ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜನು ಮತ್ತು ಅವನ ಅಧಿಪತಿಗಳು

ರಾಜನು ಮತ್ತು ಅವನ ಅಧಿಪತಿಗಳು

ಅಧ್ಯಾಯ ಇಪ್ಪತ್ತೈದು

ರಾಜನು ಮತ್ತು ಅವನ ಅಧಿಪತಿಗಳು

ಯೆಶಾಯ 32:​1-20

1, 2. ಮೃತ ಸಮುದ್ರದ ಬಳಿ ಸಿಕ್ಕ ಯೆಶಾಯನ ಸುರುಳಿಯ ಗ್ರಂಥಪಾಠದ ಬಗ್ಗೆ ಏನು ಹೇಳಸಾಧ್ಯವಿದೆ?

ಮೃತ ಸಮುದ್ರದ ಹತ್ತಿರವಿರುವ ಗುಹೆಗಳಲ್ಲಿ, 1940ರ ಅಂತ್ಯಭಾಗದಲ್ಲಿ ಸುರುಳಿಗಳ ಒಂದು ಅಸಾಧಾರಣ ಸಂಗ್ರಹವು ಸಿಕ್ಕಿತು. ಅವು ಮೃತ ಸಮುದ್ರದ ಸುರುಳಿಗಳೆಂದು ಪ್ರಸಿದ್ಧವಾದವು. ಇವುಗಳು ಸಾ.ಶ.ಪೂ. 200ರಿಂದ ಸಾ.ಶ. 70ರ ಮಧ್ಯೆ ಬರೆಯಲ್ಪಟ್ಟಿರಬಹುದೆಂದು ನೆನಸಲಾಯಿತು. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು, ಉತ್ತಮ ಗುಣಮಟ್ಟದ ತೊಗಲಿನ ಮೇಲೆ ಹೀಬ್ರು ಭಾಷೆಯಲ್ಲಿ ಬರೆಯಲ್ಪಟ್ಟ ಯೆಶಾಯನ ಸುರುಳಿಯೇ ಆಗಿದೆ. ಈ ಸುರುಳಿಯು ಬಹುಮಟ್ಟಿಗೆ ಸಂಪೂರ್ಣವಾಗಿದೆ ಮಾತ್ರವಲ್ಲ, ಸುಮಾರು 1,000 ವರ್ಷಗಳ ತರುವಾಯ ಬರೆಯಲ್ಪಟ್ಟ ಮ್ಯಾಸರೆಟಿಕ್‌ ಗ್ರಂಥಪಾಠದ ಹಸ್ತಪ್ರತಿಗಳಿಗೆ ಹೋಲಿಸುವಾಗ ಅತ್ಯಲ್ಪ ವ್ಯತ್ಯಾಸಗಳನ್ನಷ್ಟೇ ಹೊಂದಿದೆ. ಹೀಗೆ, ಬೈಬಲ್‌ ಗ್ರಂಥಪಾಠವು ಎಷ್ಟು ನಿಖರವಾಗಿ ರವಾನಿಸಲ್ಪಟ್ಟಿತು ಎಂಬುದನ್ನು ಈ ಸುರುಳಿಯು ತೋರಿಸುತ್ತದೆ.

2 ಮೃತ ಸಮುದ್ರದ ಬಳಿ ಸಿಕ್ಕ ಯೆಶಾಯನ ಸುರುಳಿಗೆ ಮತ್ತೊಂದು ವಿಶೇಷತೆಯೂ ಇದೆ. ಅದೇನೆಂದರೆ, ಇಂದು ಯೆಶಾಯ 32ನೆಯ ಅಧ್ಯಾಯವಾಗಿ ವಿಂಗಡಿಸಿರುವ ಭಾಗದ ಅಂಚಿನಲ್ಲಿ, ಒಬ್ಬ ಶಾಸ್ತ್ರಿಯು “X” ಗುರುತನ್ನು ಹಾಕಿಟ್ಟಿದ್ದಾನೆ. ಅಂತಹ ಗುರುತನ್ನು ಏಕೆ ಮಾಡಲಾಯಿತೆಂಬುದು ನಮಗೆ ಗೊತ್ತಿಲ್ಲ, ಆದರೂ ಪವಿತ್ರ ಬೈಬಲಿನ ಈ ಭಾಗದಲ್ಲಿ ವಿಶೇಷವಾದದ್ದು ಏನೋ ಇದೆಯೆಂದು ಮಾತ್ರ ನಮಗೆ ಗೊತ್ತಿದೆ.

ನೀತಿನ್ಯಾಯಗಳಿಗೋಸ್ಕರ ಆಳುವುದು

3. ಯಾವ ಆಡಳಿತದ ಬಗ್ಗೆ ಯೆಶಾಯ ಮತ್ತು ಪ್ರಕಟನೆಯ ಪುಸ್ತಕಗಳಲ್ಲಿ ಪ್ರವಾದಿಸಲಾಗಿದೆ?

3 ಇಂದು ನಮ್ಮ ದಿನದಲ್ಲಿ ವಿಶೇಷವಾದ ನೆರವೇರಿಕೆಯನ್ನು ಕಾಣುತ್ತಿರುವ ಒಂದು ರೋಮಾಂಚಕ ಪ್ರವಾದನೆಯೊಂದಿಗೆ ಯೆಶಾಯ 32ನೆಯ ಅಧ್ಯಾಯವು ಆರಂಭವಾಗುತ್ತದೆ: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.” (ಯೆಶಾಯ 32:1) ಹೌದು, “ಇಗೋ” ಎಂಬ ಉದ್ಘೋಷವು, ಬೈಬಲಿನ ಕೊನೆಯ ಪ್ರವಾದನಾ ಪುಸ್ತಕದಲ್ಲಿ ಕಂಡುಬರುವ ತದ್ರೀತಿಯ ಉದ್ಘೋಷವನ್ನು ನಮ್ಮ ನೆನಪಿಗೆ ತರುತ್ತದೆ: “ಆಗ ಸಿಂಹಾಸನದ ಮೇಲೆ ಕೂತಿದ್ದವನು​—⁠ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು.” (ಪ್ರಕಟನೆ 21:⁠5, ಓರೆ ಅಕ್ಷರಗಳು ನಮ್ಮವು.) ಸುಮಾರು 900 ವರ್ಷಗಳ ಅಂತರದಲ್ಲಿ ಬರೆಯಲ್ಪಟ್ಟ ಯೆಶಾಯ ಮತ್ತು ಪ್ರಕಟನೆಯ ಬೈಬಲ್‌ ಪುಸ್ತಕಗಳು, “ನೂತನಾಕಾಶಮಂಡಲದ” ಹೃದಯೋಲ್ಲಾಸಕರ ವರ್ಣನೆಯನ್ನು ನೀಡುತ್ತವೆ. ಈ ಹೊಸ ಆಡಳಿತ ವರ್ಗದಲ್ಲಿ, 1914ರಲ್ಲಿ ಪರಲೋಕದಲ್ಲಿ ಸಿಂಹಾಸನಾರೂಢನಾದ ರಾಜ ಯೇಸು ಕ್ರಿಸ್ತನು ಮತ್ತು “ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ” 1,44,000 ಜೊತೆಅರಸರೂ ಒಳಗೂಡಿದ್ದಾರೆ. ನೂತನಾಕಾಶಮಂಡಲದ ಜೊತೆಗೆ, “ನೂತನಭೂಮಂಡಲದ” ಅಂದರೆ, ಒಂದು ಭೌಗೋಲಿಕ ಹಾಗೂ ಐಕ್ಯಗೊಂಡ ಮಾನವ ಸಮಾಜದ ವಿವರಣೆಯೂ ಆ ಪುಸ್ತಕಗಳಲ್ಲಿವೆ. * (ಪ್ರಕಟನೆ 14:​1-4; 21:​1-4; ಯೆಶಾಯ 65:​17-25) ಈ ಎಲ್ಲಾ ಏರ್ಪಾಡುಗಳು, ಕ್ರಿಸ್ತನ ಪ್ರಾಯಶ್ಚಿತ್ತ ಬಲಿಯ ಮೂಲಕವೇ ಸಾಧ್ಯವಾಗಿವೆ.

4. ನೂತನಭೂಮಂಡಲದ ಯಾವ ಮುಖ್ಯಭಾಗವು ಈಗ ಅಸ್ತಿತ್ವದಲ್ಲಿದೆ?

4 ಈ 1,44,000 ಜೊತೆಅರಸರು ಅಂತಿಮವಾಗಿ ಮುದ್ರೆ ಒತ್ತಿಸಿಕೊಂಡದ್ದನ್ನು ದರ್ಶನದಲ್ಲಿ ನೋಡಿದ ಬಳಿಕ, ಅಪೊಸ್ತಲ ಯೋಹಾನನು ವರದಿಸುವುದು: “ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು.” ಈ ನೂತನಭೂಮಂಡಲದ ಮುಖ್ಯಭಾಗವೇ ಮಹಾ ಸಮೂಹವಾಗಿದೆ. ಇದರಲ್ಲಿರುವ ಲಕ್ಷಾಂತರ ಜನರು, ವೃದ್ಧರೂ ಅಲ್ಪಸಂಖ್ಯಾತರೂ ಆಗಿರುವ 1,44,000 ಮಂದಿಯ ಉಳಿಕೆಯವರೊಂದಿಗೆ ಜೊತೆಗೂಡಿದ್ದಾರೆ. ಈ ಮಹಾ ಸಮೂಹದವರು, ವೇಗವಾಗಿ ಸಮೀಪಿಸುತ್ತಿರುವ ಮಹಾ ಸಂಕಟದಿಂದ ಪಾರಾಗಿ, ಭೂಪರದೈಸನ್ನು ಸೇರುವರು. ಅಲ್ಲಿ, ಪುನರುತ್ಥಿತ ನಂಬಿಗಸ್ತರು ಮತ್ತು ತಮ್ಮ ನಂಬಿಕೆಯನ್ನು ಪ್ರದರ್ಶಿಸುವ ಅವಕಾಶವುಳ್ಳ ಇತರ ಲಕ್ಷಾಂತರ ಜನರು ಇವರೊಂದಿಗೆ ಜೊತೆಗೂಡುವರು. ನಂಬಿಕೆಯನ್ನು ಪ್ರದರ್ಶಿಸುವವರೆಲ್ಲರೂ ನಿತ್ಯ ಜೀವದ ಆಶೀರ್ವಾದವನ್ನು ಪಡೆದುಕೊಳ್ಳುವರು.​—⁠ಪ್ರಕಟನೆ 7:​4, 9-17.

5-7. ಮುಂತಿಳಿಸಲ್ಪಟ್ಟ “ಅಧಿಪತಿಗಳು” ದೇವರ ಮಂದೆಯಲ್ಲಿ ಯಾವ ಪಾತ್ರವನ್ನು ನಿರ್ವಹಿಸುತ್ತಾರೆ?

5 ಆದರೂ, ಈ ದ್ವೇಷಭರಿತ ಲೋಕವು ಇರುವ ತನಕ, ಮಹಾ ಸಮೂಹದ ಸದಸ್ಯರಿಗೆ ಸಂರಕ್ಷಣೆಯ ಅಗತ್ಯವಿದೆ. ಇದನ್ನು “ನ್ಯಾಯದಿಂದ ದೊರೆತನ ಮಾಡುವ” “ಅಧಿಪತಿಗಳು” ದೊಡ್ಡ ಪ್ರಮಾಣದಲ್ಲಿ ಒದಗಿಸುತ್ತಾರೆ. ಎಂತಹ ಮಹಾನ್‌ ಏರ್ಪಾಡು! ಯೆಶಾಯನ ಪ್ರವಾದನೆಯ ಮುಂದಿನ ಮಾತುಗಳು ಈ ‘ಅಧಿಪತಿಗಳನ್ನು’ ಬಹಳ ಸೊಗಸಾಗಿ ವರ್ಣಿಸುತ್ತವೆ: “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.”​—ಯೆಶಾಯ 32:⁠2.

6 ಲೋಕದ ಎಲ್ಲೆಡೆಯೂ ಹರಡಿಕೊಂಡಿರುವ ಈ ಸಂಕಟದ ಸಮಯದಲ್ಲಿ, “ಅಧಿಪತಿಗಳ” ಅಂದರೆ ಹಿರಿಯರ ಅಗತ್ಯವಿದೆ. ಇವರು ‘ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿದ್ದು,’ ಯೆಹೋವನ ಕುರಿಗಳನ್ನು ಪರಾಮರಿಸುತ್ತಾ ಮತ್ತು ಯೆಹೋವನ ನೀತಿಯ ತತ್ವಗಳಿಗನುಸಾರ ನ್ಯಾಯವನ್ನು ನಿರ್ವಹಿಸುತ್ತಾ ಇರುವರು. (ಅ. ಕೃತ್ಯಗಳು 20:28) ಇಂತಹ “ಅಧಿಪತಿಗಳು” 1 ತಿಮೊಥೆಯ 3:​2-7 ಮತ್ತು ತೀತ 1:​6-9ರಲ್ಲಿ ತಿಳಿಸಲ್ಪಟ್ಟ ಆವಶ್ಯಕತೆಗಳನ್ನು ಪೂರೈಸಬೇಕು.

7 ಸಂಕಟಕರವಾದ ‘ಯುಗದ ಸಮಾಪ್ತಿಯನ್ನು’ ವರ್ಣಿಸುವ ತನ್ನ ಪ್ರವಾದನೆಯಲ್ಲಿ ಯೇಸು ಹೇಳಿದ್ದು: ‘ಕಳವಳಪಡಬೇಡಿರಿ.’ (ಮತ್ತಾಯ 24:​3-8) ಇಂದಿನ ಭೀಭತ್ಸ ಲೋಕ ಪರಿಸ್ಥಿತಿಗಳಿಂದ ಯೇಸುವಿನ ಹಿಂಬಾಲಕರು ಕಳವಳಪಡುವುದಿಲ್ಲ ಏಕೆ? ಒಂದು ಕಾರಣವೇನೆಂದರೆ, ಅಭಿಷಿಕ್ತರು ಇಲ್ಲವೆ ‘ಬೇರೆ ಕುರಿಗಳ’ ವರ್ಗಕ್ಕೆ ಸೇರಿರುವ “ಅಧಿಪತಿಗಳು” ನಿಷ್ಠೆಯಿಂದ ಹಿಂಡನ್ನು ರಕ್ಷಿಸುತ್ತಿದ್ದಾರೆ. (ಯೋಹಾನ 10:16) ಜಾತೀಯ ಯುದ್ಧಗಳು ಮತ್ತು ಜನಹತ್ಯೆಗಳಂತಹ ಭೀಕರವಾದ ಪರಿಸ್ಥಿತಿಗಳಲ್ಲಿಯೂ ಇವರು ಧೈರ್ಯದಿಂದ ತಮ್ಮ ಸಹೋದರ ಸಹೋದರಿಯರನ್ನು ಪರಾಮರಿಸುತ್ತಾರೆ. ಆತ್ಮಿಕವಾಗಿ ಬಳಲಿಹೋಗಿರುವ ಈ ಲೋಕದಲ್ಲಿ, ದೇವರ ವಾಕ್ಯವಾದ ಬೈಬಲಿನ ಉತ್ತೇಜನದಾಯಕ ಸತ್ಯಗಳಿಂದ ಇವರು ಹತಾಶರಾದ ಜನರಿಗೆ ಚೈತನ್ಯವನ್ನು ಒದಗಿಸಲು ಹೆಣಗಾಡುತ್ತಾರೆ.

8. ಬೇರೆ ಕುರಿಗಳಲ್ಲಿ ಒಬ್ಬರಾಗಿರುವ ‘ಅಧಿಪತಿಗಳನ್ನು’ ಯೆಹೋವನು ತರಬೇತು ಮಾಡಿ ಉಪಯೋಗಿಸುತ್ತಿರುವುದು ಹೇಗೆ?

8 ಕಳೆದ 50 ವರ್ಷಗಳಲ್ಲಿ ಈ “ಅಧಿಪತಿಗಳು” ಯಾರೆಂಬುದು ತೀರ ಸ್ಪಷ್ಟವಾಗಿ ತಿಳಿದುಬಂದಿದೆ. ಬೇರೆ ಕುರಿಗಳಲ್ಲಿ ಒಬ್ಬರಾಗಿರುವ “ಅಧಿಪತಿಗಳು” ಈಗ ವಿಕಾಸಗೊಳ್ಳುತ್ತಿರುವ “ಪ್ರಭು” ವರ್ಗದವರೋಪಾದಿ ತರಬೇತಿ ಪಡೆಯುತ್ತಿದ್ದಾರೆ. ಹೀಗೆ, ಮಹಾ ಸಂಕಟದ ಬಳಿಕ, ಇವರೊಳಗೆ ಅರ್ಹರಾದವರು “ನೂತನಭೂಮಂಡಲದ” ಆಡಳಿತ ಸಂಬಂಧವಾದ ಸ್ಥಾನಗಳಲ್ಲಿ ಸೇವೆಸಲ್ಲಿಸಲು ಸಿದ್ಧರಾಗಿರುವರು. (ಯೆಹೆಜ್ಕೇಲ 44:​2, 3; 2 ಪೇತ್ರ 3:13) ರಾಜ್ಯ ಸೇವೆಯಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಾ ಅವರು ಆತ್ಮಿಕ ಮಾರ್ಗದರ್ಶನ ಹಾಗೂ ಚೈತನ್ಯವನ್ನು ಒದಗಿಸುವ ಮೂಲಕ, “ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿ” ಇದ್ದಾರೆ ಮತ್ತು ಆರಾಧನೆಯ ವಿಷಯದಲ್ಲಿ ಹಿಂಡಿಗೆ ಉಪಶಮನವನ್ನು ನೀಡುತ್ತಿದ್ದಾರೆ. *

9. ಇಂದಿನ ಯಾವ ಪರಿಸ್ಥಿತಿಗಳು ‘ಅಧಿಪತಿಗಳ’ ಅಗತ್ಯವನ್ನು ಎತ್ತಿತೋರಿಸುತ್ತವೆ?

9 ಸೈತಾನನ ಈ ದುಷ್ಟ ಲೋಕದ ಅಪಾಯಕರ ಕಡೇ ದಿವಸಗಳಲ್ಲಿ ಜೀವಿಸುವ ಸಮರ್ಪಿತ ಕ್ರೈಸ್ತರಿಗೆ ಇಂತಹ ಸಂರಕ್ಷಣೆಯ ಅಗತ್ಯ ಬಹಳವಾಗಿದೆ. (2 ತಿಮೊಥೆಯ 3:​1-5, 13) ಸುಳ್ಳು ಸಿದ್ಧಾಂತ ಹಾಗೂ ಅಪಪ್ರಚಾರದ ಗಾಳಿಯು ಬಿರುಸಾಗಿ ಬೀಸುತ್ತಿದೆ. ರಾಷ್ಟ್ರಗಳ ಮಧ್ಯೆ ಹಾಗೂ ಆಂತರಿಕವಾಗಿ ಸ್ಫೋಟಿಸುವ ಯುದ್ಧಗಳು ಮತ್ತು ಯೆಹೋವ ದೇವರ ನಂಬಿಗಸ್ತ ಆರಾಧಕರ ವಿರುದ್ಧ ತಲೆದೋರುವ ನೇರವಾದ ಆಕ್ರಮಣಗಳು, ಚಂಡಮಾರುತದ ರೂಪದಲ್ಲಿ ಎಲ್ಲೆಲ್ಲಿಯೂ ಕೋಲಾಹಲವನ್ನು ಎಬ್ಬಿಸುತ್ತಿವೆ. ಆತ್ಮಿಕ ಕ್ಷಾಮದಿಂದ ಬತ್ತಿಹೋಗಿರುವ ಈ ಲೋಕದಲ್ಲಿ, ತಮ್ಮ ಆತ್ಮಿಕ ಬಾಯಾರಿಕೆಯನ್ನು ತಣಿಸಿಕೊಳ್ಳುವುದಕ್ಕೋಸ್ಕರ, ಸತ್ಯದ ಶುದ್ಧವಾದ ಹಾಗೂ ಬೆರಕೆಯಿಲ್ಲದ ನೀರಿನ ತೀವ್ರ ಅಗತ್ಯ ಕ್ರೈಸ್ತರಿಗಿದೆ. ಯೆಹೋವನು ನೇಮಿಸಿರುವ ಅರಸನು, ಅವನ ಅಭಿಷಿಕ್ತ ಸಹೋದರರು ಮತ್ತು ಬೇರೆ ಕುರಿಗಳಿಗೆ ಸೇರಿದವರಾಗಿರುವ “ಅಧಿಪತಿಗಳ” ಬೆಂಬಲದಿಂದ, ಇಂತಹ ಜರೂರಿಯ ಸಮಯದಲ್ಲಿ ಬೇಕಾದ ಉತ್ತೇಜನ ಹಾಗೂ ಮಾರ್ಗದರ್ಶನವನ್ನು ಹತಾಶರಿಗೆ ಮತ್ತು ನಿರುತ್ಸಾಹಗೊಂಡವರಿಗೆ ನೀಡುವನೆಂದು ಯೆಹೋವನು ವಾಗ್ದಾನಿಸಿದ್ದಾನೆ. ಹೀಗೆ, ನೀತಿನ್ಯಾಯವಾದವುಗಳು ಮಾತ್ರ ಉಳಿಯುವವೆಂಬುದನ್ನು ಯೆಹೋವನು ಖಾತ್ರಿಪಡಿಸಿಕೊಳ್ಳುವನು.

ಕಣ್ಣು, ಕಿವಿ ಹಾಗೂ ಮನಸ್ಸಿನಿಂದ ಗಮನಕೊಡುವುದು

10. ತನ್ನ ಜನರು ಆತ್ಮಿಕ ವಿಷಯಗಳನ್ನು ‘ನೋಡುವಂತೆ’ ಮತ್ತು ‘ಕೇಳಿಸಿಕೊಳ್ಳುವಂತೆ’ ಯೆಹೋವನು ಯಾವ ಏರ್ಪಾಡುಗಳನ್ನು ಮಾಡಿದ್ದಾನೆ?

10 ಯೆಹೋವನ ದೇವಪ್ರಭುತ್ವ ಏರ್ಪಾಡಿಗೆ ಮಹಾ ಸಮೂಹವು ಹೇಗೆ ಪ್ರತಿಕ್ರಿಯಿಸಿದೆ? ಪ್ರವಾದನೆಯು ಮುಂದುವರಿಸಿ ಹೇಳುವುದು: “ಆಗ ನೋಡುವವರ ಕಣ್ಣು ಮೊಬ್ಬಾಗದು, ಕೇಳುವವರ ಕಿವಿ ಮಂದವಾಗದು.” (ಯೆಶಾಯ 32:3) ಅನೇಕ ವರ್ಷಗಳಿಂದ ಯೆಹೋವನು ತನ್ನ ಅಮೂಲ್ಯ ಸೇವಕರಿಗೆ ಬೇಕಾದ ಉಪದೇಶವನ್ನು ನೀಡಿ, ಅವರು ಪ್ರೌಢತೆಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತಿದ್ದಾನೆ. ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ನಡೆಯುವ ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಇತರ ಕೂಟಗಳು; ಜಿಲ್ಲಾ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು; ಅಲ್ಲದೆ ಹಿಂಡನ್ನು ಪ್ರೀತಿಯಿಂದ ಪರಾಮರಿಸುವ ವಿಷಯದಲ್ಲಿ ‘ಅಧಿಪತಿಗಳಿಗೆ’ ಸಿಗುವ ವಿಶೇಷ ತರಬೇತಿಯು, ಲಕ್ಷಾಂತರ ಮಂದಿಯನ್ನೊಳಗೊಂಡ ಒಂದು ಐಕ್ಯ ಹಾಗೂ ಭೌಗೋಲಿಕ ಸಹೋದರತ್ವವನ್ನು ಸ್ಥಾಪಿಸುವುದರಲ್ಲಿ ನೆರವುನೀಡಿದೆ. ಈ ಕುರುಬರು ಭೂಮಿಯ ಯಾವ ಮೂಲೆಯಲ್ಲೇ ಇರಲಿ, ಸತ್ಯದ ತಿಳುವಳಿಕೆಯಲ್ಲಿ ಮಾಡಲ್ಪಡುವ ಬದಲಾವಣೆಗಳಿಗೆ ಅವರ ಕಿವಿಗಳು ಸದಾ ತೆರೆದಿರುತ್ತವೆ. ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗಳನ್ನು ಪಡೆದುಕೊಂಡಿರುವ ಇವರು, ಕಿವಿಗೊಡಲು ಮತ್ತು ವಿಧೇಯತೆಯನ್ನು ತೋರಿಸಲು ಸದಾ ಸಿದ್ಧರಾಗಿರುತ್ತಾರೆ.​—⁠ಕೀರ್ತನೆ 25:⁠10.

11. ದೇವಜನರು ಅನಿಶ್ಚಿತತೆಯಿಂದ ತೊದಲದೆ, ಆತ್ಮಭರವಸೆಯಿಂದ ಮಾತಾಡುತ್ತಿರುವುದು ಏಕೆ?

11 ತರುವಾಯ, ಪ್ರವಾದನೆಯು ಎಚ್ಚರಿಸುವುದು: “ಆತುರಗಾರರ ಮನವು ಅರುಹನ್ನರಿಯುವದು, ತೊದಲುಮಾತಿನವರ ನಾಲಿಗೆಯು ಸ್ವಚ್ಛವಾಗಿಯೂ ಶೀಘ್ರವಾಗಿಯೂ ನುಡಿಯುವದು.” (ಯೆಶಾಯ 32:4) ಸರಿತಪ್ಪುಗಳ ಬಗ್ಗೆ ತೀರ್ಮಾನಗಳನ್ನು ಮಾಡುವುದರಲ್ಲಿ ಯಾರೊಬ್ಬರೂ ಅವಸರಪಡಬಾರದು. ಬೈಬಲ್‌ ಹೇಳುವುದು: “ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.” (ಜ್ಞಾನೋಕ್ತಿ 29:20; ಪ್ರಸಂಗಿ 5:⁠2) 1919ರ ಮೊದಲು, ಯೆಹೋವನ ಜನರು ಕೂಡ ಕೆಲವೊಂದು ಬಾಬೆಲ್‌ ಸಂಬಂಧಿತ ವಿಚಾರಗಳನ್ನೇ ಅನುಸರಿಸುತ್ತಿದ್ದರು. ಆದರೆ ಆ ವರ್ಷದಿಂದ ಆರಂಭಿಸಿ, ಯೆಹೋವನು ಅವರಿಗೆ ತನ್ನ ಉದ್ದೇಶಗಳ ಸ್ಪಷ್ಟವಾದ ತಿಳುವಳಿಕೆಯನ್ನು ನೀಡಿದ್ದಾನೆ. ಆತನು ಪ್ರಕಟಪಡಿಸಿರುವ ಸತ್ಯಗಳು, ಅವಸರದಿಂದಲ್ಲ ಬದಲಿಗೆ ಸರಿಯಾಗಿ ಯೋಚನೆ ಮಾಡಿ ತಿಳಿಸಲ್ಪಟ್ಟ ಸಂಗತಿಗಳಾಗಿವೆ ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. ಈ ಕಾರಣ ಅವರು ಮಾತಾಡುವಾಗ ಅನಿಶ್ಚಿತತೆಯೊಂದಿಗೆ ತೊದಲದೆ, ನಿಶ್ಚಿತ ನಂಬಿಕೆಯಿಂದ ಮಾತಾಡುತ್ತಾರೆ.

“ದುರ್ಮತಿಯು”

12. ಇಂದು ‘ದುರ್ಮತಿಗಳಾಗಿ’ ಇರುವವರು ಯಾರು, ಮತ್ತು ಯಾವ ವಿಧದಲ್ಲಿ ಅವರಲ್ಲಿ ಉದಾರತನವು ಇಲ್ಲವಾಗಿದೆ?

12 ಮುಂದೆ, ಯೆಶಾಯನ ಪ್ರವಾದನೆಯು ಒಂದು ಭಿನ್ನತೆಯನ್ನು ಎತ್ತಿತೋರಿಸುತ್ತದೆ: “ಇನ್ನು ಮೇಲೆ ನೀಚನು ಘನವಂತನೆನಿಸಿಕೊಳ್ಳನು [“ದುರ್ಮತಿಯು ಉದಾರಿಯೆನಿಸಿಕೊಳ್ಳನು,” NW]. ಕಳ್ಳನು ಮಹನೀಯನೆನಿಸನು. ನೀಚನು ನೀಚವಾಗಿ ಮಾತಾಡುವನು.” (ಯೆಶಾಯ 32:5, 6ಎ) ಈ “ದುರ್ಮತಿಯು” ಯಾರಾಗಿದ್ದಾನೆ? ಇದನ್ನು ಒತ್ತಿಹೇಳುವ ಉದ್ದೇಶದಿಂದ, ರಾಜ ದಾವೀದನು ಆ ಪ್ರಶ್ನೆಗೆ ಎರಡು ಬಾರಿ ಉತ್ತರನೀಡುತ್ತಾನೆ: “ದುರ್ಮತಿಗಳು​—⁠ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; ಅವರು ಕೆಟ್ಟು ಹೋದವರು; ಹೇಯಕೃತ್ಯಗಳನ್ನು ನಡಿಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.” (ಕೀರ್ತನೆ 14:1; 53:1) ನಾಸ್ತಿಕರು ಯೆಹೋವನಿಲ್ಲವೆಂದು ಹೇಳುತ್ತಾರೆ ನಿಜ. ಅಂತೆಯೇ, ದೇವರೇ ಇಲ್ಲವೆಂಬಂತೆ ನಡೆದುಕೊಳ್ಳುವ “ಬುದ್ಧಿವಂತರು” ಮತ್ತು ಇತರರು, ತಾವು ಯಾರಿಗೂ ಲೆಕ್ಕವೊಪ್ಪಿಸಬೇಕಾಗಿಲ್ಲ ಎಂದೇ ನೆನಸಿಕೊಂಡಿದ್ದಾರೆ. ಇಂತಹವರಲ್ಲಿ ಸತ್ಯವು ಮನೆಮಾಡಿರುವುದಿಲ್ಲ. ಅವರನ್ನು ಉದಾರವಂತರೆಂದು ಹೇಳಸಾಧ್ಯವಿಲ್ಲ. ಅವರಲ್ಲಿ ಪ್ರೀತಿಯ ಸುವಾರ್ತೆಯಿಲ್ಲ. ಯಥಾರ್ಥ ಕ್ರೈಸ್ತರಿಗೆ ತೀರ ಭಿನ್ನವಾಗಿ, ಇವರು ಆತ್ಮಿಕ ಬಡತನದಲ್ಲಿ ಸಂಕಟಪಡುತ್ತಿರುವವರಿಗೆ ಸಹಾಯವನ್ನು ತುಂಬ ನಿಧಾನವಾಗಿ ನೀಡುತ್ತಾರೆ ಇಲ್ಲವೆ ನೀಡುವುದೇ ಇಲ್ಲ.

13, 14. (ಎ) ಆಧುನಿಕ ದಿನದ ಧರ್ಮಭ್ರಷ್ಟರು ಕೆಟ್ಟದ್ದನ್ನು ಮಾಡುವುದು ಹೇಗೆ? (ಬಿ) ಧರ್ಮಭ್ರಷ್ಟರು ಹಸಿದವರಿಗೆ ಮತ್ತು ಬಾಯಾರಿದವರಿಗೆ ಏನನ್ನು ಕೊಡದಿರಲು ಪ್ರಯತ್ನಿಸುತ್ತಾರೆ, ಆದರೆ ಇದರ ಅಂತಿಮ ಪರಿಣಾಮವು ಏನಾಗಿರುವುದು?

13 ಇಂತಹ ಅನೇಕ ದುರ್ಮತಿಗಳು, ದೇವರ ಸತ್ಯದ ಪರವಾಗಿ ಮಾತಾಡುವವರನ್ನು ದ್ವೇಷಿಸುತ್ತಾರೆ. “ಅವನ ಹೃದಯವು ಕೇಡನ್ನು ಕಲ್ಪಿಸಿ ಅಲ್ಲದ್ದನ್ನು ನಡೆಯಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ”ತು. (ಯೆಶಾಯ 32:6ಬಿ) ಆಧುನಿಕ ದಿನದ ಧರ್ಮಭ್ರಷ್ಟರ ಬಗ್ಗೆ ಇದೆಷ್ಟು ಸತ್ಯವಾಗಿದೆ! ಯೂರೋಪ್‌ ಮತ್ತು ಏಷಿಯದ ಅನೇಕ ರಾಷ್ಟ್ರಗಳಲ್ಲಿ, ಈ ಧರ್ಮಭ್ರಷ್ಟರು ಸತ್ಯದ ವೈರಿಗಳೊಂದಿಗೆ ಸೇರಿಕೊಂಡು ಯೆಹೋವನ ಸಾಕ್ಷಿಗಳ ಬಗ್ಗೆ ಅಪ್ಪಟ ಸುಳ್ಳುಗಳನ್ನು ಅಧಿಕಾರಿಗಳಿಗೆ ಹೇಳಿ, ಅವರ ಕಾರ್ಯವನ್ನು ನಿಷೇಧಿಸಲು ಇಲ್ಲವೆ ನಿರ್ಬಂಧಿಸಲು ಪ್ರಯತ್ನಿಸಿದ್ದಾರೆ. ಇವರು ಯೇಸು ಪ್ರವಾದಿಸಿದ ‘ಕೆಟ್ಟ ಆಳಿನ’ ಮನೋಭಾವವನ್ನೇ ತೋರ್ಪಡಿಸಿದ್ದಾರೆ: “ಆ ಕೆಟ್ಟ ಆಳು​—⁠ನನ್ನ ಯಜಮಾನನು ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ತನ್ನ ಜೊತೆ ಆಳುಗಳನ್ನು ಹೊಡೆಯುವದಕ್ಕೆ ತೊಡಗಿ ಕುಡಿಕರ ಸಂಗಡ ತಿನ್ನುತ್ತಾ ಕುಡಿಯುತ್ತಾ ಇರುವದಾದರೆ, ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ಹೊಡಿಸಿ ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.”​—⁠ಮತ್ತಾಯ 24:48-51.

14 ಈ ಮಧ್ಯೆ, ಧರ್ಮಭ್ರಷ್ಟರು “ಹಸಿವೆಗೊಂಡವನ ಆಶೆಯನ್ನು ಬರಿದುಮಾಡಿ ಬಾಯಾರಿದವನ ಪಾನವನ್ನು ತಪ್ಪಿಸು”ವರಷ್ಟೆ. (ಯೆಶಾಯ 32:6ಸಿ) ಸತ್ಯದ ವೈರಿಗಳು, ಸತ್ಯಕ್ಕಾಗಿ ಹಸಿದಿರುವವರಿಂದ ಆತ್ಮಿಕ ಆಹಾರವನ್ನು ಮತ್ತು ಬಾಯಾರಿದವರಿಂದ ರಾಜ್ಯ ಸಂದೇಶದ ಚೈತನ್ಯದಾಯಕ ನೀರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಆದರೆ ಅಂತಿಮ ಪರಿಣಾಮವು, ಯೆಹೋವನು ತನ್ನ ಮತ್ತೊಬ್ಬ ಪ್ರವಾದಿಯ ಮೂಲಕ ತಿಳಿಯಪಡಿಸಿದಂತೆಯೇ ಇರುವುದು: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.”​—⁠ಯೆರೆಮೀಯ 1:19; ಯೆಶಾಯ 54:⁠17.

15. ಇಂದು ‘ನೀತಿನಿಷ್ಠೆಯಿಲ್ಲದವರನ್ನು’ ಪ್ರತಿನಿಧಿಸುವವರು ಯಾರು, ಯಾವ ‘ಸುಳ್ಳುಮಾತುಗಳನ್ನು’ ಅವರು ಪ್ರವರ್ಧಿಸಿದ್ದಾರೆ, ಮತ್ತು ಇದರ ಪರಿಣಾಮವೇನು?

15 ಇಪ್ಪತ್ತನೆಯ ಶತಮಾನದ ಮಧ್ಯಭಾಗದಿಂದ, ಅನೈತಿಕತೆಯು ಕ್ರೈಸ್ತಪ್ರಪಂಚದ ದೇಶಗಳಲ್ಲಿ ಹುಯಿಲೆಬ್ಬಿಸಿದೆ. ಏಕೆ? ಒಂದು ಕಾರಣವನ್ನು ಪ್ರವಾದನೆಯು ಮುಂತಿಳಿಸಿತು: “ಕಳ್ಳನ [“ನೀತಿನಿಷ್ಠೆಯಿಲ್ಲದವನ,” NW] ಸಲಕರಣೆಗಳು ಕೆಟ್ಟವುಗಳೇ; ದೀನದರಿದ್ರರು ನ್ಯಾಯವಾದಿಗಳಾಗಿದ್ದರೂ ಅವರನ್ನು ಸುಳ್ಳುಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.” (ಯೆಶಾಯ 32:7) ಈ ಮಾತುಗಳನ್ನು ನೆರವೇರಿಸುತ್ತಾ ಪಾದ್ರಿಗಳಲ್ಲಿ ಅನೇಕರು, ವಿವಾಹಪೂರ್ವ ಸಂಭೋಗ, ಅವಿವಾಹಿತರ ಕೂಡುಬಾಳ್ವೆ, ಸಲಿಂಗೀಕಾಮ ಮತ್ತು ‘ಜಾರತ್ವ ಹಾಗೂ ಬಂಡುತನದ’ ಕಡೆಗೆ ಸಹಿಷ್ಣುತೆಯ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. (ಎಫೆಸ 5:⁠3) ಹೀಗೆ ತಮ್ಮ ಸುಳ್ಳುಮಾತುಗಳಿಂದ ಅವರು ತಮ್ಮ ಹಿಂಡುಗಳನ್ನು “ಕೆಡಿಸು”ತ್ತಾರೆ.

16. ಯಾವ ಕಾರಣಕ್ಕಾಗಿ ಯಥಾರ್ಥ ಕ್ರೈಸ್ತರು ಸಂತೋಷಿಸುತ್ತಾರೆ?

16 ಇದಕ್ಕೆ ತೀರ ವಿರುದ್ಧವಾಗಿ, ಪ್ರವಾದಿಯ ಮುಂದಿನ ಮಾತುಗಳ ನೆರವೇರಿಕೆಯು ಎಷ್ಟು ಚೈತನ್ಯದಾಯಕವಾಗಿದೆ! “ಘನವಂತನಾದರೋ ಘನಕಾರ್ಯಗಳನ್ನು [“ಉದಾರಿಯಾದರೊ ಔದಾರ್ಯಕಾರ್ಯಗಳನ್ನು,” NW] ಕಲ್ಪಿಸುವನು; ಘನವಾದವುಗಳಲ್ಲಿಯೇ [“ಔದಾರ್ಯಕಾರ್ಯಗಳಲ್ಲಿ,” NW] ನಿರತನಾಗಿರುವನು.” (ಯೆಶಾಯ 32:8) ಯೇಸು ಇಂತಹ ಉದಾರಭಾವವನ್ನು ಉತ್ತೇಜಿಸುತ್ತಾ ಹೇಳಿದ್ದು: “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” (ಲೂಕ 6:38) ಉದಾರಿಗಳು ಅನುಭವಿಸುವ ಆಶೀರ್ವಾದಗಳ ಬಗ್ಗೆ ಬರೆಯುತ್ತಾ ಅಪೊಸ್ತಲ ಪೌಲನು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವೆಂಬದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.” (ಅ. ಕೃತ್ಯಗಳು 20:35) ಯಥಾರ್ಥ ಕ್ರೈಸ್ತರು ಪ್ರಾಪಂಚಿಕ ಸ್ವತ್ತು ಇಲ್ಲವೆ ಸಮಾಜದಲ್ಲಿ ತಾವು ಪಡೆದಿರುವ ಸ್ಥಾನಮಾನಗಳಿಂದ ಸಂತೋಷಗೊಳ್ಳದೆ, ತಮ್ಮ ದೇವರಾದ ಯೆಹೋವನಂತೆ ಉದಾರಭಾವದವರಾಗಿರುವ ಮೂಲಕವೇ ಸಂತೋಷಗೊಳ್ಳುತ್ತಾರೆ. (ಮತ್ತಾಯ 5:​44, 45) ದೇವರ ಚಿತ್ತವನ್ನು ಮಾಡುವುದರಲ್ಲಿ, ಇತರರಿಗೆ ‘ಭಾಗ್ಯವಂತನಾದ ದೇವರ ಮಹಿಮೆಯ ಸುವಾರ್ತೆಯನ್ನು’ ತಿಳಿಯಪಡಿಸುವುದಕ್ಕಾಗಿ ತಮ್ಮನ್ನು ಉದಾರಭಾವದಿಂದ ನೀಡಿಕೊಳ್ಳುವುದರಲ್ಲೇ ಅವರು ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುತ್ತಾರೆ.​—⁠1 ತಿಮೊಥೆಯ 1:⁠11.

17. ಯೆಶಾಯನು ಸೂಚಿಸಿದಂತಹ ‘ನಿಶ್ಚಿಂತೆಯ ಹೆಂಗಸರಂತೆ’ ಯಾರಿದ್ದಾರೆ?

17 ಯೆಶಾಯನ ಪ್ರವಾದನೆಯು ಮುಂದುವರಿಸಿ ಹೇಳುವುದು: “ನಿಶ್ಚಿಂತೆಯ ಹೆಂಗಸರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ; ಭಯವಿಲ್ಲದ ಹೆಣ್ಣುಗಳಿರಾ, ನನ್ನ ಮಾತಿಗೆ ಕಿವಿಗೊಡಿರಿ! ನಿರ್ಭೀತರೇ, ಒಂದು ವರುಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ; ದ್ರಾಕ್ಷೆಯ ಕೊಯ್ಲು ಇಲ್ಲದೆ ಹೋಗುವದು, ಯಾವ ಬೆಳೆಯೂ ದೊರೆಯದು. ನಿಶ್ಚಿಂತೆಯವರೇ, ನಡುಗಿರಿ! ನಿರ್ಭೀತರೇ, ಕಳವಳಗೊಳ್ಳಿರಿ!” (ಯೆಶಾಯ 32:9-11ಎ) ಇಂದು ದೇವರ ಸೇವೆಮಾಡುವುದಾಗಿ ಹೇಳಿಕೊಂಡರೂ ಹುರುಪಿನಿಂದ ಆತನ ಸೇವೆಯಲ್ಲಿ ಪಾಲ್ಗೊಳ್ಳದೆ ಇರುವವರನ್ನು, ಈ ಹೆಂಗಸರ ಮನೋಭಾವವು ನಮ್ಮ ಜ್ಞಾಪಕಕ್ಕೆ ತರುತ್ತದೆ. ಇಂತಹವರನ್ನು ‘ಜಾರ ಸ್ತ್ರೀಯರಿಗೆ ತಾಯಿ ಆಗಿರುವ ಬಾಬಿಲೋನ್‌ ಎಂಬ ಮಹಾನಗರಿಯ’ ಧರ್ಮಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. (ಪ್ರಕಟನೆ 17:​5, ಪರಿಶುದ್ಧ ಬೈಬಲ್‌) ಕ್ರೈಸ್ತಪ್ರಪಂಚದ ಧರ್ಮಗಳಿಗೆ ಸೇರಿರುವ ಸದಸ್ಯರು, ಯೆಶಾಯನು ವಿವರಿಸಿದ ಈ ‘ಹೆಂಗಸರ’ ಹಾಗೆಯೇ ಇದ್ದಾರೆ. ಅವರ ಮೇಲೆ ಬೇಗನೆ ಬರಲಿರುವ ನ್ಯಾಯತೀರ್ಪು ಮತ್ತು ಕಳವಳದ ಕುರಿತು ಅವರು “ನಿಶ್ಚಿಂತೆ”ಯಿಂದಿದ್ದಾರೆ.

18. ‘ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳುವ’ ಆದೇಶ ಯಾರಿಗೆ ನೀಡಲಾಗಿದೆ, ಮತ್ತು ಏಕೆ?

18 ಆದುದರಿಂದ ಸುಳ್ಳು ಧರ್ಮಕ್ಕೆ ಈ ಕರೆಯು ನೀಡಲ್ಪಡುತ್ತದೆ: “ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ ಬೆತ್ತಲೆಯಾಗಿ ಸೊಂಟಕ್ಕೆ [ಗೋಣಿತಟ್ಟನ್ನು] ಸುತ್ತಿಕೊಳ್ಳಿರಿ. ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ವಿಷಯದಲ್ಲಿ ಎದೆಬಡಿದುಕೊಳ್ಳುವರು. ನನ್ನ ಜನರ ಭೂಮಿಯ ಮೇಲೂ ಉತ್ಸಾಹಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆಗಳ ಮೇಲೂ ಮುಳ್ಳುಗಿಳ್ಳು ಹತ್ತಿಕೊಳ್ಳುವದು; ಅರಮನೆಯು ಬಿಕೋ ಎನ್ನುವದು.” (ಯೆಶಾಯ 32:11ಬಿ-13) ‘ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ ಬೆತ್ತಲೆಯಾಗಿ’ ಎಂಬ ಅಭಿವ್ಯಕ್ತಿಯು, ಎಲ್ಲಾ ಬಟ್ಟೆಗಳನ್ನು ಕಳಚಿಹಾಕುವ ಅರ್ಥದಲ್ಲಿ ಹೇಳಲ್ಪಟ್ಟಿಲ್ಲ. ಒಳಅಂಗಿಯ ಮೇಲೆ ಹೊರಅಂಗಿಯನ್ನು ಹಾಕಿಕೊಳ್ಳುವುದು ಪುರಾತನ ವಾಡಿಕೆಯಾಗಿತ್ತು. ಈ ಹೊರಅಂಗಿಯ ಸಹಾಯದಿಂದಲೇ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗುತ್ತಿತ್ತು. (2 ಅರಸುಗಳು 10:​22, 23; ಪ್ರಕಟನೆ 7:​13, 14) ಆದುದರಿಂದ, ಸುಳ್ಳು ಧರ್ಮಗಳ ಸದಸ್ಯರು, ದೇವರ ಸೇವಕರೆಂದು ತಾವು ಧರಿಸಿಕೊಂಡಿರುವ ಕಳ್ಳವೇಶವನ್ನು ಕಳಚಿಹಾಕಿ, ತಮ್ಮ ಮೇಲೆ ಇನ್ನೇನು ಬರಲಿರುವ ನ್ಯಾಯತೀರ್ಪಿಗಾಗಿ ಗೋಳಾಡುವ ಸಂಕೇತವಾಗಿ, ಗೋಣಿತಟ್ಟನ್ನು ಧರಿಸಿಕೊಳ್ಳುವಂತೆ ಈ ಪ್ರವಾದನೆಯು ಆದೇಶ ನೀಡುತ್ತಿದೆ. (ಪ್ರಕಟನೆ 17:16) ತಾನು ದೇವರ “ಉತ್ಸಾಹಪಟ್ಟಣ”ವೆಂದು ಹೇಳಿಕೊಳ್ಳುವ ಕ್ರೈಸ್ತಪ್ರಪಂಚದ ಧಾರ್ಮಿಕ ಸಂಸ್ಥೆಗಳಲ್ಲಾಗಲಿ, ಇಲ್ಲವೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಬೇರೆ ಸದಸ್ಯರಲ್ಲಾಗಲಿ ದೈವಿಕ ಫಲಗಳನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಅವರ ಕಾರ್ಯಾಚರಣೆಯಿಂದ ಉದಾಸೀನತೆ ಹಾಗೂ ತ್ಯಜನದ “ಮುಳ್ಳುಗಿಳ್ಳು”ಗಳು ಮಾತ್ರ ಫಲಿಸುತ್ತವೆ.

19. ಧರ್ಮಭ್ರಷ್ಟ ‘ಯೆರೂಸಲೇಮಿನ’ ಯಾವ ಸ್ಥಿತಿಯನ್ನು ಯೆಶಾಯನು ಬಯಲುಪಡಿಸುತ್ತಾನೆ?

19 ಈ ಕರಾಳ ಚಿತ್ರವು, ಧರ್ಮಭ್ರಷ್ಟ ‘ಯೆರೂಸಲೇಮಿನ’ ಎಲ್ಲ ಭಾಗಗಳಿಗೂ ಹರಡುತ್ತದೆ: “ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವದು, ಓಫೆಲ್‌ ಗುಡ್ಡವೂ ಕೋವರವೂ ಯಾವಾಗಲೂ ಗುಹೆಗಳಾಗಿಯೂ ಕಾಡುಕತ್ತೆಗಳಿಗೆ ಉಲ್ಲಾಸಕರವಾಗಿಯೂ ದನಕುರಿಗಳಿಗೆ ಕಾವಲಾಗಿಯೂ ಇರುವವು.” (ಯೆಶಾಯ 32:14) ಹೌದು ಇದರಲ್ಲಿ ಓಫೆಲ್‌ ಸಹ ಸೇರಿದೆ. ಯೆರೂಸಲೇಮಿನ ಎತ್ತರವಾದ ಭಾಗದಲ್ಲಿ ನೆಲೆಸಿರುವ ಓಫೆಲ್‌, ವೈರಿಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಉತ್ತಮ ಸ್ಥಾನದಲ್ಲಿದೆ. ಆದರೆ, ಅದು ಕೂಡ ಬೋಳಾದ ಹೊಲದಂತಾಗುವುದು ಎಂದು ಪ್ರವಾದನೆಯು ಹೇಳುವಾಗ, ಆ ಪಟ್ಟಣವು ಸಂಪೂರ್ಣವಾಗಿ ನಿರ್ಮೂಲವಾಗಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಧರ್ಮಭ್ರಷ್ಟ ‘ಯೆರೂಸಲೇಮ್‌’ ಅಂದರೆ ಕ್ರೈಸ್ತಪ್ರಪಂಚವು, ದೇವರ ಚಿತ್ತವನ್ನು ಮಾಡುವ ವಿಷಯದಲ್ಲಿ ತೂಕಡಿಸುತ್ತಿದೆ ಎಂಬುದನ್ನೇ ಯೆಶಾಯನ ಮಾತುಗಳು ತಿಳಿಸುತ್ತವೆ. ಸತ್ಯ ಹಾಗೂ ನ್ಯಾಯದಿಂದ ದೂರ ಸರಿದಿರುವ ಕ್ರೈಸ್ತಪ್ರಪಂಚವು, ಆತ್ಮಿಕ ವಿಷಯಗಳಲ್ಲಿ ನಿಸ್ಸಾರವಾಗಿದೆ ಮತ್ತು ಪೂರ್ಣಾರ್ಥದಲ್ಲಿ ಮೃಗದಂತಿದೆ.

ಒಂದು ಮಹಿಮಾಭರಿತ ವ್ಯತ್ಯಾಸ!

20. ದೇವರು ತನ್ನ ಜನರ ಮೇಲೆ ಆತ್ಮವನ್ನು ಸುರಿಸಿದುದರ ಪರಿಣಾಮವು ಏನಾಗಿದೆ?

20 ಯೆಹೋವನ ಚಿತ್ತವನ್ನು ಮಾಡುವವರಿಗೆ ಒಂದು ಹೃದಯೋಲ್ಲಾಸಕರವಾದ ನಿರೀಕ್ಷೆಯನ್ನು ಯೆಶಾಯನು ನೀಡುತ್ತಾನೆ. ದೇವಜನರ ನಾಶನವು ಎಲ್ಲಿಯ ವರೆಗೆ ಮುಂದುವರಿಯುವುದೆಂಬುದು ಇಲ್ಲಿ ತಿಳಿಸಲಾಗಿದೆ: “ಬಳಿಕ ಉನ್ನತಲೋಕದಿಂದ ದಿವ್ಯಾತ್ಮಧಾರೆಯು ನಮ್ಮ ಮೇಲೆ ಸುರಿಸಲ್ಪಡುವದು; ಆಗ ಅರಣ್ಯವು ತೋಟವಾಗುವದು, [ಈಗಿನ] ತೋಟವು [ಆಗಿನವರಿಗೆ] ಅರಣ್ಯವಾಗಿ ಕಾಣಿಸುವದು.” (ಯೆಶಾಯ 32:15) 1919ರಿಂದ ಯೆಹೋವನ ಆತ್ಮವು ಆತನ ಜನರ ಮೇಲೆ ಯಥೇಷ್ಟವಾಗಿ ಸುರಿಯಲ್ಪಟ್ಟಿದೆ, ಇದರಿಂದ ಅಭಿಷಿಕ್ತ ಸಾಕ್ಷಿಗಳ ಹಣ್ಣಿನ ತೋಟವು ಮತ್ತೆ ಫಲಬಿಡುವಂತಾಗಿದೆ ಮಾತ್ರವಲ್ಲ, ಸದಾ ವಿಸ್ತರಿಸುತ್ತಿರುವ ಬೇರೆ ಕುರಿಗಳ ದೊಡ್ಡ ಕಾಡು ಸಹ ರೂಪುಗೊಂಡಿದೆ. ಇಂದು ಭೂಮಿಯಲ್ಲಿರುವ ದೇವರ ಸಂಸ್ಥೆಯ ಮುಖ್ಯ ಲಕ್ಷಣಗಳು, ಸಮೃದ್ಧಿ ಮತ್ತು ಬೆಳವಣಿಗೆಯೇ ಆಗಿವೆ. ಪುನಸ್ಸ್ಥಾಪಿತ ಆತ್ಮಿಕ ಪರದೈಸಿನಲ್ಲಿ, “ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ” ಪ್ರತಿಬಿಂಬಿಸುತ್ತಾ, ಆತನ ಜನರು ಭೂವ್ಯಾಪಕವಾಗಿ ರಾಜ್ಯದ ಸಂದೇಶವನ್ನು ಪ್ರಕಟಿಸುತ್ತಾ ಇದ್ದಾರೆ.​—⁠ಯೆಶಾಯ 35:​1, 2.

21. ಇಂದು ನೀತಿ, ಶಾಂತಿ ಮತ್ತು ಭದ್ರತೆಯನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

21 ಯೆಹೋವನ ಮಹಿಮಾಭರಿತ ವಾಗ್ದಾನಕ್ಕೆ ಈಗ ಕಿವಿಗೊಡಿರಿ: “ನ್ಯಾಯವು ಅಡವಿಯಲ್ಲಿಯೂ ನೆಲೆಗೊಳ್ಳುವದು, ಧರ್ಮವು ತೋಟದಲ್ಲಿ ಇದ್ದೇ ಇರುವದು. ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು.” (ಯೆಶಾಯ 32:16, 17) ಇಂದು ಯೆಹೋವನ ಜನರ ಆತ್ಮಿಕ ಸ್ಥಿತಿಯನ್ನು ಇದು ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಮಾನವವರ್ಗದಲ್ಲಿ ಹೆಚ್ಚಿನವರು ದ್ವೇಷ, ಹಿಂಸಾಚಾರ ಮತ್ತು ಕಡು ಆತ್ಮಿಕ ಬಡತನದಿಂದ ವಿಭಜಿಸಲ್ಪಟ್ಟಿದ್ದರೂ, ಸತ್ಯ ಕ್ರೈಸ್ತರು ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರೂ’ ಭೌಗೋಲಿಕವಾಗಿ ಐಕ್ಯರಾಗಿದ್ದಾರೆ. ದೇವರ ನೀತಿಗನುಸಾರ ಅವರು ಒಂದುಗೂಡಿ ಜೀವಿಸುತ್ತಾರೆ, ಕೆಲಸಮಾಡುತ್ತಾರೆ ಮತ್ತು ಸೇವೆಸಲ್ಲಿಸುತ್ತಾರೆ. ಹೀಗೆ ಮಾಡುವಾಗ, ನಿತ್ಯತೆಯ ವರೆಗೂ ನಿಜವಾದ ಶಾಂತಿ ಮತ್ತು ಭದ್ರತೆಯನ್ನು ಅನುಭವಿಸುವ ಭರವಸೆ ಅವರಿಗಿರಸಾಧ್ಯವಿದೆ.​—⁠ಪ್ರಕಟನೆ 7:​9, 17.

22. ದೇವಜನರ ಸ್ಥಿತಿಗೂ ಸುಳ್ಳು ಧರ್ಮದ ಸದಸ್ಯರ ಸ್ಥಿತಿಗೂ ಇರುವ ವ್ಯತ್ಯಾಸವೇನು?

22 ಆತ್ಮಿಕ ಪರದೈಸಿನಲ್ಲಿ, ಯೆಶಾಯ 32:18 ಈಗಾಗಲೇ ನೆರವೇರುತ್ತಿದೆ. ಅದು ಹೇಳುವುದು: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” ಆದರೆ ಸುಳ್ಳು ಕ್ರೈಸ್ತರಿಗೆ, “ಕಲ್ಮಳೆಸುರಿಯಲು ವನವು ಹಾಳಾಗುವದು; ಪಟ್ಟಣವು ನೆಲಸಮವಾಗುವದು.” (ಯೆಶಾಯ 32:19) ಹೌದು, ಉಗ್ರಾವೇಶದ ಕಲ್ಮಳೆಯಂತಿರುವ ಯೆಹೋವನ ನ್ಯಾಯತೀರ್ಪು, ಸುಳ್ಳು ಧರ್ಮದ ನಕಲಿ ಪಟ್ಟಣವನ್ನು ತಾಕಲು, ಅದರ ಬೆಂಬಲಿಗರ ‘ವನವನ್ನು’ ಹಾಳುಮಾಡಲು ಮತ್ತು ಇವುಗಳನ್ನು ಸಂಪೂರ್ಣವಾಗಿ ನಿರ್ನಾಮಮಾಡಲು ಕಾಯುತ್ತಿದೆ!

23. ಯಾವ ಭೌಗೋಲಿಕ ಕೆಲಸವು ಮುಗಿಯುತ್ತಾ ಬರುತ್ತಿದೆ, ಮತ್ತು ಅದರಲ್ಲಿ ಭಾಗವಹಿಸುವವರು ಹೇಗೆ ಪರಿಗಣಿಸಲ್ಪಡುತ್ತಾರೆ?

23 ಪ್ರವಾದನೆಯ ಈ ಭಾಗವು ಹೀಗೆ ಮುಕ್ತಾಯಗೊಳ್ಳುತ್ತದೆ: “ನೀರಾವರಿಗಳಲ್ಲೆಲ್ಲಾ ಬೀಜಬಿತ್ತುತ್ತಲೂ ದನ ಕತ್ತೆಗಳನ್ನು [ಕಾವಲಿಗೆ] ಮೇಯಬಿಡುತ್ತಲೂ ಇರುವ ನೀವು ಧನ್ಯರೇ ಸರಿ!” (ಯೆಶಾಯ 32:20) ದೇವರ ಪುರಾತನ ಜನರು ಹೊಲಗಳನ್ನು ಉಳಲು ಮತ್ತು ಬೀಜವನ್ನು ಬಿತ್ತಲು ದನ ಕತ್ತೆಗಳನ್ನು ಬಳಸಿದರು. ಇಂದು, ಲಕ್ಷಗಟ್ಟಲೆ ಬೈಬಲ್‌ ಪ್ರಕಾಶನಗಳನ್ನು ಮುದ್ರಿಸಿ ವಿತರಿಸಲು, ಯೆಹೋವನ ಜನರು ಮುದ್ರಣ ಯಂತ್ರಗಳನ್ನು, ಇಲೆಕ್ಟ್ರಾನಿಕ್‌ ಸಾಧನಗಳನ್ನು, ಆಧುನಿಕ ಕಟ್ಟಡಗಳು ಮತ್ತು ಸಾರಿಗೆ ವ್ಯವಸ್ಥೆಯನ್ನು, ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಒಂದು ಐಕ್ಯವಾದ ದೇವಪ್ರಭುತ್ವ ಸಂಸ್ಥೆಯನ್ನು ಉಪಯೋಗಿಸಿಕೊಳ್ಳುತ್ತಾರೆ. ಭೂಮಿಯ ಎಲ್ಲೆಡೆಯೂ, ಅಂದರೆ “ನೀರಾವರಿಗಳಲ್ಲೆಲ್ಲಾ” ರಾಜ್ಯ ಸತ್ಯದ ಬೀಜಗಳನ್ನು ಬಿತ್ತಲು ಸ್ವಇಚ್ಛೆಯ ಕೆಲಸಗಾರರು ಈ ಸಾಧನಗಳನ್ನು ಬಳಸುತ್ತಾರೆ. ದೇವಭಯವಿರುವ ಲಕ್ಷಾಂತರ ಸ್ತ್ರೀಪುರುಷರನ್ನು ಈಗಾಗಲೇ ಕೊಯ್ಲಿನ ರೂಪದಲ್ಲಿ ಒಟ್ಟುಗೂಡಿಸಲಾಗಿದೆ, ಮತ್ತು ಇತರರು ಹಿಂಡುಹಿಂಡಾಗಿ ಇವರೊಂದಿಗೆ ಸೇರಿಕೊಳ್ಳುತ್ತಿದ್ದಾರೆ. (ಪ್ರಕಟನೆ 14:​15, 16) ಇವರೆಲ್ಲರೂ ‘ಧನ್ಯರೇ’ ಸರಿ!

[ಪಾದಟಿಪ್ಪಣಿಗಳು]

^ ಪ್ಯಾರ. 3 ಯೆಶಾಯ 32:1ರಲ್ಲಿ ಉಲ್ಲೇಖಿಸಲ್ಪಟ್ಟ ರಾಜನು ಮೊದಲನೆಯದಾಗಿ ರಾಜ ಹಿಜ್ಕೀಯನನ್ನು ಸೂಚಿಸಿದ್ದಿರಬಹುದು. ಆದರೆ, ಯೆಶಾಯ 32ನೆಯ ಅಧ್ಯಾಯದ ಪ್ರಧಾನ ನೆರವೇರಿಕೆಯು, ರಾಜನಾದ ಕ್ರಿಸ್ತ ಯೇಸುವನ್ನೇ ಸೂಚಿಸುತ್ತದೆ.

^ ಪ್ಯಾರ. 8 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ ಮಾರ್ಚ್‌ 1, 1999ರ ಕಾವಲಿನಬುರುಜು ಪತ್ರಿಕೆಯ, 13-18ನೆಯ ಪುಟಗಳನ್ನು ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 331ರಲ್ಲಿರುವ ಚಿತ್ರಗಳು]

ಮೃತ ಸಮುದ್ರದ ಸುರುಳಿಗಳಲ್ಲಿ, ಯೆಶಾಯ 32ನೆಯ ಅಧ್ಯಾಯವು “X” ಚಿಹ್ನೆಯಿಂದ ಗುರುತಿಸಲ್ಪಟ್ಟಿದೆ

[ಪುಟ 333ರಲ್ಲಿರುವ ಚಿತ್ರಗಳು]

ಪ್ರತಿಯೊಬ್ಬ ‘ಅಧಿಪತಿಯು,’ ಗಾಳಿಯಲ್ಲಿ ಮರೆಯಂತೆಯೂ, ಮಳೆಯಲ್ಲಿ ಆವರಣದಂತೆಯೂ, ಮರುಭೂಮಿಯಲ್ಲಿ ನೀರಿನಂತೆಯೂ ಮತ್ತು ಬೆಂಗಾಡಿನಲ್ಲಿ ನೆರಳಿನಂತೆಯೂ ಇದ್ದಾನೆ

[ಪುಟ 338ರಲ್ಲಿರುವ ಚಿತ್ರ]

ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದರಲ್ಲಿ ಕ್ರೈಸ್ತರು ಬಹಳ ಸಂತೋಷವನ್ನು ಅನುಭವಿಸುತ್ತಾರೆ