ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನಾಂಗಗಳ ವಿರುದ್ಧ ಯೆಹೋವನ ಉದ್ದೇಶ

ಜನಾಂಗಗಳ ವಿರುದ್ಧ ಯೆಹೋವನ ಉದ್ದೇಶ

ಅಧ್ಯಾಯ ಹದಿನೈದು

ಜನಾಂಗಗಳ ವಿರುದ್ಧ ಯೆಹೋವನ ಉದ್ದೇಶ

ಯೆಶಾಯ 14:​24-19:⁠25

1. ಅಶ್ಶೂರರ ವಿರುದ್ಧ ಯಾವ ನ್ಯಾಯತೀರ್ಪನ್ನು ಯೆಶಾಯನು ದಾಖಲಿಸುತ್ತಾನೆ?

ಯೆಹೋವನು ತನ್ನ ಜನರನ್ನು ಅವರ ದುಷ್ಟತನಕ್ಕಾಗಿ ಶಿಕ್ಷಿಸಲು, ಬೇರೆ ಜನಾಂಗಗಳನ್ನು ಉಪಯೋಗಿಸಬಲ್ಲನು. ಆದರೆ ಆ ಜನಾಂಗಗಳವರು, ಸತ್ಯಾರಾಧನೆಯ ಕಡೆಗೆ ಅನಾವಶ್ಯಕವಾದ ಕ್ರೂರತನ, ಅಹಂಕಾರ ಮತ್ತು ದ್ವೇಷವನ್ನು ತೋರಿಸಿದರೆ, ಆತನು ಅವರನ್ನು ದಂಡಿಸದೆ ಬಿಡಲಾರನು. ಆದುದರಿಂದಲೇ, ಬಹಳ ಮುಂಚಿತವಾಗಿಯೇ “ಬಾಬೆಲಿನ ವಿಷಯವಾಗಿ . . . ದೈವೋಕ್ತಿ”ಯನ್ನು ಬರೆದಿಡುವಂತೆ ಆತನು ಯೆಶಾಯನನ್ನು ಪ್ರೇರೇಪಿಸುತ್ತಾನೆ. (ಯೆಶಾಯ 13:⁠1) ಆದರೆ, ದೇವಜನರಿಗೆ ಬಾಬೆಲು ಭವಿಷ್ಯತ್ತಿನಲ್ಲಿ ಬರಲಿದ್ದ ಬೆದರಿಕೆಯಾಗಿತ್ತು. ಯೆಶಾಯನ ದಿನದಲ್ಲಾದರೊ, ಅಶ್ಶೂರವು ದೇವರ ಒಡಂಬಡಿಕೆಯ ಜನರನ್ನು ಪೀಡಿಸುತ್ತಿದೆ. ಅದು ಇಸ್ರಾಯೇಲಿನ ಉತ್ತರರಾಜ್ಯವನ್ನು ನಾಶಮಾಡಿ, ಯೆಹೂದದ ಹೆಚ್ಚಿನ ಭಾಗವನ್ನು ಧ್ವಂಸಮಾಡುತ್ತದೆ. ಆದರೆ ಅಶ್ಶೂರವು ಸಂಪೂರ್ಣ ವಿಜಯವನ್ನು ಸಾಧಿಸುವುದಿಲ್ಲ. ಯೆಶಾಯನು ಬರೆಯುವುದು: “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ​—⁠ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ. ಅಶ್ಶೂರ್ಯರನ್ನು ನನ್ನ ದೇಶದಲ್ಲಿ ಮುರಿದು ನನ್ನ ಬೆಟ್ಟಗಳ ಮೇಲೆ ತುಳಿದುಬಿಡುವೆನು; ಆಗ ಅವರು ಹೂಡಿದ ನೊಗವು ನನ್ನ ಜನರಿಂದ ತೊಲಗಿ ಹೊರಿಸಿದ ಹೊರೆಯು ನನ್ನ ಜನರ ಹೆಗಲಿಗೆ ದೂರವಾಗುವದು.” (ಯೆಶಾಯ 14:24, 25) ಯೆಶಾಯನು ಈ ಪ್ರವಾದನೆಯನ್ನು ನುಡಿದ ಸ್ವಲ್ಪ ಸಮಯದಲ್ಲೇ, ಅಶ್ಶೂರರ ಬೆದರಿಕೆ ಯೆಹೂದದಿಂದ ತೆಗೆದುಹಾಕಲ್ಪಡುತ್ತದೆ.

2, 3. (ಎ) ಪ್ರಾಚೀನ ಸಮಯದಲ್ಲಿ, ಯೆಹೋವನು ಯಾರ ಮೇಲೆ ತನ್ನ ಕೈಯನ್ನು ಚಾಚುತ್ತಾನೆ? (ಬಿ) ಯೆಹೋವನು ‘ಎಲ್ಲ ಜನಾಂಗಗಳ’ ಮೇಲೆ ತನ್ನ ಕೈಯನ್ನು ಚಾಚುವುದರ ಅರ್ಥವೇನು?

2 ಆದರೆ, ದೇವರ ಒಡಂಬಡಿಕೆಯ ಜನರ ವೈರಿಗಳಾಗಿರುವ ಬೇರೆ ಜನಾಂಗಗಳ ಕುರಿತೇನು? ಅವರು ಕೂಡ ನ್ಯಾಯವಿಚಾರಣೆಗೆ ಗುರಿಯಾಗಬೇಕು. ಯೆಶಾಯನು ಪ್ರಕಟಿಸುವುದು: “ಇದೇ ಲೋಕದಲ್ಲೆಲ್ಲಾ ನೆರವೇರಬೇಕಾದ ನನ್ನ ಉದ್ದೇಶ, ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೇನಾಧೀಶ್ವರನಾದ ಯೆಹೋವನು ಉದ್ದೇಶಮಾಡಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು? ಎಂಬದೇ.” (ಯೆಶಾಯ 14:26, 27) ಯೆಹೋವನ ‘ಉದ್ದೇಶವು,’ ಆತನ ದೃಢಸಂಕಲ್ಪ ಹಾಗೂ ಆಜ್ಞೆಯಾಗಿದೆ. (ಯೆರೆಮೀಯ 49:​20, 30) ದೇವರ “ಕೈ,” ಆತನು ಪ್ರಾಯೋಗಿಕವಾಗಿ ಉಪಯೋಗಿಸುವ ಶಕ್ತಿಯಾಗಿದೆ. ಯೆಶಾಯ 14ನೆಯ ಅಧ್ಯಾಯದ ಕೊನೆಯ ವಚನಗಳಲ್ಲಿ ಮತ್ತು 15ರಿಂದ 19ನೆಯ ಅಧ್ಯಾಯಗಳಲ್ಲಿ, ಫಿಲಿಷ್ಟಿಯ, ಮೋವಾಬ್‌, ದಮಸ್ಕ, ಕೂಷ್‌ (ಇಥಿಯೋಪಿಯ) ಮತ್ತು ಐಗುಪ್ತದ ವಿರುದ್ಧ ಯೆಹೋವನ ಉದ್ದೇಶಗಳು ದಾಖಲಿಸಲ್ಪಟ್ಟಿವೆ.

3 ಆದರೆ, ಯೆಹೋವನ ಕೈ ‘ಎಲ್ಲ ಜನಾಂಗಗಳ ಮೇಲೆ’ ಚಾಚಿದೆ ಎಂದು ಯೆಶಾಯನು ತಿಳಿಸುತ್ತಾನೆ. ಆದಕಾರಣ, ಯೆಶಾಯನ ಈ ಪ್ರವಾದನೆಗಳು ಪುರಾತನ ಕಾಲದಲ್ಲಿ ನೆರವೇರಿದರೂ, ಅವು ‘ಅಂತ್ಯಕಾಲಕ್ಕೂ’ ಅನ್ವಯಿಸುತ್ತವೆ. ಆಗ ಯೆಹೋವನು ಭೂಮಿಯ ಎಲ್ಲ ರಾಜ್ಯಗಳ ವಿರುದ್ಧ ತನ್ನ ಕೈಯನ್ನು ಚಾಚುವನು. (ದಾನಿಯೇಲ 2:44; 12:9; ರೋಮಾಪುರ 15:4; ಪ್ರಕಟನೆ 19:​11, 19-21) ಸರ್ವಶಕ್ತ ದೇವರಾದ ಯೆಹೋವನು ಬಹಳ ಮುಂಚಿತವಾಗಿಯೇ, ತನ್ನ ಉದ್ದೇಶವನ್ನು ಪೂರ್ಣ ಭರವಸೆಯಿಂದ ಪ್ರಕಟಪಡಿಸುತ್ತಾನೆ. ಆತನ ಚಾಚಿದ ಕೈಯನ್ನು ಯಾರೂ ಹಿಂದಕ್ಕೆ ತಳ್ಳಸಾಧ್ಯವಿಲ್ಲ.​—⁠ಕೀರ್ತನೆ 33:11; ಯೆಶಾಯ 46:⁠10.

ಫಿಲಿಷ್ಟಿಯರ ವಿರುದ್ಧ “ಹಾರುವ ಅಗ್ನಿಮಯಸರ್ಪ”

4. ಯೆಹೋವನು ಫಿಲಿಷ್ಟಿಯರ ವಿರುದ್ಧ ನೀಡಿದ ದೈವೋಕ್ತಿಯ ಕೆಲವು ವಿವರಗಳಾವುವು?

4 ಈ ಉದ್ದೇಶಕ್ಕನುಸಾರ ಫಿಲಿಷ್ಟಿಯರ ಕಡೆಗೆ ಪ್ರಥಮವಾಗಿ ಗಮನಹರಿಸಲ್ಪಡುತ್ತದೆ. “ಅರಸನಾದ ಆಹಾಜನು ಕಾಲವಾದ ವರುಷದಲ್ಲಿ ಈ ದೈವೋಕ್ತಿಯು ಕೇಳ ಬಂತು​—⁠ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ಉಲ್ಲಾಸಗೊಳ್ಳದಿರಿ; ಹಾವಿನ ಬೀಜದಿಂದ ಮಹಾ ನಾಗವುಂಟಾಗುವದು, ಆ ಬೀಜದ ಸಂತತಿಯು ಹಾರುವ ಅಗ್ನಿಮಯಸರ್ಪವೇ.”​—ಯೆಶಾಯ 14:28, 29.

5, 6. (ಎ) ಯಾವ ರೀತಿಯಲ್ಲಿ ಉಜ್ಜೀಯನು ಫಿಲಿಷ್ಟಿಯರಿಗೆ ಒಂದು ಸರ್ಪದಂತಿದ್ದನು? (ಬಿ) ಹಿಜ್ಕೀಯನು ಫಿಲಿಷ್ಟಿಯರ ವಿರುದ್ಧ ಏನಾಗಿ ರುಜುವಾದನು?

5 ರಾಜ ಉಜ್ಜೀಯನು, ಫಿಲಿಷ್ಟಿಯರಿಂದ ಬಂದಿರುವ ಬೆದರಿಕೆಯನ್ನು ತಡೆಯುವಷ್ಟು ಬಲಶಾಲಿಯಾಗಿದ್ದನು. (2 ಪೂರ್ವಕಾಲವೃತ್ತಾಂತ 26:​6-8) ಅವರಿಗೆ ಅವನೊಂದು ಸರ್ಪದಂತಿದ್ದನು ಮತ್ತು ಅವನ ಕೋಲು ಆ ವೈರಿಯನ್ನು ಹೊಡೆಯುತ್ತಾ ಇತ್ತು. ಉಜ್ಜೀಯನು ಸತ್ತ ನಂತರ, ಅಂದರೆ ‘ಅವನ ಕೋಲು ಮುರಿದ’ ನಂತರ, ನಂಬಿಗಸ್ತ ಯೋತಾಮನು ರಾಜನಾದನು. ಆದರೆ, ಅವನ “ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು.” ತದನಂತರ, ಆಹಾಜನು ರಾಜನಾದನು. ಆಗ ಪರಿಸ್ಥಿತಿಗಳು ಬದಲಾದವು, ಮತ್ತು ಫಿಲಿಷ್ಟಿಯರು ಯೆಹೂದದ ಮೇಲೆ ಮಿಲಿಟರಿ ದಾಳಿ ನಡೆಸಿ ಜಯಸಾಧಿಸಿದರು. (2 ಪೂರ್ವಕಾಲವೃತ್ತಾಂತ 27:2; 28:​17, 18) ಈಗಲಾದರೊ ಪುನಃ ಒಮ್ಮೆ ಪರಿಸ್ಥಿತಿಗಳು ಬದಲಾಗುತ್ತಿವೆ. ಸಾ.ಶ.ಪೂ. 746ರಲ್ಲಿ, ರಾಜ ಆಹಾಜನ ಮರಣಾನಂತರ, ಯುವ ಹಿಜ್ಕೀಯನು ಸಿಂಹಾಸನವನ್ನೇರುತ್ತಾನೆ. ಈಗಲೂ ವಿಷಯಗಳು ತಮ್ಮ ಅನುಕೂಲದಂತೆ ಮುಂದುವರಿಯುವವೆಂದು ಫಿಲಿಷ್ಟಿಯರು ನೆನಸಿದರೆ, ಅವರ ಲೆಕ್ಕ ತಲೆಕೆಳಗಾಗುವುದು. ಹಿಜ್ಕೀಯನು ಒಬ್ಬ ಮಾರಕ ವೈರಿಯಾಗಿ ರುಜುವಾಗುತ್ತಾನೆ. ಉಜ್ಜೀಯನ ವಂಶಸ್ಥನಾದ (ಅವನ ‘ಬೇರಿನಿಂದ’ ಬಂದ “ಫಲ”) ಹಿಜ್ಕೀಯನು, “ಹಾರುವ ಅಗ್ನಿಮಯಸರ್ಪ”ದಂತಿದ್ದಾನೆ. ಅದರಂತೆ ಅವನು ಆಕ್ರಮಣವನ್ನು ಮಾಡಲಿಕ್ಕಾಗಿ ಕ್ಷಿಪ್ರವಾಗಿ ನುಗ್ಗುತ್ತಾನೆ, ಮಿಂಚಿನ ವೇಗದಲ್ಲಿ ಹೊಡೆಯುತ್ತಾನೆ ಮತ್ತು ತನ್ನ ಬಲಿಗಳಲ್ಲಿ ವಿಷವನ್ನು ಚುಚ್ಚಿ ಒಳಹೋಗಿಸುತ್ತಾನೊ ಎಂಬಂತೆ ತೀಕ್ಷ್ಣವಾದ ವೇದನೆಯನ್ನು ಉಂಟುಮಾಡುತ್ತಾನೆ.

6 ಈ ವಿವರಣೆಯು ಹೊಸ ರಾಜನಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಹಿಜ್ಕೀಯನು “ಗಾಜಪ್ರಾಂತದ ವರೆಗೆ ವಾಸವಾಗಿದ್ದ ಫಿಲಿಷ್ಟಿಯರನ್ನು ಸೋಲಿಸಿ”ಬಿಟ್ಟನು. (2 ಅರಸುಗಳು 18:⁠8) ಹೀಗೆ ಫಿಲಿಷ್ಟಿಯರು ಹಿಜ್ಕೀಯನಿಗೆ ಅಧೀನರಾದರೆಂದು, ಅಶ್ಶೂರ್ಯರ ರಾಜನಾದ ಸನ್ಹೇರೀಬನ ವಾರ್ಷಿಕ ವೃತ್ತಾಂತಗಳು ತಿಳಿಸುತ್ತವೆ. ಮತ್ತು ದುರ್ಬಲವಾದ ಯೆಹೂದ ರಾಜ್ಯದವರು, ಅಂದರೆ ‘ಬಡವರು’ ಭದ್ರತೆಯನ್ನೂ ಬಹಳಷ್ಟು ಸಿರಿಸಂಪತ್ತನ್ನೂ ಅನುಭವಿಸುತ್ತಾರೆ, ಆದರೆ ಫಿಲಿಷ್ಟಿಯರು ಕ್ಷಾಮದಿಂದ ಕಷ್ಟಾನುಭವಿಸುತ್ತಾರೆ.​ಯೆಶಾಯ 14:​30, 31ನ್ನು ಓದಿರಿ.

7. ಯೆರೂಸಲೇಮಿನಲ್ಲಿರುವ ರಾಯಭಾರಿಗಳ ಮುಂದೆ ಹಿಜ್ಕೀಯನು ಯಾವ ರೀತಿಯಲ್ಲಿ ತನ್ನ ನಂಬಿಕೆಯನ್ನು ಪ್ರಕಟಿಸಬೇಕು?

7 ಆ ಸಮಯದಲ್ಲಿ ರಾಯಭಾರಿಗಳು ಯೆಹೂದದಲ್ಲಿದ್ದಾರೆ. ಅವರು ಹಿಜ್ಕೀಯನೊಂದಿಗೆ ಮೈತ್ರಿಯನ್ನು ಬೆಳೆಸಲು ಹಾತೊರೆಯುತ್ತಿದ್ದಾರೆ. ಹೀಗೆ ಮಾಡುವ ಮೂಲಕ, ಅಶ್ಶೂರದ ವಿರುದ್ಧ ಯುದ್ಧ ಮಾಡಲು ಯೆಹೂದದ ನೆರವು ಸಿಗಸಾಧ್ಯವೆಂಬ ಯೋಚನೆ ಅವರಿಗಿದೆ. ಹಿಜ್ಕೀಯನು ಅವರಿಗೆ ಏನು ಹೇಳಬೇಕು? ‘ಪರಜನಾಂಗದ ರಾಯಭಾರಿಗಳಿಗೆ ಏನುತ್ತರ ಕೊಡಬೇಕು’? ಹಿಜ್ಕೀಯನು ಭದ್ರತೆಗಾಗಿ ವಿದೇಶೀಯರೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕೊ? ಇಲ್ಲ! ಅವನು ಆ ರಾಯಭಾರಿಗಳಿಗೆ ಹೀಗೆ ಹೇಳಬೇಕು: “ಯೆಹೋವನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ದೀನದರಿದ್ರರು ಅದನ್ನೇ ಆಶ್ರಯಿಸಿಕೊಳ್ಳುವರು.” (ಯೆಶಾಯ 14:32) ರಾಜನಿಗೆ ಯೆಹೋವನಲ್ಲಿ ಸಂಪೂರ್ಣ ಭರವಸೆಯಿರಬೇಕು. ಚೀಯೋನಿನ ಅಸ್ತಿವಾರ ದೃಢವಾಗಿದೆ. ಆದುದರಿಂದ, ಅಶ್ಶೂರ್ಯರ ಆಕ್ರಮಣದಿಂದ ಈ ನಗರಕ್ಕೆ ಯಾವ ಹಾನಿಯೂ ಆಗಲಾರದು.​—⁠ಕೀರ್ತನೆ 46:​1-7.

8. (ಎ) ಇಂದಿನ ಕೆಲವು ರಾಷ್ಟ್ರಗಳು ಫಿಲಿಷ್ಟಿಯರಂತಿರುವುದು ಹೇಗೆ? (ಬಿ) ಯೆಹೋವನು ಗತಕಾಲದಲ್ಲಿ ಮಾಡಿದಂತೆ, ಇಂದು ತನ್ನ ಜನರನ್ನು ಬೆಂಬಲಿಸಲು ಏನು ಮಾಡಿದ್ದಾನೆ?

8 ಫಿಲಿಷ್ಟಿಯರಂತೆ, ಇಂದು ಕೂಡ ಕೆಲವು ರಾಷ್ಟ್ರಗಳವರು ದೇವರ ಆರಾಧಕರನ್ನು ಕಠೋರವಾಗಿ ವಿರೋಧಿಸುತ್ತಾರೆ. ಯೆಹೋವನ ಕ್ರೈಸ್ತ ಸಾಕ್ಷಿಗಳು, ಸೆರೆಮನೆಗಳಲ್ಲಿ ಮತ್ತು ಕೂಟ ಶಿಬಿರಗಳಲ್ಲಿ ಹಾಕಲ್ಪಟ್ಟಿದ್ದಾರೆ. ಅವರ ಕೆಲಸವನ್ನು ನಿಷೇಧಿಸಲಾಗಿದೆ. ಅನೇಕರನ್ನು ಕೊಲ್ಲಲಾಗಿದೆ. ವಿರೋಧಿಗಳು “ನೀತಿವಂತರ ಮೇಲೆ ಬೀಳು”ತ್ತಲೇ ಇದ್ದಾರೆ. (ಕೀರ್ತನೆ 94:21) ಈ ಕ್ರೈಸ್ತ ಗುಂಪಿನವರು, ಅವರ ವೈರಿಗಳಿಗೆ ‘ಬಡವರಾಗಿಯೂ’ ‘ದಿಕ್ಕಿಲ್ಲದವರಾಗಿಯೂ’ ತೋರಬಹುದು. ಆದರೆ, ಯೆಹೋವನ ಬೆಂಬಲದಿಂದ ಇವರು ಆತ್ಮಿಕ ಸಮೃದ್ಧಿಯನ್ನು ಅನುಭವಿಸುತ್ತಿರುವಾಗ ಅವರ ವೈರಿಗಳು ಆತ್ಮಿಕ ಕ್ಷಾಮದಲ್ಲಿ ನರಳಾಡುತ್ತಾರೆ. (ಯೆಶಾಯ 65:​13, 14; ಆಮೋಸ 8:11) ಈ ಆಧುನಿಕ ದಿನದ ಫಿಲಿಷ್ಟಿಯರ ವಿರುದ್ಧ ಯೆಹೋವನು ತನ್ನ ಕೈಯನ್ನು ಚಾಚುವಾಗ ಈ ‘ಬಡವರು’ ಸುರಕ್ಷಿತರಾಗಿರುವರು. ಎಲ್ಲಿ? “ದೇವರ ಮನೆಯವರ” ಸಹವಾಸದಲ್ಲಿ. ಮತ್ತು ಈ ಮನೆಯ ಅಸ್ತಿವಾರದ ಮೂಲೆಗಲ್ಲು ಯೇಸುವಾಗಿದ್ದಾನೆ. (ಎಫೆಸ 2:​19-21) ಈ ಬಡವರಿಗೆ ಯೆಹೋವನ ಸ್ವರ್ಗೀಯ ರಾಜ್ಯವಾಗಿರುವ ‘ಪರಲೋಕ ಯೆರೂಸಲೇಮಿನ’ ರಕ್ಷಣೆಯೂ ದೊರೆಯಲಿದೆ. ಆ ರಾಜ್ಯದ ಅರಸನು ಯೇಸು ಕ್ರಿಸ್ತನೇ.​—⁠ಇಬ್ರಿಯ 12:22; ಪ್ರಕಟನೆ 14:⁠1.

ಮೋವಾಬಿನ ಬಾಯಿಮುಚ್ಚಿಸಲಾಗುತ್ತದೆ

9. ಮುಂದಿನ ದೈವೋಕ್ತಿ ಯಾರ ವಿರುದ್ಧವಿದೆ, ಮತ್ತು ಇವರು ದೇವಜನರ ವೈರಿಯಾಗಿರುವುದು ಹೇಗೆ?

9 ಮೃತ ಸಮುದ್ರದ ಪೂರ್ವ ದಿಕ್ಕಿನಲ್ಲಿರುವ ಮೋವಾಬ್‌, ಇಸ್ರಾಯೇಲಿನ ಮತ್ತೊಂದು ನೆರೆರಾಜ್ಯವಾಗಿದೆ. ಮೋವಾಬ್ಯರು ಅಬ್ರಹಾಮನ ಸೋದರಳಿಯನಾದ ಲೋಟನ ವಂಶಸ್ಥರಾಗಿರುವುದರಿಂದ, ಇಸ್ರಾಯೇಲ್ಯರ ಸಂಬಂಧಿಕರಾಗಿದ್ದಾರೆ. (ಆದಿಕಾಂಡ 19:37) ಆದರೂ ಮೋವಾಬ್‌, ಮೊದಲಿನಿಂದಲೂ ಇಸ್ರಾಯೇಲಿನ ವೈರಿಯಾಗಿದೆ. ಉದಾಹರಣೆಗೆ, ಮೋಶೆಯ ದಿನಗಳಲ್ಲಿ ಮೋವಾಬಿನ ರಾಜನು ಪ್ರವಾದಿ ಬಿಳಾಮನಿಗೆ ಹಣಕೊಟ್ಟು, ಇಸ್ರಾಯೇಲ್ಯರನ್ನು ಶಪಿಸುವಂತೆ ಕೇಳಿಕೊಂಡನು. ಅದು ವಿಫಲವಾದಾಗ, ಅನೈತಿಕತೆ ಹಾಗೂ ಬಾಳನ ಆರಾಧನೆಯೆಂಬ ಬಲೆಯಲ್ಲಿ ಮೋವಾಬ್‌ ಇಸ್ರಾಯೇಲನ್ನು ಸಿಕ್ಕಿಸಿಹಾಕಿತು. (ಅರಣ್ಯಕಾಂಡ 22:​4-6; 25:​1-5) ಆದುದರಿಂದಲೇ, “ಮೋವಾಬಿನ ವಿಷಯವಾದ ದೈವೋಕ್ತಿ” ಬರೆಯುವಂತೆ ಯೆಹೋವನು ಯೆಶಾಯನನ್ನು ಪ್ರೇರೇಪಿಸುತ್ತಾನೆ!​ಯೆಶಾಯ 15:1ಎ.

10, 11. ಮೋವಾಬಿಗೆ ಏನು ಸಂಭವಿಸುವುದು?

10 ಯೆಶಾಯನ ಪ್ರವಾದನೆಯು, ಮೋವಾಬಿನ ಹಲವಾರು ನಗರಗಳು ಹಾಗೂ ನಿವೇಶನಗಳ ವಿರುದ್ಧ ನುಡಿಯಲ್ಪಟ್ಟಿದೆ. ಅದರಲ್ಲಿ, ಆರ್‌, ಕೀರ್‌ (ಇಲ್ಲವೆ ಕೀರ್‌ ಹರೆಷೆಥ್‌) ಮತ್ತು ದೀಬೋನ್‌ ಸೇರಿವೆ. (ಯೆಶಾಯ 15:1ಬಿ, 2ಎ) ಕೀರ್‌ ಹರೆಷೆಥಿನ ಪ್ರಮುಖ ಉತ್ಪನ್ನವಾದ ದೀಪದ್ರಾಕ್ಷೆಗಾಗಿ ಮೋವಾಬ್ಯರು ರೋದಿಸುವರು. (ಯೆಶಾಯ 16:​6, 7) ದ್ರಾಕ್ಷೆಯ ತೋಟಗಳಿಗಾಗಿ ಹೆಸರುವಾಸಿಯಾಗಿದ್ದ ಸಿಬ್ಮ ಮತ್ತು ಯಜ್ಜೇರ್‌ ನಗರಗಳು ನಾಶವಾಗುವವು. (ಯೆಶಾಯ 16:​8-10) “ಮೂರು ವರ್ಷ ಪ್ರಾಯದ ಹೆಣ್ಣುಕರು” ಎಂಬರ್ಥವುಳ್ಳ ಎಗ್ಲತ್‌ ಶೆಲಿಶೀಯ ಎಂಬ ಮೋವಾಬ್‌ ಪಟ್ಟಣವು ಗಟ್ಟಿಮುಟ್ಟಾದ ಎಳೆಯ ಹಸುವಿನಂತಿದ್ದರೂ, ಸಂಕಟದಿಂದ ಕೂಗಾಡುತ್ತಿರುವುದು. (ಯೆಶಾಯ 15:⁠5) ಆ ದೇಶದ ಹಸಿಹುಲ್ಲು ಒಣಗಿಹೋಗುವುದು ಮತ್ತು ಮೋವಾಬ್ಯರ ಕಗ್ಗೊಲೆಯಿಂದ “ದೀಮೋನಿನ ನೀರೆಲ್ಲಾ” ರಕ್ತಮಯವಾಗುವುದು. “ನಿಮ್ರೀಮ್‌ ಹೊಳೆಯು” ‘ಹಾಳಾಗುವುದು.’ ಇದು ಲಾಕ್ಷಣಿಕವಾಗಿರಬಹುದು ಇಲ್ಲವೆ ಅಕ್ಷರಾರ್ಥವೂ ಆಗಿರಬಹುದು, ಯಾಕೆಂದರೆ ವೈರಿ ಪಡೆಗಳು ಅದರ ಪ್ರವಾಹವನ್ನು ತಡೆದುಹಿಡಿಯುತ್ತವೆ.​ಯೆಶಾಯ 15:​6-9.

11 ಮೋವಾಬ್ಯರು ಶೋಕದ ವಸ್ತ್ರವನ್ನು, ಅಂದರೆ ಗೋಣಿತಟ್ಟನ್ನು ಸುತ್ತಿಕೊಳ್ಳುವರು. ಅಪಮಾನ ಹಾಗೂ ದುಃಖವನ್ನು ವ್ಯಕ್ತಪಡಿಸಲು ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳುವರು. ಅತಿಯಾದ ಕೊರಗು ಹಾಗೂ ಅವಮಾನವನ್ನು ತೋರಿಸಲು ಅವರು ತಮ್ಮ ಗಡ್ಡವನ್ನು “ಕತ್ತರಿಸಿ”ಕೊಳ್ಳುವರು. (ಯೆಶಾಯ 15:2ಬಿ-4) ಈ ನ್ಯಾಯತೀರ್ಪುಗಳು ಖಂಡಿತವಾಗಿಯೂ ನೆರವೇರುವವೆಂದು ತಿಳಿದಿದ್ದ ಯೆಶಾಯನೇ ಬಹಳ ಉದ್ವೇಗಕ್ಕೆ ಒಳಗಾಗುತ್ತಾನೆ. ಮೋವಾಬಿನ ಮೇಲೆ ಬರಲಿರುವ ಕೇಡಿಗಾಗಿ, ಅವನ ಅಂತರಂಗವು ಕಂಪಿಸುವ ಕಿನ್ನರಿಯಂತೆ ಮರುಗುತ್ತದೆ.​ಯೆಶಾಯ 16:​11, 12.

12. ಮೋವಾಬಿನ ಬಗ್ಗೆ ಯೆಶಾಯನು ನುಡಿದ ಮಾತುಗಳು ಹೇಗೆ ನೆರವೇರಿದವು?

12 ಈ ಪ್ರವಾದನೆಯು ಯಾವಾಗ ನೆರವೇರುವುದು? ಬಹಳ ಬೇಗನೆಯೇ. “ಯೆಹೋವನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಉಕ್ತಿಯು ಇದೇ. ಈಗ ಯೆಹೋವನು ಹೇಳುವದೇನಂದರೆ​—⁠ಆಳಿನ ಒಂದೊಂದು ವರುಷವಾಯಿದೆಗೆ ಸರಿಯಾದ ಮೂರು ವರುಷಕ್ಕೇ ಮೋವಾಬಿನ ಮಹಿಮೆಯೂ ಅಲ್ಲಿನವರ ದೊಡ್ಡ ಗುಂಪೂ ಹೀನಾಯಕ್ಕೆ ಈಡಾಗುವವು; ಉಳಿದ ಜನವು ಹೆಚ್ಚದೆ ಕೇವಲ ಸ್ವಲ್ಪವಾಗಿಯೇ ಇರುವದು ಎಂಬದೇ.” (ಯೆಶಾಯ 16:13, 14) ಇದಕ್ಕೆ ಅನುಗುಣವಾಗಿ, ಮೋವಾಬ್‌ ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ತೀವ್ರವಾದ ವೇದನೆಯನ್ನು ಅನುಭವಿಸಿತೆಂದು ಮತ್ತು ಅದರ ಅನೇಕ ನಿವೇಶನಗಳು ನಿರ್ಜನವಾಗಿದ್ದವೆಂದು ಪ್ರಾಕ್ತನಶಾಸ್ತ್ರದ ಪುರಾವೆಗಳು ತೋರಿಸುತ್ತವೆ. IIIನೆಯ ತಿಗ್ಲತ್ಪಿಲೆಸರನು ತನಗೆ ಕಪ್ಪಕಾಣಿಕೆಯನ್ನು ನೀಡುತ್ತಿದ್ದ ಅರಸರಲ್ಲಿ ಮೋವಾಬಿನ ಸಲಮಾನು ಎಂಬುವನನ್ನು ಹೆಸರಿಸಿದನು. ಸನ್ಹೇರೀಬನು ಮೋವಾಬಿನ ರಾಜನಾದ ಕಮ್ಮುಸುನಾದ್ಬಿಯಿಂದ ಕಪ್ಪಕಾಣಿಕೆಯನ್ನು ಪಡೆದನು. ಮುಸುರಿ ಮತ್ತು ಕಮಶಾಲ್ಟು ಎಂಬ ಮೋವಾಬ್ಯ ರಾಜರು, ತಮ್ಮ ಅಧೀನದಲ್ಲಿದ್ದರೆಂದು ಅಶ್ಶೂರ್ಯ ಚಕ್ರವರ್ತಿಗಳಾದ ಏಸರ್‌ಹದ್ದೋನ್‌ ಮತ್ತು ಅಶ್ಶೂರ್‌ಬನಿಪಾಲ್‌ ಸೂಚಿಸಿದರು. ಅನೇಕ ಶತಮಾನಗಳ ಹಿಂದೆಯೇ ಮೋವಾಬ್‌ ಜನಾಂಗವು ಲೋಕ ರಂಗದಿಂದ ಕಾಣೆಯಾಯಿತು. ಕೆಲವು ಮೋವಾಬ್‌ ನಗರಗಳ ಅವಶೇಷಗಳು ದೊರೆತಿವೆ, ಆದರೆ ಒಂದಾನೊಂದು ಸಮಯದಲ್ಲಿ ಶಕ್ತಿಶಾಲಿಯಾಗಿದ್ದ ಇಸ್ರಾಯೇಲಿನ ಈ ವೈರಿಯ ಬಗ್ಗೆ ತೀರ ಕಡಿಮೆ ಪುರಾವೆಯು ಸಿಕ್ಕಿದೆ.

ಆಧುನಿಕ ದಿನದ ‘ಮೋವಾಬ್‌’ ಅಳಿದುಹೋಗುತ್ತದೆ

13. ಇಂದಿನ ಯಾವ ಸಂಸ್ಥೆಯನ್ನು ಮೋವಾಬಿಗೆ ಹೋಲಿಸಬಹುದು?

13 ಇಂದು ಪುರಾತನ ಮೋವಾಬಿನಂತೆಯೇ ಇರುವ ಒಂದು ಲೋಕವ್ಯಾಪಕ ಸಂಸ್ಥೆಯಿದೆ. ಅದು ‘ಮಹಾ ಬಾಬೆಲಿನ’ ಮುಖ್ಯ ಭಾಗವಾಗಿರುವ ಕ್ರೈಸ್ತಪ್ರಪಂಚವೇ ಆಗಿದೆ. (ಪ್ರಕಟನೆ 17:⁠5) ಮೋವಾಬ್ಯರು ಮತ್ತು ಇಸ್ರಾಯೇಲ್ಯರು ಅಬ್ರಹಾಮನ ತಂದೆಯಾದ ತೆರಹನಿಂದ ಬಂದವರಾಗಿದ್ದರು. ತದ್ರೀತಿಯಲ್ಲಿ, ಇಂದಿನ ಅಭಿಷಿಕ್ತ ಕ್ರೈಸ್ತರ ಸಭೆಯಂತೆ ತಾನೂ ಪ್ರಥಮ ಶತಮಾನದ ಕ್ರೈಸ್ತ ಸಭೆಯಿಂದಲೇ ಬಂದಿರುವುದಾಗಿ ಕ್ರೈಸ್ತಪ್ರಪಂಚವು ಹೇಳಿಕೊಳ್ಳುತ್ತದೆ. (ಗಲಾತ್ಯ 6:16) ಆದರೆ ಕ್ರೈಸ್ತಪ್ರಪಂಚವು ಮೋವಾಬಿನಂತೆಯೇ ಭ್ರಷ್ಟವಾಗಿದೆ. ಅದು ಏಕೈಕ ಸತ್ಯ ದೇವರಾದ ಯೆಹೋವನನ್ನು ಆರಾಧಿಸುವುದಿಲ್ಲ. ಅದರ ಬದಲು ಅದು ಆತ್ಮಿಕ ಅನೈತಿಕತೆ ಹಾಗೂ ಇತರ ದೇವರುಗಳ ಆರಾಧನೆಯನ್ನು ಪ್ರವರ್ಧಿಸುತ್ತದೆ. (ಯಾಕೋಬ 4:4; 1 ಯೋಹಾನ 5:21) ಒಂದು ಗುಂಪಿನೋಪಾದಿ ಕ್ರೈಸ್ತಪ್ರಪಂಚದ ನಾಯಕರು, ರಾಜ್ಯದ ಸುವಾರ್ತೆ ಸಾರುವವರನ್ನು ವಿರೋಧಿಸುತ್ತಾರೆ.​—⁠ಮತ್ತಾಯ 24:​9, 14.

14. ಆಧುನಿಕ ದಿನದ ‘ಮೋವಾಬಿನ’ ವಿರುದ್ಧ ಯೆಹೋವನ ಉದ್ದೇಶ ಇರುವುದಾದರೂ, ಆ ಸಂಸ್ಥೆಯ ವ್ಯಕ್ತಿಗತ ಸದಸ್ಯರಿಗೆ ಯಾವ ನಿರೀಕ್ಷೆಯಿದೆ?

14 ಕೊನೆಗೂ ಮೋವಾಬಿನ ಬಾಯಿಮುಚ್ಚಿಸಲಾಯಿತು. ಕ್ರೈಸ್ತಪ್ರಪಂಚಕ್ಕೂ ಅದೇ ಸಂಭವಿಸುವುದು. ಆಧುನಿಕ ದಿನದ ಅಶ್ಶೂರವನ್ನು ಉಪಯೋಗಿಸುತ್ತಾ, ಯೆಹೋವನು ಅದನ್ನು ನಾಶಮಾಡುವನು. (ಪ್ರಕಟನೆ 17:​16, 17) ಆದರೆ, ಈ ಆಧುನಿಕ ದಿನದ ‘ಮೋವಾಬ್‌’ನಲ್ಲಿರುವ ಜನರಿಗೆ ಒಂದು ನಿರೀಕ್ಷೆಯಿದೆ. ಮೋವಾಬಿನ ವಿರುದ್ಧ ಪ್ರವಾದಿಸುತ್ತಾ, ಯೆಶಾಯನು ಹೇಳುವುದು: “ಇದಲ್ಲದೆ ಸಿಂಹಾಸನವು ಕೃಪಾಧಾರದ ಮೇಲೆ ಸ್ಥಾಪಿತವಾಗಿದೆ; ರಾಜ್ಯಭಾರಪ್ರವೀಣನೂ ಧರ್ಮಾಸಕ್ತನೂ ನ್ಯಾಯನಿಪುಣನೂ ಆದವನು ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತಿದ್ದಾನೆ.” (ಯೆಶಾಯ 16:5) 1914ರಲ್ಲಿ, ಯೆಹೋವನು ಯೇಸುವಿನ ಸಿಂಹಾಸನವನ್ನು ದೃಢವಾಗಿ ಸ್ಥಾಪಿಸಿದನು. ಇವನು ರಾಜ ದಾವೀದನ ವಂಶದಲ್ಲಿ ಹುಟ್ಟಿಬಂದ ಒಬ್ಬ ಅರಸನಾಗಿದ್ದನು. ಯೇಸುವಿನ ರಾಜತ್ವವು ಯೆಹೋವನ ಪ್ರೀತಿ ದಯೆಯ ಸಂಕೇತವಾಗಿದೆ, ಮತ್ತು ದೇವರು ರಾಜ ದಾವೀದನೊಂದಿಗೆ ಮಾಡಿದ್ದ ಒಡಂಬಡಿಕೆಯನ್ನು ನೆರವೇರಿಸುತ್ತಾ ಅದು ತಲತಲಾಂತರಗಳಿಗೂ ಮುಂದುವರಿಯುವುದು. (ಕೀರ್ತನೆ 72:2; 85:​10, 11; 89:​3, 4; ಲೂಕ 1:32) ಅನೇಕ ದೀನರು ಆಧುನಿಕ ದಿನದ ‘ಮೋವಾಬ್‌’ ಅನ್ನು ಬಿಟ್ಟು, ಜೀವವನ್ನು ಪಡೆಯುವುದಕ್ಕೋಸ್ಕರ ಯೇಸುವಿಗೆ ತಮ್ಮನ್ನು ಅಧೀನಪಡಿಸಿಕೊಂಡಿದ್ದಾರೆ. (ಪ್ರಕಟನೆ 18:⁠4) ಯೇಸು “ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು” ಎಂಬ ವಿಷಯವು ತಾನೇ ಅವರಿಗೆಷ್ಟು ಸಾಂತ್ವನವನ್ನು ನೀಡುತ್ತದೆ!​—⁠ಮತ್ತಾಯ 12:18; ಯೆರೆಮೀಯ 33:⁠15.

ದಮಸ್ಕವು ಕೊಳೆಯುತ್ತಿರುವ ಅವಶೇಷವಾಗುತ್ತದೆ

15, 16. (ಎ) ಯೆಹೂದದ ವಿರುದ್ಧ ದಮಸ್ಕವೂ ಇಸ್ರಾಯೇಲೂ ಏನು ಮಾಡುತ್ತವೆ, ಮತ್ತು ಇದರಿಂದ ದಮಸ್ಕಕ್ಕೆ ಏನಾಗುತ್ತದೆ? (ಬಿ) ದಮಸ್ಕದ ವಿರುದ್ಧವಿರುವ ದೈವೋಕ್ತಿಯಲ್ಲಿ ಯಾರು ಕೂಡ ಸೇರಿಸಲ್ಪಟ್ಟಿದ್ದಾರೆ? (ಸಿ) ಇಸ್ರಾಯೇಲಿನ ಉದಾಹರಣೆಯಿಂದ ಇಂದು ಕ್ರೈಸ್ತರು ಏನನ್ನು ಕಲಿಯಸಾಧ್ಯವಿದೆ?

15 ಮುಂದೆ, ಯೆಶಾಯನು “ದಮಸ್ಕದ ವಿಷಯವಾದ ದೈವೋಕ್ತಿ”ಯನ್ನು ದಾಖಲಿಸುತ್ತಾನೆ. (ಓದಿ ಯೆಶಾಯ 17:​1-6.) ಇಸ್ರಾಯೇಲಿನ ಉತ್ತರ ದಿಕ್ಕಿನಲ್ಲಿರುವ ದಮಸ್ಕವು, “ಅರಾಮಿಗೆ ಶಿರಸ್ಸು” ಆಗಿದೆ. (ಯೆಶಾಯ 7:⁠8) ರಾಜ ಆಹಾಜನು ಯೆಹೂದದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ದಮಸ್ಕದ ರೆಚೀನನು ಇಸ್ರಾಯೇಲಿನ ಪೆಕಹನೊಂದಿಗೆ ಸೇರಿ ಯೆಹೂದವನ್ನು ಆಕ್ರಮಿಸುತ್ತಾನೆ. ಆದರೆ ಆಹಾಜನ ವಿನಂತಿಯ ಮೇರೆಗೆ, ಅಶ್ಶೂರ್ಯರ ರಾಜನಾದ ತಿಗ್ಲತ್ಪಿಲೆಸರನು ದಮಸ್ಕದ ವಿರುದ್ಧ ಯುದ್ಧಮಾಡಿ, ಅದರ ಮೇಲೆ ಜಯಸಾಧಿಸುವುದರ ಜೊತೆಗೆ ಅದರ ನಿವಾಸಿಗಳಲ್ಲಿ ಅನೇಕರನ್ನು ದೇಶಭ್ರಷ್ಟರನ್ನಾಗಿ ಕೊಂಡೊಯ್ಯುತ್ತಾನೆ. ಇನ್ನು ಮುಂದೆ, ದಮಸ್ಕವು ಯೆಹೂದಕ್ಕೆ ಒಂದು ಬೆದರಿಕೆಯಾಗಿ ಇರುವುದಿಲ್ಲ.​—⁠2 ಅರಸುಗಳು 16:​5-9; 2 ಪೂರ್ವಕಾಲವೃತ್ತಾಂತ 28:​5, 16.

16 ಇಸ್ರಾಯೇಲಿಗೆ ದಮಸ್ಕದೊಂದಿಗೆ ಸಂಬಂಧವಿದೆ. ಆದುದರಿಂದಲೇ, ದಮಸ್ಕದ ವಿರುದ್ಧ ಯೆಹೋವನು ನುಡಿದ ದೈವೋಕ್ತಿಯಲ್ಲಿ ಅಪನಂಬಿಗಸ್ತ ಉತ್ತರ ರಾಜ್ಯದ ವಿರುದ್ಧವೂ ನ್ಯಾಯತೀರ್ಪುಗಳಿರುವುದನ್ನು ನಾವು ಕಾಣುತ್ತೇವೆ. (ಯೆಶಾಯ 17:​3-6) ಇಸ್ರಾಯೇಲು, ಕೊಯ್ಲಿನ ಸಮಯದಲ್ಲಿ ಕೊಂಚವೇ ಫಲವನ್ನು ಕೊಡುವ ಹೊಲದಂತೆ, ಇಲ್ಲವೆ ರೆಂಬೆಗಳಿಂದ ಹೆಚ್ಚಿನ ಆಲಿವ್‌ಹಣ್ಣುಗಳು ಈಗಾಗಲೇ ತೆಗೆಯಲ್ಪಟ್ಟಿರುವ ಆಲಿವ್‌ ಮರದಂತಾಗುವುದು. (ಯೆಶಾಯ 17:​4-6) ಯೆಹೋವನಿಗೆ ಸಮರ್ಪಿತರಾಗಿರುವ ಎಲ್ಲರಿಗೂ ಇದೆಂತಹ ವಿಚಾರಪ್ರೇರಕ ಉದಾಹರಣೆಯಾಗಿದೆ! ಆತನು ಅನನ್ಯ ಭಕ್ತಿಯನ್ನು ಅಪೇಕ್ಷಿಸುವುದರ ಜೊತೆಗೆ, ಪೂರ್ಣ ಹೃದಯದ ಪವಿತ್ರ ಸೇವೆಯನ್ನು ಮಾತ್ರ ಸ್ವೀಕರಿಸುತ್ತಾನೆ. ಮತ್ತು ತಮ್ಮ ಸಹೋದರರ ವಿರುದ್ಧ ತಿರುಗಿ ಬೀಳುವವರನ್ನು ಆತನು ದ್ವೇಷಿಸುತ್ತಾನೆ.​—⁠ವಿಮೋಚನಕಾಂಡ 20:5; ಯೆಶಾಯ 17:​10, 11; ಮತ್ತಾಯ 24:​48-50.

ಯೆಹೋವನಲ್ಲಿ ಪೂರ್ಣ ಭರವಸೆ

17, 18. (ಎ) ಇಸ್ರಾಯೇಲಿನಲ್ಲಿರುವ ಕೆಲವರು ಯೆಹೋವನ ದೈವೋಕ್ತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಮತ್ತು ಸಾಮಾನ್ಯ ಪ್ರತಿಕ್ರಿಯೆಯು ಏನಾಗಿದೆ? (ಬಿ) ಇಂದಿನ ಘಟನೆಗಳು ಹಿಜ್ಕೀಯನ ದಿನದ ಘಟನೆಗಳಿಗೆ ಹೇಗೆ ಹೋಲುತ್ತವೆ?

17 ಯೆಶಾಯನು ಈಗ ಹೇಳುವುದು: “ಆ ದಿನದಲ್ಲಿ ಜನರು ತಮ್ಮ ಕೈಯಿಂದ ಮಾಡಿದ ಬಲಿಪೀಠಗಳನ್ನು ಲಕ್ಷಿಸದೆಯೂ ತಮ್ಮ ಬೆರಳುಗಳಿಂದ ನಿರ್ಮಿಸಿದ ಅಶೇರವೆಂಬ ವಿಗ್ರಹಸ್ತಂಭಗಳನ್ನಾಗಲಿ ಸೂರ್ಯಸ್ತಂಭಗಳನ್ನಾಗಲಿ ದೃಷ್ಟಿಸದೆಯೂ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯ ಕಡೆಗೇ ಕಣ್ಣಿಡುವರು.” (ಯೆಶಾಯ 17:7, 8) ಹೌದು, ಇಸ್ರಾಯೇಲಿನಲ್ಲಿರುವ ಕೆಲವರು ಯೆಹೋವನ ಎಚ್ಚರಿಕೆಗೆ ಕಿವಿಗೊಡುತ್ತಾರೆ. ಉದಾಹರಣೆಗೆ, ಪಸ್ಕದ ಆಚರಣೆಗಾಗಿ ಇಸ್ರಾಯೇಲಿನ ಎಲ್ಲ ನಿವಾಸಿಗಳು ಯೆಹೂದದೊಂದಿಗೆ ಸೇರುವಂತೆ ಹಿಜ್ಕೀಯನು ಆಮಂತ್ರಣ ಕಳುಹಿಸಿದಾಗ, ಕೆಲವು ಇಸ್ರಾಯೇಲ್ಯರು ಅದಕ್ಕೆ ಓಗೊಟ್ಟು, ಶುದ್ಧಾರಾಧನೆಯಲ್ಲಿ ತಮ್ಮ ಸಹೋದರರೊಂದಿಗೆ ಸೇರಿಕೊಳ್ಳಲು ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. (2 ಪೂರ್ವಕಾಲವೃತ್ತಾಂತ 30:​1-12) ಆದರೆ ಹೆಚ್ಚಿನ ಇಸ್ರಾಯೇಲ್ಯರು, ಆಮಂತ್ರಣವನ್ನು ನೀಡಲು ಬಂದ ಸಂದೇಶವಾಹಕರನ್ನು ಗೇಲಿಮಾಡುತ್ತಾರೆ. ಧರ್ಮಭ್ರಷ್ಟತೆಯಿಂದ ತುಂಬಿತುಳುಕುವ ದೇಶವನ್ನು ಗುಣಪಡಿಸಲು ಸಾಧ್ಯವೇ ಇಲ್ಲ. ಆದಕಾರಣ, ಅದರ ಬಗ್ಗೆ ಯೆಹೋವನು ನುಡಿದ ಉದ್ದೇಶವು ನೆರವೇರುತ್ತದೆ. ಇಸ್ರಾಯೇಲಿನ ನಗರಗಳನ್ನು ಅಶ್ಶೂರವು ನಾಶಮಾಡುತ್ತದೆ, ದೇಶವು ಪಾಳು ನಿವೇಶನವಾಗುತ್ತದೆ ಮತ್ತು ಹುಲ್ಲುಗಾವಲುಗಳಿಂದ ಯಾವ ಫಲವೂ ದೊರೆಯದೆ ಹೋಗುತ್ತದೆ.​—⁠ಓದಿ ಯೆಶಾಯ 17:​9-11.

18 ಇಂದಿನ ಕುರಿತೇನು? ಇಸ್ರಾಯೇಲ್‌ ಧರ್ಮಭ್ರಷ್ಟ ಜನಾಂಗವಾಗಿತ್ತು. ಆದುದರಿಂದ, ಆ ಜನಾಂಗದ ನಿವಾಸಿಗಳು ಸತ್ಯಾರಾಧನೆಗೆ ಹಿಂದಿರುಗುವಂತೆ ಹಿಜ್ಕೀಯನು ಪಟ್ಟ ಪ್ರಯಾಸವು, ಇಂದು ಧರ್ಮಭ್ರಷ್ಟ ಕ್ರೈಸ್ತಪ್ರಪಂಚದಲ್ಲಿರುವ ವ್ಯಕ್ತಿಗಳಿಗೆ ಸಹಾಯಮಾಡಲು ಸತ್ಯ ಕ್ರೈಸ್ತರು ಪಡುತ್ತಿರುವ ಪ್ರಯಾಸದ ಬಗ್ಗೆ ನಮಗೆ ಜ್ಞಾಪಕಹುಟ್ಟಿಸುತ್ತದೆ. 1919ರಿಂದ, ‘ದೇವರ ಇಸ್ರಾಯೇಲಿನ’ ಸಂದೇಶವಾಹಕರು, ಕ್ರೈಸ್ತಪ್ರಪಂಚದಲ್ಲಿರುವ ಜನರಿಗೆ ಶುದ್ಧಾರಾಧನೆಯಲ್ಲಿ ಭಾಗವಹಿಸುವ ಆಮಂತ್ರಣವನ್ನು ನೀಡುತ್ತಾ ಬಂದಿದ್ದಾರೆ. (ಗಲಾತ್ಯ 6:16) ಹೆಚ್ಚಿನವರು ಈ ಆಮಂತ್ರಣಕ್ಕೆ ಓಗೊಟ್ಟಿಲ್ಲ. ಅನೇಕರು ಈ ಆಮಂತ್ರಣವನ್ನು ಕೊಡಲು ಬಂದ ಸಂದೇಶವಾಹಕರನ್ನು ಗೇಲಿಮಾಡಿದ್ದಾರೆ. ಆದರೆ ಕೆಲವರು ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ. ಲಕ್ಷಾಂತರ ಸಂಖ್ಯೆಯನ್ನು ಮುಟ್ಟಿರುವ ಇವರು, ‘ಇಸ್ರಾಯೇಲ್ಯರ ಸದಮಲಸ್ವಾಮಿಯ ಕಡೆಗೇ ಕಣ್ಣಿಡುವುದರಲ್ಲಿ’ ಹರ್ಷಿಸುತ್ತಾ, ಆತನಿಂದ ಶಿಕ್ಷಿಸಲ್ಪಡುತ್ತಾರೆ. (ಯೆಶಾಯ 54:13) ಇವರು ಅಪವಿತ್ರ ಬಲಿಪೀಠಗಳಲ್ಲಿ ಆರಾಧಿಸುವುದಿಲ್ಲ, ಅಂದರೆ ಮಾನವ ನಿರ್ಮಿತ ದೇವರುಗಳಲ್ಲಿ ಭಕ್ತಿ ಹಾಗೂ ಭರವಸೆಯನ್ನಿಡುವುದಿಲ್ಲ, ಬದಲಿಗೆ ಯೆಹೋವನ ಕಡೆಗೆ ತಿರುಗುತ್ತಾರೆ. (ಕೀರ್ತನೆ 146:​3, 4) ಯೆಶಾಯನ ಸಮಕಾಲೀನನಾದ ಮೀಕನಂತೆ, ಅವರಲ್ಲಿ ಪ್ರತಿಯೊಬ್ಬರೂ ಹೇಳುವುದು: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.”​—⁠ಮೀಕ 7:⁠7.

19. ಯೆಹೋವನು ಯಾರನ್ನು ಗದರಿಸುವನು, ಮತ್ತು ಇದು ಅವರಿಗೆ ಯಾವ ಅರ್ಥದಲ್ಲಿರುವುದು?

19 ಮನುಷ್ಯಮಾತ್ರದವರನ್ನು ನೆಚ್ಚುವವರಿಗಿಂತ ಇವರು ಎಷ್ಟು ಭಿನ್ನರು! ಈ ಕಡೇ ದಿವಸಗಳಲ್ಲಿ, ಹಿಂಸಾಚಾರದ ಉಗ್ರ ಅಲೆಗಳು ಮತ್ತು ಕೋಲಾಹಲವು ಮಾನವವರ್ಗವನ್ನು ನಿರಂತರವಾಗಿ ತಾಕುತ್ತಿದೆ. ದಂಗೆಕೋರ ಮಾನವವರ್ಗದ ಅವಿಶ್ರಾಂತ “ಸಮುದ್ರವು,” ಗಲಿಬಿಲಿ ಮತ್ತು ಕ್ರಾಂತಿಯನ್ನು ಕೆರಳಿಸುತ್ತದೆ. (ಯೆಶಾಯ 57:20; ಪ್ರಕಟನೆ 8:8, 9; 13:⁠1) ಗದ್ದಲಮಾಡುವ ಈ ಸಮೂಹವನ್ನು ಯೆಹೋವನು ‘ಗದರಿಸುವನು.’ ಆತನ ಸ್ವರ್ಗೀಯ ರಾಜ್ಯವು, ತೊಂದರೆಯನ್ನುಂಟುಮಾಡುವ ಪ್ರತಿಯೊಂದು ಸಂಸ್ಥೆ ಹಾಗೂ ವ್ಯಕ್ತಿಯನ್ನು ನಾಶಮಾಡುವುದು ಮತ್ತು ಇವರು “ದೂರ ಓಡಿಹೋಗಿ . . . ಸುಂಟರಗಾಳಿಯಿಂದ ಸುತ್ತಿಯಾಡುವ ದೂಳಿನಂತೆಯೂ ಅಟ್ಟಲ್ಪಡುವರು.”​—ಯೆಶಾಯ 17:​12, 13; ಪ್ರಕಟನೆ 16:​14, 16.

20. ರಾಷ್ಟ್ರಗಳಿಂದ ‘ಕೊಳ್ಳೆಹೊಡೆಯಲ್ಪಟ್ಟರೂ’ ನಿಜ ಕ್ರೈಸ್ತರಿಗೆ ಯಾವ ಭರವಸೆಯಿದೆ?

20 ಇದರ ಪರಿಣಾಮ? ಯೆಶಾಯನು ಹೇಳುವುದು: “ಇಗೋ, ಸಂಜೆಯಲ್ಲಿ ದಿಗಿಲುಬಿದ್ದು ಉದಯದೊಳಗಾಗಿ ಇಲ್ಲವಾಗುವರು! ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ, ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.” (ಯೆಶಾಯ 17:14) ಅನೇಕರು ಯೆಹೋವನ ಜನರನ್ನು ಕೊಳ್ಳೆಹೊಡೆಯುತ್ತಾ, ಅವರನ್ನು ಕಠೋರವಾಗಿಯೂ ಅವಮರ್ಯಾದೆಯಿಂದಲೂ ನಡೆಸಿಕೊಳ್ಳುತ್ತಿದ್ದಾರೆ. ಸತ್ಯ ಕ್ರೈಸ್ತರು ಲೋಕದ ಮುಖ್ಯ ಧರ್ಮಗಳ ಒಂದು ಭಾಗವಾಗಿಲ್ಲ ಮತ್ತು ಭಾಗವಾಗಲು ಬಯಸದಿರುವುದರಿಂದ, ಪಕ್ಷಪಾತಿ ವಿಮರ್ಶಕರ ಮತ್ತು ಮತಭ್ರಾಂತ ವಿರೋಧಿಗಳ ಕಣ್ಣಿಗೆ ಇವರು ಸುಲಭದ ಬೇಟೆಯಾಗಿ ತೋರುತ್ತಾರೆ. ಆದರೆ ತಮ್ಮ ಸಂಕಟಗಳೆಲ್ಲ ಅಂತ್ಯಗೊಳ್ಳಲಿರುವ ‘ಉದಯವು’ ಅತಿವೇಗವಾಗಿ ಬರುತ್ತಿದೆ ಎಂಬ ಭರವಸೆ ದೇವರ ಈ ಜನರಿಗಿದೆ.​—⁠2 ಥೆಸಲೊನೀಕ 1:​6-9; 1 ಪೇತ್ರ 5:​6-11.

ಕೂಷ್‌ ಯೆಹೋವನಿಗೆ ಒಂದು ಕಾಣಿಕೆಯನ್ನು ತರುತ್ತದೆ

21, 22. ಮುಂದೆ ಯಾವ ಜನಾಂಗವು ನ್ಯಾಯತೀರ್ಪನ್ನು ಪಡೆಯುತ್ತದೆ, ಮತ್ತು ಯೆಶಾಯನ ಪ್ರೇರಿತ ಮಾತುಗಳು ಹೇಗೆ ನೆರವೇರುತ್ತವೆ?

21 ಐಗುಪ್ತದ ದಕ್ಷಿಣಕ್ಕಿರುವ ಕೂಷ್‌ (ಇಥಿಯೋಪಿಯ), ಕಡಿಮೆಪಕ್ಷ ಎರಡು ಸಂದರ್ಭಗಳಲ್ಲಿಯಾದರೂ ಯೆಹೂದದ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. (2 ಪೂರ್ವಕಾಲವೃತ್ತಾಂತ 12:​2, 3; 14:​1, 9-15; 16:8) ಈಗ ಯೆಶಾಯನು ಈ ಜನಾಂಗದ ವಿರುದ್ಧ ನ್ಯಾಯತೀರ್ಪನ್ನು ಮುಂತಿಳಿಸುತ್ತಾನೆ: “ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳು ಪಟಪಟನೆ ಆಡುವ ನಾಡು.” (ಓದಿ ಯೆಶಾಯ 18:​1-6.) * ಕೂಷ್‌ ‘ಕತ್ತರಿಸಲ್ಪಡುವುದು ಮತ್ತು ಕಡಿದುಹಾಕಲ್ಪಡುವುದು’ ಎಂಬುದಾಗಿ ಯೆಹೋವನು ತೀರ್ಪು ವಿಧಿಸುತ್ತಾನೆ.

22 ಸಾ.ಶ.ಪೂ. ಎಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಇಥಿಯೋಪಿಯವು ಐಗುಪ್ತವನ್ನು ಸೋಲಿಸಿ, 60 ವರ್ಷಗಳ ವರೆಗೆ ಅದನ್ನಾಳಿತು ಎಂಬುದಾಗಿ ಐಹಿಕ ಇತಿಹಾಸವು ತಿಳಿಸುತ್ತದೆ. ತದನಂತರ ಅಶ್ಶೂರ ಚಕ್ರವರ್ತಿಗಳಾದ ಏಸರ್‌ಹದ್ದೋನ್‌ ಮತ್ತು ಅಶೂರ್‌ಬಾನಿಪಲ್‌ ಐಗುಪ್ತದ ಮೇಲೆ ಮುತ್ತಿಗೆ ಹಾಕಿದರು. ಥೀಬ್ಸ್‌ ನಗರವನ್ನು ಆಸೆನಪ್ಪರ್‌ ನಾಶಮಾಡಿದ ತರುವಾಯ, ಅಶ್ಶೂರವು ಐಗುಪ್ತವನ್ನು ಸೋಲಿಸಿ, ನೈಲ್‌ ಕಣಿವೆಯಲ್ಲಿ ಇಥಿಯೋಪಿಯದ ಪ್ರಭುತ್ವವನ್ನು ಕೊನೆಗಾಣಿಸಿತು. (ಯೆಶಾಯ 20:​3-6ನ್ನು ಸಹ ನೋಡಿರಿ.) ಆಧುನಿಕ ಸಮಯಗಳ ಕುರಿತೇನು?

23. ಆಧುನಿಕ ದಿನದ ‘ಕೂಷ್‌’ ಯಾವ ಪಾತ್ರವನ್ನು ವಹಿಸುತ್ತದೆ, ಮತ್ತು ಯಾವ ಕಾರಣಕ್ಕಾಗಿ ಅದು ಕೊನೆಗೊಳ್ಳುತ್ತದೆ?

23 “ಅಂತ್ಯಕಾಲದ” ಕುರಿತಾದ ದಾನಿಯೇಲನ ಪ್ರವಾದನೆಯಲ್ಲಿ, ಆಕ್ರಮಣಶೀಲ “ಉತ್ತರರಾಜ”ನನ್ನು ಲೂಬ್ಯರೂ ಕೂಷ್ಯರೂ (ಇಥಿಯೋಪಿಯದವರು) “ಹಿಂಬಾಲಿಸಿ ಹೋಗುವರು” ಎಂಬುದಾಗಿ ತಿಳಿಸಲಾಗಿದೆ. ಅಂದರೆ, ಅವನ ತಾಳಕ್ಕೆ ತಕ್ಕಂತೆ ಅವರು ಕುಣಿಯುವರು. (ದಾನಿಯೇಲ 11:​40-43) ಕೂಷ್ಯರು “ಮಾಗೋಗ್‌ ದೇಶದ . . . ಗೋಗನ” ಯುದ್ಧ ಪಡೆಗಳಲ್ಲಿ ಇರುವುದಾಗಿಯೂ ತಿಳಿಸಲಾಗಿದೆ. (ಯೆಹೆಜ್ಕೇಲ 38:​2-6, 8) ಉತ್ತರರಾಜನನ್ನು ಒಳಗೂಡಿರುವ ಗೋಗನ ಪಡೆಗಳು, ಯೆಹೋವನ ಪವಿತ್ರ ಜನಾಂಗದ ಮೇಲೆ ದಾಳಿಮಾಡುವಾಗ ನಾಶವಾಗುವವು. ಹೀಗೆ, ಆಧುನಿಕ ದಿನದ ‘ಕೂಷ್‌’ನ ಮೇಲೆಯೂ ಯೆಹೋವನ ಕೈ ಚಾಚಿರುವುದು, ಏಕೆಂದರೆ ಅದು ಕೂಡ ಯೆಹೋವನ ಪರಮಾಧಿಕಾರವನ್ನು ವಿರೋಧಿಸಿದೆ.​—⁠ಯೆಹೆಜ್ಕೇಲ 38:⁠21-23; ದಾನಿಯೇಲ 11:⁠45.

24. ಯಾವ ವಿಧಗಳಲ್ಲಿ ಯೆಹೋವನು ಜನಾಂಗಗಳಿಂದ “ಕಾಣಿಕೆಗಳನ್ನು” ಪಡೆದುಕೊಂಡಿದ್ದಾನೆ?

24 ಆದರೂ ಈ ಪ್ರವಾದನೆಯು ಹೀಗೆ ಹೇಳುತ್ತದೆ: “ಆ ಕಾಲದಲ್ಲಿ ಉನ್ನತರಾದ ನುಣುಪಿನ ಮೈಯವರೂ ಸರ್ವದಾ ಭಯಂಕರರೂ . . . ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮಮಹತ್ತಿರುವ ಚೀಯೋನ್‌ ಪರ್ವತಕ್ಕೆ ಆತನಿಗೋಸ್ಕರ ಕಾಣಿಕೆಯನ್ನು ತರುವರು.” (ಯೆಶಾಯ 18:7) ರಾಷ್ಟ್ರಗಳು ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸದಿದ್ದರೂ, ಯೆಹೋವನ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕೆಲವೊಮ್ಮೆ ನಡೆದುಕೊಂಡಿವೆ. ಕೆಲವು ದೇಶದ ಅಧಿಕಾರಿಗಳು, ಯೆಹೋವನ ನಂಬಿಗಸ್ತ ಆರಾಧಕರಿಗೆ ಶಾಸನಬದ್ಧವಾದ ಹಕ್ಕುಗಳನ್ನು ನೀಡಲು ಕಟ್ಟಳೆಗಳನ್ನು ಮತ್ತು ನ್ಯಾಯಾಲಯದ ತೀರ್ಪುಗಳನ್ನು ವಿಧಿಸಿದ್ದಾರೆ. (ಅ. ಕೃತ್ಯಗಳು 5:29; ಪ್ರಕಟನೆ 12:​15, 16) ಇದರೊಂದಿಗೆ ಬೇರೆ ಕಾಣಿಕೆಗಳು ಸಹ ಇವೆ. “ಅರಸುಗಳು . . . ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ. . . . ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್‌ [ಇಥಿಯೋಪಿಯ] ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರಪಡುವವು.” (ಕೀರ್ತನೆ 68:29-31) ಇಂದು, ಲಕ್ಷಾಂತರ ಆಧುನಿಕ ದಿನದ ‘ಕೂಷ್ಯರು’ ಯೆಹೋವನಿಗೆ ಭಯಪಡುತ್ತಾ, ಆರಾಧನೆಯ ರೂಪದಲ್ಲಿ “ಕಾಣಿಕೆಯನ್ನು” (NW) ತರುತ್ತಿದ್ದಾರೆ. (ಮಲಾಕಿಯ 1:11) ಇಡೀ ಭೂಮಿಯಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವ ಬೃಹತ್‌ ಕೆಲಸದಲ್ಲಿ ಅವರು ಭಾಗವಹಿಸುತ್ತಿದ್ದಾರೆ. (ಮತ್ತಾಯ 24:14; ಪ್ರಕಟನೆ 14:​6, 7) ಇದು ಯೆಹೋವನಿಗೆ ಎಂತಹ ಉತ್ತಮ ಕಾಣಿಕೆಯಾಗಿದೆ!​—⁠ಇಬ್ರಿಯ 13:⁠15.

ಐಗುಪ್ತದ ಹೃದಯವು ಕರಗುತ್ತದೆ

25. ಯೆಶಾಯ 19:​1-11ರ ನೆರವೇರಿಕೆಯಲ್ಲಿ ಪುರಾತನ ಐಗುಪ್ತಕ್ಕೆ ಏನು ಸಂಭವಿಸುತ್ತದೆ?

25 ಯೆಹೂದದ ಪಕ್ಕದಲ್ಲಿ, ಅಂದರೆ ದಕ್ಷಿಣ ಭಾಗದಲ್ಲಿ ಐಗುಪ್ತವಿದೆ. ಇದು ದೀರ್ಘ ಸಮಯದಿಂದಲೂ ದೇವರ ಒಡಂಬಡಿಕೆಯ ಜನರ ವೈರಿಯಾಗಿದೆ. ಯೆಶಾಯನ ಜೀವಮಾನದಲ್ಲಿ, ಐಗುಪ್ತದಲ್ಲಿ ನೆಲೆಸಿದ್ದ ಅವ್ಯವಸ್ಥೆಯ ಬಗ್ಗೆ ಯೆಶಾಯ 19ನೆಯ ಅಧ್ಯಾಯವು ವಿವರಿಸುತ್ತದೆ. ಐಗುಪ್ತದಲ್ಲಿ ಆಂತರಿಕ ಕಲಹವಿದೆ, “ಪಟ್ಟಣ ಪಟ್ಟಣಗಳು, ರಾಷ್ಟ್ರರಾಷ್ಟ್ರಗಳು ಪರಸ್ಪರವಾಗಿ ಹೋರಾಡು”ತ್ತಿವೆ. (ಯೆಶಾಯ 19:​2, 13, 14) ಒಂದೇ ಕಾಲಾವಧಿಯಲ್ಲಿ ಆ ದೇಶದ ವಿಭಿನ್ನ ಭಾಗಗಳಲ್ಲಿ ಪ್ರತಿಸ್ಪರ್ಧಿ ರಾಜವಂಶಗಳು ಆಳುತ್ತಿದ್ದವೆಂಬುದರ ಬಗ್ಗೆ ಇತಿಹಾಸಗಾರರು ಪ್ರಮಾಣ ನೀಡುತ್ತಾರೆ. ಐಗುಪ್ತವನ್ನು, ಅದು ಬಡಾಯಿಕೊಚ್ಚಿಕೊಳ್ಳುವ ವಿವೇಕವಾಗಲಿ, ಅದರ ‘ಕೆಲಸಕ್ಕೆ ಬಾರದ ವಿಗ್ರಹಗಳಾಗಲಿ ಮಂತ್ರಗಾರರಾಗಲಿ’ “ಕ್ರೂರನಾದ ಒಡೆಯನ ಕೈ”ಯಿಂದ ರಕ್ಷಿಸಲಾರವು. (ಯೆಶಾಯ 19:​3, 4) ಐಗುಪ್ತವು ಅನುಕ್ರಮವಾಗಿ ಅಶ್ಶೂರ, ಬಾಬೆಲ್‌, ಪಾರಸೀಯ, ಗ್ರೀಸ್‌ ಮತ್ತು ರೋಮನರಿಂದ ಜಯಿಸಲ್ಪಡುತ್ತದೆ. ಈ ಎಲ್ಲ ಘಟನೆಗಳು ಯೆಶಾಯ 19:​1-11ರಲ್ಲಿರುವ ಪ್ರವಾದನೆಗಳನ್ನು ನೆರವೇರಿಸುತ್ತವೆ.

26. ದೊಡ್ಡ ನೆರವೇರಿಕೆಯಲ್ಲಿ, ಆಧುನಿಕ ದಿನದ ‘ಐಗುಪ್ತವು’ ಯೆಹೋವನ ನ್ಯಾಯತೀರ್ಪಿನ ಕ್ರಿಯೆಗಳಿಗೆ ಹೇಗೆ ಪ್ರತಿಕ್ರಿಯಿಸುವುದು?

26 ಬೈಬಲಿನಲ್ಲಿ, ಐಗುಪ್ತವು ಅನೇಕ ವೇಳೆ ಸೈತಾನನ ಲೋಕವನ್ನು ಪ್ರತಿನಿಧಿಸುತ್ತದೆ. (ಯೆಹೆಜ್ಕೇಲ 29:3; ಯೋವೇಲ 3:19; ಪ್ರಕಟನೆ 11:⁠8) ಹಾಗಾದರೆ, “ಐಗುಪ್ತದ ವಿಷಯವಾದ ದೈವೋಕ್ತಿ”ಗೆ ದೊಡ್ಡ ನೆರವೇರಿಕೆಯಿದೆಯೊ? ಹೌದು, ಖಂಡಿತವಾಗಿಯೂ ಇದೆ. ಎಲ್ಲರೂ ಅದಕ್ಕೆ ಗಮನ ಹರಿಸುವಂತೆ ಈ ಪ್ರವಾದನೆಯ ಆರಂಭದ ಮಾತುಗಳು ನಮ್ಮನ್ನು ಪ್ರೇರಿಸಬೇಕು: “ಇಗೋ, ಯೆಹೋವನು ವೇಗಮೇಘವಾಹನನಾಗಿ ಐಗುಪ್ತಕ್ಕೆ ಬರುವನು; ಆತನು ಸಮ್ಮುಖನಾದಾಗ ಐಗುಪ್ತದ ವಿಗ್ರಹಗಳು ನಡುಗುವವು, ಐಗುಪ್ತ್ಯರ ಹೃದಯವು ತಮ್ಮೊಳಗೆ ಕರಗಿ ನೀರಾಗುವದು.” (ಯೆಶಾಯ 19:1) ಯೆಹೋವನು ಬೇಗನೇ ಸೈತಾನನ ಸಂಸ್ಥೆಯ ವಿರುದ್ಧ ಕ್ರಿಯೆಗೈಯುವನು. ಆಗ, ಈ ವಿಷಯಗಳ ವ್ಯವಸ್ಥೆಯ ದೇವರುಗಳು ಕೇವಲ ಬೊಂಬೆಗಳಂತಿರುವರು. (ಕೀರ್ತನೆ 96:5; 97:⁠7) ಭಯದಲ್ಲಿ ‘ಐಗುಪ್ತದ ಹೃದಯವು ಕರಗುವುದು.’ ಯೇಸು ಆ ಸಮಯದ ಕುರಿತು ಮುಂತಿಳಿಸಿದನು: “ಇದಲ್ಲದೆ . . . ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. . . . ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.”​—⁠ಲೂಕ 21:25, 26.

27. ಯಾವ ಆಂತರಿಕ ವಿಭಜನೆಗಳ ಬಗ್ಗೆ ‘ಐಗುಪ್ತಕ್ಕೆ’ ಮುಂತಿಳಿಸಲಾಗಿತ್ತು, ಮತ್ತು ಅದು ಇಂದು ಹೇಗೆ ನೆರವೇರುತ್ತಿದೆ?

27 ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸುವ ಸಮಯದ ಕುರಿತು ಯೆಹೋವನು ಪ್ರವಾದನಾತ್ಮಕವಾಗಿ ಹೇಳುವುದು: “ಐಗುಪ್ತ್ಯರನ್ನು ಐಗುಪ್ತ್ಯರ ಮೇಲೆಯೇ ಎಬ್ಬಿಸುವೆನು; ಅಣ್ಣತಮ್ಮಂದಿರು, ನೆರೆಹೊರೆಯವರು, ಪಟ್ಟಣ ಪಟ್ಟಣಗಳು, ರಾಷ್ಟ್ರರಾಷ್ಟ್ರಗಳು ಪರಸ್ಪರವಾಗಿ ಹೋರಾಡುವವು.” (ಯೆಶಾಯ 19:2) ದೇವರ ರಾಜ್ಯವು 1914ರಲ್ಲಿ ಸ್ಥಾಪಿತವಾದಂದಿನಿಂದ, “[ಯೇಸುವಿನ] ಸಾನ್ನಿಧ್ಯದ ಸೂಚನೆಯು” (NW), ರಾಷ್ಟ್ರದ ವಿರುದ್ಧವಾಗಿ ರಾಷ್ಟ್ರವು ರಾಜ್ಯದ ವಿರುದ್ಧವಾಗಿ ರಾಜ್ಯವು ಏಳುವುದರಿಂದ ಗುರುತಿಸಲ್ಪಟ್ಟಿದೆ. ಜಾತಿಸಂಬಂಧಿತ ಕಗ್ಗೊಲೆಗಳು, ರಕ್ತಮಯ ಕುಲಹತ್ಯೆಗಳು ಮತ್ತು ಜನಾಂಗೀಯ ಶುದ್ಧೀಕರಣವೆಂಬ ಹತ್ಯಾಕಾಂಡಗಳು, ಈ ಕಡೇ ದಿವಸಗಳಲ್ಲಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿವೆ. ಅಂತ್ಯವು ಸಮೀಪಿಸಿದಂತೆ, ಇಂತಹ ‘ವೇದನೆಯು’ ಹೆಚ್ಚಾಗುತ್ತಾ ಬರುವುದು.​—⁠ಮತ್ತಾಯ 24:​3, 7, 8.

28. ನ್ಯಾಯತೀರ್ಪಿನ ದಿನದಲ್ಲಿ, ಸುಳ್ಳು ಧರ್ಮವು ಏನನ್ನು ಮಾಡಲು ಅಸಮರ್ಥವಾಗಿರುವುದು?

28“ಐಗುಪ್ತದ ಅಂತರಾತ್ಮವು ಬರಿದಾಗುವದು; ಅದರ ಆಲೋಚನೆಯನ್ನು ಭಂಗಪಡಿಸುವೆನು; ಅಲ್ಲಿಯವರು ವಿಗ್ರಹಗಳನ್ನೂ ಮಂತ್ರಗಾರರನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಆಶ್ರಯಿಸುವರು.” (ಯೆಶಾಯ 19:3) ಮೋಶೆ ಫರೋಹನನ್ನು ಭೇಟಿಯಾದಾಗ, ಐಗುಪ್ತದ ಪುರೋಹಿತರು ಯೆಹೋವನ ಶಕ್ತಿಯ ಮುಂದೆ ಏನೂ ಮಾಡಲಾಗದೆ ಅವಮಾನಕ್ಕೊಳಗಾದರು. (ವಿಮೋಚನಕಾಂಡ 8:​18, 19; ಅ. ಕೃತ್ಯಗಳು 13:8; 2 ತಿಮೊಥೆಯ 3:⁠8) ಹಾಗೆಯೇ, ನ್ಯಾಯತೀರ್ಪಿನ ದಿನದಂದು, ಸುಳ್ಳು ಧರ್ಮವು ಈ ಭ್ರಷ್ಟ ವ್ಯವಸ್ಥೆಯನ್ನು ರಕ್ಷಿಸಲು ಅಸಮರ್ಥವಾಗಿರುವುದು. (ಹೋಲಿಸಿ ಯೆಶಾಯ 47:​1, 11-13.) ಕಟ್ಟಕಡೆಗೆ ಐಗುಪ್ತವು “ಕ್ರೂರನಾದ ಒಡೆಯ” ಅಶ್ಶೂರದ ಕೈಕೆಳಗೆ ಬಂತು. (ಯೆಶಾಯ 19:⁠4) ಈ ವಿಷಯಗಳ ವ್ಯವಸ್ಥೆಗಿರುವ ಆಶಾರಹಿತ ಭವಿಷ್ಯತ್ತನ್ನು ಇದು ಮುನ್ಸೂಚಿಸುತ್ತದೆ.

29. ಯೆಹೋವನ ದಿನವು ಬರುವಾಗ, ರಾಜಕಾರಣಿಗಳಿಂದ ಏನಾದರೂ ಪ್ರಯೋಜನವಾಗುವುದೊ?

29 ಹಾಗಾದರೆ, ರಾಜಕೀಯ ನಾಯಕರ ಬಗ್ಗೆ ಏನು? ಅವರು ಸಹಾಯ ಮಾಡಶಕ್ತರೊ? “ಚೋಯನಿನ ಪ್ರಭುಗಳು ಕೇವಲ ಬುದ್ಧಿಹೀನರು; ಫರೋಹನ ಮಂತ್ರಿಗಳಲ್ಲಿ ಜ್ಞಾನವೃದ್ಧರ ಆಲೋಚನೆಯೂ ಹುಚ್ಚಾಟ.” (ಓದಿ ಯೆಶಾಯ 19:​5-11.) ನ್ಯಾಯತೀರ್ಪಿನ ದಿನದಂದು ಮಾನವ ಸಲಹೆಗಾರರಿಂದ ಯಾವ ಪ್ರಯೋಜನವಾದರೂ ಆಗುವುದೆಂದು ನಿರೀಕ್ಷಿಸುವುದು ಎಂತಹ ಹುಚ್ಚುತನವಾಗಿದೆ! ಇಡೀ ಲೋಕದ ಜ್ಞಾನವು ಅವರಲ್ಲಿದ್ದರೂ, ದೈವಿಕ ವಿವೇಕದ ಕೊರತೆಯಿದೆ. (1 ಕೊರಿಂಥ 3:19) ಅವರು ಯೆಹೋವನನ್ನು ತಿರಸ್ಕರಿಸಿ ನಾಮಮಾತ್ರದ ವಿಜ್ಞಾನ, ತತ್ವಜ್ಞಾನ, ಹಣ, ಸುಖಭೋಗ ಮತ್ತು ಇತರ ಬದಲಿ ದೇವದೇವತೆಗಳ ಕಡೆಗೆ ತಿರುಗಿದ್ದಾರೆ. ಆದಕಾರಣ, ಅವರಿಗೆ ದೇವರ ಉದ್ದೇಶಗಳ ಜ್ಞಾನವಿಲ್ಲ. ಅವರು ವಂಚಿಸಲ್ಪಟ್ಟವರೂ ಗಲಿಬಿಲಿಗೊಂಡವರೂ ಆಗಿದ್ದಾರೆ. ಅವರ ಕೆಲಸಗಳೆಲ್ಲಾ ನಿಷ್ಪ್ರಯೋಜಕವಾಗಿವೆ. (ಓದಿ ಯೆಶಾಯ 19:​12-15.) “ಜ್ಞಾನಿಗಳು ಆಶಾಭಂಗಪಟ್ಟು ಬೆಬ್ಬರಬಿದ್ದು ಸಿಕ್ಕಿಕೊಂಡಿದ್ದಾರೆ; ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು; ಅವರ ಜ್ಞಾನವು ಎಷ್ಟರದು?”​—⁠ಯೆರೆಮೀಯ 8:⁠9.

ಯೆಹೋವನಿಗೆ ಒಂದು ಗುರುತು ಮತ್ತು ಸಾಕ್ಷಿ

30. ಯಾವ ವಿಧದಲ್ಲಿ “ಐಗುಪ್ತವು ಬೆಚ್ಚಿಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು”?

30 ‘ಐಗುಪ್ತದ’ ನಾಯಕರು ‘ಹೆಣ್ಣಿ’ನಂತೆ ದುರ್ಬಲರಾಗಿರುವುದಾದರೂ, ದೈವಿಕ ಜ್ಞಾನವನ್ನು ಹುಡುಕುವಂತಹ ಕೆಲವು ವ್ಯಕ್ತಿಗಳಿದ್ದಾರೆ. ಈ ಮಧ್ಯೆ, ಯೆಹೋವನ ಅಭಿಷಿಕ್ತರು ಮತ್ತು ಅವರ ಸಂಗಾತಿಗಳು ‘ದೇವರ ಗುಣಾತಿಶಯಗಳನ್ನು ಪ್ರಚಾರಮಾಡುತ್ತಾರೆ.’ (ಯೆಶಾಯ 19:16; 1 ಪೇತ್ರ 2:⁠9) ಸೈತಾನನ ಸಂಸ್ಥೆಯು ಬಹಳ ಬೇಗನೆ ನಾಶವಾಗಲಿದೆ ಎಂಬ ಎಚ್ಚರಿಕೆಯನ್ನು ಜನರಿಗೆ ನೀಡಲು ತಮ್ಮಿಂದ ಸಾಧ್ಯವಾದುದನ್ನೆಲ್ಲ ಅವರು ಮಾಡುತ್ತಿದ್ದಾರೆ. ಈ ಸನ್ನಿವೇಶವನ್ನು ಮುಂಗಾಣುತ್ತಾ ಯೆಶಾಯನು ಹೇಳುವುದು: “ಐಗುಪ್ತವು ಬೆಚ್ಚಿಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು.” (ಯೆಶಾಯ 19:17) ಯೆಹೋವನ ನಂಬಿಗಸ್ತ ಸಂದೇಶವಾಹಕರು, ಆತನಿಂದ ಮುಂತಿಳಿಸಲ್ಪಟ್ಟ ಬಾಧೆಗಳೊಂದಿಗೆ, ಜನರಿಗೆ ಸತ್ಯವನ್ನು ತಿಳಿಸುತ್ತಾ ಇದ್ದಾರೆ. (ಪ್ರಕಟನೆ 8:​7-12; 16:​2-12) ಇದು ಲೋಕದ ಧಾರ್ಮಿಕ ನಾಯಕರನ್ನು ಕೆರಳಿಸುತ್ತದೆ.

31. (ಎ) ಪುರಾತನ ಕಾಲದ ಮತ್ತು (ಬಿ) ಆಧುನಿಕ ಕಾಲದ ಐಗುಪ್ತದ ನಗರಗಳಲ್ಲಿ, “ಕಾನಾನಿನ ಭಾಷೆ” ಬಳಕೆಯಲ್ಲಿದ್ದದ್ದು ಹೇಗೆ?

31 ಈ ಪ್ರಚಾರಕಾರ್ಯದಿಂದ ಆಗುವ ಆಶ್ಚರ್ಯಕರ ಪರಿಣಾಮವೇನು? “ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನ ಭಕ್ತರೆಂದು ಪ್ರಮಾಣಮಾಡಿ ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಐಗುಪ್ತ ದೇಶದಲ್ಲಿರುವವು; ಇವುಗಳಲ್ಲಿ ಒಂದರ ಹೆಸರು ನಾಶಪುರ.” (ಯೆಶಾಯ 19:18) ಐಗುಪ್ತದ ನಗರಗಳಿಗೆ ಓಡಿಹೋದ ಯೆಹೂದ್ಯರು ಅಲ್ಲಿ ಹೀಬ್ರು ಭಾಷೆಯನ್ನು ಮಾತಾಡಿದಾಗ, ಈ ಪ್ರವಾದನೆಯು ಗತಕಾಲದಲ್ಲಿ ಪ್ರಾಯಶಃ ನೆರವೇರಿತು. (ಯೆರೆಮೀಯ 24:​1, 8-10; 41:​1-3; 42:​9–43:7; 44:⁠1) ತದ್ರೀತಿಯಲ್ಲಿ ಇಂದು, ಆಧುನಿಕ ದಿನದ ‘ಐಗುಪ್ತದಲ್ಲಿ’ ಬೈಬಲ್‌ ಸತ್ಯದ ‘ಶುದ್ಧ ಭಾಷೆಯನ್ನು’ (NW) ಮಾತಾಡಲು ಕಲಿತವರಿದ್ದಾರೆ. (ಚೆಫನ್ಯ 3:⁠9) ಈ ಐದು ಸಾಂಕೇತಿಕ ನಗರಗಳಲ್ಲಿ ಒಂದರ ಹೆಸರು “ನಾಶಪುರ”ವಾಗಿದೆ. ಇದು ‘ಶುದ್ಧ ಭಾಷೆಯ’ ಒಂದು ಭಾಗವು, ಸೈತಾನನ ಸಂಸ್ಥೆಯ ಸುಳ್ಳನ್ನು ಬಯಲುಮಾಡಿ, ‘ನಾಶಮಾಡು’ವುದಕ್ಕೆ ಸಂಬಂಧಿಸುತ್ತದೆಂಬುದನ್ನು ಸೂಚಿಸುತ್ತದೆ.

32. (ಎ) ಐಗುಪ್ತ ದೇಶದ ಮಧ್ಯದಲ್ಲಿ ಯಾವ “ಯಜ್ಞಪೀಠ”ವಿದೆ? (ಬಿ) ಐಗುಪ್ತದ ಎಲ್ಲೆಯಲ್ಲಿ ಅಭಿಷಿಕ್ತರು ಒಂದು “ಸ್ತಂಭ”ದಂತಿರುವುದು ಹೇಗೆ?

32 ಯೆಹೋವನ ಜನರು ಈ ಸಾರುವ ಕೆಲಸವನ್ನು ಕೈಗೊಳ್ಳುವುದರಿಂದ, ಆತನ ಮಹತ್ತಾದ ಹೆಸರು ಈ ವಿಷಯಗಳ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ತಿಳಿದುಬರುವುದು. “ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಯೆಹೋವನಿಗೆ ಒಂದು ಯಜ್ಞಪೀಠವೂ ದೇಶದ ಎಲ್ಲೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವವು.” (ಯೆಶಾಯ 19:19) ಈ ಮಾತುಗಳು, ದೇವರೊಂದಿಗೆ ಒಡಂಬಡಿಕೆಯ ಸಂಬಂಧವನ್ನು ಪಡೆದಿರುವ ಅಭಿಷಿಕ್ತ ಕ್ರೈಸ್ತರು ತೆಗೆದುಕೊಂಡಿರುವ ಸ್ಥಾನವನ್ನು ಸೂಚಿಸುತ್ತದೆ. (ಕೀರ್ತನೆ 50:⁠5) ಒಂದು ‘ಯಜ್ಞಪೀಠ’ದೋಪಾದಿ ಅವರು ತಮ್ಮ ಯಜ್ಞಗಳನ್ನು ಅರ್ಪಿಸುತ್ತಾರೆ, ಮತ್ತು ‘ಸತ್ಯದ ಸ್ತಂಭ ಹಾಗೂ ಆಧಾರ’ದಂತೆ ಅವರು ಯೆಹೋವನಿಗೆ ಸಾಕ್ಷಿನೀಡುತ್ತಾ ಇದ್ದಾರೆ. (1 ತಿಮೊಥೆಯ 3:15; ರೋಮಾಪುರ 12:1; ಇಬ್ರಿಯ 13:​15, 16) ಅವರು “ದೇಶದ ಮಧ್ಯೆ” “ಬೇರೆ ಕುರಿ”ಗಳೊಂದಿಗೆ, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಮತ್ತು ದ್ವೀಪಗಳಲ್ಲಿ ನೆಲೆಸಿದ್ದಾರೆ. ಆದರೂ, ಅವರು ‘ಲೋಕದ ಭಾಗವಾಗಿರುವುದಿಲ್ಲ.’ (ಯೋಹಾನ 10:16; 17:​15, 16) ಅವರೊ ಸಾಂಕೇತಿಕವಾಗಿ, ಈ ಲೋಕದ ಮತ್ತು ದೇವರ ರಾಜ್ಯದ ಎಲ್ಲೆ ಅಥವಾ ಗಡಿಯಲ್ಲಿ ನಿಂತುಕೊಂಡಿದ್ದಾರೆ. ಮತ್ತು ಆ ಗಡಿಯನ್ನು ದಾಟಿ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆಯಲು ಅವರು ಸಿದ್ಧರಾಗಿದ್ದಾರೆ.

33. ಯಾವ ವಿಧಗಳಲ್ಲಿ ಅಭಿಷಿಕ್ತರು “ಐಗುಪ್ತ”ದಲ್ಲಿ “ಗುರುತಾಗಿಯೂ ಸಾಕ್ಷಿಯಾಗಿಯೂ” ಇದ್ದಾರೆ?

33 ಯೆಶಾಯನು ಮುಂದುವರಿಸುವುದು: “ಅವು ಐಗುಪ್ತದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ ಸಾಕ್ಷಿಯಾಗಿಯೂ ಇರುವವು; ಹಿಂಸಕರ ದೆಸೆಯಿಂದ ಯೆಹೋವನನ್ನು ಕೂಗಿಕೊಳ್ಳಲು ಆತನು ಅವರಿಗಾಗಿ ಹೋರಾಡುವ ಶೂರನಾದ ರಕ್ಷಕನನ್ನು ಕಳುಹಿಸಿ ಅವರನ್ನುದ್ಧರಿಸುವನು.” (ಯೆಶಾಯ 19:20) ‘ಗುರುತಾಗಿಯೂ ಸಾಕ್ಷಿಯಾಗಿಯೂ’ ಇರುವಂತಹ ಅಭಿಷಿಕ್ತರು, ಸಾರುವ ಕೆಲಸದಲ್ಲಿ ನಾಯಕತ್ವ ವಹಿಸಿ, ಈ ವಿಷಯಗಳ ವ್ಯವಸ್ಥೆಯಲ್ಲಿ ಯೆಹೋವನ ನಾಮವನ್ನು ಉನ್ನತಕ್ಕೇರಿಸುತ್ತಾರೆ. (ಯೆಶಾಯ 8:18; ಇಬ್ರಿಯ 2:13) ಲೋಕದ ಎಲ್ಲೆಡೆಯಿಂದಲೂ ಪೀಡಿತರ ಕೂಗು ಕೇಳಿಬರುತ್ತಿದೆ. ಆದರೆ ಮಾನವ ಸರಕಾರಗಳು ಅವರಿಗೆ ಹೆಚ್ಚಿನ ಸಹಾಯವನ್ನು ನೀಡಲು ಸಾಧ್ಯವಾಗಿಲ್ಲ. ಆದರೆ ಯೆಹೋವನು ಎಲ್ಲ ದೀನರನ್ನು ಸ್ವತಂತ್ರಗೊಳಿಸಲು, ರಾಜ ಯೇಸು ಕ್ರಿಸ್ತನೆಂಬ ಶೂರನಾದ ರಕ್ಷಕನನ್ನು ಕಳುಹಿಸುವನು. ಈ ಕಡೇ ದಿವಸಗಳ ಕಟ್ಟಕಡೆಯಲ್ಲಿ ಅರ್ಮಗೆದೋನ್‌ ಯುದ್ಧವು ನಡೆಯುವಾಗ, ಆತನು ದೇವಭಯವಿರುವ ಮಾನವರಿಗೆ ಉಪಶಮನವನ್ನೂ ಶಾಶ್ವತ ಆಶೀರ್ವಾದಗಳನ್ನೂ ತರುವನು.​—⁠ಕೀರ್ತನೆ 72:​2, 4, 7, 12-14.

34. (ಎ) ‘ಐಗುಪ್ತ್ಯರು’ ಯೆಹೋವನನ್ನು ಹೇಗೆ ತಿಳಿದುಕೊಳ್ಳುವರು, ಮತ್ತು ಯಾವ ಯಜ್ಞ ಹಾಗೂ ಕಾಣಿಕೆಯನ್ನು ಅವರು ಆತನಿಗೆ ಕೊಡುವರು? (ಬಿ) ಯೆಹೋವನು ‘ಐಗುಪ್ತವನ್ನು’ ಯಾವಾಗ ಹೊಡೆಯುವನು, ಮತ್ತು ಅದರ ನಂತರ ಯಾವ ಗುಣಪಡಿಸುವಿಕೆ ಇರುವುದು?

34 ಈ ಮಧ್ಯೆ, ಎಲ್ಲ ರೀತಿಯ ಜನರು ನಿಷ್ಕೃಷ್ಟ ಜ್ಞಾನವನ್ನು ಪಡೆದು ರಕ್ಷಣೆಯನ್ನು ಹೊಂದಬೇಕೆಂಬುದು ದೇವರ ಚಿತ್ತವಾಗಿದೆ. (1 ತಿಮೊಥೆಯ 2:⁠4) ಆದಕಾರಣ, ಯೆಶಾಯನು ಬರೆಯುವುದು: “ಯೆಹೋವನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು ಅವರು ಆ ದಿನದಲ್ಲಿ ಯೆಹೋವನನ್ನು ತಿಳಿದುಕೊಳ್ಳುವರು; ಹೌದು ಯಜ್ಞನೈವೇದ್ಯಗಳ ಸೇವೆಯನ್ನಾಚರಿಸಿ ಯೆಹೋವನಿಗೆ ಹರಕೆಮಾಡಿಕೊಂಡು ಅದನ್ನು ನೆರವೇರಿಸುವರು. ಇದಲ್ಲದೆ ಯೆಹೋವನು ಐಗುಪ್ತ್ಯರನ್ನು ಹೊಡೆಯುವನು, ಗಾಯಮಾಡಿ ವಾಸಿಮಾಡುವವನಾಗಿಯೇ ಹೊಡೆಯುವನು; ಅವರು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಆತನು ಅವರ ವಿಜ್ಞಾಪನೆಯನ್ನು ಲಾಲಿಸಿ ಅವರನ್ನು ಗುಣಪಡಿಸುವನು.” (ಯೆಶಾಯ 19:21, 22) ಸೈತಾನನ ಲೋಕದಿಂದ ಬಂದ ಎಲ್ಲ ರಾಷ್ಟ್ರಗಳವರು, ಅಂದರೆ ವ್ಯಕ್ತಿಗತ ‘ಐಗುಪ್ತ್ಯರು’ ಯೆಹೋವನನ್ನು ಅರಿತುಕೊಂಡು ‘ಬಾಯಿಂದ ಆತನ ನಾಮಕ್ಕೆ ಪ್ರತಿಜ್ಞೆಮಾಡುವ’ ಮೂಲಕ ಯಜ್ಞಾರ್ಪಿಸುತ್ತಾರೆ. (ಇಬ್ರಿಯ 13:15) ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮೂಲಕ ಆತನಿಗೆ ಹರಕೆಮಾಡುತ್ತಾರೆ, ಮತ್ತು ನಿಷ್ಠಾವಂತ ಸೇವೆಯ ಜೀವನ ನಡೆಸುವ ಮೂಲಕ ಆ ಹರಕೆಯನ್ನು ತೀರಿಸುತ್ತಾರೆ. ಅರ್ಮಗೆದೋನ್‌ ಯುದ್ಧದಲ್ಲಿ ಯೆಹೋವನು ಈ ವಿಷಯಗಳ ವ್ಯವಸ್ಥೆಯನ್ನು ‘ಹೊಡೆಯುವನು.’ ಮತ್ತು ಮಾನವವರ್ಗವನ್ನು ಗುಣಪಡಿಸಲು ತನ್ನ ರಾಜ್ಯವನ್ನು ಉಪಯೋಗಿಸುವನು. ಯೇಸುವಿನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ, ಮಾನವವರ್ಗವು ಆತ್ಮಿಕ, ಮಾನಸಿಕ, ನೈತಿಕ ಹಾಗೂ ಶಾರೀರಿಕ ಪರಿಪೂರ್ಣತೆಗೆ ಏರಿಸಲ್ಪಡುವುದು. ಇದು ನಿಜವಾದ ಗುಣಪಡಿಸುವಿಕೆ ಎಂಬುದರಲ್ಲಿ ಸಂದೇಹವೇ ಇಲ್ಲ!​—⁠ಪ್ರಕಟನೆ 22:​1, 2.

‘ನನ್ನ ಪ್ರಜೆಗಳಿಗೆ ಶುಭವಾಗಲಿ’

35, 36. ಯೆಶಾಯ 19:​23-25ರ ನೆರವೇರಿಕೆಯಲ್ಲಿ, ಪುರಾತನ ಐಗುಪ್ತ, ಅಶ್ಶೂರ ಮತ್ತು ಇಸ್ರಾಯೇಲಿನ ಮಧ್ಯೆ ಯಾವ ಸಂಬಂಧಗಳು ಏರ್ಪಟ್ಟವು?

35 ತರುವಾಯ ಪ್ರವಾದಿಯು ಒಂದು ಗಮನಾರ್ಹವಾದ ಬದಲಾವಣೆಯನ್ನು ಮುಂಗಾಣುತ್ತಾನೆ: “ಆ ದಿನದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ರಾಜಮಾರ್ಗವಿರುವದು; ಅಶ್ಶೂರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರಕ್ಕೂ ಹೋಗಿಬರುತ್ತಿರುವರು; ಐಗುಪ್ತ್ಯರು ಅಶ್ಶೂರ್ಯರೊಂದಿಗೆ [ಯೆಹೋವನನ್ನು] ಸೇವಿಸುವರು. ಆ ದಿನದಲ್ಲಿ ಇಸ್ರಾಯೇಲು ಐಗುಪ್ತ ಅಶ್ಶೂರಗಳೊಂದಿಗೆ ಕಲೆತು ಈ ಮೂರೂ ಲೋಕದ ಮಧ್ಯದಲ್ಲಿ ಆಶೀರ್ವಾದದ ನಿಧಿಯಾಗುವವು. ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಸೃಷ್ಟಿಯಾದ ಅಶ್ಶೂರಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇಲಿಗೂ ಶುಭವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನು ಅವುಗಳನ್ನು ಆಶೀರ್ವದಿಸಿದ್ದಾನಷ್ಟೆ.” (ಯೆಶಾಯ 19:23-25) ಹೌದು, ಒಂದು ದಿನ, ಐಗುಪ್ತ ಮತ್ತು ಅಶ್ಶೂರದ ಮಧ್ಯೆ ಸ್ನೇಹವಿರುವುದು. ಅದು ಹೇಗೆ?

36 ಗತಕಾಲದಲ್ಲಿ ಯೆಹೋವನು ತನ್ನ ಜನರನ್ನು ಈ ಜನಾಂಗಗಳಿಂದ ಬಿಡಿಸಿದಾಗ, ಅಕ್ಷರಾರ್ಥವಾಗಿ ಆತನು ಅವರಿಗೆ ಸ್ವಾತಂತ್ರ್ಯದ ರಾಜಮಾರ್ಗಗಳನ್ನು ಸಿದ್ಧಪಡಿಸಿದನು. (ಯೆಶಾಯ 11:16; 35:​8-10; 49:​11-13; ಯೆರೆಮೀಯ 31:21) ಬಾಬೆಲು ಸೋಲನ್ನು ಅನುಭವಿಸಿದ ಸಮಯದಲ್ಲಿ ಈ ಪ್ರವಾದನೆಯು ಸಣ್ಣ ಪ್ರಮಾಣದಲ್ಲಿ ನೆರವೇರಿತು. ಆಗ ಅಶ್ಶೂರ, ಐಗುಪ್ತ ಮತ್ತು ಬಾಬೆಲಿನಿಂದ ದೇಶಭ್ರಷ್ಟರು ವಾಗ್ದತ್ತ ದೇಶಕ್ಕೆ ತರಲ್ಪಟ್ಟರು. (ಯೆಶಾಯ 11:11) ಆದರೆ ಆಧುನಿಕ ಸಮಯದ ಕುರಿತೇನು?

37. ಇಂದು ಲಕ್ಷಾಂತರ ಜನರು, ‘ಅಶ್ಶೂರ’ ಮತ್ತು ‘ಐಗುಪ್ತದ’ ನಡುವೆ ಒಂದು ರಾಜಮಾರ್ಗ ಇದೆಯೊ ಎಂಬಂತೆ ಜೀವಿಸುವುದು ಹೇಗೆ?

37 ಇಂದು, ಅಭಿಷಿಕ್ತ ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರು, “ಲೋಕದ ಮಧ್ಯದಲ್ಲಿ ಆಶೀರ್ವಾದ”ವಾಗಿದ್ದಾರೆ. ಅವರು ಸತ್ಯಾರಾಧನೆಯನ್ನು ಪ್ರವರ್ಧಿಸುವುದರ ಜೊತೆಗೆ, ರಾಜ್ಯ ಸಂದೇಶವನ್ನು ಎಲ್ಲ ರಾಷ್ಟ್ರಗಳ ಜನರಿಗೆ ಪ್ರಕಟಪಡಿಸುತ್ತಿದ್ದಾರೆ. ಈ ರಾಷ್ಟ್ರಗಳಲ್ಲಿ ಕೆಲವು, ಭಾರಿ ಮಿಲಿಟರಿ ಶಕ್ತಿಯನ್ನು ಪಡೆದಿದ್ದಂತಹ ಅಶ್ಶೂರದಂತಿವೆ. ಇತರ ರಾಷ್ಟ್ರಗಳು, ಹಿಂದೊಮ್ಮೆ ದಾನಿಯೇಲನ ಪ್ರವಾದನೆಯಲ್ಲಿ “ದಕ್ಷಿಣದಿಕ್ಕಿನ ರಾಜ”ನಾಗಿದ್ದ ಐಗುಪ್ತ ದೇಶದಂತೆ ಉದಾರನೀತಿಯನ್ನು ಪಾಲಿಸುತ್ತವೆ. (ದಾನಿಯೇಲ 11:​5, 8) ಮಿಲಿಟರಿ ರಾಷ್ಟ್ರಗಳಿಂದ ಮತ್ತು ಹೆಚ್ಚು ಉದಾರವಾದ ರಾಷ್ಟ್ರಗಳಿಂದ ಲಕ್ಷಾಂತರ ಜನರು ಸತ್ಯಾರಾಧನೆಯ ಮಾರ್ಗದಲ್ಲಿ ನಡೆಯಲಾರಂಭಿಸಿದ್ದಾರೆ. ಹೀಗೆ ಎಲ್ಲ ರಾಷ್ಟ್ರಗಳವರು ‘ಸೇವೆಸಲ್ಲಿಸುವುದರಲ್ಲಿ’ ಐಕ್ಯರಾಗಿದ್ದಾರೆ. ಇವರ ಮಧ್ಯೆ ದೇಶೀಯ ಭೇದಭಾವವಿಲ್ಲ. ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಮತ್ತು ನಿಜವಾಗಿಯೂ ‘ಅಶ್ಶೂರ್ಯರು ಐಗುಪ್ತಕ್ಕೆ ಮತ್ತು ಐಗುಪ್ತ್ಯರು ಅಶ್ಶೂರಕ್ಕೆ’ ಹೋಗಿಬರುತ್ತಿದ್ದಾರೆಂದು ಹೇಳಸಾಧ್ಯವಿದೆ. ಅದು, ಆ ಎರಡೂ ರಾಜ್ಯಗಳ ಮಧ್ಯೆ ಒಂದು ರಾಜಮಾರ್ಗವಿದೆಯೊ ಎಂಬಂತಿದೆ.​—⁠1 ಪೇತ್ರ 2:⁠17.

38. (ಎ) “ಇಸ್ರಾಯೇಲು ಐಗುಪ್ತ ಅಶ್ಶೂರಗಳೊಂದಿಗೆ ಕಲೆತು”ಕೊಳ್ಳುವುದು ಹೇಗೆ? (ಬಿ) ‘ನನ್ನ ಪ್ರಜೆಗಳಿಗೆ ಶುಭವಾಗಲಿ’ ಎಂದು ಯೆಹೋವನು ಹೇಳುವುದು ಏಕೆ?

38 ಆದರೆ ಇಸ್ರಾಯೇಲು “ಐಗುಪ್ತ ಅಶ್ಶೂರಗಳೊಂದಿಗೆ ಕಲೆತು”ಕೊಳ್ಳುವುದು ಹೇಗೆ? “ಅಂತ್ಯಕಾಲದ” ಆದಿಭಾಗದಲ್ಲಿ, ಭೂಮಿಯ ಮೇಲೆ ಯೆಹೋವನನ್ನು ಸೇವಿಸುತ್ತಿದ್ದವರಲ್ಲಿ ಹೆಚ್ಚಿನವರು ‘ದೇವರ ಇಸ್ರಾಯೇಲಿನ’ ಸದಸ್ಯರಾಗಿದ್ದರು. (ದಾನಿಯೇಲ 12:9; ಗಲಾತ್ಯ 6:16) 1930ಗಳಿಂದ, ಭೂನಿರೀಕ್ಷೆಯುಳ್ಳ “ಬೇರೆ ಕುರಿಗಳ” ಒಂದು ದೊಡ್ಡ ಸಮೂಹವು ಕಾಣಿಸಿಕೊಂಡಿದೆ. (ಯೋಹಾನ 10:16ಎ; ಪ್ರಕಟನೆ 7:⁠9) ಐಗುಪ್ತ ಹಾಗೂ ಅಶ್ಶೂರದಿಂದ ಮುನ್‌ಚಿತ್ರಿಸಲ್ಪಟ್ಟ ರಾಷ್ಟ್ರಗಳಿಂದ ಹೊರಬರುತ್ತಾ, ಇವರು ಯೆಹೋವನ ಆರಾಧನಾಲಯಕ್ಕೆ ಪ್ರವಾಹದಂತೆ ಹರಿದುಬರುತ್ತಾರೆ ಮತ್ತು ತಮ್ಮನ್ನು ಸೇರುವಂತೆ ಇತರರಿಗೂ ಆಮಂತ್ರಣ ನೀಡುತ್ತಾರೆ. (ಯೆಶಾಯ 2:​2-4) ಅವರು ಕೂಡ ತಮ್ಮ ಅಭಿಷಿಕ್ತ ಸಹೋದರರಂತೆ, ಸಾರುವ ಕೆಲಸದಲ್ಲಿ ಭಾಗವಹಿಸುತ್ತಾರೆ, ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾರೆ, ಅವರಂತೆಯೇ ನಂಬಿಗಸ್ತರಾಗಿದ್ದು ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಒಂದೇ ಆತ್ಮಿಕ ಮೇಜಿನಿಂದ ಆಹಾರವನ್ನು ಸೇವಿಸುತ್ತಾರೆ. ಈ ಅಭಿಷಿಕ್ತರು ಮತ್ತು ‘ಬೇರೆ ಕುರಿಗಳು’ ‘ಒಂದೇ ಹಿಂಡಿನಂತೆ’ ಇದ್ದಾರೆ, ಮತ್ತು ಇವರಿಗೆ ‘ಒಬ್ಬನೇ ಕುರುಬ’ನಿದ್ದಾನೆ. (ಯೋಹಾನ 10:16ಬಿ) ಅವರ ಹುರುಪು ಮತ್ತು ತಾಳ್ಮೆಯನ್ನು ನೋಡುವ ಯೆಹೋವನು, ಅವರ ಚಟುವಟಿಕೆಯನ್ನು ಮೆಚ್ಚಿಕೊಂಡಿದ್ದಾನೆ ಎಂಬುದರಲ್ಲಿ ಯಾವ ಸಂದೇಹವಾದರೂ ಇರಸಾಧ್ಯವೊ? ‘ನನ್ನ ಪ್ರಜೆಗಳಿಗೆ ಶುಭವಾಗಲಿ’ ಎಂಬ ಆಶೀರ್ವಚನವನ್ನು ಆತನು ನೀಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

[ಪಾದಟಿಪ್ಪಣಿಗಳು]

^ ಪ್ಯಾರ. 21 “ರೆಕ್ಕೆಗಳು ಪಟಪಟನೆ ಆಡುವ ನಾಡು” ಎಂಬ ಅಭಿವ್ಯಕ್ತಿಯು, ಆಗಾಗ್ಗೆ ಇಥಿಯೋಪಿಯ ಕ್ಷೇತ್ರದಲ್ಲಿ ಹಿಂಡು ಹಿಂಡಾಗಿ ಬರುವ ಮಿಡತೆಗಳನ್ನು ಸೂಚಿಸುತ್ತದೆಂದು ಕೆಲವು ಪಂಡಿತರು ಹೇಳುತ್ತಾರೆ. ‘ರೆಕ್ಕೆಗಳ ಪಟಪಟ’ ಎಂಬ ಶಬ್ದಕ್ಕಾಗಿರುವ ಹೀಬ್ರು ಪದ ಟ್ಸೆಲಾಟ್ಸಾಲ್‌, ಆಧುನಿಕ ಇಥಿಯೋಪಿಯದಲ್ಲಿ ಜೀವಿಸುತ್ತಿರುವ ಹ್ಯಾಮಿಟಿಕ್‌ ಜನರಾದ ಗಲ್ಲಾ ಅವರಿಂದ ಟ್ಸೆಟ್ಸಿ ನೊಣಕ್ಕೆ ಕೊಡಲ್ಪಟ್ಟ ಟ್ಸಾಲ್‌ಟ್ಸಾಲ್ಯಾ ಎಂಬ ಹೆಸರಿನ ಉಚ್ಚಾರಣೆಗೆ ಹೋಲುವಂತಹದ್ದಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 191ರಲ್ಲಿರುವ ಚಿತ್ರ]

ತಮ್ಮ ವೈರಿಗಳನ್ನು ಬೆನ್ನಟ್ಟುತ್ತಿರುವ ಫಿಲಿಷ್ಟಿಯ ಯೋಧರು (ಸಾ.ಶ.ಪೂ. 12ನೆಯ ಶತಮಾನದ ಐಗುಪ್ತದ ಕೆತ್ತನೆಕೆಲಸ)

[ಪುಟ 192ರಲ್ಲಿರುವ ಚಿತ್ರ]

ಒಬ್ಬ ಮೋವಾಬ್ಯ ಯೋಧ ಅಥವಾ ದೇವತೆಯ ಕಲ್ಲಿನ ಉಬ್ಬು ಚಿತ್ರಣ, (ಸಾ.ಶ.ಪೂ. 11ನೆಯ ಮತ್ತು 8ನೆಯ ಶತಮಾನದ ಮಧ್ಯೆ)

[ಪುಟ 196ರಲ್ಲಿರುವ ಚಿತ್ರ]

ಆರಾಮ್ಯ ಯೋಧನು ಒಂಟೆಯ ಮೇಲೆ (ಸಾ.ಶ.ಪೂ. ಒಂಬತ್ತನೆ ಶತಮಾನ)

[ಪುಟ 198ರಲ್ಲಿರುವ ಚಿತ್ರ]

ದಂಗೆಕೋರ ಮಾನವವರ್ಗದ “ಸಮುದ್ರವು” ಗಲಿಬಿಲಿ ಮತ್ತು ಕ್ರಾಂತಿಯನ್ನು ಕೆರಳಿಸುತ್ತದೆ

[ಪುಟ 203ರಲ್ಲಿರುವ ಚಿತ್ರ]

ಯೆಹೋವನ ಶಕ್ತಿಯ ಮುಂದೆ ಐಗುಪ್ತದ ಪುರೋಹಿತರಿಗೆ ಏನೂ ಮಾಡಲಾಗಲಿಲ್ಲ