ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಗದರ್ಶನ ಮತ್ತು ರಕ್ಷಣೆಗಾಗಿ ಯೆಹೋವನಲ್ಲಿ ಭರವಸೆಯಿಡಿರಿ

ಮಾರ್ಗದರ್ಶನ ಮತ್ತು ರಕ್ಷಣೆಗಾಗಿ ಯೆಹೋವನಲ್ಲಿ ಭರವಸೆಯಿಡಿರಿ

ಅಧ್ಯಾಯ ಹದಿನಾರು

ಮಾರ್ಗದರ್ಶನ ಮತ್ತು ರಕ್ಷಣೆಗಾಗಿ ಯೆಹೋವನಲ್ಲಿ ಭರವಸೆಯಿಡಿರಿ

ಯೆಶಾಯ 20:​1-6

1, 2. ಸಾ.ಶ.ಪೂ. ಎಂಟನೆಯ ಶತಮಾನದ ದೇವಜನರು ಯಾವ ಅಪಾಯವನ್ನು ಎದುರಿಸುತ್ತಾರೆ, ಮತ್ತು ರಕ್ಷಣೆಗಾಗಿ ಅವರಲ್ಲಿ ಹೆಚ್ಚಿನವರು ಯಾರ ಕಡೆಗೆ ತಿರುಗುತ್ತಾರೆ?

ಈ ಪುಸ್ತಕದ ಹಿಂದಿನ ಅಧ್ಯಾಯಗಳಲ್ಲಿ ನೋಡಿರುವಂತೆ, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ದೇವಜನರು ಒಂದು ಘೋರವಾದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ರಕ್ತಪಿಪಾಸೆಯಿಂದ ಕೂಡಿದ ಅಶ್ಶೂರ್ಯರು, ಒಂದರ ನಂತರ ಮತ್ತೊಂದು ದೇಶವನ್ನು ಧ್ವಂಸಮಾಡುತ್ತಾ ಬರುತ್ತಿದ್ದಾರೆ ಮತ್ತು ಯೆಹೂದದ ದಕ್ಷಿಣ ರಾಜ್ಯದ ಮೇಲೆ ಮುತ್ತಿಗೆ ಹಾಕಲು ಅವರಿಗೆ ಬಹಳ ಸಮಯ ಹಿಡಿಯಲಾರದು. ಯೆಹೂದದ ನಿವಾಸಿಗಳು ರಕ್ಷಣೆಗಾಗಿ ಯಾರ ಕಡೆಗೆ ತಿರುಗುವರು? ಅವರು ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿರುವುದರಿಂದ, ಸಹಾಯಕ್ಕಾಗಿ ಅವರು ಆತನ ಮೇಲೆಯೇ ಆತುಕೊಳ್ಳಬೇಕು. (ವಿಮೋಚನಕಾಂಡ 19:​5, 6) ರಾಜ ದಾವೀದನು ಇದನ್ನೇ ಮಾಡಿದನು. ಅವನು ಒಪ್ಪಿಕೊಂಡದ್ದು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ.” (2 ಸಮುವೇಲ 22:2) ಆದರೆ, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಅನೇಕರು, ತಮ್ಮ ಆಶ್ರಯದುರ್ಗವಾಗಿದ್ದ ಯೆಹೋವನಲ್ಲಿ ಭರವಸೆಯಿಡುವುದಿಲ್ಲ. ಅವರು ಐಗುಪ್ತ ಹಾಗೂ ಕೂಷಿನ ಕಡೆಗೆ ಸಹಾಯಕ್ಕಾಗಿ ತಿರುಗುತ್ತಾರೆ. ಬೆದರಿಕೆಯನ್ನೊಡ್ಡಿರುವ ಅಶ್ಶೂರ್ಯದ ಆಕ್ರಮಣವನ್ನು ಈ ಎರಡು ರಾಷ್ಟ್ರಗಳು ತಡೆಯಬಲ್ಲವೆಂದು ಅವರು ನೆನಸುತ್ತಾರೆ. ಆದರೆ ಅವರು ಹಾಕಿದ ಈ ಲೆಕ್ಕಾಚಾರ ತಪ್ಪಾಗಿಹೋಗುತ್ತದೆ.

2 ಐಗುಪ್ತ ಇಲ್ಲವೆ ಕೂಷಿನ ಆಶ್ರಯವನ್ನು ಕೋರುವುದು ವಿಪತ್ಕಾರಕವಾಗಿರುವುದೆಂದು, ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಎಚ್ಚರಿಸುತ್ತಾನೆ. ಪ್ರವಾದಿಯ ಪ್ರೇರಿತ ಮಾತುಗಳಿಂದ ಅವನ ಸಮಕಾಲೀನರು ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ, ಮತ್ತು ಯೆಹೋವನಲ್ಲಿ ಭರವಸೆಯಿಡುವುದರ ಮಹತ್ವದ ಕುರಿತು ನಾವು ಒಂದು ಅಮೂಲ್ಯವಾದ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ.

ರಕ್ತಮಯ ದೇಶ

3. ಮಿಲಿಟರಿ ಸಾಮರ್ಥ್ಯಕ್ಕೆ ಅಶ್ಶೂರವು ನೀಡಿದ ಮಹತ್ವವನ್ನು ವಿವರಿಸಿರಿ.

3 ಅಶ್ಶೂರ್ಯರು ತಮ್ಮ ಮಿಲಿಟರಿ ಸಾಮರ್ಥ್ಯಕ್ಕಾಗಿ ತುಂಬ ಪ್ರಸಿದ್ಧರಾಗಿದ್ದರು. ಪುರಾತನ ನಗರಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಅವರು ಬಲವನ್ನು ಆರಾಧಿಸಿದರು, ಮತ್ತು ಸಿಂಹ ಹಾಗೂ ಹೋರಿಗಳ ದೊಡ್ಡ ದೊಡ್ಡ ಕಲ್ಲಿನ ಮೂರ್ತಿಗಳ ಮುಂದೆ ಮಾತ್ರ ಪ್ರಾರ್ಥಿಸುತ್ತಿದ್ದರು. ಈ ಪ್ರಾಣಿಗಳ ಅತಿದೊಡ್ಡ ಕಾಲುಗಳು, ಹದ್ದಿನಂತಹ ರೆಕ್ಕೆಗಳು ಮತ್ತು ಮಾನವ ತಲೆಗಳು, ಬಲ, ಧೈರ್ಯ ಹಾಗೂ ವಿಜಯದ ಸಂಕೇತಗಳಾಗಿದ್ದವು. ಯುದ್ಧ ಮಾಡುವುದೇ ಆ ರಾಷ್ಟ್ರದ ಮುಖ್ಯ ಕೆಲಸವಾಗಿತ್ತು, ಮತ್ತು ಅಲ್ಲಿನ ಯಾಜಕರು ಯುದ್ಧವನ್ನು ಕೆರಳಿಸುವುದರಲ್ಲಿ ಸದಾ ಮಗ್ನರಾಗಿರುತ್ತಿದ್ದರು.” ಆದುದರಿಂದಲೇ, ಬೈಬಲ್‌ ಪ್ರವಾದಿಯಾದ ನಹೂಮನು ಅಶ್ಶೂರದ ರಾಜಧಾನಿ ನಿನೆವೆಯನ್ನು “ರಕ್ತಮಯಪುರಿ” ಎಂದು ಸರಿಯಾಗಿಯೇ ಸಂಬೋಧಿಸಿದನು.​—⁠ನಹೂಮ 3:⁠1.

4. ಇತರ ರಾಷ್ಟ್ರಗಳವರ ಹೃದಯದಲ್ಲಿ ಅಶ್ಶೂರ್ಯರು ಭಯ ಹುಟ್ಟಿಸಿದ್ದು ಹೇಗೆ?

4 ಅಶ್ಶೂರ್ಯರ ಯುದ್ಧ ತಂತ್ರಗಳು ಕ್ರೂರತನದಲ್ಲಿ ಮುಳುಗಿಹೋಗಿದ್ದವು. ಅಶ್ಶೂರದ ಯೋಧರು ತಮ್ಮ ಸೆರೆವಾಸಿಗಳ ಮೂಗು ಇಲ್ಲವೆ ತುಟಿಗಳಿಗೆ ಕೊಕ್ಕೆ ಸಿಕ್ಕಿಸಿ ಅವರನ್ನು ಎಳೆದುಕೊಂಡು ಹೋಗುವುದನ್ನು ಆ ಕಾಲದ ಕೆತ್ತನೆಯ ಚಿತ್ರಣಗಳು ತೋರಿಸುತ್ತವೆ. ಅವರು ಈಟಿಗಳಿಂದ ಕೆಲವು ಕೈದಿಗಳ ಕಣ್ಣುಗಳನ್ನು ಚುಚ್ಚಿ, ಕುರುಡಾಗಿಸಿದರು. ಒಂದು ಅಶ್ಶೂರದ ಸೇನೆ ಜಯಗಳಿಸಿದ ಬಳಿಕ, ತನ್ನ ಕೈದಿಗಳ ದೇಹವನ್ನು ತುಂಡುತುಂಡು ಮಾಡಿ, ತಲೆಗಳ ಒಂದು ಗುಡ್ಡೆಯನ್ನು ಮತ್ತು ಕೈಕಾಲುಗಳ ಮತ್ತೊಂದು ಗುಡ್ಡೆಯನ್ನು ಮಾಡಿ ನಗರದ ಹೊರವಲಯದಲ್ಲಿ ಇಟ್ಟಿತ್ತೆಂದು ಒಂದು ಸ್ಮಾರಕ ಲೇಖನವು ತಿಳಿಸುತ್ತದೆ. ಸೋತವರ ಮಕ್ಕಳು ಬೆಂಕಿಯಲ್ಲಿ ಹಾಕಿ ಸುಡಲ್ಪಟ್ಟರು. ಈ ರೀತಿಯ ಕ್ರೂರತನದಿಂದ ಜನರು ಭಯಭೀತರಾಗಿ, ಅವರ ವಿರುದ್ಧ ಪ್ರತಿಭಟಿಸುವ ಸಾಹಸವನ್ನೇ ಮಾಡಲಿಲ್ಲ. ಇದರಿಂದಾಗಿ ಅಶ್ಶೂರ್ಯರಿಗೆ ಯುದ್ಧದಲ್ಲಿ ಜಯಗಳಿಸಲು ಸುಲಭವಾಗಿರಲೇಬೇಕು.

ಅಷ್ಡೋದಿನ ವಿರುದ್ಧ ಯುದ್ಧ

5. ಯೆಶಾಯನ ದಿನದಲ್ಲಿ ಯಾರು ಅಶ್ಶೂರ್ಯದ ಶಕ್ತಿಶಾಲಿ ರಾಜನಾಗಿದ್ದನು, ಮತ್ತು ಅವನ ಕುರಿತಾದ ಬೈಬಲ್‌ ವೃತ್ತಾಂತವು ಹೇಗೆ ಸರಿಯೆಂದು ಸಮರ್ಥಿಸಲ್ಪಟ್ಟಿತು?

5 ಯೆಶಾಯನ ದಿನದಲ್ಲಿ, ರಾಜ ಸರ್ಗೋನನ ನೇತೃತ್ವದಲ್ಲಿ ಅಶ್ಶೂರ್ಯ ಸಾಮ್ರಾಜ್ಯವು ಅಧಿಕಾರದ ತುತ್ತತುದಿಯನ್ನು ಮುಟ್ಟಿತು. * ಅನೇಕ ವರ್ಷಗಳ ವರೆಗೆ, ವಿಮರ್ಶಕರು ಈ ರಾಜನ ಅಸ್ತಿತ್ವದ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ಏಕೆಂದರೆ ಐಹಿಕ ಮೂಲಗಳು ಇವನ ಉಲ್ಲೇಖವನ್ನು ಮಾಡುವುದೇ ಇಲ್ಲ. ಆದರೆ ಸಕಾಲದಲ್ಲಿ, ಪ್ರಾಕ್ತನಶಾಸ್ತ್ರಜ್ಞರು ಸರ್ಗೋನನ ಅರಮನೆಯ ಅವಶೇಷಗಳನ್ನು ಕಂಡುಹಿಡಿದರು, ಮತ್ತು ಹೀಗೆ ಬೈಬಲಿನ ವೃತ್ತಾಂತವು ಸರಿಯೆಂದು ಸಮರ್ಥಿಸಲ್ಪಟ್ಟಿತು.

6, 7. (ಎ) ಯಾವ ಕಾರಣಗಳಿಗಾಗಿ ಸರ್ಗೋನನು ಅಷ್ಡೋದಿನ ಮೇಲೆ ಮುತ್ತಿಗೆ ಹಾಕುವ ಆಜ್ಞೆ ವಿಧಿಸುತ್ತಾನೆ? (ಬಿ) ಅಷ್ಡೋದಿನ ಪತನವು ಫಿಲಿಷ್ಟಿಯರ ನೆರೆಯವರ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತದೆ?

6 ಸರ್ಗೋನನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದನ್ನು ಯೆಶಾಯನು ಸಂಕ್ಷಿಪ್ತವಾಗಿ ವಿವರಿಸುತ್ತಾನೆ: “ಅಶ್ಶೂರದ ರಾಜನಾದ ಸರ್ಗೋನನು ಕಳುಹಿಸಿದ ದಳವಾಯಿಯು ಅಷ್ಡೋದಿಗೆ ಬಂದು ಅದನ್ನು ಮುತ್ತಿಹಿಡಿದ”ನು. (ಯೆಶಾಯ 20:1) ಫಿಲಿಷ್ಟಿಯರ ನಗರವಾದ ಅಷ್ಡೋದಿನ ಮೇಲೆ ಮುತ್ತಿಗೆ ಹಾಕುವಂತೆ ಸರ್ಗೋನನು ಆಜ್ಞೆ ವಿಧಿಸುವುದೇಕೆ? ಒಂದು ವಿಷಯವೇನೆಂದರೆ, ಫಿಲಿಷ್ಟಿಯರಿಗೂ ಐಗುಪ್ತ್ಯರಿಗೂ ಸ್ನೇಹಸಂಬಂಧವಿದೆ ಮತ್ತು ಅಷ್ಡೋದಿನಲ್ಲಿ ದಾಗೋನನ ದೇವಾಲಯವಿದೆ. ಈ ನಗರವು, ಐಗುಪ್ತದಿಂದ ಪಾಲಸ್ತೀನಿನ ವರೆಗಿನ ಕರಾವಳಿ ಪ್ರದೇಶದ ದಾರಿಯಲ್ಲಿದೆ. ಹೀಗೆ, ಈ ನಗರವು ಒಂದು ಮುಖ್ಯವಾದ ಸ್ಥಳದಲ್ಲಿದೆ. ಆದುದರಿಂದ, ಮೊದಲು ಅಷ್ಡೋದನ್ನು ಸೆರೆಹಿಡಿದರೆ, ಮುಂದೆ ಐಗುಪ್ತವನ್ನು ಗೆಲ್ಲುವುದು ಅಷ್ಟೇನೂ ಕಷ್ಟಕರವಾಗಿರಲಾರದು. ಅದರೊಂದಿಗೆ, ಅಷ್ಡೋದಿನ ರಾಜನಾದ ಅಸೂರಿ ಅಶ್ಶೂರ್ಯದ ವಿರುದ್ಧ ಸಂಚುಹೂಡುತ್ತಿದ್ದನೆಂದು ಅಶ್ಶೂರದ ದಾಖಲೆಗಳು ವರದಿಸುತ್ತವೆ. ಹೀಗಿರುವುದರಿಂದ, ಸರ್ಗೋನನು ಈ ದಂಗೆಕೋರ ರಾಜನನ್ನು ಅಧಿಕಾರದಿಂದ ತೆಗೆದು, ಅವನ ತಮ್ಮನಾದ ಅಹಿಮಿತಿಯನ್ನು ಸಿಂಹಾಸನದ ಮೇಲೆ ಕೂರಿಸುತ್ತಾನೆ. ಆಗಲೂ ಅಲ್ಲಿನ ಸ್ಥಿತಿಗತಿಗಳು ಸರಿಹೋಗುವುದಿಲ್ಲ. ಇನ್ನೊಂದು ದಂಗೆಯೇಳುತ್ತದೆ. ಆಗ ಸರ್ಗೋನನು ಕಠಿನಕ್ರಮ ಕೈಕೊಳ್ಳುತ್ತಾನೆ. ಅವನು ಅಷ್ಡೋದಿನ ಮೇಲೆ ಮುತ್ತಿಗೆ ಹಾಕಿ ಅದನ್ನು ಸೋಲಿಸಿಬಿಡುತ್ತಾನೆ. ಬಹುಶಃ ಯೆಶಾಯ 20:1 ಈ ಘಟನೆಯನ್ನೇ ಸೂಚಿಸುತ್ತಿದೆ.

7 ಅಷ್ಡೋದಿನ ಪತನವು ಅದರ ನೆರೆರಾಜ್ಯಗಳಿಗೆ, ವಿಶೇಷವಾಗಿ ಯೆಹೂದಕ್ಕೆ ಒಂದು ಬೆದರಿಕೆಯನ್ನು ಒಡ್ಡುತ್ತದೆ. ತನ್ನ ಜನರು ಐಗುಪ್ತ ಇಲ್ಲವೆ ದಕ್ಷಿಣದಲ್ಲಿರುವ ಕೂಷ್‌ನಂತಹ ‘ಮಾಂಸದ ತೋಳಿನ’ ಕಡೆಗೆ ಸಹಾಯಕ್ಕಾಗಿ ತಿರುಗುವರೆಂದು ಯೆಹೋವನು ಬಲ್ಲನು. ಆದುದರಿಂದ, ಯೆಶಾಯನು ನಟನೆಯ ರೂಪದಲ್ಲಿ ಒಂದು ಎಚ್ಚರಿಕೆಯನ್ನು ತನ್ನ ಜನರಿಗೆ ನೀಡುವಂತೆ ಯೆಹೋವನು ಆದೇಶಿಸುತ್ತಾನೆ.​—⁠2 ಪೂರ್ವಕಾಲವೃತ್ತಾಂತ 32:​7, 8.

“ಬೆತ್ತಲೆಯಾಗಿ ಕೆರವಿಲ್ಲದೆ”

8. ಯಾವ ಪ್ರೇರಿತ ಪ್ರವಾದನೆಯನ್ನು ಯೆಶಾಯನು ನಟಿಸಿ ತೋರಿಸುತ್ತಾನೆ?

8 ಯೆಹೋವನು ಯೆಶಾಯನಿಗೆ ಹೇಳುವುದು: “ಏಳು, ಸೊಂಟದಿಂದ ಗೋಣಿತಟ್ಟನ್ನು ಬಿಚ್ಚು, ಕಾಲಿನಿಂದ ಕೆರವನ್ನು ಕಳಚು.” ಯೆಹೋವನ ಆಜ್ಞೆಯಂತೆಯೇ ಯೆಶಾಯನು ನಡೆದುಕೊಳ್ಳುತ್ತಾನೆ. “ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರುಗುತ್ತಿದ್ದನು.” (ಯೆಶಾಯ 20:2) ಗೋಣಿತಟ್ಟು, ಎಚ್ಚರಿಕೆಯ ಸಂದೇಶ ನೀಡುವಾಗ ಪ್ರವಾದಿಗಳು ಅನೇಕ ವೇಳೆ ಹಾಕಿಕೊಳ್ಳುವ ಒಂದು ದಪ್ಪ ವಸ್ತ್ರವಾಗಿದೆ. ಅದನ್ನು ಸಂಕಟದ ಸಮಯದಲ್ಲಿ ಇಲ್ಲವೆ ಕೇಡಿನ ವಾರ್ತೆಯನ್ನು ಕೇಳಿಸಿಕೊಂಡಾಗಲೂ ಧರಿಸಲಾಗುತ್ತದೆ. (2 ಅರಸುಗಳು 19:2; ಕೀರ್ತನೆ 35:13; ದಾನಿಯೇಲ 9:⁠3) ಯೆಶಾಯನು ಯಾವ ಹೊದಿಕೆಯೂ ಇಲ್ಲದೆ, ನಿಜವಾಗಿಯೂ ಬೆತ್ತಲೆಯಾಗಿ ಓಡಾಡುತ್ತಾನೊ? ಹಾಗೆಂದು ನೆನಸುವ ಅಗತ್ಯವಿಲ್ಲ. “ನೇಕಡ್‌” ಅಥವಾ ಬೆತ್ತಲೆ ಎಂಬುದಾಗಿ ತರ್ಜುಮೆಮಾಡಲ್ಪಟ್ಟ ಹೀಬ್ರು ಪದವು, ಸ್ವಲ್ಪವೇ ಬಟ್ಟೆಗಳನ್ನು ಧರಿಸಿಕೊಂಡಿರುವ ಅರ್ಥವನ್ನೂ ಹೊಂದಿದೆ. (1 ಸಮುವೇಲ 19:​24, NW ಪಾದಟಿಪ್ಪಣಿ) ಹೀಗೆ, ಯೆಶಾಯನು ತನ್ನ ಮೇಲಂಗಿಯನ್ನು ಮಾತ್ರ ತೆಗೆದುಹಾಕಿದ್ದಿರಬಹುದು, ಆದರೆ ಒಳಗಿನ ಗಿಡ್ಡ ಅಂಗಿಯನ್ನು ಧರಿಸಿಕೊಂಡೇ ಇದ್ದಿರಬಹುದು. ಅಶ್ಶೂರದ ಶಿಲೆಗಳಲ್ಲಿ ಗಂಡು ಕೈದಿಗಳು ಅನೇಕವೇಳೆ ಹೀಗೆಯೇ ಉಡುಪು ಧರಿಸಿರುವುದಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆ.

9. ಯೆಶಾಯನ ಕ್ರಿಯೆಯ ಪ್ರವಾದನಾತ್ಮಕ ಅರ್ಥವೇನು?

9 ಯೆಶಾಯನ ಈ ವಿಚಿತ್ರ ಕ್ರಿಯೆಯ ಅರ್ಥವನ್ನು ಯೆಹೋವನು ವಿವರಿಸುತ್ತಾನೆ: “ಆಗ ಯೆಹೋವನು ಹೀಗೆ ಹೇಳಿದನು​—⁠ನನ್ನ ಸೇವಕನಾದ ಯೆಶಾಯನು ಐಗುಪ್ತದ ಮತ್ತು ಕೂಷಿನ ನಾಶನಕ್ಕೆ ಸೋಜಿಗದ ಗುರುತಾಗಿ ಮೂರು ವರುಷ ಬಟ್ಟೆಕೆರಗಳಿಲ್ಲದೆ ನಡೆದ ಪ್ರಕಾರ ಅಶ್ಶೂರದ ಅರಸನು ಐಗುಪ್ತದ ಸೆರೆಯವರನ್ನೂ ಕೂಷಿನ ಕೈದಿಗಳನ್ನೂ ಅವರು ದೊಡ್ಡವರಾಗಲಿ ಚಿಕ್ಕವರಾಗಲಿ ಬಟ್ಟೆಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು.” (ಯೆಶಾಯ 20:3, 4) ಹೌದು, ಬೇಗನೆ ಐಗುಪ್ತ್ಯರು ಮತ್ತು ಕೂಷಿನವರು ಸೆರೆಯಾಳುಗಳಾಗುವರು. ಯಾರೊಬ್ಬರೂ ತಪ್ಪಿಸಿಕೊಳ್ಳಲಾರರು. ‘ದೊಡ್ಡವರೂ ಚಿಕ್ಕವರೂ’ ಸುಲಿಗೆಗೆ ಗುರಿಯಾಗಿ, ಪರದೇಶವಾಸಕ್ಕೆ ಒಯ್ಯಲ್ಪಡುವರು. ಹೀಗೆ, ಯೆಹೂದದ ನಿವಾಸಿಗಳು ತಮ್ಮ ಭರವಸೆಯನ್ನು ಐಗುಪ್ತ ಮತ್ತು ಕೂಷ್‌ನಲ್ಲಿಟ್ಟರೂ ಅದು ವ್ಯರ್ಥವಾಗಿರುವುದೆಂದು ಯೆಹೋವನು ಈ ಆಶಾಶೂನ್ಯ ನಿರೂಪಣೆಯ ಮೂಲಕ ಎಚ್ಚರಿಸುತ್ತಿದ್ದಾನೆ. ಈ ರಾಷ್ಟ್ರಗಳ ಪತನವು ಅವುಗಳ ‘ಬೆತ್ತಲೆತನಕ್ಕೆ’ ಅಂದರೆ, ಅಂತಿಮ ಮಾನಭಂಗಕ್ಕೆ ನಡೆಸುವುದು!

ನಿರೀಕ್ಷೆ ಹುಸಿಯಾಗುತ್ತದೆ, ಸೌಂದರ್ಯ ಮಾಸಿಹೋಗುತ್ತದೆ

10, 11. (ಎ) ಅಶ್ಶೂರರ ಮುಂದೆ ಐಗುಪ್ತ ಮತ್ತು ಕೂಷ್‌ಗಳು ಶಕ್ತಿಹೀನವಾಗಿವೆ ಎಂಬುದನ್ನು ಯೆಹೂದವು ಗ್ರಹಿಸುವಾಗ, ಅದರ ಪ್ರತಿಕ್ರಿಯೆಯು ಏನಾಗಿರುವುದು? (ಬಿ) ಯೆಹೂದದ ನಿವಾಸಿಗಳು ಐಗುಪ್ತ ಮತ್ತು ಕೂಷಿನ ಮೇಲೆ ಏಕೆ ಭರವಸೆಯಿಡಬಹುದು?

10 ತನ್ನ ಜನರಾದ ಇಸ್ರಾಯೇಲ್ಯರು ಯಾರಲ್ಲಿ ಆಶ್ರಯವನ್ನು ಕೋರಿದ್ದರೊ ಆ ಐಗುಪ್ತ ಮತ್ತು ಕೂಷ್‌, ಅಶ್ಶೂರರ ಮುಂದೆ ನೆಲಕಚ್ಚಿದಾಗ, ಅವರ ಪ್ರತಿಕ್ರಿಯೆಯನ್ನು ಯೆಹೋವನು ಪ್ರವಾದನಾತ್ಮಕವಾಗಿ ವಿವರಿಸುತ್ತಾನೆ. “ಆಗ [ನನ್ನ ಜನರು] ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು. ಆ ದಿನದಲ್ಲಿ ಈ ಕರಾವಳಿಯಲ್ಲಿ ವಾಸಿಸುವವರು​—⁠ಹಾ, ಅಶ್ಶೂರದ ಅರಸನಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೆವೋ ಅವರಿಗೇ ಈ ಗತಿ ಬಂತಲ್ಲಾ; ನಮ್ಮಂಥವರಿಗೆ ಹೇಗೆ ರಕ್ಷಣೆಯಾದೀತು ಎಂದು ಅಂದುಕೊಳ್ಳುವರು.”​—ಯೆಶಾಯ 20:5, 6.

11 ಐಗುಪ್ತ ಮತ್ತು ಕೂಷ್‌ನಂತಹ ಶಕ್ತಿಗಳಿಗೆ ಹೋಲಿಸುವಾಗ, ಯೆಹೂದವು ಕರಾವಳಿ ಪ್ರದೇಶದ ಒಂದು ತುಂಡು ಜಾಗದಂತೆ ತೋರುತ್ತದೆ. ಈ “ಕರಾವಳಿಯ” ಕೆಲವು ನಿವಾಸಿಗಳು ಐಗುಪ್ತದ ಸೌಂದರ್ಯದಿಂದ, ಅಂದರೆ ಅದರ ಭವ್ಯವಾದ ಪಿರಮಿಡ್‌ಗಳು, ಗಗನಕ್ಕೇರುವ ದೇವಾಲಯಗಳು, ವಿಶಾಲವಾದ ಭವನಗಳು ಮತ್ತು ಸುತ್ತಮುತ್ತಲಿನ ತೋಟಗಳು, ಹಣ್ಣಿನ ತೋಟಗಳು ಮತ್ತು ಕೊಳಗಳಿಂದ ಆಕರ್ಷಿತರಾಗಿದ್ದಾರೆ. ಐಗುಪ್ತದ ಶೋಭಾಯಮಾನವಾದ ವಾಸ್ತುಶಿಲ್ಪವು ಅದರ ಸ್ಥಿರತೆ ಹಾಗೂ ನಿರಂತರತೆಯ ಪ್ರಮಾಣವಾಗಿ ತೋರುತ್ತದೆ. ಈ ನಾಡು ಧ್ವಂಸವಾಗಲು ಸಾಧ್ಯವೇ ಇಲ್ಲ ಎಂಬಂತೆ ತೋರುತ್ತದೆ! ಅದರೊಂದಿಗೆ, ಅಲ್ಲಿನ ಬಿಲ್ಲುಗಾರರು, ರಥಗಳು ಮತ್ತು ಕೂಷಿನ ಕುದುರೆಸವಾರರಿಂದಲೂ ಯೆಹೂದ್ಯರು ಪ್ರಭಾವಿತರಾಗಿದ್ದಿರಬಹುದು.

12. ಯೆಹೂದವು ಯಾರಲ್ಲಿ ಭರವಸೆಯನ್ನಿಡಬೇಕು?

12 ಯೆಶಾಯನು ನಟಿಸಿ ತೋರಿಸಿದ ಎಚ್ಚರಿಕೆಯನ್ನು ಹಾಗೂ ಯೆಹೋವನು ನುಡಿದ ಪ್ರವಾದನಾ ಮಾತುಗಳನ್ನು ಪರಿಗಣಿಸುವಾಗ, ದೇವಜನರೆಂದೆಣಿಸಿಕೊಳ್ಳುವ ಯಾರೊಬ್ಬರೂ ಐಗುಪ್ತ ಮತ್ತು ಕೂಷ್‌ನಲ್ಲಿ ಭರವಸೆಯಿಡಲು ಬಯಸಿದರೆ, ಅದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಮನುಷ್ಯಮಾತ್ರದವರಲ್ಲಿ ಭರವಸೆಯಿಡುವ ಬದಲು ಯೆಹೋವನಲ್ಲಿ ಭರವಸೆಯಿಡುವುದು ಎಷ್ಟು ಹೆಚ್ಚು ಉತ್ತಮ! (ಕೀರ್ತನೆ 25:2; 40:⁠4) ಮುಂದೆ ಯೆಹೂದವು ಅಶ್ಶೂರದ ರಾಜನಿಂದ ಭಾರಿ ಕಷ್ಟಕ್ಕೆ ಗುರಿಯಾಗುತ್ತದೆ ಮತ್ತು ತದನಂತರ, ಅದರ ದೇವಾಲಯವೂ ರಾಜಧಾನಿ ನಗರವೂ ಬಾಬೆಲಿನವರಿಂದ ನಾಶವಾಗುವುದನ್ನು ಅದು ನೋಡುತ್ತದೆ. ಆದರೂ “ಹತ್ತನೆಯ ಒಂದು ಭಾಗ” ಅಂದರೆ “ದೇವಕುಲವು” ಒಂದು ಅತಿದೊಡ್ಡ ಮರದ ಮೋಟಿನಂತೆ ಬಿಡಲ್ಪಡುತ್ತದೆ. (ಯೆಶಾಯ 6:13) ಯೆಹೋವನಲ್ಲಿ ಭರವಸೆಯಿಡುತ್ತಾ ಮುಂದುವರಿಯುವ ಈ ಚಿಕ್ಕ ಗುಂಪಿನ ನಂಬಿಕೆಯು, ತಕ್ಕ ಸಮಯದಲ್ಲಿ ಯೆಶಾಯನ ಸಂದೇಶದಿಂದ ಬಹಳ ಬಲಗೊಳ್ಳುವುದು!

ಯೆಹೋವನಲ್ಲಿ ಭರವಸೆಯಿಡಿರಿ

13. ಇಂದು ವಿಶ್ವಾಸಿಗಳನ್ನು ಹಾಗೂ ಅವಿಶ್ವಾಸಿಗಳನ್ನು ಬಾಧಿಸುವ ಒತ್ತಡಗಳು ಯಾವುವು?

13 ಐಗುಪ್ತ ಮತ್ತು ಕೂಷಿನಲ್ಲಿ ಭರವಸೆಯಿಡುವುದರ ವ್ಯರ್ಥತೆಯ ಬಗ್ಗೆ ಯೆಶಾಯನು ನೀಡಿದ ಎಚ್ಚರಿಕೆಯು, ಕೇವಲ ಗತಿಸಿಹೋದ ಇತಿಹಾಸವಲ್ಲ. ನಮ್ಮ ದಿನಗಳಲ್ಲಿ ಅದಕ್ಕೆ ಪ್ರಾಯೋಗಿಕ ಮಹತ್ವವಿದೆ. ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಾ ಇದ್ದೇವೆ. (2 ತಿಮೊಥೆಯ 3:⁠1) ಆರ್ಥಿಕ ಮುಗ್ಗಟ್ಟು, ವ್ಯಾಪಕವಾದ ಬಡತನ, ರಾಜಕೀಯ ಅಸ್ಥಿರತೆ, ಆಂತರಿಕ ಗಲಭೆ ಮತ್ತು ಚಿಕ್ಕ ಹಾಗೂ ದೊಡ್ಡ ಪ್ರಮಾಣದ ಯುದ್ಧಗಳು, ದೇವರ ಅರಸುತನವನ್ನು ಧಿಕ್ಕರಿಸುವವರ ಮೇಲೆ ಮಾತ್ರವಲ್ಲ ಯೆಹೋವನನ್ನು ಆರಾಧಿಸುವವರ ಮೇಲೆಯೂ ವಿಧ್ವಂಸಕ ಪರಿಣಾಮಗಳನ್ನು ಬೀರುತ್ತವೆ. ಹಾಗಾದರೆ, ‘ನಾನು ಯಾರಲ್ಲಿ ಸಹಾಯ ಕೋರಬೇಕು?’ ಎಂಬ ಪ್ರಶ್ನೆಯು ನಮ್ಮಲ್ಲಿ ಪ್ರತಿಯೊಬ್ಬರ ಮುಂದೆ ಇದೆ.

14. ನಾವು ಏಕೆ ಯೆಹೋವನಲ್ಲಿ ಮಾತ್ರ ಭರವಸೆಯಿಡಬೇಕು?

14 ಇಂದು ಮನುಷ್ಯನ ಜಾಣ್ಮೆ ಹಾಗೂ ತಂತ್ರಜ್ಞಾನವನ್ನು ಉಪಯೋಗಿಸಿ ಅವನ ಸಮಸ್ಯೆಗಳನ್ನು ಬಗೆಹರಿಸುವುದರ ಬಗ್ಗೆ ಮಾತಾಡುವ, ಆರ್ಥಿಕ ಪರಿಣತರು, ರಾಜಕಾರಣಿಗಳು ಮತ್ತು ವಿಜ್ಞಾನಿಗಳಿಂದ ಕೆಲವರು ತುಂಬ ಪ್ರಭಾವಿತರಾಗಿದ್ದಾರೆ. ಆದರೆ, ಬೈಬಲು ಸ್ಪಷ್ಟವಾಗಿ ಹೇಳುವುದು: “ಪ್ರಭುಗಳಲ್ಲಿ ಭರವಸವಿಡುವದಕ್ಕಿಂತ ಯೆಹೋವನನ್ನು ಆಶ್ರಯಿಸುವದು ಒಳ್ಳೇದು.” (ಕೀರ್ತನೆ 118:9) ಶಾಂತಿ ಮತ್ತು ಭದ್ರತೆಗಾಗಿ ಮನುಷ್ಯನು ಮಾಡಿರುವ ಯೋಜನೆಗಳೆಲ್ಲ ವ್ಯರ್ಥವಾಗಿ ಹೋಗುವವು. ಅದಕ್ಕೆ ಸೂಕ್ತ ಕಾರಣವನ್ನು ಪ್ರವಾದಿಯಾದ ಯೆರೆಮೀಯನು ತಿಳಿಸಿದನು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”​—⁠ಯೆರೆಮೀಯ 10:⁠23.

15. ಸಂಕಟಕ್ಕೀಡಾದ ಮಾನವಜಾತಿಯ ಏಕೈಕ ನಿರೀಕ್ಷೆ ಎಲ್ಲಿ ಬೇರೂರಿದೆ?

15 ಆದುದರಿಂದ, ದೇವರ ಸೇವಕರು ಈ ಲೋಕದ ಬಲ ಇಲ್ಲವೆ ವಿವೇಕದ ಪ್ರಭಾವಕ್ಕೊಳಗಾಗುವುದರಿಂದ ದೂರವಿರಬೇಕು. (ಕೀರ್ತನೆ 33:10; 1 ಕೊರಿಂಥ 3:​19, 20) ಸಂಕಟಕ್ಕೀಡಾಗಿರುವ ಮಾನವಜಾತಿಯ ಏಕೈಕ ನಿರೀಕ್ಷೆಯು ಸೃಷ್ಟಿಕರ್ತನಾದ ಯೆಹೋವನಲ್ಲಿ ಬೇರೂರಿದೆ. ಆತನಲ್ಲಿ ಭರವಸೆಯಿಡುವವರು ಮಾತ್ರ ರಕ್ಷಿಸಲ್ಪಡುವರು. ಪ್ರೇರಿತ ಅಪೊಸ್ತಲ ಯೋಹಾನನು ಬರೆದಂತೆ, “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:⁠17.

[ಪಾದಟಿಪ್ಪಣಿ]

^ ಪ್ಯಾರ. 5 ಈ ರಾಜನನ್ನು ಇತಿಹಾಸಗಾರರು IIನೆಯ ಸರ್ಗೋನ್‌ ಎಂಬುದಾಗಿ ಸೂಚಿಸುತ್ತಾರೆ. ಇವನಿಗಿಂತ ಮುಂಚೆ ಆಳಿದ ಒಬ್ಬ ಅರಸನು, ಅಶ್ಶೂರದವನಲ್ಲ ಬಾಬೆಲಿನವನಾಗಿದ್ದನು ಮತ್ತು “Iನೆಯ ಸರ್ಗೋನ್‌” ಎಂಬುದಾಗಿ ಹೆಸರಿಸಲ್ಪಟ್ಟಿದ್ದಾನೆ.

[ಅಧ್ಯಯನ ಪ್ರಶ್ನೆಗಳು]

[ಪುಟ 209ರಲ್ಲಿರುವ ಚಿತ್ರ]

ಅಶ್ಶೂರ್ಯರು ತಮ್ಮ ಕೈದಿಗಳಲ್ಲಿ ಕೆಲವರ ಕಣ್ಣುಗಳನ್ನು ಚುಚ್ಚಿ ಕುರುಡಾಗಿಸುತ್ತಿದ್ದರು

[ಪುಟ 213ರಲ್ಲಿರುವ ಚಿತ್ರಗಳು]

ಕೆಲವರು ಮನುಷ್ಯನ ಸಾಧನೆಗಳಿಂದ ತುಂಬ ಪ್ರಭಾವಿತರಾಗಬಹುದು, ಆದರೆ ಯೆಹೋವನಲ್ಲಿ ಭರವಸೆಯಿಡುವುದೇ ಮೇಲು