ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ದೇವರು ಉಳಿಕೆಯವರಿಗೆ ಕರುಣೆ ತೋರಿಸುತ್ತಾನೆ

ಯೆಹೋವ ದೇವರು ಉಳಿಕೆಯವರಿಗೆ ಕರುಣೆ ತೋರಿಸುತ್ತಾನೆ

ಅಧ್ಯಾಯ ಆರು

ಯೆಹೋವ ದೇವರು ಉಳಿಕೆಯವರಿಗೆ ಕರುಣೆ ತೋರಿಸುತ್ತಾನೆ

ಯೆಶಾಯ 4:2-6

1, 2. ಯೆಹೂದ ಮತ್ತು ಯೆರೂಸಲೇಮಿನ ಕುರಿತು ಪ್ರವಾದಿ ಯೆಶಾಯನು ಏನು ಮುಂತಿಳಿಸುತ್ತಾನೆ?

ಜನಭರಿತವಾದ ಪ್ರದೇಶವೊಂದರ ಮೇಲೆ ಚಂಡಮಾರುತವು ಬೀಸಿಬರುತ್ತದೆ. ಬಲವಾದ ಗಾಳಿ, ಧಾರಾಕಾರವಾದ ಮಳೆ ಮತ್ತು ವಿಪರೀತವಾದ ಪ್ರವಾಹವು, ಮನೆಗಳನ್ನು ಕೆಡವುತ್ತ, ಪೈರನ್ನು ನಾಶಮಾಡುತ್ತ, ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತ ಭೂಪ್ರದೇಶವನ್ನು ವ್ಯಾಪಕವಾಗಿ ಧ್ವಂಸಮಾಡುತ್ತದೆ. ಆದರೆ ಚಂಡಮಾರುತವು ದಾಟಿಹೋದೊಡನೆ ಪ್ರಶಾಂತವಾದ ಅವಧಿಯೊಂದು ಅಲ್ಲಿ ನೆಲಸುತ್ತದೆ. ಅದರಿಂದ ಬದುಕಿ ಉಳಿದವರಿಗೆ ಅದು ಪುನರ್ನಿರ್ಮಾಣ ಮತ್ತು ಪುನಸ್ಸ್ಥಾಪನೆಯ ಸಮಯವಾಗಿದೆ.

2 ಪ್ರವಾದಿ ಯೆಶಾಯನು ಯೆಹೂದ ಮತ್ತು ಯೆರೂಸಲೇಮಿನ ಕುರಿತು ಮೇಲಿನದಕ್ಕೆ ಹೋಲುವ ಸಂಗತಿಯೊಂದನ್ನು ಮುಂತಿಳಿಸುತ್ತಾನೆ. ದೈವಿಕ ತೀರ್ಪಿನ ಕಾರ್ಮುಗಿಲುಗಳು ಸಕಾರಣದಿಂದಲೇ ಭಯಸೂಚಕವಾಗಿ ಹೆಚ್ಚು ನಿಕಟವಾಗುತ್ತಿವೆ! ಯಾಕೆಂದರೆ ಜನಾಂಗದ ಅಪರಾಧವು ಅವರ ಮೇಲೆ ಹೊರೆಯಾಗಿ ಕುಳಿತಿದೆ. ಆಳುವವರೂ ಪ್ರಜೆಗಳೂ ದೇಶವನ್ನು ಅನ್ಯಾಯ ಮತ್ತು ರಕ್ತಪಾತದಿಂದ ತುಂಬಿಸಿದ್ದಾರೆ. ಯೆಶಾಯನ ಮೂಲಕ ಯೆಹೋವನು ಯೆಹೂದದ ಅಪರಾಧವನ್ನು ಬಯಲುಪಡಿಸಿ, ಆ ಅಪರಾಧಿ ಜನಾಂಗಕ್ಕೆ ತೀರ್ಪು ಕೊಡುವೆನೆಂದು ಎಚ್ಚರಿಸುತ್ತಾನೆ. (ಯೆಶಾಯ 3:25) ಈ ಚಂಡಮಾರುತದ ಫಲವಾಗಿ ಯೆಹೂದ ದೇಶವು ಪೂರ್ತಿಯಾಗಿ ಧ್ವಂಸವಾಗಲಿದೆ. ಆ ಪ್ರತೀಕ್ಷೆಯು ಯೆಶಾಯನನ್ನು ದುಃಖಕ್ಕೊಳಪಡಿಸುತ್ತದೆ.

3. ಯೆಶಾಯ 4:​2-6ರ ಪ್ರೇರಿತ ಸಂದೇಶದಲ್ಲಿ ಯಾವ ಸುವಾರ್ತೆಯು ಸೇರಿದೆ?

3 ಆದರೆ ಸುವಾರ್ತೆಯೊಂದಿದೆ! ಯೆಹೋವನ ನೀತಿಯ ತೀರ್ಪು ಎಂಬ ಚಂಡಮಾರುತವು ದಾಟಲಾಗಿ ಜನಶೇಷವೊಂದು ಬದುಕಿ ಉಳಿಯುತ್ತದೆ. ಹೌದು, ಯೆಹೂದದ ಮೇಲಿನ ಯೆಹೋವನ ತೀರ್ಪಿನ ತೀಕ್ಷ್ಣತೆಯನ್ನು ಆತನ ಕರುಣೆಯು ಹದಗೊಳಿಸುತ್ತದೆ! ಯೆಶಾಯ 4:​2-6ರ ವರೆಗಿನ ಪ್ರೇರಿತ ಸಂದೇಶವು ಈ ಸುಖದಾಯಕ ಸಮಯವನ್ನು ಮುನ್ನೋಡುತ್ತದೆ. ಥಟ್ಟನೆ, ಮುಗಿಲ ಮರೆಯಿಂದ ಸೂರ್ಯನು ತೋರಿಬರುತ್ತಾನೆ. ದೃಶ್ಯವು ಯೆಶಾಯ 2:​6–4:1ರ ವರೆಗೆ ವರ್ಣಿಸಿದ ತೀರ್ಪಿನ ನೋಟಗಳಿಂದ ಮತ್ತು ಧ್ವನಿಗಳಿಂದ ಸರಿದು, ಸುಂದರವಾಗಿ ನವೀಕರಿಸಲ್ಪಟ್ಟ ದೇಶ ಮತ್ತು ಜನರನ್ನು ತೋರಿಸುತ್ತದೆ.

4. ಉಳಿಕೆಯವರ ಪುನಸ್ಸ್ಥಾಪನೆಯ ಕುರಿತ ಯೆಶಾಯನ ಪ್ರವಾದನೆಯನ್ನು ನಾವು ಏಕೆ ಚರ್ಚಿಸಬೇಕು?

4 ಉಳಿಕೆಯವರ ಪುನಸ್ಸ್ಥಾಪನೆ ಮತ್ತು ತರುವಾಯ ಅವರಿಗೆ ಸಿಗುವ ಭದ್ರತೆಯ ಕುರಿತ ಯೆಶಾಯನ ಪ್ರವಾದನೆಯು ನಮ್ಮ ದಿನಗಳಲ್ಲಿಯೂ ಅಂದರೆ “ಅಂತ್ಯಕಾಲದಲ್ಲಿ”ಯೂ ನೆರವೇರುತ್ತದೆ. (ಯೆಶಾಯ 2:​2-4) ಈಗ ನಾವು ಈ ಸಮಯೋಚಿತವಾದ ಸಂದೇಶವನ್ನು ಚರ್ಚಿಸೋಣ, ಏಕೆಂದರೆ ಅದಕ್ಕೆ ಪ್ರವಾದನಾ ಮಹತ್ವವಿರುವುದು ಮಾತ್ರವಲ್ಲ, ಅದು ನಮಗೆ ಯೆಹೋವನ ಕರುಣೆಯನ್ನೂ, ನಾವು ಅದನ್ನು ಹೇಗೆ ಪಡೆಯಬಹುದೆಂಬುದನ್ನೂ ಕಲಿಸಿಕೊಡುತ್ತದೆ.

‘ಯೆಹೋವನ ಚಿಗುರು’

5, 6. (ಎ) ಚಂಡಮಾರುತವನ್ನು ಅನುಸರಿಸಿ ಬರುವ ಪ್ರಶಾಂತ ಸಮಯವನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ? (ಬಿ) ‘ಚಿಗುರು’ ಎಂಬ ಪದದ ಅರ್ಥವೇನು, ಮತ್ತು ಯೆಹೂದ ದೇಶದ ಕುರಿತು ಇದು ಏನನ್ನು ಸೂಚಿಸುತ್ತದೆ?

5 ಬರಲಿರುವ ಚಂಡಮಾರುತದ ನಂತರ ಹೆಚ್ಚು ಶಾಂತಿಭರಿತವಾದ ಸಮಯವನ್ನು ಯೆಶಾಯನು ನೋಡುವಾಗ ಅವನ ಬರವಣಿಗೆ ಆದರಣೆಯಿಂದ ತುಂಬುತ್ತದೆ. ಅವನು ಬರೆಯುವುದು: “ಆ ದಿನದಲ್ಲಿ ಯೆಹೋವನು ದಯಪಾಲಿಸುವ ಬೆಳೆಯಿಂದ [“ಯೆಹೋವನ ಚಿಗುರಿನಿಂದ,” ಪಾದಟಿಪ್ಪಣಿ] ಇಸ್ರಾಯೇಲ್ಯರಲ್ಲಿ ಉಳಿದವರಿಗೆ [“ತಪ್ಪಿಸಿಕೊಂಡವರಿಗೆ,” NW] ಸೌಂದರ್ಯವೂ ಮಹಿಮೆಯೂ ಉಂಟಾಗುವವು. ದೇಶದ ಫಲದಿಂದ ಉನ್ನತಿಯೂ ಭೂಷಣವೂ ಲಭಿಸುವವು.”​—ಯೆಶಾಯ 4:⁠2.

6 ಯೆಶಾಯನು ಇಲ್ಲಿ ಪುನಸ್ಸ್ಥಾಪನೆಯ ಕುರಿತು ಮಾತಾಡುತ್ತಾನೆ. ‘ಚಿಗುರು’ ಎಂದು ಇಲ್ಲಿ ಭಾಷಾಂತರಿಸಲಾಗಿರುವ ಹೀಬ್ರು ನಾಮಪದವು, ‘ಮೊಳೆಯುವ ವಸ್ತುವನ್ನು, ಒಂದು ಮೊಳಕೆಯನ್ನು, ಒಂದು ಕೊಂಬೆಯನ್ನು’ ಸೂಚಿಸುತ್ತದೆ. ಇದನ್ನು ಸಮೃದ್ಧಿ, ಅಭಿವೃದ್ಧಿ ಮತ್ತು ಯೆಹೋವನಿಂದ ಬರುವ ಆಶೀರ್ವಾದಗಳೊಂದಿಗೆ ಸಂಬಂಧಿಸಲಾಗುತ್ತದೆ. ಹೀಗೆ ಯೆಶಾಯನು ಒಂದು ನಿರೀಕ್ಷೆಯ ಚಿತ್ರವನ್ನು, ಬರಲಿರುವ ಹಾಳುಬೀಳುವಿಕೆ ಸದಾಕಾಲಕ್ಕಾಗಿರುವುದಿಲ್ಲವೆಂಬ ಚಿತ್ರವನ್ನು ಬರೆಯುತ್ತಾನೆ. ಯೆಹೋವನ ಆಶೀರ್ವಾದದ ಕಾರಣ, ಒಂದೊಮ್ಮೆ ಸಮೃದ್ಧವಾಗಿದ್ದ ಯೆಹೂದ ದೇಶವು ಪುನಃ ಹೇರಳವಾದ ಫಲವನ್ನು ಫಲಿಸುವುದು. *​—⁠ಯಾಜಕಕಾಂಡ 26:​3-5.

7. ಯೆಹೋವನ ಚಿಗುರು ‘ಸೌಂದರ್ಯ ಮತ್ತು ಮಹಿಮೆ’ಗಾಗಿರುವುದು ಹೇಗೆ?

7 ಮುಂದಿರುವ ಬದಲಾವಣೆಯ ಮಹಾ ವೈಭವವನ್ನು ವರ್ಣಿಸಲು ಸುವ್ಯಕ್ತವಾದ ಪದಗಳನ್ನು ಯೆಶಾಯನು ಉಪಯೋಗಿಸುತ್ತಾನೆ. ಯೆಹೋವನ ಚಿಗುರು ‘ಸೌಂದರ್ಯ ಮತ್ತು ಮಹಿಮೆ’ಗಾಗಿರುವುದು. “ಸೌಂದರ್ಯ” ಎಂಬ ಪದವು, ಯೆಹೋವನು ಶತಮಾನಗಳ ಹಿಂದೆ ವಾಗ್ದತ್ತ ದೇಶವನ್ನು ಇಸ್ರಾಯೇಲಿಗೆ ಕೊಟ್ಟಾಗ ಅಲ್ಲಿದ್ದ ಸೊಬಗನ್ನು ಮನಸ್ಸಿಗೆ ತರುತ್ತದೆ. ಅದು ಎಷ್ಟು ಸುಂದರವಾಗಿತ್ತೆಂದರೆ, ಅದನ್ನು ಸಕಲ ದೇಶಗಳ “ಶಿರೋಮಣಿ” ಎಂದು ಎಣಿಸಲಾಗುತ್ತಿತ್ತು. (ಯೆಹೆಜ್ಕೇಲ 20:⁠6) ಯೆಹೂದ ದೇಶವು ತನ್ನ ಆದಿಯ ಮಹಿಮೆ ಮತ್ತು ಸೌಂದರ್ಯಕ್ಕೆ ಹಿಂದಿರುಗುವುದೆಂದು ಯೆಶಾಯನ ಮಾತುಗಳು ಹೀಗೆ ಆಶ್ವಾಸನೆ ಕೊಡುತ್ತವೆ. ನಿಶ್ಚಯವಾಗಿಯೂ, ಅದು ಭೂಮಿಯ ಮೇಲೆ ಒಂದು ಶಿರೋಮಣಿಯಂತಿರುವುದು.

8. ದೇಶದ ಪುನಸ್ಸ್ಥಾಪಿಸಲ್ಪಟ್ಟ ಸೌಂದರ್ಯವನ್ನು ಅನುಭವಿಸಲು ಅಲ್ಲಿ ಯಾರಿರುವರು, ಮತ್ತು ಅವರ ಅನಿಸಿಕೆಗಳನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ?

8 ಆದರೆ ದೇಶದ ಪುನಸ್ಸ್ಥಾಪಿಸಲ್ಪಟ್ಟ ಸೌಂದರ್ಯವನ್ನು ಆಸ್ವಾದಿಸಲು ಅಲ್ಲಿ ಯಾರಿರುವರು? ‘ಇಸ್ರಾಯೇಲ್ಯರಲ್ಲಿ ತಪ್ಪಿಸಿಕೊಂಡವರು’ ಎಂದು ಯೆಶಾಯನು ಬರೆಯುತ್ತಾನೆ. ಹೌದು, ಈ ಹಿಂದೆ ಮುಂತಿಳಿಸಲಾಗಿದ್ದ ಅಪಮಾನಕರವಾದ ನಾಶನವನ್ನು ಕೆಲವರು ಪಾರಾಗುವರು. (ಯೆಶಾಯ 3:​25, 26) ಬದುಕಿ ಉಳಿದವರಲ್ಲಿ ಒಂದು ಜನಶೇಷವು ಯೆಹೂದಕ್ಕೆ ಹಿಂದಿರುಗಿ ಅದರ ಪುನಸ್ಸ್ಥಾಪನೆಯಲ್ಲಿ ಭಾಗವಹಿಸುವುದು. ಹಿಂದಿರುಗಿ ಹೋಗುವ ಇವರಿಗೆ, ಅಂದರೆ “ತಪ್ಪಿಸಿಕೊಂಡ”ವರಿಗೆ, ಪುನಸ್ಸ್ಥಾಪಿಸಲ್ಪಟ್ಟ ದೇಶದ ಸಮೃದ್ಧ ಫಲವು “ಉನ್ನತಿಯೂ ಭೂಷಣವೂ” ಆಗುವುದು. (ಯೆಶಾಯ 4:⁠2) ದೇಶವು ಹಾಳುಬಿದ್ದಿರುವುದರ ಪರಿಣಾಮವಾಗಿ ಬಂದ ಅಪಮಾನವು, ನವೀಕರಿಸಲ್ಪಟ್ಟ ಅಭಿಮಾನಕ್ಕೆ ಬದಲಾವಣೆ ಹೊಂದುವುದು.

9. (ಎ) ಯೆಶಾಯನ ಮಾತುಗಳ ನೆರವೇರಿಕೆಯಲ್ಲಿ ಸಾ.ಶ.ಪೂ. 537ರಲ್ಲಿ ಏನು ಸಂಭವಿಸಿತು? (ಬಿ) ‘ತಪ್ಪಿಸಿಕೊಂಡವರಲ್ಲಿ’ ದೇಶಭ್ರಷ್ಟರಾದ ಮೇಲೆ ಹುಟ್ಟಿದ ಕೆಲವರು ಇದ್ದರೆಂದು ಏಕೆ ಹೇಳಬಹುದು? (ಪಾದಟಿಪ್ಪಣಿ ನೋಡಿ.)

9 ಯೆಶಾಯನ ಮಾತುಗಳಿಗನುಸಾರವಾಗಿಯೇ, ನ್ಯಾಯತೀರ್ಪಿನ ಚಂಡಮಾರುತವು ಸಾ.ಶ.ಪೂ. 607ರಲ್ಲಿ ಬಡಿಯಿತು. ಆಗ ಬಾಬೆಲಿನವರು ಯೆರೂಸಲೇಮನ್ನು ನಾಶಮಾಡಲಾಗಿ ಅನೇಕ ಮಂದಿ ಇಸ್ರಾಯೇಲ್ಯರು ಹತರಾದರು. ಬದುಕಿ ಉಳಿದ ಕೆಲವರನ್ನು ದೇಶಭ್ರಷ್ಟರಾಗಿ ಬಾಬೆಲಿಗೆ ಕರೆದೊಯ್ಯಲಾಯಿತು. ಆದರೆ ದೇವರು ಕರುಣೆ ತೋರಿಸದಿರುತ್ತಿದ್ದಲ್ಲಿ ಯಾರೂ ಬದುಕಿ ಉಳಿಯುತ್ತಿರಲಿಲ್ಲ. (ನೆಹೆಮೀಯ 9:31) ಕಾಲಕ್ರಮೇಣ ಯೆಹೂದವು ಪೂರ್ತಿ ನಿರ್ಜನವಾಯಿತು. (2 ಪೂರ್ವಕಾಲವೃತ್ತಾಂತ 36:​17-21) ಬಳಿಕ ಸಾ.ಶ.ಪೂ. 537ರಲ್ಲಿ ಕರುಣಾಮಯಿಯಾದ ದೇವರು ಈ “ತಪ್ಪಿಸಿಕೊಂಡವರು” ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಲಿಕ್ಕಾಗಿ ಯೆಹೂದಕ್ಕೆ ಹಿಂದಿರುಗುವಂತೆ ಅನುಮತಿಸಿದನು. * (ಎಜ್ರ 1:​1-4; 2:⁠1) ಹಿಂದಿರುಗಿ ಬರುತ್ತಿದ್ದ ಈ ದೇಶಭ್ರಷ್ಟರ ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ಕೀರ್ತನೆ 137 ಸುಂದರವಾಗಿ ತಿಳಿಸುತ್ತದೆ. ಈ ಕೀರ್ತನೆಯನ್ನು ಸೆರೆವಾಸದ ಸಮಯದಲ್ಲಿ ಇಲ್ಲವೆ ಸ್ವಲ್ಪ ಸಮಯದ ಬಳಿಕ ಬರೆದಿರಬಹುದು. ಯೆಹೂದಕ್ಕೆ ಹಿಂದಿರುಗಿದ ಇವರು, ಜಮೀನನ್ನು ಉತ್ತು ಬೀಜ ಬಿತ್ತಿದರು. ದೇವರು ತಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆ ಮತ್ತು ಹೀಗೆ ದೇಶವು “ಏದೆನ್‌ ಉದ್ಯಾನ”ದಂತೆ ಫಲಭರಿತವಾಗುತ್ತಿದೆಯೆಂಬುದನ್ನು ಕಂಡ ಅವರಿಗೆ ಹೇಗನಿಸಿರಬಹುದೆಂದು ಊಹಿಸಿರಿ!​—⁠ಯೆಹೆಜ್ಕೇಲ 36:​34-36.

10, 11. (ಎ) ಇಪ್ಪತ್ತನೆಯ ಶತಕದ ಆದಿಭಾಗದಲ್ಲಿ ಬೈಬಲ್‌ ವಿದ್ಯಾರ್ಥಿಗಳು ‘ಮಹಾ ಬಾಬೆಲ್‌’ಗೆ ಯಾವ ವಿಧದಲ್ಲಿ ಸೆರೆಯಾಳುಗಳಾಗಿದ್ದರು? (ಬಿ) ಯೆಹೋವನು ಆತ್ಮಿಕ ಇಸ್ರಾಯೇಲ್ಯರಲ್ಲಿ ಉಳಿಕೆಯವರನ್ನು ಹೇಗೆ ಆಶೀರ್ವದಿಸಿದನು?

10 ಇದಕ್ಕೆ ಹೋಲಿಕೆಯಾದ ಒಂದು ಪುನಸ್ಸ್ಥಾಪನೆಯು ನಮ್ಮ ದಿನಗಳಲ್ಲಿಯೂ ನಡೆದಿದೆ. 20ನೆಯ ಶತಮಾನದ ಆರಂಭದಲ್ಲಿ, ಆಗ ಬೈಬಲ್‌ ವಿದ್ಯಾರ್ಥಿಗಳೆಂದು ಕರೆಯಲಾಗುತ್ತಿದ್ದ ಯೆಹೋವನ ಸಾಕ್ಷಿಗಳು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲ್‌ನ’ ಆತ್ಮಿಕ ಬಂಧನದೊಳಕ್ಕೆ ಬಂದರು. (ಪ್ರಕಟನೆ 17:⁠5) ಅನೇಕ ಸುಳ್ಳು ಧಾರ್ಮಿಕ ಬೋಧನೆಗಳನ್ನು ಈ ಬೈಬಲ್‌ ವಿದ್ಯಾರ್ಥಿಗಳು ತಳ್ಳಿಹಾಕಿದ್ದರೂ, ಕೆಲವು ಬಾಬೆಲ್‌ ಸಂಬಂಧಿತ ಆಚಾರವಿಚಾರಗಳಿಂದ ಅವರು ಇನ್ನೂ ಮಲಿನಗೊಂಡಿದ್ದರು. ಪಾದ್ರಿ ಪ್ರೇರಿತ ವಿರೋಧದ ಫಲವಾಗಿ ಅವರಲ್ಲಿ ಕೆಲವರು ಸೆರೆಮನೆಗೂ ತಳ್ಳಲ್ಪಟ್ಟಿದ್ದರು. ಅವರ ಆತ್ಮಿಕ ದೇಶ ಅಂದರೆ ಅವರ ಧಾರ್ಮಿಕ ಅಥವಾ ಆತ್ಮಿಕ ಸ್ಥಿತಿಯು ಹಾಳಾಗಿ ಬಿದ್ದಿತ್ತು.

11 ಆದರೆ 1919ರ ವಸಂತಕಾಲದಲ್ಲಿ, ಆತ್ಮಿಕ ಇಸ್ರಾಯೇಲ್ಯರ ಈ ಉಳಿಕೆಯವರ ಮೇಲೆ ಯೆಹೋವನ ಕೃಪಾದೃಷ್ಟಿ ಬಿತ್ತು. (ಗಲಾತ್ಯ 6:16) ಆತನು ಅವರ ಪಶ್ಚಾತ್ತಾಪವನ್ನೂ ಸತ್ಯದಲ್ಲಿ ತನ್ನನ್ನು ಆರಾಧಿಸುವ ಅವರ ಬಯಕೆಯನ್ನೂ ನೋಡಿ ಅವರನ್ನು ಅಕ್ಷರಾರ್ಥದ ಸೆರೆಮನೆಯಿಂದಲೂ ಮತ್ತು ಹೆಚ್ಚು ಪ್ರಾಮುಖ್ಯವಾಗಿ ಆತ್ಮಿಕ ಬಂಧನದಿಂದಲೂ ಬಿಡಿಸಿದನು. ಈ “ತಪ್ಪಿಸಿಕೊಂಡವರು” ತಮ್ಮ ದೇವದತ್ತ ಆತ್ಮಿಕ ಸ್ಥಿತಿಗೆ ಪುನಸ್ಸ್ಥಾಪಿಸಲ್ಪಟ್ಟಾಗ, ಆ ಸ್ಥಿತಿಯು ಸಮೃದ್ಧವಾಗಿ ಮೊಳೆಯುವಂತೆ ದೇವರು ಮಾಡಿದನು. ಆ ಆತ್ಮಿಕ ಸ್ಥಿತಿಯ ಮನಸೆಳೆಯುವ, ಆಕರ್ಷಕ ತೋರಿಕೆಯ ಕಾರಣ ಇತರ ದಶಲಕ್ಷಾಂತರ ಜನರು ಈ ಉಳಿಕೆಯವರೊಂದಿಗೆ ಸತ್ಯಾರಾಧನೆಯಲ್ಲಿ ಜೊತೆಗೂಡಿದ್ದಾರೆ.

12. ಯೆಹೋವನಿಗೆ ತನ್ನ ಜನರ ಕಡೆಗಿರುವ ಕರುಣೆಯನ್ನು ಯೆಶಾಯನ ಮಾತುಗಳು ಹೇಗೆ ಎದ್ದುಕಾಣುವಂತೆ ಮಾಡುತ್ತವೆ?

12 ಯೆಶಾಯನ ಈ ಮಾತುಗಳು ದೇವರಿಗೆ ತನ್ನ ಜನರ ಮೇಲಿರುವ ಕರುಣೆಯು ಎದ್ದುಕಾಣುವಂತೆ ಮಾಡುತ್ತವೆ. ಇಸ್ರಾಯೇಲ್‌ ಜನಾಂಗವು ದೇವರಿಗೆ ವಿರುದ್ಧವಾಗಿ ವರ್ತಿಸಿದರೂ, ಅವರಲ್ಲಿ ಪಶ್ಚಾತ್ತಾಪಪಟ್ಟ ಉಳಿಕೆಯವರಿಗೆ ದೇವರು ಕರುಣೆ ತೋರಿಸಿದನು. ಘೋರ ಪಾಪಗಳನ್ನು ಮಾಡಿದವರು ಸಹ ನಿರೀಕ್ಷೆಯಿಂದ ಯೆಹೋವನ ಬಳಿಗೆ ಹಿಂದಿರುಗಬಹುದೆಂದು ತಿಳಿಯುವಾಗ ನಾವು ಸಾಂತ್ವನವನ್ನು ಪಡೆಯಬಲ್ಲೆವು. ಪಶ್ಚಾತ್ತಾಪಪಡುವವರು ತಮಗೆ ದೇವರ ಕರುಣೆ ಎಂದಿಗೂ ದೊರಕದೆಂದು ನೆನಸುವ ಅಗತ್ಯವಿಲ್ಲ. ಏಕೆಂದರೆ ಪರಿತಾಪಪಡುವ ಹೃದಯವನ್ನು ಆತನೆಂದಿಗೂ ತಳ್ಳಿಹಾಕನು. (ಕೀರ್ತನೆ 51:17) ಬೈಬಲು ನಮಗೆ ಆಶ್ವಾಸನೆ ನೀಡುವುದು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.” (ಕೀರ್ತನೆ 103:8, 13) ಇಂತಹ ಕರುಣಾಮಯನಾದ ದೇವರು ನಮ್ಮ ಸಕಲ ಸ್ತುತಿಗೆ ಅರ್ಹನೆಂಬುದು ನಿಶ್ಚಯ!

ಉಳಿಕೆಯವರು ಯೆಹೋವನಿಗೆ ಪರಿಶುದ್ಧ ಜನವಾಗುತ್ತಾರೆ

13. ಯೆಶಾಯ 4:3ರಲ್ಲಿ ಬರೆದಿರುವಂತೆ, ಯೆಹೋವನು ಕರುಣೆ ತೋರಿಸಲಿರುವ ಉಳಿಕೆಯವರನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ?

13 ಯೆಹೋವನ ಕರುಣೆ ದೊರೆಯಲಿರುವ ಉಳಿಕೆಯವರ ಪರಿಚಯ ನಮಗೆ ಈಗಾಗಲೇ ಆಗಿದೆಯಾದರೂ ಈಗ ಯೆಶಾಯನು ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡುತ್ತಾನೆ. ಅವನು ಬರೆಯುವುದು: “ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲಸುವರು.”​—ಯೆಶಾಯ 4:⁠3, ಪರಿಶುದ್ಧ ಬೈಬಲ್‌. *

14. “ಉಳಿದವರು” ಮತ್ತು “ನಿಂತವರು” ಯಾರು, ಮತ್ತು ಯೆಹೋವನು ಅವರಿಗೆ ಕರುಣೆ ತೋರಿಸಲಿರುವುದೇಕೆ?

14 ಈ “ಉಳಿದವರು” ಮತ್ತು “ನಿಂತವರು” ಯಾರು? ಹಿಂದಿನ ವಚನದಲ್ಲಿ ಹೇಳಿರುವ ತಪ್ಪಿಸಿಕೊಂಡವರು, ಅಂದರೆ ಯೆಹೂದಕ್ಕೆ ಹಿಂದಿರುಗಲು ಅನುಮತಿಸಲ್ಪಡುವ ಯೆಹೂದಿ ದೇಶಭ್ರಷ್ಟರೇ ಇವರು. ಆದರೆ ಯೆಹೋವನು ಅವರಿಗೆ ಏಕೆ ಕರುಣೆ ತೋರಿಸುವನೆಂಬುದನ್ನು ಯೆಶಾಯನು ಈಗ ತೋರಿಸುತ್ತಾನೆ. ಏಕೆಂದರೆ ಅವರು ಆತನಿಗೆ “ಪರಿಶುದ್ಧ” ಜನರಾಗುವರು. ಪರಿಶುದ್ಧತೆಯ ಅರ್ಥವು, “ಧಾರ್ಮಿಕ ಶುದ್ಧತೆ ಅಥವಾ ನೈರ್ಮಲ್ಯ; ಪವಿತ್ರತೆ” ಎಂದಾಗಿದೆ. ಆದುದರಿಂದ ಪರಿಶುದ್ಧರಾಗಿರುವುದರಲ್ಲಿ, ನಡೆನುಡಿಯಲ್ಲಿ ಶುದ್ಧರು ಅಥವಾ ನಿರ್ಮಲರು ಆಗಿರುವುದು, ಯಾವುದು ಸರಿ, ಯಾವುದು ಯೋಗ್ಯವೆಂಬ ವಿಷಯದಲ್ಲಿ ಯೆಹೋವನ ಮಟ್ಟವನ್ನು ಮುಟ್ಟುವುದು ಸೇರಿದೆ. ಹೌದು, ತನಗೆ “ಪರಿಶುದ್ಧ”ರಾಗಿರುವವರಿಗೆ ಯೆಹೋವನು ಕರುಣೆ ತೋರಿಸಿ, ಅವರು “ಪವಿತ್ರನಗರ”ವಾದ ಯೆರೂಸಲೇಮಿಗೆ ಹಿಂದಿರುಗಲು ಬಿಡುವನು.​—⁠ನೆಹೆಮೀಯ 11:⁠1.

15. (ಎ) ‘ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಜೆರುಸಲೇಮಿನಲ್ಲಿ ವಾಸಿಸುವವರು’ ಎಂಬ ವಾಕ್ಸರಣಿಯು ಯಾವ ಯೆಹೂದಿ ವಾಡಿಕೆಯನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ? (ಬಿ) ಯೆಶಾಯನ ಮಾತುಗಳು ಯಾವ ಗಂಭೀರವಾದ ಎಚ್ಚರಿಕೆಯ ಸೂಚನೆಯನ್ನು ಕೊಡುತ್ತವೆ?

15 ಈ ನಂಬಿಗಸ್ತ ಉಳಿಕೆಯವರು ಅಲ್ಲಿಯೇ ಉಳಿಯುವರೊ? ‘ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಜೆರುಸಲೇಮಿನಲ್ಲಿ ವಾಸಿಸುವವರು’ ಎಂದು ಅವರ ವಿಷಯದಲ್ಲಿ ಯೆಶಾಯನು ವಚನ ಕೊಡುತ್ತಾನೆ. ಇದು, ಇಸ್ರಾಯೇಲ್ಯರ ಕುಟುಂಬ, ವಂಶಗಳ ಕುರಿತಾಗಿ ಜಾಗರೂಕತೆಯಿಂದ ದಾಖಲೆಯಿಡುವ ಯೆಹೂದಿ ವಾಡಿಕೆಯನ್ನು ನಮಗೆ ನೆನಪು ಹುಟ್ಟಿಸುತ್ತದೆ. (ನೆಹೆಮೀಯ 7:⁠5) ದಾಖಲೆ ಪತ್ರದಲ್ಲಿ ಒಬ್ಬನ ಹೆಸರು ಬರೆಯಲ್ಪಡುವುದೆಂದರೆ ಆ ವ್ಯಕ್ತಿ ಜೀವದಿಂದಿದ್ದಾನೆ ಎಂದರ್ಥವಾಗುತ್ತಿತ್ತು, ಏಕೆಂದರೆ ಒಬ್ಬನು ಸತ್ತಾಗ ಅವನ ಹೆಸರು ಅಲ್ಲಿಂದ ತೆಗೆಯಲ್ಪಡುತ್ತಿತ್ತು. ಬೈಬಲಿನ ಬೇರೆ ಭಾಗಗಳಲ್ಲಿ, ಯೆಹೋವನು ಯಾರಿಗೆ ಜೀವವನ್ನು ಕೊಡುವನೊ ಅವರ ಹೆಸರುಗಳಿರುವ ಒಂದು ಸಾಂಕೇತಿಕ ದಾಖಲೆ ಪಟ್ಟಿ ಅಥವಾ ಪುಸ್ತಕದ ಕುರಿತು ನಾವು ಓದುತ್ತೇವೆ. ಆದರೆ ಈ ಪುಸ್ತಕದಲ್ಲಿ ಷರತ್ತಿನ ಮೇಲೆ ಹೆಸರುಗಳನ್ನು ಬರೆಯಲಾಗುತ್ತದೆ, ಏಕೆಂದರೆ ಯೆಹೋವನು ಅದರಿಂದ ಹೆಸರನ್ನು ‘ಅಳಿಸಿಬಿಡಬಲ್ಲನು.’ (ವಿಮೋಚನಕಾಂಡ 32:​32, 33; ಕೀರ್ತನೆ 69:28) ಹಾಗಾದರೆ ಯೆಶಾಯನ ಮಾತುಗಳು ಗಂಭೀರವಾದ ಎಚ್ಚರಿಕೆಯೊಂದನ್ನು ಸೂಚಿಸುತ್ತವೆ. ಅದೇನೆಂದರೆ, ಹಿಂದಿರುಗಿ ಬಂದವರು ದೇವರ ದೃಷ್ಟಿಯಲ್ಲಿ ಪರಿಶುದ್ಧರಾಗಿ ಉಳಿಯುವಲ್ಲಿ ಮಾತ್ರ, ತಮ್ಮ ಪುನಸ್ಸ್ಥಾಪಿತ ದೇಶದಲ್ಲಿ ಬದುಕುತ್ತ ಇರಬಹುದು.

16. (ಎ) ಸಾ.ಶ.ಪೂ. 537ರಲ್ಲಿ ತಾನು ಯೆಹೂದಕ್ಕೆ ಹಿಂದಿರುಗಲು ಅನುಮತಿಸಿದವರಿಂದ ಯೆಹೋವನು ಏನನ್ನು ಕೇಳಿಕೊಂಡನು? (ಬಿ) ಅಭಿಷಿಕ್ತ ಉಳಿಕೆಯವರ ಮತ್ತು “ಬೇರೆ ಕುರಿ”ಗಳ ಮೇಲೆ ಯೆಹೋವನು ತೋರಿಸಿದ ಕರುಣೆಯು ವ್ಯರ್ಥವಾಗಿರಲಿಲ್ಲವೇಕೆ?

16 ಸಾ.ಶ.ಪೂ. 537ರಲ್ಲಿ ಯೆರೂಸಲೇಮಿಗೆ ಹಿಂದಿರುಗಿ ಬಂದ ಉಳಿಕೆಯವರು ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ಸದುದ್ದೇಶದಿಂದ ಬಂದರು. ಯೆಶಾಯನು ಶಕ್ತಿಯುತವಾಗಿ ಯಾವುದರ ಕುರಿತಾಗಿ ಎಚ್ಚರಿಸಿದ್ದನೊ ಅಂತಹ ವಿಧರ್ಮಿ ಆಚಾರಗಳಿಂದ ಅಥವಾ ಅಶುದ್ಧ ವರ್ತನೆಗಳಿಂದ ಮಲಿನಗೊಂಡಿದ್ದ ಯಾವನಿಗೂ ಹಿಂದಿರುಗಿ ಬರುವ ಹಕ್ಕು ಇರಲಿಲ್ಲ. (ಯೆಶಾಯ 1:​15-17) ಯೆಹೋವನು ಯಾರನ್ನು ಪರಿಶುದ್ಧರೆಂದು ವೀಕ್ಷಿಸಿದನೊ ಅಂತಹವರು ಮಾತ್ರ ಯೆಹೂದಕ್ಕೆ ಹಿಂದಿರುಗಬಹುದಾಗಿತ್ತು. (ಯೆಶಾಯ 35:⁠8) ತದ್ರೀತಿ, 1919ರಲ್ಲಿ ಆತ್ಮಿಕ ಬಂಧನದಿಂದ ಬಿಡುಗಡೆಯಾಗಿ, ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯಿರುವ ದಶಲಕ್ಷಗಟ್ಟಲೆ “ಬೇರೆಕುರಿ”ಗಳಿಂದ ಈಗ ಜೊತೆಗೂಡಿರುವ ಅಭಿಷಿಕ್ತ ಉಳಿಕೆಯವರು, ದೇವರ ದೃಷ್ಟಿಯಲ್ಲಿ ಪರಿಶುದ್ಧರಾಗಿರಲು ಸಕಲ ಪ್ರಯತ್ನವನ್ನೂ ಮಾಡಿದ್ದಾರೆ. (ಯೋಹಾನ 10:16) ಬಾಬೆಲಿನ ಬೋಧನೆ ಮತ್ತು ಆಚಾರಗಳನ್ನು ಬಿಟ್ಟು ಅವರು ತಮ್ಮನ್ನು ಶುದ್ಧೀಕರಿಸಿಕೊಂಡಿದ್ದಾರೆ. ದೇವರ ಉಚ್ಚ ನೈತಿಕ ಮಟ್ಟಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಅವರು ವೈಯಕ್ತಿಕವಾಗಿ ಪ್ರಯತ್ನಿಸುತ್ತಾರೆ. (1 ಪೇತ್ರ 1:​14-16) ಅವರಿಗೆ ದೊರೆತಿರುವ ಯೆಹೋವನ ಕರುಣೆ ವ್ಯರ್ಥವಾಗಿಲ್ಲ.

17. “ಜೀವಬಾಧ್ಯರ ಪಟ್ಟಿ”ಯಲ್ಲಿ ಯೆಹೋವನು ಯಾರ ಹೆಸರುಗಳನ್ನು ಬರೆಯುತ್ತಾನೆ, ಮತ್ತು ನಾವು ಏನು ಮಾಡುವಂತೆ ನಿರ್ಧರಿಸಬೇಕು?

17 ಇಸ್ರಾಯೇಲಿನಲ್ಲಿ ಪರಿಶುದ್ಧರಾಗಿದ್ದವರನ್ನು ಯೆಹೋವನು ಗುರುತಿಸಿದನೆಂದೂ ‘ಜೀವಬಾಧ್ಯರ ಪಟ್ಟಿಯಲ್ಲಿ ಅವರ ಹೆಸರನ್ನು’ ಬರೆದನೆಂಬುದನ್ನೂ ಜ್ಞಾಪಿಸಿಕೊಳ್ಳಿ. ಇಂದು ಸಹ ನಾವು ನಮ್ಮ “ದೇಹಗಳನ್ನು ದೇವರಿಗೆ ಮೀಸಲಾಗಿಯೂ [“ಪವಿತ್ರವಾಗಿಯೂ,” ಪಾದಟಿಪ್ಪಣಿ] ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ” ಅರ್ಪಿಸುವಾಗ, ಮನಸ್ಸು ಮತ್ತು ದೇಹಗಳಲ್ಲಿ ಶುದ್ಧರಾಗಿರಲು ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಲಕ್ಷಿಸುತ್ತಾನೆ. (ರೋಮಾಪುರ 12:⁠1) ಮತ್ತು ತನ್ನ “ಜೀವಬಾಧ್ಯರ ಪಟ್ಟಿ”ಯಲ್ಲಿ ಅಂದರೆ, ಸ್ವರ್ಗದಲ್ಲಾಗಲಿ ಭೂಮಿಯ ಮೇಲಾಗಲಿ ನಿತ್ಯಜೀವವನ್ನು ಪಡೆಯಲಿರುವವರ ಹೆಸರುಗಳಿರುವ ಸಾಂಕೇತಿಕ ದಾಖಲೆಯಲ್ಲಿ ದೇವರು ಇಂತಹ ಜೀವನ ಕ್ರಮವನ್ನು ಅನುಸರಿಸುವವರೆಲ್ಲರ ದಾಖಲೆಯನ್ನಿಡುತ್ತಾನೆ. (ಫಿಲಿಪ್ಪಿ 4:3; ಮಲಾಕಿಯ 3:16) ಆದುದರಿಂದ ನಾವು ದೇವರ ದೃಷ್ಟಿಯಲ್ಲಿ ಪರಿಶುದ್ಧರಾಗಿರಲು ಸರ್ವಪ್ರಯತ್ನವನ್ನೂ ಮಾಡೋಣ, ಏಕೆಂದರೆ ಆಗ ಮಾತ್ರ ನಾವು ನಮ್ಮ ಹೆಸರುಗಳನ್ನು ಆ ಅಮೂಲ್ಯ “ಪಟ್ಟಿ”ಯಲ್ಲಿ ಉಳಿಸಿಕೊಳ್ಳಬಲ್ಲೆವು.​—ಪ್ರಕಟನೆ 3:⁠5.

ಪ್ರೀತಿಯ ಆರೈಕೆಯ ವಾಗ್ದಾನ

18, 19. ಯೆಶಾಯ 4:​4, 5ಕ್ಕನುಸಾರ, ಯೆಹೋವನು ಯಾವ ಶುದ್ಧೀಕರಣವನ್ನು ಮಾಡಬೇಕಾಗಿದೆ, ಮತ್ತು ಅದು ಹೇಗೆ ಪೂರೈಸಲ್ಪಡುವುದು?

18 ಆ ಬಳಿಕ, ಪುನಸ್ಸ್ಥಾಪಿತ ದೇಶನಿವಾಸಿಗಳು ಹೇಗೆ ಪರಿಶುದ್ಧರಾಗುವರೆಂದೂ ಅವರಿಗೆ ಯಾವ ಆಶೀರ್ವಾದಗಳು ಕಾದಿರುವವೆಂದೂ ಯೆಶಾಯನು ತೋರಿಸುತ್ತಾನೆ. ಅವನು ಹೇಳುವುದು: “ಆಗ ಕರ್ತನಾದ ಯೆಹೋವನು ನ್ಯಾಯತೀರ್ಪಿನ ಆತ್ಮದಿಂದಲೂ ದಹಿಸುವ ಆತ್ಮದಿಂದಲೂ ಚೀಯೋನಿನ ಸ್ತ್ರೀಯರ ಕಲ್ಮಷವನ್ನೂ ಯೆರೂಸಲೇಮಿನ ಮಧ್ಯದಲ್ಲಿನ ರಕ್ತವನ್ನೂ ತೊಳೆದುಬಿಟ್ಟ ಮೇಲೆ ಚೀಯೋನ್‌ ಪರ್ವತದ ಸಂಪೂರ್ಣ ಮಂದಿರದ ಮೇಲೆಯೂ ಅಲ್ಲಿನ ಕೂಟಗಳ ಮೇಲೆಯೂ ಹಗಲಲ್ಲಿ ಧೂಮಮೇಘವನ್ನು, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನು, ಉಂಟುಮಾಡುವನು. [] ಪ್ರಭಾವದ ಮೇಲೆಲ್ಲಾ ಆವರಣವಿರುವದು.”​—ಯೆಶಾಯ 4:4, 5.

19 ಯೆಶಾಯನು ಈ ಮೊದಲು, ತಮ್ಮ ಆಲಂಕಾರಿಕ ಆಭರಣಗಳ ಕೆಳಗೆ ನೈತಿಕ ಭ್ರಷ್ಟತೆಯನ್ನು ಮರೆಮಾಡಿದ್ದ ‘ಚೀಯೋನಿನ ಸ್ತ್ರೀಯರನ್ನು’ ಗದರಿಸಿದ್ದನು. ಅವನು ಜನರ ಸಾಮಾನ್ಯ ರಕ್ತಾಪರಾಧವನ್ನೂ ಬಯಲುಪಡಿಸಿ, ಅವರು ತಮ್ಮನ್ನು ತೊಳೆದುಕೊಳ್ಳುವಂತೆ ಪ್ರೋತ್ಸಾಹಿಸಿದ್ದನು. (ಯೆಶಾಯ 1:​15, 16; 3:​16-23) ಆದರೆ ಇಲ್ಲಿ ಅವನು ದೇವರು ತಾನೇ ಅವರ “ಕಲ್ಮಷ”ವನ್ನು ಅಥವಾ ನೈತಿಕ ಹೊಲಸನ್ನು ತೊಳೆದು ಬಿಟ್ಟಿರುವ ಮತ್ತು ‘ರಕ್ತದ ಕಲೆಗಳನ್ನು ಶುಚಿಮಾಡಿರುವ’ (ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಸಮಯಕ್ಕೆ ಮುನ್ನೋಡುತ್ತಾನೆ. (ಯೆಶಾಯ 4:⁠4) ಆದರೆ ಈ ಶುದ್ಧೀಕರಣವನ್ನು ಹೇಗೆ ಮಾಡಲಾಗುವುದು? “ನ್ಯಾಯತೀರ್ಪಿನ ಆತ್ಮ” ಮತ್ತು “ದಹಿಸುವ ಆತ್ಮ”ದಿಂದಲೇ. ಬರಲಿರುವ ಯೆರೂಸಲೇಮಿನ ನಾಶನವೂ ಬಾಬೆಲಿನಲ್ಲಿ ಅದರ ದೇಶಭ್ರಷ್ಟತೆಯೂ ಆ ಅಶುದ್ಧ ಜನಾಂಗದ ಮೇಲೆ ಬಂದೆರಗಿದ ದೇವರ ನ್ಯಾಯತೀರ್ಪಿನ ಮತ್ತು ದಹಿಸುವ ಕೋಪದ ವ್ಯಕ್ತಪಡಿಸುವಿಕೆಗಳಾಗಿರುವವು. ಈ ವಿಪತ್ತುಗಳಲ್ಲಿ ಬದುಕಿ ಉಳಿದು ದೇಶಕ್ಕೆ ಹಿಂದಿರುಗುವ ಉಳಿಕೆಯವರು ದೀನರಾಗಿ ಮಾಡಲ್ಪಟ್ಟವರೂ ಶುದ್ಧೀಕರಿಸಲ್ಪಟ್ಟವರೂ ಆಗಿರುವರು. ಆ ಕಾರಣದಿಂದಲೇ ಅವರು ಯೆಹೋವನಿಗೆ ಪರಿಶುದ್ಧ ಜನರಾಗಿರುವರು ಮತ್ತು ಕರುಣೆಯನ್ನು ಪಡೆಯುವರು.​—⁠ಹೋಲಿಸಿ ಮಲಾಕಿಯ 3:​2, 3.

20. (ಎ) “ಮೇಘ,” “ಧೂಮ” ಮತ್ತು “ಪ್ರಜ್ವಲಿಸುವ ಅಗ್ನಿ” ಎಂಬ ಪದಗಳು ಯಾವುದರ ನೆನಪು ಹುಟ್ಟಿಸುತ್ತವೆ? (ಬಿ) ಶುದ್ಧೀಕರಿಸಲ್ಪಟ್ಟ ದೇಶಭ್ರಷ್ಟರು ಹೆದರುವ ಆವಶ್ಯಕತೆಯಿಲ್ಲವೇಕೆ?

20 ಶುದ್ಧೀಕರಿಸಲ್ಪಟ್ಟ ಈ ಉಳಿಕೆಯವರನ್ನು ತನ್ನ ಪ್ರೀತಿಯ ಆರೈಕೆಯೊಳಗೆ ತರುವೆನೆಂದು ಯೆಹೋವನು ಯೆಶಾಯನ ಮೂಲಕ ವಾಗ್ದಾನ ಮಾಡುತ್ತಾನೆ. “ಮೇಘ,” “ಧೂಮ” ಮತ್ತು “ಪ್ರಜ್ವಲಿಸುವ ಅಗ್ನಿ” ಎಂಬ ಪದಗಳು, ಐಗುಪ್ತವನ್ನು ಬಿಟ್ಟ ಮೇಲೆ ಯೆಹೋವನು ಇಸ್ರಾಯೇಲ್ಯರ ಆರೈಕೆಮಾಡಿದ ವಿಧವನ್ನು ಜ್ಞಾಪಕಕ್ಕೆ ತರುತ್ತವೆ. “ಮೇಘಸ್ತಂಭ” ಮತ್ತು “ಅಗ್ನಿಸ್ತಂಭ”ವು ಇಸ್ರಾಯೇಲ್ಯರನ್ನು ಬೆನ್ನಟ್ಟುತ್ತಿದ್ದ ಐಗುಪ್ತ್ಯರಿಂದ ಕಾಪಾಡಿದ್ದು ಮಾತ್ರವಲ್ಲ ಅದು ಅರಣ್ಯದಲ್ಲಿ ಅವರಿಗೆ ಮಾರ್ಗದರ್ಶನವನ್ನೂ ಕೊಟ್ಟಿತು. (ವಿಮೋಚನಕಾಂಡ 13:​21, 22; 14:​19, 20, 24) ಯೆಹೋವನು ಸೀನಾಯಿ ಬೆಟ್ಟದಲ್ಲಿ ತನ್ನನ್ನು ತೋರ್ಪಡಿಸಿಕೊಂಡಾಗ “ಬೆಟ್ಟವೆಲ್ಲಾ ಹೊಗೆಯಿಂದ” ತುಂಬಿತು. (ವಿಮೋಚನಕಾಂಡ 19:18) ಆದುದರಿಂದ ಶುದ್ಧೀಕರಿಸಲ್ಪಟ್ಟ ದೇಶಭ್ರಷ್ಟರು ಹೆದರುವ ಆವಶ್ಯಕತೆಯಿಲ್ಲ. ಏಕೆಂದರೆ ಯೆಹೋವನೇ ಅವರ ಸಂರಕ್ಷಕನು. ಅವರು ತಮ್ಮ ಸ್ವಂತ ಮನೆಗಳಲ್ಲಿ ಸೇರಿಬರಲಿ, ಪವಿತ್ರ ಅಧಿವೇಶನಗಳಲ್ಲಿ ಕೂಡಿ ಬರಲಿ, ಆತನು ಅವರೊಂದಿಗಿರುವನು.

21, 22. (ಎ) ಒಂದು ಚಪ್ಪರ ಅಥವಾ ಗುಡಿಸಲನ್ನು ಅನೇಕ ವೇಳೆ ಯಾವ ಕಾರಣಕ್ಕಾಗಿ ಕಟ್ಟಲಾಗುತ್ತಿತ್ತು? (ಬಿ) ಶುದ್ಧೀಕರಿಸಲ್ಪಟ್ಟ ಉಳಿಕೆಯವರ ಮುಂದೆ ಯಾವ ಪ್ರತೀಕ್ಷೆಯನ್ನು ಇಡಲಾಗಿದೆ?

21 ಯೆಶಾಯನು ದೈವಿಕ ಸಂರಕ್ಷಣೆಯ ಈ ವರ್ಣನೆಯನ್ನು ದೈನಂದಿನ ಜೀವಿತದ ಮೇಲೆ ಕೇಂದ್ರೀಕರಿಸುತ್ತ ಮುಗಿಸುತ್ತಾನೆ. ಅವನು ಬರೆಯುವುದು: “ಹಗಲಿನ ಬಿಸಿಲಲ್ಲಿ ನೆರಳನ್ನೂ ಸಣ್ಣ ದೊಡ್ಡ ಮಳೆಗಳಲ್ಲಿ ಆಶ್ರಯವನ್ನೂ ಕೊಡುವ ಮಂಟಪ [“ಚಪ್ಪರ,” NW]ವಿರುವದು.” (ಯೆಶಾಯ 4:⁠6) ದ್ರಾಕ್ಷಾತೋಟ ಅಥವಾ ಹೊಲದಲ್ಲಿ ಬೇಸಗೆಯ ಸುಡುವ ಬಿಸಿಲಿನಿಂದ ಮತ್ತು ಮಳೆಗಾಲದ ಚಳಿಯಿಂದ ಮತ್ತು ಗಾಳಿಯಿಂದ ಆಶ್ರಯವನ್ನು ಪಡೆಯಲು ಒಂದು ಚಪ್ಪರ ಅಥವಾ ಗುಡಿಸಲನ್ನು ಅನೇಕವೇಳೆ ಕಟ್ಟಲಾಗುತ್ತಿತ್ತು.​—⁠ಹೋಲಿಸಿ ಯೋನ 4:⁠5.

22 ಸುಡುವ ಬಿಸಿಲಿನಂತಿರುವ ಹಿಂಸೆಯನ್ನು ಮತ್ತು ಭಾರಿ ಮಳೆಯಂತಿರುವ ವಿರೋಧವನ್ನು ಎದುರಿಸುವಾಗ, ಶುದ್ಧೀಕರಿಸಲ್ಪಟ್ಟ ಉಳಿಕೆಯವರು ಯೆಹೋವನೇ ಅವರ ಸಂರಕ್ಷಣೆ, ಭದ್ರತೆ ಮತ್ತು ಆಶ್ರಯದ ಮೂಲನೆಂದು ಕಂಡುಕೊಳ್ಳುವರು. (ಕೀರ್ತನೆ 91:​1, 2; 121:⁠5) ಹೀಗೆ, ಒಂದು ಸುಂದರವಾದ ಪ್ರತೀಕ್ಷೆಯು ಅವರ ಮುಂದೆ ಇಡಲ್ಪಡುತ್ತದೆ: ಅವರು ಬಾಬೆಲಿನ ಅಶುದ್ಧ ನಂಬಿಕೆಗಳನ್ನೂ ಆಚಾರಗಳನ್ನೂ ಬಿಟ್ಟುಬಿಟ್ಟು, ಯೆಹೋವನ ನ್ಯಾಯತೀರ್ಪಿನಿಂದಾಗುವ ಶುದ್ಧೀಕರಣಕ್ಕೆ ತಮ್ಮನ್ನು ಒಪ್ಪಿಸಿಕೊಟ್ಟು, ಪರಿಶುದ್ಧರಾಗಿ ಉಳಿಯಲು ಪ್ರಯಾಸಪಡುವುದಾದರೆ, ಅವರು ದೇವರ ಸಂರಕ್ಷಣೆಯ “ಚಪ್ಪರ”ದಲ್ಲಿದ್ದಾರೊ ಎಂಬಂತೆ ಸುಭದ್ರರಾಗಿರುವರು.

23. ಯೆಹೋವನು ಅಭಿಷಿಕ್ತ ಉಳಿಕೆಯವರನ್ನೂ ಅವರ ಸಂಗಡಿಗರನ್ನೂ ಏಕೆ ಆಶೀರ್ವದಿಸಿದ್ದಾನೆ?

23 ಮೊದಲಾಗಿ ಶುದ್ಧೀಕರಣ ಮತ್ತು ಆ ಬಳಿಕ ಆಶೀರ್ವಾದವು ಬರುತ್ತದೆಂಬುದನ್ನು ಗಮನಿಸಿ. ಇದು ನಮ್ಮ ದಿನಗಳಲ್ಲಿ ಸತ್ಯವಾಗಿದೆ. ಅಭಿಷಿಕ್ತ ಉಳಿಕೆಯವರು 1919ರಲ್ಲಿ ಶೋಧಿಸಲ್ಪಡಲಿಕ್ಕಾಗಿ ನಮ್ರತೆಯಿಂದ ತಮ್ಮನ್ನು ಒಪ್ಪಿಸಿಕೊಟ್ಟಾಗ ಯೆಹೋವನು ಅವರ ಅಶುದ್ಧತೆಯನ್ನು “ತೊಳೆದು” ಹಾಕಿದನು. ಅಂದಿನಿಂದ ಬೇರೆ ಕುರಿಗಳ ಒಂದು “ಮಹಾ ಸಮೂಹವು” ಸಹ ಯೆಹೋವನು ತಮ್ಮನ್ನು ಶುದ್ಧೀಕರಿಸುವಂತೆ ಬಿಟ್ಟಿದೆ. (ಪ್ರಕಟನೆ 7:⁠9) ಹೀಗೆ ಶುದ್ಧಮಾಡಲ್ಪಟ್ಟವರಾಗಿ, ಉಳಿಕೆಯವರು ಮತ್ತು ಅವರ ಸಂಗಾತಿಗಳು ಆಶೀರ್ವದಿಸಲ್ಪಟ್ಟಿದ್ದಾರೆ, ಅಂದರೆ ಯೆಹೋವನು ಅವರನ್ನು ತನ್ನ ಸಂರಕ್ಷಣಾತ್ಮಕ ಪರಾಮರಿಕೆಯೊಳಗೆ ತಂದಿದ್ದಾನೆ. ಹಿಂಸೆಯ ಸುಡುಬಿಸಿಲು ಮತ್ತು ವಿರೋಧದ ಭಾರೀ ಮಳೆಯು ಅವರಿಗೆ ತಟ್ಟದಂತೆ ಆತನು ಅದ್ಭುತಕರವಾಗಿ ತಡೆಯುವುದಿಲ್ಲ. ಆದರೆ ಅವರ ಮೇಲೆ, ‘ನೆರಳಿಗಾಗಿ ಚಪ್ಪರ ಮತ್ತು ಮಳೆಗಾಳಿಯಿಂದ ಮರೆಮಾಡುವ ಸ್ಥಳ’ವನ್ನು ಕಟ್ಟಿಯೊ ಎಂಬಂತೆ ಆತನು ಅವರನ್ನು ಕಾಪಾಡುವುದಂತೂ ನಿಶ್ಚಯ. ಆದರೆ ಅದು ಹೇಗೆ?

24. ಯೆಹೋವನು ತನ್ನ ಜನರನ್ನು ಒಂದು ಸಂಸ್ಥೆಯೋಪಾದಿ ಆಶೀರ್ವದಿಸಿದ್ದಾನೆಂದು ಹೇಗೆ ಪ್ರತ್ಯಕ್ಷವಾಗುತ್ತದೆ?

24 ಇದನ್ನು ಪರಿಗಣಿಸಿ: ಇತಿಹಾಸದಲ್ಲಿ ಅತಿ ಶಕ್ತಿಶಾಲಿ ಸರಕಾರಗಳಲ್ಲಿ ಕೆಲವು, ಯೆಹೋವನ ಸಾಕ್ಷಿಗಳ ಸಾರುವ ಕೆಲಸವನ್ನು ನಿಷೇಧಿಸಿವೆ ಅಥವಾ ಅವರನ್ನು ಪೂರ್ತಿಯಾಗಿ ನೆಲಸಮ ಮಾಡಲು ಪ್ರಯತ್ನಿಸಿವೆ. ಆದರೂ ಸಾಕ್ಷಿಗಳು ಸ್ಥಿರವಾಗಿ ನಿಂತು ಎಡೆಬಿಡದೆ ಸಾರಿದ್ದಾರೆ! ಈ ಚಿಕ್ಕದಾದ ಮತ್ತು ಆಶ್ರಯವಿಲ್ಲದಂತೆ ಕಾಣುವ ಜನರ ಗುಂಪಿನ ಚಟುವಟಿಕೆಗಳನ್ನು ಬಲಾಢ್ಯವಾದ ರಾಷ್ಟ್ರಗಳು ನಿಲ್ಲಿಸಲು ಅಶಕ್ತರಾಗಿರುವುದೇಕೆ? ಏಕೆಂದರೆ ಯೆಹೋವನು ತನ್ನ ಶುದ್ಧ ಸೇವಕರನ್ನು ಒಂದು ಸಂರಕ್ಷಣಾ “ಚಪ್ಪರ”ದಲ್ಲಿ ಇಟ್ಟಿದ್ದಾನೆ ಮತ್ತು ಯಾವ ಮನುಷ್ಯನೂ ಅದನ್ನು ಕೆಡವಲಾರನು!

25. ಯೆಹೋವನು ನಮ್ಮ ಸಂರಕ್ಷಕನಾಗಿರುವುದು ನಮ್ಮಲ್ಲಿ ಒಬ್ಬೊಬ್ಬರಿಗೆ ಯಾವ ಅರ್ಥದಲ್ಲಿದೆ?

25 ಹಾಗಾದರೆ ನಮ್ಮಲ್ಲಿ ಒಬ್ಬೊಬ್ಬರ ಕುರಿತು ಏನು ಹೇಳಬಹುದು? ಯೆಹೋವನು ನಮ್ಮ ಸಂರಕ್ಷಕನಾಗಿರುವ ಮಾತ್ರಕ್ಕೆ ಈ ಪ್ರಪಂಚದಲ್ಲಿ ನಮ್ಮ ಜೀವನವು ಸಮಸ್ಯೆಯಿಲ್ಲದ್ದಾಗಿರುತ್ತದೆ ಎಂಬುದು ಇದರರ್ಥವಲ್ಲ. ಅನೇಕ ನಂಬಿಗಸ್ತ ಕ್ರೈಸ್ತರು, ಬಡತನ, ನೈಸರ್ಗಿಕ ವಿಪತ್ತುಗಳು, ಯುದ್ಧ, ಕಾಯಿಲೆ ಮತ್ತು ಮರಣದಂತಹ ಕಠಿನ ಕಷ್ಟಗಳನ್ನು ಎದುರಿಸುತ್ತಾರೆ. ಇಂತಹ ವಿಪತ್ತುಗಳನ್ನು ಎದುರಿಸುವಾಗ ನಮ್ಮ ದೇವರು ನಮ್ಮೊಂದಿಗಿದ್ದಾನೆಂಬುದನ್ನು ನಾವೆಂದೂ ಮರೆಯದಿರೋಣ. ಆತನು ನಮ್ಮನ್ನು ಆತ್ಮಿಕವಾಗಿ ಕಾಪಾಡುತ್ತಾನೆ. ನಾವು ನಂಬಿಗಸ್ತಿಕೆಯಿಂದ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮಗೆ ಬೇಕಾಗಿರುವುದನ್ನು, ಮತ್ತು “ಬಲಾಧಿಕ್ಯ”ವನ್ನೂ ಆತನು ಒದಗಿಸುತ್ತಾನೆ. (2 ಕೊರಿಂಥ 4:⁠7) ಆತನ ಸನ್ನಿಧಾನದಲ್ಲಿ ನಾವಿರುವುದರಿಂದ ಭಯಪಡಬೇಕಾಗಿರುವುದಿಲ್ಲ. ನಾವು ಆತನ ದೃಷ್ಟಿಯಲ್ಲಿ ನಮ್ಮನ್ನು ಪರಿಶುದ್ಧವಾಗಿಟ್ಟುಕೊಳ್ಳಲು ನಮ್ಮಿಂದ ಸಾಧ್ಯವಿರುವಷ್ಟನ್ನು ಮಾಡುವಲ್ಲಿ, ಯಾವುದೂ “ನಮ್ಮನ್ನು . . . ದೇವರ ಪ್ರೀತಿಯಿಂದ” ಅಗಲಿಸಲಾರದು.​—⁠ರೋಮಾಪುರ 8:​38, 39.

[ಪಾದಟಿಪ್ಪಣಿಗಳು]

^ ಪ್ಯಾರ. 6 ‘ಯೆಹೋವನ ಚಿಗುರು’ ಎಂಬ ಪದಸರಣಿಯು, ಯೆರೂಸಲೇಮಿನ ಪುನಸ್ಸ್ಥಾಪನೆಯಾಗಿ ಸಮಯಾನಂತರ ತೋರಿಬರಲಿದ್ದ ಮೆಸ್ಸೀಯನಿಗೆ ಪರೋಕ್ಷವಾಗಿ ಸೂಚಿಸುತ್ತದೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಆರಮೇಯಿಕ್‌ ಟಾರ್ಗುಮ್‌ಗಳಲ್ಲಿ ಈ ಪದಸರಣಿಯ ಅರ್ಥವಿಸ್ತರಣೆಯನ್ನು “ಯೆಹೋವನ ಮೆಸ್ಸೀಯ [ಕ್ರಿಸ್ತ]” ಎಂದು ಮಾಡಲಾಗಿದೆ. ಆಸಕ್ತಿಕರವಾಗಿ, ಯೆರೆಮೀಯನು ಆ ಬಳಿಕ, ಮೆಸ್ಸೀಯನು ದಾವೀದನೆಂಬ ಮೂಲದಿಂದ ಚಿಗುರುವ “ಸದ್ಧರ್ಮಿಯಾದ ಮೊಳಕೆ” ಎಂದು ತಿಳಿಸುವಾಗ ಅದೇ ಹೀಬ್ರು ನಾಮಪದವನ್ನು (ಟ್ಸೇಮಾಕ್‌) ಉಪಯೋಗಿಸುತ್ತಾನೆ.​—⁠ಯೆರೆಮೀಯ 23:5; 33:⁠15.

^ ಪ್ಯಾರ. 9 ಆ ‘ತಪ್ಪಿಸಿಕೊಂಡವರಲ್ಲಿ’ ದೇಶಭ್ರಷ್ಟತೆಯ ಕಾಲದಲ್ಲಿ ಹುಟ್ಟಿದ ಕೆಲವರೂ ಇದ್ದರು. ಇವರನ್ನೂ “ತಪ್ಪಿಸಿಕೊಂಡವರು” ಎಂದು ನೆನಸಬಹುದು, ಏಕೆಂದರೆ ಅವರ ಪೂರ್ವಿಕರು ಆ ನಾಶನವನ್ನು ಪಾರಾಗದಿರುತ್ತಿದ್ದಲ್ಲಿ ಅವರು ಹುಟ್ಟಿಯೇ ಇರುತ್ತಿರಲಿಲ್ಲ.​—⁠ಎಜ್ರ 9:​13-15; ಹೋಲಿಸಿ ಇಬ್ರಿಯ 7:​9, 10.

^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.

[ಅಧ್ಯಯನ ಪ್ರಶ್ನೆಗಳು]

[ಪುಟ 63ರಲ್ಲಿರುವ ಚಿತ್ರ]

ಯೆಹೂದದ ಮೇಲೆ ದೈವಿಕ ತೀರ್ಪಿನ ಚಂಡಮಾರುತವು ಬರುತ್ತಿದೆ