ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬ ತಂದೆಯೂ ಅವನ ದಂಗೆಕೋರ ಪುತ್ರರೂ

ಒಬ್ಬ ತಂದೆಯೂ ಅವನ ದಂಗೆಕೋರ ಪುತ್ರರೂ

ಅಧ್ಯಾಯ ಎರಡು

ಒಬ್ಬ ತಂದೆಯೂ ಅವನ ದಂಗೆಕೋರ ಪುತ್ರರೂ

ಯೆಶಾಯ 1:​2-9

1, 2. ದ್ರೋಹಮಾಡಿದ ಪುತ್ರರು ಯೆಹೋವನಿಗೆ ಇರುವಂತಾದದ್ದು ಹೇಗೆಂದು ವಿವರಿಸಿರಿ.

ಒಬ್ಬ ಪ್ರೀತಿಯ ತಂದೆಯು ಖಂಡಿತ ಮಾಡುವಂತೆ, ಅವನು ತನ್ನ ಮಕ್ಕಳಿಗೆ ಉತ್ತಮವಾದ ಒದಗಿಸುವಿಕೆಯನ್ನು ಮಾಡಿದನು. ಆಹಾರ, ಬಟ್ಟೆ ಮತ್ತು ವಸತಿ ಅವರಿಗಿರುವಂತೆ ಅವನು ಅನೇಕ ವರ್ಷಗಳ ವರೆಗೆ ನೋಡಿಕೊಂಡನು. ಅಗತ್ಯವಿದ್ದಾಗ, ಅವರನ್ನು ಶಿಕ್ಷಿಸಿದ್ದೂ ಉಂಟು. ಆದರೆ ಆ ಶಿಕ್ಷೆ ಎಂದೂ ವಿಪರೀತವಾಗಿರಲಿಲ್ಲ; ಅದನ್ನು ಸದಾ ‘ತಕ್ಕ ಪ್ರಮಾಣದಲ್ಲಿ’ (NW) ಅವನು ಕೊಟ್ಟನು. (ಯೆರೆಮೀಯ 30:​11) ಆದುದರಿಂದ, “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹಮಾಡಿದ್ದಾರೆ,” ಎಂದು ಹೇಳಬೇಕಾದರೆ, ಈ ಪ್ರಿಯ ತಂದೆಗಿದ್ದ ಮನೋವೇದನೆಯನ್ನು ನಾವು ಕೇವಲ ಊಹಿಸಬಹುದು, ಅಷ್ಟೇ.​—⁠ಯೆಶಾಯ 1:⁠2.

2 ಇಲ್ಲಿ ಹೇಳಿರುವ, ದ್ರೋಹಮಾಡಿರುವ ಪುತ್ರರು ಯೆಹೂದದ ಜನರಾಗಿದ್ದಾರೆ ಮತ್ತು ವ್ಯಥೆಗೊಳಗಾದ ತಂದೆಯು ಯೆಹೋವ ದೇವರಾಗಿದ್ದಾನೆ. ಇದು ಎಷ್ಟೊಂದು ದುಃಖಕರ ಸಂಗತಿ! ಯೆಹೋವನು ಯೆಹೂದದವರನ್ನು ಪೋಷಿಸಿದ್ದಾನೆ ಮತ್ತು ಜನಾಂಗಗಳ ಮಧ್ಯೆ ಅವರನ್ನು ಉನ್ನತ ಸ್ಥಾನಕ್ಕೇರಿಸಿದ್ದಾನೆ. ಆತನು ಪ್ರವಾದಿ ಯೆಹೆಜ್ಕೇಲನ ಮೂಲಕ ಅವರಿಗೆ ಅನಂತರ ಜ್ಞಾಪಕ ಹುಟ್ಟಿಸುವುದು: “ಇದಲ್ಲದೆ ನಾನು ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ ಕಡಲುಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ ನಯವಾದ ನಾರುಮಡಿಯನ್ನು ನಿನಗೆ ಉಡಿಸಿ ರೇಶ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.” (ಯೆಹೆಜ್ಕೇಲ 16:10) ಆದರೂ, ಹೆಚ್ಚಿನ ಸಂದರ್ಭಗಳಲ್ಲಿ, ಯೆಹೂದದ ಜನರು ಯೆಹೋವನು ಅವರಿಗಾಗಿ ಏನನ್ನು ಮಾಡಿದ್ದನೊ ಅದನ್ನು ಗಣ್ಯಮಾಡುವುದಿಲ್ಲ. ಇದಕ್ಕೆ ಬದಲು, ಅವರು ದಂಗೆಯೇಳುತ್ತಾರೆ ಅಥವಾ “ದ್ರೋಹ” ಮಾಡುತ್ತಾರೆ.

3. ಯೆಹೂದದ ದ್ರೋಹಕ್ಕೆ ಸಾಕ್ಷಿಯಾಗಿರಲು ಯೆಹೋವನು ಆಕಾಶ ಮತ್ತು ಭೂಮಿಗೆ ಕರೆಕೊಡುವುದೇಕೆ?

3 ಆದುದರಿಂದ ಯೆಹೋವನು ತನ್ನ ದ್ರೋಹಿಗಳಾದ ಪುತ್ರರ ಕುರಿತು ಹೇಳುವ ಮೊದಲು, “ಆಕಾಶಮಂಡಲವೇ, ಆಲಿಸು! ಭೂಮಂಡಲವೇ, ಕೇಳು! ಯೆಹೋವನು ಮಾತಾಡುತ್ತಿದ್ದಾನೆ” ಎಂಬ ಮಾತುಗಳೊಂದಿಗೆ ಆರಂಭಿಸಲು ಸಕಾರಣವಿದೆ. (ಯೆಶಾಯ 1:2ಎ) ಶತಮಾನಗಳ ಹಿಂದೆ, ಇಸ್ರಾಯೇಲ್ಯರಿಗೆ ಅವಿಧೇಯತೆಯ ಪರಿಣಾಮಗಳ ಕುರಿತು ಎಚ್ಚರಿಕೆಗಳು ಕೊಡಲ್ಪಟ್ಟಾಗ, ಸಾಂಕೇತಿಕವಾಗಿ ಆಕಾಶ ಮತ್ತು ಭೂಮಿ ಅವುಗಳನ್ನು ಕೇಳಿಸಿಕೊಂಡವು. ಆಗ ಮೋಶೆ ಹೇಳಿದ್ದು: “ನೀವು ಯೊರ್ದನ್‌ ಹೊಳೆಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವ ಆ ದೇಶದಲ್ಲಿ ಉಳಿಯದೆ ಬೇಗನೆ ನಾಶವಾಗಿ ಹೋಗುವಿರಿ ಎಂದು ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆದು ಎಚ್ಚರಿಸುತ್ತೇನೆ.” (ಧರ್ಮೋಪದೇಶಕಾಂಡ 4:26) ಈಗ, ಯೆಶಾಯನ ದಿನಗಳಲ್ಲಿ, ಅದೃಶ್ಯ ಆಕಾಶ ಮತ್ತು ದೃಶ್ಯ ಭೂಮಿ ಯೆಹೂದದ ದ್ರೋಹಕ್ಕೆ ಸಾಕ್ಷಿಯಾಗಿರುವಂತೆ ಯೆಹೋವನು ಕರೆ ಕೊಡುತ್ತಾನೆ.

4. ತನ್ನನ್ನು ಯೆಹೂದಕ್ಕೆ ಹೇಗೆ ತೋರಿಸಿಕೊಡಲು ಯೆಹೋವನು ಆರಿಸಿಕೊಳ್ಳುತ್ತಾನೆ?

4 ಈ ವಿಪರೀತ ಪರಿಸ್ಥಿತಿಯು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಕೇಳಿಕೊಳ್ಳುತ್ತದೆ. ಆದರೆ ಈ ಘೋರ ಸ್ಥಿತಿಗತಿಗಳಲ್ಲಿಯೂ, ಒಂದು ಗಮನಾರ್ಹವಾದ ಮತ್ತು ಹೃದಯಸ್ಪರ್ಶಿ ವಿಚಾರವನ್ನು ನೋಡಬಹುದು. ಅದೇನೆಂದರೆ, ಯೆಹೂದವನ್ನು ಕ್ರಯಕ್ಕೆ ಕೊಂಡುಕೊಂಡಿರುವ ಒಬ್ಬ ಧಣಿಯೋಪಾದಿ ಅಲ್ಲ, ಬದಲಾಗಿ ಒಬ್ಬ ಪ್ರೀತಿಯ ತಂದೆಯೋಪಾದಿ ಯೆಹೋವನು ತನ್ನನ್ನು ತೋರಿಸಿಕೊಡುತ್ತಾನೆ. ಕಾರ್ಯತಃ, ಒಬ್ಬ ತಂದೆಯು ತನ್ನ ಮೊಂಡರಾದ ಪುತ್ರರ ವಿಚಾರದಲ್ಲಿ ಸಂಕಟಪಡುವ ದೃಷ್ಟಿಕೋನದಿಂದ ಈ ವಿಷಯವನ್ನು ಪರಿಗಣಿಸುವಂತೆ ಯೆಹೋವನು ತನ್ನ ಜನರನ್ನು ವಿಜ್ಞಾಪಿಸಿಕೊಳ್ಳುತ್ತಾನೆ. ಪ್ರಾಯಶಃ, ಯೆಹೂದದ ಕೆಲವು ಹೆತ್ತವರು ತಮಗೆ ವೈಯಕ್ತಿಕವಾಗಿ ಆಗಿದ್ದ ಇಂತಹ ಸಂಕಟಕರವಾದ ಅನುಭವವನ್ನು ನೆನಸಿಕೊಂಡು ಈ ಸಾಮ್ಯದಿಂದ ಪ್ರಚೋದಿತರಾಗುತ್ತಾರೆ. ಹೇಗಿದ್ದರೂ, ಯೆಹೋವನು ತನಗೆ ಯೆಹೂದದ ಮೇಲಿದ್ದ ಆರೋಪವನ್ನು ಇನ್ನೇನು ಹೇಳುವುದರಲ್ಲಿದ್ದಾನೆ.

ಮೃಗಗಳಿಗೆ ಹೆಚ್ಚು ತಿಳಿವಳಿಕೆಯಿದೆ

5. ಇಸ್ರಾಯೇಲಿಗೆ ವ್ಯತಿರಿಕ್ತವಾಗಿ, ಎತ್ತು ಮತ್ತು ಕತ್ತೆಗಳು ನಂಬಿಗಸ್ತಿಕೆಯ ಪ್ರಜ್ಞೆಯನ್ನು ಹೇಗೆ ತೋರಿಸುತ್ತವೆ?

5 ಯೆಶಾಯನ ಮೂಲಕ ಯೆಹೋವನು ಹೇಳುವುದು: “ಎತ್ತು ಯಜಮಾನನನ್ನು, ಕತ್ತೆ ಒಡೆಯನ [ಕೊಟ್ಟಿಗೆಯ] ಗೋದಲಿಯನ್ನು ತಿಳಿದಿರುವವು; ಇಸ್ರಾಯೇಲ್‌ ಜನರಿಗೋ ತಿಳುವಳಿಕೆಯಿಲ್ಲ, ನನ್ನ ಪ್ರಜೆಯು ಆಲೋಚಿಸುವದಿಲ್ಲ.” (ಯೆಶಾಯ 1:⁠3) * ಎತ್ತು ಮತ್ತು ಕತ್ತೆ, ಮಧ್ಯಪೂರ್ವದಲ್ಲಿ ಜೀವಿಸುವವರಿಗೆ ಪರಿಚಿತವಾಗಿರುವ ಕೆಲಸದ ಪ್ರಾಣಿಗಳು. ಈ ಕನಿಷ್ಠ ವರ್ಗದ ಪ್ರಾಣಿಗಳು ಸಹ ಒಂದು ರೀತಿಯ ನಂಬಿಗಸ್ತಿಕೆಯನ್ನು ತೋರಿಸುತ್ತವೆ, ತಾವು ಒಬ್ಬ ಧಣಿಗೆ ಸೇರಿದವರಾಗಿದ್ದೇವೆಂಬ ತೀವ್ರ ಅರಿವು ಅವುಗಳಿಗಿವೆಯೆಂಬುದನ್ನು ಯೆಹೂದದವರು ಅಲ್ಲಗಳೆಯಲಾರರೆಂಬುದು ಖಂಡಿತ. ಈ ಸಂಬಂಧದಲ್ಲಿ, ಒಂದು ಮಧ್ಯಪೂರ್ವ ನಗರದಲ್ಲಿ ಬೈಬಲ್‌ ಸಂಶೋಧಕನೊಬ್ಬನು ದಿನಾಂತ್ಯದಲ್ಲಿ ಏನನ್ನು ನೋಡಿದನೆಂಬುದನ್ನು ಪರಿಗಣಿಸಿರಿ: “ಎತ್ತುಗಳು ಪಟ್ಟಣದೊಳಕ್ಕೆ ಪ್ರವೇಶಿಸಿದೊಡನೆ ಚದರಲಾರಂಭಿಸಿದವು. ಪ್ರತಿಯೊಂದು ಎತ್ತಿಗೆ ಅದರ ಯಜಮಾನನು ಯಾರೆಂದು, ಅವನ ಮನೆ ಯಾವುದೆಂದು ಚೆನ್ನಾಗಿ ತಿಳಿದಿತ್ತು. ಅಗಲಕಿರಿದಾದ ಮತ್ತು ಅಂಕುಡೊಂಕಾದ ಓಣಿಗಳ ಕಲಸು ಮೆಲಸಿನಲ್ಲಿ ಅವು ಸ್ವಲ್ಪವೂ ಗಲಿಬಿಲಿಗೊಳ್ಳಲಿಲ್ಲ. ಕತ್ತೆಯಾದರೊ, ಸೀದಾ ಬಾಗಿಲಿನೊಳಕ್ಕೆ ಹೋಗಿ ‘ತನ್ನ ಯಜಮಾನನ ಮಂಚ’ವನ್ನು ಸಮೀಪಿಸಿತು.”

6. ಯೆಹೂದದ ಜನರು ತಿಳಿವಳಿಕೆಯಿಂದ ವರ್ತಿಸಲು ಹೇಗೆ ತಪ್ಪಿರುತ್ತಾರೆ?

6 ಇಂತಹ ದೃಶ್ಯಗಳು ಯೆಶಾಯನ ದಿನಗಳಲ್ಲಿ ಸಾಮಾನ್ಯವಾಗಿರುವುದರಿಂದ, ಯೆಹೋವನ ಸಂದೇಶದ ಉದ್ದೇಶವು ಸ್ಪಷ್ಟವಾಗುತ್ತದೆ: ಒಂದು ಪಾಶವ ಮೃಗಕ್ಕೆ ತನ್ನ ಯಜಮಾನನನ್ನೂ ತನ್ನ ಗೋದಲಿಯನ್ನೂ ಗುರುತಿಸಲಿಕ್ಕೆ ಸಾಧ್ಯವಿರುವಲ್ಲಿ, ಯೆಹೂದದ ಜನರು ಯೆಹೋವನನ್ನು ಬಿಟ್ಟಿರುವುದಕ್ಕೆ ಯಾವ ನೆವವನ್ನು ಕೊಡಬಲ್ಲರು? ಅವರು ‘ಆಲೋಚಿಸದೆ’ ಇದ್ದದ್ದು ಸತ್ಯ. ತಮ್ಮ ಸಮೃದ್ಧಿ, ತಮ್ಮ ಸಾಕ್ಷಾತ್‌ ಅಸ್ತಿತ್ವವು ಸಹ, ಯೆಹೋವನ ಮೇಲೆ ಅವಲಂಬಿಸಿತ್ತೆಂಬ ನಿಜತ್ವದ ಪ್ರಜ್ಞೆಯೇ ಅವರಿಗಿರಲಿಲ್ಲವೊ ಎಂಬಂತೆ ಇದಿತ್ತು. ಯೆಹೋವನು ಆಗಲೂ ಅವರನ್ನು “ನನ್ನ ಪ್ರಜೆಯೇ” ಎಂದು ಸಂಬೋಧಿಸಿದ್ದು ದೇವರ ಕೃಪೆಯೇ ಆಗಿತ್ತೆಂಬುದು ನಿಶ್ಚಯ!

7. ಯೆಹೋವನ ಏರ್ಪಾಡುಗಳನ್ನು ಗಣ್ಯಮಾಡುತ್ತೇವೆಂದು ನಾವು ತೋರಿಸಸಾಧ್ಯವಿರುವ ಕೆಲವು ವಿಧಗಳಾವುವು?

7 ಯೆಹೋವನು ನಮಗೆ ಮಾಡಿರುವ ಸಕಲ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸಲು ತಪ್ಪಿ, ತಿಳಿವಳಿಕೆಯಿಲ್ಲದವರಾಗಿ ವರ್ತಿಸಲು ನಾವು ಎಂದೂ ಬಯಸಬಾರದು! ಅದಕ್ಕೆ ಬದಲು, “ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು” ಎಂದು ಹೇಳಿದ ಕೀರ್ತನೆಗಾರನಾದ ದಾವೀದನನ್ನು ನಾವು ಅನುಕರಿಸಬೇಕು. (ಕೀರ್ತನೆ 9:⁠1) ಈ ಸಂಬಂಧದಲ್ಲಿ ಯೆಹೋವನ ಜ್ಞಾನವನ್ನು ಅವಿರತವಾಗಿ ತೆಗೆದುಕೊಳ್ಳುವುದು ನಮಗೆ ಬೇಕಾದ ಉತ್ತೇಜನವನ್ನು ನೀಡುವುದು, ಏಕೆಂದರೆ “ಅತಿ ಪರಿಶುದ್ಧನ ಜ್ಞಾನವೇ ತಿಳಿವಳಿಕೆಯಾಗಿದೆ” (NW) ಎನ್ನುತ್ತದೆ ಬೈಬಲು. (ಜ್ಞಾನೋಕ್ತಿ 9:10) ಯೆಹೋವನ ಆಶೀರ್ವಾದಗಳ ಕುರಿತು ದಿನಾಲೂ ಮನನ ಮಾಡುವುದು, ನಾವು ಕೃತಜ್ಞರಾಗಿರುವಂತೆ ಮತ್ತು ನಮ್ಮ ಸ್ವರ್ಗೀಯ ಪಿತನನ್ನು ಉಪೇಕ್ಷಿಸದಂತೆ ಸಹಾಯಮಾಡುವುದು. (ಕೊಲೊಸ್ಸೆ 3:15) “ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು; ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು,” ಎನ್ನುತ್ತಾನೆ ಯೆಹೋವನು.​—⁠ಕೀರ್ತನೆ 50:⁠23.

‘ಇಸ್ರಾಯೇಲ್ಯರ ಸದಮಲಸ್ವಾಮಿಗೆ’ ಭಯಂಕರ ಅಪಮಾನ

8. ಯೆಹೂದದವರನ್ನು “ಪಾಪಿಷ್ಠಜನ” ಎಂದು ಏಕೆ ಕರೆಯಸಾಧ್ಯವಿದೆ?

8 ಯೆಶಾಯನು ಯೆಹೂದ ಜನಾಂಗಕ್ಕೆ ಬಿರುಸಾದ ಮಾತುಗಳಿಂದ ತನ್ನ ಸಂದೇಶವನ್ನು ಮುಂದುವರಿಸುತ್ತಾನೆ: “ಪಾಪಿಷ್ಠಜನವೇ, ಅಧರ್ಮಭಾರಹೊತ್ತಿರುವ ಪ್ರಜೆಯೇ, ದುಷ್ಟಜಾತಿಯೇ, ದ್ರೋಹಿಗಳಾದ ಮಕ್ಕಳೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನನ್ನು ತೊರೆದಿದ್ದಾರೆ, ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಧಿಕ್ಕರಿಸಿದ್ದಾರೆ, ಆತನಿಗೆ ಬೆನ್ನುಮಾಡಿ ಬೇರೆಯಾಗಿದ್ದಾರೆ.” (ಯೆಶಾಯ 1:⁠4) ದುಷ್ಕೃತ್ಯಗಳು ಒಂದರ ಮೇಲೊಂದು ಶೇಖರವಾಗಿ ಕುಗ್ಗುಬಡಿಯುವ ಹೊರೆಯಾಗಬಲ್ಲವು. ಅಬ್ರಹಾಮನ ದಿನಗಳಲ್ಲಿ, ಸೊದೋಮ್‌ ಗೊಮೋರಗಳ ಪಾಪವನ್ನು ಯೆಹೋವನು ‘ಘೋರವಾದ ಹೊರೆ’ಯಾಗಿ ವರ್ಣಿಸಿದನು. (ಆದಿಕಾಂಡ 18:20) ಅದಕ್ಕೆ ಹೋಲಿಕೆಯಾದ ಪಾಪವು ಈಗ ಯೆಹೂದದ ಜನರಲ್ಲಿ ಕಂಡುಬರುತ್ತದೆ. ಏಕೆಂದರೆ ಯೆಶಾಯನು, ಅವರು “ಅಧರ್ಮಭಾರಹೊತ್ತಿರುವ” ಜನರೆಂದು ಹೇಳುತ್ತಾನೆ. ಅಲ್ಲದೆ, ಅವರನ್ನು “ದುಷ್ಟಜಾತಿ” “ದ್ರೋಹಿಗಳಾದ ಮಕ್ಕಳು” ಎಂದು ಸಹ ಅವನು ಕರೆಯುತ್ತಾನೆ. ಹೌದು, ಯೆಹೂದದ ಜನರು ಬಾಲಾಪರಾಧಿಗಳಂತಿದ್ದಾರೆ. ಅವರು “ಬೆನ್ನುಮಾಡಿ” ನಿಂತಿದ್ದಾರೆ. ಅಥವಾ, ನ್ಯೂ ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಷನ್‌ ಹೇಳುವಂತೆ, ಅವರು ತಮ್ಮ ಪಿತನಿಂದ “ತೀರ ವಿಮುಖ”ರಾಗಿದ್ದಾರೆ.

9. “ಇಸ್ರಾಯೇಲ್ಯರ ಸದಮಲಸ್ವಾಮಿ” ಎಂಬ ವಾಕ್ಸರಣಿಯ ವಿಶೇಷತೆಯೇನು?

9 ಯೆಹೂದದ ಜನರ ಮೊಂಡು ಮಾರ್ಗದಿಂದಾಗಿ, ಅವರು ‘ಇಸ್ರಾಯೇಲ್ಯರ ಸದಮಲಸ್ವಾಮಿಗೆ’ ಘೋರವಾದ ಅಗೌರವವನ್ನು ತೋರಿಸುತ್ತಿದ್ದಾರೆ. ಯೆಶಾಯನ ಪುಸ್ತಕದಲ್ಲಿ 25 ಬಾರಿ ಕಂಡುಬರುವ ಈ ವಾಕ್ಸರಣಿಯ ವಿಶೇಷತೆಯೇನು? ಸದಮಲ ಅಂದರೆ, ಶುದ್ಧನೂ ನಿರ್ಮಲನೂ ಆಗಿರುವುದೆಂದರ್ಥ. ಮತ್ತು ಯೆಹೋವನು ಪವಿತ್ರತೆಯಲ್ಲಿ ಪರಮನು. (ಪ್ರಕಟನೆ 4:⁠8) ಮಹಾಯಾಜಕನ ಮುಂಡಾಸಿನ ಮೇಲೆ ಹೊಳೆಯುವ ಚಿನ್ನದ ತಗಡಿನಲ್ಲಿ ಕೊರೆದಿದ್ದ, “ಪವಿತ್ರತೆ ಯೆಹೋವನಿಗೆ ಸೇರಿದೆ” (NW) ಎಂಬ ಪದಗಳನ್ನು ನೋಡುವಾಗಲೆಲ್ಲ ಇಸ್ರಾಯೇಲ್ಯರಿಗೆ ಇದು ಜ್ಞಾಪಕಕ್ಕೆ ಬರುತ್ತದೆ. (ವಿಮೋಚನಕಾಂಡ 39:30) ಹೀಗೆ, “ಇಸ್ರಾಯೇಲ್ಯರ ಸದಮಲಸ್ವಾಮಿ” ಎಂದು ಯೆಹೋವನನ್ನು ಸೂಚಿಸಿ ಮಾತಾಡುವಾಗ ಯೆಶಾಯನು ಯೆಹೂದದ ಪಾಪದ ಗುರುತರ ಸ್ಥಿತಿಯನ್ನು ಒತ್ತಿಹೇಳುತ್ತಾನೆ. ಈ ದ್ರೋಹಿಗಳು ತಮ್ಮ ಪೂರ್ವಜರಿಗೆ ಕೊಡಲ್ಪಟ್ಟಿದ್ದ, “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂಬ ಆಜ್ಞೆಯನ್ನು ನೇರವಾಗಿ ಮುರಿಯುತ್ತಿದ್ದಾರೆ!​—⁠ಯಾಜಕಕಾಂಡ 11:⁠44.

10. ‘ಇಸ್ರಾಯೇಲ್ಯರ ಸದಮಲಸ್ವಾಮಿಗೆ’ ಅಗೌರವವನ್ನು ತೋರಿಸುವುದರಿಂದ ನಾವು ಹೇಗೆ ದೂರವಿರಬಲ್ಲೆವು?

10 ಇಂದು ಕ್ರೈಸ್ತರು, “ಇಸ್ರಾಯೇಲ್ಯರ ಸದಮಲಸ್ವಾಮಿ”ಯನ್ನು ಅಗೌರವಿಸಿದ ಯೆಹೂದದವರ ಮಾದರಿಯನ್ನು ಅನುಸರಿಸುವುದರಿಂದ ದೂರವಿರಬೇಕು. ಅವರು ಯೆಹೋವನ ಪಾವಿತ್ರ್ಯವನ್ನು ಅನುಕರಿಸಬೇಕು. (1 ಪೇತ್ರ 1:15, 16) ಅವರು “ಕೆಟ್ಟತನವನ್ನು ಹಗೆ”ಮಾಡುವುದು ಅಗತ್ಯ. (ಕೀರ್ತನೆ 97:10) ಲೈಂಗಿಕ ದುರಾಚಾರ, ವಿಗ್ರಹಾರಾಧನೆ, ಕಳ್ಳತನ ಮತ್ತು ಕುಡುಕತನದಂತಹ ಅಶುದ್ಧಾಚಾರಗಳು ಕ್ರೈಸ್ತ ಸಭೆಯನ್ನು ಭ್ರಷ್ಟಗೊಳಿಸಬಲ್ಲವು. ಈ ಕಾರಣದಿಂದಲೇ, ಇಂತಹ ಆಚಾರಗಳನ್ನು ನಿಲ್ಲಿಸಲು ನಿರಾಕರಿಸುವವರನ್ನು ಸಭೆಯಿಂದ ಬಹಿಷ್ಕರಿಸಲಾಗುತ್ತದೆ. ಅಂತಿಮವಾಗಿ, ಪಶ್ಚಾತ್ತಾಪವಿಲ್ಲದವರಾಗಿ ಇಂತಹ ಅಶುದ್ಧಾಚಾರವನ್ನು ಅನುಸರಿಸುವವರು ದೇವರ ರಾಜ್ಯ ಸರಕಾರದ ಆಶೀರ್ವಾದಗಳನ್ನು ಅನುಭವಿಸುವುದರಿಂದ ತಡೆಯಲ್ಪಡುವರು. ಇಂತಹ ಸಕಲ ದುಷ್ಕೃತ್ಯಗಳು “ಇಸ್ರಾಯೇಲಿನ ಸದಮಲಸ್ವಾಮಿ”ಗೆ ಎಂತಹ ಘೋರವಾದ ಅವಮಾನವಾಗಿರುತ್ತವೆ.​—⁠ರೋಮಾಪುರ 1:26, 27; 1 ಕೊರಿಂಥ 5:​6-11; 6:​9, 10.

ಮುಡಿಯಿಂದ ಅಡಿಯ ವರೆಗೆ ರೋಗ

11, 12. (ಎ) ಯೆಹೂದದ ದುಃಸ್ಥಿತಿಯನ್ನು ವರ್ಣಿಸಿರಿ. (ಬಿ) ನಾವು ಯೆಹೂದಕ್ಕಾಗಿ ಏಕೆ ದುಃಖಪಡಬಾರದು?

11 ಯೆಶಾಯನು ಆಮೇಲೆ ಯೆಹೂದದ ಜನರಿಗೆ ಅವರ ಕಾಯಿಲೆಯ ಸ್ಥಿತಿಯನ್ನು ತೋರಿಸುತ್ತ, ಅವರೊಂದಿಗೆ ತರ್ಕಿಸಲು ಪ್ರಯತ್ನಿಸುತ್ತಾನೆ. ಅವನು ಕೇಳುವುದು: “ಏ ದ್ರೋಹವನ್ನು [“ದಂಗೆಯನ್ನು,” NW] ಹೆಚ್ಚಿಸಿ ಹೆಚ್ಚಿಸಿ ಪೆಟ್ಟಿಗೆ ಗುರಿಯಾಗುತ್ತೀರಿ?” ಕಾರ್ಯತಃ, ಯೆಶಾಯನು ಅವರನ್ನು, ‘ನೀವು ಸಾಕಷ್ಟು ಬಾಧೆ ಪಟ್ಟಿರುವುದಿಲ್ಲವೊ? ದ್ರೋಹವನ್ನು ಮುಂದುವರಿಸುತ್ತ ನೀವೇಕೆ ಇನ್ನೂ ಹೆಚ್ಚು ಹಾನಿ ಮಾಡಿಕೊಳ್ಳಬೇಕು?’ ಎಂದು ಕೇಳುತ್ತ ಮುಂದುವರಿಸುವುದು: “ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ. ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು ಬಾಸುಂಡೆ ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ.” (ಯೆಶಾಯ 1:5, 6ಎ) ಯೆಹೂದವು ಹೇಸಿಕೆಯ, ರೋಗಗ್ರಸ್ಥ ಸ್ಥಿತಿಯಲ್ಲಿ, ಮುಡಿಯಿಂದ ಅಡಿಯ ವರೆಗೆ ಆತ್ಮಿಕ ಕಾಯಿಲೆಯಿಂದ ತುಂಬಿದೆ. ಇದು ಭಯಂಕರವಾದ ರೋಗನಿರ್ಣಯವೇ ಸರಿ!

12 ಹಾಗಾದರೆ, ನಾವು ಯೆಹೂದಕ್ಕಾಗಿ ದುಃಖಪಡಬೇಕೊ? ಇಲ್ಲ! ಶತಮಾನಗಳಿಗೆ ಮುಂಚಿತವಾಗಿ, ಇಡೀ ಇಸ್ರಾಯೇಲ್‌ ಜನಾಂಗಕ್ಕೆ ಅವಿಧೇಯತೆಗಾಗಿ ಬರುವ ಶಿಕ್ಷೆಯ ವಿಷಯದಲ್ಲಿ ಎಚ್ಚರಿಸಲಾಗಿತ್ತು. “ಯೆಹೋವನು ನಿಮ್ಮ ಮೊಣಕಾಲುಗಳಲ್ಲಿಯೂ ತೊಡೆಗಳಲ್ಲಿಯೂ ಮತ್ತು ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ವಾಸಿಯಾಗದ ಕೆಟ್ಟ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಬಾಧಿಸುವನು,” ಎಂದು ಭಾಗಶಃ ಅವರಿಗೆ ಹೇಳಲಾಗಿತ್ತು. (ಧರ್ಮೋಪದೇಶಕಾಂಡ 28:35) ಯೆಹೂದವು ಈಗ ಸೂಚಕಾರ್ಥದಲ್ಲಿ ತನ್ನ ಹಟಮಾರಿತನಕ್ಕಾಗಿ ಆ ದುಷ್ಪರಿಣಾಮಗಳನ್ನೇ ಅನುಭವಿಸುತ್ತಿದೆ. ಯೆಹೂದದ ಜನರು ಯೆಹೋವನಿಗೆ ಕೇವಲ ವಿಧೇಯತೆಯನ್ನು ತೋರಿಸುತ್ತಿದ್ದಲ್ಲಿ ಇವೆಲ್ಲದರಿಂದ ತಪ್ಪಿಸಿಕೊಳ್ಳಬಹುದಾಗಿತ್ತು.

13, 14. (ಎ) ಯೆಹೂದದ ಮೇಲೆ ಯಾವ ಗಾಯಗಳನ್ನು ಮಾಡಲಾಗಿದೆ? (ಬಿ) ಯೆಹೂದದ ಕಷ್ಟಾನುಭವಗಳು ಅದು ತನ್ನ ದ್ರೋಹ ಮಾರ್ಗವನ್ನು ಬಿಡುವಂತೆ ಮಾಡುತ್ತದೊ?

13 ಯೆಶಾಯನು ಯೆಹೂದದ ದುರವಸ್ಥೆಯನ್ನು ವರ್ಣಿಸುತ್ತ ಹೋಗುತ್ತಾನೆ. “ಪೆಟ್ಟು ಬಾಸುಂಡೆ ಮಾಗದ [“ಇರಿತಗಳು, ಜಜ್ಜುಗಾಯಗಳು, ಹೊಸ ಬರೆಗಳು,” NW] ಹೊರತು ಏನೂ ಸೌಖ್ಯವಿಲ್ಲ; ಅವನ್ನು ಹಿಸಕಿ ಮುಚ್ಚಿಲ್ಲ, ಕಟ್ಟಿಲ್ಲ, ಎಣ್ಣೆಸವರಿ ಮೃದುಮಾಡಿಲ್ಲ.” (ಯೆಶಾಯ 1:⁠6) ಇಲ್ಲಿ ಪ್ರವಾದಿಯು ಮೂರು ರೀತಿಯ ಗಾಯಗಳನ್ನು ಸೂಚಿಸಿ ಹೇಳುತ್ತಾನೆ: ಇರಿತಗಳು (ಖಡ್ಗ ಇಲ್ಲವೆ ಚೂರಿಯಿಂದಾದ ಕೊಯ್ತಗಳು), ಜಜ್ಜುಗಾಯಗಳು (ಏಟಿನಿಂದಾಗುವ ಬಾಸುಂಡೆಗಳು) ಮತ್ತು ಹೊಸ ಬರೆಗಳು (ಇತ್ತೀಚಿನ, ಗುಣವಾಗದಂತೆ ಕಾಣುವ ಮುಚ್ಚಿಲ್ಲದ ಹುಣ್ಣುಗಳು). ಇಲ್ಲಿ ಕೊಡಲ್ಪಟ್ಟಿರುವ ಚಿತ್ರಣವು, ಪ್ರತಿಯೊಂದು ವಿಧದಲ್ಲಿಯೂ ಕಠಿನವಾಗಿ ಶಿಕ್ಷಿಸಲ್ಪಟ್ಟಿರುವ, ದೇಹದ ಯಾವ ಭಾಗವೂ ಶಿಕ್ಷೆಯಿಂದ ತಪ್ಪಿಸಿಕೊಂಡಿರದಂಥ ಒಬ್ಬ ಮನುಷ್ಯನದ್ದಾಗಿದೆ. ಯೆಹೂದವು ನಿಜವಾಗಿಯೂ ಒಂದು ಅಪಾಯಕರ ಸ್ಥಿತಿಯಲ್ಲಿದೆ.

14 ಆದರೆ ಯೆಹೂದದ ಈ ದುರವಸ್ಥೆಯು, ಅದನ್ನು ಯೆಹೋವನ ಬಳಿಗೆ ಹಿಂದಿರುಗುವಂತೆ ಮಾಡುತ್ತದೊ? ಇಲ್ಲ! ಏಕೆಂದರೆ, ಯೆಹೂದವು ಜ್ಞಾನೋಕ್ತಿ 29:1ರಲ್ಲಿ ವರ್ಣಿಸಿರುವ ದಂಗೆಕೋರನಂತಿದೆ: “ಬಹಳವಾಗಿ ಗದರಿಸಿದರೂ ತಗ್ಗದವನು ಏಳದ ಹಾಗೆ ಫಕ್ಕನೆ [“ಅದೂ, ವಾಸಿಯಾಗದ ರೀತಿಯಲ್ಲಿ,” NW] ಮುರಿದು ಬೀಳುವನು.” ಹೌದು, ಆ ಜನಾಂಗವು ವಾಸಿಯಾಗಲು ಸಾಧ್ಯವಿಲ್ಲದ್ದಾಗಿ ಕಾಣುತ್ತದೆ. ಯೆಶಾಯನು ವರ್ಣಿಸಿರುವಂತೆ, ಅದರ ಇರಿತಗಳನ್ನು “ಹಿಸಕಿ ಮುಚ್ಚಿಲ್ಲ, ಕಟ್ಟಿಲ್ಲ, ಎಣ್ಣೆಸವರಿ ಮೃದುಮಾಡಿಲ್ಲ.” * ಒಂದು ವಿಧದಲ್ಲಿ, ಯೆಹೂದವು ತೆರೆದಿರುವ, ಬಟ್ಟೆ ಸುತ್ತಿಲ್ಲದ, ಪೂರ್ತಿ ಹರಡಿರುವ ಹುಣ್ಣಿನಂತಿದೆ.

15. ನಾವು ಆತ್ಮಿಕ ಕಾಯಿಲೆಗಳಿಂದ ಯಾವ ವಿಧಗಳಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಬಹುದು?

15 ಯೆಹೂದದಿಂದ ಪಾಠವನ್ನು ಕಲಿಯುತ್ತಾ, ಆತ್ಮಿಕ ಕಾಯಿಲೆಯ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಶಾರೀರಿಕ ಕಾಯಿಲೆಯಂತೆ ಅದು ನಮ್ಮಲ್ಲಿ ಯಾರಿಗೂ ಅಂಟಿಕೊಳ್ಳುವ ಸಾಧ್ಯತೆಯಿದೆ. ಎಷ್ಟೆಂದರೂ, ನಮ್ಮಲ್ಲಿ ಮಾಂಸಿಕ ಆಶೆಗಳಿಗೆ ಬಲಿಬೀಳದಿರುವವನು ಯಾವನು? ಲೋಭ ಮತ್ತು ಅತಿರೇಕ ಸುಖಾನುಭವದ ಆಶೆ ನಮ್ಮ ಹೃದಯಗಳಲ್ಲಿ ಬೇರೂರುವುದು ಸಾಧ್ಯ. ಆದಕಾರಣ, “ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದು”ಕೊಳ್ಳಲು ನಾವು ನಮ್ಮನ್ನು ತರಬೇತುಗೊಳಿಸಿಕೊಳ್ಳುವುದು ಅಗತ್ಯ. (ರೋಮಾಪುರ 12:⁠9) ಅಲ್ಲದೆ, ದೇವರಾತ್ಮದ ಫಲಗಳನ್ನು ನಮ್ಮ ದೈನಂದಿನ ಜೀವಿತಗಳಲ್ಲಿ ನಾವು ಬೆಳೆಸಿಕೊಳ್ಳುವುದೂ ಆವಶ್ಯಕ. (ಗಲಾತ್ಯ 5:​22, 23) ಹಾಗೆ ಮಾಡುವ ಮೂಲಕ, ಯೆಹೂದವನ್ನು ಪೀಡಿಸಿದ ಸ್ಥಿತಿಗತಿಯಿಂದ, ಅಂದರೆ ಆತ್ಮಿಕವಾಗಿ ಮುಡಿಯಿಂದ ಅಡಿಯ ವರೆಗೆ ಕಾಯಿಲೆ ಬೀಳುವುದರಿಂದ ನಾವು ತಪ್ಪಿಸಿಕೊಳ್ಳುವೆವು.

ಹಾಳುಬಿದ್ದ ದೇಶ

16. (ಎ) ಯೆಹೂದದ ಭೂಪ್ರದೇಶದ ಸ್ಥಿತಿಯನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ? (ಬಿ) ಈ ಮಾತುಗಳು ಪ್ರಾಯಶಃ ಆಹಾಜನ ಆಳ್ವಿಕೆಯ ಸಮಯದಲ್ಲಿ ಹೇಳಲ್ಪಟ್ಟವೆಂದು ಕೆಲವರು ಹೇಳುವುದೇಕೆ, ಆದರೆ ನಾವು ಅವನ್ನು ಹೇಗೆ ಅರ್ಥಮಾಡಿಕೊಳ್ಳಬಹುದು?

16 ಈಗ ಯೆಶಾಯನು ತನ್ನ ವೈದ್ಯಕೀಯ ಹೋಲಿಕೆಯನ್ನು ಬಿಟ್ಟು ಯೆಹೂದದ ಭೂಪ್ರದೇಶದ ದುಸ್ಥಿತಿಯನ್ನು ತಿಳಿಸುತ್ತಾನೆ. ತಾನು ಯುದ್ಧಕಲೆಗಳುಳ್ಳ ಬಯಲನ್ನು ನೋಡುತ್ತಿದ್ದೇನೊ ಎಂಬಂತೆ, ಅವನನ್ನುವುದು: “ನಿಮ್ಮ ದೇಶವು ಹಾಳಾಗಿದೆ; ನಿಮ್ಮ ಪಟ್ಟಣಗಳು ಸುಟ್ಟುಹೋಗಿವೆ; ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ; ಅನ್ಯದೇಶಗಳು ನಾಶನವಾದಂತೆಯೇ ನಿಮ್ಮ ಭೂಮಿಯೂ ಹಾಳಾಯಿತು.” (ಯೆಶಾಯ 1:⁠7) ಕೆಲವು ವಿದ್ವಾಂಸರ ಹೇಳಿಕೆಯೇನಂದರೆ, ಈ ಮಾತುಗಳು ಯೆಶಾಯ ಪುಸ್ತಕದ ಆರಂಭದಲ್ಲಿ ಕಂಡುಬರುತ್ತವಾದರೂ, ಅವನ್ನು ಪ್ರವಾದಿಯು ಪ್ರಾಯಶಃ ತನ್ನ ಅನಂತರದ ಪ್ರವಾದನಾ ಸೇವೆಯ ಸಮಯದಲ್ಲಿ, ಪ್ರಾಯಶಃ ದುಷ್ಟ ಅರಸನಾಗಿದ್ದ ಆಹಾಜನ ಆಳ್ವಿಕೆಯಲ್ಲಿ ನುಡಿದಿದ್ದಿರಬಹುದು. ಉಜ್ಜೀಯನ ಆಳ್ವಿಕೆಯು ಸಮೃದ್ಧಿಯುಳ್ಳದ್ದಾಗಿದ್ದುದರಿಂದ, ಇಂತಹ ವರ್ಣನೆಗೆ ಅದು ತಕ್ಕದ್ದಾಗಿರಲಿಲ್ಲವೆಂಬುದು ಅವರ ಪ್ರತಿಪಾದನೆ. ಯೆಶಾಯನ ಪುಸ್ತಕವು ಕಾಲಕ್ರಮಾನುಸಾರವಾಗಿ ಸಂಕಲಿಸಲ್ಪಟ್ಟಿದೆಯೆಂದು ನಿಶ್ಚಯವಾಗಿ ಹೇಳಸಾಧ್ಯವಿಲ್ಲವೆಂಬುದು ಒಪ್ಪತಕ್ಕ ವಿಷಯವೇ. ಆದರೂ, ಹಾಳಾಗುವಿಕೆಯ ಕುರಿತ ಯೆಶಾಯನ ಮಾತುಗಳು ಪ್ರಾಯಶಃ ಪ್ರವಾದನಾರೂಪದ್ದಾಗಿವೆ. ಈ ಮೇಲಿನ ಹೇಳಿಕೆಯನ್ನು ಮಾಡಿದಾಗ, ಯೆಶಾಯನು ಬೈಬಲಿನಲ್ಲಿ ಬೇರೆ ಕಡೆಗಳಲ್ಲಿ ಉಪಯೋಗಿಸಲಾಗಿರುವ ವಿಧಾನವನ್ನು, ಅಂದರೆ ಒಂದು ಭಾವೀ ಘಟನೆಯನ್ನು ಅದು ಆಗಲೇ ನೆರವೇರಿದೆಯೊ ಎಂಬಂತೆ ವರ್ಣಿಸುವ ವಿಧಾನವನ್ನು ಉಪಯೋಗಿಸುತ್ತಿರಬಹುದು. ಹೀಗೆ ಅವನು ಪ್ರವಾದನೆಯ ನೆರವೇರಿಕೆಯ ಖಾತರಿಯನ್ನು ಒತ್ತಿ ಹೇಳುತ್ತಿದ್ದಿರಬಹುದು.​—⁠ಹೋಲಿಸಿ ಪ್ರಕಟನೆ 11:⁠15.

17. ಯೆಹೂದದ ಜನರಿಗೆ ಹಾಳುಬೀಳುವಿಕೆಯ ಕುರಿತಾದ ಪ್ರವಾದನಾತ್ಮಕ ವರ್ಣನೆಯು ಆಶ್ಚರ್ಯವನ್ನು ಉಂಟುಮಾಡಬಾರದೇಕೆ?

17 ಹೇಗಿದ್ದರೂ, ಯೆಹೂದದ ಹಾಳುಬೀಳುವಿಕೆಯ ಈ ಪ್ರವಾದನಾ ವರ್ಣನೆಯು ಈ ಹಟಮಾರಿಗಳೂ ಅವಿಧೇಯರೂ ಆದ ಜನರಿಗೆ ಆಶ್ಚರ್ಯವನ್ನು ಉಂಟುಮಾಡಬಾರದಾಗಿತ್ತು. ಯಾಕೆಂದರೆ ಅವರು ದಂಗೆಕೋರರಾಗುವಲ್ಲಿ ಏನು ಸಂಭವಿಸುವುದೆಂದು ಯೆಹೋವನು ಶತಮಾನಗಳ ಹಿಂದೆಯೇ ಎಚ್ಚರಿಕೆಯನ್ನು ಕೊಟ್ಟಿದ್ದನು. ಆತನು ಹೇಳಿದ್ದು: “ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಹಾಳುಮಾಡಿದಾಗ ಅದರಲ್ಲಿ ಒಕ್ಕಲಾಗುವ ನಿಮ್ಮ ಶತ್ರುಗಳೂ ಅದನ್ನು ನೋಡಿ ಆಶ್ಚರ್ಯಪಡುವರು. ನಿಮ್ಮನ್ನು ಅನ್ಯಜನಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು. ನಿಮ್ಮ ದೇಶವು ಹಾಳಾಗುವದು, ನಿಮ್ಮ ಪಟ್ಟಣಗಳು ನಾಶವಾಗುವವು.”​—⁠ಯಾಜಕಕಾಂಡ 26:32, 33; 1 ಅರಸುಗಳು 9:​6-8.

18-20. ಯೆಶಾಯ 1:​7, 8ರ ಮಾತುಗಳು ಯಾವಾಗ ನೆರವೇರುತ್ತವೆ, ಮತ್ತು ಈ ಸಮಯದಲ್ಲಿ ಯೆಹೋವನು ಹೇಗೆ ‘ಕೊಂಚ ಜನವನ್ನು ಉಳಿಸುತ್ತಾನೆ’?

18ಯೆಶಾಯ 1:​7, 8ರ ಮಾತುಗಳು, ಅಶ್ಶೂರದ ಆಕ್ರಮಣಗಳ ಸಮಯದಲ್ಲಿ ನಡೆಯುವ ಇಸ್ರಾಯೇಲಿನ ನಾಶನ ಮತ್ತು ಯೆಹೂದದಲ್ಲಾಗುವ ವ್ಯಾಪಕವಾದ ನಾಶನ ಮತ್ತು ಕಷ್ಟಾನುಭವದಲ್ಲಿ ನೆರವೇರಿತೆಂಬುದು ವ್ಯಕ್ತ. (2 ಅರಸುಗಳು 17:​5, 18; 18:​11, 13; 2 ಪೂರ್ವಕಾಲವೃತ್ತಾಂತ 29:​8, 9) ಆದರೂ, ಯೆಹೂದವು ಪೂರ್ಣವಾಗಿ ನಾಶಗೊಳ್ಳಲಿಲ್ಲ. ಯೆಶಾಯನು ಹೇಳುವುದು: “ಚೀಯೋನ್‌ ನಗರಿಯೊಂದೇ ಉಳಿದು ದ್ರಾಕ್ಷೇತೋಟದ ಮಂಚಿಕೆಯಂತೆಯೂ ಸವುತೆಯ ಹೊಲದ ಗುಡಸಲಿನ ಹಾಗೂ ಮುತ್ತಿದ ಪಟ್ಟಣದೋಪಾದಿಯಲ್ಲಿಯೂ ಇದೆ.”​—ಯೆಶಾಯ 1:⁠8.

19 ಈ ಎಲ್ಲ ಧ್ವಂಸದ ಮಧ್ಯೆ, “ಚೀಯೋನ್‌ ನಗರಿ” ಅಥವಾ ಯೆರೂಸಲೇಮು ಸ್ಥಿರವಾಗಿ ನಿಂತುಕೊಂಡಿರುವುದು. ಆದರೆ ಅದು ದ್ರಾಕ್ಷೇತೋಟದ ಗುಡಿಸಲಿನಂತೆ ಅಥವಾ ಸೌತೆ ಹೊಲದ ಕಾವಲುಗಾರನ ಚಪ್ಪರದಂತೆ ಸುಲಭವಾಗಿ ವಶಪಡಿಸಿಕೊಳ್ಳುವಂಥದ್ದಾಗಿ ಕಾಣುವುದು. 19ನೆಯ ಶತಮಾನದ ಒಬ್ಬ ವಿದ್ವಾಂಸನು, ನೈಲ್‌ ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ಇಂತಹ ಚಪ್ಪರಗಳನ್ನು ನೋಡಿದನು. ಆಗ ಅವನಿಗೆ ಯೆಶಾಯನ ಈ ಮೇಲಿನ ಮಾತುಗಳು ಜ್ಞಾಪಕಕ್ಕೆ ಬಂದವು. ಅವು ಪ್ರಬಲವಾದ “ಬಡಗು ಗಾಳಿಗೆ ಎದುರಾಗಿರುವ ಕೇವಲ ಒಂದು ದುರ್ಬಲ ಬೇಲಿಯಂತಿವೆ” ಎಂದು ಅವನು ವರ್ಣಿಸಿದನು. ಯೆಹೂದದಲ್ಲಿ ಕೊಯ್ಲು ಮುಗಿದಾಗ ಈ ಚಪ್ಪರಗಳನ್ನು, ಒಡೆದು ಕುಸಿದು ಬೀಳುವಂತೆ ಬಿಡಲಾಗುತ್ತಿತ್ತು. ಆದರೆ ಯೆರೂಸಲೇಮು ಅಶ್ಶೂರದ ಸರ್ವವಿಜೇತ ಸೈನ್ಯಗಳ ಮುಂದೆ ಅಷ್ಟು ಕ್ಷುಲ್ಲಕವಾಗಿ ಕಂಡುಬಂದರೂ ಸೋಲದೆ ಪಾರಾಗುವುದು.

20 ಈ ಪ್ರವಾದನಾತ್ಮಕ ಹೇಳಿಕೆಯನ್ನು ಯೆಶಾಯನು ಹೀಗೆ ಮುಗಿಸುತ್ತಾನೆ: “ಸೇನಾಧೀಶ್ವರನಾದ ಯೆಹೋವನು ನಮಗೆ ಕೊಂಚ ಜನವನ್ನೂ ಉಳಿಸದೆ ಹೋಗಿದ್ದರೆ ಸೊದೋಮಿನ ಗತಿಯೇ ನಮಗಾಗುತ್ತಿತ್ತು, ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು.” (ಯೆಶಾಯ 1:⁠9) * ಅಶ್ಶೂರದ ಪ್ರತಾಪದ ವಿರುದ್ಧ ಯೆಹೋವನು ಅಂತಿಮವಾಗಿ ಯೆಹೂದದ ಸಹಾಯಕ್ಕೆ ಬರುವನು. ಸೊದೋಮ್‌ ಗೊಮೋರಗಳಂತೆ ಯೆಹೂದವು ನಿರ್ನಾಮವಾಗದು. ಅದು ಪಾರಾಗಿ ಮುಂದುವರಿಯುವುದು.

21. ಬಾಬೆಲು ಯೆರೂಸಲೇಮನ್ನು ನಾಶಗೊಳಿಸಿದ ಬಳಿಕ, ಯೆಹೋವನು ಏಕೆ ‘ಕೊಂಚ ಜನವನ್ನು ಉಳಿಸಿದನು’?

21 ನೂರಕ್ಕೂ ಹೆಚ್ಚು ವರ್ಷಗಳಾನಂತರ, ಯೆಹೂದವು ಇನ್ನೊಂದು ಆಕ್ರಮಣಕ್ಕೊಳಗಾಯಿತು. ಅಶ್ಶೂರದಿಂದ ಬಂದ ಶಿಕ್ಷೆಯಿಂದ ಜನರು ಯಾವ ಪಾಠವನ್ನೂ ಕಲಿತಿರಲಿಲ್ಲ. “ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.” (2 ಪೂರ್ವಕಾಲವೃತ್ತಾಂತ 36:16) ಬಾಬೆಲಿನ ರಾಜ ನೆಬೂಕದ್ನೆಚ್ಚರನು ಯೆಹೂದವನ್ನು ಸೋಲಿಸಿದ ಆ ಸಮಯದಲ್ಲಿ, “ದ್ರಾಕ್ಷೇತೋಟದ ಮಂಚಿಕೆ”ಯಂತಹ ಸ್ಥಳವೂ ಉಳಿಯಲಿಲ್ಲ. ಯೆರೂಸಲೇಮ್‌ ಕೂಡ ನಾಶವಾಯಿತು. (2 ಪೂರ್ವಕಾಲವೃತ್ತಾಂತ 36:​17-21) ಆದರೂ ಯೆಹೋವನು ‘ಕೊಂಚ ಜನವನ್ನು’ ಉಳಿಸಿದನು. ಯೆಹೂದದವರು 70 ವರ್ಷಕಾಲ ದೇಶಭ್ರಷ್ಟತೆಯನ್ನು ಅನುಭವಿಸಿದರೂ, ಆ ಜನಾಂಗವು, ಅದರಲ್ಲೂ ವಾಗ್ದತ್ತ ಮೆಸ್ಸೀಯನನ್ನು ಹುಟ್ಟಿಸಲಿದ್ದ ದಾವೀದ ವಂಶವು ಮುಂದುವರಿಯುವಂತೆ ಯೆಹೋವನು ಖಂಡಿತ ನೋಡಿಕೊಂಡನು.

22, 23. ಒಂದನೆಯ ಶತಮಾನದಲ್ಲಿ ಯೆಹೋವನು ಏಕೆ ‘ಕೊಂಚ ಜನರನ್ನು ಉಳಿಸಿದನು’?

22 ಒಂದನೆಯ ಶತಮಾನದಲ್ಲಿ ಇಸ್ರಾಯೇಲು ದೇವರ ಒಡಂಬಡಿಕೆಯ ಜನವಾಗಿ ತಮ್ಮ ಅಂತಿಮ ಸಂಕಟಕಾಲವನ್ನು ದಾಟಿದರು. ಯೇಸು ವಾಗ್ದತ್ತ ಮೆಸ್ಸೀಯನಾಗಿ ತನ್ನನ್ನು ಅರ್ಪಿಸಿಕೊಂಡಾಗ ಆ ಜನಾಂಗವು ಅವನನ್ನು ತಿರಸ್ಕರಿಸಲಾಗಿ ಯೆಹೋವನೂ ಅವರನ್ನು ತಳ್ಳಿಹಾಕಿದನು. (ಮತ್ತಾಯ 21:43; 23:​37-39; ಯೋಹಾನ 1:11) ಹಾಗಾದರೆ, ಇನ್ನು ಮುಂದೆ ಯೆಹೋವನಿಗೆ ಭೂಮಿಯಲ್ಲಿ ಒಂದು ವಿಶೇಷವಾದ ಜನಾಂಗವಿರುವುದಿಲ್ಲ ಎಂದು ಇದರರ್ಥವೊ? ಇಲ್ಲ. ಏಕೆಂದರೆ ಯೆಶಾಯ 1:9ಕ್ಕೆ, ಮುಂದೆ ಇನ್ನೊಂದು ನೆರವೇರಿಕೆಯಿದೆಯೆಂದು ಅಪೊಸ್ತಲ ಪೌಲನು ತೋರಿಸಿದನು. ಸೆಪ್ಟುಅಜಿಂಟ್‌ ಭಾಷಾಂತರದಿಂದ ಉದ್ಧರಿಸುತ್ತ ಅವನಂದದ್ದು: “ಯೆಶಾಯನು ಮತ್ತೊಂದು ವಚನದಲ್ಲಿ​—⁠ಸೇನಾಧೀಶ್ವರನಾದ ಕರ್ತನು [“ಯೆಹೋವನು,” NW] ನಮಗೆ ಸಂತಾನವನ್ನು ಉಳಿಸದೆ ಹೋಗಿದ್ದರೆ ಸೊದೋಮಿನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು ಎಂದು ಹೇಳುತ್ತಾನೆ.”​—⁠ರೋಮಾಪುರ 9:​28, 29.

23 ಈ ಬಾರಿ ಪಾರಾಗಿ ಉಳಿದವರು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದ ಅಭಿಷಿಕ್ತ ಕ್ರೈಸ್ತರಾಗಿದ್ದರು. ಇವರು ಪ್ರಪ್ರಥಮವಾಗಿ ನಂಬಿದ ಯೆಹೂದ್ಯರಾಗಿದ್ದರು. ಆ ಬಳಿಕ ನಂಬಿದ ಯೆಹೂದ್ಯೇತರರು ಅವರ ಜೊತೆಗೆ ಸೇರಿಕೊಂಡರು. ಇವರೆಲ್ಲರೂ ಸೇರಿ ಹೊಸ ಇಸ್ರಾಯೇಲು ಅಥವಾ ‘ದೇವರ ಇಸ್ರಾಯೇಲ್ಯ’ರಾದರು. (ಗಲಾತ್ಯ 6:16; ರೋಮಾಪುರ 2:29) ಈ “ಸಂತಾನವು” ಸಾ.ಶ. 70ರಲ್ಲಿ ಯೆಹೂದಿ ವ್ಯವಸ್ಥೆಯ ನಾಶನವನ್ನು ಪಾರಾಯಿತು. ಈ ‘ದೇವರ ಇಸ್ರಾಯೇಲ್ಯರು’ ಈಗಲೂ ನಮ್ಮೊಂದಿಗಿದ್ದಾರೆ. ಬೇರೆ ಜನಾಂಗಗಳಿಂದ ಬಂದಿರುವ ದಶಲಕ್ಷಗಟ್ಟಲೆ, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿ” ಈಗ ಅವರ ಜೊತೆಗೂಡಿದ್ದಾರೆ.​—⁠ಪ್ರಕಟನೆ 7:⁠9.

24. ಮಾನವಕುಲದ ಮಹಾ ವಿಪತ್ತನ್ನು ಪಾರಾಗಬಯಸುವುದಾದರೆ ಎಲ್ಲರೂ ಯಾವುದಕ್ಕೆ ಗಮನ ಕೊಡಬೇಕು?

24 ಈ ಜಗತ್ತು ಬೇಗನೆ ಅರ್ಮಗೆದೋನ್‌ ಯುದ್ಧವನ್ನು ಎದುರಿಸುವುದು. (ಪ್ರಕಟನೆ 16:​14, 16) ಈ ವಿಪತ್ತು ಯೆಹೂದವನ್ನು ಆಕ್ರಮಿಸಿದ ಅಶ್ಶೂರ ಇಲ್ಲವೆ ಬಾಬೆಲಿನ ಮುತ್ತಿಗೆಗಿಂತ ಮತ್ತು ಸಾ.ಶ. 70ರಲ್ಲಿ ರೋಮನರು ಯೂದಾಯದ ಮೇಲೆ ನಡೆಸುವ ಧ್ವಂಸಕ್ಕಿಂತಲೂ ಮಹತ್ತರವಾಗಿರುವುದಾದರೂ, ಪಾರಾಗಿ ಉಳಿಯುವವರು ಖಂಡಿತ ಇರುವರು. (ಪ್ರಕಟನೆ 7:14) ಆದಕಾರಣ, ಯೆಹೋವನು ಯೆಹೂದಕ್ಕೆ ಹೇಳಿದ ಮಾತುಗಳನ್ನು ಎಲ್ಲರೂ ಜಾಗರೂಕತೆಯಿಂದ ಪರಿಗಣಿಸುವುದು ಅದೆಷ್ಟು ಮಹತ್ವದ್ದು! ಈ ಹಿಂದೆ ಅದು ನಂಬಿಗಸ್ತರು ಪಾರಾಗುವ ಅರ್ಥದಲ್ಲಿತ್ತು. ಇಂದು ನಂಬುವವರಿಗೂ ಪಾರಾಗಿ ಉಳಿಯುವ ಅರ್ಥವು ಅದಕ್ಕಿರಸಾಧ್ಯವಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 5 ಈ ಸಂದರ್ಭದಲ್ಲಿ, “ಇಸ್ರಾಯೇಲ್‌” ಯೆಹೂದದ ಎರಡು ಕುಲಗಳ ರಾಜ್ಯವನ್ನು ಸೂಚಿಸುತ್ತದೆ.

^ ಪ್ಯಾರ. 14 ಯೆಶಾಯನ ಮಾತುಗಳು, ಅವನ ದಿನಗಳ ವೈದ್ಯಕೀಯ ಆಚಾರಗಳನ್ನು ಜ್ಞಾಪಕಕ್ಕೆ ತರುತ್ತವೆ. ಬೈಬಲ್‌ ಸಂಶೋಧಕ ಇ. ಏಚ್‌. ಪ್ಲಮ್‌ಟ್ರ ಗಮನಿಸುವುದು: “ಕೀವುಗಟ್ಟಿರುವ ಗಾಯದಿಂದ ಕೀವನ್ನು ತೆಗೆಯಲು ಅದನ್ನು ‘ಮುಚ್ಚುವುದು’ ಅಥವಾ ‘ಹಿಸಕುವುದು’ ಪ್ರಥಮ ವಿಧಾನ; ಬಳಿಕ ಹಿಜ್ಕೀಯನಿಗೆ ಮಾಡಲ್ಪಟ್ಟಂತೆ (ಅಧ್ಯಾ. xxxviii. 21), ಅದನ್ನು ಹುಣ್ಣುಪಟ್ಟಿಯಿಂದ ‘ಮುಚ್ಚಿ ಕಟ್ಟಲಾಗುತ್ತಿತ್ತು.’ ಬಳಿಕ, ಹುಣ್ಣನ್ನು ತೊಳೆದು ಶುದ್ಧಮಾಡಲು ವಾಸಿಕಾರಕ ಎಣ್ಣೆ ಅಥವಾ ಮುಲಾಮನ್ನು, ಪ್ರಾಯಶಃ ಲೂಕ X. 34ರಲ್ಲಿರುವಂತೆ ಎಣ್ಣೆ ಅಥವಾ ದ್ರಾಕ್ಷಾಮದ್ಯವನ್ನು ಹಚ್ಚಲಾಗುತ್ತಿತ್ತು.”

^ ಪ್ಯಾರ. 20 ಸಿ. ಎಫ್‌. ಕೈಲ್‌ ಮತ್ತು ಎಫ್‌. ಡೆಲಿಟ್ಶ್‌ ಬರೆದ ಕಾಮೆಂಟರಿ ಆನ್‌ ದಿ ಓಲ್ಡ್‌ ಟೆಸ್ಟಮೆಂಟ್‌ ಹೇಳುವುದು: “ಪ್ರವಾದಿಯ ಪ್ರವಚನದ ಒಂದು ಭಾಗ ಇಲ್ಲಿ ಅಂತ್ಯಗೊಳ್ಳುತ್ತದೆ. ಈ ಸ್ಥಳದಲ್ಲಿ ಅದು ಎರಡು ವಿಭಾಗಗಳಾಗಿರುವ ನಿಜತ್ವವು, 9 ಮತ್ತು 10ನೆಯ ವಚನಗಳ ಮಧ್ಯೆ ಜಾಗ ಬಿಟ್ಟಿರುವುದರಿಂದ ಸೂಚಿತವಾಗುತ್ತದೆ. ದೊಡ್ಡ ಅಥವಾ ಚಿಕ್ಕ ವಿಭಾಗಗಳನ್ನು ಜಾಗ ಬಿಟ್ಟೊ ಗೆರೆ ಮುರಿದೊ ಗುರುತಿಸುವ ಈ ವಿಧಾನವು, ಸ್ವರಾಕ್ಷರ ಮತ್ತು ಸ್ವರಚಿಹ್ನೆಗಳಿಗಿಂತ ಹಳೆಯದಾಗಿದ್ದು ಪ್ರಾಚೀನತೆಯ ಅತಿ ಶ್ರೇಷ್ಠ ಸಂಪ್ರದಾಯದ ಮೇಲೆ ಆಧಾರಿತವಾಗಿದೆ.”

[ಅಧ್ಯಯನ ಪ್ರಶ್ನೆಗಳು]

[ಪುಟ 20ರಲ್ಲಿರುವ ಚಿತ್ರ]

ಸೊದೋಮ್‌ ಗೊಮೋರದಂತೆ, ಯೆಹೂದವು ಸದಾಕಾಲಕ್ಕೂ ನಿರ್ಜನವಾಗಿರದು