ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತೂರಿನ ಸೊಕ್ಕಡಗಿಸುತ್ತಾನೆ

ಯೆಹೋವನು ತೂರಿನ ಸೊಕ್ಕಡಗಿಸುತ್ತಾನೆ

ಅಧ್ಯಾಯ ಹತ್ತೊಂಬತ್ತು

ಯೆಹೋವನು ತೂರಿನ ಸೊಕ್ಕಡಗಿಸುತ್ತಾನೆ

ಯೆಶಾಯ 23:​1-18

1, 2. (ಎ) ಪುರಾತನ ತೂರ್‌ ಯಾವ ರೀತಿಯ ಪಟ್ಟಣವಾಗಿತ್ತು? (ಬಿ) ತೂರಿನ ವಿಷಯವಾಗಿ ಯೆಶಾಯನು ಏನನ್ನು ಪ್ರವಾದಿಸಿದನು?

‘ಪರಿಪೂರ್ಣ ಸೌಂದರ್ಯ’ ಮತ್ತು ಅಪಾರವಾದ ‘ಬಗೆಬಗೆಯ ಆಸ್ತಿಯು’ ಅದಕ್ಕಿತ್ತು. (ಯೆಹೆಜ್ಕೇಲ 27:​4, 12) ಅದರ ನೌಕಾತಂಡವು ಸಮುದ್ರದ ಆಚೆ, ದೂರದೂರದ ಸ್ಥಳಗಳಿಗೆ ಭೇಟಿ ನೀಡಿತು. ಅದು “ಸಮುದ್ರಮಧ್ಯದಲ್ಲಿ” ಬಹಳ ಗೌರವವನ್ನು ಪಡೆಯಿತು ಮತ್ತು “ಅಪಾರವಾದ ಐಶ್ವರ್ಯದಿಂದ” ‘ಭೂರಾಜರನ್ನು ಸಮೃದ್ಧಿಪಡಿಸಿತು.’ (ಯೆಹೆಜ್ಕೇಲ 27:​25, 33) ಇಂತಹ ಸ್ಥಾನಮಾನ ಸಾ.ಶ.ಪೂ. ಏಳನೆಯ ಶತಮಾನದಲ್ಲಿ, ಭೂಮಧ್ಯ ಸಮುದ್ರದ ಪೂರ್ವದಿಕ್ಕಿನಲ್ಲಿದ್ದ ಫಿನೀಷಿಯ ದೇಶದ ತೂರ್‌ ಪಟ್ಟಣಕ್ಕಿತ್ತು.

2 ಆದರೂ, ತೂರ್‌ ಪಟ್ಟಣದ ನಾಶನವು ತೀರ ಹತ್ತಿರದಲ್ಲಿತ್ತು. ಈ ಪಟ್ಟಣದ ವಿವರಣೆಯನ್ನು ಯೆಹೆಜ್ಕೇಲನು ಕೊಡುವ ಸುಮಾರು 100 ವರ್ಷಗಳ ಮುಂಚೆಯೇ, ಪ್ರವಾದಿಯಾದ ಯೆಶಾಯನು ಈ ಫಿನೀಷಿಯ ದುರ್ಗದ ಪತನವನ್ನು ಮತ್ತು ಅದರ ಮೇಲೆ ಅವಲಂಬಿಸಿರುವವರ ಗೋಳಾಟವನ್ನು ಮುಂತಿಳಿಸಿದ್ದನು. ಸ್ವಲ್ಪ ಸಮಯದ ನಂತರ, ದೇವರು ಪುನಃ ಈ ಪಟ್ಟಣದ ಕಡೆಗೆ ತನ್ನ ಕೃಪಾದೃಷ್ಟಿಯನ್ನು ಬೀರಿ, ಅದಕ್ಕೆ ನವೀಕೃತ ಏಳಿಗೆಯನ್ನು ದಯಪಾಲಿಸುವನೆಂಬುದಾಗಿಯೂ ಯೆಶಾಯನು ಪ್ರವಾದಿಸಿದನು. ಪ್ರವಾದಿಯು ನುಡಿದ ಮಾತುಗಳು ಹೇಗೆ ನೆರವೇರಿದವು? ಮತ್ತು ತೂರ್‌ ಪಟ್ಟಣಕ್ಕೆ ಸಂಭವಿಸಿದ ಎಲ್ಲ ಘಟನೆಗಳಿಂದಲೂ ನಾವು ಏನನ್ನು ಕಲಿಯಬಲ್ಲೆವು? ಆ ಪಟ್ಟಣಕ್ಕೆ ಏನು ಸಂಭವಿಸಿತು ಮತ್ತು ಏಕೆ ಹೀಗಾಯಿತು ಎಂಬುದರ ಸ್ಪಷ್ಟವಾದ ತಿಳಿವಳಿಕೆಯು, ಯೆಹೋವನಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನಮಗಿರುವ ನಂಬಿಕೆಯನ್ನು ಬಲಪಡಿಸುವುದು.

“ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ!”

3, 4. (ಎ) ತಾರ್ಷೀಷ್‌ ಎಲ್ಲಿತ್ತು, ಮತ್ತು ತೂರಿನೊಂದಿಗೆ ಅದಕ್ಕೆ ಯಾವ ಸಂಬಂಧವಿತ್ತು? (ಬಿ) ತಾರ್ಷೀಷಿನೊಂದಿಗೆ ವ್ಯಾಪಾರಮಾಡುವ ನಾವಿಕರು ಏಕೆ ‘ಅಂಗಲಾಚುವರು’?

3“ತೂರಿನ ವಿಷಯವಾದ ದೈವೋಕ್ತಿ” ಎಂಬ ತಲೆಬರಹದ ಕೆಳಗೆ, ಯೆಶಾಯನು ಪ್ರಕಟಿಸುವುದು: “ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ! [ನಿಮ್ಮ ಆಶ್ರಯವು] ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ.” (ಯೆಶಾಯ 23:1ಎ) ಭೂಮಧ್ಯ ಸಮುದ್ರದ ಪೂರ್ವದಲ್ಲಿರುವ ತೂರಿನಿಂದ ಬಹಳ ದೂರವಿರುವ ತಾರ್ಷೀಷ್‌, ಸ್ಪೇನಿನ ಒಂದು ಭಾಗವಾಗಿದ್ದಿರಬಹುದೆಂದು ನೆನಸಲಾಗುತ್ತದೆ. * ಹಾಗಿದ್ದರೂ, ಫಿನೀಷಿಯದವರು ನಿಪುಣ ನಾವಿಕರಾಗಿದ್ದರು, ಮತ್ತು ಅವರ ಹಡಗುಗಳು ವಿಶಾಲವೂ, ಸಮುದ್ರ ಸಂಚಾರಕ್ಕೆ ಯೋಗ್ಯವೂ ಆಗಿದ್ದವು. ಚಂದ್ರ ಹಾಗೂ ಉಬ್ಬರವಿಳಿತಗಳ ಮಧ್ಯೆ ಸಂಬಂಧವಿರುವುದನ್ನು ಪ್ರಥಮವಾಗಿ ಗಮನಿಸಿದವರು ಮತ್ತು ಸಮುದ್ರಯಾನಕ್ಕೆ ಜ್ಯೋತಿಶ್ಶಾಸ್ತ್ರದ ನೆರವನ್ನು ಪಡೆದವರು ಫಿನೀಷಿಯದವರೇ ಎಂಬುದಾಗಿ ಕೆಲವು ಇತಿಹಾಸಕಾರರು ನಂಬುತ್ತಾರೆ. ಆದುದರಿಂದ ತಾರ್ಷೀಷ್‌ ಮತ್ತು ತೂರಿನ ನಡುವೆ ಇದ್ದ ಅಂತರವು ಅವರಿಗೊಂದು ಅಡಚಣೆಯಾಗಿರಲಿಲ್ಲ.

4 ಯೆಶಾಯನ ದಿನಗಳಲ್ಲಿ, ದೂರದ ತಾರ್ಷೀಷ್‌ ತೂರಿನ ವ್ಯಾಪಾರ ಕ್ಷೇತ್ರವಾಗಿತ್ತು. ವಾಸ್ತವದಲ್ಲಿ, ತೂರಿನ ಸಿರಿಸಂಪತ್ತಿಗೆ ತಾರ್ಷೀಷ್‌ ಪ್ರಧಾನ ಮೂಲವಾಗಿದ್ದಿರಬಹುದು. ಸ್ಪೇನಿನ ಗಣಿಗಳಲ್ಲಿ ಬೆಳ್ಳಿ, ಕಬ್ಬಿಣ, ತವರು ಮತ್ತು ಇತರ ಲೋಹಗಳ ಸಮೃದ್ಧ ಶೇಖರಣೆಯಿದೆ. (ಹೋಲಿಸಿ ಯೆರೆಮೀಯ 10:9; ಯೆಹೆಜ್ಕೇಲ 27:12.) “ತಾರ್ಷೀಷಿನ ಹಡಗು”ಗಳಿಗೆ, ಅಂದರೆ ಬಹುಶಃ ತಾರ್ಷೀಷಿನೊಂದಿಗೆ ವ್ಯಾಪಾರವನ್ನು ನಡೆಸುತ್ತಿದ್ದ ತೂರಿನ ಹಡಗುಗಳಿಗೆ, ತಮ್ಮ ಸ್ವದೇಶಿ ಬಂದರಿನ ನಾಶನದ ಕುರಿತು ಪ್ರಲಾಪಿಸುತ್ತಾ ‘ಅಂಗಲಾಚಲು’ ಸಕಾರಣವಿರುವುದು.

5. ತಾರ್ಷೀಷಿನಿಂದ ಬರುತ್ತಿರುವ ನಾವಿಕರು ತೂರಿನ ಪತನದ ಬಗ್ಗೆ ಎಲ್ಲಿ ತಿಳಿದುಕೊಳ್ಳುತ್ತಾರೆ?

5 ಸಮುದ್ರದಲ್ಲಿ ಸಂಚರಿಸುತ್ತಿರುವ ನಾವಿಕರಿಗೆ ತೂರಿನ ಪತನದ ಸುದ್ದಿ ಹೇಗೆ ಸಿಗುತ್ತದೆ? ಯೆಶಾಯನು ಉತ್ತರಿಸುವುದು: (ಕಿತ್ತೀಮ್‌ ದೇಶೀಯರಿಂದ ಅವುಗಳಿಗೆ ತಿಳಿಯಿತು).” (ಯೆಶಾಯ 23:1ಬಿ) ‘ಕಿತ್ತೀಮ್‌ ದೇಶವು,’ ಫಿನೀಷಿಯದ ತೀರದಿಂದ ಸುಮಾರು 100 ಕಿಲೊಮೀಟರುಗಳು ದೂರದಲ್ಲಿರುವ ಸೈಪ್ರಸ್‌ ದ್ವೀಪವನ್ನು ಸೂಚಿಸಬಹುದು. ತಾರ್ಷೀಷಿನಿಂದ ಪೂರ್ವಕ್ಕೆ ಸಾಗುತ್ತಿರುವ ಹಡಗುಗಳಿಗೆ, ತೂರ್‌ ಪಟ್ಟಣವನ್ನು ತಲಪುವ ಮುಂಚೆ ಕಿತ್ತೀಮ್‌ ಕೊನೆಯ ತಂಗುದಾಣವಾಗಿದೆ. ಹೀಗೆ ಸೈಪ್ರಸ್‌ನಲ್ಲಿ ಸ್ವಲ್ಪ ಸಮಯ ತಂಗಿದಾಗಲೇ, ತಮ್ಮ ಅಚ್ಚುಮೆಚ್ಚಿನ ಸ್ವದೇಶಿ ಬಂದರಿನ ನಾಶನದ ಸುದ್ದಿ ನಾವಿಕರಿಗೆ ಸಿಗುತ್ತದೆ. ಅವರೆಷ್ಟು ತಲ್ಲಣಗೊಳ್ಳುತ್ತಾರೆ! ದುಃಖತಪ್ತರಾದ ಅವರು ಹತಾಶೆಯಿಂದ ‘ಅಂಗಲಾಚುತ್ತಾರೆ.’

6. ತೂರ್‌ ಮತ್ತು ಚೀದೋನಿನ ಸಂಬಂಧದ ಬಗ್ಗೆ ವಿವರಿಸಿರಿ.

6 ಫಿನೀಷಿಯ ಕಡಲತೀರದ ನಿವಾಸಿಗಳು ಕೂಡ ಈ ನಾಶನದ ಸುದ್ದಿಯಿಂದ ಹತಾಶರಾಗುವರು. ಪ್ರವಾದಿಯು ಹೇಳುವುದು: “ಕರಾವಳಿಯ ನಿವಾಸಿಗಳೇ, ಸಮುದ್ರವನ್ನು ಹಾದುಹೋಗುವ ಚೀದೋನಿನ ವರ್ತಕರಿಂದ ಸಮೃದ್ಧಿಹೊಂದಿದವರೇ, ಮೌನವಾಗಿರಿ! ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯಹೊಂದಿದ [ನಿಮ್ಮ ನಗರಿಯು] ಅನೇಕ ಜನಾಂಗಗಳಿಗೆ ಲಾಭಕರವಾಗಿತ್ತು.” (ಯೆಶಾಯ 23:2, 3) ‘ಕರಾವಳಿಯ ನಿವಾಸಿಗಳು’ ಅಂದರೆ ತೂರಿನ ನೆರೆಯವರು ತೂರಿನ ಮೇಲೆ ಎರಗಿದ ಕೇಡನ್ನು ಕಂಡು ಅಚ್ಚರಿಯಿಂದ ಮೌನರಾಗುವರು. ಈ ನಿವಾಸಿಗಳಿಗೆ ‘ಸಮೃದ್ಧಿಯನ್ನು’ ತಂದುಕೊಟ್ಟಿರುವ ‘ಚೀದೋನಿನ ವರ್ತಕರು’ ಯಾರು? ಈ ಮೊದಲು ತೂರ್‌ ಪಟ್ಟಣವು, ಚೀದೋನ್‌ ರೇವುಪಟ್ಟಣದಿಂದ ಕೇವಲ 35 ಕಿಲೊಮೀಟರುಗಳು ಉತ್ತರದಲ್ಲಿರುವ ಒಂದು ವಸಾಹತ್ತಾಗಿತ್ತು. ಚೀದೋನಿನ ನಾಣ್ಯಗಳ ಮೇಲೆ, ತೂರಿನ ತಾಯಿ ಚೀದೋನ್‌ ಎಂಬ ವಿವರಣೆಯಿದೆ. ಸಿರಿಸಂಪತ್ತಿನ ವಿಷಯದಲ್ಲಿ ತೂರ್‌ ಚೀದೋನನ್ನು ಅತಿಶಯಿಸಿದ್ದರೂ, ಅದು ಈಗಲೂ ‘ಚೀದೋನ್‌ ಕುಮಾರಿಯೇ’ (NW) ಆಗಿತ್ತು. ಮತ್ತು ತೂರಿನ ನಿವಾಸಿಗಳು ತಮ್ಮನ್ನು ಚೀದೋನ್ಯರೆಂದೇ ಕರೆದುಕೊಂಡರು. (ಯೆಶಾಯ 23:​12) ಆದಕಾರಣ, ‘ಚೀದೋನಿನ ವರ್ತಕರು’ ಎಂಬ ಅಭಿವ್ಯಕ್ತಿಯು, ತೂರಿನ ವ್ಯಾಪಾರಿಗಳನ್ನು ಸೂಚಿಸುತ್ತಿರಬಹುದು.

7. ಚೀದೋನಿನ ವ್ಯಾಪಾರಿಗಳು ಸಿರಿಸಂಪತ್ತನ್ನು ಹೇಗೆ ವಿಸ್ತರಿಸಿದ್ದಾರೆ?

7 ವ್ಯಾಪಾರದಲ್ಲಿ ತೊಡಗುವ ಚೀದೋನಿನ ಧನಿಕ ವ್ಯಾಪಾರಿಗಳು, ಭೂಮಧ್ಯ ಸಮುದ್ರದಲ್ಲಿ ಸಂಚರಿಸುತ್ತಾರೆ. ಅವರು ಐಗುಪ್ತದ ನದೀಮುಖಜ ಭೂಮಿಯಲ್ಲಿರುವ ನೈಲ್‌ ನದಿಯ ಪೂರ್ವ ಶಾಖೆಯಾದ ಶೀಹೋರಿನ, ಬೀಜ ಇಲ್ಲವೆ ಧಾನ್ಯವನ್ನು ಅನೇಕ ಸ್ಥಳಗಳಿಗೆ ಕೊಂಡೊಯ್ಯುತ್ತಾರೆ. (ಹೋಲಿಸಿ ಯೆರೆಮೀಯ 2:18.) ‘ನೈಲಿನ ಬೆಳೆ’ ಎಂಬ ಅಭಿವ್ಯಕ್ತಿಯು, ಐಗುಪ್ತದ ಬೇರೆ ಉತ್ಪನ್ನಗಳನ್ನೂ ಒಳಗೂಡುತ್ತದೆ. ಈ ಸಮುದ್ರ ವ್ಯಾಪಾರಿಗಳಿಗೆ ಮತ್ತು ಅವರು ವ್ಯಾಪಾರ ನಡೆಸುವ ರಾಷ್ಟ್ರಗಳಿಗೆ, ಇಂತಹ ಸರಕುಗಳ ವ್ಯಾಪಾರ ಹಾಗೂ ವಿನಿಮಯವು ಬಹಳ ಲಾಭದಾಯಕವಾಗಿದೆ. ಚೀದೋನಿನ ವ್ಯಾಪಾರಿಗಳು ತೂರಿನ ಆದಾಯವನ್ನು ಬಹಳವಾಗಿ ಹೆಚ್ಚಿಸುತ್ತಾರೆ. ನಿಶ್ಚಯವಾಗಿಯೂ, ಅದರ ನಾಶನಕ್ಕಾಗಿ ಅವರು ಗೋಳಿಡುವರು!

8. ತೂರಿನ ನಾಶನವು ಚೀದೋನಿನ ಮೇಲೆ ಯಾವ ಪರಿಣಾಮವನ್ನು ಬೀರುವುದು?

8 ಯೆಶಾಯನು ಮುಂದೆ ಚೀದೋನನ್ನು ಉದ್ದೇಶಿಸಿ ಹೇಳುವುದು: “ಚೀದೋನೇ, ನಾಚಿಕೆಪಡು; ಸಮುದ್ರವು, ಸಮುದ್ರದುರ್ಗವು​—⁠ನಾವು ವೇದನೆಪಡಲಿಲ್ಲ, ಪ್ರಸವಿಸಲಿಲ್ಲ, ಯುವತಿಯುವಕರನ್ನು ಸಾಕಿ ಸಲಹಲಿಲ್ಲ ಎಂದು ನುಡಿದಿದೆಯಷ್ಟೆ.” (ಯೆಶಾಯ 23:4) ತೂರಿನ ನಾಶನದ ನಂತರ, ಅದು ನೆಲೆಸಿದ್ದ ಕರಾವಳಿ ಕ್ಷೇತ್ರವು ಪಾಳುಬಿದ್ದ ಭೂಮಿಯಂತಾಗುವುದು. ತನ್ನ ಮಕ್ಕಳನ್ನು ಕಳೆದುಕೊಂಡ ಒಬ್ಬ ತಾಯಿಯು ತೀರ ತಳಮಳಿಸುವವಳಾಗಿ ಹುಚ್ಚುಹಿಡಿದವಳಂತೆ ತನಗೆ ಮಕ್ಕಳೇ ಇರಲಿಲ್ಲವೆಂದು ಈಗ ಹೇಗೆ ಹೇಳಿಕೊಳ್ಳುತ್ತಾಳೊ, ಹಾಗೆಯೇ ಸಮುದ್ರವು ಕಳವಳದಿಂದ ಗೋಳಿಡುವಂತೆ ತೋರುವುದು. ತನ್ನ ಕುಮಾರಿಗೆ ಸಂಭವಿಸುವ ವಿಷಯದಿಂದ ಚೀದೋನ್‌ ನಾಚಿಕೆಪಟ್ಟುಕೊಳ್ಳುವುದು.

9. ತೂರಿನ ಪತನದಿಂದ ಜನರಿಗೆ ಉಂಟಾಗುವ ದುಃಖವನ್ನು, ಯಾವ ಘಟನೆಗಳಿಂದ ಉಂಟಾದ ದಿಗಿಲಿಗೆ ಹೋಲಿಸಸಾಧ್ಯವಿದೆ?

9 ಹೌದು, ತೂರಿನ ನಾಶನದ ಸುದ್ದಿಯು ವ್ಯಾಪಕವಾದ ದುಃಖವನ್ನು ಉಂಟುಮಾಡುವುದು. ಯೆಶಾಯನು ಹೇಳುವುದು: “ಐಗುಪ್ತದ ಸಮಾಚಾರದಂತೆ, ತೂರಿನ ಸಮಾಚಾರವನ್ನು ಜನರು ಕೇಳಿದಾಗ ಸಂಕಟಪಡುವರು.” (ಯೆಶಾಯ 23:​5, NW) ಗೋಳಾಡುವವರ ವೇದನೆಯು, ಐಗುಪ್ತದ ವರದಿಯನ್ನು ಕೇಳಿ ಗೋಳಾಡಿದವರ ವೇದನೆಗೆ ಸಮಾನವಾಗಿದೆ. ಯಾವ ವರದಿಯ ಕುರಿತು ಪ್ರವಾದಿಯು ಹೇಳುತ್ತಿದ್ದಾನೆ? ಬಹುಶಃ “ಐಗುಪ್ತದ ವಿಷಯವಾದ ದೈವೋಕ್ತಿ”ಯ ನೆರವೇರಿಕೆಯ ಕುರಿತೇ. * (ಯೆಶಾಯ 19:​1-25) ಅಥವಾ ಮೋಶೆಯ ದಿನದಲ್ಲಿ ಫರೋಹನ ಸೇನೆಯು ನಾಶಗೊಂಡದ್ದರ ವರದಿಯ ಕುರಿತು ಪ್ರವಾದಿಯು ಹೇಳುತ್ತಿದ್ದಿರಬಹುದು. ಆ ವರದಿಯು ವ್ಯಾಪಕವಾದ ದಿಗಿಲನ್ನು ಉಂಟುಮಾಡಿತ್ತು. (ವಿಮೋಚನಕಾಂಡ 15:​4, 5, 14-16; ಯೆಹೋಶುವ 2:​9-11) ವಿಷಯವು ಏನೇ ಆಗಿರಲಿ, ತೂರಿನ ನಾಶನದ ವರದಿಯನ್ನು ಕೇಳಿಸಿಕೊಳ್ಳುವವರು ತೀವ್ರ ವೇದನೆಯನ್ನು ಅನುಭವಿಸುವರು. ಇವರು ಆಶ್ರಯಕ್ಕಾಗಿ ದೂರದ ತಾರ್ಷೀಷಿಗೆ ಓಡಿಹೋಗುವಂತೆ ಮತ್ತು ತಮ್ಮ ದುಃಖವನ್ನು ಜೋರಾಗಿ ಕೂಗಿಕೊಂಡು ವ್ಯಕ್ತಪಡಿಸುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ: “ತಾರ್ಷೀಷಿಗೆ ಸಮುದ್ರದ ಮೇಲೆ ಹಾದುಹೋಗಿರಿ, ಕರಾವಳಿಯ ನಿವಾಸಿಗಳೇ, ಅಂಗಲಾಚಿರಿ!”​—ಯೆಶಾಯ 23:⁠6.

“ಪುರಾತನ” ಸಮಯದಿಂದಲೂ ಉಲ್ಲಾಸಪಟ್ಟ ಪಟ್ಟಣ

10-12. ತೂರಿನ ಪ್ರಾಚೀನತೆ, ಸಿರಿಸಂಪತ್ತು ಮತ್ತು ಪ್ರಭಾವವನ್ನು ವರ್ಣಿಸಿರಿ.

10 ತೂರ್‌ ಒಂದು ಪ್ರಾಚೀನ ನಗರವಾಗಿದೆ ಎಂಬುದನ್ನು ಯೆಶಾಯನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. ಅವನು ಹೀಗೆ ಕೇಳುತ್ತಾನೆ: “ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ.” (ಯೆಶಾಯ 23:7ಎ) ತೂರಿನ ಸಂಪದ್ಭರಿತ ಇತಿಹಾಸವು ಯೆಹೋಶುವನ ಸಮಯದಷ್ಟು ಹಳೆಯದಾಗಿದೆ. (ಯೆಹೋಶುವ 19:29) ಕಾಲ ಸರಿದಂತೆ, ಲೋಹದ ವಸ್ತುಗಳು, ಗಾಜಿನ ಸಾಮಾನುಗಳು ಮತ್ತು ನೀಲಧೂಮ್ರದ ಉತ್ಪಾದನೆಗಾಗಿ ತೂರ್‌ ಜನಪ್ರಿಯತೆ ಪಡೆದುಕೊಳ್ಳುತ್ತದೆ. ನೀಲಧೂಮ್ರದ ನಿಲುವಂಗಿಗಳು ಅತ್ಯಧಿಕ ಬೆಲೆಗೆ ಮಾರಲ್ಪಡುತ್ತವೆ, ಮತ್ತು ತೂರಿನ ದುಬಾರಿ ವಸ್ತ್ರಗಳನ್ನು ಕುಲೀನರು ಬಹಳ ಇಷ್ಟಪಡುತ್ತಾರೆ. (ಹೋಲಿಸಿ ಯೆಹೆಜ್ಕೇಲ 27:​7, 24.) ಭೂಮಾರ್ಗದ ವರ್ತಕರಿಗೆ ತೂರ್‌ ಒಂದು ವ್ಯಾಪಾರ ಕೇಂದ್ರವಾಗಿದೆ ಮಾತ್ರವಲ್ಲ, ಆಮದು ರಫ್ತಿನ ದೊಡ್ಡ ಕೇಂದ್ರವೂ ಆಗಿದೆ.

11 ಮಿಲಿಟರಿ ಸಾಮರ್ಥ್ಯದ ವಿಷಯದಲ್ಲೂ ಈ ಪಟ್ಟಣವು ಪ್ರಬಲವಾಗಿದೆ. ಎಲ್‌. ಸ್ಪ್ರೇಗ್‌ ಡೀ ಕ್ಯಾಂಪ್‌ ಬರೆಯುವುದು: “ವ್ಯಾಪಾರಿಗಳಾಗಿದ್ದ ಫಿನೀಷಿಯದವರು, ಯುದ್ಧಾಸಕ್ತ ಸೈನಿಕರಂತಿರದಿದ್ದರೂ, ಅಂಧಾಭಿಮಾನದ ಧೈರ್ಯ ಹಾಗೂ ಮೊಂಡತನದಿಂದ ತಮ್ಮ ನಗರಗಳನ್ನು ರಕ್ಷಿಸಿಕೊಂಡರು. ಈ ಗುಣಗಳನ್ನು ಮತ್ತು ಸಾಕಷ್ಟು ನೌಕಾಬಲವನ್ನು ಪಡೆದಿದ್ದ ತೂರಿನವರು, ಆ ಸಮಯದಲ್ಲಿ ಅತ್ಯಂತ ಬಲಿಷ್ಠರಾಗಿದ್ದ ಅಶ್ಶೂರರನ್ನು ವಿರೋಧಿಸಶಕ್ತರಾಗಿದ್ದರು.”

12 ಹೀಗೆ, ತೂರ್‌ ಪಟ್ಟಣವು ಭೂಮಧ್ಯ ಲೋಕದಲ್ಲಿ ಬಹಳ ಪ್ರಭಾವವನ್ನು ಬೀರಿತು. “ಅದರ ಜನರು ಮುಂದೆ ನಡೆದು ಅತಿದೂರದಲ್ಲಿಯೂ ನಿವಾಸಮಾಡಿಕೊಂಡಿದ್ದರಲ್ಲಾ.” (ಯೆಶಾಯ 23:7ಬಿ) ಫಿನೀಷಿಯದವರು ದೂರದೂರದ ಸ್ಥಳಗಳಿಗೆ ಸಂಚರಿಸಿ, ವ್ಯಾಪಾರದ ಕೇಂದ್ರಗಳನ್ನು ಮತ್ತು ತಂಗುದಾಣಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ಕೆಲವು ವಸಾಹತುಗಳಾಗಿ ಬೆಳೆದವು. ಉದಾಹರಣೆಗೆ, ಆಫ್ರಿಕದ ಉತ್ತರ ತೀರದಲ್ಲಿರುವ ಕಾರ್ಥೇಜ್‌, ತೂರಿನ ವಸಾಹತ್ತಾಗಿದೆ. ಸಕಾಲದಲ್ಲಿ ಅದು ತೂರ್‌ ಪಟ್ಟಣವನ್ನು ಅತಿಶಯಿಸಿ, ಭೂಮಧ್ಯ ಲೋಕದಲ್ಲಿ ರೋಮಿನ ಪ್ರತಿಸ್ಪರ್ಧಿಯಾಗುವುದು.

ಅದರ ಸೊಕ್ಕಡಗಿಸಲ್ಪಡುವುದು

13. ತೂರಿನ ವಿರುದ್ಧ ನ್ಯಾಯತೀರ್ಪನ್ನು ವಿಧಿಸುವ ಧೈರ್ಯ ಯಾರಿಗಿದೆ ಎಂಬ ಪ್ರಶ್ನೆ ಉದ್ಭವಿಸುವುದೇಕೆ?

13 ತೂರಿನ ಪ್ರಾಚೀನತೆ ಹಾಗೂ ಸಿರಿಸಂಪತ್ತನ್ನು ಪರಿಗಣಿಸುವಾಗ, ಈ ಮುಂದಿನ ಪ್ರಶ್ನೆಯು ತಕ್ಕದ್ದಾಗಿದೆ: “ಅದು ಕಿರೀಟದಾಯಕವು; ಅದರ ವರ್ತಕರು ಪ್ರಭುಗಳು, ಅದರ ವ್ಯಾಪಾರಿಗಳು ಲೋಕಮಾನ್ಯರು; ಇಂಥ ತೂರಿಗೆ ವಿರುದ್ಧವಾಗಿ ಈ ಸಂಕಲ್ಪವನ್ನು ಮಾಡಿದವನು ಯಾರು?” (ಯೆಶಾಯ 23:8) ಈ “ಕಿರೀಟದಾಯಕ” ಪಟ್ಟಣದ ವಿರುದ್ಧ, ಅಂದರೆ, ಅದರ ವಸಾಹತುಗಳು ಮತ್ತು ಬೇರೆ ಕಡೆಗಳಲ್ಲಿ ಶಕ್ತಿಶಾಲಿ ವ್ಯಕ್ತಿಗಳನ್ನು ಉನ್ನತ ಅಧಿಕಾರದ ಸ್ಥಾನಗಳಿಗೆ ನೇಮಿಸಿರುವ ಈ ಪಟ್ಟಣದ ವಿರುದ್ಧ ಮಾತಾಡುವ ಧೈರ್ಯ ಯಾರಿಗಿದೆ? ವರ್ತಕರು ಪ್ರಭುಗಳಾಗಿರುವ ಮತ್ತು ವ್ಯಾಪಾರಿಗಳು ಲೋಕಮಾನ್ಯರಾಗಿರುವ ಈ ಮಹಾನಗರದ ವಿರುದ್ಧ ಮಾತಾಡುವ ಸಾಹಸವನ್ನು ಯಾರು ಮಾಡಬಲ್ಲರು? ಲೆಬನೋನಿನ ಬೇರೂಟ್‌ನಲ್ಲಿರುವ ನ್ಯಾಷನಲ್‌ ಮ್ಯೂಸಿಯಮ್‌ನಲ್ಲಿ, ಪ್ರಾಚೀನ ವಸ್ತುಗಳ ಮಾಜಿ ಅಧ್ಯಕ್ಷರಾಗಿದ್ದ ಮೌರೀಸ್‌ ಶೇಹಾಬ್‌ ಹೇಳಿದ್ದು: “ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಲಂಡನಿಗೆ ಎಷ್ಟೊಂದು ಪ್ರಮುಖವಾದ ಸ್ಥಾನಮಾನವಿತ್ತೊ, ಅದೇ ರೀತಿಯ ಸ್ಥಾನಮಾನವನ್ನು ತೂರ್‌ ಪಟ್ಟಣವು ಸಾ.ಶ.ಪೂ. ಒಂಬತ್ತರಿಂದ ಆರನೆಯ ಶತಮಾನದ ವರೆಗೆ ಪಡೆದುಕೊಂಡಿತ್ತು.” ಇಂತಹ ಪಟ್ಟಣದ ವಿರುದ್ಧ ಮಾತಾಡುವ ಧೈರ್ಯ ಯಾರಿಗಿದೆ?

14. ತೂರಿನ ವಿರುದ್ಧ ಯಾರು ನ್ಯಾಯತೀರ್ಪು ವಿಧಿಸುತ್ತಾರೆ, ಮತ್ತು ಏಕೆ?

14 ಈ ಪ್ರಶ್ನೆಗೆ ನೀಡಲ್ಪಟ್ಟ ಪ್ರೇರಿತ ಉತ್ತರದಿಂದ, ತೂರ್‌ ಪಟ್ಟಣದಲ್ಲಿ ಸಾಕಷ್ಟು ದಿಗಿಲುಂಟಾಯಿತು. ಯೆಶಾಯನು ಹೇಳುವುದು: “ಗರ್ವದ ಸಕಲ ವೈಭವವನ್ನು ಹೊಲಸುಮಾಡಬೇಕೆಂತಲೂ ಲೋಕಮಾನ್ಯರೆಲ್ಲರನ್ನು ಅವಮಾನಪಡಿಸಬೇಕೆಂತಲೂ ಸೇನಾಧೀಶ್ವರನಾದ ಯೆಹೋವನೇ ಹೀಗೆ ಸಂಕಲ್ಪಿಸಿದ್ದಾನೆ.” (ಯೆಶಾಯ 23:9) ಈ ಪುರಾತನ, ಧನಿಕ ಪಟ್ಟಣದ ವಿರುದ್ಧ ಯೆಹೋವನು ನ್ಯಾಯತೀರ್ಪನ್ನು ಪ್ರಕಟಿಸುವುದೇಕೆ? ಅದರ ನಿವಾಸಿಗಳು ಸುಳ್ಳು ದೇವನಾದ ಬಾಳನ ಆರಾಧಕರೆಂಬ ಕಾರಣದಿಂದಲೊ? ಅಥವಾ ಚೀದೋನ್ಯರ ಮತ್ತು ತೂರಿನ ರಾಜನಾದ ಎತ್ಬಾಳನ ಮಗಳು, ಹಾಗೂ ಅನಂತರ ಇಸ್ರಾಯೇಲಿನ ರಾಜ ಅಹಾಬನ ಪತ್ನಿಯಾಗಿ ಯೆಹೋವನ ಪ್ರವಾದಿಗಳನ್ನು ನಿರ್ದಯವಾಗಿ ಸಂಹರಿಸಿದ ಈಜೆಬೆಲಳೊಂದಿಗೆ ತೂರ್‌ ಪಟ್ಟಣಕ್ಕಿದ್ದ ಸಂಬಂಧದ ಕಾರಣದಿಂದಲೊ? (1 ಅರಸುಗಳು 16:​29, 31; 18:​4, 13, 19) ಇಲ್ಲ, ಈ ಕಾರಣಗಳಿಂದ ಯೆಹೋವನು ತೂರಿನ ಮೇಲೆ ನ್ಯಾಯತೀರ್ಪು ವಿಧಿಸಲಿಲ್ಲ. ತೂರ್‌ ತನ್ನ ಅಹಂಕಾರಕ್ಕಾಗಿ ಖಂಡಿಸಲ್ಪಟ್ಟಿದೆ. ಅದು ಇಸ್ರಾಯೇಲ್ಯರ ಹಾಗೂ ಬೇರೆ ಜನರ ಸ್ವತ್ತುಗಳನ್ನು ಸಹ ಲೂಟಿಮಾಡಿ, ತನ್ನ ಸಿರಿಸಂಪತ್ತನ್ನು ಹೆಚ್ಚಿಸಿಕೊಂಡಿದೆ. ಸಾ.ಶ.ಪೂ. ಒಂಬತ್ತನೆಯ ಶತಮಾನದಲ್ಲಿ, ಯೆಹೋವನು ಪ್ರವಾದಿಯಾದ ಯೋವೇಲನ ಮೂಲಕ ತೂರ್‌ ಮತ್ತು ಇತರ ಪಟ್ಟಣಗಳಿಗೆ ಹೇಳಿದ್ದು: “ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಅವರ ಗಡಿಯಿಂದ ದೂರಮಾಡಬೇಕೆಂದು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ.” (ಯೋವೇಲ 3:6) ತೂರ್‌ ಯೆಹೋವನ ಒಡಂಬಡಿಕೆಯ ಜನರನ್ನು ಕೇವಲ ಮಾರಾಟದ ವಸ್ತುಗಳಾಗಿ ನಡೆಸಿಕೊಂಡದ್ದನ್ನು ಆತನು ಮರೆಯಸಾಧ್ಯವೊ?

15. ಯೆರೂಸಲೇಮ್‌ ನೆಬೂಕದ್ನೆಚ್ಚರನಿಗೆ ಶರಣಾಗತವಾದಾಗ, ತೂರ್‌ ಹೇಗೆ ಪ್ರತಿಕ್ರಿಯಿಸುವುದು?

15 ನೂರು ವರುಷಗಳು ಗತಿಸಿದರೂ, ತೂರಿನ ಜನರಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಬಾಬೆಲಿನ ನೆಬೂಕದ್ನೆಚ್ಚರನು ಯೆರೂಸಲೇಮನ್ನು ಸಾ.ಶ.ಪೂ. 607ರಲ್ಲಿ ನಾಶಮಾಡಿದಾಗ, ತೂರ್‌ ಉಲ್ಲಾಸಪಡುತ್ತದೆ: “ಅಹಹ, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು [ಯೆರೂಸಲೇಮು] ಮುರಿದುಹೋಗಿದೆ, ನನ್ನ ಕಡೆಗೆ ತೆರೆದುಬಿಟ್ಟಿದೆ; ಯೆರೂಸಲೇಮು ಹಾಳಾದಕಾರಣ ನಾನು ತುಂಬಿಕೊಳ್ಳುವೆನು.” (ಯೆಹೆಜ್ಕೇಲ 26:⁠2) ಯೆರೂಸಲೇಮಿನ ನಾಶನದಿಂದ ತನಗಾಗುವ ಲಾಭವನ್ನು ನೆನಸಿಕೊಂಡು ತೂರ್‌ ಹರ್ಷಿಸುವುದು. ಇನ್ನು ಮುಂದೆ ಯೆರೂಸಲೇಮ್‌ ತನ್ನೊಂದಿಗೆ ಸ್ಪರ್ಧೆಗಿಳಿಯುವ ಸಾಧ್ಯತೆ ಇಲ್ಲದಿರುವುದರಿಂದ, ಹೆಚ್ಚಿನ ವ್ಯಾಪಾರವನ್ನು ತೂರ್‌ ನಿರೀಕ್ಷಿಸುವುದು. ದೇವಜನರ ಇಂತಹ ವೈರಿಗಳೊಂದಿಗೆ ಎದೆಯುಬ್ಬಿಸಿ ನಿಲ್ಲುವ ‘ಲೋಕಮಾನ್ಯರೆಂದು’ ಹೇಳಿಕೊಳ್ಳುವವರನ್ನು ಯೆಹೋವನು ತಿರಸ್ಕಾರಕ್ಕೆ ಒಳಪಡಿಸುವನು.

16, 17. ತೂರ್‌ ಪಟ್ಟಣವು ನಾಶವಾದಾಗ, ಅದರ ನಿವಾಸಿಗಳಿಗೆ ಏನು ಸಂಭವಿಸುವುದು? (ಪಾದಟಿಪ್ಪಣಿ ನೋಡಿರಿ.)

16 ತೂರಿನ ವಿರುದ್ಧ ಯೆಹೋವನು ನುಡಿದ ನ್ಯಾಯತೀರ್ಪನ್ನು ಯೆಶಾಯನು ಮುಂದುವರಿಸಿ ಹೇಳುವುದು: “ತಾರ್ಷೀಷ್‌ ನಗರಿಯೇ [“ತಾರ್ಷೀಷಿನ ಕುಮಾರಿಯೇ,” NW], ನೈಲ್‌ನದಿಯಂತೆ ನಿನ್ನ ದೇಶವನ್ನು ಆವರಿಸು; ನಡುಕಟ್ಟು [ಸಡಲಿತು], ಇನ್ನಿಲ್ಲ. ಯೆಹೋವನು ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕಾನಾನಿನ ದುರ್ಗಗಳನ್ನು ನಾಶಮಾಡಲು ಅದರ ವಿಷಯವಾಗಿ ಅಪ್ಪಣೆಕೊಟ್ಟಿದ್ದಾನೆ; ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್‌ ನಗರಿಯೇ [“ಚೀದೋನಿನ ಕನ್ಯಾಪುತ್ರಿಯೇ,” NW], ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿಯಿರದು ಎಂದು ಹೇಳಿದ್ದಾನೆ.”​—ಯೆಶಾಯ 23:10-12.

17 ತೂರ್‌ ಪಟ್ಟಣವು “ತಾರ್ಷೀಷಿನ ಕುಮಾರಿ”ಯೆಂದು ಏಕೆ ಕರೆಯಲ್ಪಟ್ಟಿದೆ? ಏಕೆಂದರೆ, ತೂರಿನ ಸೋಲಿನ ನಂತರ, ತಾರ್ಷೀಷ್‌ ಆ ಎರಡು ನಗರಗಳಲ್ಲಿ ಹೆಚ್ಚು ಶಕ್ತಿಶಾಲಿಯಾದ ಪಟ್ಟಣವಾಗಿ ಮೆರೆಯುವುದು. * ಧ್ವಂಸಗೊಂಡ ತೂರಿನ ನಿವಾಸಿಗಳು, ಪ್ರವಾಹದ ಕಾರಣ ಉಕ್ಕಿಹರಿಯುವ ನದಿಗೆ ಸಮಾನವಾಗಿರುವರು. ಹೇಗೆ ಅಂತಹ ನದಿಯ ದಡಗಳು ಒಡೆದು ಅಕ್ಕಪಕ್ಕದಲ್ಲೆಲ್ಲಾ ನೀರು ಹರಿಯುತ್ತದೊ, ಹಾಗೆಯೇ ತೂರಿನ ಜನರು ಎಲ್ಲೆಡೆಯೂ ಚದರಿಹೋಗುವರು. ‘ತಾರ್ಷೀಷಿನ ಕುಮಾರಿಗೆ’ ನೀಡಲ್ಪಟ್ಟ ಯೆಶಾಯನ ಸಂದೇಶವು, ತೂರಿಗೆ ಸಂಭವಿಸಲಿರುವ ಘಟನೆಗಳ ತೀವ್ರತೆಯನ್ನು ಒತ್ತಿಹೇಳುತ್ತದೆ. ಯೆಹೋವನು ತಾನೇ ಕೈಚಾಚಿ ಆಜ್ಞೆ ವಿಧಿಸುತ್ತಾನೆ. ಅದನ್ನು ಯಾರೊಬ್ಬರೂ ತಡೆಯಸಾಧ್ಯವಿಲ್ಲ.

18. ತೂರನ್ನು “ಚೀದೋನಿನ ಕನ್ಯಾಪುತ್ರಿ” ಎಂದು ಏಕೆ ಕರೆಯಲಾಗಿದೆ, ಮತ್ತು ಅದರ ಸ್ಥಿತಿ ಹೇಗೆ ಬದಲಾಗುವುದು?

18 ತೂರ್‌ ಪಟ್ಟಣವನ್ನು “ಚೀದೋನಿನ ಕನ್ಯಾಪುತ್ರಿ” ಎಂದು ಸಹ ಯೆಶಾಯನು ಹೇಳುತ್ತಾನೆ. ಅದು ಈ ಮೊದಲು ವಿದೇಶೀ ರಾಜರಿಂದ ಜಯಿಸಲ್ಪಟ್ಟು, ಲೂಟಿಗೆ ಒಳಗಾಗಿಲ್ಲ; ಮತ್ತು ಆ ಕಾರಣ ಅದು ಈಗಲೂ ಸ್ವಾತಂತ್ರ್ಯವನ್ನು ಅನುಭವಿಸುತ್ತಿದೆ ಎಂಬುದನ್ನೇ ಈ ಮೇಲಿನ ಮಾತುಗಳು ಸೂಚಿಸುತ್ತವೆ. (ಹೋಲಿಸಿ 2 ಅರಸುಗಳು 19:21; ಯೆಶಾಯ 47:1; ಯೆರೆಮೀಯ 46:11.) ಆದರೆ ಈಗ, ಅದು ನಾಶನಕ್ಕೆ ಒಳಗಾದಾಗ, ಅದರ ನಿವಾಸಿಗಳಲ್ಲಿ ಕೆಲವರು ನಿರಾಶ್ರಿತರಂತೆ ಕಿತ್ತೀಮ್‌ ವಸಾಹತ್ತಿಗೆ ಹೋಗಿ ನೆಲೆಸುವರು. ಆದರೂ, ತಮ್ಮಲ್ಲಿರುವ ಹಣಕಾಸಿನ ಕೊರತೆಯಿಂದಾಗಿ, ಅಲ್ಲಿಯೂ ಅವರಿಗೆ ನೆಮ್ಮದಿ ದೊರಕದು.

ಕಸ್ದೀಯರ ಲೂಟಿಗೆ ಅದು ಒಳಗಾಗುವುದು

19, 20. ತೂರನ್ನು ಯಾರು ಜಯಿಸುವರೆಂದು ಪ್ರವಾದಿಸಲಾಗಿದೆ, ಮತ್ತು ಆ ಪ್ರವಾದನೆಯು ಹೇಗೆ ನೆರವೇರುತ್ತದೆ?

19 ತೂರಿನ ವಿರುದ್ಧ ಯೆಹೋವನ ನ್ಯಾಯತೀರ್ಪನ್ನು ಯಾವ ರಾಜಕೀಯ ಶಕ್ತಿಯು ಜಾರಿಗೊಳಿಸುವುದು? ಯೆಶಾಯನು ಪ್ರಕಟಿಸುವುದು: “ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು; ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು; ಬುರುಜುಗಳನ್ನು ಕಟ್ಟಿಕೊಂಡು ಇದರ ಕೋಟೆಗಳನ್ನು ಕೆಡವಿ ಇದನ್ನು ನಾಶಪಡಿಸಿದರು. ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ! ನಿಮ್ಮ ಆಶ್ರಯವು ಹಾಳಾಯಿತು.” (ಯೆಶಾಯ 23:13, 14) ತೂರ್‌ ಪಟ್ಟಣವನ್ನು ಜಯಿಸುವವರು ಅಶ್ಶೂರರಲ್ಲ, ಕಸ್ದೀಯರೇ ಆಗಿದ್ದಾರೆ. ಅವರು ಬುರುಜುಗಳನ್ನು ಕಟ್ಟಿಕೊಂಡು ತೂರಿನ ಕೋಟೆಗಳನ್ನು ಕೆಡವಿ ನೆಲಸಮಮಾಡುವರು. ತಾರ್ಷೀಷಿನ ಹಡಗುಗಳ ಆಶ್ರಯಸ್ಥಾನವನ್ನು ಭಗ್ನಾವಶೇಷಗಳ ಗುಡ್ಡೆಯಾಗಿ ಮಾರ್ಪಡಿಸುವರು.

20 ಪ್ರವಾದನೆಯು ಮುಂತಿಳಿಸಿದಂತೆಯೇ, ಯೆರೂಸಲೇಮಿನ ನಾಶನದ ನಂತರ, ತೂರ್‌ ಬಾಬೆಲಿನ ವಿರುದ್ಧ ದಂಗೆಯೇಳುತ್ತದೆ ಮತ್ತು ನೆಬೂಕದ್ನೆಚ್ಚರನು ಆ ಪಟ್ಟಣಕ್ಕೆ ಮುತ್ತಿಗೆ ಹಾಕುತ್ತಾನೆ. ತನ್ನನ್ನು ಜಯಿಸಲು ಸಾಧ್ಯವೇ ಇಲ್ಲವೆಂದು ನೆನಸುವ ತೂರ್‌, ಪ್ರತಿಭಟಿಸುತ್ತದೆ. ಮುತ್ತಿಗೆಯ ಸಮಯದಲ್ಲಿ, ಬಾಬೆಲ್‌ ಸೈನಿಕರ ತಲೆಗಳು ಶಿರಸ್ತ್ರಾಣಗಳ ತಿಕ್ಕುವಿಕೆಯಿಂದ ‘ಬೋಳಾಗುತ್ತವೆ’ ಮತ್ತು ಬುರುಜುಗಳ ನಿರ್ಮಾಣಕ್ಕಾಗಿ ಸಾಮಗ್ರಿಗಳನ್ನು ಹೊತ್ತು ಹೊತ್ತು ಅವರ ಹೆಗಲುಗಳು ‘ಕಾಯಿಕಟ್ಟುತ್ತವೆ.’ (ಯೆಹೆಜ್ಕೇಲ 29:18) ಈ ಮುತ್ತಿಗೆಯಿಂದ ನೆಬೂಕದ್ನೆಚ್ಚರನು ಸಾಕಷ್ಟು ನಷ್ಟವನ್ನು ಅನುಭವಿಸುತ್ತಾನೆ. ತೂರ್‌ ಪಟ್ಟಣದ ಮುಖ್ಯಭಾಗವು ನಾಶವಾದರೂ, ಅದರ ಕೊಳ್ಳೆ ಅವನಿಗೆ ಸಿಗುವುದಿಲ್ಲ. ತೂರಿನ ಸಿರಿಸಂಪತ್ತಿನಲ್ಲಿ ಹೆಚ್ಚಿನ ಭಾಗವನ್ನು, ದಡದಿಂದ ಸುಮಾರು ಅರ್ಧ ಮೈಲು ದೂರದಲ್ಲಿರುವ ಒಂದು ಚಿಕ್ಕ ದ್ವೀಪಕ್ಕೆ ಕೊಂಡೊಯ್ಯಲಾಗುತ್ತದೆ. ನೌಕಾತಂಡವಿರದಿದ್ದ ಕಾರಣ, ಕಸ್ದೀಯ ರಾಜನಿಗೆ ಈ ಪಟ್ಟಣವನ್ನು ಜಯಿಸಲು ಸಾಧ್ಯವಾಗುವುದಿಲ್ಲ. 13 ವರ್ಷಗಳ ನಂತರ, ತೂರ್‌ ಶರಣಾಗತವಾಗುತ್ತದೆ, ಆದರೆ ಮುಂದಿನ ಪ್ರವಾದನೆಗಳ ನೆರವೇರಿಕೆಯನ್ನು ನೋಡಲು ಅದು ಬದುಕಿ ಉಳಿಯುತ್ತದೆ.

‘ಅವಳು ತನ್ನ ಆದಾಯಕ್ಕೆ ಹಿಂದಿರುಗಬೇಕು’

21. ಯಾವ ವಿಧದಲ್ಲಿ ತೂರ್‌ “ಜ್ಞಾಪಕಕ್ಕೆ ಬಾರದೇ ಇರುವುದು,” ಮತ್ತು ಎಷ್ಟು ಕಾಲದ ವರೆಗೆ?

21 ಯೆಶಾಯನು ಮುಂದೆ ಪ್ರವಾದಿಸುವುದು: “ಆ ಕಾಲದಲ್ಲಿ ತೂರ್‌ಪಟ್ಟಣವು ಒಬ್ಬ ರಾಜನ ಆಡಳಿತದ ಎಪ್ಪತ್ತು ವರುಷಗಳ ತನಕ ಜ್ಞಾಪಕಕ್ಕೆ ಬಾರದೇ ಇರುವದು.” (ಯೆಶಾಯ 23:15ಎ) ಬಾಬೆಲಿನವರು ತೂರಿನ ಮುಖ್ಯಭಾಗವನ್ನಷ್ಟೇ ನಾಶಮಾಡಿದ್ದರೂ, ಈ ದ್ವೀಪಪಟ್ಟಣವು ಯಾರ ‘ಜ್ಞಾಪಕಕ್ಕೂ ಬಾರದೇ ಇರುವದು.’ ಪ್ರವಾದನೆಯ ಮಾತಿಗನುಸಾರವೇ, ದ್ವೀಪಪಟ್ಟಣವಾದ ತೂರ್‌, “ಒಬ್ಬ ರಾಜನ” ಕಾಲದ ವರೆಗೆ, ಅಂದರೆ ಬಾಬೆಲ್‌ ಸಾಮ್ರಾಜ್ಯದ ಪತನದ ವರೆಗೆ ವ್ಯಾಪಾರದ ಕೇಂದ್ರವಾಗಿರಲಾರದು. ಯೆಹೋವನ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯಲಿರುವ ದೇಶಗಳಲ್ಲಿ ತೂರ್‌ ಸಹ ಒಂದಾಗಿದೆಯೆಂದು ಯೆರೆಮೀಯನ ಮೂಲಕ ಹೇಳಲಾಗುತ್ತದೆ. ಅವನು ಹೇಳುವುದು: “ಈ ಜನಾಂಗಗಳು ಎಪ್ಪತ್ತು ವರುಷ ಬಾಬೆಲಿನ ಅರಸನ ಅಡಿಯಾಳಾಗಿ ಬಿದ್ದಿರುವವು.” (ಯೆರೆಮೀಯ 25:​8-17, 22, 27) ಆದರೆ ತೂರ್‌ ಪಟ್ಟಣವು ಸಂಪೂರ್ಣವಾಗಿ 70 ವರ್ಷಗಳ ವರೆಗೆ ಬಾಬೆಲಿನ ಅಧೀನದಲ್ಲಿರುವುದಿಲ್ಲ, ಏಕೆಂದರೆ ಸಾ.ಶ.ಪೂ. 539ರಲ್ಲಿ ಬಾಬೆಲ್‌ ಸಾಮ್ರಾಜ್ಯವು ಬಿದ್ದುಹೋಗುತ್ತದೆ. ಆದರೆ ಈ 70 ವರ್ಷಗಳ ಕಾಲವು, ಬಾಬೆಲಿನ ಅತ್ಯುನ್ನತ ಪ್ರಭುತ್ವದ ಅವಧಿಯನ್ನು ಮಾತ್ರ ಸೂಚಿಸುತ್ತದೆ. ಆ ಸಮಯದಲ್ಲಿ, ಬಾಬೆಲಿನ ರಾಜವಂಶವು ತನ್ನ ಸಿಂಹಾಸನವನ್ನು “ದೇವರ ನಕ್ಷತ್ರಗಳಿಗಿಂತ” ಎತ್ತರಕ್ಕೆ ಏರಿಸಿರುವುದಾಗಿ ಜಂಬಕೊಚ್ಚಿಕೊಳ್ಳುತ್ತದೆ. (ಯೆಶಾಯ 14:13) ಆ ಪ್ರಭುತ್ವಕ್ಕೆ, ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಸಮಯಗಳಲ್ಲಿ ಅಧೀನವಾಗುತ್ತವೆ. ಆದರೆ 70 ವರ್ಷಗಳ ಅಂತ್ಯದಲ್ಲಿ, ಆ ಪ್ರಭುತ್ವವು ನೆಲಕಚ್ಚುವುದು. ಆಗ ತೂರಿಗೆ ಏನು ಸಂಭವಿಸುವುದು?

22, 23. ಬಾಬೆಲಿನ ಅಧಿಕಾರದಿಂದ ಹೊರ ಬಂದ ನಂತರ, ತೂರಿಗೆ ಏನು ಸಂಭವಿಸುವುದು?

22 ಯೆಶಾಯನು ಮುಂದುವರಿಸುವುದು: “ಎಪ್ಪತ್ತು ವರುಷದ ಮೇಲೆ ಸೂಳೆಯ ವಿಷಯವಾದ ಗೀತದಂತಾಗುವದು. ಅದೇನಂದರೆ ಎಲ್ಲರೂ ಮರೆತ ಸೂಳೆಯೇ, ಕಿನ್ನರಿಯನ್ನು ತೆಗೆದುಕೊಂಡು ಊರಲ್ಲಿ ಅಲೆಯುತ್ತಾ ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ ಬಹು ಗೀತಗಳನ್ನು ಹಾಡು ಎಂಬದೇ. ಎಪ್ಪತ್ತು ವರುಷಗಳ ಮೇಲೆ ಯೆಹೋವನು ತೂರ್‌ ಎಂಬವಳಿಗೆ ನೇಮಿಸಲು ಅವಳು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಮಂಡಲದಲ್ಲಿ ಲೋಕದ ಸಕಲ ರಾಜ್ಯಗಳೊಂದಿಗೆ ಕಲೆಯುವಳು.”​—ಯೆಶಾಯ 23:15ಬಿ-17.

23 ಬಾಬೆಲು ಸಾ.ಶ.ಪೂ. 539ರಲ್ಲಿ ಪತನವಾದ ಬಳಿಕ, ಫಿನೀಷಿಯ ಮೇದ್ಯಯಪಾರಸಿಯ ಸಾಮ್ರಾಜ್ಯಕ್ಕೆ ಅಧೀನವಾಗುತ್ತದೆ. ಪಾರಸಿಯ ಚಕ್ರವರ್ತಿಯಾದ ಮಹಾ ಕೋರೆಷನು ವಿಶಾಲಮನೋಭಾವದ ಅರಸನು. ಅವನ ಆಳ್ವಿಕೆಯ ಕೆಳಗೆ, ತೂರ್‌ ತನ್ನ ಕಾರ್ಯಕಲಾಪಗಳನ್ನು ಮತ್ತೆ ಆರಂಭಿಸಿ, ಲೋಕದ ವಾಣಿಜ್ಯ ಕೇಂದ್ರವಾಗಿ ಪುನಃ ಮನ್ನಣೆಯನ್ನು ಪಡೆದುಕೊಳ್ಳಲು ಪ್ರಯಾಸಪಡುವುದು. ಇದು, ಹೇಗೆ ತನ್ನ ಗಿರಾಕಿಗಳನ್ನು ಕಳೆದುಕೊಂಡಿರುವ ಸೂಳೆಯು, ಊರಲ್ಲಿ ಅಲೆಯುತ್ತಾ ಹೊಸ ಗಿರಾಕಿಗಳನ್ನು ಆಕರ್ಷಿಸಲು ಕಿನ್ನರಿ ನುಡಿಸುತ್ತಾ ಬಹು ಗೀತೆಗಳನ್ನು ಹಾಡುವಳೊ, ಅದಕ್ಕೆ ಸಮನಾಗಿರುವುದು. ಇದರಲ್ಲಿ ತೂರ್‌ ಸಫಲವಾಗುವುದೊ? ಖಂಡಿತವಾಗಿಯೂ. ಏಕೆಂದರೆ ಸ್ವತಃ ಯೆಹೋವನೇ ಅದಕ್ಕೆ ಸಾಫಲ್ಯವನ್ನು ದಯಪಾಲಿಸುವನು. ಸಕಾಲದಲ್ಲಿ, ಈ ದ್ವೀಪಪಟ್ಟಣವು ಎಷ್ಟು ಸಂಪದ್ಭರಿತವಾಗುವುದೆಂದರೆ, ಸಾ.ಶ.ಪೂ. ಆರನೆಯ ಶತಮಾನದ ಅಂತ್ಯದೊಳಗೆ, ಪ್ರವಾದಿಯಾದ ಜೆಕರ್ಯನು ಹೀಗೆ ಹೇಳುವನು: “ತೂರ್‌ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ದೂಳಿನಂತೆಯೂ ಬಂಗಾರವನ್ನು ಬೀದಿಯ ಬದಿಯಂತೆಯೂ ರಾಶಿರಾಶಿ ಮಾಡಿಕೊಂಡಿದೆ.”​—⁠ಜೆಕರ್ಯ 9:⁠3.

‘ಅವಳ ಆದಾಯವು ಯೆಹೋವನಿಗೇ ಮೀಸಲಾಗುವದು’

24, 25. (ಎ) ತೂರಿನ ಲಾಭವು ಯೆಹೋವನಿಗೆ ಪವಿತ್ರವಾದದ್ದಾಗುತ್ತದೆ ಹೇಗೆ? (ಬಿ) ತೂರ್‌ ದೇವಜನರಿಗೆ ಸಹಾಯಮಾಡಿದರೂ, ಅದರ ವಿರುದ್ಧ ಯಾವ ಪ್ರವಾದನೆಯನ್ನು ಯೆಹೋವನು ಪ್ರೇರೇಪಿಸುತ್ತಾನೆ?

24 ಈ ಮುಂದಿನ ಪ್ರವಾದನ ಮಾತುಗಳು ಎಷ್ಟು ಗಮನಾರ್ಹವಾಗಿವೆ! “ಅವಳ ವ್ಯಾಪಾರವೂ ಆದಾಯವೂ ಅವಳಿಗೆ ನಿಧಿನಿಕ್ಷೇಪವಾಗದೆ ಯೆಹೋವನಿಗೇ ಮೀಸಲಾಗುವದು [“ಪವಿತ್ರವಾದದ್ದು,” NW]; ಆ ವ್ಯಾಪಾರವು ಯೆಹೋವನ ಸನ್ನಿಧಾನದಲ್ಲಿ ವಾಸಿಸುವವರಿಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲಿಸುವದು.” (ಯೆಶಾಯ 23:18) ತೂರಿಗೆ ಸಿಗುವ ಆರ್ಥಿಕ ಲಾಭವು ಹೇಗೆ ಪವಿತ್ರವಾದದ್ದಾಗುತ್ತದೆ? ಅದು ಯೆಹೋವನ ಚಿತ್ತಕ್ಕನುಸಾರ, ಅಂದರೆ ತನ್ನ ಜನರ ಹೊಟ್ಟೆಬಟ್ಟೆಗಳಿಗಾಗಿ ಉಪಯೋಗಿಸಲ್ಪಡುವಂತೆ ದೇವರು ಉಪಾಯಮಾಡುತ್ತಾನೆ. ಇಸ್ರಾಯೇಲ್ಯರು ಬಾಬೆಲಿನ ಸೆರೆವಾಸದಿಂದ ಹಿಂದಿರುಗುವ ಸಮಯದಲ್ಲಿ ಇದು ಸಂಭವಿಸುತ್ತದೆ. ದೇವಾಲಯವನ್ನು ಪುನಃ ಕಟ್ಟಲು ತೂರಿನ ಜನರು ಇಸ್ರಾಯೇಲ್ಯರಿಗೆ ದೇವದಾರು ಮರಗಳನ್ನು ಸರಬರಾಯಿ ಮಾಡುತ್ತಾರೆ. ಅವರು ಯೆರೂಸಲೇಮ್‌ ಪಟ್ಟಣದೊಂದಿಗೆ ವ್ಯಾಪಾರವನ್ನು ಪುನಃ ಆರಂಭಿಸುತ್ತಾರೆ.​—⁠ಎಜ್ರ 3:7; ನೆಹೆಮೀಯ 13:⁠16.

25 ಆದರೂ, ಯೆಹೋವನು ತೂರಿನ ವಿರುದ್ಧ ಮತ್ತೊಂದು ದೈವೋಕ್ತಿಯನ್ನು ನುಡಿಯುತ್ತಾನೆ. ಈ ಶ್ರೀಮಂತ ದ್ವೀಪಪಟ್ಟಣದ ಕುರಿತು ಜೆಕರ್ಯನು ಪ್ರವಾದಿಸುವುದು: “ಆಹಾ, ಕರ್ತನು ಅದರ ಆಸ್ತಿಯನ್ನು ಆಕ್ರಮಿಸಿ ಪೌಳಿಗೋಡೆಯನ್ನು ಸಮುದ್ರದೊಳಕ್ಕೆ ಹೊಡೆದು ಹಾಕುವನು; ಪಟ್ಟಣವು ಬೆಂಕಿಗೆ ತುತ್ತಾಗುವದು.” (ಜೆಕರ್ಯ 9:4) ಸಾ.ಶ.ಪೂ. 332ರ ಜುಲೈ ತಿಂಗಳಿನಲ್ಲಿ ಮಹಾ ಅಲೆಕ್ಸಾಂಡರನು, ಸಮುದ್ರದ ಈ ಅಹಂಕಾರಿ ಒಡತಿಯನ್ನು ಧ್ವಂಸಮಾಡಿದಾಗ, ಯೆಹೋವನ ಮಾತು ನೆರವೇರಿತು.

ಪ್ರಾಪಂಚಿಕತೆ ಹಾಗೂ ಅಹಂಕಾರದಿಂದ ದೂರವಿರಿ

26. ಯಾವ ಕಾರಣಕ್ಕಾಗಿ ದೇವರು ತೂರನ್ನು ಖಂಡಿಸಿದನು?

26 ಯೆಹೋವನು ತೂರ್‌ ಪಟ್ಟಣವನ್ನು ಖಂಡಿಸಿದ್ದು ಅದರ ಅಹಂಕಾರಕ್ಕಾಗಿಯೇ. ಈ ಗುಣಲಕ್ಷಣವನ್ನು ಆತನು ಹಗೆಮಾಡುತ್ತಾನೆ. ಯೆಹೋವನು ದ್ವೇಷಿಸುವ ಏಳು ವಿಷಯಗಳಲ್ಲಿ “ಹೆಮ್ಮೆಯ ಕಣ್ಣು” ಮೊದಲ ಸ್ಥಾನವನ್ನು ವಹಿಸಿಕೊಳ್ಳುತ್ತದೆ. (ಜ್ಞಾನೋಕ್ತಿ 6:​16-19) ಪೌಲನು ಅಹಂಕಾರವೆಂಬ ಗುಣವನ್ನು ಪಿಶಾಚನಾದ ಸೈತಾನನೊಂದಿಗೆ ಸಂಬಂಧಿಸುತ್ತಾನೆ. ಮತ್ತು ಯೆಹೆಜ್ಕೇಲನು ಗರ್ವಿಷ್ಠ ತೂರ್‌ ಪಟ್ಟಣದ ವಿವರಣೆಯನ್ನು ನೀಡಿದಾಗ, ಅದರಲ್ಲಿ ಸೈತಾನನಿಗೆ ಸಂಬಂಧಿಸಿದ ಸ್ವಭಾವಗಳೇ ಇವೆ. (ಯೆಹೆಜ್ಕೇಲ 28:​13-15; 1 ತಿಮೊಥೆಯ 3:⁠6) ತೂರ್‌ ಸೊಕ್ಕಿನಿಂದ ಮೆರೆದದ್ದು ಏಕೆ? ತೂರನ್ನು ಸಂಬೋಧಿಸುತ್ತಾ, ಯೆಹೆಜ್ಕೇಲನು ಹೇಳುವುದು: “ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಕೊಂಡಿದೆ.” (ಯೆಹೆಜ್ಕೇಲ 28:⁠5) ವ್ಯಾಪಾರ ಮತ್ತು ಹಣ ಶೇಖರಣೆಯ ಕೆಲಸದಲ್ಲೇ ಈ ಪಟ್ಟಣವು ಮುಳುಗಿಹೋಗಿತ್ತು. ಈ ಕೆಲಸದಲ್ಲಿ ತೂರ್‌ ಸಾಫಲ್ಯವನ್ನು ಕಂಡ ಕಾರಣ, ಅದರ ಗರ್ವ ಮಿತಿಮೀರಿತ್ತು. ಯೆಹೆಜ್ಕೇಲನ ಮುಖಾಂತರ, ಯೆಹೋವನು “ತೂರಿನ ಪ್ರಭುವಿಗೆ” ಹೇಳಿದ್ದು: “ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನು ದೇವರು, . . . ದೇವರ ಆಸನವನ್ನೇ ಹತ್ತಿದ್ದೇನೆ ಅಂದುಕೊಂಡಿಯಷ್ಟೆ.”​—⁠ಯೆಹೆಜ್ಕೇಲ 28:⁠2.

27, 28. ಯಾವ ಪಾಶದೊಳಗೆ ಮನುಷ್ಯರು ಬೀಳಬಲ್ಲರು, ಮತ್ತು ಯೇಸು ಇದನ್ನು ಹೇಗೆ ದೃಷ್ಟಾಂತಿಸಿದನು?

27 ರಾಷ್ಟ್ರಗಳು ಮತ್ತು ವ್ಯಕ್ತಿಗಳು, ಅಹಂಕಾರಕ್ಕೆ ಮತ್ತು ಸಿರಿಸಂಪತ್ತಿನ ತಪ್ಪಾದ ಅಭಿಪ್ರಾಯಕ್ಕೆ ವಶವಾಗಬಹುದು. ಈ ಪಾಶವು ಎಷ್ಟು ನವಿರಾಗಿರಬಹುದು ಎಂಬುದನ್ನು ತೋರಿಸಲು ಯೇಸು ಒಂದು ಸಾಮ್ಯವನ್ನು ಹೇಳಿದನು. ಅವನೊಬ್ಬ ಧನಿಕನ ವಿಷಯವಾಗಿ ತಿಳಿಸಿದನು. ಈ ಧನಿಕನ ಹೊಲಗದ್ದೆಗಳು ಹೇರಳವಾಗಿ ಫಲಿಸಿದವು. ಇದರಿಂದ ಸಂತೋಷಗೊಂಡ ಮನುಷ್ಯನು, ತನ್ನ ಧಾನ್ಯಗಳನ್ನು ಶೇಖರಿಸಿಡಲು ದೊಡ್ಡ ದೊಡ್ಡ ಕಣಜಗಳನ್ನು ಕಟ್ಟಿಸಿ, ಮುಂದೆ ನೆಮ್ಮದಿಯಿಂದ ಕಾಲಕಳೆಯಲು ಯೋಜಿಸಿದನು. ಆದರೆ ಎಲ್ಲವೂ ಅವನು ಯೋಜಿಸಿದಂತೆಯೇ ನಡೆಯಲಿಲ್ಲ. ದೇವರು ಅವನಿಗೆ ಹೇಳಿದ್ದು: “ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು”? ಹೌದು, ಆ ಮನುಷ್ಯನು ಸತ್ತುಹೋದನು, ಅವನಿಗೆ ತನ್ನ ಸಿರಿಸಂಪತ್ತಿನಿಂದ ಯಾವ ಲಾಭವೂ ಸಿಗಲಿಲ್ಲ.​—⁠ಲೂಕ 12:​16-20.

28 ಸಾಮ್ಯವನ್ನು ಕೊನೆಗೊಳಿಸುತ್ತಾ ಯೇಸು ಹೇಳಿದ್ದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.” (ಲೂಕ 12:21) ಶ್ರೀಮಂತರಾಗಿರುವುದು ತಪ್ಪಲ್ಲ ಮತ್ತು ಒಳ್ಳೆಯ ಕೊಯ್ಲನ್ನು ಪಡೆಯುವುದು ಸಹ ಪಾಪವಲ್ಲ. ಆದರೆ ಈ ವಿಷಯಗಳನ್ನೇ ತನ್ನ ಜೀವನದ ಮುಖ್ಯ ವಿಷಯಗಳಾಗಿ ಮಾಡಿಕೊಂಡದ್ದು, ಆ ಮನುಷ್ಯನ ದೊಡ್ಡ ತಪ್ಪಾಗಿತ್ತು. ಅವನು ತನ್ನ ಸಿರಿಸಂಪತ್ತಿನಲ್ಲಿ ಪೂರ್ಣ ಭರವಸೆಯಿಟ್ಟಿದ್ದನು. ಭವಿಷ್ಯದ ಕುರಿತು ಯೋಜನೆಗಳನ್ನು ಮಾಡುವಾಗ, ಅವನು ಯೆಹೋವ ದೇವರನ್ನು ಪರಿಗಣಿಸಲಿಲ್ಲ.

29, 30. ಆತ್ಮಾವಲಂಬನೆಯ ಬಗ್ಗೆ ಯಾಕೋಬನು ಯಾವ ಎಚ್ಚರಿಕೆಯನ್ನು ನೀಡಿದನು?

29 ಇದೇ ವಿಷಯವನ್ನು ಯಾಕೋಬನು ಮತ್ತಷ್ಟು ಪ್ರಬಲವಾಗಿ ಹೇಳುತ್ತಾನೆ. “ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ. ಆದದರಿಂದ ನೀವು ಅಂಥ ಮಾತನ್ನು ಬಿಟ್ಟು ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು.” (ಯಾಕೋಬ 4:13-15) ಸಿರಿಸಂಪತ್ತು ಮತ್ತು ಅಹಂಕಾರದ ಮಧ್ಯೆಯಿರುವ ಸಂಬಂಧವನ್ನು ತೋರಿಸುತ್ತಾ, ಯಾಕೋಬನು ಮುಂದುವರಿಸಿ ಹೇಳುವುದು: “ನೀವು ಅಹಂಭಾವದಿಂದ ಹೊಗಳಿಕೊಳ್ಳುತ್ತೀರಿ. ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ.”​—⁠ಯಾಕೋಬ 4:⁠16.

30 ವ್ಯಾಪಾರದಲ್ಲಿ ತೊಡಗುವುದು ಪಾಪವಲ್ಲ. ಆದರೆ ಸಿರಿಸಂಪತ್ತಿನಿಂದ ಬರಬಹುದಾದ ಅಹಂಕಾರ, ಸೊಕ್ಕು ಮತ್ತು ಆತ್ಮಭರವಸೆಯು ಪಾಪವಾಗಿದೆ. ಆದುದರಿಂದಲೇ, ಪುರಾತನ ಜ್ಞಾನೋಕ್ತಿಯು ಹೇಳಿದ್ದು: ನನಗೆ “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡ”ಬೇಡ. ಬಡತನವು ತೀವ್ರ ವೇದನೆಯನ್ನು ಉಂಟುಮಾಡಬಲ್ಲದು. ಆದರೆ ಐಶ್ವರ್ಯದ ಕಾರಣ, ‘ಯೆಹೋವನು ಯಾರೋ ಎಂದು . . . ತಿರಸ್ಕಾರದ’ ಮನೋಭಾವವನ್ನು ಒಬ್ಬ ವ್ಯಕ್ತಿಯು ತಾಳಬಹುದು.​—⁠ಜ್ಞಾನೋಕ್ತಿ 30:​8, 9.

31. ಯಾವ ಪ್ರಶ್ನೆಯನ್ನು ಒಬ್ಬ ಕ್ರೈಸ್ತನು ಸ್ವತಃ ಕೇಳಿಕೊಳ್ಳುವುದು ಒಳ್ಳೆಯದು?

31 ಲೋಭ ಮತ್ತು ಸ್ವಾರ್ಥಕ್ಕೆ ಅನೇಕರು ಬಲಿಬಿದ್ದಿರುವಂತಹ ಒಂದು ಲೋಕದಲ್ಲಿ ನಾವು ಜೀವಿಸುತ್ತೇವೆ. ಇಂದಿನ ವಾಣಿಜ್ಯ ಪರಿಸ್ಥಿತಿಯಲ್ಲಿ, ಸಿರಿಸಂಪತ್ತಿನ ಮೇಲೆ ಬಹಳಷ್ಟು ಒತ್ತನ್ನು ನೀಡಲಾಗಿದೆ. ವಾಣಿಜ್ಯ ಕೇಂದ್ರವಾಗಿದ್ದ ತೂರ್‌ ಪಟ್ಟಣವು ಯಾವ ಬಲೆಗೆ ಬಿತ್ತೊ ಅದೇ ಬಲೆಗೆ ತಾನೂ ಬೀಳದಂತೆ ಒಬ್ಬ ಕ್ರೈಸ್ತನು ಸ್ವಪರೀಕ್ಷೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಅವನು ಧನದ ದಾಸನಾಗಿರುತ್ತಾ, ಪ್ರಾಪಂಚಿಕ ವಿಷಯಗಳನ್ನು ಶೇಖರಿಸುವುದರಲ್ಲಿ ಬಹಳಷ್ಟು ಸಮಯ ಹಾಗೂ ಶಕ್ತಿಯನ್ನು ವ್ಯಯಿಸುತ್ತಾನೊ? (ಮತ್ತಾಯ 6:24) ತನಗಿಂತಲೂ ಹೆಚ್ಚಿನ ಇಲ್ಲವೆ ಉತ್ತಮವಾದ ಸ್ವತ್ತುಗಳಿರುವವರನ್ನು ಕಂಡು ಅವನಿಗೆ ಮತ್ಸರವಾಗುತ್ತದೊ? (ಗಲಾತ್ಯ 5:26) ಅವನು ಶ್ರೀಮಂತನಾಗಿದ್ದರೆ, ಇತರರಿಗಿಂತಲೂ ಹೆಚ್ಚಿನ ಗಮನವನ್ನು ಇಲ್ಲವೆ ಸುಯೋಗಗಳನ್ನು ತಾನು ಪಡೆದುಕೊಳ್ಳಲು ಅರ್ಹನಾಗಿದ್ದೇನೆಂದು ಅವನು ಹೆಮ್ಮೆಯಿಂದ ನೆನಸುತ್ತಾನೊ? (ಹೋಲಿಸಿ ಯಾಕೋಬ 2:⁠1-9.) ಅವನು ಶ್ರೀಮಂತನಾಗಿರದಿದ್ದರೆ, ಏನೇ ಆಗಲಿ ತಾನು ‘ಐಶ್ವರ್ಯವಂತನಾಗಬೇಕೆಂದು ಮನಸ್ಸು’ಮಾಡುತ್ತಾನೊ? (1 ತಿಮೊಥೆಯ 6:⁠9) ದೇವರ ಸೇವೆಗೆ ಒಂದಿಷ್ಟು ಸಮಯವನ್ನು ಮಾತ್ರ ಬದಿಗಿಡುವಷ್ಟು ಅವನು ವ್ಯಾಪಾರ ವಿಷಯಗಳಲ್ಲಿ ತಲ್ಲೀನನಾಗಿದ್ದಾನೊ? (2 ತಿಮೊಥೆಯ 2:⁠4) ತನ್ನ ವ್ಯಾಪಾರ ಚಟುವಟಿಕೆಗಳಲ್ಲಿ ಕ್ರೈಸ್ತ ತತ್ವಗಳನ್ನು ಕಡೆಗಣಿಸುವಷ್ಟು ಅವನು ಸಿರಿಸಂಪತ್ತಿನ ಶೇಖರಣೆಯಲ್ಲಿ ಮುಳುಗಿಹೋಗಿದ್ದಾನೊ?​—⁠1 ತಿಮೊಥೆಯ 6:⁠10.

32. ಯಾವ ಎಚ್ಚರಿಕೆಯನ್ನು ಯೋಹಾನನು ನೀಡಿದನು, ಮತ್ತು ನಾವು ಅದನ್ನು ಹೇಗೆ ಅನ್ವಯಿಸಬಲ್ಲೆವು?

32 ನಮ್ಮ ಆರ್ಥಿಕ ಸ್ಥಿತಿಯು ಏನೇ ಆಗಿರಲಿ, ನಮ್ಮ ಜೀವಿತಗಳಲ್ಲಿ ರಾಜ್ಯಕ್ಕೆ ಯಾವಾಗಲೂ ಪ್ರಥಮ ಸ್ಥಾನವಿರಬೇಕು. ಅಪೊಸ್ತಲ ಯೋಹಾನನ ಮಾತುಗಳನ್ನು ನಾವೆಂದಿಗೂ ಕಡೆಗಣಿಸಬಾರದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ.” (1 ಯೋಹಾನ 2:15) ನಿಜ, ಬದುಕಿ ಉಳಿಯಲು ನಾವು ಈ ಲೋಕದ ಆರ್ಥಿಕ ವ್ಯವಸ್ಥೆಗಳನ್ನು ಉಪಯೋಗಿಸಬೇಕಾಗುತ್ತದೆ. (2 ಥೆಸಲೊನೀಕ 3:10) ಆದಕಾರಣ, ನಾವು ‘ಲೋಕವನ್ನು ಅನುಭೋಗಿಸುತ್ತೇವೆ’ ಆದರೆ “ಪರಿಪೂರ್ಣವಾಗಿ” ಅಲ್ಲ. (1 ಕೊರಿಂಥ 7:31) ನಮಗೆ ಈ ಲೋಕದ ವಿಷಯಗಳಾದ ಪ್ರಾಪಂಚಿಕ ವಸ್ತುಗಳ ಮೇಲೆ ಅತ್ಯಧಿಕ ಮೋಹವಿರುವುದಾದರೆ, ನಾವು ಇನ್ನು ಮುಂದೆ ಯೆಹೋವನನ್ನು ಪ್ರೀತಿಸುವವರಾಗಿರುವುದಿಲ್ಲ. “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ” ಈ ಮುಂತಾದವುಗಳನ್ನು ಬೆನ್ನಟ್ಟುವುದು ದೇವರ ಚಿತ್ತವನ್ನು ಮಾಡುವುದರೊಂದಿಗೆ ಸುಸಂಗತವಾಗಿರುವುದಿಲ್ಲ. * ದೇವರ ಚಿತ್ತವನ್ನು ಮಾಡುವುದರಿಂದಲೇ ಒಬ್ಬನು ನಿತ್ಯಜೀವವನ್ನು ಪಡೆಯಬಲ್ಲನು.​—⁠1 ಯೋಹಾನ 2:​16, 17.

33. ಯಾವ ಪಾಶಕ್ಕೆ ತೂರ್‌ ಒಳಗಾಯಿತೊ ಅದರಿಂದ ಕ್ರೈಸ್ತರು ಹೇಗೆ ದೂರವಿರಬಲ್ಲರು?

33 ಪ್ರಾಪಂಚಿಕ ವಸ್ತುಗಳ ಬೆನ್ನಟ್ಟುವಿಕೆಗೆ ಪ್ರಥಮ ಸ್ಥಾನಕೊಡುವುದು, ತೂರ್‌ ಪಟ್ಟಣಕ್ಕೆ ಒಂದು ಪಾಶವಾಗಿ ಪರಿಣಮಿಸಿತು. ಅದು ಪ್ರಾಪಂಚಿಕ ಅರ್ಥದಲ್ಲಿ ಸಾಫಲ್ಯವನ್ನು ಕಂಡು, ಬಹಳ ಹೆಮ್ಮೆಪಟ್ಟುಕೊಂಡಿತಾದರೂ, ನಂತರ ತಕ್ಕ ಶಿಕ್ಷೆಯನ್ನು ಅನುಭವಿಸಿತು. ಅದರ ಉದಾಹರಣೆಯು, ಇಂದಿನ ರಾಷ್ಟ್ರಗಳಿಗೆ ಮತ್ತು ವ್ಯಕ್ತಿಗಳಿಗೆ ಒಂದು ಎಚ್ಚರಿಕೆಯಾಗಿದೆ. ಅಪೊಸ್ತಲ ಪೌಲನ ಬುದ್ಧಿವಾದವನ್ನು ಅನುಸರಿಸುವುದು ಎಷ್ಟೊಂದು ಉತ್ತಮವಾಗಿರುವುದು! ಕ್ರೈಸ್ತರು “ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ” ಅವನು ಪ್ರೇರೇಪಿಸುತ್ತಾನೆ.​—⁠1 ತಿಮೊಥೆಯ 6:​17.

[ಪಾದಟಿಪ್ಪಣಿಗಳು]

^ ಪ್ಯಾರ. 3 ಭೂಮಧ್ಯ ಸಮುದ್ರದ ಪಶ್ಚಿಮದಲ್ಲಿರುವ ಸಾರ್ಡಿನಿಯ ಮತ್ತು ತಾರ್ಷೀಷ್‌ ಒಂದೇ ಆಗಿವೆಯೆಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಸಾರ್ಡಿನಿಯ ಕೂಡ ತೂರ್‌ ಪಟ್ಟಣದಿಂದ ದೂರವಿತ್ತು.

^ ಪ್ಯಾರ. 9 ಈ ಪುಸ್ತಕದ 201-207ನೆಯ ಪುಟಗಳಲ್ಲಿರುವ 15ನೆಯ ಅಧ್ಯಾಯವನ್ನು ನೋಡಿರಿ.

^ ಪ್ಯಾರ. 17 ‘ತಾರ್ಷೀಷಿನ ಕುಮಾರಿ’ ಎಂಬ ಅಭಿವ್ಯಕ್ತಿಯು, ತಾರ್ಷೀಷಿನ ನಿವಾಸಿಗಳನ್ನೂ ಸೂಚಿಸಬಹುದು. ಒಂದು ಆಧಾರಗ್ರಂಥವು ಹೇಳುವುದು: “ಹೇಗೆ ನೈಲ್‌ ನದಿಯು ಮುಕ್ತವಾಗಿ ಎಲ್ಲ ದಿಕ್ಕುಗಳಲ್ಲಿ ಹರಿಯುತ್ತದೊ, ಹಾಗೆಯೇ ತಾರ್ಷೀಷಿನ ಜನರು ಈಗ ಮುಕ್ತವಾಗಿ ಎಲ್ಲೆಡೆಯೂ ಸಂಚರಿಸಬಹುದು ಮತ್ತು ವ್ಯಾಪಾರಮಾಡಬಹುದು.” ಆದರೂ, ತೂರಿನ ಪತನದಿಂದ ಉಂಟಾಗುವ ವ್ಯಾಪಕವಾದ ಪರಿಣಾಮಗಳ ಮೇಲೆಯೇ ಹೆಚ್ಚಿನ ಒತ್ತು ನೀಡಲಾಗಿದೆ.

^ ಪ್ಯಾರ. 32 ಅಲಸೊನೀಯ ಎಂಬ ಗ್ರೀಕ್‌ ಪದವನ್ನು ಇಂಗ್ಲಿಷಿನಲ್ಲಿ “ಶೋಯಿ ಡಿಸ್‌ಪ್ಲೇ” ಎಂಬುದಾಗಿ ಭಾಷಾಂತರಿಸಲಾಗಿದೆ. ಕನ್ನಡದಲ್ಲಿ ಇದನ್ನು “ಬದುಕುಬಾಳಿನ ಡಂಬ” ಎಂಬುದಾಗಿ ತರ್ಜುಮೆಮಾಡಲಾಗಿದೆ. ಇದರ ಅರ್ಥ, “ಭೂ ವಿಷಯಗಳ ಸ್ಥಿರತೆಯಲ್ಲಿ ಭರವಸೆಯಿಡುವ ಅಧಾರ್ಮಿಕ ಹಾಗೂ ಟೊಳ್ಳಾದ ಆತ್ಮವಿಶ್ವಾಸ” ಎಂದಾಗಿದೆ.​—⁠ದ ನ್ಯೂ ಥೇಯರ್ಸ್‌ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌.

[ಅಧ್ಯಯನ ಪ್ರಶ್ನೆಗಳು]

[ಪುಟ 256ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೂರೋಪ್‌

ಸ್ಪೇನ್‌ (ತಾರ್ಷೀಷ್‌ ಇದ್ದಿರಬಹುದಾದ ನಿವೇಶನ)

ಭೂಮಧ್ಯ ಸಮುದ್ರ

ಸಾರ್ಡಿನಿಯ

ಸೈಪ್ರಸ್‌

ಏಷಿಯ

ಚೀದೋನ್‌

ತೂರ್‌

ಆಫ್ರಿಕ

ಐಗುಪ್ತ

[ಪುಟ 250ರಲ್ಲಿರುವ ಚಿತ್ರ]

ತೂರ್‌ ಅಶ್ಶೂರಕ್ಕಲ್ಲ, ಬಾಬೆಲಿಗೆ ಅಧೀನವಾಗುವುದು

[ಪುಟ 256ರಲ್ಲಿರುವ ಚಿತ್ರ]

ತೂರಿನ ಪ್ರಧಾನ ದೇವತೆಯಾದ ಮೆಲ್‌ಕಾರ್ಟ್‌ ಅನ್ನು ಚಿತ್ರಿಸುವ ನಾಣ್ಯ

[ಪುಟ 256ರಲ್ಲಿರುವ ಚಿತ್ರ]

ಫಿನೀಷಿಯ ಹಡಗಿನ ಮಾದರಿ