ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಂಜೆಯು ಹರ್ಷಿಸುತ್ತಾಳೆ

ಬಂಜೆಯು ಹರ್ಷಿಸುತ್ತಾಳೆ

ಅಧ್ಯಾಯ ಹದಿನೈದು

ಬಂಜೆಯು ಹರ್ಷಿಸುತ್ತಾಳೆ

ಯೆಶಾಯ 54:1-17

1. ಸಾರಳು ಮಕ್ಕಳನ್ನು ಹಡೆಯಲು ಹಾತೊರೆಯುತ್ತಿದ್ದದ್ದೇಕೆ, ಮತ್ತು ಈ ವಿಷಯದಲ್ಲಿ ಆಕೆಯ ಅನುಭವವೇನಾಗಿತ್ತು?

ಸಾರಳು ಮಕ್ಕಳನ್ನು ಹಡೆಯಲು ಹಾತೊರೆಯುತ್ತಿದ್ದಳು. ಆದರೆ ದುಃಖಕರ ಸಂಗತಿಯೇನೆಂದರೆ, ಆಕೆ ಬಂಜೆಯಾಗಿದ್ದಳು. ಮತ್ತು ಇದು ಅವಳ ಮನಸ್ಸಿಗೆ ತುಂಬ ನೋವನ್ನುಂಟುಮಾಡುತ್ತಿತ್ತು. ಆಕೆಯ ದಿನಗಳಲ್ಲಿ ಬಂಜೆತನವನ್ನು ಒಂದು ಅವಮಾನವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಸಾರಳಿಗಿದ್ದ ನೋವಿಗೆ ಅದಕ್ಕಿಂತಲೂ ದೊಡ್ಡ ಕಾರಣವಿತ್ತು. ದೇವರು ತನ್ನ ಗಂಡನಿಗೆ ಕೊಟ್ಟಿದ್ದ ವಾಗ್ದಾನವು ನೆರವೇರುವುದನ್ನು ನೋಡಲು ಆಕೆ ಹಂಬಲಿಸಿದಳು. ಅಬ್ರಹಾಮನು, ಭೂಮಿಯ ಎಲ್ಲ ಕುಟುಂಬಗಳಿಗೆ ಆಶೀರ್ವಾದವನ್ನು ತರುವಂಥ ಒಂದು ಸಂತಾನದ ತಂದೆಯಾಗಬೇಕಾಗಿತ್ತು. (ಆದಿಕಾಂಡ 12:​1-3) ದೇವರು ಆ ವಾಗ್ದಾನವನ್ನು ಮಾಡಿ ಅನೇಕ ದಶಕಗಳು ಕಳೆದಿದ್ದರೂ, ಆ ಮಗು ಇನ್ನೂ ಹುಟ್ಟಿರಲಿಲ್ಲ. ಸಾರಳು ವೃದ್ಧಳಾದರೂ ಅವಳಿಗೆ ಮಕ್ಕಳಿರಲಿಲ್ಲ. ಕೆಲವೊಮ್ಮೆ ಆಕೆಗೆ ತನ್ನ ನಿರೀಕ್ಷೆಗಳು ವ್ಯರ್ಥವೆಂಬ ಅನಿಸಿಕೆ ಆಗಿದ್ದಿರಬಹುದು. ಆದರೆ, ಒಂದು ದಿನ ಆಕೆಯ ಹತಾಶೆಯು ಆನಂದವಾಗಿ ಪರಿವರ್ತನೆ ಹೊಂದಿತು!

2. ಯೆಶಾಯ 54ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ಪ್ರವಾದನೆಯು ನಮಗೆ ಏಕೆ ಆಸಕ್ತಿಕರವಾದದ್ದಾಗಿರಬೇಕು?

2 ಸಾರಳ ಈ ದುರವಸ್ಥೆಯು, ಯೆಶಾಯ 54ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ಪ್ರವಾದನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಅಲ್ಲಿ ಯೆರೂಸಲೇಮನ್ನು, ಬಂಜೆಯಾಗಿದ್ದರೂ ಬಳಿಕ ಅನೇಕ ಮಂದಿ ಮಕ್ಕಳನ್ನು ಹಡೆಯುವುದರಲ್ಲಿ ತುಂಬ ಸಂತೋಷವನ್ನು ಅನುಭವಿಸಿದ ಸ್ತ್ರೀಯೆಂಬಂತೆ ಸಂಬೋಧಿಸಲಾಗಿದೆ. ತನ್ನ ಪುರಾತನ ಕಾಲದ ಈ ಜನರನ್ನು ಸಾಮೂಹಿಕವಾಗಿ ತನ್ನ ಪತ್ನಿಯಾಗಿ ಚಿತ್ರಿಸುವ ಮೂಲಕ ಯೆಹೋವನು, ಅವರ ಕಡೆಗೆ ತನಗಿದ್ದ ಕೋಮಲ ಭಾವನೆಗಳನ್ನು ತೋರಿಸುತ್ತಾನೆ. ಅಲ್ಲದೆ, ಯೆಶಾಯ ಪುಸ್ತಕದ ಈ ಅಧ್ಯಾಯವು, ಬೈಬಲು ಯಾವುದನ್ನು “ಪವಿತ್ರ ರಹಸ್ಯ”ವೆಂದು ಕರೆಯುತ್ತದೊ ಅದರ ಒಂದು ನಿರ್ಣಾಯಕ ಅಂಶವನ್ನು ಹೊರಗೆಡಹುವಂತೆ ಸಹಾಯಮಾಡುತ್ತದೆ. (ರೋಮಾಪುರ 16:25, 26NW) ಈ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿರುವ ಈ ‘ಸ್ತ್ರೀಯ’ ಗುರುತು ಮತ್ತು ಅವಳ ಅನುಭವಗಳು, ಇಂದು ಶುದ್ಧಾರಾಧನೆಯ ಮೇಲೆ ಮಹತ್ವಪೂರ್ಣ ಬೆಳಕನ್ನು ಬೀರುತ್ತವೆ.

“ಸ್ತ್ರೀ” ಗುರುತಿಸಲ್ಪಟ್ಟದ್ದು

3. ಬಂಜೆಯಾದ ‘ಸ್ತ್ರೀಗೆ’ ಸಂತೋಷಪಡಲು ಏಕೆ ಕಾರಣವಿರುವುದು?

3 ಅಧ್ಯಾಯ 54, ಸಂತೋಷದ ಮಾತುಗಳೊಂದಿಗೆ ಆರಂಭವಾಗುತ್ತದೆ: “ಹೆರದವಳೇ, ಬಂಜೆ [“ಸ್ತ್ರೀ,” NW]ಯೇ, ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದಸ್ವರವೆತ್ತಿ ಕೂಗು! ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು ಎಂದು ಯೆಹೋವನು ಹೇಳುತ್ತಾನೆ.” (ಯೆಶಾಯ 54:1) ಆ ಮಾತುಗಳನ್ನಾಡಲು ಯೆಶಾಯನು ಎಷ್ಟು ರೋಮಾಂಚನಗೊಂಡಿದ್ದಿರಬೇಕು! ಮತ್ತು ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರಿಗೆ ಅದರ ನೆರವೇರಿಕೆಯು ಎಷ್ಟು ಸಾಂತ್ವನವನ್ನು ತರುವುದು! ಆ ಸಮಯದಲ್ಲಿ ಯೆರೂಸಲೇಮು ಇನ್ನೂ ಹಾಳುಬಿದ್ದಿರುವುದು. ಸಾಮಾನ್ಯವಾಗಿ ಒಬ್ಬ ಬಂಜೆಗೆ ಮುದಿಪ್ರಾಯದಲ್ಲಿ ಮಕ್ಕಳನ್ನು ಹಡೆಯುವ ನಿರೀಕ್ಷೆಯು ಇಲ್ಲದಿರುವಂತೆಯೇ, ಮಾನವ ದೃಷ್ಟಿಕೋನದಿಂದ ಯೆರೂಸಲೇಮ್‌ ಎಂಬಾಕೆಗೆ ಮುಂದೆ ಎಂದಾದರೂ ಪುನರ್ವಸತಿಯಾಗುವ ನಿರೀಕ್ಷೆಯೇ ಇಲ್ಲದಿರುವಂತೆ ತೋರುವುದು. ಆದರೆ ಈ ‘ಸ್ತ್ರೀಗೆ’ ಭವಿಷ್ಯದಲ್ಲಿ ಮಹಾ ಆಶೀರ್ವಾದವು ಕಾದಿದೆ​—⁠ಆಕೆ ಫಲವತ್ತಾಗುವಳು. ಯೆರೂಸಲೇಮು ಸಂತೋಷಪರವಶಳಾಗುವಳು. ಆಕೆಯು ಪುನಃ ‘ಮಕ್ಕಳಿಂದ’ ಅಥವಾ ನಿವಾಸಿಗಳಿಂದ ಜನಭರಿತಳಾಗುವಳು.

4. (ಎ) ಯೆಶಾಯ 54ನೆಯ ಅಧ್ಯಾಯಕ್ಕೆ ಸಾ.ಶ.ಪೂ. 537ರಲ್ಲಿ ಆದುದಕ್ಕಿಂತ ಹೆಚ್ಚು ದೊಡ್ಡ ನೆರವೇರಿಕೆಯಿದೆ ಎಂಬುದನ್ನು ನೋಡುವಂತೆ ಅಪೊಸ್ತಲ ಪೌಲನು ನಮಗೆ ಹೇಗೆ ಸಹಾಯಮಾಡುತ್ತಾನೆ? (ಬಿ) “ಮೇಲಣ ಯೆರೂಸಲೇಮ್‌” ಎಂದರೇನು?

4 ಯೆಶಾಯನಿಗೆ ಇದು ತಿಳಿದಿರಲಿಕ್ಕಿಲ್ಲವಾದರೂ, ಅವನ ಪ್ರವಾದನೆಗೆ ಒಂದಕ್ಕಿಂತ ಹೆಚ್ಚಿನ ನೆರವೇರಿಕೆಯಿರುವುದು. ಅಪೊಸ್ತಲ ಪೌಲನು ಯೆಶಾಯ 54ರಿಂದ ಉಲ್ಲೇಖಿಸಿ, ಆ “ಸ್ತ್ರೀ” ಭೂನಗರವಾದ ಯೆರೂಸಲೇಮಿಗಿಂತ ಹೆಚ್ಚು ಪ್ರಮುಖವಾದ ಇನ್ನಾವುದನ್ನೋ ಸೂಚಿಸುತ್ತಾಳೆಂದು ಹೇಳುತ್ತಾನೆ. ಅವನು ಬರೆಯುವುದು: “ಮೇಲಣ ಯೆರೂಸಲೇಮ್‌ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.” (ಗಲಾತ್ಯ 4:26) ಈ “ಮೇಲಣ ಯೆರೂಸಲೇಮ್‌” ಎಂದರೇನು? ಅದು ವಾಗ್ದತ್ತ ದೇಶದ ಯೆರೂಸಲೇಮ್‌ ನಗರವಲ್ಲವೆಂಬುದು ಖಂಡಿತ. ಏಕೆಂದರೆ ಆ ನಗರವು ಭೂಮಿಯ ಮೇಲಿದೆ, ಅದು “ಮೇಲಣ” ಸ್ವರ್ಗೀಯ ಕ್ಷೇತ್ರದಲ್ಲಿಲ್ಲ. ಆದುದರಿಂದ, “ಮೇಲಣ ಯೆರೂಸಲೇಮ್‌” ಎಂದರೆ ದೇವರ ಸ್ವರ್ಗೀಯ ‘ಸ್ತ್ರೀ’ ಆಗಿದ್ದು, ದೇವರ ಬಲಾಢ್ಯ ಆತ್ಮಜೀವಿಗಳ ಸಂಸ್ಥೆಯಾಗಿದೆ.

5. ಗಲಾತ್ಯ 4:​22-31ರಲ್ಲಿ ಕೊಡಲ್ಪಟ್ಟಿರುವ ಸಾಂಕೇತಿಕ ನಾಟಕದಲ್ಲಿ (ಎ) ಅಬ್ರಹಾಮ, (ಬಿ) ಸಾರಳು, (ಸಿ) ಇಸಾಕ, (ಡಿ) ಹಾಗರ್‌ ಮತ್ತು (ಇ) ಇಷ್ಮಾಯೇಲ್‌ ಯಾರನ್ನು ಚಿತ್ರಿಸುತ್ತಾರೆ?

5 ಹಾಗಾದರೆ, ಯೆಹೋವನಿಗೆ ಒಬ್ಬಳು ಸ್ವರ್ಗದಲ್ಲಿ ಮತ್ತು ಇನ್ನೊಬ್ಬಳು ಭೂಮಿಯಲ್ಲಿ, ಹೀಗೆ ಇಬ್ಬರು ಸಾಂಕೇತಿಕ ಸ್ತ್ರೀಯರು ಹೇಗೆ ಇರಸಾಧ್ಯವಿದೆ? ಇಲ್ಲಿ ಸ್ವಲ್ಪ ಅಸಂಬದ್ಧತೆಯಿದೆಯೊ? ನಿಶ್ಚಯವಾಗಿಯೂ ಇಲ್ಲ. ಇದಕ್ಕೆ ಉತ್ತರವು, ಅಬ್ರಹಾಮನ ಕುಟುಂಬವು ಒದಗಿಸಿದ ಪ್ರವಾದನ ಚಿತ್ರಣದಲ್ಲಿದೆಯೆಂದು ಅಪೊಸ್ತಲ ಪೌಲನು ತೋರಿಸುತ್ತಾನೆ. (ಗಲಾತ್ಯ 4:​22-31; ಪುಟ 218ರಲ್ಲಿರುವ “ಅಬ್ರಹಾಮನ ಕುಟುಂಬ​—⁠ಪ್ರವಾದನ ಚಿತ್ರಣ” ಎಂಬ ರೇಖಾಚೌಕವನ್ನು ನೋಡಿ.) “ಧರ್ಮಪತ್ನಿ”ಯೂ ಅಬ್ರಹಾಮನ ಹೆಂಡತಿಯೂ ಆದ ಸಾರಳು, ಯೆಹೋವನ ಆತ್ಮಜೀವಿಗಳ ಪತ್ನಿಸದೃಶ ಸಂಸ್ಥೆಯನ್ನು ಚಿತ್ರಿಸುತ್ತಾಳೆ. ಅಬ್ರಹಾಮನ ಎರಡನೆಯ ಪತ್ನಿ ಅಥವಾ ಉಪಪತ್ನಿ ಮತ್ತು ದಾಸಿಯಾದ ಹಾಗರಳು, ಭೌಮಿಕ ಯೆರೂಸಲೇಮನ್ನು ಚಿತ್ರಿಸುತ್ತಾಳೆ.

6. ಯೆಹೋವನ ಸ್ವರ್ಗೀಯ ಸಂಸ್ಥೆಯು ದೀರ್ಘಾವಧಿಯ ವರೆಗೆ ಬಂಜೆಯಾಗಿದ್ದದ್ದು ಯಾವ ಅರ್ಥದಲ್ಲಿ?

6 ಈ ಹಿನ್ನೆಲೆಯಿಂದ ನಾವು ಯೆಶಾಯ 54:1ರ ಗಹನವಾದ ಮಹತ್ವವನ್ನು ನೋಡಲಾರಂಭಿಸುತ್ತೇವೆ. ಅನೇಕ ದಶಕಗಳ ವರೆಗೆ ಬಂಜೆಯಾಗಿದ್ದ ಬಳಿಕ ಸಾರಳು 90 ವರ್ಷ ಪ್ರಾಯದಲ್ಲಿ ಇಸಾಕನನ್ನು ಹೆತ್ತಳು. ಅದೇ ರೀತಿ, ಯೆಹೋವನ ಸ್ವರ್ಗೀಯ ಸಂಸ್ಥೆಯು ದೀರ್ಘಾವಧಿಯ ವರೆಗೆ ಬಂಜೆತನವನ್ನು ಅನುಭವಿಸಿತು. ಬಹಳ ಹಿಂದೆ ಏದೆನಿನಲ್ಲಿ ಯೆಹೋವನು ತನ್ನ ‘ಸ್ತ್ರೀಯ’ ಮೂಲಕ “ಸಂತಾನ”ವನ್ನು ಹುಟ್ಟಿಸುವ ವಾಗ್ದಾನವನ್ನು ಮಾಡಿದ್ದನು. (ಆದಿಕಾಂಡ 3:15) 2,000ಕ್ಕೂ ಹೆಚ್ಚು ವರ್ಷಗಳ ಬಳಿಕ ಯೆಹೋವನು ಅಬ್ರಹಾಮನೊಂದಿಗೆ ವಾಗ್ದತ್ತ ಸಂತಾನದ ಕುರಿತು ಒಡಂಬಡಿಕೆಯನ್ನು ಮಾಡಿದನು. ಆದರೆ ಆ ಸಂತಾನವನ್ನು ಹುಟ್ಟಿಸುವ ಮೊದಲು ದೇವರ ಸ್ವರ್ಗೀಯ ‘ಸ್ತ್ರೀಗೆ’ ಅನೇಕಾನೇಕ ಶತಮಾನಗಳ ವರೆಗೆ ಕಾಯಬೇಕಾಗಿತ್ತು. ಆದರೂ, ಒಮ್ಮೆ “ಬಂಜೆ”ಯಾಗಿದ್ದ ಈ ಸ್ತ್ರೀಯ ಮಕ್ಕಳು ಮಾಂಸಿಕ ಇಸ್ರಾಯೇಲಿನ ಸಂಖ್ಯೆಗಿಂತಲೂ ಹೆಚ್ಚಾದ ಒಂದು ಸಮಯವು ಬಂತು. ಬಂಜೆಯ ಕುರಿತಾದ ಆ ದೃಷ್ಟಾಂತವು, ಮುಂತಿಳಿಸಲ್ಪಟ್ಟಿದ್ದ ಸಂತಾನದ ಆಗಮನಕ್ಕಾಗಿ ದೇವದೂತರು ಸಹ ಏಕೆ ಅಷ್ಟೊಂದು ಹಾರೈಸುತ್ತಿದ್ದರೆಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ. (1 ಪೇತ್ರ 1:12) ಆ ಆಗಮನವು ಕೊನೆಗೆ ಯಾವಾಗ ಸಂಭವಿಸಿತು?

7. ಯೆಶಾಯ 54:1ರಲ್ಲಿ ಮುಂತಿಳಿಸಲ್ಪಟ್ಟಂತೆ “ಮೇಲಣ ಯೆರೂಸಲೇಮ್‌”ಗೆ ಹರ್ಷಿಸುವ ಸಂದರ್ಭ ಬಂದದ್ದು ಯಾವಾಗ, ಮತ್ತು ನೀವು ಹಾಗೆ ಉತ್ತರಕೊಡುವುದೇಕೆ?

7 ಮಾನವ ಮಗುವಿನೋಪಾದಿ ಯೇಸುವಿನ ಜನನವು, ದೇವದೂತರ ಮಧ್ಯೆ ಖಂಡಿತವಾಗಿಯೂ ಸಂತೋಷದ ಸಂದರ್ಭವಾಗಿತ್ತು. (ಲೂಕ 2:9-14) ಆದರೆ ಅದು ಯೆಶಾಯ 54:1ರಲ್ಲಿ ಮುಂತಿಳಿಸಲ್ಪಟ್ಟ ಘಟನೆಯಾಗಿರಲಿಲ್ಲ. ಯೇಸು ಸಾ.ಶ. 29ರಲ್ಲಿ ಪವಿತ್ರಾತ್ಮಜನಿತನಾದಾಗಲೇ, ಅವನು “ಮೇಲಣ ಯೆರೂಸಲೇಮ್‌”ನ ಆತ್ಮಿಕ ಪುತ್ರನಾದನು. ಆ ಸಮಯದಲ್ಲಿ ಸ್ವತಃ ದೇವರೇ ಈತನನ್ನು “ಪ್ರಿಯನಾಗಿರುವ ನನ್ನ ಮಗನು” ಎಂದು ಬಹಿರಂಗವಾಗಿ ಒಪ್ಪಿಕೊಂಡನು. (ಮಾರ್ಕ 1:​10, 11; ಇಬ್ರಿಯ 1:5; 5:​4, 5) ಯೆಶಾಯ 54:1ರ ನೆರವೇರಿಕೆಯಲ್ಲಿ, ದೇವರ ಸ್ವರ್ಗೀಯ ‘ಸ್ತ್ರೀಗೆ’ ಸಂತೋಷಪಡಲು ಕಾರಣ ದೊರಕಿದ್ದು ಆಗಲೇ. ಕಟ್ಟಕಡೆಗೂ ಆಕೆ ವಾಗ್ದತ್ತ ಸಂತಾನವಾದ ಮೆಸ್ಸೀಯನನ್ನು ಹಡೆದಿದ್ದಳು! ಆಕೆಯ ಶತಮಾನಗಳುದ್ದದ ಬಂಜೆತನವು ಕೊನೆಗೊಂಡಿತ್ತು. ಆದರೆ ಆಕೆಯ ಹರ್ಷಾನಂದವು ಅಷ್ಟಕ್ಕೇ ಕೊನೆಗೊಳ್ಳಲಿಲ್ಲ.

ಬಂಜೆಗೆ ಅಸಂಖ್ಯಾತ ಪುತ್ರರು

8. ವಾಗ್ದತ್ತ ಸಂತಾನವನ್ನು ಉತ್ಪಾದಿಸಿದ ನಂತರವೂ ದೇವರ ಸ್ವರ್ಗೀಯ ‘ಸ್ತ್ರೀಗೆ’ ಹರ್ಷಿಸಲು ಕಾರಣವಿತ್ತೇಕೆ?

8 ಯೇಸುವಿನ ಮರಣ ಮತ್ತು ತರುವಾಯದ ಪುನರುತ್ಥಾನದ ಬಳಿಕ, ದೇವರ ಸ್ವರ್ಗೀಯ “ಸ್ತ್ರೀ” ಈ ಅನುಗ್ರಹಪಾತ್ರ ಪುತ್ರನನ್ನು ‘ಸತ್ತವರೊಳಗಿಂದ ಮೊದಲು ಎದ್ದುಬಂದವನಾಗಿ’ ಹಿಂದೆ ಪಡೆದಾಗ ತುಂಬ ಸಂತೋಷಿಸಿದಳು. (ಕೊಲೊಸ್ಸೆ 1:18) ಆ ಬಳಿಕ ಆಕೆ ಇನ್ನೂ ಹೆಚ್ಚು ಆತ್ಮಿಕ ಪುತ್ರರನ್ನು ಹುಟ್ಟಿಸತೊಡಗಿದಳು. ಸಾ.ಶ. 33ರ ಪಂಚಾಶತ್ತಮದಂದು, ಯೇಸುವಿನ ಸುಮಾರು 120 ಮಂದಿ ಹಿಂಬಾಲಕರು ಪವಿತ್ರಾತ್ಮದಿಂದ ಅಭಿಷೇಕಹೊಂದಿ, ಹೀಗೆ ಕ್ರಿಸ್ತನ ಜೊತೆಬಾಧ್ಯಸ್ಥರಾಗಿ ಸ್ವೀಕರಿಸಲ್ಪಟ್ಟರು. ಬಳಿಕ ಅದೇ ದಿನ ಇನ್ನೂ 3,000 ಮಂದಿ ಕೂಡಿಸಲ್ಪಟ್ಟರು. (ಯೋಹಾನ 1:12; ಅ. ಕೃತ್ಯಗಳು 1:​13-15; 2:​1-4, 41; ರೋಮಾಪುರ 8:​14-16) ಪುತ್ರರ ಈ ಸಮೂಹವು ಬೆಳೆಯುತ್ತಾ ಹೋಯಿತು. ಕ್ರೈಸ್ತಪ್ರಪಂಚದ ಧರ್ಮಭ್ರಷ್ಟತೆಯ ಆರಂಭದ ಶತಮಾನಗಳಲ್ಲಿ, ಬೆಳವಣಿಗೆಯು ಕಡಿಮೆಯಾಗುತ್ತಾ ಬಂತು. ಆದರೆ 20ನೆಯ ಶತಮಾನದಲ್ಲಿ ಅದು ಬದಲಾವಣೆ ಹೊಂದಲಿಕ್ಕಿತ್ತು.

9, 10. ಪುರಾತನ ಕಾಲದ ಡೇರೆನಿವಾಸಿಯಾದ ಸ್ತ್ರೀಗೆ, “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು” ಎಂಬ ಸಲಹೆಯು ಯಾವ ಅರ್ಥದಲ್ಲಿರುತ್ತಿತ್ತು, ಮತ್ತು ಅಂತಹ ಸ್ತ್ರೀಗೆ ಇದು ಆನಂದದ ಸಮಯವಾಗಿದೆಯೇಕೆ?

9 ಯೆಶಾಯನು ಗಮನಾರ್ಹವಾದ ಬೆಳವಣಿಗೆಯ ಕುರಿತು ಪ್ರವಾದಿಸುತ್ತ ಮುಂದುವರಿಯುತ್ತಾನೆ: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು. ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳುಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು. ಹೆದರಬೇಡ, ನಿನಗೆ ಅವಮಾನವಾಗುವದಿಲ್ಲ, ನಾಚಿಕೆಪಡದಿರು, ನಿನಗೆ ಆಶಾಭಂಗವಾಗದು; ಯೌವನದಲ್ಲಿ ನಿನಗಾದ ಅವಮಾನವನ್ನು ಮರೆತುಬಿಡುವಿ, ವೈಧವ್ಯದಲ್ಲಿ ನಿನಗೆ ಸಂಭವಿಸಿದ ನಿಂದೆಯು ಇನ್ನು ನಿನ್ನ ನೆನಪಿಗೆ ಬಾರದು.”​—ಯೆಶಾಯ 54:​2-4.

10 ಇಲ್ಲಿ ಯೆರೂಸಲೇಮನ್ನು, ಸಾರಳಂತೆ ಡೇರೆಯಲ್ಲಿ ವಾಸಿಸುವ ಪತ್ನಿ ಮತ್ತು ತಾಯಿಯೋ ಎಂಬಂತೆ ಸಂಬೋಧಿಸಲಾಗುತ್ತದೆ. ಬೆಳೆಯುತ್ತಿರುವ ಕುಟುಂಬದೊಂದಿಗೆ ಆಶೀರ್ವದಿಸಲ್ಪಟ್ಟಿರುವ ಒಬ್ಬ ತಾಯಿ, ತನ್ನ ಡೇರೆಯನ್ನು ವಿಸ್ತರಿಸಲು ಏರ್ಪಡಿಸುತ್ತಾಳೆ. ಹೆಚ್ಚು ಉದ್ದವಿರುವ ಡೇರೆ ಬಟ್ಟೆಗಳು ಮತ್ತು ಹಗ್ಗವನ್ನು ಬಿಗಿದು, ಡೇರೆಯ ಗೂಟಗಳನ್ನು ಹೊಸ ಸ್ಥಾನಗಳಲ್ಲಿ ಭದ್ರಪಡಿಸುವ ಅಗತ್ಯವಿರುತ್ತದೆ. ಇದು ಆಕೆಗೆ ಸಂತೋಷದ ಕೆಲಸವಾಗಿದೆ. ಮತ್ತು ಇಂತಹ ಕಾರ್ಯಮಗ್ನ ಸಮಯದಲ್ಲಿ, ಕುಟುಂಬದ ವಂಶಾವಳಿಯನ್ನು ಉಳಿಸಲು ತಾನು ಎಂದಾದರೂ ಮಕ್ಕಳನ್ನು ಹೆರುವೆನೊ ಎಂದು ಆಕೆಯು ಕಾತುರಳಾಗಿ ಕಳೆದಿದ್ದ ವರುಷಗಳನ್ನು ಆಕೆ ಸುಲಭವಾಗಿ ಮರೆತುಬಿಡುವ ಸಂಭವವಿದೆ.

11. (ಎ) ದೇವರ ಸ್ವರ್ಗೀಯ “ಸ್ತ್ರೀ” 1914ರಲ್ಲಿ ಹೇಗೆ ಆಶೀರ್ವದಿಸಲ್ಪಟ್ಟಳು? (ಪಾದಟಿಪ್ಪಣಿಯನ್ನು ನೋಡಿ.) (ಬಿ) ಭೂಮಿಯ ಮೇಲಿರುವ ಅಭಿಷಿಕ್ತರು 1919ರಿಂದ ಯಾವ ಆಶೀರ್ವಾದವನ್ನು ಅನುಭವಿಸಿದ್ದಾರೆ?

11 ಬಾಬೆಲಿನ ದೇಶಭ್ರಷ್ಟತೆ ಮುಗಿದ ಬಳಿಕ, ನವೀಕರಣದ ಇಂತಹ ಸಮಯವು ಭೌಮಿಕ ಯೆರೂಸಲೇಮಿಗೆ ಒದಗಿ ಬಂತು. “ಮೇಲಣ ಯೆರೂಸಲೇಮ್‌” ಆದರೋ ಅದಕ್ಕಿಂತಲೂ ಹೆಚ್ಚು ಆಶೀರ್ವದಿತವಾಗಿದೆ. * ವಿಶೇಷವಾಗಿ 1919ರಿಂದ ಆಕೆಯ ಅಭಿಷಿಕ್ತ “ಸಂತಾನದವರು,” ಹೊಸದಾಗಿ ಪುನಸ್ಸ್ಥಾಪಿಸಲ್ಪಟ್ಟ ತಮ್ಮ ಆತ್ಮಿಕ ಪರಿಸ್ಥಿತಿಯಲ್ಲಿ ಏಳಿಗೆ ಹೊಂದಿದ್ದಾರೆ. (ಯೆಶಾಯ 61:4; 66:⁠8) ಅವರು ತಮ್ಮ ಆತ್ಮಿಕ ಕುಟುಂಬಕ್ಕೆ ಸೇರಲಿರುವವರನ್ನು ಹುಡುಕಲಿಕ್ಕಾಗಿ ಅನೇಕ ದೇಶಗಳಿಗೆ ಚದರಿಹೋಗುವ ಮೂಲಕ ‘ಜನಾಂಗಗಳನ್ನು ವಶಮಾಡಿಕೊಂಡರು.’ ಆದಕಾರಣ ಅಭಿಷಿಕ್ತ ಪುತ್ರರ ಒಟ್ಟುಗೂಡಿಸುವಿಕೆಯಲ್ಲಿ ತೀವ್ರಗತಿಯ ಬೆಳವಣಿಗೆಯಾಯಿತು. 1,44,000 ಮಂದಿಯ ಅವರ ಕೊನೆಯ ಸಂಖ್ಯೆಯು, 1930ನೆಯ ದಶಕದ ಮಧ್ಯಭಾಗದಲ್ಲಿ ಪೂರ್ಣಗೊಂಡಿರುವಂತೆ ತೋರಿತು. (ಪ್ರಕಟನೆ 14:⁠3) ಆ ಸಮಯದಲ್ಲಿ, ಅಭಿಷಿಕ್ತರನ್ನು ಒಟ್ಟುಗೂಡಿಸುವುದೇ ಸಾರುವ ಕೆಲಸದ ಪ್ರಮುಖ ಭಾಗವಾಗಿರುವುದು ನಿಂತುಹೋಯಿತು. ಆದರೂ, ಅಭಿಷಿಕ್ತರ ಒಟ್ಟುಗೂಡಿಸುವಿಕೆಯಾದ ಮೇಲೆ ಅಭಿವೃದ್ಧಿಯು ನಿಂತುಹೋಗಲಿಲ್ಲ.

12. ಅಭಿಷಿಕ್ತರಲ್ಲದೆ ಇನ್ನಾರನ್ನು 1930ಗಳಿಂದ ಕ್ರೈಸ್ತ ಸಭೆಗೆ ಒಟ್ಟುಗೂಡಿಸಲಾಗುತ್ತಿದೆ?

12 ತನ್ನ ಅಭಿಷಿಕ್ತ ಸಹೋದರರ ‘ಚಿಕ್ಕ ಹಿಂಡು’ ಮಾತ್ರವಲ್ಲದೆ, ಸತ್ಯ ಕ್ರೈಸ್ತರ ಕುರಿಹಟ್ಟಿಗೆ “ಬೇರೆ ಕುರಿ”ಗಳನ್ನೂ ತರಲಿಕ್ಕಿದೆಯೆಂದು ಯೇಸು ತಾನೇ ಮುಂತಿಳಿಸಿದನು. (ಲೂಕ 12:32; ಯೋಹಾನ 10:16) ಇವರು “ಮೇಲಣ ಯೆರೂಸಲೇಮ್‌”ನ ಅಭಿಷಿಕ್ತ ಪುತ್ರರಾಗಿರುವುದಿಲ್ಲವಾದರೂ, ಅಭಿಷಿಕ್ತರ ಈ ನಂಬಿಗಸ್ತ ಸಂಗಾತಿಗಳು ಒಂದು ಪ್ರಾಮುಖ್ಯವಾದ ಹಾಗೂ ದೀರ್ಘ ಸಮಯದ ಹಿಂದೆ ಪ್ರವಾದಿಸಲ್ಪಟ್ಟ ಪಾತ್ರವನ್ನು ನಿರ್ವಹಿಸುತ್ತಾರೆ. (ಜೆಕರ್ಯ 8:23) 1930ನೆಯ ದಶಕದಿಂದ ಹಿಡಿದು ಇಂದಿನ ವರೆಗೆ, ಅವರ ಒಂದು “ಮಹಾ ಸಮೂಹ”ವನ್ನು ಒಟ್ಟುಗೂಡಿಸಲಾಗಿದೆ. ಇದರಿಂದಾಗಿ ಕ್ರೈಸ್ತ ಸಭೆಯಲ್ಲಿ ಅಭೂತಪೂರ್ವ ವಿಸ್ತರಣೆಯುಂಟಾಗಿದೆ. (ಪ್ರಕಟನೆ 7:​9, 10) ಇಂದು ಆ ಮಹಾ ಸಮೂಹವು ಲಕ್ಷಾಂತರ ಸಂಖ್ಯೆಯನ್ನು ಮುಟ್ಟಿದೆ. ಈ ವಿಸ್ತರಣೆಯಿಂದಾಗಿ ಹೆಚ್ಚು ರಾಜ್ಯ ಸಭಾಗೃಹಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಬ್ರಾಂಚ್‌ ಕಟ್ಟಡಗಳ ತುರ್ತಿನ ಆವಶ್ಯಕತೆ ಉಂಟಾಗಿದೆ. ಯೆಶಾಯನ ಮಾತುಗಳು ಮತ್ತಷ್ಟು ಸಮಂಜಸವಾಗಿ ತೋರಿಬರುತ್ತವೆ. ಆ ಮುಂತಿಳಿಸಲ್ಪಟ್ಟ ವಿಸ್ತರಣೆಯ ಭಾಗವಾಗಿರುವುದು ಅದೆಂತಹ ಸುಯೋಗವಾಗಿದೆ!

ತನ್ನ ಸಂತಾನವನ್ನು ಪರಾಮರಿಸುವ ತಾಯಿ

13, 14. (ಎ) ದೇವರ ಸ್ವರ್ಗೀಯ ‘ಸ್ತ್ರೀಗೆ’ ಹೇಳಲ್ಪಟ್ಟಿರುವ ಕೆಲವೊಂದು ಮಾತುಗಳಲ್ಲಿ ಯಾವ ತೊಡಕು ಕಂಡುಬರುತ್ತದೆ? (ಬಿ) ದೇವರು ದೃಷ್ಟಾಂತರೂಪದಲ್ಲಿ ಉಪಯೋಗಿಸಿರುವ ಕುಟುಂಬ ಸಂಬಂಧಗಳಿಂದ ನಾವು ಯಾವ ಒಳನೋಟವನ್ನು ಪಡೆದುಕೊಳ್ಳಬಲ್ಲೆವು?

13 ದೊಡ್ಡ ನೆರವೇರಿಕೆಯಲ್ಲಿ ಆ ಪ್ರವಾದನೆಯ “ಸ್ತ್ರೀ” ಯೆಹೋವನ ಸ್ವರ್ಗೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತದೆಂಬುದನ್ನು ನಾವು ನೋಡಿದ್ದೇವೆ. ಆದರೆ ಯೆಶಾಯ 54:4ನ್ನು ಓದಿದ ಬಳಿಕ, ಆತ್ಮಜೀವಿಗಳ ಆ ಸಂಸ್ಥೆಯು ನಾಚಿಕೆ ಇಲ್ಲವೆ ಅವಮಾನವನ್ನು ಅನುಭವಿಸಿರುವುದಾದರೂ ಹೇಗೆಂದು ನಾವು ಕುತೂಹಲಪಡಬಹುದು. ದೇವರ ಆ “ಸ್ತ್ರೀ” ತ್ಯಜಿಸಲ್ಪಡುವಳು, ಸಂಕಟವನ್ನು ಅನುಭವಿಸುವಳು ಮತ್ತು ಆಕ್ರಮಣಕ್ಕೊಳಗಾಗುವಳು ಎಂದು ಮುಂದಿನ ವಚನಗಳು ಹೇಳುತ್ತವೆ. ಅವಳ ಮೇಲೆ ದೇವರ ಕೋಪವೂ ಬರಲಿರುವುದು. ಆದರೆ ಎಂದೂ ಪಾಪವನ್ನೇ ಮಾಡಿರದಂತಹ ಪರಿಪೂರ್ಣ ಆತ್ಮಜೀವಿಗಳ ಒಂದು ಸಂಸ್ಥೆಗೆ ಇಂತಹ ಮಾತುಗಳನ್ನು ಹೇಗೆ ಅನ್ವಯಿಸಸಾಧ್ಯವಿದೆ? ಇದಕ್ಕೆ ಉತ್ತರವು ಕುಟುಂಬದ ಗುಣಲಕ್ಷಣಗಳಲ್ಲಿ ಕಂಡುಬರುತ್ತದೆ.

14 ಅಗಾಧವಾದ ಆತ್ಮಿಕ ಸತ್ಯಗಳನ್ನು ತಿಳಿಸಲಿಕ್ಕಾಗಿ ಯೆಹೋವನು ಕುಟುಂಬದ ಸಂಬಂಧಗಳನ್ನು, ಅಂದರೆ ಗಂಡ ಹೆಂಡತಿ, ತಾಯಿ ಮಕ್ಕಳ ಮಧ್ಯೆ ಇರುವ ಸಂಬಂಧವನ್ನು ಉಪಯೋಗಿಸುತ್ತಾನೆ. ಏಕೆಂದರೆ, ಇಂತಹ ಸಂಬಂಧಗಳು ಮಾನವರಿಗೆ ಅರ್ಥವಾಗುವಂಥವುಗಳಾಗಿವೆ. ನಮ್ಮ ಸ್ವಂತ ಕೌಟುಂಬಿಕ ಅನುಭವಗಳ ವ್ಯಾಪ್ತಿ ಅಥವಾ ಗುಣಮಟ್ಟ ಏನೇ ಆಗಿರಲಿ, ಒಂದು ಒಳ್ಳೆಯ ವಿವಾಹಸಂಬಂಧ ಇಲ್ಲವೆ ಹೆತ್ತವರ ಮತ್ತು ಮಕ್ಕಳ ನಡುವಿನ ಒಳ್ಳೆಯ ಸಂಬಂಧ ಹೇಗಿರಬೇಕೆಂಬ ವಿಚಾರ ನಮಗೆ ಪ್ರಾಯಶಃ ಗೊತ್ತಿರುತ್ತದೆ. ಹೀಗಿರುವುದರಿಂದ, ತನ್ನ ಆತ್ಮಸೇವಕರೊಂದಿಗೆ ತನಗೆ ಹೃತ್ಪೂರ್ವಕ, ಆಪ್ತ ಮತ್ತು ಭರವಸಾರ್ಹ ಸಂಬಂಧವಿದೆ ಎಂಬುದನ್ನು ಯೆಹೋವನು ನಮಗೆ ಎಷ್ಟು ಸುವ್ಯಕ್ತವಾಗಿ ಕಲಿಸುತ್ತಾನೆ! ಮತ್ತು ತನ್ನ ಸ್ವರ್ಗೀಯ ಸಂಸ್ಥೆಯು ಭೂಮಿಯಲ್ಲಿರುವ ಆತ್ಮಾಭಿಷಿಕ್ತ ಸಂತಾನವನ್ನು ಪರಾಮರಿಸುತ್ತಿದೆ ಎಂಬುದನ್ನು ಆತನು ನಮ್ಮ ಮನಸ್ಸಿಗೆ ಹಿಡಿಸುವಂಥ ರೀತಿಯಲ್ಲಿ ಎಷ್ಟು ಚೆನ್ನಾಗಿ ಕಲಿಸುತ್ತಾನೆ! ಮಾನವ ಸೇವಕರು ಕಷ್ಟಾನುಭವಿಸುವಾಗ, ನಂಬಿಗಸ್ತರಾದ ಸ್ವರ್ಗೀಯ ಸೇವಕರು ಅಂದರೆ “ಮೇಲಣ ಯೆರೂಸಲೇಮ್‌” ಕೂಡ ಕಷ್ಟಾನುಭವಿಸುತ್ತದೆ! ಅದೇ ರೀತಿ, ಯೇಸು ಹೇಳಿದ್ದು: “ಈ ನನ್ನ [ಆತ್ಮಾಭಿಷಿಕ್ತ] ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು.”​—⁠ಮತ್ತಾಯ 25:⁠40.

15, 16. ಯೆಶಾಯ 54:​5, 6ರ ಆರಂಭದ ನೆರವೇರಿಕೆ ಏನಾಗಿದೆ, ಮತ್ತು ದೊಡ್ಡ ನೆರವೇರಿಕೆ ಏನಾಗಿದೆ?

15 ಆದುದರಿಂದ, ಯೆಹೋವನ ಸ್ವರ್ಗೀಯ ‘ಸ್ತ್ರೀಗೆ’ ಹೇಳಲಾಗಿರುವ ಹೆಚ್ಚಿನ ಮಾತುಗಳು, ಭೂಮಿಯ ಮೇಲಿನ ಆಕೆಯ ಮಕ್ಕಳ ಅನುಭವಗಳನ್ನು ತೋರಿಸುತ್ತವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಈ ಮಾತುಗಳನ್ನು ಪರಿಗಣಿಸಿರಿ: “ನಿನ್ನ ಸೃಷ್ಟಿಕರ್ತನೇ [“ಮಹಾ ಕರ್ತೃವೇ,” NW] ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. ನೀನು ಬಿಡಲ್ಪಟ್ಟು ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ ಎಂಬದು ನಿನ್ನ ದೇವರ ನುಡಿ.”​—ಯೆಶಾಯ 54:5, 6.

16 ಇಲ್ಲಿ ಸಂಬೋಧಿಸಲ್ಪಟ್ಟಿರುವ ಪತ್ನಿ ಯಾರು? ಆರಂಭದ ನೆರವೇರಿಕೆಯಲ್ಲಿ ಇದು ದೇವಜನರನ್ನು ಪ್ರತಿನಿಧಿಸುವ ಯೆರೂಸಲೇಮ್‌ ಆಗಿದೆ. ಬಾಬೆಲಿನಲ್ಲಿ ಅವರು 70 ವರ್ಷಗಳ ವರೆಗೆ ದೇಶಭ್ರಷ್ಟರಾಗಿರುವಾಗ, ಯೆಹೋವನು ತಮ್ಮನ್ನು ತ್ಯಜಿಸಿ ಪೂರ್ತಿಯಾಗಿ ಕೈಬಿಟ್ಟಿದ್ದಾನೆಂದು ಅವರಿಗನಿಸುವುದು. ಆದರೆ ದೊಡ್ಡ ನೆರವೇರಿಕೆಯಲ್ಲಿ ಈ ಮಾತುಗಳು “ಮೇಲಣ ಯೆರೂಸಲೇಮ್‌”ಗೆ ಮತ್ತು ಆದಿಕಾಂಡ 3:15ರ ನೆರವೇರಿಕೆಯಲ್ಲಿ ಆಕೆ ಕೊನೆಯಲ್ಲಿ “ಸಂತಾನ”ವನ್ನು ಹುಟ್ಟಿಸುವ ಅನುಭವಕ್ಕೆ ಅನ್ವಯಿಸುತ್ತವೆ.

ಕ್ಷಣಿಕ ಶಿಕ್ಷೆ, ಸಾರ್ವಕಾಲಿಕ ಆಶೀರ್ವಾದಗಳು

17. (ಎ) ದೈವಿಕ ಕೋಪದ ‘ಉಬ್ಬಿ ಹರಿಯುವಿಕೆಯನ್ನು’ ಭೌಮಿಕ ಯೆರೂಸಲೇಮ್‌ ಅನುಭವಿಸಿದ್ದು ಹೇಗೆ? (ಬಿ) “ಮೇಲಣ ಯೆರೂಸಲೇಮ್‌”ನ ಪುತ್ರರು ಯಾವ ‘ಉಬ್ಬಿ ಹರಿಯುವಿಕೆಯನ್ನು’ ಅನುಭವಿಸಿದರು?

17 ಪ್ರವಾದನೆಯು ಮುಂದುವರಿಸುತ್ತ ಹೇಳುವುದು: “ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು. ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು, ಶಾಶ್ವತಕೃಪೆಯಿಂದ ನಿನ್ನನ್ನು ಕರುಣಿಸುವೆನು ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ.” (ಯೆಶಾಯ 54:7, 8) ಸಾ.ಶ.ಪೂ. 607ರಲ್ಲಿ ಬಾಬೆಲಿನ ಸೈನ್ಯಗಳು ಆಕ್ರಮಣಮಾಡಿದಾಗ, ಭೌಮಿಕ ಯೆರೂಸಲೇಮಿನ ಮೇಲೆ ದೇವರ ಕೋಪವು ‘ಉಬ್ಬಿ ಹರಿಯಿತು.’ ಆಕೆಯ 70 ವರ್ಷಗಳ ದೇಶಭ್ರಷ್ಟತೆಯು ದೀರ್ಘಕಾಲವೆಂಬಂತೆ ಕಂಡೀತು. ಆದರೂ, ಶಿಸ್ತಿಗೆ ಉತ್ತಮವಾಗಿ ಪ್ರತಿಕ್ರಿಯಿಸುವವರ ಮುಂದಿರುವ ಶಾಶ್ವತವಾದ ಆಶೀರ್ವಾದಗಳಿಗೆ ಹೋಲಿಸುವಾಗ, ಇಂತಹ ಪರೀಕ್ಷೆಗಳು “ಕ್ಷಣಮಾತ್ರ”ದವುಗಳಾಗಿವೆ. ಅದೇ ರೀತಿ, ಮಹಾ ಬಾಬೆಲಿನ ಪ್ರೇರಣೆಯ ಮೇರೆಗೆ ರಾಜಕೀಯ ಘಟಕಾಂಶಗಳು “ಮೇಲಣ ಯೆರೂಸಲೇಮ್‌”ನ ಅಭಿಷಿಕ್ತ ಪುತ್ರರ ಮೇಲೆ ಆಕ್ರಮಣಮಾಡುವಂತೆ ಯೆಹೋವನು ಬಿಟ್ಟಾಗ, “ಉಬ್ಬಿ ಹರಿಯುವ” ದೈವಿಕ ಕೋಪದಿಂದ ತಾವು ಮುಳುಗಿಸಲ್ಪಟ್ಟಿದ್ದೇವೆಂದು ಅವರು ಎಣಿಸಿದರು. ಆದರೆ ಕೊನೆಗೆ, 1919ರಂದಿನಿಂದ ಬಂದಿರುವ ಆತ್ಮಿಕ ಆಶೀರ್ವಾದಗಳ ಯುಗಕ್ಕೆ ಹೋಲಿಸುವಾಗ, ಆ ಶಿಸ್ತಿನ ಕ್ರಮವು ಎಷ್ಟು ಕ್ಷಣಿಕವಾಗಿ ಕಂಡಿತು!

18. ತನ್ನ ಜನರ ಮೇಲೆ ಬರುವ ಯೆಹೋವನ ಕೋಪದ ಕುರಿತು ಯಾವ ಪ್ರಮುಖ ಮೂಲತತ್ತ್ವವನ್ನು ನಾವು ಗ್ರಹಿಸಸಾಧ್ಯವಿದೆ, ಮತ್ತು ಇದು ನಮ್ಮ ಮೇಲೆ ವೈಯಕ್ತಿಕವಾಗಿ ಯಾವ ಪರಿಣಾಮವನ್ನು ಉಂಟುಮಾಡೀತು?

18 ಈ ವಚನಗಳು ಇನ್ನೊಂದು ಮಹಾ ಸತ್ಯವನ್ನು ವ್ಯಕ್ತಪಡಿಸುತ್ತವೆ. ಅದೇನಂದರೆ, ದೇವರ ಕೋಪ ಕ್ಷಣಿಕ, ಆದರೆ ಆತನ ಕರುಣೆ ಸಾರ್ವಕಾಲಿಕ. ಆತನ ಕೋಪವು ತಪ್ಪಿನ ವಿರುದ್ಧ ಧಗಧಗಿಸಿದರೂ, ಅದು ಯಾವಾಗಲೂ ನಿಯಂತ್ರಿತವೂ ಉದ್ದೇಶಭರಿತವೂ ಆಗಿರುತ್ತದೆ. ಮತ್ತು ನಾವು ಯೆಹೋವನ ಶಿಸ್ತನ್ನು ಅಂಗೀಕರಿಸುವಲ್ಲಿ, ಆತನ ಕೋಪವು “ಒಂದು ಕ್ಷಣ ಮಾತ್ರ” ಇದ್ದು ನಂತರ ಕಡಿಮೆಯಾಗಿಹೋಗುತ್ತದೆ. ತದನಂತರ ಆ ಸ್ಥಾನದಲ್ಲಿ “ಮಹಾ ಕೃಪೆ,” ಅಂದರೆ ಆತನ ಕ್ಷಮಾಪಣೆ ಮತ್ತು ಪ್ರೀತಿದಯೆಯು ಕಾಣಿಸಿಕೊಳ್ಳುತ್ತದೆ. ಇವು “ಶಾಶ್ವತ”ವಾಗಿವೆ. ಹಾಗಾದರೆ ನಾವೊಂದು ಪಾಪಮಾಡುವಲ್ಲಿ, ಪಶ್ಚಾತ್ತಾಪಪಟ್ಟು ದೇವರೊಂದಿಗೆ ವಿಷಯಗಳನ್ನು ಸರಿಪಡಿಸಿಕೊಳ್ಳಲು ಹಿಂಜರಿಯಲೇಬಾರದು. ಪಾಪವು ಗಂಭೀರ ರೀತಿಯದ್ದಾಗಿರುವಲ್ಲಿ, ನಾವು ಆ ಕೂಡಲೆ ಸಭಾ ಹಿರಿಯರನ್ನು ಸಮೀಪಿಸಬೇಕು. (ಯಾಕೋಬ 5:14) ಇಂತಹ ಸಂದರ್ಭದಲ್ಲಿ ಶಿಸ್ತಿನ ಅಗತ್ಯವಿರಬಹುದೆಂಬುದು ನಿಜ ಮತ್ತು ಅದಕ್ಕೆ ಅಧೀನರಾಗುವುದು ಕಷ್ಟಕರವಾಗಿರಬಹುದು. (ಇಬ್ರಿಯ 12:11) ಆದರೆ ಯೆಹೋವ ದೇವರಿಂದ ಕ್ಷಮಾಪಣೆ ಪಡೆಯುವ ಮೂಲಕ ಬರುವ ನಿತ್ಯಾಶೀರ್ವಾದಗಳಿಗೆ ಹೋಲಿಸುವಾಗ ಅದು ಕ್ಷಣಿಕವೇ ಸರಿ!

19, 20. (ಎ) ಮುಗಿಲುಬಿಲ್ಲಿನ ಒಡಂಬಡಿಕೆಯೆಂದರೇನು, ಮತ್ತು ಬಾಬೆಲಿನಲ್ಲಿದ್ದ ದೇಶಭ್ರಷ್ಟರಿಗೆ ಅದು ಹೇಗೆ ಸಂಬಂಧಿಸುತ್ತದೆ? (ಬಿ) “ಸಮಾಧಾನದ . . . ಒಡಂಬಡಿಕೆಯು” ಇಂದಿನ ಅಭಿಷಿಕ್ತ ಕ್ರೈಸ್ತರಿಗೆ ಯಾವ ಆಶ್ವಾಸನೆಯನ್ನು ಕೊಡುತ್ತದೆ?

19 ಈಗ ಯೆಹೋವನು ತನ್ನ ಜನರಿಗೆ ಸಾಂತ್ವನದಾಯಕ ಪುನರಾಶ್ವಾಸನೆಯನ್ನು ನೀಡುತ್ತಾನೆ: “ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಲಯದಂತಿದೆ; ಇಂಥಾ ಜಲಪ್ರಲಯವು ಭೂಮಿಯನ್ನು ತಿರಿಗಿ ಆವರಿಸುವದಿಲ್ಲವೆಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವದಿಲ್ಲ, ಗದರಿಸುವದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ. ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು [“ಒಡಂಬಡಿಕೆಯು,” NW] ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.” (ಯೆಶಾಯ 54:9, 10) ಜಲಪ್ರಳಯದ ನಂತರ ದೇವರು ನೋಹನೊಂದಿಗೆ ಮತ್ತು ಇತರ ಎಲ್ಲ ಬದುಕುವ ಜೀವಿಗಳೊಂದಿಗೆ ಒಂದು ಒಡಂಬಡಿಕೆಯನ್ನು, ಕೆಲವೊಮ್ಮೆ ಮುಗಿಲುಬಿಲ್ಲಿನ ಒಡಂಬಡಿಕೆಯೆಂದು ಜ್ಞಾತವಾಗಿರುವ ಒಡಂಬಡಿಕೆಯನ್ನು ಮಾಡಿಕೊಂಡನು. ಇನ್ನುಮುಂದೆ ಭೌಗೋಳಿಕ ಜಲಪ್ರಳಯದ ಮೂಲಕ ತಾನು ಭೂಮಿಯ ಮೇಲೆ ನಾಶನವನ್ನು ಎಂದಿಗೂ ತರುವುದಿಲ್ಲವೆಂದು ಯೆಹೋವನು ವಾಗ್ದಾನಿಸಿದನು. (ಆದಿಕಾಂಡ 9:​8-17) ಅದು ಯೆಶಾಯನಿಗೂ ಅವನ ಜನರಿಗೂ ಯಾವ ಅರ್ಥದಲ್ಲಿದೆ?

20 ತಾವು ಅನುಭವಿಸಬೇಕಾಗಿರುವ ಶಿಕ್ಷೆ, ಅಂದರೆ ಬಾಬೆಲಿನಲ್ಲಿ 70 ವರುಷಗಳ ದೇಶಭ್ರಷ್ಟತೆಯು, ಕೇವಲ ಒಮ್ಮೆ ಬರಲಿದೆಯೆಂದು ತಿಳಿದುಕೊಳ್ಳುವುದು ಸಾಂತ್ವನದಾಯಕ ಸಂಗತಿಯಾಗಿದೆ. ಅದು ಮುಗಿದ ಮೇಲೆ ಪುನಃ ಸಂಭವಿಸದು. ಆ ಬಳಿಕ ದೇವರ “ಸಮಾಧಾನದ . . . ಒಡಂಬಡಿಕೆಯು” ಜಾರಿಗೆ ಬರುವುದು. “ಸಮಾಧಾನ” ಎಂಬುದಕ್ಕಿರುವ ಹೀಬ್ರು ಪದವು ಕೇವಲ ಯುದ್ಧರಹಿತ ಪರಿಸ್ಥಿತಿಯನ್ನು ಮಾತ್ರವಲ್ಲ, ಪ್ರತಿಯೊಂದು ವಿಧದ ಕ್ಷೇಮ ಎಂಬ ಅರ್ಥವನ್ನೂ ಕೊಡುತ್ತದೆ. ದೇವರ ಮಟ್ಟಿಗೆ ಹೇಳುವುದಾದರೆ, ಈ ಒಡಂಬಡಿಕೆಯು ಕಾಯಂ ಆಗಿರುತ್ತದೆ. ಗುಡ್ಡಬೆಟ್ಟಗಳು ಕಾಣದೆ ಹೋದಾವು, ಆದರೆ ತನ್ನ ನಂಬಿಗಸ್ತರಿಗೆ ದೇವರು ತೋರಿಸುವ ಕೃಪೆಯು ಮಾತ್ರ ಎಂದೂ ಅಂತ್ಯಗೊಳ್ಳುವುದಿಲ್ಲ. ಆದರೆ, ದುಃಖಕರವಾದ ವಿಷಯವೇನಂದರೆ, ಕಟ್ಟಕಡೆಗೆ ಆತನ ಭೂಜನಾಂಗವು ಒಡಂಬಡಿಕೆಗನುಸಾರ ಜೀವಿಸಲು ತಪ್ಪಿಹೋಗುವುದು ಮತ್ತು ಮೆಸ್ಸೀಯನನ್ನು ತಿರಸ್ಕರಿಸುವ ಮೂಲಕ ತನ್ನ ಸ್ವಂತ ಸಮಾಧಾನವನ್ನು ಕಳೆದುಕೊಳ್ಳುವುದು. ಆದರೆ, “ಮೇಲಣ ಯೆರೂಸಲೇಮ್‌”ನ ಪುತ್ರರು ಹೆಚ್ಚು ಉತ್ತಮವಾಗಿ ವರ್ತಿಸಿದರು. ಆದಕಾರಣ, ಅವರ ಶಿಸ್ತಿನ ಕಷ್ಟಕರ ಅವಧಿಯು ಮುಗಿದೊಡನೆ ಅವರಿಗೆ ದೈವಿಕ ಸಂರಕ್ಷಣೆಯ ಆಶ್ವಾಸನೆ ಕೊಡಲಾಗಿತ್ತು.

ದೇವಜನರಿಗಿರುವ ಆತ್ಮಿಕ ಭದ್ರತೆ

21, 22. (ಎ) “ಮೇಲಣ ಯೆರೂಸಲೇಮ್‌” ಸಂಕಟಕ್ಕೊಳಗಾಗಿದೆ, ಬಿರುಗಾಳಿ ಬಡಿತಕ್ಕೊಳಗಾಗಿದೆ ಎಂದು ಹೇಳಲಾಗಿರುವುದೇಕೆ? (ಬಿ) ದೇವರ ಸ್ವರ್ಗೀಯ ‘ಸ್ತ್ರೀಯ’ ಆಶೀರ್ವದಿತ ಸ್ಥಿತಿಯು ಭೂಮಿಯಲ್ಲಿರುವ ಆಕೆಯ “ಸಂತಾನ”ದ ಕುರಿತು ಏನನ್ನು ಸೂಚಿಸುವುದು?

21 ಯೆಹೋವನು ತನ್ನ ನಂಬಿಗಸ್ತ ಜನರಿಗಿರುವ ಭದ್ರತೆಯ ಕುರಿತು ಮಾತಾಡುತ್ತಾನೆ: “ಕುಗ್ಗಿದವಳೇ [“ಸಂಕಟಕ್ಕೊಳಗಾದವಳೇ,” NW], ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು. ನಿನ್ನ ಶಿಖರಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ, ನಿನ್ನ ಪೌಳಿಗೋಡೆಯನ್ನು ಮನೋಹರರತ್ನಗಳಿಂದ ನಿರ್ಮಿಸುವೆನು. ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು. ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವದಿಲ್ಲ. ನಾಶನವು ದೂರವಾಗಿರುವದು, ನಿನ್ನ ಹತ್ತಿರಕ್ಕೆ ಬಾರದು. ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ವ್ಯಾಜ್ಯವಾಡುತ್ತಾರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.”​—ಯೆಶಾಯ 54:​11-15.

22 ಆತ್ಮಲೋಕದಲ್ಲಿರುವ ಯೆಹೋವನ “ಸ್ತ್ರೀ” ನೇರವಾಗಿ ಯಾವ ಸಂಕಟಕ್ಕೂ ಒಳಗಾಗಿರುವುದೂ ಇಲ್ಲ, ಬಿರುಗಾಳಿಯ ಬಡಿತವನ್ನು ಅನುಭವಿಸಿರುವುದೂ ಇಲ್ಲ. ಆದರೆ ಭೂಮಿಯ ಮೇಲಿದ್ದ ಆಕೆಯ ಅಭಿಷಿಕ್ತ “ಸಂತಾನ”ವು ಕಷ್ಟಪಟ್ಟಾಗ, ಅಂದರೆ ವಿಶೇಷವಾಗಿ 1918-19ರ ಸಮಯಾವಧಿಯಲ್ಲಿ ಅವರು ಆತ್ಮಿಕ ಬಂಧನದಲ್ಲಿದ್ದಾಗ, ಆಕೆಯೂ ಕಷ್ಟಾನುಭವಿಸಿದಳು. ಇದಕ್ಕೆ ಪ್ರತಿಯಾಗಿ, ಸ್ವರ್ಗೀಯ “ಸ್ತ್ರೀ” ಘನತೆಗೇರಿಸಲ್ಪಡುವಾಗ, ಆಕೆಯ ಸಂತಾನದವರಲ್ಲಿಯೂ ಅದೇ ಸ್ಥಿತಿಗತಿಯು ಪ್ರತಿಬಿಂಬಿತವಾಗುತ್ತದೆ. ಹಾಗಾದರೆ, “ಮೇಲಣ ಯೆರೂಸಲೇಮ್‌”ನ ಉತ್ಸಾಹಭರಿತ ವರ್ಣನೆಯನ್ನು ಪರಿಗಣಿಸಿರಿ. ದ್ವಾರಗಳ ಮೇಲಿರುವ ರತ್ನಗಳು, ಬೆಲೆಬಾಳುವ “ನೀಲಾಂಜನದ ಗಾರೆ,” ಅಸ್ತಿವಾರಗಳು ಮತ್ತು ಪೌಳಿಗೋಡೆಗಳು ಸಹ, “ಸೌಂದರ್ಯ, ಶೋಭಾಯಮಾನತೆ, ಶುದ್ಧತೆ, ಶಕ್ತಿ ಮತ್ತು ದೃಢತೆ”ಯನ್ನು ಸೂಚಿಸುತ್ತವೆ ಎಂದು ಒಂದು ಪರಾಮರ್ಶನ ಗ್ರಂಥವು ಹೇಳುತ್ತದೆ. ಅಭಿಷಿಕ್ತ ಕ್ರೈಸ್ತರನ್ನು ಇಂತಹ ಸುರಕ್ಷಿತವಾದ, ಆಶೀರ್ವದಿತ ಸ್ಥಿತಿಗೆ ಯಾವುದು ನಡಿಸಲಿತ್ತು?

23. (ಎ) “ಯೆಹೋವನಿಂದ ಶಿಕ್ಷಿತರು” ಆಗಿರುವುದು, ಕಡೇ ದಿವಸಗಳಲ್ಲಿ ಅಭಿಷಿಕ್ತ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಿದೆ? (ಬಿ) ದೇವಜನರು ‘ಮನೋಹರರತ್ನಗಳ ಪೌಳಿಗೋಡೆ’ಯಿಂದ ಆಶೀರ್ವದಿಸಲ್ಪಟ್ಟಿರುವುದು ಹೇಗೆ?

23 ಯೆಶಾಯ 54ನೆಯ ಅಧ್ಯಾಯದ 13ನೆಯ ವಚನದಲ್ಲಿರುವ ಮಾತುಗಳು ಇದಕ್ಕೆ ಕೀಲಿ ಕೈಯನ್ನು ಒದಗಿಸುತ್ತವೆ. ಎಲ್ಲರೂ “ಯೆಹೋವನಿಂದ ಶಿಕ್ಷಿತರಾಗಿರುವರು” ಎಂದು ಅದು ತಿಳಿಸುತ್ತದೆ. ಈ ವಚನವನ್ನು ಯೇಸು ತಾನೇ ತನ್ನ ಅಭಿಷಿಕ್ತ ಹಿಂಬಾಲಕರಿಗೆ ಅನ್ವಯಿಸಿದನು. (ಯೋಹಾನ 6:45) “ಅಂತ್ಯಕಾಲ”ದಲ್ಲಿ ಅಭಿಷಿಕ್ತರು ಹೇರಳವಾದ ಸತ್ಯಜ್ಞಾನದಿಂದ ಮತ್ತು ಆತ್ಮಿಕ ಒಳನೋಟದಿಂದ ಆಶೀರ್ವದಿಸಲ್ಪಡುವರೆಂದು ದಾನಿಯೇಲ ಪ್ರವಾದಿಯು ಮುಂತಿಳಿಸಿದನು. (ದಾನಿಯೇಲ 12:​3, 4) ಇಂತಹ ಒಳನೋಟವು, ಅವರು ಇತಿಹಾಸದಲ್ಲೇ ಅತ್ಯಂತ ಮಹಾ ಶೈಕ್ಷಣಿಕ ಕಾರ್ಯಾಚರಣೆಯ ನಾಯಕತ್ವವನ್ನು ವಹಿಸಿ, ಭೂಮಿಯಲ್ಲೆಲ್ಲ ದೈವಿಕ ಬೋಧನೆಯನ್ನು ಹಬ್ಬಿಸುವಂತೆ ಮಾಡಿದೆ. (ಮತ್ತಾಯ 24:14) ಅದೇ ಸಮಯದಲ್ಲಿ, ಇಂತಹ ಒಳನೋಟವು, ಅವರು ಸತ್ಯ ಧರ್ಮ ಮತ್ತು ಸುಳ್ಳು ಧರ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಂತೆ ಅವರಿಗೆ ಸಹಾಯಮಾಡಿದೆ. ಯೆಶಾಯ 54:​12ನೆಯ ವಚನವು “ಪೌಳಿಗೋಡೆಯನ್ನು ಮನೋಹರರತ್ನಗಳಿಂದ” ನಿರ್ಮಿಸುವ ವಿಷಯದ ಕುರಿತು ತಿಳಿಸುತ್ತದೆ. 1919ರಿಂದ ಯೆಹೋವನು ಅಭಿಷಿಕ್ತರಿಗೆ, ಪೌಳಿಗೋಡೆಗಳ ಅಂದರೆ ಆತ್ಮಿಕ ಎಲ್ಲೆಗೆರೆಗಳ ಬಗ್ಗೆ ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಕೊಟ್ಟು, ಅವರನ್ನು ಸುಳ್ಳು ಧರ್ಮದಿಂದ ಮತ್ತು ಲೋಕದ ಭಕ್ತಿರಹಿತ ಅಂಶಗಳಿಂದ ಪ್ರತ್ಯೇಕಿಸಿದ್ದಾನೆ. (ಯೆಹೆಜ್ಕೇಲ 44:23; ಯೋಹಾನ 17:14; ಯಾಕೋಬ 1:27) ಹೀಗೆ ಅವರು ದೇವರ ಸ್ವಕೀಯ ಜನರಾಗಿ ಪ್ರತ್ಯೇಕಿಸಲ್ಪಡುತ್ತಾರೆ.​—⁠1 ಪೇತ್ರ 2:⁠9.

24. ನಾವು ಯೆಹೋವನಿಂದ ಶಿಕ್ಷಿತರಾಗುತ್ತಿದ್ದೇವೆಂದು ಖಾತ್ರಿಪಡಿಸಿಕೊಳ್ಳುವುದು ಹೇಗೆ?

24 ಹೀಗೆ ನಮ್ಮಲ್ಲಿ ಪ್ರತಿಯೊಬ್ಬರೂ, ‘ನಾನು ಯೆಹೋವನಿಂದ ಶಿಕ್ಷಿತನಾಗುತ್ತಿದ್ದೇನೊ?’ ಎಂದು ಕೇಳಿಕೊಳ್ಳುವುದು ಒಳ್ಳೇದು. ಅಂತಹ ಶಿಕ್ಷಣವು ತನ್ನಷ್ಟಕ್ಕೇ ನಮಗೆ ಸಿಗುವುದಿಲ್ಲ. ಅದನ್ನು ಪಡೆದುಕೊಳ್ಳಲು ನಾವು ಪ್ರಯತ್ನವನ್ನು ಮಾಡಬೇಕು. ನಾವು ಕ್ರಮವಾಗಿ ಬೈಬಲ್‌ ಓದಿ, ಅದರ ಕುರಿತು ಧ್ಯಾನಿಸುವಲ್ಲಿ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮುದ್ರಿಸಿರುವ ಬೈಬಲಾಧಾರಿತ ಪ್ರಕಾಶನಗಳನ್ನು ಓದುವ ಮೂಲಕ ನಾವು ಆ ಉಪದೇಶವನ್ನು ಪಡೆದುಕೊಳ್ಳುವಲ್ಲಿ, ಹಾಗೂ ಕ್ರೈಸ್ತ ಕೂಟಗಳಿಗಾಗಿ ತಯಾರಿಯನ್ನು ಮಾಡಿ ಅವುಗಳಿಗೆ ಹಾಜರಾಗುವಲ್ಲಿ, ನಾವು ಯೆಹೋವನಿಂದ ಶಿಕ್ಷಿತರಾಗುವುದು ನಿಶ್ಚಯ. (ಮತ್ತಾಯ 24:​45-47) ನಾವು ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿ, ಆತ್ಮಿಕವಾಗಿ ಎಚ್ಚರವಾಗಿರುವವರೂ ಜಾಗರೂಕರೂ ಆಗಿರುವಲ್ಲಿ, ದೈವಿಕ ಬೋಧನೆಯು ಈ ಭಕ್ತಿರಹಿತ ಲೋಕದಲ್ಲಿರುವವರಿಂದ ನಮ್ಮನ್ನು ಪ್ರತ್ಯೇಕಿಸುವುದು. (1 ಪೇತ್ರ 5:​8, 9) ಇನ್ನೂ ಉತ್ತಮವಾದ ವಿಷಯವೇನಂದರೆ, ಅದು ನಮಗೆ “ದೇವರ ಸಮೀಪಕ್ಕೆ” ಹೋಗುವಂತೆ ಸಹಾಯಮಾಡುವುದು.​—⁠ಯಾಕೋಬ 1:​22-25; 4:⁠8.

25. ಸಮಾಧಾನದ ವಿಷಯವಾದ ದೇವರ ವಾಗ್ದಾನವು ಆಧುನಿಕ ಸಮಯಗಳ ಆತನ ಜನರಿಗೆ ಯಾವ ಅರ್ಥದಲ್ಲಿದೆ?

25 ಅಭಿಷಿಕ್ತರು ಹೇರಳವಾದ ಸಮಾಧಾನದಿಂದ ಆಶೀರ್ವದಿಸಲ್ಪಡುತ್ತಾರೆಂದೂ ಯೆಶಾಯನ ಪ್ರವಾದನೆಯು ತೋರಿಸುತ್ತದೆ. ಹಾಗಾದರೆ ಅವರು ಎಂದಿಗೂ ಆಕ್ರಮಣಕ್ಕೊಳಗಾಗುವುದಿಲ್ಲವೆಂದು ಇದರ ಅರ್ಥವೊ? ಅಲ್ಲ, ದೇವರು ಅಂತಹ ಆಕ್ರಮಣಕ್ಕೆ ಆಜ್ಞೆಯನ್ನು ಕೊಡುವುದೂ ಇಲ್ಲ, ಆ ಆಕ್ರಮಣಗಳು ಯಶಸ್ವಿಯಾಗುವಂತೆ ಬಿಡುವುದೂ ಇಲ್ಲ. ನಾವು ಓದುವುದು: “ಕೇಳು, ಕೆಂಡವನ್ನು ಊದುತ್ತಾ ಉಪಯುಕ್ತವಾದ ಆಯುಧವನ್ನುಂಟುಮಾಡುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ, ಹಾಳುಮಾಡುವ ಕೆಡುಕನನ್ನು ನಿರ್ಮಿಸಿದವನೂ ನಾನೇ. ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.”​—ಯೆಶಾಯ 54:​16, 17.

26. ಯೆಹೋವನು ಸಕಲ ಮಾನವಕುಲದ ಸೃಷ್ಟಿಕರ್ತನೆಂದು ತಿಳಿಯುವುದು ಏಕೆ ಪುನರಾಶ್ವಾಸನೆ ನೀಡುವ ವಿಷಯವಾಗಿದೆ?

26 ಯೆಶಾಯ ಪುಸ್ತಕದ ಈ ಅಧ್ಯಾಯದಲ್ಲಿ ಯೆಹೋವನು ಎರಡನೆಯ ಬಾರಿ ತಾನು ಸೃಷ್ಟಿಕರ್ತನೆಂದು ಜ್ಞಾಪಕಹುಟ್ಟಿಸುತ್ತಾನೆ. ಈ ಮುಂಚೆ ತನ್ನ ಸಾಂಕೇತಿಕ ಪತ್ನಿಗೆ ಆತನು ಆಕೆಯ “ಮಹಾ ಕರ್ತೃ” (NW) ಎಂದು ಹೇಳುತ್ತಾನೆ. ಆದರೆ ಈಗ ತಾನು ಸಕಲ ಮಾನವಕುಲದ ಸೃಷ್ಟಿಕರ್ತನೆಂದು ಆತನು ಹೇಳುತ್ತಾನೆ. 16ನೆಯ ವಚನವು, ನಾಶಮಾಡುವ ಆಯುಧಗಳನ್ನು ಸೃಷ್ಟಿಸಲು ಕಮ್ಮಾರನು ಕುಲುಮೆಯ ಕೆಂಡವನ್ನು ಊದುವುದನ್ನೂ “ಹಾಳುಮಾಡುವ ಕೆಡುಕ” ಯೋಧನನ್ನೂ ವರ್ಣಿಸುತ್ತದೆ. ಇಂತಹ ಜನರು ಜೊತೆಮಾನವರಿಗೆ ಭಯಪಡಿಸುವಂಥ ವರ್ಣನೆಯಾಗಿ ಕಂಡುಬರಬಹುದಾದರೂ, ತಮ್ಮ ಸ್ವಂತ ಸೃಷ್ಟಿಕರ್ತನ ವಿರುದ್ಧ ಅವರು ಹೇಗೆ ಜಯಹೊಂದಸಾಧ್ಯವಿದೆ? ಹೀಗಿರುವಾಗ, ಇಂದು ಈ ಲೋಕದ ಅತಿ ಬಲಾಢ್ಯ ಶಕ್ತಿಗಳು ಯೆಹೋವನ ಜನರ ಮೇಲೆ ಆಕ್ರಮಣಮಾಡುವುದಾದರೂ, ಅಂತಿಮವಾಗಿ ಜಯಗಳಿಸುವ ಅವಕಾಶವೇ ಅವರಿಗಿಲ್ಲ. ಅದು ಹಾಗಿರುವುದಾದರೂ ಹೇಗೆ?

27, 28. ಈ ತೊಂದರೆಯ ಕಾಲಗಳಲ್ಲಿ ನಾವು ಯಾವ ವಿಷಯದಲ್ಲಿ ಖಾತ್ರಿಯಿಂದಿರಬಲ್ಲೆವು, ಮತ್ತು ನಮ್ಮ ವಿರುದ್ಧವಾಗಿರುವ ಸೈತಾನನ ಆಕ್ರಮಣಗಳು ಜಯಹೊಂದುವುದಿಲ್ಲವೆಂದು ನಮಗೆ ಏಕೆ ಗೊತ್ತು?

27 ದೇವಜನರ ವಿರುದ್ಧ ಮತ್ತು ಆತ್ಮ ಹಾಗೂ ಸತ್ಯದಿಂದ ಅವರು ಮಾಡುವ ಆರಾಧನೆಯ ವಿರುದ್ಧ ಬರಲಿದ್ದ ಧ್ವಂಸಕಾರಕ ಆಕ್ರಮಣದ ಸಮಯವು ದಾಟಿಹೋಗಿದೆ. (ಯೋಹಾನ 4:​23, 24) ಮಹಾ ಬಾಬೆಲು ಒಂದು ಆಕ್ರಮಣವನ್ನು ಮಾಡುವಂತೆ ಯೆಹೋವನು ಬಿಟ್ಟನು ಮತ್ತು ಅದು ತಾತ್ಕಾಲಿಕವಾಗಿ ಯಶಸ್ಸನ್ನು ಪಡೆಯಿತು. ಅಲ್ಪಾವಧಿಯ ವರೆಗೆ ಸಾರುವ ಕೆಲಸವು ನಿಂತುಹೋದಾಗ, ತನ್ನ “ಸಂತಾನವು” ಬಹುಮಟ್ಟಿಗೆ ಮೌನವಾಗಿಬಿಟ್ಟಿರುವುದನ್ನು “ಮೇಲಣ ಯೆರೂಸಲೇಮ್‌” ನೋಡಿದಳು. ಆದರೆ ಮುಂದಕ್ಕೆ ಹಾಗಿರದು! ಈಗ ಆಕೆ ತನ್ನ ಪುತ್ರರನ್ನು ಕಂಡು ಸಂತೋಷಿಸುತ್ತಾಳೆ, ಏಕೆಂದರೆ ಆತ್ಮಿಕ ಅರ್ಥದಲ್ಲಿ ಅವರು ಅಜೇಯರು. (ಯೋಹಾನ 16:33; 1 ಯೋಹಾನ 5:⁠4) ಅವರ ಮೇಲೆ ಆಕ್ರಮಣಮಾಡಲು ಆಯುಧಗಳು ರಚಿಸಲ್ಪಟ್ಟಿವೆ, ಮತ್ತು ಮುಂದಕ್ಕೂ ರಚಿಸಲ್ಪಡುವವು ಎಂಬುದು ಸತ್ಯ. (ಪ್ರಕಟನೆ 12:17) ಆದರೆ ಇವು ಇದುವರೆಗೆ ಜಯಿಸಿರುವುದೂ ಇಲ್ಲ, ಇನ್ನು ಮುಂದಕ್ಕೆ ಜಯವನ್ನು ಪಡೆಯುವುದೂ ಇಲ್ಲ. ಅಭಿಷಿಕ್ತರ ಮತ್ತು ಅವರ ಸಂಗಾತಿಗಳ ನಂಬಿಕೆಯನ್ನೂ ಕಡು ಹುರುಪನ್ನೂ ಜಯಿಸಸಾಧ್ಯವಿರುವಂಥ ಯಾವುದೇ ಆಯುಧವು ಸೈತಾನನ ಬಳಿಯಲ್ಲಿಲ್ಲ. ಈ ಆತ್ಮಿಕ ಸಮಾಧಾನವು “ಯೆಹೋವನ ಸೇವಕರ ಸ್ವಾಸ್ತ್ಯ”ವಾಗಿರುವುದರಿಂದ, ಅದನ್ನು ಯಾವನೂ ಅವರಿಂದ ಬಲಾತ್ಕಾರವಾಗಿ ಒಯ್ಯಲಾರನು.​—⁠ಕೀರ್ತನೆ 118:6; ರೋಮಾಪುರ 8:​38, 39.

28 ಯೆಹೋವನ ಸಮರ್ಪಿತ ಸೇವಕರು ಮಾಡುವ ಕೆಲಸವನ್ನು ಮತ್ತು ಅವರು ಸಲ್ಲಿಸುತ್ತಿರುವ ದೇವರ ಬಾಳುವ ಶುದ್ಧಾರಾಧನೆಯನ್ನು ನಿಲ್ಲಿಸಲು ಸೈತಾನನ ಲೋಕವು ಏನನ್ನೂ ಮಾಡಲಾರದು. “ಮೇಲಣ ಯೆರೂಸಲೇಮ್‌”ನ ಅಭಿಷಿಕ್ತ ಸಂತಾನದವರು ಈ ಆಶ್ವಾಸನೆಯಿಂದ ತುಂಬ ಸಾಂತ್ವನವನ್ನು ಪಡೆದುಕೊಂಡಿದ್ದಾರೆ. ಮಹಾ ಸಮೂಹದ ಸದಸ್ಯರೂ ಸಾಂತ್ವನವನ್ನು ಪಡೆದುಕೊಂಡಿದ್ದಾರೆ. ಯೆಹೋವನ ಸ್ವರ್ಗೀಯ ಸಂಸ್ಥೆಯ ಕುರಿತು ಮತ್ತು ಭೂಮಿಯಲ್ಲಿರುವ ಆತನ ಆರಾಧಕರೊಂದಿಗೆ ಅದು ವ್ಯವಹರಿಸುವ ವಿಧದ ಕುರಿತು ನಾವು ಎಷ್ಟು ಹೆಚ್ಚನ್ನು ತಿಳಿದುಕೊಳ್ಳುತ್ತೇವೊ, ನಮ್ಮ ನಂಬಿಕೆಯು ಅಷ್ಟೇ ಬಲವಾಗುವುದು. ಎಷ್ಟರ ವರೆಗೆ ನಮ್ಮ ನಂಬಿಕೆಯು ಬಲವಾಗಿರುತ್ತದೊ ಅಷ್ಟರ ವರೆಗೆ ನಮ್ಮ ವಿರುದ್ಧವಾಗಿರುವ ಹೋರಾಟದಲ್ಲಿ ಸೈತಾನನು ಉಪಯೋಗಿಸುವ ಆಯುಧಗಳು ವ್ಯರ್ಥವಾಗಿ ಪರಿಣಮಿಸುವವು!

[ಪಾದಟಿಪ್ಪಣಿ]

^ ಪ್ಯಾರ. 11 ಪ್ರಕಟನೆ 12:​1-17ಕ್ಕನುಸಾರ, ದೇವರ “ಸ್ತ್ರೀ”ಯು ಅತಿ ಪ್ರಾಮುಖ್ಯವಾದ “ಸಂತಾನ”ವೊಂದನ್ನು, ಅಂದರೆ ಒಬ್ಬ ಆತ್ಮಪುತ್ರನನ್ನಲ್ಲ, ಬದಲಾಗಿ ಸ್ವರ್ಗದಲ್ಲಿ ಮೆಸ್ಸೀಯಸಂಬಂಧಿತ ರಾಜ್ಯವೊಂದನ್ನು ಹೆರುವ ಮೂಲಕ ಮಹತ್ತಾಗಿ ಆಶೀರ್ವದಿಸಲ್ಪಟ್ಟಳು. ಈ ಜನನವು 1914ರಲ್ಲಾಯಿತು. (ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 177-86ನೆಯ ಪುಟಗಳನ್ನು ನೋಡಿ.) ಯೆಶಾಯನ ಪ್ರವಾದನೆಯು, ಭೂಮಿಯ ಮೇಲಿರುವ ತನ್ನ ಅಭಿಷಿಕ್ತ ಪುತ್ರರ ಮೇಲೆ ದೇವರಿಂದ ಬರುವ ಆಶೀರ್ವಾದಗಳಿಂದಾಗಿ ಆಕೆಗಾಗುವ ಹರ್ಷದ ಮೇಲೆ ಬೆಳಕು ಬೀರುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 218, 219ರಲ್ಲಿರುವ ಚೌಕ]

ಅಬ್ರಹಾಮನ ಕುಟುಂಬ​—⁠ಪ್ರವಾದನ ಚಿತ್ರಣ

ಅಬ್ರಹಾಮನ ಕುಟುಂಬವು ಒಂದು ಸಾಂಕೇತಿಕ ನಾಟಕವಾಗಿ, ಯೆಹೋವನಿಗೆ ತನ್ನ ಸ್ವರ್ಗೀಯ ಸಂಸ್ಥೆಯೊಂದಿಗಿರುವ ಸಂಬಂಧದ ಮತ್ತು ಮೋಶೆಯ ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಭೂಮಿಯ ಮೇಲಿನ ಇಸ್ರಾಯೇಲ್‌ ಜನಾಂಗಕ್ಕೆ ಆತನೊಂದಿಗಿದ್ದ ಸಂಬಂಧದ ಪ್ರವಾದನ ಚಿತ್ರಣವಾಗಿ ಕಾರ್ಯನಡೆಸುತ್ತದೆಂದು ಅಪೊಸ್ತಲ ಪೌಲನು ವಿವರಿಸಿದನು.​—⁠ಗಲಾತ್ಯ 4:​22-31.

ಅಬ್ರಹಾಮನು ಕುಟುಂಬದ ತಲೆಯಾಗಿದ್ದು, ಯೆಹೋವ ದೇವರನ್ನು ಪ್ರತಿನಿಧಿಸುತ್ತಾನೆ. ತನ್ನ ಪ್ರಿಯ ಪುತ್ರನನ್ನು ಬಲಿಯಾಗಿ ಅರ್ಪಿಸಲು ಅಬ್ರಹಾಮನು ತೋರಿಸಿದ ಸಿದ್ಧಮನಸ್ಸು, ಯೆಹೋವನು ಮಾನವಕುಲದ ಪಾಪಕ್ಕಾಗಿ ತನ್ನ ಸ್ವಂತ ಪ್ರಿಯ ಪುತ್ರನನ್ನು ಯಜ್ಞವಾಗಿ ಅರ್ಪಿಸಲು ತೋರಿಸಿದ ಸಿದ್ಧಮನಸ್ಸನ್ನು ಮುನ್ಸೂಚಿಸುತ್ತದೆ.​—⁠ಆದಿಕಾಂಡ 22:​1-13; ಯೋಹಾನ 3:⁠16.

ಸಾರಳು ದೇವರ ಸ್ವರ್ಗೀಯ “ಪತ್ನಿ”ಯನ್ನು, ಅಂದರೆ ಆತನ ಆತ್ಮಜೀವಿಗಳ ಸಂಸ್ಥೆಯನ್ನು ಚಿತ್ರಿಸುತ್ತಾಳೆ. ಆ ಸ್ವರ್ಗೀಯ ಸಂಸ್ಥೆಯನ್ನು ಯೋಗ್ಯವಾಗಿಯೇ ಯೆಹೋವನ ಪತ್ನಿಯೆಂದು ವರ್ಣಿಸಲಾಗಿದೆ, ಏಕೆಂದರೆ ಆಕೆ ಯೆಹೋವನೊಂದಿಗೆ ಆಪ್ತ ರೀತಿಯಲ್ಲಿ ಜೊತೆಗೂಡಿದ್ದು, ಆತನ ತಲೆತನಕ್ಕೆ ಅಧೀನಳಾಗಿದ್ದು, ಆತನ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಪೂರ್ತಿ ಸಹಕಾರವನ್ನು ತೋರಿಸುತ್ತಾಳೆ. “ಮೇಲಣ ಯೆರೂಸಲೇಮ್‌” ಎಂಬ ಹೆಸರೂ ಆಕೆಗಿದೆ. (ಗಲಾತ್ಯ 4:26) ಅದೇ “ಸ್ತ್ರೀ”ಯನ್ನು ಆದಿಕಾಂಡ 3:15ರಲ್ಲಿ ಪ್ರಸ್ತಾಪಿಸಲಾಗಿರುವುದು ಮಾತ್ರವಲ್ಲ, ಪ್ರಕಟನೆ 12:​1-6, 13-17ರ ದರ್ಶನದಲ್ಲಿಯೂ ಆಕೆಯನ್ನು ಚಿತ್ರಿಸಲಾಗಿದೆ.

ಇಸಾಕನು ದೇವರ ಸ್ತ್ರೀಯ ಆತ್ಮಿಕ ಸಂತಾನವನ್ನು ಸೂಚಿಸುತ್ತಾನೆ. ಪ್ರಧಾನವಾಗಿ ಈ ಸಂತಾನವು ಯೇಸು ಕ್ರಿಸ್ತನಾಗಿದ್ದಾನೆ. ಆದರೂ, ಈ ಸಂತಾನದಲ್ಲಿ ಕ್ರಿಸ್ತನ ಅಭಿಷಿಕ್ತ ಸಹೋದರರೂ ಒಳಗೂಡಿದ್ದಾರೆ. ಅವರು ಆತ್ಮಿಕ ಪುತ್ರರಾಗಿ ಸ್ವೀಕರಿಸಲ್ಪಟ್ಟು, ಕ್ರಿಸ್ತನೊಂದಿಗೆ ಜೊತೆಬಾಧ್ಯಸ್ಥರಾಗುತ್ತಾರೆ.​—⁠ರೋಮಾಪುರ 8:​15-17; ಗಲಾತ್ಯ 3:​16, 29.

ಹಾಗರಳು ಅಬ್ರಹಾಮನ ದ್ವಿತೀಯ ಪತ್ನಿ ಅಥವಾ ಉಪಪತ್ನಿಯಾಗಿದ್ದು, ದಾಸಿಯಾಗಿದ್ದಳು. ಯೋಗ್ಯವಾಗಿಯೇ ಆಕೆ ಭೌಮಿಕ ಯೆರೂಸಲೇಮನ್ನು ಚಿತ್ರಿಸುತ್ತಾಳೆ. ಅಲ್ಲಿ ಮೋಶೆಯ ಧರ್ಮಶಾಸ್ತ್ರವು ಅಧಿಕಾರ ನಡೆಸುತ್ತಿದ್ದು, ಅದನ್ನು ಪಾಲಿಸುವವರೆಲ್ಲರು ಪಾಪ ಮತ್ತು ಮರಣದ ಗುಲಾಮರಾಗಿದ್ದಾರೆಂಬುದನ್ನು ಬಯಲುಪಡಿಸಿತು. ಧರ್ಮಶಾಸ್ತ್ರದ ಒಡಂಬಡಿಕೆಯು ಸೀನಾಯಿಯಲ್ಲಿ ಸ್ಥಾಪಿಸಲ್ಪಟ್ಟದ್ದರಿಂದ, “ಹಾಗರ್‌ ಎಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತ” ಎಂದು ಪೌಲನು ಹೇಳಿದನು.​—⁠ಗಲಾತ್ಯ 3:​10, 13; 4:⁠25.

ಇಷ್ಮಾಯೇಲ್‌ ಎಂಬ ಹಾಗರಳ ಪುತ್ರನು, ಒಂದನೆಯ ಶತಮಾನದ ಯೆಹೂದ್ಯರನ್ನು ಅಂದರೆ ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ದಾಸರಾಗಿದ್ದ ಯೆರೂಸಲೇಮಿನ ಪುತ್ರರನ್ನು ಚಿತ್ರಿಸುತ್ತಾನೆ. ಇಷ್ಮಾಯೇಲನು ಇಸಾಕನನ್ನು ಹಿಂಸಿಸಿದ ಹಾಗೆಯೇ ಯೆಹೂದ್ಯರು ಕ್ರೈಸ್ತರನ್ನು, ಸಾಂಕೇತಿಕ ಸಾರಳಾದ “ಮೇಲಣ ಯೆರೂಸಲೇಮ್‌”ನ ಅಭಿಷಿಕ್ತ ಪುತ್ರರನ್ನು ಹಿಂಸಿಸಿದರು. ಮತ್ತು ಅಬ್ರಹಾಮನು ಹಾಗರಳನ್ನು ಮತ್ತು ಇಷ್ಮಾಯೇಲನನ್ನು ಕಳುಹಿಸಿಬಿಟ್ಟಂತೆಯೇ ಯೆಹೋವನು ಕೊನೆಗೆ ಯೆರೂಸಲೇಮನ್ನೂ ಆಕೆಯ ದಂಗೆಕೋರ ಪುತ್ರರನ್ನೂ ತೊರೆದುಬಿಟ್ಟನು.​—⁠ಮತ್ತಾಯ 23:​37, 38.

[ಪುಟ 220ರಲ್ಲಿರುವ ಚಿತ್ರ]

ತನ್ನ ದೀಕ್ಷಾಸ್ನಾನವಾದ ಬಳಿಕ ಯೇಸು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಾಗ, ಯೆಶಾಯ 54:1ರ ಅತಿ ಪ್ರಾಮುಖ್ಯವಾದ ನೆರವೇರಿಕೆ ಆರಂಭಗೊಂಡಿತು

[ಪುಟ 225ರಲ್ಲಿರುವ ಚಿತ್ರ]

ಯೆಹೋವನು ತನ್ನ ಮುಖವನ್ನು ಯೆರೂಸಲೇಮಿನಿಂದ “ಕ್ಷಣಮಾತ್ರ” ಮರೆಮಾಡಿಕೊಂಡನು

[ಪುಟ 231ರಲ್ಲಿರುವ ಚಿತ್ರಗಳು]

ಯೋಧನೂ ಕಮ್ಮಾರನೂ ತಮ್ಮ ಸೃಷ್ಟಿಕರ್ತನ ಎದುರು ಜಯಿಸಾರೇ?