ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಚೀನ ಪ್ರವಾದಿ—ನವಕಾಲೀನ ಸಂದೇಶ

ಪ್ರಾಚೀನ ಪ್ರವಾದಿ—ನವಕಾಲೀನ ಸಂದೇಶ

ಅಧ್ಯಾಯ ಒಂದು

ಪ್ರಾಚೀನ ಪ್ರವಾದಿ​—⁠ನವಕಾಲೀನ ಸಂದೇಶ

ಯೆಶಾಯ 1:1

1, 2. (ಎ) ನಾವು ಇಂದು ಲೋಕದಲ್ಲಿ ಯಾವ ಶೋಚನೀಯ ಪರಿಸ್ಥಿತಿಯನ್ನು ನೋಡುತ್ತೇವೆ? (ಬಿ) ಅಮೆರಿಕದ ಒಬ್ಬ ಶಾಸಕನು ಸಮಾಜದ ದುಃಸ್ಥಿತಿಯ ಕುರಿತು ಚಿಂತೆಯನ್ನು ಹೇಗೆ ವ್ಯಕ್ತಪಡಿಸಿದನು?

ಮಾನವವರ್ಗದ ಮುಂದಿರುವ ಸಮಸ್ಯೆಗಳಿಂದ ಉಪಶಮನ ಪಡೆಯಲು ಇಂದು ಯಾರು ತಾನೇ ಹಾತೊರೆಯುವುದಿಲ್ಲ? ಆದರೂ, ನಮ್ಮ ಹಂಬಲಗಳು ಅದೆಷ್ಟು ಬಾರಿ ನೆರವೇರದೆ ಹೋಗುತ್ತವೆ! ನಾವು ಶಾಂತಿಯ ಕನಸನ್ನು ಕಂಡರೂ ಯುದ್ಧಪೀಡಿತರಾಗಿದ್ದೇವೆ. ಕಾನೂನು ಮತ್ತು ವ್ಯವಸ್ಥೆ ನಮಗಿಷ್ಟವಾದರೂ, ದರೋಡೆ, ಬಲಾತ್ಕಾರ ಸಂಭೋಗ ಮತ್ತು ಕೊಲೆಗಳು ದಿನೇ ದಿನೇ ಏರುತ್ತಿರುವುದನ್ನು ನಾವು ನಿಲ್ಲಿಸಲಾರೆವು. ನಮ್ಮ ನೆರೆಯವನಲ್ಲಿ ಭರವಸೆಯಿಡಲು ನಾವು ಬಯಸುತ್ತೇವಾದರೂ, ಸಂರಕ್ಷಣೆಗಾಗಿ ನಮ್ಮ ಕದಗಳಿಗೆ ಬೀಗ ಹಾಕಲೇಬೇಕಾಗುತ್ತದೆ. ನಮ್ಮ ಮಕ್ಕಳನ್ನು ನಾವು ಪ್ರೀತಿಸಿ, ಅವರಲ್ಲಿ ಹಿತಕರವಾದ ಮೌಲ್ಯಗಳನ್ನು ತುಂಬಿಸಲು ಪ್ರಯತ್ನಿಸುತ್ತೇವಾದರೂ, ತಮ್ಮ ಸಮಾನಸ್ಥರ ಅಹಿತಕರ ಪ್ರಭಾವಗಳಿಗೆ ಅವರು ಬಲಿಬೀಳುವಾಗ ನಾವು ಅನೇಕ ವೇಳೆ ನಿಸ್ಸಹಾಯಕರಾಗಿ ನೋಡುತ್ತಿರುತ್ತೇವೆ.

2 ಈ ಮೇಲಿನ ಕಾರಣಗಳ ನಿಮಿತ್ತ, ಮನುಷ್ಯನ ಅಲ್ಪಾಯುಷ್ಯವು “ಕಳವಳದಿಂದ ತುಂಬಿ”ದೆಯೆಂದು ಹೇಳಿದ ಯೋಬನ ಮಾತುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. (ಯೋಬ 14:⁠1) ಇಂದು ಇದು ವಿಶೇಷವಾಗಿ ನಿಜವೆಂದು ತೋರುತ್ತದೆ, ಏಕೆಂದರೆ ಹಿಂದೆಂದೂ ಕಂಡಿರದಷ್ಟು ಪ್ರಮಾಣದಲ್ಲಿ ಸಮಾಜವು ಈಗ ಕ್ಷಯಿಸುತ್ತ ಇದೆ. ಅಮೆರಿಕದ ಒಬ್ಬ ಶಾಸಕನು ಹೇಳಿದ್ದು: “ಈಗ ಶೀತಲ ಯುದ್ಧ ಮುಗಿದಿದೆಯಾದರೂ, ಈ ಲೋಕವು ಕುಲ, ಗೋತ್ರ ಮತ್ತು ಧಾರ್ಮಿಕ ಸೇಡುತೀರಿಸುವಿಕೆ ಹಾಗೂ ಕ್ರೌರ್ಯಕ್ಕೆ ಹೆಚ್ಚು ಭದ್ರವಾದ ಕ್ಷೇತ್ರವಾಗಿಬಿಟ್ಟಿದೆ ಎಂಬುದು ಶೋಚನೀಯ. . . . ನಮ್ಮ ನೈತಿಕ ಮಟ್ಟಗಳನ್ನು ನಾವು ಎಷ್ಟು ಸತ್ವಹೀನವಾಗಿ ಮಾಡಿದ್ದೇವೆಂದರೆ, ನಮ್ಮ ಯುವಜನರಲ್ಲಿ ಅನೇಕರು ಇಂದು ಗಲಿಬಿಲಿಗೊಂಡು, ನಿರುತ್ತೇಜಿತರಾಗಿ, ಗುರುತರವಾದ ತೊಂದರೆಗೊಳಗಾಗಿದ್ದಾರೆ. ಇಂದು ನಾವು ಹೆತ್ತವರ ಅಸಡ್ಡೆ, ವಿವಾಹ ವಿಚ್ಛೇದ, ಮಕ್ಕಳ ಅಪಪ್ರಯೋಗ, ಹದಿಪ್ರಾಯದವರ ಗರ್ಭಧಾರಣೆ, ಶಾಲೆಯನ್ನು ಅರ್ಧದಲ್ಲೇ ಬಿಡುವವರು, ಕಾನೂನುಬಾಹಿರ ಅಮಲೌಷಧ ಸೇವನೆ ಮತ್ತು ಬೀದಿಗಳಲ್ಲಾಗುವ ಹಿಂಸಾಚಾರ ಎಂಬ ಕೊಯ್ಲನ್ನು ಕೊಯ್ಯುತ್ತಿದ್ದೇವೆ. ಇದು, ಶೀತಲ ಯುದ್ಧವೆಂದು ನಾವು ಕರೆಯುವ ಮಹಾ ಭೂಕಂಪದಿಂದ ಪಾರಾಗಿರುವ ನಮ್ಮ ಮನೆಯು, ಈಗ ಗೆದ್ದಲುಗಳಿಂದ ತಿನ್ನಲ್ಪಡುತ್ತಾ ಇದೆಯೊ ಎಂಬಂತೆ ಇದೆ.”

3. ಬೈಬಲಿನಲ್ಲಿ ವಿಶೇಷವಾಗಿ ಯಾವ ಪುಸ್ತಕವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ನೀಡುತ್ತದೆ?

3 ಆದರೆ ನಾವು ಆಶಾಶೂನ್ಯರಾಗಿಲ್ಲ. ಸುಮಾರು 2,700 ವರ್ಷಗಳ ಹಿಂದೆ, ಮಧ್ಯಪೂರ್ವದ ಒಬ್ಬ ಮನುಷ್ಯನು ನಮ್ಮ ದಿನಗಳಿಗೆ ವಿಶೇಷಾರ್ಥವುಳ್ಳ ಪ್ರವಾದನೆಗಳ ಸರಣಿಯೊಂದನ್ನು ಹೇಳುವಂತೆ ದೇವರಿಂದ ಪ್ರೇರಿತನಾದನು. ಈ ಸಂದೇಶಗಳು, ಆ ಪ್ರವಾದಿಯ ಹೆಸರಾದ ಯೆಶಾಯ ಎಂಬ ಬೈಬಲ್‌ ಪುಸ್ತಕದಲ್ಲಿ ದಾಖಲೆ ಮಾಡಲ್ಪಟ್ಟಿವೆ. ಈ ಯೆಶಾಯನು ಯಾರು, ಮತ್ತು ಸುಮಾರು ಮೂರು ಸಹಸ್ರಮಾನಗಳ ಹಿಂದೆ ದಾಖಲಿಸಲ್ಪಟ್ಟಿದ್ದ ಅವನ ಪ್ರವಾದನೆಯು ಇಂದು ಸಕಲ ಮಾನವಕುಲಕ್ಕೆ ಬೆಳಕನ್ನು ನೀಡುತ್ತದೆಂದು ನಾವೇಕೆ ಹೇಳಸಾಧ್ಯವಿದೆ?

ಗೊಂದಲದ ಕಾಲಗಳಲ್ಲಿದ್ದ ನೀತಿವಂತನು

4. ಯೆಶಾಯನು ಯಾರು, ಮತ್ತು ಅವನು ಯೆಹೋವನ ಪ್ರವಾದಿಯಾಗಿ ಯಾವಾಗ ಸೇವೆಮಾಡಿದನು?

4 ಯೆಶಾಯನು ತನ್ನ ಪುಸ್ತಕದ ಪ್ರಥಮ ವಚನದಲ್ಲಿ ತನ್ನನ್ನು, “ಆಮೋಚನ ಮಗನಾದ ಯೆಶಾಯ” * ಎಂದು ಪರಿಚಯಪಡಿಸಿಕೊಂಡು, ತಾನು “ಯೆಹೂದ ದೇಶದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ” ದೇವರ ಪ್ರವಾದಿಯಾಗಿ ಸೇವೆಮಾಡಿದೆನೆಂದು ಹೇಳುತ್ತಾನೆ. (ಯೆಶಾಯ 1:1) ಇದರರ್ಥ, ಯೆಶಾಯನು ಸುಮಾರು 46 ವರ್ಷಗಳ ಕಾಲ ಯೆಹೂದದಲ್ಲಿ ದೇವರ ಪ್ರವಾದಿಯಾಗಿ ಸೇವೆಸಲ್ಲಿಸಿದನು. ಈ ಸೇವೆಯನ್ನು ಅವನು ಉಜ್ಜೀಯನ ಆಳ್ವಿಕೆಯ ಅಂತ್ಯದಲ್ಲಿ, ಅಂದರೆ ಸುಮಾರು ಸಾ.ಶ.ಪೂ. 778ರಲ್ಲಿ ಆರಂಭಿಸಿದ್ದಿರಬಹುದು.

5, 6. ಯೆಶಾಯನ ಕುಟುಂಬ ಜೀವನದ ಸಂಬಂಧದಲ್ಲಿ ಯಾವುದು ಸತ್ಯವಾಗಿದ್ದಿರಬೇಕು, ಮತ್ತು ಏಕೆ?

5 ಬೇರೆ ಪ್ರವಾದಿಗಳ ವಿಷಯದಲ್ಲಿ ನಮಗೆ ಏನು ತಿಳಿದಿದೆಯೊ ಅದಕ್ಕೆ ಹೋಲಿಸುವಾಗ, ಯೆಶಾಯನ ಸ್ವಂತ ಜೀವಿತದ ಕುರಿತು ನಮಗೆ ತಿಳಿದಿರುವುದು ಕೊಂಚ. ಆದರೆ ಅವನು ಒಬ್ಬ ವಿವಾಹಿತ ಪುರುಷನಾಗಿದ್ದನು ಮತ್ತು ತನ್ನ ಪತ್ನಿಯನ್ನು “ಪ್ರವಾದಿನಿ” ಎಂದು ಕರೆದನೆಂದು ನಮಗೆ ಗೊತ್ತು. (ಯೆಶಾಯ 8:​3, ಪಾದಟಿಪ್ಪಣಿ) ಮೆಕ್ಲಿಂಟಕ್‌ ಆ್ಯಂಡ್‌ ಸ್ಟ್ರಾಂಗ್ಸ್‌ ಸೈಕ್ಲೊಪೀಡಿಯ ಆಫ್‌ ಬಿಬ್ಲಿಕಲ್‌, ಥಿಯಲಾಜಿಕಲ್‌ ಆ್ಯಂಡ್‌ ಎಕ್ಲೀಸಿಯಾಸ್ಟಿಕಲ್‌ ಲಿಟರೆಚರ್‌ ಎಂಬ ಪುಸ್ತಕಕ್ಕನುಸಾರ, ಆ ಬಿರುದು, ಯೆಶಾಯನ ವೈವಾಹಿಕ ಜೀವನವು “ಅವನ ವೃತ್ತಿಯೊಂದಿಗೆ ಹೊಂದಿಕೆಯಲ್ಲಿತ್ತು ಮಾತ್ರವಲ್ಲ, ಅದರೊಂದಿಗೆ ಅನ್ಯೋನ್ಯವಾಗಿ ಹೆಣೆಯಲ್ಪಟ್ಟಿತ್ತು ಸಹ” ಎಂಬುದನ್ನು ಸೂಚಿಸುತ್ತದೆ. ಪುರಾತನ ಇಸ್ರಾಯೇಲಿನಲ್ಲಿದ್ದ ಇತರ ಕೆಲವು ದೈವಭಕ್ತ ಸ್ತ್ರೀಯರಂತೆ, ಯೆಶಾಯನ ಹೆಂಡತಿಗೂ ತನ್ನದೇ ಆದ ಪ್ರವಾದನಾ ನೇಮಕವಿತ್ತು.​—⁠ನ್ಯಾಯಸ್ಥಾಪಕರು 4:4; 2 ಅರಸುಗಳು 22:⁠14.

6 ಯೆಶಾಯನಿಗೂ ಅವನ ಹೆಂಡತಿಗೂ ಕಡಿಮೆ ಪಕ್ಷ ಇಬ್ಬರು ಗಂಡುಮಕ್ಕಳಾದರೂ ಇದ್ದರು. ಅವರಿಬ್ಬರಿಗೂ ಪ್ರವಾದನಾ ವಿಶೇಷತೆಯುಳ್ಳ ಹೆಸರುಗಳು ಕೊಡಲ್ಪಟ್ಟಿದ್ದವು. ಜ್ಯೇಷ್ಠಪುತ್ರ ಶೆಯಾರ್‌ ಯಾಶೂಬನು, ಯೆಶಾಯನು ದುಷ್ಟ ಅರಸ ಆಹಾಜನಿಗೆ ದೇವರ ಸಂದೇಶಗಳನ್ನು ನೀಡಲು ಹೋದಾಗ ಯೆಶಾಯನೊಂದಿಗಿದ್ದನು. (ಯೆಶಾಯ 7:⁠3) ಯೆಶಾಯನೂ ಅವನ ಪತ್ನಿಯೂ ದೇವಾರಾಧನೆಯನ್ನು ಒಂದು ಕೌಟುಂಬಿಕ ವಿಚಾರವನ್ನಾಗಿ ಮಾಡಿದರು ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಇದು ಇಂದಿನ ವಿವಾಹಿತ ದಂಪತಿಗಳಿಗೆ ಒಂದು ಉತ್ತಮ ಮಾದರಿಯಾಗಿದೆ!

7. ಯೆಶಾಯನ ದಿನಗಳಲ್ಲಿ ಯೆಹೂದದಲ್ಲಿದ್ದ ಪರಿಸ್ಥಿತಿಗಳನ್ನು ವರ್ಣಿಸಿರಿ.

7 ಯೆಶಾಯನೂ ಅವನ ಕುಟುಂಬವೂ ಯೆಹೂದದ ಇತಿಹಾಸದಲ್ಲಿ ಒಂದು ಗೊಂದಲಮಯ ಸಮಯದಲ್ಲಿ ಜೀವಿಸುತ್ತಿತ್ತು. ಆಗ ರಾಜಕೀಯ ಅಶಾಂತಿಯು ಸಾಮಾನ್ಯವಾಗಿತ್ತು, ಲಂಚವು ನ್ಯಾಯಸಭೆಗಳನ್ನು ಭ್ರಷ್ಟಗೊಳಿಸಿತ್ತು ಮತ್ತು ಕಪಟತನವು ಧಾರ್ಮಿಕ ರಚನೆಯನ್ನು ಛಿದ್ರಗೊಳಿಸಿತ್ತು. ಗುಡ್ಡದ ತುದಿಗಳು ಸುಳ್ಳುದೇವತೆಗಳ ಬಲಿಪೀಠಗಳಿಂದ ತುಂಬಿದ್ದವು. ಅರಸರಲ್ಲಿಯೂ ಕೆಲವರು ಮಿಥ್ಯಾರಾಧನೆಯನ್ನು ಸಮರ್ಥಿಸಿದರು. ಉದಾಹರಣೆಗೆ, ಆಹಾಜನು ತನ್ನ ಪ್ರಜೆಗಳು ನಡೆಸುತ್ತಿದ್ದ ವಿಗ್ರಹಾರಾಧನೆಯನ್ನು ತಾಳಿಕೊಂಡದ್ದು ಮಾತ್ರವಲ್ಲ, ತಾನೇ ಅದರಲ್ಲಿ ಭಾಗವಹಿಸುತ್ತಾ, ತನ್ನ ಮಗನನ್ನೇ ಕಾನಾನ್ಯ ದೇವನಾದ ಮೋಲೆಕನಿಗೆ “ಆಹುತಿಕೊಟ್ಟನು.” * (2 ಅರಸುಗಳು 16:​3, 4; 2 ಪೂರ್ವಕಾಲವೃತ್ತಾಂತ 28:​3, 4) ಈ ವಿಷಯಗಳೆಲ್ಲ ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿದ್ದ ಜನರ ಮಧ್ಯೆ ನಡೆದವು!​—⁠ವಿಮೋಚನಕಾಂಡ 19:​5-8.

8. (ಎ) ಅರಸರಾಗಿದ್ದ ಉಜ್ಜೀಯ ಮತ್ತು ಯೋಥಾಮರು ಯಾವ ಮಾದರಿಯನ್ನಿಟ್ಟರು, ಆದರೆ ಜನರು ಅವರ ಮಾದರಿಯನ್ನು ಅನುಸರಿಸಿದರೊ? (ಬಿ) ಆ ಅವಿಧೇಯ ಜನರ ಮಧ್ಯೆ ಯೆಶಾಯನು ಹೇಗೆ ಧೈರ್ಯವನ್ನು ತೋರಿಸಿದನು?

8 ಯೆಶಾಯನ ಕೆಲವು ಸಮಕಾಲೀನರು, ಕೆಲವು ಅರಸರು ಸಹ, ಸತ್ಯಾರಾಧನೆಯನ್ನು ವರ್ಧಿಸಲು ಪ್ರಯತ್ನಿಸಿದರೆಂಬುದು ಪ್ರಶಂಸಾರ್ಹ. ಇವರಲ್ಲಿ ಒಬ್ಬನು, “ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದ” ಅರಸ ಉಜ್ಜೀಯನು. ಹೀಗಿದ್ದರೂ, ಅವನ ಆಳ್ವಿಕೆಯಲ್ಲಿ ಜನರು “ಪೂಜಾಸ್ಥಳ”ಗಳಲ್ಲಿ “ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.” (2 ಅರಸುಗಳು 15:​3, 4) ಅರಸ ಯೋಥಾಮನು ಸಹ “ಯೆಹೋವನ ಚಿತ್ತಾನುಸಾರವಾಗಿ ನಡೆದನು.” ಆದರೂ, “ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು.” (2 ಪೂರ್ವಕಾಲವೃತ್ತಾಂತ 27:⁠2) ಹೌದು, ಯೆಶಾಯನ ಪ್ರವಾದನಾ ಶುಶ್ರೂಷೆಯ ಹೆಚ್ಚಿನ ಕಾಲಾವಧಿಯಲ್ಲಿ, ಯೆಹೂದ ರಾಜ್ಯವು ಆತ್ಮಿಕ ಮತ್ತು ನೈತಿಕ ದುರವಸ್ಥೆಯಲ್ಲಿತ್ತು. ಒಟ್ಟಿನಲ್ಲಿ, ತಮ್ಮ ಅರಸರಿಂದ ಬಂದ ಯಾವುದೇ ಸಕಾರಾತ್ಮಕ ಪ್ರಚೋದನೆಯನ್ನು ಜನರು ಅಸಡ್ಡೆ ಮಾಡಿದರು. ಈ ಹಟಮಾರಿ ಜನರಿಗೆ ದೇವರ ಸಂದೇಶಗಳನ್ನು ನೀಡುವುದು ಸುಲಭ ಕೆಲಸವಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೂ, “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂದು ಯೆಹೋವನು ಪ್ರಶ್ನಿಸಿದಾಗ, ಯೆಶಾಯನು ಹಿಂಜರಿಯಲಿಲ್ಲ. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು,” ಎಂದನವನು.​—⁠ಯೆಶಾಯ 6:⁠8.

ರಕ್ಷಣಾ ಸಂದೇಶ

9. ಯೆಶಾಯ ಎಂಬ ಹೆಸರಿನ ಅರ್ಥವೇನು, ಮತ್ತು ಅವನ ಪುಸ್ತಕದ ಮುಖ್ಯವಿಷಯಕ್ಕೆ ಇದು ಹೇಗೆ ಸಂಬಂಧಿಸುತ್ತದೆ?

9 “ಯೆಹೋವನ ರಕ್ಷಣೆ” ಎಂಬುದೇ ಯೆಶಾಯನ ಹೆಸರಿನ ಅರ್ಥ. ಮತ್ತು ಇದು ಅವನ ಸಂದೇಶದ ಮುಖ್ಯ ವಿಷಯವಾಗಿದ್ದಿರಬಹುದು. ಯೆಶಾಯನ ಪ್ರವಾದನೆಗಳಲ್ಲಿ ಕೆಲವು ನ್ಯಾಯತೀರ್ಪುಗಳಾಗಿದ್ದವೆಂಬುದು ನಿಜ. ಆದರೂ, ರಕ್ಷಣೆ ಎಂಬ ಮುಖ್ಯ ವಿಷಯವು ಸ್ಪಷ್ಟವಾಗಿ ಎದ್ದುನಿಲ್ಲುತ್ತದೆ. ಯೆಹೋವನು ಕ್ಲುಪ್ತ ಸಮಯದಲ್ಲಿ ಇಸ್ರಾಯೇಲ್ಯರನ್ನು ಬಾಬೆಲಿನ ಸೆರೆಯೊಳಗಿಂದ ಬಿಡಿಸಿ, ಅವರಲ್ಲಿ ಶೇಷವರ್ಗವು ಚೀಯೋನಿಗೆ ಹಿಂದಿರುಗುವಂತೆ ಮಾಡಿ ಆ ದೇಶವನ್ನು ಅದರ ಹಿಂದಿನ ವೈಭವಕ್ಕೆ ಹೇಗೆ ತರುವನೆಂಬುದನ್ನು ಯೆಶಾಯನು ಪದೇ ಪದೇ ತಿಳಿಸಿದನು. ತನ್ನ ಪ್ರಿಯ ಯೆರೂಸಲೇಮಿನ ಪುನಸ್ಸ್ಥಾಪನೆಯ ಕುರಿತ ಪ್ರವಾದನೆಗಳನ್ನು ಹೇಳಿ, ಅವುಗಳನ್ನು ಬರೆಯುವ ಸುಯೋಗವು ಯೆಶಾಯನಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ಕೊಟ್ಟಿತೆಂಬುದು ನಿಸ್ಸಂದೇಹ!

10, 11. (ಎ) ಯೆಶಾಯನ ಪುಸ್ತಕವು ಇಂದು ನಮಗೆ ಏಕೆ ಆಸಕ್ತಿಯದ್ದಾಗಿದೆ? (ಬಿ) ಯೆಶಾಯನ ಪುಸ್ತಕವು ಮೆಸ್ಸೀಯನ ಕಡೆಗೆ ಹೇಗೆ ಗಮನ ಸೆಳೆಯುತ್ತದೆ?

10 ಆದರೆ, ಈ ನ್ಯಾಯತೀರ್ಪಿನ ಹಾಗೂ ರಕ್ಷಣೆಯ ಸಂದೇಶಕ್ಕೂ ನಮಗೂ ಏನು ಸಂಬಂಧ? ಯೆಶಾಯನು ಎರಡು ಕುಲಗಳ ಯೆಹೂದ ರಾಜ್ಯದ ಪ್ರಯೋಜನಕ್ಕಾಗಿ ಮಾತ್ರ ಭವಿಷ್ಯ ನುಡಿಯಲಿಲ್ಲವೆಂಬುದು ಸಂತೋಷದ ಸಂಗತಿ. ಬದಲಾಗಿ, ಅವನ ಸಂದೇಶಗಳು ನಮ್ಮ ದಿನಗಳಿಗೆ ವಿಶೇಷಾರ್ಥವುಳ್ಳವುಗಳಾಗಿವೆ. ದೇವರ ರಾಜ್ಯವು ನಮ್ಮ ಭೂಮಿಗೆ ಬೇಗನೆ ತರಲಿರುವ ಮಹಾ ಆಶೀರ್ವಾದಗಳ ಮಹಿಮಾಭರಿತ ಚಿತ್ರಣವನ್ನು ಯೆಶಾಯನು ಕೊಡುತ್ತಾನೆ. ಈ ಸಂಬಂಧದಲ್ಲಿ, ಯೆಶಾಯನ ಬರಹಗಳಲ್ಲಿ ಒಂದು ದೊಡ್ಡ ಭಾಗವು, ದೇವರ ರಾಜ್ಯದ ಅರಸನಾಗಿ ಆಳಲಿರುವ ಮುನ್‌ಸೂಚಿತ ಮೆಸ್ಸೀಯನ ಮೇಲೆ ಕೇಂದ್ರೀಕರಿಸುತ್ತದೆ. (ದಾನಿಯೇಲ 9:25; ಯೋಹಾನ 12:41) ಯೇಸು ಎಂಬ ಹೆಸರಿನ ಅರ್ಥವು ಸಹ “ಯೆಹೋವನು ರಕ್ಷಣೆ” ಎಂದಾಗಿರುವುದರಿಂದ, ಯೇಸು ಮತ್ತು ಯೆಶಾಯ ಎಂಬ ಹೆಸರುಗಳು ಹೆಚ್ಚುಕಡಿಮೆ ಒಂದೇ ವಿಚಾರವನ್ನು ವ್ಯಕ್ತಪಡಿಸುವುದು ಕಾಕತಾಳೀಯವಲ್ಲ.

11 ಯೇಸು, ಯೆಶಾಯನ ದಿನಗಳ ಬಳಿಕ ಸುಮಾರು ಏಳು ಶತಮಾನಗಳ ನಂತರ ಹುಟ್ಟಿದನೆಂಬುದು ಖಂಡಿತ. ಆದರೂ, ಯೆಶಾಯನ ಪುಸ್ತಕದಲ್ಲಿರುವ ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ಎಷ್ಟು ಸವಿವರವೂ ನಿಷ್ಕೃಷ್ಟವೂ ಆಗಿವೆಯೆಂದರೆ, ಅವು ಒಬ್ಬ ಪ್ರತ್ಯಕ್ಷಸಾಕ್ಷಿಯು ಯೇಸುವಿನ ಭೂಜೀವನ ವೃತ್ತಾಂತವನ್ನು ಬರೆದಿರುವಂತಿವೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವೊಮ್ಮೆ ಯೆಶಾಯನ ಪುಸ್ತಕವನ್ನು “ಐದನೆಯ ಸುವರ್ತಮಾನ” ಎಂದು ಕರೆಯಲಾಗಿದೆ ಎಂಬುದಾಗಿ ಒಂದು ಪುಸ್ತಕವು ಹೇಳುತ್ತದೆ. ಆದುದರಿಂದ, ಮೆಸ್ಸೀಯನನ್ನು ಸ್ಪಷ್ಟವಾಗಿ ಗುರುತಿಸುವಂತೆ, ಯೇಸು ಮತ್ತು ಅವನ ಅಪೊಸ್ತಲರು ಪದೇ ಪದೇ ಬೈಬಲಿನ ಯೆಶಾಯ ಪುಸ್ತಕದಿಂದ ಉಲ್ಲೇಖಿಸಿರುವುದು ಆಶ್ಚರ್ಯವಲ್ಲ.

12. ನಾವು ಅತ್ಯಾಸಕ್ತಿಯಿಂದ ಯೆಶಾಯ ಪುಸ್ತಕದ ಅಧ್ಯಯನದಲ್ಲಿ ತೊಡಗುವುದೇಕೆ?

12 “ಒಬ್ಬ ರಾಜನು ನೀತಿಗನುಸಾರವಾಗಿ ಆಳುವ” ಮತ್ತು ಪ್ರಭುಗಳು ನ್ಯಾಯದಿಂದ ದೊರೆತನಮಾಡುವ ಒಂದು “ನೂತನಾಕಾಶಮಂಡಲ” ಮತ್ತು “ನೂತನಭೂಮಂಡಲ”ದ ಕುರಿತಾದ ಶೋಭಾಯಮಾನವಾದ ವರ್ಣನೆಯನ್ನು ಯೆಶಾಯನು ಕೊಡುತ್ತಾನೆ. (ಯೆಶಾಯ 32:​1, 2; 65:​17, 18; 2 ಪೇತ್ರ 3:13) ಹೀಗೆ, ಯೆಶಾಯ ಪುಸ್ತಕವು, ಮೆಸ್ಸೀಯ ಯೇಸು ಕ್ರಿಸ್ತನು ಸಿಂಹಾಸನಾರೂಢ ಅರಸನಾಗಿರುವ ದೇವರ ರಾಜ್ಯದ ಹೃದಯಸ್ಪರ್ಶಿ ನಿರೀಕ್ಷೆಗೆ ಕೈತೋರಿಸುತ್ತದೆ. ‘ಯೆಹೋವನ ರಕ್ಷಣೆಯ’ ಹರ್ಷಭರಿತ ನಿರೀಕ್ಷಣೆಯಲ್ಲಿ ಪ್ರತಿಯೊಂದು ದಿನವನ್ನು ಕಳೆಯಲು ನಮಗೆಂತಹ ಉತ್ತೇಜನವಿದು! (ಯೆಶಾಯ 25:9; 40:​28-31) ಆದುದರಿಂದ, ನಾವು ಯೆಶಾಯ ಪುಸ್ತಕದ ಅಮೂಲ್ಯ ಸಂದೇಶವನ್ನು ಅತ್ಯಾಸಕ್ತಿಯಿಂದ ಪರೀಕ್ಷಿಸೋಣ. ಹಾಗೆ ಮಾಡುವಾಗ, ದೇವರ ವಾಗ್ದಾನಗಳಲ್ಲಿ ನಮಗಿರುವ ಭರವಸೆಯು ಹೆಚ್ಚು ಬಲಗೊಳ್ಳುವುದು. ಅಲ್ಲದೆ, ಯೆಹೋವನು ನಿಜವಾಗಿಯೂ ನಮ್ಮ ರಕ್ಷಣೆಯ ದೇವರೆಂಬ ನಿಶ್ಚಿತಾಭಿಪ್ರಾಯದಲ್ಲಿ ನಾವು ಬೆಳೆಯುವಂತೆ ನಮಗೆ ಸಹಾಯ ದೊರೆಯುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 4 ಯೆಶಾಯನ ತಂದೆಯಾದ ಆಮೋಚನಿಗೂ, ಉಜ್ಜೀಯನ ಆಳ್ವಿಕೆಯ ಆರಂಭದಲ್ಲಿ ಪ್ರವಾದಿಸಿದ ಹಾಗೂ ತನ್ನ ಹೆಸರಿನ ಬೈಬಲ್‌ ಪುಸ್ತಕವನ್ನು ಬರೆದ ಆಮೋಸನಿಗೂ ಯಾವ ಸಂಬಂಧವೂ ಇಲ್ಲ.

^ ಪ್ಯಾರ. 7 “ಆಹುತಿ” ಎಂದರೆ ಕೇವಲ ಒಂದು ಶುದ್ಧೀಕರಣ ಸಂಸ್ಕಾರವಾಗಿರಬಹುದೆಂದು ಕೆಲವರು ಹೇಳುತ್ತಾರಾದರೂ, ಈ ಪೂರ್ವಾಪರದಲ್ಲಿ ಆ ಪದವು ಅಕ್ಷರಾರ್ಥ ಯಜ್ಞವನ್ನು ಸೂಚಿಸುತ್ತದೆ. ಕಾನಾನ್ಯರು ಮತ್ತು ಧರ್ಮಭ್ರಷ್ಟ ಇಸ್ರಾಯೇಲ್ಯರು ಶಿಶುಯಜ್ಞವನ್ನು ಅರ್ಪಿಸುತ್ತಿದ್ದರೆಂಬುದರಲ್ಲಿ ಸಂಶಯವೇ ಇಲ್ಲ.​—⁠ಧರ್ಮೋಪದೇಶಕಾಂಡ 12:31; ಕೀರ್ತನೆ 106:​37, 38.

[ಅಧ್ಯಯನ ಪ್ರಶ್ನೆಗಳು]

[ಪುಟ 7ರಲ್ಲಿರುವ ಚೌಕ/ಚಿತ್ರ]

ಯೆಶಾಯನು ಯಾರಾಗಿದ್ದನು?

ಹೆಸರಿನ ಅರ್ಥ: “ಯೆಹೋವನ ರಕ್ಷಣೆ”

ಕುಟುಂಬ: ವಿವಾಹಿತನು, ಕಡಿಮೆ ಪಕ್ಷ ಇಬ್ಬರು ಗಂಡುಮಕ್ಕಳು ಇದ್ದರು

ವಾಸಸ್ಥಾನ: ಯೆರೂಸಲೇಮ್‌

ಸೇವಾವಧಿ: 46 ವರ್ಷಗಳಿಗಿಂತ ಕಡಿಮೆಯಲ್ಲ. ಸುಮಾರು ಸಾ.ಶ.ಪೂ. 778 ರಿಂದ ಸಾ.ಶ.ಪೂ. 732 ರ ನಂತರದ ವರೆಗೆ

ಯೆಹೂದದ ಸಮಕಾಲೀನ ಅರಸರು: ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ

ಸಮಕಾಲೀನ ಪ್ರವಾದಿಗಳು: ಮೀಕ, ಹೋಶೇಯ, ಓದೇದ

[ಪುಟ 6ರಲ್ಲಿರುವ ಚಿತ್ರ]

ಯೆಶಾಯನೂ ಅವನ ಹೆಂಡತಿಯೂ ದೇವರ ಆರಾಧನೆಯನ್ನು ಕೌಟುಂಬಿಕ ವಿಚಾರವನ್ನಾಗಿ ಮಾಡಿದರು