ದಾನೆಂದರೆ, ನೀವು ಏಕೆ ನಿಮ್ಮ ಆತ್ಮಾಭಿಮಾನವನ್ನು ಕಳೆದುಕೊಳ್ಳಬೇಕು?

ರೇಗಿಸುವಿಕೆಯನ್ನು ನಿಲ್ಲಿಸುವುದು

“ಕುಚೋದ್ಯಮಾಡುವವರ ಸ್ಥಳದಲ್ಲಿ ಕುಳಿತುಕೊಂಡಿರದ . . . ಮನುಷ್ಯನು ಸಂತುಷ್ಟನಾಗಿದ್ದಾನೆ” ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 1:1, NW) ನಿಮ್ಮಿಂದ ಗಮನವನ್ನು ಬೇರೆಡೆಗೆ ತಿರುಗಿಸಲಿಕ್ಕಾಗಿ ಕುಚೋದ್ಯದಲ್ಲಿ ಜೊತೆಗೂಡುವುದು, ಸುಮ್ಮನೆ ಮುಖಭಂಗದ ಆವೃತ್ತಿಯನ್ನು ಲಂಬಿಸುತ್ತದೆ ಅಷ್ಟೇ. “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು” ಎಂಬುದೇ ದೈವಿಕ ಸಲಹೆ.—ರೋಮಾಪುರ 12:17-21.

ಪ್ರಸಂಗಿ 7:9 ಮತ್ತೂ ಹೇಳುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” ಹೌದು, ನೀವು ಕೀಟಲೆಯನ್ನು ಅಷ್ಟು ಗಂಭೀರವಾಗಿ ಏಕೆ ಪರಿಗಣಿಸಬೇಕು? ಯಾರಾದರೊಬ್ಬರು ನಿಮ್ಮ ಮೈಕಟ್ಟಿನ ಕುರಿತು ತಮಾಷೆ ಮಾಡುವುದಾದರೆ ಅಥವಾ ನಿಮ್ಮ ಮುಖದ ದೋಷಗಳಲ್ಲಿ ವಿನೋದವನ್ನು ಕಂಡುಕೊಳ್ಳುವುದಾದರೆ, ಅದು ನೋವನ್ನುಂಟುಮಾಡುತ್ತದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೂ, ಅಂತಹ ಹೇಳಿಕೆಗಳು ಹಿಡಿಸದವುಗಳಾಗಿರುವುದಾದರೂ, ಅಗತ್ಯವಾಗಿ ದುರುದ್ದೇಶವುಳ್ಳವುಗಳಾಗಿರಲಿಕ್ಕಿಲ್ಲ. ಆದುದರಿಂದ ಯಾರಾದರೊಬ್ಬರು ಮುಗ್ಧತನದಿಂದ—ಅಥವಾ ಬಹುಶಃ ಅಷ್ಟೊಂದು ಮುಗ್ಧತನದಿಂದಲ್ಲದೆಯೂ—ನಿಮಗೆ ನೋವಾಗುವ ವಿಷಯವನ್ನು ಪ್ರಸ್ತಾಪಿಸುವಲ್ಲಿ, ನಿಮಗೆ ಏಕೆ ಘಾಸಿಯಾದ ಅನಿಸಿಕೆಯಾಗಬೇಕು? ಏನು ಹೇಳಲ್ಪಟ್ಟಿದೆಯೋ ಅದು ಅಶ್ಲೀಲ ಅಥವಾ ಅಗೌರವಭರಿತವಾದದ್ದಾಗಿರುವಲ್ಲಿ, ಅದರಲ್ಲಿರುವ ಹಾಸ್ಯವನ್ನು ಅವಲೋಕಿಸಲು ಪ್ರಯತ್ನಿಸಿರಿ. “ನಗುವ ಸಮಯ” ಇದೆ ಮತ್ತು ತಮಾಷೆಯ ಕೀಟಲೆಯನ್ನು ಅಸಮಾಧಾನದಿಂದ ನೋಡುವುದು ವಿಪರೀತವಾದ ಪ್ರತಿಕ್ರಿಯೆಯಾಗಿರಬಹುದು.—ಪ್ರಸಂಗಿ 3:4.

ಆದರೆ ಕೀಟಲೆಯು, ಕ್ರೂರವೂ ಪಾಪಕರವೂ ಆಗಿರುವಲ್ಲಿ ಆಗೇನು? ಕುಚೋದ್ಯಗಾರನು ನಿಮ್ಮ ಪ್ರತಿಕ್ರಿಯೆಯಲ್ಲಿ ಆನಂದಿಸಲು, ನಿಮ್ಮ ದುರವಸ್ಥೆಯಲ್ಲಿ ನಲಿದಾಡಲು ಬಯಸುತ್ತಾನೆಂಬುದನ್ನು ನೆನಪಿನಲ್ಲಿಡಿರಿ. ಹಿಂದಿರುಗಿ ಬೈಯುವುದು, ರಕ್ಷಣಾತ್ಮಕರಾಗುವುದು, ಅಥವಾ ಕೂಡಲೆ ಕಣ್ಣೀರು ಸುರಿಸುವುದು, ಅವನು ಅಥವಾ ಅವಳು ರೇಗಿಸುವುದನ್ನು ಮುಂದುವರಿಸುವಂತೆ ಉತ್ತೇಜಿಸುವುದು ಸಂಭವನೀಯ. ನೀವು ಬೇಸರಗೊಳ್ಳುವುದನ್ನು ನೋಡುವ ಸಂತೃಪ್ತಿಯನ್ನು ಆ ವ್ಯಕ್ತಿಗೆ ಏಕೆ ಕೊಡಬೇಕು? ಅವಮಾನಕರವಾದ ಮಾತುಗಳನ್ನು ಹಿಮ್ಮೆಟ್ಟಿಸುವ ಅತ್ಯುತ್ತಮವಾದ ಮಾರ್ಗವು, ಅನೇಕವೇಳೆ ಉದಾಸೀನದಿಂದ ಅವುಗಳನ್ನು ಅಲಕ್ಷಿಸುವುದೇ ಆಗಿದೆ.

ರಾಜ ಸೊಲೊಮೋನನು ಮತ್ತೂ ಹೇಳಿದ್ದು: “ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು [“ಜನರು ಹೇಳಬಹುದಾದ ಎಲ್ಲ ವಿಷಯಗಳಿಗೆ ನಿನ್ನ ಹೃದಯವನ್ನು ಕೊಡದಿರು”—ಟುಡೇಸ್‌ ಇಂಗ್ಲಿಷ್‌ ವರ್ಷನ್‌]; ನಿನ್ನ ಆಳು ನಿನ್ನನ್ನು ಶಪಿಸುವದು ಕಿವಿಗೆ ಬಿದ್ದೀತು. ನೀನೂ ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ.” (ಪ್ರಸಂಗಿ 7:21, 22) ಕುಚೋದ್ಯಗಾರರ ಮರ್ಮಭೇದಕ ಹೇಳಿಕೆಗಳಿಗೆ ‘ನಿಮ್ಮ ಹೃದಯವನ್ನು ಕೊಡುವುದು,’ ನಿಮ್ಮ ಕಡೆಗಿರುವ ಅವರ ನಿರ್ಣಯದ ಕುರಿತು ವಿಪರೀತವಾಗಿ ಚಿಂತಿಸುವುದನ್ನು ಅರ್ಥೈಸುತ್ತದೆ. ಅವರ ನಿರ್ಣಯವು ಸೂಕ್ತವಾದದ್ದಾಗಿದೆಯೊ? ಅಪೊಸ್ತಲ ಪೌಲನು ಈರ್ಷ್ಯೆಯುಳ್ಳ ಸಮಾನಸ್ಥರಿಂದ ಅನ್ಯಾಯವಾಗಿ ಆಕ್ರಮಣಮಾಡಲ್ಪಟ್ಟನು, ಆದರೆ ಅವನು ಉತ್ತರಿಸಿದ್ದು: “ನನಗಾದರೋ ನಿಮ್ಮಿಂದಾಗಲಿ ಮನುಷ್ಯರು ನೇಮಿಸುವ ದಿನದಲ್ಲಾಗುವ ನ್ಯಾಯಸಭೆಯಿಂದಾಗಲಿ ವಿಚಾರಣೆಯಾಗುವದು ಅತ್ಯಲ್ಪಕಾರ್ಯವಾಗಿದೆ . . . ನನ್ನನ್ನು ವಿಚಾರಣೆಮಾಡುವವನು ಕರ್ತನೇ [“ಯೆಹೋವನೇ,” NW].” (1 ಕೊರಿಂಥ 4:3, 4) ದೇವರೊಂದಿಗಿನ ಪೌಲನ ಸಂಬಂಧವು ಎಷ್ಟು ಬಲವಾಗಿತ್ತೆಂದರೆ, ಅನ್ಯಾಯದ ಆಕ್ರಮಣಗಳನ್ನು ತಾಳಿಕೊಳ್ಳುವ ದೃಢವಿಶ್ವಾಸ ಮತ್ತು ಆಂತರಿಕ ಬಲವು ಅವನಲ್ಲಿತ್ತು.

ನಿಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವುದು

ಅನೇಕವೇಳೆ ಒಬ್ಬ ಕ್ರೈಸ್ತರೋಪಾದಿ ನೀವು ಜೀವಿಸುವ ರೀತಿಯಿಂದಲೂ ನೀವು ಅಣಕಿಸಲ್ಪಡಬಹುದು. ಸ್ವತಃ ಯೇಸು ಕ್ರಿಸ್ತನೇ ಅಂತಹ “ವ್ಯತಿರಿಕ್ತ ಮಾತ”ನ್ನು (NW) ಸಹಿಸಿಕೊಳ್ಳಬೇಕಾಯಿತು. (ಇಬ್ರಿಯ 12:3) ಯೆರೆಮೀಯನು ಸಹ ಯೆಹೋವನ ಸಂದೇಶವನ್ನು ಧೈರ್ಯದಿಂದ ಮಾತಾಡಿದ್ದರಿಂದಾಗಿ, ‘ಹಗಲೆಲ್ಲಾ ಗೇಲಿಗೆ ಗುರಿಯಾದನು.’ ರೇಗಿಸುವಿಕೆಯು ಎಷ್ಟು ಸತತವಾಗಿತ್ತೆಂದರೆ, ತಾತ್ಕಾಲಿಕವಾಗಿ ಯೆರೆಮೀಯನು ತನ್ನ ಉತ್ತೇಜನವನ್ನು ಕಳೆದುಕೊಂಡನು. “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು” ಎಂದು ಅವನು ನಿರ್ಧರಿಸಿದನು. ಹಾಗಿದ್ದರೂ, ದೇವರು ಮತ್ತು ಸತ್ಯಕ್ಕಾಗಿರುವ ಅವನ ಪ್ರೀತಿಯು, ಕಾಲಕ್ರಮೇಣ ತನ್ನ ಭಯವನ್ನು ಜಯಿಸುವಂತೆ ಅವನನ್ನು ಪ್ರಚೋದಿಸಿತು.—ಯೆರೆಮೀಯ 20:7-9.

ಇಂದು ಕೆಲವು ಕ್ರೈಸ್ತ ಯುವ ಜನರು ತದ್ರೀತಿಯಲ್ಲಿ ನಿರುತ್ಸಾಹಗೊಂಡಿದ್ದಾರೆ. ಕೀಟಲೆಯನ್ನು ನಿಲ್ಲಿಸುವ ಕಾತುರತೆಯಿಂದ, ಕೆಲವರು ತಾವು ಕ್ರೈಸ್ತರಾಗಿದ್ದೇವೆ ಎಂಬ ಸಂಗತಿಯನ್ನು ಗೋಪ್ಯವಾಗಿಡಲು ಪ್ರಯತ್ನಿಸಿದ್ದಾರೆ. ಆದರೆ ದೇವರಿಗಾಗಿರುವ ಪ್ರೀತಿಯು ಅನೇಕವೇಳೆ, ಅಂತಿಮವಾಗಿ ಅಂತಹವರು ತಮ್ಮ ಭಯವನ್ನು ಜಯಿಸುವಂತೆ ಹಾಗೂ ‘ತಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡಲು’ ಪ್ರಚೋದನೆ ನೀಡುತ್ತದೆ! (ಮತ್ತಾಯ 5:16) ಉದಾಹರಣೆಗೆ, ಒಬ್ಬ ಹದಿವಯಸ್ಕನು ಹೇಳಿದ್ದು: “ನನ್ನ ಮನೋಭಾವವು ಬದಲಾಯಿತು. ಒಬ್ಬ ಕ್ರೈಸ್ತನಾಗಿರುವುದು, ಹೊತ್ತುಕೊಂಡು ಹೋಗುವ ಒಂದು ಹೊರೆಯಾಗಿದೆ ಎಂಬಂತೆ ವೀಕ್ಷಿಸುವುದನ್ನು ನಿಲ್ಲಿಸಿ, ಅದನ್ನು ಒಂದು ಹೆಮ್ಮೆಯ ಸಂಗತಿಯಾಗಿ ವೀಕ್ಷಿಸಲು ತೊಡಗಿದೆ.” ನೀವು ಸಹ ದೇವರನ್ನು ತಿಳಿದಿರುವ ಹಾಗೂ ಇತರರಿಗೆ ಸಹಾಯ ಮಾಡಲಿಕ್ಕಾಗಿ ಆತನಿಂದ ಉಪಯೋಗಿಸಲ್ಪಡುತ್ತಿರುವ ಸುಯೋಗದಲ್ಲಿ “ಹೆಚ್ಚಳಪಡ”ಬಲ್ಲಿರಿ.—1 ಕೊರಿಂಥ 1:31.

ಆದರೂ, ನಿರಂತರವಾಗಿ ಇತರರನ್ನು ಟೀಕಿಸುವ ಮೂಲಕ ಅಥವಾ ನೀವು ಶ್ರೇಷ್ಠರಾಗಿದ್ದೀರೆಂಬ ಭಾವನೆ ನಿಮಗಿದೆಯೆಂಬ ಪರಿಣಾಮವನ್ನು ಇತರರ ಮೇಲೆ ಬೀರುತ್ತಾ, ಹಗೆತನವನ್ನು ಆಮಂತ್ರಿಸದಿರಿ. ನಿಮ್ಮ ನಂಬಿಕೆಯನ್ನು ಹಂಚಿಕೊಳ್ಳಲು ಸಂದರ್ಭವು ಸಿಕ್ಕಿದಾಗ, ಹಾಗೆ ಮಾಡಿರಿ, ಆದರೆ “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ಮಾಡಿರಿ. (1 ಪೇತ್ರ 3:15) ಸುನಡತೆಗಾಗಿರುವ ನಿಮ್ಮ ಸತ್ಕೀರ್ತಿಯು, ನೀವು ಶಾಲೆಯಲ್ಲಿರುವಾಗ ನಿಮ್ಮ ಅತ್ಯಂತ ದೊಡ್ಡ ರಕ್ಷಣೆಯಾಗಿ ಪರಿಣಮಿಸಬಹುದು. ನಿಮ್ಮ ಧೈರ್ಯವಂತ ನಿಲುವನ್ನು ಇತರರು ಇಷ್ಟಪಡದಿರುವುದಾದರೂ, ಅವರು ಅನೇಕವೇಳೆ ಅದಕ್ಕಾಗಿ ನಿಮ್ಮನ್ನು ಅರೆಮನಸ್ಸಿನಿಂದ ಗೌರವಿಸುವರು.

ವನೆಸ ಎಂಬ ಹೆಸರಿನ ಒಬ್ಬ ಹುಡುಗಿಯು, ಅವಳನ್ನು ಹೊಡೆದು, ನೂಕಾಡಿ, ಅವಳ ಕೈಗಳಿಂದ ಪುಸ್ತಕಗಳನ್ನು ನೆಲಕ್ಕೆ ಕೆಡವಿ—ಎಲ್ಲವನ್ನೂ ಒಂದು ಕಾದಾಟವನ್ನು ಉದ್ರೇಕಿಸಲಿಕ್ಕಾಗಿ ಪ್ರಯತ್ನಿಸುತ್ತಿದ್ದ ಹುಡುಗಿಯರ ಒಂದು ಗುಂಪಿನಿಂದ ರೇಗಿಸಲ್ಪಟ್ಟಳು. ಅವರು ಅವಳ ತಲೆ ಹಾಗೂ ಸ್ವಚ್ಛವಾದ ಶ್ವೇತ ವರ್ಣದ ಉಡುಪಿನ ಮೇಲೆ ಚಾಕೊಲೆಟ್‌ ಮಿಲ್ಕ್‌ ಶೇಕ್‌ ಅನ್ನು ಸಹ ಸುರಿದರು. ಆದರೂ ಅವಳೆಂದೂ ಉದ್ರೇಕಕ್ಕೆ ಆಸ್ಪದಕೊಡಲಿಲ್ಲ. ಸ್ವಲ್ಪಸಮಯಾನಂತರ, ಯೆಹೋವನ ಸಾಕ್ಷಿಗಳ ಅಧಿವೇಶನವೊಂದರಲ್ಲಿ, ಆ ಗುಂಪಿನ ಮುಖ್ಯ ಸಂಚುಗಾರ್ತಿಯನ್ನು ವನೆಸ ಸಂಧಿಸಿದಳು! “ನಾನು ನಿನ್ನನ್ನು ದ್ವೇಷಿಸಿದೆ . . . ,” ಎಂದು ಆ ಮಾಜಿ ಪೀಡಕಿ ಹೇಳಿದಳು. “ನೀನು ನಿನ್ನ ಶಾಂತಚಿತ್ತವನ್ನು ಒಮ್ಮೆಯಾದರೂ ಕಳೆದುಕೊಳ್ಳುವುದನ್ನು ನಾನು ನೋಡಬಯಸಿದ್ದೆ.” ಆದಾಗಲೂ ವನೆಸಳು ಹೇಗೆ ತನ್ನ ಚಿತ್ತಸ್ವಾಸ್ಥ್ಯವನ್ನು ಕಾಪಾಡಿಕೊಂಡಳು ಎಂಬುದರ ಕುರಿತಾದ ಅವಳ ಕುತೂಹಲವು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಒಂದು ಅಭ್ಯಾಸವನ್ನು ಅಂಗೀಕರಿಸುವಂತೆ ಮುನ್ನಡಿಸಿತು. ಅವಳು ಮುಂದುವರಿಸುತ್ತಾ ಹೇಳಿದ್ದು: “ನಾನು ಕಲಿತ ವಿಷಯವನ್ನು ನಾನು ಪ್ರೀತಿಸತೊಡಗಿದೆ ಮತ್ತು ನಾಳೆ ನಾನು ದೀಕ್ಷಾಸ್ನಾನಪಡೆದುಕೊಳ್ಳಲಿದ್ದೇನೆ.”

ಆದುದರಿಂದ ಸಮಾನಸ್ಥರಿಂದ ನುಡಿಯಲ್ಪಟ್ಟ “ವ್ಯತಿರಿಕ್ತ ಮಾತು,” ನಿಮ್ಮ ಹುರುಪನ್ನು ಭಂಗಗೊಳಿಸುವಂತೆ ಬಿಡಬೇಡಿ. ಸೂಕ್ತವಾಗಿರುವಾಗ, ಹಾಸ್ಯಪ್ರಜ್ಞೆಯನ್ನು ತೋರಿಸಿರಿ. ಕೆಟ್ಟತನಕ್ಕೆ ದಯಾಭಾವದಿಂದ ಪ್ರತಿಕ್ರಿಯಿಸಿರಿ. ಕಲಹಗಳ ಜ್ವಾಲೆಗಳಿಗೆ ಕಾವೇರಿಸಬೇಡಿರಿ, ಮತ್ತು ಸಕಾಲದಲ್ಲಿ ನಿಮ್ಮ ಪೀಡಕರು ಕುಚೋದ್ಯಕ್ಕಾಗಿ ನಿಮ್ಮನ್ನು ಗುರಿಹಲಗೆಯನ್ನಾಗಿ ಮಾಡುವುದರಲ್ಲಿ ಸುಖಾನುಭವವನ್ನು ಕಂಡುಕೊಳ್ಳದಿರಬಹುದು, ಏಕೆಂದರೆ “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು.”—ಜ್ಞಾನೋಕ್ತಿ 26:20.

ಚರ್ಚೆಗಾಗಿ ಪ್ರಶ್ನೆಗಳು

◻ ಕ್ರೂರವಾಗಿ ಇತರರ ಕೀಟಲೆಮಾಡುವವರನ್ನು ದೇವರು ಹೇಗೆ ವೀಕ್ಷಿಸುತ್ತಾನೆ?

◻ ಅನೇಕವೇಳೆ ಯೌವನಭರಿತ ರೇಗಿಸುವಿಕೆಯ ಹಿಂದೆ ಏನಿರುತ್ತದೆ?

◻ ನೀವು ಕುಚೋದ್ಯವನ್ನು ಹೇಗೆ ಕಡಿಮೆಮಾಡಸಾಧ್ಯವಿದೆ ಅಥವಾ ನಿಲ್ಲಿಸಲೂ ಸಾಧ್ಯವಿದೆ?

◻ ಶಾಲೆಯಲ್ಲಿ ಇತರರು ನಿಮಗೆ ಕೀಟಲೆಮಾಡುವಾಗಲೂ, ನೀವು “ನಿಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವುದು” ಏಕೆ ಪ್ರಾಮುಖ್ಯವಾದದ್ದಾಗಿದೆ?

◻ ಶಾಲೆಯಲ್ಲಿನ ಹಿಂಸಾಚಾರದಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ?

[ಪುಟ 155 ರಲ್ಲಿರುವ ಸಂಕ್ಷಿಪ್ತ ವಿವರಣೆ]

ಶೌರ್ಯಾಟೋಪದ ಹಿಂದೆ, ಪೀಡಕರು ನಿಜವಾಗಿಯೂ ಹೀಗೆ ಹೇಳಿಕೊಳ್ಳುತ್ತಿರಬಹುದು: ‘ನಾವು ನಮ್ಮನ್ನೇ ಇಷ್ಟಪಡುವುದಿಲ್ಲ, ಆದರೆ ಯಾರನ್ನಾದರೂ ಕಡೆಗಣಿಸುವುದು ನಮಗೆ ಹೆಚ್ಚು ಉತ್ತಮವಾದ ಅನಿಸಿಕೆಯನ್ನುಂಟುಮಾಡುತ್ತದೆ’

[ಪುಟ 152 ರಲ್ಲಿರುವ ಚೌಕ]

ನಾನು ಹೊಡೆಸಿಕೊಳ್ಳುವುದರಿಂದ ಹೇಗೆ ತಪ್ಪಿಸಿಕೊಳ್ಳಬಲ್ಲೆ?

‘ನೀವು ಶಾಲೆಗೆ ಬರುವಾಗ, ನಿಮ್ಮ ಜೀವವನ್ನು ನಿಮ್ಮ ಕೈಗಳಲ್ಲಿ ಹಿಡಿದಿರುತ್ತೀರಿ.’ ಹೀಗೆಂದು ಅನೇಕ ವಿದ್ಯಾರ್ಥಿಗಳು ಹೇಳುತ್ತಾರೆ. ಆದರೆ ಆಯುಧವೊಂದನ್ನು ಕೊಂಡೊಯ್ಯುವುದು, ಮೂರ್ಖತನವಾಗಿದೆ ಮತ್ತು ತೊಂದರೆಯನ್ನು ಆಹ್ವಾನಿಸುತ್ತದೆ. (ಜ್ಞಾನೋಕ್ತಿ 11:27) ಹಾಗಾದರೆ, ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ?

ಅಪಾಯದ ಸ್ಥಳಗಳನ್ನು ತಿಳಿದುಕೊಂಡಿದ್ದು, ಅವುಗಳಿಂದ ದೂರವಿರಿ. ಕೆಲವು ಶಾಲೆಗಳಲ್ಲಿ, ಹಜಾರಗಳು, ಮೆಟ್ಟಲಸಾಲುಗಳು, ಮತ್ತು ಕಪಾಟುಕೋಣೆಗಳು, ನಿಜವಾದ ತೊಂದರೆದಾಯಕ ಸ್ಥಳಗಳಾಗಿವೆ. ಮತ್ತು ಶೌಚಾಲಯಗಳು, ಕಾದಾಟಗಳು ಮತ್ತು ಅಮಲೌಷಧ ಉಪಯೋಗಕ್ಕಾಗಿ ಒಟ್ಟುಗೂಡುವ ಸ್ಥಳಗಳೋಪಾದಿ ಎಷ್ಟು ಕುಪ್ರಸಿದ್ಧವಾಗಿವೆಯೆಂದರೆ, ಅನೇಕ ಯುವ ಜನರು ಈ ಸೌಕರ್ಯಗಳನ್ನು ಉಪಯೋಗಿಸುವುದಕ್ಕೆ ಬದಲಾಗಿ, ಕಷ್ಟವನ್ನು ಅನುಭವಿಸಲು ಇಷ್ಟಪಡುತ್ತಾರೆ.

ನಿಮ್ಮ ಸಹವಾಸಗಳ ವಿಷಯದಲ್ಲಿ ಜಾಗರೂಕರಾಗಿರಿ. ಅನೇಕವೇಳೆ ಯೌವನಸ್ಥನೊಬ್ಬನು, ತಪ್ಪಾದ ಗುಂಪಿನೊಂದಿಗೆ ಜೊತೆಗೂಡುತ್ತಾನೆಂಬ ಕಾರಣದಿಂದಾಗಿಯೇ, ಕಾದಾಟದ ಮಧ್ಯೆ ಸಿಕ್ಕಿಬೀಳುತ್ತಾನೆ. (ಜ್ಞಾನೋಕ್ತಿ 22:24, 25ನ್ನು ನೋಡಿರಿ.) ನಿಶ್ಚಯವಾಗಿಯೂ, ನಿಮ್ಮ ಸಹಪಾಠಿಗಳನ್ನು ತಾತ್ಸಾರ ಮಾಡುವುದು, ಅವರನ್ನು ವಿಮುಖಗೊಳಿಸಸಾಧ್ಯವಿದೆ ಅಥವಾ ನಿಮ್ಮೆಡೆಗೆ ವೈರತ್ವವನ್ನು ತೋರಿಸುವಂತೆ ಮಾಡಸಾಧ್ಯವಿದೆ. ನೀವು ಅವರೊಂದಿಗೆ ಸ್ನೇಹಪರರೂ ಸಭ್ಯರೂ ಆಗಿರುವಲ್ಲಿ, ಅವರು ನಿಮ್ಮನ್ನು ನಿಮ್ಮಷ್ಟಕ್ಕೆ ಬಿಟ್ಟುಬಿಡುವ ಪ್ರವೃತ್ತಿಯುಳ್ಳವರಾಗಿರಬಹುದು.

ಕಾದಾಟಗಳಿಂದ ದೂರ ಸರಿಯಿರಿ. “ಒಬ್ಬರನ್ನೊಬ್ಬರು ಕೆಣಕುವವರು” ಆಗಿರಬೇಡಿರಿ. (ಗಲಾತ್ಯ 5:26) ಕಾದಾಟದಲ್ಲಿ ನೀವು ವಿಜಯಿಯಾಗುವುದಾದರೂ, ನಿಮ್ಮ ವಿರೋಧಿಯು ಸುಮ್ಮನೆ ಅವನ ಅಥವಾ ಅವಳ ಸಮಯವನ್ನು ಮರುಹೋರಾಟಕ್ಕಾಗಿ ಕಾದಿರಿಸಬಹುದು. ಆದುದರಿಂದ ಮೊದಲಾಗಿ ಮಾತನಾಡುತ್ತಾ ಕಾದಾಟವೊಂದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರಿ. (ಜ್ಞಾನೋಕ್ತಿ 15:1) ಮಾತನಾಡುವುದರಿಂದ ಪ್ರಯೋಜನವಾಗದಿದ್ದರೆ, ಹಿಂಸಾತ್ಮಕ ಎದುರಿಸುವಿಕೆಯಿಂದ ದೂರ ಹೋಗಿಬಿಡಿರಿ ಅಥವಾ ಓಡಿಬಿಡಿರಿ ಸಹ. “ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು” ಎಂಬುದು ನೆನಪಿನಲ್ಲಿರಲಿ. (ಪ್ರಸಂಗಿ 9:4) ಕೊನೆಯ ಪ್ರಯತ್ನವಾಗಿ, ಸ್ವತಃ ನಿಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯವಾಗಿರುವ ಯಾವುದೇ ಸಮಂಜಸ ಸಾಧನೋಪಾಯವನ್ನು ಕೈಕೊಳ್ಳಿರಿ.—ರೋಮಾಪುರ 12:18.

ನಿಮ್ಮ ಹೆತ್ತವರೊಂದಿಗೆ ಮಾತಾಡಿರಿ. ಯುವ ಜನರು “ತಮ್ಮ ಹೆತ್ತವರಿಗೆ ಶಾಲಾ ಭೀತಿಗಳ ಕುರಿತು ವರದಿಸುವುದು ತುಂಬ ವಿರಳ. ಏಕೆಂದರೆ ಹೆತ್ತವರು ತಮ್ಮನ್ನು ಹೇಡಿಗಳೆಂದು ಭಾವಿಸುತ್ತಾರೆ ಅಥವಾ ತಾವು ಪೀಡಕರ ವಿರುದ್ಧವಾಗಿ ಹೋರಾಡುವುದಿಲ್ಲವೆಂದು ತಿಳಿದು ತಮ್ಮನ್ನು ಜರೆಯುತ್ತಾರೆಂಬ ಭಯದಿಂದಲೇ.” (ಮಕ್ಕಳ ಒಂಟಿತನ, ಇಂಗ್ಲಿಷ್‌) ಆದರೂ ಅನೇಕವೇಳೆ, ಆ ತೊಂದರೆಯನ್ನು ನಿಲ್ಲಿಸಲಿಕ್ಕಾಗಿರುವ ಏಕಮಾತ್ರ ಮಾರ್ಗವು, ಹೆತ್ತವರ ಹಸ್ತಕ್ಷೇಪವೇ ಆಗಿದೆ.

ದೇವರಿಗೆ ಪ್ರಾರ್ಥಿಸಿರಿ. ನಿಮಗೆ ಶಾರೀರಿಕ ಹಾನಿಯನ್ನು ಬರಮಾಡುವುದಿಲ್ಲವೆಂದು ದೇವರು ನಿಮಗೆ ಖಾತ್ರಿನೀಡುವುದಿಲ್ಲ. ಬದಲಾಗಿ ಹಿಂಸಾತ್ಮಕ ಸಂಧಿಸುವಿಕೆಯನ್ನು ಎದುರಿಸಲು ಧೈರ್ಯವನ್ನೂ, ಆ ಸನ್ನಿವೇಶವನ್ನು ಶಾಂತಪಡಿಸಲು ಬೇಕಾದ ಜ್ಞಾನವನ್ನೂ ಆತನು ನಿಮಗೆ ನೀಡಬಲ್ಲನು.—ಯಾಕೋಬ 1:5.

[ಪುಟ 151 ರಲ್ಲಿರುವ ಚಿತ್ರಗಳು]

ಅನೇಕ ಯುವ ಜನರು, ಸಮಾನಸ್ಥರ ರೇಗಿಸುವಿಕೆಗೆ ಬಲಿಪಶುಗಳಾಗಿದ್ದಾರೆ

[ಪುಟ 154 ರಲ್ಲಿರುವ ಚಿತ್ರಗಳು]]

ಕುಚೋದ್ಯಗಾರನು ನಿಮ್ಮ ದುರವಸ್ಥೆಯಲ್ಲಿ ನಲಿದಾಡಲು ಬಯಸುತ್ತಾನೆ. ಹಿಂದಿರುಗಿ ಬೈಯುವುದು ಅಥವಾ ಕೂಡಲೆ ಕಣ್ಣೀರು ಸುರಿಸುವುದು, ಇನ್ನೂ ಹೆಚ್ಚಿನ ರೇಗಿಸುವಿಕೆಯನ್ನು ಸಹ ಉತ್ತೇಜಿಸಬಹುದು

[ಪುಟ 156 ರಲ್ಲಿರುವ ಚಿತ್ರಗಳು]

ಕೀಟಲೆಮಾಡಲ್ಪಡುವಾಗ, ಹಾಸ್ಯಪ್ರಜ್ಞೆಯನ್ನು ತೋರಿಸಲು ಪ್ರಯತ್ನಿಸಿರಿ