ದಂಗೆಕೋರರಿಗೆ ಅಯ್ಯೋ!
ಅಧ್ಯಾಯ ಹನ್ನೊಂದು
ದಂಗೆಕೋರರಿಗೆ ಅಯ್ಯೋ!
1. ಯಾರೊಬ್ಬಾಮನು ಯಾವ ಗಂಭೀರವಾದ ತಪ್ಪನ್ನು ಮಾಡಿದನು?
ಯೆಹೋವನ ಒಡಂಬಡಿಕೆಯ ಜನರು ಎರಡು ರಾಜ್ಯಗಳಾಗಿ ಬೇರ್ಪಟ್ಟಾಗ, ಉತ್ತರದಲ್ಲಿದ್ದ ಹತ್ತು ಗೋತ್ರಗಳ ರಾಜ್ಯವು ಯಾರೊಬ್ಬಾಮನ ಆಳ್ವಿಕೆಯ ಕೆಳಗೆ ಬಂತು. ಈ ಹೊಸ ಅರಸನು ಒಬ್ಬ ಸಮರ್ಥ ಹಾಗೂ ಪ್ರಬಲ ರಾಜನಾಗಿದ್ದನು. ಆದರೆ ಅವನಿಗೆ ಯೆಹೋವನಲ್ಲಿ ನಿಜವಾದ ನಂಬಿಕೆಯಿರಲಿಲ್ಲ. ಈ ಕಾರಣ ಅವನೊಂದು ಗಂಭೀರವಾದ ತಪ್ಪನ್ನು ಮಾಡಿದನು. ಈ ತಪ್ಪು, ಇಡೀ ಉತ್ತರ ರಾಜ್ಯದ ಮೇಲೆ ವಿನಾಶಕರ ಪ್ರಭಾವವನ್ನು ಬೀರಿತು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಇಸ್ರಾಯೇಲ್ಯರು ವರ್ಷಕ್ಕೆ ಮೂರಾವರ್ತಿ ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕೆ ಹೋಗಬೇಕಿತ್ತು. ಈ ದೇವಾಲಯವು, ಈಗ ದಕ್ಷಿಣ ರಾಜ್ಯವಾದ ಯೆಹೂದದಲ್ಲಿತ್ತು. (ಧರ್ಮೋಪದೇಶಕಾಂಡ 16:16) ಆದರೆ ತನ್ನ ಪ್ರಜೆಗಳು ಈ ರೀತಿ ಯೆರೂಸಲೇಮಿಗೆ ಕ್ರಮವಾಗಿ ಹೋಗಿ ಬರುತ್ತಾ ಇದ್ದರೆ, ದಕ್ಷಿಣ ರಾಜ್ಯದಲ್ಲಿರುವ ತಮ್ಮ ಸಹೋದರರೊಂದಿಗೆ ಪುನಃ ಒಂದುಗೂಡುವುದರ ಬಗ್ಗೆ ಯೋಚಿಸಲು ಆರಂಭಿಸಬಹುದೆಂಬ ವಿಚಾರದಿಂದಲೇ ಯಾರೊಬ್ಬಾಮನು ದಿಗಿಲುಗೊಂಡನು. ಆದುದರಿಂದ ಅವನು “ಬಂಗಾರದ ಎರಡು ಬಸವನ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲ್ಯರಿಗೆ—ನೀವು ಜಾತ್ರೆಗಾಗಿ ಯೆರೂಸಲೇಮಿಗೆ ಹೋದದ್ದು ಸಾಕಾಯಿತು; ಇಗೋ, ನಿಮ್ಮನ್ನು ಐಗುಪ್ತದಿಂದ ಕರತಂದ ದೇವರುಗಳು ಇಲ್ಲಿರುತ್ತವೆ ಎಂದು ಹೇಳಿ ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿ ಇನ್ನೊಂದನ್ನು ದಾನಿಗೆ ಕಳುಹಿಸಿದನು.”—1 ಅರಸುಗಳು 12:28, 29.
2, 3. ಯಾರೊಬ್ಬಾಮನ ತಪ್ಪಿನಿಂದ ಇಸ್ರಾಯೇಲು ಹೇಗೆ ಬಾಧಿಸಲ್ಪಟ್ಟಿತು?
2 ಯಾರೊಬ್ಬಾಮನು ಮಾಡಿದ ಯೋಜನೆಯ ಪ್ರಕಾರವೇ ಸ್ವಲ್ಪ ಸಮಯದ ವರೆಗೆ ಎಲ್ಲವೂ ನಡೆಯಿತು. ಜನರು ಯೆರೂಸಲೇಮಿಗೆ ಹೋಗುವುದನ್ನು ಬಿಟ್ಟು, ಬಂಗಾರದ ಎರಡು ಬಸವನ ಮೂರ್ತಿಗಳನ್ನು ಪೂಜಿಸತೊಡಗಿದರು. (1 ಅರಸುಗಳು 12:30) ಇಂತಹ ಧರ್ಮಭ್ರಷ್ಟ ಆಚರಣೆಯಿಂದ ಇಡೀ ಹತ್ತು ಗೋತ್ರಗಳ ಜನಾಂಗವು ಭ್ರಷ್ಟಗೊಂಡಿತು. ಕಾಲ ಕಳೆದಂತೆ, ಯಾರು ಇಸ್ರಾಯೇಲ್ ದೇಶದಿಂದ ಬಾಳನ ಆರಾಧನೆಯನ್ನು ತೆಗೆದುಹಾಕುವುದರಲ್ಲಿ ಬಹಳಷ್ಟು ಹುರುಪನ್ನು ತೋರಿಸಿದ್ದನೊ ಆ ಯೇಹು ಕೂಡ ಈ ಬಂಗಾರದ ಬಸವನ ಮೂರ್ತಿಗಳಿಗೆ ತಲೆಬಾಗಲು ತೊಡಗಿದನು. (2 ಅರಸುಗಳು 10:28, 29) ಯಾರೊಬ್ಬಾಮನ ಈ ತಪ್ಪು ನಿರ್ಣಯದಿಂದ ಬೇರೆ ಏನು ಸಂಭವಿಸಿತು? ರಾಜಕೀಯ ಅಭದ್ರತೆ ಮತ್ತು ಜನರಿಗೆ ಕಷ್ಟಾನುಭವ.
3 ಯಾರೊಬ್ಬಾಮನು ಧರ್ಮಭ್ರಷ್ಟನಾಗಿದ್ದ ಕಾರಣ, ಅವನ ಸಂತತಿಯು ರಾಜ್ಯದ ಮೇಲೆ ಆಳ್ವಿಕೆ ನಡೆಸಲಾರದೆಂದು ಮತ್ತು ಕೊನೆಗೆ ಉತ್ತರ ರಾಜ್ಯವು ಭಯಂಕರವಾದ ಕೇಡಿಗೆ ಗುರಿಯಾಗುವುದೆಂದು ಯೆಹೋವನು ತಿಳಿಯಪಡಿಸಿದನು. (1 ಅರಸುಗಳು 14:14, 15) ಯೆಹೋವನ ಮಾತು ನಿಜವಾಯಿತು. ಇಸ್ರಾಯೇಲಿನ ರಾಜರಲ್ಲಿ ಏಳು ಮಂದಿ, ಎರಡು ವರ್ಷಗಳು ಇಲ್ಲವೆ ಅದಕ್ಕಿಂತಲೂ ಕಡಿಮೆ ಅವಧಿಯ ವರೆಗೆ ಆಳ್ವಿಕೆ ನಡೆಸಿದರು. ಇನ್ನೂ ಕೆಲವರು ಕೇವಲ ಕೆಲವೇ ದಿನಗಳ ವರೆಗೆ ಮಾತ್ರ ರಾಜರಾಗಿದ್ದರು. ಒಬ್ಬ ಅರಸನು ಆತ್ಮಹತ್ಯೆ ಮಾಡಿಕೊಂಡನು ಮತ್ತು ಬೇರೆ ಆರು ಮಂದಿಯನ್ನು ಮಹತ್ವಾಕಾಂಕ್ಷಿ ಪುರುಷರು ಕೊಂದುಹಾಕಿ, ಅವರ ಸ್ಥಾನವನ್ನು ಆಕ್ರಮಿಸಿಕೊಂಡರು. ವಿಶೇಷವಾಗಿ ಸಾ.ಶ.ಪೂ. 804ರಲ್ಲಿ IIನೆಯ ಯಾರೊಬ್ಬಾಮನ ಆಳ್ವಿಕೆಯು ಕೊನೆಗೊಂಡಾಗ, ಇಸ್ರಾಯೇಲ್ ದೇಶದ ಎಲ್ಲೆಡೆಯೂ ಅಶಾಂತಿ, ಹಿಂಸಾಚಾರ ಮತ್ತು ಕೊಲೆಗಳು ವಿಪರೀತವಾಗಿದ್ದವು. ಆ ಸಮಯದಲ್ಲಿ ಉಜ್ಜೀಯನು ಯೆಹೂದದಲ್ಲಿ ಅರಸನಾಗಿದ್ದನು. ಸನ್ನಿವೇಶವು ಹೀಗಿರುವಾಗಲೇ ಯೆಹೋವನು ಯೆಶಾಯನ ಮೂಲಕ ಉತ್ತರ ರಾಜ್ಯಕ್ಕೆ ನೇರವಾದ ಎಚ್ಚರಿಕೆಯನ್ನು ಇಲ್ಲವೆ “ಮಾತನ್ನು” ಕಳುಹಿಸುತ್ತಾನೆ. “ಕರ್ತನು ಯಾಕೋಬ್ಯರಿಗೆ ವಿರುದ್ಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರಿಗೆ ತಗಲಿತು.”—ಯೆಶಾಯ 9:8. *
ದೇವರ ಕೋಪವನ್ನು ಕೆರಳಿಸುವಂತಹ ಗರ್ವ ಮತ್ತು ತಿರಸ್ಕಾರಭಾವ
4. ಯೆಹೋವನು ಇಸ್ರಾಯೇಲಿನ ವಿರುದ್ಧ ಯಾವ “ಮಾತನ್ನು” ಆಡುತ್ತಾನೆ, ಮತ್ತು ಏಕೆ?
4 ಯೆಹೋವನ ‘ಮಾತು’ ದುರ್ಲಕ್ಷಿಸಲ್ಪಡಲಾರದು. “ಗರ್ವದಿಂದಲೂ ಉಬ್ಬಟೆಯಿಂದಲೂ ಹೇಳಿಕೊಳ್ಳುವ ಎಫ್ರಾಯೀಮ್ಯರು ಸಮಾರ್ಯದ ನಿವಾಸಿಗಳು ಇವರೆಲ್ಲರಿಗೂ ಆ ಮಾತು ಗೊತ್ತಾಗುವದು.” (ಯೆಶಾಯ 9:10) “ಯಾಕೋಬ,” “ಇಸ್ರಾಯೇಲ್,” “ಎಫ್ರಾಯೀಮ್” ಮತ್ತು “ಸಮಾರ್ಯ” ಎಂಬ ಪದಗಳು, ಇಸ್ರಾಯೇಲಿನ ಉತ್ತರ ರಾಜ್ಯವನ್ನೇ ಸೂಚಿಸುತ್ತವೆ. ಈ ಉತ್ತರ ರಾಜ್ಯದ ಪ್ರಧಾನ ಕುಲವು ಎಫ್ರಾಯೀಮ್ ಆಗಿದ್ದು, ಸಮಾರ್ಯವು ಅದರ ರಾಜಧಾನಿ ನಗರವಾಗಿದೆ. ಎಫ್ರಾಯೀಮ್ ಕುಲವು ಧರ್ಮಭ್ರಷ್ಟತೆಯಲ್ಲಿ ಬೇರೂರಿದ್ದು, ಯೆಹೋವನ ಕಡೆಗೆ ಭಂಡತನದಿಂದ ತಿರಸ್ಕಾರಭಾವವನ್ನು ತೋರಿಸಿರುವುದರಿಂದ, ಯೆಹೋವನು ಆ ರಾಜ್ಯದ ವಿರುದ್ಧ ಒಂದು ಬಲವಾದ ನಿರ್ಣಾಯಕ ಮಾತನ್ನು ನುಡಿದಿದ್ದಾನೆ. ಜನರು ತಮ್ಮ ದುಷ್ಟ ಮಾರ್ಗಗಳ ಫಲವನ್ನು ಕೊಯ್ಯುವುದರಿಂದ ತಪ್ಪಿಸಿಕೊಳ್ಳಸಾಧ್ಯವಿಲ್ಲ. ಬದಲಿಗೆ ಅವರು ದೇವರ ವಾಕ್ಯಕ್ಕೆ ಗಮನನೀಡುವಂತೆ ಇಲ್ಲವೆ ಅದಕ್ಕೆ ಕಿವಿಗೊಡುವಂತೆ ಒತ್ತಾಯಿಸಲ್ಪಡುವರು.—ಗಲಾತ್ಯ 6:7.
5. ಯೆಹೋವನ ನ್ಯಾಯತೀರ್ಪುಗಳು ತಮ್ಮನ್ನು ಬಾಧಿಸಲಾರವೆಂದು ಇಸ್ರಾಯೇಲ್ಯರು ಹೇಗೆ ತೋರಿಸಿಕೊಳ್ಳುತ್ತಾರೆ?
5 ಪರಿಸ್ಥಿತಿಗಳು ಕೆಡುತ್ತಾ ಹೋದಂತೆ, ಜನರು ಭಾರೀ ನಷ್ಟವನ್ನು ಅನುಭವಿಸುವುದರ ಜೊತೆಗೆ, ಮಣ್ಣಿನ ಇಟ್ಟಿಗೆಗಳಿಂದ ಮತ್ತು ಕಡಿಮೆ ಬೆಲೆಯ ಕಟ್ಟಿಗೆಯಿಂದ ಮಾಡಲ್ಪಟ್ಟ ತಮ್ಮ ಮನೆಗಳನ್ನೂ ಕಳೆದುಕೊಳ್ಳುತ್ತಾರೆ. ಇಂತಹ ನಷ್ಟಗಳಿಂದ ಅವರ ಮನಸ್ಸು ಮೃದುವಾಗುತ್ತದೊ? ಅವರು ಯೆಹೋವನ ಪ್ರವಾದಿಗಳಿಗೆ ಕಿವಿಗೊಟ್ಟು, ಸತ್ಯ ದೇವರ ಕಡೆಗೆ ಹಿಂದಿರುಗುವರೊ? * ಜನರು ವ್ಯಕ್ತಪಡಿಸಿದ ತಿರಸ್ಕಾರಭಾವವನ್ನು ಯೆಶಾಯನು ದಾಖಲಿಸುತ್ತಾನೆ: “ಇಟ್ಟಿಗೆಗಳು ಬಿದ್ದುಹೋದವು, ಹೋಗಲಿ, ಕೆತ್ತಿದ ಕಲ್ಲಿನಿಂದ ಕಟ್ಟುವೆವು; ಅತ್ತಿಮರಗಳು ಕಡಿಯಲ್ಪಟ್ಟವು, ಇರಲಿ, ದೇವದಾರುಗಳನ್ನು ಹಾಕುವೆವು.” (ಯೆಶಾಯ 9:9) ಇಸ್ರಾಯೇಲ್ಯರು ಯೆಹೋವನನ್ನು ಧಿಕ್ಕರಿಸಿದರು ಮಾತ್ರವಲ್ಲ, ಅವರು ಯಾವ ಕಾರಣಕ್ಕಾಗಿ ಕಷ್ಟಾನುಭವಿಸುತ್ತಿದ್ದಾರೆಂದು ಹೇಳಿದ ಪ್ರವಾದಿಗಳನ್ನೂ ತಿರಸ್ಕರಿಸಿದರು. ‘ಮಣ್ಣಿನ ಇಟ್ಟಿಗೆಗಳಿಂದ ಮತ್ತು ಕಡಿಮೆ ಬೆಲೆಯ ಕಟ್ಟಿಗೆಗಳಿಂದ ಮಾಡಲ್ಪಟ್ಟ ನಮ್ಮ ಮನೆಗಳು ಕುಸಿದುಬಿದ್ದರೆ ಏನಂತೆ, ಕೆತ್ತಿದ ಕಲ್ಲುಗಳು ಮತ್ತು ದೇವದಾರು ವೃಕ್ಷದಂತಹ ಶ್ರೇಷ್ಠ ಮಟ್ಟದ ಸಾಮಾಗ್ರಿಗಳನ್ನು ಉಪಯೋಗಿಸಿ ನಾವು ಗಟ್ಟಿಯಾದ ಮನೆಗಳನ್ನು ಕಟ್ಟಿಕೊಳ್ಳುವೆವು!’ ಎಂದು ಜನರು ಕಾರ್ಯತಃ ಹೇಳುತ್ತಾರೆ. (ಹೋಲಿಸಿ ಯೋಬ 4:19.) ಇಂತಹ ಭಂಡತನಕ್ಕಾಗಿ ಯೆಹೋವನು ಅವರನ್ನು ಶಿಕ್ಷಿಸಲೇಬೇಕಿತ್ತು.—ಹೋಲಿಸಿ ಯೆಶಾಯ 48:22.
6. ಯೆಹೂದದ ವಿರುದ್ಧ ಅರಾಮ್ಯರು ಮತ್ತು ಇಸ್ರಾಯೇಲ್ಯರು ಸೇರಿ ಹೂಡಿದ ಸಂಚನ್ನು ಯೆಹೋವನು ಹೇಗೆ ವಿಫಲಗೊಳಿಸುತ್ತಾನೆ?
6 ಯೆಶಾಯನು ಮುಂದುವರಿಸಿ ಹೇಳುವುದು: “ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಹೆಚ್ಚಿಸಿದ್ದಾನೆ.” (ಯೆಶಾಯ 9:11ಎ) ಇಸ್ರಾಯೇಲಿನ ಪೆಕಹ ರಾಜನು ಮತ್ತು ಅರಾಮ್ಯರ ರೆಚೀನ ರಾಜನು ಮಿತ್ರರಾಗಿದ್ದಾರೆ. ಅವರಿಬ್ಬರೂ ಎರಡು ಗೋತ್ರಗಳ ಯೆಹೂದ ರಾಜ್ಯವನ್ನು ಸೋಲಿಸಿ, ಯೆರೂಸಲೇಮಿನಲ್ಲಿರುವ ಯೆಹೋವನ ಸಿಂಹಾಸನದ ಮೇಲೆ ತಮ್ಮ ಕೈಗೊಂಬೆಯನ್ನು, ಅಂದರೆ ‘ಟಾಬೇಲನ ಮಗನನ್ನು’ ರಾಜನನ್ನಾಗಿರಿಸಲು ಸಂಚುಹೂಡುತ್ತಿದ್ದಾರೆ. (ಯೆಶಾಯ 7:6) ಆದರೆ ಈ ಸಂಚು ಸಫಲಗೊಳ್ಳುವುದಿಲ್ಲ. ಏಕೆಂದರೆ, ರೆಚೀನನ ವೈರಿಗಳು ಬಲಶಾಲಿಗಳಾಗಿದ್ದಾರೆ ಮತ್ತು ಯೆಹೋವನು “ಅವನ” ಅಂದರೆ ಇಸ್ರಾಯೇಲಿನ ವಿರುದ್ಧ ಈ ವೈರಿಗಳನ್ನು ‘ಹೆಚ್ಚಿಸಲಿದ್ದಾನೆ.’ ‘ಹೆಚ್ಚಿಸು’ ಎಂಬ ಪದದ ಅರ್ಥ, ಯೆಹೋವನು ಅವರ ಕಾದಾಟಕ್ಕೆ ಯಶಸ್ಸನ್ನು ನೀಡಿ, ಇಸ್ರಾಯೇಲ್ ಮತ್ತು ಅರಾಮ್ಯರ ಮೈತ್ರಿಯನ್ನು ಮಾತ್ರವಲ್ಲ ಅದರ ಉದ್ದೇಶಗಳೂ ನಾಶನಕ್ಕೆ ಒಳಗಾಗುವಂತೆ ಅನುಮತಿಸುವನೆಂದೇ ಆಗಿದೆ.
7, 8. ಅಶ್ಶೂರರು ಅರಾಮ್ಯರ ಮೇಲೆ ಜಯಸಾಧಿಸಿದ್ದರಿಂದ, ಇಸ್ರಾಯೇಲ್ಯರು ಹೇಗೆ ಬಾಧಿಸಲ್ಪಟ್ಟರು?
7 ಅಶ್ಶೂರರು ಅರಾಮ್ಯರ ಮೇಲೆ ದಾಳಿಮಾಡಿದಾಗ, ಈ ಸಂಬಂಧ ಇಲ್ಲವೆ ಮೈತ್ರಿಯು ಒಡೆದುಹೋಗಲಾರಂಭಿಸುತ್ತದೆ. “ಅವನು [ಅಶ್ಶೂರರ ರಾಜನು] ಇವನ ಮಾತಿಗೆ ಒಪ್ಪಿ ದಮಸ್ಕ ಪಟ್ಟಣಕ್ಕೆ [ಅರಾಮ್ಯರ ರಾಜಧಾನಿ] ವಿರೋಧವಾಗಿ ಹೋಗಿ ರೆಚೀನನನ್ನು ಕೊಂದು ನಿವಾಸಿಗಳನ್ನು ಸೆರೆಹಿಡಿದು ಕೀರ್‌ಪ್ರಾಂತಕ್ಕೆ ಒಯ್ದನು.” (2 ಅರಸುಗಳು 16:9) ಹೀಗೆ, ಪೆಕಹ ತನ್ನ ಶಕ್ತಿಶಾಲಿ ಮಿತ್ರನನ್ನು ಕಳೆದುಕೊಳ್ಳುತ್ತಾನೆ, ಮತ್ತು ಯೆಹೂದವನ್ನು ಕೆಳಗುರುಳಿಸಲು ತಾನು ಮಾಡಿದಂತಹ ಯೋಜನೆಗಳೆಲ್ಲ ತಲೆಕೆಳಗಾದದ್ದನ್ನು ಮನಗಾಣುತ್ತಾನೆ. ವಾಸ್ತವದಲ್ಲಿ ರೆಚೀನನ ಮರಣದ ನಂತರ, ಏಲನ ಮಗನಾದ ಹೋಶೇಯನು ಪೆಕಹನನ್ನು ಹತಿಸಿ ತರುವಾಯ ಸಮಾರ್ಯದ ಸಿಂಹಾಸನವನ್ನೇರುತ್ತಾನೆ.—2 ಅರಸುಗಳು 15:23-25, 30.
8 ಇಸ್ರಾಯೇಲಿನ ಮಾಜಿ ಮಿತ್ರರಾಗಿದ್ದ ಅರಾಮ್ಯರು ಈಗ ಅಶ್ಶೂರರ ಅಡಿಯಾಳಾಗಿದ್ದಾರೆ. ಅಶ್ಶೂರವು ಆ ಪ್ರಾಂತದಲ್ಲೇ ಅತಿ ಪ್ರಬಲವಾದ ಶಕ್ತಿಯಾಗಿದೆ. ಯೆಹೋವನು ಈ ಹೊಸ ರಾಜಕೀಯ ಜೋಡಿಯನ್ನು ಹೇಗೆ ಉಪಯೋಗಿಸುವನೆಂಬುದನ್ನು ಯೆಶಾಯನು ಪ್ರವಾದಿಸುತ್ತಾನೆ: “ಯೆಹೋವನು [ಇಸ್ರಾಯೇಲಿನ] ಮುಂದೆ ಅರಾಮ್ಯರನ್ನು ಅವರ ಹಿಂದೆ ಫಿಲಿಷ್ಟಿಯರನ್ನು ಅಂತು ಅವನ ಶತ್ರುಗಳನ್ನೆಲ್ಲಾ ಎಬ್ಬಿಸಿದ್ದಾನೆ. ಇವರು ಇಸ್ರಾಯೇಲ್ಯರನ್ನು ಬಾಯಿತೆರೆದು ನುಂಗಿದ್ದಾರೆ. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.” (ಯೆಶಾಯ 9:11ಬಿ, 12) ಹೌದು, ಈಗ ಅರಾಮ್ಯರು ಇಸ್ರಾಯೇಲಿನ ವೈರಿಗಳಾಗಿದ್ದಾರೆ, ಮತ್ತು ಇಸ್ರಾಯೇಲ್ ದೇಶವು ಅಶ್ಶೂರರ ಹಾಗೂ ಅರಾಮ್ಯರ ದಾಳಿಯನ್ನು ಎದುರಿಸಲು ಸಿದ್ಧವಾಗಿರಬೇಕು. ಈ ದಾಳಿಯು ಯಶಸ್ಸನ್ನು ಕಾಣುತ್ತದೆ. ಈ ಮೊದಲು ಅಧಿಕಾರವನ್ನು ಕಸಿದುಕೊಂಡಿದ್ದ ಹೋಶೇಯನು ಅಶ್ಶೂರರ ಸೇವಕನಾಗುತ್ತಾನೆ. ಮತ್ತು ಅವನಿಂದ ಭಾರೀ ಮೊತ್ತದ ಕಪ್ಪಕಾಣಿಕೆಯನ್ನು ವಸೂಲುಮಾಡಲಾಗುತ್ತದೆ. (ಕೆಲವು ದಶಕಗಳ ಮುಂಚೆ, ಅಶ್ಶೂರರು ಇಸ್ರಾಯೇಲಿನ ರಾಜ ಮೆನಹೇಮನಿಂದಲೂ ಭಾರೀ ಮೊತ್ತವನ್ನು ಪಡೆದುಕೊಂಡಿದ್ದರು.) “ಅನ್ಯರು [ಎಫ್ರಾಯೀಮಿನ] ಶಕ್ತಿಯನ್ನು ಹೀರಿಬಿಟ್ಟಿ”ದ್ದಾರೆ ಎಂಬ ಪ್ರವಾದಿ ಹೋಶೇಯನ ಮಾತುಗಳು ಎಷ್ಟು ಸತ್ಯವಾಗಿದ್ದವು!—ಹೋಶೇಯ 7:9; 2 ಅರಸುಗಳು 15:19, 20; 17:1-3.
9. ಫಿಲಿಷ್ಟಿಯರು ‘ಹಿಂದಿನಿಂದ’ ದಾಳಿಮಾಡಿದರೆಂದು ಏಕೆ ಹೇಳಸಾಧ್ಯವಿದೆ?
9 ಫಿಲಿಷ್ಟಿಯರು ‘ಹಿಂದಿನಿಂದ’ ದಾಳಿಮಾಡುವರೆಂದೂ ಯೆಶಾಯನು ಹೇಳುವುದಿಲ್ಲವೊ? ಹೌದು, ಹೇಳುತ್ತಾನೆ. ಕಾಂತ ದಿಕ್ಸೂಚಿಗಳನ್ನು ಕಂಡುಹಿಡಿಯುವ ಮುಂಚೆ, ಇಬ್ರಿಯರು ಬೇರೊಂದು ವಿಧವನ್ನು ಉಪಯೋಗಿಸಿ ದಿಕ್ಕನ್ನು ಸೂಚಿಸುತ್ತಿದ್ದರು. ಅವರು ಸೂರ್ಯೋದಯದ ಕಡೆಗೆ ಮುಖಮಾಡಿರುತ್ತಿದ್ದ ವ್ಯಕ್ತಿಯ ದೃಷ್ಟಿಯಿಂದ ಒಂದು ನಿರ್ದಿಷ್ಟ ದಿಕ್ಕನ್ನು ನಿರ್ಣಯಿಸುತ್ತಿದ್ದರು. ಆದುದರಿಂದ, “ಪೂರ್ವ” ದಿಕ್ಕು ಮುಂಭಾಗವಾಗಿತ್ತು, ಮತ್ತು ಪಶ್ಚಿಮ ದಿಕ್ಕಿನಲ್ಲಿದ್ದ ಫಿಲಿಷ್ಟಿಯರ ಕರಾವಳಿ ಬೀಡು ‘ಹಿಂಭಾಗ’ವಾಗಿತ್ತು. ಯೆಶಾಯ 9:12ರಲ್ಲಿ ಸೂಚಿಸಲ್ಪಟ್ಟ ‘ಇಸ್ರಾಯೇಲ್,’ ಈ ಸಂದರ್ಭದಲ್ಲಿ ಯೆಹೂದವನ್ನು ಒಳಗೊಳ್ಳಬಹುದು ಏಕೆಂದರೆ, ಪೆಕಹನ ಸಮಕಾಲೀನನಾದ ಆಹಾಜನ ಆಳ್ವಿಕೆಯಲ್ಲಿ ಫಿಲಿಷ್ಟಿಯರು ಯೆಹೂದವನ್ನು ಆಕ್ರಮಿಸಿ, ಹಲವಾರು ಯೆಹೂದ ನಗರಗಳನ್ನು ಮತ್ತು ಕೋಟೆಗಳನ್ನು ಸೆರೆಹಿಡಿದು ವಶಪಡಿಸಿಕೊಂಡರು. ಉತ್ತರ ರಾಜ್ಯದ ಎಫ್ರಾಯೀಮಿನಂತೆಯೇ, ಯೆಹೂದವು ಕೂಡ ಯೆಹೋವನ ದಂಡನೆಗೆ ಯೋಗ್ಯವಾಗಿದೆ, ಏಕೆಂದರೆ ಅಲ್ಲಿಯೂ ಧರ್ಮಭ್ರಷ್ಟತೆ ತುಂಬಿತುಳುಕುತ್ತಿದೆ.—2 ಪೂರ್ವಕಾಲವೃತ್ತಾಂತ 28:1-4, 18, 19.
‘ತಲೆಯಿಂದ ಬಾಲದ’ ವರೆಗೆ—ದಂಗೆಕೋರರ ರಾಷ್ಟ್ರ
10, 11. ಇಸ್ರಾಯೇಲ್ಯರು ಪಟ್ಟುಬಿಡದೆ ದಂಗೆಯೇಳುತ್ತಿರುವುದರಿಂದ, ಯೆಹೋವನು ಯಾವ ಶಿಕ್ಷೆಯನ್ನು ಅವರಿಗೆ ಕೊಡುವನು?
10 ಉತ್ತರ ರಾಜ್ಯವು ಎಷ್ಟೆಲ್ಲ ಕಷ್ಟವನ್ನು ಅನುಭವಿಸಿ, ಯೆಹೋವನ ಪ್ರವಾದಿಗಳ ಬಲವಾದ ಘೋಷಣೆಗಳಿಗೆ ಒಳಪಟ್ಟರೂ, ದೇವರ ವಿರುದ್ಧ ದಂಗೆಯೇಳುವುದನ್ನು ಮುಂದುವರಿಸಿದೆ. “ಹೀಗಿದ್ದರೂ ಆ ಜನರು ತಮ್ಮನ್ನು ಹೊಡೆದಾತನ ಕಡೆಗೆ ತಿರುಗಿಕೊಳ್ಳಲೂ ಇಲ್ಲ, ಸೇನಾಧೀಶ್ವರನಾದ ಯೆಹೋವನನ್ನು ಸೇವಿಸಲೂ ಇಲ್ಲ.” (ಯೆಶಾಯ 9:13) ಆದಕಾರಣ, ಪ್ರವಾದಿಯು ಹೇಳುವುದು: “ಯೆಹೋವನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ತಾಲತೃಣಗಳನ್ನೂ ಒಂದೇ ದಿನದಲ್ಲಿ ಕಡಿದುಬಿಟ್ಟಿದ್ದಾನೆ. (ಘನಹೊಂದಿದ ಹಿರಿಯನೇ ತಲೆ; ಸುಳ್ಳುಬೋಧನೆ ಮಾಡುವ ಪ್ರವಾದಿಯೇ ಬಾಲ). ಈ ಜನರನ್ನು ನಡಿಸುವವರು ದಾರಿತಪ್ಪಿಸುವವರಾಗಿದ್ದಾರಷ್ಟೆ; ನಡಿಸಲ್ಪಟ್ಟವರೂ ನಾಶವಾಗುತ್ತಾರೆ.”—ಯೆಶಾಯ 9:14-16.
11 “ತಲೆ” ಮತ್ತು “ತಾಲ” ಇಲ್ಲವೆ ರೆಂಬೆ, ಆ ಜನಾಂಗದ ಮುಖಂಡರನ್ನು ಅಂದರೆ 2 ತಿಮೊಥೆಯ 4:3.
“ಘನಹೊಂದಿದ ಹಿರಿಯ”ರನ್ನು ಸೂಚಿಸುತ್ತದೆ. “ಬಾಲ” ಮತ್ತು “ತೃಣ” ಇಲ್ಲವೆ ಹುಲ್ಲು, ತಮ್ಮ ಮುಖಂಡರನ್ನು ಮೆಚ್ಚಿಸಲು ಇಂಪಾದ ನುಡಿಗಳನ್ನಾಡುವ ಸುಳ್ಳು ಪ್ರವಾದಿಗಳನ್ನು ಸೂಚಿಸುತ್ತದೆ. ಒಬ್ಬ ಬೈಬಲ್ ಪಂಡಿತನು ಬರೆಯುವುದು: “ಸುಳ್ಳು ಪ್ರವಾದಿಗಳನ್ನು ಬಾಲವೆಂದು ಕರೆಯಲಾಗಿದೆ, ಏಕೆಂದರೆ ಅವರ ನೈತಿಕತೆ ತುಂಬ ಕೆಳಮಟ್ಟದ್ದಾಗಿತ್ತು, ಮತ್ತು ಅವರು ದುಷ್ಟ ಅರಸರ ಹೊಗಳುಭಟ್ಟರೂ ಬೆಂಬಲಿಗರೂ ಆಗಿದ್ದರು.” ಪ್ರೊಫೆಸರ್ ಎಡ್ವರ್ಡ್ ಜೆ. ಯಂಗ್ ಈ ಸುಳ್ಳು ಪ್ರವಾದಿಗಳ ಬಗ್ಗೆ ಹೇಳುವುದು: “ಇವರು ಮುಖಂಡರಾಗಿರಲಿಲ್ಲ, ಬದಲಿಗೆ ಮುಖಂಡರು ನಡೆಸಿದಲ್ಲಿಗೆ ಹಿಂಬಾಲಿಸಿ, ಕೇವಲ ಮುಖಸ್ತುತಿ ಮಾಡುತ್ತಾ ಅವರ ಗುಲಾಮರಂತೆ ವರ್ತಿಸಿದರು. ಇವರು ನಾಯಿಯು ಆಡಿಸುವ ಬಾಲದಂತಿದ್ದರು.”—ಹೋಲಿಸಿ‘ಅನಾಥರು ಮತ್ತು ವಿಧವೆಯರು’ ಕೂಡ ದಂಗೆಕೋರರು
12. ಇಸ್ರಾಯೇಲ್ಯ ಸಮಾಜದಲ್ಲಿ ಭ್ರಷ್ಟತೆಯು ಎಷ್ಟರ ಮಟ್ಟಿಗೆ ಬೇರೂರಿದೆ?
12 ಯೆಹೋವನು ಅನಾಥರ ಮತ್ತು ವಿಧವೆಯರ ಸಮರ್ಥಕನಾಗಿದ್ದಾನೆ. (ವಿಮೋಚನಕಾಂಡ 22:22, 23) ಆದರೂ, ಯೆಶಾಯನು ಹೇಳುವುದನ್ನು ಕೇಳಿಸಿಕೊಳ್ಳಿ: “ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಉಲ್ಲಾಸಿಸನು, ಅವರಲ್ಲಿನ ಅನಾಥರನ್ನೂ ವಿಧವೆಯರನ್ನೂ ಕರುಣಿಸನು; ಪ್ರತಿಯೊಬ್ಬನೂ ಭ್ರಷ್ಟನೂ ದುಷ್ಟನೂ ಆಗಿದ್ದಾನೆ; ಎಲ್ಲರ ಬಾಯೂ ನೀಚವಾಗಿ ಮಾತಾಡುತ್ತದೆ. ಎಷ್ಟು ದಂಡಿಸಿದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.” (ಯೆಶಾಯ 9:17) ಧರ್ಮಭ್ರಷ್ಟತೆಯು ಅನಾಥರನ್ನು ಮತ್ತು ವಿಧವೆಯರನ್ನು ಸೇರಿಸಿ, ಎಲ್ಲ ರೀತಿಯ ಜನರನ್ನು ಭ್ರಷ್ಟಗೊಳಿಸಿದೆ! ಜನರು ತಮ್ಮನ್ನು ಸರಿಪಡಿಸಿಕೊಳ್ಳುವರೆಂಬ ಅಪೇಕ್ಷೆಯಿಂದ ಯೆಹೋವನು ತಾಳ್ಮೆಯಿಂದ ತನ್ನ ಪ್ರವಾದಿಗಳನ್ನು ಕಳುಹಿಸುತ್ತಾನೆ. ಉದಾಹರಣೆಗಾಗಿ, “ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನನ್ನು ಸೇರಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ” ಎಂದು ಹೋಶೇಯನು ಬೇಡಿಕೊಳ್ಳುತ್ತಾನೆ. (ಹೋಶೇಯ 14:1) ಅನಾಥರ ಮತ್ತು ವಿಧವೆಯರ ಸಮರ್ಥಕನೆಂದೆನಿಸಿಕೊಂಡವನೇ ಅವರ ಮೇಲೆ ದಂಡನೆಯನ್ನು ವಿಧಿಸಬೇಕಾದಾಗ, ಆತನಿಗಾಗುವ ವೇದನೆಯನ್ನು ಊಹಿಸಿಕೊಳ್ಳಿರಿ!
13. ಯೆಶಾಯನ ದಿನದ ಸ್ಥಿತಿಗತಿಯಿಂದ ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ?
13 ಯೆಶಾಯನಂತೆ ನಾವು ಕೂಡ, ಯೆಹೋವನು ದುಷ್ಟರ ವಿರುದ್ಧ ತರಲಿರುವ ನ್ಯಾಯತೀರ್ಪಿನ ದಿನದ ಮುಂಚಿನ ಕಠಿನ ಕಾಲಗಳಲ್ಲಿ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1-5) ಹಾಗಾದರೆ ನಿಜ ಕ್ರೈಸ್ತರು, ತಾವು ಯಾವುದೇ ಪರಿಸ್ಥಿತಿಯಲ್ಲಿರಲಿ, ಆತ್ಮಿಕ, ನೈತಿಕ ಮತ್ತು ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ತುಂಬ ಪ್ರಮುಖವಾಗಿದೆ. ಹೀಗೆ ಮಾಡುವುದರಿಂದ, ಅವರು ದೇವರ ಅನುಗ್ರಹವನ್ನು ಸದಾ ಹೊಂದಿರುವರು. ಆದುದರಿಂದ, ಪ್ರತಿಯೊಬ್ಬರೂ ಯೆಹೋವನೊಂದಿಗೆ ತಮಗಿರುವ ಸಂಬಂಧವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಲಿ. “ಬಾಬೆಲೆಂಬ ಮಹಾ ನಗರಿ”ಯಿಂದ ಹೊರಬಂದಿರುವ ಸಕಲರೂ, “ಅವಳ ಪಾಪಗಳಲ್ಲಿ” ಎಂದಿಗೂ “ಪಾಲುಗಾರರಾಗ”ದಿರಲಿ.—ಪ್ರಕಟನೆ 18:2, 4.
ಸುಳ್ಳಾರಾಧನೆಯು ಹಿಂಸಾಚಾರಕ್ಕೆ ಇಂಬುಕೊಡುತ್ತದೆ
14, 15. (ಎ) ದೆವ್ವಾರಾಧನೆಯಿಂದ ಏನು ಫಲಿಸುತ್ತದೆ? (ಬಿ) ಯಾವ ಕಷ್ಟವನ್ನು ಇಸ್ರಾಯೇಲ್ ಸತತವಾಗಿ ಅನುಭವಿಸುವುದೆಂದು ಯೆಶಾಯನು ಪ್ರವಾದಿಸುತ್ತಾನೆ?
14 ಸುಳ್ಳಾರಾಧನೆಯು, ದೆವ್ವಗಳ ಆರಾಧನೆಯಲ್ಲದೆ ಮತ್ತೇನೂ ಆಗಿರುವುದಿಲ್ಲ. (1 ಕೊರಿಂಥ 10:20) ದೆವ್ವಗಳ ಪ್ರಭಾವವು ಹಿಂಸಾಚಾರಕ್ಕೆ ನಡೆಸುತ್ತದೆ ಎಂಬುದನ್ನು ಪ್ರಳಯದ ಮುಂಚೆ ಇದ್ದ ಸ್ಥಿತಿಗತಿಗಳು ತೋರಿಸಿದವು. (ಆದಿಕಾಂಡ 6:11, 12) ಹಾಗಾದರೆ, ಇಸ್ರಾಯೇಲ್ಯರು ಧರ್ಮಭ್ರಷ್ಟರಾಗಿ, ದೆವ್ವಗಳ ಆರಾಧನೆಯಲ್ಲಿ ತೊಡಗುವಾಗ, ದೇಶದ ಎಲ್ಲೆಡೆಯೂ ಹಿಂಸಾಚಾರ ಹಾಗೂ ದುಷ್ಟತನವು ಹಬ್ಬಿರುವುದು ಆಶ್ಚರ್ಯಕರವೇನೂ ಅಲ್ಲ.—ಧರ್ಮೋಪದೇಶಕಾಂಡ 32:17; ಕೀರ್ತನೆ 106:35-38.
15 ಇಸ್ರಾಯೇಲಿನಲ್ಲಿ ಹಬ್ಬಿರುವ ದುಷ್ಟತನ ಹಾಗೂ ಹಿಂಸಾಚಾರವನ್ನು ಯೆಶಾಯನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ: “ದುಷ್ಟತನವು ಬೆಂಕಿಯಂತೆ ಉರಿದು ಮುಳ್ಳುಗಿಳ್ಳನ್ನು ನುಂಗಿ ಅರಣ್ಯದ ಪೊದೆಗಳನ್ನು ಹತ್ತಿಕೊಳ್ಳಲು ಅವು ಹೊಗೆಹೊಗೆಯಾಗಿ ಸುತ್ತಿಸುತ್ತಿಕೊಂಡು ಮೇಲಕ್ಕೆ ಏರುತ್ತವೆ. ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ದೇಶವು ಸುಟ್ಟು ಹೋಗಿದೆ; ಪ್ರಜೆಯು ಅಗ್ನಿಗೆ ಆಹುತಿಯಾಗಿದೆ; ಅಣ್ಣನು ತಮ್ಮನನ್ನು ಕರುಣಿಸನು. ಬಲಗಡೆಯಲ್ಲಿರುವದನ್ನು ಕಿತ್ತುಕೊಂಡು [ತಿಂದರೂ] ಹಸಿದೇ ಇರುತ್ತಾರೆ; ಎಡಗಡೆಯಲ್ಲಿರುವದನ್ನು ಉಂಡರೂ ತೃಪ್ತಿಗೊಳ್ಳರು; ಒಬ್ಬೊಬ್ಬನೂ ತನ್ನ ತನ್ನ ತೋಳಿನ ಮಾಂಸವನ್ನು ತಿನ್ನುತ್ತಾನೆ. ಮನಸ್ಸೆಯು ಎಫ್ರಾಯೀಮನ್ನು, ಎಫ್ರಾಯೀಮು ಮನಸ್ಸೆಯನ್ನು ತಿಂದು ಬಿಡುತ್ತದೆ, ಈ ಎರಡೂ ಯೆಹೂದಕ್ಕೆ ವಿರುದ್ಧವಾಗಿವೆ. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.”—ಯೆಶಾಯ 9:18-21.
16. ಯೆಶಾಯ 9:18-21ರ ಮಾತುಗಳು ಹೇಗೆ ನೆರವೇರುತ್ತವೆ?
16 ಬೆಂಕಿಯ ಜ್ವಾಲೆ ಒಂದು ಮುಳ್ಳುಪೊದೆಯಿಂದ ಮತ್ತೊಂದಕ್ಕೆ ಹರಡುವಂತೆಯೇ, ಹಿಂಸಾಚಾರವು ಕೈಮೀರಿ ‘ಅರಣ್ಯದ ಪೊದೆಗಳನ್ನು ಹತ್ತಿಕೊಳ್ಳುತ್ತದೆ.’ ಹೀಗೆ, ಹಿಂಸಾಚಾರವೆಂಬ ಪೂರ್ಣಪ್ರಮಾಣದ ಕಾಡ್ಗಿಚ್ಚು ಹರಡುತ್ತದೆ. ಬೈಬಲ್ ವ್ಯಾಖ್ಯಾನಕಾರರಾದ ಕೈಲ್ ಮತ್ತು ಡೆಲಿಟ್ಷ್, ಅಲ್ಲಿಯ ಹಿಂಸಾಚಾರದ ಮಟ್ಟವನ್ನು ವರ್ಣಿಸುತ್ತಾ ಹೇಳುವುದು: “ಅರಾಜಕತೆಯ ಸಮಯದಲ್ಲಿ ಸ್ಫೋಟಿಸಿದ ಆಂತರಿಕ ಯುದ್ಧವು, ಅಮಾನವೀಯ ಸ್ವನಾಶನಕ್ಕೆ ನಡೆಸಿತು. ಯಾವುದೇ ರೀತಿಯ ಕೋಮಲ ಭಾವನೆಗಳನ್ನೂ ಹೊಂದಿರದಿದ್ದ ಹಿಂಸಾಚಾರಿಗಳು, ಒಬ್ಬರನ್ನೊಬ್ಬರು ಕಬಳಿಸಿದರೂ ತೃಪ್ತರಾಗಲಿಲ್ಲ.” ಇಲ್ಲಿ ವಿಶೇಷವಾಗಿ ಎಫ್ರಾಯೀಮ್ ಮತ್ತು ಮನಸ್ಸೆಯ ಕುಲಗಳ ಬಗ್ಗೆ ಉಲ್ಲೇಖಿಸಲಾಗಿದೆ, ಏಕೆಂದರೆ ಅವು ಉತ್ತರ ರಾಜ್ಯದ ಮುಖ್ಯ ಪ್ರತಿನಿಧಿಗಳಾಗಿದ್ದವು. ಮತ್ತು ಯೋಸೇಫನ ಇಬ್ಬರು ಗಂಡು ಮಕ್ಕಳ ಸಂತತಿಯವರಾಗಿದ್ದ ಇವರು, ಆ ಹತ್ತು ಗೋತ್ರದವರಲ್ಲಿ ಬಹಳ ಹತ್ತಿರದ ಸಂಬಂಧಿಕರಾಗಿದ್ದರು. ಆದರೂ, ಬದ್ಧ ವೈರಿಗಳಾಗಿದ್ದ ಈ ಎರಡು ಗೋತ್ರಗಳವರು, ದಕ್ಷಿಣ ರಾಜ್ಯವಾದ ಯೆಹೂದದ ಮೇಲೆ ದಾಳಿಮಾಡುವಾಗ ಮಾತ್ರ ಒಮ್ಮತದಿಂದಿರುತ್ತಾರೆ.—2 ಪೂರ್ವಕಾಲವೃತ್ತಾಂತ 28:1-8.
ಭ್ರಷ್ಟ ನ್ಯಾಯಾಧೀಶರು ತಮ್ಮ ನ್ಯಾಯಾಧಿಪತಿಯನ್ನು ಸಂಧಿಸುತ್ತಾರೆ
17, 18. ಇಸ್ರಾಯೇಲಿನ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಯಾವ ಭ್ರಷ್ಟತೆಯಿದೆ?
17 ಯೆಹೋವನು ಈಗ ತನ್ನ ನ್ಯಾಯವಂತ ದೃಷ್ಟಿಯನ್ನು ಇಸ್ರಾಯೇಲಿನ ಭ್ರಷ್ಟ ನ್ಯಾಯಾಧೀಶರು ಮತ್ತು ಇತರ ಅಧಿಕಾರಿಗಳ ಮೇಲೆ ಬೀರುತ್ತಾನೆ. ಇವರು, ತಮ್ಮಲ್ಲಿ ನ್ಯಾಯಕ್ಕಾಗಿ ಬರುವ ದೀನದಲಿತರನ್ನು ಲೂಟಿಮಾಡುವ ಮೂಲಕ ತಮ್ಮ ಅಧಿಕಾರದ ದುರುಪಯೋಗ ಮಾಡುತ್ತಾರೆ. ಯೆಶಾಯನು ಹೇಳುವುದು: “ಅಯ್ಯೋ, ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ ನನ್ನ ಜನರಲ್ಲಿನ ದರಿದ್ರರಿಗೆ ನ್ಯಾಯವನ್ನು ತಪ್ಪಿಸಬೇಕೆಂತಲೂ ವಿಧವೆಯರನ್ನು ಸೂರೆಮಾಡಿ ಅನಾಥರನ್ನು ಕೊಳ್ಳೆಹೊಡೆಯಬೇಕೆಂತಲೂ ಅನ್ಯಾಯವಾದ ತೀರ್ಪುಗಳನ್ನು ತೀರಿಸಿ ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ!”—ಯೆಶಾಯ 10:1, 2.
18 ಯೆಹೋವನ ಧರ್ಮಶಾಸ್ತ್ರವು ಎಲ್ಲ ರೀತಿಯ ಅನ್ಯಾಯವನ್ನು ನಿಷೇಧಿಸುತ್ತದೆ: “ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.” (ಯಾಜಕಕಾಂಡ 19:15) ಈ ಮೇಲಿನ ನಿಯಮವನ್ನು ಉಲ್ಲಂಘಿಸುವ ಅಧಿಕಾರಿಗಳು, ತಮ್ಮ ಸ್ವಂತ “ಅನ್ಯಾಯವಾದ ತೀರ್ಪುಗಳನ್ನು” ವಿಧಿಸುತ್ತಾರೆ. ಇವರು ಅನಾಥರ ಮತ್ತು ವಿಧವೆಯರಲ್ಲಿರುವ ಅತ್ಯಲ್ಪ ಸ್ವತ್ತುಗಳನ್ನು ಕಸಿದುಕೊಳ್ಳುವ ಹೀನಾಯ ಕೃತ್ಯವನ್ನು ಮಾಡಿದರೂ, ಈ ರೀತಿಯ ಕಳ್ಳತನವನ್ನು ನ್ಯಾಯಬದ್ಧಗೊಳಿಸುತ್ತಾರೆ. ಇಸ್ರಾಯೇಲಿನ ಸುಳ್ಳು ದೇವರುಗಳು ಈ ಅನ್ಯಾಯಕ್ಕೆ ಕಣ್ಣುಮುಚ್ಚಿಕೊಂಡಿದ್ದರೂ, ಯೆಹೋವನು ಹಾಗೆ ಮಾಡುವುದಿಲ್ಲ. ಯೆಶಾಯನ ಮುಖಾಂತರ, ಯೆಹೋವನು ಈ ದುಷ್ಟ ನ್ಯಾಯಾಧೀಶರ ಕಡೆಗೆ ಗಮನಹರಿಸುತ್ತಾನೆ.
19, 20. ಭ್ರಷ್ಟ ಇಸ್ರಾಯೇಲ್ಯ ನ್ಯಾಯಾಧೀಶರ ಪರಿಸ್ಥಿತಿಯು ಹೇಗೆ ಬದಲಾಗುವುದು, ಮತ್ತು ಅವರ “ಮಹಿಮೆ”ಗೆ ಏನು ಸಂಭವಿಸುವುದು?
19“ದಂಡನೆಯ ದಿನದಲ್ಲಿಯೂ ದೂರದಿಂದ ಬರುವ ನಾಶನದಲ್ಲಿಯೂ ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು [“ಮಹಿಮೆಯನ್ನು,” NW] ಯಾರ ವಶಮಾಡುವಿರಿ? ಕೈದಿಗಳ [ಕಾಲ] ಕೆಳಗೆ ಮುದುರಿಕೊಂಡು ಹತರಾದವರ ಕೆಳಗೆ ಬಿದ್ದಿರುವದೇ ಇವರ ಗತಿ!” (ಯೆಶಾಯ 10:3, 4ಎ) ಅನಾಥರ ಮತ್ತು ವಿಧವೆಯರ ಮೊರೆಗಳನ್ನು ಕೇಳಿಸಿಕೊಳ್ಳಲು ಯಾವ ಪ್ರಾಮಾಣಿಕ ನ್ಯಾಯಾಧೀಶರೂ ಅಲ್ಲಿರಲಿಲ್ಲ. ಈ ಭ್ರಷ್ಟ ಇಸ್ರಾಯೇಲ್ಯ ನ್ಯಾಯಾಧೀಶರು ಯೆಹೋವನಿಗೆ ಲೆಕ್ಕವೊಪ್ಪಿಸಬೇಕಾದ ಕಾರಣ, ಅವರು ಯಾರ ಬಳಿಗೆ ಹೋಗುವರೆಂದು ಯೆಹೋವನು ಕೇಳುವುದು ಎಷ್ಟು ಸೂಕ್ತವಾಗಿದೆ. ಹೌದು, “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು” ಎಂಬುದನ್ನು ಅವರು ಸ್ವಲ್ಪದರಲ್ಲೇ ಕಲಿತುಕೊಳ್ಳಲಿದ್ದಾರೆ.—ಇಬ್ರಿಯ 10:31.
20 ಈ ದುಷ್ಟ ನ್ಯಾಯಾಧೀಶರ “ಮಹಿಮೆ” ಅಂದರೆ, ಅವರ ಲೌಕಿಕ ಪ್ರತಿಷ್ಠೆ, ಮಾನಮರ್ಯಾದೆ, ಮತ್ತು ಸಿರಿಸಂಪತ್ತು ಹಾಗೂ ಸ್ಥಾನಮಾನದಿಂದ ಬರುವ ಅಧಿಕಾರವು ಶಾಶ್ವತವಲ್ಲ. ಕೆಲವರು ಯುದ್ಧ ಕೈದಿಗಳಾಗಿ, ಇತರ ಕೈದಿಗಳ ಕಾಲಕೆಳಗೆ ‘ಮುದುರಿಕೊಳ್ಳುವರು.’ ಇತರರು ವಧಿಸಲ್ಪಡುವರು ಮತ್ತು ಅವರ ಶವಗಳು, ಯುದ್ಧದಲ್ಲಿ ಮಡಿದವರ ಶವಗಳ ಕೆಳಗೆ ಬಿದ್ದಿರುವವು. ಅವರ “ಮಹಿಮೆ,” ಕಳ್ಳತನದಿಂದ ಸಂಗ್ರಹಿಸಿದ ಐಶ್ವರ್ಯವನ್ನು ಕೂಡ ಒಳಗೊಳ್ಳುತ್ತದೆ. ಇದನ್ನು ವೈರಿಗಳು ಲೂಟಿಮಾಡಿಬಿಡುವರು.
21. ಇಸ್ರಾಯೇಲ್ ದೇಶವು ಈಗಾಗಲೇ ಅನೇಕ ಶಿಕ್ಷೆಗಳನ್ನು ಅನುಭವಿಸಿದ್ದರಿಂದ, ಅವರ ಮೇಲೆ ಯೆಹೋವನಿಗಿದ್ದ ಕೋಪವು ಈಗ ಕಡಿಮೆಯಾಗಿದೆಯೊ?
21 ಯೆಶಾಯನು ಈ ಕೊನೆಯ ಚರಣವನ್ನು ಒಂದು ಗಂಭೀರವಾದ ಎಚ್ಚರಿಕೆಯೊಂದಿಗೆ ಕೊನೆಗೊಳಿಸುತ್ತಾನೆ: “ಇಷ್ಟೆಲ್ಲಾ ನಡೆದರೂ [ಈ ರಾಷ್ಟ್ರವು ಈ ತನಕ ಅನುಭವಿಸುತ್ತಿರುವ ಪೀಡೆಯಿಂದಾಗಿ ಸ್ಪಷ್ಟವಾಗುತ್ತದೇನೆಂದರೆ] ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.” (ಯೆಶಾಯ 10:4ಬಿ) ಹೌದು, ಯೆಹೋವನು ಇಸ್ರಾಯೇಲಿಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಹೇಳಬಯಸುತ್ತಾನೆ. ಈ ದಂಗೆಕೋರ ಉತ್ತರ ರಾಜ್ಯಕ್ಕೆ ಅಂತಿಮ ಹಾಗೂ ವಿನಾಶಕರ ಏಟನ್ನು ಕೊಟ್ಟ ನಂತರವೇ ಯೆಹೋವನು ತನ್ನ ಎತ್ತಿದ ಕೈಯನ್ನು ಕೆಳಗಿಳಿಸುವನು.
ಇತರರ ಸುಳ್ಳಿಗೆ ಮತ್ತು ಸ್ವಾರ್ಥಕ್ಕೆ ಬಲಿಬೀಳದಿರಿ
22. ಇಸ್ರಾಯೇಲಿಗೆ ಸಂಭವಿಸಿದ ವಿಷಯಗಳಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
22 ಯೆಹೋವನು ಯೆಶಾಯನ ಮುಖಾಂತರ ನುಡಿದ ಮಾತು, ಇಸ್ರಾಯೇಲಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು ಮತ್ತು ‘ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗಲಿಲ್ಲ.’ (ಯೆಶಾಯ 55:10, 11) ಇಸ್ರಾಯೇಲಿನ ಉತ್ತರ ರಾಜ್ಯವು ದುರಂತಕರವಾಗಿ ಅಂತ್ಯಗೊಂಡಿತೆಂದು ಇತಿಹಾಸವು ದಾಖಲಿಸುತ್ತದೆ, ಮತ್ತು ಅದರ ನಿವಾಸಿಗಳು ಅನುಭವಿಸಿದ ಸಂಕಷ್ಟವನ್ನು ನಾವು ಕೇವಲ ಊಹಿಸಿಕೊಳ್ಳಬಹುದಷ್ಟೇ. ಹಾಗೆಯೇ, ಈ ಪ್ರಚಲಿತ ವಿಷಯಗಳ ವ್ಯವಸ್ಥೆಯ ಮೇಲೆ ಮತ್ತು ವಿಶೇಷವಾಗಿ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೇಲೆ ದೇವರ ಮಾತು ನೆರವೇರುವುದು. ಆದುದರಿಂದ, ಕ್ರೈಸ್ತರು ಸುಳ್ಳಿಗೆ ಮತ್ತು ದೇವವಿರೋಧಿ ಪ್ರಚಾರಕ್ಕೆ ಕಿವಿಗೊಡದೇ ಇರುವುದು ಎಷ್ಟು ಪ್ರಾಮುಖ್ಯವಾಗಿದೆ! ದೇವರ ವಾಕ್ಯವು ನಮಗೆ ಸೈತಾನನ ಕುಶಲ ತಂತ್ರಗಳನ್ನು ತಿಳಿಯಪಡಿಸಿದೆ, ಆದುದರಿಂದ ನಾವು ಪ್ರಾಚೀನ ಇಸ್ರಾಯೇಲಿನ ಜನರಂತೆ ಅವುಗಳಿಗೆ ಬಲಿಬೀಳುವ ಅಗತ್ಯವಿಲ್ಲ. (2 ಕೊರಿಂಥ 2:11) ಯೆಹೋವನನ್ನು ‘ಆತ್ಮದಿಂದಲೂ ಸತ್ಯದಿಂದಲೂ’ ಆರಾಧಿಸುವುದನ್ನು ನಾವೆಂದಿಗೂ ನಿಲ್ಲಿಸದಿರೋಣ. (ಯೋಹಾನ 4:24) ನಾವು ಹಾಗೆ ಮಾಡುವಲ್ಲಿ, ಆತನ ಎತ್ತಿದ ಕೈ ದಂಗೆಕೋರ ಎಫ್ರಾಯೀಮನ್ನು ಹತಿಸಿದಂತೆ ತನ್ನ ಆರಾಧಕರನ್ನು ಹತಿಸಲಾರದು. ಬದಲಿಗೆ ಅದು ಅವರನ್ನು ಪ್ರೀತಿಯಿಂದ ತಬ್ಬಿಕೊಂಡು, ಪರದೈಸ ಭೂಮಿಯ ಮೇಲೆ ಸದಾಕಾಲ ಜೀವಿಸುವ ದಾರಿಯಲ್ಲಿ ನಡೆಯುವಂತೆ ಸಹಾಯಮಾಡುವುದು.—ಯಾಕೋಬ 4:8.
[ಪಾದಟಿಪ್ಪಣಿಗಳು]
^ ಪ್ಯಾರ. 3 ಯೆಶಾಯ 9:8–10:4ರಲ್ಲಿ ನಾಲ್ಕು ಚರಣಗಳಿವೆ (ಲಯಬದ್ಧ ಭಾಗದ ಬೇರೆ ಬೇರೆ ವರ್ಗಗಳು). ಪ್ರತಿಯೊಂದು ಚರಣದ ಕೊನೆಯಲ್ಲಿ, “ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ” ಎಂಬ ಪುನರಾವರ್ತನವಾಗುವ ಭಯಸೂಚಕ ಹೇಳಿಕೆಯಿದೆ. (ಯೆಶಾಯ 9:12, 17, 21; 10:4) ಈ ರೀತಿಯ ಶೈಲಿಯು, ಯೆಶಾಯ 9:8–10:4ನ್ನು ಒಂದು ಸಂಯುಕ್ತ ‘ಮಾತಾಗಿ’ ಕೂಡಿಸಿದೆ. (ಯೆಶಾಯ 9:8) ಯೆಹೋವನ ‘ಕೈ ಎತ್ತಿಯೇ ಇರುವುದು’ ರಾಜಿಮಾಡಿಕೊಳ್ಳಲಿಕ್ಕಾಗಿ ಅಲ್ಲ, ನ್ಯಾಯತೀರಿಸಲಿಕ್ಕಾಗಿಯೇ ಎಂಬುದನ್ನು ಸಹ ಗಮನಿಸಿರಿ.—ಯೆಶಾಯ 9:13.
^ ಪ್ಯಾರ. 5 ಯೆಹೋವನು ಇಸ್ರಾಯೇಲಿನ ಉತ್ತರ ರಾಜ್ಯಕ್ಕೆ ಕಳುಹಿಸಿದ ಪ್ರವಾದಿಗಳಲ್ಲಿ, ಯೇಹು (ರಾಜನಲ್ಲ), ಎಲೀಯ, ಮಿಕಾಯೆಹು, ಎಲೀಷ, ಯೋನ, ಒದೇದ, ಹೋಶೇಯ, ಆಮೋಸ, ಮತ್ತು ಮೀಕರು ಸೇರಿದ್ದರು.
[ಅಧ್ಯಯನ ಪ್ರಶ್ನೆಗಳು]
[ಪುಟ 139ರಲ್ಲಿರುವ ಚಿತ್ರ]
ಇಸ್ರಾಯೇಲಿನ ಉದ್ದಕ್ಕೂ ದುಷ್ಟತನ ಹಾಗೂ ಹಿಂಸಾಚಾರವು ಕಾಡ್ಗಿಚ್ಚಿನಂತೆ ಹಬ್ಬುತ್ತದೆ
[ಪುಟ 141ರಲ್ಲಿರುವ ಚಿತ್ರ]
ಇತರರನ್ನು ಲೂಟಿಮಾಡುವವರೆಲ್ಲರೂ ಯೆಹೋವನಿಗೆ ಲೆಕ್ಕವೊಪ್ಪಿಸಬೇಕು