ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ‘ಅಪರೂಪವಾದ ಕೆಲಸವನ್ನು’ ಯೆಶಾಯನು ಮುಂತಿಳಿಸುತ್ತಾನೆ

ಯೆಹೋವನ ‘ಅಪರೂಪವಾದ ಕೆಲಸವನ್ನು’ ಯೆಶಾಯನು ಮುಂತಿಳಿಸುತ್ತಾನೆ

ಅಧ್ಯಾಯ ಇಪ್ಪತ್ತೆರಡು

ಯೆಹೋವನ ‘ಅಪರೂಪವಾದ ಕೆಲಸವನ್ನು’ ಯೆಶಾಯನು ಮುಂತಿಳಿಸುತ್ತಾನೆ

ಯೆಶಾಯ 28:​1-29:⁠24

1, 2. ಇಸ್ರಾಯೇಲ್‌ ಮತ್ತು ಯೆಹೂದಕ್ಕೆ ತಾವು ಸುರಕ್ಷಿತರಾಗಿದ್ದೇವೆಂಬ ಭಾವನೆ ಇರುವುದು ಏಕೆ?

ಭದ್ರತೆಯ ಅನಿಸಿಕೆಯನ್ನು ಇಸ್ರಾಯೇಲ್‌ ಮತ್ತು ಯೆಹೂದವು ಕ್ಷಣಮಾತ್ರಕ್ಕಷ್ಟೆ ಅನುಭವಿಸುತ್ತವೆ. ಅಪಾಯಕರವಾದ ಲೋಕದಲ್ಲಿ ಸುಭದ್ರರಾಗಿರಲು, ಅವರ ಮುಖಂಡರು ತಮಗಿಂತಲೂ ದೊಡ್ಡದಾದ, ಹೆಚ್ಚು ಬಲಶಾಲಿಗಳಾದ ಜನಾಂಗಗಳೊಂದಿಗೆ ರಾಜಕೀಯ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ಇಸ್ರಾಯೇಲಿನ ರಾಜಧಾನಿ ಪಟ್ಟಣವಾದ ಸಮಾರ್ಯವು ಸಹಾಯಕ್ಕಾಗಿ ನೆರೆಯ ರಾಜ್ಯ ಅರಾಮ್ಯಕ್ಕೆ ತಿರುಗಿದಾಗ, ಯೆಹೂದದ ರಾಜಧಾನಿ ಯೆರೂಸಲೇಮು ನಿರ್ದಯರಾದ ಅಶ್ಶೂರರ ಮೇಲೆ ತನ್ನ ನಿರೀಕ್ಷೆಯನ್ನಿಟ್ಟಿತು.

2 ಆ ಉತ್ತರ ರಾಜ್ಯದ ಕೆಲವರು, ಹೊಸ ರಾಜಕೀಯ ಮಿತ್ರರಲ್ಲಿ ಭರವಸೆಯಿಟ್ಟಿರುವುದರ ಜೊತೆಗೆ ಬಂಗಾರದ ಬಸವನ ಆರಾಧನೆ ಮಾಡುತ್ತಿದ್ದರೂ, ತಮ್ಮನ್ನು ಯೆಹೋವನು ರಕ್ಷಿಸುವನೆಂದು ನೆನಸುತ್ತಿರಬಹುದು. ಅಂತೆಯೇ, ಯೆಹೋವನು ಖಂಡಿತವಾಗಿಯೂ ರಕ್ಷಿಸುವನೆಂಬ ಆಶ್ವಾಸನೆ ಯೆಹೂದಕ್ಕೂ ಇದೆ. ಎಷ್ಟಾದರೂ, ಅದರ ರಾಜಧಾನಿ ಪಟ್ಟಣವಾದ ಯೆರೂಸಲೇಮಿನಲ್ಲೇ ಯೆಹೋವನ ದೇವಾಲಯವು ನೆಲೆಸಿರುವುದಿಲ್ಲವೊ? ಆದರೆ, ಮುಂದೆ ಸಂಭವಿಸಲಿರುವ ಘಟನೆಗಳನ್ನು ಈ ಎರಡೂ ಜನಾಂಗಗಳು ನಿರೀಕ್ಷಿಸುವುದೇ ಇಲ್ಲ. ಆ ವಿಚಿತ್ರವೆಂದೆನಿಸುವ ಘಟನೆಗಳ ಬಗ್ಗೆ ತನ್ನ ಹಟಮಾರಿ ಜನಾಂಗಕ್ಕೆ ಮುಂತಿಳಿಸುವಂತೆ ಯೆಹೋವನು ಯೆಶಾಯನನ್ನು ಪ್ರೇರೇಪಿಸುತ್ತಾನೆ. ಮತ್ತು ಆ ಮಾತುಗಳಲ್ಲಿ, ಇಂದು ನಮಗೆಲ್ಲರಿಗೂ ಅತ್ಯಾವಶ್ಯಕವಾದ ಪಾಠಗಳಿವೆ.

‘ಎಫ್ರಾಯೀಮಿನ ಕುಡುಕರು’

3, 4. ಇಸ್ರಾಯೇಲಿನ ಉತ್ತರ ರಾಜ್ಯವು ಯಾವ ವಿಷಯವಾಗಿ ಹೆಮ್ಮೆಪಡುತ್ತದೆ?

3 ಯೆಶಾಯನು ಬೆಚ್ಚಿಬೀಳಿಸುವ ಮಾತುಗಳೊಂದಿಗೆ ತನ್ನ ಪ್ರವಾದನೆಯನ್ನು ಆರಂಭಿಸುತ್ತಾನೆ: “ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ ಗತಿಯೇ! ದ್ರಾಕ್ಷಾರಸಕ್ಕೆ ಸೋತುಹೋದವರ ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವಿನ ಪಾಡೇ! ಆಹಾ, ಕರ್ತನು ಒಬ್ಬ ಮಹಾಬಲಿಷ್ಠನನ್ನು ನೇಮಿಸಿದ್ದಾನೆ; ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ . . . [ಆ ಪಟ್ಟಣವನ್ನು] ನೆಲಕ್ಕೆ ಬೀಳಿಸುವನು. ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟವು ಕಾಲಿನಿಂದ ತುಳಿಯಲ್ಪಡುವದು.”​—ಯೆಶಾಯ 28:1-3.

4 ಉತ್ತರದ ಹತ್ತು ಗೋತ್ರಗಳಲ್ಲಿ ಅತ್ಯಂತ ಪ್ರಧಾನವಾದ ಎಫ್ರಾಯೀಮ್‌ ಗೋತ್ರವು, ಇಡೀ ಇಸ್ರಾಯೇಲ್‌ ರಾಜ್ಯವನ್ನೇ ಪ್ರತಿನಿಧಿಸುತ್ತದೆ. ಅದರ ರಾಜಧಾನಿ ಸಮಾರ್ಯವು, ‘ಫಲವತ್ತಾದ ತಗ್ಗಿನ ಶಿರ’ದಲ್ಲಿ ಒಂದು ಸುಂದರವಾದ ಹಾಗೂ ಅನುಕೂಲವಾದ ಸ್ಥಳದಲ್ಲಿ ನೆಲೆಸಿದೆ. ಯೆರೂಸಲೇಮಿನಲ್ಲಿನ ದಾವೀದನ ರಾಜವಂಶದ ಆಳ್ವಿಕೆಯಿಂದ ಸ್ವತಂತ್ರರಾಗಿರುವ ಎಫ್ರಾಯೀಮಿನ ಮುಖಂಡರು, ತಮ್ಮ “ಮಹಿಮೆಯ ಕಿರೀಟದ” ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ಇವರು ‘ಕುಡುಕರು.’ ಯೆಹೂದದ ವಿರುದ್ಧ ಅರಾಮ್ಯರೊಂದಿಗೆ ಸಂಬಂಧ ಬೆಳೆಸಿಕೊಂಡಿರುವ ಕಾರಣ, ಇವರು ಆತ್ಮಿಕವಾಗಿ ಅಮಲೇರಿದ್ದಾರೆ. ಅವರು ನೆಚ್ಚಿಕೊಂಡಿರುವ ಎಲ್ಲವೂ ಆಕ್ರಮಣಕಾರರಿಂದ ತುಳಿದಾಡಲ್ಪಡುವುದು.​—⁠ಹೋಲಿಸಿ ಯೆಶಾಯ 29:⁠9.

5. ಯಾವ ಅಪಾಯದ ಸ್ಥಿತಿಯಲ್ಲಿ ಇಸ್ರಾಯೇಲ್‌ ಇದೆ, ಆದರೆ ಯಾವ ನಿರೀಕ್ಷೆಯನ್ನು ಯೆಶಾಯನು ಎತ್ತಿಹಿಡಿಯುತ್ತಾನೆ?

5 ಅಪಾಯಕ್ಕೊಳಪಟ್ಟಿರುವ ತನ್ನ ಸ್ಥಿತಿಯನ್ನು ಎಫ್ರಾಯೀಮ್‌ ಗ್ರಹಿಸಿಕೊಳ್ಳುವುದಿಲ್ಲ. ಯೆಶಾಯನು ಮುಂದುವರಿಸಿ ಹೇಳುವುದು: “ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವದು; ಆ ಹಣ್ಣನ್ನು ಕಂಡವನು ಕಿತ್ತ ಕೂಡಲೆ ನುಂಗಿಬಿಡುವನಲ್ಲವೆ.” (ಯೆಶಾಯ 28:4) ಅಶ್ಶೂರದ ಕೈಗೆ ಬೀಳಲಿರುವ ಎಫ್ರಾಯೀಮ್‌, ಬಾಯಿಗೆ ಹಾಕಿದ ಕೂಡಲೇ ಗಂಟಲಿಗಿಳಿಯುವ ಸಿಹಿ ತುತ್ತಿನಂತಿರುವುದು. ಹಾಗಾದರೆ, ಎಫ್ರಾಯೀಮಿಗೆ ಯಾವ ನಿರೀಕ್ಷೆಯೂ ಇಲ್ಲವೊ? ನಾವು ಈಗಾಗಲೇ ಗಮನಿಸಿರುವಂತೆ, ಯೆಶಾಯನು ಪ್ರವಾದಿಸುವ ನ್ಯಾಯತೀರ್ಪುಗಳೊಂದಿಗೆ ನಿರೀಕ್ಷೆಯೂ ಬೆರೆತಿರುತ್ತದೆ. ಜನಾಂಗವು ಪತನಗೊಂಡರೂ, ನಂಬಿಗಸ್ತ ವ್ಯಕ್ತಿಗಳು ಯೆಹೋವನ ಸಹಾಯದಿಂದ ಬದುಕಿ ಉಳಿಯುವರು. “ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನೇ ತನ್ನ ಜನರಲ್ಲಿ ಉಳಿದವರಿಗೆ ಅಂದದ ಕಿರೀಟವೂ ಸುಂದರ ಮುಕುಟವೂ ಆಗಿರುವನು; ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ ಊರಬಾಗಿಲಲ್ಲಿ ಶತ್ರುಗಳನ್ನು ತಳ್ಳಿಬಿಡುವವರಿಗೆ ಶೌರ್ಯವಾಗಿಯೂ ಪರಿಣಮಿಸುವನು.”​—ಯೆಶಾಯ 28:5, 6.

‘ಈ ಜನರು ಓಲಾಡುತ್ತಾರೆ’

6. ಇಸ್ರಾಯೇಲ್‌ ಯಾವಾಗ ನಾಶವಾಗುತ್ತದೆ, ಮತ್ತು ಯೆಹೂದವು ಅದಕ್ಕಾಗಿ ಸಂತೋಷಿಸಬಾರದು ಏಕೆ?

6 ಸಮಾರ್ಯವು ಸಾ.ಶ.ಪೂ. 740ರಲ್ಲಿ ಪ್ರತೀಕಾರವನ್ನು ಅನುಭವಿಸಿತು. ಆ ಸಮಯದಲ್ಲಿ ಅಶ್ಶೂರರು ದೇಶವನ್ನು ಧ್ವಂಸಮಾಡಿದಾಗ, ಉತ್ತರ ರಾಜ್ಯವು ಇನ್ನು ಮುಂದೆ ಒಂದು ಸ್ವತಂತ್ರ ರಾಜ್ಯವಾಗಿ ಉಳಿಯಲಿಲ್ಲ. ಆದರೆ ಯೆಹೂದದ ಕುರಿತೇನು? ಆ ದೇಶವನ್ನು ಅಶ್ಶೂರರು ಆಕ್ರಮಿಸುವರು, ಮತ್ತು ತದನಂತರ ಬಾಬೆಲು ಅದರ ರಾಜಧಾನಿ ಪಟ್ಟಣವನ್ನು ನಾಶಮಾಡುವುದು. ಆದರೆ ಯೆಶಾಯನು ಜೀವದಿಂದಿರುವ ವರೆಗೂ, ಯೆಹೂದದ ದೇವಾಲಯ ಹಾಗೂ ಯಾಜಕತ್ವವು ಕಾರ್ಯನಡೆಸುವುದು ಮತ್ತು ಪ್ರವಾದಿಗಳು ತಮ್ಮ ಪ್ರವಾದಿಸುವ ಕೆಲಸವನ್ನು ಮುಂದುವರಿಸುವರು. ಉತ್ತರದಲ್ಲಿರುವ ತನ್ನ ನೆರೆರಾಜ್ಯದ ನಾಶನದ ಕುರಿತು ಯೆಹೂದವು ಸಂತೋಷಿಸಬೇಕೊ? ಖಂಡಿತವಾಗಿಯೂ ಇಲ್ಲ! ಏಕೆಂದರೆ ಯೆಹೂದ ಮತ್ತು ಅದರ ಮುಖಂಡರ ಅವಿಧೇಯತೆ ಹಾಗೂ ಅಪನಂಬಿಗಸ್ತಿಕೆಗಾಗಿ ಯೆಹೋವನು ಯೆಹೂದದೊಂದಿಗೂ ಲೆಕ್ಕ ತೀರಿಸದೆ ಬಿಡಲಾರನು.

7. ಯಾವ ವಿಧದಲ್ಲಿ ಯೆಹೂದದ ಮುಖಂಡರು ಮತ್ತರಾಗಿದ್ದಾರೆ, ಮತ್ತು ಇದರಿಂದಾಗುವ ಪರಿಣಾಮಗಳೇನು?

7 ಯೆಹೂದಕ್ಕೆ ತನ್ನ ಸಂದೇಶವನ್ನು ನೀಡುತ್ತಾ, ಯೆಶಾಯನು ಮುಂದುವರಿಸುವುದು: “ಈ [ನನ್ನ] ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ; [ದೈವದರ್ಶನವಾಗುತ್ತಿರುವಾಗಲೂ] ಓಲಾಡುತ್ತಾರೆ, ನ್ಯಾಯತೀರಿಸುತ್ತಿರುವಾಗಲೂ ಅತ್ತಿತ್ತ ತೂಗಾಡುತ್ತಾರೆ. [ಅವರ] ಮೇಜುಗಳ ಮೇಲೆಲ್ಲಾ ವಾಂತಿಯೂ ಎಂಜಲೂ ತುಂಬಿವೆ, ಶುದ್ಧಸ್ಥಳವೇ ಇಲ್ಲ.” (ಯೆಶಾಯ 28:7, 8) ಎಷ್ಟು ಅಸಹ್ಯಕರ! ದೇವರ ಮನೆಯಲ್ಲಿ ಮದ್ಯ ಕುಡಿದು ಮತ್ತರಾಗಿರುವುದೇ ಒಂದು ಹೇಯ ಕೃತ್ಯ. ಅದರಲ್ಲೂ ಈ ಯಾಜಕರು ಮತ್ತು ಪ್ರವಾದಿಗಳು ಆತ್ಮಿಕವಾಗಿ ಮತ್ತೇರಿದ್ದಾರೆ. ಅವರ ಮನಸ್ಸುಗಳು, ಮಾನವ ಶಕ್ತಿಯಲ್ಲಿ ಮಿತಿಮೀರಿದ ಭರವಸೆಯೆಂಬ ಮೋಡಗಳಿಂದ ಕವಿದಿವೆ. ತಾವು ಆರಿಸಿರುವ ಮಾರ್ಗವು ಅತ್ಯಂತ ವ್ಯಾವಹಾರಿಕವಾದದ್ದೆಂದು ನೆನಸುವಷ್ಟು ಅವರು ಮೋಸಹೋಗಿದ್ದಾರೆ. ಯೆಹೋವನ ರಕ್ಷಣೆಯು ಸಾಲದೆ ಹೋದಲ್ಲಿ ಮತ್ತೊಂದು ಮೂಲದಿಂದ ತಮಗೆ ಬೆಂಬಲವು ಸಿಗುವುದೆಂದು ಅವರು ನೆನಸುತ್ತಿರಬಹುದು. ಆತ್ಮಿಕವಾಗಿ ಮತ್ತೇರಿರುವ ಈ ಧಾರ್ಮಿಕ ಮುಖಂಡರು, ದೇವರ ವಾಗ್ದಾನಗಳಲ್ಲಿ ತಮಗಿರುವ ಅಪನಂಬಿಕೆಯನ್ನು ಸುಸ್ಪಷ್ಟವಾಗಿ ತೋರಿಸಿಕೊಡುವ ದಂಗೆಕೋರ, ಅಶುದ್ಧ ಮಾತುಗಳನ್ನೇ ಹೊರ ಸೂಸುತ್ತಾರೆ.

8. ಯೆಶಾಯನ ಸಂದೇಶಕ್ಕೆ ದೊರಕುವ ಪ್ರತಿಕ್ರಿಯೆಯು ಏನಾಗಿದೆ?

8 ಯೆಹೋವನು ನೀಡುವ ಎಚ್ಚರಿಕೆಗೆ ಯೆಹೂದದ ಮುಖಂಡರು ಹೇಗೆ ಪ್ರತಿಕ್ರಿಯಿಸುತ್ತಾರೆ? ತಾವು ಹಸುಗೂಸುಗಳೊ ಎಂಬಂತೆ ಯೆಶಾಯನು ತಮ್ಮ ಮುಂದೆ ಮಾತಾಡುತ್ತಿದ್ದಾನೆಂಬ ದೋಷವನ್ನು ಹೊರಿಸುತ್ತಾ ಅವನನ್ನು ಗೇಲಿಮಾಡುತ್ತಾರೆ: “ಇವನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಇವನು ಯಾರಿಗೆ ಯೆಹೋವನ ಮಾತನ್ನು ತಿಳಿಯಪಡಿಸುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ? ಎದೆಬಿಟ್ಟ ಮಕ್ಕಳಿಗೋ? ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ.” (ಯೆಶಾಯ 28:9, 10) ಯೆಶಾಯನು ಆಡಿದ್ದನ್ನೇ ಆಡುತ್ತಾನೆ ಮತ್ತು ವಿಚಿತ್ರವಾಗಿ ಮಾತಾಡುತ್ತಿದ್ದಾನೆಂದು ಅವರಿಗನಿಸುತ್ತದೆ! ಅವನು ಒಂದೇ ಮಾತನ್ನು ಪುನಃ ಪುನಃ ಹೇಳುತ್ತಾನೆ: ‘ಇದು ಯೆಹೋವನ ಆಜ್ಞೆ! ಇದು ಯೆಹೋವನ ಆಜ್ಞೆ! ಇದು ಯೆಹೋವನ ಮಟ್ಟ! ಇದು ಯೆಹೋವನ ಮಟ್ಟ!’ * ಆದರೆ ಬೇಗನೆ ಯೆಹೋವನು, ಕ್ರಿಯೆಯ ಮೂಲಕ ಯೆಹೂದದ ನಿವಾಸಿಗಳೊಂದಿಗೆ “ಮಾತಾಡುವನು.” ಆತನು ಭಿನ್ನವಾದೊಂದು ಭಾಷೆಯನ್ನಾಡುವ ವಿದೇಶಿಯರನ್ನು, ಅಂದರೆ ಬಾಬೆಲಿನ ಸೇನೆಯನ್ನು ಅವರ ವಿರುದ್ಧ ಕಳುಹಿಸುವನು. ಆ ಸೇನೆಗಳು ಯೆಹೋವನ “ಆಜ್ಞೆಯ ಮೇಲೆ ಆಜ್ಞೆ”ಯನ್ನು ಜಾರಿಗೆ ತರುವುದರಲ್ಲಿ ಸಂದೇಹವೇ ಇಲ್ಲ. ಮತ್ತು ಆಗ ಯೆಹೂದವು ನಾಶನವನ್ನು ಅನುಭವಿಸುವುದು.​—⁠ಓದಿ ಯೆಶಾಯ 28:​11-13.

ಇಂದಿನ ಆತ್ಮಿಕ ಕುಡುಕರು

9, 10. ಯೆಶಾಯನ ಮಾತುಗಳು ಯಾವಾಗ ಮತ್ತು ಹೇಗೆ ತದನಂತರದ ಸಂತತಿಗಳಿಗೆ ಅರ್ಥಭರಿತವಾಗಿರುವವು?

9 ಯೆಶಾಯನ ಪ್ರವಾದನೆಗಳು ಪುರಾತನ ಇಸ್ರಾಯೇಲ್‌ ಮತ್ತು ಯೆಹೂದದಲ್ಲಿ ಮಾತ್ರ ನೆರವೇರಿದವೊ? ಇಲ್ಲವೇ ಇಲ್ಲ! ಯೇಸು ಮತ್ತು ಪೌಲರು ಅವನ ಮಾತುಗಳನ್ನು ಉದ್ಧರಿಸಿ, ಅವುಗಳನ್ನು ತಮ್ಮ ದಿನದ ಜನಾಂಗಕ್ಕೆ ಅನ್ವಯಿಸಿದರು. (ಯೆಶಾಯ 29:​10, 13; ಮತ್ತಾಯ 15:​8, 9; ರೋಮಾಪುರ 11:⁠8) ಇಂದು ಸಹ, ಯೆಶಾಯನ ದಿನದಲ್ಲಿದ್ದಂತಹ ಸನ್ನಿವೇಶವೇ ತಲೆದೋರಿದೆ.

10 ಈಗಲಾದರೊ, ಅದು ರಾಜಕೀಯದಲ್ಲಿ ಭರವಸೆಯಿಡುವ ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರನ್ನು ಸೂಚಿಸುತ್ತದೆ. ಇವರು ರಾಜಕೀಯ ವಿಷಯಗಳಲ್ಲಿ ತಲೆಹಾಕುತ್ತಾ, ಮಹಾನರೆಂದೆನಿಸಿಕೊಳ್ಳುವ ಈ ಲೋಕದ ಕೆಲವು ಗಣ್ಯರಿಗೆ ಸಲಹೆಯನ್ನು ನೀಡಲು ಹರ್ಷಿಸುತ್ತಾ, ಇಸ್ರಾಯೇಲ್‌ ಮತ್ತು ಯೆಹೂದದ ಕುಡುಕರಂತೆ ಅತ್ತಿತ್ತ ತೂಗಾಡುತ್ತಿದ್ದಾರೆ. ಶುದ್ಧವಾದ ಬೈಬಲ್‌ ಸತ್ಯದ ಬದಲು, ಅವರ ಮಾತುಕತೆ ಅಶುದ್ಧತೆಯಿಂದ ಕೂಡಿದೆ. ಅವರ ಆತ್ಮಿಕ ದೃಷ್ಟಿಯು ಮಬ್ಬುಮಬ್ಬಾಗಿದೆ ಮತ್ತು ಈ ಕಾರಣ ಅವರು ಮಾನವವರ್ಗಕ್ಕೆ ಸುರಕ್ಷಿತವಾದ ಮಾರ್ಗದರ್ಶಿಗಳಾಗಿರಸಾಧ್ಯವಿಲ್ಲ.​—⁠ಮತ್ತಾಯ 15:⁠14.

11. ದೇವರ ರಾಜ್ಯದ ಸುವಾರ್ತೆಗೆ ಕ್ರೈಸ್ತಪ್ರಪಂಚದ ಮುಖಂಡರು ಹೇಗೆ ಪ್ರತಿಕ್ರಿಯಿಸುತ್ತಾರೆ?

11 ಮಾನವವರ್ಗದ ಏಕೈಕ ನಿರೀಕ್ಷೆಯಾಗಿರುವ ದೇವರ ರಾಜ್ಯದ ಕಡೆಗೆ ಕ್ರೈಸ್ತಪ್ರಪಂಚದ ಮುಖಂಡರ ಗಮನವನ್ನು ಯೆಹೋವನ ಸಾಕ್ಷಿಗಳು ಸೆಳೆಯುವಾಗ, ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರಿಗೆ ಏನೊಂದೂ ಅರ್ಥವಾಗುವುದಿಲ್ಲ. ಸಾಕ್ಷಿಗಳು ಕೂಸುಗಳಂತೆ ಏನನ್ನೊ ತೊದಲುತ್ತಿರುವಂತೆ ಅವರಿಗೆ ತೋರುತ್ತದೆ. ಈ ಸಂದೇಶವಾಹಕರನ್ನು ಆ ಧಾರ್ಮಿಕ ಮುಖಂಡರು ಕಡೆಗಣಿಸಿ, ಗೇಲಿಮಾಡುತ್ತಾರೆ. ಯೇಸುವಿನ ದಿನದ ಯೆಹೂದ್ಯರಂತೆ, ದೇವರ ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಅವರು ಬಯಸುವುದಿಲ್ಲ, ಅದರ ಬಗ್ಗೆ ಕೇಳಿಸಿಕೊಳ್ಳಲು ತಮ್ಮ ಹಿಂಡಿಗೂ ಅವರು ಅನುಮತಿ ನೀಡುವುದಿಲ್ಲ. (ಮತ್ತಾಯ 23:13) ಆದಕಾರಣ, ಯೆಹೋವನು ಯಾವಾಗಲೂ ತನ್ನ ಶಾಂತಸ್ವಭಾವದ ಸಂದೇಶವಾಹಕರ ಮೂಲಕವೇ ಮಾತಾಡುವನೆಂದು ಅವರು ನೆನಸಿಕೊಂಡಿದ್ದರೆ, ತಮ್ಮ ಅಭಿಪ್ರಾಯವು ತಪ್ಪೆಂದು ಅವರು ಬೇಗನೆ ಗ್ರಹಿಸುವರು. ಯಾರು ತಮ್ಮನ್ನು ದೇವರ ರಾಜ್ಯಕ್ಕೆ ಅಧೀನಪಡಿಸಿಕೊಳ್ಳುವುದಿಲ್ಲವೊ, ಅಂತಹವರು “ಬಿದ್ದು . . . ಬೋನಿಗೆ ಸಿಕ್ಕಿ ವಶವಾಗುವ,” ಅಂದರೆ ಸಂಪೂರ್ಣವಾಗಿ ನಾಶವಾಗುವ ಸಮಯವು ಬಂದೇ ಬರುವುದು.

‘ಮೃತ್ಯುವಿನೊಂದಿಗೆ ಒಡಂಬಡಿಕೆ’

12. ‘ಮೃತ್ಯುವಿನೊಂದಿಗೆ’ ಯೆಹೂದಕ್ಕಿರುವ ‘ಒಡಂಬಡಿಕೆಯು’ ಏನಾಗಿದೆ?

12 ಯೆಶಾಯನು ತನ್ನ ದೈವೋಕ್ತಿಯನ್ನು ಮುಂದುವರಿಸುತ್ತಾನೆ: “ನೀವು ನಿಮ್ಮೊಳಗೆ​—⁠ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಅಸತ್ಯವನ್ನು ಆಶ್ರಯಿಸಿಕೊಂಡು ಮೋಸವನ್ನು ಮರೆಹೊಕ್ಕಿದ್ದೇವಲ್ಲಾ ಅಂದು”ಕೊಂಡಿದ್ದೀರಿ. (ಯೆಶಾಯ 28:14, 15) ತಾವು ಬೆಳೆಸಿಕೊಂಡಿರುವ ರಾಜಕೀಯ ಮೈತ್ರಿಗಳು ತಮ್ಮನ್ನು ಸೋಲಿನ ತಾಪದಿಂದ ರಕ್ಷಿಸುವವೆಂದು ಯೆಹೂದದ ಮುಖಂಡರು ಜಂಬಕೊಚ್ಚಿಕೊಳ್ಳುತ್ತಾರೆ. ತಮ್ಮನ್ನು ಸ್ಪರ್ಶಿಸದೆ ಇರುವಂತೆ ‘ಮೃತ್ಯುವಿನೊಂದಿಗೆ ಒಡಂಬಡಿಕೆಯನ್ನು’ ಮಾಡಿಕೊಂಡಿರುವಂತೆ ಅವರು ನಡೆದುಕೊಳ್ಳುತ್ತಾರೆ. ಆದರೆ, ಈ ಪೊಳ್ಳಾದ ಆಶ್ರಯದಲ್ಲಿ ಅವರು ರಕ್ಷಣೆಯನ್ನು ಪಡೆಯಲಾರರು. ಅವರ ಮೈತ್ರಿಗಳು ಕೇವಲ ಸುಳ್ಳಾಗಿವೆ. ತದ್ರೀತಿಯಲ್ಲಿ ಇಂದು, ಈ ಲೋಕದ ಮುಖಂಡರೊಂದಿಗೆ ಕ್ರೈಸ್ತಪ್ರಪಂಚಕ್ಕಿರುವ ನಿಕಟ ಸಂಬಂಧವು, ಯೆಹೋವನು ಅದರಿಂದ ಲೆಕ್ಕಕೇಳುವ ಸಮಯದಲ್ಲಿ ಯಾವ ರಕ್ಷಣೆಯನ್ನೂ ನೀಡಲಾರದು. ಅದರ ಬದಲು, ಕ್ರೈಸ್ತಪ್ರಪಂಚದ ಧ್ವಂಸಕ್ಕೆ ಅದೇ ಮುಖ್ಯ ಕಾರಣವಾಗಿರುವುದು.​—⁠ಪ್ರಕಟನೆ 17:​16, 17.

13. ‘ಪರೀಕ್ಷಿತ ಮೂಲೆಗಲ್ಲು’ ಯಾರು, ಮತ್ತು ಕ್ರೈಸ್ತಪ್ರಪಂಚವು ಅವನನ್ನು ತಳ್ಳಿಹಾಕಿರುವುದು ಹೇಗೆ?

13 ಹಾಗಾದರೆ, ಈ ಧಾರ್ಮಿಕ ಮುಖಂಡರು ಯಾರನ್ನು ಎದುರುನೋಡುತ್ತಿರಬೇಕು? ಯೆಹೋವನ ವಾಗ್ದಾನವನ್ನು ಯೆಶಾಯನು ದಾಖಲಿಸುತ್ತಾನೆ: “ಇಗೋ, ಪರೀಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು. ನಾನು ನ್ಯಾಯವನ್ನು ನೂಲನ್ನಾಗಿಯೂ ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಅಸತ್ಯದ ಆಶ್ರಯವನ್ನು ಬಡಿದುಕೊಂಡು ಹೋಗುವದು, ಜಲಪ್ರವಾಹವು [ಮೋಸದ] ಮರೆಯನ್ನು ಮುಣುಗಿಸುವದು.” (ಯೆಶಾಯ 28:16, 17) ಯೆಶಾಯನು ಈ ಮಾತುಗಳನ್ನಾಡಿದ ಸ್ವಲ್ಪ ಸಮಯದಲ್ಲೇ, ನಂಬಿಗಸ್ತ ರಾಜನಾದ ಹಿಜ್ಕೀಯನು ಚೀಯೋನಿನ ಸಿಂಹಾಸನವನ್ನೇರುತ್ತಾನೆ ಮತ್ತು ಅವನ ರಾಜ್ಯವು ನೆರೆಯ ಮಿತ್ರರಾಷ್ಟ್ರಗಳಿಂದಲ್ಲ, ಬದಲಿಗೆ ಯೆಹೋವನ ಹಸ್ತಕ್ಷೇಪದಿಂದ ರಕ್ಷಿಸಲ್ಪಡುತ್ತದೆ. ಹಾಗಿದ್ದರೂ, ಈ ಪ್ರೇರಿತ ಮಾತುಗಳು ಹಿಜ್ಕೀಯನಲ್ಲಿ ನೆರವೇರಲಿಲ್ಲ. ಯೆಶಾಯನ ಮಾತುಗಳನ್ನು ಉದ್ಧರಿಸುತ್ತಾ ಅಪೊಸ್ತಲ ಪೇತ್ರನು ತಿಳಿಸಿದ್ದೇನೆಂದರೆ, ಹಿಜ್ಕೀಯನ ವಂಶಸ್ಥನಾದ ಯೇಸು ಕ್ರಿಸ್ತನೇ ಆ ‘ಪರೀಕ್ಷಿತ ಮೂಲೆಗಲ್ಲಾಗಿದ್ದಾನೆ’ ಮತ್ತು ಅವನಲ್ಲಿ ನಂಬಿಕೆಯಿಡುವ ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. (1 ಪೇತ್ರ 2:⁠6) ಕ್ರೈಸ್ತಪ್ರಪಂಚದ ಮುಖಂಡರು ತಮ್ಮನ್ನು ಕ್ರೈಸ್ತರೆಂದು ಕರೆದುಕೊಂಡರೂ, ಯೇಸು ನಿರಾಕರಿಸಿದ್ದನ್ನೇ ಮಾಡಲು ಹಾತೊರೆದಿರುವುದು ಎಷ್ಟೊಂದು ವಿಷಾದನೀಯ! ಯೇಸು ಕ್ರಿಸ್ತನು ರಾಜನಾಗಿ ಆಳಲಿರುವ ಯೆಹೋವನ ರಾಜ್ಯಕ್ಕಾಗಿ ಕಾಯುವ ಬದಲು, ಇವರು ಈ ಲೋಕದಲ್ಲೇ ಪ್ರಾಧಾನ್ಯವನ್ನೂ ಅಧಿಕಾರವನ್ನೂ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.​—⁠ಮತ್ತಾಯ 4:​8-10.

14. ಯೆಹೂದಕ್ಕಿರುವ ‘ಮೃತ್ಯುವಿನೊಂದಿಗಿನ ಒಡಂಬಡಿಕೆಯು’ ಯಾವಾಗ ರದ್ದಾಗುವುದು?

14 “ವಿಪರೀತ ಬಾಧೆಯ” ರೂಪದಲ್ಲಿರುವ ಬಾಬೆಲಿನ ಸೇನೆಗಳು ದೇಶದೊಳಗೆ ಹಾದುಹೋಗುವಾಗ, ಯೆಹೂದವು ನಂಬಿಕೊಂಡಿರುವ ರಾಜಕೀಯ ಆಶ್ರಯವು ಬರಿಯ ಸುಳ್ಳೆಂಬುದನ್ನು ಯೆಹೋವನು ತೋರಿಸಿಕೊಡುವನು. “ಮೃತ್ಯುವಿನಿಂದ ನೀವು ಪಡೆದುಕೊಂಡ ಒಡಂಬಡಿಕೆಯು ಸಾಗದು” ಎಂದು ಯೆಹೋವನು ಹೇಳುತ್ತಾನೆ. “ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ನಿಮ್ಮನ್ನು ತುಳಿದುಬಿಡುವದು. ಅದು ಹಾದುಹೋಗುವಾಗೆಲ್ಲಾ . . . ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವದು ಬರೀ ಭಯವೇ.” (ಯೆಶಾಯ 28:18, 19) ಹೌದು, ಯೆಹೋವನನ್ನು ಸೇವಿಸುವುದಾಗಿ ಹೇಳಿಕೊಂಡರೂ ರಾಷ್ಟ್ರಗಳೊಂದಿಗಿನ ಮೈತ್ರಿಗಳಲ್ಲಿ ತಮ್ಮ ಭರವಸೆಯನ್ನಿಡುವವರಿಗೆ ಸಂಭವಿಸುವ ವಿಷಯಗಳಿಂದ, ನಾವೊಂದು ಬಲವುಳ್ಳ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ.

15. ಯೆಹೂದವು ಸಾಕಷ್ಟು ಸಂರಕ್ಷಣೆಯನ್ನು ಪಡೆದಿರುವುದಿಲ್ಲ ಎಂಬುದನ್ನು ಯೆಶಾಯನು ಹೇಗೆ ದೃಷ್ಟಾಂತಿಸುತ್ತಾನೆ?

15 ಯೆಹೂದದ ಮುಖಂಡರು ಈಗ ಯಾವ ಸ್ಥಿತಿಯಲ್ಲಿದ್ದಾರೆಂಬುದನ್ನು ಸ್ವಲ್ಪ ಪರಿಗಣಿಸಿರಿ. “ಒಬ್ಬನು ಚಾಚಿಕೊಂಡು ಮಲಗೇನಂದರೆ ಹಾಸಿಗೆಯ ಉದ್ದ ಸಾಲದು; ಮುದುರಿಕೊಂಡು ಮಲಗೇನಂದರೆ ಹೊದಿಕೆಯ ಅಗಲ ಸಾಲದು.” (ಯೆಶಾಯ 28:20) ಅವರು ಹಾಯಾಗಿ ಮಲಗಲು ಬಯಸಿದರೂ, ಅದು ಅಸಾಧ್ಯವೊ ಎಂಬಂತೆ ತೋರುತ್ತದೆ. ಒಂದು, ಹಾಸಿಗೆಯು ಚಿಕ್ಕದಾಗಿರುವುದರಿಂದ ಈ ಚಳಿಯಲ್ಲಿ ಅವರ ಕಾಲುಗಳು ಹೊರಗೆ ಚಾಚಿಕೊಂಡಿವೆ, ಇಲ್ಲವೆ ಅವರು ತಮ್ಮ ಕಾಲುಗಳನ್ನು ಮಡಚಿಕೊಂಡರೂ ಇಡೀ ದೇಹವನ್ನು ಬೆಚ್ಚಗಿರಿಸಲು ಹೊದಿಕೆಯ ಅಗಲ ಸಾಲದೆಹೋಗುತ್ತದೆ. ಯೆಶಾಯನ ದಿನದಲ್ಲಿ ಅವರು ಇಂತಹ ಅಹಿತಕರವಾದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದರು. ಇಂದು ಸಹ, ಯಾರಾದರೂ ಕ್ರೈಸ್ತಪ್ರಪಂಚದ ಸುಳ್ಳಿನಲ್ಲಿ ಭರವಸೆಯಿಟ್ಟರೆ ಇದೇ ಪರಿಸ್ಥಿತಿಯನ್ನು ಅನುಭವಿಸಬೇಕಾಗುವುದು. ರಾಜಕೀಯದಲ್ಲಿ ಸೇರಿಕೊಂಡಿರುವ ಕಾರಣ, ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರಲ್ಲಿ ಕೆಲವರು “ಜನಾಂಗೀಯ ಶುದ್ಧೀಕರಣ” ಮತ್ತು ಜನಹತ್ಯೆ ಎಂಬಂತಹ ದುಷ್ಕೃತ್ಯಗಳಲ್ಲಿ ಸಿಕ್ಕಿಕೊಂಡಿರುವುದು ಎಷ್ಟು ಅಸಹ್ಯಕರ!

ಯೆಹೋವನ ‘ಅಪರೂಪವಾದ ಕೆಲಸ’

16. ಯೆಹೋವನ ‘ಅಪರೂಪವಾದ ಕೆಲಸವು’ ಏನಾಗಿದೆ, ಮತ್ತು ಈ ಕಾರ್ಯವು ಅಪೂರ್ವವಾಗಿದೆ ಏಕೆ?

16 ಇದೆಲ್ಲದರ ಅಂತಿಮ ಫಲಿತಾಂಶವು, ಈ ಯೆಹೂದದ ಧಾರ್ಮಿಕ ಮುಖಂಡರು ನಿರೀಕ್ಷಿಸಿರುವುದಕ್ಕೆ ತೀರ ವ್ಯತಿರಿಕ್ತವಾಗಿರುವುದು. ಯೆಹೂದದ ಈ ಆತ್ಮಿಕ ಕುಡುಕರಿಗೆ ಯೆಹೋವನು ಅಪರೂಪವಾದದ್ದೇನನ್ನೊ ಮಾಡುವನು. “ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡಿಸಬೇಕೆಂತಲೂ ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್‌ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್‌ ತಗ್ಗಿನಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.” (ಯೆಶಾಯ 28:21) ರಾಜ ದಾವೀದನ ದಿನಗಳಲ್ಲಿ, ಯೆಹೋವನು ಪೆರಾಚೀಮ್‌ ಬೆಟ್ಟದಲ್ಲಿ ಮತ್ತು ಗಿಬ್ಯೋನ್‌ ತಗ್ಗಿನಲ್ಲಿ ತನ್ನ ಜನರಿಗೆ ಫಿಲಿಷ್ಟಿಯರ ಮೇಲೆ ಗಮನಾರ್ಹವಾದ ವಿಜಯಗಳನ್ನು ನೀಡಿದನು. (1 ಪೂರ್ವಕಾಲವೃತ್ತಾಂತ 14:​10-16) ಯೆಹೋಶುವನ ದಿನಗಳಲ್ಲಿ, ಅಮೋರಿಯರ ಮೇಲೆ ಇಸ್ರಾಯೇಲು ಸಂಪೂರ್ಣ ವಿಜಯವನ್ನು ಸಾಧಿಸಸಾಧ್ಯವಾಗುವಂತೆ, ಗಿಬ್ಯೋನಿನ ಮೇಲೆ ಸೂರ್ಯನು ಕದಲದೆ ನಿಲ್ಲುವಂತೆ ಯೆಹೋವನು ಮಾಡಿದನು. (ಯೆಹೋಶುವ 10:​8-14) ಅದು ತೀರ ಅಸಾಧಾರಣವಾದ ಕ್ರಿಯೆಯಾಗಿತ್ತು! ಯೆಹೋವನು ಮತ್ತೆ ಹೋರಾಡುವ ಸಮಯವು ಈಗ ಹತ್ತಿರವಾಗಿರುವುದಾದರೂ, ಈಗ ಅದು ತನ್ನ ಜನರೆಂದು ಹೇಳಿಕೊಳ್ಳುವವರ ವಿರುದ್ಧವೇ ಆಗಿರುವುದು. ಇದಕ್ಕಿಂತಲೂ ಅಪರೂಪವಾದ ಇಲ್ಲವೆ ಅಪೂರ್ವವಾದ ಬೇರೊಂದು ವಿಷಯವಿರಬಲ್ಲದೊ? ಯೆರೂಸಲೇಮು ಯೆಹೋವನ ಆರಾಧನೆಯ ಕೇಂದ್ರವೂ ಆತನ ಅಭಿಷಿಕ್ತ ರಾಜನ ಪಟ್ಟಣವೂ ಆಗಿರುವಾಗ, ಇದು ತೀರ ಅಪೂರ್ವವಾದ ವಿಷಯವೇ ಸರಿ. ಇಷ್ಟರ ತನಕ, ಯೆರೂಸಲೇಮಿನಲ್ಲಿರುವ ದಾವೀದನ ರಾಜವಂಶವು ಎಂದಿಗೂ ತನ್ನ ಸ್ಥಾನದಿಂದ ಉರುಳಿಸಲ್ಪಟ್ಟಿಲ್ಲ. ಹಾಗಿದ್ದರೂ, ಯೆಹೋವನು ತನ್ನ ‘ಅಪರೂಪವಾದ ಕೆಲಸವನ್ನು’ ಖಂಡಿತವಾಗಿಯೂ ನಡೆಸುವನು.​—⁠ಹೋಲಿಸಿ ಹಬಕ್ಕೂಕ 1:​5-7.

17. ಅವಹೇಳನವು ಯೆಶಾಯನ ಪ್ರವಾದನೆಯ ನೆರವೇರಿಕೆಯ ಮೇಲೆ ಯಾವ ಪ್ರಭಾವವನ್ನು ಬೀರುವುದು?

17 ಆದುದರಿಂದ, ಯೆಶಾಯನು ಎಚ್ಚರಿಸುವುದು: “ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಲಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವದನ್ನು ಕೇಳಿದ್ದೇನೆ.” (ಯೆಶಾಯ 28:22) ಈ ಮುಖಂಡರು ಅವಹೇಳನಮಾಡಿದರೂ, ಯೆಶಾಯನ ಸಂದೇಶವು ಸತ್ಯವಾಗಿದೆ. ಅದು ಯೆಹೋವನಿಂದ ಬಂದ ಸಂದೇಶವಾಗಿದೆ, ಮತ್ತು ಆತನೊಂದಿಗೆಯೇ ಈ ಮುಖಂಡರಿಗೆ ಒಂದು ಒಡಂಬಡಿಕೆಯ ಸಂಬಂಧವಿದೆ. ತದ್ರೀತಿಯಲ್ಲಿ ಇಂದು, ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಯೆಹೋವನ ‘ಅಪರೂಪವಾದ ಕೆಲಸದ’ ಬಗ್ಗೆ ಕೇಳಿಸಿಕೊಳ್ಳುವಾಗ ಅವಹೇಳನಮಾಡುತ್ತಾರೆ. ಅವರು ಅಬ್ಬರಿಸಿ, ಕೂಗಾಡುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಸಾರುವ ಸಂದೇಶವು ಸತ್ಯವಾಗಿದೆ. ಅದು ಬೈಬಲಿನಲ್ಲಿದೆ, ಮತ್ತು ಈ ಗ್ರಂಥವನ್ನೇ ತಾವು ನಂಬುವುದಾಗಿ ಆ ಮುಖಂಡರು ಹೇಳಿಕೊಳ್ಳುತ್ತಾರೆ.

18. ಶಿಕ್ಷೆಯನ್ನು ವಿಧಿಸುವಾಗ ಯೆಹೋವನು ಕಾಪಾಡಿಕೊಳ್ಳುವ ಸಮತೋಲನವನ್ನು ಯೆಶಾಯನು ಹೇಗೆ ದೃಷ್ಟಾಂತಿಸುತ್ತಾನೆ?

18 ಆ ಮುಖಂಡರನ್ನು ಅನುಸರಿಸದ ಯಥಾರ್ಥವಂತರನ್ನು, ಯೆಹೋವನು ಸರಿಹೊಂದಿಸಿ ತನ್ನ ಅನುಗ್ರಹಕ್ಕೆ ಪಾತ್ರರನ್ನಾಗಿ ಮಾಡುವನು. (ಓದಿ ಯೆಶಾಯ 28:23-29.) ಜೀರಿಗೆಯಂತಹ ಚಿಕ್ಕಪುಟ್ಟ ಧಾನ್ಯಗಳನ್ನು ಒಕ್ಕಲು, ರೈತನೊಬ್ಬನು ಕೋಮಲವಾದ ವಿಧಾನಗಳನ್ನು ಉಪಯೋಗಿಸುವಂತೆಯೇ, ಒಬ್ಬ ವ್ಯಕ್ತಿಯನ್ನೂ ಅವನ ಪರಿಸ್ಥಿತಿಗಳನ್ನೂ ಮನಸ್ಸಿನಲ್ಲಿಟ್ಟುಕೊಂಡೇ ಯೆಹೋವನು ತನ್ನ ಶಿಕ್ಷೆಯನ್ನು ಹೊಂದಿಸಿಕೊಳ್ಳುತ್ತಾನೆ. ಆತನೆಂದಿಗೂ ನಿರಂಕುಶನಾಗಿ ಇಲ್ಲವೆ ದಮನಕಾರಿಯಾಗಿ ವರ್ತಿಸದೆ, ತಪ್ಪುಮಾಡುವವನನ್ನು ಸರಿಪಡಿಸಸಾಧ್ಯವಿದೆಯೆಂಬ ದೃಷ್ಟಿಯಿಂದಲೇ ಕಾರ್ಯಮಾಡುತ್ತಾನೆ. ವ್ಯಕ್ತಿಗಳು ಯೆಹೋವನ ಕರೆಗೆ ಒಳ್ಳೆಯ ಪ್ರತಿಕ್ರಿಯೆ ತೋರಿಸಿದರೆ, ಆತನ ಅನುಗ್ರಹವನ್ನು ಪಡೆಯುವ ನಿರೀಕ್ಷೆ ಅವರಿಗಿರಬಲ್ಲದು. ತದ್ರೀತಿಯಲ್ಲಿ, ಒಂದು ಗುಂಪಿನೋಪಾದಿ ಇಂದು ಕ್ರೈಸ್ತಪ್ರಪಂಚದ ಗತಿಯು ನಿರ್ಣಯಿಸಲ್ಪಟ್ಟಿರುವುದಾದರೂ, ಯೆಹೋವನ ರಾಜ್ಯಕ್ಕೆ ತನ್ನನ್ನು ಅಧೀನಪಡಿಸಿಕೊಳ್ಳುವ ವ್ಯಕ್ತಿಯೊಬ್ಬನು ಅದರ ಮೇಲೆ ಬರಲಿರುವ ಪ್ರತಿಕೂಲವಾದ ನ್ಯಾಯತೀರ್ಪಿನಿಂದ ಪಾರಾಗಿ ಉಳಿಯಬಹುದು.

ಯೆರೂಸಲೇಮಿಗೆ ಅಯ್ಯೋ!

19. ಯಾವ ವಿಧದಲ್ಲಿ ಯೆರೂಸಲೇಮ್‌ “ಅಗ್ನಿವೇದಿ” ಆಗಲಿದೆ, ಮತ್ತು ಇದು ಯಾವಾಗ ಹಾಗೂ ಹೇಗೆ ಸಂಭವಿಸುತ್ತದೆ?

19 ಆದರೆ ಈಗ ಯೆಹೋವನು ಯಾವುದರ ಬಗ್ಗೆ ಮಾತಾಡುತ್ತಿದ್ದಾನೆ? “ಅಯ್ಯೋ, ಅರೀಯೇಲೇ, ಅರೀಯೇಲೇ, ದಾವೀದನು ಸೈನ್ಯಸಮೇತನಾಗಿ ವಾಸಿಸಿದ ಪಟ್ಟಣವೇ, ನಿನ್ನ ಗತಿಯನ್ನು ಏನು ಹೇಳಲಿ! ಈ ವರುಷಕ್ಕೆ ಮುಂದಿನ ವರುಷವನ್ನು ಸೇರಿಸಿರಿ; ಹಬ್ಬಗಳು ಸುತ್ತಿಬರಲಿ; ಆ ಮೇಲೆ ನಾನು ಅರೀಯೇಲನ್ನು ಬಾಧಿಸುವೆನು; ಅರಿಚಾಟಕಿರಿಚಾಟವಾಗುವದು; ಆ ಪಟ್ಟಣವು ನನಗೆ ಅರೀಯೇಲಾಗಿಯೇ ಪರಿಣಮಿಸುವದು.” (ಯೆಶಾಯ 29:1, 2) “ಅರೀಯೇಲ್‌” ಎಂಬುದರ ಅರ್ಥ “ದೇವರ ಅಗ್ನಿವೇದಿ” ಎಂದಾಗಿದೆ, ಮತ್ತು ಇಲ್ಲಿ ಅದು ಯೆರೂಸಲೇಮನ್ನು ಸೂಚಿಸುತ್ತದೆ. ಏಕೆಂದರೆ ದೇವಾಲಯವೂ ಯಜ್ಞವೇದಿಯೂ ಇರುವುದು ಅಲ್ಲಿಯೇ. ಯೆಹೂದ್ಯರು ಕ್ರಮವಾಗಿ ಅಲ್ಲಿ ಹಬ್ಬಗಳನ್ನು ಆಚರಿಸಿ ಬಲಿಗಳನ್ನು ಅರ್ಪಿಸಿದರೂ, ಯೆಹೋವನು ಅವರ ಆರಾಧನೆಯನ್ನು ಮೆಚ್ಚುವುದಿಲ್ಲ. (ಹೋಶೇಯ 6:⁠6) ಆ ಪಟ್ಟಣವು ತಾನೇ ಬೇರೊಂದು ಅರ್ಥದಲ್ಲಿ ಒಂದು “ಅಗ್ನಿವೇದಿ” ಆಗಲಿದೆ ಎಂದು ಆತನು ತಿಳಿಸುತ್ತಾನೆ. ಯಜ್ಞವೇದಿಯಂತೆ ಅದರಿಂದ ರಕ್ತವು ಹರಿಯುವುದು ಮತ್ತು ಅದು ಬೆಂಕಿಗೆ ಒಡ್ಡಲ್ಪಡುವುದು. ಇದು ಹೇಗೆ ಸಂಭವಿಸುವುದು ಎಂಬುದನ್ನು ಸಹ ಯೆಹೋವನು ವರ್ಣಿಸುತ್ತಾನೆ: “ನಾನು ನಿನ್ನ ಸುತ್ತಲು ದಂಡಿಳಿಸಿ ನಿನಗೆ ವಿರುದ್ಧವಾಗಿ ಕೊತ್ತಲಕಟ್ಟಿ ದಿಬ್ಬಹಾಕಿ ನಿನ್ನನ್ನು ಮುತ್ತುವೆನು. ನೀನು ಕುಗ್ಗಿ ಭೂಮಿಯೊಳಗಿಂದ ಮಾತಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವದು.” (ಯೆಶಾಯ 29:3, 4) ಸಾ.ಶ.ಪೂ. 607ರಲ್ಲಿ ಬಾಬೆಲಿನ ಸೇನೆಯು ಪಟ್ಟಣಕ್ಕೆ ಮುತ್ತಿಗೆ ಹಾಕಿ ಅದನ್ನು ನಾಶಪಡಿಸಿ, ದೇವಾಲಯವನ್ನು ಸುಟ್ಟುಬಿಟ್ಟಾಗ, ಈ ಮಾತುಗಳು ಯೆಹೂದ ಮತ್ತು ಯೆರೂಸಲೇಮಿನಲ್ಲಿ ನೆರವೇರಿದವು. ಎತ್ತರವಾಗಿ ನಿಂತಿದ್ದ ಯೆರೂಸಲೇಮ್‌ ಪಟ್ಟಣವು ಈಗ ಭೂಮಿಯಷ್ಟು ಕೆಳಮಟ್ಟಕ್ಕೆ ಇಳಿಸಲ್ಪಡುತ್ತದೆ.

20. ದೇವರ ವೈರಿಗಳ ಅಂತಿಮ ಗತಿಯು ಏನಾಗಿರುವುದು?

20 ಆ ವಿಪತ್ತು ಸಂಭವಿಸುವ ಮೊದಲು, ಯೆಹೋವನ ನಿಯಮಕ್ಕೆ ವಿಧೇಯನಾಗುವ ರಾಜನೊಬ್ಬನು ಆಗೊಮ್ಮೆ ಈಗೊಮ್ಮೆ ಯೆಹೂದವನ್ನು ಆಳುತ್ತಾನೆ. ಆಗ ಪರಿಸ್ಥಿತಿಯು ಹೇಗಿರುವುದು? ಯೆಹೋವನು ತನ್ನ ಜನರಿಗಾಗಿ ಹೋರಾಡುತ್ತಾನೆ. ವೈರಿಗಳು ಇಡೀ ದೇಶವನ್ನು ಆವರಿಸಿದರೂ, ಅವರು “ಸೂಕ್ಷ್ಮ ದೂಳಿ”ನಂತೆ ಮತ್ತು “ಹೊಟ್ಟಿ”ನಂತಾಗುವರು. ಯೆಹೋವನೇ ತಕ್ಕ ಸಮಯದಲ್ಲಿ, “ಗುಡುಗು, ಭೂಕಂಪ, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಯ ಜ್ವಾಲೆ ಇವುಗಳ ಮೂಲಕ” ಅವರನ್ನು ಓಡಿಸಿಬಿಡುತ್ತಾನೆ.​ಯೆಶಾಯ 29:5, 6.

21. ಯೆಶಾಯ 29:​7, 8ರಲ್ಲಿರುವ ದೃಷ್ಟಾಂತವನ್ನು ವಿವರಿಸಿರಿ.

21 ಯೆರೂಸಲೇಮನ್ನು ಧ್ವಂಸಮಾಡಿ ಅಲ್ಲಿಯ ಸಿರಿಸಂಪತ್ತನ್ನು ಲೂಟಿಮಾಡುವ ಅವಕಾಶಕ್ಕಾಗಿ ವೈರಿಗಳು ತುದಿಗಾಲಲ್ಲಿ ನಿಂತಿರಬಹುದು. ಆದರೆ, ಅವರು ಕಟು ಸತ್ಯವನ್ನು ಎದುರಿಸಲೇಬೇಕು! ಹಸಿದವನೊಬ್ಬನು ಭಾರೀ ಔತಣದಲ್ಲಿ ಪಾಲಿಗನಾಗುತ್ತಿರುವ ಕನಸು ಕಂಡರೂ, ಎಚ್ಚೆತ್ತಾಗ ಅವನ ಹೊಟ್ಟೆ ಬರಿದಾಗೇ ಇರುವಂತೆ, ಯೆಹೂದದ ವೈರಿಗಳು ಬಹಳ ಆಸೆಯಿಂದ ಕಾದುಕೊಂಡಿರುವ ಔತಣವನ್ನು ಅನುಭವಿಸಲಾರದೆ ಹೋಗುವರು. (ಓದಿ ಯೆಶಾಯ 29:​7, 8.) ನಂಬಿಗಸ್ತ ರಾಜನಾದ ಹಿಜ್ಕೀಯನ ದಿನದಲ್ಲಿ ಸೆನ್ಹೇರೀಬನ ನೇತೃತ್ವದಲ್ಲಿ ಅಶ್ಶೂರ ಸೇನೆಯು ಯೆರೂಸಲೇಮನ್ನು ಬೆದರಿಸಿದಾಗ ಅದಕ್ಕೇನಾಯಿತು ಎಂಬುದನ್ನು ತುಸು ಪರಿಗಣಿಸಿರಿ. (ಯೆಶಾಯ 36 ಮತ್ತು 37ನೆಯ ಅಧ್ಯಾಯಗಳು) ಭಯಪ್ರೇರಕವಾದ ಅಶ್ಶೂರ ಸೇನೆಯು ಯಾವುದೇ ಪ್ರತಿರೋಧವನ್ನು ಎದುರಿಸದೆಯೇ ಹಿಮ್ಮೆಟ್ಟುತ್ತದೆ. ಒಂದೇ ರಾತ್ರಿಯಲ್ಲಿ ಅದರ 1,85,000 ಶೂರರು ಹತರಾಗಿ ಬೀಳುತ್ತಾರೆ! ನಿಕಟ ಭವಿಷ್ಯತ್ತಿನಲ್ಲಿ ಯೆಹೋವನ ಜನರ ವಿರುದ್ಧ ಮಾಗೋಗಿನ ಗೋಗನು ತನ್ನ ಸೇನೆಯನ್ನು ಅಣಿಮಾಡುವಾಗಲೂ, ವಿಜಯದ ಕನಸುಗಳು ಹುಸಿಯಾಗುವವು.​—⁠ಯೆಹೆಜ್ಕೇಲ 38:​10-12; 39:​6, 7.

22. ಯೆಹೂದದ ಆತ್ಮಿಕ ಮತ್ತೇರುವಿಕೆಯು ಅದನ್ನು ಹೇಗೆ ಬಾಧಿಸುತ್ತದೆ?

22 ತನ್ನ ಪ್ರವಾದನೆಯ ಈ ಭಾಗವನ್ನು ಯೆಶಾಯನು ನುಡಿದ ಸಮಯದಲ್ಲಿ, ಯೆಹೂದದ ಮುಖಂಡರು ಹಿಜ್ಕೀಯನು ದೇವರಲ್ಲಿಟ್ಟಿರುವಂತಹ ನಂಬಿಕೆಯನ್ನು ತೋರಿಸುವುದಿಲ್ಲ. ಭಕ್ತಿಹೀನ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿರುವುದರಿಂದ, ಅವರು ಆತ್ಮಿಕ ಮಂಪರದಲ್ಲಿದ್ದಾರೆ. “ನಿಮ್ಮನ್ನು ನೀವೇ ಬೆರಗುಮಾಡಿಕೊಂಡು ಬೆರಗಾಗಿರಿ, ಕುರುಡುಮಾಡಿಕೊಂಡು ಕುರುಡರಾಗಿರಿ; ಇವರು ಅಮಲೇರಿದ್ದಾರೆ, ದ್ರಾಕ್ಷಾರಸದಿಂದಲ್ಲ; ಓಲಾಡುತ್ತಾರೆ, ಮದ್ಯದಿಂದಲ್ಲ.” (ಯೆಶಾಯ 29:9) ಆತ್ಮಿಕಾರ್ಥದಲ್ಲಿ ಮತ್ತರಾಗಿರುವ ಈ ಮುಖಂಡರು, ಯೆಹೋವನ ನಿಜ ಪ್ರವಾದಿಗೆ ಕೊಡಲ್ಪಟ್ಟ ದರ್ಶನದ ಅರ್ಥವನ್ನು ಗ್ರಹಿಸಲು ಅಶಕ್ತರಾಗಿದ್ದಾರೆ. ಯೆಶಾಯನು ಹೇಳುವುದು: “ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಮುಚ್ಚಿ ದಿವ್ಯದರ್ಶಿಗಳೆಂಬ ತಲೆಗಳಿಗೆ ಮುಸುಕು ಹಾಕಿದ್ದಾನಷ್ಟೆ. ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರಬಲ್ಲವನಿಗೆ​—⁠ದಯಮಾಡಿ ಓದೆಂದು ಒಪ್ಪಿಸಿದರೆ ಅವನು​—⁠ಮುದ್ರೆಹಾಕಿದೆಯಲ್ಲಾ, ಆಗುವದಿಲ್ಲ ಅನ್ನುವನು; ಅಕ್ಷರವಿಲ್ಲದವನಿಗೆ​—⁠ದಯವಿಟ್ಟು ಓದೆಂದು ಒಪ್ಪಿಸಿದರೆ ಅವನು​—⁠ನನಗೆ ವಿದ್ಯೆಯಿಲ್ಲ ಅನ್ನುವನು.”​—ಯೆಶಾಯ 29:10-12.

23. ಯೆಹೋವನು ಯೆಹೂದದಿಂದ ಲೆಕ್ಕ ಕೇಳಿಕೊಳ್ಳುವುದು ಏಕೆ, ಮತ್ತು ಇದನ್ನು ಆತನು ಹೇಗೆ ಮಾಡುವನು?

23 ಆತ್ಮಿಕ ವಿಷಯಗಳಲ್ಲಿ ತಾವು ವಿವೇಕಿಗಳೆಂದು ಯೆಹೂದದ ಧಾರ್ಮಿಕ ಮುಖಂಡರು ಹೇಳಿಕೊಂಡರೂ, ಅವರು ಯೆಹೋವನನ್ನು ಬಿಟ್ಟುಬಿಟ್ಟಿದ್ದಾರೆ. ಅದರ ಬದಲು, ಸರಿತಪ್ಪುಗಳ ಬಗ್ಗೆ ತಮ್ಮದೇ ಆದ ವಕ್ರ ವಿಚಾರಗಳನ್ನು ಕಲಿಸುತ್ತಾ, ತಮ್ಮ ಅಪನಂಬಿಗಸ್ತ ಹಾಗೂ ಅನೈತಿಕ ಚಟುವಟಿಕೆಗಳನ್ನು ಸಮರ್ಥಿಸುತ್ತಾ, ಅವರು ಜನರನ್ನು ದೇವರ ಕೋಪಕ್ಕೆ ಗುರಿಮಾಡುತ್ತಾ ಇದ್ದಾರೆ. ಯೆಹೋವನು ‘ಅಧಿಕಾಶ್ಚರ್ಯವಾದ ಕಾರ್ಯದ’ ಮೂಲಕ, ಅಂದರೆ ತನ್ನ ‘ಅಪರೂಪವಾದ ಕೆಲಸದ’ ಮೂಲಕ ಈ ಜನರಿಂದ ಕಪಟಾಚಾರದ ವಿಷಯದಲ್ಲಿ ಲೆಕ್ಕ ಕೇಳುವನು. ಆತನು ಹೇಳುವುದು: “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿಕೊಂಡು ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯಭಕ್ತಿಯನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ; ಹೀಗಿರುವದರಿಂದ ನಾನು ಈ ಜನರ ಮಧ್ಯದಲ್ಲಿ ಅಧಿಕಾಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನು ಮಾಡುವೆನು; ಇವರ ಜ್ಞಾನಿಗಳ ಜ್ಞಾನವು ಅಳಿಯುವದು, ವಿವೇಕಿಗಳ ವಿವೇಕವು ಅಡಗುವದು.” (ಯೆಶಾಯ 29:13, 14) ಯೆಹೋವನು ಉಪಾಯದಿಂದ ವಿಷಯಗಳನ್ನು ಯೋಜಿಸಿ, ಲೋಕ ಶಕ್ತಿಯಾದ ಬಾಬೆಲಿನ ಮೂಲಕ ಇಡೀ ಧರ್ಮಭ್ರಷ್ಟ ಧಾರ್ಮಿಕ ವ್ಯವಸ್ಥೆಯನ್ನು ನಾಶಗೊಳಿಸುವಾಗ, ಯೆಹೂದದ ಸ್ವಘೋಷಿತ ವಿವೇಕ ಮತ್ತು ತಿಳುವಳಿಕೆಗಳು ಕಣ್ಣಿಗೆ ಕಾಣದಂತೆ ಅಡಗಿಕೊಳ್ಳುವವು. ಪ್ರಥಮ ಶತಮಾನದಲ್ಲಿ ಯೆಹೂದ್ಯರ ಸ್ವಘೋಷಿತ ವಿವೇಕಿ ಮುಖಂಡರು ಜನಾಂಗವನ್ನು ತಪ್ಪುದಾರಿಗೆ ನಡೆಸಿದಾಗಲೂ ಇದೇ ಸಂಭವಿಸಿತು. ನಮ್ಮ ದಿನದಲ್ಲಿಯೂ ಕ್ರೈಸ್ತಪ್ರಪಂಚವು ತದ್ರೀತಿಯ ಸಂಭವಕ್ಕೆ ಗುರಿಯಾಗುವುದು.​—⁠ಮತ್ತಾಯ 15:​8, 9; ರೋಮಾಪುರ 11:⁠8.

24. ತಮಗೆ ದೇವರ ಭಯವಿಲ್ಲವೆಂಬುದನ್ನು ಯೆಹೂದದ ನಿವಾಸಿಗಳು ಹೇಗೆ ತೋರಿಸಿಕೊಡುತ್ತಾರೆ?

24 ಸತ್ಯಾರಾಧನೆಯನ್ನು ಭ್ರಷ್ಟಗೊಳಿಸಿದರೂ ಅದರ ಪರಿಣಾಮದಿಂದ ತಪ್ಪಿಸಿಕೊಳ್ಳುವಷ್ಟು ಜಾಣರು ತಾವೆಂದು ಯೆಹೂದದ ಈ ಬಡಾಯಿಕೋರ ಮುಖಂಡರು ನೆನಸುತ್ತಾರೆ. ಆದರೆ, ಅವರು ನಿಜವಾಗಿಯೂ ಜಾಣರೊ? ಯೆಶಾಯನು ಅವರ ಮುಸುಕನ್ನು ಕಳಚಿಹಾಕುತ್ತಾನೆ. ಅವರಿಗೆ ದೇವರ ಯಥಾರ್ಥ ಭಯವಿಲ್ಲದ ಕಾರಣ, ನಿಜವಾದ ವಿವೇಕವು ಅವರಲ್ಲಿಲ್ಲ ಎಂಬುದನ್ನು ಅವನು ಬಯಲುಪಡಿಸುತ್ತಾನೆ: “ತಮ್ಮ ಆಲೋಚನೆಯನ್ನು ಯೆಹೋವನಿಗೆ ಮರೆಮಾಜುವದಕ್ಕೆ ಅಗಾಧೋಪಾಯ ಮಾಡಿ ನಮ್ಮನ್ನು ಯಾರು ನೋಡಿಯಾರು, ಯಾರು ತಿಳಿದಾರು ಅಂದುಕೊಂಡು ಕತ್ತಲಲ್ಲೇ ತಮ್ಮ ಕೆಲಸಗಳನ್ನು ನಡಿಸುವವರ ಗತಿಯನ್ನು ಏನು ಹೇಳಲಿ! ಅಯ್ಯೋ, ನೀವು ಎಂಥಾ ಮೂರ್ಖರು! ಕುಂಬಾರನು ಮಣ್ಣೆನಿಸಿಕೊಂಡಾನೇ? ಕಾರ್ಯವು ಕರ್ತೃವನ್ನು ಕುರಿತು ಅವನು ನನ್ನನ್ನು ಮಾಡಲಿಲ್ಲ ಎಂದುಕೊಂಡೀತೇ? ನಿರ್ಮಿತವಾದದ್ದು ನಿರ್ಮಿಸಿದವನ ವಿಷಯವಾಗಿ ಅವನಿಗೆ ವಿವೇಕವಿಲ್ಲ ಎಂದೀತೇ?” (ಯೆಶಾಯ 29:15, 16; ಹೋಲಿಸಿ ಕೀರ್ತನೆ 111:10.) ತಾವು ಯಾರ ಕಣ್ಣಿಗೂ ಬೀಳದಷ್ಟು ಸುರಕ್ಷಿತವಾಗಿ ಅಡಗಿಕೊಂಡಿದ್ದೇವೆಂದು ಅವರು ನೆನಸಿದರೂ, ಅವರು ದೇವರ ದೃಷ್ಟಿಯಲ್ಲಿ ‘ಮುಚ್ಚುಮರೆಯಿಲ್ಲದವರೂ ಬೈಲಾದವರೂ ಆಗಿ’ ನಿಂತಿದ್ದಾರೆ.​—⁠ಇಬ್ರಿಯ 4:⁠13.

‘ಕಿವುಡರು ಕೇಳುವರು’

25. ಯಾವ ಅರ್ಥದಲ್ಲಿ “ಕಿವುಡರು” ಕೇಳುವರು?

25 ಆದರೆ, ನಂಬಿಕೆಯನ್ನು ವ್ಯಕ್ತಪಡಿಸುವ ವ್ಯಕ್ತಿಗಳು ರಕ್ಷಿಸಲ್ಪಡುವರು. (ಓದಿ ಯೆಶಾಯ 29:​17-24; ಹೋಲಿಸಿ ಲೂಕ 7:22.) “ಕಿವುಡರು” ದೇವರ ವಾಕ್ಯದ, ಅಂದರೆ “ಶಾಸ್ತ್ರದ ಮಾತುಗಳನ್ನು ಕೇಳುವರು.” ಹೌದು, ಇದು ಶಾರೀರಿಕ ಕಿವುಡುತನದ ಗುಣಪಡಿಸುವಿಕೆಯಾಗಿಲ್ಲ. ಇದು ಆತ್ಮಿಕ ಗುಣಪಡಿಸುವಿಕೆಯಾಗಿದೆ. ಯೆಶಾಯನು ಮತ್ತೊಮ್ಮೆ ಮೆಸ್ಸೀಯ ರಾಜ್ಯದ ಸ್ಥಾಪನೆಯ ಬಗ್ಗೆ ಮತ್ತು ಮೆಸ್ಸೀಯನ ಆಳ್ವಿಕೆಯ ಕೆಳಗೆ ಭೂಮಿಯಲ್ಲಿ ಸತ್ಯಾರಾಧನೆಯು ಪುನಸ್ಸ್ಥಾಪನೆಗೊಳ್ಳುವ ಬಗ್ಗೆ ಹೇಳುತ್ತಾನೆ. ಇದು ನಮ್ಮ ಸಮಯದಲ್ಲಿ ನೆರವೇರಿದೆ. ಪ್ರಾಮಾಣಿಕರಾಗಿರುವ ಲಕ್ಷಾಂತರ ಜನರು ತಮ್ಮನ್ನು ಯೆಹೋವನ ತಿದ್ದುವಿಕೆಗೆ ಅಧೀನಪಡಿಸಿಕೊಂಡು, ಆತನನ್ನು ಸ್ತುತಿಸಲು ಕಲಿಯುತ್ತಿದ್ದಾರೆ. ಎಂತಹ ರೋಚಕವಾದ ನೆರವೇರಿಕೆ! ಕಟ್ಟಕಡೆಗೆ ಪ್ರತಿಯೊಬ್ಬರೂ, ಉಸಿರಾಡುವ ಪ್ರತಿಯೊಂದು ಜೀವಿಯೂ ಯೆಹೋವನನ್ನು ಸ್ತುತಿಸುವ ಮತ್ತು ಆತನ ಪವಿತ್ರ ನಾಮವನ್ನು ಪವಿತ್ರೀಕರಿಸುವ ದಿನವು ಬರುವುದು.​—⁠ಕೀರ್ತನೆ 150:⁠6.

26. ಯಾವ ಆತ್ಮಿಕ ಮರುಜ್ಞಾಪನಗಳನ್ನು “ಕಿವುಡರು” ಇಂದು ಕೇಳಿಸಿಕೊಳ್ಳುತ್ತಾರೆ?

26 ಇಂದು ದೇವರ ವಾಕ್ಯವನ್ನು ಆಲಿಸುವ ಇಂತಹ “ಕಿವುಡರು” ಏನನ್ನು ಕಲಿಯುತ್ತಾರೆ? ಎಲ್ಲ ಕ್ರೈಸ್ತರು ಮತ್ತು ವಿಶೇಷವಾಗಿ ಸಭೆಯಲ್ಲಿ ಮಾದರಿಗಳೋಪಾದಿ ಇರಬೇಕಾದವರು ‘ದ್ರಾಕ್ಷಾರಸದಿಂದ ಓಲಾಡದಂತೆ’ ಎಚ್ಚರವಹಿಸಬೇಕು ಎಂಬುದನ್ನೇ. (ಯೆಶಾಯ 28:⁠7) ಅಲ್ಲದೆ, ಎಲ್ಲ ವಿಷಯಗಳಲ್ಲಿ ಆತ್ಮಿಕ ದೃಷ್ಟಿಕೋನವನ್ನು ಪಡೆದಿರುವಂತೆ ನಮಗೆ ಸಹಾಯಮಾಡುವ ದೇವರ ಮರುಜ್ಞಾಪನಗಳಿಂದ ನಾವೆಂದೂ ಬೇಸತ್ತುಹೋಗಬಾರದು. ಕ್ರೈಸ್ತರು ಯೋಗ್ಯವಾಗಿಯೇ ಸರಕಾರದ ಅಧಿಕಾರಿಗಳಿಗೆ ಅಧೀನರಾಗಿ, ಕೆಲವು ಸೌಕರ್ಯಗಳಿಗಾಗಿ ಅವರ ಕಡೆಗೆ ನೋಡಿದರೂ, ರಕ್ಷಣೆಯು ಈ ಲೋಕದಿಂದಲ್ಲ ಕೇವಲ ಯೆಹೋವ ದೇವರಿಂದ ಮಾತ್ರ ಬರುವುದು. ಹೇಗೆ ಧರ್ಮಭ್ರಷ್ಟ ಯೆರೂಸಲೇಮು ದೇವರ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲವೊ ಹಾಗೆಯೇ ಈ ಸಂತತಿಯು ಕೂಡ ತಪ್ಪಿಸಿಕೊಳ್ಳಲಾರದು. ನಾವು ವಿರೋಧದ ಎದುರಿನಲ್ಲೂ ಯೆಹೋವನ ಸಹಾಯದಿಂದ ಆತನ ಎಚ್ಚರಿಕೆಯ ಸಂದೇಶವನ್ನು ಯೆಶಾಯನಂತೆ ಪ್ರಕಟಿಸುತ್ತಾ ಇರಬಲ್ಲೆವು.​—⁠ಯೆಶಾಯ 28:​14, 22; ಮತ್ತಾಯ 24:34.

27. ಯೆಶಾಯನ ಪ್ರವಾದನೆಯಿಂದ ಕ್ರೈಸ್ತರು ಯಾವ ಪಾಠಗಳನ್ನು ಕಲಿತುಕೊಳ್ಳಬಲ್ಲರು?

27 ಯೆಹೋವನು ಶಿಕ್ಷೆಯನ್ನು ವಿಧಿಸುವ ರೀತಿಯಿಂದ, ಹಿರಿಯರು ಮತ್ತು ಹೆತ್ತವರು ಒಂದು ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ. ಅದೇನೆಂದರೆ, ತಪ್ಪಿತಸ್ಥರನ್ನು ಕೇವಲ ಶಿಕ್ಷಿಸದೆ, ಅವರು ದೇವರ ಅನುಗ್ರಹಕ್ಕೆ ಮತ್ತೆ ಪಾತ್ರರಾಗುವಂತೆ ಪ್ರಯಾಸಪಡಬೇಕೆಂಬುದೇ. (ಯೆಶಾಯ 28:​26-29; ಹೋಲಿಸಿ ಯೆರೆಮೀಯ 30:11.) ಯುವ ಜನರನ್ನು ಸೇರಿಸಿ ನಾವೆಲ್ಲರೂ, ಮನುಷ್ಯರನ್ನು ಮೆಚ್ಚಿಸುವ ಸಲುವಾಗಿ ಒಬ್ಬ ಕ್ರೈಸ್ತನಂತೆ ಕೇವಲ ನಟಿಸದೆ, ಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸುವುದು ಎಷ್ಟು ಪ್ರಾಮುಖ್ಯ ಎಂಬುದರ ಬಗ್ಗೆ ಮರುಜ್ಞಾಪಕವನ್ನು ಪಡೆಯುತ್ತೇವೆ. (ಯೆಶಾಯ 29:13) ನಾವು ಯೆಹೂದದ ಅಪನಂಬಿಗಸ್ತ ನಿವಾಸಿಗಳಂತಿರದೆ, ಯೆಹೋವನ ಬಗ್ಗೆ ಹಿತಕರವಾದ ಭಯವನ್ನೂ ಆಳವಾದ ಗೌರವವನ್ನೂ ಹೊಂದಿದವರಾಗಿದ್ದೇವೆ ಎಂದು ತೋರಿಸಬೇಕು. (ಯೆಶಾಯ 29:16) ಅದೂ ಅಲ್ಲದೆ, ಯೆಹೋವನಿಂದ ತಿದ್ದಲ್ಪಡಲು ಮತ್ತು ಆತನಿಂದ ಕಲಿಯಲು ನಾವು ಸಿದ್ಧರಾಗಿದ್ದೇವೆ ಎಂಬುದನ್ನೂ ನಾವು ತೋರಿಸಬೇಕಾಗಿದೆ.​—⁠ಯೆಶಾಯ 29:⁠24.

28. ಯೆಹೋವನ ರಕ್ಷಣಾ ಕ್ರಿಯೆಗಳನ್ನು ಆತನ ಸೇವಕರು ಹೇಗೆ ವೀಕ್ಷಿಸುತ್ತಾರೆ?

28 ಯೆಹೋವನಲ್ಲಿ ಮತ್ತು ಆತನ ಕಾರ್ಯವಿಧಾನದಲ್ಲಿ ನಂಬಿಕೆ ಮತ್ತು ಭರವಸೆಯಿರುವುದು ಎಷ್ಟು ಪ್ರಾಮುಖ್ಯ! (ಹೋಲಿಸಿ ಕೀರ್ತನೆ 146:⁠3.) ಹೆಚ್ಚಿನವರಿಗೆ, ನಾವು ಸಾರುವ ಎಚ್ಚರಿಕೆಯ ಸಂದೇಶವು ಬಾಲಿಶವಾಗಿ ತೋರುವುದು. ದೇವರನ್ನು ಸೇವಿಸುವುದಾಗಿ ಹೇಳಿಕೊಳ್ಳುವ ಕ್ರೈಸ್ತಪ್ರಪಂಚದಂತಹ ಒಂದು ಸಂಘಟನೆಯು ಮುಂದೆ ನಾಶವಾಗಲಿದೆ ಎಂಬುದು ಒಂದು ಅಪರೂಪವಾದ, ಅಪೂರ್ವವಾದ ವಿಷಯವಾಗಿದೆ. ಆದರೆ ಯೆಹೋವನು ಈ ‘ಅಪರೂಪವಾದ ಕೆಲಸವನ್ನು’ ಖಂಡಿತವಾಗಿಯೂ ನೆರವೇರಿಸುವನು. ಅದರ ಬಗ್ಗೆ ಸಂದೇಹವಿರುವ ಅಗತ್ಯವಿಲ್ಲ. ಆದಕಾರಣ, ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ, ದೇವರ ಸೇವಕರು ಆತನ ರಾಜ್ಯದಲ್ಲಿ ಮತ್ತು ಆತನ ನೇಮಿತ ರಾಜನಾದ ಯೇಸು ಕ್ರಿಸ್ತನಲ್ಲಿ ಪೂರ್ಣ ಭರವಸೆಯನ್ನಿಡುತ್ತಾರೆ. ಯೆಹೋವನ ರಕ್ಷಣೆಯ ಕ್ರಿಯೆಗಳು, ಅದರೊಂದಿಗೆ ಆತನ ‘ಅಪರೂಪವಾದ ಕೆಲಸವು’ ಎಲ್ಲ ವಿಧೇಯ ಮಾನವವರ್ಗಕ್ಕೆ ನಿತ್ಯ ಆಶೀರ್ವಾದಗಳನ್ನು ತರುವುದೆಂದು ಅವರು ಬಲ್ಲರು.

[ಪಾದಟಿಪ್ಪಣಿ]

^ ಪ್ಯಾರ. 8 ಮೂಲ ಹೀಬ್ರು ಭಾಷೆಯಲ್ಲಿ, ಯೆಶಾಯ 28:10 ಪುನರಾವರ್ತಿಸುವ ಪ್ರಾಸದಂತೆ, ಅದಕ್ಕಿಂತಲೂ ಸ್ಪಷ್ಟವಾಗಿ ಹೇಳಬೇಕೆಂದರೆ, ಪ್ರಾಸವಿರುವ ಶಿಶುಗೀತೆಯಂತಿದೆ. ಆದಕಾರಣ, ಈ ಧಾರ್ಮಿಕ ಮುಖಂಡರಿಗೆ ಯೆಶಾಯನ ಸಂದೇಶವು ಬಾಲಿಶವಾಗಿಯೂ, ಹೇಳಿದ್ದನ್ನೇ ಹೇಳುವ ವಿಷಯವಾಗಿಯೂ ತೋರುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 289ರಲ್ಲಿರುವ ಚಿತ್ರಗಳು]

ಕ್ರೈಸ್ತಪ್ರಪಂಚವು ದೇವರಿಗೆ ಬದಲಾಗಿ ಮಾನವ ಅಧಿಪತಿಗಳ ಮೈತ್ರಿಗಳ ಮೇಲೆಯೇ ಆತುಕೊಂಡಿದೆ

[ಪುಟ 290ರಲ್ಲಿರುವ ಚಿತ್ರ]

ಯೆರೂಸಲೇಮನ್ನು ನಾಶಮಾಡುವಂತೆ ಬಾಬೆಲಿಗೆ ಅನುಮತಿ ನೀಡುವ ಮೂಲಕ ಯೆಹೋವನು ತನ್ನ ‘ಅಪರೂಪವಾದ ಕೆಲಸವನ್ನು’ ನಡೆಸಿದನು

[ಪುಟ 298ರಲ್ಲಿರುವ ಚಿತ್ರ]

ಆತ್ಮಿಕವಾಗಿ ಕಿವುಡರಾಗಿದ್ದವರು ಈಗ ದೇವರ ವಾಕ್ಯವನ್ನು ‘ಕೇಳಬಲ್ಲರು’