ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಒಟ್ಟಿಗೆ ಹರ್ಷಧ್ವನಿಗೈಯಿರಿ”!

“ಒಟ್ಟಿಗೆ ಹರ್ಷಧ್ವನಿಗೈಯಿರಿ”!

ಅಧ್ಯಾಯ ಹದಿಮೂರು

“ಒಟ್ಟಿಗೆ ಹರ್ಷಧ್ವನಿಗೈಯಿರಿ”!

ಯೆಶಾಯ 52:1-12

1. ಯೆಶಾಯ 52ನೆಯ ಅಧ್ಯಾಯದ ಪ್ರವಾದನ ಮಾತುಗಳು ಆನಂದಕ್ಕೆ ಕಾರಣವಾಗಿರುವುದೇಕೆ, ಮತ್ತು ಅವುಗಳಿಗೆ ಯಾವ ಎರಡು ನೆರವೇರಿಕೆಗಳಿವೆ?

ವಿಮೋಚನೆ! ಬಂದಿಗಳಿಗೆ ಇದಕ್ಕಿಂತ ಹೆಚ್ಚು ಹರ್ಷಕರವಾದ ಪ್ರತೀಕ್ಷೆ ಇದ್ದೀತೆ? ಯೆಶಾಯನ ಪುಸ್ತಕದ ಒಂದು ಮುಖ್ಯವಿಷಯವು ವಿಮೋಚನೆ ಮತ್ತು ಪುನಸ್ಸ್ಥಾಪನೆ ಆಗಿರುವುದರಿಂದ, ಕೀರ್ತನೆ ಪುಸ್ತಕವನ್ನು ಬಿಟ್ಟರೆ, ಬೇರೆ ಯಾವುದೇ ಪುಸ್ತಕಕ್ಕಿಂತಲೂ ಈ ಬೈಬಲ್‌ ಪುಸ್ತಕದಲ್ಲಿಯೇ ಹೆಚ್ಚು ಬಾರಿ ಆನಂದದ ಅಭಿವ್ಯಕ್ತಿಗಳಿರುವುದರಲ್ಲಿ ಆಶ್ಚರ್ಯವೇನಿಲ್ಲ. ಯೆಶಾಯ 52ನೆಯ ಅಧ್ಯಾಯವು ವಿಶೇಷವಾಗಿ ದೇವಜನರಿಗೆ ಹರ್ಷಿಸಲು ಕಾರಣವನ್ನು ಕೊಡುತ್ತದೆ. ಅದರ ಪ್ರವಾದನ ಮಾತುಗಳು ಸಾ.ಶ.ಪೂ. 537ರಲ್ಲಿ ಯೆರೂಸಲೇಮಿನ ಮೇಲೆ ನೆರವೇರುತ್ತವೆ. ಮತ್ತು ಈ ಮಾತುಗಳ ಇನ್ನೂ ಹೆಚ್ಚಿನ ನೆರವೇರಿಕೆಯಲ್ಲಿ “ಮೇಲಣ ಯೆರೂಸಲೇಮ್‌” ಒಳಗೂಡಿದೆ. ಇದು ಯೆಹೋವನ ಆತ್ಮಿಕ ಜೀವಿಗಳ ಸ್ವರ್ಗೀಯ ಸಂಸ್ಥೆಯಾಗಿದ್ದು, ಕೆಲವು ಬಾರಿ ಅದನ್ನು ತಾಯಿಯಾಗಿಯೂ ಪತ್ನಿಯಾಗಿಯೂ ವರ್ಣಿಸಲಾಗಿದೆ.​—⁠ಗಲಾತ್ಯ 4:26; ಪ್ರಕಟನೆ 12:⁠1.

“ಚೀಯೋನೇ, . . . ನಿನ್ನ ಪ್ರತಾಪವನ್ನು ಧರಿಸಿಕೋ!”

2. ಚೀಯೋನು ಯಾವಾಗ ಎಚ್ಚರಗೊಳ್ಳುತ್ತದೆ, ಮತ್ತು ಇದು ಹೇಗೆ ಸಂಭವಿಸುತ್ತದೆ?

2 ಯೆಹೋವನು ಯೆಶಾಯನ ಮೂಲಕ ತನ್ನ ಪ್ರಿಯ ಪಟ್ಟಣವಾದ ಚೀಯೋನನ್ನು ಕರೆದು ಹೀಗನ್ನುತ್ತಾನೆ: “ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ, ಪರಿಶುದ್ಧಪಟ್ಟಣವೇ, ನಿನ್ನ ಚಂದದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡರು. ಯೆರೂಸಲೇಮೇ, ದೂಳನ್ನು ಝಾಡಿಸಿಕೋ! ಎದ್ದು ಆಸನದ ಮೇಲೆ ಕೂಡ್ರು! ಸೆರೆಬಿದ್ದ ಚೀಯೋನ್‌ ಕನ್ಯೆಯೇ, ನಿನ್ನ ಕತ್ತಿನ ಪಾಶವನ್ನು ಬಿಚ್ಚಿಬಿಡು!” (ಯೆಶಾಯ 52:​1, 2) ಯೆರೂಸಲೇಮಿನ ನಿವಾಸಿಗಳು ಯೆಹೋವನಿಗೆ ಕೋಪವನ್ನೆಬ್ಬಿಸಿದ್ದರಿಂದ, ಯೆರೂಸಲೇಮು 70 ವರ್ಷಗಳ ವರೆಗೆ ಹಾಳುಬಿದ್ದಿದೆ. (2 ಅರಸುಗಳು 24:4; 2 ಪೂರ್ವಕಾಲವೃತ್ತಾಂತ 36:​15-21; ಯೆರೆಮೀಯ 25:​8-11; ದಾನಿಯೇಲ 9:⁠2) ಆದರೆ ಈಗ ಅದು ಆ ದೀರ್ಘಕಾಲದ ನಿಶ್ಚೇತನಾವಸ್ಥೆಯಿಂದ ಎದ್ದು, ವಿಮೋಚನೆಯ ಸೊಗಸಾದ ಉಡುಪನ್ನು ಧರಿಸಿಕೊಳ್ಳುವ ಸಮಯ ಬಂದಿದೆ. “ಸೆರೆಬಿದ್ದ ಚೀಯೋನ್‌ ಕನ್ಯೆ”ಯನ್ನು ಬಿಡಿಸಲು ಯೆಹೋವನು ಕೋರೆಷನ ಹೃದಯವನ್ನು ಪ್ರಚೋದಿಸಿದ್ದಾನೆ. ಹೀಗೆ ಯೆರೂಸಲೇಮಿನ ಮಾಜಿ ನಿವಾಸಿಗಳು ಮತ್ತು ಅವರ ಮಕ್ಕಳು ಬಾಬೆಲನ್ನು ಬಿಟ್ಟು, ಯೆರೂಸಲೇಮಿಗೆ ಹಿಂದಿರುಗಿಹೋಗಿ ಅಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವಂತಾಗುತ್ತದೆ. ಯೆರೂಸಲೇಮಿನಲ್ಲಿ ಸುನ್ನತಿಯಾಗದವನಾಗಲಿ, ಅಶುದ್ಧನಾಗಲಿ ಇರಲೇಬಾರದು.​—⁠ಎಜ್ರ 1:​1-4.

3. ಅಭಿಷಿಕ್ತ ಕ್ರೈಸ್ತರ ಸಭೆಯನ್ನು “ಚೀಯೋನ್‌ ಕನ್ಯೆ” ಎಂದು ಏಕೆ ಕರೆಯಸಾಧ್ಯವಿದೆ, ಮತ್ತು ಅವರಿಗೆ ಯಾವ ಅರ್ಥದಲ್ಲಿ ಬಿಡುಗಡೆಯಾಗಿದೆ?

3 ಯೆಶಾಯನ ಈ ಮಾತುಗಳು ಕ್ರೈಸ್ತ ಸಭೆಯ ಮೇಲೂ ನೆರವೇರುತ್ತವೆ. ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಆಧುನಿಕ ದಿನದ “ಚೀಯೋನ್‌ ಕನ್ಯೆ”ಯಾಗಿ ವರ್ಣಿಸಲಾಗಿದೆ, ಏಕೆಂದರೆ “ಮೇಲಣ ಯೆರೂಸಲೇಮ್‌” ಅವರ ತಾಯಿಯಾಗಿದೆ. * ವಿಧರ್ಮಿ ಬೋಧನೆಗಳಿಂದಲೂ ಧರ್ಮಭ್ರಷ್ಟರ ತತ್ವಗಳಿಂದಲೂ ಬಿಡುಗಡೆಹೊಂದಿರುವ ಅಭಿಷಿಕ್ತರು, ಯೆಹೋವನ ಮುಂದೆ ಶುದ್ಧವಾದ ನಿಲುವನ್ನು ಕಾಪಾಡಿಕೊಳ್ಳಬೇಕು. ಹೀಗೆ ಶುದ್ಧವಾಗಿರುವುದು ಶರೀರದಲ್ಲಿ ಸುನ್ನತಿ ಮಾಡಿಸಿಕೊಂಡಿರುವುದರಿಂದಲ್ಲ, ಬದಲಾಗಿ ಹೃದಯಗಳಲ್ಲಿ ಸುನ್ನತಿ ಮಾಡಿಸಿಕೊಂಡಿರುವುದರಿಂದಲೇ. (ಯೆರೆಮೀಯ 31:33; ರೋಮಾಪುರ 2:​25-29) ಇದರಲ್ಲಿ ಯೆಹೋವನ ಮುಂದೆ ಆತ್ಮಿಕ, ಮಾನಸಿಕ ಮತ್ತು ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಸೇರಿದೆ.​—⁠1 ಕೊರಿಂಥ 7:19; ಎಫೆಸ 2:⁠3.

4. “ಮೇಲಣ ಯೆರೂಸಲೇಮ್‌” ಯಾವತ್ತೂ ಯೆಹೋವನಿಗೆ ಅವಿಧೇಯತೆ ತೋರಿಸಿರದಿದ್ದರೂ, ಭೂಮಿಯಲ್ಲಿರುವ ಆಕೆಯ ಪ್ರತಿನಿಧಿಗಳ ಯಾವ ಅನುಭವಗಳು ಯೆರೂಸಲೇಮಿನ ಪುರಾತನಕಾಲದ ನಿವಾಸಿಗಳ ಅನುಭವಗಳಿಗೆ ಅನುರೂಪವಾಗಿವೆ?

4 “ಮೇಲಣ ಯೆರೂಸಲೇಮ್‌” ಯೆಹೋವನಿಗೆ ಎಂದೂ ಅವಿಧೇಯತೆ ತೋರಿಸಿರುವುದಿಲ್ಲವೆಂಬುದು ನಿಜ. ಆದರೂ, ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಭೂಮಿಯ ಮೇಲಿದ್ದ ಆಕೆಯ ಪ್ರತಿನಿಧಿಗಳಾದ ಅಭಿಷಿಕ್ತ ಕ್ರೈಸ್ತರು, ನಿಜ ಕ್ರೈಸ್ತ ತಾಟಸ್ಥ್ಯದ ಸರಿಯಾದ ತಿಳಿವಳಿಕೆಯಿಲ್ಲದ ಕಾರಣ, ಯೆಹೋವನ ನಿಯಮವನ್ನು ತಮಗರಿವಿಲ್ಲದೇ ಮುರಿದರು. ಹೀಗೆ ದೈವಿಕ ಅನುಗ್ರಹವನ್ನು ಕಳೆದುಕೊಂಡವರಾಗಿ, ಅವರು ‘ಮಹಾ ಬಾಬೆಲಿನ’ ಅಂದರೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಆತ್ಮಿಕ ಬಂಧನದೊಳಗೆ ಬಂದರು. (ಪ್ರಕಟನೆ 17:⁠5) ಅವರ ದಾಸತ್ವದ ಸ್ಥಿತಿಯು 1918ರ ಜೂನ್‌ ತಿಂಗಳಿನಲ್ಲಿ ಪರಮಾವಧಿಗೇರಿತು. ಆಗ, ವಾಚ್‌ ಟವರ್‌ ಸೊಸೈಟಿಯ ಎಂಟು ಮಂದಿ ಸಿಬ್ಬಂದಿ ಸದಸ್ಯರನ್ನು, ಅವರು ಒಳಸಂಚು ಮಾಡುತ್ತಿದ್ದರೆಂಬ ಆರೋಪದೊಂದಿಗೆ ಇನ್ನಿತರ ಸುಳ್ಳು ಆರೋಪಗಳ ಕಾರಣ ಬಂಧಿಸಲಾಯಿತು. ಆ ಹಂತದಲ್ಲಿ ವ್ಯವಸ್ಥಾಪಿತ ರೀತಿಯಲ್ಲಿ ಸುವಾರ್ತೆ ಸಾರುವ ಕೆಲಸವು ಕಾರ್ಯತಃ ನಿಂತುಹೋಯಿತು. ಆದರೆ 1919ರಲ್ಲಿ, ಆತ್ಮಿಕ ರೀತಿಯಲ್ಲಿ ಎಚ್ಚರವಾಗಿರಲು ಹುರಿದುಂಬಿಸುವಂಥ ಮಹಾ ಕರೆಯೊಂದು ಕೊಡಲ್ಪಟ್ಟಿತು. ಆಗ ಅಭಿಷಿಕ್ತ ಕ್ರೈಸ್ತರು ತಮ್ಮನ್ನು ಮಹಾ ಬಾಬೆಲಿನ ನೈತಿಕ ಮತ್ತು ಆತ್ಮಿಕ ಅಶುದ್ಧತೆಯಿಂದ ಹೆಚ್ಚು ಪೂರ್ಣವಾಗಿ ಪ್ರತ್ಯೇಕಿಸಿಕೊಳ್ಳತೊಡಗಿದರು. ಅವರು ಬಂಧನದ ಆ ದೂಳಿನಿಂದ ಎದ್ದಾಗ, “ಮೇಲಣ ಯೆರೂಸಲೇಮ್‌,” ಎಲ್ಲಿ ಆತ್ಮಿಕ ಮಾಲಿನ್ಯಕ್ಕೆ ಅನುಮತಿಯೇ ಇಲ್ಲವೊ ಅಂತಹ ಒಂದು “ಪರಿಶುದ್ಧ ಪಟ್ಟಣ”ದ ವೈಭವವನ್ನು ಪಡೆಯಿತು.

5. ತನ್ನ ಜನರನ್ನು ಬಂಧಿಸಿದವರಿಗೆ ಪರಿಹಾರವನ್ನು ಕೊಡದೇ ಅವರನ್ನು ಪುನಃ ಕೊಂಡುಕೊಳ್ಳಲು ಯೆಹೋವನಿಗೆ ಪೂರ್ಣ ಹಕ್ಕಿರುವುದೇಕೆ?

5 ಸಾ.ಶ.ಪೂ. 537 ಮತ್ತು ಸಾ.ಶ. 1919​—⁠ಈ ಎರಡು ಸಂದರ್ಭಗಳಲ್ಲಿಯೂ ತನ್ನ ಜನರನ್ನು ವಿಮೋಚಿಸುವ ಪೂರ್ಣ ಹಕ್ಕು ಯೆಹೋವನಿಗಿತ್ತು. ಯೆಶಾಯನು ವಿವರಿಸುವುದು: “ಯೆಹೋವನ ಈ ಮಾತನ್ನು ಕೇಳಿರಿ, ಲಾಭಪಡೆಯದೆ ನಿಮ್ಮನ್ನು ಮಾರಿದೆನು, ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆಮಾಡುವೆನು.” (ಯೆಶಾಯ 52:3) ದೇವರ ಒಡಂಬಡಿಕೆಯ ಜನರನ್ನು ಗುಲಾಮರಾಗಿ ಮಾಡಿಕೊಂಡಾಗ, ಪುರಾತನಕಾಲದ ಬಾಬೆಲಾಗಲಿ ಅಥವಾ ಮಹಾ ಬಾಬೆಲಾಗಲಿ ಯಾವ ಹಣವನ್ನು ತೆತ್ತಿರಲಿಲ್ಲ. ಹಣದ ವ್ಯವಹಾರವೇ ಇದ್ದಿಲ್ಲದ ಕಾರಣ ಯೆಹೋವನು ಇನ್ನೂ ತನ್ನ ಜನರ ಶಾಸನಬದ್ಧ ಯಜಮಾನನಾಗಿದ್ದನು. ಆತನು ತಾನು ಯಾರಿಗಾದರೂ ಋಣಿಯಾಗಿದ್ದೇನೆಂದು ಭಾವಿಸಬೇಕಿತ್ತೊ? ನಿಶ್ಚಯವಾಗಿಯೂ ಭಾವಿಸಬಾರದು. ಈ ಎರಡು ಸನ್ನಿವೇಶಗಳಲ್ಲಿಯೂ, ತನ್ನ ಆರಾಧಕರನ್ನು ಬಂಧಿಸಿದವರಿಗೆ ಯಾವುದೇ ಪರಿಹಾರವನ್ನು ನೀಡದೆ ಯೆಹೋವನು ಅವರನ್ನು ನ್ಯಾಯವಾಗಿ ಪುನಃ ಕೊಂಡುಕೊಳ್ಳಸಾಧ್ಯವಿತ್ತು.​—⁠ಯೆಶಾಯ 45:⁠13.

6. ಇತಿಹಾಸದ ಯಾವ ಪಾಠಗಳಿಗೆ ಕಿವಿಗೊಡಲು ಯೆಹೋವನ ವೈರಿಗಳು ತಪ್ಪಿಹೋದರು?

6 ಯೆಹೋವನ ವೈರಿಗಳು ಇತಿಹಾಸದಿಂದ ಯಾವ ಪಾಠಗಳನ್ನೂ ಕಲಿತುಕೊಂಡಿರಲಿಲ್ಲ. ನಾವು ಹೀಗೆ ಓದುತ್ತೇವೆ: “ಕರ್ತನಾದ ಯೆಹೋವನು ಹೀಗಂದುಕೊಳ್ಳುತ್ತಾನೆ​—⁠ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ [ಅಲ್ಲಿ ಸೆರೆಯಾದರು]; ಅಶ್ಶೂರ್ಯರೂ ಹಕ್ಕಿಲ್ಲದೆ ಅವರನ್ನು ಬಾಧೆಪಡಿಸಿದರು.” (ಯೆಶಾಯ 52:⁠4) ಐಗುಪ್ತದ ಫರೋಹನು, ತನ್ನ ದೇಶಕ್ಕೆ ಅತಿಥಿಗಳಾಗಿ ವಾಸಿಸಲು ಆಮಂತ್ರಿಸಲ್ಪಟ್ಟಿದ್ದ ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡನು. ಆದರೆ ಯೆಹೋವನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿ ಹತಿಸಿದನು. (ವಿಮೋಚನಕಾಂಡ 1:​11-14; 14:​27, 28) ಅಶ್ಶೂರದ ರಾಜ ಸನ್ಹೇರೀಬನು ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ, ಯೆಹೋವನ ದೇವದೂತನು ರಾಜನ ಸೈನ್ಯದಲ್ಲಿ 1,85,000 ಮಂದಿಯನ್ನು ಹತಿಸಿದನು. (ಯೆಶಾಯ 37:​33-37) ಇದೇ ರೀತಿ, ಪುರಾತನ ಬಾಬೆಲಾಗಲಿ ಮಹಾ ಬಾಬೆಲಾಗಲಿ ದೇವಜನರ ಶೋಷಣೆಯನ್ನು ಮಾಡಿದುದರ ಫಲವನ್ನು ಅನುಭವಿಸದೆ ಹೋಗುವುದಿಲ್ಲ.

‘ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿಯುವರು’

7. ಯೆಹೋವನ ಜನರ ಬಂಧನವು ಆತನ ಹೆಸರಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ?

7 ಪ್ರವಾದನೆಯು ತೋರಿಸುವಂತೆ, ಯೆಹೋವನ ಜನರ ಬಂದಿವಾಸದ ಸ್ಥಿತಿಯು ಆತನ ಹೆಸರಿನ ಮೇಲೆ ಪರಿಣಾಮ ಬೀರುತ್ತದೆ: “ಈಗಲೂ ಅನ್ಯರು ನನ್ನ ಜನರನ್ನು ಹಕ್ಕಿಲ್ಲದೆ ಒಯ್ದಿರಲು ನಾನು ಇಲ್ಲಿ ಸುಮ್ಮನಿರುವದು ಹೇಗೆ? ನನ್ನ ಪ್ರಜೆಯನ್ನು ಆಳುವವರು [ರೌದ್ರದಿಂದ] ಕಿರಚುತ್ತಾರೆ; ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ. ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.” (ಯೆಶಾಯ 52:5, 6) ಈ ಸನ್ನಿವೇಶದಲ್ಲಿ ಯೆಹೋವನಿಗೆ ಏಕೆ ಆಸಕ್ತಿಯಿದೆ? ಇಸ್ರಾಯೇಲ್ಯರು ಬಾಬೆಲಿನಲ್ಲಿ ದಾಸರಾಗಿದ್ದರೆ ಆತನೇಕೆ ಚಿಂತೆ ತೋರಿಸಬೇಕು? ಏಕೆಂದರೆ, ಬಾಬೆಲು ಆತನ ಜನರನ್ನು ಸೆರೆಯಾಳುಗಳಾಗಿ ಮಾಡಿಕೊಂಡಿರುವುದು ಮಾತ್ರವಲ್ಲ ಅವರನ್ನು ಗೆದ್ದುದಕ್ಕಾಗಿ ಜಯಘೋಷವನ್ನೂ ಮಾಡಿದೆ. ಇಂತಹ ಜಂಬಕೊಚ್ಚುವಿಕೆಯು, ಯೆಹೋವನ ನಾಮಕ್ಕೆ ಬಾಬೆಲು ಅಗೌರವ ತೋರಿಸುವಂತೆ ನಡೆಸಿದೆ. (ಯೆಹೆಜ್ಕೇಲ 36:​20, 21) ಯೆರೂಸಲೇಮಿನ ಹಾಳುಬಿದ್ದಿರುವ ಸ್ಥಿತಿಗೆ ಕಾರಣವು ತನ್ನ ಜನರ ಕಡೆಗೆ ಯೆಹೋವನಿಗಿರುವ ಅಸಮ್ಮತಿಯೇ ಆಗಿದೆ ಎಂಬುದನ್ನು ಗುರುತಿಸಲು ಅದು ತಪ್ಪಿಹೋಗಿದೆ. ಬದಲಿಗೆ, ಯೆಹೂದ್ಯರ ಬಂಧಿವಾಸವು ಅವರ ದೇವರ ಬಲಹೀನತೆಯ ಪುರಾವೆಯಾಗಿದೆ ಎಂಬುದು ಬಾಬೆಲಿನ ದೃಷ್ಟಿಕೋನವಾಗಿದೆ. ಬಾಬೆಲಿನ ಜೊತೆರಾಜನಾದ ಬೇಲ್ಶಚ್ಚರನು, ಬಾಬೆಲಿನ ದೇವತೆಗಳ ಸನ್ಮಾನಕ್ಕಾಗಿ ಏರ್ಪಡಿಸಿದ ಔತಣದಲ್ಲಿ ಯೆಹೋವನ ಆಲಯದಿಂದ ತಂದಿದ್ದ ಪಾತ್ರೆಗಳನ್ನು ಉಪಯೋಗಿಸಿ ಆತನನ್ನು ಮೂದಲಿಸುವಷ್ಟರ ವರೆಗೆ ಮುಂದುವರಿದಿದ್ದಾನೆ.​—⁠ದಾನಿಯೇಲ 5:​1-4.

8. ಅಪೊಸ್ತಲರ ಮರಣದಂದಿನಿಂದ ಯೆಹೋವನ ಹೆಸರನ್ನು ಹೇಗೆ ಉಪಚರಿಸಲಾಗಿದೆ?

8 ಇವೆಲ್ಲ ವಿಷಯಗಳು ‘ಮೇಲಣ ಯೆರೂಸಲೇಮ್‌ಗೆ’ ಹೇಗೆ ಅನ್ವಯಿಸುತ್ತವೆ? ನಾಮಮಾತ್ರದ ಕ್ರೈಸ್ತರಲ್ಲಿ ಧರ್ಮಭ್ರಷ್ಟತೆಯು ಬೇರೂರಿದಂದಿನಿಂದ, “ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ” ಗುರಿಯಾಗಿದೆಯೆಂದು ಹೇಳಸಾಧ್ಯವಿದೆ. (ರೋಮಾಪುರ 2:24; ಅ. ಕೃತ್ಯಗಳು 20:29, 30) ಅಂತೆಯೇ, ಯೆಹೂದ್ಯರ ಮೂಢನಂಬಿಕೆಯ ಕಾರಣ, ಅವರು ಕ್ರಮೇಣ ದೈವಿಕ ನಾಮದ ಉಪಯೋಗವನ್ನು ದೂರಮಾಡಲು ಆರಂಭಿಸಿದರು. ಅಪೊಸ್ತಲರ ಮರಣಾನಂತರ ಸ್ವಲ್ಪ ಸಮಯದೊಳಗೆ, ಧರ್ಮಭ್ರಷ್ಟ ಕ್ರೈಸ್ತರು ಯೆಹೂದ್ಯರ ಮಾದರಿಯನ್ನು ಅನುಸರಿಸಿ ದೇವರ ಸ್ವಂತ ಹೆಸರನ್ನು ಉಪಯೋಗಿಸುವುದನ್ನು ನಿಲ್ಲಿಸಿಬಿಟ್ಟರು. ಆ ಧರ್ಮಭ್ರಷ್ಟತೆಯ ಪರಿಣಾಮವಾಗಿ ಕ್ರೈಸ್ತಪ್ರಪಂಚವು ಮಹಾ ಬಾಬೆಲಿನ ಒಂದು ಪ್ರಧಾನ ಭಾಗವಾಗಿ ಬೆಳೆಯತೊಡಗಿತು. (2 ಥೆಸಲೊನೀಕ 2:​3, 7; ಪ್ರಕಟನೆ 17:⁠5) ಕ್ರೈಸ್ತಪ್ರಪಂಚದ ಅನೈತಿಕತೆ ಮತ್ತು ನಾಚಿಕೆಗೆಟ್ಟ ರಕ್ತಾಪರಾಧಗಳು ಯೆಹೋವನ ಹೆಸರಿಗೆ ಅವಮಾನವನ್ನು ತಂದಿವೆ.​—⁠2 ಪೇತ್ರ 2:​1, 2.

9, 10. ಆಧುನಿಕ ಸಮಯದ ಯೆಹೋವನ ಒಡಂಬಡಿಕೆಯ ಜನರು ಯೆಹೋವನ ನೈತಿಕ ಮಟ್ಟಗಳು ಮತ್ತು ಆತನ ನಾಮದ ಕುರಿತು ಯಾವ ಆಳವಾದ ತಿಳಿವಳಿಕೆಯನ್ನು ಪಡೆದರು?

9 ಮಹಾ ಕೋರೆಷನಾದ ಯೇಸು ಕ್ರಿಸ್ತನು, 1919ರಲ್ಲಿ ದೇವರ ಒಡಂಬಡಿಕೆಯ ಜನರನ್ನು ಮಹಾ ಬಾಬೆಲಿನ ಬಂಧನದಿಂದ ಬಿಡಿಸಿದಾಗ, ಅವರಿಗೆ ಯೆಹೋವನ ಆವಶ್ಯಕತೆಗಳ ಕುರಿತು ಹೆಚ್ಚು ಉತ್ತಮವಾದ ತಿಳಿವಳಿಕೆ ದೊರೆಯಿತು. ತ್ರಯೈಕ್ಯ, ಆತ್ಮದ ಅಮರತ್ವ ಮತ್ತು ಅಗ್ನಿಮಯ ನರಕದಲ್ಲಿ ನಿತ್ಯ ಯಾತನೆಗಳಂತಹ ಕ್ರೈಸ್ತಪೂರ್ವ ವಿಧರ್ಮದಲ್ಲಿ ಬೇರೂರಿರುವ ಕ್ರೈಸ್ತಪ್ರಪಂಚದ ಅನೇಕ ಬೋಧನೆಗಳಿಂದ ಈಗಾಗಲೇ ಅವರು ತಮ್ಮನ್ನು ಶುದ್ಧೀಕರಿಸಿಕೊಂಡಿದ್ದರು. ಈಗ ಅವರು ಬಾಬೆಲಿನ ಪ್ರಭಾವದ ಪ್ರತಿಯೊಂದು ಕುರುಹನ್ನೂ ಕಳಚಿಹಾಕತೊಡಗಿದರು. ಈ ಲೋಕದ ಪಕ್ಷಾಭಿಮಾನಿ ವಿಚಾರಗಳ ವಿಷಯದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನೂ ಅವರು ಗ್ರಹಿಸಿದರು. ಅವರಲ್ಲಿ ಕೆಲವರ ಮೇಲೆ ಯಾವುದೇ ರಕ್ತಾಪರಾಧವು ಬಂದಿರುವಲ್ಲಿ ಅದರಿಂದಲೂ ಶುದ್ಧರಾಗಿರಲು ಅವರು ಬಯಸಿದರು.

10 ದೇವರ ಆಧುನಿಕ ದಿನಗಳ ಸೇವಕರು, ಯೆಹೋವನ ನಾಮವು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದರ ಆಳವಾದ ತಿಳಿವಳಿಕೆಯನ್ನೂ ಪಡೆದರು. ಅವರು 1931ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಅಂಗೀಕರಿಸಿದರು ಮತ್ತು ಹೀಗೆ ತಾವು ಯೆಹೋವನನ್ನೂ ಆತನ ನಾಮವನ್ನೂ ಬೆಂಬಲಿಸುತ್ತೇವೆಂಬುದನ್ನು ಬಹಿರಂಗವಾಗಿ ಪ್ರಕಟಿಸಿದರು. ಇದಲ್ಲದೆ, 1950ರಿಂದ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲನ್ನು ಪ್ರಕಾಶಿಸುವುದರ ಮೂಲಕ ಯೆಹೋವನ ಸಾಕ್ಷಿಗಳು, ಆ ದೈವಿಕ ಹೆಸರನ್ನು ಬೈಬಲಿನಲ್ಲಿ ಅದಕ್ಕಿರುವ ಯೋಗ್ಯ ಸ್ಥಾನದಲ್ಲಿ ಪುನಸ್ಸ್ಥಾಪಿಸಿದ್ದಾರೆ. ಹೌದು, ಅವರು ಯೆಹೋವನ ನಾಮವನ್ನು ಗಣ್ಯಮಾಡತೊಡಗಿದ್ದಾರೆ ಮತ್ತು ಅದನ್ನು ಭೂಮಿಯ ಕಟ್ಟಕಡೆಯ ವರೆಗೆ ಪ್ರಕಟಿಸುತ್ತಿದ್ದಾರೆ.

‘ಶುಭ ಸಮಾಚಾರವನ್ನು ತರುವವನು’

11. “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂಬ ಉದ್ಗಾರವು, ಸಾ.ಶ.ಪೂ. 537ರ ಘಟನೆಗಳ ಸಂಬಂಧದಲ್ಲಿ ಏಕೆ ತಕ್ಕದ್ದಾಗಿದೆ?

11 ಈಗ ನಮ್ಮ ಗಮನವು ಹಾಳುಬಿದ್ದ ಸ್ಥಿತಿಯಲ್ಲಿ ಇನ್ನೂ ಉಳಿದಿದ್ದ ಚೀಯೋನಿನ ಕಡೆಗೆ ತಿರುಗುತ್ತದೆ. ಶುಭ ಸಂದೇಶವಿರುವ ಒಬ್ಬ ದೂತನು ಸಮೀಪಿಸುತ್ತಾನೆ: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ​—⁠ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.” (ಯೆಶಾಯ 52:7) ಆದರೆ ಸಾ.ಶ.ಪೂ. 537ರಲ್ಲಿ, ಚೀಯೋನಿನ ದೇವರು ಅರಸನಾಗಿದ್ದಾನೆಂದು ಹೇಗೆ ಹೇಳಸಾಧ್ಯವಿದೆ? ಯೆಹೋವನು ಯಾವಾಗಲೂ ಅರಸನಾಗಿರುವುದಿಲ್ಲವೊ? ಆತನು “ಸರ್ವಯುಗಗಳ ಅರಸ”ನೆಂಬುದು ನಿಜ! (ಪ್ರಕಟನೆ 15:⁠3, ಪಾದಟಿಪ್ಪಣಿ) ಆದರೆ “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂಬ ಉದ್ಗಾರವು ಯೋಗ್ಯವಾಗಿದೆ, ಏಕೆಂದರೆ ಬಾಬೆಲಿನ ಪತನ ಮತ್ತು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಲು ಮತ್ತು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಲು ಕೊಡಲ್ಪಟ್ಟ ರಾಜಾಜ್ಞೆಯು, ಯೆಹೋವನ ರಾಜತ್ವದ ಹೊಸ ಅಭಿವ್ಯಕ್ತಿಯಾಗಿದೆ.​—⁠ಕೀರ್ತನೆ 97:⁠1.

12. ‘ಶುಭಸಮಾಚಾರವನ್ನು ತರುವುದರಲ್ಲಿ’ ಯಾರು ಮುಂದಾಳುತ್ವವನ್ನು ವಹಿಸಿದರು ಮತ್ತು ಹೇಗೆ?

12 ಯೆಶಾಯನ ದಿನಗಳಲ್ಲಿ, ಯಾವುದೇ ವ್ಯಕ್ತಿಯನ್ನಾಗಲಿ ವ್ಯಕ್ತಿಗಳ ಗುಂಪನ್ನಾಗಲಿ ‘ಶುಭಸಮಾಚಾರವನ್ನು ತಂದ’ವರಾಗಿ ಹೆಸರಿಸಲ್ಪಟ್ಟಿರಲಿಲ್ಲ. ಆದರೆ ಇಂದು ಆ ಶುಭಸಮಾಚಾರ ತರುವವನ ಗುರುತು ಪ್ರಸಿದ್ಧವಾಗಿದೆ. ಯೇಸು ಕ್ರಿಸ್ತನು ಯೆಹೋವನ ಅತ್ಯಂತ ಮಹಾ ಶಾಂತಿದೂತನಾಗಿದ್ದಾನೆ. ಅವನು ಭೂಮಿಯಲ್ಲಿದ್ದಾಗ, ಆದಾಮನಿಂದ ಬಂದಿರುವ ರೋಗ ಮತ್ತು ಮರಣವನ್ನು ಸೇರಿಸಿ, ಪಾಪದ ಸಕಲ ಪರಿಣಾಮಗಳಿಂದ ಬಿಡುಗಡೆಯಿದೆ ಎಂಬ ಸುವಾರ್ತೆಯನ್ನು ಸಾರಿದನು. (ಮತ್ತಾಯ 9:35) ಯೇಸು, ಉತ್ತಮ ಪರಿಸ್ಥಿತಿಗಳ ಕುರಿತಾದ ಈ ಸುವಾರ್ತೆಯನ್ನು ಸಾರುವುದರಲ್ಲಿ ಹುರುಪಿನ ಮಾದರಿಯನ್ನಿಟ್ಟನು; ದೇವರ ರಾಜ್ಯದ ಕುರಿತು ಜನರಿಗೆ ಕಲಿಸುವುದಕ್ಕಾಗಿ ಅವನು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಂಡನು. (ಮತ್ತಾಯ 5:​1, 2; ಮಾರ್ಕ 6:34; ಲೂಕ 19:​1-10; ಯೋಹಾನ 4:​5-26) ಈ ಮಾದರಿಯನ್ನು ಅವನ ಶಿಷ್ಯರು ಅನುಸರಿಸಿದರು.

13. (ಎ) ‘ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ’ ಎಂಬ ಅಭಿವ್ಯಕ್ತಿಯ ಅರ್ಥವನ್ನು ಅಪೊಸ್ತಲ ಪೌಲನು ಹೇಗೆ ವಿಸ್ತರಿಸುತ್ತಾನೆ? (ಬಿ) ದೂತರ ಪಾದಗಳು ‘ಅಂದವಾಗಿವೆ’ ಎಂದು ಏಕೆ ಹೇಳಬಹುದು?

13 ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಸುವಾರ್ತೆ ಸಾರುವ ಕಾರ್ಯದ ಪ್ರಮುಖತೆಯನ್ನು ಒತ್ತಿಹೇಳಲು ಯೆಶಾಯ 52:7ನ್ನು ಉಲ್ಲೇಖಿಸುತ್ತಾನೆ. ಅವನು, ‘ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?’ ಎಂಬುದನ್ನು ಒಳಗೊಂಡು, ಅನೇಕ ವಿಚಾರಪ್ರೇರಕ ಪ್ರಶ್ನೆಗಳನ್ನು ಕೇಳುತ್ತಾನೆ. ಬಳಿಕ ಅವನು ಹೇಳುವುದು: “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.” (ರೋಮಾಪುರ 10:14, 15) ಹೀಗೆ ಪೌಲನು, ಯೆಶಾಯನ ಮೂಲ ಗ್ರಂಥಪಾಠದಲ್ಲಿರುವಂತೆ “ದೂತ” ಎಂಬ ಏಕವಚನವನ್ನು ಉಪಯೋಗಿಸುವ ಬದಲಿಗೆ, “ಸಾರುವವರು” ಎಂಬ ಬಹುವಚನವನ್ನು ಉಪಯೋಗಿಸುತ್ತಾ, ಯೆಶಾಯ 52:7ರ ಅನ್ವಯವನ್ನು ವಿಸ್ತರಿಸುತ್ತಾನೆ. ಯೇಸು ಕ್ರಿಸ್ತನನ್ನು ಅನುಕರಿಸುವ ಎಲ್ಲ ಕ್ರೈಸ್ತರು ಶಾಂತಿಯ ಸುವಾರ್ತೆಯ ದೂತರಾಗಿದ್ದಾರೆ. ಅವರ ಪಾದಗಳು “ಅಂದ”ವಾಗಿರುವುದು ಹೇಗೆ? ಆ ದೂತನು ಯೆರೂಸಲೇಮನ್ನು ಹತ್ತಿರದ ಯೆಹೂದದ ಪರ್ವತಗಳಿಂದ ಇಳಿದು ಸಮೀಪಿಸುತ್ತಾನೊ ಎಂಬಂತೆ ಯೆಶಾಯನು ಮಾತಾಡುತ್ತಾನೆ. ಈ ದೂತನ ಪಾದಗಳನ್ನು ದೂರದಿಂದ ನೋಡುವುದು ಅಸಾಧ್ಯ. ಆದರೆ ಇಲ್ಲಿ ಮುಖ್ಯ ಗಮನವು ಶಾಂತಿದೂತನ ಮೇಲಿದೆ. ಮತ್ತು ಪಾದಗಳು ಆ ದೂತನನ್ನೇ ಸೂಚಿಸುತ್ತವೆ. ಪ್ರಥಮ ಶತಮಾನದ ದೀನ ಜನರಿಗೆ ಯೇಸು ಮತ್ತು ಅವನ ಶಿಷ್ಯರು ಒಂದು ಸುಂದರವಾದ ದೃಶ್ಯವಾಗಿದ್ದಂತೆಯೇ, ಇಂದಿನ ಸಾಕ್ಷಿಗಳು ಸುವಾರ್ತೆಯ ಜೀವರಕ್ಷಕ ಸಂದೇಶಕ್ಕೆ ಕಿವಿಗೊಡುವ ದೀನರಿಗೆ ಇಷ್ಟಕರವಾದ ದೃಶ್ಯವಾಗಿರುತ್ತಾರೆ.

14. ಆಧುನಿಕ ದಿನಗಳಲ್ಲಿ ಯೆಹೋವನು ಹೇಗೆ ಅರಸನಾಗಿದ್ದಾನೆ, ಮತ್ತು ಇದನ್ನು ಎಂದಿನಿಂದ ಮಾನವಕುಲಕ್ಕೆ ಪ್ರಕಟಿಸಲಾಗಿದೆ?

14 ಆಧುನಿಕ ದಿನಗಳಲ್ಲಿ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂಬ ಘೋಷಣೆಯು ಎಂದಿನಿಂದ ಕೇಳಿಬರುತ್ತದೆ? 1919ರಿಂದಲೇ. ಆ ವರುಷ, ಒಹಾಯೋದ ಸೀಡರ್‌ ಪಾಯಿಂಟ್‌ ಅಧಿವೇಶನದಲ್ಲಿ, ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಜೆ. ಎಫ್‌. ರದರ್‌ಫರ್ಡರು, “ಸಹಕಾರ್ಮಿಕರಿಗೆ ಭಾಷಣ” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ಕೊಟ್ಟು ತಮ್ಮ ಕೇಳುಗರನ್ನು ಉತ್ತೇಜಿಸಿದರು. ಯೆಶಾಯ 52:7 ಮತ್ತು ಪ್ರಕಟನೆ 15:2ರ ಮೇಲೆ ಆಧಾರಿತವಾಗಿದ್ದ ಈ ಭಾಷಣವು, ಹಾಜರಿದ್ದ ಎಲ್ಲರನ್ನು ಸಾರುವ ಕೆಲಸದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿತು. ಹೀಗೆ, ‘ಅಂದವಾದ ಪಾದಗಳು’ “ಪರ್ವತ”ಗಳ ಮೇಲೆ ತೋರಿಬಂದವು. ಪ್ರಥಮವಾಗಿ ಅಭಿಷಿಕ್ತರು ಮತ್ತು ಬಳಿಕ ಅವರ ಸಂಗಾತಿಗಳಾದ “ಬೇರೆ ಕುರಿ”ಗಳು, ಯೆಹೋವನು ಅರಸನಾಗಿದ್ದಾನೆಂಬ ಸುವಾರ್ತೆಯನ್ನು ಹುರುಪಿನಿಂದ ಸಾರಲು ಹೊರಟರು. (ಯೋಹಾನ 10:16) ಆದರೆ ಯೆಹೋವನು ಅರಸನಾದದ್ದು ಹೇಗೆ? ಆತನು 1914ರಲ್ಲಿ ತನ್ನ ರಾಜತ್ವವನ್ನು ಪುನಃ ವ್ಯಕ್ತಪಡಿಸಿದನು. ಆಗ ಆತನು ತನ್ನ ಪುತ್ರನಾದ ಯೇಸು ಕ್ರಿಸ್ತನನ್ನು ಹೊಸದಾಗಿ ಸ್ಥಾಪಿಸಲ್ಪಟ್ಟ ಸ್ವರ್ಗೀಯ ರಾಜ್ಯದಲ್ಲಿ ಅರಸನಾಗಿ ನೇಮಿಸಿದನು. ಬಳಿಕ ಯೆಹೋವನು 1919ರಲ್ಲಿ ತನ್ನ ರಾಜತ್ವವನ್ನು ಇನ್ನೊಮ್ಮೆ ವ್ಯಕ್ತಪಡಿಸಿದನು. ಅದು ಮಹಾ ಬಾಬೆಲಿನಿಂದ ‘ದೇವರ ಇಸ್ರಾಯೇಲನ್ನು’ ವಿಮೋಚಿಸಿದಾಗಲೇ.​—⁠ಗಲಾತ್ಯ 6:16; ಕೀರ್ತನೆ 47:8; ಪ್ರಕಟನೆ 11:​15, 17; 19:⁠6.

‘ನಿನ್ನ ಕಾವಲುಗಾರರು ಸ್ವರವೆತ್ತಿದ್ದಾರೆ’

15. ಸಾ.ಶ.ಪೂ. 537ರಲ್ಲಿ ಸ್ವರವೆತ್ತಿ ಕೂಗುವ “ಕಾವಲುಗಾರರು” ಯಾರು?

15 “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂಬ ಘೋಷಣೆಗೆ ಯಾವ ಪ್ರತಿವರ್ತನೆಯಾದರೂ ಸಿಗುತ್ತದೆಯೆ? ಹೌದು, ಏಕೆಂದರೆ ಯೆಶಾಯನು ಬರೆಯುವುದು: “ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ; ಯೆಹೋವನು ಚೀಯೋನಿಗೆ ತಿರುಗಿ ಬರುವದನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದಾರೆ.” (ಯೆಶಾಯ 52:8) ಯೆರೂಸಲೇಮಿನಲ್ಲಿ ಸಾ.ಶ.ಪೂ. 537ರಲ್ಲಿ ಪ್ರಥಮವಾಗಿ ಹಿಂದಿರುಗುತ್ತಿದ್ದ ದೇಶಭ್ರಷ್ಟರನ್ನು ಸ್ವಾಗತಿಸಲು ನಿಜವಾದ ಕಾವಲುಗಾರರು ತಮ್ಮ ಸ್ಥಾನಗಳಲ್ಲಿ ನಿಂತಿರಲಿಲ್ಲವೆಂಬುದು ನಿಜ. ಏಕೆಂದರೆ ಆ ನಗರವು 70 ವರ್ಷಗಳ ವರೆಗೆ ಹಾಳುಬಿದ್ದಿತ್ತು. (ಯೆರೆಮೀಯ 25:​11, 12) ಆದುದರಿಂದ, ತಮ್ಮ ಸ್ವರವೆತ್ತಿ ಕೂಗುವ “ಕಾವಲುಗಾರರು,” ಚೀಯೋನಿನ ಪುನಸ್ಸ್ಥಾಪನೆಯ ಸುದ್ದಿಯನ್ನು ಮುಂದಾಗಿಯೇ ಪಡೆದಿದ್ದ ಮತ್ತು ಚೀಯೋನಿನ ಇತರ ಮಕ್ಕಳಿಗೆ ಆ ಸುದ್ದಿಯನ್ನು ಹಂಚಲು ಜವಾಬ್ದಾರರಾಗಿದ್ದ ಇಸ್ರಾಯೇಲ್ಯರಾಗಿರಬೇಕು. ಸಾ.ಶ.ಪೂ. 539ರಲ್ಲಿ ಯೆಹೋವನು ಬಾಬೆಲನ್ನು ಕೋರೆಷನ ವಶಕ್ಕೆ ಒಪ್ಪಿಸಿದ್ದನ್ನು ನೋಡಿದಾಗ, ಈ ಕಾವಲುಗಾರರ ಮನಸ್ಸಿನಲ್ಲಿ ಯೆಹೋವನು ತನ್ನ ಜನರನ್ನು ಬಿಡುಗಡೆಮಾಡುವನು ಎಂಬ ವಿಷಯದಲ್ಲಿ ಯಾವ ಸಂದೇಹವೂ ಇರುವುದಿಲ್ಲ. ತಮ್ಮ ಕರೆಗೆ ಓಗೊಡುವವರೊಂದಿಗೆ ಒಟ್ಟುಗೂಡಿ ಈ ಕಾವಲುಗಾರರು, ಇತರರು ಸುವಾರ್ತೆಯನ್ನು ಕೇಳಿಸಿಕೊಳ್ಳುವಂತೆ ಸ್ವರವೆತ್ತಿ ಹರ್ಷಧ್ವನಿಗೈಯುತ್ತಾರೆ.

16. ಕಾವಲುಗಾರರು ಯಾರನ್ನು “ಪ್ರತ್ಯಕ್ಷವಾಗಿ” ನೋಡುತ್ತಾರೆ, ಮತ್ತು ಯಾವ ಅರ್ಥದಲ್ಲಿ?

16 ಈ ಚುರುಕು ಕಾವಲುಗಾರರು ಯೆಹೋವನನ್ನು ಮುಖಾಮುಖಿಯಾಗಿ, ಅಥವಾ “ಪ್ರತ್ಯಕ್ಷವಾಗಿ” ನೋಡುತ್ತಾರೊ ಎಂಬಂತೆ ಆತನೊಂದಿಗೆ ಒಂದು ಆಪ್ತವಾದ, ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳುತ್ತಾರೆ. (ಅರಣ್ಯಕಾಂಡ 14:14) ಯೆಹೋವನೊಂದಿಗೆ ಮತ್ತು ಪರಸ್ಪರ ಅವರ ನಡುವೆಯಿರುವ ಆಪ್ತ ಸಹವಾಸವು, ಅವರ ಐಕ್ಯವನ್ನೂ ಅವರ ಸಂದೇಶದ ಹರ್ಷಕರವಾದ ಪ್ರಕೃತಿಯನ್ನೂ ಎತ್ತಿತೋರಿಸುತ್ತದೆ.​—⁠1 ಕೊರಿಂಥ 1:⁠10.

17, 18. (ಎ) ಆಧುನಿಕ ದಿನಗಳ ಕಾವಲುಗಾರ ವರ್ಗವು ಹೇಗೆ ಸ್ವರವೆತ್ತಿ ಕೂಗುತ್ತಿದೆ? (ಬಿ) ಕಾವಲುಗಾರ ವರ್ಗವು ಯಾವ ಅರ್ಥದಲ್ಲಿ ಒಟ್ಟುಸೇರಿ ಕರೆಕೊಟ್ಟಿದೆ?

17 ಆಧುನಿಕ ದಿನದ ನೆರವೇರಿಕೆಯಲ್ಲಿ, ಕಾವಲುಗಾರ ವರ್ಗವು ಅಂದರೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ದೇವರ ದೃಶ್ಯ ಸಂಸ್ಥೆಯಲ್ಲಿ ಈಗಾಗಲೇ ಇರುವವರಿಗೆ ಮಾತ್ರವಲ್ಲ, ಹೊರಗಿನವರಿಗೂ ತನ್ನ ಸ್ವರವೆತ್ತಿ ಕೂಗುತ್ತದೆ. (ಮತ್ತಾಯ 24:​45-47) 1919ರಲ್ಲಿ ಅಭಿಷಿಕ್ತರಲ್ಲಿ ಉಳಿಕೆಯವರನ್ನು ಒಟ್ಟಗೂಡಿಸುವ ಸಲುವಾಗಿ ಒಂದು ಕರೆಯು ಕೊಡಲ್ಪಟ್ಟಿತು. ಮತ್ತು 1922ರಲ್ಲಿ, “ರಾಜನನ್ನೂ ಆತನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂಬ ಕರೆಯನ್ನು ಒಹಾಯೋದ ಸೀಡರ್‌ ಪಾಯಿಂಟ್‌ ಅಧಿವೇಶನದಲ್ಲಿ ಕೊಡಲಾಯಿತು. ಮತ್ತು 1935ರಂದಿನಿಂದ ಕುರಿಸದೃಶವಾದ ಮಹಾ ಸಮೂಹವೊಂದನ್ನು ಒಟ್ಟಗೂಡಿಸುವ ಕೆಲಸಕ್ಕೆ ಗಮನವನ್ನು ಹರಿಸಲಾಗಿದೆ. (ಪ್ರಕಟನೆ 7:​9, 10) ಇತ್ತೀಚಿನ ವರುಷಗಳಲ್ಲಿ ಯೆಹೋವನ ರಾಜತ್ವದ ಕುರಿತಾದ ಪ್ರಕಟನೆಯನ್ನು ತೀವ್ರಗೊಳಿಸಲಾಗಿದೆ. ಹೇಗೆ? ಇಸವಿ 2000ದಲ್ಲಿ, ಸುಮಾರು 60 ಲಕ್ಷ ಜನರು ಯೆಹೋವನ ರಾಜತ್ವದ ಕುರಿತು 230ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಹೇಳುವುದರಲ್ಲಿ ಭಾಗವಹಿಸಿದರು. ಇದಲ್ಲದೆ, ಕಾವಲುಗಾರ ವರ್ಗದ ಅತಿ ಪ್ರಮುಖ ಸಾಧನವಾದ ಕಾವಲಿನಬುರುಜು ಪತ್ರಿಕೆಯು ಈ ಹರ್ಷಕರವಾದ ಸಂದೇಶವನ್ನು 130ಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿಸುತ್ತದೆ.

18 ಇಂತಹ ಐಕ್ಯಗೊಳಿಸುವ ಕೆಲಸದಲ್ಲಿ ಭಾಗಿಯಾಗಲು ನಮ್ರತೆ ಮತ್ತು ಸಹೋದರ ಪ್ರೇಮವು ಅಗತ್ಯ. ನಮ್ಮ ಕರೆಯು ಪರಿಣಾಮಕಾರಿಯಾಗಬೇಕಾದರೆ, ಎಲ್ಲರೂ ಒಂದೇ ಸಂದೇಶವನ್ನು ಸಾರಬೇಕಾಗುತ್ತದೆ. ಈ ಸಂದೇಶದಲ್ಲಿ ಯೆಹೋವನ ನಾಮ, ಆತನ ಪ್ರಾಯಶ್ಚಿತ್ತದ ಏರ್ಪಾಡು, ಆತನ ವಿವೇಕ, ಆತನ ಪ್ರೀತಿ ಮತ್ತು ಆತನ ರಾಜ್ಯವು ಸೇರಿರಬೇಕು. ಮತ್ತು ಭೂಮಿಯ ಸುತ್ತಲೂ ಇರುವ ಕ್ರೈಸ್ತರು ಒಗ್ಗಟ್ಟಿನಿಂದ ಈ ಕಾರ್ಯವನ್ನು ಮಾಡುವಾಗ, ಸುವಾರ್ತೆಯನ್ನು ಒಟ್ಟುಗೂಡಿ ಧ್ವನಿಸಲು ಯೆಹೋವನೊಂದಿಗೆ ಅವರಿಗಿರುವ ವೈಯಕ್ತಿಕ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

19. (ಎ) ‘ಯೆರೂಸಲೇಮಿನ ಹಾಳುಪ್ರದೇಶಗಳು’ ಉಲ್ಲಾಸಭರಿತವಾಗುವುದು ಹೇಗೆ? (ಬಿ) ಯೆಹೋವನು ಯಾವ ಅರ್ಥದಲ್ಲಿ “ತನ್ನ ದಿವ್ಯಬಾಹುವನ್ನು” ತೆರೆದು ತೋರಿಸಿದ್ದಾನೆ?

19 ದೇವಜನರು ಹರ್ಷಧ್ವನಿಗೈಯುವಾಗ, ಅವರು ವಾಸಿಸುವ ಸ್ಥಳವೂ ಉಲ್ಲಾಸಭರಿತವಾಗಿ ತೋರುತ್ತದೆ. ಪ್ರವಾದನೆಯು ಮುಂದುವರಿಸುವುದು: “ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ. ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ; ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಕಾರ್ಯವನ್ನು ನೋಡುವರು.” (ಯೆಶಾಯ 52:9, 10) ಹಾಳುಬಿದ್ದಿದ್ದ ಯೆರೂಸಲೇಮಿನ ಶೋಕತಪ್ತವಾಗಿ ತೋರುತ್ತಿದ್ದ ಸ್ಥಳಗಳು, ಬಾಬೆಲಿನಿಂದ ಹಿಂದಿರುಗಿ ಬಂದವರ ಆಗಮನದೊಂದಿಗೆ ಈಗ ಉಲ್ಲಾಸಭರಿತವಾಗಿ ತೋರುತ್ತವೆ; ಏಕೆಂದರೆ ಈಗ ಯೆಹೋವನ ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಸಾಧ್ಯವಿದೆ. (ಯೆಶಾಯ 35:​1, 2) ಇದರಲ್ಲಿ ಯೆಹೋವನ ಕೈಯಿತ್ತೆಂಬುದು ಸ್ಪಷ್ಟ. ಆತನು ತನ್ನ ಜನರನ್ನು ರಕ್ಷಿಸುವ ಸಲುವಾಗಿ ಹುರುಪಿನ ಕೆಲಸಕ್ಕೆ ಸಿದ್ಧನಾಗಿದ್ದಾನೊ ಎಂಬಂತೆ “ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ.”​—⁠ಎಜ್ರ 1:​2, 3.

20. ಆಧುನಿಕ ಸಮಯಗಳಲ್ಲಿ, ಯೆಹೋವನು ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿರುವುದರಿಂದ ಏನು ಫಲಿಸಿದೆ ಮತ್ತು ಮುಂದೇನು ಫಲಿಸಲಿದೆ?

20 ಈ “ಕಡೇ ದಿವಸಗಳಲ್ಲಿ” ತನ್ನ ಅಭಿಷಿಕ್ತ ಉಳಿಕೆಯವರನ್ನು, ಅಂದರೆ ಪ್ರಕಟನೆ ಪುಸ್ತಕದ “ಇಬ್ಬರು ಸಾಕ್ಷಿ”ಗಳನ್ನು ಪುನಶ್ಚೈತನ್ಯಗೊಳಿಸಲು ಯೆಹೋವನು ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. (2 ತಿಮೊಥೆಯ 3:1; ಪ್ರಕಟನೆ 11:​3, 7-13) ಇವರು 1919ರಿಂದ ಒಂದು ಆತ್ಮಿಕ ಪರದೈಸಿನೊಳಗೆ, ಅಂದರೆ ಒಂದು ಆತ್ಮಿಕ ಸ್ಥಿತಿಯೊಳಗೆ ತರಲ್ಪಟ್ಟಿದ್ದಾರೆ. ಈಗ ಅವರು ಇದರಲ್ಲಿ ತಮ್ಮ ಸಂಗಡಿಗರಾದ ಲಕ್ಷಾಂತರ ಮಂದಿ ಬೇರೆ ಕುರಿಗಳೊಂದಿಗೆ ಪಾಲಿಗರಾಗಿರುತ್ತಾರೆ. ಕಟ್ಟಕಡೆಗೆ, ಯೆಹೋವನು ತನ್ನ ಜನರಿಗೆ ರಕ್ಷಣೆಯನ್ನು ಒದಗಿಸಲು “ಹರ್ಮಗೆದೋನ್‌”ನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸುವನು. (ಪ್ರಕಟನೆ 16:​14, 16) ಆಗ, “ಭೂಮಿಯ ಎಲ್ಲಾ ದಿಕ್ಕಿನವರೂ ತಮ್ಮ ದೇವರ ರಕ್ಷಣಕಾರ್ಯವನ್ನು ನೋಡುವರು.”

ತುರ್ತಿನ ಆವಶ್ಯಕತೆ

21. (ಎ) “ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವ” ಜನರಿಂದ ಏನನ್ನು ಅವಶ್ಯಪಡಿಸಲಾಗುತ್ತದೆ? (ಬಿ) ಬಾಬೆಲಿನಿಂದ ಹೊರಟುಹೋಗುವ ಜನರಿಗೆ ಗಾಬರಿಪಡಲು ಕಾರಣವಿಲ್ಲವೇಕೆ?

21 ಯೆರೂಸಲೇಮಿಗೆ ಹಿಂದಿರುಗಲಿಕ್ಕಾಗಿ ಬಾಬೆಲಿನಿಂದ ಹೊರಬರುವವರು ಪೂರೈಸಬೇಕಾದ ಒಂದು ಆವಶ್ಯಕತೆಯಿದೆ. ಯೆಶಾಯನು ಬರೆಯುವುದು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ! ನೀವು ಅವಸರದಿಂದ ಹೊರಡಬೇಕಾಗಿಲ್ಲ, ಓಡಿಹೋಗಬೇಕಾಗಿಲ್ಲ; ಯೆಹೋವನು ನಿಮಗೆ ಮುಂಬಲವಾಗಿ ಮುಂದರಿಯುವನು, ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಇರುವನು.” (ಯೆಶಾಯ 52:11, 12) ಬಾಬೆಲಿನಿಂದ ಹೊರಡುವ ಇಸ್ರಾಯೇಲ್ಯರು ಸುಳ್ಳಾರಾಧನೆಯ ದೋಷವಿರುವ ಯಾವುದೇ ವಸ್ತುವನ್ನು ಬಾಬೆಲಿನಲ್ಲಿಯೇ ಬಿಟ್ಟುಹೊರಡಬೇಕು. ಅವರು ಯೆರೂಸಲೇಮಿನ ದೇವಾಲಯದಿಂದ ಬಂದಿದ್ದ ಯೆಹೋವನ ಉಪಕರಣಗಳನ್ನು ಹೊರಬೇಕಾಗಿದ್ದುದರಿಂದ ಅವರು ಶುದ್ಧರಾಗಿರಬೇಕಾಗಿತ್ತು. ಅವರು ಕೇವಲ ಬಾಹ್ಯರೀತಿಯಲ್ಲಿ ಔಪಚಾರಿಕವಾಗಿ ಅಲ್ಲ ಬದಲಾಗಿ ಪ್ರಧಾನವಾಗಿ ಅವರ ಹೃದಯಗಳಲ್ಲಿ ಶುದ್ಧರಾಗಿರಬೇಕಿತ್ತು. (2 ಅರಸುಗಳು 24:​11-13; ಎಜ್ರ 1:⁠7) ಇದಲ್ಲದೆ, ಗಾಬರಿಪಡುವ ಕಾರಣ ಅವರಿಗಿರುವುದಿಲ್ಲ ಏಕೆಂದರೆ ಯೆಹೋವನು ಅವರ ಮುಂದಿನಿಂದ ಹೋಗುತ್ತಾನೆ. ತಮ್ಮನ್ನು ಕೊಲ್ಲಲು ವೈರಿಗಳು ಬೆನ್ನಟ್ಟಿ ಬರುತ್ತಿದ್ದಾರೊ ಎಂಬಂತೆ ಅವರು ಕಕ್ಕಾಬಿಕ್ಕಿಯಾಗಿ ಓಡಬೇಕೆಂದೂ ಇರುವುದಿಲ್ಲ, ಏಕೆಂದರೆ ಇಸ್ರಾಯೇಲ್ಯರ ದೇವರು ಅವರ ಹಿಂಬಲವಾಗಿದ್ದಾನೆ.​—⁠ಎಜ್ರ 8:​21-23.

22. ಅಭಿಷಿಕ್ತ ಕ್ರೈಸ್ತರ ಮಧ್ಯೆ ಶುದ್ಧತೆಯ ಅಗತ್ಯವನ್ನು ಪೌಲನು ಹೇಗೆ ಒತ್ತಿಹೇಳುತ್ತಾನೆ?

22 ಶುದ್ಧರಾಗಿರುವುದರ ಕುರಿತಾದ ಯೆಶಾಯನ ಆ ಮಾತುಗಳು ‘ಮೇಲಣ ಯೆರೂಸಲೇಮಿನ’ ಮಕ್ಕಳ ಮೇಲೆ ಪ್ರಧಾನವಾಗಿ ನೆರವೇರುತ್ತವೆ. ಕೊರಿಂಥದ ಕ್ರೈಸ್ತರು ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗಬಾರದೆಂದು ಪೌಲನು ಸಲಹೆ ಕೊಟ್ಟಾಗ, ಅವನು ಯೆಶಾಯ 52:11ರ ಮಾತುಗಳನ್ನು ಉಲ್ಲೇಖಿಸಿದನು: “ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ.” (2 ಕೊರಿಂಥ 6:​14-17) ಬಾಬೆಲಿನಿಂದ ಸ್ವದೇಶಕ್ಕೆ ಹಿಂದಿರುಗಿದ ಇಸ್ರಾಯೇಲ್ಯರು ಮಾಡಿದಂತೆಯೇ ಕ್ರೈಸ್ತರು ಬಾಬೆಲಿಗೆ ಸಂಬಂಧಿಸಿದ ಸುಳ್ಳಾರಾಧನೆಯಿಂದ ದೂರವಿರಬೇಕಾಗಿದೆ.

23. ಯೆಹೋವನ ಸೇವಕರು ಇಂದು ತಮ್ಮನ್ನು ಯಾವ ವಿಧಗಳಲ್ಲಿ ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ?

23 ಮಹಾ ಬಾಬೆಲಿನಿಂದ 1919ರಲ್ಲಿ ಪಲಾಯನಮಾಡಿದ ಯೇಸು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿತ್ತು. ಅವರು ತಮ್ಮನ್ನು ಸುಳ್ಳಾರಾಧನೆಯ ಸಕಲ ಕುರುಹುಗಳಿಂದ ಪ್ರಗತಿಪರವಾಗಿ ಶುದ್ಧೀಕರಿಸಿಕೊಂಡರು. (ಯೆಶಾಯ 8:​19, 20; ರೋಮಾಪುರ 15:⁠4) ಅವರು ಪ್ರಗತಿಪರವಾಗಿ ನೈತಿಕ ಶುದ್ಧತೆಯ ಅರಿವನ್ನೂ ಪಡೆದುಕೊಂಡರು. ಯೆಹೋವನ ಸಾಕ್ಷಿಗಳು ಉನ್ನತ ನೈತಿಕ ಮಟ್ಟಗಳನ್ನು ಸದಾ ಎತ್ತಿಹಿಡಿದಿರುವುದಾದರೂ, 1952ರಲ್ಲಿ ಕಾವಲಿನಬುರುಜು ಪತ್ರಿಕೆಯು, ಸಭೆಯನ್ನು ಶುದ್ಧವಾಗಿಡಲಿಕ್ಕಾಗಿ ಅನೈತಿಕ ವ್ಯಕ್ತಿಗಳನ್ನು ಶಿಸ್ತಿಗೊಳಪಡಿಸುವ ಆವಶ್ಯಕತೆಯನ್ನು ಒತ್ತಿಹೇಳುವ ಲೇಖನಗಳನ್ನು ಹೊರತಂದಿತು. ಇಂತಹ ಶಿಸ್ತಿನ ಕ್ರಮವು ತಪ್ಪಿತಸ್ಥನಿಗೆ ಸಹಾಯ ನೀಡಿ, ಅವನು ಯಥಾರ್ಥವಾಗಿ ಪಶ್ಚಾತ್ತಾಪಪಡುವ ಅಗತ್ಯವಿದೆಯೆಂಬುದನ್ನು ಗ್ರಹಿಸುವಂತೆ ಮಾಡುತ್ತದೆ.​—⁠1 ಕೊರಿಂಥ 5:​6, 7, 9-13; 2 ಕೊರಿಂಥ 7:​8-10; 2 ಯೋಹಾನ 10, 11.

24. (ಎ) ಆಧುನಿಕ ಸಮಯಗಳಲ್ಲಿ ‘ಯೆಹೋವನ ಆರಾಧನೆಯ ಉಪಕರಣಗಳು’ ಯಾವುವು? (ಬಿ) ಯೆಹೋವನು ನಿರಂತರವಾಗಿ ತಮಗೆ ಮುಂಬಲವೂ ಹಿಂಬಲವೂ ಆಗಿರುವನೆಂದು ಇಂದು ಕ್ರೈಸ್ತರು ಏಕೆ ಭರವಸೆಯಿಂದಿದ್ದಾರೆ?

24 ಅಭಿಷಿಕ್ತ ಕ್ರೈಸ್ತರೂ ಅವರೊಂದಿಗೆ ಬೇರೆ ಕುರಿಗಳ ಮಹಾ ಸಮೂಹದವರೂ ಆತ್ಮಿಕವಾಗಿ ಅಶುದ್ಧವಾದ ಯಾವುದನ್ನೂ ಮುಟ್ಟದಿರಲು ದೃಢನಿಶ್ಚಯಮಾಡಿದ್ದಾರೆ. ಅವರ ಪರಿಶುದ್ಧವೂ ಸ್ವಚ್ಫವೂ ಆದ ಸ್ಥಿತಿಯು ಅವರನ್ನು “ಯೆಹೋವನ ಆರಾಧನೆಯ ಉಪಕರಣಗಳನ್ನು” ಹೊರಲು, ಅಂದರೆ ಮನೆ ಮನೆಯ ಮತ್ತು ಬೈಬಲ್‌ ಅಧ್ಯಯನದ ಶುಶ್ರೂಷೆ ಹಾಗೂ ಕ್ರೈಸ್ತ ಚಟುವಟಿಕೆಯ ಇನ್ನಿತರ ರೂಪಗಳಲ್ಲಿ ಪವಿತ್ರ ಸೇವೆಗಾಗಿ ದೇವರು ಮಾಡುವ ಅಮೂಲ್ಯವಾದ ಏರ್ಪಾಡುಗಳಲ್ಲಿ ಭಾಗವಹಿಸಲು ಯೋಗ್ಯರನ್ನಾಗಿ ಮಾಡುತ್ತದೆ. ಶುದ್ಧ ನಿಲುವನ್ನು ಕಾಪಾಡಿಕೊಳ್ಳುವ ಮೂಲಕ ಇಂದಿನ ದೇವಜನರು, ಯೆಹೋವನು ನಿರಂತರವಾಗಿ ತಮ್ಮ ಮುಂಬಲವೂ ಹಿಂಬಲವೂ ಆಗಿರುವನೆಂಬ ಭರವಸದಿಂದಿರಬಲ್ಲರು. ದೇವರ ಶುದ್ಧ ಜನರಾದ ಅವರಿಗೆ ‘ಒಟ್ಟಿಗೆ ಹರ್ಷಧ್ವನಿಗೈಯಲು’ ಪುಷ್ಕಳ ಕಾರಣಗಳಿವೆ!

[ಪಾದಟಿಪ್ಪಣಿ]

^ ಪ್ಯಾರ. 3 “ಮೇಲಣ ಯೆರೂಸಲೇಮ್‌” ಮತ್ತು ಅದರ ಭೂಮಿಯ ಅಭಿಷಿಕ್ತ ಮಕ್ಕಳ ಮಧ್ಯೆ ಇರುವ ಸಂಬಂಧದ ಹೆಚ್ಚು ವಿಸ್ತಾರವಾದ ಚರ್ಚೆಗಾಗಿ ಈ ಪುಸ್ತಕದ 15ನೆಯ ಅಧ್ಯಾಯವನ್ನು ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 183ರಲ್ಲಿರುವ ಚಿತ್ರ]

ಚೀಯೋನನ್ನು ಬಂಧನದಿಂದ ಬಿಡಿಸಲಾಗುವುದು

[ಪುಟ 186ರಲ್ಲಿರುವ ಚಿತ್ರ]

ಇಸವಿ 1919ರಿಂದ ಆರಂಭಿಸಿ, ‘ಅಂದವಾದ ಪಾದಗಳು’ “ಪರ್ವತ”ಗಳ ಮೇಲೆ ಪುನಃ ತೋರಿಬಂದಿವೆ

[ಪುಟ 189ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳು ಒಮ್ಮತದಿಂದ ಮಾತಾಡುತ್ತಾರೆ

[ಪುಟ 192ರಲ್ಲಿರುವ ಚಿತ್ರ]

“ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವ”ರು ನೈತಿಕವಾಗಿಯೂ ಆತ್ಮಿಕವಾಗಿಯೂ ಶುದ್ಧರಾಗಿರಬೇಕು