ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀವು ನನ್ನ ಸಾಕ್ಷಿ”!

“ನೀವು ನನ್ನ ಸಾಕ್ಷಿ”!

ಅಧ್ಯಾಯ ನಾಲ್ಕು

“ನೀವು ನನ್ನ ಸಾಕ್ಷಿ”!

ಯೆಶಾಯ 43:​1-28

1. ಯೆಹೋವನು ಪ್ರವಾದನೆಯನ್ನು ಹೇಗೆ ಉಪಯೋಗಿಸುತ್ತಾನೆ, ಮತ್ತು ನೆರವೇರಿರುವ ಪ್ರವಾದನೆಗೆ ಆತನ ಜನರು ಹೇಗೆ ಪ್ರತಿವರ್ತಿಸುತ್ತಾರೆ?

ಎಲ್ಲ ಸುಳ್ಳು ದೇವರುಗಳಿಂದ ಸತ್ಯ ದೇವರನ್ನು ಪ್ರತ್ಯೇಕಿಸುವ ಒಂದು ಸಂಗತಿಯು, ಭವಿಷ್ಯವನ್ನು ಮುನ್ನುಡಿಯುವ ಆತನ ಸಾಮರ್ಥ್ಯವೇ ಆಗಿದೆ. ಆದರೆ ಯೆಹೋವನು ಪ್ರವಾದಿಸುವಾಗ, ತಾನು ದೇವರೆಂಬುದನ್ನು ರುಜುಮಾಡುವುದು ಮಾತ್ರ ಆತನ ಮನಸ್ಸಿನಲ್ಲಿರುವುದಲ್ಲ. ಯೆಶಾಯ 43ನೆಯ ಅಧ್ಯಾಯದಲ್ಲಿ ತೋರಿಸಿರುವಂತೆ, ಯೆಹೋವನು ಪ್ರವಾದನೆಯನ್ನು ತನ್ನ ದೇವತ್ವದ ಹಾಗೂ ತನ್ನ ಒಡಂಬಡಿಕೆಯ ಜನರ ಕಡೆಗೆ ತನಗಿರುವ ಪ್ರೀತಿಯ ರುಜುವಾತಾಗಿಯೂ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ, ಆತನ ಜನರು ನೆರವೇರಿರುವ ಪ್ರವಾದನೆಯನ್ನು ಗ್ರಹಿಸಿದ ನಂತರವೂ ಮೌನವಾಗಿರಬಾರದಾಗಿದೆ; ಅವರು ಏನನ್ನು ನೋಡಿದ್ದಾರೊ ಅದರ ಕುರಿತು ಸಾಕ್ಷಿ ನೀಡಬೇಕಾಗಿದೆ. ಹೌದು, ಅವರು ಯೆಹೋವನ ಸಾಕ್ಷಿಗಳಾಗಿರಬೇಕು!

2. (ಎ) ಯೆಶಾಯನ ಸಮಯದಲ್ಲಿ ಇಸ್ರಾಯೇಲಿನ ಆತ್ಮಿಕ ಪರಿಸ್ಥಿತಿ ಹೇಗಿದೆ? (ಬಿ) ಯೆಹೋವನು ತನ್ನ ಜನರ ಕಣ್ಣುಗಳನ್ನು ಹೇಗೆ ತೆರೆಯುತ್ತಾನೆ?

2 ಆದರೆ ದುಃಖಕರವಾಗಿ, ಯೆಶಾಯನ ಕಾಲದಷ್ಟಕ್ಕೆ ಇಸ್ರಾಯೇಲ್‌ ಎಷ್ಟೊಂದು ಶೋಚನೀಯ ಸ್ಥಿತಿಯಲ್ಲಿತ್ತೆಂದರೆ, ಯೆಹೋವನ ಅಭಿಪ್ರಾಯದಲ್ಲಿ ಆ ಜನರು ಆತ್ಮಿಕ ರೀತಿಯಲ್ಲಿ ದುರ್ಬಲರಾಗಿದ್ದರು. “ಕಣ್ಣಿದ್ದರೂ ಕುರುಡಾದ ಕಿವಿಯಿದ್ದರೂ ಕಿವುಡಾದ ಜನವನ್ನು ಕರೆ.” (ಯೆಶಾಯ 43:⁠8) ಹೀಗಿರುವುದರಿಂದ ಆತ್ಮಿಕವಾಗಿ ಕುರುಡರೂ ಕಿವುಡರೂ ಆಗಿರುವವರು ಹೇಗೆ ಜೀವಂತ ಸಾಕ್ಷಿಗಳಾಗಿ ಯೆಹೋವನ ಸೇವೆಮಾಡಸಾಧ್ಯವಿದೆ? ಇದಕ್ಕಿರುವ ಮಾರ್ಗ ಒಂದೇ. ಅವರ ಕಣ್ಣು ಮತ್ತು ಕಿವಿಗಳು ಅದ್ಭುತಕರವಾಗಿ ತೆರೆಯಲ್ಪಡಬೇಕು. ಮತ್ತು ಯೆಹೋವನು ಇದನ್ನು ನಿಶ್ಚಯವಾಗಿಯೂ ಮಾಡುತ್ತಾನೆ! ಅದು ಹೇಗೆ? ಪ್ರಥಮವಾಗಿ, ಯೆಹೋವನು ಅವರನ್ನು ಕಠಿನವಾಗಿ ಶಿಕ್ಷಿಸುತ್ತಾನೆ, ಅಂದರೆ ಉತ್ತರ ರಾಜ್ಯವಾಗಿರುವ ಇಸ್ರಾಯೇಲಿನ ನಿವಾಸಿಗಳು ಸಾ.ಶ.ಪೂ. 740ರಲ್ಲಿ ಮತ್ತು ಯೆಹೂದದವರು ಸಾ.ಶ.ಪೂ. 607ರಲ್ಲಿ ದೇಶಭ್ರಷ್ಟರಾಗಿ ಹೋಗುತ್ತಾರೆ. ಆ ಬಳಿಕ, ಯೆಹೋವನು ತನ್ನ ಜನರ ಪರವಾಗಿ ಶಕ್ತಿಯಿಂದ ಕ್ರಿಯೆಗೈದು, ಅವರನ್ನು ವಿಮೋಚಿಸಿ, ಆತ್ಮಿಕವಾಗಿ ಪುನರುಜ್ಜೀವಿತರಾದ ಮತ್ತು ಪಶ್ಚಾತ್ತಾಪಪಟ್ಟ ಉಳಿಕೆಯವರನ್ನು ಸಾ.ಶ.ಪೂ. 537ರಲ್ಲಿ ಅವರ ಸ್ವದೇಶಕ್ಕೆ ಹಿಂದಿರುಗಿಸುತ್ತಾನೆ. ಈ ವಿಷಯದಲ್ಲಿ ತನ್ನ ಉದ್ದೇಶವು ವ್ಯರ್ಥಗೊಳ್ಳದು ಎಂಬ ವಿಷಯದಲ್ಲಿ ಯೆಹೋವನಿಗೆ ಎಷ್ಟು ದೃಢವಿಶ್ವಾಸವಿತ್ತೆಂದರೆ, ಇಸ್ರಾಯೇಲು ಬಿಡುಗಡೆ ಹೊಂದುವುದಕ್ಕೆ ಸುಮಾರು 200 ವರ್ಷಗಳ ಮುಂಚೆಯೇ, ಆ ಬಿಡುಗಡೆಯು ಈಗಾಗಲೇ ಸಂಭವಿಸಿದೆಯೊ ಎಂಬಂತೆ ಅದರ ಬಗ್ಗೆ ಆತನು ಮಾತಾಡುತ್ತಾನೆ.

3. ಯೆಹೋವನು ಆ ಭಾವೀ ದೇಶಭ್ರಷ್ಟರಿಗೆ ಯಾವ ಪ್ರೋತ್ಸಾಹವನ್ನು ಕೊಡುತ್ತಾನೆ?

3“ಈಗಲಾದರೋ, ಯಾಕೋಬವಂಶವೇ, ಇಸ್ರಾಯೇಲ್‌ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗೆನ್ನುತ್ತಾನೆ​—⁠ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರುಹಿಡಿದು ಕರೆದೆನಲ್ಲಾ; ನೀನು ನನ್ನವನೇ. ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು. ಯೆಹೋವನೆಂಬ ನಾನು ನಿನ್ನ ದೇವರಾಗಿದ್ದೇನಷ್ಟೆ, ಇಸ್ರಾಯೇಲ್ಯರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು.”​—ಯೆಶಾಯ 43:​1-3ಎ.

4. ಯೆಹೋವನು ಇಸ್ರಾಯೇಲಿನ ಸೃಷ್ಟಿಕರ್ತನಾಗಿರುವುದು ಹೇಗೆ, ಮತ್ತು ತನ್ನ ಜನರು ಸ್ವದೇಶಕ್ಕೆ ಹಿಂದಿರುಗುವುದರ ಕುರಿತು ಆತನು ಅವರಿಗೆ ಯಾವ ಆಶ್ವಾಸನೆಯನ್ನು ಕೊಡುತ್ತಾನೆ?

4 ಇಸ್ರಾಯೇಲ್‌ ಜನಾಂಗವು ಯೆಹೋವನ ಸ್ವತ್ತಾಗಿರುವುದರಿಂದ ಆತನಿಗೆ ಅದರ ಕುರಿತು ವಿಶೇಷ ಆಸಕ್ತಿಯಿದೆ. ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯ ನೆರವೇರಿಕೆಯಲ್ಲಿ, ಇಸ್ರಾಯೇಲ್‌ ಜನಾಂಗವನ್ನು ವೈಯಕ್ತಿಕವಾಗಿ ಅಸ್ತಿತ್ವಕ್ಕೆ ತಂದವನು ಆತನೇ ಆಗಿದ್ದಾನೆ. (ಆದಿಕಾಂಡ 12:​1-3) ಆದಕಾರಣ, ಕೀರ್ತನೆ 100:3 ಹೇಳುವುದು: “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” ಹೀಗೆ, ಇಸ್ರಾಯೇಲಿನ ಸೃಷ್ಟಿಕರ್ತನೂ ಅವರನ್ನು ಪುನಃ ಕೊಂಡುಕೊಂಡವನೂ ಆಗಿರುವ ಯೆಹೋವನು ತನ್ನ ಜನರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ತರುವನು. ನೀರು, ಉಕ್ಕಿ ಹರಿಯುವ ಹೊಳೆಗಳು, ಸುಡು ಬಿಸಿಲಿನ ಮರುಭೂಮಿಗಳಂತಹ ಅಡಚಣೆಗಳು ಅವರನ್ನು ತಡೆಯವು ಅಥವಾ ಅವರಿಗೆ ಹಾನಿಮಾಡವು. ಒಂದು ಸಾವಿರ ವರ್ಷಗಳ ಮೊದಲು, ಈ ವಿಷಯಗಳು ವಾಗ್ದಾನ ದೇಶಕ್ಕೆ ಹೋಗುತ್ತಿದ್ದ ಅವರ ಪಿತೃಗಳನ್ನು ಹೇಗೆ ತಡೆಯದೆ ಹೋದವೊ ಹಾಗೆಯೇ ಈಗಲೂ ಆಗಲಿತ್ತು.

5. (ಎ) ಯೆಹೋವನ ಮಾತುಗಳು ಆತ್ಮಿಕ ಇಸ್ರಾಯೇಲ್ಯರನ್ನು ಹೇಗೆ ಸಂತೈಸುತ್ತವೆ? (ಬಿ) ಆತ್ಮಿಕ ಇಸ್ರಾಯೇಲ್ಯರ ಸಂಗಡಿಗರು ಯಾರು, ಮತ್ತು ಅವರನ್ನು ಯಾರು ಮುನ್‌ಚಿತ್ರಿಸಿದರು?

5 ಯೆಹೋವನ ಮಾತುಗಳು ಆಧುನಿಕ ದಿನದ ಆತ್ಮಿಕ ಇಸ್ರಾಯೇಲಿನ ಉಳಿಕೆಯವರಿಗೂ ಸಾಂತ್ವನವನ್ನು ಕೊಡುತ್ತವೆ. ಇದರ ಸದಸ್ಯರು ಆತ್ಮಜನಿತ “ನೂತನಸೃಷ್ಟಿ”ಯಾಗಿದ್ದಾರೆ. (2 ಕೊರಿಂಥ 5:17) ಮಾನವಕುಲವೆಂಬ ‘ನೀರಿನ’ ಮುಂದೆ ಧೈರ್ಯದಿಂದ ತಮ್ಮನ್ನು ಸಾದರಪಡಿಸಿಕೊಂಡಿರುವ ಇವರು, ಸಾಂಕೇತಿಕ ನೆರೆಗಳ ಸಮಯದಲ್ಲಿ ದೇವರ ಪ್ರೀತಿಪೂರ್ವಕವಾದ ಸಂರಕ್ಷಣೆಯನ್ನು ಅನುಭವಿಸಿದ್ದಾರೆ. ಅವರ ವೈರಿಗಳಿಂದ ಹೊರಟಿರುವ ಬೆಂಕಿಯಂತಹ ಪರೀಕ್ಷೆಗಳು ಅವರಿಗೆ ಹಾನಿಮಾಡುವ ಬದಲಿಗೆ ಅವರನ್ನು ಶುದ್ಧೀಕರಿಸಿವೆ. (ಜೆಕರ್ಯ 13:9; ಪ್ರಕಟನೆ 12:​15-17) ಯೆಹೋವನ ಸಂರಕ್ಷಣೆಯು ದೇವರ ಆತ್ಮಿಕ ಜನಾಂಗದ ಜೊತೆಗೆ ಸೇರಿಕೊಂಡಿರುವ “ಬೇರೆ ಕುರಿಗಳ” “ಮಹಾ ಸಮೂಹ”ಕ್ಕೂ ವ್ಯಾಪಿಸಿದೆ. (ಪ್ರಕಟನೆ 7:9; ಯೋಹಾನ 10:16) ಇಸ್ರಾಯೇಲ್ಯರೊಂದಿಗೆ ಐಗುಪ್ತದಿಂದ ಹೊರಟುಹೋದ “ಬಹುಮಂದಿ ಅನ್ಯರು” ಹಾಗೂ ಬಾಬೆಲಿನಿಂದ ಬಿಡುಗಡೆಹೊಂದಿದ ದೇಶಭ್ರಷ್ಟರೊಂದಿಗೆ ಹಿಂದಿರುಗಿ ಬಂದ ಯೆಹೂದ್ಯೇತರರು ಇವರನ್ನು ಮುನ್‌ಚಿತ್ರಿಸಿದರು.​—⁠ವಿಮೋಚನಕಾಂಡ 12:38; ಎಜ್ರ 2:​1, 43, 55, 58.

6. (ಎ) ಮಾಂಸಿಕ ಇಸ್ರಾಯೇಲ್‌ ಮತ್ತು (ಬಿ) ಆತ್ಮಿಕ ಇಸ್ರಾಯೇಲಿನ ಬಿಡುಗಡೆಯ ಸಂಬಂಧದಲ್ಲಿ ಯೆಹೋವನು ನ್ಯಾಯವಂತ ದೇವರೆಂದು ತೋರಿಸಿಕೊಡುವುದು ಹೇಗೆ?

6 ಮೇದ್ಯಯ ಮತ್ತು ಪಾರಸಿಯ ಸೈನ್ಯಗಳನ್ನು ಉಪಯೋಗಿಸಿ ಬಾಬೆಲಿನಿಂದ ತನ್ನ ಜನರನ್ನು ಬಿಡಿಸುವೆನೆಂದು ಯೆಹೋವನು ಮಾತುಕೊಡುತ್ತಾನೆ. (ಯೆಶಾಯ 13:​17-19; 21:​2, 9; 44:28; ದಾನಿಯೇಲ 5:28) ಯೆಹೋವನು ನ್ಯಾಯವಂತನಾದ ದೇವರಾಗಿರುವುದರಿಂದ, ಆತನು ತನ್ನ ಮೇದ್ಯಯ ಪಾರಸಿಯ “ನೌಕರರಿಗೆ” ಇಸ್ರಾಯೇಲಿನ ಬದಲಾಗಿ ಯೋಗ್ಯವಾದ ವಿಮೋಚನಾ ಬೆಲೆಯನ್ನು ತೆರಲಿದ್ದನು: “ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನಗೆ ಬದಲಾಗಿ ಕೂಷ್‌ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ. ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೆ ಬದಲಾಗಿ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ ಪ್ರತಿಯಾಗಿ ಜನಾಂಗಗಳನ್ನೂ ಕೊಡುವೆನು.” (ಯೆಶಾಯ 43:3ಬಿ, 4) ದೇವರು ಮುಂತಿಳಿಸಿದ್ದಂತೆಯೇ, ಪಾರಸಿಯ ಸಾಮ್ರಾಜ್ಯವು ಐಗುಪ್ತ, ಕೂಷ್‌ ಮತ್ತು ಸಮೀಪದ ಸೆಬಾ ದೇಶಗಳನ್ನು ಜಯಿಸಿತೆಂದು ಇತಿಹಾಸವು ದೃಢಪಡಿಸುತ್ತದೆ. (ಜ್ಞಾನೋಕ್ತಿ 21:18) ಹಾಗೆಯೇ, ಯೆಹೋವನು ಯೇಸು ಕ್ರಿಸ್ತನ ಮೂಲಕ 1919ರಲ್ಲಿ ಆತ್ಮಿಕ ಇಸ್ರಾಯೇಲಿನ ಉಳಿಕೆಯವರನ್ನು ಬಂಧಿವಾಸದಿಂದ ಬಿಡಿಸಿದನು. ಆದರೆ ಯೇಸುವಿನ ಈ ಕೆಲಸಕ್ಕೆ ಪ್ರತಿಫಲದ ಅಗತ್ಯವಿರಲಿಲ್ಲ. ಅವನು ವಿಧರ್ಮಿ ಅರಸನಾಗಿರಲಿಲ್ಲ. ಅಷ್ಟುಮಾತ್ರವಲ್ಲ, ಅವನು ತನ್ನ ಸ್ವಂತ ಆತ್ಮಿಕ ಸಹೋದರರನ್ನು ಬಿಡುಗಡೆಮಾಡುತ್ತಿದ್ದನು. ಅಲ್ಲದೆ, 1914ರಲ್ಲಿಯೇ ಯೆಹೋವನು, ‘ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದನು.’​—⁠ಕೀರ್ತನೆ 2:⁠8.

7. ಪ್ರಾಚೀನ ಕಾಲದ ಮತ್ತು ಆಧುನಿಕ ದಿನದ ತನ್ನ ಜನರ ಕಡೆಗೆ ಯೆಹೋವನಿಗೆ ಯಾವ ರೀತಿಯ ಭಾವನೆಯಿದೆ?

7 ಪುನಃ ಕೊಂಡುಕೊಳ್ಳಲ್ಪಟ್ಟಿರುವ ದೇಶಭ್ರಷ್ಟರ ಕಡೆಗೆ ಯೆಹೋವನು ತನ್ನ ಕೋಮಲ ಭಾವನೆಗಳನ್ನು ಬಹಿರಂಗವಾಗಿ ಹೇಗೆ ತೋರ್ಪಡಿಸುತ್ತಾನೆಂಬುದನ್ನು ಗಮನಿಸಿ. ಅವರು ತನಗೆ ‘ಅಮೂಲ್ಯ’ರು ಮತ್ತು ‘ಮಾನ್ಯ’ರೆಂದೂ ತಾನು ಅವರನ್ನು ‘ಪ್ರೀತಿಸು’ತ್ತೇನೆಂದೂ ಆತನು ಹೇಳುತ್ತಾನೆ. (ಯೆರೆಮೀಯ 31:⁠3) ತನ್ನ ನಂಬಿಗಸ್ತ ಸೇವಕರ ವಿಷಯದಲ್ಲಿ ಆತನಿಗೆ ಇಂದೂ ಅಂತಹದ್ದೇ ಇಲ್ಲವೆ ಅದಕ್ಕಿಂತಲೂ ಹೆಚ್ಚಾದ ಕೋಮಲ ಭಾವವಿದೆ. ಅಭಿಷಿಕ್ತ ಕ್ರೈಸ್ತರು ದೇವರೊಂದಿಗೆ ಒಂದು ಸುಸಂಬಂಧಕ್ಕೆ ತರಲ್ಪಟ್ಟಿದ್ದಾರೆ. ಇದು ಹುಟ್ಟಿನ ಕಾರಣದಿಂದಲ್ಲ, ಬದಲಿಗೆ ತಮ್ಮ ಸೃಷ್ಟಿಕರ್ತನಿಗೆ ಅವರು ಮಾಡಿಕೊಂಡಿರುವ ವೈಯಕ್ತಿಕ ಸಮರ್ಪಣೆಯ ನಂತರ ಅವರ ಮೇಲೆ ದೇವರ ಪವಿತ್ರಾತ್ಮವು ಕಾರ್ಯನಡಿಸಿದ್ದರಿಂದಾಗಿಯೇ ಸಾಧ್ಯವಾಗಿದೆ. ಹೀಗೆ, ಯೆಹೋವನು ಇವರನ್ನು ತನ್ನ ಕಡೆಗೆ ಮತ್ತು ತನ್ನ ಮಗನ ಕಡೆಗೆ ಎಳೆದುಕೊಂಡು, ಅವರ ಶೀಘ್ರಗ್ರಾಹಿಯಾದ ಹೃದಯಗಳಲ್ಲಿ ತನ್ನ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಬರೆದಿದ್ದಾನೆ.​—⁠ಯೆರೆಮೀಯ 31:​31-34; ಯೋಹಾನ 6:⁠44.

8. ಯೆಹೋವನು ಆ ದೇಶಭ್ರಷ್ಟರಿಗೆ ಯಾವ ಪುನರಾಶ್ವಾಸನೆಯನ್ನು ಕೊಡುತ್ತಾನೆ, ಮತ್ತು ತಮ್ಮ ಬಿಡುಗಡೆಯ ಕುರಿತು ಅವರಿಗೆ ಹೇಗನಿಸುವುದು?

8 ದೇಶಭ್ರಷ್ಟರಿಗೆ ಇನ್ನೂ ಹೆಚ್ಚಿನ ಪುನರಾಶ್ವಾಸನೆಯನ್ನು ನೀಡುತ್ತ ಯೆಹೋವನು ಹೇಳುವುದು: “ಭಯಪಡಬೇಡ, ನಾನು ನಿನ್ನ ಸಂಗಡ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಲಿಂದ ತರುವೆನು; ನಿನ್ನವರನ್ನು ಪಡುವಲಿಂದ ಕೂಡಿಸುವೆನು; ನಾನು ಒಪ್ಪಿಸಿಬಿಡು ಎಂದು ಬಡಗಲಿಗೂ ತಡೆಯಬೇಡ ಎಂದು ತೆಂಕಲಿಗೂ ಹೇಳಿ ದೂರದಲ್ಲಿರುವ ನನ್ನ ಕುಮಾರರನ್ನೂ ದಿಗಂತಗಳಲ್ಲಿರುವ ನನ್ನ ಕುಮಾರಿಯರನ್ನೂ ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿ ಉಂಟುಮಾಡಿದ ನನ್ನ ಹೆಸರಿನವರೆಲ್ಲರನ್ನೂ ಬರಮಾಡಬೇಕೆಂದು ಅಪ್ಪಣೆಕೊಡುವೆನು.” (ಯೆಶಾಯ 43:​5-7) ತನ್ನ ಕುಮಾರಕುಮಾರಿಯರನ್ನು ಬಿಡುಗಡೆಮಾಡಿ ಅವರಿಗೆ ಇಷ್ಟಕರವಾದ ಸ್ವದೇಶಕ್ಕೆ ಅವರನ್ನು ಹಿಂದೆ ತರುವ ಸಮಯ ಬರುವಾಗ, ಭೂಮಿಯ ಅತಿ ದೂರದ ಪ್ರದೇಶವೂ ಆತನ ನಿಲುಕಿಗೆ ಮೀರಿದಂಥದ್ದಾಗಿರದು. (ಯೆರೆಮೀಯ 30:​10, 11) ಅವರ ದೃಷ್ಟಿಕೋನದಲ್ಲಿ, ಇದು ಹಿಂದೆ ಐಗುಪ್ತದಿಂದ ಆ ಜನಾಂಗಕ್ಕಾದ ಬಿಡುಗಡೆಯನ್ನು ಮೀರಿಸಲಿಕ್ಕಿತ್ತು ಎಂಬುದರಲ್ಲಿ ಸಂದೇಹವಿಲ್ಲ.​—⁠ಯೆರೆಮೀಯ 16:​14, 15.

9. ಯೆಹೋವನು ತನ್ನ ಹೆಸರಿಗೋಸ್ಕರ ತಾನು ಮಾಡುವ ಬಿಡುಗಡೆಯ ಕಾರ್ಯಗಳನ್ನು ಯಾವ ಎರಡು ವಿಧಗಳಲ್ಲಿ ಸೂಚಿಸುತ್ತಾನೆ?

9 ತನ್ನ ಜನರು ತನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದಾರೆಂಬುದನ್ನು ಅವರಿಗೆ ಮರುಜ್ಞಾಪಿಸುವ ಮೂಲಕ, ತಾನು ಇಸ್ರಾಯೇಲನ್ನು ಬಿಡುಗಡೆಮಾಡುವೆನೆಂಬ ವಚನವನ್ನು ಯೆಹೋವನು ದೃಢೀಕರಿಸುತ್ತಾನೆ. (ಯೆಶಾಯ 54:​5, 6) ಅಲ್ಲದೆ, ಬಿಡುಗಡೆಯ ಕುರಿತಾಗಿ ತಾನು ಕೊಟ್ಟ ವಚನಗಳಿಗೆ ಆತನು ತನ್ನ ಹೆಸರನ್ನು ಜೋಡಿಸುತ್ತಾನೆ. ಹಾಗೆ ಮಾಡುವ ಮೂಲಕ, ತನ್ನ ಪ್ರವಾದನ ವಾಕ್ಯವು ನೆರವೇರಿದಾಗ ಮಹಿಮೆಯು ತನಗೆ ದೊರೆಯುತ್ತದೆಂಬುದನ್ನು ಆತನು ಖಾತ್ರಿಮಾಡಿಕೊಳ್ಳುತ್ತಾನೆ. ಏಕೈಕ ಜೀವಸ್ವರೂಪನಾದ ದೇವರಿಗೆ ಸಲ್ಲತಕ್ಕ ಗೌರವಕ್ಕೆ ಬಾಬೆಲಿನ ವಿಜೇತನೂ ಅರ್ಹನಾಗಿರನು.

ದೇವರುಗಳ ನ್ಯಾಯವಿಚಾರಣೆ

10. ಯೆಹೋವನು ಜನಾಂಗಗಳ ಮತ್ತು ಅವುಗಳ ದೇವರುಗಳ ಮುಂದೆ ಯಾವ ಸವಾಲನ್ನೊಡ್ಡುತ್ತಾನೆ?

10 ಯೆಹೋವನು ಈಗ, ಇಸ್ರಾಯೇಲನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಆತನು ಕೊಟ್ಟ ಮಾತನ್ನು ಒಂದು ಸಾರ್ವತ್ರಿಕ ಕೋರ್ಟು ಮೊಕದ್ದಮೆಗೆ ಆಧಾರವಾಗಿ ಉಪಯೋಗಿಸುತ್ತಾನೆ. ಇದರಲ್ಲಿ ಆತನು ಜನಾಂಗಗಳ ದೇವರುಗಳನ್ನು ನ್ಯಾಯವಿಚಾರಣೆಗೊಳಪಡಿಸುತ್ತಾನೆ. ನಾವು ಹೀಗೆ ಓದುತ್ತೇವೆ: “ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಗಳನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು [ಇವರ ಮಾತನ್ನು] ಕೇಳಿ ನಿಜವೆಂದು ಹೇಳಲಿ.” (ಯೆಶಾಯ 43:9) ಹೀಗೆ ಯೆಹೋವನು, ಲೋಕದ ಜನಾಂಗಗಳ ಮುಂದೆ ಒಂದು ದುಸ್ಸಾಧ್ಯವಾದ ಸವಾಲನ್ನೊಡ್ಡುತ್ತಾನೆ. ಇನ್ನೊಂದು ರೀತಿಯಲ್ಲಿ, ಆತನು ಹೇಳುವುದು: ‘ನಿಮ್ಮ ದೇವರುಗಳು ಭವಿಷ್ಯತ್ತನ್ನು ನಿಷ್ಕೃಷ್ಟವಾಗಿ ಮುಂತಿಳಿಸುವ ಮೂಲಕ ತಾವು ದೇವರುಗಳೆಂಬುದನ್ನು ರುಜುಪಡಿಸಲಿ.’ ಸತ್ಯ ದೇವರು ಮಾತ್ರ ತಪ್ಪಿಲ್ಲದೆ ಪ್ರವಾದಿಸಲು ಶಕ್ತನಾಗಿರುವುದರಿಂದ, ಈ ಪರೀಕ್ಷೆಯು ಮೋಸಗಾರರನ್ನು ಬಯಲುಗೊಳಿಸುವುದು. (ಯೆಶಾಯ 48:⁠5) ಆದರೆ ಸರ್ವಶಕ್ತ ದೇವರು ಇನ್ನೊಂದು ಶಾಸನಬದ್ಧ ಷರತ್ತನ್ನು ಕೂಡಿಸುತ್ತಾನೆ. ಅದೇನಂದರೆ, ಸತ್ಯ ದೇವರುಗಳೆಂದು ಹೇಳಿಕೊಳ್ಳುವವರೆಲ್ಲರೂ ತಮ್ಮ ಕಾಲಜ್ಞಾನದ ವಿಷಯದಲ್ಲಿಯೂ ಅವುಗಳ ನೆರವೇರಿಕೆಯ ವಿಷಯದಲ್ಲಿಯೂ ಸಾಕ್ಷಿಗಳನ್ನು ಪ್ರಸ್ತುತಪಡಿಸತಕ್ಕದ್ದು. ಸ್ವಾಭಾವಿಕವಾಗಿಯೇ, ಈ ಶಾಸನಬದ್ಧ ಆವಶ್ಯಕತೆಯಿಂದ ಯೆಹೋವನು ತನ್ನನ್ನು ಹೊರತುಪಡಿಸಿಕೊಳ್ಳುವುದಿಲ್ಲ.

11. ಯೆಹೋವನು ತನ್ನ ಸೇವಕನಿಗೆ ಯಾವ ನೇಮಕವನ್ನು ಕೊಡುತ್ತಾನೆ, ಮತ್ತು ಯೆಹೋವನು ತನ್ನ ದೇವತ್ವದ ಕುರಿತು ಏನನ್ನು ತಿಳಿಯಪಡಿಸುತ್ತಾನೆ?

11 ಶಕ್ತಿಹೀನರಾಗಿರುವ ಕಾರಣ ಸುಳ್ಳು ದೇವರುಗಳಿಗೆ ಸಾಕ್ಷಿಗಳನ್ನು ಮುಂತರಲು ಆಗುವುದಿಲ್ಲ. ಆದಕಾರಣ ಖಾಲಿಯಾಗಿ ನಿಂತಿರುವ ಸಾಕ್ಷಿ ಕಟ್ಟೆಯು ನಾಚಿಕೆಯ ಸಂಗತಿ. ಆದರೆ ಈಗ, ತನ್ನ ದೇವತ್ವವನ್ನು ದೃಢೀಕರಿಸಲು ಯೆಹೋವನ ಸಮಯವು ಬರುತ್ತದೆ. ತನ್ನ ಜನರ ಕಡೆಗೆ ನೋಡುತ್ತ ಆತನು ಹೇಳುವುದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು]; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ. ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು; ಹೌದು, ಇಂದಿನಿಂದ ನಾನೇ ಪರಮಾತ್ಮನು; ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ; ನನ್ನ ಕೆಲಸಕ್ಕೆ ಯಾರು ಅಡ್ಡಬಂದಾರು? ಎಂಬದೇ ಯೆಹೋವನ ಮಾತು.”​—ಯೆಶಾಯ 43:​10-13.

12, 13. (ಎ) ಪ್ರಕಟಪಡಿಸಲಿಕ್ಕಾಗಿ ಯೆಹೋವನ ಜನರ ಬಳಿ ಯಾವ ಹೇರಳವಾದ ರುಜುವಾತಿದೆ? (ಬಿ) ಯೆಹೋವನ ಹೆಸರು ಆಧುನಿಕ ಸಮಯಗಳಲ್ಲಿ ಹೇಗೆ ಪ್ರಖ್ಯಾತವಾಗಿದೆ?

12 ಯೆಹೋವನ ಈ ಮಾತುಗಳಿಗೆ ಪ್ರತ್ಯುತ್ತರವಾಗಿ, ಸಾಕ್ಷಿ ಕಟ್ಟೆಯು ಹರ್ಷಭರಿತ ಸಾಕ್ಷಿಸಮೂಹದಿಂದ ತುಂಬಿ ತುಳುಕುತ್ತದೆ. ಅವರ ಸಾಕ್ಷಿಯು ಸ್ಪಷ್ಟವೂ ಟೀಕೆಗೆ ಆಸ್ಪದವಿಲ್ಲದ್ದೂ ಆಗಿದೆ. ಯೆಹೋಶುವನಂತೆ ಅವರು, ‘ಯೆಹೋವನು ನುಡಿದಿರುವ ಪ್ರತಿಯೊಂದು ಮಾತೂ ನೆರವೇರಿದೆ. ಒಂದು ಶಬ್ದವೂ ನೆರವೇರದೆ ಹೋಗಿರುವುದಿಲ್ಲ,’ ಎಂದು ಸಾಕ್ಷಿ ನೀಡುತ್ತಾರೆ. (ಯೆಹೋಶುವ 23:14) ಯೆಹೋವನ ಜನರ ಕಿವಿಗಳಲ್ಲಿ ಯೆಶಾಯ, ಯೆರೆಮೀಯ, ಯೆಹೆಜ್ಕೇಲ ಮತ್ತು ಇತರ ಪ್ರವಾದಿಗಳ ಮಾತುಗಳು ಇನ್ನೂ ಘಣಘಣಿಸುತ್ತಿವೆ. ಈ ಪ್ರವಾದಿಗಳು ಒಂದೇ ಸ್ವರದಿಂದಲೊ ಎಂಬಂತೆ, ಯೆಹೂದದ ದೇಶಭ್ರಷ್ಟತೆ ಮತ್ತು ಆ ದೇಶಭ್ರಷ್ಟತೆಯಿಂದ ಅವರ ಅದ್ಭುತಕರವಾದ ವಿಮೋಚನೆಯನ್ನು ಮುಂತಿಳಿಸಿದರು. (ಯೆರೆಮೀಯ 25:​11, 12) ಯೆಹೂದದ ವಿಮೋಚಕನಾದ ಕೋರೆಷನನ್ನು, ಅವನು ಹುಟ್ಟುವುದಕ್ಕೆ ಎಷ್ಟೋ ಮುಂಚೆಯೇ ಹೆಸರಿಸಲಾಗಿತ್ತು!​—⁠ಯೆಶಾಯ 44:​26-45:⁠1.

13 ಬೆಟ್ಟದಷ್ಟು ಪುರಾವೆಗಳಿರುವಾಗ, ಯೆಹೋವನು ಸತ್ಯ ದೇವರೆಂಬುದನ್ನು ಯಾರು ತಾನೇ ಅಲ್ಲಗಳೆಯುವರು? ವಿಧರ್ಮಿ ದೇವರುಗಳನ್ನು ಸೃಷ್ಟಿ ಮಾಡಿದವರಿದ್ದಾರೆ, ಆದರೆ ಸೃಷ್ಟಿಮಾಡಲ್ಪಡದವನು ಯೆಹೋವನೊಬ್ಬನೇ. ಆತನೊಬ್ಬನೇ ಸತ್ಯ ದೇವರು. * ಆದಕಾರಣ, ಯೆಹೋವನ ಹೆಸರನ್ನು ಧರಿಸಿಕೊಂಡಿರುವ ಜನರಿಗೆ, ಮುಂದಿನ ಸಂತತಿಗಳಿಗೆ ಮತ್ತು ಆತನ ಕುರಿತು ಕೇಳುವ ಇತರರಿಗೆ ಆತನ ಅದ್ಭುತ ಕಾರ್ಯಗಳನ್ನು ಹೇಳುವ ಅದ್ವಿತೀಯವೂ ರೋಮಾಂಚಕವೂ ಆದ ಸುಯೋಗವಿದೆ. (ಕೀರ್ತನೆ 78:​5-7) ಇದೇ ರೀತಿಯಲ್ಲಿ, ಯೆಹೋವನ ನಾಮವನ್ನು ಭೂಮಿಯಲ್ಲೆಲ್ಲ ಪ್ರಕಟಿಸುವ ಸುಯೋಗ ಯೆಹೋವನ ಆಧುನಿಕ ದಿನದ ಸಾಕ್ಷಿಗಳಿಗಿದೆ. ಬೈಬಲ್‌ ವಿದ್ಯಾರ್ಥಿಗಳು 1920ಗಳಲ್ಲಿ ಯೆಹೋವ ಎಂಬ ದೇವರ ಹೆಸರಿನ ಆಳವಾದ ಅರ್ಥಗರ್ಭಿತತೆಯ ಕುರಿತು ಹೆಚ್ಚೆಚ್ಚು ಅರಿವುಳ್ಳವರಾದರು. ಬಳಿಕ, 1931ರ ಜುಲೈ 26ರಂದು, ಒಹಾಯೊದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನದಲ್ಲಿ, ಸೊಸೈಟಿಯ ಅಧ್ಯಕ್ಷರಾದ ಜೋಸೆಫ್‌ ಎಫ್‌. ರದರ್‌ಫರ್ಡರು “ಒಂದು ಹೊಸ ಹೆಸರು” ಎಂಬ ಶೀರ್ಷಿಕೆಯುಳ್ಳ ಠರಾವನ್ನು ಮುಂದಿಟ್ಟರು. ಅಲ್ಲಿ ಹೇಳಲಾದ, “ಯೆಹೋವನ ಸಾಕ್ಷಿಗಳು ಎಂಬ ಹೆಸರಿನಿಂದ ನಾವು ಗುರುತಿಸಲ್ಪಟ್ಟು ಕರೆಯಲ್ಪಡಬೇಕೆಂಬುದು ನಮ್ಮ ಅಪೇಕ್ಷೆ” ಎಂಬ ಮಾತುಗಳು ಅಧಿವೇಶನಕ್ಕೆ ಹಾಜರಿದ್ದವರನ್ನು ರೋಮಾಂಚನಗೊಳಿಸಿ, ಅವರು ಆ ಠರಾವಿಗೆ “ಹೌದು!” ಎಂದು ತುಂಬುಧ್ವನಿಯಿಂದ ಒಪ್ಪಿಗೆ ಕೊಡುವಂತೆ ಮಾಡಿದವು. ಅಂದಿನಿಂದ, ಯೆಹೋವನ ಹೆಸರು ಲೋಕವ್ಯಾಪಕ ಪ್ರಖ್ಯಾತಿಯನ್ನು ಪಡೆದಿದೆ.​—⁠ಕೀರ್ತನೆ 83:⁠18.

14. ಯೆಹೋವನು ಇಸ್ರಾಯೇಲ್ಯರಿಗೆ ಏನನ್ನು ಮರುಜ್ಞಾಪಿಸುತ್ತಾನೆ, ಮತ್ತು ಈ ಮರುಜ್ಞಾಪನ ಸಮಯೋಚಿತವೇಕೆ?

14 ಯೆಹೋವನು ತನ್ನ ನಾಮವನ್ನು ಗೌರವದಿಂದ ಧರಿಸುವವರ ಬಗ್ಗೆ ಕಾಳಜಿತೋರಿಸುತ್ತಾನೆ ಮತ್ತು ಅವರನ್ನು ತನ್ನ “ಕಣ್ಣುಗುಡ್ಡಿನಂತೆ” ನೋಡಿಕೊಳ್ಳುತ್ತಾನೆ. ತಾನು ಇಸ್ರಾಯೇಲ್ಯರನ್ನು ಐಗುಪ್ತದಿಂದ ರಕ್ಷಿಸಿದ ವಿಧವನ್ನೂ ಅರಣ್ಯದಲ್ಲಿ ಅವರನ್ನು ಸುರಕ್ಷಿತವಾಗಿ ಕಾಪಾಡಿದ ವಿಧವನ್ನೂ ಅವರಿಗೆ ಹೇಳುತ್ತಾ, ಆತನು ಅವರಿಗೆ ಇದರ ಕುರಿತು ಜ್ಞಾಪಕ ಹುಟ್ಟಿಸುತ್ತಾನೆ. (ಧರ್ಮೋಪದೇಶಕಾಂಡ 32:​10, 12) ಆ ಸಮಯದಲ್ಲಿ ಅವರಿಗೆ ಅನ್ಯ ದೇವರಾರೂ ಇರಲಿಲ್ಲ. ಏಕೆಂದರೆ ಅವರು ಸ್ವತಃ ಐಗುಪ್ತದ ಸಕಲ ದೇವರುಗಳಿಗಾದ ವಿಪರೀತ ಅವಮಾನವನ್ನು ನೋಡಿದ್ದರು. ಹೌದು, ಐಗುಪ್ತದ ಇಡೀ ದೇವತಾ ಸಮೂಹಕ್ಕೆ ಐಗುಪ್ತವನ್ನು ರಕ್ಷಿಸಲೂ ಸಾಧ್ಯವಾಗಲಿಲ್ಲ, ಮತ್ತು ಇಸ್ರಾಯೇಲಿನ ನಿರ್ಗಮನವನ್ನು ತಡೆಯಲೂ ಸಾಧ್ಯವಾಗಲಿಲ್ಲ. (ವಿಮೋಚನಕಾಂಡ 12:12) ಅದೇ ರೀತಿ, ನಗರದಲ್ಲಿ ಸುಳ್ಳು ದೇವರುಗಳ ಕಡಿಮೆಪಕ್ಷ 50 ದೇವಸ್ಥಾನಗಳಾದರೂ ಇರುವ ಬಲಾಢ್ಯವಾದ ಬಾಬೆಲು ಸಹ, ಸರ್ವಶಕ್ತ ದೇವರು ತನ್ನ ಜನರನ್ನು ವಿಮೋಚಿಸುವಾಗ ಆತನ ಹಸ್ತವನ್ನು ತಡೆದು ಹಿಡಿಯಲು ಅಶಕ್ತವಾಗಿರುವುದು. ಯೆಹೋವನ “ಹೊರತು ಯಾವ ರಕ್ಷಕನೂ ಇಲ್ಲ” ಎಂಬುದು ವ್ಯಕ್ತ.

ಯುದ್ಧದ ಕುದುರೆಗಳ ಪತನ, ಸೆರೆಮನೆಗಳು ತೆರೆಯುತ್ತವೆ

15. ಯೆಹೋವನು ಬಾಬೆಲಿನ ಕುರಿತು ಏನು ಪ್ರವಾದಿಸುತ್ತಾನೆ?

15“ನಿಮ್ಮ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ​—⁠ನಾನು ನಿಮಗೋಸ್ಕರ [ದೂತನನ್ನು] ಬಾಬೆಲಿಗೆ ಕಳುಹಿಸಿ ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯಿತರನ್ನಾಗಿ ಅಟ್ಟಿಬಿಡುವೆನು. ನಾನು ಯೆಹೋವನು, ನಿಮ್ಮ ಸದಮಲಸ್ವಾಮಿಯು, ಇಸ್ರಾಯೇಲನ್ನು ಸೃಷ್ಟಿಸಿದವನು, ನಿಮ್ಮ ಅರಸನೂ ಆಗಿದ್ದೇನೆ. ಯಾವನು ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ, ಯಾವನು ಅಶ್ವರಥಭಟಸೈನ್ಯಗಳನ್ನು ಹೊರಡಿಸಿ ಅವು ಬಿದ್ದು ಏಳಲಾರದಂತೆಯೂ ದೀಪದೋಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿದನೋ, ಆ ಯೆಹೋವನು ಹೀಗೆನ್ನುತ್ತಾನೆ.”​—ಯೆಶಾಯ 43:​14-17.

16. ಬಾಬೆಲಿಗೆ, ಬಾಬೆಲಿನ ವ್ಯಾಪಾರಿಗಳಿಗೆ ಮತ್ತು ಬಾಬೆಲಿನ ರಕ್ಷಣೆಗೆ ಬರುವವರಿಗೆ ಏನು ಸಂಭವಿಸುವುದು?

16 ಬಾಬೆಲು ಆ ದೇಶಭ್ರಷ್ಟರಿಗೆ ಸೆರೆಮನೆಯಂತಿದೆ. ಏಕೆಂದರೆ ಅವರು ಯೆರೂಸಲೇಮಿಗೆ ಹಿಂದಿರುಗಿಹೋಗುವುದರಿಂದ ಅದು ಅವರನ್ನು ತಡೆಯುತ್ತದೆ. ಆದರೆ, ಬಾಬೆಲಿನ ಈ ರಕ್ಷಣಾ ವ್ಯವಸ್ಥೆಗಳು ಸರ್ವಶಕ್ತನಿಗೆ ಒಂದು ತಡೆಯಾಗಿರುವುದಿಲ್ಲ. ಹಿಂದೊಮ್ಮೆ ಆತನು “ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ” ಅಂದರೆ ಯೊರ್ದನಿನಲ್ಲಿ “ಮಾರ್ಗವನ್ನು” ಏರ್ಪಡಿಸಿದ್ದನು. (ವಿಮೋಚನಕಾಂಡ 14:16; ಯೆಹೋಶುವ 3:13) ತದ್ರೀತಿಯಲ್ಲಿ, ಯೆಹೋವನ ಕಾರ್ಯಕರ್ತನಾದ ಕೋರೆಷನು ಮಹಾ ಯೂಫ್ರೇಟೀಸ್‌ ನದಿಯ ನೀರನ್ನು ತಗ್ಗಿಸಿ, ತನ್ನ ಸೈನಿಕರು ನಗರವನ್ನು ಪ್ರವೇಶಿಸುವಂತೆ ಮಾಡುವನು. ಬಾಬೆಲಿನ ಕಾಲುವೆಗಳಲ್ಲಿ, ಅಂದರೆ ಸಾವಿರಾರು ವ್ಯಾಪಾರದ ದೋಣಿಗಳು ಮತ್ತು ಬಾಬೆಲಿನ ದೇವರುಗಳನ್ನು ಒಯ್ಯುವ ಹುಟ್ಟುದೋಣಿಗಳಿರುವ ಜಲಮಾರ್ಗಗಳಲ್ಲಿ ಸಂಚರಿಸುವ ಬಾಬೆಲಿನ ವ್ಯಾಪಾರಿಗಳು, ತಮ್ಮ ಪ್ರಬಲ ರಾಜಧಾನಿಯು ಪತನಗೊಳ್ಳುವಾಗ ದುಃಖದಿಂದ ಕುಂಯ್‌ಗುಟ್ಟುವರು. ಕೆಂಪು ಸಮುದ್ರದಲ್ಲಿ ಫರೋಹನ ರಥಗಳಿಗಾದಂತೆಯೇ, ಬಾಬೆಲಿನ ವೇಗಗತಿಯ ರಥಗಳೂ ನಿಸ್ಸಹಾಯಕವಾಗಿರುವವು. ಅವು ಆ ನಗರವನ್ನು ರಕ್ಷಿಸವು. ಎಣ್ಣೆಯ ದೀಪದ ಬತ್ತಿಯನ್ನು ಸುಲಭವಾಗಿ ಆರಿಸಸಾಧ್ಯವಾಗುವಂತೆಯೇ, ನಗರವನ್ನು ರಕ್ಷಿಸಲು ಯಾರಾದರೂ ಬರುವಲ್ಲಿ ಆಕ್ರಮಣಕಾರನು ಅವರ ಜೀವಗಳನ್ನೂ ಆರಿಸಿಬಿಡುವನು.

ಯೆಹೋವನು ತನ್ನ ಜನರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ನಡೆಸುತ್ತಾನೆ

17, 18. (ಎ) ಯೆಹೋವನು ಯಾವ “ಹೊಸ” ಸಂಗತಿಯನ್ನು ಪ್ರವಾದಿಸುತ್ತಾನೆ? (ಬಿ) ಜನರು “ಪುರಾತನ ಕಾರ್ಯಗಳನ್ನು” ನೆನಪು ಮಾಡದಿರುವುದು ಯಾವ ವಿಧದಲ್ಲಿ ಮತ್ತು ಏಕೆ?

17 ಆತನು ಏನು ಮಾಡಲಿದ್ದಾನೊ ಅದರೊಂದಿಗೆ ತನ್ನ ಹಿಂದಿನ ವಿಮೋಚನಾ ಕಾರ್ಯಗಳನ್ನು ಹೋಲಿಸುತ್ತ ಯೆಹೋವನು ಹೇಳುವುದು: “ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನಕಾರ್ಯಗಳನ್ನು ಮರೆತುಬಿಡಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ, ನಿಮಗೆ ಕಾಣುವದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು. ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರ ಜಲಪಾನಕ್ಕಾಗಿ ನಾನು ಅರಣ್ಯದಲ್ಲಿ ನೀರನ್ನು ಒದಗಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವವನಾದ ಕಾರಣ ನರಿ ಉಷ್ಟ್ರಪಕ್ಷಿ ಮೊದಲಾದ ಕಾಡುಮೃಗಗಳು ನನ್ನನ್ನು ಘನಪಡಿಸುವವು.”​—ಯೆಶಾಯ 43:​18-21.

18 “ಪುರಾತನ ಕಾರ್ಯಗಳನ್ನು ಮರೆತು ಬಿಡಿ,” ಎಂದು ಯೆಹೋವನು ಹೇಳಿದಾಗ, ತನ್ನ ಸೇವಕರು ತಮ್ಮ ಮನಸ್ಸುಗಳಿಂದ ಆತನ ಹಿಂದಿನ ರಕ್ಷಣಾ ಕಾರ್ಯಗಳನ್ನು ತೊಲಗಿಸಬೇಕೆಂದು ಯೆಹೋವನು ಹೇಳುತ್ತಿರಲಿಲ್ಲ. ವಾಸ್ತವವೇನಂದರೆ, ಇವುಗಳಲ್ಲಿ ಅನೇಕ ಕಾರ್ಯಗಳು ಇಸ್ರಾಯೇಲಿನ ದೈವಪ್ರೇರಿತ ಇತಿಹಾಸದ ಭಾಗವಾಗಿವೆ. ಇದಲ್ಲದೆ, ಐಗುಪ್ತದಿಂದ ಮಾಡಲ್ಪಟ್ಟ ಬಿಡುಗಡೆಯನ್ನು ವಾರ್ಷಿಕವಾಗಿ ಪಸ್ಕದಾಚರಣೆಯಲ್ಲಿ ನೆನಪಿಸಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ್ದನು. (ಯಾಜಕಕಾಂಡ 23:5; ಧರ್ಮೋಪದೇಶಕಾಂಡ 16:​1-4) ಆದರೆ, ಈಗ ತನ್ನ ಜನರು “ಹೊಸ ಕಾರ್ಯ”ದ, ಅಂದರೆ ತಾವು ಸ್ವತಃ ಅನುಭವಿಸಲಿದ್ದ ಹೊಸ ಕಾರ್ಯದ ಆಧಾರದ ಮೇಲೆ ತನ್ನನ್ನು ಮಹಿಮೆಪಡಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ. ಇದರಲ್ಲಿ ಬಾಬೆಲಿನಿಂದ ಅವರ ವಿಮೋಚನೆ ಮಾತ್ರವಲ್ಲ, ಅವರು ಸ್ವದೇಶಕ್ಕೆ ಪ್ರಾಯಶಃ ಮರುಭೂಮಿಯ ಮಾರ್ಗವಾಗಿ ನೇರವಾಗಿ ಮಾಡಲಿದ್ದ ಅದ್ಭುತಕರವಾದ ಪ್ರಯಾಣವೂ ಸೇರಿತ್ತು. ಆ ಬಂಜರು ಪ್ರದೇಶದಲ್ಲಿ ಯೆಹೋವನು ಅವರಿಗೆ “ಮಾರ್ಗವನ್ನು” ಸಿದ್ಧಪಡಿಸಿ, ಮೋಶೆಯ ದಿನಗಳ ಇಸ್ರಾಯೇಲ್ಯರ ಪರವಾಗಿ ತಾನು ಮಾಡಿದ್ದನ್ನು ನೆನಪು ಹುಟ್ಟಿಸುವ ಪರಾಕ್ರಮ ಕಾರ್ಯಗಳನ್ನು ಮಾಡಲಿದ್ದನು. ಸ್ವದೇಶಕ್ಕೆ ಹಿಂದಿರುಗುವವರನ್ನು ಆತನು ಮರುಭೂಮಿಯಲ್ಲಿ ಉಣಿಸಿ, ಸಾಕ್ಷಾತ್ತಾದ ನದಿಗಳಿಂದ ಅವರ ಬಾಯಾರಿಕೆಯನ್ನು ತಣಿಸಲಿದ್ದನು. ಯೆಹೋವನ ಒದಗಿಸುವಿಕೆಗಳು ಎಷ್ಟು ಹೇರಳವಾಗಿರುವವೆಂದರೆ, ಕಾಡುಪ್ರಾಣಿಗಳು ಸಹ ಯೆಹೋವನನ್ನು ಘನಪಡಿಸಿ ಜನರ ಮೇಲೆ ಆಕ್ರಮಣ ಮಾಡುವುದನ್ನು ನಿಲ್ಲಿಸುವವು.

19. ಆತ್ಮಿಕ ಇಸ್ರಾಯೇಲ್ಯರಲ್ಲಿ ಉಳಿಕೆಯವರು ಮತ್ತು ಅವರ ಸಂಗಡಿಗರು “ಪರಿಶುದ್ಧ ಮಾರ್ಗ”ದಲ್ಲಿ ನಡೆಯುತ್ತಿರುವುದು ಹೇಗೆ?

19 ಇದೇ ರೀತಿಯಲ್ಲಿ, 1919ರಲ್ಲಿ ಆತ್ಮಿಕ ಇಸ್ರಾಯೇಲಿನ ಉಳಿಕೆಯವರನ್ನು ಬಾಬೆಲಿನ ಬಂಧನದಿಂದ ಬಿಡುಗಡೆ ಮಾಡಲಾಯಿತು. ಮತ್ತು ಯೆಹೋವನು ಅವರಿಗಾಗಿ ಸಿದ್ಧಗೊಳಿಸಿದ “ಪರಿಶುದ್ಧ ಮಾರ್ಗದಲ್ಲಿ” ಅವರು ಹೊರಟರು. (ಯೆಶಾಯ 35:⁠8) ಇಸ್ರಾಯೇಲ್ಯರು ಮಾಡಿದ್ದಂತೆ, ಇವರು ಸುಡುತ್ತಿರುವ ಮರುಭೂಮಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕೆಂದಿರಲಿಲ್ಲ. ಅಥವಾ ಕೆಲವು ತಿಂಗಳುಗಳ ವರೆಗೆ ಪ್ರಯಾಣಿಸಿದ ನಂತರ ಯೆರೂಸಲೇಮನ್ನು ಮುಟ್ಟಿದಾಗ ಇಸ್ರಾಯೇಲ್ಯರ ಪ್ರಯಾಣವು ಮುಗಿದಂತೆ ಇವರ ಪ್ರಯಾಣವು ಮುಗಿಯಲಿಲ್ಲ. ಆದರೆ, ಈ “ಪರಿಶುದ್ಧ ಮಾರ್ಗ”ವು ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರನ್ನು ಒಂದು ಆತ್ಮಿಕ ಪರದೈಸಿಗೆ ನಡೆಸಿದ್ದೇನೊ ನಿಶ್ಚಯ. ಈ ವಿಷಯಗಳ ವ್ಯವಸ್ಥೆಯನ್ನು ದಾಟಲಿಕ್ಕಾಗಿ ಇನ್ನೂ ಪ್ರಯಾಣ ಬೆಳೆಸಲಿರುವುದರಿಂದ ಅವರು ಆ “ಪರಿಶುದ್ಧ ಮಾರ್ಗ”ದಲ್ಲೇ ಉಳಿಯುತ್ತಾರೆ. ಅವರು ಈ ರಾಜಮಾರ್ಗದಲ್ಲಿ ಇರುವಷ್ಟು ಕಾಲ, ಅಂದರೆ ಶುದ್ಧತೆ ಮತ್ತು ಪಾವಿತ್ರ್ಯದ ಕುರಿತಾದ ದೇವರ ಮಟ್ಟಗಳನ್ನು ಅಂಗೀಕರಿಸುವಷ್ಟು ಕಾಲ, ಅವರು ಈ ಆತ್ಮಿಕ ಪರದೈಸಿನಲ್ಲಿರುತ್ತಾರೆ. ಮತ್ತು ‘ಇಸ್ರಾಯೇಲ್ಯೇತರ’ ಮಹಾ ಸಮೂಹದ ಸಂಗಡಿಗರೊಂದಿಗೆ ಜೊತೆಗೂಡಿರುವುದು ಅವರಿಗೆ ಅದೆಷ್ಟು ಹರ್ಷದಾಯಕವಾಗಿದೆ! ಸೈತಾನನ ವ್ಯವಸ್ಥೆಯನ್ನು ಆಶಿಸುವವರಿಗೆ ತೀರ ವ್ಯತಿರಿಕ್ತವಾಗಿ, ಉಳಿಕೆಯವರೂ ಅವರ ಸಂಗಡಿಗರೂ ಯೆಹೋವನ ಹಸ್ತದಿಂದ ಬರುವ ಪುಷ್ಟಿಕರವಾದ ಆತ್ಮಿಕ ಆಹಾರವನ್ನು ಆಸ್ವಾದಿಸುತ್ತ ಮುಂದುವರಿಯುತ್ತಾರೆ. (ಯೆಶಾಯ 25:6; 65:​13, 14) ಯೆಹೋವನ ಜನರ ಮೇಲೆ ಆತನ ಆಶೀರ್ವಾದವಿರುವುದನ್ನು ಮನಗಂಡ ಅನೇಕ ಪಶುಪ್ರಾಯ ವ್ಯಕ್ತಿಗಳು, ತಮ್ಮ ಜೀವನ ರೀತಿಗಳನ್ನು ಬದಲಾಯಿಸಿ, ಸತ್ಯ ದೇವರನ್ನು ಮಹಿಮೆಪಡಿಸಿದ್ದಾರೆ.​—⁠ಯೆಶಾಯ 11:​6-9.

ಯೆಹೋವನು ತನ್ನ ನೋವನ್ನು ತಿಳಿಯಪಡಿಸುತ್ತಾನೆ

20. ಯೆಶಾಯನ ದಿನಗಳ ಇಸ್ರಾಯೇಲು ಯೆಹೋವನನ್ನು ಹೇಗೆ ಆಶಾಭಂಗಗೊಳಿಸಿತು?

20 ಪುರಾತನ ಕಾಲದಲ್ಲಿನ ಇಸ್ರಾಯೇಲಿನ ಪುನಸ್ಸ್ಥಾಪಿತ ಉಳಿಕೆಯವರನ್ನು ಯೆಶಾಯನ ಕಾಲದ ದುಷ್ಟ ಸಂತತಿಗೆ ಹೋಲಿಸುವಾಗ, ಅವರು ಮನಸ್ಸನ್ನು ಬದಲಾಯಿಸಿದ ಜನರಾಗಿದ್ದರು. ಆ ದುಷ್ಟರ ಕುರಿತು ಯೆಹೋವನು ಹೇಳುವುದು: “ಯಾಕೋಬೇ, ನೀನಾದರೋ ನನ್ನನ್ನು ಪ್ರಾರ್ಥಿಸಲಿಲ್ಲ, ಇಸ್ರಾಯೇಲೇ, ನೀನು ನನ್ನ ವಿಷಯದಲ್ಲಿ ಬೇಸರಗೊಂಡಿದ್ದೀ. ನೀನು ನನಗೆ ಹೋಮಕ್ಕಾಗಿ ಕುರಿಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ; ನೈವೇದ್ಯಕ್ಕಾಗಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ [“ಲೋಬಾನಕ್ಕಾಗಿ,” NW] ನಿನ್ನನ್ನು ಬೇಸರಗೊಳಿಸಲಿಲ್ಲ. ನೀನು ನನಗೋಸ್ಕರ ಹಣಕೊಟ್ಟು ಬಜೆಯನ್ನು ತರಲಿಲ್ಲ, ಯಜ್ಞಪಶುಗಳ ವಪೆ [“ಕೊಬ್ಬು,” NW]ಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ; ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಪಡಿಸಿದ್ದೀ, ನಿನ್ನ ದೋಷಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.”​—ಯೆಶಾಯ 43:​22-24.

21, 22. (ಎ) ಯೆಹೋವನು ಕೇಳಿಕೊಳ್ಳುವ ವಿಷಯಗಳು ಭಾರವಾದವುಗಳಲ್ಲವೆಂದು ಏಕೆ ಹೇಳಸಾಧ್ಯವಿದೆ? (ಬಿ) ಜನರು ಕಾರ್ಯತಃ ಯೆಹೋವನೇ ತಮ್ಮನ್ನು ಸೇವಿಸುವಂತೆ ಮಾಡುವುದು ಹೇಗೆ?

21 “ನೈವೇದ್ಯಕ್ಕಾಗಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಲೋಬಾನಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ” ಎಂದು ಯೆಹೋವನು ಹೇಳಿದಾಗ, ಯಜ್ಞ ಮತ್ತು ಲೋಬಾನ (ಪವಿತ್ರ ಧೂಪದ ವಸ್ತುಗಳಲ್ಲಿ ಒಂದು)ವು ಯೆಹೋವನಿಗೆ ಅಗತ್ಯವಿಲ್ಲವೆಂದು ಯೆಹೋವನು ಹೇಳುತ್ತಿಲ್ಲ. ವಾಸ್ತವದಲ್ಲಿ ಇವು ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಸತ್ಯಾರಾಧನೆಯ ಒಂದು ಆವಶ್ಯಕ ಭಾಗವಾಗಿವೆ. “ಬಜೆ”ಯ ವಿಷಯದಲ್ಲಿಯೂ ಇದು ಸತ್ಯ. ಇದು ಒಂದು ಸುವಾಸನೆಯ ದಂಟನ್ನು, ಪವಿತ್ರ ಅಭಿಷೇಕ ತೈಲದ ಒಂದು ಸುಗಂಧಭರಿತ ಘಟಕಾಂಶವನ್ನು ಸೂಚಿಸುತ್ತದೆ. ದೇವಾಲಯದ ಸೇವೆಯಲ್ಲಿ ಇಸ್ರಾಯೇಲ್ಯರು ಇವುಗಳ ಉಪಯೋಗವನ್ನು ಅಲಕ್ಷಿಸುತ್ತಿದ್ದರು. ಆದರೆ ಇಂತಹ ಆವಶ್ಯಕತೆಗಳು ಒಂದು ಹೊರೆಯಂತಿದ್ದವೊ? ಖಂಡಿತವಾಗಿಯೂ ಇಲ್ಲ! ಸುಳ್ಳು ದೇವರುಗಳು ಕೇಳಿಕೊಳ್ಳುವ ಆವಶ್ಯಕತೆಗಳಿಗೆ ಹೋಲಿಸುವಾಗ ಯೆಹೋವನು ಕೇಳಿಕೊಳ್ಳುವಂಥ ಸಂಗತಿಗಳು ಏನೇನೂ ಅಲ್ಲ. ಉದಾಹರಣೆಗೆ, ಸುಳ್ಳು ದೇವರಾದ ಮೋಲೇಕನು ಮಕ್ಕಳನ್ನು ಬಲಿಯಾಗಿ ಕೊಡಬೇಕೆಂದು ಕೇಳಿಕೊಂಡನು. ಯೆಹೋವನು ಅದನ್ನು ಎಂದೂ ಕೇಳಿಕೊಳ್ಳಲಿಲ್ಲ!​—⁠ಧರ್ಮೋಪದೇಶಕಾಂಡ 30:11; ಮೀಕ 6:​3, 4, 8.

22 ಇಸ್ರಾಯೇಲ್ಯರಲ್ಲಿ ಸ್ವಲ್ಪ ಆತ್ಮಿಕ ಗ್ರಹಣಶಕ್ತಿಯಾದರೂ ಇರುತ್ತಿದ್ದರೆ, ಅವರು ಎಂದೂ ‘ಯೆಹೋವನನ್ನು ಬೇಸರ’ಗೊಳಿಸುತ್ತಿರಲಿಲ್ಲ. ಅವರು ಆತನ ಧರ್ಮಶಾಸ್ತ್ರದಲ್ಲಿ ನೋಡುತ್ತಿದ್ದಲ್ಲಿ, ಆತನಿಗೆ ಅವರ ಕಡೆಗಿದ್ದ ಆಳವಾದ ಪ್ರೀತಿಯನ್ನು ಕಂಡು, ಅವರು ಆತನಿಗೆ ತಮ್ಮ ಯಜ್ಞಗಳ ಅತ್ಯುತ್ತಮ ಭಾಗವಾಗಿರುವ “ಕೊಬ್ಬ”ನ್ನು ಸಂತೋಷದಿಂದ ಅರ್ಪಿಸುತ್ತಿದ್ದರು. ಇದಕ್ಕೆ ಬದಲಾಗಿ, ದುರಾಶೆಯಿಂದ ಅವರು ಕೊಬ್ಬನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ. (ಯಾಜಕಕಾಂಡ 3:​9-11, 16) ಹೀಗೆ, ಈ ದುಷ್ಟ ಜನಾಂಗವು ತನ್ನ ಪಾಪಗಳ ಹೊರೆಯನ್ನು ಯೆಹೋವನ ಮೇಲೆ ಹೊರಿಸಿ, ಕಾರ್ಯತಃ ಆತನು ಅದರ ಸೇವೆಮಾಡುವಂತೆ ಬಲಾತ್ಕರಿಸುತ್ತದೆ!​—⁠ನೆಹೆಮೀಯ 9:​28-30.

ಶಿಕ್ಷೆ ಫಲವನ್ನು ಕೊಯ್ಯುತ್ತದೆ

23. (ಎ) ಯೆಹೋವನ ಶಿಕ್ಷೆ ಏಕೆ ಯೋಗ್ಯವಾದದ್ದಾಗಿತ್ತು? (ಬಿ) ದೇವರು ಇಸ್ರಾಯೇಲ್ಯರನ್ನು ಶಿಸ್ತಿಗೊಳಪಡಿಸುವುದರಲ್ಲಿ ಏನು ಒಳಗೂಡಿದೆ?

23 ದೊರೆತ ಶಿಕ್ಷೆಯು ಯೋಗ್ಯವಾಗಿಯೇ ಕಠಿನವಾಗಿದ್ದರೂ, ಯೆಹೋವನ ಶಿಕ್ಷೆಯು ಅಪೇಕ್ಷಿತ ಫಲವನ್ನು ಪಡೆದು, ಕರುಣೆಯನ್ನು ಸಾಧ್ಯಗೊಳಿಸುತ್ತದೆ. “ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ, ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು. ನನಗೆ ಜ್ಞಾಪಕಪಡಿಸು, ನಾವಿಬ್ಬರೂ ವಾದಿಸುವ; ನಿನ್ನ ಸದ್ಧರ್ಮವು ಗೊತ್ತಾಗುವಂತೆ ನಿನ್ನ ನ್ಯಾಯವನ್ನು ತೋರ್ಪಡಿಸು. ನಿನ್ನ ಮೂಲಪಿತೃವು ಪಾಪಿಷ್ಠನು, ನಿನ್ನ ಮಧ್ಯಸ್ಥರು ನನಗೆ ದ್ರೋಹಮಾಡಿದವರು. ಆದಕಾರಣ ನಾನು ಪವಿತ್ರಾಲಯದ ಅಧಿಪತಿಗಳನ್ನು ಹೊಲಸಿಗೆ ತಂದು ಯಾಕೋಬನ್ನು ಶಾಪಕ್ಕೂ ಇಸ್ರಾಯೇಲನ್ನು ದೂಷಣೆಗೂ ಗುರಿಮಾಡಿದೆನು.” (ಯೆಶಾಯ 43:​25-28) ಲೋಕದ ಎಲ್ಲ ಜನಾಂಗಗಳಂತೆ, ಇಸ್ರಾಯೇಲ್‌ ಸಹ “ಮೂಲಪಿತೃ”ವಾದ ಆದಾಮನಿಂದ ಬಂದಿದೆ. ಆದಕಾರಣ, ತಾನು ‘ಸದ್ಧರ್ಮಿ’ ಎಂದು ಯಾವ ಇಸ್ರಾಯೇಲ್ಯನೂ ರುಜುಪಡಿಸಲು ಸಾಧ್ಯವಿರುವುದಿಲ್ಲ. ಇಸ್ರಾಯೇಲಿನ “ಮಧ್ಯಸ್ಥರು,” ಅಂದರೆ ಅದರ ಬೋಧಕರು ಅಥವಾ ಧರ್ಮಶಾಸ್ತ್ರದ ಅರ್ಥವಿಮರ್ಶಕರು ಸಹ ಯೆಹೋವನಿಗೆದುರಾಗಿ ಪಾಪಮಾಡಿ, ಸುಳ್ಳು ಬೋಧನೆಗಳನ್ನು ಬೋಧಿಸಿದರು. ಈ ಕಾರಣದಿಂದ, ಯೆಹೋವನು ತನ್ನ ಇಡೀ ಜನಾಂಗವನ್ನು “ಶಾಪಕ್ಕೂ,” “ದೂಷಣೆಗೂ” ಗುರಿಮಾಡಲಿದ್ದನು. ತನ್ನ ‘ಪವಿತ್ರಾಲಯ’ ಅಥವಾ ಪವಿತ್ರಸ್ಥಾನದಲ್ಲಿ ಸೇವೆಮಾಡುತ್ತಿರುವ ಅಧಿಪತಿಗಳೆಲ್ಲರನ್ನು ಸಹ ಆತನು ಹೊಲೆಮಾಡಲಿದ್ದನು.

24. ಯೆಹೋವನು ತನ್ನ ಪುರಾತನ ಮತ್ತು ಆಧುನಿಕ ಜನರನ್ನು ಯಾವ ಪ್ರಧಾನ ಕಾರಣಕ್ಕಾಗಿ ಕ್ಷಮಿಸುತ್ತಾನೆ, ಆದರೂ ಅವರ ಕಡೆಗೆ ಆತನ ಅನಿಸಿಕೆಗಳೇನು?

24 ಇದರ ಪರಿಣಾಮವಾಗಿ ಬರುವ ದೈವಿಕ ಕರುಣೆಯು ಕೇವಲ ಇಸ್ರಾಯೇಲಿನ ಪಶ್ಚಾತ್ತಾಪದ ಕಾರಣದಿಂದಲ್ಲ, ಬದಲಾಗಿ ಯೆಹೋವನ ಸ್ವಂತ ಹೆಸರಿಗೋಸ್ಕರ ಬರಲಿತ್ತು ಎಂಬುದನ್ನು ಗಮನಿಸಿ. ಹೌದು, ಆತನ ನಾಮವು ಇದರಲ್ಲಿ ಒಳಗೂಡಿದೆ. ಆತನು ಇಸ್ರಾಯೇಲ್ಯರನ್ನು ಶಾಶ್ವತವಾಗಿ ದೇಶಭ್ರಷ್ಟರನ್ನಾಗಿ ಮಾಡಿ ಅವರನ್ನು ತ್ಯಜಿಸುತ್ತಿದ್ದಲ್ಲಿ, ಆತನ ಸ್ವಂತ ಹೆಸರನ್ನು ಪ್ರೇಕ್ಷಕರು ನಿಂದೆಗೊಳಪಡಿಸುತ್ತಿದ್ದರು. (ಕೀರ್ತನೆ 79:9; ಯೆಹೆಜ್ಕೇಲ 20:​8-10) ಹಾಗೆಯೇ ಇಂದು ಸಹ, ಮಾನವರ ರಕ್ಷಣೆಯು ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣದ ನಂತರ ದ್ವಿತೀಯ ಸ್ಥಾನದಲ್ಲಿದೆ. ಆದರೂ, ತನ್ನ ಶಿಕ್ಷೆಯನ್ನು ಯಾವ ಷರತ್ತೂ ಇಲ್ಲದೆ ಅಂಗೀಕರಿಸುವವರನ್ನು ಮತ್ತು ಆತ್ಮದಿಂದಲೂ ಸತ್ಯದಿಂದಲೂ ತನ್ನನ್ನು ಆರಾಧಿಸುವವರನ್ನು ಯೆಹೋವನು ಪ್ರೀತಿಸುತ್ತಾನೆ. ಅವರು ಅಭಿಷಿಕ್ತರಾಗಿರಲಿ, ಬೇರೆ ಕುರಿಗಳಾಗಿರಲಿ, ಯೇಸು ಕ್ರಿಸ್ತನ ಯಜ್ಞದ ಆಧಾರದ ಮೇರೆಗೆ ಅವರ ಪಾಪಗಳನ್ನು ಅಳಿಸಿಬಿಡುವ ಮೂಲಕ ಆತನು ಅವರ ಕಡೆಗಿನ ತನ್ನ ಪ್ರೀತಿಯನ್ನು ತೋರಿಸುತ್ತಾನೆ.​—⁠ಯೋಹಾನ 3:16; 4:​23, 24.

25. ನಿಕಟ ಭವಿಷ್ಯದಲ್ಲಿ ಯೆಹೋವನು ಭಯಭಕ್ತಿಪ್ರೇರಕವಾದ ಯಾವ ಕಾರ್ಯಗಳನ್ನು ಮಾಡುವನು, ಮತ್ತು ನಾವೀಗ ನಮ್ಮ ಗಣ್ಯತೆಯನ್ನು ಹೇಗೆ ತೋರಿಸಬಲ್ಲೆವು?

25 ಇದಲ್ಲದೆ, ಯೆಹೋವನು ಬೇಗನೆ ತನ್ನ ನಿಷ್ಠಾವಂತ ಆರಾಧಕರ ಮಹಾ ಸಮೂಹದ ಕಡೆಗಿನ ತನ್ನ ಪ್ರೀತಿಯನ್ನು ತೋರ್ಪಡಿಸುವನು. ಅವರನ್ನು “ಮಹಾ ಸಂಕಟ”ದಿಂದ ವಿಮೋಚಿಸಿ, ಶುದ್ಧೀಕರಿಸಲ್ಪಟ್ಟ ‘ನೂತನ ಭೂಮಂಡಲ’ಕ್ಕೆ ಪಾರುಗೊಳಿಸುವ ಮೂಲಕ ಆತನು ಅವರ ಪರವಾಗಿ ಹೊಸದಾಗಿರುವ ವಿಷಯವೊಂದನ್ನು ಮಾಡುವನು. (ಪ್ರಕಟನೆ 7:​14, NW; 2 ಪೇತ್ರ 3:13) ಮಾನವರು ಇದುವರೆಗೆ ನೋಡಿರದಂಥ ಯೆಹೋವನ ಶಕ್ತಿಯ ಅತ್ಯಂತ ಭಯಭಕ್ತಿಪ್ರೇರಕ ಪ್ರದರ್ಶನವನ್ನು ಅವರು ಆಗ ನೋಡುವರು. ಆ ಘಟನೆಯು ಖಂಡಿತವಾಗಿ ನಡೆಯುವುದೆಂಬ ಖಾತ್ರಿಯು, ಅಭಿಷಿಕ್ತ ಉಳಿಕೆಯವರನ್ನೂ ಮಹಾ ಸಮೂಹದ ಭಾಗವಾಗಲಿರುವ ಸಕಲರನ್ನೂ ಹರ್ಷಿಸುವಂತೆಯೂ, “ನೀವು ನನ್ನ ಸಾಕ್ಷಿ” ಎಂಬ ಆ ಉಚ್ಚ ನೇಮಕಕ್ಕನುಸಾರ ಪ್ರತಿದಿನ ಜೀವಿಸುವಂತೆಯೂ ಮಾಡುತ್ತದೆ.​—⁠ಯೆಶಾಯ 43:⁠10.

[ಪಾದಟಿಪ್ಪಣಿ]

^ ಪ್ಯಾರ. 13 ದೇಶಗಳ ಪುರಾಣ ಕಥೆಗಳಲ್ಲಿ ಅನೇಕ ದೇವರುಗಳು “ಹುಟ್ಟುತ್ತಾರೆ” ಮತ್ತು ಆ ದೇವರುಗಳಿಗೂ “ಮಕ್ಕಳು” ಹುಟ್ಟುತ್ತಾರೆ.

[ಅಧ್ಯಯನ ಪ್ರಶ್ನೆಗಳು]

[ಪುಟ 48, 49ರಲ್ಲಿರುವ ಚಿತ್ರ]

ಯೆಹೂದ್ಯರು ತಮ್ಮ ಸ್ವದೇಶವಾದ ಯೆರೂಸಲೇಮಿಗೆ ಹೋಗುವಾಗ ಯೆಹೋವನು ಅವರನ್ನು ಬೆಂಬಲಿಸುವನು

[ಪುಟ 52ರಲ್ಲಿರುವ ಚಿತ್ರಗಳು]

ತಮ್ಮ ದೇವರುಗಳಿಗೋಸ್ಕರ ಸಾಕ್ಷಿಗಳನ್ನು ತರುವಂತೆ ಯೆಹೋವನು ಜನಾಂಗಗಳ ಮುಂದೆ ಸವಾಲನ್ನೊಡ್ಡುತ್ತಾನೆ

1. ಬಾಳನ ಕಂಚಿನ ವಿಗ್ರಹ 2. ಅಷ್ಟೋರೆತ್‌ ದೇವತೆಯ ಜೇಡಿಮಣ್ಣಿನ ಸಣ್ಣ ಪ್ರತಿಮೆಗಳು 3. ಹೋರಸ್‌, ಒಸಿರಿಸ್‌ ಮತ್ತು ಐಸಿಸ್‌ ದೇವದೇವತೆಗಳ ಐಗುಪ್ತದ ಮುಕ್ಕೂಟ 4. ಗ್ರೀಕ್‌ ದೇವತೆಗಳಾದ ಅಥೆನಾ (ಎಡಭಾಗದಲ್ಲಿ) ಮತ್ತು ಆ್ಯಫ್ರಡೈಟಿ

[ಪುಟ 58ರಲ್ಲಿರುವ ಚಿತ್ರಗಳು]

“ನೀವು ನನ್ನ ಸಾಕ್ಷಿ”!​—⁠ಯೆಶಾಯ 43:⁠10