ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಲೋಕವು ಸಹಾಯಮಾಡಲಾರದು

ಈ ಲೋಕವು ಸಹಾಯಮಾಡಲಾರದು

ಅಧ್ಯಾಯ ಇಪ್ಪತ್ತನಾಲ್ಕು

ಈ ಲೋಕವು ಸಹಾಯಮಾಡಲಾರದು

ಯೆಶಾಯ 31:​1-9

1, 2. (ಎ) ಯೆರೂಸಲೇಮಿನ ನಿವಾಸಿಗಳು ದಿಗಿಲುಗೊಂಡಿರುವುದೇಕೆ? (ಬಿ) ಯೆರೂಸಲೇಮಿನ ದುಃಸ್ಥಿತಿಯ ನೋಟದಲ್ಲಿ, ಯಾವ ಪ್ರಶ್ನೆಗಳು ಸೂಕ್ತವಾಗಿವೆ?

ಯೆರೂಸಲೇಮಿನ ನಿವಾಸಿಗಳು ಭಯಭೀತರಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಆ ಸಮಯದ ಅತ್ಯಂತ ಬಲಶಾಲಿ ಸಾಮ್ರಾಜ್ಯವಾದ ಅಶ್ಶೂರವು, ಆಗಲೇ ‘ಯೆಹೂದಪ್ರಾಂತದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡಿತ್ತು.’ ಈಗ ಅಶ್ಶೂರದ ಮಿಲಿಟರಿ ಪಡೆಯು ಯೆಹೂದದ ರಾಜಧಾನಿಗೆ ಬೆದರಿಕೆ ಒಡ್ಡುತ್ತಿದೆ. (2 ಅರಸುಗಳು 18:​13, 17) ಇಂತಹ ಸಂದರ್ಭದಲ್ಲಿ ರಾಜ ಹಿಜ್ಕೀಯನು ಮತ್ತು ಯೆರೂಸಲೇಮಿನ ನಿವಾಸಿಗಳು ಏನು ಮಾಡುವರು?

2 ತನ್ನ ದೇಶದ ಇತರ ಪಟ್ಟಣಗಳು ಈಗಾಗಲೇ ವೈರಿಯ ವಶವಾಗಿರುವುದರಿಂದ, ಅಶ್ಶೂರದ ಶಕ್ತಿಶಾಲಿ ಮಿಲಿಟರಿ ಪಡೆಯನ್ನು ಸದೆಬಡಿಯುವಷ್ಟು ಬಲ ಯೆರೂಸಲೇಮಿಗಿಲ್ಲ ಎಂಬುದು ಹಿಜ್ಕೀಯನಿಗೆ ಗೊತ್ತಿರುವ ವಿಷಯವಾಗಿದೆ. ಅಲ್ಲದೆ, ಈ ಅಶ್ಶೂರರು, ಕ್ರೂರತನಕ್ಕೆ ಮತ್ತು ಹಿಂಸಾಚಾರಕ್ಕೆ ತೀರ ಪ್ರಸಿದ್ಧರು. ಆ ಜನಾಂಗದ ಬಲಿಷ್ಠ ಸೇನೆಯನ್ನು ದೂರದಿಂದಲೇ ದೃಷ್ಟಿಸಿ, ಕೆಲವು ವೈರಿ ಪಡೆಗಳು ಹಿಮ್ಮೆಟ್ಟಿರುವುದೂ ಉಂಟು! ಇಂತಹ ಭಯಂಕರ ಪರಿಸ್ಥಿತಿಗೆ ಒಳಗಾಗಿರುವ ಯೆರೂಸಲೇಮಿನ ನಿವಾಸಿಗಳು, ಸಹಾಯಕ್ಕಾಗಿ ಯಾರ ಬಳಿಗೆ ಹೋಗಬಲ್ಲರು? ಅಶ್ಶೂರ ಸೇನೆಯಿಂದ ಅವರು ಹೇಗಾದರೂ ತಪ್ಪಿಸಿಕೊಳ್ಳಬಲ್ಲರೊ? ಮತ್ತು ದೇವಜನರು ಇಂತಹ ಸನ್ನಿವೇಶದೊಳಗೆ ಹೇಗೆ ಸಿಕ್ಕಿಕೊಂಡರು? ಈ ಪ್ರಶ್ನೆಗಳಿಗೆ ಉತ್ತರ ನೀಡಲು, ಯೆಹೋವನು ಈ ಮೊದಲು ತನ್ನ ಒಡಂಬಡಿಕೆಯ ಜನಾಂಗದೊಂದಿಗೆ ಹೇಗೆ ವ್ಯವಹರಿಸಿದನು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಇಸ್ರಾಯೇಲಿನಲ್ಲಿ ಧರ್ಮಭ್ರಷ್ಟತೆ

3, 4. (ಎ) ಇಸ್ರಾಯೇಲ್‌ ಜನಾಂಗವು ಎರಡು ರಾಜ್ಯಗಳಾಗಿ ಯಾವಾಗ ಮತ್ತು ಹೇಗೆ ಬೇರ್ಪಟ್ಟಿತು? (ಬಿ) ಉತ್ತರದಿಕ್ಕಿನ ಹತ್ತು ಗೋತ್ರಗಳ ರಾಜ್ಯವನ್ನು ಯಾವ ತಪ್ಪು ದಾರಿಯಲ್ಲಿ ಯಾರೊಬ್ಬಾಮನು ನಡೆಸಿದನು?

3 ಇಸ್ರಾಯೇಲು ಐಗುಪ್ತವನ್ನು ಬಿಟ್ಟು ಬಂದ ಸಮಯದಿಂದ ದಾವೀದನ ಮಗನಾದ ಸೊಲೊಮೋನನ ಸಮಯದ ವರೆಗೆ, ಅಂದರೆ 500ಕ್ಕಿಂತಲೂ ಹೆಚ್ಚು ವರ್ಷಗಳ ಸಮಯಾವಧಿಯ ವರೆಗೆ, ಇಸ್ರಾಯೇಲಿನ 12 ಗೋತ್ರಗಳು ಒಂದಾಗಿ ಐಕ್ಯವಾಗಿದ್ದವು. ಸೊಲೊಮೋನನ ಮರಣದ ನಂತರ, ಯಾರೊಬ್ಬಾಮನ ನೇತೃತ್ವದಲ್ಲಿ ಉತ್ತರದ ಹತ್ತು ಗೋತ್ರಗಳು ದಾವೀದನ ಮನೆತನದ ವಿರುದ್ಧ ದಂಗೆಯೆದ್ದವು, ಆಗ ಜನಾಂಗವು ಎರಡು ರಾಜ್ಯಗಳಾಗಿ ಬೇರ್ಪಟ್ಟಿತು. ಇದು ಸಾ.ಶ.ಪೂ. 997ರಲ್ಲಿ ಸಂಭವಿಸಿತು.

4 ಯಾರೊಬ್ಬಾಮನು ಈ ಉತ್ತರ ರಾಜ್ಯದ ಪ್ರಥಮ ಅರಸನಾಗಿದ್ದನು. ಅವನು ಆರೋನನ ಯಾಜಕತ್ವವನ್ನು ಮತ್ತು ಯೆಹೋವನ ನ್ಯಾಯಬದ್ಧ ಆರಾಧನಾ ರೀತಿಯನ್ನು ತಳ್ಳಿಹಾಕಿ ಅದರ ಬದಲು ಲೇವಿಯರಲ್ಲದ ಕನಿಷ್ಠಜನರನ್ನು ಯಾಜಕರನ್ನಾಗಿ ನೇಮಿಸಿ, ಬಸವನ ಆರಾಧನೆಯನ್ನು ಆರಂಭಿಸುವ ಮೂಲಕ, ತನ್ನ ಪ್ರಜೆಗಳನ್ನು ಧರ್ಮಭ್ರಷ್ಟತೆಯ ಮಾರ್ಗದಲ್ಲಿ ನಡೆಸಿದನು. (1 ಅರಸುಗಳು 12:​25-33) ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯಕಾರ್ಯವಾಗಿತ್ತು. (ಯೆರೆಮೀಯ 32:​30, 35) ಈ ಕಾರಣಕ್ಕಾಗಿ ಮತ್ತು ಇನ್ನೂ ಹಲವು ಕಾರಣಗಳಿಗಾಗಿ, ಅಶ್ಶೂರವು ಇಸ್ರಾಯೇಲನ್ನು ಅಧೀನಪಡಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. (2 ಅರಸುಗಳು 15:29) ಈ ಅಶ್ಶೂರದ ನೊಗವನ್ನು ಮುರಿದುಹಾಕಲು, ರಾಜ ಹೋಶೇಯನು ಐಗುಪ್ತದೊಂದಿಗೆ ಸಂಚುಹೂಡಿದನು, ಆದರೆ ಆ ಸಂಚು ವಿಫಲವಾಯಿತು.​—⁠2 ಅರಸುಗಳು 17:⁠4.

ನಕಲಿ ಆಶ್ರಯಸ್ಥಾನವನ್ನು ಇಸ್ರಾಯೇಲ್‌ ಅರಸುತ್ತದೆ

5. ಸಹಾಯಕ್ಕಾಗಿ ಇಸ್ರಾಯೇಲು ಯಾರ ಕಡೆಗೆ ತಿರುಗುತ್ತದೆ?

5 ಇಸ್ರಾಯೇಲ್ಯರಿಗೆ ಬುದ್ಧಿ ಕಲಿಸಲು ಯೆಹೋವನು ಬಯಸುತ್ತಾನೆ. * ಈ ಮುಂದಿನ ಎಚ್ಚರಿಕೆಯೊಂದಿಗೆ ಆತನು ಪ್ರವಾದಿ ಯೆಶಾಯನನ್ನು ಕಳುಹಿಸುತ್ತಾನೆ: “ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ! ರಥಗಳು ಬಹಳವೆಂದು ಅವುಗಳಲ್ಲಿ ನಂಬಿಕೆಯಿಟ್ಟು ಸವಾರರು ಬಹು ಬಲಿಷ್ಠರೆಂದು ಅವರ ಮೇಲೆ ಭರವಸಪಡುತ್ತಾರೆ; ಆದರೆ ಇಸ್ರಾಯೇಲ್ಯರ ಸದಮಲಸ್ವಾಮಿಯ ಕಡೆಗೆ ದೃಷ್ಟಿಯಿಡುವದಿಲ್ಲ, ಯೆಹೋವನನ್ನು ಆಶ್ರಯಿಸುವದಿಲ್ಲ.” (ಯೆಶಾಯ 31:1) ಎಷ್ಟು ದುರಂತಕರ! ಸಜೀವ ದೇವರಾದ ಯೆಹೋವನಲ್ಲಿ ಭರವಸೆಯಿಡುವುದಕ್ಕಿಂತಲೂ ಹೆಚ್ಚಾಗಿ, ಇಸ್ರಾಯೇಲು ಕುದುರೆಗಳಲ್ಲೂ ರಥಗಳಲ್ಲೂ ಭರವಸೆಯಿಟ್ಟಿದೆ. ಮಾನುಷ ದೃಷ್ಟಿಯಿಂದ ಅವಲೋಕಿಸುವ ಇಸ್ರಾಯೇಲ್ಯರಿಗೆ, ಐಗುಪ್ತದ ಕುದುರೆಗಳು ಬಹಳವಾಗಿಯೂ ಬಲಿಷ್ಠವಾಗಿಯೂ ತೋರುತ್ತವೆ. ಅಶ್ಶೂರ ಸೇನೆಯ ವಿರುದ್ಧ ಐಗುಪ್ತದ ಸಹಾಯವು ಮಹತ್ತರವೇ ಸರಿ! ಆದರೆ ಐಗುಪ್ತದೊಂದಿಗೆ ತಮಗಿರುವ ಸಂಬಂಧವು ತೀರ ವ್ಯರ್ಥವೆಂದು ಇಸ್ರಾಯೇಲ್ಯರಿಗೆ ಬೇಗನೆ ತಿಳಿದುಬರುವುದು.

6. ಇಸ್ರಾಯೇಲು ಐಗುಪ್ತದಿಂದ ಸಹಾಯ ಕೋರಿದ್ದು, ಯೆಹೋವನಲ್ಲಿ ತನಗೆ ನಂಬಿಕೆಯೇ ಇಲ್ಲವೆಂಬುದನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದು ಹೇಗೆ?

6 ನಿಯಮದ ಒಡಂಬಡಿಕೆಯ ಮುಖಾಂತರ, ಇಸ್ರಾಯೇಲ್‌ ಮತ್ತು ಯೆಹೂದದ ನಿವಾಸಿಗಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡ ಜನರಾಗಿದ್ದಾರೆ. (ವಿಮೋಚನಕಾಂಡ 24:​3-8; 1 ಪೂರ್ವಕಾಲವೃತ್ತಾಂತ 16:​15-17) ಸಹಾಯಕ್ಕಾಗಿ ಐಗುಪ್ತಕ್ಕೆ ನೋಡುವ ಇಸ್ರಾಯೇಲ್ಯರು, ಯೆಹೋವನಲ್ಲಿ ತಮಗಿರುವ ಅಪನಂಬಿಗಸ್ತಿಕೆಯನ್ನು ತೋರಿಸುತ್ತಾರೆ ಮಾತ್ರವಲ್ಲ, ತಮ್ಮೊಳಗಿರುವ ಆ ಪವಿತ್ರ ಒಡಂಬಡಿಕೆಯ ನಿಯಮಗಳನ್ನು ಕಡೆಗಣಿಸುತ್ತಾರೆ. ಏಕೆ? ಏಕೆಂದರೆ, ಅವರು ಯೆಹೋವನಿಗೆ ಅನನ್ಯ ಭಕ್ತಿಯನ್ನು ನೀಡಿದರೆ ಮಾತ್ರ ಆತನು ಅವರನ್ನು ರಕ್ಷಿಸುವನೆಂಬ ವಾಗ್ದಾನವು ಒಡಂಬಡಿಕೆಯ ಷರತ್ತುಗಳಲ್ಲಿ ಒಂದಾಗಿದೆ. (ಯಾಜಕಕಾಂಡ 26:​3-8) ಆ ವಾಗ್ದಾನಕ್ಕನುಸಾರ, ಯೆಹೋವನು ಅನೇಕ ಬಾರಿ “ಇಕ್ಕಟ್ಟಿನಲ್ಲಿ . . . ಅವರಿಗೆ ದುರ್ಗಸ್ಥಾನ”ವಾಗಿ ಕಾರ್ಯಮಾಡಿದ್ದಾನೆ. (ಕೀರ್ತನೆ 37:39; 2 ಪೂರ್ವಕಾಲವೃತ್ತಾಂತ 14:​2, 9-12; 17:​3-5, 10) ಅಲ್ಲದೆ, ಇಸ್ರಾಯೇಲಿನ ಭಾವೀ ರಾಜರು ಕುದುರೆಯ ದಂಡುಗಳನ್ನು ಕೂಡಿಸಿಕೊಳ್ಳಬಾರದೆಂದು, ಆ ನಿಯಮದ ಒಡಂಬಡಿಕೆಯ ಮಧ್ಯಸ್ಥನಾದ ಮೋಶೆಯ ಮೂಲಕ ಯೆಹೋವನು ತಿಳಿಸಿದ್ದಾನೆ. (ಧರ್ಮೋಪದೇಶಕಾಂಡ 17:16) ಈ ಕಟ್ಟಳೆಗೆ ವಿಧೇಯರಾಗುವ ಮೂಲಕ, ತಾವು ರಕ್ಷಣೆಗಾಗಿ ‘ಇಸ್ರಾಯೇಲಿನ ಸದಮಲಸ್ವಾಮಿಯನ್ನೇ’ ಎದುರುನೋಡುತ್ತೇವೆಂದು ಈ ರಾಜರು ತೋರಿಸಲಿದ್ದರು. ಆದರೆ, ಇಸ್ರಾಯೇಲಿನ ರಾಜರಿಗೆ ಇಂತಹ ನಂಬಿಕೆ ಇಲ್ಲದಿದ್ದದ್ದು ವಿಷಾದನೀಯ.

7. ಇಸ್ರಾಯೇಲಿನ ಅಪನಂಬಿಗಸ್ತಿಕೆಯಿಂದ ಕ್ರೈಸ್ತರು ಇಂದು ಏನು ಕಲಿಯಬಲ್ಲರು?

7 ಈ ವೃತ್ತಾಂತವು ಇಂದಿನ ಕ್ರೈಸ್ತರಿಗೆ ಒಂದು ಪಾಠವನ್ನು ಕಲಿಸುತ್ತದೆ. ಇಸ್ರಾಯೇಲು ಐಗುಪ್ತದ ಬೆಂಬಲವನ್ನು ಅರಸಿತೆ ವಿನಹ, ಅದಕ್ಕಿಂತಲೂ ಹೆಚ್ಚು ಬಲಶಾಲಿಯಾದ ಯೆಹೋವನ ಬೆಂಬಲವನ್ನು ಕೋರಲಿಲ್ಲ. ತದ್ರೀತಿಯಲ್ಲಿ ಇಂದು, ಕ್ರೈಸ್ತರು ತಮ್ಮ ಭರವಸೆಯನ್ನು ಯೆಹೋವನ ಮೇಲಿಡುವ ಬದಲು ಬ್ಯಾಂಕ್‌ ಖಾತೆಗಳು, ಸಾಮಾಜಿಕ ಸ್ಥಾನಮಾನ ಮತ್ತು ಲೋಕದೊಂದಿಗಿನ ಸಂಬಂಧಗಳ ಮೇಲೆ ಇಡುವಂತೆ ಪ್ರಲೋಭಿಸಲ್ಪಡಬಹುದು. ಕ್ರೈಸ್ತ ಕುಟುಂಬಗಳ ತಲೆಗಳು, ತಮ್ಮ ಕುಟುಂಬಗಳ ಭೌತಿಕ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ನಿಜ. (1 ತಿಮೊಥೆಯ 5:⁠8) ಆದರೆ ಭೌತಿಕ ವಸ್ತುಗಳನ್ನೇ ಅವರು ನಂಬಿಕೊಂಡು ಇರುವುದಿಲ್ಲ. ಮತ್ತು ಅವರು “ಎಲ್ಲಾ ಲೋಭ”ದಿಂದಲೂ ದೂರವಿರುತ್ತಾರೆ. (ಲೂಕ 12:⁠13-21) “ಆಪತ್ಕಾಲದಲ್ಲಿ ದುರ್ಗ”ವಾಗಿರುವ ಏಕೈಕ ವ್ಯಕ್ತಿ ಯೆಹೋವ ದೇವರು ಮಾತ್ರ.​—⁠ಕೀರ್ತನೆ 9:9; 54:⁠7.

8, 9. (ಎ) ಇಸ್ರಾಯೇಲಿನ ತಂತ್ರೋಪಾಯಗಳಲ್ಲಿ ಯಾವ ಕುಂದುಕೊರತೆಗಳೂ ಕಾಣಸಿಗದಿದ್ದರೂ, ಅಂತಿಮ ಪರಿಣಾಮವು ಏನಾಗಿರುವುದು ಮತ್ತು ಏಕೆ? (ಬಿ) ಮಾನವನ ವಾಗ್ದಾನಗಳು ಮತ್ತು ಯೆಹೋವನ ವಾಗ್ದಾನಗಳಲ್ಲಿರುವ ವ್ಯತ್ಯಾಸವೇನು?

8 ಐಗುಪ್ತದೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದ ಇಸ್ರಾಯೇಲ್ಯ ಮುಖಂಡರನ್ನು ಯೆಶಾಯನು ಗೇಲಿಮಾಡುತ್ತಾನೆ. ಅವನು ಹೇಳುವುದು: “ಇಗೋ, ಆತನೂ ವಿವೇಕಿ, ತನ್ನ ಮಾತುಗಳನ್ನು ಹಿಂದಕ್ಕೆ ತೆಗೆಯದೆ ಕೇಡನ್ನು ಬರಮಾಡುವನು; ಕೆಡುಕರ ಮನೆತನಕ್ಕೂ ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.” (ಯೆಶಾಯ 31:2) ಇಸ್ರಾಯೇಲಿನ ಮುಖಂಡರಿಗೆ ತಾವು ವಿವೇಕಿಗಳೆಂಬ ಅಹಂಭಾವವಿದೆ. ಆದರೆ ವಿವೇಕದ ಸಾಕಾರ ಮೂರ್ತಿಯಾಗಿರುವವನು ಈ ವಿಶ್ವದ ಸೃಷ್ಟಿಕರ್ತನಲ್ಲವೊ? ಮನುಷ್ಯನ ದೃಷ್ಟಿಕೋನದಿಂದ, ಇಸ್ರಾಯೇಲು ಐಗುಪ್ತದೊಂದಿಗೆ ನಡೆಸಿದ ಸಹಾಯಸಂಧಾನದಲ್ಲಿ ಯಾವ ಕುಂದುಕೊರತೆಗಳೂ ಎದ್ದುಕಾಣಲಿಲ್ಲ. ಆದರೂ ಇಂತಹ ರಾಜಕೀಯ ಸಂಬಂಧವು, ಯೆಹೋವನ ದೃಷ್ಟಿಯಲ್ಲಿ ಆತ್ಮಿಕ ವ್ಯಭಿಚಾರವಾಗಿತ್ತು. (ಯೆಹೆಜ್ಕೇಲ 23:​1-10) ಈ ಕಾರಣ, ಯೆಹೋವನು “ಕೇಡನ್ನು ಬರಮಾಡುವನು” ಎಂದು ಯೆಶಾಯನು ಹೇಳುತ್ತಾನೆ.

9 ಮಾನವನ ವಾಗ್ದಾನಗಳು ನೀರಿನ ಗುಳ್ಳೆಗಳಂತಿದ್ದರೆ, ಅವನು ನೀಡುವ ರಕ್ಷಣೆಯು ತೀರ ಅನಿಶ್ಚಿತವಾಗಿದೆ. ಯೆಹೋವನಾದರೊ, “ತನ್ನ ಮಾತುಗಳನ್ನು ಹಿಂದಕ್ಕೆ ತೆಗೆಯದೆ” ಇರುವವನಾಗಿದ್ದಾನೆ. ತಾನು ವಾಗ್ದಾನಿಸುವುದನ್ನು ಖಂಡಿತವಾಗಿಯೂ ಆತನು ನೆರವೇರಿಸುವನು. ಆತನಾಡಿದ ಮಾತುಗಳು ತಕ್ಕ ಫಲವನ್ನೀಡದೆ ಆತನಲ್ಲಿಗೆ ಹಿಂದಿರುಗುವುದಿಲ್ಲ.​—⁠ಯೆಶಾಯ 55:​10, 11; 14:⁠24.

10. ಐಗುಪ್ತಕ್ಕೆ ಮತ್ತು ಇಸ್ರಾಯೇಲಿಗೆ ಏನು ಸಂಭವಿಸುವುದು?

10 ಐಗುಪ್ತವು ನೀಡಲಿರುವ ರಕ್ಷಣೆಯ ಮೇಲೆ ಇಸ್ರಾಯೇಲ್ಯರು ಆತುಕೊಳ್ಳಬಲ್ಲರೊ? ಇಲ್ಲ. ಯೆಶಾಯನು ಇಸ್ರಾಯೇಲಿಗೆ ಹೇಳುವುದು: “ಐಗುಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಮಾಂಸಮಯವೇ, ಆತ್ಮವಲ್ಲ; ಯೆಹೋವನು ಕೈ ಚಾಚುವಾಗ ಸಹಾಯಮಾಡಿದವನು ಮುಗ್ಗರಿಸುವನು, ಸಹಾಯಪಡೆದವನು ಬಿದ್ದುಹೋಗುವನು, ಅಂತು ಎಲ್ಲರೂ ಒಟ್ಟಿಗೆ ಲಯವಾಗುವರು.” (ಯೆಶಾಯ 31:3) ಸಹಾಯ ಮಾಡಿದವನು (ಐಗುಪ್ತ) ಮತ್ತು ಸಹಾಯ ಪಡೆದವನು (ಇಸ್ರಾಯೇಲ್‌) ಮುಗ್ಗರಿಸಿ ಬೀಳುವರು, ಮತ್ತು ಅಶ್ಶೂರರ ಮೂಲಕ ಯೆಹೋವನು ತನ್ನ ಕೈಚಾಚಿ ನ್ಯಾಯವಿಧಿಸುವಾಗ ಇವರಿಬ್ಬರೂ ಲೋಕರಂಗದಿಂದ ಕಣ್ಮರೆಯಾಗುವರು.

ಸಮಾರ್ಯದ ಪತನ

11. ಯಾವ ಪಾಪದ ದಾಖಲೆಯನ್ನು ಇಸ್ರಾಯೇಲು ಶೇಖರಿಸಿಟ್ಟಿದೆ, ಮತ್ತು ಇದರಿಂದಾಗುವ ಅಂತಿಮ ಪರಿಣಾಮವೇನು?

11 ಇಸ್ರಾಯೇಲು ಪಶ್ಚಾತ್ತಾಪಪಟ್ಟು ಶುದ್ಧಾರಾಧನೆಗೆ ಹಿಂದಿರುಗುವಂತೆ, ಕರುಣಾಭರಿತನಾದ ಯೆಹೋವನು ಪ್ರವಾದಿಗಳನ್ನು ಪದೇ ಪದೇ ಅಲ್ಲಿಗೆ ಕಳುಹಿಸುತ್ತಾನೆ. (2 ಅರಸುಗಳು 17:13) ಈಗಾಗಲೇ ಬಸವನ ಆರಾಧನೆಯಲ್ಲಿ ತೊಡಗಿರುವ ಇಸ್ರಾಯೇಲು, ಕಣಿಕೇಳುವಿಕೆ, ಅನೈತಿಕ ಬಾಳನ ಆರಾಧನೆ ಮತ್ತು ಅಶೇರವಿಗ್ರಹಸ್ತಂಭಗಳ ರಚನೆಯಲ್ಲಿ ಸೇರಿಕೊಂಡು, ಇನ್ನೂ ಹೆಚ್ಚಿನ ಪಾಪದಲ್ಲಿ ಒಳಗೊಳ್ಳುತ್ತದೆ. ಇಸ್ರಾಯೇಲ್ಯರು ‘ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿಕೊಟ್ಟು,’ ತಮ್ಮ ಶರೀರದ ಕುಡಿಗಳನ್ನೇ ದೆವ್ವಗಳಿಗೆ ಅರ್ಪಿಸಿದರು. (2 ಅರಸುಗಳು 17:​14-17; ಕೀರ್ತನೆ 106:​36-39; ಆಮೋಸ 2:⁠8) ಇಸ್ರಾಯೇಲಿನ ದುಷ್ಟತನಕ್ಕೆ ಅಂತ್ಯವನ್ನು ತರಲು, ಯೆಹೋವನು ಆದೇಶಿಸುವುದು: “ಸಮಾರ್ಯದ ರಾಜನು ಹಾಳಾಗಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಚಕ್ಕೆಗೆ ಸಮಾನನಾಗಿದ್ದಾನೆ.” (ಹೋಶೇಯ 10:​1, 7) ಸಾ.ಶ.ಪೂ. 742ರಲ್ಲಿ ಅಶ್ಶೂರ ಸೇನೆಗಳು, ಇಸ್ರಾಯೇಲಿನ ರಾಜಧಾನಿ ಸಮಾರ್ಯಕ್ಕೆ ಮುತ್ತಿಗೆ ಹಾಕುತ್ತವೆ. ಮೂರು ವರ್ಷಗಳ ಮುತ್ತಿಗೆಯ ನಂತರ, ಸಮಾರ್ಯವು ವೈರಿಗೆ ಶರಣಾಗುತ್ತದೆ ಮತ್ತು ಸಾ.ಶ.ಪೂ. 740ರಲ್ಲಿ ಹತ್ತು ಗೋತ್ರಗಳ ರಾಜ್ಯವು ಇಲ್ಲದೆ ಹೋಗುತ್ತದೆ.

12. ಯಾವ ಕೆಲಸಕ್ಕೆ ಇಂದು ಯೆಹೋವನು ಆದೇಶ ನೀಡಿದ್ದಾನೆ, ಮತ್ತು ಆ ಎಚ್ಚರಿಕೆಯನ್ನು ಕಡೆಗಣಿಸುವವರಿಗೆ ಏನಾಗುವುದು?

12 “ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು” ಎಚ್ಚರಿಕೆ ನೀಡಲು, ನಮ್ಮ ದಿನದಲ್ಲಿ ಯೆಹೋವನು ಲೋಕವ್ಯಾಪಕವಾದ ಸಾರುವ ಕಾರ್ಯವನ್ನು ಆರಂಭಿಸಿದ್ದಾನೆ. (ಅ. ಕೃತ್ಯಗಳು 17:30; ಮತ್ತಾಯ 24:14) ದೇವರ ಮೂಲಕ ಬರುವ ರಕ್ಷಣೆಯನ್ನು ತಿರಸ್ಕರಿಸುವವರು ‘ಚಕ್ಕೆಯಂತಾಗಿ’, ಧರ್ಮಭ್ರಷ್ಟ ಇಸ್ರಾಯೇಲ್‌ ಜನಾಂಗದ ಹಾಗೆ ನಾಶವಾಗುವರು. ಮತ್ತೊಂದು ಕಡೆಯಲ್ಲಿ, ಯೆಹೋವನನ್ನು ನಿರೀಕ್ಷಿಸಿಕೊಂಡಿರುವವರು “ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಆದುದರಿಂದ, ಪುರಾತನ ಇಸ್ರಾಯೇಲ್‌ ರಾಜ್ಯವು ಮಾಡಿದ ತಪ್ಪುಗಳನ್ನು ನಾವು ಮಾಡದೆ ಇರುವುದು ಎಷ್ಟು ಒಳ್ಳೆಯದು! ರಕ್ಷಣೆಗಾಗಿ ನಾವು ಯೆಹೋವನಲ್ಲದೆ ಬೇರೆ ಯಾರಲ್ಲೂ ಪೂರ್ಣ ಭರವಸೆಯನ್ನು ಇಡದಿರೋಣ.

ಯೆಹೋವನಲ್ಲಿರುವ ರಕ್ಷಿಸುವ ಸಾಮರ್ಥ್ಯ

13, 14. ಚೀಯೋನಿಗಾಗಿ ಯಾವ ಸಾಂತ್ವನದಾಯಕ ಮಾತುಗಳನ್ನು ಯೆಹೋವನು ನುಡಿಯುತ್ತಾನೆ?

13 ಇಸ್ರಾಯೇಲಿನ ದಕ್ಷಿಣ ಗಡಿಯಿಂದ ಸ್ವಲ್ಪವೇ ದೂರದಲ್ಲಿ, ಯೆಹೂದದ ರಾಜಧಾನಿ ಯೆರೂಸಲೇಮ್‌ ನೆಲೆಸಿದೆ. ಸಮಾರ್ಯಕ್ಕೆ ಏನು ಸಂಭವಿಸಿದೆ ಎಂಬುದು ಯೆರೂಸಲೇಮಿನ ನಿವಾಸಿಗಳಿಗೆ ಚೆನ್ನಾಗಿ ಗೊತ್ತಿದೆ. ಉತ್ತರದಲ್ಲಿದ್ದ ತಮ್ಮ ನೆರೆರಾಜ್ಯಕ್ಕೆ ಅಂತ್ಯವನ್ನು ತಂದ ಅದೇ ಭಯಂಕರವಾದ ವೈರಿಯು ಈಗ ಅವರನ್ನು ಬೆದರಿಸುತ್ತಿದ್ದಾನೆ. ಸಮಾರ್ಯಕ್ಕೆ ಏನಾಯಿತೊ ಅದರಿಂದ ಇವರು ಪಾಠ ಕಲಿಯುವರೊ?

14 ಯೆಶಾಯನ ಮುಂದಿನ ಮಾತುಗಳಿಂದ ಯೆರೂಸಲೇಮಿನ ನಿವಾಸಿಗಳು ಸಾಂತ್ವನ ಪಡೆದುಕೊಳ್ಳುತ್ತಾರೆ. ಯೆಹೋವನು ಈಗಲೂ ತನ್ನ ಒಡಂಬಡಿಕೆಯ ಜನರನ್ನು ಪ್ರೀತಿಸುತ್ತಾನೆಂಬ ಆಶ್ವಾಸನೆಯನ್ನು ಅವನು ನೀಡುತ್ತಾ ಹೇಳುವುದು: “ಯೆಹೋವನು ನನಗೆ ಹೀಗೆ ಹೇಳಿದ್ದಾನೆ​—⁠ಸಿಂಹವು, ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಬಹು ಮಂದಿ ಕುರುಬರು ಅದಕ್ಕೆ ವಿರುದ್ಧವಾಗಿ ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದೆ ಅವರ ಗದ್ದಲದಿಂದ ಹೇಗೆ ಧೈರ್ಯಗುಂದುವದಿಲ್ಲವೋ ಹಾಗೆಯೇ ಸೇನಾಧೀಶ್ವರನಾದ ಯೆಹೋವನು ಯುದ್ಧಮಾಡಲು ಚೀಯೋನ್‌ ಪರ್ವತದ ಶಿಖರದ ಮೇಲೆ ಇಳಿಯುವನು.” (ಯೆಶಾಯ 31:4) ತನ್ನ ಬೇಟೆಯ ಮೇಲೆ ನಿಂತಿರುವ ಪ್ರಾಯದ ಸಿಂಹದಂತೆ, ಯೆಹೋವನು ತನ್ನ ಪವಿತ್ರ ನಗರವಾದ ಚೀಯೋನ್‌ ಅನ್ನು ಯಾರಿಗೂ ಬಿಟ್ಟುಕೊಡನು. ಬಡಾಯಿಯ ಮಾತುಗಳಾಗಲಿ, ಬೆದರಿಕೆಗಳಾಗಲಿ ಇಲ್ಲವೆ ಅಶ್ಶೂರ ಸೇನೆಗಳು ಉಂಟುಮಾಡುವ ಗದ್ದಲವಾಗಲಿ ಯೆಹೋವನ ಉದ್ದೇಶಕ್ಕೆ ಭಂಗತರದು.

15. ಯೆರೂಸಲೇಮಿನ ನಿವಾಸಿಗಳೊಂದಿಗೆ ಯೆಹೋವನು ಕೋಮಲವಾಗಿಯೂ ಸಹಾನುಭೂತಿಯಿಂದಲೂ ವರ್ತಿಸುವುದೇಕೆ?

15 ಯೆಹೋವನು ಯೆರೂಸಲೇಮಿನ ನಿವಾಸಿಗಳೊಂದಿಗೆ ಬಹಳ ಕೋಮಲವಾಗಿಯೂ ಸಹಾನುಭೂತಿಯಿಂದಲೂ ವರ್ತಿಸಲಿದ್ದಾನೆ ಎಂಬುದನ್ನು ಈಗ ಗಮನಿಸಿರಿ: “ಹೆಣ್ಣುಹಕ್ಕಿಗಳು ಹಾರಿಯಾಡುತ್ತಾ [ಮರಿಗಳನ್ನು] ಕಾಪಾಡುವಂತೆ ಸೇನಾಧೀಶ್ವರನಾದ ಯೆಹೋವನು ಯೆರೂಸಲೇಮನ್ನು ಕಾಪಾಡುವನು; ಅದನ್ನು ರಕ್ಷಿಸಿ ಕಾಯುವನು, ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವನು.” (ಯೆಶಾಯ 31:5) ತನ್ನ ಮರಿಗಳನ್ನು ಕಾಪಾಡಲು ಹೆಣ್ಣುಹಕ್ಕಿಯು ಸದಾ ಎಚ್ಚರದಿಂದಿರುತ್ತದೆ. ರೆಕ್ಕೆಗಳನ್ನು ಚಾಚಿಕೊಂಡು ಅದು ತನ್ನ ಮರಿಗಳ ಮೇಲೆ ಸುತ್ತುತ್ತಾ ಇರುತ್ತದೆ, ಮತ್ತು ಅಪಾಯದ ಸೂಚನೆಗಾಗಿ ಸದಾ ಎಚ್ಚೆತ್ತುಕೊಂಡಿರುತ್ತದೆ. ಪರಭಕ್ಷಕ ಪ್ರಾಣಿಯೊಂದು ಹತ್ತಿರಕ್ಕೆ ಬರುವುದಾದರೆ, ಅದು ಕೂಡಲೇ ತನ್ನ ಮರಿಗಳನ್ನು ರಕ್ಷಿಸಲು ಕೆಳಕ್ಕೆ ಹಾರಿಬರುತ್ತದೆ. ತದ್ರೀತಿಯಲ್ಲಿ, ಆಕ್ರಮಿಸುತ್ತಿರುವ ಅಶ್ಶೂರರಿಂದಾಗಿ ಯೆಹೋವನು ಯೆರೂಸಲೇಮಿನ ನಿವಾಸಿಗಳನ್ನು ಕೋಮಲವಾಗಿ ಪರಾಮರಿಸುವನು.

“ಇಸ್ರಾಯೇಲ್ಯರೇ, . . . ತಿರಿಗಿಕೊಳ್ಳಿರಿ”

16. (ಎ) ಯೆಹೋವನು ತನ್ನ ಜನರ ಪರವಾಗಿ ಯಾವ ಪ್ರೀತಿಪರ ಮನವಿಯನ್ನು ಮಾಡುತ್ತಾನೆ? (ಬಿ) ಯೆಹೂದದ ನಿವಾಸಿಗಳ ದಂಗೆಯು ಯಾವಾಗ ಸುಸ್ಪಷ್ಟವಾಗುತ್ತದೆ? ವಿವರಿಸಿರಿ.

16 ಜನರು ಪಾಪಮಾಡಿದ್ದಾರೆಂಬ ಮರುಜ್ಞಾಪನದೊಂದಿಗೆ, ಆ ತಪ್ಪಾದ ಮಾರ್ಗವನ್ನು ಬಿಟ್ಟುಬರುವ ಉತ್ತೇಜನವನ್ನೂ ಯೆಹೋವನು ನೀಡುತ್ತಾನೆ. “ಇಸ್ರಾಯೇಲ್ಯರೇ, ನೀವು ಯಾರಿಗೆ ಅಗಾಧದ್ರೋಹವನ್ನು ಮಾಡಿದಿರೋ ಆತನ ಕಡೆಗೆ ತಿರಿಗಿಕೊಳ್ಳಿರಿ.” (ಯೆಶಾಯ 31:6) ಕೇವಲ ಇಸ್ರಾಯೇಲಿನ ಹತ್ತು ಗೋತ್ರಗಳ ರಾಜ್ಯವು ಈ ದಂಗೆಯಲ್ಲಿ ಒಳಗೂಡಿಲ್ಲ. ಯೆಹೂದದ ಜನರು, ಅಂದರೆ ‘ಇಸ್ರಾಯೇಲ್ಯರು’ ಕೂಡ ‘ಅಗಾಧದ್ರೋಹವನ್ನು ಮಾಡಿದ್ದಾರೆ.’ ಯೆಶಾಯನು ತನ್ನ ಪ್ರವಾದನ ಸಂದೇಶವನ್ನು ಮುಗಿಸಿದ ಕೂಡಲೇ, ಹಿಜ್ಕೀಯನ ಮಗನಾದ ಮನಸ್ಸೆಯು ರಾಜನಾದಾಗ, ಇದು ವಿಶೇಷವಾಗಿ ತೋರಿಬಂತು. ಬೈಬಲ್‌ ದಾಖಲೆಗನುಸಾರ, “ಯೆಹೂದ್ಯರೂ ಯೆರೂಸಲೇಮಿನವರೂ ಮನಸ್ಸೆಯಿಂದ ಪ್ರೇರಿತರಾಗಿ ಇಸ್ರಾಯೇಲ್ಯರ ಮುಂದೆಯೇ ಯೆಹೋವನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.” (2 ಪೂರ್ವಕಾಲವೃತ್ತಾಂತ 33:9) ಒಂದಿಷ್ಟು ಯೋಚಿಸಿನೋಡಿ! ಅನ್ಯರು ತಮ್ಮ ಅಸಹ್ಯಕಾರ್ಯಗಳಲ್ಲಿ ಮುಳುಗಿರುವುದರಿಂದ ಯೆಹೋವನು ಅವರನ್ನು ನಾಶಮಾಡುತ್ತಾನೆ, ಅಂತಹದರಲ್ಲಿ ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿರುವ ಯೆಹೂದದ ನಿವಾಸಿಗಳೇ ಆ ಅನ್ಯರಿಗಿಂತಲೂ ಹೆಚ್ಚು ಅಸಹ್ಯವಾದ ಕಾರ್ಯಗಳಲ್ಲಿ ತೊಡಗಿದ್ದಾರೆ.

17. ಮನಸ್ಸೆಯು ಆಳುತ್ತಿದ್ದಾಗ ಯೆಹೂದದಲ್ಲಿ ನೆಲಸಿದ್ದ ಪರಿಸ್ಥಿತಿಗಳಿಗೆ ಇಂದಿನ ಪರಿಸ್ಥಿತಿಗಳು ಹೇಗೆ ಹೋಲುತ್ತವೆ?

17 ಮನಸ್ಸೆಯ ದಿನಗಳಲ್ಲಿ ಯೆಹೂದದ ಪರಿಸ್ಥಿತಿಯು ಹೇಗಿತ್ತೊ ಅದೇ ರೀತಿಯ ಪರಿಸ್ಥಿತಿಯನ್ನು ನಾವು ಈ 21ನೆಯ ಶತಮಾನದ ಆರಂಭದಲ್ಲಿ ನೋಡುತ್ತೇವೆ. ಲೋಕವು ಧಾರ್ಮಿಕ, ಕುಲಸಂಬಂಧಿತ ಹಾಗೂ ಜಾತೀಯ ವೈರತ್ವಗಳಿಂದ ಛಿನ್ನಭಿನ್ನವಾಗಿದೆ. ಕೊಲೆ, ಹಿಂಸೆ, ಬಲಾತ್ಕಾರ ಸಂಭೋಗ ಮತ್ತು ಜಾತೀಯ ಶುದ್ಧೀಕರಣವೆಂಬ ಭೀಭತ್ಸ ಕೃತ್ಯಗಳಿಗೆ ಅನೇಕರು ಬಲಿಯಾಗಿದ್ದಾರೆ. ಜನರು ಮತ್ತು ರಾಷ್ಟ್ರಗಳು, ವಿಶೇಷವಾಗಿ ಕ್ರೈಸ್ತಪ್ರಪಂಚದ ರಾಷ್ಟ್ರಗಳು ‘ಅಗಾಧದ್ರೋಹವನ್ನು ಮಾಡಿರುವುದರಲ್ಲಿ’ ಸಂದೇಹವೇ ಇಲ್ಲ. ಆದರೆ, ಈ ದುಷ್ಟತನವು ಎಂದೆಂದಿಗೂ ಮುಂದುವರಿಯುವಂತೆ ಯೆಹೋವನು ಬಿಡಲಾರನೆಂಬ ಖಾತ್ರಿ ನಮಗಿರಸಾಧ್ಯವಿದೆ. ಏಕೆ? ಯೆಶಾಯನ ದಿನದಲ್ಲಿ ಏನು ಸಂಭವಿಸಿತೊ ಅದಕ್ಕೆ ಒಂದಿಷ್ಟು ಗಮನವನ್ನು ಕೊಡಿರಿ.

ರಕ್ಷಿಸಲ್ಪಟ್ಟ ಯೆರೂಸಲೇಮ್‌

18. ರಬ್ಷಾಕೆ ಹಿಜ್ಕೀಯನಿಗೆ ಯಾವ ಎಚ್ಚರಿಕೆಯನ್ನು ಕೊಡುತ್ತಾನೆ?

18 ಯುದ್ಧಭೂಮಿಯಲ್ಲಿ ತಮಗೆ ಲಭಿಸಿದ ವಿಜಯಕ್ಕೆ ಅಶ್ಶೂರದ ರಾಜರು ತಮ್ಮ ದೇವರುಗಳಿಗೆ ಕೀರ್ತಿ ಸಲ್ಲಿಸಿದರು. ಏನ್‌ಷೆಂಟ್‌ ನಿಯರ್‌ ಈಸ್ಟರ್ನ್‌ ಟೆಕ್ಸ್‌ಟ್ಸ್‌ ಎಂಬ ಪುಸ್ತಕದಲ್ಲಿ, ಅಶ್ಶೂರರ ಸಾಮ್ರಾಟ ಅಶ್ಶೂರ್‌ಬಾಣಿಪಾಲ್‌ನ ಬರಹಗಳಿವೆ. “ಅಶ್ಶೂರ್‌, ಬೇಲ್‌, ನೆಬೋ, ಎಂಬಂತಹ ಮಹಾನ್‌ ದೇವರುಗಳು, [ಅವನ] ಕರ್ತರು [ಅವನ] ಪಕ್ಕದಲ್ಲಿ (ಯಾವಾಗಲೂ) ಇದ್ದು, ದೊಡ್ಡದಾದ ಕದನದಲ್ಲಿ . . . [ಅವನು] ಯುದ್ಧ (ಅನುಭವಸ್ಥ) ಸೈನಿಕರನ್ನು ಸೋಲಿಸಿದಾಗ” ಆ ದೇವರುಗಳಿಂದ ಮಾರ್ಗದರ್ಶಿಸಲ್ಪಟ್ಟನೆಂದು ಸ್ವತಃ ಹೇಳಿಕೊಳ್ಳುತ್ತಾನೆ. ಯೆಶಾಯನ ದಿನದಲ್ಲಿ, ಅಶ್ಶೂರರ ರಾಜ ಸೆನ್ಹೇರೀಬನನ್ನು ಪ್ರತಿನಿಧಿಸಿದ ರಬ್ಷಾಕೆಯು, ರಾಜ ಹಿಜ್ಕೀಯನೊಂದಿಗೆ ಮಾತಾಡುವಾಗ, ಮಾನವ ಯುದ್ಧದಲ್ಲಿ ದೇವರುಗಳ ಕೈವಾಡದ ಬಗ್ಗೆ ತನಗಿರುವ ನಂಬಿಕೆಯನ್ನು ವ್ಯಕ್ತಪಡಿಸುತ್ತಾನೆ. ಹಿಜ್ಕೀಯನು ತನ್ನ ರಕ್ಷಣೆಗಾಗಿ ಯೆಹೋವನ ಮೇಲೆ ಆತುಕೊಳ್ಳುವುದರಿಂದ ಯಾವ ಪ್ರಯೋಜನವೂ ಆಗಲಾರದೆಂದು ಅವನು ಎಚ್ಚರಿಸುತ್ತಾನೆ. ಏಕೆಂದರೆ, ಇತರ ರಾಷ್ಟ್ರಗಳ ದೇವದೇವತೆಗಳು ತಮ್ಮ ಜನರನ್ನು ಅಶ್ಶೂರರ ಶಕ್ತಿಶಾಲಿ ಮಿಲಿಟರಿ ಪಡೆಯಿಂದ ರಕ್ಷಿಸಲು ಅಸಮರ್ಥವಾಗಿದ್ದವೆಂದು ಅವನು ಸಾರಿಹೇಳುತ್ತಾನೆ.​—⁠2 ಅರಸುಗಳು 18:​33-35.

19. ರಬ್ಷಾಕೆಯ ಕೆಣಕು ನುಡಿಗಳಿಗೆ ಹಿಜ್ಕೀಯನು ಹೇಗೆ ಪ್ರತಿಕ್ರಿಯಿಸುತ್ತಾನೆ?

19 ಹಿಜ್ಕೀಯನು ಹೇಗೆ ಪ್ರತಿಕ್ರಿಯಿಸುತ್ತಾನೆ? ಬೈಬಲಿನ ದಾಖಲೆ ಹೇಳುವುದು: “ಹಿಜ್ಕೀಯನು ಅದನ್ನು ಕೇಳಿ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.” (2 ಅರಸುಗಳು 19:1) ಈ ಭಯಂಕರವಾದ ಸನ್ನಿವೇಶದಲ್ಲಿ ತನಗೆ ಸಹಾಯವನ್ನು ನೀಡಬಲ್ಲವನು ಒಬ್ಬನೇ ಎಂಬುದನ್ನು ಹಿಜ್ಕೀಯನು ಗ್ರಹಿಸುತ್ತಾನೆ. ತನ್ನನ್ನು ತಗ್ಗಿಸಿಕೊಂಡ ಹಿಜ್ಕೀಯನು, ಯೆಹೋವನ ಮಾರ್ಗದರ್ಶನಕ್ಕಾಗಿ ಎದುರುನೋಡುತ್ತಾನೆ.

20. ಯೆಹೋವನು ಯೆಹೂದದ ನಿವಾಸಿಗಳ ಪರವಾಗಿ ಹೇಗೆ ಕ್ರಿಯೆಗೈಯುವನು, ಮತ್ತು ಇದರಿಂದ ಅವರು ಏನನ್ನು ಕಲಿಯಬೇಕು?

20 ಹಿಜ್ಕೀಯನು ಕೋರಿದ ಮಾರ್ಗದರ್ಶನವನ್ನು ಯೆಹೋವನು ಅವನಿಗೆ ಕೊಡುತ್ತಾನೆ. ಯೆಶಾಯನ ಮೂಲಕ, ಆತನು ಹೇಳುವುದು: “ನೀವು ನಿಮ್ಮ ಕೈಯಿಂದ ರೂಪಿಸಿಕೊಂಡಿರುವ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನೂ ಬಿಸಾಟುಬಿಡುವನು; ಅವುಗಳನ್ನು ರೂಪಿಸಿದ್ದು ಪಾಪವಷ್ಟೆ.” (ಯೆಶಾಯ 31:7) ಯೆಹೋವನು ತನ್ನ ಜನರಿಗಾಗಿ ಕಾದಾಡುವಾಗ, ಸೆನ್ಹೇರೀಬನ ದೇವದೇವತೆಗಳು ಪ್ರಯೋಜನಕ್ಕೆ ಬಾರದವುಗಳಾಗಿ ರುಜುವಾಗುವವು. ಈ ಪಾಠವನ್ನು ಯೆಹೂದದ ನಿವಾಸಿಗಳು ತಮ್ಮ ಹೃದಯಕ್ಕೆ ತೆಗೆದುಕೊಳ್ಳಲೇಬೇಕು. ರಾಜ ಹಿಜ್ಕೀಯನು ನಂಬಿಗಸ್ತನಾಗಿದ್ದರೂ, ಯೆಹೂದ ದೇಶವು ಇಸ್ರಾಯೇಲಿನಂತೆ ಮೂರ್ತಿಗಳಿಂದ ತುಂಬಿದೆ. (ಯೆಶಾಯ 2:​5-8) ಯೆಹೋವನೊಂದಿಗೆ ತಮಗಿದ್ದ ಸಂಬಂಧವನ್ನು ಪುನಃ ಬೆಳೆಸಿಕೊಳ್ಳಲು ಯೆಹೂದದ ನಿವಾಸಿಗಳು ಬಯಸಿದರೆ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ‘ಪ್ರತಿಯೊಬ್ಬನೂ ತನ್ನ ವಿಗ್ರಹಗಳನ್ನು’ ಬಿಸಾಡಿಬಿಡಬೇಕು.​—⁠ನೋಡಿ ವಿಮೋಚನಕಾಂಡ 34:⁠14.

21. ಅಶ್ಶೂರರ ವಿರುದ್ಧ ಯೆಹೋವನ ನ್ಯಾಯತೀರ್ಪನ್ನು ಯೆಶಾಯನು ಪ್ರವಾದನಾತ್ಮಕವಾಗಿ ವರ್ಣಿಸುವುದು ಹೇಗೆ?

21 ದಿಗಿಲುಟ್ಟಿಸುವ ಯೆಹೂದದ ವೈರಿಯ ಮೇಲೆ ಯೆಹೋವನು ಬರಮಾಡಲಿರುವ ನ್ಯಾಯತೀರ್ಪನ್ನು ಯೆಶಾಯನು ಈಗ ಪ್ರವಾದನಾತ್ಮಕವಾಗಿ ವರ್ಣಿಸುತ್ತಾನೆ: “ಆಗ ಅಶ್ಶೂರ್ಯರು ಕತ್ತಿಯಿಂದ ಬೀಳುವರು, ಅದು ಮನುಷ್ಯರ ಕತ್ತಿಯಲ್ಲ; ಖಡ್ಗವು ಅವರನ್ನು ನುಂಗುವದು, ಅದು ಮಾನವಖಡ್ಗವಲ್ಲ; ಅವರು ಕತ್ತಿಯ ಕಡೆಯಿಂದ ಓಡುವರು, ಅವರ ಯೌವನಸ್ಥರು ಬಿಟ್ಟಿ ಹಿಡಿಯಲ್ಪಡುವರು.” (ಯೆಶಾಯ 31:8) ಯೆಹೋವನ ನೇಮಿತ ಸಮಯವು ಬಂದಾಗ, ಯೆರೂಸಲೇಮಿನ ನಿವಾಸಿಗಳು ತಮ್ಮ ಕತ್ತಿಗಳನ್ನು ಒರೆಗಳಿಂದಲೂ ತೆಗೆಯುವ ಅಗತ್ಯವಿರಲಾರದು. ಅಶ್ಶೂರರ ಅತ್ಯುತ್ತಮ ಸೈನಿಕರು ಮನುಷ್ಯರ ಖಡ್ಗದಿಂದಲ್ಲ, ಯೆಹೋವನ ಖಡ್ಗದಿಂದ ಹತರಾಗುವರು. ಅಶ್ಶೂರರ ರಾಜ ಸನ್ಹೇರೀಬನು ‘ಕತ್ತಿಯ ಕಡೆಯಿಂದ ಓಡುವನು.’ ಯೆಹೋವನ ದೂತನು ಅವನ ಸೈನಿಕರಲ್ಲಿ 1,85,000 ಮಂದಿಯನ್ನು ಕೊಂದುಹಾಕಿದಾಗ, ಅವನು ತನ್ನ ಮನೆಗೆ ಹಿಂದಿರುಗುತ್ತಾನೆ. ತರುವಾಯ, ತನ್ನ ದೇವನಾದ ನಿಸ್ರೋಕನಿಗೆ ತಲೆಬಾಗುವಾಗ, ತನ್ನ ಸ್ವಂತ ಪುತ್ರರಿಂದಲೇ ಕೊಲ್ಲಲ್ಪಡುತ್ತಾನೆ.​—⁠2 ಅರಸುಗಳು 19:​35-37.

22. ಹಿಜ್ಕೀಯನನ್ನು ಮತ್ತು ಅಶ್ಶೂರ ಸೇನೆಯನ್ನು ಒಳಗೊಂಡ ಘಟನೆಗಳಿಂದ ಇಂದಿನ ಕ್ರೈಸ್ತರು ಏನನ್ನು ಕಲಿಯಬಲ್ಲರು?

22 ಯೆಹೋವನು ಯೆರೂಸಲೇಮನ್ನು ಅಶ್ಶೂರರ ಸೇನೆಯಿಂದ ಹೇಗೆ ರಕ್ಷಿಸುವನೆಂಬುದು, ಹಿಜ್ಕೀಯನನ್ನೂ ಸೇರಿಸಿ ಯಾರೊಬ್ಬರಿಗೂ ತಿಳಿದಿರಲಿಲ್ಲ. ಆದರೂ, ಹಿಜ್ಕೀಯನು ಆ ಸಂದಿಗ್ಧ ಸಮಯದಲ್ಲಿ ಹೇಗೆ ಕ್ರಿಯೆಗೈದನೆಂಬುದು, ಇಂದು ಕಷ್ಟಸಂಕಟಗಳನ್ನು ಎದುರಿಸುವವರಿಗೆ ಒಂದು ಉತ್ತಮ ಮಾದರಿಯಾಗಿದೆ. (2 ಕೊರಿಂಥ 4:​16-18) ಯೆರೂಸಲೇಮನ್ನು ಬೆದರಿಸುತ್ತಿದ್ದ ಅಶ್ಶೂರರ ದಿಗಿಲುಟ್ಟಿಸುವ ಖ್ಯಾತಿಯು, ಹಿಜ್ಕೀಯನಲ್ಲಿ ಭಯದ ಅಲೆಗಳನ್ನು ಖಂಡಿತವಾಗಿಯೂ ಎಬ್ಬಿಸಿದವು. (2 ಅರಸುಗಳು 19:⁠3) ಆದರೂ ಅವನಿಗೆ ಯೆಹೋವನಲ್ಲಿ ನಂಬಿಕೆಯಿತ್ತು, ಮತ್ತು ಅವನು ಮನುಷ್ಯನ ಮಾರ್ಗದರ್ಶನವನ್ನಲ್ಲ ದೇವರ ಮಾರ್ಗದರ್ಶನವನ್ನೇ ಅರಸಿದನು. ಅವನು ಹಾಗೆ ಮಾಡಿದ್ದರಿಂದ ಯೆರೂಸಲೇಮಿಗೆ ಎಂತಹ ಆಶೀರ್ವಾದವು ಲಭಿಸಿತು! ಒತ್ತಡದ ಕೆಳಗೆ ಇರುವ ದೇವಭಯವುಳ್ಳ ಕ್ರೈಸ್ತರು ಕೂಡ ತೀವ್ರವಾದ ಭಯಕ್ಕೆ ಒಳಗಾಗಬಹುದು. ಅನೇಕ ಸನ್ನಿವೇಶಗಳಲ್ಲಿ, ಭಯಪಡುವುದು ಸಹಜವೇ ಸರಿ. ಆದರೂ, ‘ನಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿದರೆ’ ಯೆಹೋವನು ನಮ್ಮನ್ನು ಪರಾಮರಿಸುವನು. (1 ಪೇತ್ರ 5:⁠7) ನಾವು ಭಯವನ್ನು ಜಯಿಸಿ, ಒತ್ತಡಭರಿತವಾದ ಸನ್ನಿವೇಶವನ್ನು ನಿಭಾಯಿಸುವಂತೆ ಆತನು ನಮಗೆ ಬಲವನ್ನು ನೀಡಿ ಸಹಾಯಮಾಡುವನು.

23. ಹಿಜ್ಕೀಯನ ಬದಲು ಸನ್ಹೇರೀಬನು ಭಯಭೀತನಾಗುವುದು ಹೇಗೆ?

23 ಕೊನೆಯಲ್ಲಿ, ಹಿಜ್ಕೀಯನ ಬದಲು ಸನ್ಹೇರೀಬನೇ ದಿಕ್ಕು ತೋಚದೆ ಒದ್ದಾಡುತ್ತಾನೆ. ಅವನು ಯಾರ ಕಡೆಗೆ ತಿರುಗಬಲ್ಲನು? ಯೆಶಾಯನು ಮುಂತಿಳಿಸುವುದು: “ಅವರ ಶರಣನು ಭಯದಿಂದ ಹೋಗಿಬಿಡುವನು; ಅವರ ಪ್ರಧಾನರು ಹೆದರಿ ಧ್ವಜ ಸ್ಥಾನದಿಂದ ದಿಕ್ಕಾಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇಮಿನಲ್ಲಿ ಒಲೆಯನ್ನೂ ಮಾಡಿಕೊಂಡಿರುವ ಯೆಹೋವನ ನುಡಿ ಇದೇ.” (ಯೆಶಾಯ 31:9) ಸನ್ಹೇರೀಬನು ಭರವಸೆಯಿಟ್ಟಿರುವ ಅವನ “ಶರಣನು” ಅಂದರೆ ಅವನ ದೇವತೆಗಳು ಅವನನ್ನು ಕಾಪಾಡಲಾರರು. ಅವರು ‘ಭಯದಿಂದ ಹೋಗಿಬಿಡುವರೊ’ ಎಂಬಂತೆ ಪರಿಸ್ಥಿತಿಯು ಇರುವುದು. ಅಲ್ಲದೆ ಸನ್ಹೇರೀಬನ ಪ್ರಧಾನರು ಕೂಡ ಸಹಾಯಮಾಡುವುದಿಲ್ಲ. ಅವರು ಹೆದರಿ ದಿಕ್ಕಾಪಾಲಾಗಿದ್ದಾರೆ.

24. ಅಶ್ಶೂರರಿಗೆ ಸಂಭವಿಸಿದ ವಿಷಯಗಳಿಂದ ಯಾವ ಸ್ಪಷ್ಟವಾದ ಸಂಗತಿಯನ್ನು ನಾವು ಗ್ರಹಿಸಿಕೊಳ್ಳಬಹುದು?

24 ಭವಿಷ್ಯತ್ತಿನಲ್ಲಿ ದೇವರ ವಿರುದ್ಧವಾಗಿ ಏಳಲಿರುವ ಯಾವನಿಗಾದರೂ ಯೆಶಾಯನ ಪ್ರವಾದನೆಯ ಈ ಭಾಗವು ಸ್ಪಷ್ಟವಾದ ಸಂದೇಶವನ್ನು ನೀಡುತ್ತದೆ. ಯೆಹೋವನ ಉದ್ದೇಶಗಳಿಗೆ ಭಂಗತರುವ ಅಸ್ತ್ರವಾಗಲಿ, ಶಕ್ತಿಯಾಗಲಿ, ಸಾಧನವಾಗಲಿ ಇರುವುದೇ ಇಲ್ಲ. (ಯೆಶಾಯ 41:​11, 12) ಅದೇ ಸಮಯದಲ್ಲಿ, ದೇವರನ್ನು ಸೇವಿಸುತ್ತೇವೆಂದು ಹೇಳಿಕೊಂಡರೂ, ಲೌಕಿಕ ವಿಷಯಗಳಲ್ಲಿ ಭದ್ರತೆಯನ್ನು ಹುಡುಕುವ ಪ್ರತಿಯೊಬ್ಬರೂ ಹತಾಶೆಯನ್ನು ಅನುಭವಿಸುವರು. ‘ಇಸ್ರಾಯೇಲ್ಯರ ಸದಮಲಸ್ವಾಮಿಯ ಕಡೆಗೆ ದೃಷ್ಟಿಯಿಡದವರು,’ ಯೆಹೋವನು ‘ಕೇಡನ್ನು ಬರಮಾಡಿದಾಗ’ ಅದನ್ನು ನೋಡುವರು. (ಯೆಶಾಯ 31:​1, 2) ಯೆಹೋವ ದೇವರು ಮಾತ್ರವೇ ನಿಜವಾದ ಹಾಗೂ ಶಾಶ್ವತವಾದ ಆಶ್ರಯದುರ್ಗವಾಗಿದ್ದಾನೆ.​—⁠ಕೀರ್ತನೆ 37:⁠5.

[ಪಾದಟಿಪ್ಪಣಿ]

^ ಪ್ಯಾರ. 5 ಯೆಶಾಯ 31ನೆಯ ಅಧ್ಯಾಯದ ಮೊದಲ ಮೂರು ವಚನಗಳು, ಇಸ್ರಾಯೇಲಿನ ವಿರುದ್ಧ ನುಡಿಯಲ್ಪಟ್ಟಿವೆ. ತದನಂತರ ಆರು ವಚನಗಳು, ಯೆಹೂದಕ್ಕೆ ಅನ್ವಯಿಸುವಂತೆ ತೋರುತ್ತವೆ.

[ಅಧ್ಯಯನ ಪ್ರಶ್ನೆಗಳು]

[ಪುಟ 319ರಲ್ಲಿರುವ ಚಿತ್ರ]

ಪ್ರಾಪಂಚಿಕ ವಸ್ತುಗಳನ್ನೇ ನಂಬಿಕೊಂಡಿರುವವರು ನಿರಾಶೆಯನ್ನು ಅನುಭವಿಸುವರು

[ಪುಟ 322ರಲ್ಲಿರುವ ಚಿತ್ರ]

ತನ್ನ ಬೇಟೆಯನ್ನು ಕಾದುಕೊಂಡಿರುವ ಸಿಂಹದಂತೆ, ಯೆಹೋವನು ತನ್ನ ಪವಿತ್ರ ಪಟ್ಟಣವನ್ನು ರಕ್ಷಿಸುವನು

[ಪುಟ 324ರಲ್ಲಿರುವ ಚಿತ್ರಗಳು]

ಈ ಲೋಕವು ಧಾರ್ಮಿಕ, ಕುಲಸಂಬಂಧಿತ ಹಾಗೂ ಜಾತೀಯ ದ್ವೇಷಗಳಿಂದ ಛಿನ್ನಭಿನ್ನವಾಗಿದೆ

[ಪುಟ 326ರಲ್ಲಿರುವ ಚಿತ್ರ]

ಸಹಾಯಕ್ಕಾಗಿ ಹಿಜ್ಕೀಯನು ಯೆಹೋವನ ಆಲಯಕ್ಕೆ ಹೋದನು