ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬನ್ನಿರಿ, ವಿಷಯಗಳನ್ನು ಸರಿಪಡಿಸಿಕೊಳ್ಳೋಣ’

‘ಬನ್ನಿರಿ, ವಿಷಯಗಳನ್ನು ಸರಿಪಡಿಸಿಕೊಳ್ಳೋಣ’

ಅಧ್ಯಾಯ ಮೂರು

‘ಬನ್ನಿರಿ, ವಿಷಯಗಳನ್ನು ಸರಿಪಡಿಸಿಕೊಳ್ಳೋಣ’

ಯೆಶಾಯ 1:​10-31

1, 2. ಯೆರೂಸಲೇಮ್‌ ಮತ್ತು ಯೆಹೂದದ ಪ್ರಭುಗಳು ಹಾಗೂ ಜನರನ್ನು ಯೆಹೋವನು ಯಾರಿಗೆ ಹೋಲಿಸುತ್ತಾನೆ, ಮತ್ತು ಇದೇಕೆ ಸಮಂಜಸ?

ಯೆರೂಸಲೇಮಿನ ನಿವಾಸಿಗಳು ಯೆಶಾಯ 1:​1-9ರಲ್ಲಿ ದಾಖಲೆಯಾಗಿರುವ ಖಂಡನೆಯನ್ನು ಕೇಳಿದ ಬಳಿಕ, ತಮ್ಮನ್ನು ಸಮರ್ಥಿಸಿಕೊಳ್ಳುವ ಅನಿಸಿಕೆಯನ್ನು ಪಡೆದಿರಬಹುದು. ತಾವು ಯೆಹೋವನಿಗೆ ಅರ್ಪಿಸುವ ಎಲ್ಲ ಯಜ್ಞಗಳಿಗೆ ಹೆಮ್ಮೆಯಿಂದ ಗಮನಸೆಳೆಯಲು ಅವರು ಇಷ್ಟಪಡುತ್ತಿರಬಹುದು. ಆದರೆ ಇಂತಹ ಮನೋಭಾವಗಳನ್ನು ಕುಗ್ಗಿಸುವ ಯೆಹೋವನ ಪ್ರತ್ಯುತ್ತರವನ್ನು 10ರಿಂದ 15ರ ವರೆಗಿನ ವಚನಗಳು ತಿಳಿಸುತ್ತವೆ. ಅದು ಆರಂಭಿಸುವುದು: “ಸೊದೋಮಿನ ಅಧಿಪತಿಗಳೇ, ಯೆಹೋವನ ಮಾತನ್ನು ಆಲಿಸಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ಧರ್ಮೋಪದೇಶವನ್ನು ಕೇಳಿರಿ!”​—ಯೆಶಾಯ 1:⁠10.

2 ಸೊದೋಮ್‌ ಗೊಮೋರಗಳ ನಾಶನಕ್ಕೆ ಅವುಗಳ ಜನರ ವಿಕೃತ ಲೈಂಗಿಕ ಆಚಾರಗಳು ಮಾತ್ರವಲ್ಲ, ಅವರ ಕಲ್ಲೆದೆಯ, ಅಹಂಕಾರದ ಮನೋಭಾವಗಳೂ ಕಾರಣವಾಗಿದ್ದವು. (ಆದಿಕಾಂಡ 18:​20, 21; 19:​4, 5, 23-25; ಯೆಹೆಜ್ಕೇಲ 16:​49, 50) ಆ ಶಾಪಗ್ರಸ್ತ ನಗರಗಳಿಗೆ ತಾವು ಹೋಲಿಸಲ್ಪಡುವುದನ್ನು ನೋಡಿ ಯೆಶಾಯನ ಶ್ರೋತೃಗಳು ತಲ್ಲಣಗೊಂಡಿದ್ದಿರಬೇಕು. * ಆದರೆ ಯೆಹೋವನು ತನ್ನ ಜನರ ನಿಜ ಸ್ಥಿತಿಯನ್ನು ನೋಡುತ್ತಾನಾದುದರಿಂದ, ಯೆಶಾಯನು ದೇವರ ಈ ಸಂದೇಶವನ್ನು ಅವರ ‘ಕಿವಿ ತುರಿಸಲಿಕ್ಕಾಗಿ’ (NW) ಮೃದುಗೊಳಿಸುವುದಿಲ್ಲ.​—⁠2 ತಿಮೊಥೆಯ 4:⁠3.

3. ಜನರ ಯಜ್ಞಗಳಿಂದ ತನಗೆ “ಸಾಕಾಯಿತು” ಎಂದು ಯೆಹೋವನಂದಾಗ ಅದರ ಅರ್ಥವೇನು, ಮತ್ತು ಅದು ಏಕೆ ಹಾಗೆ?

3 ತನ್ನ ಜನರ ಬಾಹ್ಯಾಚರಣೆಯ ಆರಾಧನೆಯ ಕುರಿತು ಯೆಹೋವನಿಗೆ ಹೇಗನಿಸುತ್ತದೆಂದು ಗಮನಿಸಿ: “ಯೆಹೋವನು ಹೀಗೆನ್ನುತ್ತಾನೆ​—⁠ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿಕುರಿಹೋತಗಳ ರಕ್ತಕ್ಕೆ ನಾನು ಒಲಿಯೆನು.” (ಯೆಶಾಯ 1:11) ಯೆಹೋವನು ಅವರ ಯಜ್ಞಗಳ ಮೇಲೆ ಹೊಂದಿಕೊಂಡಿಲ್ಲ ಎಂಬುದನ್ನು ಜನರು ಮರೆತಿದ್ದಾರೆ. (ಕೀರ್ತನೆ 50:​8-13) ಮನುಷ್ಯರು ಅರ್ಪಿಸುವ ಯಾವುದೇ ವಸ್ತುಗಳ ಅಗತ್ಯ ಆತನಿಗಿಲ್ಲ. ಆದುದರಿಂದ, ತಮ್ಮ ಅರೆಮನಸ್ಸಿನ ಕಾಣಿಕೆಗಳನ್ನು ಕೊಡುವುದರಿಂದ ದೇವರಿಗೆ ಸಹಾಯಮಾಡುತ್ತಿದ್ದೇವೆಂದು ಜನರು ನೆನಸುವುದಾದರೆ ಅದು ಅವರ ತಪ್ಪು ತಿಳಿವಳಿಕೆಯಾಗಿದೆ. ಅದಕ್ಕಾಗಿ ಯೆಹೋವನು ಒಂದು ಬಲವಾದ ರೂಪಕವನ್ನು ಉಪಯೋಗಿಸುತ್ತಾನೆ. “ನನಗೆ ಸಾಕಾಯಿತು” ಎಂಬ ಪದಪ್ರಯೋಗವನ್ನು “ನನಗೆ ತಿಂದು ಸಾಕಾಗಿದೆ,” ಅಥವಾ “ನಾನು ಕಂಠಪೂರ್ತಿ ತಿಂದಿದ್ದೇನೆ” ಎಂದೂ ಭಾಷಾಂತರಿಸಬಹುದು. ಮಿತಿಮೀರಿ ತಿಂದ ಮೇಲೆ ಆಹಾರವನ್ನು ಕೇವಲ ನೋಡುವುದರಿಂದಲೇ ಬರುವ ಜುಗುಪ್ಸೆಯ ಅನಿಸಿಕೆ ನಿಮಗಾಗಿದೆಯೇ? ಆ ಅರ್ಪಣೆಗಳ ವಿಷಯದಲ್ಲಿ ಯೆಹೋವನಿಗೆ ಹಾಗೆಯೇ ಅನಿಸಿತು, ಅಂದರೆ ಆತನಿಗೆ ತೀರ ಜುಗುಪ್ಸೆಯುಂಟಾಯಿತು!

4. ಯೆರೂಸಲೇಮಿನ ದೇವಾಲಯದಲ್ಲಿ ಜನರು ಹಾಜರಾಗುವುದರ ಶೂನ್ಯತೆಯನ್ನು ಯೆಶಾಯ 1:12 ಹೇಗೆ ಬಯಲುಪಡಿಸುತ್ತದೆ?

4 ಯೆಹೋವನು ಮುಂದುವರಿಸುವುದು: “ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ನೀವು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿಯಲು ಯಾರು ನಿಮ್ಮನ್ನು ಕೇಳಿಕೊಂಡರು?” (ಯೆಶಾಯ 1:12) ‘ಸನ್ನಿಧಿಯಲ್ಲಿ ಕಾಣಿಸಿಕೊಳ್ಳಲು’ ಬರಬೇಕೆಂಬುದು, ಅಂದರೆ ಯೆರೂಸಲೇಮಿನ ದೇವಾಲಯದಲ್ಲಿ ಉಪಸ್ಥಿತರಾಗಬೇಕೆಂಬುದು ಸ್ವತಃ ಯೆಹೋವನ ನಿಯಮವಾಗಿರುವುದಿಲ್ಲವೊ? (ವಿಮೋಚನಕಾಂಡ 34:​23, 24) ಹೌದು, ಆದರೆ ಅವರು ಅಲ್ಲಿಗೆ ಹೋಗುತ್ತಿದ್ದುದು ಕೇವಲ ಬಾಹ್ಯಾಚರಣೆಯಾಗಿತ್ತು, ಶುದ್ಧ ಪ್ರಚೋದನೆಗಳಿಲ್ಲದ ಶುದ್ಧಾರಾಧನೆಯ ಕೇವಲ ಅಭಿನಯವಾಗಿತ್ತು. ಆತನ ಅಂಗಣಗಳಿಗೆ ಅವರು ಕೊಡುತ್ತಿದ್ದ ಅನೇಕಾನೇಕ ಭೇಟಿಗಳು ಯೆಹೋವನಿಗೆ ಕೇವಲ ‘ತುಳಿತ’ಗಳಂತಿವೆ, ಕೇವಲ ನೆಲವನ್ನು ಸವೆಯಿಸುವವುಗಳಾಗಿವೆ.

5. ಯೆಹೂದ್ಯರು ಮಾಡುವ ಕೆಲವು ಆರಾಧನಾ ಆಚರಣೆಗಳು ಯಾವುವು ಮತ್ತು ಇವು ಏಕೆ ಯೆಹೋವನಿಗೆ “ಭಾರ”ವಾಗಿ ಪರಿಣಮಿಸಿವೆ?

5 ಆದುದರಿಂದ ಯೆಹೋವನು ಇನ್ನೂ ಬಿರುಸಾದ ಭಾಷೆಯನ್ನು ಉಪಯೋಗಿಸುವುದು ಆಶ್ಚರ್ಯವಲ್ಲ! “ವ್ಯರ್ಥನೈವೇದ್ಯವನ್ನು ಇನ್ನು ತಾರದಿರಿ, ಧೂಪವು ನನಗೆ ಅಸಹ್ಯ; ಅಮಾವಾಸ್ಯೆ, ಸಬ್ಬತ್‌ದಿನ, ಕೂಟಪ್ರಕಟನೆ, ಇವು ಬೇಡ; ಅಧರ್ಮದಿಂದ [“ಅಲೌಕಿಕ ಶಕ್ತಿಯಿಂದ,” NW] ಕೂಡಿದ ಸಂಘವನ್ನು ನಾನು ಸಹಿಸಲಾರೆನು. ನಿಮ್ಮ ಅಮಾವಾಸ್ಯೆಗಳನ್ನೂ ಉತ್ಸವದಿನಗಳನ್ನೂ ಹಗೆ ಮಾಡುತ್ತೇನೆ; ಇವು ನನಗೆ ಭಾರ; ಸಹಿಸಲು ಬೇಸರ [“ಆಯಾಸ,” NW].” (ಯೆಶಾಯ 1:13, 14) ಧಾನ್ಯ ನೈವೇದ್ಯಗಳು, ಧೂಪ, ಸಬ್ಬತ್ತುಗಳು ಮತ್ತು ವಿಧಿವಿಹಿತ ಸಮ್ಮೇಳನಗಳು​—⁠ಇವೆಲ್ಲ ದೇವರು ಇಸ್ರಾಯೇಲಿಗೆ ಕೊಟ್ಟ ನಿಯಮದ ಭಾಗವಾಗಿವೆ. “ಅಮಾವಾಸ್ಯೆ”ಗಳ ಸಂಬಂಧದಲ್ಲಿ ಅದನ್ನು ಕೇವಲ ಆಚರಿಸಬೇಕೆಂದಷ್ಟೇ ಧರ್ಮಶಾಸ್ತ್ರವು ಹೇಳುತ್ತದಾದರೂ, ಹಿತಕರ ಸಂಪ್ರದಾಯಗಳು ಈ ಆಚರಣೆಗಳನ್ನು ಕಾಲಕ್ರಮೇಣ ಸುತ್ತುವರಿದಿವೆ. (ಅರಣ್ಯಕಾಂಡ 10:10; 28:11) ಅಮಾವಾಸ್ಯೆಯನ್ನು ಮಾಸಿಕ ಸಬ್ಬತ್ತಾಗಿ ಆಚರಿಸಲಾಗುತ್ತದೆ. ಅಂದು ಜನರು ಕೆಲಸವನ್ನು ಮಾಡದೆ, ಪ್ರವಾದಿ ಮತ್ತು ಯಾಜಕರಿಂದ ಶಿಕ್ಷಣವನ್ನು ಪಡೆಯಲು ಕೂಡಿಬರುತ್ತಾರೆ. (2 ಅರಸುಗಳು 4:23; ಯೆಹೆಜ್ಕೇಲ 46:3; ಆಮೋಸ 8:4) ಇಂತಹ ಆಚರಣೆಗಳು ತಪ್ಪಲ್ಲ. ಆದರೆ ಅವುಗಳನ್ನು ಕೇವಲ ಪ್ರದರ್ಶನಕ್ಕಾಗಿ ಮಾಡುವುದು ತಪ್ಪು. ಅಲ್ಲದೆ, ದೇವರ ನಿಯಮದ ಬಾಹ್ಯಾಚರಣೆಯೊಂದಿಗೆ, ಯೆಹೂದ್ಯರು “ಅಲೌಕಿಕ ಶಕ್ತಿ” ಅಂದರೆ ಪ್ರೇತವ್ಯವಹಾರವನ್ನೂ ಮಾಡುತ್ತಿದ್ದಾರೆ. * ಹೀಗೆ ಅವರು ಯೆಹೋವನಿಗೆ ಮಾಡುವ ಆರಾಧನಾ ಕ್ರಿಯೆಗಳು ಆತನಿಗೆ “ಭಾರ” ಆಗಿವೆ.

6. ಯೆಹೋವನು ಯಾವ ಅರ್ಥದಲ್ಲಿ “ಆಯಾಸ”ಗೊಂಡಿದ್ದಾನೆ?

6 ಆದರೆ, ಯೆಹೋವನಿಗೆ “ಆಯಾಸ” ಆಗುವುದಾದರೂ ಹೇಗೆ? ಎಷ್ಟೆಂದರೂ ಯೆಹೋವನು “ಅತಿ ಬಲಾಢ್ಯನೂ ಮಹಾಶಕ್ತನೂ” ಆಗಿದ್ದಾನೆ. “ಆತನು ದಣಿದು ಬಳಲುವದಿಲ್ಲ.” (ಯೆಶಾಯ 40:​26, 28) ಯೆಹೋವನು ಇಲ್ಲಿ ತನ್ನ ಅನಿಸಿಕೆಗಳನ್ನು ತಿಳಿಯಪಡಿಸಲು ಒಂದು ಸುವ್ಯಕ್ತವಾದ ರೂಪಕವನ್ನು ಉಪಯೋಗಿಸುತ್ತಿದ್ದಾನೆ. ನೀವು ಎಂದಾದರೂ ಒಂದು ಭಾರವಾದ ಹೊರೆಯನ್ನು, ಆಯಾಸದಿಂದ ಬಳಲಿ ಹೋಗುವ ತನಕ ಹೊತ್ತುಕೊಂಡು, ಅದನ್ನು ಯಾವಾಗ ಎಸೆದುಬಿಟ್ಟೇನೆಂದೂ ಹಂಬಲಿಸಿದ್ದುಂಟೊ? ತನ್ನ ಜನರ ಕಪಟಾರಾಧನೆಯ ಕೃತ್ಯಗಳ ಕುರಿತಾಗಿ ಯೆಹೋವನಿಗೆ ಅಂತಹದ್ದೇ ಅನಿಸಿಕೆಯಾಗುತ್ತದೆ.

7. ಜನರ ಪ್ರಾರ್ಥನೆಗಳಿಗೆ ಕಿವಿಗೊಡುವುದನ್ನು ಯೆಹೋವನು ಏಕೆ ನಿಲ್ಲಿಸಿದ್ದಾನೆ?

7 ಈಗ ಯೆಹೋವನು ಆರಾಧನಾ ಕ್ರಿಯೆಗಳಲ್ಲೇ ಅತಿ ಆತ್ಮೀಯವೂ ವೈಯಕ್ತಿಕವೂ ಆದ ಕ್ರಿಯೆಯನ್ನು ಸಂಬೋಧಿಸುತ್ತಾನೆ: “ನೀವು [ನನ್ನ ಕಡೆಗೆ] ಕೈಯೆತ್ತುವಾಗ ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.” (ಯೆಶಾಯ 1:15) ಕೈಯೆತ್ತುವುದು ಅಂದರೆ ಅಂಗೈಗಳನ್ನು ಮೇಲ್ಮುಖ ಮಾಡಿ ಕೈಚಾಚುವುದು, ಮೊರೆಯಿಟ್ಟು ಬೇಡುವ ಭಾವಾಭಿನಯವಾಗಿದೆ. ಆದರೆ ಈ ಅಭಿನಯವು ಯೆಹೋವನಿಗೆ ಅರ್ಥಶೂನ್ಯವಾಗಿದೆ, ಏಕೆಂದರೆ ಈ ಜನರ ಕೈಗಳು ರಕ್ತಪಾತದಿಂದ ಮಲಿನಗೊಂಡಿವೆ. ದೇಶದಲ್ಲಿ ಹಿಂಸಾಚಾರ ಎಲ್ಲೆಲ್ಲೂ ಹಬ್ಬಿಕೊಂಡಿದೆ. ಬಲಹೀನರ ಮೇಲಿನ ದಬ್ಬಾಳಿಕೆ ಸಾಮಾನ್ಯವಾಗಿರುತ್ತದೆ. ಇಂತಹ ದುರಾಚಾರಿಗಳೂ ಸ್ವಾರ್ಥಿಗಳೂ ಆದವರು ಯೆಹೋವನಿಗೆ ಪ್ರಾರ್ಥಿಸಿ ಆಶೀರ್ವಾದಗಳನ್ನು ಯಾಚಿಸುವುದು ಅಶ್ಲೀಲವೇ ಸರಿ. “ನಾನು ಕೇಳೆನು” ಎಂದು ಯೆಹೋವನು ಹೇಳುವುದರಲ್ಲಿ ಆಶ್ಚರ್ಯವೇ ಇಲ್ಲ!

8. ಕ್ರೈಸ್ತಪ್ರಪಂಚವು ಇಂದು ಯಾವ ತಪ್ಪನ್ನು ಮಾಡುತ್ತದೆ, ಮತ್ತು ಕ್ರೈಸ್ತರಲ್ಲಿ ಕೆಲವರು ತದ್ರೀತಿಯ ಬಲೆಯೊಳಗೆ ಹೇಗೆ ಬೀಳುತ್ತಾರೆ?

8 ಅಂತೆಯೇ, ಈ ದಿನಗಳಲ್ಲಿ, ವ್ಯರ್ಥವಾದ ಪ್ರಾರ್ಥನೆಗಳ ಸತತ ಜಪಿಸುವಿಕೆ ಮತ್ತು ಇತರ ಧಾರ್ಮಿಕ “ಕಾರ್ಯ”ಗಳಿಂದ ಕ್ರೈಸ್ತಪ್ರಪಂಚವೂ ದೇವರ ಅನುಗ್ರಹವನ್ನು ಪಡೆಯುವುದರಲ್ಲಿ ತಪ್ಪಿಹೋಗಿದೆ. (ಮತ್ತಾಯ 7:​21-23) ಆದುದರಿಂದ ನಾವೂ ಅದೇ ಬಲೆಯೊಳಗೆ ಸಿಕ್ಕಿಬೀಳದಿರುವುದು ಅತಿ ಪ್ರಾಮುಖ್ಯ. ಒಮ್ಮೊಮ್ಮೆ ಕ್ರೈಸ್ತನೊಬ್ಬನು ಘೋರ ಪಾಪಾಚಾರದಲ್ಲಿ ಸಿಕ್ಕಿಬೀಳುತ್ತಾನೆ. ನಂತರ, ತನ್ನ ಪಾಪವನ್ನು ಅಡಗಿಸಿಟ್ಟುಕೊಂಡು ಕ್ರೈಸ್ತ ಸಭೆಯ ಚಟುವಟಿಕೆಗಳನ್ನು ಹೆಚ್ಚಿಸುವಲ್ಲಿ, ತನ್ನ ಪಾಪಗಳಿಗೆ ಆ ಚಟುವಟಿಕೆಗಳು ಈಡುಕಟ್ಟುವವು ಎಂದು ತರ್ಕಿಸುತ್ತಾನೆ. ಅಂತಹ ಔಪಚಾರಿಕ ಕ್ರಿಯೆಗಳು ಯೆಹೋವನನ್ನು ಮೆಚ್ಚಿಸುವುದಿಲ್ಲ. ಆತ್ಮಿಕ ಕಾಯಿಲೆಗಿರುವ ಔಷಧಿಯು ಒಂದೇ ಒಂದು. ಅದನ್ನು ಯೆಶಾಯನ ಮುಂದಿನ ವಚನಗಳು ತೋರಿಸುತ್ತವೆ.

ಆತ್ಮಿಕ ಕಾಯಿಲೆಗಿರುವ ಏಕಮಾತ್ರ ಔಷಧ

9, 10. ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯಲ್ಲಿ ಶುದ್ಧತೆಯು ಎಷ್ಟು ಪ್ರಾಮುಖ್ಯ?

9 ಕನಿಕರವುಳ್ಳ ಯೆಹೋವ ದೇವರು ಈಗ ಆದರಣೆಯ, ಹೆಚ್ಚು ಹೃದಯಸ್ಪಂದಿಸುವ ಸ್ವರದಲ್ಲಿ ಮಾತನಾಡುತ್ತಾನೆ: “ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ; ಸದಾಚಾರವನ್ನು ಅಭ್ಯಾಸಮಾಡಿರಿ [“ಮಾಡಲು ಕಲಿಯಿರಿ,” NW]; ನ್ಯಾಯನಿರತರಾಗಿರಿ [“ನ್ಯಾಯಕ್ಕಾಗಿ ಹುಡುಕಿರಿ,” NW], ಹಿಂಸಕನನ್ನು ತಿದ್ದಿ ಸರಿಪಡಿಸಿರಿ, ಅನಾಥನಿಗೆ ನ್ಯಾಯ ತೀರಿಸಿರಿ, ವಿಧವೆಯ ಪಕ್ಷವಾಗಿ ವಾದಿಸಿರಿ.” (ಯೆಶಾಯ 1:16, 17) ಇಲ್ಲಿ ನಾವು ಒಂಬತ್ತು ಅವಶ್ಯ ಕರ್ತವ್ಯಗಳ ಇಲ್ಲವೆ ಆಜ್ಞೆಗಳ ಒಂದು ಪಟ್ಟಿಯನ್ನು ಕಂಡುಕೊಳ್ಳುತ್ತೇವೆ. ಅದರಲ್ಲಿ ಪ್ರಥಮ ನಾಲ್ಕು ವಿಷಯಗಳು ಪಾಪ ನಿವಾರಣೆಯನ್ನು ಒಳಗೊಂಡಿರುವುದರಿಂದ ನಕಾರಾತ್ಮಕವಾಗಿವೆ. ಆದರೆ ಕೊನೆಯ ಐದು ವಿಷಯಗಳು ಯೆಹೋವನ ಆಶೀರ್ವಾದವನ್ನು ಪಡೆಯುವುದಕ್ಕೆ ನಡೆಸುವಂತಹ ಸಕಾರಾತ್ಮಕವಾದ ವಿಷಯಗಳಾಗಿವೆ.

10 ತೊಳೆಯುವಿಕೆ ಮತ್ತು ಶುದ್ಧೀಕರಣಗಳು ಯಾವಾಗಲೂ ಶುದ್ಧಾರಾಧನೆಯ ಪ್ರಮುಖ ಭಾಗವಾಗಿವೆ. (ವಿಮೋಚನಕಾಂಡ 19:​10, 11; 30:20; 2 ಕೊರಿಂಥ 7:⁠1) ಆದರೆ ಈ ಶುದ್ಧಗೊಳಿಸುವಿಕೆ ತನ್ನ ಆರಾಧಕರಲ್ಲಿ ಆಳಕ್ಕಿಳಿಯಬೇಕು, ಸಾಕ್ಷಾತ್‌ ಅವರ ಹೃದಯವನ್ನು ತಲಪಬೇಕೆಂಬುದು ಯೆಹೋವನ ಬಯಕೆ. ಅತ್ಯಂತ ಪ್ರಾಮುಖ್ಯವಾದ ಸಂಗತಿಯು ನೈತಿಕ ಹಾಗೂ ಆತ್ಮಿಕ ಶುದ್ಧತೆಯಾಗಿದೆ ಮತ್ತು ಯೆಹೋವನು ಇಲ್ಲಿ ಸೂಚಿಸುವುದು ಇದನ್ನೇ. 16ನೆಯ ವಚನದ ಮೊದಲನೆಯ ಎರಡು ಆಜ್ಞೆಗಳು ಕೇವಲ ಪುನರಾವರ್ತನೆಯಲ್ಲ. ಒಬ್ಬ ಹೀಬ್ರು ವ್ಯಾಕರಣಜ್ಞನು, “ನಿಮ್ಮನ್ನು ತೊಳೆದುಕೊಳ್ಳಿರಿ” ಎಂಬ ಪ್ರಥಮ ಹೇಳಿಕೆಯು ಶುದ್ಧಗೊಳಿಸುವಿಕೆಯ ಆದಿಭಾಗವನ್ನು ಸೂಚಿಸುತ್ತದೆಂತಲೂ, “ಶುದ್ಧಮಾಡಿಕೊಳ್ಳಿರಿ” ಎಂಬ ಎರಡನೆಯ ಹೇಳಿಕೆಯು ಆ ಶುದ್ಧತೆಯನ್ನು ಇಟ್ಟುಕೊಳ್ಳಲು ಮಾಡುವ ಸತತ ಪ್ರಯತ್ನಗಳನ್ನು ಸೂಚಿಸುತ್ತದೆಂತಲೂ ಹೇಳುತ್ತಾನೆ.

11. ಪಾಪದೊಂದಿಗೆ ಹೋರಾಡಲು ನಾವೇನು ಮಾಡಬೇಕು ಮತ್ತು ನಾವೇನನ್ನು ಮಾಡಲೇಬಾರದು?

11 ನಾವು ಯೆಹೋವನಿಂದ ಯಾವುದನ್ನೂ ಅಡಗಿಸಿಡಲಾರೆವು. (ಯೋಬ 34:22; ಜ್ಞಾನೋಕ್ತಿ 15:3; ಇಬ್ರಿಯ 4:13) ಆದುದರಿಂದ, “ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ” ಎಂಬ ಆತನ ಆಜ್ಞೆಗೆ, ಕೆಟ್ಟದ್ದನ್ನು ನಿಲ್ಲಿಸಿರಿ ಎಂಬ ಒಂದೇ ಅರ್ಥ ಮಾತ್ರ ಇರಬಲ್ಲದು. ಘೋರ ಪಾಪಗಳನ್ನು ಮುಚ್ಚಿಡಬಾರದೆಂಬುದನ್ನು ಇದು ನಿಶ್ಚಿತವಾಗಿಯೂ ಅರ್ಥೈಸುತ್ತದೆ, ಏಕೆಂದರೆ ಹಾಗೆ ಮಾಡುವುದೂ ಒಂದು ಪಾಪವಾಗಿದೆ. ಜ್ಞಾನೋಕ್ತಿ 28:13 ಎಚ್ಚರಿಸುವುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.”

12. (ಎ) ‘ಸದಾಚಾರವನ್ನು ಕಲಿಯುವುದು’ ಏಕೆ ಪ್ರಾಮುಖ್ಯ? (ಬಿ) “ನ್ಯಾಯಕ್ಕಾಗಿ ಹುಡುಕಿರಿ,” ಮತ್ತು “ಹಿಂಸಕನನ್ನು ತಿದ್ದಿ ಸರಿಪಡಿಸಿರಿ,” ಎಂಬ ನಿರ್ದೇಶಗಳನ್ನು ವಿಶೇಷವಾಗಿ ಹಿರಿಯರು ಹೇಗೆ ಅನ್ವಯಿಸಬಹುದು?

12 ಯೆಶಾಯ ಅಧ್ಯಾಯ 1ರ 17ನೆಯ ವಚನದಲ್ಲಿ ಯೆಹೋವನು ಆಜ್ಞಾಪಿಸುವಂತಹ ಸಕಾರಾತ್ಮಕ ಕ್ರಿಯೆಗಳಿಂದ ಕಲಿಯಲು ಅನೇಕ ಪಾಠಗಳಿವೆ. “ಸದಾಚಾರವನ್ನು ಮಾಡಿರಿ” ಎಂದು ಮಾತ್ರ ಹೇಳದೆ, “ಸದಾಚಾರವನ್ನು ಕಲಿಯಿರಿ” ಎಂದು ಅಲ್ಲಿ ಹೇಳುತ್ತಾನೆಂಬುದನ್ನು ಲಕ್ಷಿಸಿರಿ. ದೇವರ ದೃಷ್ಟಿಯಲ್ಲಿ ಯಾವುದು ಸರಿ ಎಂದು ತಿಳಿಯಲು ಮತ್ತು ಅದನ್ನು ಮಾಡಲು ದೇವರ ವಾಕ್ಯದ ವೈಯಕ್ತಿಕ ಅಧ್ಯಯನ ಅಗತ್ಯ. ಅಲ್ಲದೆ, “ನ್ಯಾಯ ಸಲ್ಲಿಸಿರಿ” ಎಂದು ಮಾತ್ರ ಯೆಹೋವನು ಹೇಳದೆ, “ನ್ಯಾಯಕ್ಕಾಗಿ ಹುಡುಕಿರಿ,” ಎಂದೂ ಹೇಳುತ್ತಾನೆ. ಕೆಲವು ಜಟಿಲ ವಿಷಯಗಳಲ್ಲಿ ನ್ಯಾಯವಾದ ಮಾರ್ಗವನ್ನು ಕಂಡುಹಿಡಿಯಲು ಅನುಭವಸ್ಥ ಹಿರಿಯರೂ ದೇವರ ವಾಕ್ಯದ ಪೂರ್ಣವಾದ ಪರಿಶೋಧನೆಯನ್ನು ಮಾಡಬೇಕಾಗುತ್ತದೆ. ಯೆಹೋವನು ಮುಂದಕ್ಕೆ ಆಜ್ಞಾಪಿಸುವಂತೆ “ಹಿಂಸಕನನ್ನು ತಿದ್ದಿ” ಸರಿಪಡಿಸುವುದೂ ಅವರ ಜವಾಬ್ದಾರಿ. ಈ ನಿರ್ದೇಶಗಳು ಇಂದಿನ ಕ್ರೈಸ್ತ ಕುರುಬರಿಗೆ ಅಗತ್ಯ, ಏಕೆಂದರೆ, “ಕ್ರೂರವಾದ ತೋಳ”ಗಳಿಂದ ಅವರು ಮಂದೆಯನ್ನು ರಕ್ಷಿಸಬಯಸುತ್ತಾರೆ.​—⁠ಅ. ಕೃತ್ಯಗಳು 20:​28-30.

13. ವಿಧವೆಯರ ಮತ್ತು ಅನಾಥರ ವಿಷಯದಲ್ಲಿರುವ ಆಜ್ಞೆಗಳನ್ನು ನಾವು ಇಂದು ಹೇಗೆ ಅನ್ವಯಿಸಿಕೊಳ್ಳಬಹುದು?

13 ಕೊನೆಯ ಎರಡು ಆಜ್ಞೆಗಳು ದೇವಜನರ ನಡುವೆ ಇರುವ ವಿಧವೆಯರು ಮತ್ತು ಅನಾಥರನ್ನು ಒಳಗೂಡುತ್ತವೆ. ಇಂಥವರು ಸುಲಭವಾಗಿ ಅಪಾಯಕ್ಕೊಳಗಾಗಬಲ್ಲರು. ಯಾಕೆಂದರೆ ಜಗತ್ತು ಇಂತಹವರನ್ನು ಸ್ವಪ್ರಯೋಜನಕ್ಕಾಗಿ ದುರುಪಯೋಗಿಸಿಕೊಳ್ಳಲು ಸದಾ ಸಿದ್ಧವಾಗಿದೆ. ಆದರೆ ದೇವರ ಜನರ ಮಧ್ಯೆ ಹಾಗಿರಬಾರದು. ಪ್ರೀತಿಯುಳ್ಳ ಹಿರಿಯರು ಸಭೆಯ ಅನಾಥ ಹುಡುಗ ಹುಡುಗಿಯರಿಗೆ ‘ನ್ಯಾಯತೀರಿಸುತ್ತಾರೆ’ ಮಾತ್ರವಲ್ಲ, ಈ ಎಳೆಯರನ್ನು ಸ್ವಪ್ರಯೋಜನಕ್ಕಾಗಿ ಬಳಸಿ, ಕೆಡಿಸಬಯಸುವ ಜಗತ್ತಿನಲ್ಲಿ ಅವರಿಗೆ ನ್ಯಾಯ ಮತ್ತು ಸಂರಕ್ಷಣೆಯನ್ನು ದೊರಕಿಸಿಕೊಡಲು ಸಹಾಯಮಾಡುತ್ತಾರೆ. ಹಿರಿಯರು ವಿಧವೆಯ “ಪಕ್ಷವಾಗಿ ವಾದಿಸು”ತ್ತಾರೆ ಅಥವಾ ಹೀಬ್ರು ಪದವು ಇಲ್ಲಿ ಆಕೆಯ ಪರವಾಗಿ “ಶ್ರಮಿಸುತ್ತಾರೆ” ಎಂಬ ಅರ್ಥವನ್ನೂ ಕೊಡಬಲ್ಲದು. ಆದುದರಿಂದ, ನಮ್ಮ ಮಧ್ಯೆ ಇರುವ ದಿಕ್ಕಿಲ್ಲದವರು ಯೆಹೋವನಿಗೆ ಅಮೂಲ್ಯರಾಗಿರುವುದರಿಂದ, ಎಲ್ಲ ಕ್ರೈಸ್ತರು ಅವರಿಗೆ ಆಶ್ರಯ, ಆದರಣೆ ಮತ್ತು ನ್ಯಾಯದ ಮೂಲವಾಗಿರಲು ಬಯಸಬೇಕು.​—⁠ಮೀಕ 6:8; ಯಾಕೋಬ 1:⁠27.

14. ಯೆಶಾಯ 1:​16, 17ರಲ್ಲಿ ಯಾವ ಸಕಾರಾತ್ಮಕ ಸಂದೇಶವು ಕೊಡಲ್ಪಟ್ಟಿದೆ?

14 ಈ ಒಂಬತ್ತು ಆಜ್ಞೆಗಳ ಮೂಲಕ ಯೆಹೋವನು ಎಷ್ಟು ದೃಢವಾದ, ಸಕಾರಾತ್ಮಕ ಸಂದೇಶವನ್ನು ತಿಳಿಯಪಡಿಸುತ್ತಾನೆ! ಪಾಪದಲ್ಲಿ ಸಿಕ್ಕಿಬಿದ್ದಿರುವವರು ಕೆಲವು ಸಲ, ಸರಿಯಾದದ್ದನ್ನು ಮಾಡುವುದು ತಮ್ಮ ಶಕ್ತಿಗೆ ಮೀರಿದ್ದೆಂದು ಭಾವಿಸುತ್ತಾರೆ. ಇಂತಹ ಭಾವನೆಗಳು ನಿರುತ್ತೇಜಕವಾಗಿರುತ್ತವೆ. ಅಲ್ಲದೆ, ಅವರ ಈ ಮನಗಾಣಿಕೆಯು ತಪ್ಪು. ಏಕೆಂದರೆ, ಯೆಹೋವನ ಸಹಾಯದ ಮೂಲಕ ಯಾವನೇ ಪಾಪಿಯು ತನ್ನ ಪಾಪಮಾರ್ಗವನ್ನು ಬಿಟ್ಟು, ಪರಿವರ್ತನೆ ಹೊಂದಿ ಒಳ್ಳೆಯದನ್ನು ಮಾಡಬಲ್ಲನೆಂಬುದು ಯೆಹೋವನಿಗೆ ಗೊತ್ತಿರುವುದು ಮಾತ್ರವಲ್ಲ ನಾವೂ ಅದನ್ನು ತಿಳಿದಿರಬೇಕೆಂದು ಆತನು ಬಯಸುತ್ತಾನೆ.

ಸಹಾನುಭೂತಿಯ, ನ್ಯಾಯವಾದ ಯಾಚನೆ

15. “ಬನ್ನಿರಿ, ವಿಷಯಗಳನ್ನು ಸರಿಪಡಿಸಿಕೊಳ್ಳೋಣ” ಎಂಬ ಪದಸರಣಿಯನ್ನು ಕೆಲವು ಸಾರಿ ಹೇಗೆ ತಪ್ಪು ಅರ್ಥ ಮಾಡಿಕೊಳ್ಳಲಾಗುತ್ತದೆ, ಮತ್ತು ಅದರ ನಿಜಾರ್ಥವೇನು?

15 ಈಗ ಯೆಹೋವನ ಧ್ವನಿ ಇನ್ನೂ ಹೆಚ್ಚು ಹೃತ್ಪೂರ್ವಕವೂ ಸಹಾನುಭೂತಿಯದ್ದೂ ಆಗುತ್ತದೆ. “ಬನ್ನಿರಿ, ವಾದಿಸುವ [“ವಿಷಯಗಳನ್ನು ಸರಿಪಡಿಸಿಕೊಳ್ಳೋಣ,” NW] ಎಂದು ಯೆಹೋವನು ಅನ್ನುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.” (ಯೆಶಾಯ 1:18) ಈ ಸೊಗಸಾದ ವಚನದಲ್ಲಿರುವ ಆರಂಭದ ಆಮಂತ್ರಣವನ್ನು ಅನೇಕ ವೇಳೆ ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ದ ನ್ಯೂ ಇಂಗ್ಲಿಷ್‌ ಬೈಬಲ್‌, ಎರಡೂ ಪಕ್ಷದವರು ಏಕಾಭಿಪ್ರಾಯಕ್ಕೆ ಬರಲು ಏನಾದರೂ ಒಪ್ಪಂದವನ್ನು ಮಾಡಿಕೊಳ್ಳಬೇಕೊ ಎಂಬಂತೆ, “ನಾವು ಅದನ್ನು ವಾದಿಸಿ ಮುಗಿಸೋಣ” ಎಂದು ಹೇಳುತ್ತದೆ. ಆದರೆ ವಿಷಯವು ಹಾಗಿಲ್ಲ! ಯೆಹೋವನಲ್ಲಿ ಯಾವ ತಪ್ಪೂ ಇಲ್ಲ, ಅದೂ ಈ ದಂಗೆಕೋರರೂ ಕಪಟಾಚಾರಿಗಳೂ ಆದ ಜನರೊಂದಿಗಿನ ವ್ಯವಹಾರದಲ್ಲಿ. (ಧರ್ಮೋಪದೇಶಕಾಂಡ 32:​4, 5) ಈ ವಚನವು ಇಬ್ಬರು ಸಮಾನಸ್ಥರ ಮಧ್ಯೆ ನಡೆಯುವ ಪರಸ್ಪರ ಒಪ್ಪಂದದ ಕುರಿತು ಮಾತಾಡದೆ, ನ್ಯಾಯವನ್ನು ಸ್ಥಾಪಿಸಲಿಕ್ಕಾಗಿರುವ ನ್ಯಾಯಸ್ಥಾನದ ಕುರಿತು ಮಾತಾಡುತ್ತದೆ. ಯೆಹೋವನು ಇಲ್ಲಿ ಇಸ್ರಾಯೇಲನ್ನು ನ್ಯಾಯಸ್ಥಾನಕ್ಕೆ ಆಹ್ವಾನಿಸುತ್ತಾನೋ ಎಂಬಂತೆ ಇದು ಇದೆ.

16, 17. ಯೆಹೋವನು ಘೋರ ಪಾಪಗಳನ್ನೂ ಕ್ಷಮಿಸಲು ಸಿದ್ಧನಿದ್ದಾನೆಂದು ನಮಗೆ ಹೇಗೆ ಗೊತ್ತು?

16 ಯೆಹೋವನೊಂದಿಗೆ ನ್ಯಾಯಸ್ಥಾನದಲ್ಲಿ ವಿಚಾರಣೆ ಎಂದು ಹೇಳುವಾಗ ಅದು ಸ್ವಲ್ಪ ಭಯಹುಟ್ಟಿಸಬಹುದು. ಆದರೆ, ಯೆಹೋವನು ಅತಿ ಕರುಣಾಳುವೂ ಸಹಾನುಭೂತಿಯುಳ್ಳವನೂ ಆದ ನ್ಯಾಯಾಧೀಶನಾಗಿದ್ದಾನೆ. ಕ್ಷಮಾಪಣೆಯ ವಿಷಯದಲ್ಲಿ ಆತನಿಗಿರುವ ಸಾಮರ್ಥ್ಯಕ್ಕೆ ಸಮಾನರಿಲ್ಲ. (ಕೀರ್ತನೆ 86:⁠5) “ಕಡು ಕೆಂಪಾಗಿ” ಇರುವ ಇಸ್ರಾಯೇಲಿನ ಪಾಪಗಳನ್ನು ತೆಗೆದು ಶುದ್ಧಮಾಡಿ “ಹಿಮದ ಹಾಗೆ ಬಿಳುಪು” ಮಾಡಲು ಆತನೊಬ್ಬನೇ ಶಕ್ತನು. ಯಾವುದೇ ಮಾನವ ಪ್ರಯತ್ನ, ಪುಣ್ಯ ಕಾರ್ಯಗಳ ವಿಧಾನ, ಯಜ್ಞ ಅಥವಾ ಪ್ರಾರ್ಥನೆಗಳು ಪಾಪದ ಕಲೆಯನ್ನು ತೊಲಗಿಸಲಾರವು. ಯೆಹೋವನ ಕ್ಷಮಾಪಣೆ ಮಾತ್ರ ಪಾಪವನ್ನು ತೊಳೆದು ಶುದ್ಧಮಾಡಬಲ್ಲದು. ಮತ್ತು ತನ್ನ ಷರತ್ತುಗಳ ಆಧಾರದ ಮೇಲೆ ಆತನು ಈ ಕ್ಷಮಾಪಣೆಯನ್ನು ಕೊಡುತ್ತಾನೆ. ಇದರಲ್ಲಿ ನಿಜವಾದ, ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ತೋರಿಸುವುದು ಒಂದು ಷರತ್ತಾಗಿದೆ.

17 ಈ ಸತ್ಯವು ಎಷ್ಟು ಪ್ರಾಮುಖ್ಯವಾಗಿದೆಯೆಂದರೆ ಯೆಹೋವನು ಇದನ್ನು ಕಾವ್ಯಾತ್ಮಕ ರೂಪದಲ್ಲಿ, ಪಾಪಗಳು “ಕಿರಮಂಜಿಬಣ್ಣವಾಗಿದ್ದರೂ” ಬಣ್ಣಬಳಿಯದ ಬಿಳಿ ಉಣ್ಣೆಯಂತಾಗುವವು ಎಂದು ಪುನರಾವರ್ತಿಸಿ ಹೇಳುತ್ತಾನೆ. ನಾವು ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದೇವೆಂದು ಯೆಹೋವನು ಕಂಡುಕೊಳ್ಳುವಲ್ಲಿ, ಆತನು ಕ್ಷಮಿಸುತ್ತಾನೆ. ಅವು ಘೋರ ಪಾಪಗಳಾಗಿರುವಲ್ಲಿಯೂ ಹಾಗೆ ಮಾಡಲು ಸಿದ್ಧನಿದ್ದಾನೆಂಬುದು ನಮಗೆ ತಿಳಿದಿರಬೇಕೆಂಬುದು ಆತನ ಬಯಕೆ. ಇದು ತಮ್ಮ ವಿಷಯದಲ್ಲಿ ನಿಜವಾಗಿದೆಯೆಂದು ನಂಬಲು ಸಂಶಯಪಡುವವರು, ಮನಸ್ಸೆಯಂತಹ ವ್ಯಕ್ತಿಗಳ ಉದಾಹರಣೆಗಳನ್ನು ಪರಿಗಣಿಸುವುದು ಉತ್ತಮ. ಮನಸ್ಸೆ ಎಷ್ಟೋ ವರ್ಷಗಳ ವರೆಗೆ ಭಯಂಕರ ಪಾಪಗಳನ್ನು ಮಾಡಿದನು. ಆದರೂ ಅವನು ಪಶ್ಚಾತ್ತಾಪಪಟ್ಟಾಗ ಕ್ಷಮಿಸಲ್ಪಟ್ಟನು. (2 ಪೂರ್ವಕಾಲವೃತ್ತಾಂತ 33:​9-16) ನಾವೆಲ್ಲರೂ, ಅಂದರೆ ಘೋರವಾದ ಪಾಪಗಳನ್ನು ಮಾಡಿರುವವರೂ ಸೇರಿ, ಆತನೊಂದಿಗೆ ‘ವಿಷಯಗಳನ್ನು ಸರಿಪಡಿಸಿಕೊಳ್ಳಲು’ ಕಾಲವು ಇನ್ನೂ ಮೀರಿ ಹೋಗಿಲ್ಲವೆಂದು ತಿಳಿದಿರಬೇಕೆಂಬುದನ್ನು ಯೆಹೋವನು ಬಯಸುತ್ತಾನೆ.

18. ತನ್ನ ದಂಗೆಕೋರ ಜನರ ಮುಂದೆ ಯೆಹೋವನು ಯಾವ ಆಯ್ಕೆಯನ್ನಿಡುತ್ತಾನೆ?

18 ತನ್ನ ಜನರಿಗೆ ಆಯ್ಕೆಯೊಂದನ್ನು ಮಾಡಲಿಕ್ಕಿದೆ ಎಂದು ಯೆಹೋವನು ಜ್ಞಾಪಕ ಹುಟ್ಟಿಸುತ್ತಾನೆ. “ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ; ಒಪ್ಪದೆ ತಿರುಗಿ ಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಈ ಮಾತು ಯೆಹೋವನೇ ನುಡಿದದ್ದು.” (ಯೆಶಾಯ 1:19, 20) ಇಲ್ಲಿ ಯೆಹೋವನು ಜನರ ಮನೋಭಾವಗಳಿಗೆ ಪ್ರಾಮುಖ್ಯತೆ ಕೊಡುತ್ತಾ, ತನ್ನ ಮಾತುಗಳು ಅವರಿಗೆ ಸರಿಯಾಗಿ ಅರ್ಥವಾಗುವಂತೆ ಇನ್ನೊಂದು ಸುವ್ಯಕ್ತವಾದ ರೂಪಕವನ್ನು ಬಳಸುತ್ತಾನೆ. ಯೆಹೂದಕ್ಕಿರುವ ಆಯ್ಕೆಯು ಇದೇ: ಒಂದೋ ತಿನ್ನು ಇಲ್ಲವೆ ತೀನಿಯಾಗು. ಯೆಹೋವನಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾಗುವ ಸಿದ್ಧ ಮನೋಭಾವವು ಇರುವಲ್ಲಿ ಅವರು ಭೂಮಿಯು ಉತ್ಪಾದಿಸುವ ಸುಫಲವನ್ನು ತಿನ್ನುವರು. ಆದರೆ, ತಮ್ಮ ದಂಗೆಕೋರ ಮನೋಭಾವಕ್ಕೇ ಅಂಟಿಕೊಂಡರೆ ಅವರು ವೈರಿಗಳ ಕತ್ತಿಗಳಿಗೆ ತೀನಿಯಾಗುವರು! ಆ ಜನರು ಕ್ಷಮಿಸುವಾತನಾದ ದೇವರ ಕರುಣೆ ಮತ್ತು ಸಮೃದ್ಧಿಗೆ ಬದಲಾಗಿ ವೈರಿಗಳ ಕತ್ತಿಯನ್ನು ಆರಿಸಿಕೊಳ್ಳುವರೆಂಬುದನ್ನು ಹೆಚ್ಚುಕಡಿಮೆ ಭಾವಿಸುವುದೂ ಅಸಾಧ್ಯವೆಂದು ತೋರುತ್ತದೆ. ಆದರೂ ಯೆಶಾಯನ ಮುಂದಿನ ವಚನಗಳು ತಿಳಿಸುವಂತೆ ಯೆರೂಸಲೇಮ್‌ ಅದನ್ನೇ ಆರಿಸಿಕೊಂಡಿತು.

ಒಲವಿನ ನಗರಕ್ಕೆ ಶೋಕಗೀತೆ

19, 20. (ಎ) ತಾನು ಅನುಭವಿಸುವ ದ್ರೋಹವನ್ನು ಯೆಹೋವನು ಹೇಗೆ ವ್ಯಕ್ತಪಡಿಸುತ್ತಾನೆ? (ಬಿ) ‘ನೀತಿಯು ಯೆರೂಸಲೇಮಿನಲ್ಲಿ ನೆಲೆಸಿದ್ದು’ ಯಾವ ವಿಧದಲ್ಲಿ?

19 ಈ ಸಮಯದಲ್ಲಿ ಯೆರೂಸಲೇಮಿನ ದುಷ್ಟತ್ವದ ಪೂರ್ತಿ ವ್ಯಾಪ್ತಿಯನ್ನು ನಾವು ಯೆಶಾಯ 1:​21-23ರಲ್ಲಿ ನೋಡುತ್ತೇವೆ. ಯೆಶಾಯನು ಈಗೊಂದು ಶೋಕಗೀತೆಯನ್ನು ಅಥವಾ ಪ್ರಲಾಪದ ಶೈಲಿಯಲ್ಲಿ ಪ್ರೇರಿತವಾದ ಕವಿತೆಯೊಂದನ್ನು ಆರಂಭಿಸುತ್ತಾನೆ: “ಅಯ್ಯೋ, ಸುವ್ರತೆಯಾಗಿದ್ದ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ [“ನೀತಿ,” NW] ನೆಲೆಯಾಗಿದ್ದವಳು ಈಗ ಕೊಲೆಪಾತಕರಿಗೆ ನೆಲೆಯಾಗಿದ್ದಾಳೆ.”​—ಯೆಶಾಯ 1:21.

20 ಯೆರೂಸಲೇಮ್‌ ನಗರಿಯು ಎಷ್ಟು ಕೀಳ್ಮಟ್ಟಕ್ಕಿಳಿದಿದ್ದಾಳೆ! ಒಮ್ಮೆ ಪತಿವ್ರತೆಯಾಗಿದ್ದವಳು ಈಗ ವೇಶ್ಯೆಯಾಗಿದ್ದಾಳೆ. ಯೆಹೋವನ ಮನಸ್ಸಿನಲ್ಲಾಗಿರುವ ದ್ರೋಹಪ್ರಜ್ಞೆ ಮತ್ತು ಆಶಾಭಂಗವನ್ನು ಇನ್ನಾವ ದೃಷ್ಟಾಂತವು ಇದಕ್ಕಿಂತ ಹೆಚ್ಚು ಬಲವಾಗಿ ವ್ಯಕ್ತಪಡಿಸೀತು? ಈ ನಗರದಲ್ಲಿ “ನೀತಿಗೆ ನೆಲೆ” ಇತ್ತು. ಯಾವಾಗ? ಇಸ್ರಾಯೇಲು ಅಸ್ತಿತ್ವಕ್ಕೆ ಬರುವ ಮೊದಲೇ, ಅಂದರೆ ಅಬ್ರಹಾಮನ ದಿನಗಳಲ್ಲಿ ಈ ನಗರಕ್ಕೆ ಸಾಲೇಮ್‌ ಎಂಬ ಹೆಸರಿತ್ತು. ಅದನ್ನು ರಾಜನೂ ಯಾಜಕನೂ ಆಗಿದ್ದವನೊಬ್ಬನು ಆಳುತ್ತಿದ್ದನು. ಮೆಲ್ಕೀಚೆದೆಕನೆಂಬ ಅವನ ಹೆಸರಿನ ಅರ್ಥವು “ನೀತಿರಾಜ” ಎಂದಾಗಿತ್ತು. ಮತ್ತು ಆ ಹೆಸರಿಗೆ ಅವನು ಸರಿಯಾಗಿ ಅರ್ಹನಾಗಿದ್ದಿರಬೇಕು. (ಇಬ್ರಿಯ 7:2; ಆದಿಕಾಂಡ 14:​18-20) ಮೆಲ್ಕೀಚೆದೆಕನ ನಂತರ ಸುಮಾರು 1,000 ವರ್ಷಗಳ ಬಳಿಕ, ದಾವೀದ ಮತ್ತು ಸೊಲೊಮೋನರ ಆಳ್ವಿಕೆಗಳ ಸಮಯದಲ್ಲಿ, ಯೆರೂಸಲೇಮು ಪರಮಾವಧಿಯನ್ನು ತಲಪಿತು. ವಿಶೇಷವಾಗಿ, ಆ ನಗರದ ಅರಸರು ಯೆಹೋವನ ಮಾರ್ಗಗಳಲ್ಲಿ ನಡೆದು ಜನರಿಗೆ ಒಳ್ಳೆಯ ಮಾದರಿಯನ್ನಿಟ್ಟಾಗ, ಆಕೆ “ನೀತಿಗೆ ನೆಲೆ”ಯಾಗಿದ್ದಳು. ಆದರೆ, ಯೆಶಾಯನ ದಿನಗಳಷ್ಟಕ್ಕೆ ಇಂತಹ ಸಮಯಗಳು ಬಹುಮಟ್ಟಿಗೆ ಮರೆತೇಹೋಗಿದ್ದವು.

21, 22. ಕಿಟ್ಟ ಮತ್ತು ತೆಳ್ಳಗಾಗಿಸಿದ ಬಿಯರ್‌ನಿಂದ ಏನು ಸೂಚಿಸಲಾಗುತ್ತದೆ, ಮತ್ತು ಯೆಹೂದದ ನಾಯಕರು ಅಂತಹ ವರ್ಣನೆಗೆ ಏಕೆ ಅರ್ಹರು?

21 ಸಮಸ್ಯೆಗೆ ಹೆಚ್ಚಿನ ಜವಾಬ್ದಾರಿಯನ್ನು ಆ ಜನರ ನಾಯಕರೇ ಹೊತ್ತಿರುವಂತೆ ಕಾಣುತ್ತದೆ. ಯೆಶಾಯನು ಪ್ರಲಾಪಿಸುತ್ತ ಮುಂದುವರಿಸುವುದು: “ನಿನ್ನ ಬೆಳ್ಳಿಯು ಕಂದಾಯಿತು [“ಕಿಟ್ಟವಾಯಿತು,” NW], ನಿನ್ನ ದ್ರಾಕ್ಷಾರಸವು [“ಗೋಧಿಯ ಬಿಯರ್‌,” NW] ನೀರಾಯಿತು. ನಿನ್ನ ಅಧಿಕಾರಿಗಳು ದ್ರೋಹಿಗಳೂ [“ಮೊಂಡರು,” NW] ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಆಶಿಸಿ ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸರು; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.” (ಯೆಶಾಯ 1:22, 23) ಇಲ್ಲಿ ಒಂದರ ಮೇಲೊಂದು ಕೊಡಲ್ಪಟ್ಟ ಎರಡು ಸುವ್ಯಕ್ತವಾದ ದೃಷ್ಟಾಂತಗಳು ಮುಂದೆ ಏನು ಬರಬೇಕಾಗಿದೆಯೊ ಅದಕ್ಕೆ ದಾರಿ ಸಿದ್ಧಮಾಡುತ್ತವೆ. ಕಮ್ಮಾರನು ತನ್ನ ಕುಲುಮೆಯಲ್ಲಿ ಕರಗಿಸಿದ ಬೆಳ್ಳಿಯಿಂದ ಕಿಟ್ಟವನ್ನು ತೆಗೆದು ತೊಲಗಿಸುತ್ತಾನೆ. ಇಸ್ರಾಯೇಲಿನ ಪ್ರಭುಗಳೂ ನ್ಯಾಯಾಧೀಶರೂ ಬೆಳ್ಳಿಯಂತಿಲ್ಲ, ಆ ಕಿಟ್ಟದಂತಿದ್ದಾರೆ. ಅವರನ್ನು ತೆಗೆದುಬಿಡುವುದು ಅವಶ್ಯ. ನೀರು ಬೆರಸಿ ತೆಳ್ಳಗಾಗಿಸಿದ ಬಿಯರ್‌ ಮದ್ಯ ತನ್ನ ರುಚಿಯನ್ನು ಕಳೆದುಕೊಳ್ಳುವಂತೆಯೇ ಇವರೂ ಇನ್ನು ಮುಂದೆ ಯಾವ ಉಪಯೋಗಕ್ಕೂ ಬಾರದವರಾಗಿದ್ದಾರೆ. ಇಂತಹ ಪಾನೀಯವು ನಿಷ್ಪ್ರಯೋಜಕವೆಂದು ಎಸೆಯಲ್ಪಡಲು ಮಾತ್ರ ಯೋಗ್ಯ!

22 ಈ ನಾಯಕರು ಇಂತಹ ವರ್ಣನೆಗೆ ಏಕೆ ಯೋಗ್ಯರೆಂಬುದನ್ನು 23ನೆಯ ವಚನವು ತೋರಿಸುತ್ತದೆ. ಮೋಶೆಯ ಧರ್ಮಶಾಸ್ತ್ರವು ದೇವಜನರನ್ನು ಇತರ ಜನಾಂಗಗಳಿಂದ ಪ್ರತ್ಯೇಕವಾಗಿರಿಸಿ ಉಚ್ಚಮಟ್ಟಕ್ಕೇರಿಸಿತು. ಉದಾಹರಣೆಗೆ, ವಿಧವೆಯರನ್ನೂ ಅನಾಥರನ್ನೂ ಸಂರಕ್ಷಿಸಬೇಕೆಂದು ಆಜ್ಞಾಪಿಸುವ ಮೂಲಕ ಅದು ಹಾಗೆ ಮಾಡಿತು. (ವಿಮೋಚನಕಾಂಡ 22:​22-24) ಆದರೆ, ಯೆಶಾಯನ ದಿನಗಳಲ್ಲಿ, ಅನಾಥ ಹುಡುಗನಿಗೆ ಅನುಕೂಲಕರವಾದ ನ್ಯಾಯದೊರೆಯುವ ನಿರೀಕ್ಷೆಯೇ ಇರಲಿಲ್ಲ. ವಿಧವೆಯ ವಿಷಯದಲ್ಲಾದರೊ, ಆಕೆಯ ಪರವಾಗಿ ಹೋರಾಡುವುದಂತೂ ಇರಲಿ, ಆಕೆಯ ವ್ಯಾಜ್ಯವನ್ನು ಕೇಳಲು ಸಹ ಯಾರೂ ಇರಲಿಲ್ಲ. ಈ ನ್ಯಾಯಾಧೀಶರು ಮತ್ತು ನಾಯಕರು ತಮ್ಮ ಸ್ವಂತ ಪ್ರಯೋಜನಗಳನ್ನು ಪಡೆಯುವುದರಲ್ಲಿಯೇ, ಅಂದರೆ ಲಂಚ ಕೇಳುವುದು, ಇನಾಮುಗಳು ದೊರೆಯುವಂತೆ ಪ್ರಯತ್ನಿಸುವುದು ಮತ್ತು ಕಳ್ಳರ ಜೊತೆಗಾರರಾಗಿರುವುದು ಅಂದರೆ ಪಾತಕಿಗಳನ್ನು ಸಂರಕ್ಷಿಸಿ ಅವರಿಗೆ ಬಲಿಯಾಗಿರುವವರು ಕಷ್ಟಪಡುವಂತೆ ಬಿಡುವುದರಲ್ಲಿಯೇ ಮಗ್ನರಾಗಿದ್ದರು. ಅದಕ್ಕಿಂತಲೂ ಹೆಚ್ಚು ಕೆಟ್ಟದಾದ ವಿಷಯವೇನಂದರೆ, ಅವರು ತಮ್ಮ ಪಾಪದ ಮಾರ್ಗದಲ್ಲಿ “ಮೊಂಡರು” ಅಥವಾ ಕಲ್ಲೆದೆಯವರಾಗಿದ್ದರು. ಎಂತಹ ದುರವಸ್ಥೆ!

ಯೆಹೋವನು ತನ್ನ ಜನರನ್ನು ಪರಿಶೋಧಿಸುತ್ತಾನೆ

23. ಯೆಹೋವನು ತನ್ನ ವಿರೋಧಿಗಳ ಕಡೆಗೆ ಯಾವ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾನೆ?

23 ಇಂತಹ ಅಧಿಕಾರದ ದುರುಪಯೋಗವನ್ನು ಯೆಹೋವನು ಸದಾ ತಾಳಿಕೊಳ್ಳಲಾರನು. ಯೆಶಾಯನು ಮುಂದುವರಿಸುವುದು: “ಇಂತಿರಲು ಕರ್ತನೂ ಸೇನಾಧೀಶ್ವರನೂ ಇಸ್ರಾಯೇಲ್ಯರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ​—⁠ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ [“ತೊಲಗಿಸಿ,” NW] ಶಾಂತನಾಗುವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.” (ಯೆಶಾಯ 1:24) ಇಲ್ಲಿ ಯೆಹೋವನಿಗೆ, ಆತನ ಹಕ್ಕಿನ ಪ್ರಭುತ್ವ ಮತ್ತು ಮಹಾ ಶಕ್ತಿಯನ್ನು ಒತ್ತಿಹೇಳುತ್ತ ಮೂರು ಬಿರುದುಗಳನ್ನು ಕೊಡಲಾಗಿದೆ. ಆಶ್ಚರ್ಯಸೂಚಕವಾದ “ಆಹಾ” ಎಂಬುದು ಪ್ರಾಯಶಃ ಈಗ ಆತನ ಕರುಣೆಯು, ಆತನು ಕೋಪದಿಂದ ವರ್ತಿಸುವ ನಿರ್ಣಯದೊಂದಿಗೆ ಕೂಡಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಹೀಗಿರಲು ಖಂಡಿತವಾಗಿಯೂ ಕಾರಣವಿದೆ.

24. ತನ್ನ ಜನರಿಗೆ ಯೆಹೋವನು ಯಾವ ಪರಿಶೋಧನಾ ವಿಧಾನವನ್ನು ಉದ್ದೇಶಿಸುತ್ತಾನೆ?

24 ಯೆಹೋವನ ಸ್ವಂತ ಜನರೇ ತಮ್ಮನ್ನು ಆತನ ಶತ್ರುಗಳಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಅವರು ದೈವಿಕ ಸೇಡಿಗೆ ಪೂರ್ತಿ ಅರ್ಹರು. ಯೆಹೋವನು ಅವರನ್ನು ತನ್ನಿಂದ “ತೊಲಗಿಸಿ” ಬಿಡುವನು ಅಥವಾ ಅಡಗಿಸಿಬಿಡುವನು. ಹಾಗಾದರೆ ಆತನ ನಾಮದ ಜನರು ಪೂರ್ತಿಯಾಗಿ ಅಥವಾ ಕಾಯಂ ಆಗಿ ನಿರ್ನಾಮವಾಗುವರೆಂದು ಇದರ ಅರ್ಥವೊ? ಅಲ್ಲ, ಏಕೆಂದರೆ ಯೆಹೋವನು ಮುಂದುವರಿಸಿ ಹೇಳುವುದು: “ನಿನ್ನ ಮೇಲೆ ಕೈಮಾಡಿ ಪುಟಹಾಕಿ ನಿನ್ನ ಕಲ್ಮಷವನ್ನು ಸಂಪೂರ್ಣವಾಗಿ ಹೋಗಲಾಡಿಸಿ ನಿನ್ನ ಕಂದುಕಸರನ್ನೆಲ್ಲಾ ತೆಗೆದು ಬಿಡುವೆನು.” (ಯೆಶಾಯ 1:25) ಈಗ, ಯೆಹೋವನು ಪರಿಶೋಧನಾ ವಿಧಾನವನ್ನು ಒಂದು ದೃಷ್ಟಾಂತವಾಗಿ ಉಪಯೋಗಿಸುತ್ತಾನೆ. ಪುರಾತನ ಕಾಲದ ಶೋಧನಕಾರನು ಬೆಳ್ಳಿಬಂಗಾರದಿಂದ ಕಿಟ್ಟವನ್ನು ಬೇರ್ಪಡಿಸಲು ಸಹಾಯಕವಾಗಿ ಅನೇಕ ವೇಳೆ ಕ್ಷಾರ ದ್ರಾವಣವನ್ನು ಕೂಡಿಸುತ್ತಿದ್ದನು. ಅದೇ ರೀತಿಯಲ್ಲಿ, ತನ್ನ ಜನರನ್ನು ತೀರ ದುಷ್ಟರೆಂದು ಪರಿಗಣಿಸದ ಯೆಹೋವನು ಅವರನ್ನು ‘ಮಿತಿಮೀರಿ ಶಿಕ್ಷಿಸನು.’ ಆತನು ಅವರಿಂದ “ಕಂದುಕಸರನ್ನು” ಮಾತ್ರ, ಅಂದರೆ ಕಲಿಯಲು ಮತ್ತು ವಿಧೇಯರಾಗಲು ನಿರಾಕರಿಸುವ, ಮೊಂಡರಾದ, ಅನಪೇಕ್ಷಣೀಯ ಜನರನ್ನು ಮಾತ್ರ ತೆಗೆದುಹಾಕುವನು. * (ಯೆರೆಮೀಯ 46:28) ಈ ಮಾತುಗಳಲ್ಲಿ, ಯೆಶಾಯನು ಇತಿಹಾಸವನ್ನು ಅದು ನಡೆಯುವ ಮುಂಚೆಯೇ ಬರೆಯುವ ಸುಯೋಗವನ್ನು ಪಡೆಯುತ್ತಾನೆ.

25. (ಎ) ಯೆಹೋವನು ತನ್ನ ಜನರನ್ನು ಸಾ.ಶ.ಪೂ. 607ರಲ್ಲಿ ಪರಿಶೋಧಿಸಿದ್ದು ಹೇಗೆ? (ಬಿ) ಆಧುನಿಕ ಸಮಯಗಳಲ್ಲಿ ಯೆಹೋವನು ತನ್ನ ಜನರನ್ನು ಯಾವಾಗ ಪರಿಶೋಧಿಸಿದನು?

25 ಯೆಹೋವನು ಕಿಟ್ಟದಂತೆ ಭ್ರಷ್ಟರಾಗಿದ್ದ ನಾಯಕರನ್ನು ಮತ್ತು ದಂಗೆಕೋರರನ್ನು ತೆಗೆದುಬಿಟ್ಟು ತನ್ನ ಜನರನ್ನು ಪರಿಶೋಧಿಸಿದ್ದು ನಿಶ್ಚಯ. ಯೆಶಾಯನ ದಿನಗಳ ಬಳಿಕ ದೀರ್ಘ ಸಮಯಾನಂತರ, ಸಾ.ಶ.ಪೂ. 607ರಲ್ಲಿ, ಯೆರೂಸಲೇಮ್‌ ನಾಶವಾಗಿ, ಅದರ ನಿವಾಸಿಗಳು 70 ವರ್ಷಗಳ ದೇಶಭ್ರಷ್ಟತೆಗೆ ಬಾಬೆಲಿಗೆ ಒಯ್ಯಲ್ಪಟ್ಟರು. ಈ ಘಟನೆಯು ದೇವರು ಬಹಳ ಸಮಯಾನಂತರ ಕೈಕೊಂಡ ಇನ್ನೊಂದು ಕ್ರಮಕ್ಕೆ ಕೆಲವು ವಿಧಗಳಲ್ಲಿ ಸಮಾಂತರವಾಗಿದೆ. ಬಾಬೆಲಿನಲ್ಲಾದ ದೇಶಭ್ರಷ್ಟತೆಯ ಬಳಿಕ ದೀರ್ಘಕಾಲಾನಂತರ ಬರೆಯಲ್ಪಟ್ಟ, ಮಲಾಕಿಯ 3:​1-5ರಲ್ಲಿರುವ ಪ್ರವಾದನೆಯು, ದೇವರು ಇನ್ನೊಮ್ಮೆ ಒಂದು ಪರಿಶೋಧನಾ ಕಾರ್ಯವನ್ನು ಮಾಡುವನೆಂದು ತೋರಿಸಿತ್ತು. ಯೆಹೋವ ದೇವರು ತನ್ನ “ಒಡಂಬಡಿಕೆಯ ದೂತ” ಯೇಸು ಕ್ರಿಸ್ತನೊಂದಿಗೆ ತನ್ನ ಆತ್ಮಿಕಾಲಯಕ್ಕೆ ಬರುವ ಸಮಯವನ್ನು ಅದು ತೋರಿಸಿತು. ಮತ್ತು ಇದು ಒಂದನೆಯ ಲೋಕ ಯುದ್ಧಾಂತ್ಯದಲ್ಲಿ ನಡೆಯಿತೆಂಬುದು ವ್ಯಕ್ತ. ಆಗ ಯೆಹೋವನು ಕ್ರೈಸ್ತರೆನಿಸಿಕೊಂಡಿದ್ದ ಸಕಲರನ್ನು ಪರೀಕ್ಷಿಸಿ, ಸುಳ್ಳು ಜನರಿಂದ ಸತ್ಯವಂತರನ್ನು ಬೇರ್ಪಡಿಸಿದನು. ಇದರ ಫಲಿತಾಂಶವೇನಾಯಿತು?

26-28. (ಎ) ಯೆಶಾಯ 1:26ಕ್ಕೆ ಆರಂಭದ ಯಾವ ನೆರವೇರಿಕೆಯಿತ್ತು? (ಬಿ) ಈ ಪ್ರವಾದನೆಯು ನಮ್ಮ ದಿನಗಳಲ್ಲಿ ಹೇಗೆ ನೆರವೇರಿದೆ? (ಸಿ) ಈ ಪ್ರವಾದನೆಯಿಂದ ಇಂದು ಹಿರಿಯರಿಗೆ ಹೇಗೆ ಪ್ರಯೋಜನವಾದೀತು?

26 ಯೆಹೋವನು ಉತ್ತರ ಕೊಡುವುದು: “ಪೂರ್ವದಲ್ಲಿ ನಿನಗಿದ್ದಂಥ ನ್ಯಾಯಾಧಿಪತಿಗಳನ್ನೂ ಮಂತ್ರಾಲೋಚಕರನ್ನೂ [“ಸಲಹೆಗಾರರನ್ನು,” NW] ಪುನಃ ಒದಗಿಸಿಕೊಡುವೆನು; ಆ ಮೇಲೆ ನೀನು ಧರ್ಮಪುರಿ ಎಂತಲೂ ಸುವ್ರತನಗರಿ ಎಂತಲೂ ಅನ್ನಿಸಿಕೊಳ್ಳುವಿ. ಚೀಯೋನ್‌ ಪಟ್ಟಣಕ್ಕೆ [ನನ್ನ] ನ್ಯಾಯದ ಮೂಲಕವೂ ದೇಶಾಂತರದಿಂದ ಬಿಡುಗಡೆಯಾಗಿ ಬರುವ ಅದರ ಪ್ರಜೆಗಳಿಗೆ [ನನ್ನ] ಧರ್ಮದ ಮೂಲಕವೂ ವಿಮೋಚನೆಯಾಗುವದು.” (ಯೆಶಾಯ 1:26, 27) ಪುರಾತನ ಕಾಲದ ಯೆರೂಸಲೇಮು ಈ ಪ್ರವಾದನೆಯ ಆರಂಭದ ನೆರವೇರಿಕೆಯನ್ನು ಅನುಭವಿಸಿತು. ದೇಶಭ್ರಷ್ಟರು ಸಾ.ಶ.ಪೂ. 537ರಲ್ಲಿ ತಮ್ಮ ಪ್ರಿಯ ನಗರಕ್ಕೆ ಹಿಂದಿರುಗಿದಾಗ, ಹಿಂದೆ ಇದ್ದಂತೆಯೇ ನಂಬಿಗಸ್ತರಾದ ನ್ಯಾಯಾಧೀಶರೂ ಸಲಹೆಗಾರರೂ ಪುನಃ ಅಲ್ಲಿದ್ದರು. ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯ, ಯಾಜಕನಾಗಿದ್ದ ಯೆಹೋಶುವ, ಶಾಸ್ತ್ರಿಯಾಗಿದ್ದ ಎಜ್ರ, ದೇಶಾಧಿಪತಿ ಜೆರುಬ್ಬಾಬೆಲ​—⁠ಇವರೆಲ್ಲರೂ ಹಿಂದಿರುಗಿ ಬಂದಿದ್ದ ನಂಬಿಗಸ್ತ ಉಳಿಕೆಯವರಿಗೆ, ದೇವರ ಮಾರ್ಗಗಳಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿ ನಿರ್ದೇಶಿಸಿದರು. ಆದರೂ, ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ನೆರವೇರಿಕೆಯು 20ನೆಯ ಶತಮಾನದಲ್ಲಾಯಿತು.

27 ಯೆಹೋವನ ಆಧುನಿಕ ಸಾಕ್ಷಿಗಳು 1919ರಲ್ಲಿ ಒಂದು ಪರೀಕ್ಷೆಯ ಸಮಯಾವಧಿಯಿಂದ ಹೊರಬಂದರು. ಸುಳ್ಳುಧರ್ಮದ ಲೋಕಸಾಮ್ರಾಜ್ಯವಾದ ಮಹಾ ಬಾಬೆಲಿನಲ್ಲಿ ಆತ್ಮಿಕವಾಗಿ ಬಂಧನದಲ್ಲಿದ್ದ ಅವರನ್ನು ಬಿಡುಗಡೆ ಮಾಡಲಾಯಿತು. ಆಗ, ನಂಬಿಗಸ್ತರಾಗಿದ್ದ ಅಭಿಷಿಕ್ತ ಉಳಿಕೆಯವರು ಮತ್ತು ಕ್ರೈಸ್ತಪ್ರಪಂಚದ ಧರ್ಮಭ್ರಷ್ಟ ಪಾದ್ರಿವರ್ಗದ ಮಧ್ಯೆ ಇದ್ದ ವ್ಯತ್ಯಾಸವು ಸ್ಪಷ್ಟವಾಗಿ ತೋರಿಬಂತು. ದೇವರು ಪುನಃ ತನ್ನ ಜನರನ್ನು ಆಶೀರ್ವದಿಸಿ, ಮನುಷ್ಯ ಸಂಪ್ರದಾಯಗಳಿಗನುಸಾರ ಅಲ್ಲ, ದೇವರ ವಾಕ್ಯಕ್ಕನುಸಾರ ತನ್ನ ಜನರಿಗೆ ಸಲಹೆ ನೀಡುವ ‘ನ್ಯಾಯಾಧಿಪತಿಗಳನ್ನೂ ಸಲಹೆಗಾರರನ್ನೂ ಒದಗಿಸಿಕೊಟ್ಟನು.’ ಇಂದು ಕಡಿಮೆಯಾಗುತ್ತಿರುವ ‘ಚಿಕ್ಕ ಹಿಂಡು’ ಮತ್ತು ಅವರ ಲಕ್ಷಗಟ್ಟಲೆಯಾಗಿ ಹೆಚ್ಚುತ್ತಿರುವ “ಬೇರೆ ಕುರಿಗಳ” ಗುಂಪಿಗೆ ಸೇರಿರುವ ಸಂಗಡಿಗರಲ್ಲಿ, ಇಂತಹ ಸಾವಿರಾರು ಮಂದಿ ಪುರುಷರಿದ್ದಾರೆ.​—⁠ಲೂಕ 12:32; ಯೋಹಾನ 10:16; ಯೆಶಾಯ 32:​1, 2; 60:17; 61:​3, 4.

28 ಹಿರಿಯರು ಕೆಲವೊಮ್ಮೆ ಸಭೆಯಲ್ಲಿ ತಪ್ಪಿತಸ್ಥರನ್ನು ತಿದ್ದುವ ನ್ಯಾಯಾಧಿಪತಿಗಳಾಗಿ ಕೆಲಸಮಾಡುತ್ತಾರೆ. ಅವರು ಸಭೆಯನ್ನು ಹೀಗೆ ಆತ್ಮಿಕವಾಗಿಯೂ ನೈತಿಕವಾಗಿಯೂ ಶುದ್ಧವಾಗಿಡುತ್ತಾರೆ. ಸಂಗತಿಗಳನ್ನು ದೇವರು ಮಾಡುವ ವಿಧದಲ್ಲಿ ಮಾಡಲು, ಅಂದರೆ ಆತನ ಕರುಣೆಯ, ಸಮತೂಕದ ನ್ಯಾಯಪ್ರಜ್ಞೆಯನ್ನು ಅನುಕರಿಸಲು ಅವರು ತುಂಬ ಚಿಂತಿತರಾಗಿರುತ್ತಾರೆ. ಆದರೆ ಹೆಚ್ಚಿನ ವಿಷಯಗಳಲ್ಲಿ ಅವರು “ಸಲಹೆಗಾರರು” ಆಗಿ ಸೇವೆಮಾಡುತ್ತಾರೆ. ಇದು ಪ್ರಭುಗಳು ಅಥವಾ ಪೀಡಕರಾಗಿರುವುದಕ್ಕಿಂತ ತೀರ ಭಿನ್ನವಾಗಿದೆ. ಅಲ್ಲದೆ, ‘ದೇವರು ಅವರ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವ’ ತೋರಿಕೆಯನ್ನು ಸಹ ಕೊಡದಿರಲು ಸರ್ವ ಪ್ರಯತ್ನವನ್ನು ಮಾಡುತ್ತಾರೆ.​—⁠1 ಪೇತ್ರ 5:⁠3.

29, 30. (ಎ) ಆ ಪರಿಶೋಧನಾ ವಿಧಾನದಿಂದ ಪ್ರಯೋಜನ ಪಡೆಯಲು ನಿರಾಕರಿಸುವವರಿಗೆ ಯೆಹೋವನು ಏನನ್ನು ವಿಧಿಸುತ್ತಾನೆ? (ಬಿ) ಜನರು ತಮ್ಮ ಮರಗಳ ಮತ್ತು ವನಗಳ ವಿಷಯದಲ್ಲಿ ಯಾವ ಅರ್ಥದಲ್ಲಿ “ಲಜ್ಜೆ”ಪಡುತ್ತಾರೆ?

29 ಆದರೆ ಯೆಶಾಯನ ಪ್ರವಾದನೆಯಲ್ಲಿ ಹೇಳಿರುವ ‘ಕಿಟ್ಟದ’ ವಿಷಯದಲ್ಲೇನು? ದೇವರು ಮಾಡುವ ಪರಿಶೋಧನಾ ವಿಧಾನದಿಂದ ಬರುವ ಪ್ರಯೋಜನವನ್ನು ನಿರಾಕರಿಸುವವರಿಗೆ ಏನಾಗುತ್ತದೆ? ಯೆಶಾಯನು ಮುಂದುವರಿಸುವುದು: “ಆದರೆ ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ ನಾಶನವಾಗುವರು; ಹೌದು, ಯೆಹೋವನನ್ನು ತೊರೆದವರು ನಿರ್ಮೂಲರಾಗುವರು. ನೀವು ಇಷ್ಟಪಟ್ಟ ಏಲಾಮರಗಳ ನಿಮಿತ್ತ ನಾಚಿಕೆಗೊಳ್ಳುವಿರಿ, ಗೊತ್ತುಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.” (ಯೆಶಾಯ 1:28, 29) ಯೆಹೋವನ ವಿರುದ್ಧವಾಗಿ ದಂಗೆಯೆದ್ದು ಪಾಪ ಮಾಡುವವರು ಮತ್ತು ಕೊನೆಯ ವರೆಗೂ ಪ್ರವಾದಿಗಳ ಎಚ್ಚರಿಕೆಯ ಸಂದೇಶಗಳನ್ನು ಅಸಡ್ಡೆಮಾಡುವವರು, ಖಂಡಿತವಾಗಿ “ನಾಶ”ವಾಗುತ್ತಾರೆ ಮತ್ತು “ನಿರ್ಮೂಲ”ವಾಗುತ್ತಾರೆ. ಇದು ಸಾ.ಶ.ಪೂ. 607ರಲ್ಲಿ ಸಂಭವಿಸುತ್ತದೆ. ಆದರೆ ಇಲ್ಲಿ ಉಲ್ಲೇಖಿಸಲ್ಪಟ್ಟ ಮರಗಳ ಮತ್ತು ವನಗಳ ಅರ್ಥವೇನು?

30 ಯೆಹೂದ್ಯರಲ್ಲಿ ಪಟ್ಟುಬಿಡದ ಸಮಸ್ಯೆಯೊಂದಿತ್ತು. ಅದೇ ವಿಗ್ರಹಾರಾಧನೆ. ಅವರ ಕೀಳಾದ ಆಚಾರಗಳಲ್ಲಿ ಅನೇಕ ವೇಳೆ ಮರಗಳು, ವನಗಳು ಮತ್ತು ತೋಪುಗಳು ಸೇರಿರುತ್ತವೆ. ಉದಾಹರಣೆಗೆ, ಬಾಳನ ಮತ್ತು ಅವನ ಹೆಂಡತಿಯಾದ ಅಷ್ಟೋರೆತ್‌ ದೇವತೆಯ ಆರಾಧಕರು, ಒಣ ಋತುವಿನಲ್ಲಿ ಈ ದೇವದೇವತೆ ಸತ್ತು ಹೂಣಿಡಲ್ಪಟ್ಟಿದ್ದಾರೆ ಎಂದು ನಂಬುತ್ತಾರೆ. ಅವರು ಎದ್ದು ಲೈಂಗಿಕವಾಗಿ ಕೂಡಿ, ಜಮೀನನ್ನು ಫಲಭರಿತ ಮಾಡಲಿಕ್ಕೋಸ್ಕರ, ಈ ವಿಗ್ರಹಾರಾಧಕರು ತೋಪುಗಳಲ್ಲಿ ಅಥವಾ ವನಗಳಲ್ಲಿ “ಪವಿತ್ರ” ಮರಗಳ ಕೆಳಗೆ ಸೇರಿಬಂದು ವಿಕೃತ ಲೈಂಗಿಕ ಕೃತ್ಯಗಳನ್ನು ನಡಿಸುತ್ತಾರೆ. ಮಳೆಬಂದು ಜಮೀನು ಫಲವತ್ತಾದಾಗ, ಅದಕ್ಕೆ ಕೀರ್ತಿ ಈ ಸುಳ್ಳು ದೇವತೆಗಳಿಗೆ ಸಲ್ಲುತ್ತದೆ. ಮತ್ತು ಆ ವಿಗ್ರಹಾರಾಧಕರಿಗೆ ತಮ್ಮ ಮೂಢನಂಬಿಕೆಗಳು ಸರಿಯೆಂಬ ಪುಷ್ಟಿ ಸಿಗುತ್ತದೆ. ಆದರೆ ಯೆಹೋವನು ಈ ದಂಗೆಕೋರ ವಿಗ್ರಹಾರಾಧಕರನ್ನು ನಾಶಪಡಿಸುವಾಗ ಯಾವ ಮೂರ್ತಿದೇವತೆಗಳೂ ಅವರನ್ನು ರಕ್ಷಿಸುವುದಿಲ್ಲ. ಈ ಸತ್ವವಿಲ್ಲದ ಮರಗಳ ಮತ್ತು ವನಗಳ ವಿಷಯದಲ್ಲಿ ಆ ದಂಗೆಕೋರರು “ಲಜ್ಜೆ”ಪಡುತ್ತಾರೆ.

31. ಲಜ್ಜೆಗಿಂತಲೂ ಹೀನವಾಗಿರುವ ಯಾವುದನ್ನು ವಿಗ್ರಹಾರಾಧಕರು ಅನುಭವಿಸುತ್ತಾರೆ?

31 ಆದರೆ ವಿಗ್ರಹಾರಾಧಕರಾದ ಯೆಹೂದದವರು ಲಜ್ಜೆಗಿಂತಲೂ ಹೆಚ್ಚಿನದ್ದನ್ನು ಅನುಭವಿಸುತ್ತಾರೆ. ಆ ದೃಷ್ಟಾಂತವನ್ನು ಬದಲಾಯಿಸಿ ಈಗ ಯೆಹೋವನು ಆ ವಿಗ್ರಹಾರಾಧಕನನ್ನೇ ಒಂದು ಮರಕ್ಕೆ ಹೋಲಿಸುತ್ತಾನೆ. ನೀವು “ಎಲೆ ಒಣಗಿದ ಏಲಾ ಮರದಂತೆಯೂ ಜಲವಿಲ್ಲದ ವನದ ಹಾಗೂ ಇರುವಿರಿ.” (ಯೆಶಾಯ 1:30) ಮಧ್ಯ ಪೂರ್ವದ ಬಿಸಿಯಾದ ಒಣ ಹವೆಯಲ್ಲಿ ಇದು ಯೋಗ್ಯವಾದ ದೃಷ್ಟಾಂತವಾಗಿದೆ. ನೀರಿನ ಏಕಪ್ರಕಾರದ ಸರಬರಾಯಿ ಇಲ್ಲದಿರುವಲ್ಲಿ ಯಾವುದೇ ಮರವಾಗಲಿ ವನವಾಗಲಿ ಹೆಚ್ಚುಕಾಲ ಬಾಳದು. ಇಂತಹ ಮರಗಳು ಒಣಗಿ ಹೋಗುವಲ್ಲಿ ವಿಶೇಷವಾಗಿ ಬೆಂಕಿಗೆ ಬೇಗನೆ ತುತ್ತಾಗುತ್ತವೆ. ಆದಕಾರಣ, 31ನೆಯ ವಚನದ ದೃಷ್ಟಾಂತವು ಸಹಜವಾದದ್ದಾಗಿ ತೋರುತ್ತದೆ.

32. (ಎ) ವಚನ 31ರಲ್ಲಿ ಸೂಚಿಸಲಾದ ‘ಬಲಿಷ್ಠ’ನು ಯಾರು? (ಬಿ) ಅವನು ಯಾವ ವಿಧದಲ್ಲಿ “ಗುಂಜು” ಆಗುವನು, ಯಾವ “ಕಿಡಿ” ಅವನನ್ನು ಹೊತ್ತಿಸುವುದು, ಮತ್ತು ಇದರ ಪರಿಣಾಮವೇನು?

32“ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ಗುಂಜು, ಅವನ ಕಾರ್ಯವೇ ಕಿಡಿ, ಎರಡು ಸೇರಿ ಯಾರೂ ನಂದಿಸಲಾಗದಂತೆ ಸುಟ್ಟುಹೋಗುವವು.” (ಯೆಶಾಯ 1:31) ಈ “ಬಲಿಷ್ಠ”ನು ಯಾರು? ಇದರ ಹೀಬ್ರು ಪದವು ಬಲ ಮತ್ತು ಐಶ್ವರ್ಯದ ಅರ್ಥವನ್ನು ಕೊಡುತ್ತದೆ. ಇದು ಪ್ರಾಯಶಃ ಸುಳ್ಳು ದೇವತೆಗಳ ಸಂಪದ್ಭರಿತ, ಆತ್ಮವಿಶ್ವಾಸವುಳ್ಳ ಹಿಂಬಾಲಕನನ್ನು ಸೂಚಿಸುತ್ತದೆ. ನಮ್ಮ ದಿನಗಳಲ್ಲಿರುವಂತೆ ಯೆಶಾಯನ ದಿನಗಳಲ್ಲಿ, ಯೆಹೋವನನ್ನೂ ಆತನ ಶುದ್ಧಾರಾಧನೆಯನ್ನೂ ತಳ್ಳಿಹಾಕುವ ಜನರು ಕಡಿಮೆಯಿಲ್ಲ. ಇಂತಹ ಕೆಲವರು ಯಶಸ್ಸನ್ನೂ ಪಡೆಯುತ್ತಿರುವಂತೆ ಕಾಣುತ್ತದೆ. ಆದರೆ, ಇಂತಹ ಜನರು ‘ಗುಂಜಿನಂತಿರುವರು’ ಅಂದರೆ ಬೆಂಕಿಯ ವಾಸನೆಯಿಂದಲೇ ಛಿದ್ರವಾಗುತ್ತದೊ ಎಂಬಂತಿರುವ ಬಲಹೀನವೂ ಒಣಗಿಹೋದದ್ದೂ ಆಗಿರುವ ಒಡ್ಡೊಡ್ಡಾದ ಅಗಸೆ ನಾರಿನಂತಿರುವರು. (ನ್ಯಾಯಸ್ಥಾಪಕರು 16:​8, 9) ಈ ವಿಗ್ರಹಾರಾಧಕನ ಕಾರ್ಯಫಲವು​—⁠ಅದು ಅವನ ಮೂರ್ತಿದೇವರುಗಳಾಗಿರಲಿ, ಅವನ ಐಶ್ವರ್ಯವಾಗಿರಲಿ ಇಲ್ಲವೆ ಯೆಹೋವನ ಬದಲಿಗೆ ಅವನು ಆರಾಧಿಸುವ ಯಾವುದೇ ವಿಷಯವಾಗಿರಲಿ​—⁠ಬೆಂಕಿ ಹೊತ್ತಿಸುವ “ಕಿಡಿ”ಯಂತಿರುವುದು. ಆ ಕಿಡಿಯೂ ಗುಂಜೂ ಯಾರಿಂದಲೂ ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹೋಗಿ ಇಲ್ಲದಂತಾಗುವುದು. ಯೆಹೋವನ ಪರಿಪೂರ್ಣ ನ್ಯಾಯತೀರ್ಪುಗಳನ್ನು ವಿಶ್ವದ ಇನ್ನಾವ ಶಕ್ತಿಯೂ ಕೆಡವಿ ಹಾಕದು.

33. (ಎ) ಬರಲಿರುವ ನ್ಯಾಯತೀರ್ಪಿನ ಕುರಿತ ದೇವರ ಎಚ್ಚರಿಕೆಗಳು ಆತನ ಕರುಣೆಯನ್ನೂ ಸೂಚಿಸುವುದು ಹೇಗೆ? (ಬಿ) ಯೆಹೋವನು ಈಗ ಮಾನವಕುಲಕ್ಕೆ ಯಾವ ಅವಕಾಶವನ್ನು ನೀಡುತ್ತಿದ್ದಾನೆ, ಮತ್ತು ಅದು ನಮ್ಮಲ್ಲಿ ಪ್ರತಿಯೊಬ್ಬನನ್ನು ಹೇಗೆ ಪ್ರಭಾವಿಸುತ್ತದೆ?

33 ಈ ಅಂತಿಮ ಸಂದೇಶವು 18ನೆಯ ವಚನದ ಕರುಣೆ ಮತ್ತು ಕ್ಷಮಾಪಣೆಯ ಸಂದೇಶಕ್ಕೆ ಹೊಂದಿಕೆಯಲ್ಲಿದೆಯೇ? ನಿಶ್ಚಯವಾಗಿಯೂ! ಯೆಹೋವನು ತನ್ನ ಸೇವಕರ ಮೂಲಕ ಅಂತಹ ಎಚ್ಚರಿಕೆಗಳನ್ನು ಬರೆಸಿ ಅವುಗಳನ್ನು ಪ್ರಕಟಪಡಿಸುವ ಕಾರಣವು ಆತನು ಕರುಣಾಮಯನಾಗಿರುವುದರಿಂದಲೇ. ಎಷ್ಟೆಂದರೂ, “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು” ಆತನು ಅಪೇಕ್ಷಿಸುತ್ತಾನೆ. (2 ಪೇತ್ರ 3:⁠9) ದೇವರ ಎಚ್ಚರಿಕೆಯ ಸಂದೇಶಗಳನ್ನು ಮಾನವಕುಲಕ್ಕೆ ಸಾರುವುದು ಇಂದು ಪ್ರತಿಯೊಬ್ಬ ಸತ್ಯ ಕ್ರೈಸ್ತನಿಗಿರುವ ಸುಯೋಗವಾಗಿದೆ. ಹೀಗೆ ಪಶ್ಚಾತ್ತಾಪಪಡುವ ಜನರು ಆತನ ಉದಾರವಾದ ಕ್ಷಮಾಪಣೆಯಿಂದ ಪ್ರಯೋಜನಪಡೆದು ನಿತ್ಯಕ್ಕೂ ಜೀವಿಸುವಂತಾಗುವುದು. ಸಮಯವು ಮೀರಿಹೋಗುವ ಮೊದಲೇ ತನ್ನೊಂದಿಗೆ “ವಿಷಯಗಳನ್ನು ಸರಿಪಡಿಸಿ”ಕೊಳ್ಳಲು ಯೆಹೋವನು ಮಾನವಕುಲಕ್ಕೆ ಕೊಟ್ಟಿರುವ ಅವಕಾಶವು ಅದೆಷ್ಟು ದಯಾಭರಿತ!

[ಪಾದಟಿಪ್ಪಣಿಗಳು]

^ ಪ್ಯಾರ. 2 ಹಳೆಯ ಯೆಹೂದಿ ಬಾಯುಪದೇಶಕ್ಕನುಸಾರ, ದುಷ್ಟ ಅರಸ ಮನಸ್ಸೆಯು ಯೆಶಾಯನನ್ನು ಗರಗಸದಿಂದ ಕೊಯ್ಯಿಸಿ ಕೊಲ್ಲಿಸಿದನು. (ಹೋಲಿಸಿ ಇಬ್ರಿಯ 11:37.) ಒಂದು ಮೂಲಕ್ಕನುಸಾರ, ಈ ಮರಣದಂಡನೆಯನ್ನು ಕೊಡಿಸಲು ಒಬ್ಬ ಸುಳ್ಳು ಪ್ರವಾದಿಯು ಯೆಶಾಯನ ವಿರುದ್ಧ ಈ ಅಪವಾದವನ್ನು ಹೊರಿಸಿದನು: “ಇವನು ಯೆರೂಸಲೇಮನ್ನು ಸೊದೋಮ್‌ ಎಂತಲೂ ಯೆಹೂದದ ಮತ್ತು ಯೆರೂಸಲೇಮಿನ ಪ್ರಭುಗಳನ್ನು ಗೊಮೋರದ ಜನರೆಂತಲೂ ಕರೆದಿದ್ದಾನೆ.”

^ ಪ್ಯಾರ. 5 “ಅಲೌಕಿಕ ಶಕ್ತಿ” ಎಂಬುದಕ್ಕಿರುವ ಹೀಬ್ರು ಪದವನ್ನು “ನೋಯಿಸುವಂತಹದ್ದು,” “ಅಲೌಕಿಕವಾದದ್ದು,” ಮತ್ತು “ತಪ್ಪಾದದ್ದು” ಎಂದೂ ಭಾಷಾಂತರಿಸಲಾಗುತ್ತದೆ. ಥಿಯಲಾಜಿಕಲ್‌ ಡಿಕ್ಷನೆರಿ ಆಫ್‌ ದಿ ಓಲ್ಡ್‌ ಟೆಸ್ಟಮೆಂಟ್‌ಗನುಸಾರ, ಹೀಬ್ರು ಪ್ರವಾದಿಗಳು “ಶಕ್ತಿಯ ದುರುಪಯೋಗದಿಂದಾಗುವ ಕೆಡುಕನ್ನು” ಖಂಡಿಸಲು ಆ ಪದವನ್ನು ಬಳಸುತ್ತಿದ್ದರು.

^ ಪ್ಯಾರ. 24 “ನಿನ್ನ ಮೇಲೆ ಕೈಮಾಡಿ” ಎಂಬ ಪದಸರಣಿಯು, ಯೆಹೋವನು ತನ್ನ ಜನರನ್ನು ಬೆಂಬಲಿಸುವುದನ್ನು ಬಿಟ್ಟು ಶಿಕ್ಷಿಸಲು ತನ್ನ ಕೈಯನ್ನು ಬದಲಾಯಿಸುತ್ತಾನೆಂಬುದನ್ನು ಅರ್ಥೈಸುತ್ತದೆ.

[ಅಧ್ಯಯನ ಪ್ರಶ್ನೆಗಳು]