ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನಾಂಗಗಳಿಗೆ ಬೆಳಕು

ಜನಾಂಗಗಳಿಗೆ ಬೆಳಕು

ಅಧ್ಯಾಯ ಇಪ್ಪತ್ತೆಂಟು

ಜನಾಂಗಗಳಿಗೆ ಬೆಳಕು

ಯೆಶಾಯ 66:15-24

1, 2. ಬೆಳಕು ಅತ್ಯಾವಶ್ಯಕವಾದದ್ದಾಗಿದೆ ಏಕೆ, ಮತ್ತು ಯಾವ ರೀತಿಯ ಕತ್ತಲೆಯು ಇಂದು ಭೂಮಿಯನ್ನು ಆವರಿಸಿದೆ?

ಯೆಹೋವನು ಬೆಳಕಿನ ಮೂಲನೂ “ಹಗಲಿನಲ್ಲಿ ಸೂರ್ಯನನ್ನು, ರಾತ್ರಿಯಲ್ಲಿ ಚಂದ್ರನಕ್ಷತ್ರಗಳ ಕಟ್ಟಳೆಗಳನ್ನು ಪ್ರಕಾಶಕ್ಕಾಗಿ ನೇಮಿಸುವಾತನೂ” ಆಗಿದ್ದಾನೆ. (ಯೆರೆಮೀಯ 31:35) ಬೆಳಕು ಜೀವಕ್ಕೆ ಅಗತ್ಯವಾಗಿರುವುದರಿಂದ, ಕೇವಲ ಈ ಆಧಾರದ ಮೇರೆಗೆ ಆತನು ಜೀವದ ಮೂಲನೆಂದು ಒಪ್ಪಿಕೊಳ್ಳಬೇಕು. ಈ ಭೂಮಿಗೆ ಸೂರ್ಯನ ಶಾಖ ಮತ್ತು ಬೆಳಕು ಸತತವಾಗಿ ಸಿಗದಿರುತ್ತಿದ್ದಲ್ಲಿ, ನಮಗೆ ತಿಳಿದಿರುವ ರೀತಿಯ ಜೀವನವು ಅಸಾಧ್ಯವಾಗಿರುತ್ತಿತ್ತು. ನಮ್ಮ ಭೂಗ್ರಹವು ವಾಸಕ್ಕೆ ಅಯೋಗ್ಯವಾಗಿರುತ್ತಿತ್ತು.

2 ಆದಕಾರಣ, ಯೆಹೋವನು ನಮ್ಮ ದಿನಗಳನ್ನು ಮುನ್ನೋಡುತ್ತ, ಬೆಳಕಿನ ಸಮಯವಲ್ಲ ಬದಲಾಗಿ ಕತ್ತಲೆಯ ಸಮಯವು ಬರುತ್ತದೆಂದು ಮುಂತಿಳಿಸಿದ್ದು ಬಹಳ ಚಿಂತೆಯನ್ನುಂಟುಮಾಡುವ ವಿಷಯ. ಪ್ರೇರಿತನಾಗಿ ಯೆಶಾಯನು, “ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ” ಎಂದು ಬರೆದನು. (ಯೆಶಾಯ 60:⁠2) ಈ ಮಾತುಗಳು ನೈಸರ್ಗಿಕ ಕತ್ತಲೆಯಲ್ಲ, ಬದಲಿಗೆ ಆತ್ಮಿಕ ಕತ್ತಲೆಯ ಕುರಿತಾಗಿದ್ದರೂ, ಅವುಗಳ ಗಂಭೀರವಾದ ಅರ್ಥವನ್ನು ಕಡೆಗಣಿಸಬಾರದಾಗಿದೆ. ಸೂರ್ಯನ ಬೆಳಕು ದೊರೆಯದವರಿಗೆ ಆಗುವಂತೆಯೇ, ಆತ್ಮಿಕ ಬೆಳಕು ಇಲ್ಲದವರಿಗೂ ಅಂತಿಮವಾಗಿ ಜೀವದಿಂದಿರುವುದು ಅಸಾಧ್ಯವಾಗುತ್ತದೆ.

3. ಈ ಕತ್ತಲೆಯ ಸಮಯಗಳಲ್ಲಿ ನಾವು ಬೆಳಕಿಗಾಗಿ ಎಲ್ಲಿಗೆ ತಿರುಗಬೇಕು?

3 ಈ ಅಂಧಕಾರದ ದಿನಗಳಲ್ಲಿ, ಯೆಹೋವನು ನಮಗೆ ಲಭ್ಯಗೊಳಿಸುವ ಆತ್ಮಿಕ ಬೆಳಕನ್ನು ಅಸಡ್ಡೆಮಾಡಿ ಜೀವಿಸಲು ನಾವು ಅಸಮರ್ಥರಾಗಿದ್ದೇವೆ. ನಮ್ಮ ಮಾರ್ಗವನ್ನು ಬೆಳಗಿಸಲು ನಾವು ದೇವರ ವಾಕ್ಯದ ಕಡೆಗೆ ನೋಡುವುದು, ಸಾಧ್ಯವಿರುವಲ್ಲಿ ಅದನ್ನು ದಿನಾಲೂ ಓದುವುದು ಅತ್ಯಗತ್ಯವಾದದ್ದಾಗಿದೆ. (ಕೀರ್ತನೆ 119:105) “ನೀತಿವಂತರ ಮಾರ್ಗ”ದಲ್ಲಿ ಉಳಿಯುವಂತೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಕ್ರೈಸ್ತ ಕೂಟಗಳು ನಮಗೆ ಸಂದರ್ಭಗಳನ್ನೊದಗಿಸುತ್ತವೆ. (ಜ್ಞಾನೋಕ್ತಿ 4:18; ಇಬ್ರಿಯ 10:​23-25) ಶ್ರದ್ಧಾಪೂರ್ವಕವಾದ ಬೈಬಲ್‌ ಅಧ್ಯಯನ ಮತ್ತು ಹಿತಕರವಾದ ಕ್ರಿಸ್ತೀಯ ಸಹವಾಸವು, “ಯೆಹೋವನ” ಮಹಾ “ಸಿಟ್ಟಿನ ದಿನದಲ್ಲಿ” ಅಂತ್ಯಗೊಳ್ಳುವ ಈ “ಕಡೇ ದಿವಸಗಳ” ಅಂಧಕಾರದಲ್ಲಿ ನಾವು ಕಬಳಿಸಲ್ಪಡದಂತೆ ಸಹಾಯಮಾಡುತ್ತದೆ. (2 ತಿಮೊಥೆಯ 3:1; ಚೆಫನ್ಯ 2:⁠3) ಆ ದಿನವು ವೇಗವಾಗಿ ಸಮೀಪಿಸುತ್ತಿದೆ! ಪುರಾತನ ಯೆರೂಸಲೇಮಿನ ನಿವಾಸಿಗಳ ಮೇಲೆ ಆಗಿನ ದಿನವು ಬಂದಷ್ಟೇ ನಿಶ್ಚಯವಾಗಿ ಈ ದಿನವೂ ಬರುವುದು.

ಯೆಹೋವನು “ನ್ಯಾಯತೀರಿಸುವನು”

4, 5. (ಎ) ಯೆಹೋವನು ಯೆರೂಸಲೇಮಿನ ವಿರುದ್ಧ ಯಾವ ವಿಧದಲ್ಲಿ ಬರುತ್ತಾನೆ? (ಬಿ) ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನದಲ್ಲಿ ಕೇವಲ ಚಿಕ್ಕ ಸಂಖ್ಯೆಯೇ ಬದುಕಿ ಉಳಿಯುವುದೆಂದು ನಾವೇಕೆ ತೀರ್ಮಾನಿಸಬಹುದು? (ಪಾದಟಿಪ್ಪಣಿಯನ್ನು ನೋಡಿ.)

4 ಯೆಶಾಯನ ರೋಮಾಂಚಕ ಪ್ರವಾದನೆಯ ಅಂತ್ಯದ ವಚನಗಳಲ್ಲಿ, ಯೆಹೋವನು ತನ್ನ ಸಿಟ್ಟಿನ ದಿನಕ್ಕೆ ನಡೆಸುವ ಘಟನೆಗಳನ್ನು ವರ್ಣನಾತ್ಮಕವಾಗಿ ಚಿತ್ರಿಸುತ್ತಾನೆ. ನಾವು ಓದುವುದು: “ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು; ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿಜ್ವಾಲೆಯಿಂದ ಖಂಡಿಸುವನು. ಯೆಹೋವನು ಅಗ್ನಿಯಿಂದಲೂ ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು; ಆಗ ಆತನಿಂದ ಹತರಾಗುವವರು ಬಹುಜನ.”​—ಯೆಶಾಯ 66:15, 16.

5 ಈ ಮಾತುಗಳು ಯೆಶಾಯನ ಸಮಕಾಲೀನರಿಗೆ ಅವರು ತಮ್ಮ ಸ್ಥಿತಿಯ ಗಂಭೀರತೆಯನ್ನು ಗ್ರಹಿಸುವಂತೆ ಸಹಾಯಮಾಡಬೇಕಾಗಿತ್ತು. ಯೆಹೋವನ ವಧಕಾರರಾದ ಬಾಬೆಲಿನವರು ಯೆರೂಸಲೇಮಿಗೆದುರಾಗಿ ತಮ್ಮ ರಥಗಳ ದೂಳನ್ನು ಬಿರುಗಾಳಿಯಂತೆ ಎಬ್ಬಿಸುತ್ತ ಬರುವ ಸಮಯವು ಹತ್ತಿರವಾಗಿತ್ತು. ಅದೆಷ್ಟು ಭಯಾನಕ ದೃಶ್ಯವಾಗಿರುವುದು! ಅಪನಂಬಿಗಸ್ತ ಯೆಹೂದಿ “ನರಜನ್ಮದವರಿಗೆ” ತನ್ನ ಅಗ್ನಿಮಯ ತೀರ್ಪುಗಳನ್ನು ವಿಧಿಸುವಂತೆ ಯೆಹೋವನು ಈ ಆಕ್ರಮಣಕಾರರನ್ನು ಉಪಯೋಗಿಸುವನು. ಯೆಹೋವನು ತಾನೇ ತನ್ನ ಜನರ ವಿರುದ್ಧವಾಗಿ ಹೋರಾಡುತ್ತಾನೊ ಎಂಬಂತೆ ಇದಿರುವುದು. ಆತನ ‘ರೌದ್ರಾವೇಶವು’ ಹಿಂದಿರುಗದು. ಅನೇಕ ಯೆಹೂದ್ಯರು ಯೆಹೋವನಿಂದ “ಹತರಾಗುವರು.” ಸಾ.ಶ.ಪೂ. 607ರಲ್ಲಿ ಈ ಪ್ರವಾದನೆಯು ನೆರವೇರಿತು. *

6. ಯೆಹೂದದಲ್ಲಿ ಯಾವ ನಿಂದಾರ್ಹ ಆಚಾರಗಳು ನಡೆಯುತ್ತವೆ?

6 ಯೆಹೋವನು ತನ್ನ ಜನರಿಗೆ ಹೀಗೆ ‘ನ್ಯಾಯತೀರಿಸುವುದು’ ಸಮಂಜಸವೊ? ನಿಶ್ಚಯವಾಗಿ! ಯೆಶಾಯನ ಪುಸ್ತಕದ ನಮ್ಮ ಚರ್ಚೆಯಲ್ಲಿ ನಾವು ಅನೇಕ ಬಾರಿ, ಯೆಹೂದ್ಯರು ತಾವು ಯೆಹೋವನಿಗೆ ಸಮರ್ಪಿತರೆಂದು ಹೇಳಿಕೊಂಡರೂ ಅವರು ಮಿಥ್ಯಾರಾಧನೆಯಲ್ಲಿ ಮುಳುಗಿದ್ದರೆಂಬುದನ್ನು ನೋಡಿದ್ದೇವೆ. ಮತ್ತು ಯೆಹೋವನು ಅವರ ಕೃತ್ಯಗಳ ವಿಷಯದಲ್ಲಿ ಕಣ್ಮುಚ್ಚಿಕೊಂಡು ಕುಳಿತಿಲ್ಲ. ಈಗ ಪುನಃ ಈ ಮುಂದಿನ ಪ್ರವಾದನೆಯ ಮಾತುಗಳಲ್ಲಿಯೂ ನಾವು ಅದನ್ನೇ ನೋಡುತ್ತೇವೆ: “ತೋಟಗಳೊಳಗೆ ಪ್ರವೇಶಿಸುವದಕ್ಕೆ ತಮ್ಮ ಮಧ್ಯದಲ್ಲಿನ ಒಬ್ಬನ ಅಂಗಾಭಿನಯವನ್ನು ಅನುಸರಿಸಿ ತಮ್ಮನ್ನು ಶುದ್ಧೀಕರಿಸಿ ಪವಿತ್ರಮಾಡಿಕೊಂಡು ಹಂದಿಯ ಮಾಂಸವನ್ನೂ ಅಶುದ್ಧಪದಾರ್ಥವನ್ನೂ ಇಲಿಯನ್ನೂ ತಿನ್ನುವವರು ಒಟ್ಟಿಗೆ ಕೊನೆಗಾಣುವರು ಎಂದು ಯೆಹೋವನು ನುಡಿಯುತ್ತಾನೆ.” (ಯೆಶಾಯ 66:17) ಆ ಯೆಹೂದ್ಯರು ಸತ್ಯಾರಾಧನೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಲಿಕ್ಕಾಗಿ “ತಮ್ಮನ್ನು ಶುದ್ಧೀಕರಿಸಿ ಪವಿತ್ರ”ರನ್ನಾಗಿ ಮಾಡಿಕೊಳ್ಳುತ್ತಿದ್ದಾರೋ? ಇಲ್ಲವೆಂಬುದು ಸ್ಪಷ್ಟ. ಬದಲಿಗೆ ಅವರು ವಿಶೇಷ ತೋಟಗಳಲ್ಲಿ ವಿಧರ್ಮಿ ಶುದ್ಧೀಕರಣ ಸಂಸ್ಕಾರಗಳಲ್ಲಿ ತೊಡಗಿದ್ದಾರೆ. ಆ ಬಳಿಕ ಅವರು ಅತ್ಯಾಶೆಯಿಂದ ಮೋಶೆಯ ಧರ್ಮಶಾಸ್ತ್ರದಲ್ಲಿ ಅಶುದ್ಧವೆಂದು ಹೇಳಲಾದ ಹಂದಿ ಮತ್ತು ಇತರ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ.​—⁠ಯಾಜಕಕಾಂಡ 11:​7, 21-23.

7. ಕ್ರೈಸ್ತಪ್ರಪಂಚವು ವಿಗ್ರಹಾರಾಧಕ ಯೆಹೂದವನ್ನು ಹೋಲುವುದು ಹೇಗೆ?

7 ಒಬ್ಬನೇ ಸತ್ಯ ದೇವರೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿರುವ ಜನಾಂಗವೊಂದು ಎಂತಹ ಅಸಹ್ಯಕರವಾದ ಸನ್ನಿವೇಶದಲ್ಲಿದೆ! ಆದರೆ ತುಸು ಯೋಚಿಸಿ: ಅಷ್ಟೇ ಅಸಹ್ಯಕರವಾದ ಸನ್ನಿವೇಶವು ಇಂದು ಕ್ರೈಸ್ತಪ್ರಪಂಚದ ಧರ್ಮಗಳಲ್ಲಿಯೂ ಇದೆ. ಇವರೂ ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುತ್ತಾರೆ, ಮತ್ತು ಅವರ ಧಾರ್ಮಿಕ ಮುಖಂಡರಲ್ಲಿ ಅನೇಕರು ಧರ್ಮಶ್ರದ್ಧೆಯುಳ್ಳವರಂತೆ ನಟಿಸುತ್ತಾರೆ. ಆದರೆ ಅವರು ತಮ್ಮನ್ನು ವಿಧರ್ಮಿ ಬೋಧನೆಗಳಿಂದಲೂ ಸಂಪ್ರದಾಯಗಳಿಂದಲೂ ಮಲಿನಪಡಿಸಿಕೊಂಡು, ತಾವು ಆತ್ಮಿಕ ಕತ್ತಲೆಯಲ್ಲಿದ್ದೇವೆಂಬುದನ್ನು ರುಜುಪಡಿಸುತ್ತಾರೆ. ಅದು ಎಷ್ಟು ಗಾಢವಾದ ಅಂಧಕಾರವಾಗಿದೆ!​—⁠ಮತ್ತಾಯ 6:23; ಯೋಹಾನ 3:​19, 20.

‘ಅವರು ಬಂದು ನನ್ನ ಮಹಿಮೆಯನ್ನು ನೋಡಲೇಬೇಕು’

8. (ಎ) ಯೆಹೂದಕ್ಕೂ ಕ್ರೈಸ್ತಪ್ರಪಂಚಕ್ಕೂ ಏನು ಸಂಭವಿಸುವುದು? (ಬಿ) ಜನಾಂಗಗಳು ‘ಯೆಹೋವನ ಮಹಿಮೆಯನ್ನು ನೋಡುವುದು’ ಯಾವ ಅರ್ಥದಲ್ಲಿ?

8 ಕ್ರೈಸ್ತಪ್ರಪಂಚದ ನಿಂದಾರ್ಹ ವರ್ತನೆಗಳನ್ನೂ ಸುಳ್ಳು ಬೋಧನೆಗಳನ್ನೂ ಯೆಹೋವನು ಗಮನಿಸುತ್ತಾನೊ? ಯೆಶಾಯನು ದಾಖಲಿಸಿದ ಈ ಕೆಳಗಿನ ಮಾತುಗಳನ್ನು ಓದಿರಿ ಮತ್ತು ನಿಮ್ಮ ತೀರ್ಮಾನ ಏನೆಂದು ನೋಡಿರಿ: “ಅವರ ಕೃತ್ಯಗಳಿಗೂ ಆಲೋಚನೆಗಳಿಗೂ [ತಕ್ಕದ್ದನ್ನು ಮಾಡುವೆನು]; ನಾನು ಇನ್ನು ಮುಂದೆ ಸಮಸ್ತಜನಾಂಗಗಳನ್ನೂ ಸಕಲಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು.” (ಯೆಶಾಯ 66:18) ಯೆಹೋವನಿಗೆ ತನ್ನ ಜನರೆಂದು ಹೇಳಿಕೊಳ್ಳುವವರ ಕೆಲಸಗಳ ಅರಿವು ಮಾತ್ರವಲ್ಲ, ಅವರ ಆಲೋಚನೆಗಳ ಅರಿವೂ ಇದ್ದು ಅವುಗಳ ವಿಷಯದಲ್ಲಿ ನ್ಯಾಯತೀರಿಸಲು ಆತನು ಸಿದ್ಧನಾಗಿರುತ್ತಾನೆ. ಯೆಹೂದವು ಯೆಹೋವನಲ್ಲಿ ನಂಬಿಕೆಯಿಡುವುದಾಗಿ ಹೇಳಿಕೊಂಡರೂ, ಆಕೆಯ ವಿಗ್ರಹಾರಾಧನೆಯ ಕೆಲಸಗಳು ಮತ್ತು ವಿಧರ್ಮಿ ಆಚಾರಗಳು ಆ ವಾದವನ್ನು ಸುಳ್ಳಾಗಿಸುತ್ತವೆ. ಆಕೆಯ ಪ್ರಜೆಗಳು ವಿಧರ್ಮಿ ಸಂಸ್ಕಾರಗಳಿಗನುಸಾರ ತಮ್ಮನ್ನು “ಶುದ್ಧೀಕರಿಸಿ”ಕೊಳ್ಳುವುದು ವ್ಯರ್ಥವಾಗಿದೆ. ಆ ಜನಾಂಗವು ಧ್ವಂಸಗೊಳ್ಳಲಿದೆ ಮತ್ತು ಇದು ಸಂಭವಿಸುವಾಗ, ಅದು ಆಕೆಯ ವಿಗ್ರಹಾರಾಧಕ ನೆರೆಯ ರಾಷ್ಟ್ರಗಳ ಕಣ್ಮುಂದೆಯೇ ನಡೆಯುವುದು. ಅವರು ‘ಯೆಹೋವನ ಮಹಿಮೆಯನ್ನು ನೋಡುವರು,’ ಅಂದರೆ ಈ ಘಟನೆಗಳನ್ನು ಕಣ್ಣಾರೆ ನೋಡಿ ಯೆಹೋವನ ಮಾತುಗಳು ನಿಜವಾಗಿವೆಯೆಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಡುವರು. ಇದೆಲ್ಲ ಕ್ರೈಸ್ತಪ್ರಪಂಚಕ್ಕೆ ಹೇಗೆ ಅನ್ವಯಿಸುತ್ತದೆ? ಆಕೆ ತನ್ನ ಅಂತ್ಯವನ್ನು ಅನುಭವಿಸುತ್ತಿರುವಾಗ, ಆಕೆಯ ಮಾಜಿ ಸ್ನೇಹಿತರು ಮತ್ತು ವ್ಯಾಪಾರೀ ಜೊತೆಗಾರರು, ಯೆಹೋವನ ಮಾತು ನೆರವೇರುತ್ತಿರುವುದನ್ನು ಸಹಾಯಶೂನ್ಯರಾಗಿ ನಿಂತು ನೋಡುವಂತೆ ನಿರ್ಬಂಧಿಸಲ್ಪಡುವರು.​—⁠ಯೆರೆಮೀಯ 25:​31-33; ಪ್ರಕಟನೆ 17:​15-18; 18:​9-19.

9. ಯೆಹೋವನು ಯಾವ ಸುವಾರ್ತೆಯನ್ನು ಪ್ರಕಟಿಸುತ್ತಾನೆ?

9 ಸಾ.ಶ.ಪೂ. 607ರಲ್ಲಿ ನಡೆದ ಯೆರೂಸಲೇಮಿನ ನಾಶನದ ಅರ್ಥವು ಯೆಹೋವನಿಗೆ ಭೂಮಿಯ ಮೇಲೆ ಇನ್ನು ಮುಂದೆ ಸಾಕ್ಷಿಗಳು ಇರುವುದಿಲ್ಲವೆಂದೊ? ಇಲ್ಲ. ದಾನಿಯೇಲ ಮತ್ತು ಅವನ ಮೂವರು ಜೊತೆಗಾರರಂತಹ ಎದ್ದುಕಾಣುವ ಸಮಗ್ರತೆ ಪಾಲಕರು ಬಾಬೆಲಿನಲ್ಲಿ ದೇಶಭ್ರಷ್ಟರಾದರೂ, ಅವರು ಯೆಹೋವನನ್ನು ಸೇವಿಸುತ್ತ ಮುಂದುವರಿಯುವರು. (ದಾನಿಯೇಲ 1:​6, 7) ಹೌದು, ಯೆಹೋವನ ನಂಬಿಗಸ್ತ ಸಾಕ್ಷಿಗಳ ಪಂಕ್ತಿಯು ಶಿಥಿಲವಾಗದೆ ಉಳಿಯಲಿತ್ತು ಮತ್ತು 70 ವರ್ಷಗಳ ಅಂತ್ಯದಲ್ಲಿ ನಂಬಿಗಸ್ತ ಸ್ತ್ರೀಪುರುಷರು ಬಾಬೆಲನ್ನು ಬಿಟ್ಟು ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸಲಿಕ್ಕಾಗಿ ಯೆಹೂದಕ್ಕೆ ಹಿಂದೆರಳಲಿದ್ದರು. ಮುಂದಕ್ಕೆ ಯೆಹೋವನು ಇದನ್ನೇ ಸೂಚಿಸುತ್ತಾನೆ: “ಅವರ ಮಧ್ಯದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವೆನು; ನನ್ನ ಸುದ್ದಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ನೋಡದೆಯೂ ಇರುವ ತಾರ್ಷೀಷ್‌, ಪೂಲ್‌, ಬಿಲ್ಲುಗಾರರಿಗೆ ಪ್ರಸಿದ್ಧಸ್ಥಳವಾದ ಲೂದ್‌, ತೂಬಲ್‌, ಯಾವಾನ್‌ ಎಂಬ ಜನಾಂಗಗಳು ಮತ್ತು ದೂರವಾದ ದ್ವೀಪನಿವಾಸಿಗಳು ಇವರೆಲ್ಲರ ಬಳಿಗೆ ಹತಶೇಷರನ್ನು ಕಳುಹಿಸುವೆನು; ಇವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.”​—ಯೆಶಾಯ 66:⁠19.

10. (ಎ) ಬಾಬೆಲಿನಿಂದ ವಿಮೋಚಿತರಾದ ನಂಬಿಗಸ್ತ ಯೆಹೂದ್ಯರು ಯಾವ ಅರ್ಥದಲ್ಲಿ ಗುರುತಾಗಿ ಕಾರ್ಯನಡಿಸುತ್ತಾರೆ? (ಬಿ) ಇಂದು ಯಾರು ಗುರುತಾಗಿ ಕಾರ್ಯನಡಿಸುತ್ತಾರೆ?

10 ಸಾ.ಶ.ಪೂ. 537ರಲ್ಲಿ ಯೆರೂಸಲೇಮಿಗೆ ಹಿಂದಿರುಗುವ ನಂಬಿಗಸ್ತ ಸ್ತ್ರೀಪುರುಷರ ಸಮೂಹವು, ಬೆರಗನ್ನುಂಟುಮಾಡುವ ಒಂದು ಸೂಚನೆಯಾಗಿ, ಅಂದರೆ ಯೆಹೋವನು ತನ್ನ ಜನರನ್ನು ವಿಮೋಚಿಸಿದ್ದಾನೆಂಬುದರ ರುಜುವಾತಾಗಿ ಕಾರ್ಯನಡಿಸುವುದು. ಬಂದಿಗಳಾದ ಯೆಹೂದ್ಯರು ಯಾವುದೊ ಒಂದು ದಿನ ಯೆಹೋವನ ದೇವಾಲಯದಲ್ಲಿ ಶುದ್ಧಾರಾಧನೆಯನ್ನು ನಡೆಸಲು ವಿಮೋಚಿತರಾಗುವರೆಂದು ಯಾರು ತಾನೇ ಕನಸು ಕಂಡಿದ್ದರು? ಇದಕ್ಕೆ ಹೋಲಿಕೆಯಾಗಿ ಒಂದನೆಯ ಶತಮಾನದಲ್ಲಿ, “ಗುರುತುಗಳಾಗಿಯೂ ಅದ್ಭುತಗಳಾಗಿಯೂ” ಇದ್ದವರು ಅಭಿಷಿಕ್ತ ಕ್ರೈಸ್ತರಾಗಿದ್ದರು ಮತ್ತು ಇವರ ಬಳಿಗೆ ಯೆಹೋವನನ್ನು ಸೇವಿಸಲು ಬಯಸಿದ ದೀನರು ಗುಂಪುಕಟ್ಟಿಕೊಂಡು ಬಂದರು. (ಯೆಶಾಯ 8:18; ಇಬ್ರಿಯ 2:13) ಇಂದು ತಮ್ಮ ಪುನಸ್ಸ್ಥಾಪಿತ ದೇಶದಲ್ಲಿ ಸಮೃದ್ಧರಾಗುತ್ತಿರುವ ಅಭಿಷಿಕ್ತ ಕ್ರೈಸ್ತರು, ಭೂಮಿಯ ಮೇಲೆ ಆಶ್ಚರ್ಯಗೊಳಿಸುವ ಗುರುತಾಗಿ ಕಾರ್ಯನಡೆಸುತ್ತಾರೆ. (ಯೆಶಾಯ 66:⁠8) ಇವರು ಯೆಹೋವನ ಆತ್ಮದ ಶಕ್ತಿಯ ಸಜೀವ ಸಾಕ್ಷ್ಯವಾಗಿದ್ದು, ಯಾರ ಹೃದಯಗಳು ಯೆಹೋವನನ್ನು ಸೇವಿಸುವಂತೆ ಅವರನ್ನು ಪ್ರೇರಿಸುತ್ತವೋ ಅಂತಹ ದೀನರನ್ನು ಆಕರ್ಷಿಸುತ್ತಾರೆ.

11. (ಎ) ಪುನಸ್ಸ್ಥಾಪನೆಯ ಬಳಿಕ ಜನಾಂಗಗಳವರು ಯೆಹೋವನ ಕುರಿತು ಹೇಗೆ ಕಲಿಯುವರು? (ಬಿ) ಜೆಕರ್ಯ 8:23 ಆರಂಭದಲ್ಲಿ ಹೇಗೆ ನೆರವೇರಿತು?

11 ಆದರೆ, ಸಾ.ಶ.ಪೂ. 537ರ ಪುನಸ್ಸ್ಥಾಪನೆಯ ಬಳಿಕ ಯೆಹೋವನ ಸುದ್ದಿಯನ್ನೇ ಕೇಳಿರದಂಥ ಜನಾಂಗಗಳ ಜನರಿಗೆ ಆತನ ಪರಿಚಯವಾಗುವುದು ಹೇಗೆ? ಬಾಬೆಲಿನ ಸೆರೆವಾಸದ ಅಂತ್ಯದಲ್ಲಿ ಎಲ್ಲ ನಂಬಿಗಸ್ತ ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಿ ಹೋಗುವುದಿಲ್ಲ. ದಾನಿಯೇಲನಂತಹ ಕೆಲವರು ಬಾಬೆಲಿನಲ್ಲಿ ಉಳಿಯುತ್ತಾರೆ. ಇತರರು ಭೂಮಿಯ ನಾಲ್ಕೂ ದಿಕ್ಕುಗಳಿಗೆ ಚದರಿಹೋಗುತ್ತಾರೆ. ಸಾ.ಶ.ಪೂ. ಐದನೆಯ ಶತಮಾನದೊಳಗೆ, ಯೆಹೂದ್ಯರು ಪಾರಸಿಯ ಸಾಮ್ರಾಜ್ಯದಾದ್ಯಂತ ಜೀವಿಸುತ್ತಿದ್ದರು. (ಎಸ್ತೇರಳು 1:1; 3:⁠8) ಅವರಲ್ಲಿ ಕೆಲವರು ತಮ್ಮ ವಿಧರ್ಮಿ ನೆರೆಯವರಿಗೆ ಯೆಹೋವನ ಕುರಿತು ಹೇಳಿದರೆಂಬುದರಲ್ಲಿ ಸಂದೇಹವಿಲ್ಲ, ಏಕೆಂದರೆ ಆ ಜನಾಂಗಗಳವರಲ್ಲಿ ಅನೇಕರು ಯೆಹೂದಿ ಮತಾವಲಂಬಿಗಳಾದರು. ಒಂದನೆಯ ಶತಮಾನದಲ್ಲಿ ಕ್ರೈಸ್ತ ಶಿಷ್ಯ ಫಿಲಿಪ್ಪನು ಯಾರಿಗೆ ಸಾರಿದನೋ ಆ ಐಥಿಯೋಪ್ಯದ ಕಂಚುಕಿಯು ಇಂತಹವನಾಗಿದ್ದನು ಎಂಬುದು ನಿಶ್ಚಯ. (ಅ. ಕೃತ್ಯಗಳು 8:​26-40) ಇದೆಲ್ಲವೂ ಪ್ರವಾದಿಯಾದ ಜೆಕರ್ಯನ ಈ ಕೆಳಗಿನ ಮಾತುಗಳ ಆರಂಭದ ನೆರವೇರಿಕೆಯಾಗಿ ಸಂಭವಿಸಿತು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು​—⁠ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23) ಹೌದು, ಯೆಹೋವನು ನಿಶ್ಚಯವಾಗಿಯೂ ಜನಾಂಗಗಳಿಗೆ ಬೆಳಕನ್ನು ಕಳುಹಿಸಿದನು!​—⁠ಕೀರ್ತನೆ 43:⁠3.

“ಯೆಹೋವನಿಗೆ ಕೊಡುಗೆ”ಯನ್ನು ತರುವುದು

12, 13. ಸಾ.ಶ.ಪೂ. 537ರಿಂದ ಆರಂಭಿಸಿ, ‘ಸಹೋದರರು’ ಯೆರೂಸಲೇಮಿಗೆ ತರಲ್ಪಡುವುದು ಹೇಗೆ?

12 ಯೆರೂಸಲೇಮ್‌ ಪುನಃ ಕಟ್ಟಲ್ಪಟ್ಟ ಬಳಿಕ, ತಮ್ಮ ಸ್ವದೇಶದಿಂದ ಬಹು ದೂರ ಚದರಿಹೋಗಿರುವ ಯೆಹೂದ್ಯರು, ಪುನಃ ಸ್ಥಾಪಿಸಲ್ಪಟ್ಟಿರುವ ಯಾಜಕತ್ವವುಳ್ಳ ಆ ನಗರವನ್ನು ಶುದ್ಧಾರಾಧನೆಯ ಕೇಂದ್ರವಾಗಿ ನೋಡುವರು. ವಾರ್ಷಿಕ ಉತ್ಸವಗಳಿಗೆ ಹಾಜರಾಗಲಿಕ್ಕಾಗಿ ಅನೇಕರು ದೂರದಿಂದ ಪ್ರಯಾಣ ಬೆಳೆಸುತ್ತ ಬರುವರು. ಪ್ರೇರಿತನಾಗಿ ಯೆಶಾಯನು ಬರೆಯುವುದು: “ಇಸ್ರಾಯೇಲ್ಯರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಾಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ [“ಯೆಹೋವನಿಗೆ ಕೊಡುಗೆಯಾಗಿ,” NW] ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರತರುವರು. ಇದಲ್ಲದೆ ಇವರಲ್ಲಿ ಯಾಜಕರೂ ಲೇವಿಯರೂ ಆಗತಕ್ಕವರನ್ನು ಆರಿಸಿಕೊಳ್ಳುವೆನು ಎಂದು ಯೆಹೋವನು ಹೇಳುತ್ತಾನೆ.”​—ಯೆಶಾಯ 66:20, 21.

13 ಆ ‘ಸಮಸ್ತ ಜನಾಂಗಗಳ ಸಹೋದರರಲ್ಲಿ’ ಕೆಲವರು, ಪಂಚಾಶತ್ತಮ ದಿನದಲ್ಲಿ ಯೇಸುವಿನ ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಅಲ್ಲಿದ್ದರು. “ಆಕಾಶದ ಕೆಳಗಿರುವ ಎಲ್ಲಾ ದೇಶದವರೊಳಗಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು” ಎಂದು ವೃತ್ತಾಂತವು ತಿಳಿಸುತ್ತದೆ. (ಅ. ಕೃತ್ಯಗಳು 2:5) ಅವರು ಯೆಹೂದಿ ಪದ್ಧತಿಯಂತೆ ಆರಾಧಿಸಲು ಯೆರೂಸಲೇಮಿಗೆ ಬಂದಿದ್ದರು ಮತ್ತು ಅವರು ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೇಳಿಸಿಕೊಂಡಾಗ, ಅನೇಕರು ಅವನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಹೊಂದಿದರು.

14, 15. (ಎ) ಒಂದನೆಯ ಲೋಕ ಯುದ್ಧಾನಂತರ ಅಭಿಷಿಕ್ತ ಕ್ರೈಸ್ತರು ಹೆಚ್ಚು ಮಂದಿ ಆತ್ಮಿಕ ‘ಸಹೋದರರನ್ನು’ ಒಟ್ಟುಗೂಡಿಸಿದ್ದು ಹೇಗೆ, ಮತ್ತು ಇವರು ಯೆಹೋವನಿಗೆ “ಶುದ್ಧಪಾತ್ರೆಯಲ್ಲಿ ಕೊಡುಗೆಯಾಗಿ” ತರಲ್ಪಟ್ಟದ್ದು ಹೇಗೆ? (ಬಿ) ಯೆಹೋವನು ‘ಯಾಜಕರನ್ನು ಆರಿಸಿಕೊಂಡದ್ದು’ ಹೇಗೆ? (ಸಿ) ತಮ್ಮ ಆತ್ಮಿಕ ಸಹೋದರರನ್ನು ಒಟ್ಟುಗೂಡಿಸುವುದರಲ್ಲಿ ಭಾಗವಹಿಸಿದ್ದ ಕೆಲವು ಮಂದಿ ಅಭಿಷಿಕ್ತ ಕ್ರೈಸ್ತರು ಯಾರಾಗಿದ್ದರು? (ಈ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)

14 ಈ ಪ್ರವಾದನೆಗೆ ಆಧುನಿಕ ದಿನಗಳ ನೆರವೇರಿಕೆಯಿದೆಯೆ? ಹೌದು, ಇದೆ. Iನೆಯ ಲೋಕ ಯುದ್ಧಾನಂತರ, ಯೆಹೋವನ ಅಭಿಷಿಕ್ತ ಸೇವಕರು ದೇವರ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆಯೆಂದು ಶಾಸ್ತ್ರವಚನಗಳಿಂದ ವಿವೇಚಿಸಿ ತಿಳಿದುಕೊಂಡರು. ಜಾಗರೂಕ ಬೈಬಲ್‌ ಅಧ್ಯಯನದಿಂದ, ಇನ್ನೂ ಹೆಚ್ಚು ರಾಜ್ಯ ಬಾಧ್ಯಸ್ಥರನ್ನು ಅಥವಾ “ಸಹೋದರರನ್ನು” ಕೂಡಿಸಲಿಕ್ಕಿದೆಯೆಂದು ಅವರಿಗೆ ತಿಳಿದುಬಂತು. ಧೈರ್ಯಶಾಲಿಗಳಾದ ಶುಶ್ರೂಷಕರು ಎಲ್ಲ ರೀತಿಯ ಪ್ರಯಾಣ ಸಾಧನಗಳನ್ನುಪಯೋಗಿಸಿ ಅಭಿಷಿಕ್ತ ಉಳಿಕೆಯವರ ಭಾವೀ ಸದಸ್ಯರನ್ನು ಹುಡುಕುತ್ತ “ಭೂಲೋಕದ ಕಟ್ಟಕಡೆಯ ವರೆಗೂ” ಪ್ರಯಾಣ ಬೆಳೆಸಿದರು. ಈ ಭಾವೀ ಸದಸ್ಯರಲ್ಲಿ ಅನೇಕರು ಕ್ರೈಸ್ತಪ್ರಪಂಚದ ಚರ್ಚುಗಳಿಂದ ಹೊರಬಂದವರಾಗಿದ್ದರು. ಇವರು ಕಂಡುಹಿಡಿಯಲ್ಪಟ್ಟಾಗ, ಇವರನ್ನು ಯೆಹೋವನಿಗೆ ಒಂದು ಕೊಡುಗೆಯಾಗಿ ಒಳತರಲಾಯಿತು.​—⁠ಅ. ಕೃತ್ಯಗಳು 1:⁠8.

15 ಆರಂಭದ ವರುಷಗಳಲ್ಲಿ ಒಟ್ಟುಗೂಡಿಸಲ್ಪಟ್ಟ ಅಭಿಷಿಕ್ತರು, ತಾವು ಬೈಬಲ್‌ ಸತ್ಯದ ಜ್ಞಾನಕ್ಕೆ ಬರುವ ಮೊದಲು ಇದ್ದ ಸ್ಥಿತಿಯಲ್ಲಿಯೇ ಯೆಹೋವನು ತಮ್ಮನ್ನು ಅಂಗೀಕರಿಸುವನೆಂದು ಎಣಿಸಲಿಲ್ಲ. ಅವರು ತಮ್ಮನ್ನು ಆತ್ಮಿಕ ಮತ್ತು ನೈತಿಕ ಮಾಲಿನ್ಯಗಳಿಂದ ಶುದ್ಧೀಕರಿಸಿಕೊಳ್ಳುವ ಕ್ರಮಗಳನ್ನು ಕೈಕೊಂಡರು. ಏಕೆಂದರೆ ಅವರನ್ನು “ಶುದ್ಧಪಾತ್ರೆಯಲ್ಲಿ ಕೊಡುಗೆ”ಯೋಪಾದಿ ಅಥವಾ ಅಪೊಸ್ತಲ ಪೌಲನು ಹೇಳಿದಂತೆ, ಕ್ರಿಸ್ತನಿಗೆ “ಶುದ್ಧಕನ್ಯೆಯಂತೆ” ಒಪ್ಪಿಸಬೇಕಾಗಿತ್ತು. (2 ಕೊರಿಂಥ 11:⁠2) ಅಭಿಷಿಕ್ತರು ತಪ್ಪಾದ ಬೋಧನೆಗಳನ್ನು ಬಿಟ್ಟುಬಿಡುವುದಲ್ಲದೆ, ಈ ಲೋಕದ ರಾಜಕೀಯ ವಿಚಾರಗಳಲ್ಲಿ ಅವರು ಕಟ್ಟುನಿಟ್ಟಾದ ರೀತಿಯಲ್ಲಿ ತಟಸ್ಥರಾಗಿರುವುದನ್ನು ಕಲಿಯಬೇಕಾಗಿತ್ತು. ತನ್ನ ಸೇವಕರು 1931ರಲ್ಲಿ ತಕ್ಕಮಟ್ಟಿಗೆ ತಮ್ಮನ್ನು ಶುದ್ಧೀಕರಿಸಿಕೊಂಡ ಬಳಿಕ, ಯೆಹೋವನು ಕೃಪೆದೋರಿ ಅವರು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಧರಿಸುವ ಸದವಕಾಶವನ್ನು ಅವರಿಗೆ ಕೊಟ್ಟನು. (ಯೆಶಾಯ 43:​10-12) ಆದರೆ ಯೆಹೋವನು ಕೆಲವರನ್ನು ‘ಯಾಜಕರಾಗಿ ಆರಿಸಿಕೊಂಡದ್ದು’ ಹೇಗೆ? ಈ ಅಭಿಷಿಕ್ತರು ಒಂದು ಗುಂಪಿನೋಪಾದಿ, ದೇವರಿಗೆ ಸ್ತೋತ್ರಯಜ್ಞಗಳನ್ನು ಅರ್ಪಿಸುವ ‘ರಾಜವಂಶಸ್ಥರಾದ ಯಾಜಕರ ಮತ್ತು ಮೀಸಲಾದ ಜನದ’ ಭಾಗವಾದರು.​—⁠1 ಪೇತ್ರ 2:9; ಯೆಶಾಯ 54:1; ಇಬ್ರಿಯ 13:⁠15.

ಒಟ್ಟುಗೂಡಿಸುವಿಕೆಯು ಮುಂದುವರಿಯುತ್ತದೆ

16, 17. ಒಂದನೆಯ ಲೋಕ ಯುದ್ಧಾನಂತರ “ನಿಮ್ಮ ಸಂತತಿ” ಎಂಬವರು ಯಾರಾಗಿದ್ದಾರೆ?

16 ಆ ‘ರಾಜವಂಶಸ್ಥರಾದ ಯಾಜಕರ’ ಪೂರ್ಣ ಸಂಖ್ಯೆಯು 1,44,000 ಆಗಿದ್ದು, ಸಕಾಲದಲ್ಲಿ ಅವರ ಒಟ್ಟುಗೂಡಿಸುವಿಕೆಯು ಪೂರ್ಣಗೊಂಡಿತು. (ಪ್ರಕಟನೆ 7:1-8; 14:⁠1) ಆದರೆ ಅದು ಒಟ್ಟುಗೂಡಿಸುವ ಕೆಲಸದ ಅಂತ್ಯವಾಗಿತ್ತೊ? ಅಲ್ಲ. ಯೆಶಾಯನ ಪ್ರವಾದನೆಯು ಮುಂದುವರಿಸುವುದು: “ನಾನು ಸೃಷ್ಟಿಸುವ ನೂತನಾಕಾಶಮಂಡಲವೂ ನೂತನಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.” (ಯೆಶಾಯ 66:22) ಈ ಮಾತುಗಳ ಮೊದಲ ನೆರವೇರಿಕೆಯಲ್ಲಿ, ಬಾಬೆಲಿನ ಬಂಧಿವಾಸದಿಂದ ಹಿಂದಿರುಗುವ ಯೆಹೂದ್ಯರು ಮಕ್ಕಳನ್ನು ಹುಟ್ಟಿಸಿ ಬೆಳೆಸಲಾರಂಭಿಸುವರು. ಹೀಗೆ, ಹೊಸ ಯೆಹೂದಿ ಆಡಳಿತವಾದ “ನೂತನಾಕಾಶಮಂಡಲ”ದ ಕೆಳಗೆ, ಪುನಸ್ಸ್ಥಾಪಿತ ಯೆಹೂದಿ ಉಳಿಕೆಯವರ “ನೂತನಭೂಮಂಡಲ”ವು ಸ್ಥಿರವಾಗಿ ಸ್ಥಾಪಿಸಲ್ಪಡುವುದು. ಆದರೆ ಈ ಪ್ರವಾದನೆಯು ನಮ್ಮ ದಿನಗಳಲ್ಲಿ ಅತಿ ಗಮನಾರ್ಹವಾದ ರೀತಿಯಲ್ಲಿ ನೆರವೇರಿದೆ.

17 ಈ ಆತ್ಮಿಕ ಸಹೋದರರ ಜನಾಂಗವು ಹುಟ್ಟಿಸುವ “ಸಂತತಿಯು,” ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯಿರುವ “ಮಹಾ ಸಮೂಹ”ವಾಗಿದೆ. ಇವರು “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಆಗಿದ್ದು, “ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ” ನಿಲ್ಲುತ್ತಾರೆ. ಅವರು “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:​9-14; 22:17) ಇಂದು ಈ “ಮಹಾ ಸಮೂಹ”ವು ಆತ್ಮಿಕ ಅಂಧಕಾರದಿಂದ ಯೆಹೋವನು ಒದಗಿಸುವ ಬೆಳಕಿನ ಕಡೆಗೆ ತಿರುಗುತ್ತಿದೆ. ಅವರು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ತಮ್ಮ ಅಭಿಷಿಕ್ತ ಸಹೋದರ ಸಹೋದರಿಯರಂತೆಯೇ ಆತ್ಮಿಕವಾಗಿಯೂ ನೈತಿಕವಾಗಿಯೂ ಶುದ್ಧವಾಗಿರಲು ಪ್ರಯಾಸಪಡುತ್ತಾರೆ. ಅವರು ಒಂದು ಗುಂಪಾಗಿ ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಸೇವೆಮಾಡುವರು ಮತ್ತು ‘ಸ್ಥಿರವಾಗಿ ನಿಂತಿರುವರು’!​—⁠ಕೀರ್ತನೆ 37:​11, 29.

18. (ಎ) ಮಹಾ ಸಮೂಹದ ಸದಸ್ಯರು ತಮ್ಮ ಅಭಿಷಿಕ್ತ ಸಹೋದರರಂತೆ ನಡೆದುಕೊಂಡಿರುವುದು ಹೇಗೆ? (ಬಿ) ಅಭಿಷಿಕ್ತರೂ ಅವರ ಸಂಗಡಿಗರೂ ಯೆಹೋವನನ್ನು “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ” ಆರಾಧಿಸುವುದು ಹೇಗೆ?

18 ಭೂನಿರೀಕ್ಷೆಯುಳ್ಳವರಾಗಿದ್ದು ಕಷ್ಟಪಟ್ಟು ಕೆಲಸ ಮಾಡುವ ಈ ಸ್ತ್ರೀಪುರುಷರಿಗೆ, ನೈತಿಕವಾಗಿಯೂ ಆತ್ಮಿಕವಾಗಿಯೂ ಶುದ್ಧರಾಗಿರುವುದು ಅತ್ಯಾವಶ್ಯಕವಾಗಿರುವುದಾದರೂ, ಯೆಹೋವನನ್ನು ಮೆಚ್ಚಿಸುವುದರಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ ಎಂಬುದು ತಿಳಿದಿದೆ. ಒಟ್ಟುಗೂಡಿಸುವ ಕೆಲಸವು ಭರದಿಂದ ಸಾಗುತ್ತಿದೆ ಮತ್ತು ಅವರಿಗೆ ಅದರಲ್ಲಿ ಪಾಲ್ಗೊಳ್ಳಲು ಮನಸ್ಸಿದೆ. ಪ್ರಕಟನೆ ಪುಸ್ತಕವು ಅವರ ವಿಷಯದಲ್ಲಿ ಪ್ರವಾದಿಸುವುದು: “ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆಮಾಡುತ್ತಾ ಇದ್ದಾರೆ.” (ಪ್ರಕಟನೆ 7:15) ಈ ಮಾತುಗಳು ನಮಗೆ, ಯೆಶಾಯನ ಪ್ರವಾದನೆಯಲ್ಲಿ ಕೊನೆಯಿಂದ ಎರಡನೆಯ ವಚನವನ್ನು ಜ್ಞಾಪಕಹುಟ್ಟಿಸುತ್ತವೆ: “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಎರಗುವದಕ್ಕೆ [“ಅಡ್ಡಬೀಳುವುದಕ್ಕೆ,” NW] ಬರುವರು; ಇದು ಯೆಹೋವನ ನುಡಿ.” (ಯೆಶಾಯ 66:23) ಇದು ಇಂದು ನಡೆಯುತ್ತಿದೆ. “ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ” ಅಂದರೆ ಕ್ರಮವಾಗಿ, ಪ್ರತಿ ತಿಂಗಳ ಪ್ರತಿ ವಾರ, ಅಭಿಷಿಕ್ತ ಕ್ರೈಸ್ತರೂ ಅವರ ಸಂಗಡಿಗರಾದ ಮಹಾ ಸಮೂಹದವರೂ ಯೆಹೋವನನ್ನು ಆರಾಧಿಸಲಿಕ್ಕಾಗಿ ಕೂಡಿಬರುತ್ತಾರೆ. ಅವರು ಇದನ್ನು, ಕ್ರಿಸ್ತೀಯ ಕೂಟಗಳಿಗೆ ಹಾಜರಾಗುವ ಮತ್ತು ಸಾರ್ವಜನಿಕ ಶುಶ್ರೂಷೆಯೇ ಮೊದಲಾದ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಮಾಡುತ್ತಾರೆ. ಕ್ರಮವಾಗಿ ‘ಬಂದು ಯೆಹೋವನ ಮುಂದೆ ಅಡ್ಡಬೀಳುವವರಲ್ಲಿ’ ನೀವೂ ಒಬ್ಬರಾಗಿದ್ದೀರೊ? ಇದನ್ನು ಮಾಡುವುದರಲ್ಲಿ ಯೆಹೋವನ ಜನರು ತುಂಬ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಮತ್ತು ಮಹಾ ಸಮೂಹದವರು, “ಸಕಲ ನರಜನ್ಮದವರು” ಅಂದರೆ ಜೀವಿಸುತ್ತಿರುವ ಸಕಲ ಮಾನವರು, “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ” ಸದಾಕಾಲಕ್ಕೂ ಯೆಹೋವನನ್ನು ಸೇವಿಸುವ ಸಮಯಕ್ಕಾಗಿ ಮುನ್ನೋಡುತ್ತಾರೆ.

ದೇವರ ವೈರಿಗಳ ಅಂತಿಮ ಅಂತ್ಯ

19, 20. ಬೈಬಲ್‌ ಸಮಯಗಳಲ್ಲಿ ಗಿಹೆನವು ಯಾವುದಕ್ಕಾಗಿ ಉಪಯೋಗಿಸಲ್ಪಟ್ಟಿತು, ಮತ್ತು ಅದು ಯಾವುದರ ಸಂಕೇತವಾಗಿದೆ?

19 ಯೆಶಾಯನ ಪ್ರವಾದನೆಯ ನಮ್ಮ ಅಧ್ಯಯನದಲ್ಲಿ ಒಂದೇ ವಚನವು ಬಾಕಿ ಇದೆ. ಆ ಪುಸ್ತಕವು ಈ ಮಾತುಗಳಿಂದ ಮುಕ್ತಾಯಗೊಳ್ಳುತ್ತದೆ: “ಅವರು ಆಚೆ ಹೋಗಿ ನನಗೆ ದ್ರೋಹಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವದಿಲ್ಲ, ಸುಡುವ ಬೆಂಕಿಯು ಆರುವದಿಲ್ಲ; ಅವು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.” (ಯೆಶಾಯ 66:24) ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅವರು ತಮ್ಮ ಜೀವಿತಗಳನ್ನು ಸರಳೀಕರಿಸಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಬೇಕೆಂದು ಪ್ರೋತ್ಸಾಹಿಸಿದಾಗ, ಪ್ರಾಯಶಃ ಅವನ ಮನಸ್ಸಿನಲ್ಲಿ ಈ ಪ್ರವಾದನೆ ಇದ್ದಿರಬೇಕು. ಅವನು ಹೇಳಿದ್ದು: “ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿದ್ದು ನರಕ [“ಗಿಹೆನ,” NW]ದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ದೇವರ ರಾಜ್ಯದಲ್ಲಿ ಸೇರುವದು ನಿನಗೆ ಉತ್ತಮ. ನರಕ [“ಗಿಹೆನ,” NW]ದಲ್ಲಿ ಅವರನ್ನು ಕಡಿಯುವ ಹುಳ ಸಾಯುವದಿಲ್ಲ, ಬೆಂಕಿ ಆರುವದಿಲ್ಲ.”​—⁠ಮಾರ್ಕ 9:​47, 48; ಮತ್ತಾಯ 5:​29, 30; 6:⁠33.

20 ಗಿಹೆನ ಎಂದು ಕರೆಯಲ್ಪಡುವ ಈ ಸ್ಥಳವು ಏನಾಗಿದೆ? ಶತಮಾನಗಳಿಗೆ ಮೊದಲು ಯೆಹೂದಿ ವಿದ್ವಾಂಸನಾದ ಡೇವಿಡ್‌ ಕಿಮ್ಕೀ ಬರೆದುದು: “ಅದು ಯೆರೂಸಲೇಮಿನ ಪಕ್ಕದಲ್ಲಿದ್ದ . . . ಒಂದು ಸ್ಥಳವಾಗಿದೆ. ಅದೊಂದು ಅಸಹ್ಯ ಸ್ಥಳವಾಗಿದ್ದು, ಅವರು ಅಶುದ್ಧ ಪದಾರ್ಥಗಳನ್ನು ಮತ್ತು ಹೆಣಗಳನ್ನು ಅಲ್ಲಿ ಎಸೆಯುತ್ತಾರೆ. ಅಲ್ಲದೆ, ಅಶುದ್ಧ ವಸ್ತುಗಳನ್ನು ಮತ್ತು ಹೆಣದ ಎಲುಬುಗಳನ್ನು ದಹಿಸಲು ಅಲ್ಲಿ ಸತತವಾಗಿ ಉರಿಯುವ ಬೆಂಕಿಯಿತ್ತು. ಆದಕಾರಣ, ದುಷ್ಟರಿಗಾಗುವ ನ್ಯಾಯದಂಡನೆಯನ್ನು ದೃಷ್ಟಾಂತರೂಪದಲ್ಲಿ ಗಿಹಿನೊಮ್‌ ಎಂದು ಕರೆಯಲಾಗುತ್ತದೆ.” ಈ ಯೆಹೂದಿ ವಿದ್ವಾಂಸನು ಸೂಚಿಸುವಂತೆ, ಗಿಹೆನವು ಕಸವನ್ನು ಮತ್ತು ಹೂಣಲು ಅಯೋಗ್ಯರೆಂದು ಪರಿಗಣಿಸಲ್ಪಡುವವರ ಶವಗಳನ್ನು ಎಸೆಯಲು ಉಪಯೋಗಿಸಲ್ಪಟ್ಟಿತ್ತಾದರೆ, ಅಂತಹ ಕಸವನ್ನು ಸುಡಲು ಬೆಂಕಿಯು ಯೋಗ್ಯವಾದ ಸಾಧನವಾಗಿದೆ. ಯಾವುದನ್ನು ಬೆಂಕಿಯು ಸುಡುವುದಿಲ್ಲವೋ ಅದನ್ನು ಹುಳುಗಳು ತಿನ್ನುತ್ತವೆ. ದೇವರ ವೈರಿಗಳೆಲ್ಲರ ಅಂತಿಮ ಅಂತ್ಯದ ವಿಷಯದಲ್ಲಿ ಎಷ್ಟು ಸೂಕ್ತವಾದ ಚಿತ್ರಣ! *

21. ಯೆಶಾಯ ಪುಸ್ತಕವು ಯಾರಿಗಾಗಿ ಸಕಾರಾತ್ಮಕವಾಗಿ ಹುರಿದುಂಬಿಸುವ ವಿಷಯದೊಂದಿಗೆ ಮುಕ್ತಾಯಗೊಳ್ಳುತ್ತದೆ, ಮತ್ತು ಏಕೆ?

21 ಯೆಶಾಯನ ರೋಮಾಂಚಕ ಪ್ರವಾದನೆಯು ಹೆಣ, ಬೆಂಕಿ ಮತ್ತು ಹುಳುಗಳ ವಿಷಯವಾಗಿ ಮಾತಾಡುವುದರಿಂದ, ಅದು ಭಯಾನಕ ರೀತಿಯಲ್ಲಿ ಮುಕ್ತಾಯಗೊಳ್ಳುತ್ತದೆ ಎಂಬುದು ಸತ್ಯವಲ್ಲವೊ? ದೇವರ ಬದ್ಧ ವೈರಿಗಳು ಹಾಗೆ ನೆನಸುವರು ಎಂಬುದಂತೂ ನಿಸ್ಸಂಶಯ. ದೇವರ ಸ್ನೇಹಿತರಿಗಾದರೊ, ದುಷ್ಟರ ನಿತ್ಯ ನಾಶನದ ವಿಷಯದಲ್ಲಿ ಯೆಶಾಯನು ಕೊಟ್ಟ ವರ್ಣನೆಯು ಅತಿ ಹುರಿದುಂಬಿಸುವ ವಿಷಯವಾಗಿದೆ. ತಮ್ಮ ವೈರಿಗಳಿಗೆ ಎಂದಿಗೂ ಮೇಲುಗೈಯಾಗದು ಎಂಬ ಆಶ್ವಾಸನೆಯ ಅಗತ್ಯ ಯೆಹೋವನ ಜನರಿಗಿದೆ. ದೇವರ ಆರಾಧಕರಿಗೆ ಎಷ್ಟೋ ಸಂಕಟವನ್ನು ತಂದು, ಆತನ ಹೆಸರಿನ ಮೇಲೆ ನಿಂದೆಯನ್ನು ಬರಮಾಡಿರುವ ಆ ವೈರಿಗಳು ಸರ್ವದಾ ನಾಶವಾಗುವರು. ಅನಂತರ “ಅಪಾಯವು ಎರಡನೆಯ ಸಲ ಉಂಟಾಗಬೇಕಾಗಿಲ್ಲ.”​—⁠ನಹೂಮ 1:⁠9.

22, 23. (ಎ) ನೀವು ಯೆಶಾಯ ಪುಸ್ತಕದ ಅಧ್ಯಯನದಿಂದ ಪಡೆದುಕೊಂಡಿರುವ ಪ್ರಯೋಜನಗಳಲ್ಲಿ ಕೆಲವನ್ನು ವಿವರಿಸಿರಿ. (ಬಿ) ನೀವೀಗ ಯೆಶಾಯ ಪುಸ್ತಕದ ಅಧ್ಯಯನವನ್ನು ಮಾಡಿರುವುದರಿಂದ, ಈಗ ನಿಮ್ಮ ನಿರ್ಧಾರವೇನು, ಮತ್ತು ನಿರೀಕ್ಷೆಯೇನು?

22 ನಾವು ಯೆಶಾಯನ ಪುಸ್ತಕದ ಅಧ್ಯಯನವನ್ನು ಮುಗಿಸುವಾಗ, ಈ ಬೈಬಲ್‌ ಪುಸ್ತಕವು ಕೇವಲ ಐತಿಹಾಸಿಕ ಘಟನೆಗಳ ದಾಖಲೆಯಲ್ಲ ಎಂಬುದನ್ನು ಗಣ್ಯಮಾಡುತ್ತೇವೆ. ಇಂದು ನಮಗಾಗಿರುವ ಒಂದು ಸಂದೇಶವು ಅದರಲ್ಲಿದೆ. ಯೆಶಾಯನು ಜೀವಿಸಿದ ಅಂಧಕಾರದ ಸಮಯವನ್ನು ನಾವು ಕಲ್ಪಿಸಿಕೊಳ್ಳುವಾಗ, ಆ ಸಮಯ ಮತ್ತು ನಮ್ಮ ದಿನಗಳ ಮಧ್ಯೆ ಹೋಲಿಕೆಗಳನ್ನು ನಾವು ನೋಡಬಲ್ಲೆವು. ರಾಜಕೀಯ ಕ್ಷೋಭೆ, ಧಾರ್ಮಿಕ ಕಪಟಾಚಾರ, ನ್ಯಾಯಸಂಬಂಧಿತ ಭ್ರಷ್ಟಾಚಾರ ಮತ್ತು ನಂಬಿಗಸ್ತರು ಹಾಗೂ ಬಡವರ ಮೇಲಿನ ದಬ್ಬಾಳಿಕೆ​—⁠ಇವು ಯೆಶಾಯನ ಕಾಲದ ಮತ್ತು ನಮ್ಮ ಕಾಲದ ವಿಶೇಷ ಗುಣಲಕ್ಷಣಗಳಾಗಿವೆ. ಸಾ.ಶ.ಪೂ. ಆರನೆಯ ಶತಮಾನದ ನಂಬಿಗಸ್ತ ಯೆಹೂದ್ಯರು ಯೆಶಾಯನ ಪ್ರವಾದನೆಗಾಗಿ ಕೃತಜ್ಞರಾಗಿದ್ದಿರಬೇಕು, ಮತ್ತು ಇಂದು ನಾವಿದನ್ನು ಅಧ್ಯಯನಮಾಡುವಾಗ ನಮಗೆ ಅದರಿಂದ ಸಾಂತ್ವನ ದೊರಕುತ್ತದೆ.

23 ಕತ್ತಲೆಯು ಭೂಮಿಯನ್ನು ಆವರಿಸಿ, ಕಾರ್ಗತ್ತಲೆಯು ಜನರನ್ನು ಕವಿದಿರುವ ಈ ಕಠಿನ ಸಮಯಗಳಲ್ಲಿ, ಯೆಹೋವನು ಯೆಶಾಯನ ಮೂಲಕ ಸಕಲ ಮಾನವಕುಲಕ್ಕೆ ಬೆಳಕನ್ನು ಒದಗಿಸಿರುವುದಕ್ಕಾಗಿ ನಾವೆಲ್ಲರೂ ಎಷ್ಟೋ ಕೃತಜ್ಞರು! ಜನಾಂಗದ ಮೂಲ ಅಥವಾ ಕುಲದ ಹಿನ್ನೆಲೆಯೆಂಬ ಭೇದವಿಲ್ಲದೆ ಯಾರು ಆತ್ಮಿಕ ಬೆಳಕನ್ನು ಹೃತ್ಪೂರ್ವಕವಾಗಿ ಅಂಗೀಕರಿಸುತ್ತಾರೋ ಅವರಿಗೆ ಅದು ನಿಜವಾಗಿಯೂ ನಿತ್ಯಜೀವದ ಅರ್ಥದಲ್ಲಿದೆ. (ಅ. ಕೃತ್ಯಗಳು 10:​34, 35) ಆದುದರಿಂದ, ನಾವು ದೇವರ ವಾಕ್ಯವನ್ನು ಪ್ರತಿ ದಿನ ಓದುತ್ತಾ, ಅದರ ಕುರಿತು ಮನನಮಾಡುತ್ತಾ, ಅದರ ಸಂದೇಶವನ್ನು ಪಾಲಿಸುತ್ತಾ, ಅದರ ಬೆಳಕಿನಲ್ಲಿ ನಡೆಯುತ್ತಾ ಇರೋಣ. ಇದು ನಮಗೆ ನಿತ್ಯಾಶೀರ್ವಾದವನ್ನೂ ಯೆಹೋವನ ಪವಿತ್ರ ನಾಮಕ್ಕೆ ಸ್ತುತಿಯನ್ನೂ ತರುವುದು!

[ಪಾದಟಿಪ್ಪಣಿಗಳು]

^ ಪ್ಯಾರ. 5 ಯೆರೂಸಲೇಮು ಬಾಬೆಲಿನವರಿಂದ ಪತನಗೊಂಡ ನಂತರದ ಸ್ಥಿತಿಯ ವಿಷಯದಲ್ಲಿ, ‘ದರಿದ್ರರಲ್ಲಿ ಅನೇಕರ ಮತ್ತು ಪಟ್ಟಣದಲ್ಲಿ ಉಳಿದವರಲ್ಲಿ ಮಿಕ್ಕವರ’ ಕುರಿತು ಯೆರೆಮೀಯ 52:​15 ಮಾತಾಡುತ್ತದೆ. ಇದರ ಕುರಿತು ಹೇಳಿಕೆ ನೀಡುತ್ತಾ, ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕವು, ಸಂಪುಟ 1, ಪುಟ 415ರಲ್ಲಿ ಹೇಳುವುದು: “ಆ ‘ಪಟ್ಟಣದಲ್ಲಿ ಉಳಿದವರು’ ಎಂಬ ಮಾತುಗಳು, ದೊಡ್ಡ ಸಂಖ್ಯೆಯಲ್ಲಿ ಜನರು ಕ್ಷಾಮ, ರೋಗ ಇಲ್ಲವೆ ಬೆಂಕಿಯಿಂದಾಗಿ ಸತ್ತಿದ್ದರು ಅಥವಾ ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದರೆಂಬುದನ್ನು ಸೂಚಿಸುತ್ತದೆಂಬುದು ಸುವ್ಯಕ್ತ.”

^ ಪ್ಯಾರ. 20 ಜೀವದಿಂದಿರುವ ಜನರಲ್ಲ, ಬದಲಾಗಿ ಸತ್ತುಹೋಗಿರುವವರ ಶವಗಳು ಗಿಹೆನದಲ್ಲಿ ನಾಶವಾಗುತ್ತಿದ್ದುದರಿಂದ, ಈ ಸ್ಥಳವು ನಿತ್ಯಯಾತನೆಯನ್ನು ಸೂಚಿಸುವುದಿಲ್ಲ.

[ಅಧ್ಯಯನ ಪ್ರಶ್ನೆಗಳು]

[ಪುಟ 409ರಲ್ಲಿರುವ ಚೌಕ]

ಯೆಹೋವನಿಗಾಗಿ ಸಕಲ ಜನಾಂಗಗಳಿಂದ ಅಭಿಷಿಕ್ತ ಕೊಡುಗೆಗಳು

ವಾನ್‌ ಮುನ್ಯೀಸ್‌ ಎಂಬವರು 1920ರಲ್ಲಿ ಅಮೆರಿಕದಿಂದ ಸ್ಪೇಯ್ನ್‌ಗೆ ಹೋಗಿ, ಅಲ್ಲಿಂದ ಆರ್ಜೆಂಟೀನಕ್ಕೆ ಪಯಣಿಸಿ ಅಲ್ಲಿ ಅಭಿಷಿಕ್ತರ ಸಭೆಗಳನ್ನು ಸಂಘಟಿಸಿದರು. 1923ರಿಂದ ಸತ್ಯದ ಬೆಳಕು ಪಶ್ಚಿಮ ಆಫ್ರಿಕದ ಪ್ರಾಮಾಣಿಕ ಹೃದಯಿಗಳ ಮೇಲೆ ಬೆಳಗತೊಡಗಿತು. ಅಲ್ಲಿ ಮಿಷನೆರಿಯಾಗಿದ್ದ ವಿಲ್ಯಮ್‌ ಆರ್‌. ಬ್ರೌನ್‌ (ಅನೇಕವೇಳೆ, ಬೈಬಲ್‌ ಬ್ರೌನ್‌ ಎಂದು ಕರೆಯಲ್ಪಟ್ಟಿದ್ದಾರೆ) ರಾಜ್ಯ ಸುವಾರ್ತೆಯನ್ನು ಸೀಯೆರ ಲೀಯೋನ್‌, ಘಾನ, ಲೈಬೀರಿಯ, ಗ್ಯಾಂಬಿಯ ಮತ್ತು ನೈಜೀರಿಯದಂತಹ ಸ್ಥಳಗಳಲ್ಲಿ ಸಾರಲು ಹೋದರು. ಅದೇ ವರುಷದಲ್ಲಿ ಕೆನಡದ ಜಾರ್ಜ್‌ ಯಂಗ್‌ರವರು ಬ್ರಸಿಲ್‌ಗೆ ಹೋಗಿ ಅಲ್ಲಿಂದ ಆರ್ಜೆಂಟೀನ, ಕಾಸ್ಟ ರೀಕ, ಪ್ಯಾನಮಾ, ವೆನಸ್ವೇಲ ಮತ್ತು ಸೋವಿಯೆಟ್‌ ಯೂನಿಯನ್‌ಗೂ ಪಯಣಿಸಿದರು. ಸುಮಾರು ಅದೇ ಸಮಯದಲ್ಲಿ, ಎಡ್ವಿನ್‌ ಸ್ಕಿನ್ನರ್‌ ಇಂಗ್ಲೆಂಡಿನಿಂದ ಭಾರತಕ್ಕೆ ಹಡಗುಪ್ರಯಾಣ ಮಾಡಿ, ಅಲ್ಲಿ ಅನೇಕ ವರ್ಷಗಳ ವರೆಗೆ ಕೊಯ್ಲಿನ ಕೆಲಸದಲ್ಲಿ ಶ್ರಮಿಸಿದರು.

[ಪುಟ 411ರಲ್ಲಿರುವ ಚಿತ್ರ]

ಪಂಚಾಶತ್ತಮದಲ್ಲಿದ್ದ ಕೆಲವು ಮಂದಿ ಯೆಹೂದ್ಯರು, ‘ಎಲ್ಲ ಜನಾಂಗಗಳಿಂದ ಬಂದ ಸಹೋದರರು’ ಆಗಿದ್ದರು

[ಪುಟ 413ರಲ್ಲಿ ಇಡೀ ಪುಟದ ಚಿತ್ರ]