ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಜನರಿಗೆ ಸಾಂತ್ವನ

ದೇವಜನರಿಗೆ ಸಾಂತ್ವನ

ಅಧ್ಯಾಯ ಹನ್ನೆರಡು

ದೇವಜನರಿಗೆ ಸಾಂತ್ವನ

ಯೆಶಾಯ 51:1-23

1. ಯೆರೂಸಲೇಮಿಗೂ ಅದರ ನಿವಾಸಿಗಳಿಗೂ ಯಾವ ಕರಾಳ ಪ್ರತೀಕ್ಷೆಗಳಿವೆ, ಆದರೆ ಯಾವ ನಿರೀಕ್ಷೆಯೂ ಇದೆ?

ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಕಾಲದಷ್ಟು, ಅಂದರೆ ಎಪ್ಪತ್ತು ವರುಷಗಳಷ್ಟು ದೀರ್ಘಕಾಲ ಯೆಹೂದ ಜನಾಂಗವು ಬಾಬೆಲಿನಲ್ಲಿ ಬಂದಿಯಾಗಿರುವುದು. (ಕೀರ್ತನೆ 90:10; ಯೆರೆಮೀಯ 25:11; 29:10) ಬಂದಿಗಳಾಗಿ ಒಯ್ಯಲ್ಪಡುವ ಅಧಿಕಾಂಶ ಇಸ್ರಾಯೇಲ್ಯರು ಬಾಬೆಲಿನಲ್ಲಿ ವೃದ್ಧರಾಗಿ ಸಾಯಲಿದ್ದರು. ಅವರ ಶತ್ರುಗಳು ಅವರನ್ನು ಕೆಣಕಿ, ಮೂದಲಿಸುವಾಗ ಅವರಿಗೆ ಎಷ್ಟೊಂದು ಅವಮಾನವಾಗುವುದೆಂಬುದನ್ನು ತುಸು ಯೋಚಿಸಿರಿ. ಯೆಹೋವನು ತನ್ನ ಹೆಸರನ್ನಿಟ್ಟಿದ್ದ ನಗರವೇ ಅಷ್ಟು ದೀರ್ಘಕಾಲದ ವರೆಗೆ ಹಾಳುಬೀಳುವಾಗ, ಅವರ ದೇವರ ಮೇಲೆ ಹೇರಲಾಗುವ ನಿಂದೆಯ ಕುರಿತೂ ಯೋಚಿಸಿರಿ. (ನೆಹೆಮೀಯ 1:9; ಕೀರ್ತನೆ 132:13; 137:​1-3) ಸೊಲೊಮೋನನು ಪ್ರತಿಷ್ಠಾಪಿಸಿದಾಗ ದೇವರ ಮಹಿಮೆಯಿಂದ ತುಂಬಿದ್ದ ಆ ಪ್ರಿಯ ದೇವಾಲಯವು ಇನ್ನಿರದು. (2 ಪೂರ್ವಕಾಲವೃತ್ತಾಂತ 7:1-3) ಎಂತಹ ಕರಾಳ ಪ್ರತೀಕ್ಷೆಗಳು! ಆದರೆ ಯೆಹೋವನು ಯೆಶಾಯನ ಮುಖೇನ ಒಂದು ಪುನಸ್ಸ್ಥಾಪನೆಯನ್ನು ಪ್ರವಾದಿಸುತ್ತಾನೆ. (ಯೆಶಾಯ 43:14; 44:​26-28) ಯೆಶಾಯನ ಪುಸ್ತಕದ 51ನೆಯ ಅಧ್ಯಾಯದಲ್ಲಿ, ಸಾಂತ್ವನ ಮತ್ತು ಪುನರಾಶ್ವಾಸನೆಯ ಈ ಮುಖ್ಯ ವಿಷಯದ ಮೇಲೆ ಇನ್ನೂ ಹೆಚ್ಚಿನ ಪ್ರವಾದನೆಗಳನ್ನು ನಾವು ಕಾಣುತ್ತೇವೆ.

2. (ಎ) ಯೆಹೋವನು ತನ್ನ ಸಾಂತ್ವನದ ಸಂದೇಶವನ್ನು ಯೆಶಾಯನ ಮೂಲಕ ಯಾರಿಗೆ ಸಂಬೋಧಿಸುತ್ತಾನೆ? (ಬಿ) ನಂಬಿಗಸ್ತ ಯೆಹೂದ್ಯರು ‘ನೀತಿಯನ್ನು ಅನ್ವೇಷಿಸುವುದು’ ಹೇಗೆ?

2 ತನ್ನ ಕಡೆಗೆ ತಮ್ಮ ಹೃದಯಗಳನ್ನು ತಿರುಗಿಸುವ ಯೆಹೂದದ ಜನರಿಗೆ ಯೆಹೋವನು ಹೇಳುವುದು: “ಸದ್ಧರ್ಮನಿರತರಾದ [“ನೀತಿಯನ್ನು ಅನ್ವೇಷಿಸುತ್ತಿರುವ,” NW] ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ.” (ಯೆಶಾಯ 51:1ಎ) ‘ನೀತಿಯನ್ನು ಅನ್ವೇಷಿಸುವುದು’ ಕ್ರಿಯೆಯನ್ನು ಸೂಚಿಸುತ್ತದೆ. ‘ನೀತಿಯನ್ನು ಅನ್ವೇಷಿಸುವವರು’ ತಾವು ದೇವಜನರೆಂದು ಕೇವಲ ವಾದಿಸುವುದಿಲ್ಲ. ಅವರು ನೀತಿವಂತರಾಗಲು ಮತ್ತು ದೇವರ ಚಿತ್ತಾನುಸಾರ ಜೀವಿಸಲು ಹುರುಪಿನಿಂದ ಪ್ರಯತ್ನಿಸುವರು. (ಕೀರ್ತನೆ 34:15; ಜ್ಞಾನೋಕ್ತಿ 21:21) ಯೆಹೋವನು ನೀತಿಯ ಏಕಮಾತ್ರ ಮೂಲನೆಂದು ಅವರು ಆತನ ಕಡೆಗೆ ನೋಡಿ, ‘ಆತನ ಸಾನ್ನಿಧ್ಯವನ್ನು ಸೇರಲು’ ಪ್ರಯತ್ನಪಡುವರು. (ಕೀರ್ತನೆ 11:7; 145:17) ಯೆಹೋವನು ಯಾರೆಂಬುದು ಮತ್ತು ಪ್ರಾರ್ಥನೆಯಲ್ಲಿ ಆತನನ್ನು ಹೇಗೆ ಸಮೀಪಿಸುವುದೆಂಬುದು ಅವರಿಗೆ ಇನ್ನೂ ತಿಳಿದಿರುವುದಿಲ್ಲವೆಂದು ಇದರ ಅರ್ಥವಲ್ಲ. ಬದಲಿಗೆ, ತಾವು ಆತನಿಗೆ ಇನ್ನೂ ಹೆಚ್ಚು ನಿಕಟವಾಗಲು, ಆತನನ್ನು ಆರಾಧಿಸಲು, ಆತನಿಗೆ ಪ್ರಾರ್ಥಿಸಲು ಮತ್ತು ತಮ್ಮ ಸಕಲ ಕೆಲಸಗಳಲ್ಲಿ ಆತನ ಮಾರ್ಗದರ್ಶನವನ್ನು ಕೋರಲು ಅವರು ಪ್ರಯತ್ನಿಸುವರೆಂದು ಇದರ ಅರ್ಥ.

3, 4. (ಎ) ಯೆಹೂದ್ಯರು ಯಾವುದರಿಂದ ಕಡಿಯಲ್ಪಟ್ಟರೊ ಆ “ಬಂಡೆ” ಯಾರು, ಮತ್ತು ಅವರು ಎಲ್ಲಿಂದ ತೆಗೆಯಲ್ಪಟ್ಟಿದ್ದರೊ ಆ “ಗುಂಡಿ” ಯಾರು? (ಬಿ) ತಮ್ಮ ಮೂಲವನ್ನು ಜ್ಞಾಪಿಸಿಕೊಳ್ಳುವುದು ಯೆಹೂದ್ಯರಿಗೆ ಏಕೆ ಸಾಂತ್ವನವನ್ನು ತರುವುದು?

3 ಆದರೂ, ನೀತಿಯನ್ನು ಅನ್ವೇಷಿಸುವವರು ಯೆಹೂದದಲ್ಲಿ ಇರುವುದು ತುಲನಾತ್ಮಕವಾಗಿ ಕೊಂಚ ಜನ. ಮತ್ತು ಇದು ಅವರನ್ನು ಎದೆಗುಂದಿದವರನ್ನಾಗಿಯೂ ನಿರಾಶರನ್ನಾಗಿಯೂ ಮಾಡುತ್ತದೆ. ಆದಕಾರಣ, ಒಂದು ಬಂಡೆಗುಣಿಯ ದೃಷ್ಟಾಂತವನ್ನು ಉಪಯೋಗಿಸುತ್ತ ಯೆಹೋವನು ಅವರನ್ನು ಪ್ರೋತ್ಸಾಹಿಸುವುದು: “ನೀವು ಯಾವ ಬಂಡೆಯೊಳಗಿಂದ ಒಡೆದು ತೆಗೆಯಲ್ಪಟ್ಟಿರಿ, ಯಾವ ಗುಂಡಿಯಿಂದ ತೋಡಲ್ಪಟ್ಟಿರಿ ಎಂಬದನ್ನು ನೋಡಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ; ಅಬ್ರಹಾಮನು ಒಬ್ಬನೇ ಇದ್ದಾಗ ನಾನು ಅವನನ್ನು ಕರೆದು ಆಶೀರ್ವದಿಸಿ ಸಂತಾನದಿಂದ ಹೆಚ್ಚಿಸಿದೆನಲ್ಲವೆ.” (ಯೆಶಾಯ 51:1ಬಿ, 2) ಯೆಹೂದ್ಯರು ಯಾವುದರಿಂದ ಕಡಿಯಲ್ಪಟ್ಟಿದ್ದರೊ ಆ “ಬಂಡೆ,” ಇಸ್ರಾಯೇಲ್‌ ಜನಾಂಗವು ಯಾರಲ್ಲಿ ಹೆಮ್ಮೆಪಡುತ್ತಿತ್ತೋ ಆ ಐತಿಹಾಸಿಕ ಪುರುಷನಾದ ಅಬ್ರಹಾಮನಾಗಿದ್ದನು. (ಮತ್ತಾಯ 3:9; ಯೋಹಾನ 8:33, 39) ಅವನು ಆ ಜನಾಂಗದ ಮಾನವ ಮೂಲಪಿತೃವಾಗಿದ್ದಾನೆ. ಆ “ಗುಂಡಿ” ಸಾರಳಾಗಿದ್ದಾಳೆ. ಅವಳ ಗರ್ಭದಿಂದಲೇ ಇಸ್ರಾಯೇಲಿನ ಪೂರ್ವಿಕನಾದ ಇಸಾಕನು ಬಂದನು.

4 ಅಬ್ರಹಾಮ ಮತ್ತು ಸಾರಳಿಗೆ ಮಕ್ಕಳನ್ನು ಪಡೆಯುವ ಕಾಲ ದಾಟಿಹೋಗಿತ್ತು ಮತ್ತು ಅವರಿಗೆ ಮಕ್ಕಳೇ ಇರಲಿಲ್ಲ. ಆದರೂ, ಯೆಹೋವನು ಅಬ್ರಹಾಮನನ್ನು ಆಶೀರ್ವದಿಸಿ, “ಅತ್ಯಧಿಕವಾದ ಸಂತತಿಯನ್ನು ಕೊಡುವೆನು” ಎಂದು ವಾಗ್ದಾನಿಸಿದನು. (ಆದಿಕಾಂಡ 17:​1-6, 15-17) ಅಬ್ರಹಾಮ ಮತ್ತು ಸಾರಳಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯು ದೈವಿಕವಾಗಿ ಕೊಡಲ್ಪಟ್ಟಾಗ, ತಮ್ಮ ವೃದ್ಧಾಪ್ಯದಲ್ಲಿ ಅವರು ಒಂದು ಮಗುವನ್ನು ಪಡೆದರು. ಮತ್ತು ಆ ಮಗನಿಂದ ಯೆಹೋವನ ಒಡಂಬಡಿಕೆಯ ಜನಾಂಗವು ಹುಟ್ಟಿಬಂತು. ಹೀಗೆ ಯೆಹೋವನು ಆ ಒಬ್ಬ ಪುರುಷನನ್ನು ಒಂದು ಮಹಾ ಜನಾಂಗದ ಪಿತೃವಾಗಿ ಮಾಡಿದನು. ಆ ಜನಾಂಗದ ಸಂಖ್ಯೆಯು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯಾತವಾಯಿತು. (ಆದಿಕಾಂಡ 15:5; ಅ. ಕೃತ್ಯಗಳು 7:⁠5) ಯೆಹೋವನು ಹೀಗೆ ಒಂದು ದೂರದ ದೇಶದಿಂದ ಅಬ್ರಹಾಮನನ್ನು ಆರಿಸಿ, ಅವನನ್ನು ಮಹಾ ಜನಾಂಗವಾಗಿ ಮಾಡಶಕ್ತನಾದರೆ, ನಂಬಿಗಸ್ತ ಉಳಿಕೆಯವರನ್ನು ಬಾಬೆಲಿನ ಬಂಧನದೊಳಗಿಂದ ಬಿಡಿಸಿ, ಅವರನ್ನು ಸ್ವದೇಶದಲ್ಲಿ ಪುನಸ್ಸ್ಥಾಪಿಸಿ, ಪುನಃ ಅವರನ್ನು ಒಂದು ಮಹಾ ಜನಾಂಗವಾಗಿ ಖಂಡಿತವಾಗಿಯೂ ಮಾಡಬಲ್ಲನು. ಅಬ್ರಹಾಮನಿಗೆ ದೇವರು ಮಾಡಿದ್ದ ವಾಗ್ದಾನವು ನೆರವೇರಿದ್ದರಿಂದ, ಆ ಯೆಹೂದಿ ಸೆರೆಯಾಳುಗಳಿಗೆ ಮಾಡಿದ್ದ ಆತನ ವಾಗ್ದಾನವೂ ನೆರವೇರುವುದು.

5. (ಎ) ಅಬ್ರಹಾಮ ಮತ್ತು ಸಾರಳು ಯಾರನ್ನು ಚಿತ್ರಿಸುತ್ತಾರೆ? ವಿವರಿಸಿ. (ಬಿ) ಅಂತಿಮ ನೆರವೇರಿಕೆಯಲ್ಲಿ, ತಮ್ಮ ಮೂಲವು “ಬಂಡೆ”ಯೆಂಬುದನ್ನು ಯಾರು ಪತ್ತೆಹಚ್ಚುತ್ತಾರೆ?

5ಯೆಶಾಯ 51:​1, 2ರ ಸಾಂಕೇತಿಕ ಕಡಿಯುವಿಕೆಗೆ ಪ್ರಾಯಶಃ ಇನ್ನೊಂದು ಅನ್ವಯಿಸುವಿಕೆಯಿದೆ. ಧರ್ಮೋಪದೇಶಕಾಂಡ 32:18ರಲ್ಲಿ ಇಸ್ರಾಯೇಲಿಗೆ ಜನ್ಮವಿತ್ತ ಯೆಹೋವನನ್ನು, “ಶರಣ” [“ಬಂಡೆ,” NW] ಎಂದೂ, “ಹೆತ್ತ ತಾಯಿ” ಎಂದೂ ಕರೆಯಲಾಗಿದೆ. ಹೆತ್ತ ತಾಯಿ ಎಂಬ ಅಭಿವ್ಯಕ್ತಿಯಲ್ಲಿ, ಯೆಶಾಯ 51:2ರಲ್ಲಿ ಸಾರಳು ಇಸ್ರಾಯೇಲನ್ನು ಹೆರುವ ವಿಷಯದಲ್ಲಿ ಕಂಡುಬರುವ ಹೀಬ್ರು ಕ್ರಿಯಾಪದವನ್ನೇ ಉಪಯೋಗಿಸಲಾಗಿದೆ. ಈ ಕಾರಣದಿಂದ ಅಬ್ರಹಾಮನು, ಮಹಾ ಅಬ್ರಹಾಮನಾದ ಯೆಹೋವನ ಪ್ರವಾದನಾರೂಪವಾಗಿದ್ದಾನೆ. ಅಬ್ರಹಾಮನ ಪತ್ನಿಯಾದ ಸಾರಳು ಯೆಹೋವನ ಆತ್ಮಿಕ ಜೀವಿಗಳ ಸಾರ್ವತ್ರಿಕ ಸ್ವರ್ಗೀಯ ಸಂಸ್ಥೆಯನ್ನು ಯೋಗ್ಯವಾಗಿಯೇ ಚಿತ್ರಿಸುತ್ತಾಳೆ. ಪವಿತ್ರ ಶಾಸ್ತ್ರಗಳಲ್ಲಿ ಈ ಸಂಸ್ಥೆಯು ದೇವರ ಪತ್ನಿ ಅಥವಾ ಸ್ತ್ರೀಯಾಗಿ ಪ್ರತಿನಿಧಿಸಲ್ಪಟ್ಟಿದೆ. (ಆದಿಕಾಂಡ 3:15; ಪ್ರಕಟನೆ 12:​1, 5) ಯೆಶಾಯನ ಪ್ರವಾದನೆಯ ಈ ಮಾತುಗಳ ಅಂತಿಮ ನೆರವೇರಿಕೆಯಲ್ಲಿ, ಈ “ಬಂಡೆ”ಯಿಂದ ಹೊರಟುಬರುವ ಜನಾಂಗವು ‘ದೇವರ ಇಸ್ರಾಯೇಲ್‌’ ಆಗಿದೆ. ಇದು ಸಾ.ಶ. 33ರ ಪಂಚಾಶತ್ತಮದಂದು ಹುಟ್ಟಿದ ಆತ್ಮಾಭಿಷಿಕ್ತ ಕ್ರೈಸ್ತರ ಸಭೆಯಾಗಿದೆ. ಈ ಪುಸ್ತಕದ ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿರುವಂತೆ, ಆ ಜನಾಂಗವು 1918ರಲ್ಲಿ ಬಾಬೆಲಿನ ಬಂದಿವಾಸಕ್ಕೆ ಹೋಯಿತು, ಆದರೆ 1919ರಲ್ಲಿ ಆತ್ಮಿಕವಾಗಿ ಸಮೃದ್ಧ ಸ್ಥಿತಿಗೆ ಪುನಸ್ಸ್ಥಾಪಿಸಲ್ಪಟ್ಟಿತು.​—⁠ಗಲಾತ್ಯ 3:26-29; 4:28; 6:⁠16.

6. (ಎ) ಯೆಹೂದ ದೇಶಕ್ಕೆ ಮುಂದೆ ಏನಾಗಲಿಕ್ಕಿದೆ, ಮತ್ತು ಯಾವ ಪುನಸ್ಸ್ಥಾಪನೆಯನ್ನು ಅಪೇಕ್ಷಿಸಲಾಗುವುದು? (ಬಿ) ಯೆಶಾಯ 51:3 ಯಾವ ಆಧುನಿಕ ದಿನಗಳ ಪುನಸ್ಸ್ಥಾಪನೆಯ ಕುರಿತು ಜ್ಞಾಪಕ ಹುಟ್ಟಿಸುತ್ತದೆ?

6 ಚೀಯೋನಿಗೆ ಅಥವಾ ಯೆರೂಸಲೇಮಿಗೆ ದೊರೆಯುವ ಯೆಹೋವನ ಸಾಂತ್ವನದಲ್ಲಿ, ಬಹುಸಂಖ್ಯೆಯ ಜನಾಂಗವೊಂದನ್ನು ಉತ್ಪಾದಿಸುವ ವಾಗ್ದಾನ ಮಾತ್ರ ಸೇರಿರುವುದಿಲ್ಲ. ನಾವು ಓದುವುದು: “ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುದಾರಿಸಿ ಕಾಡುನೆಲವನ್ನು ಏದೆನ್‌ ಉದ್ಯಾನದಂತೆಯೂ ಬೀಳುಭೂಮಿಯನ್ನು ಯೆಹೋವನ ವನದ ಹಾಗೂ ಕಳಕಳಿಸುವಂತೆ ಮಾಡುವನು; ಹರ್ಷ, ಉಲ್ಲಾಸ, ಸ್ತೋತ್ರ, ಗಾನ ಧ್ವನಿ, ಇವುಗಳು ಅಲ್ಲಿ ನೆಲೆಯಾಗಿರುವವು.” (ಯೆಶಾಯ 51:⁠3) 70 ವರುಷಗಳ ಹಾಳುಬೀಳುವಿಕೆಯ ಸಮಯದಲ್ಲಿ ಯೆಹೂದ ದೇಶವು ಮುಳ್ಳುಪೊದೆಗಳು, ಪೊದೆಗಾಡುಗಳು ಮತ್ತು ಇತರ ವನ್ಯ ಸಸ್ಯಗಳಿಂದ ತುಂಬಿದ ಅರಣ್ಯವಾಗಿರುವುದು. (ಯೆಶಾಯ 64:10; ಯೆರೆಮೀಯ 4:26; 9:​10-12) ಹೀಗೆ, ಯೆಹೂದದಲ್ಲಿ ಜನರ ಪುನರ್ವಸತಿಯಾಗುವುದು ಮಾತ್ರವಲ್ಲ, ಅಲ್ಲಿಯ ಜಮೀನನ್ನು ಪುನರ್ವಶಮಾಡಿಕೊಳ್ಳುವುದು, ಅಂದರೆ ಪುಷ್ಕಳವಾಗಿ ನೀರು ಹಾಯಿಸಿರುವ ಉತ್ಪನ್ನದಾಯಕ ಹೊಲಗಳು ಮತ್ತು ಫಲದಾಯಕವಾದ ಹಣ್ಣುಹಂಪಲುಗಳ ತೋಟಗಳಿಂದ ಕೂಡಿರುವ ಏದೆನ್‌ ಉದ್ಯಾನವನವಾಗಿ ಪರಿವರ್ತಿತವಾಗುವುದು ಸಹ ಪುನಸ್ಸ್ಥಾಪನೆಯಲ್ಲಿ ಒಳಗೂಡಿರುವುದು. ನೆಲವು ಹರ್ಷಧ್ವನಿಗೈಯುತ್ತಿರುವಂತೆ ತೋರಿಬರುವುದು. ದೇಶಭ್ರಷ್ಟತೆಯ ಸಮಯದಲ್ಲಿ ಹಾಳುಬಿದ್ದಿದ್ದ ಪರಿಸ್ಥಿತಿಗೆ ಹೋಲಿಸುವಾಗ, ಈಗ ದೇಶವು ಪರದೈಸಿನಂತಾಗುವುದು. ದೇವರ ಇಸ್ರಾಯೇಲಿನ ಅಭಿಷಿಕ್ತ ಉಳಿಕೆಯವರು, 1919ರಲ್ಲಿ ಆತ್ಮಿಕ ಅರ್ಥದಲ್ಲಿ ಇಂತಹ ಒಂದು ಪರದೈಸನ್ನೇ ಪ್ರವೇಶಿಸಿದರು.​—⁠ಯೆಶಾಯ 11:​6-9; 35:​1-7.

ಯೆಹೋವನಲ್ಲಿ ಭರವಸೆಗೆ ಕಾರಣಗಳು

7, 8. (ಎ) ತನಗೆ ಕಿವಿಗೊಡುವಂತೆ ಕೇಳಿಕೊಳ್ಳುವ ಯೆಹೋವನ ಕರೆಯ ಅರ್ಥವೇನು? (ಬಿ) ಯೆಹೂದವು ಯೆಹೋವನಿಗೆ ಕಿವಿಗೊಡುವುದು ಏಕೆ ಪ್ರಾಮುಖ್ಯ?

7 ನವೀಕರಿಸಿದ ಗಮನವನ್ನು ಕೇಳಿಕೊಳ್ಳುತ್ತ ಯೆಹೋವನು ಹೇಳುವುದು: “ನನ್ನ ಜನರೇ, ಆಲಿಸಿರಿ! ನನ್ನ ಪ್ರಜೆಗಳೇ, ಕಿವಿಗೊಡಿರಿ! ಧರ್ಮೋಪದೇಶವು ನನ್ನಿಂದ ಹೊರಡುವದು, ನನ್ನ ನ್ಯಾಯಬೋಧನೆಯನ್ನು ಜನಾಂಗಗಳಿಗೆ ಬೆಳಕನ್ನಾಗಿ ಸ್ಥಾಪಿಸುವೆನು. ನನ್ನ ರಕ್ಷಣಧರ್ಮದಕಾರ್ಯವು ಸಮೀಪಿಸಿದೆ, ನನ್ನ ವಿಮೋಚನಕ್ರಿಯೆಯು ತಲೆದೋರಿದೆ, ನನ್ನ ಹಸ್ತವು ಜನಾಂಗಗಳಿಗೆ ನ್ಯಾಯತೀರಿಸುವದು; ದ್ವೀಪನಿವಾಸಿಗಳು ನನ್ನನ್ನು ನಿರೀಕ್ಷಿಸಿಕೊಂಡು ನನ್ನ ಹಸ್ತಕಾರ್ಯಕ್ಕೆ ಕಾದಿರುವರು.”​—ಯೆಶಾಯ 51:4, 5.

8 ಕಿವಿಗೊಡಿರಿ ಎಂಬ ಯೆಹೋವನ ಕರೆಗೆ, ಆತನ ಸಂದೇಶವನ್ನು ಕೇವಲ ಕೇಳುವುದಕ್ಕಿಂತ ಹೆಚ್ಚಿನ ಅರ್ಥವಿದೆ. ಕೇಳಿಸಿಕೊಂಡ ವಿಷಯಕ್ಕನುಸಾರ ವರ್ತಿಸುವ ದೃಷ್ಟಿಯಿಂದ ಗಮನ ಕೊಡುವುದೆಂಬುದೇ ಅದರ ಅರ್ಥ. (ಕೀರ್ತನೆ 49:1; 78:⁠1) ಯೆಹೋವನು ಶಿಕ್ಷಣ, ನ್ಯಾಯ ಮತ್ತು ರಕ್ಷಣೆಯ ಮೂಲನೆಂಬುದನ್ನು ಆ ಜನಾಂಗವು ಗಣ್ಯಮಾಡಬೇಕಾಗಿದೆ. ಆತ್ಮಿಕ ಜ್ಞಾನೋದಯದ ಮೂಲನು ಆತನೊಬ್ಬನೇ. (2 ಕೊರಿಂಥ 4:⁠6) ಆತನು ಮಾನವಕುಲದ ಅಂತಿಮ ನ್ಯಾಯಾಧಿಪತಿ. ಯೆಹೋವನಿಂದ ಬರುವ ನಿಯಮಗಳೂ ನ್ಯಾಯನಿರ್ಣಯಗಳೂ ಅವುಗಳಿಂದ ಮಾರ್ಗದರ್ಶಿಸಲ್ಪಡಲು ಬಿಡುವವರಿಗೆ ಬೆಳಕಿನಂತಿವೆ.​—⁠ಕೀರ್ತನೆ 43:3; 119:105; ಜ್ಞಾನೋಕ್ತಿ 6:⁠23.

9. ದೇವರ ಒಡಂಬಡಿಕೆಯ ಜನರನ್ನು ಬಿಟ್ಟರೆ, ಇನ್ನಾರು ಯೆಹೋವನ ರಕ್ಷಣಾ ಕಾರ್ಯಗಳಿಂದ ಪ್ರಯೋಜನ ಪಡೆಯುವರು?

9 ಇವೆಲ್ಲ ವಿಷಯಗಳು ದೇವರ ಒಡಂಬಡಿಕೆಯ ಜನರ ಸಂಬಂಧದಲ್ಲಿ ಮಾತ್ರವಲ್ಲದೆ, ಎಲ್ಲ ಕಡೆಯಲ್ಲಿರುವ, ಅಂದರೆ ಬಹು ದೂರದ ದ್ವೀಪಗಳಲ್ಲಿರುವ ಸಹೃದಯದ ಜನರ ಸಂಬಂಧದಲ್ಲಿಯೂ ನಿಜವಾಗಿರಬೇಕಾಗಿತ್ತು. ದೇವರಲ್ಲಿ ಮತ್ತು ತನ್ನ ನಂಬಿಗಸ್ತ ಸೇವಕರ ಪರವಾಗಿ ಕ್ರಿಯೆಗೈಯಲು ಮತ್ತು ಅವರನ್ನು ರಕ್ಷಿಸಲು ಆತನಿಗಿರುವ ಸಾಮರ್ಥ್ಯದಲ್ಲಿ ಅವರಿಗಿರುವ ಭರವಸೆಯು ಎಂದಿಗೂ ನಿರಾಶೆಗೆ ನಡೆಸದು. ಆತನ ಕೈಯಿಂದ ಪ್ರತಿನಿಧಿಸಲ್ಪಟ್ಟಿರುವ ಆತನ ಬಲ ಅಥವಾ ಶಕ್ತಿಯ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಯಾರೂ ತಡೆದು ನಿಲ್ಲಿಸಲಾರರು. (ಯೆಶಾಯ 40:10; ಲೂಕ 1:​51, 52) ತದ್ರೀತಿ ಇಂದು, ದೇವರ ಇಸ್ರಾಯೇಲಿನ ಉಳಿದಿರುವ ಸದಸ್ಯರ ಹುರುಪಿನ ಸಾರುವ ಕೆಲಸವು, ಲಕ್ಷಾಂತರ ಜನರು​—⁠ಅನೇಕರು ಅತಿ ದೂರದ ದ್ವೀಪಗಳಿಂದಲೂ​—⁠ಯೆಹೋವನ ಕಡೆಗೆ ತಿರುಗಿ ಆತನಲ್ಲಿ ನಂಬಿಕೆಯಿಡುವಂತೆ ನಡೆಸಿದೆ.

10. (ಎ) ರಾಜ ನೆಬೂಕದ್ನೆಚ್ಚರನು ಯಾವ ಸತ್ಯವನ್ನು ಕಲಿಯುವಂತೆ ಒತ್ತಾಯಿಸಲ್ಪಡುವನು? (ಬಿ) ಯಾವ “ಆಕಾಶಮಂಡಲ” ಮತ್ತು “ಭೂಮಂಡಲ”ಗಳು ಅಂತ್ಯಗೊಳ್ಳುವವು?

10 ಯೆಹೋವನು ಮುಂದಕ್ಕೆ ಬಾಬೆಲಿನ ರಾಜ ನೆಬೂಕದ್ನೆಚ್ಚರನು ಕಲಿಯಲಿಕ್ಕಿದ್ದ ಒಂದು ಸತ್ಯ ವಿಷಯವನ್ನು ಸೂಚಿಸುತ್ತಾನೆ. ಅದೇನೆಂದರೆ, ಸ್ವರ್ಗ ಅಥವಾ ಭೂಮಿಯಲ್ಲಿರುವ ಯಾವುದೂ ಯೆಹೋವನು ತನ್ನ ಉದ್ದೇಶವನ್ನು ಪೂರೈಸುವುದರಿಂದ ತಡೆಯಲಾರದು. (ದಾನಿಯೇಲ 4:​34, 35) ನಾವು ಓದುವುದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಆಕಾಶಮಂಡಲವನ್ನು ನೋಡಿರಿ, ಕೆಳಗೆ ಭೂಮಂಡಲವನ್ನು ದೃಷ್ಟಿಸಿರಿ; ಆಕಾಶವು ಹೊಗೆಯಂತೆ ಚದರಿಹೋಗುವದು, ಭೂಮಿಯು ವಸ್ತ್ರದ ಹಾಗೆ ಜೀರ್ಣವಾಗುವದು, ಭೂನಿವಾಸಿಗಳು ಸೊಳ್ಳೆಗಳೋಪಾದಿಯಲ್ಲಿ ಸಾಯುವರು; ನನ್ನ ವಿಮೋಚನಕ್ರಿಯೆಯೋ ಶಾಶ್ವತವಾಗಿ ನಿಲ್ಲುವದು, ನನ್ನ ರಕ್ಷಣಧರ್ಮದ ಕಾರ್ಯಕ್ಕೆ ಭಂಗವೇ ಇಲ್ಲ.” (ಯೆಶಾಯ 51:6) ಸೆರೆಯಾಳುಗಳು ಸ್ವದೇಶಕ್ಕೆ ಹಿಂದಿರುಗುವಂತೆ ಬಿಡುವುದು ಬಾಬೆಲಿನ ರಾಜರ ಕಾರ್ಯನೀತಿಯಾಗಿರದಿದ್ದರೂ, ತನ್ನ ಜನರನ್ನು ರಕ್ಷಿಸುವ ಯೆಹೋವನ ಕಾರ್ಯವು ಭಂಗಗೊಳ್ಳದು. (ಯೆಶಾಯ 14:​16, 17) ಬಾಬೆಲಿನ “ಆಕಾಶಮಂಡಲ” ಇಲ್ಲವೆ ಆಳುವ ಶಕ್ತಿಗಳು ಸೋಲಿನಲ್ಲಿ ಮುರಿಯಲ್ಪಡುವವು. ಬಾಬೆಲಿನ “ಭೂಮಂಡಲ” ಇಲ್ಲವೆ ಆ ಆಳುವ ಶಕ್ತಿಗಳ ಕೆಳಗಿರುವ ಪ್ರಜೆಗಳು ಕ್ರಮೇಣ ಅಂತ್ಯಗೊಳ್ಳುವರು. ಹೌದು, ಒಂದು ಸಮಯದಲ್ಲಿ ಆಳುತ್ತಿರುವ ಪ್ರಭುತ್ವವು ಅತ್ಯಂತ ಬಲಶಾಲಿಯಾಗಿರುವುದಾದರೂ, ಅದು ಯೆಹೋವನ ಬಲದ ಎದುರು ನಿಲ್ಲಲಾರದು ಇಲ್ಲವೆ ಆತನ ರಕ್ಷಣಾ ಕಾರ್ಯಗಳನ್ನು ತಡೆದುಹಿಡಿಯಲಾರದು.

11. ಬಾಬೆಲಿನ “ಆಕಾಶಮಂಡಲ” ಮತ್ತು “ಭೂಮಂಡಲ”ಗಳು ಅಂತ್ಯಗೊಳ್ಳುವವು ಎಂಬ ಪ್ರವಾದನೆಯ ಪೂರ್ತಿ ನೆರವೇರಿಕೆಯು ಇಂದು ಕ್ರೈಸ್ತರಿಗೆ ಏಕೆ ಪ್ರೋತ್ಸಾಹದಾಯಕವಾಗಿದೆ?

11 ಈ ಪ್ರವಾದನ ಮಾತುಗಳು ಪೂರ್ಣವಾಗಿ ನೆರವೇರಿದವು ಎಂದು ತಿಳಿಯುವುದು ಇಂದಿನ ಕ್ರೈಸ್ತರಿಗೆ ಎಷ್ಟೊಂದು ಪ್ರೋತ್ಸಾಹದಾಯಕವಾಗಿದೆ! ಏಕೆ? ಏಕೆಂದರೆ, ಮುಂದೆ ಬರಲಿರುವ ಒಂದು ಸಂಭವದ ಕುರಿತು ಅಪೊಸ್ತಲ ಪೇತ್ರನು ಅದೇ ರೀತಿಯ ಪದಗಳನ್ನು ಉಪಯೋಗಿಸುತ್ತಾನೆ. ಅವನು ವೇಗದಿಂದ ಸಮೀಪಿಸುತ್ತಿರುವ ಯೆಹೋವನ ದಿನದ ಕುರಿತು, “ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು” ಎಂದು ಹೇಳಿದನು! ಬಳಿಕ ಅವನು ಹೇಳಿದ್ದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:​11-13; ಯೆಶಾಯ 34:4; ಪ್ರಕಟನೆ 6:12-14) ಬಲಾಢ್ಯ ಜನಾಂಗಗಳು ಮತ್ತು ಅತ್ಯುಚ್ಚ ಸ್ಥಾನದಲ್ಲಿರುವ ಅವುಗಳ ನಕ್ಷತ್ರಸದೃಶ ಪ್ರಭುಗಳು ಯೆಹೋವನ ವಿರುದ್ಧ ಪ್ರತಿಭಟಿಸಿ ನಿಂತರೂ, ಯೆಹೋವನು ತನ್ನ ಕ್ಲುಪ್ತ ಕಾಲದಲ್ಲಿ ಅವರನ್ನು ಸೊಳ್ಳೆಯನ್ನು ಕೊಲ್ಲುವಷ್ಟೇ ಸುಲಭವಾಗಿ ಕೊಂದು ಇಲ್ಲದಂತೆ ಮಾಡುವನು. (ಕೀರ್ತನೆ 2:​1-9) ಆಗ ನೀತಿಯ ಮಾನವ ಸಮಾಜದ ಮೇಲೆ ದೇವರ ನೀತಿಯ ಸರಕಾರವು ಮಾತ್ರ ಆಳುವುದು.​—⁠ದಾನಿಯೇಲ 2:44; ಪ್ರಕಟನೆ 21:​1-4.

12. ಮಾನವ ವಿರೋಧಿಗಳಿಂದ ಅವಮಾನಿಸಲ್ಪಡುವಾಗ ದೇವರ ಸೇವಕರು ಏಕೆ ಭಯಪಡಬಾರದು?

12 “ಸದ್ಧರ್ಮನಿರತರಾದ” ಜನರಿಗೆ ಮಾತಾಡುತ್ತ ಯೆಹೋವನು ಈಗ ಹೇಳುವುದು: “ಧರ್ಮವನ್ನರಿತು ನನ್ನ ಉಪದೇಶವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ ಕಿವಿಗೊಡಿರಿ, ಮನುಷ್ಯರ ದೂರಿಗೆ ಹೆದರಬೇಡಿರಿ, ಅವರ ದೂಷಣೆಗೆ ಅಂಜದಿರಿ. ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವದು, ಹುಳವು ಅವರನ್ನು ಉಣ್ಣೆಯಂತೆ ಮೆದ್ದುಬಿಡುವದು; ನನ್ನ ರಕ್ಷಣಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವದು, ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವದು.” (ಯೆಶಾಯ 51:7, 8) ಯೆಹೋವನಲ್ಲಿ ಭರವಸವಿಡುವವರಿಗೆ, ಅವರ ಧೈರ್ಯದ ನಿಲುವಿನ ಕಾರಣ ಕಳಂಕ ಮತ್ತು ನಿಂದೆಗಳು ಬಂದರೂ ಅದಕ್ಕೆ ಹೆದರಬೇಕಾದ ಕಾರಣವಿರುವುದಿಲ್ಲ. ಹಾಗೆ ಅವಮಾನಿಸುವವರು ಕೇವಲ ಮನುಷ್ಯಮಾತ್ರರಾಗಿರುವುದರಿಂದ, ಹುಳವು ಉಣ್ಣೆಯನ್ನು ತಿಂದುಬಿಡುವಂತೆ ಅವರು ‘ಮೆದ್ದುಬಿಡಲ್ಪಡುವರು.’ * ಪೂರ್ವದ ನಂಬಿಗಸ್ತ ಯೆಹೂದ್ಯರಂತೆ, ಇಂದಿನ ಸತ್ಯ ಕ್ರೈಸ್ತರೂ ತಮ್ಮನ್ನು ವಿರೋಧಿಸುವ ಯಾರಿಗೂ ಭಯಪಡುವ ಕಾರಣವಿರುವುದಿಲ್ಲ. ಏಕೆಂದರೆ, ಅವರ ರಕ್ಷಣೆ ಶಾಶ್ವತ ದೇವರಾದ ಯೆಹೋವನೇ ಆಗಿದ್ದಾನೆ. (ಕೀರ್ತನೆ 37:​1, 2) ದೇವರ ವೈರಿಗಳಿಂದ ಅವರ ಮೇಲೆ ಬರುವ ನಿಂದೆಯು, ಯೆಹೋವನ ಆತ್ಮವು ಅವರ ಮೇಲೆ ಇದೆಯೆಂಬುದಕ್ಕೆ ರುಜುವಾತಾಗಿದೆ.​—⁠ಮತ್ತಾಯ 5:​11, 12; 10:​24-31.

13, 14. “ರಹಬ” ಮತ್ತು “ಘಟಸರ್ಪ” ಎಂಬ ಪದಗಳಿಂದ ಏನು ಸೂಚಿತವಾಗಿದೆ, ಮತ್ತು ಅದು ‘ಛೇದಿಸಲ್ಪಟ್ಟು’ ‘ತಿವಿಯಲ್ಪಡುವುದು’ ಹೇಗೆ?

13 ಬಂದಿಗಳಾದ ತನ್ನ ಜನರ ಪರವಾಗಿ ಯೆಹೋವನು ಕ್ರಮ ಕೈಕೊಳ್ಳಲು ಕರೆ ಕೊಡುತ್ತಾನೋ ಎಂಬಂತೆ ಯೆಶಾಯನು ಹೇಳುವುದು: “ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಬಲವನ್ನು ತಂದುಕೋ! ಪೂರ್ವಕಾಲದಲ್ಲಿ, ಪುರಾತನದ ತಲಾಂತರಗಳಲ್ಲಿ, ಎಚ್ಚರಪಟ್ಟಂತೆ ಈಗಲೂ ಎಚ್ಚತ್ತುಕೋ, ರಹಬನ್ನು ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟ ತೋಳು ನೀನಲ್ಲವೆ; ಸಮುದ್ರವನ್ನೂ ಮಹಾಸಾಗರದ ಜಲರಾಶಿಯನ್ನೂ ಬತ್ತಿಸಿ ವಿಮುಕ್ತಜನರು ಹಾದುಹೋಗುವದಕ್ಕೆ ಸಮುದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದ ಬಾಹು ನೀನೇ ಹೌದು.”​—ಯೆಶಾಯ 51:9, 10.

14 ಯೆಶಾಯನು ಇಲ್ಲಿ ಹೇಳುವ ಐತಿಹಾಸಿಕ ದೃಷ್ಟಾಂತಗಳು ಉತ್ತಮವಾಗಿ ಆಯ್ದುಕೊಂಡವುಗಳಾಗಿವೆ. ಐಗುಪ್ತದಿಂದ ಕೆಂಪು ಸಮುದ್ರದ ಮಾರ್ಗವಾಗಿ ಜನಾಂಗಕ್ಕಾದ ವಿಮೋಚನೆಯು ಪ್ರತಿಯೊಬ್ಬ ಇಸ್ರಾಯೇಲ್ಯನಿಗೂ ತಿಳಿದಿದೆ. (ವಿಮೋಚನಕಾಂಡ 12:​24-27; 14:​26-31) “ರಹಬ” ಮತ್ತು “ಘಟಸರ್ಪ” ಎಂಬ ಪದಗಳು, ಐಗುಪ್ತದಿಂದ ಇಸ್ರಾಯೇಲಿಗಾದ ಬಿಡುಗಡೆಯನ್ನು ವಿರೋಧಿಸಿದ ಫರೋಹನ ಕೈಕೆಳಗಿದ್ದ ಐಗುಪ್ತವನ್ನು ಸೂಚಿಸುತ್ತವೆ. (ಕೀರ್ತನೆ 74:13; 87:4; ಯೆಶಾಯ 30:⁠7) ಪುರಾತನ ಐಗುಪ್ತವು ಒಂದು ದೈತ್ಯಾಕಾರದ ಘಟಸರ್ಪನನ್ನು ಹೋಲುತ್ತಿತ್ತು. ಅದರ ತಲೆ ನೈಲ್‌ ನದೀ ಮುಖಜ ಭೂಮಿಯಲ್ಲಿದ್ದು, ಅದರ ಲಂಬಿಸಿದ ದೇಹವು ಫಲವತ್ತಾದ ನೈಲ್‌ ಕಣಿವೆಯ ವರೆಗೆ ನೂರಾರು ಮೈಲುಗಳಷ್ಟು ವ್ಯಾಪಿಸಿತ್ತು. (ಯೆಹೆಜ್ಕೇಲ 29:⁠3) ಆದರೆ ಬೃಹದಾಕಾರದ ಈ ಸರ್ಪವು ಯೆಹೋವನು ಹತ್ತು ಬಾಧೆಗಳನ್ನು ಅದರ ಮೇಲೆ ಹೊಯ್ದಾಗ ತುಂಡುತುಂಡಾಗಿ ಛೇದಿಸಲ್ಪಟ್ಟಿತು. ಅದರ ಸೈನ್ಯವು ಕೆಂಪು ಸಮುದ್ರದಲ್ಲಿ ನಾಶವಾದಾಗ, ಅದು ತಿವಿಯಲ್ಪಟ್ಟು, ತೀವ್ರವಾಗಿ ಗಾಯಗೊಂಡು, ಬಲಗುಂದಿಸಲ್ಪಟ್ಟಿತು. ಹೌದು, ಐಗುಪ್ತದೊಂದಿಗೆ ತಾನು ನಡೆಸಿದ ವ್ಯವಹಾರಗಳಲ್ಲಿ ಯೆಹೋವನು ತನ್ನ ತೋಳಿನ ಶಕ್ತಿಯನ್ನು ಪ್ರದರ್ಶಿಸಿದನು. ಹೀಗಿರುವಾಗ, ದೇಶಭ್ರಷ್ಟರಾಗಿ ಬಾಬೆಲಿನಲ್ಲಿದ್ದ ತನ್ನ ಜನರ ಪರವಾಗಿ ಹೋರಾಡಲು ಆತನು ಕಡಿಮೆ ಸಿದ್ಧನಾಗಿರುವನೊ?

15. (ಎ) ಚೀಯೋನಿನ ಮೊರೆಯೂ ಕರಕರೆಯೂ ಯಾವಾಗ ಮತ್ತು ಹೇಗೆ ತೊಲಗಿಹೋಗುವವು? (ಬಿ) ಆಧುನಿಕ ಸಮಯಗಳಲ್ಲಿ ಆತ್ಮಿಕ ಇಸ್ರಾಯೇಲಿಗೆ ಮೊರೆಯೂ ಕರಕರೆಯೂ ತೊಲಗಿಹೋದದ್ದು ಯಾವಾಗ?

15 ಬಾಬೆಲಿನಿಂದ ಇಸ್ರಾಯೇಲಿಗೆ ಆಗುವ ವಿಮೋಚನೆಯನ್ನು ಈಗ ಮುನ್ನೋಡುತ್ತ ಪ್ರವಾದನೆಯು ಹೀಗೆ ಮುಂದುವರಿಯುತ್ತದೆ: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.” (ಯೆಶಾಯ 51:11) ಬಾಬೆಲಿನಲ್ಲಿ ಅವರ ಸ್ಥಿತಿಗತಿಯು ಎಷ್ಟೇ ದುಃಖಕರವಾಗಿರಲಿ, ಯೆಹೋವನ ನೀತಿಯನ್ನು ಹುಡುಕುವವರಿಗೆ ಮಹಿಮಾಭರಿತ ಪ್ರತೀಕ್ಷೆಗಳಿವೆ. ಮೊರೆಯೂ ಕರಕರೆಯೂ ಇಲ್ಲದಿರುವಂತಹ ಕಾಲವು ಬರುವುದು. ಉತ್ಸಾಹಧ್ವನಿ, ಹರ್ಷಾನಂದಗಳು ವಿಮೋಚಿತರ ಅಥವಾ ಪ್ರಾಯಶ್ಚಿತ್ತ ನೀಡಲ್ಪಟ್ಟವರ ತುಟಿಗಳಿಂದ ಕೇಳಿಬರುವವು. ಆ ಪ್ರವಾದನ ಮಾತುಗಳ ಆಧುನಿಕ ನೆರವೇರಿಕೆಯಲ್ಲಿ, 1919ರಲ್ಲಿ ದೇವರ ಇಸ್ರಾಯೇಲನ್ನು ಬಾಬೆಲಿನ ಬಂಧನದಿಂದ ಬಿಡುಗಡೆಮಾಡಲಾಯಿತು. ಅವರು ತಮ್ಮ ಆತ್ಮಿಕ ಸ್ಥಿತಿಯೊಳಗೆ ಮಹಾ ಸಂಭ್ರಮದಿಂದ, ಇಂದಿನ ವರೆಗೂ ಮುಂದುವರಿಯುತ್ತಿರುವ ಮಹಾ ಸಂತೋಷ ಸಂಭ್ರಮದಿಂದ ಹಿಂದಿರುಗಿದರು.

16. ಯೆಹೂದ್ಯರನ್ನು ವಿಮೋಚಿಸುವ ಸಲುವಾಗಿ ಯಾವ ಬೆಲೆಯನ್ನು ತೆರಲಾಗುತ್ತದೆ?

16 ಯೆಹೂದ್ಯರ ವಿಮೋಚನೆಗೆ ತಗಲುವ ಬೆಲೆಯೆಷ್ಟು? “ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನಗೆ ಬದಲಾಗಿ ಕೂಷ್‌ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ” ಎಂಬ ಯೆಹೋವನ ಹೇಳಿಕೆಯನ್ನು ಯೆಶಾಯನ ಪ್ರವಾದನೆಯು ಈಗಾಗಲೇ ಪ್ರಕಟಿಸಿದೆ. (ಯೆಶಾಯ 43:1-4) ಇದು ಅನಂತರ ಸಂಭವಿಸುವುದು. ಬಾಬೆಲನ್ನು ಸೋಲಿಸಿ ಯೆಹೂದಿ ಬಂದಿಗಳನ್ನು ಬಿಡಿಸಿದ ಬಳಿಕ, ಪಾರಸಿಯ ಸಾಮ್ರಾಜ್ಯವು ಐಗುಪ್ತ, ಕೂಷ್‌ ಮತ್ತು ಸೆಬಾ ದೇಶಗಳನ್ನು ಸೋಲಿಸಲಿಕ್ಕಿತ್ತು. ಅವುಗಳನ್ನು ಇಸ್ರಾಯೇಲ್ಯರ ಪ್ರಾಣಗಳಿಗೆ ಬದಲಾಗಿ ಈಡುಕೊಡಲಾಗುವುದು. ಇದು ಜ್ಞಾನೋಕ್ತಿ 21:18ರಲ್ಲಿ ತಿಳಿಸಲ್ಪಟ್ಟಿರುವ ಈ ಮೂಲತತ್ತ್ವಕ್ಕನುಸಾರವಾಗಿದೆ: “ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡು.”

ಇನ್ನೂ ಹೆಚ್ಚಿನ ಪುನರಾಶ್ವಾಸನೆ

17. ಬಾಬೆಲಿನ ಕ್ರೋಧಕ್ಕೆ ಭಯಪಡಲು ಯೆಹೂದ್ಯರಿಗೆ ಏಕೆ ಕಾರಣವಿರುವುದಿಲ್ಲ?

17 ಯೆಹೋವನು ಇನ್ನೂ ಹೆಚ್ಚಿನ ಆಶ್ವಾಸನೆಯನ್ನು ತನ್ನ ಜನರಿಗೆ ನೀಡುತ್ತಾನೆ: “ನಾನೇ, ನಾನೇ ನಿನ್ನನ್ನು ಸಂತೈಸುವವನಾಗಿರುವಲ್ಲಿ ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು? ಆಕಾಶಮಂಡಲವನ್ನು ಹರಡಿ ಭೂಲೋಕವನ್ನು ಸ್ಥಾಪಿಸಿದ ನಿನ್ನ ಸೃಷ್ಟಿಕರ್ತನಾದ ಯೆಹೋವನನ್ನು ಮರೆತು ಬಿಟ್ಟಿಯಾ? ನಾಶಮಾಡಬೇಕೆಂದು [ಬಾಣವನ್ನು] ಹೂಡುವ ಹಿಂಸಕನ ಕ್ರೋಧಕ್ಕೆ ದಿನವೆಲ್ಲಾ ಎಡೆಬಿಡದೆ ಅಂಜುತ್ತೀಯಾ? ಆ ಹಿಂಸಕನ [“ನಿಮ್ಮನ್ನು ಸುತ್ತುವರಿಯುವವನ,” NW] ಕ್ರೋಧವು ಎಲ್ಲಿ ತಾನೇ ಇದೆ?” (ಯೆಶಾಯ 51:12, 13) ಮುಂದೆ ಅನೇಕಾನೇಕ ವರ್ಷಗಳ ದೇಶಭ್ರಷ್ಟತೆಯಿದೆ. ಆದರೂ ಬಾಬೆಲಿನ ಕ್ರೋಧಕ್ಕೆ ಹೆದರಲು ಕಾರಣವಿಲ್ಲ. ಬೈಬಲ್‌ ದಾಖಲೆಯ ಮೂರನೆಯ ಲೋಕ ಶಕ್ತಿಯಾದ ಆ ಜನಾಂಗವು ದೇವಜನರನ್ನು ಸೋಲಿಸಿ, ಅವರನ್ನು ‘ಸುತ್ತುವರಿಯಲು’ ಅಥವಾ ಅವರು ತಪ್ಪಿಸಿಕೊಳ್ಳುವ ಮಾರ್ಗವನ್ನು ಅಡ್ಡಗಟ್ಟಲು ಪ್ರಯತ್ನಿಸುವುದಾದರೂ, ಕೋರೆಷನ ಮೂಲಕ ಬಾಬೆಲಿನ ಪತನವನ್ನು ಯೆಹೋವನು ಮುಂತಿಳಿಸಿದ್ದಾನೆಂಬುದು ನಂಬಿಗಸ್ತ ಯೆಹೂದ್ಯರಿಗೆ ಗೊತ್ತಿದೆ. (ಯೆಶಾಯ 44:​8, 24-28) ಸೃಷ್ಟಿಕರ್ತನಿಗೆ ಅಂದರೆ ನಿತ್ಯ ದೇವರಾದ ಯೆಹೋವನಿಗೆ ವ್ಯತಿರಿಕ್ತವಾಗಿ, ಬಾಬೆಲಿನ ಜನರಾದರೊ ಒಣ ಋತುವಿನಲ್ಲಿ ಸೂರ್ಯನ ತೀಕ್ಷ್ಣ ಬಿಸಿಲಿನಲ್ಲಿ ಬಾಡಿಹೋಗುವ ಹುಲ್ಲಿನಂತೆ ನಾಶವಾಗುವರು. ಆಗ ಅವರ ಬೆದರಿಕೆಗಳೂ ಕ್ರೋಧಗಳೂ ಎಲ್ಲಿರುವವು? ಮನುಷ್ಯನಿಗೆ ಭಯಪಟ್ಟು ಭೂಮ್ಯಾಕಾಶಗಳ ನಿರ್ಮಾಣಿಕನಾದ ಯೆಹೋವನನ್ನು ಮರೆತುಬಿಡುವುದು ಅದೆಷ್ಟು ಅವಿವೇಕತನ!

18. ತನ್ನ ಜನರು ಸ್ವಲ್ಪಕಾಲ ಸೆರೆಯಾಳುಗಳಾಗಲಿರುವುದಾದರೂ ಯೆಹೋವನು ಅವರಿಗೆ ಯಾವ ಆಶ್ವಾಸನೆಗಳನ್ನು ಕೊಡುತ್ತಾನೆ?

18 ಯೆಹೋವನ ಜನರು ಸ್ವಲ್ಪಕಾಲದ ವರೆಗೆ ‘ಸೆರೆಯಲ್ಲಿಯೊ’ ಎಂಬಂತೆ ಬಂದಿಗಳಾಗಿರುವುದಾದರೂ, ಅವರ ಬಿಡುಗಡೆಯು ಥಟ್ಟನೆ ಬರುವುದು. ಅವರು ಬಾಬೆಲಿನಲ್ಲಿ ನಾಶವಾಗುವುದೂ ಇಲ್ಲ, ಸೆರೆಯಾಳುಗಳಾಗಿ ಹಸಿವೆಯಿಂದ ಸತ್ತು ಪಾತಾಳಕ್ಕೆ ಇಳಿಯುವುದೂ ಇಲ್ಲ. (ಕೀರ್ತನೆ 30:3; 88:​3-5) ಯೆಹೋವನು ಅವರಿಗೆ ಆಶ್ವಾಸನೆ ನೀಡುವುದು: [ಸೆರೆಯಲ್ಲಿ] ಕುಗ್ಗಿರುವವನು ಸಾಯನು, ಪಾತಾಳಕ್ಕೆ ಇಳಿಯನು, ಬೇಗನೆ ಬಿಡುಗಡೆಯಾಗುವನು; ಅವನಿಗೆ ಅನ್ನದ ಕೊರತೆಯೇ ಇರದು.”​—ಯೆಶಾಯ 51:⁠14.

19. ನಂಬಿಗಸ್ತ ಯೆಹೂದ್ಯರು ಯೆಹೋವನ ಮಾತುಗಳಲ್ಲಿ ಏಕೆ ಪೂರ್ಣ ಭರವಸೆಯನ್ನಿಡಬಲ್ಲರು?

19 ಚೀಯೋನನ್ನು ಇನ್ನೂ ಸಂತೈಸುತ್ತ ಯೆಹೋವನು ಮುಂದುವರಿಸುವುದು: “ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ರೇಗಿಸುವ ನಿನ್ನ ದೇವರಾದ ಯೆಹೋವನು ನಾನೇ; ಸೇನಾಧೀಶ್ವರನಾದ ಯೆಹೋವನೆಂಬದೇ ನನ್ನ ನಾಮಧೇಯ. ಆಕಾಶವನ್ನು ನಿಲ್ಲಿಸಬೇಕೆಂತಲೂ ಭೂಲೋಕವನ್ನು ಸ್ಥಾಪಿಸಬೇಕೆಂತಲೂ ಚೀಯೋನಿಗೆ ನೀನು ನನ್ನ ಜನವೆಂದು ಹೇಳಬೇಕೆಂತಲೂ ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟು ನನ್ನ ಕೈಯ ನೆರಳಿನಲ್ಲಿ ನಿನ್ನನ್ನು ಹುದುಗಿಸಿದ್ದೇನೆ.” (ಯೆಶಾಯ 51:15, 16) ತನ್ನ ಶಕ್ತಿಯನ್ನು ಸಮುದ್ರದ ಮೇಲೆ ವಿಸ್ತರಿಸಿ, ಅದನ್ನು ನಿಯಂತ್ರಿಸಲು ದೇವರಿಗಿರುವ ಸಾಮರ್ಥ್ಯದ ಕುರಿತು ಬೈಬಲು ಪದೇ ಪದೇ ಹೇಳುತ್ತದೆ. (ಯೋಬ 26:12; ಕೀರ್ತನೆ 89:9; ಯೆರೆಮೀಯ 31:35) ದೇವರು ತನ್ನ ಜನರನ್ನು ಐಗುಪ್ತದಿಂದ ಬಿಡಿಸಿದಾಗ ತೋರಿಸಿದಂತೆ, ನೈಸರ್ಗಿಕ ಶಕ್ತಿಗಳ ಮೇಲೆ ಆತನಿಗೆ ಸಂಪೂರ್ಣ ನಿಯಂತ್ರಣವಿದೆ. “ಸೇನಾಧೀಶ್ವರನಾದ ಯೆಹೋವ”ನಿಗೆ ಅತಿ ಚಿಕ್ಕದಾದ ರೀತಿಯಲ್ಲಿಯೂ ಯಾರನ್ನು ಹೋಲಿಸಸಾಧ್ಯವಿದೆ?​—⁠ಕೀರ್ತನೆ 24:⁠10.

20. ಯೆಹೋವನು ಚೀಯೋನನ್ನು ಪುನಸ್ಸ್ಥಾಪಿಸುವಾಗ ಯಾವ ‘ಆಕಾಶಮಂಡಲ’ ಮತ್ತು “ಭೂಮಂಡಲ”ವು ಅಸ್ತಿತ್ವಕ್ಕೆ ಬರುವುದು, ಮತ್ತು ಸಂತೈಸುವಿಕೆಯ ಯಾವ ಮಾತುಗಳನ್ನು ಆತನು ಆಡುವನು?

20 ಯೆಹೂದ್ಯರು ದೇವರ ಒಡಂಬಡಿಕೆಯ ಜನರಾಗಿ ಮುಂದುವರಿಯುತ್ತಾರೆ ಮತ್ತು ಅವರು ಇನ್ನೊಮ್ಮೆ ತನ್ನ ಧರ್ಮಶಾಸ್ತ್ರದ ಕೆಳಗೆ ಜೀವಿಸಲು ಸ್ವದೇಶಕ್ಕೆ ಹಿಂದೆರಳುವರೆಂದು ಯೆಹೋವನು ಆಶ್ವಾಸನೆ ನೀಡುತ್ತಾನೆ. ಅಲ್ಲಿ ಅವರು ಯೆರೂಸಲೇಮ್‌ ಮತ್ತು ಅದರ ದೇವಾಲಯವನ್ನು ಪುನಃ ಕಟ್ಟಿ, ಮೋಶೆಯ ಮೂಲಕ ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುವರು. ದೇಶವು ಹಿಮ್ಮರಳಿದ ಜನರಿಂದ ಮತ್ತು ಸಾಕುಪ್ರಾಣಿಗಳಿಂದ ತುಂಬಲ್ಪಡಲು ಆರಂಭವಾಗುವಾಗ, ಒಂದು “ನೂತನ ಭೂಮಂಡಲ”ವು ಅಸ್ತಿತ್ವಕ್ಕೆ ಬರುವುದು. ಇದರ ದೊರೆತನಕ್ಕಾಗಿ ಒಂದು ಹೊಸ ಸರಕಾರೀ ವ್ಯವಸ್ಥೆಯಾದ “ನೂತನಾಕಾಶಮಂಡಲ”ವು ಇರುವುದು. (ಯೆಶಾಯ 65:17-19; ಹಗ್ಗಾಯ 1:​1, 14) ಯೆಹೋವನು ಚೀಯೋನಿಗೆ ಪುನಃ “ನೀನು ನನ್ನ ಜನ” ಎಂದು ಹೇಳುವನು.

ಕಾರ್ಯವೆಸಗಲು ಕರೆ

21. ಯೆಹೋವನು ಕಾರ್ಯವೆಸಗುವ ಯಾವ ಕರೆಯನ್ನು ಕೊಡುತ್ತಾನೆ?

21 ಚೀಯೋನಿಗೆ ಪುನರಾಶ್ವಾಸನೆ ನೀಡಿದ ಬಳಿಕ ಯೆಹೋವನು ಅವಳಿಗೆ ಕಾರ್ಯವೆಸಗುವಂತೆ ಕರೆಕೊಡುತ್ತಾನೆ. ಆಕೆಯ ಕಷ್ಟಾನುಭವ ಇನ್ನೇನು ಅಂತ್ಯಗೊಳ್ಳಲಿದೆಯೊ ಎಂಬಂತೆ ಆತನು ಹೇಳುವುದು: “ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ, ಎಚ್ಚತ್ತುಕೋ, ಎಚ್ಚತ್ತುಕೋ, ಎದ್ದುನಿಲ್ಲು! ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದುಬಿಟ್ಟಿದ್ದೀ.” (ಯೆಶಾಯ 51:17) ಹೌದು, ಯೆರೂಸಲೇಮು ತನ್ನ ವಿಪತ್ಕಾರಕ ಅವಸ್ಥೆಯಿಂದ ಎದ್ದು, ಆಕೆಗೆ ಈ ಹಿಂದೆ ಇದ್ದ ಸ್ಥಾನ ಮತ್ತು ವೈಭವವನ್ನು ಪಡೆದುಕೊಳ್ಳಬೇಕು. ಆಕೆಯು ದೈವಿಕ ಶಿಕ್ಷೆಯೆಂಬ ಸೂಚಕರೂಪದ ಆ ಪಾತ್ರೆಯಿಂದ ಏನೂ ಉಳಿಸದೆ ಕುಡಿದುಬಿಟ್ಟಿರುವ ಸಮಯ ಬರುವುದು. ಆಕೆಯ ಕಡೆಗೆ ದೇವರ ರೋಷವು ಬತ್ತಿಹೋಗಿರುವುದು.

22, 23. ಯೆಹೋವನ ರೋಷದ ಪಾತ್ರೆಯಿಂದ ಕುಡಿಯುವಾಗ ಯೆರೂಸಲೇಮ್‌ ಏನನ್ನು ಅನುಭವಿಸುವುದು?

22 ಆದರೂ, ಯೆರೂಸಲೇಮು ಶಿಕ್ಷೆಯನ್ನು ಅನುಭವಿಸುತ್ತಿರುವಾಗ, ಆಕೆಯ ನಿವಾಸಿಗಳಲ್ಲಿ, ಅಂದರೆ ಆಕೆಯ ‘ಕುಮಾರರಲ್ಲಿ’ ಯಾವನೂ ಏನು ಸಂಭವಿಸುತ್ತಿದೆಯೊ ಅದನ್ನು ತಡೆದುಹಿಡಿಯಲಾರನು. (ಯೆಶಾಯ 43:​5-7; ಯೆರೆಮೀಯ 3:14) ಪ್ರವಾದನೆಯು ಹೇಳುವುದು: “ಹೆತ್ತ ಮಕ್ಕಳಲ್ಲೆಲ್ಲಾ ಅವಳನ್ನು ಕರೆದುಕೊಂಡು ಹೋಗುವವನು ಯಾರೂ ಇಲ್ಲ; ಸಾಕಿದ ಆ ಸಕಲ ಕುಮಾರರಲ್ಲಿ ಅವಳ ಕೈಹಿಡಿಯುವವನು ಒಬ್ಬನೂ ಇಲ್ಲ.” (ಯೆಶಾಯ 51:18) ಬಾಬೆಲಿನ ಜನರ ಕೈಯಿಂದ ಅವಳು ಅನುಭವಿಸುವ ಕಷ್ಟಗಳೊ ಬಹಳ! “ಸಹತಾಪದಿಂದ ನಿನಗಾಗಿ ಬಡುಕೊಳ್ಳುವವರು ಯಾರಿದ್ದಾರೆ? ನಿನಗೆ ಈ ಎರಡು ಬಾಧೆಗಳು ಬಂದಿವೆ, [ನಿನ್ನ ದೇಶವು] ಹಾಳುಪಾಳಾಗಿದೆ, [ನಿನ್ನ ಪ್ರಜೆಗೆ] ಕ್ಷಾಮವೂ ಖಡ್ಗವೂ ಪ್ರಾಪ್ತವಾಗಿವೆ; ನಾನು ನಿನ್ನನ್ನು ಹೇಗೆ ಸಂತೈಸಲಿ? ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಯಂತೆ ಬೀದಿಗಳೆಲ್ಲಾ ಕೂಡುವ ಚೌಕದಲ್ಲಿ ಬಿದ್ದಿದ್ದಾರೆ; ಯೆಹೋವನ ರೋಷವನ್ನೂ ನಿನ್ನ ದೇವರ ತರ್ಜನವನ್ನೂ ಹೊಟ್ಟೆತುಂಬಾ ಕುಡಿದಿದ್ದಾರೆ.”​—ಯೆಶಾಯ 51:19, 20.

23 ಬಡಪಾಯಿ ಯೆರೂಸಲೇಮ್‌! ಆಕೆ ‘ಹಾಳುಪಾಳನ್ನು’ ಹಾಗೂ ‘ಕ್ಷಾಮ ಮತ್ತು ಖಡ್ಗವನ್ನು’ ಸಹ ಅನುಭವಿಸುವಳು. ಆಕೆಯನ್ನು ಜೀವಂತಳಾಗಿ ಮತ್ತು ಬಲವಾಗಿರಿಸಲು ಅಶಕ್ತರಾಗಿ, ಆಕೆಯ “ಕುಮಾರರು” ಬಾಬೆಲಿನ ಆಕ್ರಮಣಕಾರರನ್ನು ಹಿಮ್ಮೆಟ್ಟಲು ಸಾಧ್ಯವಿಲ್ಲದೆ ಸಹಾಯಶೂನ್ಯರಾಗಿ, ಕೃಶರಾಗಿ, ಬಲಹೀನರಾಗಿ ನಿಂತುಕೊಂಡು ನೋಡುವರು. ಗಮನ ಸೆಳೆಯುವಂಥ ರೀತಿಯಲ್ಲಿ, ಬೀದಿಗಳ ತುದಿಗಳಲ್ಲಿ ಅಥವಾ ಮೂಲೆಗಳಲ್ಲಿ ಅವರು ಪ್ರಜ್ಞಾಹೀನರಾಗಿ, ಬಲಹೀನರೂ ತೀರ ದಣಿದವರೂ ಆಗಿ ಬಿದ್ದಿರುವರು. (ಪ್ರಲಾಪಗಳು 2:19; 4:​1, 2) ಅವರು ದೇವರ ರೋಷದ ಪಾತ್ರೆಯಿಂದ ಕುಡಿದವರಾಗಿದ್ದು ಬಲೆಯಲ್ಲಿ ಸಿಕ್ಕಿಬಿದ್ದಿರುವ ಪ್ರಾಣಿಗಳಷ್ಟೇ ನಿಶ್ಶಕ್ತರಾಗಿರುವರು.

24, 25. (ಎ) ಯೆರೂಸಲೇಮಿಗೆ ಯಾವ ಸಂಭವವು ಇನ್ನೊಮ್ಮೆ ಸಂಭವಿಸದು? (ಬಿ) ಯೆರೂಸಲೇಮಿನ ಬಳಿಕ ಯೆಹೋವನ ರೋಷದ ಪಾತ್ರೆಯಿಂದ ಇನ್ನು ಮುಂದೆ ಯಾರು ಕುಡಿಯುವರು?

24 ಆದರೆ ಈ ದುಃಖಕರವಾದ ಸ್ಥಿತಿಗತಿ ಅಂತ್ಯಗೊಳ್ಳುವುದು. ಯೆಶಾಯನು ಸಂತೈಸುತ್ತ ಹೇಳುವುದು: “ಹೀಗಿರಲು, ಗತಿಹೀನಳೇ, ದ್ರಾಕ್ಷಾರಸವಿಲ್ಲದೆ ಅಮಲೇರಿದವಳೇ, ಇದನ್ನು ಕೇಳು; ನಿನ್ನ ಕರ್ತನೂ ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೆಹೋವನು ಹೀಗನ್ನುತ್ತಾನೆ​—⁠ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ ನನ್ನ ರೋಷವು ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು; ಅದನ್ನು ನೀನು ಇನ್ನು ಕುಡಿಯೆ; ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು; ಅವರು ನಿನಗೆ​—⁠ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು ಎಂದು ಹೇಳಲು ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡಿಯಲ್ಲಾ.” (ಯೆಶಾಯ 51:​21-23) ಯೆರೂಸಲೇಮನ್ನು ಹೀಗೆ ಶಿಸ್ತಿಗೊಳಪಡಿಸಿದ ಬಳಿಕ, ಯೆಹೋವನು ಈಗ ಆಕೆಯೊಂದಿಗೆ ಕನಿಕರದಿಂದ ಕ್ರಿಯೆಗೈಯಲು ಮತ್ತು ಆಕೆಯ ಕಡೆಗೆ ಕ್ಷಮಾಭಾವವನ್ನೂ ತೋರಿಸಲು ಸಿದ್ಧನಾಗಿದ್ದಾನೆ.

25 ಈಗ ಯೆಹೋವನು ತನ್ನ ರೋಷವನ್ನು ಯೆರೂಸಲೇಮಿನಿಂದ ತಿರುಗಿಸಿ ಬಾಬೆಲಿನ ಮೇಲೆ ಸುರಿಸುವನು. ಬಾಬೆಲು ಯೆರೂಸಲೇಮನ್ನು ಧ್ವಂಸಮಾಡಿ ಆಕೆಗೆ ಅಪಮಾನಮಾಡಿರುವಳು. (ಕೀರ್ತನೆ 137:​7-9) ಆದರೆ ಯೆರೂಸಲೇಮಿಗೆ ಇನ್ನೊಮ್ಮೆ ಬಾಬೆಲಿನಿಂದ ಅಥವಾ ಆಕೆಯ ಮಿತ್ರರಾಷ್ಟ್ರಗಳಿಂದ ಅಂಥ ಪಾತ್ರೆಯಿಂದ ಕುಡಿಯಲಿಕ್ಕಿರುವುದಿಲ್ಲ. ಇದಕ್ಕೆ ಬದಲಾಗಿ, ಈಗ ಆ ಪಾತ್ರೆಯು ಯೆರೂಸಲೇಮಿನ ಕೈಯಿಂದ ತೆಗೆದು ಆಕೆಯ ಅಪಮಾನದಲ್ಲಿ ಸಂತೋಷಿಸಿದವರಿಗೆ ಕೊಡಲ್ಪಡುವುದು. (ಪ್ರಲಾಪಗಳು 4:​21, 22) ಬಾಬೆಲು ತೀರ ಕುಡಿದು ಮತ್ತಳಾಗಿ ಪತನಗೊಳ್ಳುವಳು. (ಯೆರೆಮೀಯ 51:​6-8) ಈ ಮಧ್ಯೆ ಚೀಯೋನು ಎದ್ದೇಳುತ್ತಾಳೆ! ಇದೆಂಥ ಬದಲಾವಣೆ! ನಿಜವಾಗಿಯೂ ಇಂತಹ ಪ್ರತೀಕ್ಷೆಯಿಂದ ಚೀಯೋನಿಗೆ ಸಾಂತ್ವನ ದೊರೆಯಬಲ್ಲದು. ಮತ್ತು ಯೆಹೋವನ ರಕ್ಷಣಾ ಕಾರ್ಯಗಳಿಂದ ಆತನ ನಾಮವು ಪವಿತ್ರೀಕರಿಸಲ್ಪಡುವುದೆಂಬ ಆಶ್ವಾಸನೆ ಯೆಹೋವನ ಸೇವಕರಿಗಿರಬಲ್ಲದು.

[ಪಾದಟಿಪ್ಪಣಿ]

^ ಪ್ಯಾರ. 12 ಇಲ್ಲಿ ಹೇಳಲಾಗಿರುವ ಹುಳವು, ನಾಶಕಾರಕವಾದ ಮರಿಹುಳು ಹಂತದಲ್ಲಿರುವ ಬಲೆ ನೆಯ್ಯುವ ಬಟ್ಟೆನುಸಿ ಆಗಿರಬೇಕು.

[ಅಧ್ಯಯನ ಪ್ರಶ್ನೆಗಳು]

[ಪುಟ 167ರಲ್ಲಿರುವ ಚಿತ್ರ]

ಆತನ ಜನರನ್ನು ಎಲ್ಲಿಂದ “ತೆಗೆಯ”ಲಾಯಿತೊ ಆ “ಬಂಡೆ” ಮಹಾ ಅಬ್ರಹಾಮನಾದ ಯೆಹೋವನೇ ಆಗಿದ್ದಾನೆ

[ಪುಟ 170ರಲ್ಲಿರುವ ಚಿತ್ರ]

ದೇವಜನರ ವಿರೋಧಿಗಳು ನುಸಿತಿಂದ ಬಟ್ಟೆಯಂತೆ ಇಲ್ಲದೇ ಹೋಗುವರು

[ಪುಟ 176, 177ರಲ್ಲಿರುವ ಚಿತ್ರ]

ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸಲು ತನಗಿರುವ ಶಕ್ತಿಯನ್ನು ಯೆಹೋವನು ತೋರಿಸಿದ್ದಾನೆ

[ಪುಟ 178ರಲ್ಲಿರುವ ಚಿತ್ರ]

ಯೆರೂಸಲೇಮು ಯಾವ ಪಾತ್ರೆಯಿಂದ ಕುಡಿದಿರುತ್ತದೊ ಅದನ್ನು ಬಾಬೆಲಿಗೂ ಆಕೆಯ ಮಿತ್ರರಾಷ್ಟ್ರಗಳಿಗೂ ದಾಟಿಸಲಿಕ್ಕಿದೆ