ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನ್ನ ಜನರನ್ನು ಸಂತೈಸಿರಿ”

“ನನ್ನ ಜನರನ್ನು ಸಂತೈಸಿರಿ”

ಅಧ್ಯಾಯ ಮೂವತ್ತು

“ನನ್ನ ಜನರನ್ನು ಸಂತೈಸಿರಿ”

ಯೆಶಾಯ 40:​1-​31

1. ಯೆಹೋವನು ನಮ್ಮನ್ನು ಸಂತೈಸುವ ಒಂದು ವಿಧವು ಯಾವುದು?

ಯೆಹೋವನು ‘ಸಾಂತ್ವನ ಒದಗಿಸುವ ದೇವರು’ (NW) ಆಗಿದ್ದಾನೆ. ಆತನು ನಮ್ಮನ್ನು ಸಂತೈಸುವ ಒಂದು ವಿಧಾನವು, ತನ್ನ ವಾಕ್ಯದಲ್ಲಿ ದಾಖಲುಮಾಡಿಸಿರುವ ವಾಗ್ದಾನಗಳ ಮೂಲಕವೇ. (ರೋಮಾಪುರ 15:​4, 5) ಉದಾಹರಣೆಗೆ, ಒಬ್ಬ ಪ್ರಿಯ ವ್ಯಕ್ತಿಯನ್ನು ನೀವು ಮರಣದಲ್ಲಿ ಕಳೆದುಕೊಂಡಿರುವಾಗ, ಆ ವ್ಯಕ್ತಿಯು ದೇವರ ಹೊಸ ಲೋಕದಲ್ಲಿ ಪುನರುತ್ಥಾನಗೊಳ್ಳುವನೆಂಬ ಪ್ರತೀಕ್ಷೆಗಿಂತಲೂ ಬೇರಾವುದೇ ವಿಷಯವು ನಿಮಗೆ ಹೆಚ್ಚಿನ ಸಾಂತ್ವನವನ್ನು ನೀಡಬಲ್ಲದೊ? (ಯೋಹಾನ 5:​28, 29) ಈ ದುಷ್ಟತನವನ್ನು ಬೇಗನೆ ಕೊನೆಗಾಣಿಸಿ, ಈ ಭೂಮಿಯನ್ನು ಒಂದು ಪರದೈಸ್‌ ಆಗಿ ರೂಪಾಂತರಿಸುವ ಬಗ್ಗೆ ಯೆಹೋವನು ಮಾಡಿರುವ ವಾಗ್ದಾನದ ಕುರಿತೇನು? ಪಾರಾಗಿ ಉಳಿದು ಬರಲಿರುವ ಪರದೈಸಿನಲ್ಲಿ ಪ್ರವೇಶಿಸಿ, ಎಂದೆಂದಿಗೂ ಸಾಯದೆ ಬಾಳುವ ಪ್ರತೀಕ್ಷೆಯನ್ನು ಪಡೆದಿರುವುದು ಸಾಂತ್ವನದಾಯಕವಾಗಿಲ್ಲವೊ?​—ಕೀರ್ತನೆ 37:​9-​11, 29; ಪ್ರಕಟನೆ 21:​3-5.

2. ನಾವು ದೇವರ ವಾಗ್ದಾನಗಳಲ್ಲಿ ಏಕೆ ಭರವಸೆ ಇಡಬಲ್ಲೆವು?

2 ದೇವರ ವಾಗ್ದಾನಗಳಲ್ಲಿ ನಾವು ನಿಜವಾಗಿಯೂ ಭರವಸೆಯಿಡಬಲ್ಲೆವೊ? ಖಂಡಿತವಾಗಿಯೂ ಇಡಬಲ್ಲೆವು! ಆ ವಾಗ್ದಾನಗಳನ್ನು ಮಾಡಿದವನು ಸಂಪೂರ್ಣವಾಗಿ ನಂಬಲರ್ಹನಾಗಿದ್ದಾನೆ. ತನ್ನ ಮಾತನ್ನು ನೆರವೇರಿಸುವ ಸಾಮರ್ಥ್ಯ ಹಾಗೂ ಬಯಕೆ, ಎರಡೂ ಆತನಲ್ಲಿದೆ. (ಯೆಶಾಯ 55:​10, 11) ಇದು, ಯೆರೂಸಲೇಮಿನಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ವಿಷಯವಾಗಿ ಯೆಹೋವನು ಪ್ರವಾದಿ ಯೆಶಾಯನ ಮೂಲಕ ಹೇಳಿದ ಮಾತುಗಳ ಸಂಬಂಧದಲ್ಲಿ ಪರಿಣಾಮಕಾರಿಯಾಗಿ ತೋರಿಸಲ್ಪಟ್ಟಿತು. ಯೆಶಾಯ 40ನೆಯ ಅಧ್ಯಾಯದಲ್ಲಿ ಕಂಡುಬರುವ ಆ ಪ್ರವಾದನೆಯನ್ನು ನಾವು ಪರಿಗಣಿಸೋಣ. ಹಾಗೆ ಮಾಡುವ ಮೂಲಕ, ವಾಗ್ದಾನಗಳನ್ನು ನೆರವೇರಿಸುವಾತನಾದ ಯೆಹೋವನಲ್ಲಿ ನಮ್ಮ ನಂಬಿಕೆಯು ಬಲಗೊಳ್ಳಸಾಧ್ಯವಿದೆ.

ಒಂದು ಸಾಂತ್ವನದಾಯಕ ವಾಗ್ದಾನ

3, 4. (ಎ) ದೇವಜನರಿಗೆ ತದನಂತರ ಬೇಕಾಗಲಿರುವ ಯಾವ ಸಾಂತ್ವನದ ಮಾತುಗಳನ್ನು ಯೆಶಾಯನು ದಾಖಲಿಸುತ್ತಾನೆ? (ಬಿ) ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳು ದೇಶಭ್ರಷ್ಟರಾಗಿ ಬಾಬೆಲಿಗೆ ಒಯ್ಯಲ್ಪಡುವುದು ಏಕೆ, ಮತ್ತು ಅವರು ಎಷ್ಟು ಕಾಲ ದಾಸರಾಗಿ ಇರುವರು?

3 ಯೆಹೋವನ ಜನರಿಗೆ ಮುಂದೆ ಬೇಕಾಗುವ ಸಾಂತ್ವನದ ಮಾತುಗಳನ್ನು, ಪ್ರವಾದಿಯಾದ ಯೆಶಾಯನು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಬರೆದಿಡುತ್ತಾನೆ. ಯೆರೂಸಲೇಮಿನ ನಾಶನ ಮತ್ತು ಯೆಹೂದ್ಯರ ಪರದೇಶವಾಸದ ಬಗ್ಗೆ ರಾಜ ಹಿಜ್ಕೀಯನಿಗೆ ಹೇಳಿದ ಕೂಡಲೇ, ಪುನಸ್ಸ್ಥಾಪನೆಯನ್ನು ಸೂಚಿಸುವ ಯೆಹೋವನ ಮಾತುಗಳನ್ನು ಯೆಶಾಯನು ಬರೆದಿಡುತ್ತಾನೆ: “ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ; ಯೆರೂಸಲೇಮಿನ ಸಂಗಡ ಹೃದಯಂಗಮವಾಗಿ ಮಾತಾಡಿರಿ; ಅದಕ್ಕೆ ಗಡು ತೀರಿತು, ವಿಧಿಸಿದ ದೋಷಫಲವೆಲ್ಲಾ ನೆರವೇರಿತು, ಅದರ ಎಲ್ಲಾ ಪಾಪಗಳಿಗೂ ಯೆಹೋವನ ಕೈಯಿಂದ ಎರಡರಷ್ಟು ಶಿಕ್ಷೆಯಾಯಿತು ಎಂದು ಆ ನಗರಿಗೆ ಕೂಗಿ ಹೇಳಿರಿ; ಇದೇ ನಿಮ್ಮ ದೇವರ ಆಜ್ಞೆ.”​—ಯೆಶಾಯ 40:1, 2.

4 ಯೆಶಾಯ 40ನೆಯ ಅಧ್ಯಾಯದ ಪ್ರಥಮ ಸಾಲಿನಲ್ಲಿರುವ ‘ಸಂತೈಸಿರಿ’ ಎಂಬ ಪದವು, ಯೆಶಾಯ ಪುಸ್ತಕದ ಉಳಿದ ಅಧ್ಯಾಯಗಳಲ್ಲಿರುವ ಜ್ಯೋತಿ ಹಾಗೂ ನಿರೀಕ್ಷೆಯ ಸಂದೇಶವನ್ನು ತುಂಬ ಚೆನ್ನಾಗಿ ವಿವರಿಸುತ್ತದೆ. ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳು ಧರ್ಮಭ್ರಷ್ಟರಾದ ಕಾರಣ, ಸಾ.ಶ.ಪೂ. 607ರಲ್ಲಿ ಬಾಬೆಲಿಗೆ ಪರದೇಶವಾಸಿಗಳಾಗಿ ಒಯ್ಯಲ್ಪಡುವರು. ಆದರೆ ಈ ಸೆರೆವಾಸಿಗಳು ಬಾಬೆಲಿನವರ ಸೇವೆಯನ್ನು ಸದಾಕಾಲ ಮಾಡುತ್ತಿರಲಾರರು. ಅವರ ದೋಷಫಲವು ‘ನೆರವೇರುವ’ ತನಕ ಮಾತ್ರ ಈ ಸೇವೆಯು ಮುಂದುವರಿಯುವುದು. ಅದು ಎಷ್ಟು ದೀರ್ಘವಾಗಿರುವುದು? ಪ್ರವಾದಿಯಾದ ಯೆರೆಮೀಯನಿಗನುಸಾರ, 70 ವರ್ಷಗಳ ಕಾಲ. (ಯೆರೆಮೀಯ 25:​11, 12) ನಂತರ, ಪಶ್ಚಾತ್ತಾಪಪಡುವ ಉಳಿಕೆಯವರನ್ನು ಯೆಹೋವನು ಬಾಬೆಲಿನಿಂದ ಯೆರೂಸಲೇಮಿಗೆ ನಡೆಸುವನು. ಯೆಹೂದದ ನಿರ್ಜನಾವಸ್ಥೆಯ 70ನೆಯ ವರ್ಷದಲ್ಲಿ, ತಮ್ಮ ಬಿಡುಗಡೆಯ ಸಮಯವು ಎಷ್ಟು ನಿಕಟವಾಗಿದೆಯೆಂದು ಸೆರೆವಾಸಿಗಳು ಗ್ರಹಿಸುವಾಗ ಅವರೆಷ್ಟು ಸಾಂತ್ವನಪಡೆಯುವರು!​—ದಾನಿಯೇಲ 9:​1, 2.

5, 6. (ಎ) ಬಾಬೆಲಿನಿಂದ ಯೆರೂಸಲೇಮಿಗೆ ಕೈಕೊಳ್ಳಲ್ಪಡುವ ಆ ದೀರ್ಘ ಪಯಣವು, ದೇವರ ವಾಗ್ದಾನದ ನೆರವೇರಿಕೆಗೆ ಏಕೆ ತಡೆಯುಂಟುಮಾಡಲಾರದು? (ಬಿ) ಯೆಹೂದ್ಯರ ಪುನಸ್ಸ್ಥಾಪನೆಯು ಇತರ ರಾಷ್ಟ್ರಗಳ ಮೇಲೆ ಯಾವ ಪರಿಣಾಮವನ್ನು ಬೀರುವುದು?

5 ಬಾಬೆಲ್‌ ಮತ್ತು ಯೆರೂಸಲೇಮಿನ ಮಧ್ಯೆಯಿರುವ ಅಂತರವು, ಅವರು ಯಾವ ದಾರಿಯಾಗಿ ಹೋಗುತ್ತಾರೋ ಅದನ್ನು ಅವಲಂಬಿಸಿ 800ರಿಂದ 1,600 ಕಿಲೊಮೀಟರುಗಳಷ್ಟಾಗಿದೆ. ಈ ದೀರ್ಘ ಪಯಣವು ದೇವರ ವಾಗ್ದಾನದ ನೆರವೇರಿಕೆಗೆ ಅಡೆತಡೆಯನ್ನು ಉಂಟುಮಾಡುವುದೊ? ಖಂಡಿತವಾಗಿಯೂ ಇಲ್ಲ! ಯೆಶಾಯನು ಬರೆಯುವುದು: “ಇಗೋ ಒಂದು ವಾಣಿ!​—⁠ಅರಣ್ಯದಲ್ಲಿ ಯೆಹೋವನ ದಾರಿಯನ್ನು ಸರಿಪಡಿಸಿರಿ, ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ; ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬೈಲುಸೀಮೆಯಾಗುವದು, ಕೊರಕಲ ನೆಲವು ಸಮವಾಗುವದು. ಯೆಹೋವನ ಮಹಿಮೆಯು ಗೋಚರವಾಗುವದು, ಎಲ್ಲಾ ಮನುಷ್ಯರೂ ಒಟ್ಟಿಗೆ ಅದನ್ನು ಕಾಣುವರು, ಯೆಹೋವನ ಬಾಯೇ ಇದನ್ನು ನುಡಿದಿದೆ ಎಂದು ಒಬ್ಬನು ಕೂಗುತ್ತಾನೆ.”​—ಯೆಶಾಯ 40:3-5.

6 ಪ್ರಾಚ್ಯ ದೇಶದ ಅರಸರು ಒಂದು ಪಯಣವನ್ನು ಆರಂಭಿಸುವ ಮೊದಲು, ತಮಗಾಗಿ ದಾರಿಯನ್ನು ಸಿದ್ಧಮಾಡಲು ಕೆಲವರನ್ನು ಮುಂದೆ ಕಳುಹಿಸುತ್ತಿದ್ದರು. ಇವರು ದೊಡ್ಡ ದೊಡ್ಡ ಬಂಡೆಗಳನ್ನು ತೆಗೆದು, ಗುಡ್ಡಬೆಟ್ಟಗಳನ್ನು ಸಹ ನೆಲಸಮಮಾಡಿ ಹೆದ್ದಾರಿಗಳನ್ನು ಸಿದ್ಧಪಡಿಸುತ್ತಿದ್ದರು. ಹಿಂದಿರುಗುತ್ತಿರುವ ಯೆಹೂದ್ಯರ ವಿಷಯದಲ್ಲಾದರೊ, ಸ್ವತಃ ದೇವರೇ ಅವರ ಮುಂದೆ ನಡೆಯುತ್ತಾ, ಮಾರ್ಗದಿಂದ ಎಲ್ಲ ಅಡೆತಡೆಗಳನ್ನು ತೆಗೆದುಹಾಕುತ್ತಿರುವಂತೆ ಇದೆ. ಎಷ್ಟೆಂದರೂ ಇವರು ಯೆಹೋವನ ನಾಮವನ್ನು ಹೊತ್ತಿರುವ ಜನರು, ಮತ್ತು ಇವರನ್ನು ಸ್ವದೇಶಕ್ಕೆ ಹಿಂದಿರುಗಿಸುವ ತನ್ನ ವಾಗ್ದಾನವನ್ನು ನೆರವೇರಿಸುವ ಮೂಲಕ, ಯೆಹೋವನ ಮಹಿಮೆಯು ಬೇರೆಲ್ಲ ರಾಷ್ಟ್ರಗಳ ಮುಂದೆ ಪ್ರಜ್ವಲಿಸುವುದು. ಬೇರೆ ಜನಾಂಗಗಳ ಮನೋಭಾವವು ಏನೇ ಆಗಿರಲಿ, ಯೆಹೋವನು ವಾಗ್ದಾನಗಳನ್ನು ನೆರವೇರಿಸುವಾತನು ಎಂಬುದನ್ನು ಅವು ಗ್ರಹಿಸಲೇಬೇಕಾದ ಪರಿಸ್ಥಿತಿಯು ಬರುವುದು.

7, 8. (ಎ) ಯಾವ ರೀತಿಯಲ್ಲಿ ಯೆಶಾಯ 40:3ರ ಮಾತುಗಳು ಸಾ.ಶ. ಒಂದನೆಯ ಶತಮಾನದಲ್ಲಿ ನೆರವೇರಿದವು? (ಬಿ) ಯಾವ ರೀತಿಯಲ್ಲಿ ಯೆಶಾಯನ ಪ್ರವಾದನೆಯು 1919ರಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವೇರಿತು?

7 ಸಾ.ಶ.ಪೂ. ಆರನೆಯ ಶತಮಾನದಲ್ಲಿ ನಡೆದ ಪುನಸ್ಸ್ಥಾಪನೆಯು, ಈ ಪ್ರವಾದನೆಯ ಏಕೈಕ ನೆರವೇರಿಕೆಯಾಗಿರಲಿಲ್ಲ. ಈ ಪ್ರವಾದನೆಯು ಸಾ.ಶ. ಒಂದನೆಯ ಶತಮಾನದಲ್ಲೂ ನೆರವೇರಿತು. ಯೆಶಾಯ 40:3ನ್ನು ನೆರವೇರಿಸುತ್ತಾ, ‘ಅಡವಿಯಲ್ಲಿ ಕೂಗುವವನ’ ಶಬ್ದವಾಗಿ ಸ್ನಾನಿಕನಾದ ಯೋಹಾನನು ಕಾರ್ಯಮಾಡಿದನು. (ಲೂಕ 3:​1-6) ಆತ್ಮಪ್ರೇರಿತನಾಗಿ ಯೋಹಾನನು, ಯೆಶಾಯನ ಈ ಮಾತುಗಳನ್ನು ತನಗೇ ಅನ್ವಯಿಸಿಕೊಂಡನು. (ಯೋಹಾನ 1:​19-23) ಸಾ.ಶ. 29ರಲ್ಲಿ ಆರಂಭಿಸುತ್ತಾ, ಇವನು ಯೇಸು ಕ್ರಿಸ್ತನಿಗಾಗಿ ಮಾರ್ಗವನ್ನು ಸಿದ್ಧಪಡಿಸಲು ತೊಡಗಿದನು. * ಯೋಹಾನನ ಪ್ರಕಟನೆಗೆ ಕಿವಿಗೊಟ್ಟವರು, ವಾಗ್ದತ್ತ ಮೆಸ್ಸೀಯನಿಗಾಗಿ ಎದುರುನೋಡಲು ತೊಡಗಿದರು. ಅವನಿಗೆ ಕಿವಿಗೊಟ್ಟು, ಹಿಂಬಾಲಿಸುವುದೇ ಅವರ ಉದ್ದೇಶವಾಗಿತ್ತು. (ಲೂಕ 1:​13-17, 76) ಪಶ್ಚಾತ್ತಾಪಪಡುವ ಇಂತಹವರನ್ನು ಯೆಹೋವನು ಯೇಸುವಿನ ಮೂಲಕ, ದೇವರ ರಾಜ್ಯವು ಮಾತ್ರ ಒದಗಿಸಬಲ್ಲ ಬಿಡುಗಡೆಗೆ ನಡೆಸುವನು. ಅದು ಪಾಪಮರಣಗಳ ದಾಸತ್ವದಿಂದ ಬರುವ ಬಿಡುಗಡೆಯೇ ಆಗಿರುವುದು. (ಯೋಹಾನ 1:​29; 8:​32) ಆತ್ಮಿಕ ಇಸ್ರಾಯೇಲಿನ ಉಳಿಕೆಯವರು 1919ರಲ್ಲಿ ಮಹಾ ಬಾಬೆಲಿನಿಂದ ಬಿಡುಗಡೆ ಹೊಂದಿ, ಸತ್ಯಾರಾಧನೆಗೆ ಪುನಸ್ಸ್ಥಾಪಿಸಲ್ಪಟ್ಟಾಗ, ಯೆಶಾಯನ ಮಾತುಗಳು ದೊಡ್ಡ ಪ್ರಮಾಣದಲ್ಲಿ ನೆರವೇರಿದವು.

8 ಆದರೆ ಈ ವಾಗ್ದಾನದ ಆರಂಭಿಕ ನೆರವೇರಿಕೆಯಿಂದ ಪ್ರಯೋಜನ ಪಡೆಯಲಿರುವವರು, ಅಂದರೆ ಬಾಬೆಲಿನಲ್ಲಿರುವ ಯೆಹೂದಿ ಸೆರೆವಾಸಿಗಳ ಕುರಿತೇನು? ತಮ್ಮನ್ನು ತಮ್ಮ ಪ್ರಿಯ ದೇಶಕ್ಕೆ ಹಿಂದಿರುಗಿಸುವ ಯೆಹೋವನ ವಾಗ್ದಾನದಲ್ಲಿ ಅವರು ನಿಜವಾಗಿಯೂ ಭರವಸೆಯಿಡಬಲ್ಲರೊ? ನಿಶ್ಚಯವಾಗಿಯೂ ಇಡಬಲ್ಲರು! ಯೆಹೋವನು ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುವನೆಂಬ ಪೂರ್ಣ ಭರವಸೆ ಅವರಿಗಿರಲು ಬಲವಾದ ಕಾರಣಗಳನ್ನು ಕೊಡುತ್ತಾ, ಯೆಶಾಯನು ಬಹಳ ಸರ್ವಸಾಮಾನ್ಯವಾಗಿರುವ ಮಾತುಗಳ ದೃಷ್ಟಾಂತಗಳನ್ನು ಉಪಯೋಗಿಸಿ ಮಾತಾಡುತ್ತಾನೆ.

ಸದಾಕಾಲ ಬಾಳುವಂತಹ ಮಾತುಗಳನ್ನಾಡುವ ದೇವರು

9, 10. ಮನುಷ್ಯನ ತಾತ್ಕಾಲಿಕ ಜೀವನವನ್ನು ದೇವರ ನಿರಂತರ ‘ಮಾತಿನೊಂದಿಗೆ’ ಹೋಲಿಸಿ ಯೆಶಾಯನು ಹೇಗೆ ವ್ಯತ್ಯಾಸ ತೋರಿಸುತ್ತಾನೆ?

9 ಮೊದಲನೆಯದಾಗಿ, ಪುನಸ್ಸ್ಥಾಪನೆಯನ್ನು ವಾಗ್ದಾನಿಸುವಾತನ ಮಾತು ಎಂದೆಂದಿಗೂ ಉಳಿಯುತ್ತದೆ. ಯೆಶಾಯನು ಬರೆಯುವುದು: “ಆಹಾ, ವಾಣಿಯು ಮತ್ತೆ ಕೇಳಿಸಿ​—⁠ಕೂಗು ಎನ್ನುತ್ತದೆ. ಅದಕ್ಕೆ ನಾನು​—⁠ಏನು ಕೂಗಲಿ ಎಂದು ಕೇಳಲು ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ. ಯೆಹೋವನ ಶ್ವಾಸವು ಅದರ ಮೇಲೆ ಬೀಸುವದರಿಂದ ಹುಲ್ಲು ಒಣಗಿಹೋಗುವದು; ಹೂವು ಬಾಡಿಹೋಗುವದು. ಜನವು ಹುಲ್ಲೇ ಹುಲ್ಲು! ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು ಎಂದು ಉತ್ತರವಾಯಿತು.”​—ಯೆಶಾಯ 40:6-8.

10 ಹುಲ್ಲು ಸದಾಕಾಲ ಬಾಳಲಾರದೆಂದು ಇಸ್ರಾಯೇಲ್ಯರಿಗೆ ಚೆನ್ನಾಗಿಯೇ ಗೊತ್ತು. ಬೇಸಿಗೆಯಲ್ಲಿ, ಸೂರ್ಯನ ತೀಕ್ಷ್ಣ ಕಿರಣಗಳು ಅದರ ಹಸಿರು ಬಣ್ಣವನ್ನು ಒಣಗಿದ ಕಂದುಬಣ್ಣಕ್ಕೆ ತಿರುಗಿಸುತ್ತವೆ. ಕೆಲವೊಂದು ವಿಷಯಗಳಲ್ಲಿ, ಮನುಷ್ಯನ ಜೀವನವು ಸಹ ಹುಲ್ಲಿನಂತೆಯೇ ಕ್ಷಣಿಕವಾಗಿದೆ. (ಕೀರ್ತನೆ 103:​15, 16; ಯಾಕೋಬ 1:​10, 11) ಇಂತಹ ತಾತ್ಕಾಲಿಕ ಮಾನುಷ ಜೀವನವನ್ನು, ದೇವರ ನಿರಂತರ “ಮಾತು” ಇಲ್ಲವೆ ಉದ್ದೇಶದೊಂದಿಗೆ ಹೋಲಿಸುತ್ತಾ ಯೆಶಾಯನು ವ್ಯತ್ಯಾಸ ತೋರಿಸುತ್ತಾನೆ. ಹೌದು, “ನಮ್ಮ ದೇವರ ಮಾತೋ” ಎಂದೆಂದಿಗೂ ಬಾಳುತ್ತದೆ. ದೇವರು ಮಾತಾಡುವಾಗ, ಯಾವ ವಿಷಯವೂ ಆತನ ಮಾತುಗಳನ್ನು ಅಳಿಸಲಾರವು ಇಲ್ಲವೆ ಅವು ನೆರವೇರುವುದನ್ನು ತಡೆಯಲಾರವು.​—⁠ಯೆಹೋಶುವ 23:⁠14.

11. ಯೆಹೋವನು ತನ್ನ ಲಿಖಿತ ವಾಕ್ಯದಲ್ಲಿರುವ ವಾಗ್ದಾನಗಳನ್ನೆಲ್ಲ ನೆರವೇರಿಸುವನೆಂದು ನಾವು ಏಕೆ ಭರವಸೆಯಿಂದಿರಬಲ್ಲೆವು?

11 ಇಂದು ಯೆಹೋವನ ಉದ್ದೇಶವು ಬೈಬಲಿನಲ್ಲಿ ಲಿಖಿತ ರೂಪದಲ್ಲಿದೆ. ಬೈಬಲು ಅನೇಕ ಶತಮಾನಗಳಿಂದಲೂ ತೀವ್ರವಾದ ವಿರೋಧವನ್ನು ಎದುರಿಸಿದೆ, ಮತ್ತು ಧೈರ್ಯವಂತ ಭಾಷಾಂತರಕಾರರು ಅದನ್ನು ರಕ್ಷಿಸಿಡಲು ತಮ್ಮ ಜೀವವನ್ನೇ ಒತ್ತೆ ಇಟ್ಟಿದ್ದಾರೆ. ಆದರೂ, ಅವರ ಪ್ರಯತ್ನಗಳಿಂದ ಮಾತ್ರ ಬೈಬಲು ಬದುಕಿ ಉಳಿಯಲಿಲ್ಲ. “ಸದಾಜೀವವುಳ್ಳ” ದೇವರೂ ಆತನ ವಾಕ್ಯದ ರಕ್ಷಕನೂ ಆದ ಯೆಹೋವನಿಗೆ ಎಲ್ಲ ಕೀರ್ತಿಯು ಸಲ್ಲಬೇಕು. (1 ಪೇತ್ರ 1:​23-25) ಇದರ ಬಗ್ಗೆ ತುಸು ಯೋಚಿಸಿರಿ: ಯೆಹೋವನು ತನ್ನ ಲಿಖಿತ ವಾಕ್ಯವನ್ನು ಸಂರಕ್ಷಿಸಿರುವುದರಿಂದ, ಅದರಲ್ಲಿರುವ ವಾಗ್ದಾನಗಳನ್ನು ಆತನು ಖಂಡಿತವಾಗಿಯೂ ನೆರವೇರಿಸುವನೆಂಬ ಖಾತ್ರಿ ನಮಗಿರಸಾಧ್ಯವಿಲ್ಲವೊ?

ತನ್ನ ಕುರಿಗಳನ್ನು ಕೋಮಲವಾಗಿ ಪರಾಮರಿಸುವ ಬಲಿಷ್ಠ ದೇವರು

12, 13. (ಎ) ಪುನಸ್ಸ್ಥಾಪನೆಯ ವಾಗ್ದಾನದ ಮೇಲೆ ಏಕೆ ಭರವಸೆಯಿಡಸಾಧ್ಯವಿದೆ? (ಬಿ) ಯೆಹೂದಿ ಪರದೇಶವಾಸಿಗಳಿಗೆ ಯಾವ ಸುವಾರ್ತೆಯು ಕಾದಿದೆ, ಮತ್ತು ಅವರು ಭರವಸೆಯಿಂದ ಏಕೆ ಇರಬಲ್ಲರು?

12 ಪುನಸ್ಸ್ಥಾಪನೆಯ ವಾಗ್ದಾನದಲ್ಲಿ ನಂಬಿಕೆಯುಳ್ಳವರಾಗಿರಲು ಯೆಶಾಯನು ಎರಡನೆಯ ಕಾರಣವನ್ನು ನೀಡುತ್ತಾನೆ. ಅದೇನೆಂದರೆ, ಈ ವಾಗ್ದಾನವನ್ನು ಮಾಡುವಾತನು ತನ್ನ ಜನರನ್ನು ಕೋಮಲವಾಗಿ ಪರಾಮರಿಸುವ ಬಲಿಷ್ಠ ದೇವರಾಗಿದ್ದಾನೆ. ಯೆಶಾಯನು ಮುಂದುವರಿಸಿ ಹೇಳುವುದು: “ಶುಭಸಮಾಚಾರವನ್ನು ತಿಳಿಸಬಲ್ಲ ಚೀಯೋನೇ, ಉನ್ನತಪರ್ವತವನ್ನು ಹತ್ತಿಕೋ; ಸುವರ್ತಮಾನವನ್ನು ಪ್ರಕಟಿಸಬಲ್ಲ ಯೆರೂಸಲೇಮೇ, ನಿನ್ನ ಧ್ವನಿಯನ್ನು ಗಟ್ಟಿಯಾಗಿ ಎತ್ತು, ನಿರ್ಭಯವಾಗಿ ಎತ್ತಿ, ಯೆಹೂದದ ಪಟ್ಟಣಗಳಿಗೆ​—⁠ಇಗೋ, ನಿಮ್ಮ ದೇವರು! ಆಹಾ, ಕರ್ತನಾದ ಯೆಹೋವನು ಶೂರನಾಗಿ ಬರುವನು [“ಬಲದೊಂದಿಗೆ,” NW ಪಾದಟಿಪ್ಪಣಿ], ತನ್ನ ಭುಜಬಲದಿಂದಲೇ ಆಳುವನು; ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದಿದೆ. ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.”​—ಯೆಶಾಯ 40:9-11.

13 ಬೈಬಲ್‌ ಸಮಯಗಳಲ್ಲಿ, ಯುದ್ಧದಲ್ಲಿ ಪಡೆದ ವಿಜಯವನ್ನು ಇಲ್ಲವೆ ಬರಲಿರುವ ಉಪಶಮನದ ಸುವಾರ್ತೆಯನ್ನು ಆ ನಾಡಿನ ಸ್ತ್ರೀಯರು ಹಾಡಿ ಪ್ರಸಿದ್ಧಪಡಿಸುವ ವಾಡಿಕೆಯಿತ್ತು. (1 ಸಮುವೇಲ 18:​6, 7; ಕೀರ್ತನೆ 68:11) ಅಂತೆಯೇ ಯೆಹೂದಿ ಪರದೇಶವಾಸಿಗಳಿಗೂ ಶುಭವಾರ್ತೆಯಿದೆ ಎಂದು ಯೆಶಾಯನು ಪ್ರವಾದನಾತ್ಮಕವಾಗಿ ಸೂಚಿಸುತ್ತಾನೆ. ಈ ವಾರ್ತೆಯನ್ನು ಗುಡ್ಡಗಳ ಮೇಲಿಂದಲೂ ಧೈರ್ಯದಿಂದ ಸಾರಬಹುದಾಗಿದೆ. ಅದೇನೆಂದರೆ, ಯೆಹೋವನು ತನ್ನ ಜನರನ್ನು ಅವರ ಪ್ರಿಯ ಯೆರೂಸಲೇಮಿಗೆ ಮತ್ತೆ ನಡೆಸಲಿದ್ದಾನೆ! ಈ ಮಾತಿನಲ್ಲಿ ಅವರಿಗೆ ಪೂರ್ಣ ಭರವಸೆಯಿರಸಾಧ್ಯವಿದೆ ಏಕೆಂದರೆ, ಯೆಹೋವನು “ಬಲದೊಂದಿಗೆ” ಬರುವನು. ಆತನ ಮಾತು ಖಂಡಿತವಾಗಿಯೂ ನೆರವೇರುವುದು, ಅದನ್ನು ಯಾರೂ ತಡೆಯಸಾಧ್ಯವಿಲ್ಲ.

14. (ಎ) ಯೆಹೋವನು ತನ್ನ ಜನರನ್ನು ನಡೆಸಲಿರುವ ಕೋಮಲವಾದ ವಿಧವನ್ನು ಯೆಶಾಯನು ಹೇಗೆ ದೃಷ್ಟಾಂತಿಸುತ್ತಾನೆ? (ಬಿ) ಕುರುಬರು ಕುರಿಗಳನ್ನು ಬಹಳ ಕೋಮಲವಾಗಿ ಪರಾಮರಿಸುತ್ತಾರೆಂಬುದನ್ನು ಯಾವ ಉದಾಹರಣೆಯು ತೋರಿಸುತ್ತದೆ? (405ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)

14 ಇಂತಹ ಬಲಿಷ್ಠ ದೇವರ ಮತ್ತೊಂದು ಗುಣವು ಕೋಮಲತೆ ಆಗಿದೆ. ಯೆಹೋವನು ತನ್ನ ಜನರನ್ನು ಹೇಗೆ ಅವರ ಸ್ವದೇಶಕ್ಕೆ ಮತ್ತೆ ನಡೆಸುವನೆಂಬುದನ್ನು ಯೆಶಾಯನು ಹೃದಯೋಲ್ಲಾಸಕರವಾಗಿ ವರ್ಣಿಸುತ್ತಾನೆ. ಒಬ್ಬ ಪ್ರೀತಿಪರ ಕುರುಬನಂತಿರುವ ಯೆಹೋವನು ತನ್ನ ಕುರಿಮರಿಗಳನ್ನು ಒಟ್ಟಿಗೆ ಸೇರಿಸಿ, ಅವುಗಳನ್ನು “ಎದೆಗೆತ್ತಿಕೊಳ್ಳುವನು.” “ಎದೆ”ಗಾಗಿರುವ ಹೀಬ್ರು ಪದವು, ವಸ್ತ್ರದ ಮೇಲ್‌ ಮಡಿಕೆಗಳನ್ನು ಸೂಚಿಸುವಂತಹದ್ದಾಗಿದೆ. ಮಂದೆಯೊಂದಿಗೆ ಸೇರಿ ನಡೆಯಲಾಗದ ನವಜನಿತ ಕುರಿಮರಿಗಳನ್ನು, ಕುರುಬರು ಕೆಲವೊಮ್ಮೆ ಹೀಗೆಯೇ ಎತ್ತಿಟ್ಟುಕೊಳ್ಳುತ್ತಾರೆ. (2 ಸಮುವೇಲ 12:⁠3) ಹಳ್ಳಿ ಜೀವನದ ಇಂತಹ ಮನಮುಟ್ಟುವ ದೃಶ್ಯವು, ಯೆಹೋವನಿಗೆ ತನ್ನ ದೇಶಭ್ರಷ್ಟ ಜನರ ಪರವಾಗಿ ಪ್ರೀತಿಪರ ಚಿಂತೆ ಇದೆಯೆಂಬ ಆಶ್ವಾಸನೆಯನ್ನು ಖಂಡಿತವಾಗಿಯೂ ನೀಡುತ್ತದೆ. ಇಂತಹ ಬಲಿಷ್ಠ ಆದರೂ ಕೋಮಲನಾದ ದೇವರು ತಮಗೆ ವಾಗ್ದಾನಿಸಿರುವುದನ್ನೆಲ್ಲ ನೆರವೇರಿಸುವನೆಂಬ ಖಾತ್ರಿ ಅವರಿಗಿರಸಾಧ್ಯವಿದೆ!

15. (ಎ) ಯಾವಾಗ ಯೆಹೋವನು ‘ಬಲದೊಂದಿಗೆ’ ಬಂದನು, ಮತ್ತು ಆತನಿಗಾಗಿ ಆಳುವ ‘ಭುಜಬಲ’ ಯಾರು? (ಬಿ) ಯಾವ ಸುವಾರ್ತೆಯು ಧೈರ್ಯದಿಂದ ಸಾರಲ್ಪಡಬೇಕು?

15 ಯೆಶಾಯನ ಮಾತುಗಳು ನಮ್ಮ ದಿನಕ್ಕೆ ಪ್ರವಾದನಾತ್ಮಕ ಅರ್ಥವನ್ನು ಪಡೆದಿವೆ. 1914ರಲ್ಲಿ, ಯೆಹೋವನು “ಬಲದೊಂದಿಗೆ” ಬಂದು, ಸ್ವರ್ಗದಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದನು. ಆತನಿಗಾಗಿ “ಭುಜಬಲ”ವಾಗಿ ಆಳುತ್ತಿರುವವನು ಆತನ ಮಗನಾದ ಯೇಸು ಕ್ರಿಸ್ತನು. ಇವನನ್ನೇ ಯೆಹೋವನು ತನ್ನ ಸ್ವರ್ಗೀಯ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿದನು. 1919ರಲ್ಲಿ, ಯೆಹೋವನು ಭೂಮಿಯ ಮೇಲಿದ್ದ ತನ್ನ ಅಭಿಷಿಕ್ತ ಸೇವಕರನ್ನು ಮಹಾ ಬಾಬೆಲಿನ ದಾಸತ್ವದಿಂದ ಬಿಡಿಸಿ, ಸತ್ಯ ಹಾಗೂ ಜೀವಂತ ದೇವರ ಸತ್ಯಾರಾಧನೆಯನ್ನು ಸಂಪೂರ್ಣವಾಗಿ ಪುನಸ್ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದನು. ಈ ಸುವಾರ್ತೆಯನ್ನು ಗುಡ್ಡಬೆಟ್ಟಗಳ ಮೇಲಿಂದಲೊ ಎಂಬಂತೆ, ಎಲ್ಲೆಡೆಯೂ ಸುದ್ದಿ ಸಿಗುವಂತೆ ಪ್ರಕಟಿಸಬೇಕಾಗಿದೆ. ಹಾಗಾದರೆ, ನಾವು ನಮ್ಮ ಧ್ವನಿಗಳನ್ನು ಏರಿಸಿ, ಯೆಹೋವ ದೇವರು ಈ ಭೂಮಿಯ ಮೇಲೆ ತನ್ನ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಿರುವ ವಿಷಯವನ್ನು ಇತರರಿಗೆ ಧೈರ್ಯದಿಂದ ತಿಳಿಯಪಡಿಸೋಣ!

16. ಇಂದು ಯಾವ ವಿಧದಲ್ಲಿ ಯೆಹೋವನು ತನ್ನ ಜನರನ್ನು ನಡೆಸುತ್ತಾನೆ, ಮತ್ತು ಇದು ಯಾವ ನಮೂನೆಯನ್ನು ಸ್ಥಾಪಿಸುತ್ತದೆ?

16ಯೆಶಾಯ 40:​10, 11ರ ಮಾತುಗಳು, ಇಂದಿನ ಸಮಯಕ್ಕೂ ಪ್ರಾಯೋಗಿಕ ಮೌಲ್ಯವನ್ನು ಪಡೆದಿವೆ. ಯೆಹೋವನು ತನ್ನ ಜನರನ್ನು ನಡೆಸುತ್ತಿರುವ ಕೋಮಲವಾದ ವಿಧಾನವನ್ನು ಗಮನಕ್ಕೆ ತಂದುಕೊಳ್ಳುವುದು ಬಹಳಷ್ಟು ಸಾಂತ್ವನದಾಯಕವಾಗಿದೆ. ಮಂದೆಯೊಂದಿಗೆ ಸೇರಿ ಹೆಜ್ಜೆಹಾಕಲಾಗದ ಮರಿಗಳನ್ನು ಸೇರಿಸಿ, ಪ್ರತಿಯೊಂದು ಕುರಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಕುರುಬನಂತೆಯೇ, ಯೆಹೋವನು ತನ್ನ ಪ್ರತಿಯೊಬ್ಬ ನಂಬಿಗಸ್ತ ಸೇವಕನ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬಲ್ಲನು. ಅದರೊಂದಿಗೆ, ಕೋಮಲ ಕುರುಬನಂತಿರುವ ಯೆಹೋವನು, ಕ್ರೈಸ್ತ ಕುರುಬರಿಗೆ ಒಂದು ಮಾದರಿಯನ್ನಿಡುತ್ತಾನೆ. ಹಿರಿಯರು ಪ್ರೀತಿಪರ ಚಿಂತೆಯನ್ನು ತೋರಿಸುವುದರಲ್ಲಿ ಯೆಹೋವನನ್ನು ಅನುಕರಿಸುತ್ತಾ, ಹಿಂಡನ್ನು ಕೋಮಲವಾಗಿ ನಡೆಸಿಕೊಳ್ಳಬೇಕು. ಯೆಹೋವನು “ಸ್ವರಕ್ತದಿಂದ ಸಂಪಾದಿಸಿಕೊಂಡ” ಹಿಂಡಿನ ಪ್ರತಿಯೊಬ್ಬ ಸದಸ್ಯನ ಬಗ್ಗೆ ಯೆಹೋವನು ಹೇಗೆ ಭಾವಿಸುತ್ತಾನೆ ಎಂಬುದರ ಬಗ್ಗೆ ಅವರು ತೀರ ಜಾಗರೂಕರಾಗಿರಬೇಕು.​—⁠ಅ. ಕೃತ್ಯಗಳು 20:⁠28.

ಸರ್ವಶಕ್ತನೂ ಸರ್ವಜ್ಞಾನಿಯೂ

17, 18. (ಎ) ಯೆಹೂದಿ ಪರದೇಶವಾಸಿಗಳು ಪುನಸ್ಸ್ಥಾಪನೆಯ ವಾಗ್ದಾನದಲ್ಲಿ ಭರವಸೆಯಿಡಸಾಧ್ಯವಿದೆ ಏಕೆ? (ಬಿ) ಯಾವ ಭಯಪ್ರೇರಕ ಪ್ರಶ್ನೆಗಳನ್ನು ಯೆಶಾಯನು ಎಬ್ಬಿಸುತ್ತಾನೆ?

17 ದೇವರು ಸರ್ವಶಕ್ತನೂ ಸರ್ವಜ್ಞಾನಿಯೂ ಆಗಿರುವುದರಿಂದ, ಯೆಹೂದಿ ಪರದೇಶವಾಸಿಗಳು ಪುನಸ್ಸ್ಥಾಪನೆಯ ವಾಗ್ದಾನದಲ್ಲಿ ನಂಬಿಕೆಯಿಡಸಾಧ್ಯವಿದೆ. ಯೆಶಾಯನು ಹೇಳುವುದು: “ಯಾವನು ಸಾಗರಸಮುದ್ರಗಳನ್ನು ಸೇರೆಯಿಂದ ಅಳತೆಮಾಡಿದನು? ಯಾವನು ಆಕಾಶಮಂಡಲದ ಪರಿಮಾಣವನ್ನು ಗೇಣಿನಿಂದ ನಿರ್ಣಯಿಸಿದನು? ಭೂಲೋಕದ ಮಣ್ಣನ್ನೆಲ್ಲಾ ಕೊಳಗಕ್ಕೆ ತುಂಬಿದವನು ಯಾರು? ಬೆಟ್ಟಗಳನ್ನು ತ್ರಾಸಿನಿಂದಲೂ ಗುಡ್ಡಗಳನ್ನು ತಕ್ಕಡಿಯಿಂದಲೂ ತೂಗಿದವನು ಯಾರು? ಯೆಹೋವನ ಆತ್ಮಕ್ಕೆ ಯಾವನು ವಿಧಿಯನ್ನು ನೇಮಿಸಿದನು? ಯಾವನು ಆಲೋಚನಾಕರ್ತನಾಗಿ ಆತನಿಗೆ ಉಪದೇಶಿಸಿದನು? ಆತನು ಯಾವನ ಆಲೋಚನೆಯನ್ನು ಕೇಳಿದನು? ಯಾವನು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾವನು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದನು?”​—ಯೆಶಾಯ 40:12-14.

18 ಈ ಭಯಪ್ರೇರಕ ಪ್ರಶ್ನೆಗಳ ಬಗ್ಗೆ ಯೆಹೂದಿ ಪರದೇಶವಾಸಿಗಳು ಚಿಂತಿಸಲೇಬೇಕು. ಮನುಷ್ಯಮಾತ್ರದವರು ಮಹಾ ಸಾಗರಸಮುದ್ರಗಳ ಗತಿಯನ್ನು ಬದಲಾಯಿಸಬಲ್ಲರೊ? ಖಂಡಿತವಾಗಿಯೂ ಇಲ್ಲ! ಆದರೆ ಯೆಹೋವನ ದೃಷ್ಟಿಯಲ್ಲಾದರೊ, ಭೂಮಿಯನ್ನು ಆವರಿಸಿರುವ ನೀರೆಲ್ಲ ಅವನ ಹಸ್ತದ ಮೇಲಿನ ನೀರ ಹನಿಯಂತಿದೆ. * ಅಲ್ಪ ಮನುಷ್ಯರು ವಿಶಾಲವಾದ ನಕ್ಷತ್ರಮಯ ಆಕಾಶಗಳನ್ನು ಅಳೆಯಬಲ್ಲರೊ ಇಲ್ಲವೆ ಭೂಮಿಯ ಗುಡ್ಡಬೆಟ್ಟಗಳನ್ನು ತೂಗಿನೋಡಬಲ್ಲರೊ? ಇಲ್ಲ. ಆದರೆ ಯೆಹೋವನು, ಒಂದು ವಸ್ತುವನ್ನು ಗೇಣಿನಿಂದ, ಅಂದರೆ ಹಸ್ತವನ್ನು ಚಾಚಿದಾಗ ಹೆಬ್ಬೆರಳಿನ ತುದಿಯಿಂದ ಕಿರುಬೆರಳಿನ ತುದಿಯ ವರೆಗಿನ ಅಂತರದಿಂದ ಮನುಷ್ಯನೊಬ್ಬನು ಹೇಗೆ ಸುಲಭವಾಗಿ ಅಳೆಯುತ್ತಾನೊ, ಹಾಗೆಯೇ ಆಕಾಶಗಳನ್ನು ಅಳೆಯುತ್ತಾನೆ. ದೇವರು ಗುಡ್ಡಬೆಟ್ಟಗಳನ್ನು ತಕ್ಕಡಿಯಲ್ಲಿ ತೂಗಿ ನೋಡಲೂಬಹುದು. ಪ್ರಚಲಿತ ಸಮಯದಲ್ಲಿ ಇಲ್ಲವೆ ಭವಿಷ್ಯತ್ತಿನಲ್ಲಿ ದೇವರು ಏನು ಮಾಡಬೇಕೆಂದು ಯಾವ ಬುದ್ಧಿವಂತನಾದರೂ ಆತನಿಗೆ ಬುದ್ಧಿವಾದ ಹೇಳಿಕೊಡಬಲ್ಲನೊ? ನಿಶ್ಚಿತವಾಗಿಯೂ ಇಲ್ಲ!

19, 20. ಯೆಹೋವನ ಮಹೋನ್ನತೆಯನ್ನು ಒತ್ತಿಹೇಳಲು ಯೆಶಾಯನು ಯಾವ ಸಚಿತ್ರವಾದ ದೃಷ್ಟಾಂತಗಳನ್ನು ಉಪಯೋಗಿಸುತ್ತಾನೆ?

19 ಹಾಗಾದರೆ, ಈ ಭೂಮಿಯ ಬಲಿಷ್ಠ ಜನಾಂಗಗಳ ಕುರಿತೇನು? ದೇವರು ತನ್ನ ವಾಗ್ದಾನವನ್ನು ನೆರವೇರಿಸುವಾಗ, ಅವು ಆತನನ್ನು ತಡೆಯಬಲ್ಲವೊ? ಜನಾಂಗಗಳನ್ನು ಈ ರೀತಿಯಾಗಿ ವರ್ಣಿಸುವ ಮೂಲಕ ಯೆಶಾಯನು ಉತ್ತರಿಸುತ್ತಾನೆ: “ಆಹಾ, ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ; ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಎತ್ತುತ್ತಾನೆ. [ಆತನಿಗರ್ಪಿಸತಕ್ಕ] ಹೋಮಕ್ಕೆ ಲೆಬನೋನಿನ ಪಶುಗಳು ಸಾಲವು, ಅಲ್ಲಿನ ವನವು ಸಮಿತ್ತಿಗೆ ಸಾಲದು. ಸಕಲ ಜನಾಂಗಗಳು ಆತನ ದೃಷ್ಟಿಯಲ್ಲಿ ಏನೂ ಇಲ್ಲದಂತಿವೆ, ಅವು ಆತನ ಎಣಿಕೆಯಲ್ಲಿ ಶುದ್ಧಶೂನ್ಯವೇ.”​—ಯೆಶಾಯ 40:15-17.

20 ಯೆಹೋವನ ದೃಷ್ಟಿಯಲ್ಲಿ, ಇಡೀ ಜನಾಂಗಗಳೇ ಕಪಿಲೆಯಿಂದುದುರುವ ತುಂತುರಿನಂತೆ ಇವೆ. ಅವು ಯಾವ ವ್ಯತ್ಯಾಸವನ್ನೂ ಉಂಟುಮಾಡದ, ತ್ರಾಸಿನ ತಟ್ಟೆಯ ಮೇಲೆ ಜಮಾಯಿಸಿದ ದೂಳಿನಂತಿವೆ. * ಯಾರೊ ಒಬ್ಬನು ಒಂದು ದೊಡ್ಡ ವೇದಿಯನ್ನು ಕಟ್ಟಿಸಿ, ಅದಕ್ಕೆ ಉರುವಲಾಗಿ ಲೆಬನೋನಿನ ಪರ್ವತಗಳ ಮೇಲೆಲ್ಲ ಹರಡಿಕೊಂಡಿರುವ ಮರಗಳನ್ನು ಉಪಯೋಗಿಸುತ್ತಾನೆಂದು ಭಾವಿಸಿಕೊಳ್ಳಿರಿ. ನಂತರ, ಆ ಪರ್ವತದಲ್ಲೆಲ್ಲ ಅಲೆದಾಡುವ ಪ್ರಾಣಿಗಳನ್ನು ಹೋಮವಾಗಿ ಅರ್ಪಿಸುತ್ತಾನೆಂದು ಇಟ್ಟುಕೊಳ್ಳಿರಿ. ಅಂತಹ ಒಂದು ಅರ್ಪಣೆಯೂ ಯೆಹೋವನ ಮೆಚ್ಚುಗೆಯನ್ನು ಗಳಿಸದು. ಇಲ್ಲಿಯ ವರೆಗೆ ತಾನು ಉಪಯೋಗಿಸಿದ ಅಲಂಕಾರಿಕ ಭಾಷೆ ಸಾಲದೊ ಎಂಬಂತೆ, ಯೆಶಾಯನು ಮತ್ತಷ್ಟು ಬಲವಾದ ಹೇಳಿಕೆಯನ್ನು ನೀಡುತ್ತಾನೆ. ಅದೇನೆಂದರೆ, ಯೆಹೋವನ ದೃಷ್ಟಿಯಲ್ಲಿ ಸಕಲ ಜನಾಂಗಗಳು “ಏನೂ ಇಲ್ಲದಂತಿವೆ.”​—⁠ಯೆಶಾಯ 40:⁠17.

21, 22. (ಎ) ಯೆಹೋವನನ್ನು ಯಾವುದರೊಂದಿಗೂ ಹೋಲಿಸಸಾಧ್ಯವಿಲ್ಲ ಎಂಬುದನ್ನು ಯೆಶಾಯನು ಹೇಗೆ ಒತ್ತಿಹೇಳುತ್ತಾನೆ? (ಬಿ) ಯೆಶಾಯನ ಸುಸ್ಪಷ್ಟ ವಿವರಣೆಗಳು ನಮ್ಮನ್ನು ಯಾವ ತೀರ್ಮಾನಕ್ಕೆ ನಡೆಸುತ್ತವೆ? (ಸಿ) ವೈಜ್ಞಾನಿಕವಾಗಿ ಸರಿಯಾಗಿರುವ ಯಾವ ಹೇಳಿಕೆಯನ್ನು ಪ್ರವಾದಿಯಾದ ಯೆಶಾಯನು ದಾಖಲಿಸುತ್ತಾನೆ? (412ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)

21 ಯೆಹೋವನನ್ನು ಯಾವುದರೊಂದಿಗೂ ಹೋಲಿಸಸಾಧ್ಯವಿಲ್ಲ ಎಂಬುದನ್ನು ಮತ್ತಷ್ಟು ಒತ್ತಿಹೇಳುತ್ತಾ, ಬೆಳ್ಳಿಬಂಗಾರ ಇಲ್ಲವೆ ಕಟ್ಟಿಗೆಯಿಂದ ಮೂರ್ತಿಗಳನ್ನು ಮಾಡುವವರ ಮೂರ್ಖತನವನ್ನು ಯೆಶಾಯನು ತಿಳಿಯಪಡಿಸುತ್ತಾನೆ. ಇಂತಹ ಒಂದು ವಿಗ್ರಹವು, ಭೂಮಿಯ ನಿವಾಸಿಗಳ ಮೇಲೆ ಪ್ರಭುತ್ವ ನಡೆಸುವಾತನೂ “ಭೂಮಿಯ ವೃತ್ತದ ಮೇಲ್ಗಡೆ ಕುಳಿತಿರು”ವಾತನೂ (NW) ಆದ ವ್ಯಕ್ತಿಗೆ ಸೂಕ್ತವಾದ ಪ್ರತಿಬಿಂಬವೆಂದು ನೆನಸುವುದು ಎಂತಹ ಮೂರ್ಖತನ!​—⁠ಓದಿ ಯೆಶಾಯ 40:​18-24.

22 ಈ ಎಲ್ಲ ಸುಸ್ಪಷ್ಟ ವಿವರಣೆಗಳು ಒಂದೇ ಒಂದು ಅಭಿಪ್ರಾಯಕ್ಕೆ ನಡೆಸುತ್ತವೆ. ಅದೇನೆಂದರೆ, ಸರ್ವಶಕ್ತನೂ ಸರ್ವಜ್ಞಾನಿಯೂ ಅತುಲ್ಯನೂ ಆದ ಯೆಹೋವನ ವಾಗ್ದಾನದ ನೆರವೇರಿಕೆಯನ್ನು ಯಾರೂ ಅಥವಾ ಏನೂ ತಡೆಯಸಾಧ್ಯವಿಲ್ಲ. ಯೆಶಾಯನ ಈ ಮಾತುಗಳು, ಸ್ವದೇಶಕ್ಕೆ ಹಿಂದಿರುಗಲು ಹಾತೊರೆಯುತ್ತಿದ್ದ ಯೆಹೂದಿ ದೇಶಭ್ರಷ್ಟರಿಗೆ ಎಷ್ಟೊಂದು ಸಾಂತ್ವನ ಹಾಗೂ ಬಲವನ್ನು ನೀಡಿದ್ದಿರಬೇಕು! ಅಂತೆಯೇ ನಮ್ಮ ಭವಿಷ್ಯತ್ತಿಗಾಗಿ ಯೆಹೋವನು ಮಾಡಿರುವ ವಾಗ್ದಾನಗಳು ನಿಜರೂಪವನ್ನು ತಾಳುವವೆಂಬ ಭರವಸೆ ನಮಗೂ ಇರಸಾಧ್ಯವಿದೆ.

‘ಇದನ್ನೆಲ್ಲ ಸೃಷ್ಟಿಸಿದಾತನು ಯಾರು?’

23. ಯಾವ ಕಾರಣಕ್ಕಾಗಿ ಯೆಹೂದಿ ದೇಶಭ್ರಷ್ಟರು ಧೈರ್ಯ ತಂದುಕೊಳ್ಳಬಲ್ಲರು, ಮತ್ತು ಸ್ವತಃ ತನ್ನ ಕುರಿತು ಯಾವ ವಿಷಯವನ್ನು ಯೆಹೋವನು ಈಗ ಒತ್ತಿಹೇಳುತ್ತಾನೆ?

23 ಯೆಹೂದಿ ಪರದೇಶವಾಸಿಗಳು ಎದೆಗುಂದದೆ ಇರಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಬಿಡುಗಡೆಯನ್ನು ವಾಗ್ದಾನಿಸುತ್ತಿರುವಾತನು ಸಕಲ ವಸ್ತುಗಳ ಸೃಷ್ಟಿಕರ್ತನೂ ಎಲ್ಲಾ ಶಕ್ತಿಯ ಉಗಮನೂ ಆಗಿದ್ದಾನೆ. ಯೆಹೋವನು ತನ್ನ ಅದ್ಭುತ ಬುದ್ಧಿಶಕ್ತಿಯನ್ನು ಎತ್ತಿತೋರಿಸಲಿಕ್ಕಾಗಿ, ಸೃಷ್ಟಿಯಲ್ಲಿ ತೋರಿಬರುವ ತನ್ನ ಸಾಮರ್ಥ್ಯದ ಕಡೆಗೆ ಗಮನಸೆಳೆಯುತ್ತಾನೆ: “ಹೀಗಿರಲು ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನಮಾಡುತ್ತೀರಿ ಎಂದು ಸದಮಲಸ್ವಾಮಿಯು ಕೇಳುತ್ತಾನೆ. ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”​—ಯೆಶಾಯ 40:25, 26.

24. ಯೆಹೋವನು ತನ್ನ ಪರವಾಗಿ ಮಾತಾಡಿಕೊಳ್ಳುತ್ತಾ, ತನಗೆ ಯಾರೂ ಸಮಾನರಿಲ್ಲ ಎಂಬುದನ್ನು ಹೇಗೆ ತೋರಿಸಿಕೊಡುತ್ತಾನೆ?

24 ಇಸ್ರಾಯೇಲಿನ ಸದಮಲಸ್ವಾಮಿಯು ತನ್ನ ಪರವಾಗಿಯೇ ಮಾತಾಡುತ್ತಿದ್ದಾನೆ. ತನಗೆ ಸರಿಸಾಟಿಯೇ ಇಲ್ಲವೆಂಬುದನ್ನು ತೋರಿಸುತ್ತಾ, ಯೆಹೋವನು ಆಕಾಶದ ನಕ್ಷತ್ರಗಳ ಕಡೆಗೆ ಗಮನಸೆಳೆಯುತ್ತಾನೆ. ತನ್ನ ಸೈನಿಕರನ್ನು ಸರಿಯಾದ ಕ್ರಮದಲ್ಲಿ ನಿಲ್ಲಿಸುವ ಮಿಲಿಟರಿ ಸೇನಾಪತಿಯಂತೆ, ಯೆಹೋವನು ಎಲ್ಲ ನಕ್ಷತ್ರಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆ. ಅವುಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ, ‘ಅವುಗಳೊಳಗೆ ಒಂದೂ ಕಡಿಮೆಯಾಗದು.’ ಈ ನಕ್ಷತ್ರಗಳ ಸಂಖ್ಯೆಯು ಅಪಾರವಾಗಿದ್ದರೂ, ಆತನು ಅವುಗಳ ಹೆಸರೆತ್ತಿ ಕರೆಯುತ್ತಾನೆ. ಇದು ವ್ಯಕ್ತಿಗತ ಹೆಸರಾಗಿರಲೂಬಹುದು ಇಲ್ಲವೆ ಅಂಕಿತನಾಮವಾಗಿರಲೂಬಹುದು. ವಿಧೇಯ ಸೈನಿಕರಂತೆ, ಅವು ತಮ್ಮ ತಮ್ಮ ಜಾಗದಲ್ಲಿ ನಿಂತು ಶಿಸ್ತನ್ನು ಕಾಪಾಡಿಕೊಳ್ಳುತ್ತವೆ. ಏಕೆಂದರೆ ಅವುಗಳ ಸರದಾರನು “ಅತಿ ಬಲಾಢ್ಯನೂ” “ಮಹಾಶಕ್ತನೂ” ಆಗಿದ್ದಾನೆ. ಹೀಗಿರುವಾಗ ಈ ಯೆಹೂದಿ ಪರದೇಶವಾಸಿಗಳಿಗೆ ಭರವಸೆಯಿಂದಿರಲು ಕಾರಣವಿದೆ. ನಕ್ಷತ್ರಗಳನ್ನು ಅಂಕೆಯಲ್ಲಿಟ್ಟುಕೊಂಡಿರುವ ಸೃಷ್ಟಿಕರ್ತನಿಗೆ, ತನ್ನ ಸೇವಕರನ್ನು ಬೆಂಬಲಿಸುವ ಶಕ್ತಿಸಾಮರ್ಥ್ಯವೂ ಇದೆ.

25. ಯೆಶಾಯ 40:26ರಲ್ಲಿ ದಾಖಲಿಸಲಾದ ದೈವಿಕ ಆಮಂತ್ರಣಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬಹುದು, ಮತ್ತು ಯಾವ ಪರಿಣಾಮದೊಂದಿಗೆ?

25 “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ” ಎಂಬುದಾಗಿ ಯೆಶಾಯ 40:26ರಲ್ಲಿ ದಾಖಲಿಸಲಾದ ದೈವಿಕ ಆಮಂತ್ರಣವನ್ನು ನಮ್ಮಲ್ಲಿ ಯಾರು ತಾನೇ ನಿರೋಧಿಸಬಲ್ಲರು? ನಕ್ಷತ್ರಮಯ ಆಕಾಶಗಳು ಯೆಶಾಯನ ದಿನಕ್ಕಿಂತಲೂ ಈಗ ಹೆಚ್ಚು ಅಮೋಘವಾಗಿ ತೋರುತ್ತವೆಂದು ಆಧುನಿಕ ದಿನದ ಖಗೋಳಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ತಮ್ಮ ಶಕ್ತಿಶಾಲಿ ದೂರದರ್ಶಕಗಳ ಸಹಾಯದಿಂದ ಆಕಾಶದೊಳಗೆ ಇಣಿಕಿ ನೋಡುವ ಖಗೋಳಶಾಸ್ತ್ರಜ್ಞರು, ದೃಗ್ಗೋಚರ ವಿಶ್ವದಲ್ಲಿ ಸುಮಾರು 125 ಶತಕೋಟಿ ಆಕಾಶಗಂಗೆಗಳಿವೆಯೆಂದು ಅಂದಾಜುಮಾಡುತ್ತಾರೆ. ಈ ಆಕಾಶಗಂಗೆಯಲ್ಲಿ ಒಂದಾದ ಕ್ಷೀರಪಥದಲ್ಲಿ, 100 ಶತಕೋಟಿಗಿಂತಲೂ ಹೆಚ್ಚಿನ ನಕ್ಷತ್ರಗಳಿವೆ ಎಂಬುದಾಗಿ ಕೆಲವು ಅಂದಾಜುಗಳು ತಿಳಿಯಪಡಿಸುತ್ತವೆ! ಇಂತಹ ಜ್ಞಾನವು ಸೃಷ್ಟಿಕರ್ತನಿಗಾಗಿ ನಮ್ಮ ಹೃದಯಗಳಲ್ಲಿ ಪೂಜ್ಯಭಾವನೆಯನ್ನು ಮತ್ತು ಆತನ ವಾಗ್ದಾನದಲ್ಲಿ ಪೂರ್ಣ ನಂಬಿಕೆಯನ್ನು ಮೂಡಿಸಬೇಕು.

26, 27. ಬಾಬೆಲಿನಲ್ಲಿ ಪರದೇಶವಾಸಿಗಳಾಗಿರುವವರ ಅನಿಸಿಕೆಗಳು ಹೇಗೆ ವರ್ಣಿಸಲ್ಪಟ್ಟಿವೆ, ಮತ್ತು ಅವರಿಗೆ ಯಾವ ವಿಷಯಗಳು ತಿಳಿದಿರತಕ್ಕದ್ದು?

26 ಸೆರೆಯಲ್ಲಿ ಸಮಯ ಕಳೆಯುತ್ತಾ, ಯೆಹೂದಿ ಪರದೇಶವಾಸಿಗಳ ಮನೋಬಲವು ಇಂಗಿಹೋಗುವುದೆಂದು ತಿಳಿದಿದ್ದ ಯೆಹೋವನು, ಈ ಪುನರ್‌ ಆಶ್ವಾಸನೆಯ ಮಾತುಗಳನ್ನು ಮುಂಚಿತವಾಗಿಯೇ ಬರೆದಿಡುವಂತೆ ಯೆಶಾಯನನ್ನು ಪ್ರೇರೇಪಿಸುತ್ತಾನೆ: “ಯಾಕೋಬೇ, ಇಸ್ರಾಯೇಲೇ, ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ ಎಂದು ಏಕೆ ಅಂದುಕೊಳ್ಳುತ್ತೀ? ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ; ಆತನು ದಣಿದು ಬಳಲುವದಿಲ್ಲ; ಆತನ ವಿವೇಕವು ಪರಿಶೋಧನೆಗೆ ಅಗಮ್ಯ.”​—ಯೆಶಾಯ 40:27, 28. *

27 ಸ್ವದೇಶದಿಂದ ನೂರಾರು ಕಿಲೊಮೀಟರುಗಳು ದೂರದಲ್ಲಿ ಅಂದರೆ, ಬಾಬೆಲಿನಲ್ಲಿ ಪರದೇಶವಾಸಿಗಳಾಗಿರುವವರ ಅನಿಸಿಕೆಗಳನ್ನು ವರ್ಣಿಸುತ್ತಾ, ಯೆಶಾಯನು ಯೆಹೋವನ ಮಾತುಗಳನ್ನು ದಾಖಲಿಸಿಡುತ್ತಾನೆ. ದೇವರು ತಮ್ಮ ‘ಮಾರ್ಗವನ್ನು’ ಇಲ್ಲವೆ ಪ್ರಯಾಸಕರ ಜೀವನಹಾದಿಯನ್ನು ಗಮನಿಸದೆ ಅಥವಾ ತಿಳಿದುಕೊಳ್ಳದೆ ಇದ್ದಾನೆಂದು ಕೆಲವರು ನೆನಸುತ್ತಾರೆ. ತಾವು ಅನುಭವಿಸುತ್ತಿರುವ ಅನ್ಯಾಯಗಳನ್ನು ಯೆಹೋವನು ಕಂಡೂ ಕಾಣದಂತಿದ್ದಾನೆಂದು ಅವರು ಯೋಚಿಸುತ್ತಾರೆ. ಇವರಿಗೆ ವೈಯಕ್ತಿಕ ಅನುಭವದಿಂದಲ್ಲದಿದ್ದರೂ ಈ ಮೊದಲು ನೀಡಲ್ಪಟ್ಟಿರುವ ಮಾಹಿತಿಯಿಂದಾದರೂ ತಿಳಿದಿರತಕ್ಕ ವಿಷಯಗಳ ಬಗ್ಗೆ ಜ್ಞಾಪಕ ಹುಟ್ಟಿಸಲಾಗುತ್ತದೆ. ಯೆಹೋವನು ತನ್ನ ಜನರನ್ನು ಬಿಡಿಸಲು ಶಕ್ತನೂ ಆಗಿದ್ದಾನೆ ಸಿದ್ಧನೂ ಆಗಿದ್ದಾನೆ. ಆತನು ಅನಂತ ದೇವರು ಮಾತ್ರವಲ್ಲ, ಇಡೀ ಭೂಮಿಯ ಸೃಷ್ಟಿಕರ್ತನೂ ಆಗಿದ್ದಾನೆ. ಆದಕಾರಣ, ಸೃಷ್ಟಿಯ ಸಮಯದಲ್ಲಿ ಆತನು ಪ್ರದರ್ಶಿಸಿದ ಶಕ್ತಿ ಈಗಲೂ ಆತನಲ್ಲಿದೆ, ಮತ್ತು ಬಲಿಷ್ಠ ಬಾಬೆಲ್‌ ಆತನ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ದೇವರು ಆಯಾಸಗೊಂಡು ತನ್ನ ಜನರ ಆಸೆಗಳನ್ನು ಹುಸಿಗೊಳಿಸಲಾರನು. ಯೆಹೋವನು ಮಾಡಲಿರುವ ಪ್ರತಿಯೊಂದು ಕಾರ್ಯವನ್ನು ಅವರು ಪೂರ್ಣವಾಗಿ ಗ್ರಹಿಸಿಕೊಳ್ಳಲು ಅಪೇಕ್ಷಿಸಬಾರದು, ಏಕೆಂದರೆ ಆತನ ತಿಳಿವಳಿಕೆ ಇಲ್ಲವೆ ಒಳನೋಟ, ವಿವೇಚನೆ ಮತ್ತು ಗ್ರಹಿಕೆಯು ಇವರ ತಿಳಿವಳಿಕೆಯನ್ನು ಮೀರುವಂಥದ್ದಾಗಿದೆ.

28, 29. (ಎ) ತಾನು ಬಳಲಿಹೋದವರ ನೆರವಿಗೆ ಬರುವನೆಂಬುದನ್ನು ಯೆಹೋವನು ತನ್ನ ಜನರಿಗೆ ಹೇಗೆ ಜ್ಞಾಪಕಹುಟ್ಟಿಸುತ್ತಾನೆ? (ಬಿ) ಯೆಹೋವನು ತನ್ನ ಜನರನ್ನು ಶಕ್ತರನ್ನಾಗಿ ಮಾಡುತ್ತಾನೆಂಬುದಕ್ಕೆ ಯಾವ ದೃಷ್ಟಾಂತವು ಉಪಯೋಗಿಸಲ್ಪಟ್ಟಿದೆ?

28 ಈ ಹತಾಶಗೊಂಡ ಪರದೇಶವಾಸಿಗಳಿಗೆ ಯೆಹೋವನು ಯೆಶಾಯನ ಮೂಲಕ ಉತ್ತೇಜನವನ್ನು ನೀಡುತ್ತಾ ಹೇಳುವುದು: “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.”​—ಯೆಶಾಯ 40:29-31.

29 ಸೋತವನಿಗೆ ತ್ರಾಣವನ್ನು ಕೊಡುವುದರ ಅಗತ್ಯದ ಕುರಿತು ಮಾತಾಡುವಾಗ, ಪರದೇಶವಾಸಿಗಳು ತಮ್ಮ ದೇಶಕ್ಕೆ ಹಿಂದಿರುಗುವಾಗ ಮಾಡಬೇಕಾದ ಪ್ರಯಾಸಕರ ಪ್ರಯಾಣವು ಯೆಹೋವನ ಮನಸ್ಸಿನಲ್ಲಿದ್ದಿರಬಹುದು. ತನ್ನ ಬೆಂಬಲಕ್ಕಾಗಿ ಎದುರುನೋಡುವ ಬಳಲಿಹೋದವರಿಗೆ ಸಹಾಯ ನೀಡುವುದು ಆತನ ಗುಣಲಕ್ಷಣವೆಂಬುದನ್ನು ಯೆಹೋವನು ಮರುಜ್ಞಾಪಿಸುತ್ತಾನೆ. ಒಳ್ಳೆಯ ಆರೋಗ್ಯದಿಂದ ಪುಟಿಯುತ್ತಿರುವ “ಯುವಕರು” ಮತ್ತು “ತರುಣರು,” ಬಳಲಿಕೆಯಿಂದ ಮುಗ್ಗರಿಸಬಹುದು. ಆದರೆ, ಯಾರು ಯೆಹೋವನಲ್ಲಿ ಭರವಸೆಯಿಡುತ್ತಾರೊ ಅಂತಹವರಿಗೆ ಆತನು ನಡೆದಾಡಲು, ಅಷ್ಟೇಕೆ ಓಡಾಡಲು ಸಹ ಬೇಕಾದ ಅಸಾಮಾನ್ಯ ಬಲವನ್ನು ನೀಡುವ ಮಾತುಕೊಡುತ್ತಾನೆ. ಯೆಹೋವನು ತನ್ನ ಸೇವಕರಿಗೆ ಹೇಗೆ ಬಲವನ್ನು ಕೊಡುತ್ತಾನೆಂಬುದು, ಯಾವ ಪ್ರಯಾಸವೂ ಇಲ್ಲದೆ ತಾಸುಗಟ್ಟಲೆ ಹಾರಾಡುತ್ತಿರಬಲ್ಲ ಬಲಶಾಲಿ ಹದ್ದುಗಳ ಹಾರಾಟದ ಮೂಲಕ ದೃಷ್ಟಾಂತಿಸಲ್ಪಟ್ಟಿದೆ. * ಇಂತಹ ದೈವಿಕ ಬೆಂಬಲದ ಖಾತ್ರಿಯಿರುವ ಯೆಹೂದಿ ಪರದೇಶವಾಸಿಗಳಿಗೆ ಹತಾಶರಾಗುವ ಕಾರಣವೇ ಇಲ್ಲ.

30. ಯೆಶಾಯ 40ನೆಯ ಅಧ್ಯಾಯದ ಕೊನೆಯ ವಚನಗಳಿಂದ ಇಂದು ನಿಜ ಕ್ರೈಸ್ತರು ಹೇಗೆ ಸಾಂತ್ವನ ಪಡೆದುಕೊಳ್ಳಬಲ್ಲರು?

30 ಯೆಶಾಯ 40ನೆಯ ಅಧ್ಯಾಯದ ಈ ಕೊನೆಯ ವಚನಗಳು, ಈ ದುಷ್ಟ ವ್ಯವಸ್ಥೆಯ ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ಸತ್ಕ್ರೈಸ್ತರಿಗೆ ಸಾಂತ್ವನವನ್ನು ನೀಡುತ್ತವೆ. ಎದೆಗುಂದಿಸುವಂತಹ ಅನೇಕಾನೇಕ ಒತ್ತಡಗಳು ಹಾಗೂ ಸಮಸ್ಯೆಗಳನ್ನು ಎದುರಿಸುವಾಗ, ನಾವು ತಾಳಿಕೊಳ್ಳುವ ಕಷ್ಟತೊಂದರೆಗಳು ಹಾಗೂ ಅನುಭವಿಸುವ ಅನ್ಯಾಯಗಳು ನಮ್ಮ ದೇವರ ಕಣ್ಣಿಗೆ ಬೀಳದೆ ಹೋಗುವುದಿಲ್ಲವೆಂಬ ಆಶ್ವಾಸನೆ ನಮಗಿದೆ. ಎಲ್ಲ ವಿಷಯಗಳ ಸೃಷ್ಟಿಕರ್ತನು, ‘ಜ್ಞಾನದಲ್ಲಿ ಅಪರಿಮಿತನೂ’ ಆದಾತನು ತನ್ನ ನೇಮಿತ ಸಮಯ ಹಾಗೂ ರೀತಿಯಲ್ಲಿ ಅನ್ಯಾಯಗಳನ್ನು ಕೊನೆಗಾಣಿಸುವನು. (ಕೀರ್ತನೆ 147:​5, 6) ಈ ಮಧ್ಯೆ, ನಾವು ನಮ್ಮ ಸ್ವಂತ ಬಲದ ಮೇಲೆ ಆತುಕೊಳ್ಳುವ ಅಗತ್ಯವಿಲ್ಲ. ಎಂದೂ ಮುಗಿದುಹೋಗದ ಸಂಪನ್ಮೂಲಗಳ ಒಡೆಯನಾದ ಯೆಹೋವನು, ಸಂಕಷ್ಟದಲ್ಲಿ ಬಿದ್ದಿರುವ ತನ್ನ ಸೇವಕರಿಗೆ ಬಲವನ್ನು, ಅಷ್ಟೇಕೆ “ಬಲಾಧಿಕ್ಯ”ವನ್ನೂ ಕೊಡಬಲ್ಲವನಾಗಿದ್ದಾನೆ.​—⁠2 ಕೊರಿಂಥ 4:⁠7.

31. ಬಾಬೆಲಿನಲ್ಲಿದ್ದ ಯೆಹೂದಿ ಪರದೇಶವಾಸಿಗಳಿಗೆ ಯೆಶಾಯನ ಪ್ರವಾದನೆಯಲ್ಲಿ ಜ್ಯೋತಿಯ ಯಾವ ವಾಗ್ದಾನವಿತ್ತು, ಮತ್ತು ಯಾವ ವಿಷಯದಲ್ಲಿ ನಮಗೆ ಸಂಪೂರ್ಣ ಭರವಸೆಯಿರಸಾಧ್ಯವಿದೆ?

31 ಸಾ.ಶ.ಪೂ. ಆರನೆಯ ಶತಮಾನದ ಬಾಬೆಲಿನಲ್ಲಿ ಸೆರೆಯಲ್ಲಿದ್ದ ಆ ಯೆಹೂದಿಗಳ ಬಗ್ಗೆ ತುಸು ಯೋಚಿಸಿರಿ. ತಮ್ಮಿಂದ ನೂರಾರು ಕಿಲೊಮೀಟರುಗಳ ದೂರದಲ್ಲಿ ಅವರ ಪ್ರಿಯ ಯೆರೂಸಲೇಮ್‌ ಮತ್ತು ಅದರ ದೇವಾಲಯವು ಹಾಳು ಬಿದ್ದಿದ್ದವು. ಇವರಿಗೆ ಯೆಶಾಯನ ಪ್ರವಾದನೆಯು, ಜ್ಯೋತಿ ಹಾಗೂ ನಿರೀಕ್ಷೆಯ ವಾಗ್ದಾನವನ್ನು ನೀಡಿತು. ಅದೇನೆಂದರೆ, ಯೆಹೋವನು ಅವರನ್ನು ತಮ್ಮ ಸ್ವದೇಶಕ್ಕೆ ಪುನಸ್ಸ್ಥಾಪಿಸುವನು ಎಂಬುದೇ. ಸಾ.ಶ.ಪೂ. 537ರಲ್ಲಿ ತನ್ನ ಜನರನ್ನು ಸ್ವದೇಶಕ್ಕೆ ನಡೆಸುವ ಮೂಲಕ, ತಾನು ವಾಗ್ದಾನಗಳನ್ನು ನೆರವೇರಿಸುವಾತನೆಂಬುದನ್ನು ಯೆಹೋವನು ತೋರಿಸಿಕೊಟ್ಟನು. ನಾವು ಕೂಡ ಯೆಹೋವನಲ್ಲಿ ಸಂಪೂರ್ಣವಾದ ಭರವಸೆಯನ್ನು ಹೊಂದಿರಸಾಧ್ಯವಿದೆ. ಯೆಶಾಯನ ಪ್ರವಾದನೆಯಲ್ಲಿ ಅಷ್ಟೊಂದು ಸುಂದರವಾಗಿ ವರ್ಣಿಸಲ್ಪಟ್ಟಿರುವ ಆತನ ರಾಜ್ಯ ವಾಗ್ದಾನಗಳು ಬೇಗನೆ ನಿಜರೂಪ ತಾಳುವವು. ಇದು ನಿಜವಾಗಿಯೂ ಸುವಾರ್ತೆಯಾಗಿದೆ​—⁠ಸಕಲ ಮಾನವವರ್ಗಕ್ಕೆ ಜ್ಯೋತಿಯ ಸಂದೇಶವಾಗಿದೆ!

[ಪಾದಟಿಪ್ಪಣಿಗಳು]

^ ಪ್ಯಾರ. 7 ಯೆಹೋವನ ಮುಂದೆ ಮಾರ್ಗವನ್ನು ಸಿದ್ಧಪಡಿಸುವುದರ ಬಗ್ಗೆ ಯೆಶಾಯನು ಮುಂತಿಳಿಸುತ್ತಾನೆ. (ಯೆಶಾಯ 40:⁠3) ಆದರೆ, ಸ್ನಾನಿಕನಾದ ಯೋಹಾನನು ಯೇಸು ಕ್ರಿಸ್ತನಿಗಾಗಿ ಮಾರ್ಗವನ್ನು ಸಿದ್ಧಪಡಿಸುವುದರಲ್ಲಿ ಏನು ಮಾಡಿದನೊ ಅದಕ್ಕೆ ಸುವಾರ್ತೆಗಳು ಈ ಪ್ರವಾದನೆಯನ್ನು ಅನ್ವಯಿಸುತ್ತವೆ. ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಪ್ರೇರಿತ ಬರಹಗಾರರು ಇಂತಹ ಅನ್ವಯವನ್ನು ಏಕೆ ಮಾಡಿದರೆಂದರೆ, ಯೇಸು ತನ್ನ ತಂದೆಯನ್ನು ಪ್ರತಿನಿಧಿಸಿದನು ಮತ್ತು ತಂದೆಯ ಹೆಸರಿನಲ್ಲಿ ಬಂದನು.​—⁠ಯೋಹಾನ 5:43; 8:⁠29.

^ ಪ್ಯಾರ. 18 “ಸಾಗರಗಳ ರಾಶಿ ಬಹುತೇಕ 1.35 ಕ್ವಿನ್‌ಟಿಲಿಯನ್‌ (1.35 x 1018) ಮೆಟ್ರಿಕ್‌ ಟನ್‌ಗಳು ಇಲ್ಲವೆ ಭೂಮಿಯ ಒಟ್ಟು ರಾಶಿಯಲ್ಲಿ ಸುಮಾರು 1/4400 ಆಗಿದೆ” ಎಂದು ಲೆಕ್ಕಮಾಡಲಾಗಿದೆ.​—⁠ಎನ್‌ಕಾರ್ಟ 97 ಎನ್‌ಸೈಕ್ಲೊಪೀಡಿಯ.

^ ಪ್ಯಾರ. 20 ದಿ ಎಕ್ಸ್‌ಪಾಸಿಟರ್ಸ್‌ ಬೈಬಲ್‌ ಕಮೆಂಟರಿ ಗಮನಿಸುವುದು: “ಪ್ರಾಚ್ಯ ದೇಶಗಳ ಮಾರುಕಟ್ಟೆಯಲ್ಲಿ, ಮಾಂಸ ಇಲ್ಲವೆ ಹಣ್ಣುಹಂಪಲಗಳನ್ನು ತೂಗುವಾಗ, ಅಳತೆಯ ಪಾತ್ರೆಯಲ್ಲಿರುವ ನೀರಿನ ಹನಿಯನ್ನೊ ಇಲ್ಲವೆ ತ್ರಾಸಿನ ತಟ್ಟೆಯ ಮೇಲಿರುವ ಒಂದಿಷ್ಟು ದೂಳನ್ನೊ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.”

^ ಪ್ಯಾರ. 26 ಯೆಶಾಯ 40:28ರಲ್ಲಿರುವ “ನಿರಂತರ” ಎಂಬ ಪದದ ಅರ್ಥ “ಯುಗಯುಗಾಂತರ” ಎಂದಾಗಿದೆ, ಏಕೆಂದರೆ ಯೆಹೋವನು “ಸರ್ವಯುಗಗಳ ಅರಸನು” ಆಗಿದ್ದಾನೆ.​—⁠1 ತಿಮೊಥೆಯ 1:⁠17.

^ ಪ್ಯಾರ. 29 ಹದ್ದು ಬಹಳ ಕಡಿಮೆ ಶಕ್ತಿಯನ್ನು ವಿನಿಯೋಗಿಸಿ ಆಕಾಶದಲ್ಲಿ ಹಾರಾಡುತ್ತದೆ. ಮೇಲೇರುವ ಬೆಚ್ಚನೆಯ ಗಾಳಿಯ ಉಷ್ಣವನ್ನು ಜಾಣತನದಿಂದ ಉಪಯೋಗಿಸುವ ಮೂಲಕ ಅದು ಹೀಗೆ ಮಾಡುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 404, 405ರಲ್ಲಿರುವ ಚೌಕ/ಚಿತ್ರ]

ಯೆಹೋವ, ಒಬ್ಬ ಪ್ರೀತಿಪರ ಕುರುಬ

ಕುರಿಮರಿಗಳನ್ನು ತನ್ನ ಎದೆಗೆತ್ತಿಕೊಳ್ಳುವ ಒಬ್ಬ ಪ್ರೀತಿಪರ ಕುರುಬನಿಗೆ ಯೆಶಾಯನು ಯೆಹೋವನನ್ನು ಹೋಲಿಸುತ್ತಾನೆ. (ಯೆಶಾಯ 40:​10, 11) ಈ ಹೃದಯೋಲ್ಲಾಸಕರ ದೃಷ್ಟಾಂತವನ್ನು, ಕುರುಬರ ನಿಜ ಜೀವನ ಆಚಾರಗಳ ಮೇಲೆ ಯೆಶಾಯನು ಆಧಾರಿಸುತ್ತಾನೆ. ಮಧ್ಯಪೂರ್ವದ ಹರ್ಮೋನ್‌ ಪರ್ವತದ ಇಳಿಜಾರುಗಳ ಮೇಲೆ ತಾನು ಕಂಡ ಕುರುಬರ ಬಗ್ಗೆ ಒಬ್ಬ ಆಧುನಿಕ ವೀಕ್ಷಕನು ವರದಿಸುವುದು: “ಪ್ರತಿಯೊಬ್ಬ ಕುರುಬನು ತನ್ನ ಮಂದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳ ಯೋಗಕ್ಷೇಮವನ್ನು ನೋಡಿಕೊಂಡನು. ಮಂದೆಯಲ್ಲಿ ನವಜನಿತ ಮರಿಯೊಂದನ್ನು ಅವನು ಕಂಡಾಗ, ಅದು ತನ್ನ ತಾಯಿಯನ್ನು ಹಿಂಬಾಲಿಸಶಕ್ತವಲ್ಲವೆಂಬುದನ್ನು ಅರಿತು ತನ್ನ ನೀಳ ಅಂಗಿಯ . . . ಮಡಿಕೆಯಲ್ಲಿ ಅದನ್ನು ಇಟ್ಟುಕೊಂಡನು. ಅವನ ಮಡಿಲು ತುಂಬಿಹೋದಾಗ, ಕುರಿಮರಿಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಅವುಗಳ ಕಾಲುಗಳನ್ನು ಹಿಡಿದುಕೊಂಡನು. ಇಲ್ಲವೆ ಕತ್ತೆಯು ಹೊರುವಂತೆ ಅವುಗಳನ್ನು ಒಂದು ಚೀಲ ಇಲ್ಲವೆ ಬುಟ್ಟಿಯಲ್ಲಿ ಇಟ್ಟನು. ಮರಿಯು ತನ್ನ ತಾಯಿಯನ್ನು ಹಿಂಬಾಲಿಸಶಕ್ತವಾಗುವ ತನಕ ಹೀಗೆ ಮಾಡಿದನು.” ನಾವು ಸೇವೆಸಲ್ಲಿಸುತ್ತಿರುವ ದೇವರು, ತನ್ನ ಜನರ ಕುರಿತು ಇಷ್ಟೊಂದು ಕೋಮಲವಾಗಿ ಚಿಂತಿಸುವವನಾಗಿದ್ದಾನೆಂಬ ವಿಚಾರವು ತಾನೇ ಸಾಂತ್ವನದಾಯಕವಾಗಿಲ್ಲವೊ?

[ಪುಟ 412ರಲ್ಲಿರುವ ಚೌಕ/ಚಿತ್ರ]

ಭೂಮಿಯ ಆಕಾರವು ಹೇಗಿದೆ?

ಭೂಮಿಯು ಚಪ್ಪಟೆಯಾಗಿದೆ ಎಂಬುದು ಪುರಾತನ ಸಮಯಗಳಲ್ಲಿನ ಜನರ ಸಾಮಾನ್ಯ ನೋಟವಾಗಿತ್ತು. ಸಾ.ಶ.ಪೂ. ಆರನೆಯ ಶತಮಾನದಷ್ಟು ಹಿಂದೆ, ಗ್ರೀಕ್‌ ತತ್ವಜ್ಞಾನಿ ಪೈತಾಗರಸನು, ಭೂಮಿಯು ಗೋಳಾಕಾರವಾಗಿರಬೇಕೆಂದು ವಾದ ಹೂಡಿದನು. ಪೈತಾಗರಸನು ತನ್ನ ವಾದವನ್ನು ಮಂಡಿಸುವ ಎರಡು ಶತಮಾನಗಳ ಮುಂಚೆಯೇ, ಪ್ರವಾದಿಯಾದ ಯೆಶಾಯನು ಗಮನಾರ್ಹವಾದ ಸರಳತೆ ಹಾಗೂ ನಿಶ್ಚಿತಾಭಿಪ್ರಾಯದಿಂದ ಹೇಳಿದ್ದು: “ಭೂಮಿಯ ವೃತ್ತದ ಮೇಲ್ಗಡೆ ಕುಳಿತಿರುವಾತನು ಒಬ್ಬನಿದ್ದಾನೆ.” (ಯೆಶಾಯ 40:​22, NW) ಇಲ್ಲಿ “ವೃತ್ತ”ವೆಂದು ಭಾಷಾಂತರಿಸಲಾಗಿರುವ ಚುಗ್‌ ಎಂಬ ಹೀಬ್ರು ಪದವನ್ನು “ಗೋಳ”ವೆಂದೂ ಭಾಷಾಂತರಿಸಬಹುದು. ಒಂದು ಗೋಳಾಕಾರದ ವಸ್ತು ಮಾತ್ರ ದೃಷ್ಟಿಯ ಪ್ರತಿಯೊಂದು ಕೋನದಿಂದಲೂ ಒಂದು ವೃತ್ತವಾಗಿ ಕಂಡುಬರುತ್ತದೆ. * ತನ್ನ ಸಮಯಕ್ಕಿಂತಲೂ ತೀರ ಮುಂಚಿತವಾಗಿ ಯೆಶಾಯನು, ಪುರಾತನ ಮಿಥ್ಯೆಗಳಿಂದ ಮುಕ್ತವಾಗಿದ್ದು, ವೈಜ್ಞಾನಿಕವಾಗಿ ಸರಿಯಾಗಿದ್ದ ಒಂದು ಹೇಳಿಕೆಯನ್ನು ದಾಖಲಿಸಿದನು.

[ಪಾದಟಿಪ್ಪಣಿ]

^ ಪ್ಯಾರ. 73 ತಾಂತ್ರಿಕವಾಗಿ ಹೇಳುವುದಾದರೆ, ಭೂಮಿಯು ಒಂದು ಗೋಳಕಲ್ಪ, ಅದು ಧ್ರುವಗಳಲ್ಲಿ ತುಸು ಚಪ್ಪಟೆಯಾಗಿದೆ.

[ಪುಟ 403ರಲ್ಲಿರುವ ಚಿತ್ರ]

ಸ್ನಾನಿಕನಾದ ಯೋಹಾನನು ‘ಅಡವಿಯಲ್ಲಿ ಕೂಗುವವನ’ ಶಬ್ದವಾಗಿ ಕಾರ್ಯಮಾಡಿದನು