ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಮೆಸ್ಸೀಯ ಸೇವಕನನ್ನು ಘನತೆಗೇರಿಸುತ್ತಾನೆ

ಯೆಹೋವನು ತನ್ನ ಮೆಸ್ಸೀಯ ಸೇವಕನನ್ನು ಘನತೆಗೇರಿಸುತ್ತಾನೆ

ಅಧ್ಯಾಯ ಹದಿನಾಲ್ಕು

ಯೆಹೋವನು ತನ್ನ ಮೆಸ್ಸೀಯ ಸೇವಕನನ್ನು ಘನತೆಗೇರಿಸುತ್ತಾನೆ

ಯೆಶಾಯ 52:13-53:12

1, 2. (ಎ) ಸಾ.ಶ. ಒಂದನೆಯ ಶತಮಾನದ ಆದಿ ಭಾಗದಲ್ಲಿ ಅನೇಕ ಮಂದಿ ಯೆಹೂದ್ಯರ ಮುಂದಿದ್ದ ಸನ್ನಿವೇಶವನ್ನು ಚಿತ್ರಿಸಿರಿ. (ಬಿ) ನಂಬಿಗಸ್ತ ಯೆಹೂದ್ಯರು ಮೆಸ್ಸೀಯನನ್ನು ಗುರುತಿಸಲಾಗುವಂತೆ ಯೆಹೋವನು ಯಾವ ಏರ್ಪಾಡನ್ನು ಮಾಡಿದ್ದನು?

ನಿಮಗೆ ಒಬ್ಬ ಪ್ರಮುಖ ಉನ್ನತಾಧಿಕಾರಿಯನ್ನು ಭೇಟಿಯಾಗಲಿಕ್ಕಿದೆ ಎಂದು ಭಾವಿಸಿ. ಭೇಟಿಯ ಸಮಯ ಮತ್ತು ಸ್ಥಳ ನಿಶ್ಚಯವಾಗಿದೆ. ಆದರೆ ಸಮಸ್ಯೆ ಏನಂದರೆ, ಅವನು ಹೇಗೆ ಕಾಣುತ್ತಾನೆ ಎಂಬುದು ನಿಮಗೆ ಗೊತ್ತಿಲ್ಲ. ಅಷ್ಟುಮಾತ್ರವಲ್ಲ ಅವನು ಯಾವುದೇ ಆಡಂಬರವಿಲ್ಲದೆ ಪ್ರಯಾಣಿಸಲಿದ್ದಾನೆ. ಹೀಗಿರುವುದರಿಂದ, ನೀವು ಅವನನ್ನು ಹೇಗೆ ಗುರುತಿಸುವಿರಿ? ಅವನ ಕುರಿತಾಗಿ ಸವಿವರವಾದ ವರ್ಣನೆಯಿರುವಲ್ಲಿ ನಿಮಗೆ ಸಹಾಯವಾಗುತ್ತಿತ್ತು.

2 ಸಾ.ಶ. ಒಂದನೆಯ ಶತಮಾನದ ಆದಿ ಭಾಗದಲ್ಲಿ, ಈ ರೀತಿಯ ಸನ್ನಿವೇಶವು ಅನೇಕ ಮಂದಿ ಯೆಹೂದ್ಯರ ಮುಂದಿತ್ತು. ಅವರು ಮೆಸ್ಸೀಯನ, ಜೀವಿಸಿರುವವರಲ್ಲೇ ಅತಿ ಪ್ರಮುಖ ಪುರುಷನೊಬ್ಬನ ಬರೋಣವನ್ನು ನಿರೀಕ್ಷಿಸುತ್ತಿದ್ದರು. (ದಾನಿಯೇಲ 9:​24-27; ಲೂಕ 3:15) ಆದರೆ ನಂಬಿಗಸ್ತ ಯೆಹೂದ್ಯರು ಅವನನ್ನು ಹೇಗೆ ಗುರುತಿಸಸಾಧ್ಯವಿತ್ತು? ಯೆಹೋವನು ಇಬ್ರಿಯ ಪ್ರವಾದಿಗಳ ಮುಖಾಂತರ, ಆ ಮೆಸ್ಸೀಯನು ಬರುವಾಗ ನಡೆಯಲಿದ್ದ ಘಟನೆಗಳ ಕುರಿತು ಒಂದು ಸವಿವರವಾದ ಲಿಖಿತ ಸ್ಪಷ್ಟ ವರ್ಣನೆಯನ್ನು ನೀಡಿದ್ದನು. ಇದು ವಿವೇಚನಾಶಕ್ತಿಯುಳ್ಳವರು ಯಾವುದೇ ತಪ್ಪಿಲ್ಲದೆ ಅವನನ್ನು ಗುರುತಿಸುವಂತೆ ಸಹಾಯಮಾಡಲಿತ್ತು.

3. ಯೆಶಾಯ 52:​13-53:12ರಲ್ಲಿ ಮೆಸ್ಸೀಯನ ಕುರಿತು ಯಾವ ವರ್ಣನೆಯನ್ನು ಕೊಡಲಾಗಿದೆ?

3 ಮೆಸ್ಸೀಯನ ಕುರಿತಾದ ಇಬ್ರಿಯ ಪ್ರವಾದನೆಗಳಲ್ಲಿ, ಯೆಶಾಯ 52:​13–53:12ರಲ್ಲಿ ದಾಖಲಿಸಲ್ಪಟ್ಟಿರುವ ವರ್ಣನೆಗಿಂತಲೂ ಹೆಚ್ಚು ಸ್ಪಷ್ಟವಾದ ವರ್ಣನೆಯನ್ನು ಪ್ರಾಯಶಃ ಇನ್ನಾವುದೇ ಪ್ರವಾದನೆಯು ಕೊಡುವುದಿಲ್ಲ. 700ಕ್ಕೂ ಹೆಚ್ಚು ವರುಷಗಳಿಗೆ ಮುಂಚಿತವಾಗಿ ಯೆಶಾಯನು, ಮೆಸ್ಸೀಯನ ಶಾರೀರಿಕ ರೂಪವನ್ನಲ್ಲ, ಬದಲಾಗಿ ಅದಕ್ಕಿಂತಲೂ ಹೆಚ್ಚು ಗಮನಾರ್ಹವಾದ ವಿವರಗಳನ್ನು, ಅಂದರೆ ಅವನ ಕಷ್ಟಾನುಭವದ ಉದ್ದೇಶ ಮತ್ತು ರೀತಿ, ಅವನ ಮರಣ, ಹೂಣಿಡುವಿಕೆ ಮತ್ತು ಘನತೆಗೇರುವಿಕೆಯ ಕುರಿತು ನಿರ್ದಿಷ್ಟ ವಿವರಗಳನ್ನು ನೀಡಿದನು. ಈ ಪ್ರವಾದನೆಯ ಮತ್ತು ಅದರ ನೆರವೇರಿಕೆಯ ಪರಿಗಣನೆಯು ನಮ್ಮ ಹೃದಯಗಳನ್ನು ಹುರಿದುಂಬಿಸಿ ನಮ್ಮ ನಂಬಿಕೆಯನ್ನು ಬಲಪಡಿಸುವುದು.

“ನನ್ನ ಸೇವಕನು”​—⁠ಅವನು ಯಾರು?

4. ಆ “ಸೇವಕನು” ಯಾರೆಂಬ ವಿಷಯದಲ್ಲಿ ಕೆಲವು ಮಂದಿ ಯೆಹೂದಿ ವಿದ್ವಾಂಸರು ಯಾವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಆದರೆ ಇವು ಯೆಶಾಯನ ಪ್ರವಾದನೆಗೆ ಏಕೆ ಹೊಂದಿಕೆಯಲ್ಲಿಲ್ಲ?

4 ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರ ವಿಮೋಚನೆಯ ಕುರಿತು ಯೆಶಾಯನು ಈಗ ತಾನೆ ತಿಳಿಸಿದ್ದಾನೆ. ಈಗ ಹೆಚ್ಚು ಮಹತ್ವವುಳ್ಳ ಭಾವೀ ಘಟನೆಯನ್ನು ನೋಡುತ್ತ ಅವನು ಯೆಹೋವನ ಮಾತುಗಳನ್ನು ದಾಖಲಿಸುತ್ತಾನೆ: “ಇಗೋ, ನನ್ನ ಸೇವಕನು ಕೃತಾರ್ಥನಾಗುವನು [“ಒಳನೋಟದಿಂದ ವರ್ತಿಸುವನು,” NW]; ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು.” (ಯೆಶಾಯ 52:13) ಹಾಗಾದರೆ, ನಿರ್ದಿಷ್ಟವಾಗಿ ಈ “ಸೇವಕನು” ಯಾರು? ಗತ ಶತಮಾನಗಳಲ್ಲಿ, ಯೆಹೂದಿ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ಕೊಟ್ಟರು. ಇವನು, ಬಾಬೆಲಿನಲ್ಲಿ ದೇಶಭ್ರಷ್ಟತೆಯ ಸಮಯದಲ್ಲಿ ಆ ಇಡೀ ಜನಾಂಗವನ್ನು ಪ್ರತಿನಿಧಿಸಿದನೆಂದು ಕೆಲವರು ವಾದಿಸಿದರು. ಆದರೆ ಇಂತಹ ವಿವರಣೆಯು ಪ್ರವಾದನೆಗೆ ಹೊಂದಿಕೊಳ್ಳುವುದಿಲ್ಲ. ದೇವರ ಸೇವಕನು ಸ್ವಂತ ಇಷ್ಟದಿಂದ ಬಾಧೆಯನ್ನು ಅನುಭವಿಸುತ್ತಾನೆ. ಸ್ವತಃ ಅವನೇ ನಿರಪರಾಧಿಯಾದರೂ, ಅವನು ಇತರರ ಪಾಪಗಳಿಗಾಗಿ ಕಷ್ಟಾನುಭವಿಸುತ್ತಾನೆ. ಆದರೆ ಈ ವರ್ಣನೆಯು ಯೆಹೂದಿ ಜನಾಂಗಕ್ಕೆ ಅನ್ವಯವಾಗುವುದಿಲ್ಲ. ಏಕೆಂದರೆ, ಅದು ತನ್ನ ಸ್ವಂತ ಪಾಪಪೂರ್ಣ ಮಾರ್ಗಗಳ ನಿಮಿತ್ತವೇ ದೇಶಭ್ರಷ್ಟತೆಗೆ ಒಯ್ಯಲ್ಪಟ್ಟಿತ್ತು. (2 ಅರಸುಗಳು 21:​11-15; ಯೆರೆಮೀಯ 25:​8-11) ಇತರರು, ಆ ಸೇವಕನು ಇಸ್ರಾಯೇಲಿನಲ್ಲಿ ಧರ್ಮಶ್ರದ್ಧೆಯಿದ್ದ ಗಣ್ಯರನ್ನು ಪ್ರತಿನಿಧಿಸಿದನೆಂದೂ ಇವರು ಪಾಪಿಗಳಾದ ಇಸ್ರಾಯೇಲ್ಯರ ಪರವಾಗಿ ಕಷ್ಟಾನುಭವಿಸಿದರೆಂದೂ ವಾದಿಸಿದರು. ಆದರೆ, ಇಸ್ರಾಯೇಲಿನ ಸಂಕಷ್ಟದ ಸಮಯದಲ್ಲಿ, ಯಾವುದೇ ನಿರ್ದಿಷ್ಟ ಗುಂಪು ಇನ್ನೊಂದು ಗುಂಪಿನ ಪರವಾಗಿ ಕಷ್ಟಾನುಭವಿಸಲಿಲ್ಲ.

5. (ಎ) ಯೆಹೂದಿ ವಿದ್ವಾಂಸರಲ್ಲಿ ಕೆಲವರು ಯೆಶಾಯನ ಪ್ರವಾದನೆಯ ಯಾವ ಅನ್ವಯವನ್ನು ಮಾಡಿದ್ದಾರೆ? (ಪಾದಟಿಪ್ಪಣಿ ನೋಡಿ.) (ಬಿ) ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಆ ಸೇವಕನ ಕುರಿತಾದ ಯಾವ ಸ್ಪಷ್ಟವಾದ ಪರಿಚಯವು ಕೊಡಲ್ಪಟ್ಟಿದೆ?

5 ಕ್ರೈಸ್ತತ್ವದ ಆಗಮನಕ್ಕೆ ಮೊದಲು ಮತ್ತು ಸ್ವಲ್ಪ ಮಟ್ಟಿಗೆ ಸಾಮಾನ್ಯ ಶಕದ ಆದಿ ಶತಮಾನಗಳಲ್ಲಿ, ಕೆಲವು ಮಂದಿ ಯೆಹೂದಿ ವಿದ್ವಾಂಸರು ಈ ಪ್ರವಾದನೆಯನ್ನು ಮೆಸ್ಸೀಯನಿಗೆ ಅನ್ವಯಿಸಿದರು. ಇದು ಸರಿಯಾದ ಅನ್ವಯವೆಂಬುದನ್ನು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ತೋರಿಸುತ್ತವೆ. ಅಪೊಸ್ತಲರ ಕೃತ್ಯಗಳ ಪುಸ್ತಕವು, ಐಥಿಯೋಪ್ಯದ ಕಂಚುಕಿಯು ಯೆಶಾಯನ ಪ್ರವಾದನೆಯ ಸೇವಕನ ಗುರುತು ತನಗಿಲ್ಲವೆಂದು ಹೇಳಿದಾಗ, ಫಿಲಿಪ್ಪನು ಅವನಿಗೆ “ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು” ಎಂದು ವರದಿಸುತ್ತದೆ. (ಅ. ಕೃತ್ಯಗಳು 8:26-40; ಯೆಶಾಯ 53:7, 8) ಹಾಗೆಯೇ ಬೇರೆ ಬೈಬಲ್‌ ಪುಸ್ತಕಗಳು ಯೇಸು ಕ್ರಿಸ್ತನನ್ನು ಯೆಶಾಯನ ಪ್ರವಾದನೆಯ ಮೆಸ್ಸೀಯ ಸೇವಕನಾಗಿ ಗುರುತಿಸುತ್ತವೆ. * ನಾವು ಈ ಪ್ರವಾದನೆಯನ್ನು ಚರ್ಚಿಸುವಾಗ, ಯೆಹೋವನು ಯಾರನ್ನು “ನನ್ನ ಸೇವಕನು” ಎಂದು ಕರೆಯುತ್ತಾನೊ ಅವನ ಮತ್ತು ನಜರೇತಿನ ಯೇಸು ಕ್ರಿಸ್ತನ ನಡುವೆ ಇರುವ ಅಲ್ಲಗಳೆಯಲಾಗದ ಹೋಲಿಕೆಗಳನ್ನು ನೋಡುವೆವು.

6. ಮೆಸ್ಸೀಯನು ದೈವಿಕ ಚಿತ್ತವನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವನೆಂದು ಯೆಶಾಯನ ಪ್ರವಾದನೆಯು ಹೇಗೆ ಸೂಚಿಸುತ್ತದೆ?

6 ದೈವಿಕ ಚಿತ್ತವನ್ನು ಪೂರೈಸುವುದರಲ್ಲಿ ಮೆಸ್ಸೀಯನು ಕಟ್ಟಕಡೆಗೆ ಪಡೆಯುವ ಯಶಸ್ಸನ್ನು ವರ್ಣಿಸುತ್ತ ಆ ಪ್ರವಾದನೆ ಆರಂಭಗೊಳ್ಳುತ್ತದೆ. “ಸೇವಕನು” ಎಂಬ ಪದವು, ಒಬ್ಬ ಸೇವಕನು ತನ್ನ ಯಜಮಾನನಿಗೆ ಅಧೀನನಾಗುವಂತೆ, ಅವನು ದೇವರ ಚಿತ್ತಕ್ಕೆ ಅಧೀನನಾಗುತ್ತಾನೆ ಎಂಬುದನ್ನು ಸೂಚಿಸುತ್ತದೆ. ಹಾಗೆ ಮಾಡುವಾಗ, “ಅವನು ಒಳನೋಟದಿಂದ ವರ್ತಿಸುವನು.” ಒಳನೋಟವೆಂದರೆ, ಒಂದು ಸನ್ನಿವೇಶವನ್ನು ಒಳಹೊಕ್ಕಿ ಗ್ರಹಿಸುವ ಸಾಮರ್ಥ್ಯವೇ ಆಗಿದೆ. ಒಳನೋಟದಿಂದ ವರ್ತಿಸುವುದೆಂದರೆ ವಿವೇಚನೆಯಿಂದ ವರ್ತಿಸುವುದೆಂದರ್ಥ. ಇಲ್ಲಿ ಬಳಸಿರುವ ಹೀಬ್ರು ಕ್ರಿಯಾಪದದ ಕುರಿತು ಒಂದು ಪರಾಮರ್ಶನ ಗ್ರಂಥವು ಹೇಳುವುದು: “ಇದರ ತಿರುಳಿನಲ್ಲಿ ವಿವೇಚನೆ ಮತ್ತು ವಿವೇಕಯುತ ವ್ಯವಹಾರದ ಅಭಿಪ್ರಾಯವಿದೆ. ವಿವೇಕದಿಂದ ವ್ಯವಹರಿಸುವವನು ಯಶಸ್ಸನ್ನು ಪಡೆಯುವನು.” “ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು” ಎಂದು ಪ್ರವಾದನೆಯು ಹೇಳುವಾಗ, ಮೆಸ್ಸೀಯನು ನಿಶ್ಚಯವಾಗಿ ಯಶಸ್ಸನ್ನು ಪಡೆಯುವನೆಂದು ನಾವು ನೋಡಬಲ್ಲೆವು.

7. ಯೇಸು ಕ್ರಿಸ್ತನು “ಒಳನೋಟದಿಂದ” ವರ್ತಿಸಿದ್ದು ಹೇಗೆ, ಮತ್ತು ಅವನು “ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ” ಬಂದಿರುವುದು ಹೇಗೆ?

7 ಯೇಸು ತನಗೆ ಅನ್ವಯಿಸುತ್ತಿದ್ದ ಬೈಬಲ್‌ ಪ್ರವಾದನೆಗಳ ಕುರಿತು ತನಗೆ ತಿಳಿವಳಿಕೆ ಇದೆ ಎಂಬುದನ್ನು ತೋರಿಸಿ, ತನ್ನ ತಂದೆಯ ಚಿತ್ತವನ್ನು ಮಾಡಲು ಅವುಗಳಿಂದ ಮಾರ್ಗದರ್ಶಿಸಲ್ಪಡುವ ಮೂಲಕ “ಒಳನೋಟದಿಂದ” ವರ್ತಿಸಿದನು. (ಯೋಹಾನ 17:4; 19:30) ಫಲಿತಾಂಶವೇನು? ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣವನ್ನು ಅನುಸರಿಸಿ, “ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.” (ಫಿಲಿಪ್ಪಿ 2:9; ಅ. ಕೃತ್ಯಗಳು 2:34-36) ಬಳಿಕ, 1914ರಲ್ಲಿ ಮಹಿಮಾಭರಿತ ಯೇಸುವನ್ನು ಇನ್ನೂ ಹೆಚ್ಚು ಉನ್ನತಕ್ಕೇರಿಸಲಾಯಿತು. ಯೆಹೋವನು ಅವನನ್ನು ಮೆಸ್ಸೀಯ ರಾಜ್ಯದ ಸಿಂಹಾಸನಕ್ಕೇರಿಸಿದನು. (ಪ್ರಕಟನೆ 12:​1-5) ಹೌದು, ಅವನು “ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ” ಬಂದನು.

‘ಬೆರಗಾಗಿ ಅವನನ್ನು ದಿಟ್ಟಿಸಿ ನೋಡುವುದು’

8, 9. ಮಹೋನ್ನತ ಪದವಿಗೇರಿಸಲ್ಪಟ್ಟಿರುವ ಯೇಸು ನ್ಯಾಯತೀರ್ಪು ವಿಧಿಸಲು ಬರುವಾಗ ಭೂಪ್ರಭುಗಳು ಹೇಗೆ ಪ್ರತಿಕ್ರಿಯಿಸುವರು, ಮತ್ತು ಏಕೆ?

8 ಉನ್ನತ ಪದವಿಗೇರಿಸಲ್ಪಟ್ಟ ಮೆಸ್ಸೀಯನನ್ನು ನೋಡಿ ಜನಾಂಗಗಳೂ ಪ್ರಭುಗಳೂ ಹೇಗೆ ಪ್ರತಿಕ್ರಿಯಿಸುವರು? ನಾವು ಸದ್ಯಕ್ಕೆ 14ನೆಯ ವಚನದ ಪ್ರಥಮ ಭಾಗವನ್ನು ಬಿಟ್ಟುಬಿಡುವಲ್ಲಿ ಅದರ ಎರಡನೆಯ ಭಾಗವು ತಿಳಿಸುವುದು: “ಅನೇಕರು ಹೇಗೆ ಬೆರಗಾಗಿ ಅವನನ್ನು ದಿಟ್ಟಿಸಿ ನೋಡಿರುವರೊ . . . ಹಾಗೆಯೇ ಅವನು ಅನೇಕ ಜನಾಂಗಗಳನ್ನು ಬೆಚ್ಚಿಬೀಳಿಸುವನು. ಅರಸರು ಅವನ ಮುಂದೆ ಬಾಯಿ ಮುಚ್ಚಿಕೊಳ್ಳುವರು, ಏಕೆಂದರೆ ತಮಗೆ ವಿವರಿಸದಿದ್ದ ವಿಷಯಗಳನ್ನು ಅವರು ನೋಡುವರು ಮತ್ತು ಕೇಳಿರದಿದ್ದ ಸಂಗತಿಗಳನ್ನು ಅವರು ಪರಿಗಣಿಸಬೇಕು.” (ಯೆಶಾಯ 52:14ಬಿ, 15, NW) ಈ ಮಾತುಗಳಿಂದ ಯೆಶಾಯನು ಮೆಸ್ಸೀಯನ ಪ್ರಥಮ ತೋರಿಬರುವಿಕೆಯನ್ನಲ್ಲ, ಬದಲಾಗಿ ಭೂಪ್ರಭುಗಳೊಂದಿಗಿನ ಅವನ ಅಂತಿಮ ಮುಖಾಬಿಲೆಯನ್ನು ವರ್ಣಿಸುತ್ತಾನೆ.

9 ಮಹೋನ್ನತ ಪದವಿಗೇರಿರುವ ಯೇಸು ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ನ್ಯಾಯತೀರಿಸಲು ಬರುವಾಗ, ಭೂಪ್ರಭುಗಳು ‘ಬೆರಗಾಗಿ ಅವನನ್ನು ದಿಟ್ಟಿಸಿ ನೋಡುವರು.’ ಮಾನವ ಪ್ರಭುಗಳು ಮಹಿಮಾಭರಿತನಾದ ಯೇಸುವನ್ನು ಅಕ್ಷರಾರ್ಥವಾಗಿ ನೋಡುವುದಿಲ್ಲವೆಂಬುದು ನಿಜ. ಆದರೆ ಅವರು ಯೆಹೋವನಿಗಾಗಿ ಹೋರಾಡುವ ಸ್ವರ್ಗೀಯ ಯೋಧನ ಶಕ್ತಿಯ ದೃಶ್ಯ ರುಜುವಾತುಗಳನ್ನು ನೋಡುವರು. (ಮತ್ತಾಯ 24:30) ಧಾರ್ಮಿಕ ಮುಖಂಡರು ಯೇಸುವಿನ ಕುರಿತು ತಮಗೆ ಹೇಳಿರದಂಥ ವಿಷಯವನ್ನು, ಅಂದರೆ ಯೇಸು ದೇವರ ನ್ಯಾಯತೀರ್ಪುಗಳನ್ನು ವಿಧಿಸುವಾತನು ಎಂಬ ವಿಷಯವನ್ನು ಪರಿಗಣಿಸುವಂತೆ ಅವರು ಒತ್ತಾಯಿಸಲ್ಪಡುವರು! ಅವರು ಸಂಧಿಸುವ ಮಹೋನ್ನತ ಪದವಿಗೇರಿಸಲ್ಪಟ್ಟಿರುವ ಸೇವಕನು, ಅವರು ನಿರೀಕ್ಷಿಸದಂತಹ ರೀತಿಯಲ್ಲಿ ಕ್ರಿಯೆಗೈಯುವನು.

10, 11. ಪ್ರಥಮ ಶತಮಾನದಲ್ಲಿ ಯೇಸು ವಿಕಾರಗೊಳಿಸಲ್ಪಟ್ಟನೆಂದು ಯಾವ ವಿಧದಲ್ಲಿ ಹೇಳಸಾಧ್ಯವಿದೆ, ಮತ್ತು ಇಂದು ಅದನ್ನು ಹೇಗೆ ಮಾಡಲಾಗುತ್ತಿದೆ?

10 ಹದಿನಾಲ್ಕನೆಯ ವಚನದ ಪ್ರಥಮ ಭಾಗದಲ್ಲಿ ಯೆಶಾಯನು ಹೇಳುವುದು: “ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವದನ್ನು ನೋಡಿ”ದರು. (ಯೆಶಾಯ 52:14ಎ) ಯೇಸು ಯಾವ ವಿಧದಲ್ಲಾದರೂ ಶಾರೀರಿಕವಾಗಿ ವಿಕಾರವಾಗಿದ್ದನೊ? ಇಲ್ಲ. ಯೇಸುವಿನ ರೂಪ ಹೇಗಿತ್ತೆಂಬ ವಿವರವನ್ನು ಬೈಬಲು ಕೊಡದಿದ್ದರೂ, ದೇವರ ಪರಿಪೂರ್ಣ ಕುಮಾರನ ರೂಪವೂ ಮುಖಭಾವವೂ ಮನೋಹರವಾದದ್ದಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದುದರಿಂದ ಯೆಶಾಯನ ಮಾತುಗಳು ಯೇಸು ಅನುಭವಿಸಿದ ಅವಮಾನವನ್ನು ಸೂಚಿಸುತ್ತವೆ. ಅವನು ತನ್ನ ದಿನಗಳ ಧಾರ್ಮಿಕ ನಾಯಕರನ್ನು ಕಪಟಿಗಳು, ಸುಳ್ಳುಗಾರರು, ಕೊಲೆಗಾರರು ಎಂದು ಕರೆದು ಅವರ ನಿಜ ವ್ಯಕ್ತಿತ್ವವನ್ನು ಧೈರ್ಯದಿಂದ ಬಯಲಿಗೆಳೆದನು. ಆಗ ಅವರು ಅವನನ್ನು ನಿಂದಿಸತೊಡಗಿದರು. (1 ಪೇತ್ರ 2:​22, 23) ಅವನು ಕಾನೂನನ್ನು ಉಲ್ಲಂಘಿಸುವವನು, ದೇವದೂಷಕ, ವಂಚಕ, ರೋಮ್‌ನ ರಾಜ್ಯದ್ರೋಹಿ ಎಂದು ಅವರು ಅವನ ಮೇಲೆ ಆರೋಪ ಹೊರಿಸಿದರು. ಹೀಗೆ, ಈ ಸುಳ್ಳು ಆಪಾದಕರು ಯೇಸುವಿನ ಸ್ವಭಾವದ ಕುರಿತಾದ ವರ್ಣನೆಯನ್ನು ಪೂರ್ಣವಾಗಿ ವಿಕಾರಗೊಳಿಸಿದರು.

11 ಯೇಸುವಿನ ಕುರಿತಾದ ತಪ್ಪು ಚಿತ್ರಣವು ಇಂದು ಸಹ ಮುಂದುವರಿಯುತ್ತದೆ. ಹೆಚ್ಚಿನ ಜನರು ಯೇಸುವನ್ನು ಗೋದಲಿಯಲ್ಲಿ ಮಲಗಿರುವ ಮಗುವಾಗಿ ಇಲ್ಲವೆ ಮುಳ್ಳಿನ ಕಿರೀಟ ಧರಿಸಿ, ಯಾತನೆಯಿಂದ ಮುಖ ವಿರೂಪಗೊಂಡಿರುವ ಮತ್ತು ಶಿಲುಬೆಗೆ ಜಡಿಯಲ್ಪಟ್ಟಿರುವ ದುಃಖಾಂತ ವ್ಯಕ್ತಿಯಾಗಿ ಭಾವಿಸುತ್ತಾರೆ. ಕ್ರೈಸ್ತಪ್ರಪಂಚದ ಪಾದ್ರಿ ವರ್ಗವು ಇಂತಹ ಭಾವನೆಗಳನ್ನು ಪ್ರೋತ್ಸಾಹಿಸಿದೆ. ಜನಾಂಗಗಳು ಯಾರಿಗೆ ಲೆಕ್ಕವೊಪ್ಪಿಸಬೇಕಾಗಿದೆಯೋ ಅಂತಹ ಒಬ್ಬ ಬಲಾಢ್ಯ ಸ್ವರ್ಗೀಯ ಅರಸನಾಗಿ ಯೇಸುವನ್ನು ಚಿತ್ರಿಸಲು ಅವರು ತಪ್ಪಿಹೋಗಿದ್ದಾರೆ. ಮಾನವ ಪ್ರಭುಗಳು ಶೀಘ್ರ ಭವಿಷ್ಯದಲ್ಲಿ ಯೇಸುವನ್ನು ಸಂಧಿಸುವಾಗ, ‘ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಸಕಲ ಅಧಿಕಾರ’ ಇರುವ ಮೆಸ್ಸೀಯನೊಂದಿಗೆ ಅವರು ವ್ಯವಹರಿಸಬೇಕಾಗುವುದು!​—⁠ಮತ್ತಾಯ 28:⁠18.

ಈ ಸುವಾರ್ತೆಯಲ್ಲಿ ಯಾರು ನಂಬಿಕೆಯಿಡುವರು?

12. ಯೆಶಾಯ 53:​1 ಕುತೂಹಲ ಕೆರಳಿಸುವ ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

12 “ವಿಕಾರ” ರೂಪದಿಂದ “ಮಹೋನ್ನತ ಪದವಿಗೆ” ಆಶ್ಚರ್ಯಕರವಾಗಿ ರೂಪಾಂತರ ಹೊಂದಿದ ಮೆಸ್ಸೀಯನ ಕುರಿತು ವರ್ಣಿಸಿದ ಬಳಿಕ ಯೆಶಾಯನು ಕೇಳುವುದು: “ನಾವು ಕೇಳಿದ ಸಂಗತಿಯನ್ನು [ನಮ್ಮಲ್ಲಿ] ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು?” (ಯೆಶಾಯ 53:1) ಯೆಶಾಯನ ಈ ಮಾತುಗಳು ಕುತೂಹಲ ಕೆರಳಿಸುವ ಈ ಪ್ರಶ್ನೆಗಳನ್ನು ಎಬ್ಬಿಸುತ್ತವೆ: ಈ ಪ್ರವಾದನೆ ನೆರವೇರುವುದೊ? ಶಕ್ತಿಯನ್ನು ಪ್ರಯೋಗಿಸಲು ಇರುವ ಸಾಮರ್ಥ್ಯವನ್ನು ಪ್ರತಿನಿಧಿಸುವ “ಯೆಹೋವನ ಬಾಹುವು,” ತನ್ನನ್ನು ತೋರ್ಪಡಿಸಿಕೊಂಡು ಈ ಮಾತುಗಳು ನೆರವೇರುವಂತೆ ಮಾಡುವುದೊ?

13. ಯೆಶಾಯನ ಪ್ರವಾದನೆಯು ಯೇಸುವಿನಲ್ಲಿ ನೆರವೇರಿತೆಂದು ಪೌಲನು ಹೇಗೆ ತೋರಿಸಿದನು, ಮತ್ತು ಪ್ರತಿಕ್ರಿಯೆ ಏನಾಗಿತ್ತು?

13 ಇದಕ್ಕಿರುವ ಉತ್ತರವು ನಿಸ್ಸಂದೇಹವಾಗಿಯೂ ಹೌದು ಎಂದಾಗಿದೆ! ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ, ಯೆಶಾಯನು ಕೇಳಿದ ಮತ್ತು ಬರೆದ ಪ್ರವಾದನೆಯು ಯೇಸುವಿನಲ್ಲಿ ನೆರವೇರಿತೆಂಬುದನ್ನು ತೋರಿಸಲಿಕ್ಕಾಗಿ ಯೆಶಾಯನ ಮಾತುಗಳನ್ನು ಉಲ್ಲೇಖಿಸುತ್ತಾನೆ. ಭೂಮಿಯಲ್ಲಿ ಕಷ್ಟಾನುಭವಿಸಿದ ಬಳಿಕ ಯೇಸು ಘನತೆಗೇರಿಸಲ್ಪಟ್ಟದ್ದು ಶುಭವರ್ತಮಾನವಾಗಿತ್ತು. ಆದರೆ ಪೌಲನು ಅವಿಶ್ವಾಸಿಗಳಾದ ಯೆಹೂದ್ಯರ ಸಂಬಂಧದಲ್ಲಿ ಹೇಳುವುದು: “ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು​—⁠ಕರ್ತನೇ [“ಯೆಹೋವನೇ,” NW], ನಾವು ಸಾರಿದ ವಾರ್ತೆಯನ್ನು ಯಾರು ನಂಬಿದರು ಎಂದು ನುಡಿಯುತ್ತಾನೆ. ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ.” (ರೋಮಾಪುರ 10:16, 17) ಆದರೆ ದುಃಖಕರವಾಗಿ, ಪೌಲನ ದಿನಗಳಲ್ಲಿ ಕೇವಲ ಕೆಲವರು ದೇವರ ಸೇವಕನ ಕುರಿತಾದ ಆ ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟರು. ಹಾಗೇಕೆ?

14, 15. ಮೆಸ್ಸೀಯನು ಯಾವ ಹಿನ್ನೆಲೆಯಲ್ಲಿ ಭೂದೃಶ್ಯವನ್ನು ಪ್ರವೇಶಿಸಲಿದ್ದನು?

14 ತದನಂತರ ಪ್ರವಾದನೆಯು 1ನೆಯ ವಚನದಲ್ಲಿ ದಾಖಲಿಸಲ್ಪಟ್ಟಿರುವ ಪ್ರಶ್ನೆಗಳಿಗೆ ಕಾರಣಗಳನ್ನು ಇಸ್ರಾಯೇಲ್ಯರಿಗೆ ವಿವರಿಸುತ್ತದೆ. ಮತ್ತು ಹಾಗೆ ವಿವರಿಸುವಾಗ, ಅನೇಕರು ಮೆಸ್ಸೀಯನನ್ನು ಏಕೆ ಅಂಗೀಕರಿಸುವುದಿಲ್ಲವೆಂಬುದರ ಮೇಲೆ ಬೆಳಕು ಬೀರುತ್ತದೆ: “ಒಣನೆಲದೊಳಗೆ ಬೇರಿನಿಂದ ಹೊರಡುವ ಅಂಕುರದಂತೆಯೂ ಬುಡದಿಂದ ಒಡೆಯುವ ಚಿಗುರಿನ ಹಾಗೂ ಅವನು ಯೆಹೋವನ ದೃಷ್ಟಿಯಲ್ಲಿ ಬೆಳೆದನು. ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ; ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ.” (ಯೆಶಾಯ 53:2) ಮೆಸ್ಸೀಯನು ಭೂದೃಶ್ಯವನ್ನು ಪ್ರವೇಶಿಸುವಾಗ ಇರುವ ಹಿನ್ನೆಲೆಯನ್ನು ನಾವಿಲ್ಲಿ ನೋಡುತ್ತೇವೆ. ಅವನು ಆರ್ಥಿಕವಾಗಿ ಕೆಳಅಂತಸ್ತಿನವನಾಗಿರಲಿದ್ದನು. ಅವನನ್ನು ನೋಡಿದವರಿಗೆ ಅವನು ಮುಂದೆ ಒಬ್ಬ ಗಮನಾರ್ಹ, ಯಶಸ್ವೀ ವ್ಯಕ್ತಿಯಾಗುವನೆಂಬಂತೆ ತೋರುವುದಿಲ್ಲ. ಇದಲ್ಲದೆ, ಅವನು ಮರದ ಕಾಂಡದಿಂದ ಇಲ್ಲವೆ ಕೊಂಬೆಯಿಂದ ಬೆಳೆಯುವ ಚಿಗುರಿನಂತೆ, ಎಳೆಯ ಸಸಿಯಂತೆ ಇರುವನು. ಅವನು ಒಣಗಿರುವ, ಫಲವತ್ತಾಗಿರದ ಮಣ್ಣಿನಲ್ಲಿ ನೀರು ಅತ್ಯಗತ್ಯವಾಗಿ ಬೇಕಾಗಿರುವ ಬೇರಿನಂತಿರುವನು. ಅವನು ರಾಜವೈಭವ ಮತ್ತು ಆಡಂಬರದಲ್ಲಿ, ಅಂದರೆ ರಾಜನ ಮೇಲುಡುಪು ಮತ್ತು ಹೊಳೆಯುವ ಮುಕುಟವನ್ನು ಧರಿಸಿದವನಾಗಿ ಬರುವುದಿಲ್ಲ. ಇದಕ್ಕೆ ಬದಲಾಗಿ, ಅವನ ಆರಂಭವು ದೀನ ಹಾಗೂ ನಿರಾಡಂಬರವಾದ ಸ್ಥಿತಿಯಿಂದ ಕೂಡಿರುವುದು.

15 ಒಬ್ಬ ಮನುಷ್ಯನೋಪಾದಿ ಯೇಸುವಿನ ಬಡ ಆರಂಭವನ್ನು ಅದು ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಮರಿಯಳೆಂಬ ಯೆಹೂದಿ ಕನ್ಯೆಯು, ಬೇತ್ಲೆಹೇಮ್‌ ಎಂಬ ಚಿಕ್ಕ ಊರಿನ ಹಟ್ಟಿಯೊಂದರಲ್ಲಿ ಅವನನ್ನು ಹೆತ್ತಳು. * (ಲೂಕ 2:7; ಯೋಹಾನ 7:42) ಮರಿಯಳೂ ಆಕೆಯ ಗಂಡನಾದ ಯೋಸೇಫನೂ ಬಡವರಾಗಿದ್ದರು. ಯೇಸುವಿನ ಜನನವಾಗಿ ಸುಮಾರು 40 ದಿನಗಳು ಕಳೆದ ಬಳಿಕ ಅವರು, ಬಡವರು ದೋಷಪರಿಹಾರಕ್ಕಾಗಿ ಬಲಿಕೊಡುವಂತೆ ಅನುಮತಿಸಲಾಗಿದ್ದ ‘ಒಂದು ಜೋಡಿ ಬೆಳವಕ್ಕಿ ಇಲ್ಲವೇ ಎರಡು ಪಾರಿವಾಳದ ಮರಿಗಳನ್ನು’ ತಂದರು. (ಲೂಕ 2:24; ಯಾಜಕಕಾಂಡ 12:6-8) ಆ ಬಳಿಕ ಮರಿಯಳೂ ಯೋಸೇಫನೂ ನಜರೇತಿನಲ್ಲಿ ನೆಲೆಸಿದರು. ಅಲ್ಲಿ ಯೇಸು ದೊಡ್ಡ ಕುಟುಂಬವೊಂದರಲ್ಲಿ, ಪ್ರಾಯಶಃ ಸಾಧಾರಣ ಪರಿಸ್ಥಿತಿಗಳಲ್ಲಿ ಬೆಳೆದನು.​—⁠ಮತ್ತಾಯ 13:​55, 56.

16. ಯೇಸುವಿಗೆ “ಅಂದಚಂದ” ಇರಲಿಲ್ಲವೆಂಬುದು ನಿಜ ಹೇಗೆ?

16 ಮಾನವನೋಪಾದಿ ಯೇಸುವಿನ ಬೇರುಗಳು ಯೋಗ್ಯ ರೀತಿಯ ಮಣ್ಣಿನಲ್ಲಿ ನೆಲೆಗೊಂಡಿರಲಿಲ್ಲ ಎಂಬಂತೆ ತೋರಿಬಂತು. (ಯೋಹಾನ 1:46; 7:​41, 52) ಅವನು ಪರಿಪೂರ್ಣ ಮಾನವನೂ ರಾಜ ದಾವೀದನ ವಂಶಸ್ಥನೂ ಆಗಿದ್ದರೂ, ಅವನ ಬಡ ಸ್ಥಿತಿಗತಿಗಳು ಅವನಿಗೆ “ಅಂದ” ಅಥವಾ “ಚಂದ”ವನ್ನು ಕೊಡಲಿಲ್ಲ. ಮೆಸ್ಸೀಯನು ಹೆಚ್ಚು ಪ್ರಭಾವಶೀಲ ಹಿನ್ನೆಲೆಯಿಂದ ಬರುವನೆಂದು ನಿರೀಕ್ಷಿಸುತ್ತಿದ್ದವರ ದೃಷ್ಟಿಯಲ್ಲಿ ಕಡಿಮೆಪಕ್ಷ ಅವನು ಹೀಗೆ ಕಂಡುಬಂದಿರಬಹುದು. ಅನೇಕರು ಯೆಹೂದಿ ಧಾರ್ಮಿಕ ಮುಖಂಡರಿಂದ ಪ್ರೋತ್ಸಾಹಿಸಲ್ಪಟ್ಟು ಅವನನ್ನು ಅಲಕ್ಷಿಸುವಂತೆ ಮತ್ತು ಕಡೆಗಣಿಸುವಂತೆಯೂ ನಡೆಸಲ್ಪಟ್ಟರು. ಕೊನೆಯದಾಗಿ ಜನರು ಈ ಪರಿಪೂರ್ಣ ದೇವಕುಮಾರನಲ್ಲಿ ಅಪೇಕ್ಷಿತವಾದ ಯಾವುದನ್ನೂ ಕಾಣಲಿಲ್ಲ.​—⁠ಮತ್ತಾಯ 27:​11-26.

‘ಧಿಕ್ಕರಿಸಲ್ಪಟ್ಟು ಮನುಷ್ಯರಿಂದ ಸೇರಿಸಿಕೊಳ್ಳಲ್ಪಡದವನು’

17. (ಎ) ಯೆಶಾಯನು ಏನನ್ನು ವರ್ಣಿಸಲಾರಂಭಿಸುತ್ತಾನೆ, ಮತ್ತು ಅವನು ಭೂತಕಾಲದಲ್ಲಿ ಬರೆಯುವುದೇಕೆ? (ಬಿ) ಯೇಸುವನ್ನು ‘ಧಿಕ್ಕರಿಸಿದವರೂ’ ‘ಸೇರಿಸಿಕೊಳ್ಳದೆ’ ಇದ್ದವರು ಯಾರು, ಮತ್ತು ಅವರು ಅದನ್ನು ಮಾಡಿದ್ದು ಹೇಗೆ?

17 ಈಗ ಯೆಶಾಯನು, ಜನರು ಮೆಸ್ಸೀಯನನ್ನು ಹೇಗೆ ದೃಷ್ಟಿಸುವರು ಮತ್ತು ಉಪಚರಿಸುವರೆಂಬುದನ್ನು ವರ್ಣಿಸುತ್ತಾನೆ: “ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಅವನನ್ನು ಲಕ್ಷ್ಯಕ್ಕೇ ತರಲಿಲ್ಲ.” (ಯೆಶಾಯ 53:3) ತನ್ನ ಮಾತುಗಳು ನೆರವೇರುವವೆಂಬ ಖಾತ್ರಿಯಿಂದ ಯೆಶಾಯನು ಭೂತಕಾಲದಲ್ಲಿ, ಅವು ಈಗಾಗಲೇ ನೆರವೇರಿವೆಯೋ ಎಂಬಂತೆ ಬರೆಯುತ್ತಾನೆ. ಯೇಸು ಕ್ರಿಸ್ತನನ್ನು ಜನರು ನಿಜವಾಗಿಯೂ ಧಿಕ್ಕರಿಸಿದರೋ ಮತ್ತು ಮನುಷ್ಯರು ಅವನನ್ನು ಸೇರಿಸಿಕೊಳ್ಳಲಿಲ್ಲವೋ? ಹೌದು ಖಂಡಿತವಾಗಿ! ಸ್ವನೀತಿವಂತ ಧಾರ್ಮಿಕ ಮುಖಂಡರು ಮತ್ತು ಅವರ ಹಿಂಬಾಲಕರು ಅವನನ್ನು ತುಂಬ ಕೆಟ್ಟ ಮನುಷ್ಯನಾಗಿ ಪರಿಗಣಿಸಿದರು. ಅವರು ಅವನನ್ನು ಸುಂಕವಸೂಲಿಗಾರರ ಮತ್ತು ವೇಶ್ಯೆಯರ ಗೆಳೆಯನೆಂದು ಕರೆದರು. (ಲೂಕ 7:​34, 37-39) ಅವರು ಅವನ ಮುಖದ ಮೇಲೆ ಉಗುಳಿದರು. ಮುಷ್ಟಿಯಿಂದ ಅವನಿಗೆ ಹೊಡೆದು ಅವನನ್ನು ನಿಂದಿಸಿದರು. ಅವನನ್ನು ಅಪಹಾಸ್ಯಮಾಡಿ ಅಣಕಿಸಿದರು. (ಮತ್ತಾಯ 26:67) ಈ ಸತ್ಯವಿರೋಧಿಗಳಿಂದ ಪ್ರಭಾವಿತರಾಗಿ, ಯೇಸುವಿನ “ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ.”​—⁠ಯೋಹಾನ 1:10, 11.

18. ಯೇಸು ಎಂದೂ ಕಾಯಿಲೆ ಬೀಳದಿದ್ದರೂ, ಅವನು “ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು” ಆದದ್ದು ಹೇಗೆ?

18 ಯೇಸು ಪರಿಪೂರ್ಣ ಮನುಷ್ಯನಾಗಿದ್ದುದರಿಂದ ಕಾಯಿಲೆ ಬೀಳಲಿಲ್ಲ. ಆದರೂ ಅವನು, “ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು” ಆಗಿದ್ದನು. ಅಂತಹ ವೇದನೆ ಮತ್ತು ವ್ಯಾಧಿಗಳು ಅವನದ್ದಾಗಿರಲಿಲ್ಲ. ಯೇಸು ಸ್ವರ್ಗದಿಂದ ಈ ವ್ಯಾಧಿಪೀಡಿತ ಲೋಕಕ್ಕೆ ಬಂದನು. ಅವನು ಕಷ್ಟಾನುಭವ ಮತ್ತು ವೇದನೆಯ ಮಧ್ಯೆ ಜೀವಿಸಿದರೂ, ಶಾರೀರಿಕವಾಗಿ ಅಥವಾ ಆತ್ಮಿಕವಾಗಿ ಕಾಯಿಲೆಬಿದ್ದಿರುವವರನ್ನು ಅವನು ತೊರೆದು ಬಿಡಲಿಲ್ಲ. ಪರಾಮರಿಸುವ ಒಬ್ಬ ವೈದ್ಯನಂತೆ ಅವನು ತನ್ನ ಸುತ್ತಲೂ ಕಷ್ಟಾನುಭವಿಸುತ್ತಿದ್ದವರಿಗೆ ಚಿರಪರಿಚಿತನಾದನು. ಇದಲ್ಲದೆ, ಸಾಮಾನ್ಯ ಮಾನವ ವೈದ್ಯನು ಮಾಡಸಾಧ್ಯವಿರದಂತಹ ಕೆಲಸಗಳನ್ನು ಅವನು ಮಾಡಶಕ್ತನಾದನು.​—⁠ಲೂಕ 5:​27-32.

19. ಯೇಸುವಿನ ವೈರಿಗಳು “ಅವನನ್ನು ಲಕ್ಷ್ಯಕ್ಕೇ ತರಲಿಲ್ಲ” ಎಂಬುದನ್ನು ಹೇಗೆ ತೋರಿಸಿದರು?

19 ಆದರೆ ಯೇಸುವಿನ ವೈರಿಗಳು ಅವನನ್ನು ಅಸ್ವಸ್ಥನಾಗಿ ಕಂಡರು, ಒಲವಿನಿಂದ ನೋಡಲು ನಿರಾಕರಿಸಿದರು. ಜನರೇ ತಮ್ಮ ಮುಖಗಳನ್ನು ಅವನಿಂದ “ಓರೆಮಾಡಿ”ಕೊಂಡರು. ಯೆಶಾಯ 53:3ನ್ನು ಭಾಷಾಂತರಿಸುವಾಗ, ದ ನ್ಯೂ ಇಂಗ್ಲಿಷ್‌ ಬೈಬಲ್‌ “ಮನುಷ್ಯರು ತಮ್ಮ ದೃಷ್ಟಿಯನ್ನು ಒಂದು ವಸ್ತುವಿನಿಂದ ಬೇರೆಡೆಗೆ ತಿರುಗಿಸುವುದು” ಎಂಬ ಪದಸರಣಿಯನ್ನು ಉಪಯೋಗಿಸುತ್ತದೆ. ಯೇಸುವಿನ ವಿರೋಧಿಗಳು ಅವನನ್ನು ಎಷ್ಟು ಅಸಹ್ಯವಾಗಿ ಕಂಡರೆಂದರೆ, ಅವನ ಕಡೆಗಿನ ಹೇವರಿಕೆಯಿಂದ ಅವರು ತಮ್ಮ ಮುಖಗಳನ್ನು ಓರೆಮಾಡಿಕೊಂಡರು. ಅವನ ಕ್ರಯ ಕೇವಲ ಒಬ್ಬ ಗುಲಾಮನನ್ನು ಕೊಂಡುಕೊಳ್ಳುವ ಕ್ರಯವೆಂದು ಅವರೆಣಿಸಿದರು. (ವಿಮೋಚನಕಾಂಡ 21:32; ಮತ್ತಾಯ 26:​14-16) ಅವರ ಎಣಿಕೆಯಲ್ಲಾದರೋ ಕೊಲೆಗಾರ ಬರಬ್ಬನು ಯೇಸುವಿಗಿಂತ ಹೆಚ್ಚು ಗೌರವಾರ್ಹನಾಗಿದ್ದನು. (ಲೂಕ 23:​18-25) ಅವರಿಗೆ ಯೇಸುವಿನ ಕುರಿತು ಇದ್ದ ಕೀಳ್ಮಟ್ಟದ ಅಭಿಪ್ರಾಯವನ್ನು ಅವರು ಅದಕ್ಕಿಂತ ಹೆಚ್ಚಾಗಿ ಹೇಗೆ ತಾನೇ ಪ್ರದರ್ಶಿಸಸಾಧ್ಯವಿತ್ತು?

20. ಯೆಶಾಯನ ಮಾತುಗಳು ಇಂದು ಯೆಹೋವನ ಜನರಿಗೆ ಯಾವ ಸಾಂತ್ವನವನ್ನು ನೀಡುತ್ತವೆ?

20 ಇಂದು ಯೆಹೋವನ ಸೇವಕರು ಯೆಶಾಯನ ಮಾತುಗಳಿಂದ ತುಂಬ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು. ಕೆಲವೊಮ್ಮೆ ವಿರೋಧಿಗಳು ಯೆಹೋವನ ನಂಬಿಗಸ್ತ ಆರಾಧಕರನ್ನು ತುಚ್ಛವಾಗಿ ಕಾಣಬಹುದು, ಇಲ್ಲವೆ ಅವರನ್ನು ಕ್ಷುಲ್ಲಕವಾಗಿ ಪರಿಗಣಿಸಬಹುದು. ಆದರೂ, ಯೇಸುವಿನ ವಿಷಯದಲ್ಲಿ ನಿಜವಾದಂತೆ, ಮುಖ್ಯ ವಿಷಯವು ಯೆಹೋವನು ನಮ್ಮನ್ನು ಎಷ್ಟು ಅಮೂಲ್ಯರಾಗಿ ಪರಿಗಣಿಸುತ್ತಾನೆ ಎಂಬುದಾಗಿದೆ. ಏಕೆಂದರೆ, ಜನರು ಯೇಸುವನ್ನು ‘ಲಕ್ಷ್ಯಕ್ಕೆ ತರದಿದ್ದರೂ,’ ದೇವರ ದೃಷ್ಟಿಯಲ್ಲಿ ಅವನಿಗಿದ್ದ ಮಹಾ ಮೌಲ್ಯವು ಬದಲಾಗಲಿಲ್ಲ ಎಂಬುದಂತೂ ಖಂಡಿತ!

“ನಮ್ಮ ದ್ರೋಹಗಳ ದೆಸೆಯಿಂದ . . . ಗಾಯ”

21, 22. (ಎ) ಮೆಸ್ಸೀಯನು ಇತರರ ಪರವಾಗಿ ಏನನ್ನು ಹೊತ್ತು, ಸಹಿಸಿಕೊಂಡನು? (ಬಿ) ಅನೇಕರು ಮೆಸ್ಸೀಯನನ್ನು ಯಾವ ರೀತಿಯಲ್ಲಿ ವೀಕ್ಷಿಸಿದರು, ಮತ್ತು ಅವನ ಕಷ್ಟಾನುಭವವು ಯಾವುದರಲ್ಲಿ ಕೊನೆಗೊಂಡಿತು?

21 ಮೆಸ್ಸೀಯನು ಕಷ್ಟಾನುಭವಿಸಿ ಸಾಯಬೇಕಾಗಿತ್ತೇಕೆ? ಯೆಶಾಯನು ವಿವರಿಸುವುದು: “ನಿಜವಾಗಿಯೂ ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ, ಹೌದು; ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಶಾಂತಿಯನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು.”​—ಯೆಶಾಯ 53:​4-6.

22 ಮೆಸ್ಸೀಯನು ಇತರರ ವ್ಯಾಧಿಗಳನ್ನು ಹೊತ್ತುಕೊಂಡನು ಮತ್ತು ಅವರ ವೇದನೆಗಳನ್ನು ಸಹಿಸಿಕೊಂಡನು. ಅವನು ಸೂಚಕರೂಪವಾಗಿ, ಅವರ ಹೊರೆಗಳನ್ನು ಎತ್ತಿ ತನ್ನ ಸ್ವಂತ ಹೆಗಲ ಮೇಲಿಟ್ಟುಕೊಂಡು ಅವುಗಳನ್ನು ಹೊತ್ತುಕೊಂಡುಹೋದನು. ರೋಗ ಮತ್ತು ವೇದನೆಗಳು ಮಾನವಕುಲದ ಪಾಪಪೂರ್ಣ ಸ್ಥಿತಿಯ ಪರಿಣಾಮಗಳಾಗಿರುವುದರಿಂದ, ಮೆಸ್ಸೀಯನು ಇತರರ ಪಾಪಗಳನ್ನು ಹೊತ್ತನು. ಅವನು ಪಟ್ಟ ಬಾಧೆಗಳ ಕಾರಣವು ಅನೇಕರಿಗೆ ತಿಳಿದಿರಲಿಲ್ಲ. ದೇವರು ಅವನನ್ನು ಶಿಕ್ಷಿಸುತ್ತಿದ್ದಾನೆ, ಅಸಹ್ಯಕರವಾದ ರೋಗದಿಂದ ಬಾಧಿಸುತ್ತಿದ್ದಾನೆಂದು ಅವರು ನೆನಸಿದರು. * ಮೆಸ್ಸೀಯನ ಕಷ್ಟಾನುಭವವು, ಅವನು ತಿವಿಯಲ್ಪಟ್ಟು, ಜಜ್ಜಲ್ಪಟ್ಟು, ಗಾಯಗೊಳ್ಳುವುದರಲ್ಲಿ ಕೊನೆಗೊಂಡಿತು. ಇವು ಒಂದು ಹಿಂಸಾತ್ಮಕ ಮತ್ತು ಯಾತನಾಮಯ ಮರಣವನ್ನು ಸೂಚಿಸುವ ಪದಗಳಾಗಿವೆ. ಆದರೆ ಅವನ ಮರಣಕ್ಕೆ ಪ್ರಾಯಶ್ಚಿತ್ತದ ಶಕ್ತಿಯಿದೆ. ದೋಷ ಮತ್ತು ಪಾಪದಲ್ಲಿ ತೊಳಲುತ್ತಿರುವವರನ್ನು ರಕ್ಷಿಸುವುದಕ್ಕೆ, ಅವರು ದೇವರೊಂದಿಗೆ ಶಾಂತಿಯನ್ನು ಕಂಡುಕೊಳ್ಳುವಂತೆ ಸಹಾಯಮಾಡುವುದಕ್ಕೆ ಇದು ಒಂದು ಆಧಾರವನ್ನು ಒದಗಿಸುತ್ತದೆ.

23. ಯೇಸು ಇತರರ ಕಷ್ಟಾನುಭವಗಳನ್ನು ಯಾವ ವಿಧದಲ್ಲಿ ಸಹಿಸಿಕೊಂಡನು?

23 ಯೇಸು ಇತರರ ಕಷ್ಟಗಳನ್ನು ಹೇಗೆ ಸಹಿಸಿಕೊಂಡನು? ಮತ್ತಾಯನ ಸುವಾರ್ತೆಯು ಯೆಶಾಯ 53:4ನ್ನು ಉಲ್ಲೇಖಿಸುತ್ತ ಹೇಳುವುದು: “ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು. ಇದರಿಂದ​—⁠ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು ಎಂದು ಯೆಶಾಯನೆಂಬ ಪ್ರವಾದಿಯಿಂದ ಹೇಳಿರುವ ಮಾತು ನೆರವೇರಿತು.” (ಮತ್ತಾಯ 8:16, 17) ವಿವಿಧ ರೋಗಗಳೊಂದಿಗೆ ತನ್ನ ಬಳಿಗೆ ಬಂದವರನ್ನು ಯೇಸು ಗುಣಪಡಿಸಿದಾಗ, ಕಾರ್ಯತಃ ಅವನು ಅವರ ಬಾಧೆಗಳನ್ನು ತಾನೇ ಹೊತ್ತುಕೊಂಡನು. ಮತ್ತು ಅಂತಹ ವಾಸಿಮಾಡುವಿಕೆಗಳು ಅವನಿಂದ ಶಕ್ತಿಯು ಹೊರಟುಹೋಗುವಂತೆ ಮಾಡಿದವು. (ಲೂಕ 8:​43-48) ಎಲ್ಲ ರೀತಿಯ ಅಸ್ವಸ್ಥತೆಗಳನ್ನು, ಅಂದರೆ ಶಾರೀರಿಕ ಹಾಗೂ ಆತ್ಮಿಕ ರೀತಿಯ ಅಸ್ವಸ್ಥತೆಗಳನ್ನು ವಾಸಿಮಾಡಲು ಅವನಿಗಿದ್ದ ಸಾಮರ್ಥ್ಯವು, ಅವನು ಜನರನ್ನು ಪಾಪದಿಂದ ಶುದ್ಧೀಕರಿಸಲು ಶಕ್ತಿಪಡೆದವನಾಗಿದ್ದನೆಂಬುದನ್ನು ರುಜುಪಡಿಸಿತು.​—⁠ಮತ್ತಾಯ 9:​2-8.

24. (ಎ) ಯೇಸು ದೇವರಿಂದ “ಬಾಧಿತ”ನಾದವನು ಎಂದು ಅನೇಕರಿಗೆ ತೋರಿದ್ದೇಕೆ? (ಬಿ) ಯೇಸು ಬಾಧೆಪಟ್ಟು ಸತ್ತದ್ದೇಕೆ?

24 ಆದರೂ ಅನೇಕರಿಗೆ, ಯೇಸು ದೇವರಿಂದ “ಬಾಧಿತ”ನಾದಂತೆ ಕಂಡಿತು. ಎಷ್ಟಾದರೂ, ಗೌರವಾನ್ವಿತರಾದ ಧಾರ್ಮಿಕ ಮುಖಂಡರ ಪ್ರೇರಣೆಯಿಂದ ಅವನು ಕಷ್ಟಾನುಭವಿಸಿದನು. ಆದರೆ ತನ್ನ ಸ್ವಂತ ಪಾಪಗಳ ಕಾರಣ ಅವನು ಬಾಧೆಪಡಲಿಲ್ಲವೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಪೇತ್ರನು ಹೇಳುವುದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ; ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.” (1 ಪೇತ್ರ 2:21, 22, 24) ನಾವೆಲ್ಲರೂ ಒಮ್ಮೆ ಪಾಪದಿಂದ ದಿಕ್ಕುತಪ್ಪಿದವರಾಗಿದ್ದೆವು, “ಕುರಿಗಳಂತೆ ದಾರಿತಪ್ಪಿ”ಹೋಗಿದ್ದೆವು. (1 ಪೇತ್ರ 2:25) ಆದರೆ ಯೆಹೋವನು ಯೇಸುವಿನ ಮೂಲಕ ನಮ್ಮ ಪಾಪಪೂರ್ಣ ಸ್ಥಿತಿಯಿಂದ ವಿಮೋಚನೆಯನ್ನು ಒದಗಿಸಿದನು. ಆತನು ನಮ್ಮ ದೋಷವನ್ನು ಯೇಸುವಿನ ಮೇಲೆ “ಹಾಕಿದನು.” ಪಾಪರಹಿತನಾದ ಯೇಸು ಇಷ್ಟಪೂರ್ವಕವಾಗಿ ನಮ್ಮ ಪಾಪಗಳಿಗಾಗಿ ಅಂತ್ಯಫಲವಾದ ಮರಣವನ್ನು ಅನುಭವಿಸಿದನು. ಅವನು ವಧಾಸ್ತಂಭದ ಮೇಲೆ ಅವಮಾನಕಾರಿ ಮರಣವನ್ನು ಅನುಭವಿಸುವಂಥದ್ದೇನನ್ನೂ ಮಾಡಿರದಿದ್ದರೂ, ಅದನ್ನು ಅನುಭವಿಸುವ ಮೂಲಕ ನಾವು ದೇವರೊಂದಿಗೆ ರಾಜಿಮಾಡಿಕೊಳ್ಳುವುದನ್ನು ಸಾಧ್ಯಗೊಳಿಸಿದನು.

‘ಅವನು ತನ್ನನ್ನು ಬಾಧೆಗೆ ಒಳಪಡಿಸಿಕೊಂಡನು’

25. ಮೆಸ್ಸೀಯನು ಸ್ವಂತ ಇಷ್ಟದಿಂದ ಬಾಧೆಪಟ್ಟು ಸತ್ತನೆಂದು ನಮಗೆ ಹೇಗೆ ಗೊತ್ತು?

25 ಮೆಸ್ಸೀಯನು ಬಾಧೆಪಟ್ಟು ಸಾಯಲು ಇಷ್ಟಪಟ್ಟನೋ? ಯೆಶಾಯನು ಹೇಳುವುದು: “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.” (ಯೆಶಾಯ 53:7) ತನ್ನ ಜೀವಿತದ ಕೊನೆಯ ರಾತ್ರಿ, ತನ್ನ ಸಹಾಯಕ್ಕೆ ಬರಲು “ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು” ಕಳುಹಿಸಿಕೊಡುವಂತೆ ಯೇಸು ಕೇಳಿಕೊಳ್ಳಸಾಧ್ಯವಿತ್ತು. ಆದರೆ ಅವನು ಹೇಳಿದ್ದು: “ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ?” (ಮತ್ತಾಯ 26:53, 54) ಇದಕ್ಕೆ ಬದಲು, “ದೇವರು ನೇಮಿಸಿದ ಕುರಿ” ಯಾವ ಪ್ರತಿಭಟನೆಯನ್ನೂ ತೋರಿಸಲಿಲ್ಲ. (ಯೋಹಾನ 1:29) ಮಹಾಯಾಜಕರೂ ಹಿರಿಯರೂ ಪಿಲಾತನ ಮುಂದೆ ಅವನ ಮೇಲೆ ಅಪವಾದ ಹೊರಿಸಲಾಗಿ ಅವನು “ಏನೂ ಉತ್ತರಕೊಡಲಿಲ್ಲ.” (ಮತ್ತಾಯ 27:​11-14) ಏನಾದರೂ ಹೇಳುವ ಮೂಲಕ, ತನಗಾಗಿ ದೇವರ ಚಿತ್ತವು ಏನಾಗಿತ್ತೊ ಅದರ ಕೈಗೂಡುವಿಕೆಯಲ್ಲಿ ಹಸ್ತಕ್ಷೇಪಮಾಡುವ ಮನಸ್ಸು ಅವನಿಗಿರಲಿಲ್ಲ. ತನ್ನ ಮರಣವು, ವಿಧೇಯ ಮಾನವಕುಲವನ್ನು ಪಾಪ, ರೋಗ ಮತ್ತು ಮರಣದಿಂದ ವಿಮೋಚಿಸುವುದೆಂದು ಚೆನ್ನಾಗಿ ತಿಳಿದವನಾಗಿದ್ದ ಯೇಸು, ಯಜ್ಞದ ಕುರಿಮರಿಯಂತೆ ಸಾಯಲು ಇಷ್ಟಪಟ್ಟನು.

26. ಯೇಸುವಿನ ವಿರೋಧಿಗಳು ಯಾವ ವಿಧದಲ್ಲಿ “ತಡೆ”ಯನ್ನು ಪ್ರಯೋಗಿಸಿದರು?

26 ಈಗ ಯೆಶಾಯನು ಮೆಸ್ಸೀಯನ ಕಷ್ಟಾನುಭವ ಮತ್ತು ಅವಮಾನದ ಕುರಿತು ಇನ್ನೂ ಹೆಚ್ಚು ವಿವರಗಳನ್ನು ಕೊಡುತ್ತಾನೆ. ಪ್ರವಾದಿಯು ಬರೆಯುವುದು: “ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು [“ಯಾರ ತಡೆಯೂ ಇಲ್ಲದೆ ಅನ್ಯಾಯವಾಗಿ ಕೊಲ್ಲಲ್ಪಟ್ಟನು,” ಪಾದಟಿಪ್ಪಣಿ], ಆಹಾ, ಇವನು ಜೀವಲೋಕದಿಂದ ಕೀಳಲ್ಪಟ್ಟಿದ್ದಾನೆ, ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು? [“ಅವನ ಸಂತತಿಯ ವಿವರಗಳನ್ನು ಕೂಡ ಯಾರು ತಾನೇ ಪರಿಗಣಿಸುವನು?” NW] (ಯೆಶಾಯ 53:8) ಯೇಸುವನ್ನು ಅವನ ವೈರಿಗಳು ಕೊನೆಯಲ್ಲಿ ಸೆರೆಹಿಡಿದಾಗ, ಆ ಧಾರ್ಮಿಕ ವಿರೋಧಿಗಳು ಅವನೊಂದಿಗೆ “ಯಾರ ತಡೆಯೂ ಇಲ್ಲದೆ ಅನ್ಯಾಯವಾಗಿ” ವ್ಯವಹರಿಸಿದರು. ಅವರು ನ್ಯಾಯವನ್ನು ನಿಗ್ರಹಿಸಿದರು ಅಥವಾ ತಡೆದಿಟ್ಟರು. ಯೆಶಾಯ 53:8ರಲ್ಲಿ ಗ್ರೀಕ್‌ ಸೆಪ್ಟ್ಯುಅಜಿಂಟ್‌, “ಯಾವ ತಡೆಯೂ ಇಲ್ಲದೆ” ಎಂಬುದರ ಬದಲು “ಅವಮಾನದಿಂದ” ಎಂದು ಹೇಳುತ್ತದೆ. ಯೇಸುವಿನ ವೈರಿಗಳು ಸಾಮಾನ್ಯ ಪಾತಕಿಯೊಬ್ಬನಿಗೆ ಕೊಡತಕ್ಕ ನ್ಯಾಯವಾದ ಕ್ರಮವನ್ನೂ ಯೇಸುವಿನಿಂದ ತಡೆಹಿಡಿದು ಅವನನ್ನು ಅವಮಾನಗೊಳಿಸಿದರು. ಯೇಸುವಿನ ನ್ಯಾಯವಿಚಾರಣೆಯು ನ್ಯಾಯವನ್ನು ನಗೆಗೀಡುಮಾಡಿತು. ಅದು ಹೇಗೆ?

27. ಯೆಹೂದಿ ಧಾರ್ಮಿಕ ಮುಖಂಡರು ಯೇಸುವಿನ ನ್ಯಾಯವಿಚಾರಣೆ ನಡೆಸುತ್ತಿದ್ದಾಗ ಯಾವ ನಿಯಮಗಳನ್ನು ಅಲಕ್ಷಿಸಿದರು, ಮತ್ತು ಅವರು ಯಾವ ವಿಧಗಳಲ್ಲಿ ದೇವರ ನಿಯಮವನ್ನು ಮುರಿದರು?

27 ಯೇಸುವನ್ನು ತಮ್ಮೆದುರಿನಿಂದ ತೊಲಗಿಸಬೇಕೆಂಬ ದೃಢನಿರ್ಧಾರದಿಂದ ಯೆಹೂದಿ ಧಾರ್ಮಿಕ ಮುಖಂಡರು ತಮ್ಮ ಸ್ವಂತ ನಿಯಮಗಳನ್ನೇ ಉಲ್ಲಂಘಿಸಿದರು. ಸಂಪ್ರದಾಯಕ್ಕನುಸಾರ, ಹಿರೀಸಭೆಯು ಮರಣದಂಡನೆಗೆ ಅರ್ಹವಾದ ಅಪರಾಧಗಳನ್ನು ಮಹಾಯಾಜಕನ ಮನೆಯಲ್ಲಲ್ಲ, ಬದಲಾಗಿ ದೇವಾಲಯದ ಆವರಣದಲ್ಲಿರುವ ಕೆತ್ತಿದ ಕಲ್ಲುಗಳ ಭವನದಲ್ಲಿ ಮಾತ್ರ ವಿಚಾರಿಸಬೇಕಾಗಿತ್ತು. ಅಂತಹ ನ್ಯಾಯವಿಚಾರಣೆಯು ಹಗಲು ಹೊತ್ತಿನಲ್ಲಿ ಮಾತ್ರ ನಡೆಯಬೇಕಾಗಿತ್ತು, ಸೂರ್ಯನು ಮುಳುಗಿದ ಮೇಲಲ್ಲ. ಮತ್ತು ಮರಣದಂಡನೆಯ ಮೊಕದ್ದಮೆಯಲ್ಲಿ, ದಂಡನೆಯ ತೀರ್ಪನ್ನು ವಿಚಾರಣೆ ಮುಗಿದ ಮರುದಿನ ಪ್ರಕಟಿಸಬೇಕಾಗಿತ್ತು. ಆದಕಾರಣ, ಸಬ್ಬತ್ತಿನ ಅಥವಾ ಹಬ್ಬಕ್ಕೆ ಮುಂಚಿನ ರಾತ್ರಿ ನ್ಯಾಯವಿಚಾರಣೆಯನ್ನು ನಡೆಸಬಾರದಾಗಿತ್ತು. ಆದರೆ ಯೇಸುವಿನ ನ್ಯಾಯವಿಚಾರಣೆಯ ಸಂಬಂಧದಲ್ಲಿ ಈ ನಿಯಮಗಳೆಲ್ಲ ಬದಿಗೆ ತಳ್ಳಲ್ಪಟ್ಟಿದ್ದವು. (ಮತ್ತಾಯ 26:​57-68) ಇನ್ನೂ ಕೆಟ್ಟದ್ದಾಗಿ, ಆ ಧಾರ್ಮಿಕ ಮುಖಂಡರು ಈ ಮೊಕದ್ದಮೆಯಲ್ಲಿ ದೇವರ ನಿಯಮವನ್ನು ಅವಮಾನಕರವಾಗಿ ಮುರಿದರು. ಉದಾಹರಣೆಗೆ, ಯೇಸುವನ್ನು ಹಿಡಿದುಕೊಡಲು ಅವರು ಲಂಚಕೊಟ್ಟರು. (ಧರ್ಮೋಪದೇಶಕಾಂಡ 16:19; ಲೂಕ 22:​2-6) ಅವರು ಸುಳ್ಳು ಸಾಕ್ಷಿಗಳು ಹೇಳಿದ್ದನ್ನು ಕೇಳಿದರು. (ವಿಮೋಚನಕಾಂಡ 20:16; ಮಾರ್ಕ 14:​55, 56) ಮತ್ತು ಒಬ್ಬ ಕೊಲೆಗಾರನನ್ನು ಬಿಡುಗಡೆಮಾಡಲು ಒಳಸಂಚು ನಡೆಸಿ, ಹೀಗೆ ತಮ್ಮ ಮೇಲೆಯೂ ದೇಶದ ಮೇಲೆಯೂ ರಕ್ತಾಪರಾಧವನ್ನು ತಂದರು. (ಅರಣ್ಯಕಾಂಡ 35:​31-34; ಧರ್ಮೋಪದೇಶಕಾಂಡ 19:​11-13; ಲೂಕ 23:​16-25) ಆದಕಾರಣ, ಅಲ್ಲಿ “ನ್ಯಾಯ”ವಾಗಲಿ ಸರಿಯಾದ, ನಿಷ್ಪಕ್ಷಪಾತದ ತೀರ್ಮಾನವಿದ್ದ ನ್ಯಾಯಸಮ್ಮತ ವಿಚಾರಣೆಯಾಗಲಿ ಇರಲಿಲ್ಲ.

28. ಯೇಸುವಿನ ವೈರಿಗಳು ಏನನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ತಪ್ಪಿದರು?

28 ತಮ್ಮ ಮುಂದೆ ವಿಚಾರಣೆಗೊಳಗಾಗುತ್ತಿದ್ದ ಮನುಷ್ಯನು ನಿಜವಾಗಿಯೂ ಯಾರೆಂದು ಯೇಸುವಿನ ವೈರಿಗಳು ಪತ್ತೆಹಚ್ಚಿದರೊ? ತದ್ರೀತಿಯ ಪ್ರಶ್ನೆಯನ್ನೇ ಯೆಶಾಯನು ಕೇಳುತ್ತಾನೆ: “ಅವನ ಸಂತತಿಯ ವಿವರಗಳನ್ನು ಕೂಡ ಯಾರು ತಾನೇ ಪರಿಗಣಿಸುವನು?” “ಸಂತತಿ” ಎಂಬ ಪದವು ಒಬ್ಬನ ವಂಶವನ್ನು ಇಲ್ಲವೆ ಹಿನ್ನೆಲೆಯನ್ನು ಸೂಚಿಸಬಹುದು. ಯೇಸು ಹಿರೀಸಭೆಯ ಮುಂದೆ ವಿಚಾರಣೆಗೊಳಗಾಗಿದ್ದಾಗ, ಅದರ ಸದಸ್ಯರು ಅವನ ಹಿನ್ನೆಲೆಯನ್ನು, ಅಂದರೆ ವಾಗ್ದತ್ತ ಮೆಸ್ಸೀಯನಾಗಲು ಬೇಕಾದ ಅರ್ಹತೆಗಳನ್ನು ಅವನು ಪೂರೈಸಿದ್ದಾನೆ ಎಂಬ ವಿಷಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬದಲಿಗೆ, ಅವರು ಅವನ ಮೇಲೆ ದೇವದೂಷಣೆಯ ಆರೋಪವನ್ನು ಹೊರಿಸಿ, ಅವನು ಮರಣಪಾತ್ರನೆಂಬ ತೀರ್ಮಾನಕ್ಕೆ ಬಂದರು. (ಮಾರ್ಕ 14:64) ತರುವಾಯ ರೋಮನ್‌ ದೇಶಾಧಿಪತಿಯಾದ ಪೊಂತ್ಯ ಪಿಲಾತನು ಅವರ ಒತ್ತಾಯಕ್ಕೆ ಮಣಿದು, ಯೇಸುವನ್ನು ಶೂಲಕ್ಕೇರಿಸುವ ತೀರ್ಪನ್ನು ಕೊಟ್ಟನು. (ಲೂಕ 23:​13-25) ಹೀಗೆ ಯೇಸು ಕೇವಲ 33 1/2 ವರುಷ ಪ್ರಾಯದಲ್ಲಿ, ಅಂದರೆ ತನ್ನ ಜೀವನದ ಮಧ್ಯ ವಯಸ್ಸಿನಲ್ಲೇ ‘ಕೀಳಲ್ಪಟ್ಟನು’ ಅಥವಾ ಛೇದಿಸಲ್ಪಟ್ಟನು.

29. “ದುಷ್ಟರ ಮಧ್ಯೆ ಧನಿಕನ ಪಕ್ಕದಲ್ಲಿ” ಯೇಸು ಹೂಣಿಡಲ್ಪಟ್ಟದ್ದು ಹೇಗೆ?

29 ಮೆಸ್ಸೀಯನ ಮರಣ ಮತ್ತು ಹೂಣಿಡುವಿಕೆಯ ಕುರಿತು ಯೆಶಾಯನು ಮುಂದೆ ಹೀಗೆ ಬರೆಯುತ್ತಾನೆ: “ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ [“ಧನಿಕನ ಪಕ್ಕದಲ್ಲಿ,” ಪಾದಟಿಪ್ಪಣಿ] ಅವನನ್ನು ಹೂಣಿಟ್ಟರು.” (ಯೆಶಾಯ 53:9) ಮರಣ ಮತ್ತು ಹೂಣಿಡುವಿಕೆಯ ಸಂಬಂಧದಲ್ಲಿ ಯೇಸು ದುಷ್ಟರ ಹಾಗೂ ಧನಿಕರ ಮಧ್ಯೆ ಇದ್ದದ್ದು ಹೇಗೆ? ಸಾ.ಶ. 33ರ ನೈಸಾನ್‌ 14ರಂದು ಅವನು ಯೆರೂಸಲೇಮಿನ ಗೋಡೆಗಳ ಹೊರಗೆ ವಧಾಸ್ತಂಭದ ಮೇಲೆ ಸತ್ತನು. ಅವನನ್ನು ಇಬ್ಬರು ದುಷ್ಕರ್ಮಿಗಳ ನಡುವೆ ಶೂಲಕ್ಕೇರಿಸಿದ್ದರಿಂದ, ಒಂದರ್ಥದಲ್ಲಿ ಅವನನ್ನು ಹೂಣಿಟ್ಟ ಸ್ಥಳವು ದುಷ್ಟರ ಮಧ್ಯೆ ಇತ್ತು. (ಲೂಕ 23:33) ಆದರೆ, ಯೇಸು ಮರಣಪಟ್ಟ ಬಳಿಕ, ಅರಿಮಥಾಯದ ಯೋಸೇಫನೆಂಬ ಒಬ್ಬ ಶ್ರೀಮಂತನು, ಯೇಸುವಿನ ಶವವನ್ನು ಕೆಳಗಿಳಿಸಿ ಹೂಳಲು ಪಿಲಾತನಿಂದ ಅಪ್ಪಣೆ ಪಡೆಯುವಷ್ಟು ಧೈರ್ಯ ತಂದುಕೊಂಡನು. ಯೋಸೇಫನು ನಿಕೊದೇಮನೊಂದಿಗೆ ಆ ಶವವನ್ನು ಹೂಳಲಿಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿ, ಅದನ್ನು ತನಗೆ ಸೇರಿದ್ದ ಹೊಸದಾಗಿ ತೋಡಿದ್ದ ಒಂದು ಸಮಾಧಿಯಲ್ಲಿಟ್ಟನು. (ಮತ್ತಾಯ 27:​57-60; ಯೋಹಾನ 19:​38-42) ಹೀಗೆ, ಯೇಸುವಿನ ಸಮಾಧಿಯು ಧನಿಕ ವರ್ಗದವರ ಸಮಾಧಿಗಳ ಮಧ್ಯೆ ಇರುವಂತಾಯಿತು.

‘ಅವನನ್ನು ಜಜ್ಜುವುದರಲ್ಲಿ ಯೆಹೋವನು ಆನಂದಪಟ್ಟನು’

30. ಯೇಸುವನ್ನು ಜಜ್ಜುವುದರಲ್ಲಿ ಯೆಹೋವನು ಯಾವ ಅರ್ಥದಲ್ಲಿ ಆನಂದಪಟ್ಟನು?

30 ಯೆಶಾಯನು ಆ ಬಳಿಕ ಬೆಚ್ಚಿಬೀಳಿಸುವ ವಿಷಯವೊಂದನ್ನು ಹೇಳುತ್ತಾನೆ: “ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು [“ಅವನನ್ನು ಜಜ್ಜುವುದರಲ್ಲಿ ಯೆಹೋವನು ತಾನೇ ಆನಂದಪಟ್ಟನು,” NW]. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು​—⁠ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು, ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವದು; ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ [“ನೀತಿಯ ನಿಲುವಿಗೆ,” NW] ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು.” (ಯೆಶಾಯ 53:10, 11) ತನ್ನ ನಂಬಿಗಸ್ತ ಸೇವಕನು ಜಜ್ಜಲ್ಪಡುವುದನ್ನು ನೋಡಿ ಯೆಹೋವನು ಆನಂದಪಡುವುದು ಹೇಗೆ ಸಾಧ್ಯ? ಯೆಹೋವನು ತಾನೇ ತನ್ನ ಪ್ರಿಯ ಮಗನ ಮೇಲೆ ಕಷ್ಟಾನುಭವವನ್ನು ತರಲಿಲ್ಲವೆಂಬುದು ಸ್ಪಷ್ಟ. ಅವನಿಗೆ ಏನಾಯಿತೊ ಅದಕ್ಕೆ ಯೇಸುವಿನ ವೈರಿಗಳೇ ಸಂಪೂರ್ಣವಾಗಿ ಜವಾಬ್ದಾರರಾಗಿದ್ದರು. ಆದರೆ ಅವರು ಕ್ರೂರವಾಗಿ ವರ್ತಿಸುವಂತೆ ಯೆಹೋವನು ಅನುಮತಿಸಿದನು. (ಯೋಹಾನ 19:11) ಯಾವ ಕಾರಣಕ್ಕಾಗಿ? ಸಹಾನುಭೂತಿ ಮತ್ತು ಕೋಮಲ ಕನಿಕರವುಳ್ಳ ದೇವರು, ತನ್ನ ಮುಗ್ಧ ಕುಮಾರನ ಕಷ್ಟಾನುಭವವನ್ನು ನೋಡಿ ವ್ಯಥೆಪಟ್ಟನೆಂಬುದು ಖಂಡಿತ. (ಯೆಶಾಯ 63:9; ಲೂಕ 1:​77, 78) ಯೆಹೋವನು ಯೇಸುವಿನ ಕುರಿತು ಯಾವುದೇ ವಿಧದಲ್ಲಿ ಅಸಮಾಧಾನಪಡಲಿಲ್ಲವೆಂಬುದು ಖಂಡಿತ. ಆದರೂ, ತನ್ನ ಪುತ್ರನು ಕಷ್ಟಾನುಭವಿಸುವುದರಿಂದ ಫಲಿಸಲಿರುವ ಎಲ್ಲ ಆಶೀರ್ವಾದಗಳ ಕಾರಣಕ್ಕಾಗಿ, ಅವನು ಇಷ್ಟಪೂರ್ವಕವಾಗಿ ಕಷ್ಟಾನುಭವಿಸುವುದನ್ನು ನೋಡುವುದರಲ್ಲಿ ಯೆಹೋವನು ಆನಂದಪಟ್ಟನು.

31. (ಎ) ಯೆಹೋವನು ಯೇಸುವಿನ ಪ್ರಾಣವನ್ನು ಯಾವ ರೀತಿಯಲ್ಲಿ “ಪ್ರಾಯಶ್ಚಿತ್ತಯಜ್ಞ”ವಾಗಿ ಒಪ್ಪಿಸಿದನು? (ಬಿ) ಒಬ್ಬ ಮಾನವನಾಗಿ ಯೇಸು ಎಲ್ಲ ರೀತಿಯ ಕಷ್ಟಗಳನ್ನು ಅನುಭವಿಸಿದ ಬಳಿಕ, ಅವನಿಗೆ ವಿಶೇಷವಾಗಿ ಯಾವುದು ತೃಪ್ತಿಕರವಾಗಿದ್ದಿರಬೇಕು?

31 ಒಂದನೆಯ ಆಶೀರ್ವಾದವು, ಯೆಹೋವನು ಯೇಸುವಿನ ಪ್ರಾಣವನ್ನು “ಪ್ರಾಯಶ್ಚಿತ್ತಯಜ್ಞವಾಗಿ” ಒಪ್ಪಿಸಿದ್ದೇ ಆಗಿದೆ. ಆದಕಾರಣ, ಯೇಸು ಸ್ವರ್ಗಕ್ಕೆ ಹಿಂದಿರುಗಿ ಹೋದಾಗ, ಅವನು ಪ್ರಾಯಶ್ಚಿತ್ತಯಜ್ಞದೋಪಾದಿ ತನ್ನ ಯಜ್ಞಾರ್ಪಿತ ಮಾನವ ಜೀವದ ಮೌಲ್ಯವನ್ನು ಹೊತ್ತವನಾಗಿ ಯೆಹೋವನ ಸನ್ನಿಧಾನವನ್ನು ಪ್ರವೇಶಿಸಿದನು. ಮತ್ತು ಯೆಹೋವನು ಇದನ್ನು ಸಕಲ ಮಾನವಕುಲದ ಪರವಾಗಿ ಅಂಗೀಕರಿಸಲು ಸಂತೋಷಪಟ್ಟನು. (ಇಬ್ರಿಯ 9:24; 10:​5-14) ಈ ಪ್ರಾಯಶ್ಚಿತ್ತಯಜ್ಞದ ಮುಖೇನ ಯೇಸು “ಸಂತಾನ”ವನ್ನು ಪಡೆದುಕೊಂಡನು. ‘ನಿತ್ಯನಾದ ತಂದೆ’ಯೋಪಾದಿ ಅವನು ತಾನು ಸುರಿಸಿದ ರಕ್ತದ ಮೇಲೆ ನಂಬಿಕೆಯಿಡುವವರಿಗೆ ಜೀವವನ್ನು, ಅಂದರೆ ನಿತ್ಯಜೀವವನ್ನು ಕೊಡಶಕ್ತನಾಗಿದ್ದಾನೆ. (ಯೆಶಾಯ 9:⁠6) ಮಾನವನಾಗಿ ಯೇಸು ಸಹಿಸಿಕೊಂಡ ಸಕಲ ಉಪದ್ರವಗಳ ಬಳಿಕ, ಮಾನವಕುಲವನ್ನು ಪಾಪ ಮತ್ತು ಮರಣದಿಂದ ವಿಮೋಚಿಸುವ ಪ್ರತೀಕ್ಷೆಯುಳ್ಳವನಾಗಿರುವುದು ಅವನಿಗೆ ಅದೆಷ್ಟು ತೃಪ್ತಿಯನ್ನು ನೀಡಿದ್ದಿರಬೇಕು! ಮತ್ತು ತನ್ನ ಸಮಗ್ರತೆಯೇ, ತನ್ನ ಸ್ವರ್ಗೀಯ ತಂದೆಯು ಆತನ ವಿರೋಧಿಯಾಗಿರುವ ಪಿಶಾಚನಾದ ಸೈತಾನನ ಕೆಣಕುವಿಕೆಗಳಿಗೆ ಉತ್ತರವನ್ನು ಕೊಡುವಂತೆ ಮಾಡಿತೆಂಬ ವಿಷಯವು ಅವನಿಗೆ ಇನ್ನಷ್ಟು ಸಂತೃಪ್ತಿಯನ್ನು ತಂದಿರಬೇಕೆಂಬುದು ಖಂಡಿತ.​—⁠ಜ್ಞಾನೋಕ್ತಿ 27:⁠11.

32. ಯಾವ “ಜ್ಞಾನದ” ಮೂಲಕ ಯೇಸು “ಬಹು ಜನರನ್ನು ನೀತಿಯ ನಿಲುವಿಗೆ” ತರುತ್ತಾನೆ, ಮತ್ತು ಈ ನಿಲುವು ಯಾರಿಗೆ ಸಿಗುತ್ತದೆ?

32 ಯೇಸುವಿನ ಮರಣದಿಂದ ಬರುವ ಇನ್ನೊಂದು ಆಶೀರ್ವಾದವು, ಅವನು “ಬಹು ಜನರನ್ನು” ಈಗಲೂ “ನೀತಿಯ ನಿಲುವಿಗೆ” ತರುವುದೇ ಆಗಿದೆ. ಅವನು ಅದನ್ನು “ತನ್ನ ಜ್ಞಾನದ ಮೂಲಕ” ಮಾಡುವನೆಂದು ಯೆಶಾಯನು ಹೇಳುತ್ತಾನೆ. ಈ ಜ್ಞಾನವು, ಯೇಸು ಮನುಷ್ಯನಾಗಿ ಹುಟ್ಟಿಬಂದು, ದೇವರಿಗೆ ವಿಧೇಯನಾಗಿದ್ದದಕ್ಕಾಗಿ ಅನ್ಯಾಯವಾಗಿ ಬಾಧೆಪಟ್ಟದ್ದರ ಮೂಲಕ ಪಡೆದಂಥ ಜ್ಞಾನವಾಗಿದೆಯೆಂಬುದು ಸ್ಪಷ್ಟ. (ಇಬ್ರಿಯ 4:15) ಮರಣಪರ್ಯಂತ ಕಷ್ಟಾನುಭವಿಸುವುದರಿಂದ, ಇತರರು ನೀತಿಯ ನಿಲುವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು ಬೇಕಾಗಿದ್ದ ಯಜ್ಞವನ್ನು ಯೇಸು ಒದಗಿಸಶಕ್ತನಾದನು. ಈ ನೀತಿಯ ನಿಲುವು ಯಾರಿಗೆ ಸಿಗುತ್ತದೆ? ಪ್ರಥಮವಾಗಿ, ಅವನ ಅಭಿಷಿಕ್ತ ಹಿಂಬಾಲಕರಿಗೆ. ಅವರು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಡುವ ಕಾರಣ, ಯೆಹೋವನು ಅವರನ್ನು ಪುತ್ರರಾಗಿ ಸ್ವೀಕರಿಸುವ ಸಲುವಾಗಿ ಅವರನ್ನು ನೀತಿವಂತರೆಂದು ನಿರ್ಣಯಿಸುತ್ತಾನೆ, ಮತ್ತು ಅವರು ಯೇಸುವಿನೊಂದಿಗೆ ಜೊತೆಬಾಧ್ಯಸ್ಥರಾಗುವಂತೆ ಮಾಡುತ್ತಾನೆ. (ರೋಮಾಪುರ 5:19; 8:​16, 17) ಬಳಿಕ, “ಬೇರೆ ಕುರಿಗಳ” ಒಂದು “ಮಹಾ ಸಮೂಹ”ವು ಯೇಸುವಿನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯಿಟ್ಟು, ದೇವರ ಸ್ನೇಹಿತರಾಗುವ ಮತ್ತು ಹರ್ಮಗೆದೋನಿನಲ್ಲಿ ಪಾರಾಗುವ ದೃಷ್ಟಿಕೋನದಿಂದ ನೀತಿಯ ನಿಲುವನ್ನು ಅನುಭವಿಸುತ್ತದೆ.​—⁠ಪ್ರಕಟನೆ 7:9; 16:​14, 16; ಯೋಹಾನ 10:16; ಯಾಕೋಬ 2:​23, 25.

33, 34. (ಎ) ನಮಗೆ ಹೃದಯೋಲ್ಲಾಸವನ್ನು ಉಂಟುಮಾಡುವಂಥ ಯಾವ ಸಂಗತಿಯನ್ನು ನಾವು ಯೆಹೋವನ ಕುರಿತು ಕಲಿಯುತ್ತೇವೆ? (ಬಿ) ಮೆಸ್ಸೀಯ ಸೇವಕನಿಗೆ ಯಾರೊಂದಿಗೆ “ಪಾಲು” ದೊರೆಯುತ್ತದೊ ಆ “ಅನೇಕರು” ಯಾರು?

33 ಕೊನೆಯದಾಗಿ ಯೆಶಾಯನು ಮೆಸ್ಸೀಯನ ವಿಜಯವನ್ನು ವರ್ಣಿಸುತ್ತಾನೆ: “ಇವನು ಇಂಥವನಾಗಿರುವದರಿಂದ ನಾನು ಇವನಿಗೆ ದೊಡ್ಡವರ [“ಅನೇಕರ,” NW] ಸಂಗಡ ಪಾಲು ಕೊಡುವೆನು, ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿ ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆಮಾಡಿದನಲ್ಲಾ.”​—ಯೆಶಾಯ 53:⁠12.

34 ಯೆಶಾಯನ ಪ್ರವಾದನೆಯ ಈ ಭಾಗದ ಕೊನೆಯ ಮಾತುಗಳು, ಯೆಹೋವನ ಕುರಿತು ಹೃದಯೋಲ್ಲಾಸವನ್ನು ಉಂಟುಮಾಡುವ ಈ ವಿಷಯವನ್ನು ತಿಳಿಸುತ್ತವೆ: ತನಗೆ ನಿಷ್ಠರಾಗಿ ಉಳಿಯುವವರನ್ನು ಆತನು ಅಮೂಲ್ಯರೆಂದೆಣಿಸುತ್ತಾನೆ. ತನ್ನ ಮೆಸ್ಸೀಯ ಸೇವಕನಿಗೆ “ಅನೇಕರ ಸಂಗಡ ಪಾಲು” ಕೊಡುವೆನು ಎಂಬ ಆತನ ವಾಗ್ದಾನದಿಂದ ಇದು ಸೂಚಿಸಲ್ಪಡುತ್ತದೆ. ಈ ಮಾತುಗಳು ಪ್ರಾಯಶಃ ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳನ್ನು ಪಾಲುಮಾಡಿಕೊಳ್ಳುವ ವಾಡಿಕೆಯಿಂದ ಬಂದವುಗಳಾಗಿವೆ. ಯೆಹೋವನು ಪೂರ್ವಕಾಲದ “ಅನೇಕ” ನಂಬಿಗಸ್ತರ ನಿಷ್ಠೆಯನ್ನು ಗಣ್ಯಮಾಡುತ್ತಾನೆ. ಇವರಲ್ಲಿ ನೋಹ, ಅಬ್ರಹಾಮ ಮತ್ತು ಯೋಬರು ಸೇರಿದ್ದು, ಆತನು ಬರಲಿರುವ ತನ್ನ ನೂತನ ಲೋಕದಲ್ಲಿ ಅವರಿಗಾಗಿ ‘ಪಾಲನ್ನು’ ಕಾದಿರಿಸಿದ್ದಾನೆ. (ಇಬ್ರಿಯ 11:13-16) ಅದೇ ರೀತಿಯಲ್ಲಿ ಅವನು ತನ್ನ ಮೆಸ್ಸೀಯ ಸೇವಕನಿಗೂ ಒಂದು ಪಾಲನ್ನು ಕೊಡುವನು. ಯೇಸುವಿನ ಸಮಗ್ರತೆಗೆ ಯೆಹೋವನು ಖಂಡಿತವಾಗಿಯೂ ಪ್ರತಿಫಲ ಕೊಡದೇ ಇರುವುದಿಲ್ಲ. ಯೆಹೋವನು ‘ನಮ್ಮ ಕೆಲಸವನ್ನೂ ನಾವು ಆತನ ನಾಮಕ್ಕೆ ತೋರಿಸಿರುವ ಪ್ರೀತಿಯನ್ನೂ ಮರೆಯನು’ ಎಂಬ ವಿಷಯದಲ್ಲಿ ನಾವು ಸಹ ನಿಶ್ಚಿತರಾಗಿರಬಲ್ಲೆವು.​—⁠ಇಬ್ರಿಯ 6:⁠10.

35. ಯೇಸು ಯಾರೊಂದಿಗೆ ಸೂರೆಯನ್ನು ಹಂಚಿಕೊಳ್ಳುತ್ತಾನೊ ಆ ‘ಬಲಿಷ್ಠರು’ ಯಾರು, ಮತ್ತು ಆ ಸೂರೆಯೇನು?

35 ದೇವರ ಆ ಸೇವಕನು ತನ್ನ ವೈರಿಗಳ ಮೇಲೆ ವಿಜಯವನ್ನು ಗಳಿಸಿ, ಸೂರೆಯನ್ನೂ ಪಡೆಯುವನು. ಅವನು ಈ ಸೂರೆಯನ್ನು “ಬಲಿಷ್ಠ”ರೊಂದಿಗೆ ಹಂಚಿಕೊಳ್ಳುವನು. ಇದರ ನೆರವೇರಿಕೆಯಲ್ಲಿ, ಈ ‘ಬಲಿಷ್ಠರು’ ಯಾರು? ಅವರು, ಯೇಸುವಿನಂತೆಯೇ ಲೋಕವನ್ನು ಜಯಿಸಿದ ಅವನ ಶಿಷ್ಯರಲ್ಲಿ ಮೊದಲಿಗರು, ಅಂದರೆ ‘ದೇವರ ಇಸ್ರಾಯೇಲಿನ’ 1,44,000 ಮಂದಿ ಪ್ರಜೆಗಳಾಗಿದ್ದಾರೆ. (ಗಲಾತ್ಯ 6:16; ಯೋಹಾನ 16:33; ಪ್ರಕಟನೆ 3:21; 14:⁠1) ಹಾಗಾದರೆ, ಸೂರೆಮಾಡಿರುವ ವಸ್ತುಗಳು ಯಾವುವು? ಯೇಸು ಯಾರನ್ನು ಸೈತಾನನ ಹತೋಟಿಯಿಂದ ಕಿತ್ತುಕೊಂಡು, ಅವರನ್ನು ಕ್ರೈಸ್ತ ಸಭೆಗೆ ಕೊಡುತ್ತಾನೋ ಆ “ಪುರುಷರ ರೂಪದಲ್ಲಿ ದಾನಗಳು” ಈ ಸೂರೆಯಲ್ಲಿ ಸೇರಿದ್ದಾರೆ. (ಎಫೆಸ 4:​8-12, NW) ಈ 1,44,000 ಮಂದಿ ‘ಬಲಿಷ್ಠರಿಗೆ’ ಇನ್ನೊಂದು ಸೂರೆಯಲ್ಲಿನ ಪಾಲನ್ನೂ ಕೊಡಲಾಗುತ್ತದೆ. ಅವರು ಲೋಕವನ್ನು ಜಯಿಸಿರುವುದರಿಂದ, ದೇವರನ್ನು ಕೆಣಕಲು ಸೈತಾನನಿಗಿರುವ ಯಾವುದೇ ಆಧಾರವನ್ನು ಅವರು ಅವನಿಂದ ಕಿತ್ತುಕೊಳ್ಳುತ್ತಾರೆ. ಅವರು ಯೆಹೋವನಿಗೆ ತೋರಿಸುವ ಮುರಿಯಲಸಾಧ್ಯವಾದ ಭಕ್ತಿಯು ಆತನನ್ನು ಘನತೆಗೇರಿಸಿ, ಆತನ ಹೃದಯವನ್ನು ಸಂತೋಷಪಡಿಸುತ್ತದೆ.

36. ದೇವರ ಸೇವಕನ ಕುರಿತಾದ ಪ್ರವಾದನೆಯನ್ನು ತಾನು ನೆರವೇರಿಸುತ್ತಿದ್ದೇನೆಂಬುದು ಯೇಸುವಿಗೆ ತಿಳಿದಿತ್ತೊ? ವಿವರಿಸಿ.

36 ದೇವರ ಸೇವಕನ ಕುರಿತಾದ ಪ್ರವಾದನೆಯನ್ನು ತಾನು ನೆರವೇರಿಸುತ್ತಿದ್ದೇನೆಂಬ ಅರಿವು ಯೇಸುವಿಗಿತ್ತು. ತನ್ನ ದಸ್ತಗಿರಿಯ ರಾತ್ರಿ ಅವನು ಯೆಶಾಯ 53:12ರಲ್ಲಿ ದಾಖಲಿಸಲ್ಪಟ್ಟಿರುವ ಈ ಮಾತುಗಳನ್ನು ಉಲ್ಲೇಖಿಸಿ, ಅವುಗಳನ್ನು ತನಗೆ ಅನ್ವಯಿಸಿಕೊಂಡನು: “ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ; ನನ್ನ ವಿಷಯವಾದದ್ದು ಕೊನೆಗಾಣಬೇಕು.” (ಲೂಕ 22:36, 37) ದುಃಖಕರವಾದ ವಿಷಯವೇನಂದರೆ, ಯೇಸುವನ್ನು ನಿಶ್ಚಯವಾಗಿಯೂ ಒಬ್ಬ ಅಪರಾಧಿಯಂತೆ ಉಪಚರಿಸಲಾಯಿತು. ಕಾನೂನುಭಂಜಕನಂತೆ ಅವನನ್ನು ಇಬ್ಬರು ಕಳ್ಳರ ಮಧ್ಯೆ ಶೂಲಕ್ಕೇರಿಸಲಾಯಿತು. (ಮಾರ್ಕ 15:27) ಆದರೂ ಅವನು ನಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದಾನೆಂಬುದನ್ನು ಚೆನ್ನಾಗಿ ತಿಳಿದವನಾಗಿ ಈ ನಿಂದೆಯನ್ನು ಸಂತೋಷದಿಂದ ಸಹಿಸಿಕೊಂಡನು. ಅವನು ಕಾರ್ಯತಃ ಪಾಪಿಗಳ ಮತ್ತು ಮರಣಶಿಕ್ಷೆಯ ಹೊಡೆತದ ಮಧ್ಯೆ ನಿಂತುಕೊಂಡು, ಆ ಹೊಡೆತವನ್ನು ಸ್ವತಃ ಪಡೆದುಕೊಂಡನು.

37. (ಎ) ಯೇಸುವಿನ ಜೀವನ ಮತ್ತು ಮರಣದ ಕುರಿತಾದ ಐತಿಹಾಸಿಕ ದಾಖಲೆಯು ನಾವು ಏನನ್ನು ಗುರುತಿಸುವಂತೆ ಸಾಧ್ಯಮಾಡುತ್ತದೆ? (ಬಿ) ನಾವು ಯೆಹೋವ ದೇವರಿಗೂ ಮಹೋನ್ನತ ಪದವಿಗೇರಿಸಲ್ಪಟ್ಟ ಆತನ ಸೇವಕನಾದ ಯೇಸು ಕ್ರಿಸ್ತನಿಗೂ ಏಕೆ ಆಭಾರಿಗಳಾಗಿರಬೇಕು?

37 ಯೇಸುವಿನ ಜೀವನ ಮತ್ತು ಮರಣದ ಕುರಿತಾದ ಐತಿಹಾಸಿಕ ದಾಖಲೆಯು, ಯೆಶಾಯನ ಪ್ರವಾದನೆಯ ಮೆಸ್ಸೀಯ ಸೇವಕನು ಯೇಸು ಕ್ರಿಸ್ತನೆಂಬುದನ್ನು ಯಾವುದೇ ಸಂದೇಹವಿಲ್ಲದೆ ಗುರುತಿಸುವಂತೆ ನಮಗೆ ಸಾಧ್ಯಮಾಡುತ್ತದೆ. ಯೆಹೋವನು ತನ್ನ ಪ್ರಿಯ ಕುಮಾರನು ಆ ಸೇವಕನ ಪ್ರವಾದನ ಪಾತ್ರವನ್ನು ನೆರವೇರಿಸುವಂತೆ ಮತ್ತು ನಾವು ಪಾಪ ಹಾಗೂ ಮರಣಗಳಿಂದ ವಿಮೋಚನೆ ಹೊಂದಲಿಕ್ಕಾಗಿ ಅವನು ಕಷ್ಟಾನುಭವಿಸಿ ಸಾಯುವಂತೆ ಬಿಡಲು ತೋರಿಸಿದ ಸಿದ್ಧಮನಸ್ಸಿಗಾಗಿ ನಾವೆಷ್ಟು ಆಭಾರಿಗಳಾಗಿರಬೇಕು! ಯೆಹೋವನು ಹೀಗೆ ನಮಗಾಗಿ ಮಹಾ ಪ್ರೀತಿಯನ್ನು ತೋರಿಸಿದನು. ರೋಮಾಪುರ 5:8 ಹೇಳುವುದು: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” ತನ್ನ ಪ್ರಾಣವನ್ನು ಮರಣದಲ್ಲಿ ಇಷ್ಟಪೂರ್ವಕವಾಗಿ ಧಾರೆಯೆರೆದ, ಮಹೋನ್ನತ ಪದವಿಗೇರಿಸಲ್ಪಟ್ಟ ಸೇವಕನಾದ ಯೇಸು ಕ್ರಿಸ್ತನಿಗೂ ನಾವು ಎಷ್ಟು ಕೃತಜ್ಞರಾಗಿರಬೇಕು!

[ಪಾದಟಿಪ್ಪಣಿಗಳು]

^ ಪ್ಯಾರ. 5 ಜಾನತನ್‌ ಬೆನ್‌ ಅಸಿಯೆಲ್‌ ಎಂಬವನ ಟಾರ್ಗುಮ್‌ (ಸಾ.ಶ. ಒಂದನೆಯ ಶತಮಾನ)ನ ಜೆ. ಎಫ್‌. ಸ್ಟೆನಿಂಗ್‌ ಮಾಡಿರುವ ಭಾಷಾಂತರವು ಯೆಶಾಯ 52:13ರಲ್ಲಿ ಹೇಳುವುದು: “ಇಗೋ, ನನ್ನ ಸೇವಕನು, ಅಭಿಷಿಕ್ತನು (ಅಥವಾ, ಮೆಸ್ಸೀಯನು), ಏಳಿಗೆ ಹೊಂದುವನು.” ಅದೇ ರೀತಿ, ಬ್ಯಾಬಿಲೋನ್ಯನ್‌ ಟಾಲ್ಮುಡ್‌ (ಸುಮಾರು ಸಾ.ಶ. ಮೂರನೆಯ ಶತಮಾನ) ಹೇಳುವುದು: “ಮೆಸ್ಸೀಯ​—⁠ಅವನ ಹೆಸರೇನು? . . . ರಬ್ಬಿಯ ಕುಟುಂಬದವರು [ರೋಗಿಯಾದಾತನು ಎನ್ನುತ್ತಾರೆ], ಹೇಳಲಾಗಿರುವಂತೆ, ‘ಅವನು ಖಂಡಿತವಾಗಿ ನಮ್ಮ ರೋಗಗಳನ್ನು ಹೊತ್ತಿದ್ದಾನೆ.’”​—⁠ಸ್ಯಾನ್ಹೆಡ್ರಿನ್‌ 98ಬಿ; ಯೆಶಾಯ 53:⁠4.

^ ಪ್ಯಾರ. 15 ಪ್ರವಾದಿಯಾದ ಮೀಕನು ಬೇತ್ಲೆಹೇಮನ್ನು “ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದು” ಎಂದು ಸೂಚಿಸಿದನು. (ಮೀಕ 5:2) ಆದರೂ, ಆ ಚಿಕ್ಕ ಬೇತ್ಲೆಹೇಮಿಗೆ ಮೆಸ್ಸೀಯನು ಹುಟ್ಟಿದ ಊರು ಎಂಬ ವಿಶೇಷ ಖ್ಯಾತಿಯಿತ್ತು.

^ ಪ್ಯಾರ. 22 “ಬಾಧಿತನು” ಎಂದು ಭಾಷಾಂತರಿಸಲ್ಪಟ್ಟಿರುವ ಪದವು, ಕುಷ್ಠರೋಗದ ವಿಷಯದಲ್ಲಿಯೂ ಉಪಯೋಗಿಸಲ್ಪಟ್ಟಿದೆ. (2 ಅರಸುಗಳು 15:⁠5) ಕೆಲವು ವಿದ್ವಾಂಸರಿಗನುಸಾರ, ಕೆಲವು ಮಂದಿ ಯೆಹೂದ್ಯರು ಯೆಶಾಯ 53:4ರಿಂದ ಮೆಸ್ಸೀಯನು ಕುಷ್ಠರೋಗಿಯಾಗಿರುವನೆಂಬ ವಿಚಾರವನ್ನು ಗ್ರಹಿಸಿದರು. ಬ್ಯಾಬಿಲೋನ್ಯನ್‌ ಟಾಲ್ಮುಡ್‌ ಈ ವಚನವನ್ನು ಮೆಸ್ಸೀಯನಿಗೆ ಅನ್ವಯಿಸಿ, ಅವನನ್ನು “ಕುಷ್ಠರೋಗಿ ಪಂಡಿತ”ನೆಂದು ಕರೆಯುತ್ತದೆ. ಕ್ಯಾಥಲಿಕ್‌ ಡೂಏ ವರ್ಷನ್‌ ಬೈಬಲ್‌, ಲ್ಯಾಟಿನ್‌ ವಲ್ಗೇಟ್‌ ತರ್ಜುಮೆಯನ್ನು ಅನುಸರಿಸಿ ಈ ವಚನವನ್ನು, “ನಾವು ಅವನನ್ನು ಕುಷ್ಠರೋಗಿಯಾಗಿ ಪರಿಗಣಿಸಿದ್ದೇವೆ” ಎಂದು ಭಾಷಾಂತರಿಸಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 212ರಲ್ಲಿರುವ ಚಾರ್ಟು]

ಯೆಹೋವನ ಸೇವಕನು ಯೇಸು ಈ ಪಾತ್ರವನ್ನು ನೆರವೇರಿಸಿದ ವಿಧ

ಪ್ರವಾದನೆ ಘಟನೆ ನೆರವೇರಿಕೆ

ಯೆಶಾ. 52:13 ಉನ್ನತನಾಗಿ ಮೇಲಕ್ಕೇರಿ ಅ. ಕೃತ್ಯಗಳು 2:​34-36;

ಮಹೋನ್ನತ ಪದವಿಗೆ ಬರುವನು ಫಿಲಿ. 2:​8-11;

1 ಪೇತ್ರ 3:⁠22

ಯೆಶಾ. 52:14 ಅವನ ಬಗ್ಗೆ ತಪ್ಪು ಚಿತ್ರಣವನ್ನು ಮತ್ತಾ. 11:19;

ಕೊಡಲಾಗುವುದು ಮತ್ತು 27:​39-44, 63, 64;

ಹೆಸರುಗೆಡಿಸಲಾಗುವುದು ಯೋಹಾ. 8:48; 10:⁠20.

ಯೆಶಾ. 52:15 ಅನೇಕ ಜನಾಂಗಗಳನ್ನು ಮತ್ತಾ. 24:30;

ಬೆಚ್ಚಿಬೀಳಿಸುವನು 2 ಥೆಸ. 1:​6-10; ಪ್ರಕ. 1:7

ಯೆಶಾ. 53:1 ಜನರು ಅವನನ್ನು ನಂಬದೇ ಯೋಹಾ. 12:​37, 38;

ಹೋಗುವರು ರೋಮಾ. 10:​11, 16, 17

ಯೆಶಾ. 53:2 ಮಾನವ ಆರಂಭವು ದೀನವೂ ಲೂಕ 2:7; ಯೋಹಾ. 1:⁠46

ನಿರಾಡಂಬರವಾದದ್ದೂ ಆಗಿರುವುದು

ಯೆಶಾ. 53:3 ಹೀನೈಸಿ ತಿರಸ್ಕರಿಸಲ್ಪಡುವನು ಮತ್ತಾ. 26:67;

ಲೂಕ 23:18-25; ಯೋಹಾ. 1:10, 11

ಯೆಶಾ. 53:4 ನಮ್ಮ ವ್ಯಾಧಿಗಳನ್ನು ಹೊರುವನು ಮತ್ತಾ. 8:​16, 17;

ಲೂಕ 8:​43-48

ಯೆಶಾ. 53:5 ತಿವಿಯಲ್ಪಡುವನು ಯೋಹಾ. 19:34

ಯೆಶಾ. 53:6 ಬೇರೆಯವರ ದೋಷಗಳಿಗಾಗಿ 1 ಪೇತ್ರ 2:​21-25

ಬಾಧೆಪಡುವನು

ಯೆಶಾ. 53:7 ಆರೋಪ ಹೊರಿಸುವವರ ಮುಂದೆ ಮತ್ತಾ. 27:11-14;

ಮೌನವಾಗಿದ್ದು ಗೊಣಗದೇ ಇರುವನು ಮಾರ್ಕ 14:60, 61;

ಅ. ಕೃತ್ಯಗಳು 8:32, 35

ಯೆಶಾ. 53:8 ಅನ್ಯಾಯವಾಗಿ ವಿಚಾರಿಸಲ್ಪಟ್ಟು ಮತ್ತಾ. 26:​57-68;

ದಂಡನೆಗೊಳಗಾಗುವನು 27:​1, 2, 11-26;

ಯೋಹಾ. 18:​12-14, 19-24, 28-40

ಯೆಶಾ. 53:9 ಧನಿಕರೊಂದಿಗೆ ಹೂಣಿಡಲ್ಪಡುವನು ಮತ್ತಾ. 27:​57-60;

ಯೋಹಾ. 19:​38-42

ಯೆಶಾ. 53:10 ಪ್ರಾಣವು ಪ್ರಾಯಶ್ಚಿತ್ತಯಜ್ಞವಾಗಿ ಇಬ್ರಿ. 9:24; 10:​5-14

ಅರ್ಪಿಸಲ್ಪಡುವುದು

ಯೆಶಾ. 53:11 ಅನೇಕರು ನೀತಿಯ ನಿಲುವನ್ನು ರೋಮಾ. 5:​18, 19;

ಪಡೆದುಕೊಳ್ಳುವಂತೆ ದಾರಿ 1 ಪೇತ್ರ 2:24;

ತೆರೆಯುವನು ಪ್ರಕ. 7:⁠14

ಯೆಶಾ. 53:12 ಪಾಪಿಗಳೊಂದಿಗೆ ಲೆಕ್ಕಿಸಲ್ಪಡುವನು ಮತ್ತಾ. 26:​55, 56;

27:38; ಲೂಕ 22:​36, 37

[ಪುಟ 203ರಲ್ಲಿರುವ ಚಿತ್ರ]

‘ಅವನು ಮನುಷ್ಯರಿಂದ ಧಿಕ್ಕರಿಸಲ್ಪಟ್ಟನು’

[ಪುಟ 206ರಲ್ಲಿರುವ ಚಿತ್ರ]

‘ಅವನು ಬಾಯಿ ತೆರೆಯಲಿಲ್ಲ’

[ಕೃಪೆ]

“ಎಕ ಹೋಮೋ” ಚಿತ್ರದ ಶಿಲ್ಪಶೈಲಿ, ಆಂಟಾನ್ಯೋ ಚೀಸೆರೀ ಎಂಬುವವರಿಂದ

[ಪುಟ 211ರಲ್ಲಿರುವ ಚಿತ್ರ]

‘ಅವನು ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿದನು’