ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”

“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”

ಅಧ್ಯಾಯ ಇಪ್ಪತ್ತಾರು

“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”

ಯೆಶಾಯ 65:1-25

1. ಅಪೊಸ್ತಲ ಪೇತ್ರನು ಯಾವ ಪುನರಾಶ್ವಾಸನೆಯ ಮಾತುಗಳನ್ನು ಬರೆದನು, ಮತ್ತು ಯಾವ ಪ್ರಶ್ನೆಯು ಏಳುತ್ತದೆ?

ಅನ್ಯಾಯ ಮತ್ತು ಕಷ್ಟಾನುಭವಗಳ ಅಂತ್ಯವನ್ನು ನಾವು ಎಂದಾದರೂ ನೋಡುವೆವೊ? ಅಪೊಸ್ತಲ ಪೇತ್ರನು 1,900ಕ್ಕೂ ಹೆಚ್ಚು ವರುಷಗಳಿಗೆ ಹಿಂದೆ ಪುನರಾಶ್ವಾಸನೆ ನೀಡುವ ಈ ಮಾತುಗಳನ್ನು ಬರೆದನು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಶತಮಾನಗಳಾದ್ಯಂತ ಜೀವಿಸಿದ್ದ ಇತರ ನಂಬಿಗಸ್ತ ದೇವರ ಸೇವಕರೊಂದಿಗೆ ಪೇತ್ರನು, ನಿಯಮರಾಹಿತ್ಯ, ದಬ್ಬಾಳಿಕೆ, ಮತ್ತು ಹಿಂಸಾಚಾರಗಳು ಇಲ್ಲವಾಗಿ, ನೀತಿಯು ರಾರಾಜಿಸುವ ಮಹಾ ದಿನವನ್ನು ಎದುರು ನೋಡಿದನು. ಈ ವಾಗ್ದಾನವು ನೆರವೇರುವುದೆಂದು ನಾವು ಖಾತ್ರಿಯಿಂದಿರಬಹುದೊ?

2. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಯಾವ ಪ್ರವಾದಿಯು ಮಾತಾಡಿದ್ದನು, ಮತ್ತು ಆ ಪುರಾತನ ಪ್ರವಾದನೆಗೆ ಯಾವ ನೆರವೇರಿಕೆಗಳಿವೆ?

2 ಹೌದು, ನಾವು ಖಾತ್ರಿಯಿಂದಿರಬಲ್ಲೆವು! ಪೇತ್ರನು ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಮಾತಾಡಿದಾಗ, ಅವನು ಒಂದು ಹೊಸ ವಿಚಾರವನ್ನು ಪರಿಚಯಪಡಿಸುತ್ತಿರಲಿಲ್ಲ. ಸುಮಾರು 800 ವರುಷಗಳ ಹಿಂದೆ ಯೆಹೋವನು, ಪ್ರವಾದಿಯಾಗಿದ್ದ ಯೆಶಾಯನ ಮೂಲಕ ಅದೇ ರೀತಿಯ ಮಾತುಗಳನ್ನಾಡಿದ್ದನು. ಆ ಹಿಂದಿನ ವಾಗ್ದಾನವು ಸಾ.ಶ.ಪೂ. 537ರಲ್ಲಿ ಒಂದು ಚಿಕ್ಕ ಪ್ರಮಾಣದಲ್ಲಿ ನೆರವೇರಿತು. ಆ ಸಮಯದಲ್ಲಿ ಯೆಹೂದ್ಯರನ್ನು ಬಾಬೆಲಿನ ಬಂಧಿವಾಸದಿಂದ ಬಿಡಿಸಿ, ಅವರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂತೆ ಮಾಡಲಾಗಿತ್ತು. ಆದರೆ ಯೆಶಾಯನ ಪ್ರವಾದನೆಯು ಇಂದು ಕೂಡ ಭವ್ಯವಾಗಿ ನೆರವೇರುತ್ತಿದೆ ಮಾತ್ರವಲ್ಲ, ಬರಲಿರುವ ದೇವರ ನೂತನ ಲೋಕದಲ್ಲಿ ಅದು ಇನ್ನೂ ಹೆಚ್ಚು ರೋಮಾಂಚಕ ರೀತಿಯಲ್ಲಿ ನೆರವೇರುವುದನ್ನು ನಾವು ಎದುರುನೋಡುತ್ತೇವೆ. ಹೌದು, ಯೆಶಾಯನ ಮೂಲಕ ಕೊಡಲ್ಪಟ್ಟ ಆ ಹೃದಯೋಲ್ಲಾಸಕರ ಪ್ರವಾದನೆಯು, ದೇವರನ್ನು ಪ್ರೀತಿಸುವವರಿಗೆ ಆತನು ಕಾದಿರಿಸಿರುವ ಆಶೀರ್ವಾದಗಳ ನಸುನೋಟವನ್ನು ಒದಗಿಸುತ್ತದೆ.

ಯೆಹೋವನು “ಮೊಂಡ ಜನರನ್ನು” ಬೇಡಿಕೊಳ್ಳುತ್ತಾನೆ

3. ಯೆಶಾಯ 65ನೆಯ ಅಧ್ಯಾಯದಲ್ಲಿ ನಮಗಾಗಿ ಯಾವ ಪ್ರಶ್ನೆಯು ಉತ್ತರಿಸಲ್ಪಟ್ಟಿದೆ?

3ಯೆಶಾಯ 63:​15–64:12ರಲ್ಲಿ, ಬಾಬೆಲಿನಲ್ಲಿದ್ದ ಯೆಹೂದಿ ದೇಶಭ್ರಷ್ಟರ ಪರವಾಗಿ ಯೆಶಾಯನು ಮಾಡಿದ ಪ್ರವಾದನ ಪ್ರಾರ್ಥನೆಯಿದೆಯೆಂಬುದನ್ನು ಜ್ಞಾಪಿಸಿಕೊಳ್ಳಿ. ಯೆಶಾಯನ ಮಾತುಗಳು ಸ್ಪಷ್ಟಪಡಿಸುವಂತೆ, ಅನೇಕ ಯೆಹೂದ್ಯರು ಯೆಹೋವನನ್ನು ಪೂರ್ಣಪ್ರಾಣದಿಂದ ಆರಾಧಿಸುವುದಿಲ್ಲವಾದರೂ ಕೆಲವರು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿದ್ದಾರೆ. ಹಾಗಾದರೆ ಈಗ ಯೆಹೋವನು ಆ ಪಶ್ಚಾತ್ತಾಪಪಟ್ಟ ಉಳಿಕೆಯವರ ನಿಮಿತ್ತ ಆ ಜನಾಂಗವನ್ನು ಪುನಸ್ಸ್ಥಾಪಿಸುವನೊ? ಇದಕ್ಕೆ ಉತ್ತರವನ್ನು ನಾವು ಯೆಶಾಯ 65ನೆಯ ಅಧ್ಯಾಯದಲ್ಲಿ ಕಂಡುಕೊಳ್ಳುತ್ತೇವೆ. ಆದರೆ, ನಂಬಿಗಸ್ತರಾಗಿರುವ ಸ್ವಲ್ಪ ಜನರಿಗೆ ಬಿಡುಗಡೆಯ ವಾಗ್ದಾನವನ್ನು ಕೊಡುವ ಮೊದಲು, ನಂಬಿಕೆಯಿಲ್ಲದ ಅನೇಕರಿಗಾಗಿ ಕಾದಿರುವ ನ್ಯಾಯತೀರ್ಪನ್ನು ಯೆಹೋವನು ವರ್ಣಿಸುತ್ತಾನೆ.

4. (ಎ) ತನ್ನ ದಂಗೆಕೋರ ಜನರಿಗೆ ವ್ಯತಿರಿಕ್ತವಾಗಿ, ಯೆಹೋವನನ್ನು ಯಾರು ಹುಡುಕುವರು? (ಬಿ) ಅಪೊಸ್ತಲ ಪೌಲನು ಯೆಶಾಯ 65:​1, 2ನ್ನು ಹೇಗೆ ಅನ್ವಯಿಸಿದನು?

4 ಯೆಹೋವನು ತನ್ನ ಜನರ ಪಟ್ಟುಹಿಡಿದ ದಂಗೆಯನ್ನು ಸಹಿಸಿಕೊಂಡಿದ್ದಾನೆ. ಆದರೆ ಆತನು ಅವರನ್ನು ವೈರಿಗಳ ಕೈಗೆ ಒಪ್ಪಿಸಿ, ಇತರರನ್ನು ತನ್ನ ಅನುಗ್ರಹಕ್ಕೆ ದಯೆಯಿಂದ ಸ್ವಾಗತಿಸುವ ಸಮಯ ಬರುವುದು. ಯೆಶಾಯನ ಮೂಲಕ ಯೆಹೋವನು ಹೇಳುವುದು: “ವಿಜ್ಞಾಪಿಸಿಕೊಳ್ಳದವರಿಗೂ ಪ್ರಸನ್ನನಾಗಿದ್ದೆನು, ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, ನನ್ನ ನಾಮವನ್ನೆತ್ತಿ ಪ್ರಾರ್ಥಿಸದ ಜನಾಂಗಕ್ಕೂ​—⁠ಇಗೋ, ನಾನಿದ್ದೇನೆ ನಾನಿದ್ದೇನೆ ಎನ್ನುತ್ತಿದ್ದೆನು.” (ಯೆಶಾಯ 65:1) ಬೇರೆ ಜನಾಂಗಗಳವರು ಯೆಹೋವನ ಬಳಿಗೆ ಬರುತ್ತಿರುವಾಗ, ಹಟಮಾರಿಯಾದ ಯೆಹೂದವು ಹಾಗೆ ಮಾಡಲು ನಿರಾಕರಿಸುತ್ತದೆ ಎಂಬುದು, ಯೆಹೋವನ ಒಡಂಬಡಿಕೆಯ ಜನರ ಕುರಿತಾದ ಒಂದು ವಿಷಾದನೀಯ ಅಭಿಪ್ರಾಯವಾಗಿದೆ. ದೇವರು ಈ ಹಿಂದೆ ಅಂಗೀಕರಿಸಿರದ ಜನರನ್ನು ಅಂತಿಮವಾಗಿ ಆರಿಸಿಕೊಳ್ಳುವನೆಂದು ಮುಂತಿಳಿಸಿದ ಪ್ರವಾದಿಯು ಯೆಶಾಯನೊಬ್ಬನೇ ಅಲ್ಲ. (ಹೋಶೇಯ 1:10; 2:23) ಹುಟ್ಟಿನಿಂದಲೇ ಯೆಹೂದ್ಯರಾಗಿರುವವರು “ನಂಬಿಕೆಯಿಂದುಂಟಾಗುವ ನೀತಿ”ಯನ್ನು ನಿರಾಕರಿಸಿದರೂ, ಅನ್ಯಜನಾಂಗಗಳವರು ಅದನ್ನು ಪಡೆಯುವರೆಂಬುದನ್ನು ರುಜುಪಡಿಸಲು ಅಪೊಸ್ತಲ ಪೌಲನು ಸೆಪ್ಟ್ಯುಅಜಿಂಟ್‌ನಿಂದ ಯೆಶಾಯ 65:​1, 2ನ್ನು ಉಲ್ಲೇಖಿಸಿದನು.​—⁠ರೋಮಾಪುರ 9:30; 10:​20, 21.

5, 6. (ಎ) ಯೆಹೋವನು ಯಾವ ಶ್ರದ್ಧಾಪೂರ್ವಕವಾದ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ, ಆದರೆ ಅವನ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ? (ಬಿ) ಯೆಹೂದದೊಂದಿಗಿನ ಯೆಹೋವನ ವ್ಯವಹಾರಗಳಿಂದ ನಾವೇನು ಕಲಿಯಬಲ್ಲೆವು?

5 ತನ್ನ ಸ್ವಂತ ಜನರು ವಿಪತ್ತನ್ನು ಅನುಭವಿಸುವಂತೆ ತಾನು ಏಕೆ ಅನುಮತಿಸುವೆನೆಂದು ಯೆಹೋವನು ವಿವರಿಸುತ್ತಾನೆ: “ನನ್ನನ್ನು ತೊರೆದು ಮನಸ್ಸುಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರನ್ನು [“ಮೊಂಡ ಜನರನ್ನು,” NW] ನಾನು ದಿನವೆಲ್ಲಾ ಕೈ ಚಾಚಿ ಕರೆದೆನು.” (ಯೆಶಾಯ 65:2) ಒಬ್ಬನು ಕೈಚಾಚುವುದು ಆಮಂತ್ರಣವನ್ನು ಅಥವಾ ಯಾಚನೆಯನ್ನು ಸೂಚಿಸುತ್ತದೆ. ಯೆಹೋವನು ಸ್ವಲ್ಪ ಸಮಯವಲ್ಲ, ದಿನವೆಲ್ಲಾ ತನ್ನ ಕೈಚಾಚಿದ್ದಾನೆ. ಯೆಹೂದವು ತನ್ನ ಬಳಿಗೆ ಹಿಂದಿರುಗಬೇಕೆಂಬುದು ಆತನ ಮನದಾಸೆಯಾಗಿದೆ. ಹೀಗಿದ್ದರೂ ಈ ಮೊಂಡ ಜನರು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಿರುವುದಿಲ್ಲ.

6 ಯೆಹೋವನ ಮಾತುಗಳಿಂದ ನಾವು ಎಂತಹ ಹೃದಯೋತ್ತೇಜಕ ಪಾಠವನ್ನು ಕಲಿಯುತ್ತೇವೆ! ನಾವು ಸುಲಭವಾಗಿ ಸಮೀಪಿಸಸಾಧ್ಯವಿರುವ ದೇವರು ಆತನಾಗಿರುವುದರಿಂದ, ನಾವು ಆತನ ಸಮೀಪಕ್ಕೆ ಹೋಗಬೇಕೆಂಬುದು ಆತನ ಇಚ್ಛೆ. (ಯಾಕೋಬ 4:⁠8) ಯೆಹೋವನು ದೀನನೆಂಬುದನ್ನೂ ಈ ಮಾತುಗಳು ತೋರಿಸುತ್ತವೆ. (ಕೀರ್ತನೆ 113:​5, 6) ಏಕೆಂದರೆ, ತನ್ನ ಜನರ ಮೊಂಡತನವು ಆತನನ್ನು ‘ನೋಯಿಸಿದರೂ,’ ಆತನು ಸಂಕೇತರೂಪದಲ್ಲಿ ತನ್ನ ಕೈಗಳನ್ನು ಚಾಚಿ ತನ್ನ ಬಳಿಗೆ ಹಿಂದಿರುಗುವಂತೆ ಅವರನ್ನು ಬೇಡಿಕೊಳ್ಳುತ್ತಾನೆ. (ಕೀರ್ತನೆ 78:​40, 41) ಅನೇಕ ಶತಮಾನಗಳ ವರೆಗೆ ಅವರನ್ನು ಬೇಡಿಕೊಂಡ ಬಳಿಕ ಮಾತ್ರ ಆತನು ಕೊನೆಗೆ ಅವರನ್ನು ವೈರಿಗಳ ಕೈಗಳಿಗೆ ಒಪ್ಪಿಸಿಕೊಡುತ್ತಾನೆ. ಆಗಲೂ ಅವರಲ್ಲಿ ದೀನರಾಗಿರುವ ವ್ಯಕ್ತಿಗಳನ್ನು ಆತನು ತಿರಸ್ಕರಿಸುವುದಿಲ್ಲ.

7, 8. ಯೆಹೋವನ ಮೊಂಡ ಜನರು ಆತನನ್ನು ಯಾವ ವಿಧದಲ್ಲಿ ಕೋಪಕ್ಕೆಬ್ಬಿಸಿದ್ದಾರೆ?

7 ಆ ಮೊಂಡ ಯೆಹೂದ್ಯರು ತಮ್ಮ ಅಸಹ್ಯ ಕಾರ್ಯಗಳಿಂದ ಪದೇ ಪದೇ ಯೆಹೋವನಿಗೆ ಕೋಪವೆಬ್ಬಿಸಿದ್ದಾರೆ. ಅವರ ಹೇಯಕೃತ್ಯಗಳನ್ನು ಯೆಹೋವನು ವರ್ಣಿಸುವುದು: “ಈ ಜನರು ವನಗಳಲ್ಲಿ ಯಜ್ಞಮಾಡುತ್ತಾ ಇಟ್ಟಿಗೆಯ ವೇದಿಯ ಮೇಲೆ ಧೂಪಹಾಕುತ್ತಾ ಗೋರಿಗಳಲ್ಲಿ ಕೂತುಕೊಳ್ಳುತ್ತಾ ಗುಪ್ತಸ್ಥಳಗಳಲ್ಲಿ ರಾತ್ರಿಕಳೆಯುತ್ತಾ ಹಂದಿಯ ಬಾಡು ತಿನ್ನುತ್ತಾ ಅಸಹ್ಯಪದಾರ್ಥಗಳ ಸಾರನ್ನು ತಮ್ಮ ಗಂಗಳಗಳಲ್ಲಿ ಬಡಿಸಿಕೊಳ್ಳುತ್ತಾ ಅಲ್ಲಿ ನಿಂತಿರು, ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ ಎನ್ನುತ್ತಾ ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ.” (ಯೆಶಾಯ 65:3-5) ಈ ಕಪಟ ಧಾರ್ಮಿಕತೆಯ ಜನರು ಯೆಹೋವನ “ಮುಖದೆದುರಿಗೆ” ಆತನನ್ನು ಕೆಣಕುತ್ತಾರೆ. ಇದು ನಿರ್ಲಜ್ಜೆಯ ಸ್ವಭಾವ ಮತ್ತು ಅಗೌರವವನ್ನು ಸೂಚಿಸಬಹುದು. ಅವರು ತಮ್ಮ ಅಸಹ್ಯಕಾರ್ಯಗಳನ್ನು ಮುಚ್ಚಿಡಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಯಾರಿಗೆ ಗೌರವ ಮತ್ತು ವಿಧೇಯತೆಯು ತೋರಿಸಲ್ಪಡಬೇಕೊ ಆತನ ಸನ್ನಿಧಿಯಲ್ಲಿಯೇ ಪಾಪಗಳನ್ನು ಮಾಡುವುದು ವಿಶೇಷವಾಗಿ ಅವಮಾನಕರವಲ್ಲವೊ?

8 ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಈ ಸ್ವನೀತಿವಂತ ಪಾಪಿಗಳು ಇತರ ಯೆಹೂದ್ಯರಿಗೆ, ‘ನೀನು ದೂರವಿರು, ನಾನು ನಿನಗಿಂತ ಹೆಚ್ಚು ಪವಿತ್ರನು’ ಎಂದು ಹೇಳುತ್ತಿದ್ದಾರೆ. ಎಂತಹ ಕಪಟವಿದು! ಈ “ಕಪಟ ಧಾರ್ಮಿಕತೆ”ಯ ಜನರು ಸುಳ್ಳು ದೇವತೆಗಳಿಗೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸುತ್ತಾರೆ. ಇವನ್ನು ದೇವರ ಧರ್ಮಶಾಸ್ತ್ರವು ಖಂಡಿಸುತ್ತದೆ. (ವಿಮೋಚನಕಾಂಡ 20:​2-6) ಅವರು ಸಮಾಧಿ ಸ್ಥಳಗಳಲ್ಲಿ ಕುಳಿತುಕೊಂಡಿದ್ದಾರೆ; ಇದರಿಂದ ಧರ್ಮಶಾಸ್ತ್ರಕ್ಕನುಸಾರ ಅವರು ಅಶುದ್ಧರಾಗುತ್ತಾರೆ. (ಅರಣ್ಯಕಾಂಡ 19:​14-16) ಅವರು ಹಂದಿಯ ಮಾಂಸವನ್ನು ತಿನ್ನುತ್ತಿದ್ದಾರೆ; ಅದೂ ಅಶುದ್ಧ ಆಹಾರವಾಗಿದೆ. * (ಯಾಜಕಕಾಂಡ 11:⁠7) ಆದರೂ ಅವರ ಧಾರ್ಮಿಕ ಚಟುವಟಿಕೆಗಳು ಅವರು ಬೇರೆ ಯೆಹೂದ್ಯರಿಗಿಂತ ಹೆಚ್ಚು ಪವಿತ್ರರೆಂದು ಭಾವಿಸಿಕೊಳ್ಳುವಂತೆ ಮಾಡುತ್ತವೆ. ಮತ್ತು ತಮ್ಮೊಂದಿಗಿನ ಬರಿಯ ಒಡನಾಟದಿಂದ ಬೇರೆ ಜನರು ಸ್ವಲ್ಪ ಮಟ್ಟಿಗಾದರೂ ಶುದ್ಧೀಕರಿಸಲ್ಪಡದಂತೆ ಅಥವಾ ಶುದ್ಧರಾಗದಂತೆ ಅವರು ತಮ್ಮಿಂದ ದೂರವಿರಬೇಕೆಂಬುದು ಅವರ ಇಚ್ಛೆ. ಆದರೂ “ಸಂಪೂರ್ಣ ಭಕ್ತಿ”ಯನ್ನು ಕೇಳಿಕೊಳ್ಳುವ ದೇವರಿಗೆ ಆ ರೀತಿಯ ದೃಷ್ಟಿಕೋನವಿಲ್ಲ!​—⁠ಧರ್ಮೋಪದೇಶಕಾಂಡ 4:⁠24, NW.

9. ಸ್ವನೀತಿವಂತರಾದ ಪಾಪಿಗಳ ಕುರಿತು ಯೆಹೋವನ ದೃಷ್ಟಿಕೋನವೇನು?

9 ಇಂತಹ ಸ್ವನೀತಿವಂತರನ್ನು ಪವಿತ್ರರೆಂದು ಎಣಿಸುವ ಬದಲು ಯೆಹೋವನು, ಅವರು “ನನ್ನ ಮೂಗಿಗೆ . . . ಹೊಗೆ” ಎಂದು ಹೇಳುತ್ತಾನೆ. “ಮೂಗು” ಅಥವಾ “ಮೂಗಿನ ಹೊಳ್ಳೆ” ಎಂಬುದಕ್ಕಿರುವ ಹೀಬ್ರು ಪದವನ್ನು ಅನೇಕವೇಳೆ ಸಾಂಕೇತಿಕವಾಗಿ ಸಿಟ್ಟಿಗಾಗಿ ಉಪಯೋಗಿಸಲಾಗುತ್ತದೆ. ಹೊಗೆಯನ್ನೂ ಯೆಹೋವನ ಉರಿಯುವ ಕೋಪದೊಂದಿಗೆ ಸಂಬಂಧಿಸಲಾಗಿದೆ. (ಧರ್ಮೋಪದೇಶಕಾಂಡ 29:20) ಯೆಹೋವನ ಜನರು ಅಸಹ್ಯವಾದ ವಿಗ್ರಹಾರಾಧನೆಗೆ ಬಲಿಬಿದ್ದಿರುವುದು ಯೆಹೋವನಿಗೆ ಉರಿಯುವ ಕೋಪವನ್ನೆಬ್ಬಿಸಿದೆ.

10. ಯೆಹೂದದಲ್ಲಿದ್ದವರ ಪಾಪಗಳಿಗೆ ಯೆಹೋವನು ಹೇಗೆ ಪ್ರತಿಫಲವನ್ನು ಕೊಡುವನು?

10 ಯೆಹೋವನು ನ್ಯಾಯವಂತನಾಗಿರುವುದರಿಂದ, ಇಂತಹ ಸ್ವಚ್ಛಂದ ಪಾಪಿಗಳನ್ನು ಶಿಕ್ಷಿಸದೆ ಬಿಡಲಾರನು. ಯೆಶಾಯನು ಬರೆಯುವುದು: “ಇಗೋ, ಇದೆಲ್ಲಾ ಶಾಸನವಾಗಿ ನನ್ನ ಕಣ್ಣೆದುರಿಗಿದೆ, ನಾನು ಮುಯ್ಯಿತೀರಿಸುವ ತನಕ ಸುಮ್ಮನಿರಲಾರೆನು; ಇವರೂ ಇವರ ಪಿತೃಗಳೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ ನನ್ನನ್ನು ಹೀನೈಸಿ ನಡಿಸಿದ ಅಪರಾಧಗಳ ಪ್ರತಿಫಲವನ್ನು ಇವರ ಮಡಲಿಗೆ ಹಾಕುವೆನು; ಹೌದು, ಇವರ ಕಾರ್ಯದ ಫಲವನ್ನು ಅಳತೆಗೆ ಸರಿಯಾಗಿ ಮೊಟ್ಟಮೊದಲೇ ಇವರ ಮಡಲಿಗೆ ಸುರಿಯುವೆನು ಎಂದು ಯೆಹೋವನು ಹೇಳುತ್ತಾನೆ.” (ಯೆಶಾಯ 65:6, 7) ಈ ಯೆಹೂದ್ಯರು ಸುಳ್ಳಾರಾಧನೆಯಲ್ಲಿ ಭಾಗವಹಿಸುವ ಮೂಲಕ ಯೆಹೋವನಿಗೆ ಅವಮಾನವನ್ನು ಉಂಟುಮಾಡಿದ್ದಾರೆ. ಅವರು ಸತ್ಯ ದೇವರ ಆರಾಧನೆಯನ್ನು, ತಮ್ಮ ಸುತ್ತಲಿರುವ ಅನ್ಯಜನಾಂಗಗಳ ಆರಾಧನೆಗಿಂತ ಉತ್ತಮವಲ್ಲದ್ದಾಗಿ ಮಾಡಿದ್ದಾರೆ. ವಿಗ್ರಹಾರಾಧನೆ ಮತ್ತು ಪ್ರೇತವ್ಯವಹಾರಗಳು ಸೇರಿರುವ ಅವರ “ಅಪರಾಧಗಳ” ಪ್ರತಿಫಲವನ್ನು ಯೆಹೋವನು “ಇವರ ಮಡಲಿಗೆ” ಹಾಕುವನು. ಇಲ್ಲಿ ತಿಳಿಸಲ್ಪಟ್ಟಿರುವ ‘ಮಡಲು’ ಎಂಬ ಅಭಿವ್ಯಕ್ತಿಯು, ಜನರ ಹೊರ ಉಡುಪಿನ ನಿರಿಗೆಯಿಂದ ಮಾಡುವ ಚೀಲವನ್ನು ಸೂಚಿಸುತ್ತದೆ. ವ್ಯಾಪಾರಿಗಳು ಅಳೆದಿರುವ ವಸ್ತುಗಳನ್ನು ಇದರೊಳಗೆ ಹಾಕಬಹುದಾಗಿತ್ತು. (ಲೂಕ 6:38) ಧರ್ಮಭ್ರಷ್ಟ ಯೆಹೂದ್ಯರಿಗೆ ಇದರ ಅರ್ಥವು ಸ್ಪಷ್ಟವಾಗಿತ್ತು. ಅದೇನಂದರೆ ಯೆಹೋವನು ಅವರಿಗೆ “ಪ್ರತಿಫಲವನ್ನು” ಅಥವಾ ಶಿಕ್ಷೆಯನ್ನು ಅಳೆದು ಕೊಡುವನು. ನ್ಯಾಯವಂತನಾದ ದೇವರು ಪ್ರತೀಕಾರವನ್ನು ಹಕ್ಕಿನಿಂದ ಕೇಳುವನು. (ಕೀರ್ತನೆ 79:12; ಯೆರೆಮೀಯ 32:18) ಯೆಹೋವನು ಬದಲಾಗದವನಾಗಿರುವುದರಿಂದ, ತನ್ನ ತಕ್ಕ ಸಮಯದಲ್ಲಿ ಈ ದುಷ್ಟ ವಿಷಯಗಳ ವ್ಯವಸ್ಥೆಗೂ ಅದೇ ರೀತಿಯ ಶಿಕ್ಷೆಯನ್ನು ಅಳೆದು ಕೊಡುವನೆಂದು ನಾವು ಭರವಸೆಯಿಂದಿರಬಲ್ಲೆವು.​—⁠ಮಲಾಕಿಯ 3:⁠6.

‘ನನ್ನ ಸೇವಕರನ್ನು ಲಕ್ಷ್ಯಕ್ಕೆ ತರುವುದು’

11. ತಾನು ನಂಬಿಗಸ್ತ ಉಳಿಕೆಯವರನ್ನು ರಕ್ಷಿಸುವೆನೆಂದು ಯೆಹೋವನು ಹೇಗೆ ಸೂಚಿಸುತ್ತಾನೆ?

11 ತನ್ನ ಜನರಲ್ಲಿ ನಂಬಿಗಸ್ತರಾಗಿರುವವರಿಗೆ ಯೆಹೋವನು ಕರುಣೆಯನ್ನು ತೋರಿಸುವನೊ? ಯೆಶಾಯನು ವಿವರಿಸುವುದು: “ಯೆಹೋವನು ಹೀಗನ್ನುತ್ತಾನೆ​—⁠ರಸದೊರೆಯಬಹುದಾದ ದ್ರಾಕ್ಷೆಯ ಗೊಂಚಲನ್ನು ಒಬ್ಬನು ನೋಡಿ​—⁠ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು, ಯಾಕೋಬಿನಿಂದ ಸಂತಾನವನ್ನು ಹೊರಪಡಿಸುವೆನು, ಯೆಹೂದವಂಶದಿಂದ ನನ್ನ ಪರ್ವತಗಳ ಸ್ವಾಸ್ತ್ಯದ ಬಾಧ್ಯಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವಾಸ್ತ್ಯವನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು.” (ಯೆಶಾಯ 65:8, 9) ತನ್ನ ಜನರನ್ನು ದ್ರಾಕ್ಷೆಯ ಗೊಂಚಲಿಗೆ ಹೋಲಿಸುವಾಗ, ಯೆಹೋವನು ಅವರು ಸುಲಭವಾಗಿ ಗ್ರಹಿಸಬಲ್ಲ ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾನೆ. ದ್ರಾಕ್ಷೇಹಣ್ಣು ಆ ದೇಶದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಮತ್ತು ದ್ರಾಕ್ಷಾಮದ್ಯವು ಮಾನವಕುಲಕ್ಕೆ ಒಂದು ಆಶೀರ್ವಾದವಾಗಿದೆ. (ಕೀರ್ತನೆ 104:15) ಇಲ್ಲಿ ಚಿತ್ರಿಸಿರುವ ದ್ರಾಕ್ಷೆಯ ಗೊಂಚಲು, ಎಲ್ಲ ಹಣ್ಣುಗಳಲ್ಲ ಬದಲಾಗಿ ಕೆಲವೇ ಹಣ್ಣುಗಳು ಒಳ್ಳೆಯದಾಗಿದ್ದ ಗೊಂಚಲಾಗಿದ್ದಿರಬಹುದು. ಇಲ್ಲವೆ, ಒಂದೇ ಒಂದು ದ್ರಾಕ್ಷೆಯ ಗೊಂಚಲು ಒಳ್ಳೇದಾಗಿದ್ದು, ಬೇರೆ ಗೊಂಚಲುಗಳು ಇನ್ನೂ ಕಾಯಿಯಾಗಿರುವ ಅಥವಾ ಕೆಟ್ಟುಹೋಗಿರುವ ವಿಚಾರವನ್ನು ಇದು ಸೂಚಿಸುತ್ತಿರಬಹುದು. ಈ ಎರಡು ಸಂದರ್ಭಗಳಲ್ಲಿಯೂ, ದ್ರಾಕ್ಷೆಯ ಕೃಷಿಕಾರನು ಒಳ್ಳೆಯ ಹಣ್ಣುಗಳನ್ನು ನಾಶಮಾಡುವುದಿಲ್ಲ. ಹೀಗೆ ಯೆಹೋವನು, ತಾನು ಜನಾಂಗವನ್ನು ಪೂರ್ತಿಯಾಗಿ ನಾಶಮಾಡದೆ, ನಂಬಿಗಸ್ತ ಉಳಿಕೆಯವರನ್ನು ಉಳಿಸುವೆನೆಂದು ತನ್ನ ಜನರಿಗೆ ಪುನರಾಶ್ವಾಸನೆ ನೀಡುತ್ತಾನೆ. ಈ ಅನುಗ್ರಹಭರಿತ ಉಳಿಕೆಯವರು ಆತನ ‘ಪರ್ವತವನ್ನು,’ ಅಂದರೆ ಯೆಹೋವನು ತನ್ನದೆಂದು ಹೇಳಿಕೊಂಡಿರುವ ಪರ್ವತಮಯ ಪ್ರದೇಶವಾದ ಯೆರೂಸಲೇಮ್‌ ಮತ್ತು ಯೆಹೂದ ದೇಶವನ್ನು ಸ್ವಾಸ್ತ್ಯವಾಗಿ ಪಡೆಯುವರು.

12. ನಂಬಿಗಸ್ತ ಉಳಿಕೆಯವರಿಗೆ ಯಾವ ಆಶೀರ್ವಾದಗಳು ಕಾದಿವೆ?

12 ಆ ನಂಬಿಗಸ್ತ ಉಳಿಕೆಯವರಿಗೆ ಯಾವ ಆಶೀರ್ವಾದಗಳು ಕಾದಿವೆ? ಯೆಹೋವನು ಹೇಳುವುದು: “ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು.” (ಯೆಶಾಯ 65:10) ಅನೇಕ ಯೆಹೂದ್ಯರ ಜೀವಿತಗಳಲ್ಲಿ ಕುರಿಗಳ ಹಿಂಡುಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಮತ್ತು ಸಾಕಷ್ಟು ಹುಲ್ಲುಗಾವಲು ಶಾಂತಿಯ ಸಮಯದಲ್ಲಿ ಸಮೃದ್ಧಿಯನ್ನು ಪಡೆಯಲು ಸಹಾಯಮಾಡುತ್ತದೆ. ಯೆಹೋವನು ಶಾಂತಿ ಮತ್ತು ಸಮೃದ್ಧಿಯನ್ನು ಚಿತ್ರಿಸಲು ದೇಶದ ಎರಡು ಘಟ್ಟಗಳನ್ನು ಸೂಚಿಸುತ್ತಾನೆ. ಪಶ್ಚಿಮಕ್ಕೆ ಶಾರೋನ್‌ ಬಯಲಿದೆ. ಸುಂದರವೂ ಫಲಭರಿತವೂ ಆಗಿರುವ ಈ ಸ್ಥಳವು, ಮೆಡಿಟರೇನಿಯನ್‌ ಕರಾವಳಿಯನ್ನು ಆವರಿಸುತ್ತದೆ. ಆಕೋರ್‌ ಕಣಿವೆಯು ದೇಶದ ಈಶಾನ್ಯ ಮೇರೆಯ ಒಂದು ಭಾಗವನ್ನು ರೂಪಿಸುತ್ತದೆ. (ಯೆಹೋಶುವ 15:⁠7) ಬರಲಿದ್ದ ದೇಶಭ್ರಷ್ಟತೆಯ ಸಮಯದಲ್ಲಿ ಈ ಪ್ರದೇಶಗಳು ದೇಶದ ಮಿಕ್ಕ ಭಾಗದೊಂದಿಗೆ ಬಂಜರು ಬೀಳುವವು. ಆದರೆ ದೇಶಭ್ರಷ್ಟತೆಯು ಮುಗಿದ ಬಳಿಕ ಹಿಂದಿರುಗಿ ಬರುವ ಉಳಿಕೆಯವರಿಗೆ ಅವು ಸುಂದರ ಹುಲ್ಲುಗಾವಲುಗಳಾಗುವವೆಂದು ಯೆಹೋವನು ವಾಗ್ದಾನಿಸುತ್ತಾನೆ.​—⁠ಯೆಶಾಯ 35:2; ಹೋಶೇಯ 2:⁠15.

“ಒಳ್ಳೆಯ ಅದೃಷ್ಟ ದೇವತೆ”ಯಲ್ಲಿ ಭರವಸೆಯಿಡುವುದು

13, 14. ದೇವಜನರು ಆತನನ್ನು ತ್ಯಜಿಸಿದ್ದಾರೆಂದು ಯಾವ ಆಚಾರಗಳು ತೋರಿಸುತ್ತವೆ, ಮತ್ತು ಇದರ ಪರಿಣಾಮವಾಗಿ ಅವರಿಗೆ ಏನಾಗುವುದು?

13 ಈಗ ಯೆಶಾಯನ ಪ್ರವಾದನೆಯು ಯೆಹೋವನನ್ನು ಬಿಟ್ಟು ವಿಗ್ರಹಾರಾಧನೆಯಲ್ಲಿ ಪಟ್ಟುಹಿಡಿಯುವವರ ಕಡೆಗೆ ತನ್ನ ಗಮನವನ್ನು ತಿರುಗಿಸುತ್ತದೆ. ಅದು ಹೇಳುವುದು: “ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರಪರ್ವತವನ್ನು ಮರೆತು ಶುಭದಾಯಕದೇವತೆಗೆ [“ಒಳ್ಳೆಯ ಅದೃಷ್ಟ ದೇವತೆಗೆ,” NW] ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ ಮದ್ಯವನ್ನು ತುಂಬಾ ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗಮಾಡುವೆನು.” (ಯೆಶಾಯ 65:11) “ಒಳ್ಳೆಯ ಅದೃಷ್ಟ ದೇವತೆಗೆ” ಮತ್ತು “ಗತಿದಾಯಕದೇವತೆ”ಗೆ ಆಹಾರ ಮತ್ತು ಪಾನೀಯಗಳನ್ನು ಅಣಿಮಾಡುವ ಮೂಲಕ ತಪ್ಪುದಾರಿಗೆ ಹಿಂದೆ ತೆರಳಿದ್ದ ಈ ಯೆಹೂದ್ಯರು, ವಿಧರ್ಮಿಗಳ ವಿಗ್ರಹಾರಾಧನೆಯ ಆಚಾರಗಳಿಗೆ ಬಲಿಬಿದ್ದಿದ್ದಾರೆ. * ಮೂರ್ಖತನದಿಂದ ಈ ದೇವತೆಗಳಲ್ಲಿ ಭರವಸೆಯಿಡುವವರಿಗೆ ಏನಾಗುವುದು?

14 ಯೆಹೋವನು ಮುಚ್ಚುಮರೆಯಿಲ್ಲದೆ ಅವರನ್ನು ಎಚ್ಚರಿಸುವುದು: “ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ; ಏಕಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಲು ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡಿರಿ.” (ಯೆಶಾಯ 65:12) ಮೂಲ ಹೀಬ್ರು ಭಾಷೆಯಲ್ಲಿ ಗತಿದಾಯಕದೇವತೆಯ ಹೆಸರಿನ ಎರಡರ್ಥವುಳ್ಳ ನುಡಿಯನ್ನು ಉಪಯೋಗಿಸುತ್ತ, ಈ ಸುಳ್ಳು ದೇವತೆಯನ್ನು ಆರಾಧಿಸುವವರು ‘ಕೊಲೆಗೊಳಗಾಗಿ ಬೀಳುತ್ತಾರೆ’ ಅಂದರೆ ನಾಶವಾಗುತ್ತಾರೆಂದು ಯೆಹೋವನು ಹೇಳುತ್ತಾನೆ. ಯೆಹೋವನು ಈ ಜನರಿಗೆ ಪಶ್ಚಾತ್ತಾಪಪಡಲು ಪದೇ ಪದೇ ತನ್ನ ಪ್ರವಾದಿಗಳ ಮೂಲಕ ಕರೆಕೊಟ್ಟರೂ, ಅವರು ಆತನನ್ನು ಅಲಕ್ಷಿಸಿ ಆತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಲು ಮೊಂಡತನದಿಂದ ಆರಿಸಿಕೊಂಡಿದ್ದಾರೆ. ದೇವರ ಕಡೆಗೆ ಅವರು ಎಷ್ಟೊಂದು ತಿರಸ್ಕಾರಭಾವವನ್ನು ತೋರಿಸುತ್ತಾರೆ! ದೇವರ ಎಚ್ಚರಿಕೆಯನ್ನು ನೆರವೇರಿಸುತ್ತಾ, ಬಾಬೆಲಿನವರು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಮಾಡುವಂತೆ ಯೆಹೋವನು ಅನುಮತಿಸುವಾಗ, ಸಾ.ಶ.ಪೂ. 607ರಲ್ಲಿ ಆ ಜನಾಂಗವು ಒಂದು ಮಹಾ ವಿಪತ್ತನ್ನು ಅನುಭವಿಸುವುದು. ಆ ಸಮಯದಲ್ಲಿ “ಒಳ್ಳೆಯ ಅದೃಷ್ಟ ದೇವತೆ”ಯು ಯೆಹೂದ ಮತ್ತು ಯೆರೂಸಲೇಮಿನಲ್ಲಿರುವ ತನ್ನ ಭಕ್ತರನ್ನು ರಕ್ಷಿಸುವುದರಲ್ಲಿ ವಿಫಲವಾಗುವುದು.​—⁠2 ಪೂರ್ವಕಾಲವೃತ್ತಾಂತ 36:⁠17.

15. ಯೆಶಾಯ 65:​11, 12ರಲ್ಲಿರುವ ಎಚ್ಚರಿಕೆಯನ್ನು ಇಂದು ಸತ್ಯ ಕ್ರೈಸ್ತರು ಯಾವ ವಿಧದಲ್ಲಿ ಪಾಲಿಸುತ್ತಾರೆ?

15 ಇಂದು ಸತ್ಯ ಕ್ರೈಸ್ತರು ಯೆಶಾಯ 65:​11, 12ರಲ್ಲಿರುವ ಎಚ್ಚರಿಕೆಗೆ ಕಿವಿಗೊಡುತ್ತಾರೆ. ಅವರು ‘ಒಳ್ಳೆಯ ಅದೃಷ್ಟವು’ ತಮಗೆ ವಿಶೇಷ ಅನುಗ್ರಹಗಳನ್ನು ದಯಪಾಲಿಸುವ ಪ್ರಕೃತ್ಯತೀತ ಶಕ್ತಿಯಾಗಿದೆಯೊ ಎಂಬಂತೆ ಅದರಲ್ಲಿ ನಂಬಿಕೆಯಿಡುವುದಿಲ್ಲ. “ಒಳ್ಳೆಯ ಅದೃಷ್ಟ ದೇವತೆ”ಯನ್ನು ತೃಪ್ತಿಪಡಿಸುವ ಪ್ರಯತ್ನದಲ್ಲಿ ತಮಗಿರುವ ಪ್ರಾಪಂಚಿಕ ಸ್ವತ್ತನ್ನು ವ್ಯಯಮಾಡಲು ನಿರಾಕರಿಸುತ್ತಾ, ಅವರು ಸಕಲ ರೀತಿಯ ಜೂಜಾಟಗಳಿಂದ ದೂರವಿರುತ್ತಾರೆ. ಈ ದೇವತೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವವರು ಅಂತಿಮವಾಗಿ ಸರ್ವಸ್ವವನ್ನೂ ಕಳೆದುಕೊಳ್ಳುವರೆಂದು ಅವರಿಗೆ ನಿಶ್ಚಯವಿದೆ. ಏಕೆಂದರೆ, “ನೀವು ಕೊಲೆಗೊಳಗಾಗಿ ಬೀಳುವಿರಿ” ಎಂದು ಯೆಹೋವನು ಅಂಥವರಿಗೆ ಹೇಳುತ್ತಾನೆ.

“ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು”

16. ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಯಾವ ವಿಧಗಳಲ್ಲಿ ಆಶೀರ್ವದಿಸುವನು, ಆದರೆ ಆತನನ್ನು ತ್ಯಜಿಸಿರುವವರಿಗೆ ಏನಾಗುವುದು?

16 ಯೆಹೋವನನ್ನು ತ್ಯಜಿಸಿರುವವರನ್ನು ಖಂಡಿಸುವಾಗ, ದೇವರನ್ನು ಯಥಾರ್ಥವಾಗಿ ಆರಾಧಿಸುವವರಿಗೆ ಮತ್ತು ಕಪಟವಾಗಿ ಆರಾಧಿಸುವವರಿಗೆ ಕಾದಿರುವ ಭಿನ್ನ ಭಿನ್ನವಾದ ಪಾಲುಗಳನ್ನು ಪ್ರವಾದನೆಯು ವರ್ಣಿಸುತ್ತದೆ: “ಕರ್ತನಾದ ಯೆಹೋವನು ಹೀಗನ್ನುತ್ತಾನೆ​—⁠ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವಿರಿ.” (ಯೆಶಾಯ 65:13, 14) ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಆಶೀರ್ವದಿಸುವನು. ಆನಂದದಿಂದ ತುಂಬಿತುಳುಕುವ ಹೃದಯಗಳಿಂದ ಅವರು ಹರ್ಷಧ್ವನಿಗೈಯುವರು. ಅವರು ಊಟಮಾಡುವರು, ಕುಡಿಯುವರು, ಉಲ್ಲಾಸಗೊಳ್ಳುವರು ಎಂಬ ಶಬ್ದಗಳು, ಯೆಹೋವನು ತನ್ನ ಆರಾಧಕರ ಆವಶ್ಯಕತೆಗಳನ್ನು ಹೇರಳವಾಗಿ ತೃಪ್ತಿಪಡಿಸುವನೆಂಬುದನ್ನು ಸೂಚಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನನ್ನು ತ್ಯಜಿಸುವ ಆಯ್ಕೆಮಾಡಿರುವವರು ಆತ್ಮಿಕವಾಗಿ ಹಸಿದು ಬಾಯಾರುವರು. ಅವರ ಆವಶ್ಯಕತೆಗಳು ತೃಪ್ತಿಗೊಳ್ಳವು. ಅವರ ಮೇಲೆ ಬರುವ ಸಂಕಟ ಮತ್ತು ಬೇನೆಯಿಂದಾಗಿ ಅವರು ಆತ್ಮಕ್ಲೇಶದಿಂದ ಗೋಳಾಡುವರು.

17. ಯೆಹೋವನ ಜನರಿಗೆ ಇಂದು ಹರ್ಷಧ್ವನಿಗೈಯಲು ಏಕೆ ಸಕಾರಣವಿದೆ?

17 ಯೆಹೋವನ ಮಾತುಗಳು, ಇಂದು ದೇವರನ್ನು ಸೇವಿಸುತ್ತೇವೆಂದು ಬರೇ ಮಾತಿನಲ್ಲಿ ಹೇಳುವವರ ಆತ್ಮಿಕ ಪರಿಸ್ಥಿತಿಯನ್ನು ಚೆನ್ನಾಗಿ ವರ್ಣಿಸುತ್ತವೆ. ಕ್ರೈಸ್ತಪ್ರಪಂಚದ ಲಕ್ಷಾಂತರ ಜನರು ಮನೋವ್ಯಥೆಯಿಂದ ಕಷ್ಟಪಡುತ್ತಿರುವಾಗ, ಯೆಹೋವನ ಆರಾಧಕರಾದರೊ ಹರ್ಷಧ್ವನಿಗೈಯುತ್ತಾರೆ. ಮತ್ತು ಹರ್ಷಿಸಲು ಅವರಿಗೆ ಸಕಾರಣವಿದೆ. ಅವರಿಗೆ ಆತ್ಮಿಕವಾಗಿ ಒಳ್ಳೆಯ ಊಟ ದೊರೆಯುತ್ತದೆ. ಯೆಹೋವನು ಬೈಬಲ್‌ ಆಧಾರಿತ ಸಾಹಿತ್ಯ ಮತ್ತು ಕ್ರೈಸ್ತ ಕೂಟಗಳ ಮೂಲಕ ಅವರಿಗೆ ಹೇರಳವಾದ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ. ನಿಜವಾಗಿಯೂ ದೇವರ ವಾಕ್ಯದ ಭಕ್ತಿವೃದ್ಧಿಮಾಡುವಂತಹ ಸತ್ಯ ಮತ್ತು ಸಾಂತ್ವನದಾಯಕ ವಾಗ್ದಾನಗಳು ನಮಗೆ “ಹೃದಯಾನಂದ”ವನ್ನು ಉಂಟುಮಾಡುತ್ತವೆ!

18. ಯೆಹೋವನನ್ನು ತ್ಯಜಿಸಿರುವವರ ವಿಷಯದಲ್ಲಿ ಏನು ಮಾತ್ರ ಉಳಿಯುವುದು, ಮತ್ತು ಆಣೆಯಿಡುವುದರಲ್ಲಿ ಅವರ ಹೆಸರನ್ನು ಉಪಯೋಗಿಸುವುದರಿಂದ ಏನು ಸೂಚಿತವಾಗಬಹುದು?

18 ಯೆಹೋವನು ತನ್ನನ್ನು ತ್ಯಜಿಸಿರುವವರನ್ನು ಈ ಮಾತುಗಳಿಂದ ಸಂಬೋಧಿಸುತ್ತ ಮುಂದುವರಿಯುತ್ತಾನೆ: “ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು. ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತುಹೋಗಿರುವವಾದದರಿಂದ ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯಸಂಧನಾದ [“ನಂಬಿಕೆಯ,” NW] ದೇವರ ಮೇಲೆ ಆಣೆಯಿಡುವನು.” (ಯೆಶಾಯ 65:15, 16) ಯೆಹೋವನನ್ನು ತ್ಯಜಿಸಿರುವವರಿಗೆ ಉಳಿದಿರುವುದು ಕೇವಲ ಅವರ ಹೆಸರು ಮಾತ್ರ. ಅದು ಆಣೆಗಾಗಿ ಅಥವಾ ಶಾಪಕ್ಕಾಗಿ ಮಾತ್ರ ಉಪಯೋಗಿಸಲ್ಪಡುವುದು. ಅಂದರೆ, ಆಣೆಯಿಟ್ಟು ತಮ್ಮನ್ನು ಒಂದು ವಿಷಯಕ್ಕೆ ಬದ್ಧವಾಗಿಸುವವರು, ಕಾರ್ಯತಃ ‘ನಾನು ಈ ಮಾತನ್ನು ನೆರವೇರಿಸದೆ ಇರುವಲ್ಲಿ, ಆ ಧರ್ಮಭ್ರಷ್ಟರಿಗಾದ ಶಿಕ್ಷೆ ನನಗೂ ಬರಲಿ’ ಎಂದು ಹೇಳುತ್ತಾರೆಂಬ ಅರ್ಥ ಇದಕ್ಕಿರಬಹುದು. ಇಲ್ಲವೆ, ಅವರ ಹೆಸರನ್ನು ದೃಷ್ಟಾಂತರೂಪದಲ್ಲಿ, ಸೊದೋಮ್‌ ಗೊಮೋರದಂತೆ, ದುಷ್ಟರಿಗಾಗುವ ಶಿಕ್ಷೆಯ ಸಂಕೇತವಾಗಿ ಉಪಯೋಗಿಸಲಾಗುವುದೆಂಬ ಅರ್ಥವನ್ನೂ ಇದು ಕೊಡಬಹುದು.

19. ದೇವರ ಸೇವಕರು ಹೇಗೆ ಇನ್ನೊಂದು ಹೆಸರಿನಿಂದ ಕರೆಯಲ್ಪಡುವರು, ಮತ್ತು ಅವರಿಗೆ ನಂಬಿಗಸ್ತಿಕೆಯ ದೇವರಲ್ಲಿ ಏಕೆ ಭರವಸೆಯಿರುವುದು? (ಪಾದಟಿಪ್ಪಣಿಯನ್ನು ಸಹ ನೋಡಿ.)

19 ಆದರೆ ದೇವರ ಸ್ವಂತ ಸೇವಕರ ಪಾಲು ಅದೆಷ್ಟು ಭಿನ್ನವಾಗಿರುವುದು! ಅವರು ಇನ್ನೊಂದು ಹೆಸರಿನಿಂದ ಕರೆಯಲ್ಪಡುವರು. ಅವರು ತಮ್ಮ ಸ್ವದೇಶದಲ್ಲಿ ಅನುಭವಿಸುವ ಧನ್ಯ ಸ್ಥಿತಿ ಮತ್ತು ಘನತೆಯನ್ನು ಅದು ಸೂಚಿಸುತ್ತದೆ. ಅವರು ಸುಳ್ಳು ದೇವತೆಗಳಿಂದ ಯಾವ ಆಶೀರ್ವಾದವನ್ನೂ ಕೇಳರು, ನಿರ್ಜೀವವಾಗಿರುವ ಯಾವ ವಿಗ್ರಹದ ಮೇಲೂ ಆಣೆಯಿಡರು. ಬದಲಿಗೆ, ಅವರು ತಮಗೆ ಒಳ್ಳೇದನ್ನು ಕೋರುವಾಗ ಅಥವಾ ಆಣೆಯಿಡುವಾಗ, ನಂಬಿಗಸ್ತಿಕೆಯ ದೇವರ ಹೆಸರಿನಲ್ಲಿ ಅದನ್ನು ಮಾಡುವರು. (ಯೆಶಾಯ 65:​16, NW ಪಾದಟಿಪ್ಪಣಿ) ದೇಶದ ನಿವಾಸಿಗಳಿಗೆ ದೇವರಲ್ಲಿ ಭರವಸೆಯಿಡಲು ಸಕಾರಣವಿರುವುದು, ಏಕೆಂದರೆ ಆಗ ಆತನು ತನ್ನ ವಾಗ್ದಾನಗಳಿಗೆ ನಂಬಿಗಸ್ತನೆಂದು ರುಜುಪಡಿಸುವನು. * ಯೆಹೂದ್ಯರು ತಮ್ಮ ಸ್ವದೇಶದಲ್ಲಿ ಸುರಕ್ಷಿತರಾಗಿರುವುದಿಂದ, ಅವರು ಬೇಗನೆ ತಮ್ಮ ಹಿಂದಿನ ಸಂಕಟಗಳನ್ನು ಮರೆತುಬಿಡುವರು.

“ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು”

20. ಸಾ.ಶ.ಪೂ. 537ರಲ್ಲಿ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತಾದ ಯೆಹೋವನ ವಾಗ್ದಾನವು ಹೇಗೆ ನೆರವೇರಿತು?

20 ಯೆಹೋವನು ಈಗ, ಪಶ್ಚಾತ್ತಾಪಪಟ್ಟ ಉಳಿಕೆಯವರು ಬಾಬೆಲಿನ ದೇಶಭ್ರಷ್ಟತೆಯಿಂದ ಹಿಂದಿರುಗಿದ ಬಳಿಕ ಅವರನ್ನು ಪುನಸ್ಸ್ಥಾಪಿಸುವ ತನ್ನ ವಾಗ್ದಾನವನ್ನು ವಿವರವಾಗಿ ವ್ಯಕ್ತಪಡಿಸುತ್ತಾನೆ. ಯೆಶಾಯನ ಮೂಲಕ ಯೆಹೋವನು ಹೇಳುವುದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು [“ಸೃಷ್ಟಿಸುತ್ತಿದ್ದೇನೆ,” NW]; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ಯೆಹೋವನ ವಾಗ್ದತ್ತ ಪುನಸ್ಸ್ಥಾಪನೆಯು ಖಂಡಿತವಾಗಿಯೂ ನೆರವೇರಲಿರುವುದರಿಂದ, ಆತನು ಆ ಭಾವೀ ನೆರವೇರಿಕೆಯ ಕುರಿತು ಈಗಾಗಲೇ ಅದು ಸಂಭವಿಸುತ್ತಿರುವಂತೆ ಮಾತಾಡುತ್ತಾನೆ. ಈ ಪ್ರವಾದನೆಯು ಪ್ರಥಮವಾಗಿ ಸಾ.ಶ.ಪೂ. 537ರಲ್ಲಿ, ಯೆಹೂದಿ ಉಳಿಕೆಯವರು ಯೆರೂಸಲೇಮಿನಲ್ಲಿ ಪುನಸ್ಸ್ಥಾಪಿಸಲ್ಪಟ್ಟಾಗ ನೆರವೇರಿತು. ಆಗ “ನೂತನಾಕಾಶಮಂಡಲ” ಏನಾಗಿತ್ತು? ಜೆರುಬ್ಬಾಬೆಲಿನ ದೇಶಾಧಿಪತ್ಯವೇ. ಅದು ಯೆರೂಸಲೇಮಿನಲ್ಲಿ ಕೇಂದ್ರೀಕರಿಸಲ್ಪಟ್ಟಿತ್ತು ಮತ್ತು ಮಹಾಯಾಜಕನಾದ ಯೇಷೂವ (ಯೆಹೋಶುವ)ನಿಂದ ಬೆಂಬಲಿಸಲ್ಪಟ್ಟಿತು. ಪುನಸ್ಸ್ಥಾಪಿತ ಯೆಹೂದಿ ಉಳಿಕೆಯವರು “ನೂತನಭೂಮಂಡಲ” ಆಗಿದ್ದರು. ಅವರು ಶುದ್ಧೀಕರಿಸಲ್ಪಟ್ಟ ಒಂದು ಸಮಾಜವಾಗಿದ್ದು, ಅಂತಹ ಆಳ್ವಿಕೆಗೆ ಅಧೀನರಾಗಿ ದೇಶದಲ್ಲಿ ಶುದ್ಧಾರಾಧನೆಯನ್ನು ಪುನಃ ಆರಂಭಿಸಲು ಸಹಾಯಮಾಡಿದರು. (ಎಜ್ರ 5:​1, 2) ಆ ಪುನಸ್ಸ್ಥಾಪನೆಯಿಂದ ಅವರಿಗಾದ ಸಂತೋಷವು ಹಿಂದಿನ ಎಲ್ಲ ಕಷ್ಟಾನುಭವಗಳನ್ನು ಅಡಗಿಸಿತು. ಹಿಂದಿನ ಸಂಕಟಗಳು ನೆನಪಿಗೂ ಬರಲಿಲ್ಲ.​—⁠ಕೀರ್ತನೆ 126:​1, 2.

21. ಯಾವ ನೂತನಾಕಾಶಮಂಡಲವು 1914ರಲ್ಲಿ ಅಸ್ತಿತ್ವಕ್ಕೆ ಬಂತು?

21 ಆದರೂ, ಪೇತ್ರನು ಯೆಶಾಯನ ಪ್ರವಾದನೆಯನ್ನು ಪ್ರತಿಧ್ವನಿಸಿ, ಅದಕ್ಕೆ ಭಾವೀ ನೆರವೇರಿಕೆಯಿದೆಯೆಂದು ತೋರಿಸಿರುವುದನ್ನು ಜ್ಞಾಪಿಸಿಕೊಳ್ಳಿ. ಆ ಅಪೊಸ್ತಲನು ಬರೆದುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ದೀರ್ಘಕಾಲದಿಂದ ಕಾದುಕೊಂಡಿದ್ದ ನೂತನಾಕಾಶಮಂಡಲವು 1914ರಲ್ಲಿ ಅಸ್ತಿತ್ವಕ್ಕೆ ಬಂತು. ಆ ವರುಷದಲ್ಲಿ ಜನಿಸಿದ ಮೆಸ್ಸೀಯ ಸಂಬಂಧಿತ ರಾಜ್ಯವು ಸ್ವರ್ಗದಿಂದಲೇ ಆಳುತ್ತಿದ್ದು, ಯೆಹೋವನು ಅದಕ್ಕೆ ಇಡೀ ಭೂಮಿಯ ಮೇಲಿನ ಅಧಿಕಾರವನ್ನು ಕೊಟ್ಟಿದ್ದಾನೆ. (ಕೀರ್ತನೆ 2:​6-8) ಕ್ರಿಸ್ತನ ಮತ್ತು 1,44,000 ಮಂದಿ ಜೊತೆಪ್ರಭುಗಳ ಅಧಿಕಾರದಲ್ಲಿರುವ ಈ ರಾಜ್ಯ ಸರಕಾರವು ನೂತನಾಕಾಶಮಂಡಲವಾಗಿರುತ್ತದೆ.​—⁠ಪ್ರಕಟನೆ 14:⁠1.

22. ಯಾರು ನೂತನಭೂಮಂಡಲವಾಗುವರು, ಮತ್ತು ಆ ಏರ್ಪಾಡಿನ ಕೇಂದ್ರಭಾಗವಾಗುವಂತೆ ಜನರು ಈಗಲೂ ಹೇಗೆ ತಯಾರಿಸಲ್ಪಡುತ್ತಿದ್ದಾರೆ?

22 ಹಾಗಾದರೆ ನೂತನಭೂಮಂಡಲದ ಕುರಿತಾಗಿ ಏನು? ಪುರಾತನ ಕಾಲದ ನೆರವೇರಿಕೆಯ ನಮೂನೆಯನ್ನು ಅನುಸರಿಸುತ್ತ, ನೂತನಭೂಮಂಡಲವು ಆ ನೂತನಾಕಾಶಮಂಡಲದ ಆಳ್ವಿಕೆಗೆ ಸಂತೋಷದಿಂದ ಅಧೀನರಾಗುವ ಜನರಿಂದ ರಚಿಸಲ್ಪಟ್ಟಿರುವುದು. ಈಗಲೂ, ಯೋಗ್ಯ ಮನೋಭಾವವಿರುವ ಲಕ್ಷಾಂತರ ಜನರು ಈ ಸರಕಾರಕ್ಕೆ ಅಧೀನರಾಗಿ, ಬೈಬಲಿನಲ್ಲಿ ಕಂಡುಬರುವ ಅದರ ನಿಯಮಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಇವರು ಸಕಲ ಜನಾಂಗ, ಭಾಷೆ ಮತ್ತು ಕುಲಗಳಿಂದ ಬಂದವರಾಗಿದ್ದು, ಆಳುತ್ತಿರುವ ಅರಸನಾದ ಯೇಸು ಕ್ರಿಸ್ತನನ್ನು ಸೇವಿಸಲಿಕ್ಕಾಗಿ ಐಕ್ಯದಿಂದ ಕೆಲಸ ಮಾಡುತ್ತಾರೆ. (ಮೀಕ 4:​1-4) ಈಗಿರುವ ದುಷ್ಟ ವಿಷಯಗಳ ವ್ಯವಸ್ಥೆಯು ಗತಿಸಿದ ನಂತರ, ಈ ಗುಂಪು ನೂತನಭೂಮಂಡಲದ ಕೇಂದ್ರಭಾಗವಾಗುವುದು. ಅದು ಕ್ರಮೇಣ ದೇವರ ರಾಜ್ಯದ ಭೂಕ್ಷೇತ್ರವನ್ನು ಸ್ವಾಸ್ತ್ಯವಾಗಿ ಪಡೆಯುವ ದೇವಭಯವುಳ್ಳ ಮಾನವರ ಭೌಗೋಲಿಕ ಸಮಾಜವಾಗುವುದು.​—⁠ಮತ್ತಾಯ 25:⁠34.

23. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತಾಗಿ ಪ್ರಕಟನೆ ಪುಸ್ತಕದಲ್ಲಿ ನಾವು ಯಾವ ಮಾಹಿತಿಯನ್ನು ಕಂಡುಕೊಳ್ಳುತ್ತೇವೆ, ಮತ್ತು ಈ ಪ್ರವಾದನೆಯು ಹೇಗೆ ನೆರವೇರುವುದು?

23 ಪ್ರಕಟನೆ ಪುಸ್ತಕವು, ಅಪೊಸ್ತಲ ಯೋಹಾನನು ನೋಡಿದ ಒಂದು ದರ್ಶನವನ್ನು ಅಂದರೆ ಈ ವಿಷಯಗಳ ವ್ಯವಸ್ಥೆಯು ತೊಲಗಿಸಲ್ಪಡುವಾಗ ಬರಲಿರುವ ಯೆಹೋವನ ದಿನದ ದರ್ಶನವನ್ನು ವರ್ಣಿಸುತ್ತದೆ. ಆ ಬಳಿಕ, ಸೈತಾನನನ್ನು ಅಧೋಲೋಕಕ್ಕೆ ದೊಬ್ಬಲಾಗುವುದು. (ಪ್ರಕಟನೆ 19:​11–20:⁠3) ಈ ವರ್ಣನೆಯ ನಂತರ, ಯೋಹಾನನು ಯೆಶಾಯನ ಪ್ರವಾದನ ಮಾತುಗಳನ್ನು ಪ್ರತಿಧ್ವನಿಸುತ್ತ, “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು” ಎಂದು ಬರೆಯುತ್ತಾನೆ. ಈ ಮಹಿಮಾಭರಿತ ದರ್ಶನದ ಕುರಿತಾದ ವರ್ಣನೆಯ ಮುಂದಿನ ವಚನಗಳು, ಯೆಹೋವ ದೇವರು ಈ ಭೂಮಿಯ ಪರಿಸ್ಥಿತಿಗಳನ್ನು ತೀವ್ರವಾಗಿ ಸುಧಾರಿಸುವ ಸಮಯವೊಂದರ ಬಗ್ಗೆ ತಿಳಿಸುತ್ತವೆ. (ಪ್ರಕಟನೆ 21:​1, 3-5) ಹೀಗೆ, “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಸ್ಥಾಪಿಸುವ ವಿಷಯದಲ್ಲಿ ಯೆಶಾಯನು ನೀಡಿದ ವಾಗ್ದಾನವು, ದೇವರ ನೂತನ ಲೋಕದಲ್ಲಿ ಆಶ್ಚರ್ಯಕರವಾಗಿ ನೆರವೇರುವುದೆಂಬುದು ಸ್ಪಷ್ಟ! ಆ ಹೊಸ ಸರಕಾರೀ ಆಕಾಶಮಂಡಲದ ಕೆಳಗೆ, ಒಂದು ಹೊಸ ಮಾನವ ಸಮಾಜವು ಆತ್ಮಿಕವಾಗಿಯೂ ಭೌತಿಕವಾಗಿಯೂ ಒಂದು ಪರದೈಸನ್ನು ಅನುಭೋಗಿಸುವುದು. “ಮೊದಲಿದ್ದದ್ದನ್ನು [ರೋಗಗಳು, ಕಷ್ಟಾನುಭವ ಮತ್ತು ಮನುಷ್ಯರಿಗೆ ಬರುವ ಅನೇಕ ದುರವಸ್ಥೆಗಳು] ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂಬ ವಾಗ್ದಾನವು ನಿಶ್ಚಯವಾಗಿಯೂ ಸಾಂತ್ವನದಾಯಕವಾಗಿದೆ. ನಾವು ಆಗ ಯಾವುದನ್ನು ನೆನಪಿಸಿಕೊಳ್ಳುತ್ತೇವೋ ಅದು, ಈಗ ಅನೇಕರ ಹೃದಯಗಳನ್ನು ಭಾರಗೊಳಿಸುವಂತಹ ತೀವ್ರವಾದ ಯಾತನೆ ಅಥವಾ ನೋವನ್ನು ನಮ್ಮಲ್ಲಿ ಉಂಟುಮಾಡದು.

24. ಯೆಹೋವನು ಯೆರೂಸಲೇಮಿನ ಪುನಸ್ಸ್ಥಾಪನೆಯ ಕುರಿತು ಏಕೆ ಉಲ್ಲಾಸಿಸುವನು, ಮತ್ತು ಆ ನಗರದ ಬೀದಿಗಳಲ್ಲಿ ಇನ್ನು ಮುಂದೆ ಏನು ಕೇಳಿಬರದು?

24 ಯೆಶಾಯನ ಪ್ರವಾದನೆಯು ಮುಂದುವರಿಸುವುದು: “ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು. ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರನ್ನು ಈಕ್ಷಿಸುತ್ತಾ ಹರ್ಷಗೊಳ್ಳುವೆನು. ರೋದನಶಬ್ದವೂ ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.” (ಯೆಶಾಯ 65:18, 19) ತಮ್ಮ ಸ್ವದೇಶದಲ್ಲಿ ಪುನಸ್ಸ್ಥಾಪಿಸಲ್ಪಟ್ಟದ್ದಕ್ಕಾಗಿ ಕೇವಲ ಯೆಹೂದ್ಯರು ಮಾತ್ರ ಉಲ್ಲಾಸಿಸುವುದಿಲ್ಲ, ಬದಲಾಗಿ ದೇವರು ಸಹ ಉಲ್ಲಾಸಿಸುವನು; ಏಕೆಂದರೆ ಆತನು ಯೆರೂಸಲೇಮನ್ನು ಸುಂದರ ಸ್ಥಳವಾಗಿ, ಪುನಃ ಭೂಮಿಯಲ್ಲಿ ಸತ್ಯಾರಾಧನೆಯ ಕೇಂದ್ರವಾಗಿ ಮಾಡುವನು. ಆ ನಗರದ ಬೀದಿಗಳಲ್ಲಿ, ದಶಕಗಳ ಹಿಂದೆ ವಿಪತ್ತಿನ ಕಾರಣ ಕೇಳಿಬರುತ್ತಿದ್ದ ರೋದನಶಬ್ದವು ಇನ್ನು ಮುಂದೆ ಕೇಳಿಸದು.

25, 26. (ಎ) ಯೆಹೋವನು ನಮ್ಮ ದಿನಗಳಲ್ಲಿ ಯೆರೂಸಲೇಮನ್ನು “ಉಲ್ಲಾಸದ ನಿವಾಸವನ್ನಾಗಿ” ಮಾಡುವುದು ಹೇಗೆ? (ಬಿ) ಯೆಹೋವನು ಹೊಸ ಯೆರೂಸಲೇಮನ್ನು ಹೇಗೆ ಉಪಯೋಗಿಸುವನು, ಮತ್ತು ನಾವು ಇಂದು ಏಕೆ ಉಲ್ಲಾಸಿಸಬಲ್ಲೆವು?

25 ಇಂದು ಕೂಡ ಯೆಹೋವನು ಯೆರೂಸಲೇಮನ್ನು “ಉಲ್ಲಾಸದ ನಿವಾಸವನ್ನಾಗಿ” ಮಾಡುತ್ತಾನೆ. ಹೇಗೆ? ನಾವು ಈಗಾಗಲೇ ನೋಡಿರುವಂತೆ, 1914ರಲ್ಲಿ ಅಸ್ತಿತ್ವಕ್ಕೆ ಬಂದ ನೂತನಾಕಾಶಮಂಡಲದಲ್ಲಿ, ಅಂತಿಮವಾಗಿ ಸ್ವರ್ಗೀಯ ಸರಕಾರದಲ್ಲಿ ಪಾಲನ್ನು ಹೊಂದಿರುವ 1,44,000 ಮಂದಿ ಜೊತೆಪ್ರಭುಗಳಿರುವರು. ಇವರನ್ನು ಪ್ರವಾದನಾರೂಪವಾಗಿ, “ಹೊಸ ಯೆರೂಸಲೇಮು” ಎಂದು ವರ್ಣಿಸಲಾಗಿದೆ. (ಪ್ರಕಟನೆ 21:⁠2) ಮತ್ತು ದೇವರು, “ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು” ಎಂದು ಹೇಳುವುದು ಈ ಹೊಸ ಯೆರೂಸಲೇಮಿನ ಕುರಿತೇ ಆಗಿದೆ. ವಿಧೇಯ ಮಾನವಕುಲಕ್ಕೆ ಅಗಣಿತವಾದ ಆಶೀರ್ವಾದಗಳನ್ನು ಸುರಿಸಲಿಕ್ಕಾಗಿ ದೇವರು ಹೊಸ ಯೆರೂಸಲೇಮನ್ನು ಉಪಯೋಗಿಸುವನು. ಆ ಸಮಯದಲ್ಲಿ ರೋದನಶಬ್ದ ಅಥವಾ ಪ್ರಲಾಪಧ್ವನಿಯು ಅಲ್ಲಿ ಕೇಳಿಬರದು, ಏಕೆಂದರೆ ಆಗ ಯೆಹೋವನು ನಮ್ಮ ಹೃದಯದ “ಇಷ್ಟಾರ್ಥಗಳನ್ನು ನೆರವೇರಿಸುವನು.”​—⁠ಕೀರ್ತನೆ 37:​3, 4.

26 ನಿಜ, ಇಂದು ನಾವು ಉಲ್ಲಾಸಿಸಲು ನಮಗೆ ಸಕಲ ಕಾರಣಗಳೂ ಇವೆ! ಯೆಹೋವನು ಬೇಗನೇ ತನ್ನ ವಿರೋಧಿಗಳೆಲ್ಲರನ್ನು ನಾಶಮಾಡುವ ಮೂಲಕ ತನ್ನ ಪ್ರಖ್ಯಾತ ನಾಮವನ್ನು ಪರಿಶುದ್ಧಗೊಳಿಸುವನು. (ಕೀರ್ತನೆ 83:​17, 18) ಆಗ ನೂತನಾಕಾಶಮಂಡಲವು ಪೂರ್ತಿಯಾಗಿ ನಿಯಂತ್ರಣಾಧಿಕಾರವನ್ನು ಹೊಂದಿರುವುದು. ದೇವರು ಸೃಷ್ಟಿಸುವ ವಿಷಯಗಳಲ್ಲಿ ಸದಾಕಾಲ ಉಲ್ಲಾಸಪಡಲು ಮತ್ತು ಹರ್ಷಭರಿತರಾಗಿರಲು ಎಷ್ಟೊಂದು ಅದ್ಭುತಕರವಾದ ಕಾರಣಗಳು!

ಸುರಕ್ಷಿತ ಭವಿಷ್ಯದ ವಾಗ್ದಾನ

27. ದೇಶಭ್ರಷ್ಟತೆಯಿಂದ ಹಿಂದಿರುಗುವ ಯೆಹೂದ್ಯರು ತಮ್ಮ ಸ್ವದೇಶದಲ್ಲಿ ಅನುಭವಿಸುವ ಸುರಕ್ಷತೆಯನ್ನು ಯೆಶಾಯನು ಯಾವ ವಿಧದಲ್ಲಿ ವರ್ಣಿಸುತ್ತಾನೆ?

27 ಪ್ರಥಮ ನೆರವೇರಿಕೆಯಲ್ಲಿ, ಹಿಂದಿರುಗುವ ಯೆಹೂದ್ಯರಿಗೆ ಆ ನೂತನಾಕಾಶಮಂಡಲದ ಕೆಳಗೆ ಜೀವನವು ಹೇಗಿರಲಿತ್ತು? ಯೆಹೋವನು ಹೇಳುವುದು: “ಕೆಲವು ದಿವಸ ಮಾತ್ರ ಬದುಕತಕ್ಕ ಕೂಸಾಗಲಿ ವಯಸ್ಸಾಗದೆ ಮುದುಕನಾದವನಾಗಲಿ ಅಲ್ಲಿ ಇರುವದಿಲ್ಲ; ಯುವಕನು ನೂರು ವರುಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರುಷದೊಳಗೆ ಶಾಪತಗಲದು.” (ಯೆಶಾಯ 65:20) ದೇಶಭ್ರಷ್ಟತೆಯಿಂದ ಹಿಂದಿರುಗುವವರಿಗೆ ತಮ್ಮ ಪುನಸ್ಸ್ಥಾಪಿತ ಸ್ವದೇಶದಲ್ಲಿ ದೊರೆಯುವ ಭದ್ರತೆಯ ಎಷ್ಟು ಸೊಗಸಾದ ಚಿತ್ರಣವಿದು! ಅಕಾಲಿಕ ಮೃತ್ಯು, ಹೊಸದಾಗಿ ಜನಿಸಿದ ಕೆಲವೇ ದಿನಗಳ ಕೂಸನ್ನು ಬಲಿಯಾಗಿ ತೆಗೆದುಕೊಳ್ಳದು. ಮತ್ತು ಅಂತಹ ಮೃತ್ಯು ತನ್ನ ಪೂರ್ಣ ಜೀವನಾವಧಿಯನ್ನು ಮುಗಿಸದ ವೃದ್ಧನ ಜೀವವನ್ನೂ ಆಹುತಿಯಾಗಿ ತೆಗೆದುಕೊಳ್ಳದು. * ಯೆಹೂದಕ್ಕೆ ಹಿಂದಿರುಗುವ ಯೆಹೂದ್ಯರಿಗೆ ಯೆಶಾಯನ ಮಾತುಗಳು ಎಷ್ಟು ಪುನರಾಶ್ವಾಸನೆ ನೀಡುವಂಥವುಗಳಾಗಿದ್ದವು! ತಮ್ಮ ಸ್ವದೇಶದಲ್ಲಿ ಸುರಕ್ಷಿತರಾಗಿರುವುದರಿಂದ, ವೈರಿಗಳು ತಮ್ಮ ಕೂಸುಗಳನ್ನು ಕೊಂಡೊಯ್ಯುವರು ಅಥವಾ ತಮ್ಮ ಪುರುಷರನ್ನು ವಧಿಸುವರು ಎಂದು ಅವರು ಚಿಂತಿಸುವ ಅಗತ್ಯವಿರುವುದಿಲ್ಲ.

28. ಯೆಹೋವನ ರಾಜ್ಯದ ಕೆಳಗೆ ನೂತನ ಲೋಕದಲ್ಲಿನ ಜೀವಿತದ ಕುರಿತು ನಾವು ಆತನ ಮಾತುಗಳಿಂದ ಏನು ಕಲಿಯುತ್ತೇವೆ?

28 ಬರಲಿರುವ ನೂತನ ಲೋಕದಲ್ಲಿನ ಜೀವನದ ಕುರಿತು ಯೆಹೋವನ ಮಾತುಗಳು ನಮಗೇನು ತಿಳಿಸುತ್ತವೆ? ದೇವರ ರಾಜ್ಯದ ಕೆಳಗೆ ಪ್ರತಿಯೊಂದು ಮಗುವಿಗೂ ಸುರಕ್ಷಿತವಾದ ಭವಿಷ್ಯದ ಪ್ರತೀಕ್ಷೆಯಿರುವುದು. ದೇವಭಯವುಳ್ಳ ಮನುಷ್ಯನನ್ನು ಅವನ ಜೀವನದ ಅತ್ಯುತ್ತಮ ದೆಸೆಯಲ್ಲಿ ಮರಣವು ಇನ್ನು ಮುಂದೆ ಬಲಿ ತೆಗೆದುಕೊಳ್ಳದು. ಇದಕ್ಕೆ ಬದಲಾಗಿ, ವಿಧೇಯ ಮಾನವಕುಲವು ಸುರಕ್ಷಿತವಾಗಿರುವುದು, ಸುಭದ್ರವಾಗಿರುವುದು, ಮತ್ತು ಜೀವನದಲ್ಲಿ ಆನಂದಿಸಲು ಶಕ್ತವಾಗುವುದು. ಆದರೆ ದೇವರ ವಿರುದ್ಧ ದಂಗೆಯೇಳಲು ಯಾವನಾದರೂ ಆಯ್ದುಕೊಳ್ಳುವಲ್ಲಿ ಆಗೇನು? ಅಂತಹವರು ಜೀವನದ ಸದವಕಾಶವನ್ನು ಕಳೆದುಕೊಳ್ಳುವರು. ಆ ದಂಗೆಯೆದ್ದ ಪಾಪಿಯು “ನೂರು ವರುಷ” ಪ್ರಾಯದವನಾಗಿದ್ದರೂ ಅವನು ಸಾಯುವನು. ಈ ಸಂದರ್ಭದಲ್ಲಿ, ಅವನಿಗೆ ಸಾಧ್ಯವಿದ್ದ ಅನಂತ ಜೀವನಕ್ಕೆ ಹೋಲಿಸುವಾಗ ಅವನು ಕೇವಲ “ಯುವಕನು” ಆಗಿ ಸಾಯುವನು.

29. (ಎ) ಪುನಸ್ಸ್ಥಾಪಿತ ಯೆಹೂದ ದೇಶದಲ್ಲಿ ದೇವರ ವಿಧೇಯ ಜನರಿಗೆ ಯಾವ ಸಂತೋಷಗಳಿರುವವು? (ಬಿ) ಮರಗಳು ದೀರ್ಘಾಯುಷ್ಯಕ್ಕೆ ಯೋಗ್ಯ ದೃಷ್ಟಾಂತಗಳಾಗಿವೆಯೇಕೆ? (ಪಾದಟಿಪ್ಪಣಿಯನ್ನು ನೋಡಿ.)

29 ಪುನಸ್ಸ್ಥಾಪಿತ ಯೆಹೂದ ದೇಶದಲ್ಲಿ ಇರಲಿದ್ದ ಪರಿಸ್ಥಿತಿಗಳ ಕುರಿತಾದ ತನ್ನ ವರ್ಣನೆಯನ್ನು ಯೆಹೋವನು ಮುಂದುವರಿಸುತ್ತಾನೆ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:21, 22) ಹಾಳು ಬಿದ್ದಿದ್ದ ಮತ್ತು ಮನೆಗಳಾಗಲಿ ದ್ರಾಕ್ಷಾಲತೆಗಳಾಗಲಿ ಇಲ್ಲದಿದ್ದ ಯೆಹೂದ ದೇಶಕ್ಕೆ ಹಿಂದಿರುಗಿದ ಬಳಿಕ, ದೇವರ ವಿಧೇಯ ಜನರಿಗೆ ತಮ್ಮದೇ ಆದ ಮನೆಗಳಲ್ಲಿ ಜೀವಿಸುವ ಮತ್ತು ತಮ್ಮದೇ ಆದ ದ್ರಾಕ್ಷಾತೋಟಗಳ ಫಲವನ್ನು ತಿನ್ನುವ ಆನಂದವಿರುವುದು. ದೇವರು ಅವರ ಕೆಲಸವನ್ನು ಆಶೀರ್ವದಿಸುವನು. ಅವರು ಮರದ ಆಯುಷ್ಯದಂತೆ ದೀರ್ಘಾಯುಷಿಗಳಾಗಿ ತಮ್ಮ ಕೆಲಸದ ಫಲಗಳನ್ನು ಅನುಭವಿಸುವರು. *

30. ಇಂದು ಯೆಹೋವನ ಸೇವಕರು ಯಾವ ಸಂತೋಷದ ಸ್ಥಿತಿಯನ್ನು ಅನುಭವಿಸುತ್ತಾರೆ, ಮತ್ತು ಹೊಸ ಲೋಕದಲ್ಲಿ ಅವರು ಏನನ್ನು ಅನುಭವಿಸುವರು?

30 ಈ ಪ್ರವಾದನೆಯ ಒಂದು ನೆರವೇರಿಕೆ ನಮ್ಮ ದಿನಗಳಲ್ಲಿ ನಡೆದಿದೆ. ಯೆಹೋವನ ಜನರು 1919ರಲ್ಲಿ ಆತ್ಮಿಕ ಬಂಧಿವಾಸದಿಂದ ಹೊರಬಂದು, ತಮ್ಮ “ದೇಶ”ವನ್ನು ಅಥವಾ ಚಟುವಟಿಕೆ ಮತ್ತು ಆರಾಧನೆಯ ಕ್ಷೇತ್ರವನ್ನು ಪುನಸ್ಸ್ಥಾಪಿಸತೊಡಗಿದರು. ಅವರು ಸಭೆಗಳನ್ನು ರಚಿಸಿದರು ಮತ್ತು ಆತ್ಮಿಕ ಫಲೋತ್ಪಾದನೆಯನ್ನು ಮಾಡತೊಡಗಿದರು. ಇದರ ಫಲವಾಗಿ, ಈಗಲೂ ಯೆಹೋವನ ಜನರು ಆತ್ಮಿಕ ಪರದೈಸನ್ನು ಮತ್ತು ದೇವದತ್ತ ಶಾಂತಿಯನ್ನು ಅನುಭವಿಸುತ್ತಾರೆ. ಇಂತಹ ಶಾಂತಿಯು ಭೌತಿಕ ಪರದೈಸಿನಲ್ಲಿಯೂ ಮುಂದುವರಿಯುವುದೆಂಬುದರ ಬಗ್ಗೆ ನಾವು ಖಾತ್ರಿಯಿಂದಿರಬಲ್ಲೆವು. ಯೆಹೋವನು ನೂತನ ಲೋಕದಲ್ಲಿ ತನ್ನ ಆರಾಧಕರ ಸಿದ್ಧ ಹೃದಯಗಳು ಮತ್ತು ಹಸ್ತಗಳ ಮೂಲಕ ಯಾವ ವಿಷಯಗಳನ್ನೆಲ್ಲ ಸಾಧಿಸುವನೆಂಬುದನ್ನು ನಾವು ನಿಖರವಾಗಿ ಹೇಳುವುದು ಅಸಾಧ್ಯ. ನಮ್ಮ ಸ್ವಂತ ಮನೆಯನ್ನು ಕಟ್ಟಿ, ಅದರಲ್ಲಿ ಜೀವಿಸುವುದು ಅದೆಷ್ಟು ಸಂತೋಷಕರವಾದ ವಿಷಯ! ರಾಜ್ಯದಾಳಿಕೆಯಲ್ಲಿ ತೃಪ್ತಿಕರವಾದ ಕೆಲಸದ ಅಭಾವವೇ ಇರದು. ನಮ್ಮ ಸ್ವಂತ ಕೆಲಸಗಳ ಫಲದ ಕಾರಣ ಯಾವಾಗಲೂ “ಸುಖವನ್ನನುಭವಿಸುವುದು” ಎಷ್ಟು ಪ್ರತಿಫಲದಾಯಕ! (ಪ್ರಸಂಗಿ 3:13) ನಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸಲು ನಮಗೆ ಅಲ್ಲಿ ಸಮಯವಿದ್ದೀತೊ? ಹೌದು, ನಿಶ್ಚಯವಾಗಿ! ನಂಬಿಗಸ್ತ ಮಾನವರ ಅನಂತ ಜೀವನಗಳು ‘ವೃಕ್ಷದ ಆಯುಸ್ಸಿನಂತಿರುವವು,’ ಸಾವಿರಾರು ವರುಷಗಳಷ್ಟು ಮತ್ತು ಅದಕ್ಕಿಂತಲೂ ಹೆಚ್ಚಾಗಿರುವವು!

31, 32. (ಎ) ಹಿಂದಿರುಗುವ ದೇಶಭ್ರಷ್ಟರು ಯಾವ ಆಶೀರ್ವಾದಗಳನ್ನು ಅನುಭವಿಸುವರು? (ಬಿ) ನೂತನ ಲೋಕದಲ್ಲಿ ನಂಬಿಗಸ್ತ ಮಾನವರಿಗೆ ಯಾವ ಪ್ರತೀಕ್ಷೆಯಿರುವುದು?

31 ಹಿಂದಿರುಗುವ ದೇಶಭ್ರಷ್ಟರಿಗಾಗಿ ಕಾದಿರುವ ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ಯೆಹೋವನು ಹೀಗೆ ವರ್ಣಿಸುತ್ತಾನೆ: “ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.” (ಯೆಶಾಯ 65:23) ಆ ಪುನಸ್ಸ್ಥಾಪಿತ ಯೆಹೂದ್ಯರು ಯೆಹೋವನಿಂದ ಆಶೀರ್ವದಿಸಲ್ಪಡುವುದರಿಂದ ಅವರ ದುಡಿಮೆಯು ವ್ಯರ್ಥವಾಗಿರದು. ಬೇಗನೆ ಸಾಯುವುದಕ್ಕಾಗಿ ಹೆತ್ತವರು ಮಕ್ಕಳನ್ನು ಹುಟ್ಟಿಸರು. ಈ ಪುನಸ್ಸ್ಥಾಪನೆಯ ಆಶೀರ್ವಾದಗಳನ್ನು ಅನುಭವಿಸಲು ಆ ಮಾಜಿ ದೇಶಭ್ರಷ್ಟರು ಮಾತ್ರ ಅಲ್ಲಿರರು; ಅವರ ಸಂತತಿಯವರೂ ಅಲ್ಲಿರುವರು. ತನ್ನ ಜನರ ಆವಶ್ಯಕತೆಗಳನ್ನು ಪೂರೈಸಲು ದೇವರು ಎಷ್ಟು ಹಾತೊರೆಯುವನೆಂದರೆ, ಆತನು ವಚನಕೊಡುವುದು: “ಆಗ ಅವರು ಬೇಡುವದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.”​—ಯೆಶಾಯ 65:⁠24.

32 ಯೆಹೋವನು ಬರಲಿರುವ ನೂತನ ಲೋಕದಲ್ಲಿ ಈ ವಾಗ್ದಾನಗಳನ್ನು ಹೇಗೆ ನೆರವೇರಿಸುವನು? ಅದಕ್ಕಾಗಿ ನಾವು ಕಾದು ನೋಡಬೇಕಾಗಿದೆ. ಯೆಹೋವನು ಎಲ್ಲ ವಿವರಗಳನ್ನು ಒದಗಿಸಿಲ್ಲ. ಆದರೆ ನಂಬಿಗಸ್ತ ಮಾನವರು ಇನ್ನೆಂದಿಗೂ “ವ್ಯರ್ಥವಾಗಿ ದುಡಿಯರು” ಎಂಬುದಂತೂ ಖಂಡಿತ. ಅರ್ಮಗೆದೋನನ್ನು ಪಾರಾಗುವ ಮಹಾ ಸಮೂಹದವರು ಮತ್ತು ಅವರಿಗೆ ಹುಟ್ಟಬಹುದಾಗಿರುವ ಮಕ್ಕಳಿಗೆ ದೀರ್ಘವಾದ ಮತ್ತು ತೃಪ್ತಿಕರವಾದ ಜೀವನದ, ಅಂದರೆ ನಿತ್ಯಜೀವದ ಪ್ರತೀಕ್ಷೆಯಿರುವುದು! ಪುನರುತ್ಥಾನದಲ್ಲಿ ಹಿಂದಿರುಗಿ ಬಂದು, ದೇವರ ಮಟ್ಟಗಳಿಗನುಸಾರ ಜೀವಿಸಲು ಆಯ್ದುಕೊಳ್ಳುವವರು ಸಹ ನೂತನ ಲೋಕದಲ್ಲಿ ಸಂತೋಷವನ್ನು ಕಂಡುಕೊಳ್ಳುವರು. ಯೆಹೋವನು ಅವರ ಆವಶ್ಯಕತೆಗಳಿಗೆ ಕಿವಿಗೊಡುವನು ಮತ್ತು ಅವುಗಳನ್ನು ಪೂರೈಸುವನು ಮಾತ್ರವಲ್ಲ, ಅವುಗಳೇನೆಂಬುದನ್ನು ಮುಂಗಾಣುವನು ಸಹ. ಹೌದು, ಯೆಹೋವನು ತನ್ನ ಕೈದೆರೆದು “ಎಲ್ಲಾ ಜೀವಿಗಳ” ಯೋಗ್ಯವಾದ “ಇಷ್ಟವನ್ನು” ಪೂರೈಸುವನು.​—⁠ಕೀರ್ತನೆ 145:⁠16.

33. ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗುವಾಗ, ಪ್ರಾಣಿಗಳು ಯಾವ ಅರ್ಥದಲ್ಲಿ ಶಾಂತಿಯಿಂದಿರುವವು?

33 ಈ ವಾಗ್ದತ್ತ ಶಾಂತಿ ಮತ್ತು ಭದ್ರತೆಯು ಎಷ್ಟು ದೂರದ ವರೆಗೆ ವ್ಯಾಪಿಸುವುದು? ಈ ಪ್ರವಾದನ ಭಾಗವನ್ನು ಯೆಹೋವನು ಹೀಗೆ ಹೇಳಿ ಮುಗಿಸುತ್ತಾನೆ: “ತೋಳವು ಕುರಿಯ ಸಂಗಡ ಮೇಯುವದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು, ಹಾವಿಗೆ ದೂಳೇ ಆಹಾರವಾಗುವದು. ನನ್ನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡುಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 65:25) ಆ ನಂಬಿಗಸ್ತ ಯೆಹೂದಿ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವಾಗ, ಅವರು ಯೆಹೋವನ ಪರಾಮರಿಕೆಯ ಕೆಳಗಿರುವರು. ಸಿಂಹವು ಕಾರ್ಯತಃ ಎತ್ತಿನಂತೆ ಹುಲ್ಲು ತಿನ್ನುವುದು, ಏಕೆಂದರೆ ಅದು ಯೆಹೂದ್ಯರಿಗಾಗಲಿ ಅವರ ಸಾಕುಪ್ರಾಣಿಗಳಿಗಾಗಲಿ ಹಾನಿಮಾಡದು. ಈ ವಾಗ್ದಾನವು ನಿಶ್ಚಿತವಾಗಿದೆ, ಏಕೆಂದರೆ ಅದು “ಯೆಹೋವನು ಅನ್ನುತ್ತಾನೆ” ಎಂಬ ಮಾತುಗಳಿಂದ ಮುಕ್ತಾಯಗೊಳ್ಳುತ್ತದೆ. ಮತ್ತು ಆತನ ಮಾತು ಸದಾ ನಿಜವಾಗುತ್ತದೆ!​—⁠ಯೆಶಾಯ 55:​10, 11.

34. ಇಂದು ಮತ್ತು ನೂತನ ಲೋಕದಲ್ಲಿ ಯೆಹೋವನ ಮಾತುಗಳಿಗೆ ಯಾವ ರೋಮಾಂಚಕ ನೆರವೇರಿಕೆಯಿದೆ?

34 ಯೆಹೋವನ ಮಾತುಗಳು ಇಂದು ಸತ್ಯಾರಾಧಕರ ಮಧ್ಯೆ ರೋಮಾಂಚಕವಾಗಿ ನೆರವೇರುತ್ತಿವೆ. ದೇವರು 1919ರಿಂದ ತನ್ನ ಜನರ ಆತ್ಮಿಕ ದೇಶವನ್ನು ಆಶೀರ್ವದಿಸಿ, ಅದನ್ನು ಒಂದು ಆತ್ಮಿಕ ಪರದೈಸಾಗಿ ಮಾರ್ಪಡಿಸಿದ್ದಾನೆ. ಈ ಆತ್ಮಿಕ ಪರದೈಸಿನೊಳಗೆ ಬರುವವರು ತಮ್ಮ ಜೀವಿತಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡುತ್ತಾರೆ. (ಎಫೆಸ 4:​22-24) ದೇವರಾತ್ಮದ ಸಹಾಯದಿಂದ, ಒಂದೊಮ್ಮೆ ಪಶುಪ್ರಾಯ ವ್ಯಕ್ತಿತ್ವಗಳಿದ್ದವರು, ಅಂದರೆ ಇತರರನ್ನು ಶೋಷಣೆಗೊಳಪಡಿಸಿದವರು ಅಥವಾ ಬೇರೆ ವಿಧದಲ್ಲಿ ತಮ್ಮ ಜೊತೆಗಾರರನ್ನು ಬಲಿಯಾಗಿಸಿದವರು, ಆ ಅನಪೇಕ್ಷಿತ ಗುಣಗಳನ್ನು ನಿಯಂತ್ರಿಸಿಕೊಳ್ಳುವುದರಲ್ಲಿ ಪ್ರಗತಿಮಾಡುತ್ತಾರೆ. ಇದರ ಫಲವಾಗಿ ಅವರು ತಮ್ಮ ಜೊತೆ ವಿಶ್ವಾಸಿಗಳೊಂದಿಗೆ ಶಾಂತಿಯನ್ನು ಮತ್ತು ಆರಾಧನಾ ಐಕ್ಯವನ್ನು ಅನುಭವಿಸುತ್ತಾರೆ. ಯೆಹೋವನ ಜನರು ಈಗ ತಮ್ಮ ಆತ್ಮಿಕ ಪರದೈಸಿನಲ್ಲಿ ಅನುಭವಿಸುತ್ತಿರುವ ಆಶೀರ್ವಾದಗಳು ಭೌತಿಕ ಪರದೈಸಿನೊಳಗೂ ವ್ಯಾಪಿಸುವವು. ಅಲ್ಲಿ ಮನುಷ್ಯರೊಳಗೆ ನೆಲೆಸಿರುವ ಶಾಂತಿಯೊಂದಿಗೆ ಪ್ರಾಣಿಗಳೊಂದಿಗಿನ ಶಾಂತಿಯೂ ಜೊತೆಗೂಡುವುದು. ದೇವರ ತಕ್ಕ ಸಮಯದಲ್ಲಿ, ಮಾನವಕುಲಕ್ಕೆ ಆತನು ಕೊಟ್ಟಿದ್ದ ಈ ಮೂಲ ನೇಮಕವನ್ನು ಯೋಗ್ಯ ರೀತಿಯಲ್ಲಿ ಜಾರಿಗೆ ತರಲಾಗುವುದು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ: “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”​—⁠ಆದಿಕಾಂಡ 1:⁠28.

35. ನಮಗೆ ‘ಸದಾ ಉಲ್ಲಾಸಿಸಲು’ ಸರ್ವ ಕಾರಣಗಳೂ ಇರುವುದೇಕೆ?

35 “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಸೃಷ್ಟಿಸುವ ಯೆಹೋವನ ವಾಗ್ದಾನಕ್ಕಾಗಿ ನಾವೆಷ್ಟು ಕೃತಜ್ಞರು! ಆ ವಾಗ್ದಾನವು ಸಾ.ಶ.ಪೂ. 537ರಲ್ಲಿ ನೆರವೇರಿತ್ತು ಮತ್ತು ಇಂದು ಇದು ಇನ್ನೂ ಹೆಚ್ಚಿನ ನೆರವೇರಿಕೆಯನ್ನು ಪಡೆಯುತ್ತಿದೆ. ಈ ಎರಡು ನೆರವೇರಿಕೆಗಳು, ವಿಧೇಯ ಮಾನವಕುಲಕ್ಕಿರುವ ಮಹಿಮಾಭರಿತ ಭವಿಷ್ಯತ್ತಿನ ದಾರಿಯ ಕಡೆಗೆ ಕೈತೋರಿಸುತ್ತವೆ. ಯೆಶಾಯನ ಪ್ರವಾದನೆಯ ಮೂಲಕ ಯೆಹೋವನು ನಮಗೆ, ತನ್ನನ್ನು ಪ್ರೀತಿಸುವವರಿಗಾಗಿ ಕಾದಿರುವ ವಿಷಯಗಳ ಮುನ್ನರಿವನ್ನು ಕೊಟ್ಟಿದ್ದಾನೆ. ನಿಜವಾಗಿಯೂ ಯೆಹೋವನ ಈ ಮಾತುಗಳಿಗೆ ಕಿವಿಗೊಡಲು ನಮಗೆ ಸರ್ವ ಕಾರಣಗಳೂ ಇವೆ: “ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”!​—⁠ಯೆಶಾಯ 65:⁠18.

[ಪಾದಟಿಪ್ಪಣಿಗಳು]

^ ಪ್ಯಾರ. 8 ಈ ಪಾಪಿಗಳು ಸಮಾಧಿ ಸ್ಥಳಗಳಲ್ಲಿ ಇದ್ದದ್ದು ಸತ್ತವರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲಿಕ್ಕಾಗಿಯೇ ಎಂಬುದು ಅನೇಕರ ಅಭಿಪ್ರಾಯ. ಅವರ ಹಂದಿಮಾಂಸ ತಿನ್ನುವಿಕೆಯು ವಿಗ್ರಹಾರಾಧನೆಯೊಂದಿಗೆ ಸಂಬಂಧಿಸಿದ್ದಿರಬಹುದು.

^ ಪ್ಯಾರ. 13 ಈ ವಚನದ ಕುರಿತು ವ್ಯಾಖ್ಯಾನಿಸುತ್ತ ಬೈಬಲ್‌ ಭಾಷಾಂತರಕಾರನಾದ ಜೆರೋಮ್‌ (ಸಾ.ಶ. ನಾಲ್ಕನೆಯ ಶತಮಾನದಲ್ಲಿ ಜನಿಸಿದವನು), ವಿಗ್ರಹಾರಾಧಕರು ಅವರ ವರುಷದ ಕೊನೆಯ ತಿಂಗಳ ಕೊನೆಯ ದಿನದಲ್ಲಿ ಆಚರಿಸುವ ಒಂದು ಹಳೆಯ ಆಚಾರದ ಕುರಿತು ತಿಳಿಸುತ್ತಾನೆ. ಅವನು ಬರೆದುದು: “ಅವರು ಹಿಂದಿನ ವರುಷದ ಅಥವಾ ಮುಂದಿನ ವರುಷದ ಫಲವಂತಿಕೆಗೆ ಶುಭವನ್ನು ಕೋರಲಿಕ್ಕಾಗಿ, ವಿವಿಧ ರೀತಿಯ ಆಹಾರಗಳುಳ್ಳ ಮತ್ತು ಸಿಹಿ ದ್ರಾಕ್ಷಾಮದ್ಯವುಳ್ಳ ಔತಣವನ್ನು ಅಣಿಮಾಡುತ್ತಾರೆ.”

^ ಪ್ಯಾರ. 19 ಹೀಬ್ರು ಮ್ಯಾಸರೆಟಿಕ್‌ ಗ್ರಂಥಪಾಠದಲ್ಲಿ, ಯೆಶಾಯ 65:16ಕ್ಕನುಸಾರ ಯೆಹೋವನು “ಆಮೆನ್‌ನ ದೇವರು.” “ಆಮೆನ್‌”ಗೆ “ಹಾಗೆಯೇ ಆಗಲಿ” ಇಲ್ಲವೆ “ನಿಶ್ಚಯವಾಗಿ” ಎಂಬ ಅರ್ಥವಿದ್ದು, ಅದು ಸತ್ಯವಾಗಿರುವ ಅಥವಾ ಖಂಡಿತವಾಗಿ ನೆರವೇರುವ ಒಂದು ವಿಷಯದ ದೃಢೀಕರಣ ಅಥವಾ ಖಾತ್ರಿಯಾಗಿದೆ. ತಾನು ಮಾತುಕೊಟ್ಟಿರುವ ಸಕಲವನ್ನೂ ನೆರವೇರಿಸುವ ಮೂಲಕ, ತಾನು ಏನು ಹೇಳುತ್ತಾನೋ ಅದು ಸತ್ಯವೆಂದು ಯೆಹೋವನು ತೋರಿಸುತ್ತಾನೆ.

^ ಪ್ಯಾರ. 27 ದ ಜೆರೂಸಲೆಮ್‌ ಬೈಬಲ್‌ ಯೆಶಾಯ 65:20ನ್ನು ಹೀಗೆ ಭಾಷಾಂತರಿಸುತ್ತದೆ: “ಕೇವಲ ಕೆಲವೇ ದಿನ ಜೀವಿಸುವ ಶಿಶುವಾಗಲಿ, ತನ್ನ ದಿನಗಳ ಅಂತ್ಯದ ವರೆಗೆ ಜೀವಿಸದ ವೃದ್ಧನಾಗಲಿ ಇನ್ನು ಮುಂದೆ ಅಲ್ಲಿ ಕಂಡುಬರುವುದಿಲ್ಲ.”

^ ಪ್ಯಾರ. 29 ಮರಗಳು ದೀರ್ಘಾಯುಷ್ಯಕ್ಕೆ ಉಚಿತ ದೃಷ್ಟಾಂತಗಳಾಗಿವೆ. ಏಕೆಂದರೆ ಈ ವರೆಗೂ ತಿಳಿದುಬಂದಿರುವ ಸಜೀವ ವಸ್ತುಗಳಲ್ಲಿ ಅವು ಅತಿ ಹೆಚ್ಚು ಕಾಲ ಬಾಳುವವುಗಳಾಗಿವೆ. ಉದಾಹರಣೆಗೆ, ಒಂದು ಆಲಿವ್‌ ಮರವು ನೂರಾರು ವರ್ಷಗಳ ವರೆಗೆ ಫಲಬಿಡುತ್ತ ಒಂದು ಸಾವಿರ ವರ್ಷಗಳ ತನಕ ಜೀವಿಸಬಹುದು.

[ಅಧ್ಯಯನ ಪ್ರಶ್ನೆಗಳು]

[ಪುಟ 389ರಲ್ಲಿರುವ ಚಿತ್ರ]

ದೇವರ ನೂತನ ಲೋಕದಲ್ಲಿ, ನಮ್ಮ ಕೈಕೆಲಸಗಳ ಆದಾಯವನ್ನು ಅನುಭೋಗಿಸಲು ನಮಗೆ ಬೇಕಾದಷ್ಟು ಸಮಯವಿರುವುದು