ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಬಾಬೆಲ್‌ ಬಿತ್ತು, ಬಿತ್ತು!”

“ಬಾಬೆಲ್‌ ಬಿತ್ತು, ಬಿತ್ತು!”

ಅಧ್ಯಾಯ ಹದಿನೇಳು

“ಬಾಬೆಲ್‌ ಬಿತ್ತು, ಬಿತ್ತು!”

ಯೆಶಾಯ 21:​1-17

1, 2. (ಎ) ಬೈಬಲಿನ ಮುಖ್ಯ ವಿಷಯ ಏನಾಗಿದೆ, ಆದರೆ ಪ್ರಮುಖವಾದ ಯಾವ ಸಹಾಯಕ ಮುಖ್ಯವಿಷಯವು ಯೆಶಾಯನ ಪುಸ್ತಕದಲ್ಲಿ ಕಾಣಿಸಿಕೊಳ್ಳುತ್ತದೆ? (ಬಿ) ಬಾಬೆಲಿನ ಪತನವೆಂಬ ಮುಖ್ಯ ವಿಷಯವನ್ನು ಬೈಬಲು ಹೇಗೆ ವಿಕಸಿಸುತ್ತದೆ?

ಒಂದು ವಿಧದಲ್ಲಿ, ಬೈಬಲನ್ನು ಸಂಗೀತದ ಒಂದು ಮಹಾ ಕೃತಿಗೆ ಹೋಲಿಸಸಾಧ್ಯವಿದೆ. ಅಂತಹ ಕೃತಿಗೆ ಒಂದು ಮುಖ್ಯ ವಿಷಯವಿರುತ್ತದೆ. ಅದರೊಂದಿಗೆ ಇನ್ನೂ ಅನೇಕ ಚಿಕ್ಕಪುಟ್ಟ ವಿಷಯಗಳನ್ನು ಸೇರಿಸಲಾಗುತ್ತದೆ. ಹಾಗೆಯೇ, ಬೈಬಲಿಗೆ ಒಂದು ಮುಖ್ಯ ವಿಷಯವಿದೆ. ಅದು, ಮೆಸ್ಸೀಯ ರಾಜ್ಯ ಸರಕಾರದ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವೇ ಆಗಿದೆ. ಬೈಬಲಿನಲ್ಲಿ, ಪುನರಾವರ್ತಿಸಲ್ಪಟ್ಟಿರುವ ಬೇರೆ ಮುಖ್ಯ ವಿಷಯಗಳು ಸಹ ಇವೆ. ಅವುಗಳಲ್ಲಿ ಒಂದು, ಬಾಬೆಲಿನ ಪತನವಾಗಿದೆ.

2 ಬೈಬಲಿನ ಆ ಮುಖ್ಯ ವಿಷಯವನ್ನು ಯೆಶಾಯ 13 ಮತ್ತು 14ನೆಯ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಅದು ಮತ್ತೆ 21ನೆಯ ಅಧ್ಯಾಯದಲ್ಲಿ ಕಾಣಿಸಿಕೊಂಡು, 44 ಮತ್ತು 45ನೆಯ ಅಧ್ಯಾಯಗಳಲ್ಲಿ ಮತ್ತೊಮ್ಮೆ ಚರ್ಚೆಯ ವಿಷಯವಾಗಿರುತ್ತದೆ. ನೂರು ವರ್ಷಗಳ ನಂತರ, ಯೆರೆಮೀಯನು ಇದೇ ಮುಖ್ಯ ವಿಷಯವನ್ನು ಸವಿವರವಾಗಿ ಚರ್ಚಿಸುತ್ತಾನೆ ಮತ್ತು ಪ್ರಕಟನೆಯ ಪುಸ್ತಕವು ಆ ಮುಖ್ಯ ವಿಷಯಕ್ಕೆ ಅಸಾಮಾನ್ಯವಾದ ಸಮಾಪ್ತಿಯನ್ನು ನೀಡುತ್ತದೆ. (ಯೆರೆಮೀಯ 51:​60-64; ಪ್ರಕಟನೆ 18:​1–19:⁠4) ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವ ಪ್ರತಿಯೊಬ್ಬ ವ್ಯಕ್ತಿಯು, ದೇವರ ವಾಕ್ಯದ ಈ ಸಹಾಯಕ ಮುಖ್ಯ ವಿಷಯಕ್ಕೆ ಗಮನಕೊಡುವವನಾಗಿರಬೇಕು. ಈ ಸಂಬಂಧದಲ್ಲಿ ಯೆಶಾಯ 21ನೆಯ ಅಧ್ಯಾಯವು ಸಹಾಯಮಾಡುತ್ತದೆ. ಆ ಅಧ್ಯಾಯದಲ್ಲಿ, ಮಹಾ ಲೋಕ ಶಕ್ತಿಯಾದ ಬಾಬೆಲಿನ ಮುಂತಿಳಿಸಲ್ಪಟ್ಟ ಪತನಕ್ಕೆ ಸಂಬಂಧಿಸಿದ ಚಿತ್ತಾಕರ್ಷಕ ವಿವರಗಳಿವೆ. ಯೆಶಾಯ 21ನೆಯ ಅಧ್ಯಾಯವು, ಬೈಬಲಿನ ಮತ್ತೊಂದು ಮುಖ್ಯ ವಿಷಯಕ್ಕೂ ಒತ್ತುನೀಡುವುದನ್ನು ನಾವು ಗಮನಿಸಬಹುದು. ಆ ಮುಖ್ಯ ವಿಷಯ, ಇಂದು ಕ್ರೈಸ್ತರೋಪಾದಿ ನಮ್ಮಲ್ಲಿರುವ ಜಾಗರೂಕ ಮನೋಭಾವದ ಸ್ವಪರೀಕ್ಷೆಯನ್ನು ಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುವಂತಹದ್ದಾಗಿದೆ.

“ಘೋರದರ್ಶನ”

3. ಬಾಬೆಲನ್ನು “ಕಡಲಡವಿ” ಎಂಬುದಾಗಿ ಏಕೆ ಕರೆಯಲಾಗುತ್ತದೆ, ಮತ್ತು ಈ ಬಿರುದು ಅದರ ಭವಿಷ್ಯತ್ತಿನ ಬಗ್ಗೆ ಯಾವ ಮುನ್ನೆಚ್ಚರಿಕೆಯನ್ನು ನೀಡುತ್ತದೆ?

3 ಯೆಶಾಯ 21ನೆಯ ಅಧ್ಯಾಯವು ಒಂದು ಭಯಸೂಚಕ ಹೇಳಿಕೆಯೊಂದಿಗೆ ಆರಂಭವಾಗುತ್ತದೆ: “ಕಡಲಡವಿಯ ವಿಷಯವಾದ ದೈವೋಕ್ತಿ. ದಕ್ಷಿಣಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ [ದೊಡ್ಡ ಅವಾಂತರ] ಬರುತ್ತದೆ.” (ಯೆಶಾಯ 21:1) ಯೂಫ್ರೇಟೀಸ್‌ ನದಿಯು ಬಾಬೆಲಿನ ಮಧ್ಯಭಾಗದಲ್ಲಿ ಹರಿಯುತ್ತದೆ. ಆ ನಗರದ ಪೂರ್ವ ಪ್ರಾಂತದಲ್ಲಿರುವ ಅರ್ಧ ಕ್ಷೇತ್ರವು, ಯೂಫ್ರೇಟೀಸ್‌ ಮತ್ತು ಟೈಗ್ರಿಸ್‌ ಎಂಬ ದೊಡ್ಡ ನದಿಗಳ ಮಧ್ಯದಲ್ಲಿ ನೆಲೆಸಿದೆ. ಅದು ಸಮುದ್ರದಿಂದ ಕೊಂಚ ದೂರದಲ್ಲಿದೆ. ಆದರೂ ಅದನ್ನು “ಕಡಲಡವಿ” ಎಂದು ಏಕೆ ಕರೆಯಲಾಗಿದೆ? ಏಕೆಂದರೆ, ಬಾಬೆಲ್‌ ಕ್ಷೇತ್ರವು ಪ್ರತಿ ವರ್ಷ ನೆರೆಹಾವಳಿಗೆ ತುತ್ತಾಗಿ, ಜವುಗು “ಸಮುದ್ರ”ವನ್ನೇ ಉಂಟುಮಾಡಿಬಿಡುತ್ತಿತ್ತು. ಆದರೆ, ಜಲಮಾರ್ಗ, ನಾಲೆ ಮತ್ತು ಕಾಲುವೆಗಳ ವ್ಯವಸ್ಥೆಯನ್ನು ಉಪಯೋಗಿಸಿ, ಬಾಬೆಲಿನವರು ಈ ಕಡಲಡವಿಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಿದ್ದಾರೆ. ಅವರು ಜಾಣ್ಮೆಯಿಂದ ಈ ನೀರುಗಳನ್ನು, ಆ ನಗರದ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಉಪಯೋಗಿಸುತ್ತಾರೆ. ಹೀಗಿದ್ದರೂ, ಬಾಬೆಲನ್ನು ದೈವಿಕ ನ್ಯಾಯತೀರ್ಪಿನಿಂದ ಯಾವ ಮಾನವ ಪ್ರಯತ್ನವೂ ರಕ್ಷಿಸಲಾರದು. ಅದೊಂದು ಅಡವಿಯಾಗಿತ್ತು, ಮತ್ತು ಅಡವಿಯಾಗಿಯೇ ಉಳಿಯುವುದು. ದಕ್ಷಿಣದಲ್ಲಿರುವ ಘೋರವಾದ ಅಡವಿಯಿಂದ ಇಸ್ರಾಯೇಲಿನ ಮೇಲೆ ಕೆಲವೊಮ್ಮೆ ಬೀಸುವ ಉಗ್ರವಾದ ಬಿರುಗಾಳಿಗಳಂತೆ, ಬಾಬೆಲಿನ ಮೇಲೆ ಕೇಡಿನ ಚಂಡಮಾರುತವು ಸ್ವಲ್ಪದರಲ್ಲೇ ಎರಗಲಿದೆ.​—⁠ಹೋಲಿಸಿ ಜೆಕರ್ಯ 9:⁠14.

4. ಪ್ರಕಟನೆಯಲ್ಲಿರುವ ‘ಮಹಾ ಬಾಬೆಲಿನ’ ದರ್ಶನದಲ್ಲಿ, ‘ನೀರುಗಳು’ ಮತ್ತು ‘ಅಡವಿ’ ಒಳಗೂಡಿರುವುದು ಹೇಗೆ, ಮತ್ತು “ನೀರು” ಏನನ್ನು ಅರ್ಥೈಸುತ್ತದೆ?

4 ಈ ಪುಸ್ತಕದ 14ನೆಯ ಅಧ್ಯಾಯದಲ್ಲಿ ನಾವು ಕಲಿತಂತೆ, ಪುರಾತನ ಬಾಬೆಲಿಗೆ ಆಧುನಿಕ ಪ್ರತಿರೂಪವಿದೆ. ಅದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲ್‌’ ಆಗಿದೆ. ಪ್ರಕಟನೆ ಪುಸ್ತಕದಲ್ಲಿ, ಮಹಾ ಬಾಬೆಲಿನ ಜೊತೆಗೂ ಒಂದು “ಅಡವಿ” ಮತ್ತು “ನೀರುಗಳ” ಚಿತ್ರಣವಿರುವುದನ್ನು ನಾವು ನೋಡುತ್ತೇವೆ. ಮಹಾ ಬಾಬೆಲನ್ನು ನೋಡಶಕ್ತನಾಗುವಂತೆ, ಅಪೊಸ್ತಲ ಯೋಹಾನನನ್ನು ಅಡವಿಗೆ ಎತ್ತಿಕೊಂಡು ಹೋಗಲಾಗುತ್ತದೆ. ಮಹಾ ಬಾಬೆಲ್‌, ‘ಬಹಳ ನೀರುಗಳ ಮೇಲೆ ವಾಸಿಸುತ್ತದೆ’ ಎಂಬುದಾಗಿ ಯೋಹಾನನಿಗೆ ಹೇಳಲಾಗುತ್ತದೆ. ಈ ನೀರುಗಳು, “ಪ್ರಜೆ ಸಮೂಹ ಜನ ಭಾಷೆಗಳನ್ನು” ಪ್ರತಿನಿಧಿಸುತ್ತವೆ. (ಪ್ರಕಟನೆ 17:​1-3, 5, 15) ಸುಳ್ಳು ಧರ್ಮವು ಇಂದಿನ ವರೆಗೂ ಬದುಕಿ ಉಳಿದಿರುವುದು ಜನಸಾಮಾನ್ಯರ ಬೆಂಬಲದಿಂದಲೇ, ಆದರೆ ಈ ‘ನೀರುಗಳು’ ಅದನ್ನು ಅಂತ್ಯದಲ್ಲಿ ರಕ್ಷಿಸಲಾರವು. ತನ್ನ ಪುರಾತನ ಪ್ರತಿರೂಪದಂತೆ, ಇದು ಕೂಡ ಬರಿದಾಗುವುದು, ಅಲಕ್ಷಿಸಲ್ಪಡುವುದು ಮತ್ತು ಕೊನೆಗೆ ನಿರ್ಜನವಾಗುವುದು.

5. ಬಾಬೆಲು ‘ಬಾಧಿಸುವ’ ಮತ್ತು ‘ಸೂರೆಮಾಡುವ’ ದೇಶವೆಂಬ ಖ್ಯಾತಿಯನ್ನು ಹೇಗೆ ಪಡೆದುಕೊಳ್ಳುತ್ತದೆ?

5 ಯೆಶಾಯನ ದಿನದಲ್ಲಿ ಬಾಬೆಲು ಒಂದು ಪ್ರಧಾನ ಲೋಕ ಶಕ್ತಿಯಾಗಿರಲಿಲ್ಲವಾದರೂ, ಮುಂದೆ ಅದು ಆಳ್ವಿಕೆ ನಡೆಸುವಾಗ ಅಧಿಕಾರದ ದುರುಪಯೋಗ ಮಾಡುವುದೆಂದು ಯೆಹೋವನು ಮುಂಗಾಣುತ್ತಾನೆ. ಯೆಶಾಯನು ಹೇಳುವುದು: “ಘೋರದರ್ಶನವು ನನಗೆ ತಿಳಿಯ ಬಂದಿದೆ; ಬಾಧಕನು ಬಾಧಿಸುತ್ತಿದ್ದಾನೆ, ಸೂರೆಗಾರನು ಸೂರೆಮಾಡುತ್ತಿದ್ದಾನೆ.” (ಯೆಶಾಯ 21:2ಎ) ಯೆಹೂದವನ್ನು ಸೇರಿಸಿ, ತಾನು ಜಯಿಸುವ ಜನಾಂಗಗಳನ್ನು ಬಾಬೆಲು, ಸೂರೆಮಾಡುವುದು ಮತ್ತು ಮೋಸಕರವಾಗಿ ನಡೆಸಿಕೊಳ್ಳುವುದು. ಬಾಬೆಲಿನವರು ಯೆರೂಸಲೇಮನ್ನು ಸೋಲಿಸಿ, ಅದರ ದೇವಾಲಯವನ್ನು ಕೊಳ್ಳೆಹೊಡೆದು, ಅದರ ಜನರನ್ನು ಬಾಬೆಲಿಗೆ ಸೆರೆವಾಸಿಗಳಾಗಿ ಕೊಂಡ್ಯೊಯುವರು. ಅಲ್ಲಿ ಈ ನಿಸ್ಸಹಾಯಕ ಕೈದಿಗಳು, ಘಾತಕಿಗಳಾಗಿ ಉಪಚರಿಸಲ್ಪಡುವರು, ತಮ್ಮ ನಂಬಿಕೆಗಾಗಿ ಗೇಲಿಮಾಡಲ್ಪಡುವರು ಮತ್ತು ಸ್ವದೇಶಕ್ಕೆ ಹಿಂದಿರುಗುವ ಯಾವ ನಿರೀಕ್ಷೆಯೂ ಇಲ್ಲದವರಾಗಿರುವರು.​—⁠2 ಪೂರ್ವಕಾಲವೃತ್ತಾಂತ 36:⁠17-21; ಕೀರ್ತನೆ 137:​1-4.

6. (ಎ) ಯಾವ ನಿಟ್ಟುಸಿರನ್ನು ಯೆಹೋವನು ತಡೆದುಬಿಡುವನು? (ಬಿ) ಯಾವ ಜನಾಂಗಗಳು ಬಾಬೆಲನ್ನು ಆಕ್ರಮಣಮಾಡುವುದಾಗಿ ಮುಂತಿಳಿಸಲಾಗಿದೆ, ಮತ್ತು ಇದು ಹೇಗೆ ನೆರವೇರುವುದು?

6 ಹೌದು, ಬಾಬೆಲು ಈ ‘ಘೋರದರ್ಶನಕ್ಕೆ’ ತೀರ ಯೋಗ್ಯವಾಗಿದೆ. ಅದರ ಮೇಲೆ ಕಷ್ಟತೊಂದರೆಗಳು ಬರಲಿವೆ. ಯೆಶಾಯನು ಮುಂದುವರಿಸುವುದು: “ಏಲಾಮೇ, ಏಳು! ಮೇದ್ಯವೇ, ಮುತ್ತು! ನಿಮ್ಮ ನಿಟ್ಟುಸುರನ್ನು ನಿಲ್ಲಿಸಿಬಿಟ್ಟಿದ್ದೇನೆ.” (ಯೆಶಾಯ 21:2ಬಿ) ಈ ಮೋಸಕರ ಸಾಮ್ರಾಜ್ಯದ ದಬ್ಬಾಳಿಕೆಗೆ ಗುರಿಯಾದವರು ಬಿಡುಗಡೆಯನ್ನು ಅನುಭವಿಸಲಿದ್ದಾರೆ. ಕಟ್ಟಕಡೆಗೆ ಅವರ ನಿಟ್ಟುಸಿರು ಕೊನೆಗೊಳ್ಳಲಿದೆ! (ಕೀರ್ತನೆ 79:​11, 12) ಈ ಬಿಡುಗಡೆ ಯಾರ ಮೂಲಕ ಬರುವುದು? ಬಾಬೆಲಿನ ಮೇಲೆ ಮುತ್ತಿಗೆ ಹಾಕಲಿರುವ, ಏಲಾಮ್‌ ಮತ್ತು ಮೇದ್ಯ ಎಂಬ ಎರಡು ಜನಾಂಗಗಳನ್ನು ಯೆಶಾಯನು ಹೆಸರಿಸುತ್ತಾನೆ. ಎರಡು ಶತಮಾನಗಳ ನಂತರ ಸಾ.ಶ.ಪೂ. 539ರಲ್ಲಿ, ಪಾರಸಿಯನಾದ ಕೋರೆಷನು ಬಾಬೆಲಿನ ವಿರುದ್ಧ ಮೇದ್ಯಪಾರಸಿಯರ ಜಂಟಿ ಪಡೆಯನ್ನು ಮುನ್ನಡೆಸುವನು. ಏಲಾಮ್‌ ಜನಾಂಗದ ಕಡಿಮೆಪಕ್ಷ ಒಂದು ಭಾಗವನ್ನು ಈ ಪಾರಸಿಯ ಚಕ್ರವರ್ತಿಗಳು, ಸಾ.ಶ.ಪೂ. 539ರ ಮುಂಚೆ ಸ್ವಾಧೀನಪಡಿಸಿಕೊಂಡಿರುವರು. * ಹೀಗೆ, ಪಾರಸಿಯ ಸೇನೆಗಳಲ್ಲಿ ಏಲಾಮ್ಯರು ಸಹ ಇರುವರು.

7. ಯೆಶಾಯನ ದರ್ಶನವು ಅವನನ್ನು ಹೇಗೆ ಬಾಧಿಸುತ್ತದೆ, ಮತ್ತು ಇದು ಏನನ್ನು ಸೂಚಿಸುತ್ತದೆ?

7 ಈ ದರ್ಶನವು ತನ್ನ ಮೇಲೆ ಬೀರಿದ ಪ್ರಭಾವವನ್ನು ಯೆಶಾಯನು ಹೀಗೆ ವರ್ಣಿಸುತ್ತಾನೆ: “ಈ ದರ್ಶನದಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಯಾತನೆಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ. ನನ್ನ ಹೃದಯವು ಭ್ರಮೆಗೊಂಡಿದೆ, ನಡುಕವು ನನ್ನನ್ನು ಆಕ್ರಮಿಸಿದೆ, ನಾನು ಅಪೇಕ್ಷಿಸುತ್ತಿದ್ದ ಸಂಜೆಹೊತ್ತೇ ನನಗೆ ಭಯಂಕರವಾಗಿ ಪರಿಣಮಿಸಿದೆ.” (ಯೆಶಾಯ 21:3, 4) ಪ್ರವಾದಿಯು ಸಂಜೆಹೊತ್ತನ್ನು ಇಷ್ಟಪಡುತ್ತಾನೆಂದು ತೋರುತ್ತದೆ. ಅದು ಮೌನವಾದ ಚಿಂತನೆಗೆ ಬಹಳ ಸೊಗಸಾದ ಸಮಯವಾಗಿದೆ. ಆದರೆ ಈಗ ಸಂಜೆಹೊತ್ತು ತನ್ನ ಆಕರ್ಷಣೆಯನ್ನು ಕಳೆದುಕೊಂಡು, ಕೇವಲ ಭಯ, ನೋವು ಮತ್ತು ನಡುಕವನ್ನೇ ತರುವಂತಹದ್ದಾಗಿದೆ. ಅವನು ಪ್ರಸವವೇದನೆಯನ್ನು ಅನುಭವಿಸುವ ಸ್ತ್ರೀಯಂತೆ ಕಷ್ಟಪಡುತ್ತಾನೆ ಮತ್ತು ಅವನ ಹೃದಯವು “ಭ್ರಮೆಗೊಂಡಿದೆ.” ಈ ಅಭಿವ್ಯಕ್ತಿಯು “ಕ್ರಮತಪ್ಪಿದ ಹಾಗೂ ಅಸ್ಥಿರವಾದ ನಾಡಿಬಡಿತವನ್ನು” ಸೂಚಿಸುವುದರಿಂದ, ಈ ವಾಕ್ಸರಣಿಯನ್ನು ಒಬ್ಬ ಪಂಡಿತನು “ನನ್ನ ಹೃದಯವು ನಗಾರಿಯಂತೆ ಬಡಿದುಕೊಳ್ಳುತ್ತದೆ” ಎಂಬುದಾಗಿ ತರ್ಜುಮೆಮಾಡುತ್ತಾನೆ. ಯಾಕೆ ಇಂತಹ ಕಳವಳ? ಬಹುಶಃ ಯೆಶಾಯನ ಅನಿಸಿಕೆಗಳು ಪ್ರವಾದನಾತ್ಮಕವಾಗಿವೆ. ಸಾ.ಶ.ಪೂ. 539, ಅಕ್ಟೋಬರ್‌ 5/6ರ ರಾತ್ರಿಯಂದು, ಬಾಬೆಲಿನವರು ತದ್ರೀತಿಯ ಭೀತಿಯನ್ನೇ ಅನುಭವಿಸುವರು.

8. ಈಗಾಗಲೇ ಪ್ರವಾದಿಸಲ್ಪಟ್ಟಂತೆ, ವೈರಿಗಳು ನಗರದ ಹೊರವಲಯದಲ್ಲಿದ್ದರೂ ಬಾಬೆಲಿನವರು ಹೇಗೆ ಪ್ರತಿಕ್ರಿಯಿಸುತ್ತಾರೆ?

8 ಆ ವಿನಾಶಕರ ರಾತ್ರಿಯಂದು ಕತ್ತಲೆಯು ಆವರಿಸಿದಂತೆ, ಬಾಬೆಲಿನವರ ಮನಸ್ಸಿನಲ್ಲಿ ಭೀತಿಯೆಂಬ ಅನಿಸಿಕೆಯೇ ಇಲ್ಲದಂತಿದೆ. ಸುಮಾರು ಎರಡು ಶತಮಾನಗಳ ಮುಂಚೆ, ಯೆಶಾಯನು ಮುಂತಿಳಿಸುವುದು: “ಔತಣಕ್ಕೆ ಸಿದ್ಧಪಡಿಸಿಕೊಂಡು ಚಾಪೆಗಳನ್ನು ಹಾಸಿಕೊಂಡು ಉಂಡು ಕುಡಿಯುತ್ತಿದ್ದಾರಲ್ಲಾ”! (ಯೆಶಾಯ 21:5ಎ) ಹೌದು, ಅಹಂಕಾರಿ ರಾಜನಾದ ಬೇಲ್ಶಚ್ಚರನು ಒಂದು ಔತಣವನ್ನು ಏರ್ಪಡಿಸಿದ್ದಾನೆ. ಒಂದು ಸಾವಿರ ಪ್ರತಿಷ್ಠಾವಂತರಿಗೆ, ಮತ್ತು ರಾಜನ ಪತ್ನಿಯರು ಹಾಗೂ ಉಪಪತ್ನಿಯರಿಗೆ ಆಸನಗಳನ್ನು ಸಜ್ಜುಗೊಳಿಸಲಾಗಿದೆ. (ದಾನಿಯೇಲ 5:​1, 2) ನಗರದ ಹೊರವಲಯದಲ್ಲಿ ವೈರಿಯ ಸೇನೆಯಿರುವುದು ಈ ಮೋಜುಗಾರರಿಗೆ ಗೊತ್ತಿದ್ದರೂ, ಸೈನಿಕರು ನಗರದೊಳಗೆ ನುಗ್ಗಿ ಬರಸಾಧ್ಯವಿಲ್ಲವೆಂದು ಅವರು ನೆನಸುತ್ತಾರೆ. ಈ ನಗರಕ್ಕೆ ಬೃಹದಾಕಾರದ ಗೋಡೆಗಳು ಮತ್ತು ಆಳವಾದ ನೀರಿನ ಕಂದಕವಿರುವುದರಿಂದ, ಅದನ್ನು ಜಯಿಸುವುದು ಅಸಾಧ್ಯವೇ ಸರಿ ಎಂಬಂತೆ ತೋರುತ್ತದೆ. ಅದರ ಅನೇಕ ದೇವದೇವತೆಗಳು ಅದನ್ನು ಅಸಂಭವವನ್ನಾಗಿ ಮಾಡುತ್ತವೆ. ಆದುದರಿಂದ, ‘ತಿನ್ನೋಣ ಕುಡಿಯೋಣ’ವಾಗಲಿ! ಬೇಲ್ಶಚ್ಚರನು ಮತ್ತು ಇತರ ಅನೇಕರೂ ಕುಡಿದು ಮತ್ತರಾಗುತ್ತಾರೆ. ಈ ಉನ್ನತ ಅಧಿಕಾರಿಗಳನ್ನು ಎಚ್ಚರಿಸುವ ಅಗತ್ಯವನ್ನು ಯೆಶಾಯನ ಮುಂದಿನ ಪ್ರವಾದನಾತ್ಮಕ ಮಾತುಗಳು ತೋರಿಸುವುದರಿಂದ, ಅವರೆಲ್ಲರೂ ಅಮಲೇರಿದ್ದಾರೆಂಬುದು ತಿಳಿದುಬರುತ್ತದೆ.

9. ‘ಗುರಾಣಿಗೆ ಎಣ್ಣೆಯನ್ನು ಬಳಿಯುವ’ ಅಗತ್ಯವು ಏಕೆ ಉಂಟಾಗುತ್ತದೆ?

9“ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ!” (ಯೆಶಾಯ 21:5ಬಿ) ಥಟ್ಟನೆ, ಔತಣವು ಸ್ಥಗಿತಗೊಳ್ಳುತ್ತದೆ. ಪ್ರಭುಗಳು ತಮ್ಮ ಅಮಲಿನಿಂದ ಎಚ್ಚೆತ್ತುಕೊಳ್ಳುತ್ತಾರೆ! ಅಲ್ಲಿಗೆ ವಯಸ್ಸಾದ ಪ್ರವಾದಿ ದಾನಿಯೇಲನನ್ನು ಕರೆಸಲಾಗುತ್ತದೆ. ಯೆಶಾಯನು ವರ್ಣಿಸಿದಂತೆಯೇ, ಯೆಹೋವನು ಬಾಬೆಲಿನ ರಾಜ ಬೇಲ್ಶಚ್ಚರನನ್ನು ಹೇಗೆ ಒಂದು ಭಯಂಕರವಾದ ಸ್ಥಿತಿಯಲ್ಲಿ ತಂದು ನಿಲ್ಲಿಸುತ್ತಾನೆಂಬುದನ್ನು ದಾನಿಯೇಲನು ನೋಡುತ್ತಾನೆ. ಮೇದ್ಯರು, ಪಾರಸಿಯರು ಮತ್ತು ಏಲಾಮ್ಯರ ಜಂಟಿ ಪಡೆಗಳು ನಗರದ ರಕ್ಷಣಾವ್ಯವಸ್ಥೆಯನ್ನು ಭೇದಿಸಿದಂತೆ, ರಾಜನ ಅತಿಥಿಗಳು ಭಾರೀ ಗೊಂದಲಕ್ಕೆ ಸಿಕ್ಕಿಕೊಳ್ಳುತ್ತಾರೆ. ಬಾಬೆಲು ಕ್ಷಣಮಾತ್ರದಲ್ಲಿ ಬಿದ್ದುಹೋಗುತ್ತದೆ! ಆದರೆ, ‘ಗುರಾಣಿಗೆ ಎಣ್ಣೆಯನ್ನು ಬಳಿಯುವುದರ’ ಅರ್ಥವೇನು? ಬೈಬಲು ಕೆಲವೊಮ್ಮೆ ಒಂದು ಜನಾಂಗದ ಅರಸನನ್ನು ಒಂದು ಗುರಾಣಿಗೆ ಹೋಲಿಸುತ್ತದೆ. ಏಕೆಂದರೆ ಅವನೇ ಆ ದೇಶದ ರಕ್ಷಕನು ಹಾಗೂ ಆಶ್ರಯದಾತನು ಆಗಿದ್ದಾನೆ. * (ಕೀರ್ತನೆ 89:18) ಹಾಗಾದರೆ ಯೆಶಾಯ ಪುಸ್ತಕದಲ್ಲಿರುವ ಈ ವಚನವು, ಒಬ್ಬ ಹೊಸ ರಾಜನ ಅಗತ್ಯವನ್ನು ಮುಂತಿಳಿಸುತ್ತಿರಬಹುದು. ಏಕೆ? ಏಕೆಂದರೆ, ಬೇಲ್ಶಚ್ಚರನು ಅದೇ “ರಾತ್ರಿಯಲ್ಲಿ” ಕೊಲ್ಲಲ್ಪಟ್ಟನು. ಆದುದರಿಂದಲೇ, “ಗುರಾಣಿಗೆ ಎಣ್ಣೆಯನ್ನು ಬಳಿಯುವ” ಇಲ್ಲವೆ ಒಬ್ಬ ಹೊಸ ರಾಜನನ್ನು ಅಭಿಷೇಕಿಸುವ ಅಗತ್ಯವಿದೆ.​—⁠ದಾನಿಯೇಲ 5:​1-9, 30.

10. ಮೋಸಕರವಾಗಿ ವ್ಯವಹರಿಸುವವನ ಕುರಿತಾದ ಯೆಶಾಯನ ಪ್ರವಾದನೆಯು ನೆರವೇರಿದಾಗ, ಯೆಹೋವನ ಆರಾಧಕರು ಯಾವ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು?

10 ಈ ವೃತ್ತಾಂತದಿಂದ ಸತ್ಯಾರಾಧನೆಯನ್ನು ಪ್ರೀತಿಸುವ ಸಕಲರೂ ಸಾಂತ್ವನ ಪಡೆದುಕೊಳ್ಳುತ್ತಾರೆ. ಆಧುನಿಕ ದಿನದ ಬಾಬೆಲ್‌, ಅಂದರೆ ಮಹಾ ಬಾಬೆಲ್‌, ಪುರಾತನ ಕಾಲದ ತನ್ನ ಪ್ರತಿರೂಪದಂತೆಯೇ ಮೋಸಕರವೂ ವಿಧ್ವಂಸಕವೂ ಆಗಿದೆ. ಇಂದಿನ ವರೆಗೂ ಯೆಹೋವನ ಸಾಕ್ಷಿಗಳನ್ನು ನಿಷೇಧಿಸಲು, ಹಿಂಸಿಸಲು ಇಲ್ಲವೆ ಶಿಕ್ಷೆಯೋಪಾದಿ ತೆರಿಗೆಯನ್ನು ಸಲ್ಲಿಸುವಂತೆ ಮಾಡಲು ಧಾರ್ಮಿಕ ಮುಖಂಡರು ಸಂಚುಹೂಡುತ್ತಾರೆ. ಆದರೆ ಈ ಪ್ರವಾದನೆಯು ನಮಗೆ ನೆನಪು ಹುಟ್ಟಿಸುವಂತೆ, ಯೆಹೋವನು ಈ ಎಲ್ಲ ಮೋಸಕರ ವ್ಯವಹಾರವನ್ನು ನೋಡುತ್ತಾನೆ, ಮತ್ತು ಅವುಗಳಿಗೆ ತಕ್ಕ ಶಿಕ್ಷೆಯನ್ನು ಕೊಡದೆ ಆತನು ಬಿಡಲಾರನು. ಆತನನ್ನು ತಪ್ಪಾಗಿ ಪ್ರತಿನಿಧಿಸುವ ಮತ್ತು ಆತನ ಜನರನ್ನು ದುರುಪಚರಿಸುವ ಎಲ್ಲ ಧರ್ಮಗಳನ್ನು ಆತನು ನಿರ್ಮೂಲಮಾಡಿಬಿಡುವನು. (ಪ್ರಕಟನೆ 18:⁠8) ಇದು ಎಂದಾದರೂ ಸಂಭವಿಸಸಾಧ್ಯವೊ? ಪುರಾತನ ಬಾಬೆಲ್‌ ಮತ್ತು ಅವಳ ಆಧುನಿಕ ದಿನದ ಪ್ರತಿರೂಪದ ಪತನದ ಕುರಿತು ಆತನು ನೀಡಿರುವ ಎಚ್ಚರಿಕೆಗಳು ಹೇಗೆ ನೆರವೇರಿವೆ ಎಂಬುದನ್ನು ನೋಡಿಯೇ ನಾವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಸಾಧ್ಯವಿದೆ.

“ಬಾಬೆಲ್‌ ಬಿತ್ತು, ಬಿತ್ತು!”

11. (ಎ) ಕಾವಲುಗಾರನ ಜವಾಬ್ದಾರಿಯೇನು, ಮತ್ತು ಕಾವಲುಗಾರನಂತೆ ಇಂದು ಯಾರು ಕ್ರಿಯಾಶೀಲರಾಗಿದ್ದಾರೆ? (ಬಿ) ಕತ್ತೆಗಳ ಮತ್ತು ಒಂಟೆಗಳ ಸಾಲುಗಳು ಏನನ್ನು ಪ್ರತಿನಿಧಿಸುತ್ತವೆ?

11 ಈಗ ಯೆಹೋವನು ಪ್ರವಾದಿಯೊಂದಿಗೆ ಮಾತಾಡುತ್ತಾನೆ. ಯೆಶಾಯನು ವರದಿಸುವುದು: “ಕರ್ತನು ನನಗೆ ಹೇಳಿರುವದೇನಂದರೆ​—⁠ಕಾವಲುಗಾರನನ್ನು ಇಡು, ನಡೆ; ಕಂಡದ್ದನ್ನು ತಿಳಿಸಲಿ.” (ಯೆಶಾಯ 21:6) ಈ ಮಾತುಗಳು, ಕಾವಲುಗಾರ ಎಂಬ ಮತ್ತೊಂದು ಮುಖ್ಯ ವಿಷಯವನ್ನು ಈ ಅಧ್ಯಾಯದಲ್ಲಿ ಪರಿಚಯಿಸುತ್ತವೆ. ಈ ವಿಷಯವು, ಇಂದಿನ ಎಲ್ಲ ಸತ್ಯ ಕ್ರೈಸ್ತರಿಗೆ ಆಸಕ್ತಿಯ ವಿಷಯವಾಗಿದೆ, ಏಕೆಂದರೆ ಯೇಸು ತನ್ನ ಹಿಂಬಾಲಕರಿಗೆ “ಎಚ್ಚರವಾಗಿರ್ರಿ” ಎಂದು ಪ್ರೋತ್ಸಾಹಿಸಿದ್ದನು. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು, ನಿಕಟವಾಗಿರುವ ದೇವರ ನ್ಯಾಯತೀರ್ಪಿನ ದಿನದ ಬಗ್ಗೆ ಮತ್ತು ಈ ಭ್ರಷ್ಟ ಲೋಕದ ಅಪಾಯಗಳ ಬಗ್ಗೆ ನೋಡುವ ವಿಷಯಗಳನ್ನು ತಿಳಿಯಪಡಿಸುತ್ತಾ ಇದೆ. (ಮತ್ತಾಯ 24:​42, 45-47) ಮತ್ತು ದರ್ಶನದಲ್ಲಿ ಕಂಡ ಈ ಕಾವಲುಗಾರನ ಕುರಿತು ಯೆಶಾಯನಿಗೆ ಹೀಗೆ ಹೇಳಲಾಯಿತು: “ಅವನು ಜೋಡಿ ಜೋಡಿಯಾಗಿ ಬರುವ ಸವಾರರ ಸಾಲನ್ನೂ ಕತ್ತೆಗಳ ಮತ್ತು ಒಂಟೆಗಳ ಸಾಲುಗಳನ್ನೂ ನೋಡಿದರೆ ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ.” (ಯೆಶಾಯ 21:7) ಜೋಡಿಯಾಗಿ ಬರುತ್ತಿರುವ ಈ ಸವಾರರು ಯುದ್ಧ ವ್ಯೂಹದ ರಚನೆಗಾಗಿ ವೇಗದಿಂದ ಮುಂದೊತ್ತುವ ಸವಾರರ ಸಾಲುಗಳನ್ನು ಪ್ರತಿನಿಧಿಸುವಂತೆ ತೋರುತ್ತಾರೆ. ಕತ್ತೆಗಳ ಮತ್ತು ಒಂಟೆಗಳ ಸಾಲುಗಳು, ಮೇದ್ಯ ಮತ್ತು ಪಾರಸಿಯ ಉಭಯಶಕ್ತಿಗಳನ್ನು ಸೂಕ್ತವಾಗಿಯೇ ಚಿತ್ರಿಸುತ್ತವೆ. ಇವು ಒಂದುಗೂಡಿ ಈ ಆಕ್ರಮಣವನ್ನು ಮಾಡುತ್ತವೆ. ಪಾರಸಿಯರು ಯುದ್ಧದಲ್ಲಿ ಕತ್ತೆಗಳನ್ನೂ ಒಂಟೆಗಳನ್ನೂ ಉಪಯೋಗಿಸಿದರೆಂದು ಇತಿಹಾಸವು ದೃಢೀಕರಿಸುತ್ತದೆ.

12. ಯೆಶಾಯನು ದರ್ಶನದಲ್ಲಿ ಕಂಡ ಆ ಕಾವಲುಗಾರನು ಯಾವ ಗುಣಗಳನ್ನು ಪ್ರದರ್ಶಿಸುತ್ತಾನೆ, ಮತ್ತು ಯಾರು ಇಂದು ಆ ಗುಣಗಳನ್ನು ತೋರಿಸಬೇಕಾಗಿದೆ?

12 ಆಗ ಈ ಕೆಳಗಿನ ವರದಿಯನ್ನು ಕಾವಲುಗಾರನು ಮಾಡಬೇಕಾಗುತ್ತದೆ. “ಬಳಿಕ ಅವನು ಸಿಂಹಧ್ವನಿಯಿಂದ​—⁠ಕರ್ತನೇ, ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ; ಇಗೋ, ಸವಾರರು, ಜೋಡಿ ಜೋಡಿಯಾಗಿ ಬರುತ್ತಾರೆ” ಎಂದು ಕೂಗಿದನು. (ಯೆಶಾಯ 21:8, 9ಎ) ದರ್ಶನದಲ್ಲಿ ಕಂಡ ಈ ಕಾವಲುಗಾರನು, ‘ಸಿಂಹ’ದಂತೆ ಧೈರ್ಯದಿಂದ ಮಾತಾಡುತ್ತಾನೆ. ಬಾಬೆಲಿನಂತಹ ಒಂದು ಶಕ್ತಿಶಾಲಿ ಜನಾಂಗದ ವಿರುದ್ಧ ನ್ಯಾಯತೀರ್ಪನ್ನು ತಿಳಿಯಪಡಿಸಲು ಧೈರ್ಯದ ಅಗತ್ಯವಿದೆ. ಅದರೊಂದಿಗೆ ತಾಳ್ಮೆಯ ಅಗತ್ಯವೂ ಇದೆ. ಈ ಕಾವಲುಗಾರನು ಹಗಲುರಾತ್ರಿ ಎನ್ನದೆ ತನ್ನ ಕೋವರದಲ್ಲಿ ನಿಂತುಕೊಂಡು, ತನ್ನ ಎಚ್ಚರಿಕೆಯ ಸ್ಥಿತಿಯನ್ನು ಯಾವುದೂ ಕಡಿಮೆಮಾಡದಂತೆ ನೋಡುತ್ತಾನೆ. ತದ್ರೀತಿಯಲ್ಲೇ, ಈ ಕಡೇ ದಿವಸಗಳಲ್ಲಿರುವ ಕಾವಲುಗಾರ ವರ್ಗದವರಿಗೆ ಧೈರ್ಯ ಹಾಗೂ ತಾಳ್ಮೆಯ ಅಗತ್ಯವಿದೆ. (ಪ್ರಕಟನೆ 14:12) ಮತ್ತು ಎಲ್ಲ ಸತ್ಯ ಕ್ರೈಸ್ತರೂ ಈ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ.

13, 14. (ಎ) ಪುರಾತನ ಬಾಬೆಲಿಗೆ ಏನು ಸಂಭವಿಸುತ್ತದೆ, ಮತ್ತು ಯಾವ ಅರ್ಥದಲ್ಲಿ ಅದರ ಮೂರ್ತಿಗಳು ಒಡೆಯಲ್ಪಟ್ಟಿವೆ? (ಬಿ) ಮಹಾ ಬಾಬೆಲ್‌ ತದ್ರೀತಿಯ ಪತನವನ್ನು ಯಾವಾಗ ಮತ್ತು ಹೇಗೆ ಅನುಭವಿಸಿತು?

13 ಯೆಶಾಯನ ದರ್ಶನದಲ್ಲಿ ಕಂಡ ಈ ಕಾವಲುಗಾರನು, ಸವಾರರು ಜೋಡಿಯಾಗಿ ಬರುತ್ತಿರುವುದನ್ನು ನೋಡುತ್ತಾನೆ. ಅವನಿಗೆ ಯಾವ ಸುದ್ದಿಯು ಸಿಗುತ್ತದೆ? ಅವನು “ಕೂಗಿ ಇನ್ನೂ ಹೇಳಿದ್ದೇನಂದರೆ​—⁠ಬಾಬೆಲ್‌ ಬಿತ್ತು, ಬಿತ್ತು! ಅದರ ದೇವತಾವಿಗ್ರಹಗಳನ್ನು ಒಡೆದು ನೆಲಸಮಮಾಡಿಬಿಟ್ಟರು ಎಂಬದೇ.” (ಯೆಶಾಯ 21:9ಬಿ) ಇದೆಂತಹ ರೋಮಾಂಚಕ ವರದಿ! ದೇವಜನರನ್ನು ಮೋಸಕರವಾಗಿ ಲೂಟಿಮಾಡುವ ಈ ವೈರಿಯು ಕೊನೆಗೂ ಬಿದ್ದುಹೋಯಿತು! * ಆದರೆ, ಬಾಬೆಲಿನ ದೇವತಾವಿಗ್ರಹಗಳು ಒಡೆದುಹೋಗುವುದು ಯಾವ ಅರ್ಥದಲ್ಲಿ? ಮೇದ್ಯಯಪಾರಸಿಯ ಆಕ್ರಮಣಗಾರರು ಬಾಬೆಲಿನ ದೇವಾಲಯಗಳೊಳಗೆ ನುಗ್ಗಿ, ಅದರ ಅಗಣಿತ ಮೂರ್ತಿಗಳನ್ನು ಒಡೆದು ನುಚ್ಚುನೂರುಮಾಡುವರೊ? ಇಲ್ಲ, ಅದರ ಅಗತ್ಯವಿಲ್ಲ. ನಗರವನ್ನು ಸಂರಕ್ಷಿಸುವ ವಿಷಯದಲ್ಲಿ ಬಾಬೆಲಿನ ದೇವತಾವಿಗ್ರಹಗಳು ಸೋತುಹೋದದ್ದು, ಅವುಗಳ ಒಡೆದುಹೋಗುವಿಕೆಗೆ ಸಮಾನವಾಗಿರುವುದು. ಮತ್ತು ದೇವಜನರನ್ನು ಪೀಡಿಸುತ್ತಾ ಇರಲು ಬಾಬೆಲಿಗೆ ಸಾಧ್ಯವಾಗದೆ ಹೋದಾಗ, ಅದು ಅದರ ಪತನವಾಗುವುದು.

14 ಹಾಗಾದರೆ, ಮಹಾ ಬಾಬೆಲಿನ ಕುರಿತೇನು? ಒಂದನೆಯ ಜಾಗತಿಕ ಯುದ್ಧವು ನಡೆಯುತ್ತಿದ್ದಾಗ, ದೇವಜನರ ಮೇಲೆ ಪೀಡನೆಯನ್ನು ತರುವ ಮೂಲಕ, ಅವರನ್ನು ಕೊಂಚ ಕಾಲ ದೇಶಭ್ರಷ್ಟರನ್ನಾಗಿ ಮಾಡುವುದರಲ್ಲಿ ಅದು ಸಫಲವಾಗಿತ್ತು. ಅವರ ಸಾರುವ ಕೆಲಸವು ಸಾಕ್ಷಾತ್‌ ನಿಂತುಹೋಗಿತ್ತು. ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರು ಮತ್ತು ಇತರ ಪ್ರಧಾನ ಅಧಿಕಾರಿಗಳು, ಸುಳ್ಳಾರೋಪಗಳ ನಿಮಿತ್ತ ಸೆರೆವಾಸಕ್ಕೊಳಗಾದರು. ಆದರೆ 1919ರಲ್ಲಿ ಅವರ ಪರಿಸ್ಥಿತಿಯಲ್ಲಾದ ದೊಡ್ಡ ಬದಲಾವಣೆಯು ಎಲ್ಲರನ್ನೂ ಚಕಿತಗೊಳಿಸಿತು. ಆ ಅಧಿಕಾರಿಗಳನ್ನು ಸೆರೆಯಿಂದ ಬಿಡುಗಡೆಮಾಡಲಾಯಿತು, ಮುಖ್ಯ ಕಾರ್ಯಾಲಯವು ಪುನಃ ತೆರೆಯಲ್ಪಟ್ಟಿತು ಮತ್ತು ಸಾರುವ ಕೆಲಸವು ಪುನಃ ಆರಂಭವಾಯಿತು. ದೇವಜನರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಹೋದಾಗ, ಮಹಾ ಬಾಬೆಲ್‌ ಬಿದ್ದಿತು. * ಪ್ರಕಟನೆ ಪುಸ್ತಕದಲ್ಲಿ ಈ ಪತನವನ್ನು ದೇವದೂತನು ಎರಡು ಬಾರಿ ಪ್ರಕಟಿಸುತ್ತಾನೆ. ಅವನು ಯೆಶಾಯ 21:9ರಲ್ಲಿರುವ ಘೋಷಣೆಯ ಮಾತುಗಳನ್ನೇ ಉಪಯೋಗಿಸುತ್ತಾನೆ.​—⁠ಪ್ರಕಟನೆ 14:​8; 18:⁠2.

15, 16. ಯಾವ ಅರ್ಥದಲ್ಲಿ ಯೆಶಾಯನ ಜನರು ‘ಕಣದ ಬಡಿತಕ್ಕೆ’ ಈಡಾದವರಾಗಿದ್ದಾರೆ, ಮತ್ತು ಅವರ ಕಡೆಗೆ ಯೆಶಾಯನಿಗಿದ್ದ ಮನೋಭಾವದಿಂದ ನಾವು ಏನನ್ನು ಕಲಿಯಬಲ್ಲೆವು?

15 ಯೆಶಾಯನು ಈ ಪ್ರವಾದನ ಸಂದೇಶವನ್ನು ಕೊನೆಗೊಳಿಸುತ್ತಾ, ತನ್ನ ಸ್ವಂತ ಜನರ ಕಡೆಗೆ ಅನುಕಂಪವನ್ನು ವ್ಯಕ್ತಪಡಿಸುತ್ತಾನೆ. ಅವನು ಹೇಳುವುದು: “ನನ್ನ ಕಣದ ದವಸವೇ, ನನ್ನ ಬಡಿತಕ್ಕೆ ಈಡಾದವರೇ, ಇಸ್ರಾಯೇಲ್ಯರ ದೇವರಾಗಿರುವ ಸೇನಾಧೀಶ್ವರನಾದ ಯೆಹೋವನಿಂದ ನಾನು ಕೇಳಿದ್ದನ್ನೇ ನಿಮಗೆ ತಿಳಿಸಿದ್ದೇನೆ.” (ಯೆಶಾಯ 21:10) ಬೈಬಲಿನಲ್ಲಿ, ತೆನೆಬಡಿಯುವಿಕೆಯು ಅನೇಕವೇಳೆ, ದೇವಜನರಿಗೆ ಸಿಗುವ ದಂಡನೆ ಹಾಗೂ ಪರಿಷ್ಕಾರವನ್ನು ಸಂಕೇತಿಸುತ್ತದೆ. ದೇವರ ಒಡಂಬಡಿಕೆಯ ಜನರು ‘ಕಣದ ಬಡಿತಕ್ಕೆ’ ಈಡಾಗುವರು. ಇಲ್ಲಿ ಹೊಟ್ಟಿನಿಂದ ಗೋಧಿಯನ್ನು ಬೇರ್ಪಡಿಸಲಾಗುತ್ತದೆ, ಆಗ ಪರಿಷ್ಕರಿಸಿದ ಹಾಗೂ ಒಳ್ಳೆಯ ಧಾನ್ಯಗಳು ಮಾತ್ರ ಉಳಿಯುತ್ತವೆ. ಈ ರೀತಿಯ ಶಿಕ್ಷೆಗಾಗಿ ಯೆಶಾಯನು ಹಿರಿ ಹಿರಿ ಹಿಗ್ಗುತ್ತಿಲ್ಲ. ಬದಲಿಗೆ, ಈ ‘ಕಣದ ಬಡಿತಕ್ಕೆ’ ಮುಂದೆ ಈಡಾಗಲಿರುವವರ ಬಗ್ಗೆ ಅವನು ಅನುಕಂಪ ವ್ಯಕ್ತಪಡಿಸುತ್ತಾನೆ. ಅವರಲ್ಲಿ ಕೆಲವರು ತಮ್ಮ ಮರಣದ ವರೆಗೂ ಅನ್ಯದೇಶದಲ್ಲಿ ಸೆರೆವಾಸಿಗಳಾಗಿರುವರು.

16 ಇದು ನಮಗೆಲ್ಲರಿಗೂ ಪ್ರಯೋಜನ ತರುವಂತಹ ಒಂದು ಮರುಜ್ಞಾಪನವಾಗಿರಬಹುದು. ಇಂದು ಕ್ರೈಸ್ತ ಸಭೆಯಲ್ಲಿ, ಕೆಲವರು ತಪ್ಪಿತಸ್ಥರ ಕಡೆಗೆ ಅನುಕಂಪವನ್ನು ತೋರಿಸಲು ನಿರ್ಲಕ್ಷಿಸಬಹುದು. ಮತ್ತೊಂದು ಕಡೆಯಲ್ಲಿ, ಶಿಕ್ಷೆಯನ್ನು ಪಡೆಯುವವರು ಅದರ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಬಹುದು. ಆದರೆ ಯೆಹೋವನು ತನ್ನ ಜನರನ್ನು ಪರಿಷ್ಕರಿಸುವ ಉದ್ದೇಶದಿಂದ ಶಿಕ್ಷಿಸುತ್ತಾನೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ, ಶಿಕ್ಷೆಯನ್ನು ಕ್ಷುಲ್ಲಕವೆಂದೆಣಿಸಲಾರೆವು. ದೀನಭಾವದಿಂದ ಅದನ್ನು ಅನುಭವಿಸುತ್ತಿರುವವರನ್ನು ನಾವು ಕೀಳ್ಮಾಡಲಾರೆವು, ಇಲ್ಲವೆ ಅದು ನಮಗೆ ಕೊಡಲ್ಪಡುವಾಗ ಅದನ್ನು ನಿರೋಧಿಸಲಾರೆವು. ಹಾಗಾದರೆ, ದೇವರ ಪ್ರೀತಿಯನ್ನು ವ್ಯಕ್ತಪಡಿಸುವ ದೈವಿಕ ಶಿಕ್ಷೆಯನ್ನು ನಾವು ಸ್ವೀಕರಿಸೋಣ.​—⁠ಇಬ್ರಿಯ 12:⁠6.

ಕಾವಲುಗಾರನನ್ನು ವಿಚಾರಿಸುವುದು

17. ಎದೋಮಿಗೆ “ದೂಮ” ಎಂಬ ಹೆಸರು ಸೂಕ್ತವಾಗಿದೆ ಏಕೆ?

17 ಯೆಶಾಯ 21ನೆಯ ಅಧ್ಯಾಯದ ಎರಡನೆಯ ಪ್ರವಾದನಾ ಸಂದೇಶವು, ಕಾವಲುಗಾರನ ಚಿತ್ರಣವನ್ನು ನಮ್ಮ ಎದುರಿಗೆ ತರುತ್ತದೆ. ಅದು ಆರಂಭಿಸುವುದು: “ದೂಮದ ವಿಷಯವಾದ ದೈವೋಕ್ತಿ. ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು, ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು ಎಂಬ ಕೂಗು ಸೇಯೀರಿನಿಂದ ನನಗೆ ಕೇಳಿಸುತ್ತಿತ್ತು.” (ಯೆಶಾಯ 21:11) ಈ ದೂಮ ಎಲ್ಲಿದೆ? ಬೈಬಲ್‌ ಸಮಯಗಳಲ್ಲಿ ಈ ಹೆಸರಿನ ಅನೇಕ ಪಟ್ಟಣಗಳಿದ್ದವು, ಆದರೆ ಇಲ್ಲಿ ಉಲ್ಲೇಖಿಸಲ್ಪಟ್ಟ ದೂಮ ಬೇರೆಯೇ ಆಗಿದೆ. ಎದೋಮಿನ ಮತ್ತೊಂದು ಹೆಸರಾಗಿರುವ ಸೇಯೀರ್‌ನಲ್ಲಿ ದೂಮ ನೆಲೆಸಿರುವುದಿಲ್ಲ. ಆದರೆ, “ದೂಮ” ಎಂಬುದರ ಅರ್ಥ “ಮೌನ” ಎಂದಾಗಿದೆ. ಮೊದಲಿನ ದೈವೋಕ್ತಿಯಲ್ಲಿ ಹೇಗೋ ಹಾಗೆಯೇ ಈ ಕ್ಷೇತ್ರಕ್ಕೆ ಅದರ ಭವಿಷ್ಯತ್ತನ್ನು ಸೂಚಿಸುವಂತಹ ಹೆಸರು ಕೊಡಲ್ಪಟ್ಟಿರುವಂತೆ ತೋರುತ್ತದೆ. ದೇವಜನರ ಮೇಲೆ ಸೇಡುತೀರಿಸಿಕೊಳ್ಳುವ ಎದೋಮ್‌ ಎಂಬ ಈ ವೈರಿಯು, ಮರಣವೆಂಬ ಮೌನದಲ್ಲಿ ಹೂತುಹೋಗುವುದು. ಅದು ಸಂಭವಿಸುವ ಮುಂಚೆ, ಕೆಲವರು ಆ ಭವಿಷ್ಯತ್ತಿನ ಬಗ್ಗೆ ತುಂಬ ಕಳವಳದಿಂದ ವಿಚಾರಿಸುವರು.

18. ಪುರಾತನ ಎದೋಮಿನ ಮೇಲೆ “ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ” ಎಂಬ ದೈವೋಕ್ತಿ ನೆರವೇರುವುದು ಹೇಗೆ?

18 ಯೆಶಾಯನ ಪುಸ್ತಕವು ಬರೆಯಲ್ಪಡುತ್ತಿದ್ದಾಗ, ಶಕ್ತಿಶಾಲಿ ಅಶ್ಶೂರ್ಯರಿಂದ ನಿರ್ಧರಿಸಲ್ಪಟ್ಟ ವಿಜಯಪಥವು ಎದೋಮಿನ ದಾರಿಯಾಗಿ ಮುಂದೊತ್ತಲಿತ್ತು. ಆ ದಬ್ಬಾಳಿಕೆಯು ಯಾವಾಗ ಕೊನೆಗೊಳ್ಳುವುದೆಂದು ಎದೋಮಿನಲ್ಲಿರುವ ಕೆಲವರು ಕೇಳಲು ಹಾತೊರೆಯುತ್ತಾರೆ. ಅವರಿಗೆ ದೊರೆತ ಉತ್ತರವು ಏನು? “ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ . . . ಎಂದು ಕಾವಲುಗಾರನು ಹೇಳಿದನು.” (ಯೆಶಾಯ 21:12ಎ) ಘಟನೆಗಳು ಎದೋಮಿಗೆ ಮುನ್ನೆಚ್ಚರಿಕೆಯನ್ನು ಕೊಡುತ್ತವೆ. ಬಾನಂಚಿನಲ್ಲಿ ಉದಯದ ಮಿನುಗು ಕಾಣಿಸುವುದಾದರೂ ಅದು ಕ್ಷಣಿಕ ಇಲ್ಲವೆ ಕಾಲ್ಪನಿಕವಾಗಿರುತ್ತದೆ. ದಬ್ಬಾಳಿಕೆಯ ಮತ್ತೊಂದು ಕರಾಳ ಸಮಯ, ಅಂದರೆ ರಾತ್ರಿಯು, ಈ ಉದಯವನ್ನು ಹಿಂಬಾಲಿಸಿ ಬರುವುದು. ಎದೋಮಿನ ಭವಿಷ್ಯತ್ತನ್ನು ಇದು ಎಷ್ಟು ಚೆನ್ನಾಗಿ ಚಿತ್ರಿಸುತ್ತದೆ! ಅಶ್ಶೂರ್ಯರ ದಬ್ಬಾಳಿಕೆ ಕೊನೆಗೊಳ್ಳುವುದು. ಬಾಬೆಲು ಲೋಕ ಶಕ್ತಿಯಾಗಿ ಅಶ್ಶೂರದ ಸ್ಥಾನವನ್ನು ವಹಿಸಿಕೊಳ್ಳುವುದು ಮತ್ತು ಎದೋಮಿನ ಹೆಚ್ಚಿನ ಭಾಗವನ್ನು ಸೋಲಿಸಿಬಿಡುವುದು. (ಯೆರೆಮೀಯ 25:​17, 21; 27:​2-8) ಈ ಘಟನೆಯು ಪುನರಾವರ್ತಿಸುವುದು. ಬಾಬೆಲಿನ ನಂತರ ಪಾರಸಿಯರು, ಆ ಬಳಿಕ ಗ್ರೀಕರು ಈ ದಬ್ಬಾಳಿಕೆಯನ್ನು ಮುಂದುವರಿಸುವರು. ರೋಮನರ ಸಮಯದಲ್ಲಿ ಅನಂತರ ಕ್ಷಣಿಕವಾಗಿ “ಉದಯವು” ಮಿನುಗುವುದು. ಆಗ ಎದೋಮ್ಯರ ಮೂಲದಿಂದ ಬಂದ ಹೆರೋದ್ಯರು ಯೆರೂಸಲೇಮಿನಲ್ಲಿ ಅಧಿಕಾರ ನಡೆಸುವರು. ಆದರೆ ಆ “ಉದಯವು” ಶಾಶ್ವತವಾಗಿರಲಾರದು. ಕೊನೆಗೆ, ಎದೋಮ್‌ ಇತಿಹಾಸದಿಂದ ಕಣ್ಮರೆಯಾಗುತ್ತಾ, ಶಾಶ್ವತವಾಗಿ ಮೌನವೆಂಬ ಸಾಗರದಲ್ಲಿ ಮುಳುಗಿ ಇಲ್ಲದೆಹೋಗುವುದು. ದೂಮ ಎಂಬ ಹೆಸರು ಆ ದೇಶಕ್ಕೆ ಬಹಳ ಸೂಕ್ತವಾಗಿರುವುದು.

19. “ವಿಚಾರಿಸಬೇಕಾದರೆ ವಿಚಾರಿಸಿರಿ, ತಿರಿಗಿ ಬನ್ನಿರಿ” ಎಂದು ಕಾವಲುಗಾರನು ಹೇಳುವುದರ ಅರ್ಥವೇನಾಗಿರಬಹುದು?

19“ವಿಚಾರಿಸಬೇಕಾದರೆ ವಿಚಾರಿಸಿರಿ, ತಿರಿಗಿ ಬನ್ನಿರಿ” ಎಂಬ ಮಾತುಗಳೊಂದಿಗೆ ಕಾವಲುಗಾರನು ತನ್ನ ಸಂಕ್ಷಿಪ್ತ ಸಂದೇಶವನ್ನು ಮುಗಿಸುತ್ತಾನೆ. (ಯೆಶಾಯ 21:12ಬಿ) “ತಿರಿಗಿ ಬನ್ನಿರಿ” ಎಂಬ ಅಭಿವ್ಯಕ್ತಿಯು, ಎದೋಮ್‌ ಅನುಭವಿಸಲಿದ್ದ ಅನಂತ ‘ರಾತ್ರಿಗಳನ್ನು’ ಸೂಚಿಸಬಹುದು. ಈ ಅಭಿವ್ಯಕ್ತಿಯನ್ನು “ಹಿಂದಿರುಗು” ಎಂಬುದಾಗಿಯೂ ಭಾಷಾಂತರಿಸಬಹುದಾದ ಕಾರಣ, ಈ ದೇಶದ ವಿನಾಶದಿಂದ ತಪ್ಪಿ ಉಳಿಯಲು ಬಯಸುವ ಎದೋಮ್ಯರು, ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ‘ಹಿಂದಿರುಗಬೇಕು’ ಎಂಬುದನ್ನು ಪ್ರವಾದಿಯು ಸೂಚಿಸುತ್ತಿರಬಹುದು. ವಿಷಯವು ಏನೇ ಆಗಿರಲಿ, ಹೆಚ್ಚಿನ ವಿಚಾರಣೆಗಳನ್ನು ಮಾಡುವಂತೆ ಕಾವಲುಗಾರನು ಆಮಂತ್ರಣ ನೀಡುತ್ತಾನೆ.

20. ಯೆಶಾಯ 21:​11, 12ರಲ್ಲಿರುವ ದೈವೋಕ್ತಿಯು ಇಂದಿನ ಯೆಹೋವನ ಜನರಿಗೆ ಮಹತ್ವವಾದದ್ದಾಗಿದೆ ಏಕೆ?

20 ಈ ಸಂಕ್ಷಿಪ್ತ ದೈವೋಕ್ತಿಯು, ಆಧುನಿಕ ಸಮಯಗಳ ಯೆಹೋವನ ಜನರಿಗೆ ಬಹಳಷ್ಟನ್ನು ಅರ್ಥೈಸುತ್ತದೆ. * ಮಾನವವರ್ಗವು ಆತ್ಮಿಕ ಕುರುಡುತನದ ಅಂಧಕಾರದಲ್ಲಿ ತಡಕಾಡುತ್ತಾ, ದೇವರಿಂದ ವಿಮುಖಗೊಂಡಿದೆ ಎಂಬುದು ನಮಗೆ ಗೊತ್ತು. ಇದು, ಈ ವಿಷಯಗಳ ವ್ಯವಸ್ಥೆಯ ನಾಶನಕ್ಕೆ ನಡೆಸುವುದು. (ರೋಮಾಪುರ 13:12; 2 ಕೊರಿಂಥ 4:⁠4) ಈ ರಾತ್ರಿಯ ವೇಳೆಯಲ್ಲಿ, ಮಾನವವರ್ಗವು ಶಾಂತಿಸಮಾಧಾನವನ್ನು ಹೇಗಾದರೂ ತರುವುದೆಂಬ ನಿರೀಕ್ಷೆಯ ಮಿನುಗುಗಳು, ಆ ಕಾಲ್ಪನಿಕ ನಸುಕಿನ ಮಿನುಗಿನಂತಿವೆ. ಏಕೆಂದರೆ ಮತ್ತಷ್ಟೂ ಕರಾಳವಾದ ಸಮಯಗಳೇ ಅವುಗಳನ್ನು ಹಿಂಬಾಲಿಸಿ ಬರುವವು. ಆದರೆ ಯಥಾರ್ಥವಾದೊಂದು ನಸುಕು ಸಮೀಪಿಸುತ್ತಿದೆ. ಅದು ಭೂಮಿಯ ಮೇಲೆ ಕ್ರಿಸ್ತನ ಸಹಸ್ರವರ್ಷದ ಆಳಿಕೆಯೆಂಬ ನಸುಕೇ ಆಗಿದೆ. ಆದರೆ ರಾತ್ರಿಯು ಇರುವ ತನಕ, ನಾವು ಆತ್ಮಿಕವಾಗಿ ಜಾಗರೂಕರಾಗಿದ್ದು, ಈ ಭ್ರಷ್ಟ ವಿಷಯಗಳ ವ್ಯವಸ್ಥೆಯು ಬೇಗನೆ ಅಂತ್ಯವಾಗಲಿದೆ ಎಂಬ ಸಂದೇಶವನ್ನು ಧೈರ್ಯದಿಂದ ಪ್ರಕಟಿಸುತ್ತಾ ಇರಬೇಕು. ಹೀಗೆ ಮಾಡುವ ಮೂಲಕ, ನಾವು ಕಾವಲುಗಾರ ವರ್ಗವನ್ನು ಹಿಂಬಾಲಿಸುವೆವು.​—⁠1 ಥೆಸಲೊನೀಕ 5:⁠6.

ಮರುಭೂಮಿಯನ್ನು ರಾತ್ರಿಯ ಕತ್ತಲು ಆವರಿಸುತ್ತದೆ

21. (ಎ) “ಅರಬಿಯ ವಿಷಯವಾದ ದೈವೋಕ್ತಿ” ಎಂಬ ವಾಕ್ಸರಣಿಯಲ್ಲಿ ಪದಗಳ ಆಟವಿರುವುದು ಹೇಗೆ? (ಬಿ) ದೇದಾನ್ಯರ ಸಾರ್ಥವಾಹರು ಯಾರಾಗಿದ್ದಾರೆ?

21 ಯೆಶಾಯ 21ನೆಯ ಅಧ್ಯಾಯದ ಕೊನೆಯ ದೈವೋಕ್ತಿಯು “ಅರಬಿಯ” ವಿರುದ್ಧ ನುಡಿಯಲ್ಪಟ್ಟಿದೆ. ಅದು ಹೇಳುವುದು: “ಅರಬಿಯ ವಿಷಯವಾದ ದೈವೋಕ್ತಿ. ಸಾರ್ಥವಾಹರಾದ ದೇದಾನ್ಯರೇ, ಮರುಭೂಮಿಯ ಪೊದೆಗಳಲ್ಲಿ ಇಳಿದುಕೊಳ್ಳಿರಿ.” (ಯೆಶಾಯ 21:​13) ಮೂಲ ಹೀಬ್ರು ಭಾಷೆಯಲ್ಲಿ, “ಅರಬಿಯ” ಎಂದು ಭಾಷಾಂತರಿಸಲ್ಪಟ್ಟಿರುವ ಪದಕ್ಕೆ “ಮರುಭೂಮಿ” ಎಂಬ ಅಕ್ಷರಾರ್ಥವಿದೆ. ಆದರೆ ಈ ದೈವೋಕ್ತಿಯು ಸ್ಪಷ್ಟವಾಗಿ ಹಲವಾರು ಅರಬ್‌ ಕುಲಗಳ ವಿರುದ್ಧ ನುಡಿಯಲ್ಪಟ್ಟಿದೆ. ಆ ಹೀಬ್ರು ಪದವನ್ನು ಕೆಲವೊಮ್ಮೆ “ಸಾಯಂಕಾಲ” ಎಂಬುದಾಗಿಯೂ ತರ್ಜುಮೆ ಮಾಡಲಾಗುತ್ತದೆ. ಹೀಬ್ರು ಭಾಷೆಯಲ್ಲಿ “ಮರುಭೂಮಿ” ಮತ್ತು “ಸಾಯಂಕಾಲ” ಎಂಬ ಪದಗಳು ಹೆಚ್ಚುಕಡಿಮೆ ಒಂದೇ ಸಮನಾಗಿವೆ. ಕೆಲವರು ಇದನ್ನು ಪದಗಳ ಆಟವೆಂದು ಹೇಳುತ್ತಾರೆ, ಏಕೆಂದರೆ ಸಂಕಟದ ಸಮಯವನ್ನು ಸಾಮಾನ್ಯವಾಗಿ ಸೂಚಿಸುವ ಸಂಜೆಯ ಕತ್ತಲು, ಈ ಕ್ಷೇತ್ರವನ್ನು ಬಾಧಿಸಲಿದೆ. ಈ ದೈವೋಕ್ತಿಯು ರಾತ್ರಿಯ ಒಂದು ದೃಶ್ಯವನ್ನು ವಿವರಿಸುತ್ತದೆ, ಅದರಲ್ಲಿ ಪ್ರಧಾನವಾದೊಂದು ಅರಬ್‌ ಕುಲವಾದ ದೇದಾನ್ಯರ ಸಾರ್ಥವಾಹರು ಇಲ್ಲವೆ ವ್ಯಾಪಾರಿತಂಡವು ಸೇರಿದೆ. ಈ ಸಾರ್ಥವಾಹರು ಮರುಭೂಮಿಯ ಒಂದು ತಂಪುಜಾಗದಿಂದ ಮತ್ತೊಂದಕ್ಕೆ ಹೋಗುತ್ತಾ, ಮಸಾಲೆ, ಮುತ್ತುಗಳು ಮತ್ತು ಇತರ ಅಮೂಲ್ಯ ವಸ್ತುಗಳ ವ್ಯಾಪಾರ ನಡೆಸುತ್ತಾರೆ. ಆದರೆ ಈಗ, ಅವರು ತಮ್ಮ ಚಿರಪರಿಚಿತ ಮಾರ್ಗವನ್ನು ಬಿಟ್ಟು, ಪೊದೆಗಳಲ್ಲಿ ಅಡಗಿಕೊಂಡು ರಾತ್ರಿಯನ್ನು ಕಳೆಯಬೇಕಾಗಿದೆ. ಏಕೆ?

22, 23. (ಎ) ಅರಬ್‌ ಕುಲಗಳನ್ನು ಯಾವ ಹೊರೆಯು ತತ್ತರಗೊಳಿಸಲಿದೆ, ಮತ್ತು ಅವರ ಮೇಲೆ ಯಾವ ಪರಿಣಾಮವಾಗುವುದು? (ಬಿ) ಈ ಕೇಡು ಎಷ್ಟು ಬೇಗನೆ ಸಂಭವಿಸುವುದು, ಮತ್ತು ಯಾರು ಇದನ್ನು ಬರಮಾಡುವರು?

22 ಯೆಶಾಯನು ವಿವರಿಸುವುದು: “ಬಾಯಾರಿದವರಿಗೆ ನೀರನ್ನು ತಂದುಕೊಡಿರಿ, ತೇಮಾದೇಶದವರೇ, ಓಡಿಹೋದವರನ್ನು ಅನ್ನದೊಡನೆ ಎದುರುಗೊಳ್ಳಿರಿ. ಕತ್ತಿ, ಹಿರಿದ ಕತ್ತಿ, ಬಾಗಿದ ಬಿಲ್ಲು, ಯುದ್ಧದ ಬಾಧೆ, ಇವುಗಳ ಕಡೆಯಿಂದ ಓಡಿಹೋಗುತ್ತಿದ್ದಾರಷ್ಟೆ.” (ಯೆಶಾಯ 21:14, 15) ಹೌದು, ಈ ಅರಬ್‌ ಕುಲಗಳು ಯುದ್ಧದ ಹೊರೆಯಿಂದ ತತ್ತರಿಸಿಹೋಗುವವು. ಆ ಕ್ಷೇತ್ರದಲ್ಲೇ ಒಳ್ಳೆಯ ನೀರಿನ ವ್ಯವಸ್ಥೆಯನ್ನು ಹೊಂದಿರುವ ತೇಮಾದೇಶವು, ಯುದ್ಧಪೀಡಿತ ದುರದೃಷ್ಟರಿಗೆ ಅನ್ನಪಾನೀಯಗಳನ್ನು ತಂದುಕೊಡಬೇಕು. ಈ ಸಂಕಟವು ಯಾವಾಗ ಆರಂಭಿಸುವುದು?

23 ಯೆಶಾಯನು ಮುಂದುವರಿಸಿ ಹೇಳುವುದು: “ಕರ್ತನು ನನಗೆ ಹೇಳಿರುವದೇನಂದರೆ​—⁠ಆಳಿನ ವರುಷವಾಯಿದೆಗೆ ಸರಿಯಾದ ಒಂದು ವರುಷಕ್ಕೇ ಕೇದಾರಿನ ಸಕಲ ವೈಭವವು ಇಲ್ಲವಾಗುವದು; ಬಿಲ್ಲುಗಾರರಲ್ಲಿ ಉಳಿದವರೂ ಕೇದಾರಿನವರ ಶೂರರೂ ವಿರಳರಾಗುವರು; ಇಸ್ರಾಯೇಲ್ಯರ ದೇವರಾದ ಯೆಹೋವನು ಇದನ್ನು ನುಡಿದಿದ್ದಾನೆ ಎಂಬದೇ.” (ಯೆಶಾಯ 21:16, 17) ಕೇದಾರ್‌ ಎಂಬ ಕುಲವು ಎಷ್ಟು ಪ್ರತಿಷ್ಠಿತವಾದದ್ದೆಂದರೆ, ಕೆಲವೊಮ್ಮೆ ಇಡೀ ಅರಬ್‌ ದೇಶವನ್ನೇ ಅದು ಪ್ರತಿನಿಧಿಸುತ್ತದೆ. ಈ ಕುಲದ ಬಿಲ್ಲುಗಾರರ ಮತ್ತು ಶೂರರ ಸಂಖ್ಯೆಯನ್ನು ಕಡಿಮೆಮಾಡಲು ಯೆಹೋವನು ನಿರ್ಧರಿಸಿದ್ದಾನೆ. ಇದು ಯಾವಾಗ ಸಂಭವಿಸುವುದು? ಹೇಗೆ ಒಬ್ಬ ಕೂಲಿಯಾಳು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಕೆಲಸಮಾಡುವುದಿಲ್ಲವೊ, ಹಾಗೆಯೇ ಇದು “ಒಂದು ವರುಷಕ್ಕೆ” ಸಂಭವಿಸುವುದು, ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾರದು. ಇದೆಲ್ಲ ಹೇಗೆ ನೆರವೇರಿತೆಂಬುದು ಅಷ್ಟೇನೂ ನಿಖರವಾಗಿಲ್ಲ. ಅರಬ್‌ ದೇಶವನ್ನು ತಾವೇ ಜಯಿಸಿರುವುದಾಗಿ IIನೆಯ ಸರ್ಗೋನ್‌ ಮತ್ತು ಸನ್ಹೇರೀಬನೆಂಬ ಇಬ್ಬರು ಅಶ್ಶೂರ ಅರಸರು ಹೇಳಿಕೊಳ್ಳುತ್ತಾರೆ. ಮುಂತಿಳಿಸಲ್ಪಟ್ಟಂತೆ, ಇವರಲ್ಲಿ ಒಬ್ಬರು ಈ ಗರ್ವಿಷ್ಠ ಅರಬ್‌ ಕುಲಗಳನ್ನು ನಾಶಮಾಡಿದ್ದಿರಬಹುದು.

24. ಅರಬಿಯದ ವಿರುದ್ಧ ಯೆಶಾಯನು ನುಡಿದ ಪ್ರವಾದನೆಯು ಖಂಡಿತವಾಗಿಯೂ ನೆರವೇರಿತ್ತೆಂದು ನಾವು ಹೇಗೆ ನಿಶ್ಚಿತರಾಗಿರಸಾಧ್ಯವಿದೆ?

24 ಈ ಪ್ರವಾದನೆಯು ಸಹ ನಿಖರವಾಗಿ ನೆರವೇರಿತೆಂಬುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. “ಇಸ್ರಾಯೇಲ್ಯರ ದೇವರಾದ ಯೆಹೋವನು ಇದನ್ನು ನುಡಿದಿದ್ದಾನೆ” ಎಂಬ ಆ ದೈವೋಕ್ತಿಯ ಕೊನೆಯ ಮಾತುಗಳು, ಈ ವಿಷಯವನ್ನು ಮತ್ತಷ್ಟು ಬಲಪಡಿಸುತ್ತವೆ. ಯೆಶಾಯನ ದಿನದ ಜನರಿಗೆ, ಬಾಬೆಲು ಅಶ್ಶೂರಕ್ಕಿಂತ ಉನ್ನತ ಸ್ಥಾನಕ್ಕೆ ಏರಿ, ಒಂದೇ ದಿನದಲ್ಲಿ ಕೆಳಕ್ಕುರುಳುವುದೆಂಬ ವಿಷಯವು ಊಹೆಗೂ ನಿಲುಕದಂತಹ ಸಂಗತಿಯಾಗಿರಬಹುದು. ಶಕ್ತಿಶಾಲಿ ಎದೋಮ್‌ ಸ್ಮಶಾನ ಮೌನದೊಳಗೆ ಹೂತುಹೋಗುವುದೆಂದು ಇಲ್ಲವೆ ಶ್ರೀಮಂತ ಅರಬ್‌ ಕುಲಗಳ ಮೇಲೆ ಕಷ್ಟತೊಂದರೆಗಳ ಮತ್ತು ಕೊರತೆಯ ರಾತ್ರಿ ಬರುವುದೆಂದು ನೆನಸುವುದು ಕೂಡ ಅಷ್ಟೇ ಅಸಾಧ್ಯವಾದದ್ದಾಗಿ ತೋರಬಹುದು. ಆದರೆ ಅದು ಸಂಭವಿಸುವುದೆಂದು ಯೆಹೋವನು ಹೇಳುತ್ತಾನೆ, ಮತ್ತು ಅದು ಸಂಭವಿಸುತ್ತದೆ. ಹಾಗೆಯೇ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು ನಿರ್ಮೂಲವಾಗುವುದೆಂದು ಇಂದು ಯೆಹೋವನು ನಮಗೆ ಹೇಳುತ್ತಾನೆ. ಇದು ಕೇವಲ ಒಂದು ಸಾಧ್ಯತೆಯಲ್ಲ, ನಿಜವಾಗಿಯೂ ನಡೆಯಲಿರುವ ಒಂದು ಘಟನೆಯಾಗಿದೆ. ಏಕೆಂದರೆ, ಸ್ವತಃ ಯೆಹೋವನೇ ಅದನ್ನು ನುಡಿದಿದ್ದಾನೆ!

25. ನಾವು ಕಾವಲುಗಾರನ ಮಾದರಿಯನ್ನು ಹೇಗೆ ಅನುಕರಿಸಬಹುದು?

25 ಹಾಗಾದರೆ, ನಾವು ಆ ಕಾವಲುಗಾರನಂತೆ ಇರೋಣ. ನಾವು ಒಂದು ಎತ್ತರವಾದ ಬುರುಜಿನ ಮೇಲೆ ನಿಂತು, ಬರಲಿರುವ ಅಪಾಯದ ಸೂಚನೆಗಾಗಿ ದಿಗಂತವನ್ನು ಸೂಕ್ಷ್ಮವಾಗಿ ಪರಿಶೀಲಿಸುವವರಂತೆ, ಎಚ್ಚರದಿಂದಿರೋಣ. ಇಂದು ಭೂಮಿಯ ಮೇಲೆ ಉಳಿದಿರುವ ಅಭಿಷಿಕ್ತ ಕ್ರೈಸ್ತರೊಂದಿಗೆ, ಅಂದರೆ ನಂಬಿಗಸ್ತ ಕಾವಲುಗಾರ ವರ್ಗದೊಂದಿಗೆ ನಾವು ಆಪ್ತ ಸಂಬಂಧವನ್ನು ಇಟ್ಟುಕೊಳ್ಳೋಣ. ನಾವು ಅವರೊಂದಿಗೆ ಸೇರಿಕೊಂಡು, ನಮ್ಮ ಕಣ್ಣಿಗೆ ಕಾಣುವ ವಿಷಯಗಳನ್ನು ಧೈರ್ಯದಿಂದ ಹೇಳೋಣ. ಅದರಲ್ಲಿ, ಕ್ರಿಸ್ತನು ಸ್ವರ್ಗದಲ್ಲಿ ಆಳುತ್ತಿದ್ದಾನೆಂಬ ಪುರಾವೆಯ ಜೊತೆಗೆ, ದೇವರಿಂದ ದೂರ ಸರಿದ ಕಾರಣ ಮಾನವವರ್ಗವು ಅನುಭವಿಸುತ್ತಿರುವ ದೀರ್ಘವಾದ ಕತ್ತಲೆಯ ರಾತ್ರಿಯನ್ನು ಅವನು ಬೇಗನೆ ಕೊನೆಗಾಣಿಸಿ, ನಿಜವಾದ ನಸುಕನ್ನು, ಅಂದರೆ ಭೂಪರದೈಸಿನಲ್ಲಿ ಸಹಸ್ರ ವರ್ಷದ ಆಳ್ವಿಕೆಯನ್ನು ತರುವನೆಂಬ ವಿಷಯಗಳು ಸೇರಿರುತ್ತವೆ.

[ಪಾದಟಿಪ್ಪಣಿಗಳು]

^ ಪ್ಯಾರ. 6 ಪಾರಸಿಯ ರಾಜ ಕೋರೆಷನು, ಕೆಲವೊಮ್ಮೆ “ಆನ್‌ಷನ್‌ನ ಅರಸ”ನೆಂದು ಕರೆಯಲ್ಪಟ್ಟನು. ಆನ್‌ಷನ್‌ ಏಲಾಮಿನ ಒಂದು ಪ್ರಾಂತ ಇಲ್ಲವೆ ನಗರವಾಗಿತ್ತು. ಯೆಶಾಯನ ದಿನದ, ಅಂದರೆ ಸಾ.ಶ.ಪೂ. ಎಂಟನೆಯ ಶತಮಾನದ ಇಸ್ರಾಯೇಲ್ಯರಿಗೆ, ಪಾರಸಿಯ ಎಂಬ ಹೆಸರು ಅಷ್ಟೇನೂ ಚಿರಪರಿಚಿತವಾಗಿದ್ದಿರಲಿಕ್ಕಿಲ್ಲ. ಆದರೆ ಏಲಾಮ್‌ ಎಂಬ ಹೆಸರು ಅವರಿಗೆ ಗೊತ್ತಿದ್ದಿರಬಹುದು. ಆದಕಾರಣ, ಪಾರಸಿಯ ಎಂಬ ಹೆಸರಿನ ಬದಲು ಯೆಶಾಯನು ಏಲಾಮನ್ನು ಏಕೆ ಬಳಸುತ್ತಿರಬಹುದೆಂಬುದು ಸ್ಪಷ್ಟವಾಗಿದೆ.

^ ಪ್ಯಾರ. 9 “ಗುರಾಣಿಗೆ ಎಣ್ಣೆಯನ್ನು ಬಳಿ” ಎಂಬ ಪದಗಳು, ಪುರಾತನ ಮಿಲಿಟರಿ ರೂಢಿಯನ್ನು ಸೂಚಿಸುತ್ತಿರಬಹುದೆಂದು ಅನೇಕ ಬೈಬಲ್‌ ವ್ಯಾಖ್ಯಾನಗಾರರು ನೆನಸುತ್ತಾರೆ. ಯುದ್ಧದ ಮೊದಲು ಸೈನಿಕರು ಚರ್ಮದಿಂದ ಮಾಡಿರುವ ಗುರಾಣಿಗಳಿಗೆ ಎಣ್ಣೆಯನ್ನು ಸವರುತ್ತಿದ್ದರು. ಹೀಗೆ ಗುರಾಣಿಗೆ ಬೀಳುವ ಹೊಡೆತಗಳು ಜಾರಿಬಿಡುತ್ತಿದ್ದವು. ಇದು ಒಂದು ವಿವರಣೆಯಾಗಿದೆ. ಆದರೆ ಅದೇ ಸಮಯದಲ್ಲಿ, ಬಾಬೆಲು ಬಿದ್ದಾಗ, ಅದರ ಸೈನಿಕರು ತಮ್ಮ ಗುರಾಣಿಗಳಿಗೆ ಎಣ್ಣೆ ಸವರಿ ಯುದ್ಧಕ್ಕೆ ಸಿದ್ಧರಾಗುವುದಂತೂ ಬಿಡಿ, ವೈರಿಗಳನ್ನು ಪ್ರತಿಭಟಿಸಲೂ ಅವರಿಗೆ ಸಮಯವಿರಲಿಲ್ಲ ಎಂಬುದನ್ನು ಗಮನಿಸಸಾಧ್ಯವಿದೆ!

^ ಪ್ಯಾರ. 13 ಬಾಬೆಲಿನ ಪತನದ ಬಗ್ಗೆ ಯೆಶಾಯನ ಪ್ರವಾದನೆಯು ಎಷ್ಟು ನಿಖರವಾಗಿದೆಯೆಂದರೆ, ಆ ಘಟನೆಯು ಸಂಭವಿಸಿದ ನಂತರವೇ ಅದು ಬರೆಯಲ್ಪಟ್ಟಿರಬೇಕೆಂದು ಕೆಲವು ಬೈಬಲ್‌ ವಿಮರ್ಶಕರು ನೆನಸುತ್ತಾರೆ. ಆದರೆ ಹೀಬ್ರು ಪಂಡಿತನಾದ ಎಫ್‌. ಡೆಲಿಟ್ಷ್‌ ಹೇಳುವುದೇನೆಂದರೆ, ಘಟನೆಗಳನ್ನು ನೂರಾರು ವರ್ಷಗಳ ಮುಂಚಿತವಾಗಿಯೇ ತಿಳಿಸುವಂತೆ ಒಬ್ಬ ಪ್ರವಾದಿಯು ಪ್ರೇರಿಸಲ್ಪಡಬಹುದು ಎಂಬ ನಿಜತ್ವವನ್ನು ನಾವು ಅಂಗೀಕರಿಸಿದರೆ, ಇಂತಹ ಊಹೆಗಳನ್ನು ಮಾಡುವ ಅಗತ್ಯವೇ ಇರುವುದಿಲ್ಲ.

^ ಪ್ಯಾರ. 14 ಪ್ರಕಟನೆ​—⁠ಅದರ ಪರಮಾವಧಿಯು ಹತ್ತಿರ! ಪುಸ್ತಕದ ಪುಟಗಳು 164-9ನ್ನು ನೋಡಿರಿ.

^ ಪ್ಯಾರ. 20 ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪ್ರಕಾಶನದ ಮೊದಲ 59 ವರ್ಷಗಳ ವರೆಗೆ, ಅದರ ಮುಖಪುಟದ ಮೇಲೆ ಯೆಶಾಯ 21:11 ಕಾಣಿಸಿಕೊಂಡಿತು. ಇದೇ ವಚನದ ಆಧಾರದ ಮೇಲೆ, ವಾಚ್‌ಟವರ್‌ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್‌ ಟಿ. ರಸಲ್‌ ಅವರು ತಮ್ಮ ಕೊನೆಯ ಪ್ರಸಂಗವನ್ನು ಬರೆದರು. (ಪಕ್ಕದ ಪುಟದಲ್ಲಿರುವ ಚಿತ್ರವನ್ನು ನೋಡಿ.)

[ಅಧ್ಯಯನ ಪ್ರಶ್ನೆಗಳು]

[ಪುಟ 219ರಲ್ಲಿರುವ ಚಿತ್ರ]

‘ತಿನ್ನೋಣ ಮತ್ತು ಕುಡಿಯೋಣವಾಗಲಿ!’

[ಪುಟ 220ರಲ್ಲಿರುವ ಚಿತ್ರ]

ಕಾವಲುಗಾರನು ‘ಸಿಂಹಧ್ವನಿಯಿಂದ ಕೂಗಿದನು’

[ಪುಟ 222ರಲ್ಲಿರುವ ಚಿತ್ರ]

‘ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ಮತ್ತು ರಾತ್ರಿಯೆಲ್ಲಾ ಕಾವಲಿನ ಕೆಲಸವಿದೆ’