ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಲಯವು ಉನ್ನತಕ್ಕೇರಿಸಲ್ಪಡುತ್ತದೆ

ಯೆಹೋವನ ಆಲಯವು ಉನ್ನತಕ್ಕೇರಿಸಲ್ಪಡುತ್ತದೆ

ಅಧ್ಯಾಯ ನಾಲ್ಕು

ಯೆಹೋವನ ಆಲಯವು ಉನ್ನತಕ್ಕೇರಿಸಲ್ಪಡುತ್ತದೆ

ಯೆಶಾಯ 2:​1-5

1, 2. ವಿಶ್ವ ಸಂಸ್ಥೆಯ ಪ್ಲಾಸದ ಗೋಡೆಯಲ್ಲಿ ಯಾವ ಮಾತುಗಳು ಕೆತ್ತಲ್ಪಟ್ಟಿವೆ, ಮತ್ತು ಅವುಗಳ ಮೂಲವೇನು?

“ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ಈ ಮಾತುಗಳನ್ನು ನ್ಯೂ ಯಾರ್ಕ್‌ ಸಿಟಿಯಲ್ಲಿರುವ ವಿಶ್ವ ಸಂಸ್ಥೆಯ ಪ್ಲಾಸದ ಗೋಡೆಯೊಂದರಲ್ಲಿ ಕೆತ್ತಲಾಗಿದೆ. ಅನೇಕ ದಶಕಗಳ ವರೆಗೆ ಆ ಉಲ್ಲೇಖದ ಮೂಲವನ್ನೇ ಗುರುತಿಸಲಾಗಿರಲಿಲ್ಲ. ವಿಶ್ವ ಸಂಸ್ಥೆಯ ಗುರಿಯು ಭೌಗೋಲಿಕ ಶಾಂತಿಗಾಗಿ ಪ್ರಯತ್ನಿಸುವುದೇ ಆಗಿರುವುದರಿಂದ, ಈ ಉಲ್ಲೇಖವು 1945ರಲ್ಲಿ ಸ್ಥಾಪಿಸಲಾದ ವಿಶ್ವ ಸಂಸ್ಥೆಯ ಸ್ಥಾಪಕರದ್ದು ಎಂದು ತೀರ್ಮಾನಿಸುವುದು ಸುಲಭವಾಗಿತ್ತು.

2 ಆದರೆ 1975ರಲ್ಲಿ, ಯೆಶಾಯ ಎಂಬ ಹೆಸರನ್ನು ಆ ಉಲ್ಲೇಖದ ಕೆಳಗಡೆ ಕೆತ್ತಲಾಯಿತು. ಆ ಮಾತುಗಳು ಇತ್ತೀಚಿನ ಮೂಲದವುಗಳಲ್ಲ ಎಂದು ತಿಳಿದುಬಂದದ್ದು ಆಗಲೇ. ವಾಸ್ತವವಾಗಿ, ಅವುಗಳನ್ನು 2,700ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಒಂದು ಪ್ರವಾದನೆಯಾಗಿ ದಾಖಲಿಸಲಾಗಿತ್ತು. ಈಗ ಅದು ಯೆಶಾಯ ಪುಸ್ತಕದ 2ನೆಯ ಅಧ್ಯಾಯದಲ್ಲಿ ಕಂಡುಬರುತ್ತದೆ. ಯೆಶಾಯನು ಮುಂತಿಳಿಸಿರುವ ಮಾತುಗಳು ಹೇಗೆ ಮತ್ತು ಯಾವಾಗ ಸಂಭವಿಸುವವು ಎಂಬುದರ ಕುರಿತು ಶಾಂತಿಪ್ರಿಯರು ಸಹಸ್ರಾರು ವರ್ಷಗಳಿಂದಲೂ ಚಿಂತಿಸಿರುತ್ತಾರೆ. ಆದರೆ ಇದರ ವಿಷಯ ಇನ್ನು ಕುತೂಹಲಪಡುವ ಅಗತ್ಯವಿಲ್ಲ. ಏಕೆಂದರೆ ಇಂದು ಈ ಹಳೆಯ ಪ್ರವಾದನೆಯ ಗಮನಾರ್ಹವಾದ ನೆರವೇರಿಕೆಯನ್ನು ನಾವು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ.

3. ಕತ್ತಿಗಳನ್ನು ಗುಳಗಳನ್ನಾಗಿ ಬಡಿಯುವ ದೇಶಗಳವರು ಯಾರು?

3 ಕತ್ತಿಗಳನ್ನು ಗುಳಗಳನ್ನಾಗಿ ಬಡಿಯುವ ಆ ದೇಶಗಳವರು ಯಾರು? ಅವು ಇಂದಿನ ರಾಜಕೀಯ ರಾಷ್ಟ್ರಗಳು ಮತ್ತು ಸರಕಾರಗಳಲ್ಲವೆಂಬುದು ನಿಶ್ಚಯ. ಏಕೆಂದರೆ ಇದುವರೆಗೆ ಈ ರಾಷ್ಟ್ರಗಳು ಯುದ್ಧಹೂಡಲು ಅಥವಾ “ಶಾಂತಿ”ಯನ್ನು ಕಾಪಾಡಿಕೊಳ್ಳಲು ಕತ್ತಿಗಳನ್ನು ಇಲ್ಲವೆ ಆಯುಧಗಳನ್ನು ತಯಾರಿಸಿವೆ. ವಾಸ್ತವವಾಗಿ, ಯಾವಾಗಲೂ ಗುಳಗಳನ್ನು ಕತ್ತಿಗಳಾಗಿ ಬಡಿಯುವುದೇ ರಾಷ್ಟ್ರಗಳ ಪ್ರವೃತ್ತಿಯಾಗಿದೆ! ಆದರೆ ಯೆಶಾಯನ ಈ ಪ್ರವಾದನೆಯು, “ಶಾಂತಿದಾಯಕ” ಯೆಹೋವ ದೇವರ ಆರಾಧಕರೂ ಎಲ್ಲಾ ರಾಷ್ಟ್ರಗಳಿಂದ ಬಂದವರೂ ಆಗಿರುವ ಪ್ರತಿನಿಧಿಗಳಲ್ಲಿಯೇ ನೆರವೇರುತ್ತದೆ.​—⁠ಫಿಲಿಪ್ಪಿ 4:⁠9.

ಶುದ್ಧಾರಾಧನೆಗೆ ಪ್ರವಾಹಗಳಂತೆ ಹರಿದುಬರುವ ದೇಶಗಳವರು

4, 5. ಯೆಶಾಯ ಅಧ್ಯಾಯ 2ರ ಆರಂಭದ ವಚನಗಳು ಏನನ್ನು ಮುಂತಿಳಿಸುತ್ತವೆ, ಮತ್ತು ಆ ಮಾತುಗಳ ಭರವಸಾರ್ಹತೆಯನ್ನು ಯಾವುದು ಒತ್ತಿಹೇಳುತ್ತದೆ?

4 ಯೆಶಾಯ 2ನೆಯ ಅಧ್ಯಾಯವು ಈ ಮಾತುಗಳಿಂದ ಆರಂಭಗೊಳ್ಳುತ್ತದೆ: “ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡುಬಂದ ದೈವೋಕ್ತಿ​—⁠ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.”​—ಯೆಶಾಯ 2:1, 2.

5 ಯೆಶಾಯನು ಮುಂತಿಳಿಸುವುದು ಬರಿ ಊಹಾಪೋಹವಲ್ಲವೆಂಬುದನ್ನು ಗಮನಿಸಿ. ‘ನೆಲೆಗೊಳ್ಳುವುದು,’ ಅಂದರೆ ತಪ್ಪದೆ ನೆರವೇರಬೇಕಾದ ಘಟನೆಗಳ ಬಗ್ಗೆ ಬರೆಯುವಂತೆ ಯೆಶಾಯನಿಗೆ ನಿರ್ದೇಶಿಸಲಾಗುತ್ತದೆ. ಅಂದರೆ ಯೆಹೋವನು ಉದ್ದೇಶಿಸುವುದೆಲ್ಲವೂ ‘ಕೈಗೂಡುತ್ತದೆ.’ (ಯೆಶಾಯ 55:11) ಯೆಶಾಯನ ಸಮಕಾಲೀನನಾದ ಪ್ರವಾದಿ ಮೀಕನು ಸಹ ಯೆಶಾಯ 2:​2-4ರ ಅದೇ ಪ್ರವಾದನೆಯನ್ನು ಬರೆಯುವಂತೆ ದೇವರು ಪ್ರೇರೇಪಿಸಿದನು. ತನ್ನ ವಾಗ್ದಾನದ ಭರವಸಾರ್ಹತೆಯನ್ನು ಪ್ರಾಯಶಃ ಒತ್ತಿಹೇಳಲಿಕ್ಕಾಗಿ ದೇವರು ಹೀಗೆ ಮಾಡಿರಬಹುದು.​—⁠ಮೀಕ 4:​1-3.

6. ಯೆಶಾಯನ ಪ್ರವಾದನೆಯು ಯಾವಾಗ ನೆರವೇರುವುದು?

6 ಹಾಗಾದರೆ ಯೆಶಾಯನ ಪ್ರವಾದನೆಯು ಯಾವಾಗ ನೆರವೇರಲಿರುವುದು? “ಅಂತ್ಯಕಾಲದಲ್ಲಿ.” ಈ ಅವಧಿಯನ್ನು ಗುರುತಿಸುವ ವಿಶೇಷ ಘಟನೆಗಳನ್ನು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ಮುಂತಿಳಿಸಿದವು. ಆ ಘಟನೆಗಳಲ್ಲಿ ಯುದ್ಧಗಳು, ಭೂಕಂಪಗಳು, ವ್ಯಾಧಿಗಳು, ಆಹಾರದ ಅಭಾವಗಳು ಮತ್ತು “ಕಠಿನಕಾಲಗಳು” ಸೇರಿವೆ. * (2 ತಿಮೊಥೆಯ 3:​1-5; ಲೂಕ 21:​10, 11) ಇಂತಹ ಪ್ರವಾದನೆಗಳ ನೆರವೇರಿಕೆಯು ನಾವು “ಅಂತ್ಯಕಾಲದಲ್ಲಿ,” ಅಂದರೆ ಈಗಿನ ಲೋಕ ವ್ಯವಸ್ಥೆಯ ಕೊನೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂಬುದಕ್ಕೆ ಹೇರಳವಾದ ಪುರಾವೆಯನ್ನು ಕೊಡುತ್ತದೆ. ಹಾಗಾದರೆ, ನ್ಯಾಯೋಚಿತವಾಗಿ, ಯೆಶಾಯನು ಮುಂತಿಳಿಸಿದ ಸಂಗತಿಗಳು ನಮ್ಮ ಕಾಲದಲ್ಲಿ ನೆರವೇರುವುದನ್ನು ನೋಡಲು ನಾವು ನಿರೀಕ್ಷಿಸುವೆವು.

ಆರಾಧಿಸಲಿಕ್ಕಾಗಿ ಒಂದು ಬೆಟ್ಟ

7. ಯಾವ ಪ್ರವಾದನಾ ಚಿತ್ರಣವನ್ನು ಯೆಶಾಯನು ಬರೆಯುತ್ತಾನೆ?

7 ಕೆಲವೇ ಮಾತುಗಳಲ್ಲಿ ಯೆಶಾಯನು ಸುವ್ಯಕ್ತವಾದ ಪ್ರವಾದನಾ ಚಿತ್ರಣವನ್ನು ಕೊಡುತ್ತಾನೆ. ನಾವು ಯೆಹೋವನ ದೇವಾಲಯವಾಗಿರುವ ಮಹಿಮಾಭರಿತವಾದ ಒಂದು ಭವನವನ್ನು ಒಂದು ಉನ್ನತ ಬೆಟ್ಟದ ಮೇಲೆ ನೋಡುತ್ತೇವೆ. ಸುತ್ತಲಿನ ಗುಡ್ಡಬೆಟ್ಟಗಳಿಗಿಂತ ಈ ಬೆಟ್ಟವು ಉನ್ನತವಾಗಿದೆ. ಆದರೂ ಇದು ಅಪಾಯ ಮುನ್‌ಸೂಚಕವೂ ಅಲ್ಲ, ಭಯ ಹುಟ್ಟಿಸುವಂತಹದ್ದೂ ಅಲ್ಲ. ಬದಲಿಗೆ, ಆಕರ್ಷಕವಾಗಿದೆ. ಎಲ್ಲ ಜನಾಂಗಗಳವರು ಯೆಹೋವನ ಮಂದಿರದ ಆ ಬೆಟ್ಟವನ್ನೇರಲು ಹಾತೊರೆಯುತ್ತಾರೆ; ಅವರು ಅದಕ್ಕೆ ಪ್ರವಾಹದಂತೆ ಹರಿದುಬರುತ್ತಾರೆ. ಇದರ ಮನಶ್ಚಿತ್ರವನ್ನು ಕಾಣುವುದು ಸುಲಭವಾದರೂ ಅದರ ಅರ್ಥವೇನು?

8. (ಎ) ಯೆಶಾಯನ ದಿನಗಳಲ್ಲಿ ಗುಡ್ಡಬೆಟ್ಟಗಳು ಯಾವುದರೊಂದಿಗೆ ಜೊತೆಗೂಡಿಸಲ್ಪಡುತ್ತವೆ? (ಬಿ) “ಯೆಹೋವನ ಮಂದಿರದ ಬೆಟ್ಟ”ಕ್ಕೆ ದೇಶಗಳವರು ಪ್ರವಾಹದೋಪಾದಿ ಬರುವುದು ಏನನ್ನು ಚಿತ್ರಿಸುತ್ತದೆ?

8 ಯೆಶಾಯನ ದಿನಗಳಲ್ಲಿ ಗುಡ್ಡಬೆಟ್ಟಗಳು ಅನೇಕ ಬಾರಿ ಆರಾಧನೆಯೊಂದಿಗೆ ಜೊತೆಗೂಡಿಸಲ್ಪಡುತ್ತವೆ. ಉದಾಹರಣೆಗೆ, ಅವು ವಿಗ್ರಹಾರಾಧನೆಯ ನಿವೇಶನಗಳೂ ಸುಳ್ಳುದೇವತೆಗಳ ಆರಾಧನಾ ಸ್ಥಳಗಳೂ ಆಗಿವೆ. (ಧರ್ಮೋಪದೇಶಕಾಂಡ 12:2; ಯೆರೆಮೀಯ 3:⁠6) ಆದರೂ, ಯೆಹೋವನ ಆಲಯ ಅಥವಾ ಮಂದಿರವು ಯೆರೂಸಲೇಮಿನ ಮೊರೀಯ ಬೆಟ್ಟದ ತುದಿಯಲ್ಲಿದೆ. ನಂಬಿಗಸ್ತ ಇಸ್ರಾಯೇಲ್ಯರು ವರ್ಷಕ್ಕೆ ಮೂರಾವರ್ತಿ ಯೆರೂಸಲೇಮಿಗೆ ಪಯಣಿಸಿ, ಸತ್ಯ ದೇವರನ್ನು ಆರಾಧಿಸಲು ಮೊರೀಯ ಬೆಟ್ಟವನ್ನೇರುತ್ತಾರೆ. (ಧರ್ಮೋಪದೇಶಕಾಂಡ 16:16) ಈ ಕಾರಣ, “ಯೆಹೋವನ ಮಂದಿರದ ಬೆಟ್ಟ”ಕ್ಕೆ ಸಕಲ ದೇಶಗಳವರು ಪ್ರವಾಹದಂತೆ ಹರಿದು ಬರುವುದು ಅನೇಕ ಜನರು ಸತ್ಯಾರಾಧನೆಗೆ ಕೂಡಿಬರುವುದನ್ನು ಚಿತ್ರಿಸುತ್ತದೆ.

9. “ಯೆಹೋವನ ಮಂದಿರದ ಬೆಟ್ಟವು” ಏನನ್ನು ಪ್ರತಿನಿಧಿಸುತ್ತದೆ?

9 ಇಂದು ದೇವಜನರು ಕಲ್ಲಿನ ದೇವಾಲಯವಿರುವ ಅಕ್ಷರಾರ್ಥ ಬೆಟ್ಟವೊಂದರಲ್ಲಿ ಕೂಡಿಬರುವುದಿಲ್ಲವೆಂಬುದು ನಿಜ. ಸಾ.ಶ. 70ರಲ್ಲಿ ರೋಮನ್‌ ಸೈನ್ಯಗಳು ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯವನ್ನು ನಾಶಗೊಳಿಸಿದವು. ಅಲ್ಲದೆ, ಯೆರೂಸಲೇಮಿನ ಮಂದಿರವೂ ಅದಕ್ಕೆ ಮೊದಲಿದ್ದ ದೇವದರ್ಶನ ಗುಡಾರವೂ ಕೇವಲ ನೈಜರೂಪದ ಚಿತ್ರಣವಾಗಿದ್ದವೆಂದು ಅಪೊಸ್ತಲ ಪೌಲನು ಸ್ಪಷ್ಟಗೊಳಿಸಿದನು. ಅವು ಮಹತ್ತಾದ, ಆತ್ಮಿಕ ನಿಜತ್ವವನ್ನು ಅಂದರೆ “ಮನುಷ್ಯನು ಹಾಕದೆ ಕರ್ತನೇ ಹಾಕಿದ ನಿಜವಾದ ದೇವದರ್ಶನಗುಡಾರ”ವನ್ನು ಪ್ರತಿನಿಧೀಕರಿಸಿದವು. (ಇಬ್ರಿಯ 8:⁠2) ಆ ಆತ್ಮಿಕ ಗುಡಾರವು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಯೆಹೋವನನ್ನು ಆರಾಧನೆಯಲ್ಲಿ ಸಮೀಪಿಸುವ ಏರ್ಪಾಡಾಗಿದೆ. (ಇಬ್ರಿಯ 9:​2-10, 23) ಇದಕ್ಕೆ ಹೊಂದಿಕೆಯಾಗಿ, ಯೆಶಾಯ 2:2ರಲ್ಲಿ ತಿಳಿಸಲ್ಪಟ್ಟಿರುವ “ಯೆಹೋವನ ಮಂದಿರದ ಬೆಟ್ಟವು” ನಮ್ಮ ದಿನಗಳಲ್ಲಿ ಉನ್ನತಕ್ಕೇರಿಸಲ್ಪಟ್ಟಿರುವ ಯೆಹೋವನ ಶುದ್ಧಾರಾಧನೆಯನ್ನು ಪ್ರತಿನಿಧಿಸುತ್ತದೆ. ಶುದ್ಧಾರಾಧನೆಯನ್ನು ಅಂಗೀಕರಿಸುವವರು ಪ್ರಾದೇಶಿಕವಾಗಿ ಯಾವುದೇ ಒಂದು ಸ್ಥಳದಲ್ಲಿ ಕೂಡಿಬರದೆ, ಆರಾಧನಾ ಐಕ್ಯದಲ್ಲಿ ಒಂದಾಗಿ ಕೂಡಿಬರುತ್ತಾರೆ.

ಶುದ್ಧಾರಾಧನೆಯ ಮೇಲೇರಿಸುವಿಕೆ

10, 11. ನಮ್ಮ ದಿನಗಳಲ್ಲಿ ಯೆಹೋವನ ಆರಾಧನೆಯು ಯಾವ ಅರ್ಥದಲ್ಲಿ ಉನ್ನತಕ್ಕೇರಿಸಲ್ಪಟ್ಟಿದೆ?

10 “ಯೆಹೋವನ ಮಂದಿರದ ಬೆಟ್ಟವು” ಅಥವಾ ಶುದ್ಧಾರಾಧನೆಯು, “ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು,” ಎನ್ನುತ್ತಾನೆ ಪ್ರವಾದಿ. ಯೆಶಾಯನ ಸಮಯಕ್ಕಿಂತ ಎಷ್ಟೋ ಮೊದಲು, ಅರಸನಾಗಿದ್ದ ದಾವೀದನು ಒಡಂಬಡಿಕೆಯ ಮಂಜೂಷವನ್ನು, ಸಮುದ್ರ ಮಟ್ಟದಿಂದ 760 ಮೀಟರುಗಳಷ್ಟು ಎತ್ತರದಲ್ಲಿದ್ದ ಯೆರೂಸಲೇಮಿನ ಚೀಯೋನ್‌ ಬೆಟ್ಟಕ್ಕೆ ತಂದು ಮುಟ್ಟಿಸಿದನು. ಮೋರೀಯಾ ಬೆಟ್ಟದ ಮೇಲೆ ಕಟ್ಟಿಮುಗಿಸಿದ್ದ ದೇವಾಲಯಕ್ಕೆ ವರ್ಗಾಯಿಸುವ ವರೆಗೆ ಅದು ಅಲ್ಲಿಯೇ ಉಳಿಯಿತು. (2 ಸಮುವೇಲ 5:7; 6:​14-19; 2 ಪೂರ್ವಕಾಲವೃತ್ತಾಂತ 3:​1; 5:​1-10) ಹೀಗೆ, ಯೆಶಾಯನ ದಿನಗಳಷ್ಟಕ್ಕೆ ಪವಿತ್ರ ಮಂಜೂಷವು ಆವಾಗಲೇ ದೇವಾಲಯದಲ್ಲಿ ಉನ್ನತ ಸ್ಥಾನದಲ್ಲಿಡಲ್ಪಟ್ಟಿತ್ತು. ಮಿಥ್ಯಾರಾಧನೆಗೆ ಉಪಯೋಗಿಸಲಾಗುತ್ತಿದ್ದ ಸುತ್ತಲಿನ ಅನೇಕ ಗುಡ್ಡಗಳಿಗಿಂತ ಅದು ಎತ್ತರದ ಸ್ಥಾನದಲ್ಲಿತ್ತು.

11 ಹೌದು, ಆತ್ಮಿಕಾರ್ಥದಲ್ಲಿ ಯೆಹೋವನ ಆರಾಧನೆಯು ಸುಳ್ಳುದೇವತೆಗಳ ಆರಾಧಕರ ಧಾರ್ಮಿಕಾಚಾರಗಳಿಗಿಂತ ಸದಾ ಶ್ರೇಷ್ಠವಾಗಿದೆ. ಆದರೆ ಇಂದು ನಮ್ಮ ದಿನಗಳಲ್ಲಿ ಯೆಹೋವನು ತನ್ನ ಆರಾಧನೆಯನ್ನು ಸ್ವರ್ಗದಷ್ಟು ಎತ್ತರಕ್ಕೆ ಏರಿಸಿದ್ದಾನೆ. ಆ ಎಲ್ಲ “ಗುಡ್ಡಬೆಟ್ಟ”ಗಳಿಗಿಂತ ಅಂದರೆ ಅಶುದ್ಧಾರಾಧನೆಯ ಸಕಲ ವಿಧಗಳಿಂದ ಎಷ್ಟೋ ಉನ್ನತಕ್ಕೇರಿಸಿದ್ದಾನೆ. ಅದು ಹೇಗೆ? ಬಹುಮಟ್ಟಿಗೆ, ತನ್ನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಆರಾಧಿಸಲು ಬಯಸುವವರನ್ನು ಒಟ್ಟುಗೂಡಿಸುವ ಮೂಲಕವೇ.​—⁠ಯೋಹಾನ 4:⁠23.

12. “ರಾಜ್ಯದ ಪುತ್ರರು” ಯಾರು, ಮತ್ತು ಯಾವ ರೀತಿಯ ಒಟ್ಟುಗೂಡಿಸುವಿಕೆಯು ನಡೆದಿದೆ?

12 ಯೇಸು ಕ್ರಿಸ್ತನು ‘ಯುಗದ ಸಮಾಪ್ತಿಯನ್ನು’ ಸುಗ್ಗೀಕಾಲ ಎಂದು ಕರೆದನು. ಆಗ “ಪರಲೋಕರಾಜ್ಯದವರು, [“ರಾಜ್ಯದ ಪುತ್ರರು,” NW]” ಸ್ವರ್ಗೀಯ ಮಹಿಮೆಯಲ್ಲಿ ಯೇಸುವಿನೊಂದಿಗೆ ಆಳುವ ನಿರೀಕ್ಷೆಯಿರುವವರನ್ನು ದೇವದೂತರು ಒಟ್ಟುಗೂಡಿಸುವರು. (ಮತ್ತಾಯ 13:​36-43) ಇವರಲ್ಲಿ “ಉಳಿದವರು” 1919ರಿಂದ ದೇವದೂತರೊಂದಿಗೆ ಕೊಯ್ಲಿನ ಕೆಲಸದಲ್ಲಿ ಜೊತೆಗೂಡುವಂತೆ ಯೆಹೋವನು ಅವರಿಗೆ ಅಧಿಕಾರ ಕೊಟ್ಟಿದ್ದಾನೆ. (ಪ್ರಕಟನೆ 12:17) ಹೀಗೆ, ಆರಂಭದಲ್ಲಿ ಒಟ್ಟುಗೂಡಿಸಲ್ಪಡುವವರು “ರಾಜ್ಯದ ಪುತ್ರರು” ಅಂದರೆ ಯೇಸುವಿನ ಅಭಿಷಿಕ್ತ ಸೋದರರು. ಆ ಬಳಿಕ ಅವರು ಇನ್ನೂ ಹೆಚ್ಚಿನ ಒಟ್ಟುಗೂಡಿಸುವ ಕೆಲಸವೊಂದರಲ್ಲಿ ಭಾಗವಹಿಸುತ್ತಾರೆ.

13. ಯೆಹೋವನು ಅಭಿಷಿಕ್ತ ಉಳಿಕೆಯವರನ್ನು ಹೇಗೆ ಆಶೀರ್ವದಿಸಿದ್ದಾನೆ?

13 ಈ ಕೊಯ್ಲಿನ ಸಮಯದಲ್ಲಿ ಅಭಿಷಿಕ್ತ ಉಳಿಕೆಯವರು ಪ್ರಗತಿಪರವಾಗಿ ತನ್ನ ವಾಕ್ಯವಾದ ಬೈಬಲನ್ನು ಅರ್ಥಮಾಡಿಕೊಂಡು ಅನ್ವಯಿಸುವಂತೆ ಯೆಹೋವನು ಸಹಾಯಮಾಡಿದ್ದಾನೆ. ಇದು ಸಹ ಶುದ್ಧಾರಾಧನೆಯ ಉನ್ನತಿಗೆ ಸಹಾಯಮಾಡಿದೆ. ‘ಕತ್ತಲು ಭೂಮಿಯನ್ನು ಆವರಿಸಿ ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ’ಯಾದರೂ, ಅಭಿಷಿಕ್ತರು ಯೆಹೋವನಿಂದ ಶುದ್ಧೀಕರಿಸಲ್ಪಟ್ಟು ಪರಿಶೋಧಿಸಲ್ಪಟ್ಟಿರುವುದರಿಂದ ಮಾನವಕುಲದ ಮಧ್ಯೆ “ಹೊಳೆಯುವ ಜ್ಯೋತಿರ್ಮಂಡಲಗಳಂತೆ” ಇದ್ದಾರೆ. (ಯೆಶಾಯ 60:2; ಫಿಲಿಪ್ಪಿ 2:16) “ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ” ತುಂಬಿಕೊಂಡಿರುವ ಈ ಆತ್ಮಾಭಿಷಿಕ್ತರು, “ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.”​—⁠ಕೊಲೊಸ್ಸೆ 1:9; ಮತ್ತಾಯ 13:⁠43.

14, 15. “ರಾಜ್ಯದ ಪುತ್ರರ” ಒಟ್ಟುಗೂಡಿಸುವಿಕೆಯಲ್ಲದೆ, ಇನ್ನಾವ ಒಟ್ಟುಗೂಡಿಸುವಿಕೆಯು ಸಂಭವಿಸಿದೆ, ಮತ್ತು ಹಗ್ಗಾಯನು ಇದನ್ನು ಹೇಗೆ ಮುಂತಿಳಿಸಿದ್ದನು?

14 ಇದಲ್ಲದೆ, ಇತರರೂ “ಯೆಹೋವನ ಮಂದಿರದ ಬೆಟ್ಟಕ್ಕೆ” ಪ್ರವಾಹದಂತೆ ಹರಿದುಬಂದಿದ್ದಾರೆ. ಯೇಸುವಿನಿಂದ “ಬೇರೆ ಕುರಿಗಳು” ಎಂದು ಕರೆಯಲಾಗಿರುವ ಇವರಿಗೆ, ಪರದೈಸ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ನಿರೀಕ್ಷೆಯಿದೆ. (ಯೋಹಾನ 10:16; ಪ್ರಕಟನೆ 21:​3, 4) 1930ಗಳಿಂದ ಪ್ರವಾಹದಂತೆ ಹರಿದುಬರಲು ಆರಂಭವಾಗಿರುವ ಇವರು ಸಾವಿರಾರು ಮಂದಿಯಾದರು. ಬಳಿಕ ನೂರಾರು ಸಾವಿರ ಮಂದಿಯಾದರು. ಈಗ ದಶಲಕ್ಷಗಳ ಸಂಖ್ಯೆಯಲ್ಲಿ ತೋರಿಬಂದಿದ್ದಾರೆ! ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ದರ್ಶನವೊಂದರಲ್ಲಿ ಇವರನ್ನು, “ಯಾರಿಂದಲೂ ಎಣಿಸಲಾಗದಂಥ ಮಹಾಸಮೂಹ” ಎಂದೂ “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಎಂದೂ ವರ್ಣಿಸಲಾಗಿದೆ.​—⁠ಪ್ರಕಟನೆ 7:⁠9.

15 ಹಗ್ಗಾಯ ಪ್ರವಾದಿಯು ಈ ಮಹಾಸಮೂಹದ ತೋರಿಬರುವಿಕೆಯನ್ನು ಮುಂತಿಳಿಸಿದನು. ಅವನು ಬರೆದುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ​—⁠ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು [ಶುದ್ಧಾರಾಧನೆಯಲ್ಲಿ ಅಭಿಷಿಕ್ತ ಕ್ರೈಸ್ತರ ಜೊತೆಸೇರುವವರು] ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.” (ಹಗ್ಗಾಯ 2:6, 7) ಇನ್ನೂ ಬೆಳೆಯುತ್ತಿರುವ ಈ ‘ಮಹಾಸಮೂಹದ’ ಮತ್ತು ಅವರ ಅಭಿಷಿಕ್ತ ಸಂಗಡಿಗರ ಅಸ್ತಿತ್ವವು ಯೆಹೋವನ ಮಂದಿರದಲ್ಲಿ ಶುದ್ಧಾರಾಧನೆಯನ್ನು ಮೇಲೇರಿಸುತ್ತದೆ, ಹೌದು, ಘನತೆಗೇರಿಸುತ್ತದೆ. ಸತ್ಯ ದೇವರ ಆರಾಧನೆಯಲ್ಲಿ ಹಿಂದೆಂದೂ ಇಷ್ಟು ಮಂದಿ ಐಕ್ಯರಾಗಿದ್ದದ್ದಿಲ್ಲ. ಮತ್ತು ಇದು ಯೆಹೋವನಿಗೂ ಆತನ ಸಿಂಹಾಸನಕ್ಕೇರಿಸಲ್ಪಟ್ಟ ಅರಸನಾದ ಯೇಸು ಕ್ರಿಸ್ತನಿಗೂ ಮಹಿಮೆಯನ್ನು ತರುತ್ತದೆ. ಸೊಲೊಮೋನ ರಾಜನು ಬರೆದುದು: “ಪ್ರಜೆಗಳ ವೃದ್ಧಿ ರಾಜನ ಮಹಿಮೆ.”​—⁠ಜ್ಞಾನೋಕ್ತಿ 14:⁠28.

ಜನರ ಜೀವಿತಗಳಲ್ಲಿ ಆರಾಧನೆ ಘನತೆಗೇರಿಸಲ್ಪಡುತ್ತದೆ

16-18. ಯೆಹೋವನನ್ನು ಸ್ವೀಕಾರಯೋಗ್ಯವಾಗಿ ಆರಾಧಿಸುವುದಕ್ಕಾಗಿ ಕೆಲವರು ಯಾವ ಬದಲಾವಣೆಗಳನ್ನು ಮಾಡಿದ್ದಾರೆ?

16 ನಮ್ಮ ದಿನಗಳಲ್ಲಿ ಶುದ್ಧಾರಾಧನೆಯ ಮೇಲೇರಿಸುವಿಕೆಗೆ ಸಕಲ ಕೀರ್ತಿಯೂ ಯೆಹೋವನಿಗೆ ಸಲ್ಲುತ್ತದೆ. ಆದರೂ, ಆತನನ್ನು ಸಮೀಪಿಸುವವರಿಗೆ ಈ ಕೆಲಸದಲ್ಲಿ ಭಾಗವಹಿಸುವ ಸುಯೋಗವಿದೆ. ಬೆಟ್ಟವನ್ನು ಹತ್ತಲು ಪ್ರಯತ್ನದ ಅಗತ್ಯವಿರುವಂತೆಯೇ ದೇವರ ನೀತಿಯ ಮಟ್ಟಗಳನ್ನು ಕಲಿತು ಅವುಗಳ ಪ್ರಕಾರ ನಡೆಯಲು ಪ್ರಯತ್ನವು ಅಗತ್ಯ. ಒಂದನೆಯ ಶತಮಾನದ ಕ್ರೈಸ್ತರಂತೆಯೇ, ದೇವರ ಇಂದಿನ ಸೇವಕರು ಸತ್ಯಾರಾಧನೆಗೆ ಹೊಂದಿಕೊಳ್ಳದ ಜೀವನ ಶೈಲಿಗಳನ್ನೂ ಆಚಾರಗಳನ್ನೂ ಬಿಟ್ಟುಬಿಟ್ಟಿದ್ದಾರೆ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಕಳ್ಳರು, ಲೋಭಿಗಳು, ಕುಡುಕರು ಮತ್ತು ಇನ್ನಿತರರು ತಮ್ಮ ಕೆಟ್ಟ ಮಾರ್ಗಗಳನ್ನು ಬದಲಾಯಿಸಿ ದೇವರ ದೃಷ್ಟಿಯಲ್ಲಿ ‘ತೊಳೆಯಲ್ಪಟ್ಟವ’ರಾಗಿದ್ದಾರೆ.​—⁠1 ಕೊರಿಂಥ 6:​9-11.

17 ಒಬ್ಬ ಯುವ ಸ್ತ್ರೀಯ ಈ ಅನುಭವವು ಇದಕ್ಕೆ ಒಂದು ಉದಾಹರಣೆಯಾಗಿದೆ. ಆಕೆ ಬರೆದುದು: “ನಾನು ಒಮ್ಮೆ ಯಾವ ನಿರೀಕ್ಷೆಯೂ ಇಲ್ಲದವಳಾಗಿದ್ದೆ. ದುರಾಚಾರಿಯೂ ಕುಡುಕಳೂ ಆಗಿದ್ದೆ. ರತಿ ರೋಗಗಳೂ ನನಗಿದ್ದವು. ಅಮಲೌಷಧ ಮಾರಾಟಗಾರ್ತಿಯೂ ಆಗಿದ್ದ ನಾನು ಯಾವುದರ ಪರಿವೆಯನ್ನೂ ಮಾಡುತ್ತಿರಲಿಲ್ಲ.” ಆಕೆ ಬೈಬಲ್‌ ಅಧ್ಯಯನ ಮಾಡಿದ ಬಳಿಕ ದೇವರ ಮಟ್ಟಗಳಿಗೆ ಹೊಂದಿಕೊಳ್ಳಲು ದೊಡ್ಡ ಬದಲಾವಣೆಗಳನ್ನು ಮಾಡಿದಳು. ಈಗ ಆಕೆ ಹೇಳುವುದು: “ನನಗೆ ಮನಶ್ಶಾಂತಿ, ಆತ್ಮಗೌರವ, ಭಾವೀ ನಿರೀಕ್ಷೆ, ನಿಜವಾದ ಕುಟುಂಬ, ಮತ್ತು ಎಲ್ಲಕ್ಕೂ ಅತ್ಯುತ್ತಮವಾಗಿ, ನನಗೆ ನಮ್ಮ ತಂದೆಯಾದ ಯೆಹೋವನೊಂದಿಗೆ ಸುಸಂಬಂಧವು ಇದೆ.”

18 ಯೆಹೋವನ ಮುಂದೆ ಸಮ್ಮತಿಸೂಚಕವಾದ ಸ್ಥಾನವನ್ನು ಪಡೆದ ಮೇಲೂ, ಎಲ್ಲರೂ ತಮ್ಮ ಜೀವಿತಗಳಲ್ಲಿ ಶುದ್ಧಾರಾಧನೆಗೆ ಪ್ರಮುಖವಾದ ಸ್ಥಾನವನ್ನು ಕೊಟ್ಟು ಅದನ್ನು ಮೇಲೇರಿಸಬೇಕು. ಸಾವಿರಾರು ವರ್ಷಗಳ ಹಿಂದೆ, ಯೆಶಾಯನ ಮೂಲಕ, ಇಂದು ತಮ್ಮ ಜೀವಿತಗಳಲ್ಲಿ ತನ್ನ ಆರಾಧನೆಯನ್ನು ಅತಿ ಪ್ರಾಮುಖ್ಯವಾದುದಾಗಿ ಮಾಡಲು ಆತುರದಿಂದಿರುವ ಜನಸಮೂಹವೇ ಇರುವುದೆಂಬ ಭರವಸೆಯನ್ನು ಯೆಹೋವನು ವ್ಯಕ್ತಪಡಿಸಿದನು. ನೀವು ಅವರಲ್ಲಿ ಒಬ್ಬರಾಗಿದ್ದೀರೊ?

ಯೆಹೋವನ ಮಾರ್ಗಗಳ ಬಗ್ಗೆ ಕಲಿಸಲ್ಪಟ್ಟಿರುವ ಜನರು

19, 20. ದೇವಜನರಿಗೆ ಏನನ್ನು ಕಲಿಸಲಾಗುತ್ತದೆ ಮತ್ತು ಎಲ್ಲಿ ಕಲಿಸಲಾಗುತ್ತದೆ?

19 ಈ ದಿನಗಳಲ್ಲಿ ಶುದ್ಧಾರಾಧನೆಯನ್ನು ಅವಲಂಬಿಸುವವರ ಕುರಿತು ಇನ್ನೂ ಹೆಚ್ಚನ್ನು ಯೆಶಾಯನು ಹೇಳುತ್ತಾನೆ: “ಹೊರಟುಬಂದ ಬಹು ಜನಾಂಗದವರು​—⁠ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.”​—ಯೆಶಾಯ 2:⁠3.

20 ತನ್ನ ಜನರು ದಾರಿತಪ್ಪಿರುವ ಕುರಿಗಳಂತೆ ಅಲೆದಾಡಲು ಯೆಹೋವನು ಬಿಡುವುದಿಲ್ಲ. ಬೈಬಲು ಮತ್ತು ಬೈಬಲಾಧಾರಿತ ಸಾಹಿತ್ಯಗಳ ಮೂಲಕ ಅವರು ತನ್ನ ಮಾರ್ಗವನ್ನು ಕಲಿಯುವಂತೆ ಆತನು ತನ್ನ “ಧರ್ಮೋಪದೇಶ” ಮತ್ತು ತನ್ನ “ವಾಕ್ಯ”ವನ್ನು ಅವರಿಗೆ ತಿಳಿಯಪಡಿಸುತ್ತಾನೆ. ಈ ಜ್ಞಾನವು ಅವರು “ಆತನ ದಾರಿಗಳಲ್ಲಿ” ನಡೆಯುವಂತೆ ಅವರನ್ನು ಸಿದ್ಧಮಾಡುತ್ತದೆ. ಅವರು ಕೃತಜ್ಞತೆ ತುಂಬಿದ ಹೃದಯದಿಂದ ಮತ್ತು ದೈವಿಕ ಮಾರ್ಗದರ್ಶನಕ್ಕನುಸಾರವಾಗಿ ಯೆಹೋವನ ಮಾರ್ಗಗಳ ಸಂಬಂಧದಲ್ಲಿ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾರೆ. ಅವರು ದೊಡ್ಡ ಅಧಿವೇಶನಗಳಲ್ಲಿ ಮತ್ತು ರಾಜ್ಯ ಸಭಾಗೃಹ ಹಾಗೂ ಖಾಸಗಿ ಮನೆಗಳಲ್ಲಿ ಚಿಕ್ಕ ಗುಂಪುಗಳಾಗಿ ದೇವರ ಮಾರ್ಗಗಳ ಕುರಿತು ಕೇಳಿ ಕಲಿಯಲು ಕೂಡಿಬರುತ್ತಾರೆ. (ಧರ್ಮೋಪದೇಶಕಾಂಡ 31:​12, 13) ಹೀಗೆ ಅವರು, “ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ” ಪ್ರೋತ್ಸಾಹಿಸಿ ಪ್ರೇರೇಪಿಸಲು ಕೂಡಿಬಂದ ಆದಿ ಕ್ರೈಸ್ತರ ಮಾದರಿಯನ್ನು ಅನುಕರಿಸುತ್ತಾರೆ.​—⁠ಇಬ್ರಿಯ 10:​24, 25.

21. ಯೆಹೋವನ ಸೇವಕರು ಯಾವ ಕೆಲಸದಲ್ಲಿ ಭಾಗವಹಿಸುತ್ತಾರೆ?

21 ಯೆಹೋವ ದೇವರ ಉನ್ನತಕ್ಕೇರಿಸಲ್ಪಟ್ಟ ಆರಾಧನೆಗೆ “ಹೋಗೋಣ” ಎಂದು ಹೇಳಿ ಅವರು ಇತರರನ್ನು ಆಮಂತ್ರಿಸುತ್ತಾರೆ. ಇದು, ಯೇಸು ಸ್ವರ್ಗಕ್ಕೆ ಹೋಗುವ ತುಸು ಮೊದಲು ತನ್ನ ಶಿಷ್ಯರಿಗೆ ಕೊಟ್ಟ ಆಜ್ಞೆಗೆ ಎಷ್ಟು ಚೆನ್ನಾಗಿ ಹೊಂದಿಕೆಯಾಗಿದೆ! ಅವನು ಅವರಿಗಂದದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಯೆಹೋವನ ಸಾಕ್ಷಿಗಳು ದೈವಿಕ ಬೆಂಬಲದಿಂದ ಕೂಡಿದವರಾಗಿ, ವಿಧೇಯತೆಯಿಂದ ಭೂಮಿಯಲ್ಲೆಲ್ಲಾ ಹೋಗಿ, ಜನರಿಗೆ ಕಲಿಸುತ್ತಾರೆ, ಶಿಷ್ಯರನ್ನಾಗಿ ಮಾಡುತ್ತಾರೆ ಮತ್ತು ದೀಕ್ಷಾಸ್ನಾನ ಮಾಡಿಸಲು ವಿಧೇಯತೆಯಿಂದ ಮುಂದುವರಿಯುತ್ತಾರೆ.

ಕತ್ತಿಗಳನ್ನು ಗುಳಗಳನ್ನಾಗಿಸುವುದು

22, 23. ಯೆಶಾಯ 2:4 ಏನನ್ನು ಮುಂತಿಳಿಸುತ್ತದೆ, ಮತ್ತು ವಿಶ್ವ ಸಂಸ್ಥೆಯ ಒಬ್ಬ ಅಧಿಕಾರಿಯು ಅದರ ಕುರಿತು ಏನಂದನು?

22 ಈಗ ನಾವು ಮುಂದಿನ ವಚನಕ್ಕೆ, ಅಂದರೆ ವಿಶ್ವ ಸಂಸ್ಥೆಯ ಪ್ಲಾಸದ ಗೋಡೆಯ ಮೇಲೆ ಕೆತ್ತಲ್ಪಟ್ಟಿರುವ ವಚನಭಾಗಕ್ಕೆ ಬರುತ್ತೇವೆ. ಯೆಶಾಯನು ಬರೆಯುವುದು: “ಆತನು ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”​—ಯೆಶಾಯ 2:⁠4.

23 ಇದನ್ನು ಸಾಧಿಸುವುದು ಸಣ್ಣ ಕೆಲಸವಲ್ಲ. ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘದ ಡೈರೆಕ್ಟರ್‌ ಜನರಲ್‌ ಆಗಿರುವ ಫಾಡಾರೀಕೊ ಮಾಯೋರ್‌ ಒಮ್ಮೆ ಹೇಳಿದ್ದು: “ಇಂದು ನೇರವಾಗಿ ಮನೆಗಳೊಳಗೆ ಸಂಪರ್ಕಮಾಧ್ಯಮ ಸಲಕರಣೆಗಳ ಮೂಲಕ ತರಲ್ಪಡುವ ಯುದ್ಧದ ಭೀಕರತೆಗಳು, ಅನೇಕ ಶತಮಾನಗಳಿಂದ ಸ್ಥಾಪಿಸಲ್ಪಟ್ಟು ಕಾಪಾಡಲ್ಪಟ್ಟಿರುವ ಬೃಹತ್‌ ಪ್ರಮಾಣದ ಯುದ್ಧ ಸಾಧನಗಳ ಮುನ್ನಡೆಯನ್ನು ತಡೆಯಲು ಸಾಧ್ಯವಿಲ್ಲವೆಂದು ತೋರುತ್ತದೆ. ‘ಕತ್ತಿಗಳನ್ನು ಗುಳಗಳನ್ನಾಗಿ ಬಡಿಯುವ,’ ಮತ್ತು ಅನಾದಿ ಕಾಲದಿಂದ ಬಂದಿರುವ ಯುದ್ಧಮಾಡುವ ಸ್ವಭಾವದಿಂದ ಶಾಂತಿಸ್ವಭಾವಕ್ಕೆ ಬದಲಾಯಿಸಿಕೊಳ್ಳುವ, ಬಹುಮಟ್ಟಿಗೆ ಅಸಾಧ್ಯವಾದ ಬೈಬಲ್‌ ಸಂಬಂಧಿತ ಕೆಲಸವು ಇಂದಿನ ಜನರಿಗಿದೆ. ಇದನ್ನು ಸಾಧಿಸುವುದೇ ಲೋಕದ ಜನರು ಮಾಡಬಹುದಾದ ಅತ್ಯುತ್ತಮ ಮತ್ತು ಉದಾತ್ತ ಕಾರ್ಯವಾಗಿದೆ ಮಾತ್ರವಲ್ಲ ಅದು ನಮ್ಮ ಮುಂದಿನ ಸಂತತಿಯವರಿಗೆ ನಾವು ನೀಡಬಹುದಾದ ಅತ್ಯುತ್ತಮ ಸ್ವತ್ತೂ ಆಗಿದೆ.”

24, 25. ಯೆಶಾಯನ ಮಾತುಗಳು ಯಾರಲ್ಲಿ ನೆರವೇರುತ್ತವೆ, ಮತ್ತು ಯಾವ ವಿಧದಲ್ಲಿ?

24 ದೇಶಗಳು ಒಟ್ಟಾಗಿ ಈ ಉನ್ನತ ಗುರಿಯನ್ನು ಎಂದಿಗೂ ಮುಟ್ಟಲಾರವು. ಅದು ಅವುಗಳಿಗೆ ಕೈಗೆಟುಕದ ಸಂಗತಿ. ಬದಲಾಗಿ, ಯೆಶಾಯನ ಮಾತುಗಳು ಅನೇಕ ದೇಶಗಳಿಂದ ಬಂದಿರುವ ಆದರೆ ಶುದ್ಧಾರಾಧನೆಯಲ್ಲಿ ಐಕ್ಯರಾಗಿರುವ ವ್ಯಕ್ತಿಗಳಿಂದ ನೆರವೇರುತ್ತವೆ. ಯೆಹೋವನು ಅವರ ‘ವಿಷಯಗಳನ್ನು ಸರಿಪಡಿಸಿದ್ದಾನೆ.’ ಪರಸ್ಪರ ಶಾಂತಿಯಿಂದ ಜೀವಿಸುವಂತೆ ಆತನು ತನ್ನ ಜನರಿಗೆ ಕಲಿಸಿದ್ದಾನೆ. ಸತ್ಯವಾಗಿಯೂ, ವಿಭಜಿತವಾದ, ಕಲಹಮಯ ಜಗತ್ತಿನಲ್ಲಿ ಅವರು ಸಾಂಕೇತಿಕವಾಗಿ, “ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ” ಮಾಡಿದ್ದಾರೆ. ಇದು ಹೇಗೆ?

25 ಒಂದು ರೀತಿಯು, ಅವರು ರಾಷ್ಟ್ರಗಳ ಯುದ್ಧಗಳಲ್ಲಿ ಪಕ್ಷವಹಿಸದಿರುವ ಮೂಲಕವೇ. ಯೇಸುವಿನ ಮರಣಕ್ಕೆ ತುಸು ಮೊದಲು, ಶಸ್ತ್ರಸಜ್ಜಿತ ಜನರು ಅವನನ್ನು ದಸ್ತಗಿರಿ ಮಾಡಲು ಬಂದರು. ಪೇತ್ರನು ತನ್ನ ಸ್ವಾಮಿಯನ್ನು ಸಂರಕ್ಷಿಸಲು ಕತ್ತಿಯಿಂದ ಹೊಡೆದಾಗ ಯೇಸು ಅವನಿಗಂದದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ಅಂದಿನಿಂದ, ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವ ಹಿಂಬಾಲಕರು ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಬಡಿದಿದ್ದಾರೆ. ಹೀಗೆ, ಅವರು ತಮ್ಮ ಜೊತೆಮಾನವರನ್ನು ಕೊಲ್ಲುವುದರಿಂದ ಇಲ್ಲವೆ, ಇತರ ವಿಧಗಳಲ್ಲಿ ಯುದ್ಧ ಪ್ರಯತ್ನಗಳನ್ನು ಬೆಂಬಲಿಸುವುದರಿಂದ ದೂರವಿದ್ದಾರೆ. ಅವರು “ಎಲ್ಲರ ಸಂಗಡ ಸಮಾಧಾನದಿಂದಿ”ರಲು ಪ್ರಯತ್ನಿಸುತ್ತಾರೆ.​—⁠ಇಬ್ರಿಯ 12:⁠14.

ಶಾಂತಿಮಾರ್ಗಗಳನ್ನು ಬೆನ್ನಟ್ಟುವುದು

26, 27. ದೇವಜನರು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡುವುದು ಹೇಗೆ? ಒಂದು ಉದಾಹರಣೆಯನ್ನು ಕೊಡಿ.

26 ದೇವಜನರ ಶಾಂತಿಯು, ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸುವುದಕ್ಕಿಂತ ಎಷ್ಟೋ ಹೆಚ್ಚಿನದ್ದನ್ನು ಒಳಗೂಡಿಸುತ್ತದೆ. ಅವರು 230ಕ್ಕೂ ಹೆಚ್ಚು ದೇಶಗಳಲ್ಲಿದ್ದು, ಅಸಂಖ್ಯಾತವಾದ ಭಾಷೆ ಮತ್ತು ಸಂಸ್ಕೃತಿಗಳಿಂದ ಬಂದವರಾಗಿದ್ದರೂ, ಅವರು ಒಬ್ಬರೊಂದಿಗೊಬ್ಬರು ಶಾಂತಿಯಿಂದಿದ್ದಾರೆ. ಯೇಸು ತನ್ನ ಶಿಷ್ಯರಿಗೆ ಒಂದನೆಯ ಶತಮಾನದಲ್ಲಿ ಹೇಳಿದ ಮಾತುಗಳ ಆಧುನಿಕ ನೆರವೇರಿಕೆಯು ಅವರಲ್ಲಿ ಆಗುತ್ತದೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಇಂದು ಕ್ರೈಸ್ತರು “ಸಮಾಧಾನ ಪಡಿಸುವವರು” ಆಗಿದ್ದಾರೆ. (ಮತ್ತಾಯ 5:⁠9) ಅವರು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡುತ್ತಾರೆ. (1 ಪೇತ್ರ 3:11) ಇದರಲ್ಲಿ ಅವರನ್ನು ಪೋಷಿಸುವಾತನು, “ಶಾಂತಿದಾಯಕನಾದ ದೇವರು” ಯೆಹೋವನೇ.​—⁠ರೋಮಾಪುರ 15:⁠33.

27 ಶಾಂತಿಕರ್ತರಾಗಿರಲು ಕಲಿತುಕೊಂಡಿರುವವರ ಮನಮುಟ್ಟುವ ಉದಾಹರಣೆಗಳಿವೆ. ಒಬ್ಬ ಯುವಕನು ತನ್ನ ಬಾಲ್ಯದ ದಿನಗಳ ಕುರಿತು ಬರೆಯುವುದು: “ನನ್ನನ್ನು ಸಂರಕ್ಷಿಸಿಕೊಳ್ಳುವ ವಿಧವನ್ನು ಕಠಿನ ಅನುಭವ ನನಗೆ ಕಲಿಸಿತು. ಜೀವನ ನನ್ನನ್ನು ಪುಂಡನಾಗಿಯೂ ಕೋಪಿಷ್ಠನಾಗಿಯೂ ಮಾಡಿತು. ನನ್ನ ವ್ಯವಹಾರಗಳು ಸದಾ ಜಗಳದಲ್ಲಿ ಅಂತ್ಯಗೊಳ್ಳುತ್ತಿದ್ದವು. ಪ್ರತಿದಿನ ನೆರೆಹೊರೆಯ ಹುಡುಗರೊಂದಿಗೆ ಜಗಳವಾಡಿ ದಿನವನ್ನು ಕಾದಾಟದಲ್ಲಿ ಕೊನೆಗೊಳಿಸುತ್ತಿದ್ದೆ. ಮುಷ್ಟಿ, ಕಲ್ಲು ಇಲ್ಲವೆ ಸೀಸೆಗಳು ನನ್ನ ಆಯುಧಗಳಾಗಿರುತ್ತಿದ್ದವು. ನಾನು ತೀರ ಹಿಂಸಾತ್ಮಕನಾಗಿ ಬೆಳೆದೆ.” ಆದರೆ ಅಂತಿಮವಾಗಿ, ಅವನು ಯೆಹೋವನ ಮಂದಿರದ ಬೆಟ್ಟಕ್ಕೆ ಹೋಗಲು ಬಂದ ಕರೆಗೆ ಓಗೊಟ್ಟನು. ಅಲ್ಲಿ ಅವನು ದೇವರ ಮಾರ್ಗಗಳನ್ನು ಕಲಿತು ದೇವರ ಶಾಂತಿಶೀಲ ಸೇವಕನಾದನು.

28. ಸಮಾಧಾನಕ್ಕಾಗಿ ಪ್ರಯತ್ನಿಸಲು ಕ್ರೈಸ್ತರು ಏನು ಮಾಡಬಲ್ಲರು?

28 ಯೆಹೋವನ ಹೆಚ್ಚಿನ ಸೇವಕರು ಇಂತಹ ಹಿಂಸಾತ್ಮಕ ಹಿನ್ನೆಲೆಯಿಂದ ಬರುವುದಿಲ್ಲ. ಆದರೂ, ದಯೆ, ಕ್ಷಮೆ ಮತ್ತು ಅನುಭೂತಿಯನ್ನು ತೋರಿಸುವ ಸಣ್ಣ ವಿಷಯಗಳಲ್ಲಿಯೂ ಅವರು ಇತರರೊಂದಿಗೆ ಶಾಂತಿಯಿಂದಿರಲು ಪ್ರಯತ್ನಿಸುತ್ತಾರೆ. ಅಪೂರ್ಣರಾದರೂ, “ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ” ಎಂಬ ಬೈಬಲಿನ ಸಲಹೆಯನ್ನು ಅನ್ವಯಿಸುವುದೇ ಅವರ ಯತ್ನವಾಗಿದೆ.​—⁠ಕೊಲೊಸ್ಸೆ 3:⁠13.

ಶಾಂತಿಯ ಭವಿಷ್ಯತ್ತು

29, 30. ಭೂಮಿಗೆ ಯಾವ ಪ್ರತೀಕ್ಷೆಯಿದೆ?

29 ಈ “ಅಂತ್ಯಕಾಲದಲ್ಲಿ” ಯೆಹೋವನು ಆಶ್ಚರ್ಯಕರವಾದ ವಿಷಯವೊಂದನ್ನು ಮಾಡಿದ್ದಾನೆ. ತನ್ನನ್ನು ಸೇವಿಸಬಯಸುವ ಜನರನ್ನು ಆತನು ಸಕಲ ಜನಾಂಗಗಳಿಂದ ಕೂಡಿಸಿದ್ದಾನೆ. ಆತನು ತನ್ನ ಮಾರ್ಗಗಳಲ್ಲಿ ಅಂದರೆ ಶಾಂತಿಯ ಮಾರ್ಗಗಳಲ್ಲಿ ನಡೆಯುವಂತೆ ಅವರಿಗೆ ಕಲಿಸಿದ್ದಾನೆ. ಬರಲಿರುವ “ಮಹಾ ಸಂಕಟ”ದಿಂದ (NW) ಪಾರಾಗಿ, ಯುದ್ಧವು ಸದಾಕಾಲಕ್ಕೂ ಇಲ್ಲದೆಹೋಗುವ ಶಾಂತಿಯ ನೂತನ ಲೋಕವನ್ನು ಹೋಗಿ ಸೇರುವವರು ಇವರೇ.​—⁠ಪ್ರಕಟನೆ 7:⁠14.

30 ಕತ್ತಿಗಳು, ಆಯುಧಗಳು ಇನ್ನಿರವು. ಆ ಸಮಯದ ಕುರಿತು ಕೀರ್ತನೆಗಾರನು ಬರೆದುದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನು ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.” (ಕೀರ್ತನೆ 46:8, 9) ಇಂತಹ ಪ್ರತೀಕ್ಷೆಯಿರುವುದರಿಂದ, ಯೆಶಾಯನು ಈ ಕೆಳಗಿನ ಬುದ್ಧಿವಾದವನ್ನು ಬರೆದಾಗ ಎಷ್ಟು ತಕ್ಕದ್ದಾಗಿತ್ತೊ ಇಂದು ಸಹ ಅಷ್ಟೇ ತಕ್ಕದ್ದಾಗಿದೆ: “ಯಾಕೋಬನ ಮನೆತನದವರೇ, ಬನ್ನಿರಿ, ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುವ!” (ಯೆಶಾಯ 2:⁠5) ಹೌದು, ಯೆಹೋವನ ಬೆಳಕು ನಮ್ಮ ಹಾದಿಗಳನ್ನು ಈಗ ಬೆಳಗಿಸುವಂತೆ ಬಿಡೋಣ. ಆಗ ನಾವು ಶಾಶ್ವತವಾಗಿ ಆತನ ಮಾರ್ಗದಲ್ಲಿ ನಡೆಯುವೆವು.​—⁠ಮೀಕ 4:⁠5.

[ಪಾದಟಿಪ್ಪಣಿ]

^ ಪ್ಯಾರ. 6 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ, “ಇವು ಕೊನೆಯ ದಿವಸಗಳು!” ಎಂಬ ಶೀರ್ಷಿಕೆ ಇರುವ 11ನೆಯ ಅಧ್ಯಾಯವನ್ನು ನೋಡಿ.

[ಅಧ್ಯಯನ ಪ್ರಶ್ನೆಗಳು]