ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರವಾದಿಯೊಬ್ಬನು ಮಾನವಕುಲಕ್ಕೆ ಬೆಳಕನ್ನು ತರುತ್ತಾನೆ

ದೇವರ ಪ್ರವಾದಿಯೊಬ್ಬನು ಮಾನವಕುಲಕ್ಕೆ ಬೆಳಕನ್ನು ತರುತ್ತಾನೆ

ಅಧ್ಯಾಯ ಒಂದು

ದೇವರ ಪ್ರವಾದಿಯೊಬ್ಬನು ಮಾನವಕುಲಕ್ಕೆ ಬೆಳಕನ್ನು ತರುತ್ತಾನೆ

1, 2. ಅನೇಕರಿಗೆ ಇಂದಿನ ಯಾವ ಸ್ಥಿತಿಗತಿಗಳು ಹೆಚ್ಚು ವ್ಯಾಕುಲತೆಯನ್ನು ಉಂಟುಮಾಡುತ್ತವೆ?

ಮನುಷ್ಯನು ಕಾರ್ಯತಃ ಪ್ರತಿಯೊಂದೂ ಕೆಲಸವನ್ನು ಮಾಡಸಾಧ್ಯವೆಂದು ತೋರಿಬರುವ ಯುಗದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಆಕಾಶಯಾನ, ಕಂಪ್ಯೂಟರ್‌ ತಾಂತ್ರಿಕತೆ, ತಳಿ ಎಂಜಿನಿಯರಿಂಗ್‌ ಹಾಗೂ ಇನ್ನಿತರ ವೈಜ್ಞಾನಿಕ ಪ್ರಗತಿಗಳು ಮಾನವಕುಲಕ್ಕೆ ಹೊಸ ಸಾಧ್ಯತೆಗಳ ದಾರಿ ತೆರೆದು, ಹೆಚ್ಚು ಉತ್ತಮವಾದ ಮತ್ತು ಪ್ರಾಯಶಃ ಹೆಚ್ಚು ದೀರ್ಘವಾಗಿರುವ ಜೀವನದ ನಿರೀಕ್ಷೆಯನ್ನೂ ತಂದಿವೆ.

2 ಆದರೆ ಇಂತಹ ಪ್ರಗತಿಗಳು ನಿಮ್ಮ ಬಾಗಿಲುಗಳಿಗೆ ಬೀಗ ಜಡಿಯುವ ಆವಶ್ಯಕತೆಯನ್ನು ಕಡಿಮೆಗೊಳಿಸಿವೆಯೋ? ಯುದ್ಧದ ಬೆದರಿಕೆಯನ್ನು ನಿವಾರಿಸಿವೆಯೋ? ಅವು ರೋಗವನ್ನು ವಾಸಿಮಾಡಿವೆಯೋ ಅಥವಾ ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳುವಾಗ ಆಗುವ ದುಃಖವನ್ನು ನಿವಾರಣೆಮಾಡಿವೆಯೋ? ಖಂಡಿತವಾಗಿಯೂ ಇಲ್ಲ! ಮಾನವ ಪ್ರಗತಿಯು ಗಮನಾರ್ಹವೆಂಬುದು ನಿಜವಾದರೂ, ಅದು ತುಂಬ ಸೀಮಿತವಾಗಿದೆ. ವರ್ಲ್ಡ್‌ವಾಚ್‌ ಇನ್‌ಸ್ಟಿಟ್ಯೂಟಿನ ಒಂದು ವರದಿಯು ತಿಳಿಸುವುದು: “ಚಂದ್ರಲೋಕಕ್ಕೆ ಪ್ರಯಾಣಿಸುವ ವಿಧ ನಮಗೆ ಗೊತ್ತಿದೆ. ಹೆಚ್ಚು ಶಕ್ತಿಯ ಸಿಲಿಕಾನ್‌ ಚಿಪ್‌ಗಳನ್ನು ಹೇಗೆ ಮಾಡುವುದೆಂಬುದನ್ನು ನಾವು ತಿಳಿದಿದ್ದೇವೆ ಮತ್ತು ಮಾನವ ವಂಶವಾಹಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸ್ಥಳಾಂತರಿಸುವುದು ಹೇಗೆಂದು ನಮಗೆ ಗೊತ್ತು. ಆದರೆ ನಾವು ಈಗಲೂ ನೂರು ಕೋಟಿ ಜನರಿಗೆ ಶುದ್ಧ ನೀರನ್ನು ಒದಗಿಸಲು ಶಕ್ತರಾಗಿಲ್ಲ. ಸಾವಿರಾರು ಜೀವಜಾತಿಗಳು ನಾಮಾವಶೇಷವಾಗುವುದನ್ನು ನಾವು ನಿಧಾನಗೊಳಿಸಲೂ ಸಮರ್ಥರಾಗಿಲ್ಲ, ಅಥವಾ ಪರಿಸರವನ್ನು ಶಿಥಿಲಗೊಳಿಸದೆ ನಮ್ಮ ಇಂಧನಾವಶ್ಯಕತೆಗಳನ್ನು ಪೂರೈಸಿಕೊಂಡಿರುವುದೂ ಇಲ್ಲ.” ಹೀಗಿರುವುದರಿಂದ, ಅನೇಕರು ಭವಿಷ್ಯತ್ತನ್ನು ವ್ಯಾಕುಲತೆಯಿಂದ ನೋಡಿ, ಸಾಂತ್ವನ ಮತ್ತು ನಿರೀಕ್ಷೆಗಾಗಿ ಎತ್ತ ತಿರುಗೋಣ ಎಂಬುದರ ಕುರಿತು ಅನಿಶ್ಚಿತರಾಗಿರುವುದು ಏಕೆಂಬುದು ನಮಗೆ ತಿಳಿಯುತ್ತದೆ.

3. ಯೆಹೂದದಲ್ಲಿ ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಯಾವ ಸ್ಥಿತಿಗತಿಯಿತ್ತು?

3 ನಾವು ಇಂದು ಎದುರಿಸುವ ಸ್ಥಿತಿಗತಿಯು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ದೇವಜನರು ಎದುರಿಸಿದ ಸ್ಥಿತಿಗತಿಯಂತಿದೆ. ಆ ಸಮಯದಲ್ಲಿ ಯೆಹೂದದ ನಿವಾಸಿಗಳಿಗೆ ಸಾಂತ್ವನದ ಸಂದೇಶವೊಂದನ್ನು ಕೊಂಡೊಯ್ಯುವಂತೆ ದೇವರು ತನ್ನ ಸೇವಕನಾಗಿದ್ದ ಯೆಶಾಯನನ್ನು ನೇಮಿಸಿದನು. ಮತ್ತು ಆ ಸಮಯದಲ್ಲಿ ಅವರಿಗೆ ಸಾಂತ್ವನವು ಬೇಕಾಗಿತ್ತು. ಏಕೆಂದರೆ ಆ ರಾಷ್ಟ್ರದಲ್ಲಿ ಗೊಂದಲಮಯ ಘಟನೆಗಳು ನಡೆಯಲಿದ್ದವು. ಕ್ರೂರ ಅಶ್ಶೂರ ಸಾಮ್ರಾಜ್ಯವು ಆ ದೇಶವನ್ನು ಆಕ್ರಮಿಸಲಿಕ್ಕಿದ್ದ ಸಂಗತಿ ಅನೇಕರಲ್ಲಿ ಭಯಭೀತಿಯನ್ನು ಹುಟ್ಟಿಸಿತ್ತು. ಹಾಗಾದರೆ ರಕ್ಷಣೆಗಾಗಿ ದೇವಜನರು ಯಾರ ಕಡೆಗೆ ತಿರುಗಸಾಧ್ಯವಿತ್ತು? ಯೆಹೋವನು ತಮ್ಮ ದೇವರೆಂದು ಅವರು ಹೇಳಿಕೊಳ್ಳುತ್ತಿದ್ದರೂ, ಅವರು ತಮ್ಮ ಭರವಸೆಯನ್ನು ಮನುಷ್ಯರ ಮೇಲಿಡಲು ಇಷ್ಟಪಟ್ಟರು.​—⁠2 ಅರಸುಗಳು 16:7; 18:⁠21.

ಕತ್ತಲಲ್ಲಿ ಹೊಳೆಯುತ್ತಿದ್ದ ಬೆಳಕು

4. ಯಾವ ದ್ವಿಗುಣ ಸಂದೇಶವನ್ನು ಸಾರಲು ಯೆಶಾಯನು ನೇಮಿಸಲ್ಪಟ್ಟನು?

4 ಯೆಹೂದದ ದಂಗೆಕೋರ ಮಾರ್ಗಕ್ರಮದ ಕಾರಣ ಯೆರೂಸಲೇಮ್‌ ನಾಶಗೊಳ್ಳಲಿತ್ತು, ಅಷ್ಟುಮಾತ್ರವಲ್ಲ ಯೆಹೂದದ ನಿವಾಸಿಗಳು ಬಾಬೆಲಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡಲಿದ್ದರು. ಹೌದು, ಅಂಧಕಾರದ ಕಾಲಗಳು ಬರಲಿದ್ದವು. ಈ ವಿಪತ್ಕಾರಕ ಸಮಯವನ್ನು ಮುಂತಿಳಿಸಲಿಕ್ಕಾಗಿಯೇ ಯೆಹೋವನು ತನ್ನ ಪ್ರವಾದಿಯಾಗಿದ್ದ ಯೆಶಾಯನನ್ನು ನೇಮಿಸಿದ್ದರೂ, ಸುವಾರ್ತೆಯನ್ನೂ ಸಾರುವಂತೆ ಆತನು ಯೆಶಾಯನಿಗೆ ತಿಳಿಸಿದ್ದನು. ಅದೇನೆಂದರೆ, 70 ವರುಷಗಳ ಬಳಿಕ ಯೆಹೂದ್ಯರಿಗೆ ಬಾಬೆಲಿನಿಂದ ವಿಮೋಚನೆ ದೊರೆಯಲಿಕ್ಕಿತ್ತು! ಆಗ, ಹರ್ಷಿಸುವ ಜನಶೇಷವೊಂದಕ್ಕೆ ಚೀಯೋನಿಗೆ ಹಿಂದಿರುಗಿ ಬಂದು, ಅಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ಸದವಕಾಶ ದೊರೆಯಲಿತ್ತು. ಈ ಸಂತಸದ ಸಂದೇಶದಿಂದ, ಯೆಹೋವನು ತನ್ನ ಪ್ರವಾದಿಯ ಮೂಲಕ ಅಂಧಕಾರದಲ್ಲಿ ಬೆಳಕು ಪ್ರಕಾಶಿಸುವಂತೆ ಮಾಡಿದನು.

5. ಯೆಹೋವನು ತನ್ನ ಉದ್ದೇಶಗಳನ್ನು ಅಷ್ಟು ಮುಂಚಿತವಾಗಿ ತಿಳಿಯಪಡಿಸಿದ್ದೇಕೆ?

5 ಯೆಶಾಯನು ತನ್ನ ಪ್ರವಾದನೆಯನ್ನು ದಾಖಲಿಸಿದ ಬಳಿಕ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯ ಗತಿಸುವ ತನಕ ಯೆಹೂದ ದೇಶವು ಧ್ವಂಸಗೊಳ್ಳಲಿಲ್ಲ. ಹೀಗಿರುವಾಗ, ಯೆಹೋವನು ಅಷ್ಟು ಮುಂಚಿತವಾಗಿ ತನ್ನ ಉದ್ದೇಶಗಳನ್ನು ಅವರಿಗೆ ತಿಳಿಯಪಡಿಸಿದ್ದೇಕೆ? ಆ ಪ್ರವಾದನೆಗಳು ನೆರವೇರುವುದಕ್ಕೆ ಮೊದಲೇ ಯೆಶಾಯನ ಘೋಷಣೆಗಳನ್ನು ವ್ಯಕ್ತಿಪರವಾಗಿ ಕೇಳಿದ್ದ ಜನರು ಸತ್ತು ಬಹಳಷ್ಟು ಸಮಯ ದಾಟಿರಲಿಲ್ಲವೇ? ಅದು ನಿಜ. ಆದರೂ, ಯೆಹೋವನು ಯೆಶಾಯನಿಗೆ ಕೊಟ್ಟ ಪ್ರಕಟನೆಗಳ ಸಹಾಯದಿಂದಾಗಿ, ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನದ ಸಮಯದಲ್ಲಿ ಜೀವಿಸುತ್ತಿದ್ದವರಿಗೆ ಯೆಶಾಯನ ಪ್ರವಾದನ ಸಂದೇಶಗಳ ಲಿಖಿತ ದಾಖಲೆಯೊಂದು ಇರಲಿತ್ತು. ಯೆಹೋವನು, “ಆರಂಭದಲ್ಲಿಯೇ ಅಂತ್ಯವನ್ನು” ತಿಳಿಸುವವನು, “ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ” ಅರುಹುವವನು ಎಂಬುದಕ್ಕೆ ಇದು ನಿರಾಕರಿಸಲಾಗದಂಥ ರುಜುವಾತನ್ನು ಕೊಟ್ಟಿತು.​—⁠ಯೆಶಾಯ 46:10; 55:​10, 11.

6. ಮಾನವ ಭವಿಷ್ಯವಾದಿಗಳಿಗಿಂತ ಯೆಹೋವನು ಯಾವ ಕೆಲವು ವಿಧಗಳಲ್ಲಿ ಶ್ರೇಷ್ಠನಾಗಿದ್ದಾನೆ?

6 ಯೆಹೋವನು ಮಾತ್ರ ಯೋಗ್ಯವಾಗಿಯೇ ಹೀಗೆ ಹೇಳಬಲ್ಲನು. ಮನುಷ್ಯನು ಒಂದು ನಿರ್ದಿಷ್ಟ ಅವಧಿಯ ರಾಜಕೀಯ ಅಥವಾ ಸಾಮಾಜಿಕ ವಾತಾವರಣದ ಕುರಿತಾದ ತನ್ನ ತಿಳಿವಳಿಕೆಗನುಸಾರ ಸಮೀಪ ಭವಿಷ್ಯವನ್ನು ಮುಂತಿಳಿಸಲು ಶಕ್ತನಾಗಿರಬಹುದು. ಆದರೆ ಕಾಲ ಪ್ರವಾಹದಲ್ಲಿ ಯಾವುದೇ ಒಂದು ಹಂತದಲ್ಲಿ ಅಂದರೆ ದೂರದ ಭವಿಷ್ಯದಲ್ಲಿಯೂ ಏನು ಸಂಭವಿಸುವುದೆಂದು ನಿಶ್ಚಯತೆಯಿಂದ ಮುನ್ನೋಡಬಲ್ಲವನು ಯೆಹೋವನು ಮಾತ್ರ. ಘಟನೆಗಳು ಸಂಭವಿಸುವುದಕ್ಕೆ ತೀರ ಮುಂಚೆಯೇ ಅವುಗಳನ್ನು ಮುಂತಿಳಿಸುವಂತೆ ಆತನು ತನ್ನ ಸೇವಕರಿಗೂ ಶಕ್ತಿ ನೀಡಬಲ್ಲನು. ಬೈಬಲು ಹೇಳುವುದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”​—⁠ಆಮೋಸ 3:⁠7.

ಎಷ್ಟು ಮಂದಿ “ಯೆಶಾಯರು”?

7. ಅನೇಕ ವಿದ್ವಾಂಸರು ಯೆಶಾಯನ ಪುಸ್ತಕದ ಬರವಣಿಗೆಯ ಸಂಬಂಧದಲ್ಲಿ ಹೇಗೆ ಸಂದೇಹಪಟ್ಟಿದ್ದಾರೆ, ಮತ್ತು ಏಕೆ?

7 ಈ ಪ್ರವಾದನೆಯು ಅನೇಕ ವಿದ್ವಾಂಸರನ್ನು, ಅದನ್ನು ಯೆಶಾಯನು ಬರೆದನೊ ಇಲ್ಲವೊ ಎಂದು ಕೇಳುವಂತೆ ಮಾಡಿದೆ. ಆ ಪುಸ್ತಕದ ಕೊನೆಯ ಭಾಗವನ್ನು, ಸಾ.ಶ.ಪೂ. ಆರನೆಯ ಶತಮಾನದಲ್ಲಿ ಜೀವಿಸಿದ ಒಬ್ಬ ವ್ಯಕ್ತಿಯು, ಒಂದೋ ಬಾಬೆಲಿನಲ್ಲಿನ ದೇಶಭ್ರಷ್ಟತೆಯ ಸಮಯದಲ್ಲಿ ಇಲ್ಲವೇ ಆ ಬಳಿಕ ಬರೆದಿರಬೇಕೆಂದು ಈ ವಿಮರ್ಶಕರು ಪಟ್ಟುಹಿಡಿದು ಹೇಳುತ್ತಾರೆ. ಅವರಿಗನುಸಾರ, ಯೆಹೂದದ ಹಾಳುಬೀಳುವಿಕೆಯ ಕುರಿತಾದ ಪ್ರವಾದನೆಗಳು ಅವು ನೆರವೇರಿದ ಬಳಿಕ ಬರೆಯಲ್ಪಟ್ಟಿರುವುದರಿಂದ, ಅವು ಭವಿಷ್ಯವಾಣಿಗಳೇ ಅಲ್ಲ. ಅಲ್ಲದೆ, 40ನೆಯ ಅಧ್ಯಾಯದ ಬಳಿಕ ಯೆಶಾಯನ ಪುಸ್ತಕವು, ಬಾಬೆಲು ಆಗ ಅಸ್ತಿತ್ವದಲ್ಲಿದ್ದ ರಾಜಕೀಯ ಶಕ್ತಿಯಾಗಿತ್ತೋ ಎಂಬಂತೆ ಮತ್ತು ಇಸ್ರಾಯೇಲ್ಯರು ಅಲ್ಲಿ ಈಗಾಗಲೇ ಬಂಧಿಗಳಾಗಿದ್ದರೊ ಎಂಬಂತೆ ಮಾತಾಡುತ್ತದೆಂದೂ ಆ ವಿಮರ್ಶಕರು ಹೇಳುತ್ತಾರೆ. ಆ ಕಾರಣದಿಂದ, ಯೆಶಾಯನ ಪುಸ್ತಕದ ಉತ್ತರಾರ್ಧವನ್ನು ಬರೆದವನು, ಆ ಶಕದಲ್ಲಿ ಅಂದರೆ, ಸಾ.ಶ.ಪೂ. ಆರನೆಯ ಶತಮಾನದಲ್ಲಿ ಬರೆದಿರಬೇಕೆಂಬುದು ಅವರ ತರ್ಕ. ಇಂತಹ ತರ್ಕಕ್ಕೆ ಸ್ಥಿರವಾದ ಆಧಾರವಿದೆಯೆ? ಇಲ್ಲವೇ ಇಲ್ಲ!

8. ಯೆಶಾಯನ ಪುಸ್ತಕದ ಬರವಣಿಗೆಯ ಕುರಿತಾದ ಸಂದೇಹವು ಯಾವಾಗ ಆರಂಭಗೊಂಡಿತು, ಮತ್ತು ಅದು ಹೇಗೆ ಹರಡಿತು?

8 ಯೆಶಾಯನ ಪುಸ್ತಕದ ಬರವಣಿಗೆಯ ವಿಷಯದಲ್ಲಿ ಸಾ.ಶ. 12ನೆಯ ಶತಮಾನದ ತನಕ ಯಾವುದೇ ವಿವಾದವಿರಲಿಲ್ಲ. ಆ ಶತಮಾನದಲ್ಲಿ, ಏಬ್ರಹಾಮ್‌ ಇಬನೆಸ್ರ ಎಂಬ ಯೆಹೂದಿ ವ್ಯಾಖ್ಯಾನಕಾರನು ಈ ಪ್ರಶ್ನೆಯನ್ನೆತ್ತಿದನು. ಎನ್‌ಸೈಕ್ಲೊಪೀಡಿಯ ಜೂಡೇಅಕ ಹೇಳುವುದು: “ಯೆಶಾಯನ ಪುಸ್ತಕದ ತನ್ನ ವ್ಯಾಖ್ಯಾನದಲ್ಲಿ, ಉತ್ತರಾರ್ಧವು ಅಂದರೆ 40ನೆಯ ಅಧ್ಯಾಯದ ನಂತರದ ಭಾಗವು, ಬಾಬೆಲಿನಲ್ಲಿನ ದೇಶಭ್ರಷ್ಟತೆ ಮತ್ತು ಚೀಯೋನಿಗೆ ಹಿಂದೆರಳುವಿಕೆಯ ಆದಿ ಭಾಗದಲ್ಲಿ ಜೀವಿಸುತ್ತಿದ್ದ ಒಬ್ಬ ಪ್ರವಾದಿಯ ಕೃತಿಯಾಗಿತ್ತು ಎಂದು [ಏಬ್ರಹಾಮ್‌ ಇಬನೆಸ್ರ] ಹೇಳುತ್ತಾನೆ.” 18 ಮತ್ತು 19ನೆಯ ಶತಮಾನಗಳಲ್ಲಿ ಇಬನೆಸ್ರನ ಅಭಿಪ್ರಾಯವನ್ನು, 1775ರಲ್ಲಿ ಯೆಶಾಯನ ಪುಸ್ತಕದ ವ್ಯಾಖ್ಯಾನ ಕೃತಿಯನ್ನು ಪ್ರಕಾಶಿಸಿದ ಮತ್ತು ಅನಂತರ 1789ರಲ್ಲಿ ಎರಡನೆಯ ಆವೃತ್ತಿಯನ್ನು ಪ್ರಕಾಶಿಸಿದ ಯೋಹಾನ್‌ ಕ್ರಿಸ್ಟಾಫ್‌ ಡಾಯ್‌ಡರ್ಲೈನ್‌ ಎಂಬ ಜರ್ಮನ್‌ ದೇವತಾಶಾಸ್ತ್ರಜ್ಞನ ಸಮೇತ ಅನೇಕ ವಿದ್ವಾಂಸರು ಅಂಗೀಕರಿಸಿದರು. ನ್ಯೂ ಸೆಂಚುರಿ ಬೈಬಲ್‌ ಕಾಮೆಂಟರಿ ಹೇಳುವುದು: “ತೀರ ಸಂಪ್ರದಾಯಪಾಲಕ ವಿದ್ವಾಂಸರನ್ನು ಬಿಟ್ಟರೆ ಉಳಿದ ಎಲ್ಲ ವಿದ್ವಾಂಸರು ಈಗ ಡಾಯ್‌ಡರ್ಲೈನ್‌ನಿಂದ ಉತ್ತೇಜಿಸಲ್ಪಟ್ಟ ಕಲ್ಪನಾ ವಿಚಾರವನ್ನು . . . ಅಂದರೆ ಯೆಶಾಯನ ಪುಸ್ತಕದ 40-66ನೆಯ ಅಧ್ಯಾಯಗಳಲ್ಲಿ ಒಳಗೂಡಿರುವ ಪ್ರವಾದನೆಗಳು, ಎಂಟನೆಯ ಶತಮಾನದ ಪ್ರವಾದಿಯಾಗಿದ್ದ ಯೆಶಾಯನ ಮಾತುಗಳಲ್ಲ, ಬದಲಾಗಿ ಆಮೇಲೆ ಬರೆದವುಗಳೆಂದು ಅಂಗೀಕರಿಸುತ್ತಾರೆ.”

9. (ಎ) ಯೆಶಾಯನ ಪುಸ್ತಕವನ್ನು ಯಾವ ರೀತಿಯಲ್ಲಿ ವಿಭಾಗಿಸಲಾಗಿದೆ? (ಬಿ) ಯೆಶಾಯನ ಪುಸ್ತಕದ ಬರವಣಿಗೆಯ ಸಂಬಂಧದಲ್ಲಿರುವ ವಿವಾದವನ್ನು ಬೈಬಲ್‌ ವ್ಯಾಖ್ಯಾನಕಾರನೊಬ್ಬನು ಹೇಗೆ ಸಾರಾಂಶಿಸುತ್ತಾನೆ?

9 ಆದರೂ, ಯೆಶಾಯನ ಪುಸ್ತಕದ ಬರವಣಿಗೆಯ ವಿಷಯದಲ್ಲಿ ಎದ್ದ ಪ್ರಶ್ನೆಗಳು ಅಲ್ಲಿಗೇ ನಿಲ್ಲಲಿಲ್ಲ. ಎರಡನೆಯ ಅಥವಾ ಡ್ಯೂಟೆರೊ ಯೆಶಾಯನ ಕುರಿತಾದ ಊಹೆಯು, ಮೂರನೆಯ ಬರಹಗಾರನೊಬ್ಬನು ಇದರಲ್ಲಿ ಒಳಗೂಡಿದ್ದಿರಬಹುದೆಂಬ ಅಭಿಪ್ರಾಯವನ್ನು ಹುಟ್ಟಿಸಿತು. * ಆಗ ಯೆಶಾಯನ ಪುಸ್ತಕವನ್ನು ಇನ್ನಷ್ಟು ವಿಭಾಗಿಸಲಾಯಿತು. ಒಬ್ಬ ವಿದ್ವಾಂಸನು ಅದರ 15 ಮತ್ತು 16ನೆಯ ಅಧ್ಯಾಯಗಳನ್ನು ಒಬ್ಬ ಅಜ್ಞಾತ ಪ್ರವಾದಿಯದ್ದೆಂದು ಸೂಚಿಸಿದಾಗ, ಇನ್ನೊಬ್ಬ ವಿದ್ವಾಂಸನು ಅದರ 23ರಿಂದ 27ರ ವರೆಗಿನ ಅಧ್ಯಾಯಗಳ ಬರವಣಿಗೆಯನ್ನು ಸಂದೇಹಿಸಿದನು. ಮತ್ತೊಬ್ಬನು, 34 ಮತ್ತು 35ನೆಯ ಅಧ್ಯಾಯಗಳನ್ನು ಯೆಶಾಯನು ಬರೆದಿರಲು ಸಾಧ್ಯವಿಲ್ಲ ಎಂದು ಹೇಳಿದನು. ಏಕೆ? ಏಕೆಂದರೆ ಆ ಅಧ್ಯಾಯಗಳಲ್ಲಿರುವ ವಿಷಯವು ಎಂಟನೆಯ ಶತಮಾನದ ಯೆಶಾಯನದ್ದಲ್ಲ, ಬದಲಾಗಿ ಮತ್ತೊಬ್ಬನದ್ದೆಂದು ಹೇಳಲಾಗಿರುವ 40-66ನೆಯ ಅಧ್ಯಾಯಗಳನ್ನು ಒತ್ತಾಗಿ ಹೋಲುತ್ತದೆ! ಬೈಬಲ್‌ ವ್ಯಾಖ್ಯಾನಕಾರ ಚಾರ್ಲ್ಸ್‌ ಸಿ. ಟಾರಿಯು ಈ ತರ್ಕದ ಪರಿಣಾಮವನ್ನು ಕೆಲವೇ ಮಾತುಗಳಲ್ಲಿ ಹೀಗೆ ಸಾರಾಂಶಿಸುತ್ತಾನೆ. ಅವನು ಹೇಳುವುದು: “ಒಂದು ಕಾಲದಲ್ಲಿ ಮಹಾನ್‌ ‘ದೇಶಭ್ರಷ್ಟ ಪ್ರವಾದಿ’ ಎಂದು ಎಣಿಸಲ್ಪಟ್ಟಿದ್ದವನು ಈಗ ತೀರ ಚಿಕ್ಕವನಾಗಿರುವುದು ಮಾತ್ರವಲ್ಲ, ತನ್ನ ಪುಸ್ತಕದ ಅವಶೇಷಗಳ ಮುರುಕುಗುಪ್ಪೆಯಲ್ಲಿ ಹೆಚ್ಚುಕಡಿಮೆ ಹೂಣಲ್ಪಟ್ಟಿದ್ದಾನೆ.” ಆದರೂ, ಯೆಶಾಯನ ಪುಸ್ತಕವನ್ನು ಈ ರೀತಿಯಲ್ಲಿ ವಿಭಾಗಿಸಿರುವುದಕ್ಕೆ ಎಲ್ಲ ವಿದ್ವಾಂಸರು ಒಪ್ಪಿಗೆಯನ್ನು ಸೂಚಿಸುವುದಿಲ್ಲ.

ಬರಹಗಾರನು ಒಬ್ಬನೇ ಎಂಬುದಕ್ಕೆ ರುಜುವಾತು

10. ಹೊಂದಿಕೆಯಾಗಿ ಕಂಡುಬರುವ ಪದಪ್ರಯೋಗಗಳು, ಯೆಶಾಯನ ಪುಸ್ತಕವನ್ನು ಒಬ್ಬನೇ ಬರೆದಿದ್ದಾನೆಂಬ ರುಜುವಾತನ್ನು ಒದಗಿಸುತ್ತವೆಂಬುದಕ್ಕೆ ಒಂದು ಉದಾಹರಣೆ ಕೊಡಿರಿ.

10 ಯೆಶಾಯನ ಪುಸ್ತಕವು ಒಬ್ಬನೇ ಲೇಖಕನ ಕೃತಿಯಾಗಿದೆ ಎಂದು ಹೇಳಲು ಬಲವಾದ ಕಾರಣವಿದೆ. ಹೊಂದಿಕೆಯಾಗಿರುವ ಪದಪ್ರಯೋಗಗಳು ಇದಕ್ಕಿರುವ ರುಜುವಾತಾಗಿವೆ. ಉದಾಹರಣೆಗೆ, “ಇಸ್ರಾಯೇಲ್ಯರ ಸದಮಲಸ್ವಾಮಿ” ಎಂಬ ವಾಕ್ಸರಣಿಯು ಯೆಶಾಯ 1ರಿಂದ 39ನೆಯ ಅಧ್ಯಾಯಗಳಲ್ಲಿ 12 ಬಾರಿಯೂ, 40ರಿಂದ 66ನೆಯ ಅಧ್ಯಾಯಗಳಲ್ಲಿ 13 ಬಾರಿಯೂ ಕಂಡುಬರುವಾಗ, ಯೆಹೋವನನ್ನು ವರ್ಣಿಸುವ ಇದೇ ವಾಕ್ಸರಣಿಯು ಬಾಕಿ ಉಳಿದಿರುವ ಹೀಬ್ರು ಶಾಸ್ತ್ರಗಳಲ್ಲಿ 6 ಬಾರಿ ಮಾತ್ರ ಕಂಡುಬರುತ್ತದೆ. ಬೇರೆ ಕಡೆಗಳಲ್ಲಿ ವಿರಳವಾಗಿರುವ ಈ ಪದವನ್ನು ಯೆಶಾಯನ ಪುಸ್ತಕವು ಪದೇಪದೇ ಉಪಯೋಗಿಸಿರುವುದು, ಯೆಶಾಯನ ಪುಸ್ತಕವನ್ನು ಒಬ್ಬನೇ ಬರೆದಿದ್ದಾನೆಂಬುದಕ್ಕೆ ಪುರಾವೆಯನ್ನು ಕೊಡುತ್ತದೆ.

11. ಯೆಶಾಯ 1ರಿಂದ 39ನೆಯ ಅಧ್ಯಾಯಗಳು ಮತ್ತು 40ರಿಂದ 66ನೆಯ ಅಧ್ಯಾಯಗಳ ಮಧ್ಯೆ ಯಾವ ಹೋಲಿಕೆಗಳಿವೆ?

11 ಯೆಶಾಯ 1ರಿಂದ 39ನೆಯ ಅಧ್ಯಾಯಗಳು ಮತ್ತು 40ರಿಂದ 66ನೆಯ ಅಧ್ಯಾಯಗಳ ಮಧ್ಯೆ ಇತರ ಹೋಲಿಕೆಗಳೂ ಇವೆ. ಈ ಎರಡು ಭಾಗಗಳಲ್ಲಿಯೂ ಪ್ರತ್ಯೇಕ ರೀತಿಯ ರೂಪಕ ಭಾಷೆಯನ್ನು, ಅಂದರೆ ಪ್ರಸವವೇದನೆಪಡುತ್ತಿರುವ ಸ್ತ್ರೀ ಮತ್ತು “ಮಾರ್ಗ” ಮತ್ತು “ರಾಜಮಾರ್ಗ” ಎಂಬ ಪದಗಳನ್ನು ಪದೇಪದೇ ಉಪಯೋಗಿಸಲಾಗಿದೆ. * “ಚೀಯೋನ್‌” ಎಂಬ ಪದವೂ ಆಗಾಗ ಕಂಡುಬರುತ್ತದೆ. 1ರಿಂದ 39ನೆಯ ಅಧ್ಯಾಯಗಳಲ್ಲಿ ಆ ಪದವು 29 ಬಾರಿ ಮತ್ತು 40ರಿಂದ 66ನೆಯ ಅಧ್ಯಾಯಗಳಲ್ಲಿ 18 ಬಾರಿ ಉಪಯೋಗಿಸಲ್ಪಟ್ಟಿದೆ. ವಾಸ್ತವವೇನಂದರೆ, ಈ ಪದವು ಇತರ ಯಾವುದೇ ಬೈಬಲ್‌ ಪುಸ್ತಕಗಳಿಗಿಂತಲೂ ಹೆಚ್ಚು ಬಾರಿ ಯೆಶಾಯನ ಪುಸ್ತಕದಲ್ಲೇ ಕಂಡುಬರುತ್ತದೆ! ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ಹೇಳುವುದು: ಇಂತಹ ಪುರಾವೆಗಳು “ಈ ಪುಸ್ತಕವನ್ನು” ಇಬ್ಬರು, ಮೂವರು ಅಥವಾ ಹೆಚ್ಚು ಜನರು ಬರೆದಿರುವಲ್ಲಿ ಹಾಗೆ “ಹೇಳಲು ಕಷ್ಟಕರವಾಗುತ್ತಿದ್ದ ಅದ್ವಿತೀಯ ಪುಸ್ತಕವಾಗಿ ಅಚ್ಚೊತ್ತುತ್ತವೆ.”

12, 13. ಯೆಶಾಯನ ಪುಸ್ತಕವು ಒಬ್ಬನೇ ಲೇಖಕನ ಕೃತಿಯಾಗಿತ್ತೆಂದು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ಹೇಗೆ ಸೂಚಿಸುತ್ತವೆ?

12 ಯೆಶಾಯನ ಪುಸ್ತಕಕ್ಕೆ ಒಬ್ಬನೇ ಲೇಖಕನಿದ್ದನು ಎಂಬುದಕ್ಕೆ ಅತಿ ಬಲಾಢ್ಯವಾದ ರುಜುವಾತು ಪ್ರೇರಿತ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಕಂಡುಬರುತ್ತದೆ. ಯೆಶಾಯನ ಪುಸ್ತಕವು ಒಬ್ಬನೇ ಲೇಖಕನ ಕೃತಿ ಎಂಬುದನ್ನು ಪ್ರಥಮ ಶತಮಾನದ ಕ್ರೈಸ್ತರು ನಂಬಿದ್ದರೆಂದು ಇವು ಸ್ಪಷ್ಟವಾಗಿ ಸೂಚಿಸುತ್ತವೆ. ಉದಾಹರಣೆಗೆ, ಐಥಿಯೋಪ್ಯದ ಅಧಿಕಾರಿಯೊಬ್ಬನು ಈಗ ಯೆಶಾಯ 53ನೆಯ ಅಧ್ಯಾಯದಲ್ಲಿ ಕಂಡುಬರುವ ಭಾಗವೊಂದನ್ನು ಓದುತ್ತಿರುವುದರ ಕುರಿತು ಲೂಕನು ತಿಳಿಸುತ್ತಾನೆ. ಅದೇ ಭಾಗವನ್ನು ಇಂದಿನ ವಿಮರ್ಶಕರು ಅದು ಡ್ಯೂಟೆರೊ (ಎರಡನೆಯ) ಯೆಶಾಯನ ಕೃತಿಯೆಂದು ಪ್ರತಿಪಾದಿಸುತ್ತಾರೆ. ಆದರೆ ಐಥಿಯೋಪ್ಯದವನು “ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿದ್ದನು” ಎಂದು ಲೂಕನು ಹೇಳುತ್ತಾನೆ.​—⁠ಅ. ಕೃತ್ಯಗಳು 8:​26-28.

13 ಮುಂದಕ್ಕೆ, ಸುವಾರ್ತಾ ಲೇಖಕನಾದ ಮತ್ತಾಯನನ್ನು ಪರಿಗಣಿಸಿರಿ. ಅವನು ಸ್ನಾನಿಕ ಯೋಹಾನನ ಶುಶ್ರೂಷೆಯು ನಾವೀಗ ಯೆಶಾಯ 40:3ರಲ್ಲಿ ಕಾಣುವ ಪ್ರವಾದನ ವಾಕ್ಯಗಳನ್ನು ಹೇಗೆ ನೆರವೇರಿಸಿತು ಎಂಬುದನ್ನು ಹೇಳುತ್ತಾನೆ. ಮತ್ತಾಯನು ಈ ಪ್ರವಾದನೆಯನ್ನು ಯಾರ ಬರಹವೆಂದು ಹೇಳುತ್ತಾನೆ? ಅಜ್ಞಾತನಾದ ಎರಡನೆಯ ಯೆಶಾಯನದ್ದೆಂದೊ? ಅವನು ಹಾಗೆ ಹೇಳುವುದಿಲ್ಲ. ಬದಲಾಗಿ “ಪ್ರವಾದಿಯಾದ ಯೆಶಾಯ” ಎಂದಷ್ಟೇ ಹೇಳುವ ಮೂಲಕ ಅವನು ಬರಹಗಾರನನ್ನು ಗುರುತಿಸುತ್ತಾನೆ. * (ಮತ್ತಾಯ 3:​1-3) ಇನ್ನೊಂದು ಸಂದರ್ಭದಲ್ಲಿ, ಯೇಸು ಒಂದು ಸುರುಳಿಯಿಂದ, ಈಗ ಯೆಶಾಯ 61:​1, 2ರಲ್ಲಿ ಕಂಡುಬರುವ ಭಾಗವನ್ನು ಓದಿದನು. ಈ ಸಂದರ್ಭಕ್ಕೆ ಸೂಚಿಸುತ್ತ, “ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರಳಿಯನ್ನು ಆತನ ಕೈಗೆ” ಕೊಡಲಾಯಿತೆಂದು ಲೂಕನು ಹೇಳುತ್ತಾನೆ. (ಲೂಕ 4:17) ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಯೆಶಾಯನ ಪುಸ್ತಕದ ಆದಿ ಭಾಗವನ್ನು ಮತ್ತು ಆ ಬಳಿಕದ ಭಾಗವನ್ನು ಉಲ್ಲೇಖಿಸುತ್ತಾನಾದರೂ, ಯೆಶಾಯನೆಂಬ ಒಬ್ಬನೇ ವ್ಯಕ್ತಿಯಲ್ಲದೆ ಅವನು ಇನ್ನಾವನ ಸುಳಿವನ್ನು ಸಹ ಕೊಡುವುದಿಲ್ಲ. (ರೋಮಾಪುರ 10:​16, 20; 15:12) ಒಂದನೆಯ ಶತಮಾನದ ಕ್ರೈಸ್ತರು, ಯೆಶಾಯನ ಪುಸ್ತಕವು ಇಬ್ಬರು, ಮೂವರು ಅಥವಾ ಹೆಚ್ಚು ಮಂದಿಯಿಂದ ಬರೆಯಲ್ಪಟ್ಟಿತೆಂದು ನಂಬಲಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

14. ಮೃತ ಸಮುದ್ರದ ಸುರುಳಿಗಳು ಯೆಶಾಯನ ಪುಸ್ತಕದ ಬರವಣಿಗೆಯ ವಿಷಯದ ಮೇಲೆ ಹೇಗೆ ಬೆಳಕು ಬೀರುತ್ತವೆ?

14 ಮೃತ ಸಮುದ್ರದ ಸುರುಳಿಗಳ ಸಾಕ್ಷ್ಯವನ್ನೂ ಪರಿಗಣಿಸಿರಿ. ಇವು ಪುರಾತನ ದಾಖಲೆಗಳಾಗಿದ್ದು, ಇವುಗಳಲ್ಲಿ ಹೆಚ್ಚಿನವು ಯೇಸುವಿನ ಕಾಲಕ್ಕೆ ಮುಂಚಿನವುಗಳಾಗಿವೆ. ಯೆಶಾಯನ ಸುರುಳಿಯೆಂದು ಕರೆಯಲ್ಪಟ್ಟಿರುವ ಯೆಶಾಯನ ಒಂದು ಹಸ್ತಪ್ರತಿಯು ಸಾ.ಶ.ಪೂ. ಎರಡನೆಯ ಶತಮಾನದ್ದು. ಎರಡನೆಯ ಯೆಶಾಯನು 40ನೆಯ ಅಧ್ಯಾಯದಿಂದ ಬರಹವನ್ನು ಮುಂದುವರಿಸಿದನೆಂಬ ವಿಮರ್ಶಕರ ವಾದವನ್ನು ಇದು ಸುಳ್ಳಾಗಿಸುತ್ತದೆ. ಹೇಗೆ? ಈ ಹಳೆಯ ದಾಖಲೆಯಲ್ಲಿ, ನಾವೀಗ 40ನೆಯ ಅಧ್ಯಾಯವೆಂದು ತಿಳಿದಿರುವ ಭಾಗವು ಒಂದು ಕಾಲಮಿನ ಕೊನೆಯ ಸಾಲಿನಲ್ಲಿ ಆರಂಭವಾಗಿ, ಈ ಆರಂಭದ ವಾಕ್ಯವು ಮುಂದಿನ ಕಾಲಮಿನಲ್ಲಿ ಅಂತ್ಯವಾಗುತ್ತದೆ. ಈ ಹಂತದಲ್ಲಿ ಅದನ್ನು ನಕಲು ಮಾಡಿದವನಿಗೆ, ಲೇಖಕನು ಬದಲಾಗಿದ್ದಾನೆಂಬುದಾಗಲಿ ಪುಸ್ತಕವು ಅಲ್ಲಿಂದ ವಿಭಾಗಿಸಲ್ಪಟ್ಟಿದೆಯೆಂಬುದಾಗಲಿ ತಿಳಿದಿರಲಿಲ್ಲವೆಂಬುದು ಸ್ಪಷ್ಟ.

15. ಒಂದನೆಯ ಶತಮಾನದ ಯೆಹೂದಿ ಇತಿಹಾಸಗಾರ ಫ್ಲೇವಿಯಸ್‌ ಜೋಸೀಫಸನು ಕೋರೆಷನ ಕುರಿತಾದ ಯೆಶಾಯನ ಪ್ರವಾದನೆಗಳ ವಿಷಯದಲ್ಲಿ ಏನನ್ನುತ್ತಾನೆ?

15 ಕೊನೆಯದಾಗಿ, ಒಂದನೆಯ ಶತಮಾನದ ಯೆಹೂದಿ ಇತಿಹಾಸಗಾರ ಫ್ಲೇವಿಯಸ್‌ ಜೋಸೀಫಸನು ಕೊಟ್ಟ ಪುರಾವೆಗಳನ್ನು ಪರಿಗಣಿಸಿ. ಯೆಶಾಯನ ಪುಸ್ತಕದಲ್ಲಿರುವ ಕೋರೆಷನ ಕುರಿತಾದ ಪ್ರವಾದನೆಗಳು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಬರೆಯಲ್ಪಟ್ಟವು ಎಂದಷ್ಟೇಯಲ್ಲ, ಬದಲಾಗಿ ಕೋರೆಷನಿಗೆ ಆ ಪ್ರವಾದನೆಗಳ ಕುರಿತು ತಿಳಿದಿತ್ತೆಂದು ಸಹ ಅವನು ಹೇಳುತ್ತಾನೆ. ಜೋಸೀಫಸನು ಬರೆಯುವುದು: “ಯೆಶಾಯನು ಇನ್ನೂರ ಹತ್ತು ವರ್ಷಗಳಿಗೆ ಮೊದಲು ಬಿಟ್ಟುಹೋಗಿದ್ದ ಪ್ರವಾದನ ಪುಸ್ತಕದ ವಾಚನದಿಂದ ಕೋರೆಷನಿಗೆ ಈ ವಿಷಯಗಳು ತಿಳಿದಿದ್ದವು.” ಜೋಸೀಫಸನಿಗನುಸಾರ, ಈ ಪ್ರವಾದನೆಗಳ ಕುರಿತಾದ ಅರಿವು, ಯೆಹೂದ್ಯರನ್ನು ಅವರ ಸ್ವದೇಶಕ್ಕೆ ಹಿಂದೆ ಕಳುಹಿಸಲು ಕೋರೆಷನು ತೋರಿಸಿದ ಸಿದ್ಧಮನಸ್ಸಿಗೆ ಒಂದು ಕಾರಣವಾಗಿದ್ದಿರಲೂಬಹುದು. ಏಕೆಂದರೆ, “ಬರೆಯಲ್ಪಟ್ಟಿದ್ದಂತೆ ಕ್ರಿಯೆಗೈಯಲು ಬಲವಾದ ಇಚ್ಛೆ ಮತ್ತು ಹೆಬ್ಬಯಕೆ” ಕೋರೆಷನಲ್ಲಿತ್ತು ಎಂದು ಜೋಸೀಫಸನು ಬರೆಯುತ್ತಾನೆ.​—⁠ಜ್ಯೂವಿಷ್‌ ಆ್ಯಂಟಿಕ್ವಿಟೀಸ್‌, ಪುಸ್ತಕ XI, ಅಧ್ಯಾಯ 1, ಪ್ಯಾರಗ್ರಾಫ್‌ 2.

16. ಯೆಶಾಯನ ಪುಸ್ತಕದ ಉತ್ತರಾರ್ಧ ಭಾಗದಲ್ಲಿ, ಬಾಬೆಲನ್ನು ಆಗ ಆಳುತ್ತಿದ್ದ ಲೋಕ ಶಕ್ತಿಯಾಗಿ ವರ್ಣಿಸಲಾಗಿದೆಯೆಂಬ ವಿಮರ್ಶಕರ ಹೇಳಿಕೆಗಳ ಕುರಿತು ನಾವೇನು ಹೇಳಸಾಧ್ಯವಿದೆ?

16 ಈ ಹಿಂದೆ ಹೇಳಿರುವಂತೆ, ಯೆಶಾಯ 40ನೆಯ ಅಧ್ಯಾಯದಿಂದ, ಬಾಬೆಲನ್ನು ಆಗ ಆಳುತ್ತಿದ್ದ ಲೋಕ ಶಕ್ತಿಯಾಗಿ ವರ್ಣಿಸಲಾಗಿದೆಯೆಂದೂ ಇಸ್ರಾಯೇಲ್ಯರು ಆಗಲೇ ದೇಶಭ್ರಷ್ಟರಾಗಿದ್ದರೋ ಎಂಬಂತೆ ಅವರ ಕುರಿತು ತಿಳಿಸಲಾಗಿದೆಯೆಂದು ಅನೇಕ ವಿಮರ್ಶಕರು ತೋರಿಸುತ್ತಾರೆ. ಹೀಗಿರುವುದರಿಂದ, ಆ ಲೇಖಕನು ಸಾ.ಶ.ಪೂ. ಆರನೆಯ ಶತಮಾನದಲ್ಲಿ ಜೀವಿಸಿದ್ದನು ಎಂದು ಇದು ಸೂಚಿಸುವುದಿಲ್ಲವೆ? ಹಾಗಿರಬೇಕೆಂದಿಲ್ಲ. ವಾಸ್ತವಾಂಶವೇನೆಂದರೆ, ಯೆಶಾಯ 40ನೆಯ ಅಧ್ಯಾಯಕ್ಕಿಂತ ಮುಂಚೆ ಸಹ, ಬಾಬೆಲನ್ನು ಹಲವು ಬಾರಿ ಆಗ ಆಳುತ್ತಿದ್ದ ಲೋಕ ಶಕ್ತಿಯಾಗಿ ವರ್ಣಿಸಲಾಗಿದೆ. ದೃಷ್ಟಾಂತಕ್ಕೆ, ಯೆಶಾಯ 13:19ರಲ್ಲಿ ಬಾಬೆಲನ್ನು, “ರಾಜ್ಯಗಳಿಗೆ ಶಿರೋರತ್ನ”ವೆಂದು, ಅಥವಾ ಟುಡೇಸ್‌ ಇಂಗ್ಲಿಷ್‌ ವರ್ಷನ್‌ ಬೈಬಲು ತಿಳಿಸುವಂತೆ, “ಎಲ್ಲಕ್ಕಿಂತಲೂ ಅತಿ ಸುಂದರವಾದ ರಾಜ್ಯ” ಎಂದು ಕರೆಯಲಾಗಿದೆ. ಈ ಮಾತುಗಳು ನಿಶ್ಚಯವಾಗಿಯೂ ಪ್ರವಾದನಾತ್ಮಕವಾಗಿದ್ದವು, ಏಕೆಂದರೆ ಅಂದಿನಿಂದ ನೂರಕ್ಕೂ ಹೆಚ್ಚು ವರ್ಷಗಳ ನಂತರವೇ ಬಾಬೆಲು ಒಂದು ಲೋಕ ಶಕ್ತಿಯಾಯಿತು. ಸಮಸ್ಯೆಯೆಂದು ಹೇಳಲಾಗುವ ಇದನ್ನು ಒಬ್ಬ ವಿಮರ್ಶಕನು, ಯೆಶಾಯ 13ನೆಯ ಅಧ್ಯಾಯವು ಇನ್ನೊಬ್ಬ ಲೇಖಕನ ಕೃತಿಯೆಂದು ಸುಲಭವಾಗಿ ತಳ್ಳಿಹಾಕುವ ಮೂಲಕ “ಪರಿಹರಿಸಿ”ಬಿಡುತ್ತಾನೆ! ಆದರೆ ವಾಸ್ತವದಲ್ಲಿ, ಭಾವೀ ಘಟನೆಗಳನ್ನು ಅವು ಆಗಲೇ ಘಟಿಸಿವೆಯೋ ಎಂಬಂತೆ ವಿವರಿಸುವುದು ಬೈಬಲ್‌ ಪ್ರವಾದನೆಯಲ್ಲಿ ಸಾಮಾನ್ಯವಾದ ವಿಷಯವಾಗಿದೆ. ಈ ಸಾಹಿತ್ಯ ಶೈಲಿಯು, ಒಂದು ಪ್ರವಾದನೆ ನಿಶ್ಚಯವಾಗಿಯೂ ನೆರವೇರುವುದೆಂಬುದನ್ನು ಪ್ರಭಾವಶಾಲಿ ರೀತಿಯಲ್ಲಿ ಒತ್ತಿಹೇಳುತ್ತದೆ. (ಪ್ರಕಟನೆ 21:​5, 6) ಹೌದು, “ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ತಲೆದೋರುವದಕ್ಕೆ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ” ಎಂದು ನಿಜ ಪ್ರವಾದನೆಯ ದೇವರು ಮಾತ್ರ ಹೇಳಲು ಸಮರ್ಥನು.​—⁠ಯೆಶಾಯ 42:⁠9.

ಭರವಸಾರ್ಹ ಪ್ರವಾದನೆಯ ಗ್ರಂಥ

17. ಯೆಶಾಯ 40ನೆಯ ಅಧ್ಯಾಯದಿಂದ ಮುಂದಕ್ಕೆ ಆಗಿರುವ ಶೈಲಿ ಬದಲಾವಣೆಗೆ ಕಾರಣವನ್ನು ಹೇಗೆ ವಿವರಿಸಸಾಧ್ಯವಿದೆ?

17 ಹಾಗಾದರೆ, ಈ ಪುರಾವೆ ನಮ್ಮನ್ನು ಯಾವ ನಿರ್ಣಯಕ್ಕೆ ನಡಿಸುತ್ತದೆ? ಯೆಶಾಯನ ಪುಸ್ತಕವು ಒಬ್ಬ ಪ್ರೇರಿತ ಲೇಖಕನ ಕೃತಿಯೆಂಬ ನಿರ್ಣಯಕ್ಕೆ ನಡಿಸುತ್ತದೆ. ಈ ಇಡೀ ಪುಸ್ತಕವು ಒಬ್ಬನ ಕೃತಿಯಾಗಿದೆ, ಇಬ್ಬರು ಯಾ ಮೂವರದ್ದಲ್ಲ ಎಂಬ ನಂಬಿಕೆ ಶತಮಾನಗಳನ್ನು ದಾಟಿ ಬಂದಿದೆ. ನಿಜ, ಅಧ್ಯಾಯ 40ರ ಬಳಿಕ ಯೆಶಾಯನ ಪುಸ್ತಕದ ಶೈಲಿಯಲ್ಲಿ ತುಸು ಬದಲಾವಣೆಯಿದೆಯೆಂದು ಕೆಲವರು ಹೇಳಬಹುದು. ಆದರೆ ಯೆಶಾಯನು ದೇವರ ಪ್ರವಾದಿಯಾಗಿ 46 ವರುಷಗಳಾದರೂ ಸೇವೆ ಸಲ್ಲಿಸಿದನೆಂಬ ವಿಷಯವು ನೆನಪಿರಲಿ. ಈ ಸಮಯಾವಧಿಯಲ್ಲಿ ಅವನ ಸಂದೇಶದಲ್ಲಿ ಒಳಗೂಡಿರುವ ವಿಷಯಗಳೂ ಅವುಗಳನ್ನು ವ್ಯಕ್ತಪಡಿಸುವ ಅವನ ಶೈಲಿಯೂ ಬದಲಾಗಿರಬಹುದೆಂದು ನಾವು ನಿರೀಕ್ಷಿಸಬಹುದು. ಯೆಶಾಯನಿಗೆ ದೊರಕಿದ ನೇಮಕದಲ್ಲಿ ತೀಕ್ಷ್ಣವಾದ ನ್ಯಾಯತೀರ್ಪನ್ನು ಮಾತ್ರ ಸಾರುವ ವಿಷಯವು ಸೇರಿರಲಿಲ್ಲ. “ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ,” ಎಂಬ ಯೆಹೋವನ ಮಾತುಗಳನ್ನೂ ಅವನು ತಿಳಿಸಬೇಕಾಗಿತ್ತು. (ಯೆಶಾಯ 40:⁠1) ದೇವರ ಒಡಂಬಡಿಕೆಯ ಜನರಾದ ಯೆಹೂದ್ಯರು, 70 ವರ್ಷಗಳ ದೇಶಭ್ರಷ್ಟತೆಯ ಅನಂತರ ತಮ್ಮ ಸ್ವದೇಶಕ್ಕೆ ಹಿಂದಿರುಗುವರೆಂಬ ವಾಗ್ದಾನದಿಂದ ನಿಜವಾಗಿಯೂ ಸಂತೈಸುವಿಕೆಯನ್ನು ಪಡೆಯಲಿದ್ದರು.

18. ಈ ಪುಸ್ತಕದಲ್ಲಿ ಯೆಶಾಯನ ಪುಸ್ತಕದ ಯಾವ ಮುಖ್ಯ ವಿಷಯವನ್ನು ಚರ್ಚಿಸಲಾಗುವುದು?

18 ಬಾಬೆಲಿನ ಬಂಧಿವಾಸದಿಂದ ಯೆಹೂದ್ಯರ ಬಿಡುಗಡೆ ಎಂಬ, ಯೆಶಾಯನ ಪುಸ್ತಕದ ಅನೇಕ ಅಧ್ಯಾಯಗಳ ಮುಖ್ಯ ವಿಷಯವನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. * ನಾವು ನೋಡಲಿರುವಂತೆ, ಇವುಗಳಲ್ಲಿ ಹಲವಾರು ಪ್ರವಾದನೆಗಳಿಗೆ ನಮ್ಮ ಆಧುನಿಕ ದಿನಗಳಲ್ಲಿ ನೆರವೇರಿಕೆಯಿದೆ. ಇದಲ್ಲದೆ, ದೇವರ ಏಕಮಾತ್ರ ಪುತ್ರನ ಜೀವನ ಮತ್ತು ಮರಣದಲ್ಲಿ ನೆರವೇರಿದ ಚಕಿತಗೊಳಿಸುವ ಪ್ರವಾದನೆಗಳನ್ನೂ ನಾವು ಯೆಶಾಯನ ಪುಸ್ತಕದಲ್ಲಿ ಕಂಡುಕೊಳ್ಳುತ್ತೇವೆ. ಯೆಶಾಯನ ಪುಸ್ತಕದಲ್ಲಿರುವ ಮಹತ್ವದ ಪ್ರವಾದನೆಗಳು, ದೇವರ ಸೇವಕರಿಗೂ ಭೂಮಿಯಾದ್ಯಂತ ಇರುವ ಇತರರಿಗೂ ಪ್ರಯೋಜನಕರವಾಗಿರುವವು ಎಂಬುದು ನಿಶ್ಚಯ. ಈ ಪ್ರವಾದನೆಗಳು ಸಕಲ ಮಾನವಕುಲಕ್ಕೆ ಬೆಳಕಾಗಿವೆ ಖಂಡಿತ.

[ಪಾದಟಿಪ್ಪಣಿಗಳು]

^ ಪ್ಯಾರ. 9 ವಿದ್ವಾಂಸರು, 56ರಿಂದ 66ರ ವರೆಗಿನ ಅಧ್ಯಾಯಗಳನ್ನು ಬರೆದನೆಂದು ಹೇಳಲಾಗಿರುವ ವ್ಯಕ್ತಿಯನ್ನು ಟ್ರೀಟೋಸ್‌ (ಮೂರನೆಯ) ಯೆಶಾಯ ಎಂದು ಸೂಚಿಸಿ ಹೇಳುತ್ತಾರೆ.

^ ಪ್ಯಾರ. 11 ಪ್ರಸವವೇದನೆಪಡುವ ಸ್ತ್ರೀ: ಯೆಶಾಯ 13:8; 21:3; 26:​17, 18; 42:14; 45:10; 54:1; 66:⁠7. “ಮಾರ್ಗ” ಅಥವಾ “ರಾಜಮಾರ್ಗ”: ಯೆಶಾಯ 11:16; 19:23; 35:8; 40:3; 43:19; 49:11; 57:14; 62:⁠10.

^ ಪ್ಯಾರ. 13 ಸಮಾನ ವೃತ್ತಾಂತಗಳಲ್ಲಿ, ಮಾರ್ಕ, ಲೂಕ ಮತ್ತು ಯೋಹಾನರು ಹೆಚ್ಚುಕಡಿಮೆ ಅದೇ ರೀತಿಯ ವಾಕ್ಸರಣಿಯನ್ನು ಉಪಯೋಗಿಸುತ್ತಾರೆ.​—⁠ಮಾರ್ಕ 1:4; ಲೂಕ 3:4; ಯೋಹಾನ 1:⁠23.

^ ಪ್ಯಾರ. 18 ಯೆಶಾಯನ ಪುಸ್ತಕದ ಪ್ರಥಮ 40 ಅಧ್ಯಾಯಗಳನ್ನು, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು I ಎಂಬ ಪುಸ್ತಕದಲ್ಲಿ ಚರ್ಚಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚೌಕ]

ಡಯಕ್ರಾನಿಕ್‌ ವಿಶ್ಲೇಷಣೆಯ ಪುರಾವೆ

ವರ್ಷಗಳು ಕಳೆದಂತೆ ಭಾಷೆಯಲ್ಲಾಗುವ ನವಿರಾದ ಬದಲಾವಣೆಗಳನ್ನು ಹುಡುಕಿ ನೋಡುವ ವ್ಯಾಸಂಗವಾದ ಡಯಕ್ರಾನಿಕ್‌ ಅಧ್ಯಯನಗಳು, ಯೆಶಾಯನ ಪುಸ್ತಕವು ಒಬ್ಬನೇ ಲೇಖಕನ ಕೃತಿಯೆಂಬುದಕ್ಕೆ ಇನ್ನೂ ಹೆಚ್ಚಿನ ಪುರಾವೆಯನ್ನು ಒದಗಿಸುತ್ತವೆ. ಯೆಶಾಯನ ಪುಸ್ತಕದ ಒಂದು ಭಾಗವು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಬರೆಯಲ್ಪಟ್ಟು, ಇನ್ನೊಂದು ಭಾಗವು 200 ವರ್ಷಗಳ ಬಳಿಕ ಬರೆಯಲ್ಪಟ್ಟಿರುವಲ್ಲಿ, ಪ್ರತಿಯೊಂದು ಭಾಗದಲ್ಲಿ ಬಳಸಲ್ಪಟ್ಟಿರುವ ಹೀಬ್ರು ಭಾಷೆಯಲ್ಲಿ ವ್ಯತ್ಯಾಸಗಳಿರಬೇಕಾಗಿದೆ. ಆದರೆ, ವೆಸ್ಟ್‌ಮಿನ್‌ಸ್ಟರ್‌ ಥಿಯಲಾಜಿಕಲ್‌ ಜರ್ನಲ್‌ನಲ್ಲಿ ಪ್ರಕಟಿಸಲ್ಪಟ್ಟಿರುವ ಒಂದು ಅಧ್ಯಯನಕ್ಕನುಸಾರ, “ಡಯಕ್ರಾನಿಕ್‌ ವಿಶ್ಲೇಷಣೆಯ ಪುರಾವೆಯು ಯೆಶಾಯ 40-66ನೆಯ ಅಧ್ಯಾಯಗಳು ದೇಶಭ್ರಷ್ಟತೆಗೆ ಮೊದಲು ಬರೆಯಲ್ಪಟ್ಟಿದ್ದವೆಂಬುದನ್ನು ಭಾರಿ ಪ್ರಮಾಣದಲ್ಲಿ ಬೆಂಬಲಿಸುತ್ತದೆ.” ಆ ಅಧ್ಯಯನದ ಲೇಖಕನು ಈ ಮಾತುಗಳಿಂದ ಮುಕ್ತಾಯಗೊಳಿಸುತ್ತಾನೆ: “ವಿಮರ್ಶಕರಾದ ವಿಧ್ವಾಂಸರು ಯೆಶಾಯನ ಪುಸ್ತಕವು ದೇಶಭ್ರಷ್ಟತೆಯ ಸಮಯದಲ್ಲಿ ಇಲ್ಲವೆ ಅದರ ಬಳಿಕ ಬರೆಯಲ್ಪಟ್ಟಿತೆಂದು ಪಟ್ಟುಹಿಡಿಯುತ್ತ ಹೇಳುವುದಾದರೆ, ಡಯಕ್ರಾನಿಕ್‌ ವಿಶ್ಲೇಷಣೆಯಿಂದ ದೊರಕಿರುವ ವ್ಯತಿರಿಕ್ತ ಪುರಾವೆಯ ಎದುರಿನಲ್ಲಿಯೂ ಅವರು ಹಾಗೆ ಹೇಳಬೇಕಾಗುತ್ತದೆ.”

[ಪುಟ 11ರಲ್ಲಿರುವ ಚಿತ್ರ]

ಯೆಶಾಯನ ಮೃತ ಸಮುದ್ರದ ಸುರುಳಿಯ ಒಂದು ಭಾಗ. 39ನೆಯ ಅಧ್ಯಾಯದ ಮುಕ್ತಾಯವನ್ನು ಬಾಣದಿಂದ ಸೂಚಿಸಲಾಗಿದೆ

[ಪುಟ 12, 13ರಲ್ಲಿರುವ ಚಿತ್ರಗಳು]

ಸುಮಾರು 200 ವರುಷಗಳ ಮುಂಚೆಯೇ ಯೆಶಾಯನು ಯೆಹೂದ್ಯರ ಬಿಡುಗಡೆಯನ್ನು ಮುಂತಿಳಿಸುತ್ತಾನೆ