ಮಾಹಿತಿ ಇರುವಲ್ಲಿ ಹೋಗಲು

ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ?

ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ?

ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ?

“ನನ್ನ ಜೀವಿತದಿಂದ ನಾನು ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುತ್ತೇನೆ.” ಹೀಗೆಂದು ಹದಿಪ್ರಾಯದ ಹುಡುಗಿಯೊಬ್ಬಳು ಹೇಳುತ್ತಾಳೆ. ನೀವೂ ಅದನ್ನೇ ಬಯಸುತ್ತೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಜೀವಿತದಿಂದ ನೀವು ಹೇಗೆ “ಅತ್ಯಧಿಕ ಪ್ರಯೋಜನವನ್ನು” ಪಡೆದುಕೊಳ್ಳುವಿರಿ? ಬಹಳಷ್ಟು ಹಣವನ್ನು ಸಂಪಾದಿಸುವ ಮೂಲಕ ಹಾಗೂ ಒಂದು ಪ್ರತಿಷ್ಠಿತ ಜೀವನವೃತ್ತಿಯನ್ನು ಬೆನ್ನಟ್ಟುವ ಮೂಲಕ ಮತ್ತು ಯಾವುದಾದರೂ ಸಾಧನೆಯ ದಾಖಲೆಯನ್ನು ಸ್ಥಾಪಿಸಿದಂಥ ಒಬ್ಬ ವ್ಯಕ್ತಿಯಾಗುವ ಮೂಲಕ ಹಾಗೆ ಮಾಡಸಾಧ್ಯವಿದೆ ಎಂದು ವಾರ್ತಾಮಾಧ್ಯಮಗಳು ಮತ್ತು ನಿಮ್ಮ ಸಮವಯಸ್ಕರು, ಬಹುಶಃ ನಿಮ್ಮ ಶಿಕ್ಷಕರು ಸಹ ಹೇಳಬಹುದು!

ಆದರೆ ಭೌತಿಕ ಯಶಸ್ಸನ್ನು ಬೆನ್ನಟ್ಟುವುದು, ಕೇವಲ ‘ಗಾಳಿಯನ್ನು ಹಿಂದಟ್ಟುವುದಕ್ಕೆ’ ಸಮಾನವಾಗಿದೆ ಎಂದು ಬೈಬಲು ಯುವ ಜನರನ್ನು ಎಚ್ಚರಿಸುತ್ತದೆ. (ಪ್ರಸಂಗಿ 4:⁠4) ಇದಕ್ಕೆ ಕಾರಣವೇನೆಂದರೆ, ವಾಸ್ತವದಲ್ಲಿ ಕೆಲವೇ ಯುವ ಜನರು ಧನಸಂಪತ್ತು ಮತ್ತು ಕೀರ್ತಿಯನ್ನು ಸಂಪಾದಿಸುತ್ತಾರೆ. ಮತ್ತು ಯಾರು ಇವನ್ನು ಸಂಪಾದಿಸುತ್ತಾರೋ ಅವರು ಅನೇಕವೇಳೆ ತೀರ ನಿರಾಶರಾಗುತ್ತಾರೆ. ಒಂದು ಪ್ರತಿಷ್ಠಿತ ಶೈಕ್ಷಣಿಕ ವೃತ್ತಿಯನ್ನು ಬೆನ್ನಟ್ಟಿದಂಥ ಒಬ್ಬ ಬ್ರಿಟಿಷ್‌ ಯುವಕನು ಹೇಳುವುದು: “ಪ್ರಾಪಂಚಿಕ ಯಶಸ್ಸು ಒಂದು ಖಾಲಿ ಪೆಟ್ಟಿಗೆಯಂತಿದೆ. ನೀವು ಅದರೊಳಗೆ ಇಣಕಿ ನೋಡುವಲ್ಲಿ, ಅಲ್ಲಿ ಏನೂ ಇರುವುದಿಲ್ಲ.” ಕೆಲವೊಮ್ಮೆ ಒಂದು ಉದ್ಯೋಗವು ಐಶ್ವರ್ಯ ಹಾಗೂ ಮಾನ್ಯತೆಯನ್ನು ತರಸಾಧ್ಯವಿದೆಯೆಂಬುದು ನಿಜ. ಆದರೆ ಅದು ನಿಮ್ಮ “ಆತ್ಮಿಕ ಆವಶ್ಯಕತೆಯನ್ನು” ತೃಪ್ತಿಪಡಿಸಲಾರದು. (ಮತ್ತಾಯ 5:⁠3, NW) ಅಷ್ಟುಮಾತ್ರವಲ್ಲ, ‘ಲೋಕವು ಗತಿಸಿಹೋಗುತ್ತದೆ’ ಎಂದು 1 ಯೋಹಾನ 2:17 ಎಚ್ಚರಿಸುತ್ತದೆ. ಒಂದುವೇಳೆ ನೀವು ಈ ಲೋಕದಲ್ಲಿ ಯಶಸ್ಸನ್ನು ಸಾಧಿಸುವುದಾದರೂ, ಅದು ಅಲ್ಪಾವಧಿಯದ್ದಾಗಿರುವುದು.

ಆದಕಾರಣ ಪ್ರಸಂಗಿ 12:1 ಯುವ ಜನರನ್ನು ಈ ಮಾತುಗಳಿಂದ ಉತ್ತೇಜಿಸುತ್ತದೆ: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” ಹೌದು, ನಿಮ್ಮ ಜೀವಿತವನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಸಾಧ್ಯವಿರುವ ವಿಧವು, ಯೆಹೋವ ದೇವರ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದೇ ಆಗಿದೆ. ಆದರೆ ದೇವರ ಸೇವೆಯಲ್ಲಿ ನೀವು ಒಳಗೂಡಬೇಕಾದರೆ ಮೊದಲು ನೀವು ಅದಕ್ಕೆ ಅರ್ಹರಾಗಬೇಕು. ನೀವು ಅದಕ್ಕೆ ಹೇಗೆ ಅರ್ಹರಾಗಬಲ್ಲಿರಿ? ಮತ್ತು ದೇವರಿಗೆ ಸಲ್ಲಿಸಲ್ಪಡುವ ಸೇವೆಯಲ್ಲಿ ಏನು ಒಳಗೂಡಿದೆ?

ಯೆಹೋವನ ಒಬ್ಬ ಸಾಕ್ಷಿಯಾಗಿರಲಿಕ್ಕಾಗಿ ಅರ್ಹರಾಗುವುದು

ಪ್ರಥಮವಾಗಿ, ದೇವರ ಸೇವೆಯನ್ನು ಮಾಡುವ ಬಯಕೆಯನ್ನು ನೀವು ಬೆಳೆಸಿಕೊಳ್ಳಬೇಕು. ನಿಮ್ಮ ಹೆತ್ತವರು ಕ್ರೈಸ್ತರಾಗಿರುವುದಾದರೂ ಆ ಬಯಕೆಯು ತಾನಾಗಿಯೇ ಬರುವುದಿಲ್ಲ. ನೀವು ಯೆಹೋವನೊಂದಿಗೆ ನಿಮ್ಮ ಸ್ವಂತ ಸಂಬಂಧವನ್ನು ಬೆಳೆಸಿಕೊಳ್ಳಬೇಕು. “ಪ್ರಾರ್ಥನೆಯು ನೀವು ಯೆಹೋವನೊಂದಿಗೆ ನಿಮ್ಮ ಸ್ವಂತ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ” ಎಂದು ಒಬ್ಬ ಹದಿವಯಸ್ಕಳು ಹೇಳುತ್ತಾಳೆ.​—⁠ಕೀರ್ತನೆ 62:8; ಯಾಕೋಬ 4:⁠8.

ರೋಮಾಪುರ 12:2ನೆಯ ವಚನವು, ನೀವು ಇಡಬೇಕಾದ ಇನ್ನೊಂದು ಹೆಜ್ಜೆಯನ್ನು ಎತ್ತಿಹೇಳುತ್ತದೆ. ಅದು ಹೇಳುವುದು: “ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ” ತಿಳುಕೊಳ್ಳಿರಿ. ನಿಮಗೆ ಕಲಿಸಲ್ಪಟ್ಟಿರುವ ಕೆಲವು ವಿಷಯಗಳನ್ನು ನೀವು ಸಂಶಯಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೊ? ಹಾಗಾದರೆ ಬೈಬಲ್‌ ಬುದ್ಧಿವಾದವನ್ನು ಅನುಸರಿಸಿರಿ, ಮತ್ತು ಈ ವಿಷಯಗಳು ಸತ್ಯವಾಗಿವೆ ಎಂಬುದನ್ನು ‘ವಿವೇಚಿಸಿ ತಿಳುಕೊಳ್ಳಿರಿ’! ನಿಮ್ಮ ಸ್ವಂತ ಸಂಶೋಧನೆಯನ್ನು ನಡೆಸಿ. ಬೈಬಲನ್ನೂ ಬೈಬಲ್‌ ಆಧಾರಿತ ಪ್ರಕಾಶನಗಳನ್ನೂ ಓದಿರಿ. ಆದರೂ, ದೇವರ ಕುರಿತು ಕಲಿಯುವುದು, ಒಬ್ಬನು ಕೇವಲ ನಿಜತ್ವಗಳನ್ನು ವಿಶ್ಲೇಷಿಸಲಿಕ್ಕಾಗಿ ತನ್ನ ಮನಸ್ಸನ್ನು ಉಪಯೋಗಿಸುವಂಥ ವಿಚಾರವಾಗಿರುವುದಿಲ್ಲ. ನೀವು ಏನನ್ನು ಓದುತ್ತೀರೋ ಅದು ನಿಮ್ಮ ಸಾಂಕೇತಿಕ ಹೃದಯದಲ್ಲಿ ಅಳಿಸಲಾಗದಂಥ ರೀತಿಯಲ್ಲಿ ಅಚ್ಚೊತ್ತಲ್ಪಡಲಿಕ್ಕಾಗಿ, ಅದರ ಕುರಿತು ಮನನಮಾಡಲು ಸಮಯವನ್ನು ತೆಗೆದುಕೊಳ್ಳಿರಿ. ಇದು ದೇವರಿಗಾಗಿರುವ ನಿಮ್ಮ ಪ್ರೀತಿಯು ಬೆಳೆಯುವಂತೆ ಮಾಡುವುದು.​—⁠ಕೀರ್ತನೆ 1:​2, 3.

ತದನಂತರ, ನೀವು ಏನನ್ನು ಕಲಿಯುತ್ತಿದ್ದೀರೋ ಅದನ್ನು ಅನೌಪಚಾರಿಕ ರೀತಿಯಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿರಿ. ಬಹುಶಃ ನಿಮ್ಮ ಸಹಪಾಠಿಗಳೊಂದಿಗೆ ನೀವಿದನ್ನು ಮಾಡಬಲ್ಲಿರಿ. ಮನೆಯಿಂದ ಮನೆಗೆ ಸಾರುವುದು ಮುಂದಿನ ಹೆಜ್ಜೆಯಾಗಿದೆ. ನೀವು ಹೀಗೆ ಸಾರುತ್ತಿರುವಾಗ ಅನಿರೀಕ್ಷಿತವಾಗಿ ಒಬ್ಬ ಸಹಪಾಠಿಯನ್ನು ಸಂಧಿಸಬಹುದು, ಮತ್ತು ಆರಂಭದಲ್ಲಿ ನೀವು ಸ್ವಲ್ಪ ಹೆದರಿಹೋಗಬಹುದು. ಆದರೆ ‘ಸುವಾರ್ತೆಯ ವಿಷಯದಲ್ಲಿ ನಾಚಿಕೆ’ಪಡದಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. (ರೋಮಾಪುರ 1:​16) ಏಕೆಂದರೆ, ನೀವು ಜೀವದ ಹಾಗೂ ನಿರೀಕ್ಷೆಯ ಒಂದು ಸಂದೇಶವನ್ನು ಕೊಂಡೊಯ್ಯುತ್ತಿದ್ದೀರಿ! ಇದರ ಬಗ್ಗೆ ಏಕೆ ನಾಚಿಕೆಪಡಬೇಕು?

ಈಗ, ನಿಮ್ಮ ಹೆತ್ತವರು ಕ್ರೈಸ್ತರಾಗಿರುವಲ್ಲಿ, ಸಾರುವ ಕೆಲಸದಲ್ಲಿ ನೀವು ಈಗಾಗಲೇ ಅವರ ಜೊತೆಗೂಡುತ್ತಿರಬಹುದು. ಆದರೆ ಮನೆ ಬಾಗಿಲ ಬಳಿ ಮೌನವಾಗಿ ನಿಲ್ಲುವುದು ಅಥವಾ ಕೇವಲ ಪತ್ರಿಕೆಗಳು ಹಾಗೂ ಟ್ರ್ಯಾಕ್ಟ್‌ಗಳನ್ನು ನೀಡುವುದಕ್ಕಿಂತಲೂ ಹೆಚ್ಚಿನದನ್ನು ಮಾಡಲು ನೀವು ಶಕ್ತರಾಗಿದ್ದೀರೋ? ಮನೆ ಬಾಗಿಲಿನಲ್ಲಿ ನೀವಾಗಿಯೇ ಮಾತಾಡಿ, ಮನೆಯವನಿಗೆ ಬೋಧಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಲು ಶಕ್ತರಾಗಿದ್ದೀರೋ? ಹಾಗಿಲ್ಲದಿರುವಲ್ಲಿ, ನಿಮ್ಮ ಹೆತ್ತವರಿಂದ ಅಥವಾ ಸಭೆಯ ಒಬ್ಬ ಪ್ರೌಢ ಸದಸ್ಯನಿಂದ ಸ್ವಲ್ಪ ಸಹಾಯವನ್ನು ಪಡೆದುಕೊಳ್ಳಿರಿ. ಸುವಾರ್ತೆಯ ಅಸ್ನಾತ ಪ್ರಚಾರಕರಾಗಿ ಅರ್ಹರಾಗುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ!

ಸಕಾಲದಲ್ಲಿ ನೀವು ಸಮರ್ಪಣೆಯನ್ನು ಮಾಡಿಕೊಳ್ಳುವಂತೆ, ಅಂದರೆ ಅಂದಿನಿಂದ ನೀವು ದೇವರ ಸೇವೆಯನ್ನು ಮಾಡುವಿರೆಂದು ಆತನ ಮುಂದೆ ಪ್ರತಿಜ್ಞೆಮಾಡುವಂತೆ ಪ್ರಚೋದಿಸಲ್ಪಡುವಿರಿ. (ರೋಮಾಪುರ 12:⁠1) ಆದರೂ, ಸಮರ್ಪಣೆಯು ಕೇವಲ ಒಂದು ಖಾಸಗಿ ವಿಚಾರವಾಗಿರುವುದಿಲ್ಲ. ಎಲ್ಲರೂ “ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು” ಮಾಡುವುದನ್ನು ದೇವರು ಅಪೇಕ್ಷಿಸುತ್ತಾನೆ. (ರೋಮಾಪುರ 10:​10, NW) ದೀಕ್ಷಾಸ್ನಾನದ ಸಮಯದಲ್ಲಿ, ನೀವು ಮೊದಲಾಗಿ ನಿಮ್ಮ ನಂಬಿಕೆಯನ್ನು ಬಾಯಿಮಾತಿನಿಂದ ಘೋಷಿಸುತ್ತೀರಿ. ತದನಂತರ ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತೀರಿ. (ಮತ್ತಾಯ 28:​19, 20) ದೀಕ್ಷಾಸ್ನಾನವು ಒಂದು ಗಂಭೀರವಾದ ಹೆಜ್ಜೆಯಾಗಿದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ನೀವು ಎಲ್ಲಿಯಾದರೂ ತಪ್ಪಿಬೀಳಬಹುದು ಎಂಬ ಅನಿಸಿಕೆಯ ಕಾರಣ, ದೀಕ್ಷಾಸ್ನಾನ ಪಡೆಯಲು ಹಿಂಜರಿಯದಿರಿ. ಬಲಕ್ಕಾಗಿ ನೀವು ದೇವರ ಮೇಲೆ ಆತುಕೊಳ್ಳುವಲ್ಲಿ, ನೀವು ದೃಢರಾಗಿ ನಿಲ್ಲುವಂತೆ ಸಹಾಯಮಾಡಲಿಕ್ಕಾಗಿ ಆತನು “ಬಲಾಧಿಕ್ಯ”ವನ್ನು ನೀಡುವನು.​—⁠2 ಕೊರಿಂಥ 4:7; 1 ಪೇತ್ರ 5:⁠10.

ದೀಕ್ಷಾಸ್ನಾನದ ಸಮಯದಲ್ಲಿ, ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಪರಿಣಮಿಸುತ್ತೀರಿ. (ಯೆಶಾಯ 43:10) ಇದು ನೀವು ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದರ ಮೇಲೆ ಬಲವಾದ ಪ್ರಭಾವವನ್ನು ಬೀರಬೇಕು. ಸಮರ್ಪಣೆಯಲ್ಲಿ, ಒಬ್ಬನು ‘ತನ್ನನ್ನು ನಿರಾಕರಿಸುವುದು’ ಒಳಗೂಡಿದೆ. (ಮತ್ತಾಯ 16:24) ಆದುದರಿಂದ, ಕೆಲವೊಂದು ವೈಯಕ್ತಿಕ ಗುರಿಗಳನ್ನು ಮತ್ತು ಹೆಬ್ಬಯಕೆಗಳನ್ನು ನೀವು ತೊರೆದು ‘ದೇವರ ರಾಜ್ಯಕ್ಕಾಗಿ ತವಕ’ಪಡಬಹುದು. (ಮತ್ತಾಯ 6:33) ಈ ರೀತಿಯಲ್ಲಿ, ಹಾಗೆ ಮಾಡಲಿಕ್ಕಾಗಿ ಸಮರ್ಪಣೆ ಮತ್ತು ದೀಕ್ಷಾಸ್ನಾನವು ಅನೇಕ ಸದವಕಾಶಗಳನ್ನು ತೆರೆಯಬಹುದು. ಅವುಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.

ದೇವರನ್ನು ಪೂರ್ಣ ಸಮಯ ಸೇವಿಸಲಿಕ್ಕಾಗಿರುವ ಸದವಕಾಶಗಳು

ಪಯನೀಯರ್‌ ಸೇವೆಯು ಅಂಥ ಒಂದು ಸದವಕಾಶವಾಗಿದೆ. ಒಬ್ಬ ಪಯನೀಯರ್‌ ಪ್ರಚಾರಕನು ದೀಕ್ಷಾಸ್ನಾನವನ್ನು ಪಡೆದುಕೊಂಡಿರುವ ಒಬ್ಬ ಆದರ್ಶಪ್ರಾಯ ಕ್ರೈಸ್ತನಾಗಿದ್ದು, ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪ್ರತಿ ತಿಂಗಳು ಕಡಿಮೆಪಕ್ಷ 70 ತಾಸುಗಳನ್ನು ವ್ಯಯಿಸಲು ಏರ್ಪಾಡನ್ನು ಮಾಡಿರುವಾತನಾಗಿದ್ದಾನೆ. ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಸಮಯವನ್ನು ಕಳೆಯುವುದು, ನೀವು ನಿಮ್ಮ ಸಾರುವ ಹಾಗೂ ಬೋಧಿಸುವ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು. ಅನೇಕ ಪಯನೀಯರರು ತಮ್ಮ ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆದುಕೊಂಡಿರುವ ಸಾಕ್ಷಿಗಳಾಗುವಂತೆ ಸಹಾಯಮಾಡುವುದರಲ್ಲಿರುವ ಆನಂದವನ್ನು ಅನುಭವಿಸಿದ್ದಾರೆ. ಯಾವ ಐಹಿಕ ಉದ್ಯೋಗವು ಇದರಷ್ಟು ರೋಮಾಂಚಕವೂ ಸಂತೃಪ್ತಿದಾಯಕವೂ ಆಗಿರಸಾಧ್ಯವಿದೆ?

ತಮ್ಮ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಿಕ್ಕಾಗಿ ಅಧಿಕಾಂಶ ಪಯನೀಯರರು ಪಾರ್ಟ್‌-ಟೈಮ್‌ ಐಹಿಕ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಅಥವಾ ತಮ್ಮ ಹೆತ್ತವರಿಂದ ಒಂದು ಕಸಬನ್ನು ಕಲಿಯುವ ಮೂಲಕ ಅನೇಕರು ಈ ಜವಾಬ್ದಾರಿಗಾಗಿ ಮುಂಚಿತವಾಗಿಯೇ ಯೋಜನೆಯನ್ನು ಮಾಡುತ್ತಾರೆ. ಪ್ರೌಢ ಶಾಲೆಯ ಶಿಕ್ಷಣದ ಬಳಿಕ ಯಾವುದಾದರೊಂದು ತರಬೇತಿಯನ್ನು ನೀವು ಪಡೆದುಕೊಳ್ಳುವುದು ಪ್ರಯೋಜನದಾಯಕವಾಗಿದೆ ಎಂದು ನಿಮಗೆ ಮತ್ತು ನಿಮ್ಮ ಹೆತ್ತವರಿಗೆ ಅನಿಸುವಲ್ಲಿ, ನಿಮ್ಮ ಉದ್ದೇಶವು ತುಂಬ ಹಣವನ್ನು ಮಾಡಿಕೊಳ್ಳುವುದಲ್ಲ, ಬದಲಾಗಿ ನಿಮ್ಮ ಶುಶ್ರೂಷೆಯನ್ನು ಬೆಂಬಲಿಸಿಕೊಳ್ಳಲಿಕ್ಕಾಗಿ ಮತ್ತು ಬಹುಶಃ ಒಬ್ಬ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಮಾಡಲಿಕ್ಕಾಗಿಯೇ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.

ಹಾಗಿದ್ದರೂ, ಒಬ್ಬ ಪಯನೀಯರನ ಜೀವಿತದ ಕೇಂದ್ರಬಿಂದುವು ಅವನ ಐಹಿಕ ಉದ್ಯೋಗವಲ್ಲ, ಬದಲಾಗಿ ಅವನ ಶುಶ್ರೂಷೆಯಾಗಿರಬೇಕು, ಅಂದರೆ ಜೀವವನ್ನು ಪಡೆದುಕೊಳ್ಳುವಂತೆ ಇತರರಿಗೆ ಸಹಾಯಮಾಡುವುದೇ ಆಗಿರಬೇಕು! ನೀವು ಪಯನೀಯರ್‌ ಸೇವೆಯನ್ನು ಒಂದು ವೈಯಕ್ತಿಕ ಗುರಿಯಾಗಿ ಏಕೆ ಇಟ್ಟುಕೊಳ್ಳಬಾರದು? ಪಯನೀಯರ್‌ ಸೇವೆಯು ಅನೇಕವೇಳೆ ಇತರ ಸುಯೋಗಗಳಿಗೆ ನಡಿಸುತ್ತದೆ. ಉದಾಹರಣೆಗೆ, ಕೆಲವು ಪಯನೀಯರರು ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸುತ್ತಾರೆ. ಇತರರು ಒಂದು ವಿದೇಶೀ ಭಾಷೆಯನ್ನು ಕಲಿತುಕೊಂಡು, ಸ್ಥಳಿಕವಾಗಿರುವ ವಿದೇಶೀ ಭಾಷೆಯ ಸಭೆಯೊಂದಿಗೆ ಸೇವೆಮಾಡುತ್ತಾರೆ ಅಥವಾ ವಿದೇಶವೊಂದರಲ್ಲಿ ಸೇವೆಮಾಡುತ್ತಾರೆ. ಹೌದು, ಪಯನೀಯರ್‌ ಸೇವೆಯು ಪ್ರತಿಫಲದಾಯಕವಾದ ಒಂದು ಜೀವನಮಾರ್ಗವಾಗಿದೆ!

ಮಿಷನೆರಿ ಸೇವೆಯು ಇನ್ನೊಂದು ಸದವಕಾಶವಾಗಿದೆ. 1943ರಿಂದ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌, ಮಿಷನೆರಿ ಸೇವೆಗಾಗಿ ಅತ್ಯುತ್ತಮವಾದ ತರಬೇತಿಯನ್ನು ಪಡೆದುಕೊಂಡಿರುವ ಅರ್ಹ ಪಯನೀಯರರನ್ನು ಒದಗಿಸಿದೆ. ಇಲ್ಲಿಂದ ಪದವಿಯನ್ನು ಪಡೆದವರು, ವಿದೇಶಗಳಲ್ಲಿ ಪೂರ್ಣ ಸಮಯದ ಪ್ರಚಾರಕರಾಗಿ ಸೇವೆಮಾಡುವ ನೇಮಕವನ್ನು ಪಡೆದುಕೊಳ್ಳುತ್ತಾರೆ. ಇಂತಹ ಅನೇಕ ದೇಶಗಳಲ್ಲಿ, ವಾಸಮಾಡುವ ಪರಿಸ್ಥಿತಿಗಳು ತುಂಬ ಕಷ್ಟಕರವಾಗಿರುವುದರಿಂದ, ಮಿಷನೆರಿ ಸೇವೆಗಾಗಿ ಒಳ್ಳೇ ಆರೋಗ್ಯ ಮತ್ತು ಶಕ್ತಿಯು ಅತ್ಯಗತ್ಯವಾಗಿದೆ. ಹಾಗಿದ್ದರೂ, ಮಿಷನೆರಿಗಳ ಜೀವನ ರೋಮಾಂಚಕವಾದದ್ದೂ ಸಂತೃಪ್ತಿಕರವಾದದ್ದೂ ಆಗಿರುತ್ತದೆ.

ಶುಶ್ರೂಷಾ ತರಬೇತಿ ಶಾಲೆಯು ಅರ್ಹರಾದ ಅವಿವಾಹಿತ ಹಿರಿಯರು ಮತ್ತು ಶುಶ್ರೂಷಾ ಸೇವಕರನ್ನು ತರಬೇತುಗೊಳಿಸಲಿಕ್ಕಾಗಿ ಸ್ಥಾಪಿಸಲ್ಪಟ್ಟಿತು. ಎಂಟು ವಾರಗಳ ತೀವ್ರವಾದ ಪಾಠಕ್ರಮವು, ಹಿರಿಯರು ಹಾಗೂ ಶುಶ್ರೂಷಾ ಸೇವಕರ ಜವಾಬ್ದಾರಿಗಳು, ಸಂಸ್ಥೆ, ಹಾಗೂ ಬಹಿರಂಗ ಭಾಷಣಗಳಂಥ ವಿಷಯವಸ್ತುಗಳನ್ನು ಆವರಿಸುತ್ತದೆ. ಕೆಲವರನ್ನು ತಮ್ಮ ಸ್ವಂತ ದೇಶಗಳಲ್ಲಿ ಸೇವೆಸಲ್ಲಿಸುವಂತೆ ನೇಮಿಸಲಾಗುತ್ತದೆ. ಇತರರನ್ನು ವಿದೇಶೀ ಸೇವಾ ನೇಮಕಗಳಿಗೆ ಹೋಗುವಂತೆ ಕೇಳಿಕೊಳ್ಳಲಾಗುತ್ತದೆ.

ಬೆತೆಲ್‌ ಸೇವೆಯು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಸೌಕರ್ಯಗಳಲ್ಲೊಂದರಲ್ಲಿ ಒಬ್ಬ ಸ್ವಯಂಸೇವಕರಾಗಿ ಸೇವೆಸಲ್ಲಿಸುವುದಾಗಿದೆ. ಬೆತೆಲ್‌ ಕುಟುಂಬದ ಕೆಲವು ಸದಸ್ಯರು ಬೈಬಲ್‌ ಸಾಹಿತ್ಯವನ್ನು ಉತ್ಪಾದಿಸುವ ಕೆಲಸದಲ್ಲಿ ನೇರವಾಗಿ ಸೇವೆಮಾಡುತ್ತಾರೆ. ಇನ್ನಿತರರಿಗೆ ಕಟ್ಟಡಗಳು ಹಾಗೂ ಸಾಧನಗಳ ದುರಸ್ತಿ ಅಥವಾ ಬೆತೆಲ್‌ ಕುಟುಂಬದ ಭೌತಿಕ ಆವಶ್ಯಕತೆಗಳನ್ನು ನೋಡಿಕೊಳ್ಳುವಂಥ ಸಹಾಯಕ ನೇಮಕಗಳು ಕೊಡಲ್ಪಡುತ್ತವೆ. ಎಲ್ಲ ನೇಮಕಗಳು, ಯೆಹೋವನಿಗೆ ಸಲ್ಲಿಸಲ್ಪಡುವ ಸೇವೆಯ ಪವಿತ್ರ ಸುಯೋಗಗಳಾಗಿವೆ. ಇದಕ್ಕೆ ಕೂಡಿಸಿ, ಬೆತೆಲಿನಲ್ಲಿರುವವರು, ತಾವು ಏನು ಮಾಡುತ್ತೇವೋ ಅದು ಲೋಕದಾದ್ಯಂತ ದೊಡ್ಡ ಸಂಖ್ಯೆಯಲ್ಲಿರುವ ತಮ್ಮ ಸಹೋದರರಿಗೆ ಪ್ರಯೋಜನವನ್ನು ತರುತ್ತದೆ ಎಂಬುದನ್ನು ತಿಳಿದಿರುವುದರಿಂದ ಉಂಟಾಗುವ ಸಂತೋಷದಲ್ಲಿ ಆನಂದಿಸುತ್ತಾರೆ.

ಕೆಲವೊಮ್ಮೆ ವಿಶೇಷ ಕೌಶಲಗಳಿರುವ ಸಹೋದರರು ಬೆತೆಲಿನಲ್ಲಿ ಕೆಲಸಮಾಡುವಂತೆ ಆಮಂತ್ರಿಸಲ್ಪಡುತ್ತಾರೆ. ಆದರೂ, ಹೆಚ್ಚಿನವರು ಬೆತೆಲಿಗೆ ಬಂದ ನಂತರ ತಮ್ಮ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಬೆತೆಲಿನಲ್ಲಿರುವವರು ಪ್ರಾಪಂಚಿಕ ಲಾಭಕ್ಕಾಗಿ ಸೇವೆಮಾಡುವುದಿಲ್ಲ, ಬದಲಾಗಿ ಆಹಾರ, ವಸತಿಯ ಒದಗಿಸುವಿಕೆಗಳು ಮತ್ತು ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಕೊಡಲ್ಪಡುವ ಚಿಕ್ಕ ಮೊತ್ತದ ಹಣದ ಒದಗಿಸುವಿಕೆಯಲ್ಲೇ ತೃಪ್ತರಾಗಿರುತ್ತಾರೆ. ಬೆತೆಲ್‌ ಕುಟುಂಬದ ಒಬ್ಬ ಯುವ ಸದಸ್ಯನು ತನ್ನ ಸೇವೆಯನ್ನು ಈ ರೀತಿಯಲ್ಲಿ ವರ್ಣಿಸುತ್ತಾನೆ: “ಇದು ಅತ್ಯದ್ಭುತಕರವಾದ ಸೇವೆಯಾಗಿದೆ! ಇಲ್ಲಿನ ನಿಯತಕ್ರಮವು ಅಷ್ಟೇನೂ ಸುಲಭದಾಯಕವಾದದ್ದಲ್ಲ, ಆದರೆ ಇಲ್ಲಿ ಸೇವೆಮಾಡುವುದರಿಂದ ನಾನು ಅನೇಕ ಆಶೀರ್ವಾದಗಳನ್ನು ಪಡೆದುಕೊಂಡಿದ್ದೇನೆ.”

ಅಂತಾರಾಷ್ಟ್ರೀಯ ಸೇವೆಯು ಒಬ್ಬನು ಬ್ರಾಂಚ್‌ ಸೌಕರ್ಯಗಳನ್ನು ಹಾಗೂ ರಾಜ್ಯ ಸಭಾಗೃಹಗಳನ್ನು ನಿರ್ಮಿಸುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಅನುಮತಿಸುತ್ತದೆ. ಅಂತಾರಾಷ್ಟ್ರೀಯ ಸೇವಕರು ಎಂದು ಕರೆಯಲಾಗುವ ಇವರು, ಇಂಥ ನಿರ್ಮಾಣ ಕೆಲಸದಲ್ಲಿ ಸಹಾಯಮಾಡಲಿಕ್ಕಾಗಿ ವಿದೇಶಗಳಿಗೆ ಪ್ರಯಾಣಿಸುತ್ತಾರೆ. ಇದು ಸಹ ಒಂದು ರೀತಿಯ ಪವಿತ್ರ ಸೇವೆಯಾಗಿದ್ದು, ಸೊಲೊಮೋನನ ದೇವಾಲಯವನ್ನು ಕಟ್ಟಿದಂಥವರ ಕೆಲಸಕ್ಕೆ ಸಮಾನವಾದದ್ದಾಗಿದೆ. (1 ಅರಸುಗಳು 8:​13-18) ಅಂತಾರಾಷ್ಟ್ರೀಯ ಸೇವಕರ ಆರೈಕೆಗಾಗಿ ಮಾಡಲ್ಪಡುವ ಏರ್ಪಾಡುಗಳು, ಬೆತೆಲ್‌ ಕುಟುಂಬಕ್ಕೆ ಮಾಡಲ್ಪಡುವ ಏರ್ಪಾಡುಗಳಿಗೆ ಅನುರೂಪವಾಗಿವೆ. ಯೆಹೋವನ ಸ್ತುತಿಗಾಗಿರುವ ಈ ಕಾರ್ಯಕ್ಷೇತ್ರದಲ್ಲಿ ಸೇವೆಮಾಡುವ ಎಂಥ ಒಂದು ಸುಯೋಗ ಈ ಸಹೋದರ ಸಹೋದರಿಯರಿಗಿದೆ!

ಪೂರ್ಣ ಪ್ರಾಣದಿಂದ ಯೆಹೋವನ ಸೇವೆಮಾಡುವುದು

ಯೆಹೋವನ ಸೇವೆಮಾಡುವುದೇ ನಮ್ಮ ಜೀವಿತವನ್ನು ನಾವು ಉಪಯೋಗಿಸಸಾಧ್ಯವಿರುವ ಅತ್ಯಂತ ಪ್ರಯೋಜನದಾಯಕ ವಿಧವಾಗಿದೆ. ಪೂರ್ಣ ಸಮಯ ದೇವರ ಸೇವೆಯನ್ನು ಮಾಡುವ ವೈಯಕ್ತಿಕ ಗುರಿಯನ್ನು ಇಡುವುದರ ಬಗ್ಗೆ ನೀವು ಯೋಚಿಸಬಾರದೇಕೆ? ನಿಮ್ಮ ಹೆತ್ತವರು, ನಿಮ್ಮ ಸ್ಥಳಿಕ ಹಿರಿಯರು, ಮತ್ತು ನಿಮ್ಮ ಸರ್ಕಿಟ್‌ ಮೇಲ್ವಿಚಾರಕರೊಂದಿಗೆ ಪೂರ್ಣ ಸಮಯದ ಸೇವೆಯ ಕುರಿತು ಚರ್ಚಿಸಿರಿ. ಬೆತೆಲ್‌, ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ ಅಥವಾ ಕ್ರೈಸ್ತ ದಂಪತಿಗಳಿಗಾಗಿ ಬೈಬಲ್‌ ಶಾಲೆಯಲ್ಲಿ ನೀವು ಆಸಕ್ತರಾಗಿರುವಲ್ಲಿ, ಬೆತೆಲ್‌, ಗಿಲ್ಯಡ್‌ ಅಥವಾ ಶುಶ್ರೂಷಾ ತರಬೇತಿ ಶಾಲೆಯಲ್ಲಿ ನೀವು ಆಸಕ್ತರಾಗಿರುವಲ್ಲಿ, ಸರ್ಕಿಟ್‌ ಸಮ್ಮೇಳನಗಳು ಮತ್ತು ಜಿಲ್ಲಾ ಅಧಿವೇಶನಗಳಲ್ಲಿ ಭಾವೀ ಅರ್ಜಿದಾರರಿಗಾಗಿ ನಡೆಸಲ್ಪಡುವ ಕೂಟಗಳಿಗೆ ಹಾಜರಾಗಿ.

ಎಲ್ಲರೂ ಪೂರ್ಣ ಸಮಯದ ಸೇವೆಗಾಗಿ ಅರ್ಹರಾಗದಿರಬಹುದು ಅಥವಾ ಅದನ್ನು ಮಾಡಲು ಶಕ್ತರಾಗಿಲ್ಲದಿರಬಹುದು ಎಂಬುದು ಒಪ್ಪತಕ್ಕ ವಿಷಯವೇ. ಕೆಲವೊಮ್ಮೆ ಆರೋಗ್ಯದ ಸಮಸ್ಯೆಗಳು, ಆರ್ಥಿಕ ಸನ್ನಿವೇಶಗಳು, ಮತ್ತು ಕುಟುಂಬದ ಹಂಗುಗಳು ನಾವು ಏನು ಮಾಡಲು ಬಯಸುತ್ತೇವೊ ಅದನ್ನು ಮಿತಗೊಳಿಸುತ್ತವೆ. ಹಾಗಿದ್ದರೂ, ಎಲ್ಲ ಸಮರ್ಪಿತ ಕ್ರೈಸ್ತರು ಬೈಬಲಿನ ಈ ಆಜ್ಞೆಯನ್ನು ಪಾಲಿಸತಕ್ಕದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ನಿಮ್ಮ ಸನ್ನಿವೇಶಗಳು ಅನುಮತಿಸುವ ಪರಿಧಿಯಲ್ಲೇ ಸಾಧ್ಯವಿರುವಷ್ಟು ಹೆಚ್ಚನ್ನು ಮಾಡಲು ಪ್ರಯತ್ನಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ. ಆದುದರಿಂದ, ನಿಮ್ಮ ಸನ್ನಿವೇಶವು ಏನೇ ಆಗಿರಲಿ, ಯೆಹೋವನ ಸೇವೆಮಾಡುವುದನ್ನು ನಿಮ್ಮ ಜೀವಿತದ ಕೇಂದ್ರಬಿಂದುವಾಗಿ ಮಾಡಿಕೊಳ್ಳಿ. ವಾಸ್ತವಿಕವಾದ ದೇವಪ್ರಭುತ್ವಾತ್ಮಕ ಗುರಿಗಳನ್ನಿಡಿರಿ. ಹೌದು, ‘ಯೌವನದಲ್ಲಿಯೇ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿರಿ’​—⁠ಮತ್ತು ಹೀಗೆ ಮಾಡಿದ್ದಕ್ಕಾಗಿ ನೀವು ನಿರಂತರವಾಗಿ ಆಶೀರ್ವದಿಸಲ್ಪಡುವಿರಿ!

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರ ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ ಭಾಷಾಂತರವು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—⁠ರೆಫರೆನ್ಸಸ್‌ಗಳೊಂದಿಗೆ (ಇಂಗ್ಲಿಷ್‌) ಆಗಿದೆ.