ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!

ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!

ಅಧ್ಯಾಯ ಇಪ್ಪತ್ತೆಂಟು

ಪುನಸ್ಸ್ಥಾಪಿಸಲ್ಪಟ್ಟ ಪರದೈಸ್‌!

ಯೆಶಾಯ 35:​1-10

1. ಯಾವ ಕಾರಣಕ್ಕಾಗಿ ಅನೇಕ ಧರ್ಮಗಳು ಪರದೈಸಿನ ಜೀವಿತದ ನಿರೀಕ್ಷೆಯನ್ನು ನೀಡುತ್ತವೆ?

“ಪರದೈಸಿನ ಹಂಬಲವು, ಮಾನವರನ್ನು ಸತತವಾಗಿ ಪೀಡಿಸುವ ಅತ್ಯಂತ ಶಕ್ತಿಶಾಲಿ ಹಂಬಲಗಳಲ್ಲಿ ಒಂದಾಗಿದೆ. ಅದು ಸಕಲ ಹಂಬಲಗಳಲ್ಲಿಯೂ ಅತ್ಯಂತ ಪ್ರಬಲವಾದದ್ದು ಮತ್ತು ಬೆಂಬಿಡದಂತಹದ್ದೂ ಆಗಿರಬಹುದು. ಪರದೈಸಿನ ಹಂಬಲವನ್ನು, ಪ್ರತಿಯೊಂದು ಧರ್ಮದ ಜನರಲ್ಲೂ ನೋಡಬಹುದಾಗಿದೆ.” ಹೀಗೆಂದು ದಿ ಎನ್‌ಸೈಕ್ಲೊಪೀಡಿಯ ಆಫ್‌ ರಿಲಿಜನ್‌ ಹೇಳಿತು. ಇಂತಹ ಹಂಬಲವು ತೀರ ಸ್ವಾಭಾವಿಕವಾದದ್ದು, ಏಕೆಂದರೆ ಮಾನವ ಜೀವನವು ರೋಗಮರಣಗಳಿಂದ ಮುಕ್ತವಾದ ಒಂದು ಸುಂದರ ತೋಟದಲ್ಲಿ, ಅಂದರೆ ಪರದೈಸಿನಲ್ಲಿ ಆರಂಭವಾಯಿತೆಂದು ಬೈಬಲು ನಮಗೆ ಹೇಳುತ್ತದೆ. (ಆದಿಕಾಂಡ 2:​8-15) ಅಂತೆಯೇ ಲೋಕದ ಅನೇಕ ಧರ್ಮಗಳು, ಒಂದಲ್ಲ ಒಂದು ರೀತಿಯ ಪರದೈಸಿನಲ್ಲಿ ಮರಣಾನಂತರದ ಜೀವನದ ನಿರೀಕ್ಷೆಯನ್ನು ನೀಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.

2. ಭಾವೀ ಪರದೈಸಿನ ನಿಜ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

2 ಬೈಬಲಿನ ಅನೇಕ ಭಾಗಗಳಲ್ಲಿ, ನಾವು ಭಾವೀ ಪರದೈಸಿನ ನಿಜವಾದ ನಿರೀಕ್ಷೆಯ ಬಗ್ಗೆ ಓದಸಾಧ್ಯವಿದೆ. (ಯೆಶಾಯ 51:⁠3) ಉದಾಹರಣೆಗೆ, ಯೆಶಾಯ 35ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯು, ಅರಣ್ಯಪ್ರದೇಶಗಳು ತೋಟದಂತಹ ಉದ್ಯಾನವನಗಳಾಗಿ ಮತ್ತು ಫಲಭರಿತ ಹೊಲಗಳಾಗಿ ರೂಪಾಂತರಗೊಳ್ಳುವುದನ್ನು ವರ್ಣಿಸುತ್ತದೆ. ಅಲ್ಲದೆ, ಅಲ್ಲಿ ಕುರುಡರಿಗೆ ಕಣ್ಣುಕಾಣುತ್ತದೆ, ಮೂಕರಿಗೆ ಮಾತಾಡಲುಸಾಧ್ಯವಾಗುತ್ತದೆ ಮತ್ತು ಕಿವುಡರಿಗೆ ಕಿವಿಕೇಳಿಸುತ್ತದೆ. ಈ ವಾಗ್ದತ್ತ ಪರದೈಸಿನಲ್ಲಿ ದುಃಖವಾಗಲಿ ಗೋಳಾಟವಾಗಲಿ ಇಲ್ಲ. ಇದರರ್ಥ ಇನ್ನು ಮುಂದೆ ಮರಣವೂ ಇರುವುದಿಲ್ಲ. ಎಂತಹ ಅದ್ಭುತಕರ ವಾಗ್ದಾನ! ಆದರೆ ಈ ವಾಗ್ದಾನದ ಮಾತುಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಅವು ನಮಗಾಗಿ ಯಾವ ನಿರೀಕ್ಷೆಯನ್ನು ನೀಡುತ್ತವೆ? ಯೆಶಾಯನ ಈ ಅಧ್ಯಾಯವನ್ನು ಪರಿಗಣಿಸುವ ಮೂಲಕ, ನಾವು ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.

ನಿರ್ಜನ ಪ್ರದೇಶವು ಉಲ್ಲಾಸಿಸುತ್ತದೆ

3. ಯೆಶಾಯನ ಪ್ರವಾದನೆಗನುಸಾರ, ದೇಶವು ಯಾವ ರೂಪಾಂತರಕ್ಕೆ ಒಳಗಾಗುವುದು?

3 ಪುನಸ್ಸ್ಥಾಪಿಸಲ್ಪಟ್ಟ ಪರದೈಸಿನ ಕುರಿತಾದ ಯೆಶಾಯನ ಪ್ರೇರಿತ ಪ್ರವಾದನೆಯು ಈ ಮುಂದಿನ ಮಾತುಗಳೊಂದಿಗೆ ಆರಂಭವಾಗುತ್ತದೆ: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. ಅದು ಸಮೃದ್ಧಿಯಾಗಿ ಹೂಬಿಟ್ಟು ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವದು; ಲೆಬನೋನಿನ ಮಹಿಮೆಯೂ ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣುವವು.”​—ಯೆಶಾಯ 35:1, 2.

4. ಯಾವಾಗ ಮತ್ತು ಹೇಗೆ ಯೆಹೂದ್ಯರ ಸ್ವದೇಶವು ಅರಣ್ಯವಾಗಿ ರೂಪುಗೊಳ್ಳುತ್ತದೆ?

4 ಸಾ.ಶ.ಪೂ. 732ರಲ್ಲಿ ಯೆಶಾಯನು ಈ ಮಾತುಗಳನ್ನು ದಾಖಲಿಸುತ್ತಾನೆ. ಸುಮಾರು 125 ವರ್ಷಗಳ ತರುವಾಯ, ಬಾಬೆಲಿನವರು ಯೆರೂಸಲೇಮನ್ನು ನಾಶಮಾಡಿ, ಯೆಹೂದದ ಜನರನ್ನು ಪರದೇಶವಾಸಿಗಳನ್ನಾಗಿ ಮಾಡುತ್ತಾರೆ. ಇಸ್ರಾಯೇಲ್ಯರ ಸ್ವಂತ ದೇಶವು ನಿರ್ಜನವಾದ ಪಾಳುಭೂಮಿಯಂತಾಗುತ್ತದೆ. (2 ಅರಸುಗಳು 25:​8-11, 21-26) ಈ ರೀತಿಯಲ್ಲಿ, ಇಸ್ರಾಯೇಲ್ಯರು ಯೆಹೋವನಿಗೆ ಅಪನಂಬಿಗಸ್ತರಾಗಿ ನಡೆದುಕೊಂಡಲ್ಲಿ ಸೆರೆಗೆ ಒಯ್ಯಲ್ಪಡುವರೆಂಬ ದೇವರ ಎಚ್ಚರಿಕೆಯು ನೆರವೇರುತ್ತದೆ. (ಧರ್ಮೋಪದೇಶಕಾಂಡ 28:​15, 36, 37; 1 ಅರಸುಗಳು 9:​6-8) ಈ ಹೀಬ್ರು ಜನಾಂಗದವರು ಅನ್ಯದೇಶವೊಂದರಲ್ಲಿ ಸೆರೆವಾಸಿಗಳಾದಾಗ, ಅವರ ನೀರಾವರಿ ಹೊಲಗದ್ದೆಗಳಿಗೆ ಮತ್ತು ತೋಟಗಳಿಗೆ 70 ವರ್ಷಗಳ ಕಾಲ ಯಾವ ಆರೈಕೆಯೂ ಸಿಗದೇ ಇರುವುದರಿಂದ, ಅದೊಂದು ಅರಣ್ಯಪ್ರದೇಶವಾಗುತ್ತದೆ.​—⁠ಯೆಶಾಯ 64:10; ಯೆರೆಮೀಯ 4:​23-27; 9:​10-12.

5. (ಎ) ಆ ದೇಶಕ್ಕೆ ಪರದೈಸಿನಂಥ ಪರಿಸ್ಥಿತಿಗಳು ಹೇಗೆ ಪುನಸ್ಸ್ಥಾಪಿಸಲ್ಪಡುತ್ತವೆ? (ಬಿ) ಯಾವ ಅರ್ಥದಲ್ಲಿ ಜನರು “ಯೆಹೋವನ ಮಹಿಮೆ”ಯನ್ನು ನೋಡುತ್ತಾರೆ?

5 ಆದರೆ ದೇಶವು ಸದಾಕಾಲ ನಿರ್ಜನವಾಗಿರಲಾರದೆಂದು ಯೆಶಾಯನ ಪ್ರವಾದನೆಯು ಮುಂತಿಳಿಸುತ್ತದೆ. ಅದೊಂದು ಸಾಕ್ಷಾತ್‌ ಪರದೈಸ್‌ ಆಗಿ ರೂಪುಗೊಳ್ಳುವುದು. ಅದಕ್ಕೆ “ಲೆಬನೋನಿನ ಮಹಿಮೆ” ಹಾಗೂ “ಕರ್ಮೆಲಿನ ಮತ್ತು ಶಾರೋನಿನ ವೈಭವ”ವು ಕೊಡಲಾಗುವುದು. * ಹೇಗೆ? ದೇಶಭ್ರಷ್ಟತೆಯಿಂದ ಹಿಂದಿರುಗಿದ ಯೆಹೂದ್ಯರು, ತಮ್ಮ ಹೊಲಗದ್ದೆಗಳಿಗೆ ನೀರು ಹಾಯಿಸಿ ಉಳುವಾಗ, ನೆಲವು ತನ್ನ ಹಿಂದಿನ ಫಲವಂತಿಕೆಯನ್ನು ಪಡೆದುಕೊಳ್ಳುತ್ತದೆ. ಇದರ ಶ್ರೇಯಸ್ಸು ಯೆಹೋವನಿಗೇ ಸಲ್ಲಬೇಕು. ಆತನ ಚಿತ್ತ, ಬೆಂಬಲ ಹಾಗೂ ಆಶೀರ್ವಾದದಿಂದಲೇ ಯೆಹೂದ್ಯರು ಇಂತಹ ಪರದೈಸಿನಂಥ ಪರಿಸ್ಥಿತಿಗಳನ್ನು ಅನುಭವಿಸಶಕ್ತರಾಗಿದ್ದಾರೆ. ತಮ್ಮ ದೇಶದ ರೂಪಾಂತರದಲ್ಲಿ ಯೆಹೋವನ ಹಸ್ತವಿರುವುದನ್ನು ಜನರು ಗ್ರಹಿಸುವಾಗ, ಅವರು “ಯೆಹೋವನ ಮಹಿಮೆಯನ್ನೂ [ತಮ್ಮ] ದೇವರ ವೈಭವವನ್ನೂ” ನೋಡಶಕ್ತರಾಗಿದ್ದಾರೆ.

6. ಯೆಶಾಯನ ಮಾತುಗಳು ಯಾವ ಪ್ರಧಾನ ರೀತಿಯಲ್ಲಿ ನೆರವೇರಿವೆ?

6 ಆದರೂ, ಪುನಸ್ಸ್ಥಾಪಿತ ಇಸ್ರಾಯೇಲ್‌ ದೇಶದಲ್ಲಿ, ಯೆಶಾಯನ ಮಾತುಗಳು ಇನ್ನೂ ಮಹತ್ತರವಾದ ರೀತಿಯಲ್ಲಿ ನೆರವೇರಿದವು. ಆತ್ಮಿಕ ಅರ್ಥದಲ್ಲಿ, ಇಸ್ರಾಯೇಲ್‌ ದೇಶವು ಅನೇಕ ವರ್ಷಗಳಿಂದಲೂ ಒಂದು ಒಣಗಿದ, ಮರುಭೂಮಿಯಂತಹ ಸ್ಥಿತಿಯಲ್ಲಿದೆ. ಪರದೇಶವಾಸಿಗಳು ಬಾಬೆಲಿನಲ್ಲಿದ್ದಾಗ, ಶುದ್ಧಾರಾಧನೆಯು ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟಿತ್ತು. ದೇವಾಲಯವಾಗಲಿ, ಬಲಿಪೀಠವಾಗಲಿ ಇಲ್ಲವೆ ಸಂಘಟಿತ ಯಾಜಕತ್ವವಾಗಲಿ ಅಲ್ಲಿರಲಿಲ್ಲ. ದೈನಂದಿನ ಬಲಿಗಳ ಅರ್ಪಣೆ ನಿಂತುಹೋಗಿತ್ತು. ಆದರೆ ಈಗ, ಯೆಶಾಯನು ಒಂದು ವ್ಯತಿರಿಕ್ತವಾದ ವಿಷಯವನ್ನು ಪ್ರವಾದಿಸುತ್ತಾನೆ. ಜೆರುಬ್ಬಾಬೆಲ್‌, ಎಜ್ರ ಮತ್ತು ನೆಹೆಮೀಯರಂತಹ ಪುರುಷರ ನಾಯಕತ್ವದಲ್ಲಿ, ಇಸ್ರಾಯೇಲಿನ 12 ಗೋತ್ರಗಳ ಪ್ರತಿನಿಧಿಗಳು ಯೆರೂಸಲೇಮಿಗೆ ಹಿಂದಿರುಗಿ, ದೇವಾಲಯವನ್ನು ಪುನಃ ಕಟ್ಟಿ, ಯಾವುದೇ ನಿರ್ಬಂಧಗಳಿಲ್ಲದೆ ಯೆಹೋವನನ್ನು ಆರಾಧಿಸುತ್ತಾರೆ. (ಎಜ್ರ 2:​1, 2) ಇದು ನಿಶ್ಚಯವಾಗಿಯೂ ಒಂದು ಆತ್ಮಿಕ ಪರದೈಸೇ ಸರಿ!

ಆತ್ಮದಲ್ಲಿ ಪ್ರಕಾಶಿಸುತ್ತಾ ಇರುವುದು

7, 8. ಯೆಹೂದಿ ಧರ್ಮಭ್ರಷ್ಟರಿಗೆ ಸಕಾರಾತ್ಮಕ ಮನೋಭಾವದ ಅಗತ್ಯವಿದೆ ಏಕೆ, ಮತ್ತು ಯಾವ ರೀತಿಯಲ್ಲಿ ಯೆಶಾಯನ ಮಾತುಗಳು ಉತ್ತೇಜನವನ್ನು ನೀಡುತ್ತವೆ?

7 ಯೆಶಾಯ 35ನೆಯ ಅಧ್ಯಾಯದ ಮಾತುಗಳಲ್ಲಿ ಆನಂದದ ಘಂಟಾನಾದವಿದೆ. ಪಶ್ಚಾತ್ತಾಪಿ ಜನಾಂಗವು ಒಂದು ಉಜ್ವಲವಾದ ಭವಿಷ್ಯತ್ತನ್ನು ಅನುಭವಿಸುವುದೆಂದು ಪ್ರವಾದಿಯು ಘೋಷಿಸುತ್ತಿದ್ದಾನೆ. ಅವನ ಮಾತಿನಲ್ಲಿ ಗಾಢನಂಬಿಕೆ ಹಾಗೂ ಆಶಾವಾದವಿರುವುದನ್ನು ನಾವು ಗಮನಿಸುತ್ತೇವೆ. ಎರಡು ಶತಮಾನಗಳ ತರುವಾಯ, ಪುನಸ್ಸ್ಥಾಪನೆಯ ಹೊಸ್ತಿಲಲ್ಲಿ ನಿಂತುಕೊಂಡಿರುವ ಪರದೇಶವಾಸಿ ಯೆಹೂದ್ಯರಿಗೂ ತದ್ರೀತಿಯ ಗಾಢನಂಬಿಕೆ ಹಾಗೂ ಆಶಾವಾದದ ಅಗತ್ಯವಿದೆ. ಯೆಶಾಯನ ಮೂಲಕ, ಯೆಹೋವನು ಪ್ರವಾದನಾತ್ಮಕವಾಗಿ ಅವರನ್ನು ಪ್ರೇರಿಸುವುದು: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. ಭಯಭ್ರಾಂತಹೃದಯರಿಗೆ​—⁠ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಹೇಳಿರಿ.”​—ಯೆಶಾಯ 35:3, 4.

8 ಪರದೇಶವಾಸದ ದೀರ್ಘ ಸಮಯವು ಅಂತ್ಯಗೊಂಡಂತೆ, ಇಸ್ರಾಯೇಲ್ಯರು ಚಟುವಟಿಕಾಭರಿತರಾಗುತ್ತಾರೆ. ಬಾಬೆಲಿನ ಮೇಲೆ ಸೇಡು ತೀರಿಸಿಕೊಳ್ಳಲು ಯೆಹೋವನ ಸಾಧನವಾಗಿ ಕಾರ್ಯಮಾಡುವ ಪಾರಸೀಯ ರಾಜನಾದ ಕೋರೆಷನು, ಯೆಹೋವನ ಆರಾಧನೆಯು ಯೆರೂಸಲೇಮಿನಲ್ಲಿ ಪುನಸ್ಸ್ಥಾಪಿಸಲ್ಪಡಬೇಕು ಎಂಬ ಘೋಷಣೆಯನ್ನು ಮಾಡಿದ್ದಾನೆ. (2 ಪೂರ್ವಕಾಲವೃತ್ತಾಂತ 36:​22, 23) ಬಾಬೆಲಿನಿಂದ ಯೆರೂಸಲೇಮಿಗೆ ತಾವು ಕೈಗೊಳ್ಳಲಿರುವ ಅಪಾಯಕರ ಯಾತ್ರೆಯ ತಯಾರಿಗಾಗಿ, ಸಾವಿರಾರು ಹೀಬ್ರು ಕುಟುಂಬಗಳು ಬೇಕಾದ ವ್ಯವಸ್ಥೆಗಳನ್ನು ಮಾಡಬೇಕು. ಯೆರೂಸಲೇಮನ್ನು ತಲಪಿದ ನಂತರ, ಅವರು ಅಲ್ಲಿ ತಂಗಲಿಕ್ಕಾಗಿ ಅಗತ್ಯವಾದ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕು ಮತ್ತು ದೇವಾಲಯವನ್ನೂ ನಗರವನ್ನೂ ಪುನಃ ಕಟ್ಟುವ ಮಹತ್ತರವಾದ ಕೆಲಸಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬಾಬೆಲಿನಲ್ಲಿರುವ ಕೆಲವು ಯೆಹೂದ್ಯರಿಗೆ ಇದು ತೀರ ಅಸಾಧ್ಯವಾದ ಕೆಲಸವೆಂದೇ ತೋರಬಹುದು. ಆದರೆ ಇಂತಹ ಸಮಯದಲ್ಲಿ ಅವರು ದುರ್ಬಲಗೊಂಡು, ಭಯಭೀತರಾಗಬಾರದಿತ್ತು. ಅದರ ಬದಲು, ಯೆಹೂದ್ಯರು ಒಬ್ಬರನ್ನೊಬ್ಬರು ಬಲಪಡಿಸಿ, ಯೆಹೋವನಲ್ಲಿ ಭರವಸೆಯುಳ್ಳವರಾಗಿರಬೇಕಿತ್ತು. ಹೀಗೆ ಮಾಡುವ ಮೂಲಕ ಅವರು ರಕ್ಷಿಸಲ್ಪಡುವರೆಂಬ ಆಶ್ವಾಸನೆಯನ್ನು ಯೆಹೋವನು ಕೊಡುತ್ತಾನೆ.

9. ಹಿಂದಿರುಗುವ ಯೆಹೂದ್ಯರಿಗೆ ಯಾವ ಮಹಾನ್‌ ವಾಗ್ದಾನವು ಮಾಡಲಾಗುತ್ತದೆ?

9 ಬಾಬೆಲಿನ ಸೆರೆವಾಸದಿಂದ ಬಿಡುಗಡೆ ಹೊಂದಿದವರು ಸಕಾರಣದಿಂದಲೇ ಆನಂದಿಸುತ್ತಾರೆ. ಅದೇಕೆಂದರೆ, ಯೆರೂಸಲೇಮಿಗೆ ಹಿಂದಿರುಗಿದ ಬಳಿಕ, ಅವರು ಉಜ್ವಲವಾದ ಭವಿಷ್ಯತ್ತನ್ನು ಅನುಭವಿಸಲಿದ್ದಾರೆ. ಯೆಶಾಯನು ಮುಂತಿಳಿಸುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”​—ಯೆಶಾಯ 35:5, 6ಎ.

10, 11. ಹಿಂದಿರುಗುವ ಯೆಹೂದ್ಯರಿಗೆ, ಯೆಶಾಯನ ಮಾತುಗಳು ಆತ್ಮಿಕ ಅರ್ಥವನ್ನು ಪಡೆದಿರಬೇಕು ಏಕೆ, ಮತ್ತು ಅವು ಏನನ್ನು ಸೂಚಿಸುತ್ತವೆ?

10 ಯೆಹೋವನು ತನ್ನ ಜನರ ಆತ್ಮಿಕ ಪರಿಸ್ಥಿತಿಯ ಬಗ್ಗೆ ಚಿಂತಿಸುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಅವರು ಈ ಮೊದಲು ಧರ್ಮಭ್ರಷ್ಟರಾಗಿ ನಡೆದುಕೊಂಡ ಕಾರಣದಿಂದಲೇ 70 ವರ್ಷಗಳ ಪರದೇಶವಾಸವನ್ನು ಅನುಭವಿಸಬೇಕಾಯಿತು. ಹಾಗಿದ್ದರೂ, ತನ್ನ ಜನರಿಗೆ ಶಿಕ್ಷೆವಿಧಿಸುವ ನೆಪದಲ್ಲಿ, ಯೆಹೋವನು ಅವರನ್ನು ಕುರುಡರನ್ನಾಗಿ, ಕಿವುಡರನ್ನಾಗಿ, ಕುಂಟರನ್ನಾಗಿ ಮತ್ತು ಮೂಕರನ್ನಾಗಿ ಮಾಡಲಿಲ್ಲ. ಆದಕಾರಣ, ಇಸ್ರಾಯೇಲ್‌ ಜನಾಂಗದ ಪುನಸ್ಸ್ಥಾಪನೆಯು, ಶಾರೀರಿಕ ಬಲಹೀನತೆಗಳ ಗುಣಪಡಿಸುವಿಕೆಯನ್ನು ಕೇಳಿಕೊಳ್ಳುವುದಿಲ್ಲ. ಅದರ ಬದಲು, ಕಳೆದುಹೋದದ್ದನ್ನು ಅಂದರೆ ಆತ್ಮಿಕ ಆರೋಗ್ಯವನ್ನೇ ಯೆಹೋವನು ಪುನಸ್ಸ್ಥಾಪಿಸುವನು.

11 ಆತ್ಮಿಕ ಜ್ಞಾನೇಂದ್ರಿಯಗಳನ್ನು ಮತ್ತೆ ಪಡೆದುಕೊಳ್ಳುವ ಅರ್ಥದಲ್ಲಿ ಪಶ್ಚಾತ್ತಾಪಿ ಯೆಹೂದ್ಯರು ಗುಣಮುಖರಾಗುತ್ತಾರೆ. ಅವರು ಆತ್ಮಿಕ ದೃಷ್ಟಿಯನ್ನು ಮತ್ತು ಯೆಹೋವನ ವಾಕ್ಯವನ್ನು ಕೇಳಿಸಿಕೊಳ್ಳುವ, ಅದಕ್ಕೆ ವಿಧೇಯರಾಗುವ ಮತ್ತು ಅದರ ಬಗ್ಗೆ ಮಾತಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ. ಯೆಹೋವನಿಗೆ ಆಪ್ತರಾಗಿ ಉಳಿಯುವ ಅಗತ್ಯವನ್ನು ಅವರು ಮನಗಾಣುತ್ತಾರೆ. ಅವರು ತಮ್ಮ ಉತ್ತಮ ನಡತೆಯಿಂದ ದೇವರ ಆನಂದಭರಿತ ಸ್ತುತಿಯಲ್ಲಿ “ಹರ್ಷಧ್ವನಿಗೈಯುತ್ತಾರೆ.” ಈ ಮೊದಲು ‘ಕುಂಟರಾಗಿದ್ದವರು’ ಯೆಹೋವನ ಆರಾಧನೆಯಲ್ಲಿ ಉತ್ಸುಕರೂ ಬಲಶಾಲಿಗಳೂ ಆಗುತ್ತಾರೆ. ಸಾಂಕೇತಿಕ ಅರ್ಥದಲ್ಲಿ, ಅವರು ‘ಜಿಂಕೆಯಂತೆ ಹಾರುತ್ತಾರೆ.’

ಯೆಹೋವನು ತನ್ನ ಜನರಿಗೆ ಚೈತನ್ಯವನ್ನು ನೀಡುತ್ತಾನೆ

12. ಯಾವ ಹಂತದ ವರೆಗೆ ಯೆಹೋವನು ಆ ದೇಶಕ್ಕೆ ನೀರಿನ ವ್ಯವಸ್ಥೆಯನ್ನು ಮಾಡುವನು?

12 ನೀರಿಲ್ಲದ ಪರದೈಸನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಏದೆನಿನ ಪರದೈಸಿನಲ್ಲಿ ನೀರು ಯಥೇಷ್ಟವಾಗಿತ್ತು. (ಆದಿಕಾಂಡ 2:​10-14) ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇಶದಲ್ಲಿಯೂ ‘ತಗ್ಗುಗಳಲ್ಲಾಗಲಿ ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬಾವಿಗಳಲ್ಲಿಯೂ ಬುಗ್ಗೆಗಳಿಂದಲೂ ನೀರು ಉಕ್ಕುತ್ತಿತ್ತು.’ (ಧರ್ಮೋಪದೇಶಕಾಂಡ 8:⁠7) ಸೂಕ್ತವಾಗಿಯೇ ಯೆಶಾಯನು ಈ ಚೈತನ್ಯದಾಯಕ ವಾಗ್ದಾನವನ್ನು ಮಾಡುತ್ತಾನೆ: “ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು; ನರಿಗಳು ಮಲಗುತ್ತಿದ್ದ ಹಕ್ಕೆಯು ಆಪುಜಂಬುಗಳ ಪ್ರದೇಶವಾಗುವದು.” (ಯೆಶಾಯ 35:6ಬಿ, 7) ಒಂದಾನೊಂದು ಕಾಲದಲ್ಲಿ ಗುಳ್ಳೆನರಿಗಳು ಓಡಾಡುತ್ತಿದ್ದ ಆ ನಿರ್ಜನ ಪ್ರದೇಶಗಳನ್ನು ಇಸ್ರಾಯೇಲ್ಯರು ಪುನಃ ಸಾಗುವಳಿ ಮಾಡಿದಾಗ, ಎಲ್ಲೆಡೆಯೂ ಹಚ್ಚನೆಯ ಸಸ್ಯರಾಶಿಯು ಸೊಂಪಾಗಿ ಬೆಳೆಯುವುದು. ದೂಳಿನಿಂದ ತುಂಬಿದ ಶುಷ್ಕ ನೆಲವು “ಜವುಗು” ಪ್ರದೇಶವಾಗುವುದು, ಮತ್ತು ಅಲ್ಲಿ ಜಂಬುಹುಲ್ಲು ಹಾಗೂ ಆಪುಹುಲ್ಲು ಬೆಳೆಯುವುದು.​—⁠ಯೋಬ 8:⁠11.

13. ಪುನಸ್ಸ್ಥಾಪಿತ ಜನಾಂಗಕ್ಕೆ ಯಾವ ಆತ್ಮಿಕ ನೀರು ಹೇರಳವಾಗಿ ಲಭ್ಯವಿರುವುದು?

13 ಈ ನೀರಿಗಿಂತಲೂ ಹೆಚ್ಚಾಗಿ, ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರು ಸತ್ಯದ ಆತ್ಮಿಕ ನೀರನ್ನು ಹೇರಳವಾಗಿ ಪಡೆದುಕೊಳ್ಳುವರು. ಯೆಹೋವನು ತನ್ನ ವಾಕ್ಯದ ಮೂಲಕ ಜ್ಞಾನ, ಉತ್ತೇಜನ ಮತ್ತು ಸಾಂತ್ವನವನ್ನು ನೀಡುವನು. ಅಲ್ಲದೆ, ನಂಬಿಗಸ್ತ ಹಿರಿಯ ಪುರುಷರು ಮತ್ತು ಅಧಿಪತಿಗಳು, “ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರ” ಇರುವರು. (ಯೆಶಾಯ 32:​1, 2) ಶುದ್ಧಾರಾಧನೆಯನ್ನು ಪ್ರವರ್ಧಿಸುವ ಎಜ್ರ, ಹಗ್ಗಾಯ, ಯೇಷೂವ, ನೆಹೆಮೀಯ, ಜೆಕರ್ಯ, ಜೆರುಬ್ಬಾಬೆಲ್‌ ಅಂತಹವರು, ಯೆಶಾಯನ ಪ್ರವಾದನೆಯ ನೆರವೇರಿಕೆಗೆ ಜೀವಂತ ಸಾಕ್ಷಿಗಳಾಗಿರುವರು.​—⁠ಎಜ್ರ 5:​1, 2; 7:​6, 10; ನೆಹೆಮೀಯ 12:⁠47.

“ಪರಿಶುದ್ಧ ಮಾರ್ಗ”

14. ಬಾಬೆಲ್‌ ಮತ್ತು ಯೆರೂಸಲೇಮಿನ ನಡುವಿನ ಪ್ರಯಾಣದ ಬಗ್ಗೆ ವರ್ಣಿಸಿರಿ.

14 ಈ ದೇಶಭ್ರಷ್ಟ ಯೆಹೂದ್ಯರು ಇಂತಹ ಶಾರೀರಿಕ ಹಾಗೂ ಆತ್ಮಿಕ ಪರದೈಸಿನ ಪರಿಸ್ಥಿತಿಗಳನ್ನು ಅನುಭವಿಸುವ ಮೊದಲು, ಬಾಬೆಲಿನಿಂದ ಯೆರೂಸಲೇಮಿಗೆ ದೀರ್ಘವಾದ ಹಾಗೂ ಅಪಾಯಕರವಾದ ಪಯಣವನ್ನು ಬೆಳೆಸಬೇಕು. ನೇರವಾದ ಮಾರ್ಗದಲ್ಲಿ ಮುಂದುವರಿದರೆ, ನೀರೂ ಇಲ್ಲದ ಆಶ್ರಯವೂ ಇಲ್ಲದ 800 ಕಿಲೊಮೀಟರುಗಳ ಅಂತರವನ್ನು ಅವರು ಕ್ರಮಿಸಬೇಕಾಗುವುದು. ಆದರೆ, ಇದಕ್ಕಿಂತಲೂ ಕಡಿಮೆ ಸಮಸ್ಯೆಗಳುಳ್ಳ ದಾರಿಯನ್ನು ಅವರು ಆರಿಸಿಕೊಂಡರೆ, 1,600 ಕಿಲೊಮೀಟರುಗಳ ಅಂತರವನ್ನು ಕ್ರಮಿಸಬೇಕಾಗುವುದು. ಈ ಎರಡು ಮಾರ್ಗಗಳಲ್ಲಿ ಯಾವುದನ್ನು ಆಯ್ದುಕೊಂಡರೂ, ಅವರು ಅನೇಕ ತಿಂಗಳುಗಳ ಕಾಲ ತೀವ್ರವಾದ ಹವಾಮಾನಕ್ಕೆ ತುತ್ತಾಗಿ, ಕಾಡು ಮೃಗಗಳನ್ನು ಹಾಗೂ ಮೃಗದಂತಹ ಜನರನ್ನೂ ಎದುರುಗೊಳ್ಳುವ ಅಪಾಯಕ್ಕೆ ಗುರಿಯಾಗುವರು. ಹಾಗಿದ್ದರೂ, ಯೆಶಾಯನ ಪ್ರವಾದನೆಯಲ್ಲಿ ನಂಬಿಕೆಯುಳ್ಳವರು ಇದರಿಂದ ಬಹಳ ಚಿಂತೆಗೀಡಾಗುವುದಿಲ್ಲ. ಏಕೆ?

15, 16. (ಎ) ನಂಬಿಗಸ್ತ ಯೆಹೂದ್ಯರು ಮನೆಗೆ ಹಿಂದಿರುಗುವಾಗ ಯಾವ ರಕ್ಷಣೆಯನ್ನು ಯೆಹೋವನು ಒದಗಿಸುತ್ತಾನೆ? (ಬಿ) ಬೇರೆ ಯಾವ ಅರ್ಥದಲ್ಲಿ ಯೆಹೋವನು ಯೆಹೂದ್ಯರಿಗೆ ಸುರಕ್ಷಿತವಾದ ರಾಜಮಾರ್ಗವನ್ನು ಒದಗಿಸುತ್ತಾನೆ?

15 ಏಕೆಂದರೆ, ಯೆಶಾಯನ ಮೂಲಕ ಯೆಹೋವನು ವಾಗ್ದಾನಿಸುವುದು: “ಅಲ್ಲಿ ರಾಜಮಾರ್ಗವಿರುವದು, ಹೌದು [ಹೋಗಿಬರುವ] ದಾರಿ; ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವದು; ಯಾವ ಅಶುದ್ಧನೂ ಅಲ್ಲಿ ನಡೆಯನು, ಅದು ದೇವಜನರಿಗಾಗಿಯೇ ಇರುವದು, ಅಲ್ಲಿ ಹೋಗುವ ಮೂಢನೂ ದಾರಿತಪ್ಪನು. ಸಿಂಹವು ಅಲ್ಲಿರದು, ಕ್ರೂರಜಂತು ಅಲ್ಲಿ ಸೇರದು, ಕಾಣುವದೇ ಇಲ್ಲ; ಬಿಡುಗಡೆಯಾದವರೇ ಅಲ್ಲಿ ನಡೆಯುವರು.” (ಯೆಶಾಯ 35:8, 9) ಯೆಹೋವನು ತನ್ನ ಜನರನ್ನು ಸನ್ಮಾರ್ಗಕ್ಕೆ ತಂದಿದ್ದಾನೆ! ಅವರು ‘ದೇವಜನ’ರಾಗಿದ್ದಾರೆ ಮತ್ತು ಸ್ವದೇಶಕ್ಕೆ ಹಿಂದಿರುಗುವಾಗ ಅವರಿಗೆ ರಕ್ಷಣೆಯನ್ನು ನೀಡುವ ಖಾತ್ರಿಯನ್ನೂ ಆತನು ನೀಡಿದ್ದಾನೆ. ಇದರರ್ಥ, ಬಾಬೆಲಿನಿಂದ ಯೆರೂಸಲೇಮಿನ ವರೆಗೆ ಎತ್ತರವಾದ, ಬೇಲಿಹಾಕಲ್ಪಟ್ಟ ಅಕ್ಷರಾರ್ಥವಾದ ದಾರಿಯನ್ನು ಯೆಹೋವನು ಸಿದ್ಧಪಡಿಸಿದ್ದಾನೆಂಬುದೊ? ಇಲ್ಲ, ಜನರು ಪ್ರಯಾಣಮಾಡುವಾಗ ಯೆಹೋವನು ನೀಡಲಿರುವ ಸಂರಕ್ಷಣೆಯು ಎಷ್ಟು ನಿಶ್ಚಿತವಾಗಿರುವುದೆಂದರೆ, ಅವರೊಂದು ರಾಜಮಾರ್ಗದಲ್ಲಿ ನಡೆಯುತ್ತಿರುವರೊ ಎಂಬಂತೆ ಅದಿರುವುದು.​—⁠ಹೋಲಿಸಿ ಕೀರ್ತನೆ 91:​1-16.

16 ಈ ಯೆಹೂದ್ಯರು ಆತ್ಮಿಕ ಅಪಾಯಗಳಿಂದಲೂ ರಕ್ಷಿಸಲ್ಪಟ್ಟಿದ್ದಾರೆ. ಈ ಸಾಂಕೇತಿಕ ರಾಜಮಾರ್ಗವು, “ಪರಿಶುದ್ಧ ಮಾರ್ಗ”ವಾಗಿದೆ. ಪವಿತ್ರ ವಿಷಯಗಳನ್ನು ಕಡೆಗಣಿಸುವವರು ಇಲ್ಲವೆ ಆತ್ಮಿಕ ರೀತಿಯಲ್ಲಿ ಅಶುದ್ಧರಾಗಿರುವವರು ಆ ಮಾರ್ಗದಲ್ಲಿ ಸಂಚರಿಸುವ ಅರ್ಹತೆಯನ್ನು ಪಡೆದಿಲ್ಲ. ಪುನಸ್ಸ್ಥಾಪಿತ ದೇಶದಲ್ಲಿ ಅಂತಹವರ ಅಗತ್ಯವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಯಾರಿಗೆ ಈ ರಾಜಮಾರ್ಗದಲ್ಲಿ ನಡೆಯುವ ಅನುಮತಿಯಿದೆಯೊ ಅವರು ಸರಿಯಾದ ಉದ್ದೇಶವನ್ನೇ ಹೊಂದಿರುವ ಜನರಾಗಿದ್ದಾರೆ. ಅವರು ದೇಶಾಭಿಮಾನದಿಂದಲೊ ಅಥವಾ ವೈಯಕ್ತಿಕ ಅಭಿರುಚಿಗಳನ್ನು ಬೆನ್ನಟ್ಟಲಿಕ್ಕಾಗಿಯೊ ಯೆಹೂದ ಮತ್ತು ಯೆರೂಸಲೇಮಿಗೆ ಹಿಂದಿರುಗುತ್ತಿಲ್ಲ. ಬದಲಿಗೆ ಆ ದೇಶದಲ್ಲಿ ಯೆಹೋವನ ಶುದ್ಧಾರಾಧನೆಯನ್ನು ಪುನಃ ಸ್ಥಾಪಿಸುವ ಪ್ರಧಾನ ಕಾರಣಕ್ಕಾಗಿಯೇ ಅಲ್ಲಿಗೆ ಹಿಂದಿರುಗುತ್ತಿದ್ದಾರೆಂಬುದು ಆತ್ಮಿಕ ಮನೋವೃತ್ತಿಯ ಯೆಹೂದ್ಯರಿಗೆ ಗೊತ್ತಿದೆ.​—⁠ಎಜ್ರ 1:​1-3.

ಯೆಹೋವನ ಜನರು ಉಲ್ಲಾಸಿಸುತ್ತಾರೆ

17. ಅವರ ದೀರ್ಘ ಪರದೇಶವಾಸದ ಸಮಯದಲ್ಲಿ, ಯೆಶಾಯನ ಪ್ರವಾದನೆಯು ನಂಬಿಗಸ್ತ ಯೆಹೂದ್ಯರಿಗೆ ಹೇಗೆ ಸಾಂತ್ವನ ನೀಡಿದೆ?

17 ಯೆಶಾಯನ ಪ್ರವಾದನೆಯ 35ನೆಯ ಅಧ್ಯಾಯವು, ಒಂದು ಆನಂದಕರ ಹೇಳಿಕೆಯೊಂದಿಗೆ ಕೊನೆಗೊಳ್ಳುತ್ತದೆ: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.” (ಯೆಶಾಯ 35:10) ಪರದೇಶವಾಸಿಗಳಾಗಿದ್ದ ಯೆಹೂದ್ಯರು, ಸೆರೆಯಲ್ಲಿದ್ದಾಗ ಈ ಪ್ರವಾದನೆಯಿಂದ ಸಾಂತ್ವನ ಹಾಗೂ ನಿರೀಕ್ಷೆಯನ್ನು ಕಂಡುಕೊಂಡಿದ್ದರೂ, ಅದು ಹೇಗೆ ನೆರೆವೇರುವುದೆಂದು ಯೋಚಿಸಿದ್ದಿರಬಹುದು. ಈ ಪ್ರವಾದನೆಯ ಅನೇಕ ವಿಷಯಗಳು ಅವರಿಗೆ ಅರ್ಥವಾಗದೇ ಇದ್ದಿರಬಹುದು. ಆದರೂ ಅವರು “ಹಿಂದಿರುಗಿ . . . ಚೀಯೋನಿಗೆ ಸೇರುವರು” ಎಂಬುದು ಮಾತ್ರ ಸುಸ್ಪಷ್ಟವಾಗಿತ್ತು.

18. ಬಾಬೆಲಿನ ಗೋಳಾಟ ಮತ್ತು ನಿಟ್ಟುಸಿರು, ಪುನಸ್ಸ್ಥಾಪಿತ ದೇಶದಲ್ಲಿ ಸಂತೋಷವೂ ಉಲ್ಲಾಸವೂ ಆಗಿ ಬದಲಾಗುವುದು ಹೇಗೆ?

18 ಆದಕಾರಣ ಸಾ.ಶ.ಪೂ. 537ರಲ್ಲಿ, ಸುಮಾರು 50,000 ಪುರುಷರು (ಇದರಲ್ಲಿ 7,000 ಗುಲಾಮರು ಸೇರಿದ್ದಾರೆ), ಸ್ತ್ರೀಯರು ಮತ್ತು ಮಕ್ಕಳು ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಟ್ಟು, ನಾಲ್ಕು ತಿಂಗಳುಗಳ ಪ್ರಯಾಣವನ್ನು ಮಾಡಿ ಯೆರೂಸಲೇಮಿಗೆ ಹಿಂದಿರುಗುತ್ತಾರೆ. (ಎಜ್ರ 2:​64, 65) ಕೆಲವೇ ತಿಂಗಳುಗಳಲ್ಲಿ, ದೇವಾಲಯದ ಪೂರ್ಣ ನಿರ್ಮಾಣಕ್ಕೆ ಅಡಿಗಲ್ಲಾಗಿ ಯೆಹೋವನ ಬಲಿಪೀಠವನ್ನು ಕಟ್ಟಲಾಗುತ್ತದೆ. ಆಗ 200 ವರ್ಷಗಳ ಹಿಂದೆ ಮಾಡಲ್ಪಟ್ಟ ಯೆಶಾಯನ ಪ್ರವಾದನೆಯು ನೆರವೇರುತ್ತದೆ. ಬಾಬೆಲಿನಲ್ಲಿ ಗೋಳಾಡುತ್ತಾ ನಿಟ್ಟುಸಿರುಬಿಡುತ್ತಾ ಇದ್ದ ಜನಾಂಗ ಈಗ ಪುನಸ್ಸ್ಥಾಪಿತ ದೇಶದಲ್ಲಿ ಹರ್ಷೋಲ್ಲಾಸವನ್ನು ಅನುಭವಿಸುತ್ತಿದೆ. ಯೆಹೋವನು ತನ್ನ ಮಾತನ್ನು ನೆರವೇರಿಸಿದ್ದಾನೆ. ಶಾಬ್ದಿಕ ಹಾಗೂ ಆತ್ಮಿಕ ಅರ್ಥದಲ್ಲಿ ಪರದೈಸ್‌ ಪುನಸ್ಸ್ಥಾಪಿಸಲ್ಪಟ್ಟಿದೆ!

ಒಂದು ಹೊಸ ಜನಾಂಗದ ಜನನ

19. ಸಾ.ಶ.ಪೂ. ಆರನೆಯ ಶತಮಾನದಲ್ಲಿ ಯೆಶಾಯನ ಪ್ರವಾದನೆಯು ಸೀಮಿತವಾದ ರೀತಿಯಲ್ಲಿ ಮಾತ್ರ ನೆರವೇರಿತೆಂದು ಏಕೆ ಹೇಳಸಾಧ್ಯವಿದೆ?

19 ಸಾ.ಶ.ಪೂ. ಆರನೆಯ ಶತಮಾನದಲ್ಲಿ ಸಂಭವಿಸಿದ ಯೆಶಾಯ 35ನೆಯ ಅಧ್ಯಾಯದ ನೆರವೇರಿಕೆಯು ಸೀಮಿತವಾಗಿತ್ತು. ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರು ಪರದೈಸಿನಂಥ ಪರಿಸ್ಥಿತಿಗಳನ್ನು ಶಾಶ್ವತವಾಗಿ ಅನುಭವಿಸಲಿಲ್ಲ. ಸಕಾಲದಲ್ಲಿ, ಸುಳ್ಳು ಧಾರ್ಮಿಕ ಬೋಧನೆಗಳು ಮತ್ತು ರಾಷ್ಟ್ರೀಯಭಾವವು ಶುದ್ಧಾರಾಧನೆಯನ್ನು ಕಲುಷಿತಗೊಳಿಸಿತು. ಆತ್ಮಿಕ ರೀತಿಯಲ್ಲಿ, ಯೆಹೂದ್ಯರು ಪುನಃ ಗೋಳಾಡುತ್ತಾ ನಿಟ್ಟುಸಿರುಬಿಡುತ್ತಾ ಇದ್ದರು. ಕೊನೆಗೆ ಯೆಹೋವನು ಅವರನ್ನು ತಿರಸ್ಕರಿಸಿಬಿಟ್ಟನು. (ಮತ್ತಾಯ 21:43) ಅವರು ಮತ್ತೆ ಮತ್ತೆ ಅವಿಧೇಯರಾಗುವುದರಿಂದ, ಯೆಹೋವನು ವಾಗ್ದಾನಿಸಿದ ಹರ್ಷೋಲ್ಲಾಸವನ್ನು ಅವರು ಶಾಶ್ವತವಾಗಿ ಅನುಭವಿಸಲಿಲ್ಲ. ಈ ಕಾರಣ, ಯೆಶಾಯ 35ನೆಯ ಅಧ್ಯಾಯಕ್ಕೆ ಇನ್ನೂ ಹೆಚ್ಚಿನ ನೆರವೇರಿಕೆಯಿದೆ ಎಂಬುದು ಈ ಎಲ್ಲ ವಿಷಯಗಳಿಂದ ಸ್ಪಷ್ಟವಾಗುತ್ತದೆ.

20. ಸಾ.ಶ. ಪ್ರಥಮ ಶತಮಾನದಲ್ಲಿ ಯಾವ ಹೊಸ ಇಸ್ರಾಯೇಲು ಅಸ್ತಿತ್ವಕ್ಕೆ ಬಂದಿತು?

20 ಯೆಹೋವನ ನೇಮಿತ ಸಮಯದಲ್ಲಿ, ಮತ್ತೊಂದು ಇಸ್ರಾಯೇಲ್‌ ಅಂದರೆ ಆತ್ಮಿಕ ಇಸ್ರಾಯೇಲ್‌ ಹುಟ್ಟಿಕೊಂಡಿತು. (ಗಲಾತ್ಯ 6:16) ಈ ಹೊಸ ಇಸ್ರಾಯೇಲಿನ ಜನನಕ್ಕೆ, ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅಸ್ತಿವಾರವನ್ನು ಹಾಕಿದನು. ಅವನು ಶುದ್ಧಾರಾಧನೆಯನ್ನು ಪುನಃ ಸ್ಥಾಪಿಸಿದನು ಮಾತ್ರವಲ್ಲ, ತನ್ನ ಬೋಧನೆಯ ಮೂಲಕ ಸತ್ಯದ ನೀರು ಪುನಃ ಹರಿಯುವಂತೆಯೂ ಮಾಡಿದನು. ಅವನು ಶಾರೀರಿಕ ಹಾಗೂ ಆತ್ಮಿಕ ಅನಾರೋಗ್ಯಕ್ಕೆ ತುತ್ತಾದವರನ್ನು ಗುಣಪಡಿಸಿದನು. ದೇವರ ರಾಜ್ಯದ ಸುವಾರ್ತೆಯು ಎಲ್ಲೆಡೆಯೂ ಘೋಷಿಸಲ್ಪಟ್ಟಂತೆ, ಹರ್ಷಧ್ವನಿಯು ಮೊಳಗಿತು. ತನ್ನ ಮರಣ ಹಾಗೂ ಪುನರುತ್ಥಾನವಾಗಿ ಏಳು ವಾರಗಳು ಗತಿಸಿದ ಬಳಿಕ, ಮಹಿಮಾನ್ವಿತ ಯೇಸು, ಕ್ರೈಸ್ತ ಸಭೆಯನ್ನು ಸ್ಥಾಪಿಸಿದನು. ಆತ್ಮಿಕ ಇಸ್ರಾಯೇಲ್ಯರನ್ನು ಒಳಗೊಂಡ ಈ ಸಭೆಯಲ್ಲಿ, ಯೇಸುವಿನ ರಕ್ತದಿಂದ ವಿಮೋಚನೆ ಪಡೆದ ಯೆಹೂದ್ಯರು ಮತ್ತು ಇತರರು ಇದ್ದಾರೆ. ಇವರು ದೇವರ ಆತ್ಮಿಕ ಪುತ್ರರಾಗಿ ಮತ್ತು ಯೇಸುವಿನ ಸಹೋದರರಾಗಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾರೆ.​—⁠ಅ. ಕೃತ್ಯಗಳು 2:​1-4; ರೋಮಾಪುರ 8:​16, 17; 1 ಪೇತ್ರ 1:​18, 19.

21. ಪ್ರಥಮ ಶತಮಾನದ ಕ್ರೈಸ್ತ ಸಭೆಯ ಸಂಬಂಧದಲ್ಲಿ, ಯಾವ ಘಟನೆಗಳನ್ನು ಯೆಶಾಯನ ಪ್ರವಾದನೆಯ ನೆರವೇರಿಕೆಯೆಂದು ವೀಕ್ಷಿಸಬಹುದು?

21 ಆತ್ಮಿಕ ಇಸ್ರಾಯೇಲಿನ ಸದಸ್ಯರಿಗೆ ಬರೆಯುವಾಗ, ಅಪೊಸ್ತಲ ಪೌಲನು ಯೆಶಾಯ 35:3ರ ಮಾತುಗಳನ್ನು ಸೂಚಿಸುತ್ತಾ ಹೇಳಿದ್ದು: “ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುದಾರಿಸಿಕೊಳ್ಳಿರಿ.” (ಇಬ್ರಿಯ 12:12) ಹಾಗಾದರೆ, ಸಾ.ಶ. ಪ್ರಥಮ ಶತಮಾನದಲ್ಲಿ, ಯೆಶಾಯ 35ನೆಯ ಅಧ್ಯಾಯದ ಮಾತುಗಳು ಸ್ಪಷ್ಟವಾಗಿ ನೆರವೇರಿದವು. ಅಕ್ಷರಾರ್ಥವಾಗಿ, ಯೇಸು ಮತ್ತು ಅವನ ಶಿಷ್ಯರು, ಕುರುಡರಿಗೆ ದೃಷ್ಟಿಯನ್ನು ಮತ್ತು ಕಿವುಡರಿಗೆ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಅದ್ಭುತಕರವಾಗಿ ನೀಡಿದರು. ಅಲ್ಲದೆ ‘ಕುಂಟರು’ ನಡೆಯುವಂತೆ ಮತ್ತು ಮೂಕರು ಮಾತಾಡುವಂತೆಯೂ ಅವರು ಮಾಡಶಕ್ತರಾಗಿದ್ದರು. (ಮತ್ತಾಯ 9:32; 11:5; ಲೂಕ 10:⁠9) ಎಲ್ಲಕ್ಕಿಂತಲೂ ಮಿಗಿಲಾಗಿ, ಸಹೃದಯಿಗಳು ಸುಳ್ಳು ಧರ್ಮದ ಪಾಶದಿಂದ ತಪ್ಪಿಸಿಕೊಂಡು, ಕ್ರೈಸ್ತ ಸಭೆಯ ಮಧ್ಯದಲ್ಲಿ ಆತ್ಮಿಕ ಪರದೈಸಿನ ಪರಿಸ್ಥಿತಿಗಳನ್ನು ಅನುಭವಿಸತೊಡಗಿದರು. (ಯೆಶಾಯ 52:11; 2 ಕೊರಿಂಥ 6:17) ಅದರೊಂದಿಗೆ ಒಂದು ಸಕಾರಾತ್ಮಕ ಹಾಗೂ ಧೀರ ಮನೋಭಾವವು ಸಹ ಬಹಳ ಅಗತ್ಯವೆಂಬುದನ್ನು ಬಾಬೆಲಿನಿಂದ ಹಿಂದಿರುಗುತ್ತಿದ್ದ ಯೆಹೂದ್ಯರು ಕಂಡುಕೊಂಡಂತೆ ಇವರೂ ಕಂಡುಕೊಂಡರು.​—⁠ರೋಮಾಪುರ 12:⁠11.

22. ಆಧುನಿಕ ಸಮಯಗಳಲ್ಲಿ, ಸತ್ಯವನ್ನು ಅರಸುವ ಯಥಾರ್ಥ ಕ್ರೈಸ್ತರು ಬಾಬೆಲಿನ ಸೆರೆವಾಸಕ್ಕೆ ಒಳಗಾದದ್ದು ಹೇಗೆ?

22 ನಮ್ಮ ದಿನದ ಕುರಿತೇನು? ಯೆಶಾಯನ ಪ್ರವಾದನೆಗೆ ಇಂದಿನ ಕ್ರೈಸ್ತ ಸಭೆಯ ಸಂಬಂಧದಲ್ಲಿ ಹೆಚ್ಚು ಪೂರ್ಣವಾದ ಮತ್ತೊಂದು ನೆರವೇರಿಕೆ ಇದೆಯೊ? ಹೌದು, ಇದೆ. ಅಪೊಸ್ತಲರ ಮರಣದ ನಂತರ, ಸತ್ಯ ಅಭಿಷಿಕ್ತ ಕ್ರೈಸ್ತರ ಸಂಖ್ಯೆಯು ಗುರುತರವಾಗಿ ಕಡಿಮೆಯಾಯಿತು, ಮತ್ತು ಸುಳ್ಳು ಕ್ರೈಸ್ತರು ಅಂದರೆ ‘ಹಣಜಿಗಳು’ ಎಲ್ಲೆಲ್ಲೂ ಕಾಣಿಸಿಕೊಂಡವು. (ಮತ್ತಾಯ 13:​36-43; ಅ. ಕೃತ್ಯಗಳು 20:30; 2 ಪೇತ್ರ 2:​1-3) 19ನೆಯ ಶತಮಾನದಲ್ಲೂ, ಕೆಲವು ಪ್ರಾಮಾಣಿಕ ಹೃದಯದವರು ಕ್ರೈಸ್ತಪ್ರಪಂಚದಿಂದ ಬೇರ್ಪಟ್ಟು ಶುದ್ಧಾರಾಧನೆಯನ್ನು ಅರಸಲಾರಂಭಿಸಿದಾಗ, ಅವರ ತಿಳುವಳಿಕೆಯಲ್ಲೂ ಅಶಾಸ್ತ್ರೀಯ ಬೋಧನೆಗಳ ಕಲೆಗಳಿದ್ದವು. 1914ರಲ್ಲಿ ಯೇಸು ಮೆಸ್ಸೀಯ ರಾಜನಾಗಿ ಸಿಂಹಾಸನವನ್ನೇರಿದನು. ಆದರೆ ಇದಾದ ಸ್ವಲ್ಪದರಲ್ಲೇ, ಸತ್ಯವನ್ನು ಅರಸುತ್ತಿದ್ದ ಈ ಯಥಾರ್ಥವಂತರ ಸನ್ನಿವೇಶವು ಬಹಳ ಕರಾಳವಾಗಿ ತೋರಿತು. ಮತ್ತೊಂದು ಪ್ರವಾದನೆಯನ್ನು ನೆರವೇರಿಸುತ್ತಾ, ರಾಷ್ಟ್ರಗಳು “ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ”ದವು ಮಾತ್ರವಲ್ಲ, ಈ ಪ್ರಾಮಾಣಿಕ ಕ್ರೈಸ್ತರು ಕೈಗೊಂಡಿದ್ದ ಸುವಾರ್ತೆ ಸಾರುವ ಚಟುವಟಿಕೆಯನ್ನೂ ನಿಗ್ರಹಿಸಿದವು. ಹೀಗೆ ಅವರು ಬಾಬೆಲಿನ ಸೆರೆವಾಸಕ್ಕೆ ಒಳಗಾದರು.​—⁠ಪ್ರಕಟನೆ 11:​7, 8.

23, 24. ಯಾವ ವಿಧಗಳಲ್ಲಿ ಯೆಶಾಯನ ಮಾತುಗಳು 1919ರಿಂದ ದೇವಜನರ ಮಧ್ಯೆ ನೆರವೇರಿವೆ?

23 ಆದರೆ, 1919ರಲ್ಲಿ ಪರಿಸ್ಥಿತಿಯು ಬದಲಾಯಿತು. ಯೆಹೋವನು ತನ್ನ ಜನರನ್ನು ದಾಸತ್ವದಿಂದ ಬಿಡಿಸಿದನು. ಇವರು, ತಮ್ಮ ಆರಾಧನೆಯನ್ನು ಈ ಮೊದಲು ಭ್ರಷ್ಟಗೊಳಿಸಿದ್ದ ಸುಳ್ಳು ಬೋಧನೆಗಳನ್ನು ತಿರಸ್ಕರಿಸಲಾರಂಭಿಸಿದರು. ಫಲಸ್ವರೂಪವಾಗಿ, ಅವರು ಗುಣಮುಖರಾದರು. ಮತ್ತು ಆತ್ಮಿಕ ಪರದೈಸಿನ ಭಾಗವಾದರು. ಈ ಪರದೈಸ್‌ ಇಂದು ಕೂಡ ಭೂಮಿಯಾದ್ಯಂತ ಹಬ್ಬುತ್ತಿದೆ. ಆತ್ಮಿಕ ಅರ್ಥದಲ್ಲಿ, ಕುರುಡರು ನೋಡಲು ಮತ್ತು ಕಿವುಡರು ಕೇಳಿಸಿಕೊಳ್ಳಲು ಕಲಿಯುತ್ತಿದ್ದಾರೆ. ಅವರು ದೇವರ ಪವಿತ್ರಾತ್ಮದ ಕಾರ್ಯಾಚರಣೆಯನ್ನು ಪೂರ್ಣವಾಗಿ ಗ್ರಹಿಸುತ್ತಾ, ಯೆಹೋವನಿಗೆ ಆಪ್ತರಾಗಿ ಉಳಿಯುವ ಅಗತ್ಯವನ್ನು ಮನಗಾಣುತ್ತಾ ಇದ್ದಾರೆ. (1 ಥೆಸಲೊನೀಕ 5:6; 2 ತಿಮೊಥೆಯ 4:⁠5) ಇನ್ನೆಂದಿಗೂ ಮೂಕರಾಗಿರದ ಈ ಸತ್ಯ ಕ್ರೈಸ್ತರು, ಇತರರಿಗೆ ಬೈಬಲ್‌ ಸತ್ಯಗಳನ್ನು ಪ್ರಕಟಿಸುತ್ತಾ “ಹರ್ಷಧ್ವನಿ”ಗೈಯಲು ಉತ್ಸುಕರಾಗಿದ್ದಾರೆ. (ರೋಮಾಪುರ 1:15) ಆತ್ಮಿಕ ಅರ್ಥದಲ್ಲಿ ಬಲಹೀನರು ಇಲ್ಲವೆ ‘ಕುಂಟರು’ ಆಗಿದ್ದ ಜನರು ಈಗ ಹುರುಪು ಆನಂದಗಳನ್ನು ಪ್ರಕಟಿಸುತ್ತಾರೆ. ಸಾಂಕೇತಿಕವಾಗಿ, ಅವರು ‘ಜಿಂಕೆಯಂತೆ ಹಾರುತ್ತಾರೆ.’

24 ಈ ಪುನಸ್ಸ್ಥಾಪಿತ ಕ್ರೈಸ್ತರು “ಪರಿಶುದ್ಧ ಮಾರ್ಗ”ದಲ್ಲಿ ನಡೆಯುತ್ತಾರೆ. ಮಹಾ ಬಾಬೆಲಿನಿಂದ ಆತ್ಮಿಕ ಪರದೈಸಿಗೆ ನಡೆಸುವ ಈ “ಮಾರ್ಗ”ವು, ಆತ್ಮಿಕವಾಗಿ ಶುದ್ಧರಾಗಿರುವ ಎಲ್ಲ ಆರಾಧಕರಿಗಾಗಿ ತೆರೆದಿದೆ. (1 ಪೇತ್ರ 1:​13-16) ಇದರಲ್ಲಿ ನಡೆಯುವವರಿಗೆ, ಯೆಹೋವನು ಬೇಕಾದ ಸಂರಕ್ಷಣೆಯನ್ನು ನೀಡುವನೆಂಬ ಖಾತ್ರಿ ಇರಸಾಧ್ಯವಿದೆ. ಅಲ್ಲದೆ, ಸತ್ಯಾರಾಧನೆಯನ್ನು ತೊಡೆದುಹಾಕಲು ಸೈತಾನನು ಬಳಸುವಂತಹ ಮೃಗೀಯ ಪ್ರಯತ್ನಗಳು ಕೂಡ ಸಫಲವಾಗಲಾರವು ಎಂಬ ಭರವಸೆ ಅವರಿಗಿರಬಲ್ಲದು. (1 ಪೇತ್ರ 5:⁠8) ದೇವರ ಪರಿಶುದ್ಧ ಮಾರ್ಗದಲ್ಲಿ ನಡೆಯುತ್ತಿರುವವರನ್ನು ಭ್ರಷ್ಟಗೊಳಿಸಲು, ಅವಿಧೇಯ ಜನರಿಗೆ ಮತ್ತು ಕಾಡು ಮೃಗಗಳಂತೆ ವರ್ತಿಸುವವರಿಗೆ ಸಾಧ್ಯವಾಗದು. (1 ಕೊರಿಂಥ 5:11) ಇಂತಹ ಸುರಕ್ಷಿತ ಪರಿಸರದಲ್ಲಿ, ಯೆಹೋವನು ವಿಮೋಚಿಸಿದಂತಹ ಅಭಿಷಿಕ್ತರು ಮತ್ತು ‘ಬೇರೆ ಕುರಿ’ ವರ್ಗದವರು ಏಕೈಕ ಸತ್ಯ ದೇವರನ್ನು ಸೇವಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳುತ್ತಾರೆ.​—⁠ಯೋಹಾನ 10:⁠16.

25. ಯೆಶಾಯ 35ನೆಯ ಅಧ್ಯಾಯದ ಶಾರೀರಿಕ ನೆರವೇರಿಕೆ ಇರುವುದೊ? ವಿವರಿಸಿರಿ.

25 ಭವಿಷ್ಯತ್ತಿನ ಕುರಿತೇನು? ಯೆಶಾಯನ ಪ್ರವಾದನೆಯು ಶಾರೀರಿಕ ಅರ್ಥದಲ್ಲಿ ಎಂದಾದರೂ ನೆರವೇರುವುದೊ? ಖಂಡಿತವಾಗಿಯೂ ನೆರವೇರುವುದು. ಪ್ರಥಮ ಶತಮಾನದಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಜನರನ್ನು ಅದ್ಭುತಕರವಾಗಿ ಗುಣಪಡಿಸಿದಾಗ, ಮುಂದೆ ಒಂದು ದೊಡ್ಡ ಪ್ರಮಾಣದಲ್ಲಿ ಯೆಹೋವನು ಇಂತಹ ಗುಣಪಡಿಸುವಿಕೆಗಳನ್ನು ಕೈಗೊಳ್ಳಲು ಬಯಸುತ್ತಾನೆ ಮತ್ತು ಅದನ್ನೇ ಮಾಡಲು ಸಮರ್ಥನಾಗಿದ್ದಾನೆ ಎಂಬುದು ಸ್ಪಷ್ಟವಾಯಿತು. ಭೂಮಿಯ ಮೇಲೆ ಶಾಂತಿದಾಯಕ ಪರಿಸ್ಥಿತಿಗಳಲ್ಲಿ ಎಂದೆಂದಿಗೂ ಜೀವಿಸುವುದರ ಬಗ್ಗೆ ಪ್ರೇರಿತ ಕೀರ್ತನೆಗಳು ತಿಳಿಯಪಡಿಸುತ್ತವೆ. (ಕೀರ್ತನೆ 37:​9, 11, 29) ಅಲ್ಲದೆ, ಪರದೈಸಿನಲ್ಲಿ ಜೀವಿಸುವ ವಾಗ್ದಾನವನ್ನು ಯೇಸು ಸಹ ಮಾಡಿದನು. (ಲೂಕ 23:43) ಬೈಬಲು ತನ್ನ ಪ್ರಥಮ ಪುಸ್ತಕದಿಂದ ಹಿಡಿದು ಕೊನೆಯ ಪುಸ್ತಕದ ವರೆಗೂ, ಒಂದು ಅಕ್ಷರಾರ್ಥ ಪರದೈಸಿನ ನಿರೀಕ್ಷೆಯನ್ನು ನೀಡುತ್ತದೆ. ಆಗ, ಕುರುಡರು, ಕಿವುಡರು, ಕುಂಟರು ಮತ್ತು ಮೂಕರು ಶಾರೀರಿಕವಾಗಿ ಗುಣಮುಖರಾಗುವರು ಮತ್ತು ಈ ಗುಣಪಡಿಸುವಿಕೆ ಶಾಶ್ವತವಾಗಿರುವುದು. ಗೋಳಾಟ ಮತ್ತು ನಿಟ್ಟುಸಿರು ಇಲ್ಲದೆ ಹೋಗುವವು ಹರ್ಷೋಲ್ಲಾಸವು ಯುಗಯುಗಾಂತರಕ್ಕೂ ಸದಾಕಾಲಕ್ಕೂ ಇರುವುದು.​—⁠ಪ್ರಕಟನೆ 7:​9, 16, 17; 21:​3, 4.

26. ಯೆಶಾಯನ ಮಾತುಗಳು ಇಂದಿನ ಕ್ರೈಸ್ತರನ್ನು ಹೇಗೆ ಬಲಪಡಿಸುತ್ತವೆ?

26 ಸತ್ಯ ಕ್ರೈಸ್ತರು ಶಾರೀರಿಕ ಭೂಪರದೈಸನ್ನು ಎದುರುನೋಡುತ್ತಿರುವಾಗ, ಈಗ ಆತ್ಮಿಕ ಪರದೈಸಿನ ಆಶೀರ್ವಾದಗಳನ್ನು ಅನುಭವಿಸುತ್ತಿದ್ದಾರೆ. ಅವರು ಆಶಾವಾದದಿಂದ ಕಷ್ಟಸಂಕಟಗಳನ್ನು ಎದುರಿಸುತ್ತಾರೆ. ಯೆಹೋವನಲ್ಲಿ ಅಚಲವಾದ ಭರವಸೆಯುಳ್ಳ ಇವರು, ಒಬ್ಬರನ್ನೊಬ್ಬರು ಉತ್ತೇಜಿಸುತ್ತಾ ಈ ಬುದ್ಧಿವಾದಕ್ಕೆ ಕಿವಿಗೊಡುತ್ತಾರೆ: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. ಭಯಭ್ರಾಂತಹೃದಯರಿಗೆ​—⁠ಬಲಗೊಳ್ಳಿರಿ, ಹೆದರಬೇಡಿರಿ.” ಅವರಿಗೆ ಈ ಮುಂದಿನ ಪ್ರವಾದನಾತ್ಮಕ ಆಶ್ವಾಸನೆಯಲ್ಲಿ ಸಂಪೂರ್ಣವಾದ ನಂಬಿಕೆಯಿದೆ: “ಇಗೋ, ನಿಮ್ಮ ದೇವರು ಮುಯ್ಯಿತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು.”​—⁠ಯೆಶಾಯ 35:3, 4.

[ಪಾದಟಿಪ್ಪಣಿ]

^ ಪ್ಯಾರ. 5 ಪುರಾತನ ಲೆಬನೋನ್‌, ಸೊಂಪಾದ ಕಾಡುಗಳ ಹಾಗೂ ಮಹಾನ್‌ ದೇವದಾರುವೃಕ್ಷಗಳ ಫಲವಂತ ದೇಶವಾಗಿ ಮತ್ತು ಏದೆನ್‌ ತೋಟಕ್ಕೆ ಸದೃಶವಾಗಿರುವ ನಾಡಾಗಿ ಶಾಸ್ತ್ರಗಳಲ್ಲಿ ವರ್ಣಿಸಲ್ಪಟ್ಟಿದೆ. (ಕೀರ್ತನೆ 29:5; 72:16; ಯೆಹೆಜ್ಕೇಲ 28:​11-13) ಶಾರೋನ್‌ ಪ್ರದೇಶವು, ತೊರೆಗಳಿಗೆ ಮತ್ತು ಓಕ್‌ ಕಾಡುಗಳಿಗೆ ಹೆಸರುವಾಸಿಯಾಗಿತ್ತು; ಕರ್ಮೆಲ್‌ ಕ್ಷೇತ್ರವು, ದ್ರಾಕ್ಷಾತೋಟಗಳಿಗೆ, ಹಣ್ಣಿನ ತೋಟಗಳಿಗೆ ಮತ್ತು ಹೂವು ಹಾಸಿನ ಇಳಿಜಾರುಗಳಿಗೆ ಪ್ರಸಿದ್ಧವಾಗಿತ್ತು.

[ಅಧ್ಯಯನ ಪ್ರಶ್ನೆಗಳು]

[ಪುಟ 370ರಲ್ಲಿ ಇಡೀ ಪುಟದ ಚಿತ್ರ]

[ಪುಟ 375ರಲ್ಲಿರುವ ಚಿತ್ರಗಳು]

ಮರುಭೂಮಿಯ ಪ್ರದೇಶವು, ಜಂಬುಹುಲ್ಲು ಮತ್ತು ಆಪುಹುಲ್ಲು ಬೆಳೆಯುವ ಜವುಗು ಪ್ರದೇಶವಾಗುವುದು

[ಪುಟ 378ರಲ್ಲಿರುವ ಚಿತ್ರ]

ಯೇಸು ಆತ್ಮಿಕ ಹಾಗೂ ಶಾರೀರಿಕ ರೋಗಕ್ಕೆ ತುತ್ತಾದವರನ್ನು ಗುಣಪಡಿಸಿದನು