ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನಗಾಗಿ ಸುಂದರ ನಾಮವನ್ನು ಗಳಿಸಿಕೊಳ್ಳುತ್ತಾನೆ

ಯೆಹೋವನು ತನಗಾಗಿ ಸುಂದರ ನಾಮವನ್ನು ಗಳಿಸಿಕೊಳ್ಳುತ್ತಾನೆ

ಅಧ್ಯಾಯ ಇಪ್ಪತ್ತನಾಲ್ಕು

ಯೆಹೋವನು ತನಗಾಗಿ ಸುಂದರ ನಾಮವನ್ನು ಗಳಿಸಿಕೊಳ್ಳುತ್ತಾನೆ

ಯೆಶಾಯ 63:1-14

1, 2. (ಎ) ಬರಲಿರುವ “ಯೆಹೋವನ ದಿನ”ದಲ್ಲಿ ಕ್ರೈಸ್ತರಿಗೆ ಯಾವ ವೈಯಕ್ತಿಕ ಅಭಿರುಚಿಯಿದೆ? (ಬಿ) ಯೆಹೋವನ ದಿನದ ಬರೋಣದಲ್ಲಿ ಯಾವ ಘನವಾದ ವಿವಾದಾಂಶವು ಒಳಗೂಡಿದೆ?

ಸುಮಾರು ಎರಡು ಸಾವಿರ ವರುಷಗಳಿಂದ ಕ್ರೈಸ್ತರು “ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಿದ್ದಾರೆ ಮತ್ತು ಅದನ್ನು ಮನಸ್ಸಿನಲ್ಲಿ ನಿಕಟವಾಗಿ” ಇಟ್ಟುಕೊಂಡಿದ್ದಾರೆ. (2 ಪೇತ್ರ 3:​12, NW; ತೀತ 2:13) ಆ ದಿನವು ಬರುವ ವಿಷಯದಲ್ಲಿ ಅವರು ಆತುರದಿಂದಿದ್ದಾರೆಂಬುದು ಅರ್ಥಮಾಡಿಕೊಳ್ಳಬಹುದಾದ ವಿಷಯವೇ. ಏಕೆಂದರೆ ಅದು ಅಪರಿಪೂರ್ಣತೆಯ ಹಾವಳಿಗಳಿಂದ ಅವರಿಗೆ ಸಿಗಲಿರುವ ಉಪಶಮನದ ಆರಂಭವಾಗಿರುವುದು. (ರೋಮಾಪುರ 8:22) ಈ “ನಿಭಾಯಿಸಲು ಕಷ್ಟಕರವಾಗಿರುವ ಸಮಯಗಳಲ್ಲಿ” ಅವರು ಅನುಭವಿಸುವ ಒತ್ತಡಗಳ ಅಂತ್ಯವನ್ನೂ ಇದು ಸೂಚಿಸುವುದು.​—⁠2 ತಿಮೊಥೆಯ 3:⁠1, NW.

2 ಆದರೆ, ಯೆಹೋವನ ದಿನವು ನೀತಿವಂತರಿಗೆ ಉಪಶಮನವನ್ನು ತರುವಾಗ, “ದೇವರನ್ನರಿಯದವರಿಗೂ . . . [ಯೇಸು ಕ್ರಿಸ್ತನ] ಸುವಾರ್ತೆಗೆ ಒಳಪಡದವರಿಗೂ” ಅದು ನಾಶನದ ಅರ್ಥದಲ್ಲಿರುವುದು. (2 ಥೆಸಲೊನೀಕ 1:7, 8) ಇದು ಯೋಚಿಸಲು ಗಂಭೀರವಾದ ವಿಷಯವಾಗಿದೆ. ತನ್ನ ಜನರನ್ನು ಸಂಕಟಕರವಾದ ಪರಿಸ್ಥಿತಿಗಳಿಂದ ಕೇವಲ ರಕ್ಷಿಸಲಿಕ್ಕಾಗಿ ದೇವರು ದುಷ್ಟರ ನಾಶನವನ್ನು ನಿಜವಾಗಿಯೂ ತರುವನೊ? ಅದಕ್ಕಿಂತಲೂ ಶ್ರೇಷ್ಠವಾದ ಒಂದು ವಿವಾದಾಂಶವು, ಅಂದರೆ ದೇವರ ನಾಮದ ಪವಿತ್ರೀಕರಣವು ಇದರಲ್ಲಿ ಒಳಗೂಡಿದೆಯೆಂಬುದನ್ನು ಯೆಶಾಯ 63ನೆಯ ಅಧ್ಯಾಯವು ತೋರಿಸುತ್ತದೆ.

ವಿಜೇತ ಯೋಧನ ಮುನ್ನಡೆ

3, 4. (ಎ) ಯೆಶಾಯ 63ನೆಯ ಅಧ್ಯಾಯದಲ್ಲಿರುವ ಪ್ರವಾದನೆಯ ಹಿನ್ನೆಲೆಯೇನು? (ಬಿ) ಯಾರು ಯೆರೂಸಲೇಮಿನ ಕಡೆಗೆ ನಡೆಯುತ್ತಿರುವುದನ್ನು ಯೆಶಾಯನು ನೋಡುತ್ತಾನೆ, ಮತ್ತು ವಿದ್ವಾಂಸರು ಆತನು ಯಾರೆಂದು ಗುರುತಿಸಿದ್ದಾರೆ?

3 ಯೆಶಾಯ 62ನೆಯ ಅಧ್ಯಾಯದಲ್ಲಿ, ಬಾಬೆಲಿನ ಬಂಧನದಿಂದ ಯೆಹೂದ್ಯರ ಬಿಡುಗಡೆ ಮತ್ತು ಸ್ವದೇಶದಲ್ಲಿ ಅವರ ಪುನಸ್ಸ್ಥಾಪನೆಯ ಕುರಿತು ನಾವು ಓದುತ್ತೇವೆ. ಆದುದರಿಂದ ಸ್ವಾಭಾವಿಕವಾಗಿಯೇ ಏಳುವ ಪ್ರಶ್ನೆಯೇನೆಂದರೆ, ಇತರ ಶತ್ರು ಜನಾಂಗಗಳು ತಮ್ಮನ್ನು ಮುಂದೆಂದಾದರೂ ಧ್ವಂಸಮಾಡುವವು ಎಂದು ಪುನಸ್ಸ್ಥಾಪನೆಗೊಂಡಿರುವ ಈ ಯೆಹೂದಿ ಉಳಿಕೆಯವರು ಭಯಪಡಬೇಕೊ? ಯೆಶಾಯನ ದರ್ಶನವು ಇಂತಹ ಭಯವನ್ನು ದೂರಮಾಡಲು ಸಾಕಷ್ಟು ಕಾರಣಗಳನ್ನು ಕೊಡುತ್ತದೆ. ಆ ಪ್ರವಾದನೆಯು ಹೀಗೆ ಆರಂಭಗೊಳ್ಳುತ್ತದೆ: “ಘನವಸ್ತ್ರಗಳನ್ನು ಧರಿಸಿಕೊಂಡು [“ಹೊಳೆಯುವ ವರ್ಣಗಳ ಉಡುಪುಗಳನ್ನು ತೊಟ್ಟು,” NW] ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ ಎದೋಮಿನ ಬೊಚ್ರದಿಂದ ಬರುವ ಈತನು ಯಾರು?”​—ಯೆಶಾಯ 63:1ಎ.

4 ಶೌರ್ಯವಂತನೂ ವಿಜಯಿಯೂ ಆಗಿರುವ ಯೋಧನೊಬ್ಬನು ಯೆರೂಸಲೇಮಿನ ಕಡೆಗೆ ನಡೆಯುವುದನ್ನು ಯೆಶಾಯನು ನೋಡುತ್ತಾನೆ. ಅವನ ಶೋಭಾಯಮಾನವಾದ ಉಡುಪು ಅವನು ಅತ್ಯುನ್ನತ ಪದವಿಯವನೆಂಬುದನ್ನು ತೋರಿಸುತ್ತದೆ. ಎದೋಮಿನ ಅತಿ ಮುಖ್ಯ ಪಟ್ಟಣವಾದ ಬೊಚ್ರದ ದಿಕ್ಕಿನಿಂದ ಅವನು ಬರುತ್ತಾನೆ. ಇದು ಅವನು ಆ ಶತ್ರು ದೇಶದ ಮೇಲೆ ಮಹಾ ವಿಜಯವನ್ನು ಪಡೆದಿದ್ದಾನೆಂಬುದನ್ನು ಸೂಚಿಸುತ್ತದೆ. ಈ ಯೋಧನು ಯಾರಾಗಿರಬಹುದು? ಕೆಲವು ಮಂದಿ ವಿದ್ವಾಂಸರು ಅವನು ಯೇಸು ಕ್ರಿಸ್ತನು ಎಂದು ಗುರುತಿಸುತ್ತಾರೆ. ಇತರರು, ಅವನು ಯೆಹೂದಿ ಸೇನಾನಾಯಕನಾದ ಜೂಡಸ್‌ ಮ್ಯಾಕಬೀಅಸ್‌ ಎಂದು ನಂಬುತ್ತಾರೆ. ಆದರೆ ಮೇಲಿನ ಪ್ರಶ್ನೆಗೆ ಉತ್ತರಕೊಡುವಾಗ ತಾನು ಯಾರೆಂದು ಆ ಯೋಧನೇ ಹೇಳುತ್ತಾನೆ: “ಸತ್ಯಾನುಸಾರವಾಗಿ ಮಾತಾಡುವ, ರಕ್ಷಿಸಲು ಸಮರ್ಥನಾದ ನಾನೇ.”​—ಯೆಶಾಯ 63:1ಬಿ.

5. ಯೆಶಾಯನು ನೋಡಿದ ಯೋಧನು ಯಾರು, ಮತ್ತು ನೀವು ಹಾಗೇಕೆ ಉತ್ತರಿಸುತ್ತೀರಿ?

5 ಈ ಯೋಧನು ಯೆಹೋವ ದೇವರೇ ಆಗಿದ್ದಾನೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಬೇರೆ ಕಡೆಗಳಲ್ಲಿ ಆತನನ್ನು ‘ಅತಿ ಬಲಾಢ್ಯನು ಮತ್ತು ಮಹಾಶಕ್ತನು’ ಎಂದೂ “ಸತ್ಯಾನುಸಾರ ನುಡಿಯುವವನು” ಎಂದೂ ವರ್ಣಿಸಲಾಗಿದೆ. (ಯೆಶಾಯ 40:26; 45:​19, 23) ಆ ಯೋಧನ ಉಜ್ವಲವಾದ ಉಡುಪುಗಳು, ಕೀರ್ತನೆಗಾರನ ಮಾತುಗಳನ್ನು ನಮಗೆ ಜ್ಞಾಪಕಹುಟ್ಟಿಸುತ್ತವೆ: “ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ಕೃಷ್ಟನು; ಪ್ರಭಾವಮಹತ್ವಗಳಿಂದ ಭೂಷಿತನಾಗಿದ್ದೀ.” (ಕೀರ್ತನೆ 104:1) ಯೆಹೋವನು ಪ್ರೀತಿಯ ದೇವರಾದರೂ ಅಗತ್ಯವಿರುವಾಗ ಆತನು ಯೋಧನ ಪಾತ್ರವನ್ನೂ ವಹಿಸುತ್ತಾನೆಂದು ಬೈಬಲು ತೋರಿಸುತ್ತದೆ.​—⁠ಯೆಶಾಯ 34:2; 1 ಯೋಹಾನ 4:⁠16.

6. ಯೆಹೋವನು ಎದೋಮಿನಲ್ಲಿ ನಡೆದ ಯುದ್ಧದಿಂದ ಹಿಂದಿರುಗುತ್ತಿರುವುದೇಕೆ?

6 ಆದರೆ ಯೆಹೋವನು ಎದೋಮಿನಲ್ಲಿ ನಡೆದ ಯುದ್ಧದಿಂದ ಹಿಂದಿರುಗುವುದೇಕೆ? ತಮ್ಮ ಮೂಲಪಿತನಾದ ಏಸಾವನಿಂದ ಆರಂಭವಾದ ಕಡು ಹಗೆತನವನ್ನು ಮುಂದುವರಿಸಿದ ಎದೋಮ್ಯರು, ಬಹಳ ದೀರ್ಘ ಸಮಯದಿಂದಲೂ ದೇವರ ಒಡಂಬಡಿಕೆಯ ಜನರ ವೈರಿಗಳಾಗಿದ್ದಾರೆ. (ಆದಿಕಾಂಡ 25:​24-34; ಅರಣ್ಯಕಾಂಡ 20:​14-21) ಯೆಹೂದದ ಮೇಲೆ ಎದೋಮ್ಯರಿಗಿದ್ದ ಕಡು ದ್ವೇಷವು ಯೆರೂಸಲೇಮಿನ ಪತನದ ಸಮಯದಲ್ಲಿ ವಿಶೇಷವಾಗಿ ವ್ಯಕ್ತವಾಯಿತು. ಆಗ ಎದೋಮ್ಯರು ಬಾಬೆಲಿನ ಸೈನಿಕರ ಪರವಾಗಿ ಜಯಕಾರವನ್ನೆತ್ತಿದರು. (ಕೀರ್ತನೆ 137:⁠7) ಇಂತಹ ಬದ್ಧದ್ವೇಷವು ಸ್ವತಃ ತನಗೆ ತೋರಿಸಲಾಗುತ್ತಿರುವ ದ್ವೇಷವೆಂದು ಯೆಹೋವನು ಪರಿಗಣಿಸುತ್ತಾನೆ. ಆದುದರಿಂದ, ಎದೋಮ್ಯರ ವಿರುದ್ಧ ಆತನು ಸೇಡಿನ ಕತ್ತಿಯನ್ನು ಬಿಚ್ಚಲು ನಿರ್ಧರಿಸಿದ್ದು ಆಶ್ಚರ್ಯಕರವೇನಲ್ಲ!​—⁠ಯೆಶಾಯ 34:​5-15; ಯೆರೆಮೀಯ 49:​7-22.

7. (ಎ) ಎದೋಮಿನ ವಿರುದ್ಧ ಕೊಟ್ಟ ಪ್ರವಾದನೆಯು ಪ್ರಥಮವಾಗಿ ಹೇಗೆ ನೆರವೇರಿತು? (ಬಿ) ಎದೋಮ್‌ ಏನನ್ನು ಸೂಚಿಸುತ್ತದೆ?

7 ಈ ಕಾರಣದಿಂದ ಯೆಶಾಯನ ದರ್ಶನವು ಯೆರೂಸಲೇಮಿಗೆ ಹಿಂದಿರುಗುತ್ತಿದ್ದ ಯೆಹೂದ್ಯರಿಗೆ ತುಂಬ ಉತ್ತೇಜನದಾಯಕವಾಗಿದೆ. ತಮ್ಮ ಹೊಸ ಬೀಡಿನಲ್ಲಿ ಸುಭದ್ರವಾಸದ ಆಶ್ವಾಸನೆಯನ್ನು ಅದು ಅವರಿಗೆ ನೀಡುತ್ತದೆ. ಹೌದು, ಪ್ರವಾದಿಯಾದ ಮಲಾಕಿಯನ ದಿನಗಳಷ್ಟಕ್ಕೆ, ದೇವರು ಎದೋಮಿನ “ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಕಾಡುನರಿಗಳ ಪಾಲು”ಮಾಡಿದನು. (ಮಲಾಕಿಯ 1:⁠3) ಹಾಗಾದರೆ, ಯೆಶಾಯನ ಪ್ರವಾದನೆಯು ಮಲಾಕಿಯನ ದಿನಗಳಲ್ಲಿ ಪೂರ್ಣವಾಗಿ ನೆರವೇರಿತೆಂಬುದು ಇದರ ಅರ್ಥವೋ? ಇಲ್ಲ, ಏಕೆಂದರೆ ಎದೋಮ್‌ ಹಾಳುಬಿದ್ದರೂ ಅದು ತನ್ನ ಹಾಳುಬಿದ್ದಿದ್ದ ಸ್ಥಳಗಳನ್ನು ಪುನಃ ಕಟ್ಟಲು ನಿರ್ಧರಿಸಿತು ಮತ್ತು ಮಲಾಕಿಯನು ಎದೋಮನ್ನು “ದುಷ್ಟ ಪ್ರಾಂತದವರು” ಮತ್ತು “ಯೆಹೋವನ ನಿತ್ಯಕೋಪಕ್ಕೆ ಈಡಾದ ಜನರು” ಎಂದು ಕರೆಯುವುದನ್ನು ಮುಂದುವರಿಸುತ್ತಾನೆ. * (ಮಲಾಕಿಯ 1:​4, 5) ಆದರೆ ಪ್ರವಾದನಾತ್ಮಕವಾಗಿ, ಎದೋಮ್‌ ಏಸಾವನ ವಂಶಜರಿಗಿಂತ ಹೆಚ್ಚಿನದ್ದನ್ನು ಆವರಿಸುತ್ತದೆ. ಯೆಹೋವನ ಆರಾಧಕರ ಶತ್ರುಗಳಾಗಿ ಪರಿಣಮಿಸುವ ಎಲ್ಲ ಜನಾಂಗಗಳ ಸಂಕೇತವಾಗಿ ಅದು ಕಾರ್ಯನಡಿಸುತ್ತದೆ. ಕ್ರೈಸ್ತಪ್ರಪಂಚದ ಜನಾಂಗಗಳು ಈ ಸಂಬಂಧದಲ್ಲಿ ವಿಶೇಷವಾಗಿ ಪ್ರಮುಖರಾಗಿದ್ದಾರೆ. ಹಾಗಾದರೆ ಈ ಆಧುನಿಕ ದಿನಗಳ ಎದೋಮಿಗೆ ಏನಾಗುವುದು?

ದ್ರಾಕ್ಷೇತೊಟ್ಟಿ

8, 9. (ಎ) ಯೆಶಾಯನು ನೋಡಿದ ಯೋಧನು ಯಾವ ಚಟುವಟಿಕೆಯಲ್ಲಿ ಭಾಗವಹಿಸಿದ್ದಾನೆ? (ಬಿ) ಸಾಂಕೇತಿಕ ದ್ರಾಕ್ಷೇತೊಟ್ಟಿಯು ಯಾವಾಗ ಮತ್ತು ಹೇಗೆ ತುಳಿಯಲ್ಪಡುತ್ತದೆ?

8 ಹಿಂದಿರುಗಿ ಬರುತ್ತಿದ್ದ ಯೋಧನನ್ನು ಯೆಶಾಯನು ಪ್ರಶ್ನಿಸುವುದು: “ನಿನ್ನ ಉಡುಪು ಏಕೆ ಕೆಂಪಾಗಿದೆ, ನಿನ್ನ ವಸ್ತ್ರಗಳು ದ್ರಾಕ್ಷೆಯನ್ನು ತುಳಿಯುವವನ ಬಟ್ಟೆಯ ಹಾಗಿರುವದು ಏಕೆ?” ಆಗ ಯೆಹೋವನು ಉತ್ತರಿಸುವುದು: “ನಾನೊಬ್ಬನಾಗಿಯೇ ದ್ರಾಕ್ಷೆಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ [“ಯಾವ ಮನುಷ್ಯನೂ,” NW] ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ಕಾಲಿನಿಂದ ಹೊಸಗಿದೆನು; ಅವರ ಸಾರವು ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಾಸಿಕೊಂಡೆನು.”​—ಯೆಶಾಯ 63:2, 3.

9 ಈ ವರ್ಣನೆಯ ಮಾತುಗಳು ಕಗ್ಗೊಲೆಯನ್ನು ವರ್ಣಿಸುತ್ತವೆ. ಅಷ್ಟೇಕೆ, ದೇವರ ಸೊಬಗುಳ್ಳ ಉಡುಪುಗಳೂ ದ್ರಾಕ್ಷೇಗಾಣಿಗನ ಬಟ್ಟೆಗಳಂತೆ ರಕ್ತಮಯವಾಗಿವೆ! ದ್ರಾಕ್ಷೇತೊಟ್ಟಿಯು, ಬೋನಿನಲ್ಲಿ ಸಿಲುಕಿಕೊಂಡಿರುವ ಸ್ಥಿತಿಯ ಉಚಿತ ಸಂಕೇತವಾಗಿದೆ. ಯೆಹೋವ ದೇವರು ತನ್ನ ವೈರಿಗಳನ್ನು ನಾಶಮಾಡಲು ಹೊರಡುವಾಗ ಅವರು ಅಂಥ ಸ್ಥಿತಿಯಲ್ಲಿರುತ್ತಾರೆ. ಈ ಸಾಂಕೇತಿಕ ದ್ರಾಕ್ಷೇತೊಟ್ಟಿಯು ತುಳಿಯಲ್ಪಡುವುದು ಯಾವಾಗ? ಯೋವೇಲ ಮತ್ತು ಅಪೊಸ್ತಲ ಯೋಹಾನನ ಪ್ರವಾದನೆಗಳು ಸಹ ಸಾಂಕೇತಿಕ ದ್ರಾಕ್ಷೇತೊಟ್ಟಿಯ ಕುರಿತು ಮಾತಾಡುತ್ತವೆ. ಈ ಪ್ರವಾದನೆಗಳ ದ್ರಾಕ್ಷೇತೊಟ್ಟಿಯು, ಯೆಹೋವನು ಹರ್ಮಗೆದೋನಿನಲ್ಲಿ ತನ್ನ ಶತ್ರುಗಳನ್ನು ನಾಶಗೊಳಿಸುವಾಗ ತುಳಿಯಲ್ಪಡುವುದು. (ಯೋವೇಲ 3:13; ಪ್ರಕಟನೆ 14:​18-20; 16:16) ಯೆಶಾಯನ ಪ್ರವಾದನೆಯ ದ್ರಾಕ್ಷೇತೊಟ್ಟಿಯು ಸಹ ಅದೇ ಸಮಯವನ್ನು ಮುಂತಿಳಿಸುತ್ತದೆ.

10. ಯೆಹೋವನು ತಾನೇ ತೊಟ್ಟಿಯನ್ನು ತುಳಿದೆನೆಂದು ಹೇಳುವುದೇಕೆ?

10 ಆದರೆ, ಜನಾಂಗದವರಲ್ಲಿ ಬೇರೆ ಯಾವ ಮನುಷ್ಯನೂ ಆತನೊಂದಿಗೆ ಇರದೇ, ತಾನೇ ಆ ದ್ರಾಕ್ಷೇತೊಟ್ಟಿಯನ್ನು ತುಳಿದೆನೆಂದು ಯೆಹೋವನು ಹೇಳುವುದೇಕೆ? ದೇವರ ಪ್ರತಿನಿಧಿಯೋಪಾದಿ ಯೇಸು ಕ್ರಿಸ್ತನು ಆ ತೊಟ್ಟಿಯನ್ನು ತುಳಿಯುವುದರಲ್ಲಿ ನಾಯಕತ್ವವನ್ನು ವಹಿಸುವುದಿಲ್ಲವೇ? (ಪ್ರಕಟನೆ 19:​11-16) ಹೌದು, ಆದರೆ ಇಲ್ಲಿ ಯೆಹೋವನು ಯಾವ ಮನುಷ್ಯನೂ ಇದರಲ್ಲಿ ಒಳಗೂಡಿರುವುದಿಲ್ಲವೆಂದು ಹೇಳುತ್ತಾನೆ, ಆತ್ಮ ಜೀವಿಗಳು ಒಳಗೂಡಿರುವುದಿಲ್ಲವೆಂದು ಹೇಳುವುದಿಲ್ಲ. ಸೈತಾನನ ಹಿಂಬಾಲಕರನ್ನು ಭೂಮಿಯಿಂದ ತೆಗೆದುಹಾಕುವ ಕೆಲಸವು ಮನುಷ್ಯರಿಗೆ ಅಸಾಧ್ಯವೆಂದು ಆತನು ಹೇಳುತ್ತಿದ್ದಾನೆ. (ಯೆಶಾಯ 59:​15, 16) ಆದುದರಿಂದ ಅವರನ್ನು, ಪೂರ್ತಿ ನಜ್ಜುಗುಜ್ಜಾಗುವ ತನಕ ತುಳಿಯುವ ಕೆಲಸವು ಸರ್ವಶಕ್ತ ದೇವರಾದ ಯೆಹೋವನಿಗೆ ಬಿಡಲ್ಪಡುತ್ತದೆ.

11. (ಎ) ಯೆಹೋವನು “ಮುಯ್ಯಿ ತೀರಿಸುವ ದಿನ”ವನ್ನು ತರುವುದೇಕೆ? (ಬಿ) ಪುರಾತನ ಕಾಲದಲ್ಲಿ “ಮರುಕೊಳ್ಳಲ್ಪಟ್ಟವರು” ಯಾರಾಗಿದ್ದರು, ಮತ್ತು ಇಂದು ಯಾರಾಗಿದ್ದಾರೆ?

11 ಸ್ವತಃ ತಾನೇ ಆ ಕೆಲಸವನ್ನು ಮಾಡುವುದರ ಕಾರಣವನ್ನು ಯೆಹೋವನು ಇನ್ನೂ ವಿವರಿಸುತ್ತ ಹೇಳುವುದು: “ಏಕಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು [“ಮರುಕೊಳ್ಳಲ್ಪಟ್ಟವರನ್ನು,” NW] ವಿಮೋಚಿಸುವ ವರುಷವು ಒದಗಿತ್ತು.” (ಯೆಶಾಯ 63:4) * ತನ್ನ ಜನರಿಗೆ ಹಾನಿಮಾಡುವವರ ಮೇಲೆ ಸೇಡು ತೀರಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆ. (ಧರ್ಮೋಪದೇಶಕಾಂಡ 32:35) ಪುರಾತನ ಕಾಲದಲ್ಲಿ ಬಾಬೆಲಿನವರ ಕೈಯಿಂದ ಕಷ್ಟಾನುಭವಿಸುತ್ತಿದ್ದ ಯೆಹೂದ್ಯರು “ಮರುಕೊಳ್ಳಲ್ಪಟ್ಟವರು” ಆಗಿದ್ದರು. (ಯೆಶಾಯ 35:10; 43:1; 48:20) ಆಧುನಿಕ ಸಮಯಗಳಲ್ಲಿ ಇವರು ಅಭಿಷಿಕ್ತ ಉಳಿಕೆಯವರಾಗಿದ್ದಾರೆ. (ಪ್ರಕಟನೆ 12:17) ಅವರ ಪ್ರಾಚೀನಕಾಲದ ಪ್ರತಿರೂಪಗಳಂತೆ ಇವರನ್ನೂ ಧಾರ್ಮಿಕ ಬಂಧನದಿಂದ ಮರುಕೊಳ್ಳಲಾಗಿದೆ. ಮತ್ತು ಆ ಯೆಹೂದ್ಯರಂತೆ, ಅಭಿಷಿಕ್ತರೂ ಅವರ “ಬೇರೆ ಕುರಿ” ಸಂಗಾತಿಗಳೂ ಹಿಂಸೆ ಮತ್ತು ವಿರೋಧಗಳಿಗೆ ಬಲಿಯಾಗಿದ್ದಾರೆ. (ಯೋಹಾನ 10:16) ಹೀಗೆ, ಯೆಶಾಯನ ಪ್ರವಾದನೆಯು ಇಂದಿನ ಕ್ರೈಸ್ತರಿಗೆ, ದೇವರು ಕ್ಲುಪ್ತ ಸಮಯದಲ್ಲಿ ಅವರ ಪರವಾಗಿ ಹಸ್ತಕ್ಷೇಪಮಾಡುವನೆಂಬ ಆಶ್ವಾಸನೆಯನ್ನು ನೀಡುತ್ತದೆ.

12, 13. (ಎ) ಯೆಹೋವನಿಗೆ ಯಾವ ವಿಧದಲ್ಲಿ ಯಾವ ಸಹಾಯಕನೂ ಇಲ್ಲ? (ಬಿ) ಯೆಹೋವನ ಹಸ್ತವು ಹೇಗೆ ರಕ್ಷಣೆಯನ್ನು ಒದಗಿಸುತ್ತದೆ, ಮತ್ತು ಆತನ ರೌದ್ರವು ಆತನಿಗೆ ಆಧಾರವಾಗಿರುವುದು ಹೇಗೆ?

12 ಯೆಹೋವನು ಮುಂದುವರಿಸುವುದು: “ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಯಾವ ಬೆಂಬಲವೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆನು; ಆಗ ನನ್ನ ಸ್ವಹಸ್ತವೇ ನನಗೆ ರಕ್ಷಣಸಾಧನವಾಯಿತು, ನನ್ನ ರೌದ್ರವೇ ನನಗೆ ಆಧಾರವಾಯಿತು. ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.”​—ಯೆಶಾಯ 63:5, 6.

13 ಯೆಹೋವನ ಮುಯ್ಯಿ ತೀರಿಸುವ ಮಹಾ ದಿನಕ್ಕೆ ಯಾವ ಮಾನವ ಸಹಾಯಕನೂ ಕೀರ್ತಿಯನ್ನು ತೆಗೆದುಕೊಳ್ಳಲಾರನು. ಅಲ್ಲದೆ, ತನ್ನ ಚಿತ್ತವನ್ನು ನೆರವೇರಿಸಲು ಯೆಹೋವನಿಗೆ ಯಾವ ಮಾನವ ಬೆಂಬಲದ ಅಗತ್ಯವೂ ಇಲ್ಲ. * ಆ ಕೆಲಸವನ್ನು ಪೂರೈಸಲು ಆತನ ಅಪರಿಮಿತ ಶಕ್ತಿಯ ಹಸ್ತವೇ ಸಾಕು. (ಕೀರ್ತನೆ 44:3; 98:1; ಯೆರೆಮೀಯ 27:⁠5) ಇದಲ್ಲದೆ ಆತನ ರೌದ್ರವು ಆತನಿಗೆ ಆಧಾರವಾಗಿರುತ್ತದೆ. ಇದು ಹೇಗೆ? ಹೇಗೆಂದರೆ, ದೇವರ ರೌದ್ರವು ಅನಿಯಂತ್ರಿತವಾದ ಉದ್ರೇಕವಲ್ಲ, ಬದಲಿಗೆ ನ್ಯಾಯವಾದ ಕೋಪವಾಗಿದೆ. ಯೆಹೋವನು ಸದಾ ನೀತಿಯ ಮೂಲತತ್ತ್ವಗಳ ಆಧಾರದ ಮೇಲೆ ಕ್ರಿಯೆಗೈಯುವುದರಿಂದ, ಆತನ ರೌದ್ರವು ಆತನ ಶತ್ರುಗಳ “ಸಾರವನ್ನು ಸುರಿಸಿ” “ನೆಲದ ಮೇಲೆ” ತಂದು, ಅವರಿಗೆ ಅವಮಾನ ಮತ್ತು ಸೋಲನ್ನು ಉಂಟುಮಾಡುವಂತೆ ಆತನಿಗೆ ಬೆಂಬಲ ನೀಡುತ್ತದೆ ಮತ್ತು ಪ್ರಚೋದಿಸುತ್ತದೆ.​—⁠ಕೀರ್ತನೆ 75:8; ಯೆಶಾಯ 25:10; 26:⁠5.

ದೇವರ ಪ್ರೀತಿಪೂರ್ವಕ ದಯೆಗಳು

14. ಈಗ ಯೆಶಾಯನು ಯಾವ ಯೋಗ್ಯವಾದ ಮರುಜ್ಞಾಪನಗಳನ್ನು ಕೊಡುತ್ತಾನೆ?

14 ಹಿಂದಿನ ಕಾಲಗಳಲ್ಲಿ ಯೆಹೋವನು ತಮ್ಮ ಪರವಾಗಿ ಮಾಡಿದ ವಿಷಯಗಳಿಗಾಗಿ ಯೆಹೂದ್ಯರು ಬೇಗನೆ ಗಣ್ಯತೆಯನ್ನು ಕಳೆದುಕೊಂಡರು. ಆದಕಾರಣ ಯೆಹೋವನು ಅಂತಹ ಕಾರ್ಯಗಳನ್ನು ಏಕೆ ಮಾಡಿದನೆಂಬುದನ್ನು ಯೆಶಾಯನು ಯೋಗ್ಯವಾಗಿಯೇ ಅವರಿಗೆ ಜ್ಞಾಪಕಹುಟ್ಟಿಸುತ್ತಾನೆ. ಯೆಶಾಯನು ಪ್ರಕಟಿಸುವುದು: “ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನೂ [“ಪ್ರೀತಿಪೂರ್ವಕ ದಯೆಗಳನ್ನೂ,” NW] ಸ್ತುತ್ಯಕೃತ್ಯಗಳನ್ನೂ ಆತನು ಕನಿಕರದಿಂದಲೂ ಕೃಪಾತಿಶಯದಿಂದಲೂ ಇಸ್ರಾಯೇಲ್‌ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು. ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸಮಾಡಲಾರರು ಎಂದು ಆತನು ಅಂದುಕೊಂಡು ಅವರಿಗೆ ರಕ್ಷಕನಾದನು. ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಶ್ರೀಮುಖ ಸ್ವರೂಪದೂತನು [“ವೈಯಕ್ತಿಕ ದೂತನು,” NW] ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ ಪುರಾತನಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.”​—ಯೆಶಾಯ 63:​7-9.

15. ಯೆಹೋವನು ಐಗುಪ್ತದಲ್ಲಿದ್ದ ಅಬ್ರಹಾಮನ ಸಂತತಿಗೆ ಪ್ರೀತಿಪೂರ್ವಕವಾದ ದಯೆಯನ್ನು ಹೇಗೆ ಮತ್ತು ಏಕೆ ತೋರಿಸಿದನು?

15 ಪ್ರೀತಿಪೂರ್ವಕ ದಯೆ ಅಥವಾ ನಿಷ್ಠೆಯ ಪ್ರೀತಿಯನ್ನು ತೋರಿಸುವುದರಲ್ಲಿ ಯೆಹೋವನು ಎಂತಹ ಎದ್ದುಕಾಣುವ ಮಾದರಿಯನ್ನಿಡುತ್ತಾನೆ! (ಕೀರ್ತನೆ 36:7; 62:12) ಯೆಹೋವನು ಅಬ್ರಹಾಮನೊಂದಿಗೆ ಪ್ರೀತಿಪೂರ್ವಕವಾದ ಅಂಟಿಕೆಯನ್ನು ಬೆಳೆಸಿಕೊಂಡನು. (ಮೀಕ 7:20) ಅವನ ಸಂತಾನ ಅಥವಾ ಸಂತತಿಯ ಮೂಲಕ ಭೂಮಿಯ ಎಲ್ಲ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳುವವು ಎಂದು ಆತನು ಆ ಮೂಲಪಿತನಿಗೆ ವಚನಕೊಟ್ಟನು. (ಆದಿಕಾಂಡ 22:​17, 18) ಯೆಹೋವನು ಆ ವಾಗ್ದಾನಕ್ಕೆ ಅಂಟಿಕೊಂಡು, ಇಸ್ರಾಯೇಲ್ಯರಿಗೆ ಅತ್ಯಧಿಕ ರೀತಿಯಲ್ಲಿ ಒಳ್ಳೆತನವನ್ನು ತೋರಿಸಿದನು. ಆತನ ನಿಷ್ಠೆಯ ಕಾರ್ಯಗಳಲ್ಲಿ ಪ್ರಧಾನವಾದ ಒಂದು ಕಾರ್ಯವು, ಅಬ್ರಹಾಮನ ಸಂತತಿಯನ್ನು ಐಗುಪ್ತದ ದಾಸತ್ವದೊಳಗಿಂದ ಬಿಡುಗಡೆ ಮಾಡಿದ್ದೇ ಆಗಿತ್ತು.​—⁠ವಿಮೋಚನಕಾಂಡ 14:⁠30.

16. (ಎ) ಯೆಹೋವನು ಇಸ್ರಾಯೇಲ್ಯರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಾಗ ಆತನಿಗೆ ಯಾವ ದೃಷ್ಟಿಕೋನವಿತ್ತು? (ಬಿ) ದೇವರು ತನ್ನ ಜನರೊಂದಿಗೆ ಹೇಗೆ ವ್ಯವಹರಿಸುತ್ತಾನೆ?

16 ಇಸ್ರಾಯೇಲ್ಯರನ್ನು ಅಲ್ಲಿಂದ ಬಿಡುಗಡೆಗೊಳಿಸಿದ ನಂತರ, ಯೆಹೋವನು ಅವರನ್ನು ಸೀನಾಯಿ ಬೆಟ್ಟಕ್ಕೆ ಕರೆತಂದು, “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ . . . ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ” ಎಂಬ ವಾಗ್ದಾನವನ್ನು ಮಾಡಿದನು. (ವಿಮೋಚನಕಾಂಡ 19:5, 6) ಹೀಗೆ ಹೇಳುವ ಮೂಲಕ ಯೆಹೋವನು ಅವರನ್ನು ಮೋಸಗೊಳಿಸಿದನೊ? ಇಲ್ಲ, ಏಕೆಂದರೆ “ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸಮಾಡಲಾರರು” ಎಂದು ಯೆಹೋವನು ತನ್ನೊಳಗೆ ಹೇಳಿಕೊಂಡನೆಂದು ಯೆಶಾಯನು ತಿಳಿಸುತ್ತಾನೆ. ಒಬ್ಬ ವಿದ್ವಾಂಸರು ಹೇಳುವುದು: “ಇಲ್ಲಿ ಉಪಯೋಗಿಸಿರುವ ‘ನಿಜವಾಗಿ’ ಎಂಬ ಪದವು, ಪರಮಾಧಿಕಾರದ ಆಜ್ಞೆಯಾಗಲಿ ಮುನ್ನರಿವಾಗಲಿ ಆಗಿರುವುದಿಲ್ಲ; ಅದು ಪ್ರೀತಿಯ ನಿರೀಕ್ಷೆಯೂ ಭರವಸೆಯೂ ಆಗಿದೆ.” ಹೌದು, ಯೆಹೋವನು ತನ್ನ ಒಡಂಬಡಿಕೆಯನ್ನು ಪ್ರಾಮಾಣಿಕ ಉದ್ದೇಶದಿಂದ, ತನ್ನ ಜನರು ಸಾಫಲ್ಯ ಪಡೆಯಬೇಕೆಂಬ ಯಥಾರ್ಥ ಬಯಕೆಯಿಂದ ಮಾಡಿದನು. ಅವರ ದೋಷಗಳು ಸುವ್ಯಕ್ತವಾಗಿದ್ದರೂ ಆತನು ಅವರಲ್ಲಿ ಭರವಸೆಯನ್ನು ತೋರಿಸಿದನು. ತನ್ನ ಆರಾಧಕರಲ್ಲಿ ಈ ರೀತಿಯ ಭರವಸೆಯನ್ನು ತೋರಿಸುವಂತಹ ಒಬ್ಬ ದೇವರನ್ನು ಆರಾಧಿಸುವುದು ಅದೆಷ್ಟು ಅದ್ಭುತಕರವಾದದ್ದಾಗಿದೆ! ಇಂದು ಹಿರಿಯರು ದೇವಜನರ ಮೂಲ ಒಳ್ಳೇತನದಲ್ಲಿ ತದ್ರೀತಿಯ ಭರವಸೆಯನ್ನು ತೋರಿಸುವಾಗ, ತಮ್ಮ ವಶಕ್ಕೆ ಒಪ್ಪಿಸಲ್ಪಟ್ಟಿರುವವರನ್ನು ಬಲಪಡಿಸಲು ಅವರು ಹೆಚ್ಚನ್ನು ಮಾಡುತ್ತಾರೆ.​—⁠2 ಥೆಸಲೊನೀಕ 3:4; ಇಬ್ರಿಯ 6:​9, 10.

17. (ಎ) ಯೆಹೋವನಿಗೆ ಇಸ್ರಾಯೇಲ್ಯರ ಮೇಲಿದ್ದ ಪ್ರೀತಿಗೆ ಆತನು ಯಾವ ರುಜುವಾತನ್ನು ಕೊಡುತ್ತಾನೆ? (ಬಿ) ನಮಗೆ ಇಂದು ಯಾವ ಭರವಸೆಯಿರಸಾಧ್ಯವಿದೆ?

17 ಆದರೂ, ಕೀರ್ತನೆಗಾರನು ಇಸ್ರಾಯೇಲ್ಯರ ಕುರಿತು ಹೇಳುವುದು: ‘ಐಗುಪ್ತದಲ್ಲಿ ಮಹತ್ತುಗಳನ್ನು ನಡಿಸಿದ ತಮ್ಮ ರಕ್ಷಕನಾದ ದೇವರನ್ನು ಅವರು ಮರೆತೇ ಬಿಟ್ಟರು.’ (ಕೀರ್ತನೆ 106:​21, 22) ಅವರ ಅವಿಧೇಯ ಮತ್ತು ಮೊಂಡ ಮನೋಭಾವವು ಅನೇಕವೇಳೆ ಅವರ ಮೇಲೆ ವಿಪತ್ಕಾರಕ ಸನ್ನಿವೇಶಗಳನ್ನು ತಂದಿತ್ತು. (ಧರ್ಮೋಪದೇಶಕಾಂಡ 9:⁠6) ಇದಕ್ಕಾಗಿ ಯೆಹೋವನು ಅವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸುವುದನ್ನು ನಿಲ್ಲಿಸಿಬಿಟ್ಟನೊ? ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು” ಎಂದು ಯೆಶಾಯನು ಹೇಳುತ್ತಾನೆ. ಯೆಹೋವನಿಗೆ ಎಷ್ಟು ಸಹಾನುಭೂತಿಯಿದೆ! ತನ್ನ ಮಕ್ಕಳ ಕಷ್ಟಾನುಭವವನ್ನು ನೋಡಿ, ಒಂದುವೇಳೆ ಆ ಅನುಭವವು ಅವರ ಮೂರ್ಖತನದಿಂದಲೇ ಆಗಿದ್ದರೂ, ಪ್ರೀತಿಯುಳ್ಳ ತಂದೆಯೊಬ್ಬನ ಮನಸ್ಸಿಗೆ ನೋವಾಗುವಂತೆ ಯೆಹೋವನಿಗೂ ನೋವಾಯಿತು. ಆದಕಾರಣ, ಮುಂತಿಳಿಸಲ್ಪಟ್ಟಂತೆ ಮತ್ತು ತನ್ನ ಪ್ರೀತಿಯ ಪುರಾವೆಯಾಗಿ ಆತನು ಅವರನ್ನು ವಾಗ್ದತ್ತ ದೇಶಕ್ಕೆ ನಡೆಸಲು ತನ್ನ ‘ವೈಯಕ್ತಿಕ ದೂತನನ್ನು,’ ಪ್ರಾಯಶಃ ಮಾನವಪೂರ್ವ ಅಸ್ತಿತ್ವದಲ್ಲಿದ್ದ ಯೇಸುವನ್ನು ಕಳುಹಿಸಿದನು. (ವಿಮೋಚನಕಾಂಡ 23:20) ಹೀಗೆ ಯೆಹೋವನು ಆ ಜನಾಂಗವನ್ನು, “ಮಗನನ್ನು ತಂದೆ ಹೇಗೋ ಹಾಗೆಯೇ” ಎತ್ತಿ ಹೊತ್ತುಕೊಂಡು ಹೋದನು. (ಧರ್ಮೋಪದೇಶಕಾಂಡ 1:31; ಕೀರ್ತನೆ 106:10) ಅಂತೆಯೇ ಯೆಹೋವನಿಗೆ ಇಂದು ಸಹ ನಮ್ಮ ಕಷ್ಟಾನುಭವಗಳ ಅರಿವಿದೆ ಮತ್ತು ನಾವು ಸಂಕಟಕರ ಪರಿಸ್ಥಿತಿಗಳಲ್ಲಿರುವಾಗ ಆತನ ಮನಸ್ಸಿಗೆ ನೋವಾಗುತ್ತದೆಂಬ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು. ನಾವು ಭರವಸೆಯಿಂದ, ‘ನಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಬಹುದು, ಏಕೆಂದರೆ ಆತನು ನಮಗೋಸ್ಕರ ಚಿಂತಿಸುತ್ತಾನೆ.’​—⁠1 ಪೇತ್ರ 5:⁠7.

ದೇವರು ಶತ್ರುವಾಗುತ್ತಾನೆ

18. ಯೆಹೋವನು ತನ್ನ ಜನರ ಶತ್ರುವಾದದ್ದು ಏಕೆ?

18 ಆದರೆ ದೇವರ ಪ್ರೀತಿಪೂರ್ವಕ ದಯೆಯನ್ನು ನಾವು ದುರುಪಯೋಗಿಸಿಕೊಳ್ಳಬಾರದು. ಯೆಶಾಯನು ಮುಂದುವರಿಸುವುದು: “ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮನನ್ನು ದುಃಖಪಡಿಸಿದರು; ಆದದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.” (ಯೆಶಾಯ 63:10) ತಾನು ಕನಿಕರವೂ ದಯೆಯೂ ಉಳ್ಳ ದೇವರಾದರೂ “[ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು” ಎಂದು ಯೆಹೋವನು ಎಚ್ಚರಿಸಿದನು. (ವಿಮೋಚನಕಾಂಡ 34:​6, 7) ಆದರೆ ಇಸ್ರಾಯೇಲ್ಯರು ದಂಗೆಯ ಒಂದು ನಮೂನೆಯನ್ನೇ ಸ್ಥಾಪಿಸಿ ತಮ್ಮನ್ನು ಶಿಕ್ಷೆಯ ದಾರಿಯಲ್ಲಿ ನಿಲ್ಲಿಸಿಕೊಂಡರು. ಮೋಶೆ ಅವರಿಗೆ ಜ್ಞಾಪಕಹುಟ್ಟಿಸಿದ್ದು: “ನೀವು ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಹುಟ್ಟಿಸಿದ್ದನ್ನು ನೆನಪುಮಾಡಿಕೊಳ್ಳಿರಿ; ಅದನ್ನು ಮರೆಯಬೇಡಿರಿ. ನೀವು ಐಗುಪ್ತದೇಶವನ್ನು ಬಿಟ್ಟಂದಿನಿಂದ ಈ ಸ್ಥಳಕ್ಕೆ ಬಂದ ದಿನದ ವರೆಗೂ ಯೆಹೋವನ ಆಜ್ಞೆಗಳನ್ನು ಧಿಕ್ಕರಿಸುವವರಾಗಿದ್ದಿರಿ.” (ಧರ್ಮೋಪದೇಶಕಾಂಡ 9:7) ಹೀಗೆ, ದೇವರಾತ್ಮದ ಹಿತಕರವಾದ ಪರಿಣಾಮಗಳನ್ನು ಪ್ರತಿಭಟಿಸುವ ಮೂಲಕ ಅವರು ಅದನ್ನು ನೋಯಿಸಿದರು ಅಥವಾ ದುಃಖಪಡಿಸಿದರು. (ಎಫೆಸ 4:30) ಅವರು ಯೆಹೋವನನ್ನು ತಮ್ಮ ಶತ್ರುವಾಗುವಂತೆ ನಿರ್ಬಂಧಿಸಿದ್ದಾರೆ.​—⁠ಯಾಜಕಕಾಂಡ 26:17; ಧರ್ಮೋಪದೇಶಕಾಂಡ 28:⁠63.

19, 20. ಯೆಹೂದ್ಯರು ಯಾವ ವಿಷಯಗಳನ್ನು ಜ್ಞಾಪಿಸಿಕೊಳ್ಳುತ್ತಾರೆ, ಮತ್ತು ಏಕೆ?

19 ತಮ್ಮ ಸಂಕಷ್ಟದ ಮಧ್ಯದಲ್ಲಿ ಕೆಲವು ಮಂದಿ ಯೆಹೂದ್ಯರು ಗತಕಾಲದ ಕುರಿತು ಯೋಚಿಸುವಂತೆ ಪ್ರೇರಿಸಲ್ಪಡುತ್ತಾರೆ. ಯೆಶಾಯನು ಹೇಳುವುದು: “ಆಗ ಆತನ ಜನರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗಂದರು​—⁠ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದರಿಸುತ್ತಾ ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಭೇದಿಸಿ ಸಾಗರದ ಅಡಿಯಲ್ಲಿ ಅವರನ್ನು ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಮುಗ್ಗರಿಸದಂತೆ ನಡೆಯಿಸಿದಾತನು ಎಲ್ಲಿ? ಯೆಹೋವನ ಆತ್ಮವು ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಅವರನ್ನು ವಿಶ್ರಮಸ್ಥಾನಕ್ಕೆ ಕರತಂದಿತು.”​—ಯೆಶಾಯ 63:​11-14ಎ.

20 ಹೌದು, ಅವಿಧೇಯತೆಯ ಫಲವಾದ ಕಷ್ಟಗಳನ್ನು ಅನುಭವಿಸುತ್ತಿದ್ದ ಯೆಹೂದ್ಯರು, ಯೆಹೋವನು ವೈರಿಯಾಗಿರುವ ಬದಲು ತಮ್ಮ ವಿಮೋಚಕನಾಗಿದ್ದ ದಿನಗಳಿಗಾಗಿ ಹಾತೊರೆಯುತ್ತಾರೆ. ತಮ್ಮ “ಕುರುಬರು” ಆಗಿದ್ದ ಮೋಶೆ ಮತ್ತು ಆರೋನರು ತಮ್ಮನ್ನು ಸುರಕ್ಷಿತವಾಗಿ ಕೆಂಪು ಸಮುದ್ರವನ್ನು ದಾಟಿಸಿದ್ದನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. (ಕೀರ್ತನೆ 77:20; ಯೆಶಾಯ 51:10) ದೇವರಾತ್ಮವನ್ನು ನೋಯಿಸುವ ಬದಲು, ಅದು ಮೋಶೆ ಮತ್ತು ಬೇರೆ ಆತ್ಮನೇಮಿತ ಹಿರೀ ಪುರುಷರ ಮಾರ್ಗದರ್ಶನದಲ್ಲಿ ಅವರನ್ನು ನಡಿಸಿದ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾರೆ. (ಅರಣ್ಯಕಾಂಡ 11:​16, 17) ಯೆಹೋವನ ಶಕ್ತಿಯುತವಾದ “ಘನಹಸ್ತವು” ಮೋಶೆಯ ಮೂಲಕ ತಮ್ಮ ಪರವಾಗಿ ಉಪಯೋಗಿಸಲ್ಪಟ್ಟದ್ದನ್ನೂ ಅವರು ನೆನಪಿಸಿಕೊಳ್ಳುತ್ತಾರೆ! ಬಳಿಕ, ತಕ್ಕ ಸಮಯದಲ್ಲಿ ದೇವರು ಅವರನ್ನು ಆ ದೊಡ್ಡದಾದ ಭಯಂಕರ ಅರಣ್ಯದಿಂದ ಹಾಲೂ ಜೇನೂ ಹರಿಯುವ ದೇಶಕ್ಕೆ​—⁠ವಿಶ್ರಮಸ್ಥಾನಕ್ಕೆ​—⁠ನಡೆಸುತ್ತಾನೆ. (ಧರ್ಮೋಪದೇಶಕಾಂಡ 1:19; ಯೆಹೋಶುವ 5:6; 22:⁠4) ಆದರೆ ಈಗ, ದೇವರೊಂದಿಗೆ ತಮಗಿದ್ದ ಅನುಕೂಲಕರವಾದ ಸಂಬಂಧವನ್ನು ಕಳೆದುಕೊಂಡಿದ್ದ ಕಾರಣ ಅವರು ಕಷ್ಟಾನುಭವಿಸುತ್ತಿದ್ದಾರೆ!

‘ತನಗಾಗಿ ಸುಂದರ ನಾಮ’

21. (ಎ) ದೇವರ ಹೆಸರಿನ ಸಂಬಂಧದಲ್ಲಿ ಇಸ್ರಾಯೇಲ್ಯರಿಗೆ ಯಾವ ಮಹಾ ಸುಯೋಗವಿರಸಾಧ್ಯವಿತ್ತು? (ಬಿ) ಅಬ್ರಹಾಮನ ವಂಶಸ್ಥರನ್ನು ಐಗುಪ್ತದಿಂದ ಬಿಡುಗಡೆಮಾಡಲು ದೇವರಿಗಿದ್ದ ಪ್ರಮುಖ ಕಾರಣವು ಯಾವುದು?

21 ಆದರೂ, ಇಸ್ರಾಯೇಲ್ಯರು ಎಸೆದು ಬಿಟ್ಟಿದ್ದ ಸುಯೋಗ, ಅಂದರೆ ದೇವರ ನಾಮವನ್ನು ಮಹಿಮೆಪಡಿಸುವ ಸುಯೋಗದ ನಷ್ಟದೆದುರಿಗೆ, ಅವರಿಗಾದ ಪ್ರಾಪಂಚಿಕ ನಷ್ಟವು ಕ್ಷುಲ್ಲಕವೇ ಸರಿ. ಮೋಶೆ ಇಸ್ರಾಯೇಲ್ಯರಿಗೆ ವಚನಕೊಟ್ಟದ್ದು: “ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ ಆತನು ವಾಗ್ದಾನಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು. ಭೂಮಿಯಲ್ಲಿರುವ ಎಲ್ಲಾ ಜನಗಳೂ ನಿಮ್ಮನ್ನು ಯೆಹೋವನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.” (ಧರ್ಮೋಪದೇಶಕಾಂಡ 28:9, 10) ಯೆಹೋವನು ಅಬ್ರಹಾಮನ ವಂಶಸ್ಥರ ಪರವಾಗಿ ಕ್ರಿಯೆಗೈದು, ಐಗುಪ್ತದ ದಾಸತ್ವದಿಂದ ಅವರನ್ನು ಬಿಡುಗಡೆಮಾಡಿದಾಗ, ಆತನು ಅವರ ಜೀವನವು ಅನುಕೂಲಕರವಾಗಿರಲಿ ಅಥವಾ ಸುಗಮವಾಗಿರಲಿ ಎಂಬ ಉದ್ದೇಶದಿಂದ ಮಾತ್ರ ಹಾಗೆ ಮಾಡಲಿಲ್ಲ. ಆತನು ಅದಕ್ಕಿಂತಲೂ ಪ್ರಾಮುಖ್ಯವಾದ ಉದ್ದೇಶದಿಂದ, ತನ್ನ ನಾಮಕ್ಕಾಗಿ ಈ ರೀತಿ ಕ್ರಿಯೆಗೈದನು. ಹೌದು, ತನ್ನ ನಾಮವು “ಲೋಕದಲ್ಲೆಲ್ಲಾ ಪ್ರಸಿದ್ಧಿ”ಪಡಿಸಲ್ಪಡುತ್ತಿದೆ ಎಂಬುದನ್ನು ಅವನು ಖಾತ್ರಿಪಡಿಸಿಕೊಳ್ಳುತ್ತಿದ್ದನು. (ವಿಮೋಚನಕಾಂಡ 9:​15, 16) ಮತ್ತು ಅರಣ್ಯದಲ್ಲಿ ಇಸ್ರಾಯೇಲ್ಯರು ದಂಗೆಯೆದ್ದ ಬಳಿಕ ದೇವರು ಕರುಣೆಯನ್ನು ತೋರಿಸಿದ್ದು ಕೇವಲ ಭಾವಾವೇಶದ ಕಾರಣದಿಂದಲ್ಲ. ಯೆಹೋವನು ತಾನೇ ಹೇಳಿದ್ದು: “ಅವರ ಸುತ್ತಣ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.”​—⁠ಯೆಹೆಜ್ಕೇಲ 20:8-10.

22. (ಎ) ಭವಿಷ್ಯದಲ್ಲಿ ದೇವರು ತನ್ನ ಜನರ ಪರವಾಗಿ ಪುನಃ ಹೋರಾಡುವುದೇಕೆ? (ಬಿ) ದೇವರ ನಾಮಕ್ಕಾಗಿ ನಮಗಿರುವ ಪ್ರೀತಿಯು ನಮ್ಮ ಕ್ರಿಯೆಗಳನ್ನು ಯಾವ ವಿಧಗಳಲ್ಲಿ ಪ್ರಭಾವಿಸುತ್ತದೆ?

22 ಆ ಬಳಿಕ ಯೆಶಾಯನು ತನ್ನ ಈ ಪ್ರವಾದನೆಗೆ ಎಷ್ಟು ಶಕ್ತಿಯುತವಾದ ಸಮಾಪ್ತಿಯನ್ನು ಕೊಡುತ್ತಾನೆ! ಅವನು ಹೇಳುವುದು: “ನಿನ್ನ ನಾಮವನ್ನು ಘನಪಡಿಸಿಕೊಳ್ಳುವದಕ್ಕಾಗಿ [“ನಿನಗಾಗಿ ಸುಂದರ ನಾಮವನ್ನು ಮಾಡಿಕೊಳ್ಳುವುದಕ್ಕಾಗಿ,” NW] ನಿನ್ನ ಜನರನ್ನು ಹೀಗೆ ನಡಿಸಿದಿ.” (ಯೆಶಾಯ 63:14ಬಿ) ಯೆಹೋವನು ತನ್ನ ಜನರ ಅಭಿರುಚಿಗಳ ಪರವಾಗಿ ಏಕೆ ಪ್ರಬಲವಾಗಿ ಹೋರಾಡುತ್ತಾನೆಂದು ನಾವೀಗ ಸ್ಪಷ್ಟವಾಗಿ ನೋಡಬಲ್ಲೆವು. ತನಗಾಗಿ ಒಂದು ಸುಂದರವಾದ ನಾಮವನ್ನು ಮಾಡಿಕೊಳ್ಳಲಿಕ್ಕಾಗಿಯೇ. ಹೀಗೆ, ಯೆಹೋವನ ನಾಮವನ್ನು ಧರಿಸುವುದು ಒಂದು ಗೌರವದ ಸುಯೋಗವೂ ಮಹಾ ಜವಾಬ್ದಾರಿಯೂ ಆಗಿದೆಯೆಂಬುದಕ್ಕೆ ಯೆಶಾಯನ ಪ್ರವಾದನೆಯು ಬಲಾಢ್ಯವಾದ ಮರುಜ್ಞಾಪನವಾಗಿದೆ. ಇಂದು ಸತ್ಯ ಕ್ರೈಸ್ತರು ಯೆಹೋವನ ಹೆಸರನ್ನು ತಮ್ಮ ಸ್ವಂತ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. (ಯೆಶಾಯ 56:6; ಇಬ್ರಿಯ 6:10) ಆ ಪವಿತ್ರ ನಾಮಕ್ಕೆ ಅವಮಾನವನ್ನು ತರಸಾಧ್ಯವಿರುವ ಯಾವುದೇ ಕೆಲಸವನ್ನು ಮಾಡಲು ಅವರು ಹೇಸುತ್ತಾರೆ. ಅವರು ದೇವರಿಗೆ ನಿಷ್ಠರಾಗಿರುವ ಮೂಲಕ ಆತನ ನಿಷ್ಠೆಯ ಪ್ರೀತಿಗೆ ಪ್ರತಿಕ್ರಿಯೆ ತೋರಿಸುತ್ತಾರೆ. ಮತ್ತು ಅವರು ಯೆಹೋವನ ಸುಂದರ ನಾಮವನ್ನು ಪ್ರೀತಿಸುವ ಕಾರಣ, ಆತನು ತನ್ನ ಶತ್ರುಗಳನ್ನು ತನ್ನ ಕೋಪದ ದ್ರಾಕ್ಷೇತೊಟ್ಟಿಯಲ್ಲಿ ಹಾಕಿ ತುಳಿಯುವ ದಿನಕ್ಕಾಗಿ ಅವರು ಹಾತೊರೆಯುತ್ತಾರೆ. ಅವರು ಹಾಗೆ ಹಾತೊರೆಯುವುದು ಕೇವಲ ತಮಗೆ ಪ್ರಯೋಜನ ಸಿಗುತ್ತದೆಂಬ ಕಾರಣಕ್ಕಾಗಿ ಮಾತ್ರವಲ್ಲ, ತಾವು ಪ್ರೀತಿಸುವ ದೇವರ ನಾಮದ ಪವಿತ್ರೀಕರಣಕ್ಕೆ ಅದು ನಡೆಸುವುದರಿಂದಲೇ.​—⁠ಮತ್ತಾಯ 6:⁠9.

[ಪಾದಟಿಪ್ಪಣಿಗಳು]

^ ಪ್ಯಾರ. 7 ಸಾ.ಶ. ಒಂದನೆಯ ಶತಮಾನದ ಹೆರೋದ ರಾಜರು ಎದೋಮ್ಯರಾಗಿದ್ದರು.

^ ಪ್ಯಾರ. 11 “ನನ್ನ ಮರುಕೊಳ್ಳಲ್ಪಟ್ಟವರನ್ನು ವಿಮೋಚಿಸುವ ವರುಷ” ಎಂಬ ಮಾತುಗಳು, “ಮುಯ್ಯಿ ತೀರಿಸುವ ದಿನ” ಎಂಬ ಮಾತುಗಳು ಸೂಚಿಸುವಷ್ಟೇ ಕಾಲಾವಧಿಯನ್ನು ಸೂಚಿಸಬಹುದು. ತದ್ರೀತಿಯ ಮಾತುಗಳು ಸಮಾಂತರವಾಗಿ ಉಪಯೋಗಿಸಲ್ಪಟ್ಟಿರುವುದನ್ನು ಯೆಶಾಯ 34:8ರಲ್ಲಿ ಗಮನಿಸಿ.

^ ಪ್ಯಾರ. 13 ಯಾರೂ ಬೆಂಬಲ ನೀಡಲು ಮುಂದೆಬರದಿದ್ದದ್ದನ್ನು ಕಂಡು ಯೆಹೋವನು ಸ್ತಬ್ಧನಾಗುತ್ತಾನೆ. ಯೇಸು ಮರಣಹೊಂದಿ ಸುಮಾರು 2,000 ವರ್ಷಗಳು ಗತಿಸಿದ ಬಳಿಕವೂ, ಮಾನವಕುಲದವರಲ್ಲಿ ಬಲಾಢ್ಯರು ದೇವರ ಚಿತ್ತವನ್ನು ಈಗಲೂ ವಿರೋಧಿಸುತ್ತಿರುವುದು ನಿಜವಾಗಿಯೂ ಸ್ತಬ್ಧತೆಯನ್ನುಂಟುಮಾಡುವ ವಿಷಯವಾಗಿರಬಹುದು.​—⁠ಕೀರ್ತನೆ 2:​2-12; ಯೆಶಾಯ 59:⁠16.

[ಅಧ್ಯಯನ ಪ್ರಶ್ನೆಗಳು]

[ಪುಟ 359ರಲ್ಲಿರುವ ಚಿತ್ರ]

ತನ್ನ ಜನರ ಕುರಿತಾಗಿ ಯೆಹೋವನಿಗೆ ಘನವಾದ ನಿರೀಕ್ಷೆಗಳಿದ್ದವು