ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳು

ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳು

ಅಧ್ಯಾಯ ಹದಿನೆಂಟು

ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳು

ಯೆಶಾಯ 22:​1-25

1. ಆಕ್ರಮಣಕ್ಕೊಳಗಾದ ಒಂದು ಪುರಾತನ ನಗರದೊಳಗೆ ಸಿಕ್ಕಿಕೊಂಡಿರುವುದು ಹೇಗಿದ್ದಿರಬಹುದು?

ಆಕ್ರಮಣಕ್ಕೆ ಒಳಗಾದ ಒಂದು ಪುರಾತನ ನಗರದಲ್ಲಿರುವುದು ಹೇಗಿತ್ತು ಎಂಬುದನ್ನು ಊಹಿಸಿಕೊಳ್ಳಿರಿ. ನಗರದ ಹೊರಗೆ, ಬಲಿಷ್ಠನೂ ಕ್ರೂರನೂ ಆದ ವೈರಿಯು ನಿಂತಿದ್ದಾನೆ. ಬೇರೆಲ್ಲ ನಗರಗಳು ಈಗಾಗಲೇ ಅವನಿಗೆ ಶರಣಾಗಿವೆ ಎಂದು ನಿಮಗೆ ಗೊತ್ತು. ಈಗ ನಿಮ್ಮ ನಗರವನ್ನು ಜಯಿಸಿ, ಕೊಳ್ಳೆಹೊಡೆಯಲು ಮತ್ತು ಅದರ ನಿವಾಸಿಗಳ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ಕೊಲ್ಲಲು ಅವನು ನಿರ್ಣಯಿಸಿದ್ದಾನೆ. ವೈರಿಯು ತುಂಬ ಬಲಶಾಲಿಯಾಗಿರುವ ಕಾರಣ, ಮುಖಾಮುಖಿಯಾಗಿ ಅವನೊಂದಿಗೆ ಹೋರಾಡುವುದು ಅಸಾಧ್ಯವೇ ಸರಿ. ಆದಕಾರಣ ನಗರದ ಗೋಡೆಗಳಿಗೆ ಏನೂ ಆಗದಿದ್ದರೆ ಸಾಕೆಂದು ನೀವು ಆಶಿಸುತ್ತೀರಿ. ಗೋಡೆಗಳ ಆಚೆ, ವೈರಿಯು ತಂದಿರುವ ಮುತ್ತಿಗೆಯ ಬುರುಜುಗಳನ್ನು ನೀವು ನೋಡಬಹುದು. ಅದರೊಂದಿಗೆ ಮುತ್ತಿಗೆಯ ಯಂತ್ರಸಾಮಗ್ರಿಗಳೂ ಇವೆ. ಇವುಗಳ ಸಹಾಯದಿಂದ ಅವರು ದೊಡ್ಡ ದೊಡ್ಡ ಬಂಡೆಗಳನ್ನು ಎಸೆದು ನಿಮ್ಮ ರಕ್ಷಣಾ ವ್ಯವಸ್ಥೆಯನ್ನು ನುಚ್ಚುನೂರುಗೊಳಿಸಬಹುದು. ಅವರ ತೂಗಾಡುವ ದಿಮ್ಮಿಗಳನ್ನು, ಎತ್ತರವಾದ ಏಣಿಗಳನ್ನು, ಬಿಲ್ಲುಗಾರರನ್ನು, ರಥಗಳನ್ನು ಮತ್ತು ಸೈನಿಕರ ಸಮೂಹವನ್ನು ನೀವು ನೋಡುತ್ತೀರಿ. ಎಂತಹ ದಿಗಿಲು ಹುಟ್ಟಿಸುವ ದೃಶ್ಯ!

2. ಯೆಶಾಯ 22ನೆಯ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟ ಮುತ್ತಿಗೆ ಯಾವಾಗ ನಡೆಯುತ್ತದೆ?

2 ಯೆಶಾಯ 22ನೆಯ ಅಧ್ಯಾಯದಲ್ಲಿ, ನಾವು ಯೆರೂಸಲೇಮಿನ ಮೇಲೆ ನಡೆದ ಇಂತಹದ್ದೇ ಮುತ್ತಿಗೆಯ ಕುರಿತು ಓದುತ್ತೇವೆ. ಅದು ಯಾವಾಗ ಸಂಭವಿಸುತ್ತದೆ? ಮೇಲೆ ವರ್ಣಿಸಲ್ಪಟ್ಟ ಎಲ್ಲ ಘಟನೆಗಳು ಒಂದೇ ಆಕ್ರಮಣದಲ್ಲಿ ನೆರವೇರಿತ್ತೆಂದು ಹೇಳುವುದು ಕಷ್ಟ. ಆದರೆ ಯೆರೂಸಲೇಮಿನ ಮೇಲೆ ಮುಂದೆ ಸಂಭವಿಸಲಿರುವ ಅನೇಕ ಆಕ್ರಮಣಗಳ ಬಗ್ಗೆ, ಈ ಪ್ರವಾದನೆಯು ಒಂದು ಸಾಮಾನ್ಯ ಎಚ್ಚರಿಕೆಯನ್ನು ಕೊಡುತ್ತಿದೆಯಷ್ಟೆ.

3. ಯೆಶಾಯನು ವರ್ಣಿಸುವ ಆಕ್ರಮಣಕ್ಕೆ ಯೆರೂಸಲೇಮಿನ ನಿವಾಸಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ?

3 ಯೆಶಾಯನು ವಿವರಿಸಿರುವ ಮುತ್ತಿಗೆಯು ನಡೆಯುತ್ತಿರುವಾಗ, ಯೆರೂಸಲೇಮಿನ ನಿವಾಸಿಗಳು ಏನು ಮಾಡುತ್ತಿದ್ದಾರೆ? ದೇವರ ಒಡಂಬಡಿಕೆಯ ಜನರೋಪಾದಿ, ತಮ್ಮ ರಕ್ಷಣೆಗಾಗಿ ಅವರು ಯೆಹೋವನಲ್ಲಿ ಮೊರೆಯಿಡುತ್ತಿದ್ದಾರೊ? ಇಲ್ಲ. ಇಂದು ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುವ ಅನೇಕರಂತೆ ಅವರು ಬುದ್ಧಿಹೀನರಾಗಿ ನಡೆದುಕೊಳ್ಳುತ್ತಿದ್ದಾರೆ.

ಮುತ್ತಿಗೆ ಹಾಕಲ್ಪಟ್ಟ ನಗರ

4. (ಎ) ‘ದಿವ್ಯದರ್ಶನದ ತಗ್ಗು’ ಏನಾಗಿದೆ, ಮತ್ತು ಯಾವ ಕಾರಣಕ್ಕಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ? (ಬಿ) ಯೆರೂಸಲೇಮಿನ ನಿವಾಸಿಗಳ ಆತ್ಮಿಕ ಸ್ಥಿತಿಯು ಹೇಗಿದೆ?

4 ಯೆಶಾಯ 21ನೆಯ ಅಧ್ಯಾಯದಲ್ಲಿರುವ ನ್ಯಾಯತೀರ್ಪಿನ ಮೂರೂ ಸಂದೇಶಗಳು, “ದೈವೋಕ್ತಿ” ಎಂಬ ನುಡಿಯೊಂದಿಗೆ ಆರಂಭವಾಗುತ್ತವೆ. (ಯೆಶಾಯ 21:​1, 11, 13) 22ನೆಯ ಅಧ್ಯಾಯವು ಸಹ ಅದೇ ರೀತಿಯಲ್ಲಿ ಆರಂಭವಾಗುತ್ತದೆ: “ದಿವ್ಯದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ. ನಿನಗೆ ಏನಾಯಿತು? ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದ್ದೇಕೆ?” (ಯೆಶಾಯ 22:1) ‘ದಿವ್ಯದರ್ಶನದ ತಗ್ಗು’ ಯೆರೂಸಲೇಮನ್ನು ಸೂಚಿಸುತ್ತದೆ. ಈ ನಗರವು ಸಮುದ್ರ ಮಟ್ಟಕ್ಕಿಂತಲೂ ಎತ್ತರವಾದ ಪ್ರದೇಶದಲ್ಲಿ ನೆಲೆಸಿದ್ದರೂ, ಅದರ ಸುತ್ತಮುತ್ತ ಬಹಳ ಎತ್ತರವಾದ ಬೆಟ್ಟಗಳಿರುವುದರಿಂದ, ಅದನ್ನು ತಗ್ಗು ಎಂಬುದಾಗಿ ಕರೆಯಲಾಗಿದೆ. ಈ ನಗರವು ಒಂದು ‘ದರ್ಶನ’ದೊಂದಿಗೆ ಸಂಬಂಧಿಸಲ್ಪಟ್ಟಿದೆ, ಏಕೆಂದರೆ ಇಲ್ಲಿ ಅನೇಕ ದಿವ್ಯದರ್ಶನಗಳೂ ಪ್ರಕಟನೆಗಳೂ ನೀಡಲ್ಪಟ್ಟಿವೆ. ಈ ಕಾರಣಕ್ಕಾಗಿಯೇ, ನಗರದ ನಿವಾಸಿಗಳು ಯೆಹೋವನ ಮಾತುಗಳಿಗೆ ಕಿವಿಗೊಡತಕ್ಕದ್ದು. ಆದರೆ, ಅವರು ಆತನನ್ನು ಕಡೆಗಣಿಸಿ, ಸುಳ್ಳಾರಾಧನೆಯ ಅಡ್ಡದಾರಿಯನ್ನು ಹಿಡಿದಿದ್ದಾರೆ. ಈ ನಗರಕ್ಕೆ ಮುತ್ತಿಗೆ ಹಾಕಿರುವ ವೈರಿಯು, ದೇವರು ತನ್ನ ಹಟಮಾರಿ ಜನರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವ ಒಂದು ಸಾಧನವಾಗಿದ್ದಾನೆ.​—⁠ಧರ್ಮೋಪದೇಶಕಾಂಡ 28:​45, 49, 50, 52.

5. ಜನರು ಯಾವ ಕಾರಣಕ್ಕಾಗಿ ತಮ್ಮ ಮಾಳಿಗೆಗಳಿಗೆ ಹೋಗುತ್ತಾರೆ?

5 ಯೆರೂಸಲೇಮಿನ ನಿವಾಸಿಗಳು ತಮ್ಮ ಮನೆಗಳ ‘ಮಾಳಿಗೆಗಳನ್ನು ಹತ್ತಿದ್ದಾರೆ’ ಎಂಬುದನ್ನು ಗಮನಿಸಿರಿ. ಪುರಾತನ ಸಮಯಗಳಲ್ಲಿ, ಇಸ್ರಾಯೇಲ್ಯರ ಮನೆಗಳಿಗೆ ಚಪ್ಪಟೆಯಾದ ಮಾಳಿಗೆಗಳಿರುತ್ತಿದ್ದವು, ಮತ್ತು ಅಲ್ಲಿ ಕುಟುಂಬಗಳು ಅನೇಕ ವೇಳೆ ಕೂಡಿಬರುತ್ತಿದ್ದವು. ಈ ಸಂದರ್ಭದಲ್ಲಿ ಅವರೇಕೆ ಮಾಳಿಗೆಯನ್ನು ಹತ್ತುತ್ತಾರೆಂದು ಯೆಶಾಯನು ತಿಳಿಸುವುದಿಲ್ಲವಾದರೂ, ಅವನ ಮಾತುಗಳು ಅವರ ವರ್ತನೆಯನ್ನು ಖಂಡಿಸುವಂತಿವೆ. ಹಾಗಾದರೆ, ತಮ್ಮ ಸುಳ್ಳು ದೇವರುಗಳಿಗೆ ಮೊರೆಯಿಡುವ ಉದ್ದೇಶದಿಂದಲೇ ಅವರು ಮಾಳಿಗೆಗೆ ಹೋಗಿರಬೇಕು. ಈ ರೂಢಿಯನ್ನು ಅವರು ಸಾ.ಶ.ಪೂ. 607ರ ವರೆಗೆ, ಅಂದರೆ ಯೆರೂಸಲೇಮಿನ ನಾಶನದ ವರೆಗೆ ಅನುಸರಿಸುತ್ತಾ ಬಂದಿದ್ದಾರೆ.​—⁠ಯೆರೆಮೀಯ 19:13; ಚೆಫನ್ಯ 1:⁠5.

6. (ಎ) ಯೆರೂಸಲೇಮ್‌ ನಗರದೊಳಗೆ ಯಾವ ಪರಿಸ್ಥಿತಿಯು ನೆಲೆಸಿದೆ? (ಬಿ) ಕೆಲವರು ಅತ್ಯಾನಂದ ಪಡುವುದೇಕೆ, ಆದರೆ ಮುಂದೆ ಅವರಿಗೆ ಏನು ಕಾದಿದೆ?

6 ಯೆಶಾಯನು ಮುಂದುವರಿಸುವುದು: “ಕೋಲಾಹಲದಿಂದ ತುಂಬಿ ಆರ್ಬಟಿಸುವ ಪಟ್ಟಣವೇ, ಸಂಭ್ರಮದ ಊರೇ! ನಿನ್ನಲ್ಲಿ ಹತರಾದವರು ಖಡ್ಗಹತರಲ್ಲ, ಯುದ್ಧದಲ್ಲಿ ಮೃತರಲ್ಲ.” (ಯೆಶಾಯ 22:2) ಜನರಿಂದ ಕಿಕ್ಕಿರಿದು ತುಂಬಿರುವ ನಗರವು, ಕೋಲಾಹಲದಲ್ಲಿದೆ. ರಸ್ತೆಗಳಲ್ಲಿರುವ ಜನರು ದಿಗಿಲುಗೊಂಡು, ಆರ್ಬಟಿಸುತ್ತಿದ್ದಾರೆ. ಇವರಲ್ಲಿ ಕೆಲವರು ನಿರಾತಂಕರಾಗಿರುವ ಕಾರಣ, ಇಲ್ಲವೆ ಅಪಾಯವು ದಾಟಿಹೋಗಿದೆ ಎಂದು ನಂಬುವ ಕಾರಣ ಅತ್ಯಾನಂದಪಡುತ್ತಿದ್ದಾರೆ. * ಆದರೆ ಇಂತಹ ಸಮಯದಲ್ಲಿ ಆನಂದಪಡುವುದು ಮೂರ್ಖತನವಾಗಿದೆ. ಏಕೆಂದರೆ, ಕತ್ತಿಯ ಇರಿತಕ್ಕಿಂತಲೂ ಕ್ರೂರವಾದ ಮರಣಕ್ಕೆ ಅನೇಕರು ತುತ್ತಾಗಲಿದ್ದಾರೆ. ಮುತ್ತಿಗೆ ಹಾಕಲ್ಪಟ್ಟ ನಗರಕ್ಕೆ ಹೊರಗಿನಿಂದ ಆಹಾರದ ಸರಬರಾಯಿ ಬರಲಾರದು. ನಗರದಲ್ಲಿರುವ ಸಂಗ್ರಹಗಳು ಕ್ರಮೇಣ ಖಾಲಿಯಾಗುತ್ತ ಬರುತ್ತವೆ. ಜನರು ಹೊಟ್ಟೆಗಿಲ್ಲದೆ, ಕಿಕ್ಕಿರಿದಿರುವ ಪರಿಸ್ಥಿತಿಗಳಲ್ಲಿ ಜೀವಿಸುತ್ತಿರುವುದರಿಂದ, ಅಂಟುರೋಗಗಳಿಗೆ ಬಲಿಬೀಳುತ್ತಾರೆ. ಹೀಗೆ ಯೆರೂಸಲೇಮಿನಲ್ಲಿರುವ ಅನೇಕರು, ಕ್ಷಾಮ ಹಾಗೂ ವ್ಯಾಧಿಯಿಂದ ಸತ್ತುಹೋಗುತ್ತಾರೆ. ಇದು ಸಾ.ಶ.ಪೂ. 607ರಲ್ಲಿಯೂ, ಸಾ.ಶ. 70ರಲ್ಲಿಯೂ ಸಂಭವಿಸುತ್ತದೆ.​—⁠2 ಅರಸುಗಳು 25:3; ಪ್ರಲಾಪಗಳು 4:​9, 10. *

7. ಮುತ್ತಿಗೆಯ ಸಮಯದಲ್ಲಿ ಯೆರೂಸಲೇಮಿನ ಅರಸರು ಏನು ಮಾಡುತ್ತಾರೆ, ಮತ್ತು ಅವರಿಗೆ ಏನು ಸಂಭವಿಸುತ್ತದೆ?

7 ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಯೆರೂಸಲೇಮಿನ ಅರಸರು ಯಾವ ರೀತಿಯ ಮಾರ್ಗದರ್ಶನವನ್ನು ನೀಡುತ್ತಾರೆ? ಯೆಶಾಯನು ಉತ್ತರಿಸುವುದು: “ನಿನ್ನ ಅಧಿಕಾರಿಗಳು ಒಟ್ಟಿಗೆ ಓಡಿ ಬಿಲ್ಲಿಲ್ಲದೆ ಸೆರೆಯಾಗಿದ್ದಾರೆ; ದೂರ ಓಡುತ್ತಾ [ಶತ್ರುವಿ] ಸಿಕ್ಕಿದ ನಿನ್ನ ಜನರೆಲ್ಲರೂ ಒಂದಿಗೆ ಕಟ್ಟುಬಿದ್ದಿದ್ದಾರೆ.” (ಯೆಶಾಯ 22:3) ಅರಸರು ಮತ್ತು ಶೂರರು ಅಲ್ಲಿಂದ ಓಡಿಹೋಗುತ್ತಾರಾದರೂ, ಅವರನ್ನು ಹಿಡಿಯಲಾಗುತ್ತದೆ! ವೈರಿಗಳು ಅವರ ವಿರುದ್ಧ ಒಂದು ಬಾಣವನ್ನೂ ಉಪಯೋಗಿಸದೆ, ಅವರನ್ನು ಹಿಡಿದು ಸೆರೆಗೆ ಹಾಕುತ್ತಾರೆ. ಇದು ಸಾ.ಶ.ಪೂ. 607ರಲ್ಲಿ ಸಂಭವಿಸುತ್ತದೆ. ವೈರಿಗಳು ಯೆರೂಸಲೇಮಿನ ಗೋಡೆಗಳನ್ನು ಛಿದ್ರಗೊಳಿಸಿದಾಗ, ರಾಜ ಚಿದ್ಕೀಯನು ಮತ್ತು ಅವನ ಶೂರರು ಅಲ್ಲಿಂದ ಪಲಾಯನಗೈಯುತ್ತಾರೆ. ವೈರಿಗೆ ಇದರ ಸುಳಿವು ಸಿಕ್ಕಿದಾಗ, ಅವರನ್ನು ಬೆನ್ನಟ್ಟಿ, ಯೆರಿಕೊವಿನ ಬೈಲಿನಲ್ಲಿ ಅವರನ್ನು ಹಿಡಿದುಬಿಡುತ್ತಾರೆ. ಶೂರರೆಲ್ಲರೂ ಚದರಿಹೋಗುತ್ತಾರೆ. ಚಿದ್ಕೀಯನಾದರೊ ಹಿಡಿಯಲ್ಪಟ್ಟು, ಕುರುಡಾಗಿಸಲ್ಪಟ್ಟು, ಬೇಡಿಗಳಲ್ಲಿ ಬಂಧಿತನಾಗಿ ಬಾಬೆಲಿಗೆ ಒಯ್ಯಲ್ಪಡುತ್ತಾನೆ. (2 ಅರಸುಗಳು 25:​2-7) ತನ್ನ ಅಪನಂಬಿಗಸ್ತಿಕೆಗೆ ಎಂತಹ ಘೋರ ಶಿಕ್ಷೆ!

ಕೇಡಿನಿಂದ ಹತಾಶೆ

8. (ಎ) ಯೆರೂಸಲೇಮಿನ ಮೇಲೆ ಕೇಡನ್ನು ಮುಂತಿಳಿಸುವ ಪ್ರವಾದನೆಗೆ ಯೆಶಾಯನು ಹೇಗೆ ಪ್ರತಿಕ್ರಿಯಿಸುತ್ತಾನೆ? (ಬಿ) ಯೆರೂಸಲೇಮಿನಲ್ಲಿ ಯಾವ ದೃಶ್ಯವನ್ನು ಕಾಣಬಹುದು?

8 ಈ ಪ್ರವಾದನೆಯಿಂದ ಯೆಶಾಯನು ಬಹಳ ವೇದನೆಯನ್ನು ಅನುಭವಿಸುತ್ತಾನೆ. ಅವನು ಹೇಳುವುದು: “ಹೀಗಿರಲು ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ, ಬಹು ಸಂಕಟದಿಂದ ಅಳುವೆನು, ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ.” (ಯೆಶಾಯ 22:4) ಮೋವಾಬ್‌ ಮತ್ತು ಬಾಬೆಲ್‌, ಮುಂದೆ ಅನುಭವಿಸಲಿರುವ ಗತಿಗಾಗಿ ಯೆಶಾಯನು ರೋದಿಸಿದನು. (ಯೆಶಾಯ 16:11; 21:⁠3) ತನ್ನ ಸ್ವಂತ ಜನರ ಮೇಲೆ ಬರಲಿರುವ ಕೇಡಿನ ಕುರಿತು ನೆನಸುವಾಗ, ಅವನ ಹತಾಶೆ ಹಾಗೂ ಪ್ರಲಾಪವು ಈಗ ಮತ್ತಷ್ಟೂ ತೀವ್ರವಾಗಿರುತ್ತದೆ. ಅವನನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ. ಏಕೆ? ಏಕೆಂದರೆ, “ಸೇನಾಧೀಶ್ವರನಾದ ಯೆಹೋವನೆಂಬ ಕರ್ತನಿಂದ ದಿವ್ಯದರ್ಶನದ ತಗ್ಗಿಗೆ ಗಲಿಬಿಲಿಯ ದಿನ, ತುಳಿದಾಟದ ದಿನ, ಭ್ರಾಂತಿಯ ದಿನ, ಕೋಟೆಯು ಒಡೆದುಹೋಗಲು ಕೂಗು ಬೆಟ್ಟವನ್ನು ಮುಟ್ಟುವ ದಿನ ಬಂದಿದೆ.” (ಯೆಶಾಯ 22:5) ಯೆರೂಸಲೇಮ್‌ ಗಲಿಬಿಲಿಯ ಕೇಂದ್ರವಾಗಲಿದೆ. ಜನರು ದಿಗಿಲುಬಿದ್ದು, ಗೊತ್ತುಗುರಿಯಿಲ್ಲದೆ ಅಲೆದಾಡುವರು. ವೈರಿಯು ನಗರದ ಗೋಡೆಗಳನ್ನು ಒಡೆದುಹಾಕಲು ಆರಂಭಿಸಿದಂತೆ, ‘ಕೂಗು ಬೆಟ್ಟವನ್ನು ಮುಟ್ಟುವುದು.’ ಮೊರೀಯ ಬೆಟ್ಟದ ಮೇಲೆ ನೆಲೆಸಿರುವ ಪವಿತ್ರ ಆಲಯದಲ್ಲಿ ನಗರದ ನಿವಾಸಿಗಳು ದೇವರಿಗೆ ಮೊರೆಯಿಟ್ಟು ಕೂಗುವರೆಂಬುದು ಇದರ ಅರ್ಥವೊ? ಒಂದು ವೇಳೆ ಹಾಗಿರಬಹುದು. ಆದರೆ ಈ ಜನರು ಅಪನಂಬಿಗಸ್ತರಾಗಿರುವ ಕಾರಣ, ಅವರ ಕೂಗು ಅಕ್ಕಪಕ್ಕದ ಬೆಟ್ಟಗಳಿಗೆ ತಾಗಿ ಪ್ರತಿಧ್ವನಿಸುವುದೇ ಹೊರತು, ಯಾವ ಒಳಿತನ್ನೂ ಮಾಡಲಾರದು.

9. ಯೆರೂಸಲೇಮನ್ನು ಬೆದರಿಸುತ್ತಿರುವ ಸೇನೆಯನ್ನು ವರ್ಣಿಸಿರಿ.

9 ಯಾವ ರೀತಿಯ ವೈರಿಯು ಯೆರೂಸಲೇಮನ್ನು ಬೆದರಿಸುತ್ತಿದ್ದಾನೆ? ಯೆಶಾಯನು ನಮಗೆ ಹೇಳುವುದು: “ಏಲಾಮು ರಥಾಶ್ವಪದಾತಿಗಳಿಂದ ಬತ್ತಳಿಕೆಯನ್ನು ಧರಿಸಿತು; ಕೀರಿನವರು ಗುರಾಣಿಯ ಗೌಸಣಿಗೆಯನ್ನು ತೆರೆದರು.” (ಯೆಶಾಯ 22:6) ವೈರಿಗಳು ಪೂರ್ಣವಾಗಿ ಶಸ್ತ್ರಸಜ್ಜಿತರಾಗಿದ್ದಾರೆ. ಅವರ ಬಿಲ್ಲುಗಾರರ ಬತ್ತಳಿಕೆಯು ಬಾಣಗಳಿಂದ ತುಂಬಿದೆ. ಯೋಧರು ತಮ್ಮ ಗುರಾಣಿಗಳನ್ನು ಯುದ್ಧಕ್ಕಾಗಿ ಸಿದ್ಧಪಡಿಸುತ್ತಿದ್ದಾರೆ. ರಥಗಳು ಮತ್ತು ತರಬೇತುಪಡೆದ ಕುದುರೆಗಳೂ ಇವೆ. ಸೇನೆಯಲ್ಲಿ ಏಲಾಮಿನ, ಅಂದರೆ ಈಗಿನ ಪರ್ಷಿಯನ್‌ ಕೊಲ್ಲಿಯ ಉತ್ತರಭಾಗದಲ್ಲಿರುವ ಕ್ಷೇತ್ರದಿಂದ ಹಾಗೂ ಏಲಾಮಿನ ನೆರೆಹೊರೆಯಲ್ಲಿರಬಹುದಾದ ಕೀರಿನಿಂದ ಬಂದ ಸೈನಿಕರಿದ್ದಾರೆ. ಈ ಆಕ್ರಮಣಕಾರರು ಎಷ್ಟು ದೂರದಿಂದ ಬರುವರೆಂಬುದು ಈ ದೇಶಗಳ ಉಲ್ಲೇಖದಿಂದ ಗೊತ್ತಾಗುತ್ತದೆ. ಹಿಜ್ಕೀಯನ ದಿನದಲ್ಲಿ ಯೆರೂಸಲೇಮನ್ನು ಬೆದರಿಸುತ್ತಿರುವ ಸೇನೆಯಲ್ಲಿ ಏಲಾಮಿನ ಬಿಲ್ಲುಗಾರರು ಸಹ ಇದ್ದಿರಬಹುದೆಂಬುದನ್ನು ಇದು ಸೂಚಿಸುತ್ತದೆ.

ಆತ್ಮರಕ್ಷಣೆಯ ಪ್ರಯತ್ನಗಳು

10. ಯಾವ ಸನ್ನಿವೇಶವು ನಗರಕ್ಕೆ ಶುಭಸೂಚಕವಾಗಿರುವುದಿಲ್ಲ?

10 ವಿಕಸಿಸುತ್ತಿರುವ ಸನ್ನಿವೇಶವನ್ನು ಯೆಶಾಯನು ವರ್ಣಿಸುತ್ತಾನೆ: “ನಿಮ್ಮ ಪ್ರಿಯವಾದ ತಗ್ಗುಗಳಲ್ಲಿ ರಥಗಳು ತುಂಬಿದವು, ರಾಹುತರು ಬಾಗಿಲೆದುರಿಗೆ ವ್ಯೂಹಕಟ್ಟಿದರು. ಯೆಹೂದದ ತೆರೆಯು ತೆರೆದುಹೋಯಿತು.” (ಯೆಶಾಯ 22:7, 8ಎ) ರಥಗಳು ಮತ್ತು ಕುದುರೆಗಳು ಯೆರೂಸಲೇಮಿನ ಹೊರವಲಯವನ್ನು ಆವರಿಸಿ, ನಗರದ ದ್ವಾರಗಳನ್ನು ಮುತ್ತಲು ಸಿದ್ಧವಾಗಿವೆ. ಹಾಗಾದರೆ, ತೆಗೆಯಲ್ಪಟ್ಟ “ಯೆಹೂದದ ತೆರೆಯು” ಏನಾಗಿದೆ? ಬಹುಶಃ ಅದು ನಗರದ ಒಂದು ದ್ವಾರವಾಗಿದೆ, ಮತ್ತು ಅದರ ಸೋಲು ನಗರದ ರಕ್ಷಕರಿಗೆ ಶುಭಸೂಚಕವಾಗಿರುವುದಿಲ್ಲ. * ಈ ರಕ್ಷಣಾತ್ಮಕ ತೆರೆಯು ತೆಗೆಯಲ್ಪಟ್ಟ ತರುವಾಯ, ನಗರವನ್ನು ವೈರಿಯ ದಾಳಿಯಿಂದ ರಕ್ಷಿಸಲು ಸಾಧ್ಯವಿಲ್ಲ.

11, 12. ಯೆರೂಸಲೇಮಿನ ನಿವಾಸಿಗಳು ಯಾವ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಾರೆ?

11 ಜನರು ಆತ್ಮರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುವ ವಿಷಯದ ಮೇಲೆ ಯೆಶಾಯನು ಈಗ ಕೇಂದ್ರೀಕರಿಸುತ್ತಾನೆ. ಆತ್ಮರಕ್ಷಣೆಗಾಗಿ ಅವರು ನೆನಪಿಸಿಕೊಳ್ಳುವಂತಹ ಮೊದಲ ವಿಷಯವು ಆಯುಧಗಳೇ! “ಆ ದಿನದಲ್ಲಿ [ಲೆಬನೋನಿನ] ತೋಪು ಎನಿಸಿಕೊಳ್ಳುವ ಮಂದಿರದಲ್ಲಿನ ಆಯುಧಗಳ ಕಡೆಗೆ ದೃಷ್ಟಿಹಾಕಿದಿರಿ. ದಾವೀದನ ಕೋಟೆಯ ಒಡಕುಗಳು ಬಹಳವೆಂದು ನೋಡಿದಿರಿ; ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.” (ಯೆಶಾಯ 22:8ಬಿ, 9) ತೋಪು ಎನಿಸಿಕೊಳ್ಳುವ ಮಂದಿರದಲ್ಲಿ ಆಯುಧಗಳು ಇಡಲ್ಪಟ್ಟಿವೆ. ಇದನ್ನು ಸೊಲೊಮೋನನು ಕಟ್ಟಿಸಿದ್ದನು. ಇದನ್ನು ಕಟ್ಟಲು ಲೆಬನೋನಿನ ದೇವದಾರು ಮರಗಳನ್ನು ಉಪಯೋಗಿಸಿದ್ದರಿಂದ, ಅದಕ್ಕೆ “ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರ” ಎಂಬ ಹೆಸರೂ ಇದೆ. (1 ಅರಸುಗಳು 7:​2-5) ಗೋಡೆಯಲ್ಲಿ ಉಂಟಾದ ಬಿರುಕುಗಳನ್ನು ಪರೀಕ್ಷಿಸಲಾಗುತ್ತದೆ. ರಕ್ಷಣೆಯ ಒಂದು ಪ್ರಮುಖ ಅಂಶವಾದ ನೀರನ್ನು ಶೇಖರಿಸಿಡಲಾಗುತ್ತದೆ. ಬದುಕಬೇಕಾದರೆ, ಜನರಿಗೆ ನೀರಿನ ಅಗತ್ಯವಿದೆ. ನೀರಿಲ್ಲದೆ ಒಂದು ನಗರವು ಬದುಕಿ ಉಳಿಯಲಾರದು. ಆದರೆ ಈ ಜನರು ತಮ್ಮ ಬಿಡುಗಡೆಗಾಗಿ ಯೆಹೋವನನ್ನು ಎದುರುನೋಡುವುದಾಗಿ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಬದಲಿಗೆ, ಅವರು ತಮ್ಮ ಸ್ವಂತ ಸಂಪನ್ಮೂಲಗಳ ಮೇಲೆ ಆತುಕೊಳ್ಳುತ್ತಾರೆ. ಅಂತಹ ತಪ್ಪನ್ನು ನಾವೆಂದಿಗೂ ಮಾಡದಿರೋಣ!​—⁠ಕೀರ್ತನೆ 127:⁠1.

12 ನಗರದ ಗೋಡೆಯಲ್ಲಿ ಕಾಣಿಸಿಕೊಳ್ಳುವ ಬಿರುಕುಗಳನ್ನು ಹೇಗೆ ಸರಿಪಡಿಸಸಾಧ್ಯವಿದೆ? “ಯೆರೂಸಲೇಮಿನ ಮನೆಗಳನ್ನು ಲೆಕ್ಕಿಸಿ ಪೌಳಿಗೋಡೆಯನ್ನು ಭದ್ರಪಡಿಸುವದಕ್ಕೆ ಮನೆಗಳನ್ನು ಕೆಡವಿಬಿಟ್ಟಿರಿ.” (ಯೆಶಾಯ 22:10) ಮನೆಗಳ ಬೆಲೆ ಕಂಡುಹಿಡಿದು, ಅವುಗಳಲ್ಲಿ ಯಾವುದನ್ನು ಕೆಡವಿಹಾಕಬಹುದೆಂದು ನಿರ್ಧರಿಸಲಾಗುತ್ತದೆ. ಹೀಗೆ ಕೆಡವಲ್ಪಟ್ಟ ಮನೆಗಳಿಂದ ದೊರೆತ ಸಾಮಗ್ರಿಗಳನ್ನು ಉಪಯೋಗಿಸಿ, ಒಡಕುಗಳ ದುರಸ್ತಿ ಮಾಡಲಾಗುತ್ತದೆ. ಇದು, ವೈರಿಯು ಗೋಡೆಯ ಮೇಲೆ ಪೂರ್ಣ ನಿಯಂತ್ರಣವನ್ನು ಪಡೆಯುವುದನ್ನು ತಡೆಗಟ್ಟಲಿಕ್ಕಾಗಿ ಮಾಡಲ್ಪಡುವ ಒಂದು ಪ್ರಯತ್ನವಾಗಿದೆ.

ಅಪನಂಬಿಗಸ್ತ ಜನರು

13. ಸಾಕಷ್ಟು ನೀರನ್ನು ತುಂಬಿಸಿಡಲು ಜನರು ಪ್ರಯತ್ನಿಸುವುದು ಹೇಗೆ, ಆದರೆ ಅವರು ಯಾರನ್ನು ಮರೆತುಬಿಡುತ್ತಾರೆ?

13“ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದಿರಿ; ಆದರೆ ಇದನ್ನೆಲ್ಲಾ ನಡಿಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ.” (ಯೆಶಾಯ 22:11) ಇಲ್ಲಿ ಮತ್ತು 9ನೆಯ ವಚನದಲ್ಲಿ ವರ್ಣಿಸಲ್ಪಟ್ಟಂತೆ, ನೀರನ್ನು ತುಂಬಿಸಿಡಲು ಮಾಡಲ್ಪಟ್ಟ ಪ್ರಯತ್ನಗಳು, ಅಶ್ಶೂರ್ಯರು ನಗರವನ್ನು ಆಕ್ರಮಿಸುತ್ತಿದ್ದಾಗ ಅದನ್ನು ರಕ್ಷಿಸಲಿಕ್ಕಾಗಿ ರಾಜ ಹಿಜ್ಕೀಯನು ತೆಗೆದುಕೊಂಡ ಕ್ರಮವನ್ನು ನಮ್ಮ ಜ್ಞಾಪಕಕ್ಕೆ ತರುತ್ತವೆ. (2 ಪೂರ್ವಕಾಲವೃತ್ತಾಂತ 32:​2-5) ಯೆಶಾಯನ ಈ ಪ್ರವಾದನೆಯಲ್ಲಿ ತಿಳಿಸಲ್ಪಟ್ಟ ನಗರದ ಜನರು ಪೂರ್ತಿ ಅಪನಂಬಿಗಸ್ತರು. ನಗರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವಾಗ, ಅವರು ಹಿಜ್ಕೀಯನು ಸ್ಮರಿಸಿದಂತೆ ಸೃಷ್ಟಿಕರ್ತನನ್ನು ಸ್ಮರಿಸುವುದೇ ಇಲ್ಲ.

14. ಯೆಹೋವನ ಎಚ್ಚರಿಕೆಯ ಸಂದೇಶದ ಹೊರತೂ, ಜನರು ಯಾವ ಬುದ್ಧಿಹೀನ ಮನೋಭಾವವನ್ನು ವ್ಯಕ್ತಪಡಿಸುತ್ತಾರೆ?

14 ಯೆಶಾಯನು ಮುಂದುವರಿಸುವುದು: “ಕಣ್ಣೀರುಸುರಿಸಿ ಅಂಗಲಾಚಿ ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು; ಆದರೆ ಇಗೋ, ಉಲ್ಲಾಸ, ಹರ್ಷ, ದನಕೊಯ್ಯುವದು, ಕುರಿಕಡಿಯುವದು, ಮಾಂಸತಿನ್ನುವದು, ದ್ರಾಕ್ಷಾರಸ ಕುಡಿಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವದು [ಇವೇ ನಿಮ್ಮ ಕಾರ್ಯ].” (ಯೆಶಾಯ 22:12, 13) ಯೆಹೋವನ ವಿರುದ್ಧ ದಂಗೆಯೆದ್ದುದಕ್ಕಾಗಿ ಯೆರೂಸಲೇಮಿನ ನಿವಾಸಿಗಳು ಸಂತಾಪ ಸೂಚಿಸುವುದೇ ಇಲ್ಲ. ಅವರು ಪಶ್ಚಾತ್ತಾಪದ ಸಂಕೇತವಾಗಿ ಅಳುವುದಿಲ್ಲ, ಕೂದಲನ್ನು ಕತ್ತರಿಸುವುದಿಲ್ಲ, ಇಲ್ಲವೆ ಗೋಣಿತಟ್ಟನ್ನು ಧರಿಸಿಕೊಳ್ಳುವುದಿಲ್ಲ. ಅವರು ಒಂದು ವೇಳೆ ಹಾಗೆ ಮಾಡಿರುತ್ತಿದ್ದರೆ, ಬರಲಿರುವ ಕೇಡುಗಳಿಂದ ಯೆಹೋವನು ಅವರನ್ನು ಬಹುಶಃ ತಪ್ಪಿಸುತ್ತಿದ್ದನು. ಆದರೆ ಇವರು ಇಂದ್ರಿಯ ಸುಖಗಳಲ್ಲಿ ತಲ್ಲೀನರಾಗುತ್ತಾರೆ. ಇಂದು ದೇವರಲ್ಲಿ ನಂಬಿಕೆಯಿರದ ಹೆಚ್ಚಿನವರು ಹೀಗೆಯೇ ನಡೆದುಕೊಳ್ಳುತ್ತಾರೆ. ಅವರಿಗೆ ಸತ್ತವರ ಪುನರುತ್ಥಾನ ಇಲ್ಲವೆ ಭವಿಷ್ಯತ್ತಿನ ಪರದೈಸ್‌ ಭೂಮಿಯ ಮೇಲಿನ ಜೀವಿತದ ಕುರಿತು ನಿರೀಕ್ಷೆಯಿಲ್ಲದಿರುವುದರಿಂದ, ಅವರು ಭೋಗಾಸಕ್ತ ಜೀವನಶೈಲಿಗಳನ್ನು ಬೆನ್ನಟ್ಟುತ್ತಾ ಹೇಳುವುದು: “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.” (1 ಕೊರಿಂಥ 15:32) ಮುಂದಾಲೋಚನೆ ಇಲ್ಲದ ಮೂರ್ಖರು! ಅವರು ಯೆಹೋವನಲ್ಲಿ ಭರವಸೆಯಿಟ್ಟರೆ, ಶಾಶ್ವತವಾದ ನಿರೀಕ್ಷೆಯು ಅವರದ್ದಾಗಿರುತ್ತಿತ್ತು!​—⁠ಕೀರ್ತನೆ 4:​6-8; ಜ್ಞಾನೋಕ್ತಿ 1:⁠33.

15. (ಎ) ಯೆರೂಸಲೇಮಿನ ವಿರುದ್ಧ ಯೆಹೋವನು ಯಾವ ನ್ಯಾಯತೀರ್ಪನ್ನು ವಿಧಿಸುತ್ತಾನೆ, ಮತ್ತು ಆತನ ನ್ಯಾಯತೀರ್ಪನ್ನು ಯಾರು ಜಾರಿಗೊಳಿಸುತ್ತಾರೆ? (ಬಿ) ಯೆರೂಸಲೇಮ್‌ ಅನುಭವಿಸಿದಂತಹ ಗತಿಯನ್ನೇ ಕ್ರೈಸ್ತಪ್ರಪಂಚವೂ ಅನುಭವಿಸಲಿದೆ ಏಕೆ?

15 ಆಕ್ರಮಣಕ್ಕೊಳಗಾದ ಯೆರೂಸಲೇಮಿನ ನಿವಾಸಿಗಳು ರಕ್ಷಿಸಲ್ಪಡಲಾರರು. ಯೆಶಾಯನು ಹೇಳುವುದು: “ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನ್ನ ಕಿವಿಗೆ ಗೋಚರಪಡಿಸಿದ್ದೇನಂದರೆ​—⁠ನೀವು ಸಾಯುವ ತನಕ ಈ ಅಧರ್ಮಕ್ಕೆ ಪ್ರಾಯಶ್ಚಿತ್ತವು ಇಲ್ಲವೇ ಇಲ್ಲ ಎಂದು ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನಾದ ನಾನು ನುಡಿದಿದ್ದೇನೆ ಎಂಬದೇ.” (ಯೆಶಾಯ 22:14) ಜನರು ಕಠೋರವಾಗಿ ವರ್ತಿಸಿರುವ ಕಾರಣ, ಅವರಿಗೆ ಕ್ಷಮೆ ದೊರಕಲಾರದು. ಅವರು ಮರಣಕ್ಕೆ ತುತ್ತಾಗುವರೆಂಬ ವಿಷಯದಲ್ಲಿ ಸಂದೇಹವೇ ಇಲ್ಲ. ಇದು ಖಂಡಿತವಾಗಿಯೂ ಸಂಭವಿಸುವುದು. ಏಕೆಂದರೆ ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನು ಅದನ್ನು ನುಡಿದಿದ್ದಾನೆ. ಯೆಶಾಯನು ಪ್ರವಾದಿಸಿದಂತೆಯೇ, ಅಪನಂಬಿಗಸ್ತ ಯೆರೂಸಲೇಮಿನ ಮೇಲೆ ಎರಡು ಬಾರಿ ಕೇಡು ಸಂಭವಿಸಿತು. ಅದು ಬಾಬೆಲಿನ ಸೇನೆಗಳಿಂದ, ತದನಂತರ ರೋಮನರಿಂದ ನಾಶನಕ್ಕೊಳಗಾಯಿತು. ಅಂತೆಯೇ, ಕ್ರೈಸ್ತಪ್ರಪಂಚದ ಸದಸ್ಯರ ಮೇಲೆ ಕೇಡು ಸಂಭವಿಸುವುದು. ಏಕೆಂದರೆ ತಾವು ದೇವರನ್ನು ಆರಾಧಿಸುತ್ತೇವೆಂದು ಅವರು ಹೇಳಿಕೊಳ್ಳುತ್ತಾರಾದರೂ, ವಾಸ್ತವದಲ್ಲಿ ತಮ್ಮ ಕ್ರಿಯೆಗಳಿಂದ ಆತನನ್ನು ನಿರಾಕರಿಸುತ್ತಾರೆ. (ತೀತ 1:16) ದೇವರ ನೀತಿಯ ಮಾರ್ಗಗಳನ್ನು ಧಿಕ್ಕರಿಸುವ ಲೋಕದ ಇತರ ಧರ್ಮಗಳೊಂದಿಗೆ ಕ್ರೈಸ್ತಪ್ರಪಂಚದ ಪಾಪಗಳು, “ಆಕಾಶದ ಪರ್ಯಂತರಕ್ಕೂ ಬೆಳೆದವೆ.” ಧರ್ಮಭ್ರಷ್ಟ ಯೆರೂಸಲೇಮಿನ ಪಾಪಗಳಂತೆ, ಇವರ ಪಾಪಗಳು ಪ್ರಾಯಶ್ಚಿತ್ತಕ್ಕೆ ಯೋಗ್ಯವಾಗಿರದಷ್ಟು ದೊಡ್ಡದಾಗಿವೆ.​—⁠ಪ್ರಕಟನೆ 18:​5, 8, 21.

ಒಬ್ಬ ಸ್ವಾರ್ಥ ಮೇಲ್ವಿಚಾರಕ

16, 17. (ಎ) ಈಗ ಯಾರು ಯೆಹೋವನಿಂದ ಎಚ್ಚರಿಕೆಯ ಸಂದೇಶವನ್ನು ಪಡೆದುಕೊಳ್ಳುತ್ತಾರೆ, ಮತ್ತು ಏಕೆ? (ಬಿ) ತನ್ನ ಮಹತ್ವಾಕಾಂಕ್ಷೆಗಳ ಕಾರಣ, ಶೆಬ್ನನಿಗೆ ಏನು ಸಂಭವಿಸುವುದು?

16 ಅಪನಂಬಿಗಸ್ತ ಜನರ ಬಗ್ಗೆ ಹೇಳುತ್ತಿದ್ದ ಪ್ರವಾದಿ, ಈಗ ಒಬ್ಬ ಅಪನಂಬಿಗಸ್ತ ವ್ಯಕ್ತಿಯ ಬಗ್ಗೆ ತಿಳಿಸುತ್ತಾನೆ. ಯೆಶಾಯನು ಬರೆಯುವುದು: “ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ನುಡಿದಿದ್ದಾನೆ​—⁠ನಡೆ, ಅರಮನೆಯ ಮೇಲ್ವಿಚಾರಕನಾದ ಶೆಬ್ನನೆಂಬ ಈ ಅಧ್ಯಕ್ಷನ ಬಳಿಗೆ ಹೋಗಿ ಅವನಿಗೆ ಹೇಳತಕ್ಕದ್ದೇನಂದರೆ⁠—⁠ಇಲ್ಲಿ ನಿನಗೇನು? ಇಲ್ಲಿ ನಿನಗೆ ಯಾರಿದ್ದಾರೆ? ಇಲ್ಲಿ ನಿನಗಾಗಿ ಗೋರಿಯನ್ನು ತೋಡಿಸಿಕೊಂಡಿದ್ದೀಯಾ? ಎತ್ತರದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ ಬಂಡೆಯನ್ನು ಕಡೆಯಿಸಿ ನಿನಗೆ ನಿವಾಸವನ್ನು ಮಾಡಿಸುತ್ತಾ ಇದ್ದೀಯೋ?”​—ಯೆಶಾಯ 22:15, 16.

17 ಶೆಬ್ನ ಬಹುಶಃ ರಾಜ ಹಿಜ್ಕೀಯನ ‘ಅರಮನೆಯ ಮೇಲ್ವಿಚಾರಕ’ನಾಗಿದ್ದಾನೆ. ಅವನಿಗೊಂದು ಮುಖ್ಯವಾದ ಸ್ಥಾನವಿದೆ, ರಾಜನ ನಂತರ ಅವನೇ ಅಲ್ಲಿನ ದೊಡ್ಡ ವ್ಯಕ್ತಿ. ಆದುದರಿಂದ ಅವನಿಂದ ಬಹಳಷ್ಟನ್ನು ಅಪೇಕ್ಷಿಸಲಾಗುತ್ತದೆ. (1 ಕೊರಿಂಥ 4:⁠2) ಆದರೂ, ರಾಷ್ಟ್ರದ ಕಾರ್ಯಗಳಿಗೆ ಹೆಚ್ಚಿನ ಗಮನವನ್ನು ಕೊಡುತ್ತಿರಬೇಕಾದ ಸಮಯದಲ್ಲಿ, ಶೆಬ್ನ ತನ್ನ ಮಹಿಮೆಯನ್ನೇ ಅರಸುತ್ತಿದ್ದಾನೆ. ರಾಜನಿಗೆ ಸಮಾನವಾದ ಒಂದು ಆಡಂಬರದ ಗೋರಿಯನ್ನು ತನಗಾಗಿ ಬಂಡೆಯ ಮೇಲೆ ಕೊರೆಸುತ್ತಿದ್ದಾನೆ. ಇದನ್ನು ಗಮನಿಸಿದ ಯೆಹೋವನು, ಈ ಅಪನಂಬಿಗಸ್ತ ಮೇಲ್ವಿಚಾರಕನಿಗೆ ಎಚ್ಚರಿಕೆ ನೀಡುವಂತೆ ಯೆಶಾಯನನ್ನು ಪ್ರಚೋದಿಸುತ್ತಾನೆ: “ಇಗೋ, ಬಲಿತವನೇ, ಯೆಹೋವನು ನಿನ್ನನ್ನು ಎಸೆದೇ ಎಸೆಯುವನು, ಹಿಡಿದೇ ಹಿಡಿಯುವನು; ನಿನ್ನನ್ನು ಚಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು. [ಯೆಹೋವನಾದ] ನಾನು ನಿನ್ನ ಉದ್ಯೋಗದಿಂದ ನಿನ್ನನ್ನು ತಳ್ಳಿಬಿಡುವೆನು, ನಿನ್ನ ಪದವಿಯಿಂದ ನಿನ್ನನ್ನು ಎಳೆದು ಹಾಕುವೆನು.” (ಯೆಶಾಯ 22:17-19) ತನ್ನ ಸ್ವಾರ್ಥದಲ್ಲೇ ಮುಳುಗಿದಕ್ಕಾಗಿ ಶೆಬ್ನನಿಗೆ ಯೆರೂಸಲೇಮಿನಲ್ಲಿ ಸಾಧಾರಣವಾದ ಸಮಾಧಿಯೂ ದೊರಕಲಾರದು. ಅವನೊಂದು ಚೆಂಡಿನಂತೆ ಬಿಸಾಡಲ್ಪಟ್ಟು, ದೂರದ ದೇಶದಲ್ಲಿ ಸತ್ತುಹೋಗುವನು. ಇದು ದೇವಜನರ ಮಧ್ಯೆ, ಅಧಿಕಾರದ ಸ್ಥಾನದಲ್ಲಿರುವ ಎಲ್ಲರಿಗೂ ಒಂದು ಎಚ್ಚರಿಕೆಯ ಮಾತಾಗಿದೆ. ತಮಗಿರುವ ಅಧಿಕಾರದ ದುರುಪಯೋಗವು, ಅಧಿಕಾರದ ನಷ್ಟಕ್ಕೆ ಮತ್ತು ಬಹುಶಃ ಉಚ್ಚಾಟನೆಗೆ ನಡೆಸುವುದೆಂದು ಅವರೆಂದೂ ಮರೆಯಬಾರದು.

18. ಶೆಬ್ನನ ಸ್ಥಾನವನ್ನು ಯಾರು ವಹಿಸಿಕೊಳ್ಳುವರು, ಮತ್ತು ಅವನಿಗೆ ಶೆಬ್ನನ ಅಧಿಕೃತ ವಸ್ತ್ರಗಳು ಮತ್ತು ದಾವೀದನ ಮನೆಯ ಬೀಗದ ಕೈ ಸಿಗುವುದೆಂಬುದರ ಅರ್ಥವೇನು?

18 ಆದರೆ ಶೆಬ್ನ ತನ್ನ ಸ್ಥಾನದಿಂದ ಹೇಗೆ ತೆಗೆದುಹಾಕಲ್ಪಡುವನು? ಯೆಶಾಯನ ಮೂಲಕ ಯೆಹೋವನು ವಿವರಿಸುವುದು: “ಆ ದಿನದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇಮಿನ ನಿವಾಸಿಗಳಿಗೂ ಯೆಹೂದದ ಮನೆತನದವರಿಗೂ ತಂದೆಯಾಗುವನು. ಅವನು ದಾವೀದನ ಮನೆಯ ಬೀಗದ ಕೈಯನ್ನು ತನ್ನ ಹೆಗಲ ಮೇಲೆ ವಹಿಸಿಕೊಳ್ಳುವಂತೆ ಮಾಡುವೆನು; ಅವನು ತೆರೆದರೆ ಯಾರೂ ಮುಚ್ಚರು, ಮುಚ್ಚಿದರೆ ಯಾರೂ ತೆರೆಯರು.” (ಯೆಶಾಯ 22:20-22) ಶೆಬ್ನನ ಸ್ಥಾನವನ್ನು ವಹಿಸಿಕೊಳ್ಳಲಿರುವ ಎಲ್ಯಾಕೀಮನಿಗೆ ಮೇಲ್ವಿಚಾರಕನ ಅಧಿಕೃತ ವಸ್ತ್ರದೊಂದಿಗೆ ದಾವೀದನ ಮನೆಯ ಬೀಗದ ಕೈಯನ್ನು ಕೊಡಲಾಗುವುದು. “ಬೀಗದ ಕೈ” ಎಂಬ ಪದವನ್ನು ಬೈಬಲು ಉಪಯೋಗಿಸುವಾಗ, ಅದು ಅಧಿಕಾರ, ಸರಕಾರ, ಇಲ್ಲವೆ ಶಕ್ತಿಯನ್ನು ಸಂಕೇತಿಸುತ್ತದೆ. (ಹೋಲಿಸಿ ಮತ್ತಾಯ 16:19.) ಪುರಾತನ ಸಮಯಗಳಲ್ಲಿ, ಬೀಗದ ಕೈಗಳನ್ನು ಹೊಂದಿದ್ದ ರಾಜನ ಸಲಹೆಗಾರನು, ಅರಮನೆಯ ಕೋಣೆಗಳ ಮೇಲ್ವಿಚಾರಣೆಯನ್ನೂ ಮಾಡುತ್ತಿದ್ದನು. ರಾಜನ ಸೇವೆಗಾಗಿ ಯಾರನ್ನು ಆಯ್ಕೆಮಾಡಬೇಕೆಂಬುದನ್ನೂ ಅವನೇ ನಿರ್ಧರಿಸುತ್ತಿದ್ದನು. (ಹೋಲಿಸಿ ಪ್ರಕಟನೆ 3:​7, 8.) ಆದುದರಿಂದ, ಮೇಲ್ವಿಚಾರಕನ ಸ್ಥಾನವು ತುಂಬ ಮಹತ್ವದ್ದಾಗಿದ್ದು, ಆ ಸ್ಥಾನದಲ್ಲಿರುವವರಿಂದ ಬಹಳಷ್ಟನ್ನು ಅಪೇಕ್ಷಿಸಲಾಗುತ್ತದೆ. (ಲೂಕ 12:48) ಶೆಬ್ನ ಸಮರ್ಥನಾಗಿರಬಹುದು, ಆದರೆ ಅವನು ಅಪನಂಬಿಗಸ್ತನಾಗಿರುವ ಕಾರಣ, ಯೆಹೋವನು ಅವನನ್ನು ಅವನ ಸ್ಥಾನದಿಂದ ತೆಗೆದುಹಾಕುವನು.

ಎರಡು ಸಾಂಕೇತಿಕ ಮೊಳೆಗಳು

19, 20. (ಎ) ಎಲ್ಯಾಕೀಮನು ತನ್ನ ಜನರಿಗೆ ಆಶೀರ್ವಾದವಾಗಿರುವುದು ಹೇಗೆ? (ಬಿ) ಮಾರ್ಗದರ್ಶನಕ್ಕಾಗಿ ಶೆಬ್ನನನ್ನು ಎದುರುನೋಡುವವರಿಗೆ ಏನು ಸಂಭವಿಸುವುದು?

19 ಶೆಬ್ನನಿಂದ ಅಧಿಕಾರವನ್ನು ಕಿತ್ತು ಎಲ್ಯಾಕೀಮನಿಗೆ ಕೊಡುವ ಸಂಗತಿಯನ್ನು ಯೆಹೋವನು ಸಾಂಕೇತಿಕ ಭಾಷೆಯಲ್ಲಿ ವಿವರಿಸುತ್ತಾನೆ. ಆತನು ಹೇಳುವುದು: “ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು. ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣಪಾತ್ರೆಗಳನ್ನು ಅಂದರೆ ತಂದೆಯ ಸಂತಾನ ಸಂತತಿಯಾದ ಅವನ ವಂಶದ ಭಾರವನ್ನೆಲ್ಲಾ ಅವನಿಗೆ ತಗಲುಹಾಕುವರು. ಸೇನಾಧೀಶ್ವರನಾದ ಯೆಹೋವನು ಹೇಳುವದೇನಂದರೆ​—⁠ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು [ಶೆಬ್ನ] ಆ ದಿನದಲ್ಲಿ ಕುಸಿದು ಹೋಗುವದು. ಅದು ಬಡಿಯಲ್ಪಟ್ಟು ಬೀಳಲಾಗಿ ಅದಕ್ಕೆ ತಗಲುಹಾಕಿದ ಭಾರವೂ ನಾಶವಾಗುವದು. ಇದೇ ಯೆಹೋವನಾದ ನನ್ನ ನುಡಿ ಎಂಬದೇ.”​—ಯೆಶಾಯ 22:23-25.

20 ಈ ವಚನಗಳಲ್ಲಿ ತಿಳಿಸಲ್ಪಟ್ಟಿರುವ ಮೊದಲನೆಯ ಮೊಳೆಯು ಎಲ್ಯಾಕೀಮನು. ಇವನು ತನ್ನ ತಂದೆಯಾದ ಹಿಲ್ಕೀಯನ ವಂಶಕ್ಕೆ “ಗೌರವಪೀಠವಾಗಿರುವನು.” ಶೆಬ್ನನಂತೆ ಇವನು ತನ್ನ ತಂದೆಯ ವಂಶಕ್ಕೆ ಇಲ್ಲವೆ ಖ್ಯಾತಿಗೆ ಕುಂದುತರಲಾರನು. ಎಲ್ಯಾಕೀಮನು ರಾಜನ ಸೇವೆಯಲ್ಲಿರುವ ಇತರರಿಗೆ, ಅಂದರೆ ಸಕಲ ಸಾಧಾರಣಪಾತ್ರೆಗಳಿಗೆ ಶಾಶ್ವತವಾದ ಬೆಂಬಲವಾಗಿರುವನು. (2 ತಿಮೊಥೆಯ 2:​20, 21) ಎರಡನೆಯ ಮೊಳೆಯು ಶೆಬ್ನನನ್ನು ಸೂಚಿಸುತ್ತದೆ. ಅವನು ಭದ್ರವಾಗಿ ನೆಲೆವೂರಿರುವಂತೆ ತೋರಿದರೂ, ತನ್ನ ಸ್ಥಾನದಿಂದ ಕೀಳಲ್ಪಡುವನು. ಅವನ ಮಾರ್ಗದರ್ಶನಕ್ಕಾಗಿ ಎದುರುನೋಡುವವರು ಸಹ ಬಿದ್ದುಹೋಗುವರು.

21. ಆಧುನಿಕ ಸಮಯಗಳಲ್ಲಿ, ಶೆಬ್ನನಂತೆ ಇದ್ದವರು ಯಾರು, ಮತ್ತು ಅವರ ಸ್ಥಾನವನ್ನು ಯಾರು ವಹಿಸಿಕೊಂಡರು ಮತ್ತು ಏಕೆ?

21 ಇಂದು ದೇವರನ್ನು ಆರಾಧಿಸುತ್ತಿದ್ದೇವೆಂದು ಹೇಳುವವರ ಮಧ್ಯೆ ಅನೇಕರು ಸೇವಾ ಸುಯೋಗಗಳನ್ನು ಸ್ವೀಕರಿಸಿಕೊಳ್ಳುತ್ತಾರೆ. ಈ ಸುಯೋಗಗಳುಳ್ಳವರು, ಇತರರಿಗೆ ಸೇವೆಸಲ್ಲಿಸಲು ಮತ್ತು ಯೆಹೋವನಿಗೆ ಸ್ತುತಿತರಲು ಅವುಗಳನ್ನು ಉಪಯೋಗಿಸಬೇಕೆಂದು ಶೆಬ್ನನ ಅನುಭವವು ನಮಗೆ ತಿಳಿಯಪಡಿಸುತ್ತದೆ. ಸ್ವತಃ ಶ್ರೀಮಂತರಾಗಲು ಇಲ್ಲವೆ ವೈಯಕ್ತಿಕ ಪ್ರಾಧಾನ್ಯವನ್ನು ಗಳಿಸಲು ಅವರು ತಮ್ಮ ಸ್ಥಾನವನ್ನು ದುರುಪಯೋಗಿಸಿಕೊಳ್ಳಬಾರದು. ಉದಾಹರಣೆಗೆ, ತಾನು ಯೇಸು ಕ್ರಿಸ್ತನ ಭೂಪ್ರತಿನಿಧಿ, ನೇಮಿತ ಮೇಲ್ವಿಚಾರಕನೆಂದು ಕ್ರೈಸ್ತಪ್ರಪಂಚವು ಹಿಂದಿನಿಂದಲೂ ಹೇಳುತ್ತಾ ಬಂದಿದೆ. ಹೇಗೆ ಶೆಬ್ನ ತನ್ನ ಸ್ವಂತ ಮಹಿಮೆಯನ್ನು ಅರಸುತ್ತಾ ತನ್ನ ತಂದೆಗೆ ಅವಮಾನವನ್ನು ತಂದನೊ, ಹಾಗೆಯೇ ಕ್ರೈಸ್ತಪ್ರಪಂಚದ ನಾಯಕರು ಸ್ವತ್ತುಗಳನ್ನೂ ಅಧಿಕಾರವನ್ನೂ ತಮಗಾಗಿ ಶೇಖರಿಸುತ್ತಾ ಸೃಷ್ಟಿಕರ್ತನಿಗೆ ಅವಮಾನವನ್ನು ತಂದಿದ್ದಾರೆ. ಆದಕಾರಣ, “ನ್ಯಾಯವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭ”ವಾಗುವ ಸಮಯ 1918ರಲ್ಲಿ ಬಂದಾಗ, ಯೆಹೋವನು ಕ್ರೈಸ್ತಪ್ರಪಂಚವನ್ನು ತೆಗೆದುಹಾಕಿಬಿಟ್ಟನು. “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು” ಎಂಬ ಮತ್ತೊಬ್ಬ ಮೇಲ್ವಿಚಾರಕನು ಗುರುತಿಸಲ್ಪಟ್ಟು, ಯೇಸುವಿನ ಭೂಮನೆವಾರ್ತೆಯ ಮೇಲೆ ನೇಮಿಸಲ್ಪಟ್ಟನು. (1 ಪೇತ್ರ 4:17; ಲೂಕ 12:​42-44) ದಾವೀದನ ಅರಮನೆಯ “ಬೀಗದ ಕೈ”ಯನ್ನು ವಹಿಸಿಕೊಳ್ಳಲು ಅದು ಅರ್ಹ ಎಂಬುದನ್ನು ಈ ಸಂಘಟಿತ ವರ್ಗವು ತೋರಿಸಿದೆ. ನಂಬತಕ್ಕ “ಮೊಳೆ”ಯಂತೆ, ಅದು ಬೇರೆಲ್ಲ “ಪಾತ್ರೆ”ಗಳಿಗೆ ಬೆಂಬಲವನ್ನು ನೀಡಿದೆ. ಅಂದರೆ ಆತ್ಮಿಕ ಪೋಷಣೆಗಾಗಿ ಈ ವರ್ಗದ ಕಡೆಗೆ ಎದುರುನೋಡುವ ಬೇರೆ ಬೇರೆ ಜವಾಬ್ದಾರಿಗಳುಳ್ಳ ಅಭಿಷಿಕ್ತ ಕ್ರೈಸ್ತರಿಗೆ ಇದು ಸಮರ್ಥನೆಯನ್ನು ನೀಡುತ್ತದೆ. ಪುರಾತನ ಯೆರೂಸಲೇಮಿನ ‘ದ್ವಾರಗಳೊಳಗೆ ಜೀವಿಸುವ ಪರದೇಶಿ’ಯಂತಿರುವ “ಬೇರೆ ಕುರಿಗಳು” ಸಹ, ಆಧುನಿಕ ದಿನದ ಎಲ್ಯಾಕೀಮನಾಗಿರುವ ಈ ‘ಮೊಳೆಯ’ ಮೇಲೆ ಅವಲಂಬಿಸುತ್ತವೆ.​—⁠ಯೋಹಾನ 10:⁠16; ಧರ್ಮೋಪದೇಶಕಾಂಡ 5:14.

22. (ಎ) ಶೆಬ್ನನ ಮೇಲ್ವಿಚಾರಕನ ಸ್ಥಾನವನ್ನು ಬೇರೊಬ್ಬನಿಗೆ ಕೊಟ್ಟದ್ದು ಸಮಯೋಚಿತವಾಗಿತ್ತು ಏಕೆ? (ಬಿ) ಆಧುನಿಕ ಸಮಯಗಳಲ್ಲಿ, “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನ” ನೇಮಕವು ಏಕೆ ಸಮಯೋಚಿತವಾದದ್ದಾಗಿತ್ತು?

22 ಸನ್ಹೇರೀಬನು ಮತ್ತು ಅವನ ತಂಡವು ಯೆರೂಸಲೇಮಿನ ಮೇಲೆ ಬೆದರಿಕೆ ಒಡ್ಡಿದಾಗ, ಎಲ್ಯಾಕೀಮನು ಶೆಬ್ನನ ಸ್ಥಾನವಹಿಸಿಕೊಂಡಿದ್ದನು. ತದ್ರೀತಿಯಲ್ಲಿ, ಸೈತಾನನೂ ಅವನ ಪಡೆಗಳೂ ‘ದೇವರ ಇಸ್ರಾಯೇಲ್‌’ ಮತ್ತು ಅವರ ಸಂಗಡಿಗರಾಗಿರುವ ಬೇರೆ ಕುರಿಗಳ ಮೇಲೆ ಕೊನೆಯ ಆಕ್ರಮಣವನ್ನು ಮಾಡುವ ಈ ಅಂತ್ಯಕಾಲದಲ್ಲಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಸೇವೆಸಲ್ಲಿಸುವುದಕ್ಕಾಗಿ ನೇಮಿಸಲ್ಪಟ್ಟಿದೆ. (ಗಲಾತ್ಯ 6:16) ಹಿಜ್ಕೀಯನ ದಿನದಲ್ಲಿ ಆದಂತೆ, ಆ ದಾಳಿಯಲ್ಲಿ ನೀತಿಯನ್ನು ವಿರೋಧಿಸುವವರು ನಾಶವಾಗುವರು. ‘ಗಟ್ಟಿಯಾದ ಸ್ಥಳದಲ್ಲಿರುವ ಮೊಳೆಯನ್ನು’ ಅವಲಂಬಿಸುವವರು, ಅಂದರೆ ನಂಬಿಗಸ್ತ ಮೇಲ್ವಿಚಾರಕನ ಬೆಂಬಲ ಪಡೆದವರು ಬದುಕಿ ಉಳಿಯುವರು. ಇದು ಅಶ್ಶೂರರು ಯೆಹೂದದ ಮೇಲೆ ನಡೆಸಿದ ಆಕ್ರಮಣದಿಂದ ಬದುಕಿ ಉಳಿದ ಯೆರೂಸಲೇಮಿನ ನಂಬಿಗಸ್ತ ನಿವಾಸಿಗಳ ಸ್ಥಿತಿಗೆ ಸಮಾನವಾಗಿರುವುದು. ಹಾಗಾದರೆ, ಕ್ರೈಸ್ತಪ್ರಪಂಚದ ಅವಿಶ್ವಾಸಿ ‘ಮೊಳೆಗೆ’ ಅಂಟಿಕೊಳ್ಳುವುದು ಎಷ್ಟೊಂದು ಮೂರ್ಖತನವಾಗಿರುವುದು!

23. ಶೆಬ್ನನಿಗೆ ಕೊನೆಗೆ ಏನು ಸಂಭವಿಸುತ್ತದೆ, ಮತ್ತು ಇದರಿಂದ ನಾವು ಏನು ಕಲಿಯಸಾಧ್ಯವಿದೆ?

23 ಶೆಬ್ನನಿಗೆ ಏನು ಸಂಭವಿಸುತ್ತದೆ? ಅವನ ಕುರಿತು ಯೆಶಾಯ 22:18ರಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯು ಹೇಗೆ ನೆರವೇರಿತೆಂಬುದರ ಬಗ್ಗೆ ಯಾವ ವರದಿಯೂ ಇಲ್ಲ. ಅವನು ತನ್ನನ್ನು ಮೇಲೇರಿಸಿಕೊಂಡು ಅವಮಾನಕ್ಕೆ ಗುರಿಯಾದಾಗ, ಕ್ರೈಸ್ತಪ್ರಪಂಚವನ್ನು ಹೋಲುತ್ತಾನೆ. ಆದರೆ ತನಗೆ ಸಿಕ್ಕಿದ ಶಿಕ್ಷೆಯಿಂದ ಅವನು ಪಾಠ ಕಲಿತಿರಬಹುದು. ಈ ವಿಷಯದಲ್ಲಿ ಅವನು ಕ್ರೈಸ್ತಪ್ರಪಂಚಕ್ಕಿಂತ ತೀರ ಬೇರೆಯಾಗಿದ್ದಾನೆ. ಯೆರೂಸಲೇಮ್‌ ಶರಣಾಗುವಂತೆ ಅಶ್ಶೂರನಾದ ರಬ್ಷಾಕೆ ತಗಾದೆಮಾಡಿದಾಗ, ಹಿಜ್ಕೀಯನ ಹೊಸ ಮೇಲ್ವಿಚಾರಕನಾದ ಎಲ್ಯಾಕೀಮನ ನೇತೃತ್ವದಲ್ಲಿ ಒಂದು ಗುಂಪು ಅವನನ್ನು ಸಂಧಿಸಲು ಹೋಗುತ್ತದೆ. ಶೆಬ್ನ ಅವನ ಪಕ್ಕದಲ್ಲಿ ರಾಜನಿಗೆ ಕಾರ್ಯದರ್ಶಿಯಾಗಿದ್ದಾನೆ. ಇದರರ್ಥ, ರಾಜನ ಸೇವೆಯಲ್ಲಿ ಶೆಬ್ನ ಈಗಲೂ ಮುಂದುವರಿಯುತ್ತಿದ್ದಾನೆ. (ಯೆಶಾಯ 36:​2, 22) ದೇವರ ಸಂಸ್ಥೆಯಲ್ಲಿ ಸೇವಾಸ್ಥಾನಗಳನ್ನು ಕಳೆದುಕೊಳ್ಳುವವರಿಗೆ ಎಂತಹ ಉತ್ತಮ ಪಾಠವಿದು! ಕೋಪ ಇಲ್ಲವೆ ಅಸಮಾಧಾನಗೊಳ್ಳುವ ಬದಲು, ಯೆಹೋವನು ಅವರನ್ನು ಹೇಗೆ ಉಪಯೋಗಿಸಿಕೊಳ್ಳಲು ಬಯಸುತ್ತಾನೊ ಆ ಸ್ಥಾನದಲ್ಲಿ ಮುಂದುವರಿಯುವುದು ವಿವೇಕಯುತವಾದ ಮಾರ್ಗವಾಗಿದೆ. (ಇಬ್ರಿಯ 12:⁠6) ಹೀಗೆ ಮಾಡುವ ಮೂಲಕ ಅವರು ಕ್ರೈಸ್ತಪ್ರಪಂಚದ ಮೇಲೆ ಎರಗಲಿರುವ ಕೇಡಿನಿಂದ ತಪ್ಪಿಸಿಕೊಳ್ಳುವರು. ಬದಲಿಗೆ ಅವರು ನಿತ್ಯತೆಯ ವರೆಗೂ ದೇವರ ಅನುಗ್ರಹವನ್ನು ಮತ್ತು ಆಶೀರ್ವಾದವನ್ನು ಅನುಭವಿಸುವರು.

[ಪಾದಟಿಪ್ಪಣಿಗಳು]

^ ಪ್ಯಾರ. 6 ಸಾ.ಶ. 66ರಲ್ಲಿ ರೋಮನ್‌ ಸೇನೆಗಳು ಯೆರೂಸಲೇಮಿನಿಂದ ಹಿಮ್ಮೆಟ್ಟಿ, ಮುತ್ತಿಗೆಯನ್ನು ತೆಗೆದುಬಿಟ್ಟಾಗ, ಅನೇಕ ಯೆಹೂದ್ಯರು ಅತ್ಯಾನಂದಪಟ್ಟರು.

^ ಪ್ಯಾರ. 6 ಪ್ರಥಮ ಶತಮಾನದ ಇತಿಹಾಸಕಾರ ಜೋಸೀಫಸನಿಗನುಸಾರ, ಸಾ.ಶ. 70ರಲ್ಲಿ ಯೆರೂಸಲೇಮಿನಲ್ಲಿ ಉಂಟಾದ ಕ್ಷಾಮವು ಎಷ್ಟು ಘೋರವಾಗಿತ್ತೆಂದರೆ, ಜನರು ತೊಗಲು, ಹಸಿರು ಹುಲ್ಲು ಮತ್ತು ಒಣಹುಲ್ಲನ್ನು ತಿಂದರು. ಒಂದು ಸಂದರ್ಭದಲ್ಲಿ, ತಾಯಿಯೊಬ್ಬಳು ತನ್ನ ಸ್ವಂತ ಮಗನನ್ನು ಸುಟ್ಟು ತಿಂದಳೆಂದು ವರದಿಸಲಾಗಿದೆ.

^ ಪ್ಯಾರ. 10 “ಯೆಹೂದದ ತೆರೆಯು” ನಗರವನ್ನು ರಕ್ಷಿಸುವ ಕೋಟೆಯಂತಹ ಬೇರೆ ವಿಷಯವನ್ನೂ ಸೂಚಿಸಬಹುದು. ಈ ಕೋಟೆಯಲ್ಲೇ ಆಯುಧಗಳು ಇರುತ್ತವೆ ಮತ್ತು ಸೈನಿಕರು ತಂಗಿರುತ್ತಾರೆ.

[ಅಧ್ಯಯನ ಪ್ರಶ್ನೆಗಳು]

[ಪುಟ 231ರಲ್ಲಿರುವ ಚಿತ್ರ]

ಚಿದ್ಕೀಯನು ಓಡಿಹೋಗಲು ಪ್ರಯತ್ನಿಸಿದಾಗ, ಅವನನ್ನು ಸೆರೆಹಿಡಿದು ಕುರುಡಾಗಿಸಲಾಗುತ್ತದೆ

[ಪುಟ 232, 233ರಲ್ಲಿರುವ ಚಿತ್ರ]

ಯೆರೂಸಲೇಮಿನಲ್ಲಿ ಸಿಕ್ಕಿಕೊಂಡ ಯೆಹೂದ್ಯರ ಪ್ರತೀಕ್ಷೆಗಳು ಆಶಾದಾಯಕವಾಗಿಲ್ಲ

[ಪುಟ 239ರಲ್ಲಿರುವ ಚಿತ್ರ]

ಹಿಜ್ಕೀಯನು ಎಲ್ಯಾಕೀಮನನ್ನು ‘ಗಟ್ಟಿಯಾದ ಸ್ಥಳದಲ್ಲಿರುವ ಮೊಳೆಯಾಗಿ’ ಮಾಡುತ್ತಾನೆ

[ಪುಟ 241ರಲ್ಲಿರುವ ಚಿತ್ರ]

ಶೆಬ್ನನಂತೆ, ಕ್ರೈಸ್ತಪ್ರಪಂಚದ ನಾಯಕರಲ್ಲಿ ಅನೇಕರು, ಐಶ್ವರ್ಯವನ್ನು ಶೇಖರಿಸಿಡುವ ಮೂಲಕ ಸೃಷ್ಟಿಕರ್ತನಿಗೆ ಅವಮಾನವನ್ನು ತಂದಿದ್ದಾರೆ

[ಪುಟ 242ರಲ್ಲಿರುವ ಚಿತ್ರಗಳು]

ಆಧುನಿಕ ಸಮಯಗಳಲ್ಲಿ, ಯೇಸುವಿನ ಮನೆಯವರ ಮೇಲೆ ಒಂದು ನಂಬಿಗಸ್ತ ಮನೆವಾರ್ತೆಯವನ ವರ್ಗವನ್ನು ನೇಮಿಸಲಾಗಿದೆ