ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ದೀನರ ಆತ್ಮವನ್ನು ಉಜ್ಜೀವಿಸುತ್ತಾನೆ

ಯೆಹೋವನು ದೀನರ ಆತ್ಮವನ್ನು ಉಜ್ಜೀವಿಸುತ್ತಾನೆ

ಅಧ್ಯಾಯ ಹದಿನೆಂಟು

ಯೆಹೋವನು ದೀನರ ಆತ್ಮವನ್ನು ಉಜ್ಜೀವಿಸುತ್ತಾನೆ

ಯೆಶಾಯ 57:1-21

1. ಯೆಹೋವನು ಯಾವ ಆಶ್ವಾಸನೆಯನ್ನು ಕೊಟ್ಟನು, ಮತ್ತು ಆತನ ಮಾತುಗಳು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತವೆ?

“ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗನ್ನುತ್ತಾನೆ​—⁠ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.” (ಯೆಶಾಯ 57:15) ಹೀಗೆಂದು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಯೆಶಾಯ ಪ್ರವಾದಿಯು ಬರೆದನು. ಈ ಸಂದೇಶವನ್ನು ಇಷ್ಟೊಂದು ಪ್ರೋತ್ಸಾಹಕರವಾಗಿ ಮಾಡಲು ಯೆಹೂದದಲ್ಲಿ ಏನು ನಡೆಯುತ್ತಿತ್ತು? ಈ ಪ್ರೇರಿತ ಮಾತುಗಳು ಇಂದು ಕ್ರೈಸ್ತರಿಗೆ ಹೇಗೆ ಸಹಾಯಮಾಡುತ್ತವೆ? ಯೆಶಾಯ 57ನೆಯ ಅಧ್ಯಾಯದ ಪರಿಗಣನೆಯು ಆ ಪ್ರಶ್ನೆಗಳಿಗೆ ಉತ್ತರಕೊಡುವಂತೆ ನಮಗೆ ಸಹಾಯಮಾಡುವುದು.

“ನೀವು ಇಲ್ಲಿಗೆ ಬನ್ನಿರಿ!”

2. (ಎ) ಯೆಶಾಯ 57ನೆಯ ಅಧ್ಯಾಯದ ಮಾತುಗಳು ಯಾವಾಗ ಅನ್ವಯವಾಗುವಂತೆ ತೋರುತ್ತವೆ? (ಬಿ) ಯೆಶಾಯನ ದಿನಗಳಲ್ಲಿ ನೀತಿವಂತರ ಸ್ಥಿತಿಗತಿ ಹೇಗಿದೆ?

2 ಯೆಶಾಯನ ಪ್ರವಾದನೆಯ ಈ ಭಾಗವು ಯೆಶಾಯನ ಸ್ವಂತ ದಿನಗಳಲ್ಲಿ ಅನ್ವಯವಾಗುತ್ತಿರುವಂತೆ ತೋರುತ್ತದೆ. ಆಗ ದುಷ್ಟತ್ವವು ಎಷ್ಟೊಂದು ಬೇರುಬಿಟ್ಟಿತ್ತೆಂಬುದನ್ನು ಪರಿಗಣಿಸಿರಿ. “ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು. ಇವರು ಸಮಾಧಾನದಲ್ಲಿ ಸೇರಿದ್ದಾರಲ್ಲಾ; ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ತನ್ನ ದೀರ್ಘನಿದ್ರಾಸ್ಥಾನದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ.” (ಯೆಶಾಯ 57:1, 2) ಸಜ್ಜನನೊಬ್ಬನು ಬಿದ್ದುಬಿಡುವಲ್ಲಿ ಯಾರೂ ಚಿಂತೆ ಮಾಡುವುದಿಲ್ಲ. ಅವನ ಅಕಾಲಿಕ ಮೃತ್ಯುವನ್ನು ಯಾರೂ ಲಕ್ಷಿಸುವುದೇ ಇಲ್ಲ. ಮರಣದಲ್ಲಿ ನಿದ್ರೆಹೋಗುವುದು ಅವನಿಗೆ ಶಾಂತಿಯನ್ನು, ದುಷ್ಟರಿಂದ ಬರುವ ಕಷ್ಟಾನುಭವದಿಂದ ಬಿಡುಗಡೆಯನ್ನು ಮತ್ತು ವಿಪತ್ತಿನಿಂದ ರಕ್ಷಣೆಯನ್ನು ತರುತ್ತದೆ. ದೇವರು ಆಯ್ದುಕೊಂಡಿದ್ದ ಜನಾಂಗವು ಹೀನಾವಸ್ಥೆಗೆ ಇಳಿದಿದೆ. ಆದರೆ ನಂಬಿಗಸ್ತರಾಗಿ ಉಳಿದಿರುವವರು, ಏನು ನಡೆಯುತ್ತಿದೆಯೊ ಅದನ್ನು ಯೆಹೋವನು ನೋಡುತ್ತಿದ್ದಾನೆ ಮಾತ್ರವಲ್ಲ, ಆತನು ತಮ್ಮನ್ನು ಬೆಂಬಲಿಸುವನು ಎಂಬುದನ್ನು ತಿಳಿದವರಾಗಿದ್ದು ಎಷ್ಟೊಂದು ಪ್ರೋತ್ಸಾಹವನ್ನು ಪಡೆಯತಕ್ಕದ್ದು!

3. ಯೆಹೋವನು ಯೆಹೂದದ ದುಷ್ಟ ಸಂತತಿಯನ್ನು ಹೇಗೆ ಸಂಬೋಧಿಸುತ್ತಾನೆ, ಮತ್ತು ಏಕೆ?

3 ಈಗ ಯೆಹೋವನು ಯೆಹೂದದ ದುಷ್ಟ ಸಂತತಿಯನ್ನು ಕರೆದು ಹೇಳುವುದು: “ಮಾಟಗಾತಿಯ ಮಕ್ಕಳೇ, ಸೂಳೆಗಾರನ [“ವ್ಯಭಿಚಾರಿಯ,” NW] ಮತ್ತು ಸೂಳೆಯ ಸಂತಾನದವರೇ, ನೀವು ಇಲ್ಲಿಗೆ ಬನ್ನಿರಿ!” (ಯೆಶಾಯ 57:3) ಮಾಟಗಾತಿಯ ಮಕ್ಕಳು ಮತ್ತು ವ್ಯಭಿಚಾರಿಯ ಹಾಗೂ ಸೂಳೆಯ ಮಕ್ಕಳೆಂಬ ಲಜ್ಜಾಸ್ಪದವಾದ ವರ್ಣನೆಯನ್ನು ಪಡೆದುಕೊಳ್ಳುವಂಥ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರು ಯಾವ ಸುಳ್ಳಾರಾಧನೆಗೆ ತಿರುಗಿಹೋಗಿದ್ದಾರೊ ಅದರಲ್ಲಿ ವಿಗ್ರಹಾರಾಧನೆ, ಪ್ರೇತವ್ಯವಹಾರ ಹಾಗೂ ಅನೈತಿಕ ಲೈಂಗಿಕಾಚಾರಗಳು ಸೇರಿವೆ. ಆದಕಾರಣ, ಆ ಪಾಪಿಗಳನ್ನು ಯೆಹೋವನು ಹೀಗೆ ಪ್ರಶ್ನಿಸುತ್ತಾನೆ: “ಯಾರನ್ನು ಅಣಕಿಸಿ ವಿನೋದಪಡುತ್ತೀರಿ? ಯಾರನ್ನು ನೋಡಿ ಬಾಯಿಕಿಸಿದು ನಾಲಿಗೆಯನ್ನು ಚಾಚುತ್ತೀರಿ? ಏಲಾ ಮರಗಳ ತೋಪುಗಳಲ್ಲಿಯೂ ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ನೆರಳಿನಲ್ಲಿಯೂ ಮದವೇರಿಸಿಕೊಂಡು ಹೊಳೆ ಕೊರೆದ ಡೊಂಗರಗಳಲ್ಲಿಯೂ ಬೆಟ್ಟದ ಗವಿಗಳಲ್ಲಿಯೂ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಸಂತಾನವೂ ಸುಳ್ಳಿನ ಸಂತತಿಯೂ ಆಗಿದ್ದೀರಿ.”​—ಯೆಶಾಯ 57:4, 5.

4. ಯೆಹೂದದ ದುಷ್ಟರು ಯಾವ ವಿಷಯದಲ್ಲಿ ಅಪರಾಧಿಗಳಾಗಿರುತ್ತಾರೆ?

4 ಯೆಹೂದದ ದುಷ್ಟರು ತಮ್ಮ ಅಸಹ್ಯ ಹುಟ್ಟಿಸುವ ವಿಧರ್ಮಿ ಆರಾಧನೆಯನ್ನು ಬಹಿರಂಗವಾಗಿ ಆಚರಿಸುತ್ತಾ, ‘ವಿನೋದಪಡುತ್ತಿದ್ದಾರೆ.’ ಅವರನ್ನು ತಿದ್ದಲು ಕಳುಹಿಸಲ್ಪಟ್ಟ ದೇವರ ಪ್ರವಾದಿಗಳನ್ನು ಅವರು, ಲಜ್ಜಾಸ್ಪದವಾದ ಅಗೌರವದ ವರ್ತನೆಯಾಗಿ ನಾಲಗೆಯನ್ನು ಹೊರಚಾಚಿ ತಾತ್ಸಾರದಿಂದ ಅಣಕಿಸುತ್ತಾರೆ. ಅವರು ಅಬ್ರಹಾಮನ ಸಂತಾನದವರಾಗಿರುವುದಾದರೂ, ಅವರ ದಂಗೆಕೋರ ನಡತೆಯು ಅವರನ್ನು ದ್ರೋಹದ ಮತ್ತು ಸುಳ್ಳಿನ ಸಂತಾನವನ್ನಾಗಿ ಮಾಡುತ್ತದೆ. (ಯೆಶಾಯ 1:4; 30:9; ಯೋಹಾನ 8:​39, 44) ಗ್ರಾಮಪ್ರದೇಶದ ದೊಡ್ಡ ಮರಗಳ ತೋಪುಗಳಲ್ಲಿ ಅವರು ತಮ್ಮ ವಿಗ್ರಹಾರಾಧನೆಯಲ್ಲಿ ಧಾರ್ಮಿಕ ಹುರುಪನ್ನು ಉದ್ರೇಕಿಸುತ್ತಾರೆ. ಮತ್ತು ಅವರ ಆರಾಧನೆಯು ಎಷ್ಟು ಕ್ರೂರ ರೀತಿಯದ್ದಾಗಿದೆ! ಇವರು, ಯೆಹೋವನು ಯಾವ ಜನಾಂಗಗಳನ್ನು ಅವರ ಅಸಹ್ಯ ನಡತೆಯಿಂದಾಗಿ ದೇಶದಿಂದ ಓಡಿಸಿದನೊ ಅವುಗಳಂತೆಯೇ ತಮ್ಮ ಸ್ವಂತ ಮಕ್ಕಳನ್ನೂ ಕೊಲ್ಲುತ್ತಾರೆ!​—⁠1 ಅರಸುಗಳು 14:23; 2 ಅರಸುಗಳು 16:​3, 4; ಯೆಶಾಯ 1:⁠29.

ಕಲ್ಲುಗಳಿಗೆ ಪಾನದ್ರವ್ಯಗಳನ್ನು ನೈವೇದ್ಯವಾಗಿ ಅರ್ಪಿಸುವುದು

5, 6. (ಎ) ಯೆಹೂದದ ನಿವಾಸಿಗಳು ಯೆಹೋವನನ್ನು ಆರಾಧಿಸುವ ಬದಲು ಏನನ್ನು ಮಾಡುವ ಆಯ್ಕೆಮಾಡಿದ್ದಾರೆ? (ಬಿ) ಯೆಹೂದದ ವಿಗ್ರಹಾರಾಧನೆಯು ಎಷ್ಟು ಲಜ್ಜಾಹೀನವೂ ವ್ಯಾಪಕವೂ ಆಗಿದೆ?

5 ಯೆಹೂದದ ನಿವಾಸಿಗಳು ವಿಗ್ರಹಾರಾಧನೆಯಲ್ಲಿ ಎಷ್ಟು ಆಳವಾಗಿ ಧುಮುಕಿದ್ದಾರೆಂಬುದನ್ನು ನೋಡಿ: “ಹೊಳೆಯ ಗುಂಡುಗಳು ನಿನಗೆ ಗತಿ, ಅವುಗಳೇ ನಿನ್ನ ಪಾಲು; ಅವುಗಳಿಗೇ ನೀನು ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದು ಧಾನ್ಯದ್ರವ್ಯವನ್ನು ಅರ್ಪಿಸಿದ್ದೀ. ನಾನು ಇದನ್ನೆಲ್ಲಾ ನೋಡಿ ಕೋಪವನ್ನು ಅಣಗಿಸಿಕೊಳ್ಳಲಾದೀತೇ? [“ನನ್ನನ್ನೇ ಸಂತೈಸಿಕೊಳ್ಳಲೇ?” NW].” (ಯೆಶಾಯ 57:6) ಯೆಹೂದ್ಯರು ದೇವರ ಒಡಂಬಡಿಕೆಯ ಜನರಾಗಿದ್ದರೂ, ಆತನನ್ನು ಆರಾಧಿಸುವ ಬದಲಾಗಿ ಅವರು ಹೊಳೆಯ ತಳದ ಗುಂಡುಕಲ್ಲುಗಳನ್ನು ಹೆಕ್ಕಿ ಅವುಗಳನ್ನು ದೇವತೆಗಳಾಗಿ ರೂಪಿಸುತ್ತಾರೆ. ಯೆಹೋವನೇ ತನ್ನ ಪಾಲೆಂದು ದಾವೀದನು ಹೇಳಿರುವಾಗ, ಈ ಪಾಪಿಗಳಾದರೊ ನಿರ್ಜೀವ ಶಿಲಾಪ್ರತಿಮೆಗಳನ್ನು ತಮ್ಮ ಪಾಲಾಗಿ ಆಯ್ದುಕೊಂಡು, ಅವುಗಳಿಗೆ ಪಾನದ್ರವ್ಯವನ್ನು ಸುರಿಯುತ್ತಾರೆ. (ಕೀರ್ತನೆ 16:5; ಹಬಕ್ಕೂಕ 2:19) ತನ್ನ ನಾಮವನ್ನು ಪ್ರತಿನಿಧಿಸುವ ಜನರಿಂದ ಈ ರೀತಿಯ ಆರಾಧನಾ ಪಥಭ್ರಷ್ಟತೆಯು ಯೆಹೋವನಿಗೆ ಯಾವ ಸಾಂತ್ವನವನ್ನು ಕೊಟ್ಟೀತು?

6 ದೊಡ್ಡ ಮರಗಳ ಅಡಿಯಲ್ಲಿ, ಹಳ್ಳ ಪ್ರದೇಶಗಳಲ್ಲಿ, ಗುಡ್ಡಗಳಲ್ಲಿ, ಪಟ್ಟಣಗಳಲ್ಲಿ, ಹೀಗೆ ಎಲ್ಲೆಲ್ಲಿಯೂ ಯೆಹೂದವು ವಿಗ್ರಹಾರಾಧನೆಯನ್ನು ಮಾಡುತ್ತದೆ. ಆದರೆ ಯೆಹೋವನು ಇವೆಲ್ಲವನ್ನು ನೋಡಿ, ಯೆಶಾಯನ ಮೂಲಕ ಈ ಯೆಹೂದವೆಂಬಾಕೆಯ ನೀತಿಭ್ರಷ್ಟತೆಯನ್ನು ಬಯಲುಪಡಿಸುತ್ತಾನೆ: “ಮಹೋನ್ನತಪರ್ವತದಲ್ಲಿ ನೀನು ಮಂಚವನ್ನು ಹಾಕಿಕೊಂಡಿದ್ದೀ, ಯಜ್ಞಮಾಡಲು ಆ ಬೆಟ್ಟವನ್ನೇರಿದ್ದೀ. ಕದದ ಮತ್ತು ನಿಲುವಿನ ಹಿಂಭಾಗದಲ್ಲಿ ನೀನು ವಿಗ್ರಹವನ್ನು ಇಟ್ಟುಕೊಂಡಿದ್ದೀ.” (ಯೆಶಾಯ 57:7, 8ಎ) ಉನ್ನತ ಸ್ಥಳಗಳಲ್ಲಿ ಯೆಹೂದವು ತನ್ನ ಆತ್ಮಿಕ ಅಶುದ್ಧತೆಯ ಮಂಚವನ್ನು ಹಾಕಿ, ಅಲ್ಲಿ ಆಕೆ ಅನ್ಯದೇವತೆಗಳಿಗೆ ಯಜ್ಞಗಳನ್ನು ಅರ್ಪಿಸುತ್ತಾಳೆ. * ಖಾಸಗಿ ಮನೆಗಳಲ್ಲಿಯೂ ಕದಗಳ ಹಿಂದೆ ಮತ್ತು ನಿಲುವುಗಳ ಹಿಂದೆಯೂ ವಿಗ್ರಹಗಳಿವೆ.

7. ಯೆಹೂದವು ಯಾವ ಮನೋಭಾವದಿಂದ ಅನೈತಿಕ ಆರಾಧನೆಯಲ್ಲಿ ಭಾಗವಹಿಸುತ್ತದೆ?

7 ಯೆಹೂದವು ಅಶುದ್ಧಾರಾಧನೆಯಲ್ಲಿ ಅಷ್ಟರ ಮಟ್ಟಿಗೆ ಸಿಕ್ಕಿಕೊಂಡಿರುವುದು ಏಕೆಂದು ಕೆಲವರು ಕುತೂಹಲಪಡಬಹುದು. ಹೆಚ್ಚು ಬಲಾಢ್ಯವಾದ ಶಕ್ತಿಯೊಂದು ಅಕೆಯು ಯೆಹೋವನನ್ನು ತ್ಯಜಿಸುವಂತೆ ಒತ್ತಾಯಿಸಿರಬಹುದೊ? ಇಲ್ಲ ಎಂಬುದೇ ಇದಕ್ಕೆ ಉತ್ತರವಾಗಿದೆ. ಆಕೆ ಇಷ್ಟಪೂರ್ವಕವಾಗಿ, ಆತುರದಿಂದ ಇದನ್ನು ಮಾಡುತ್ತಾಳೆ. ಯೆಹೋವನು ಹೇಳುವುದು: “ನನ್ನನ್ನು ಬಿಟ್ಟುಬಿಟ್ಟು ನಿನ್ನ ಮಂಚದ ಗವಸಣಿಗೆಯನ್ನು ತೆಗೆದು ಅದನ್ನು ಹತ್ತಿ ಅದರಲ್ಲಿ ಅನ್ಯರಿಗೆ ಸ್ಥಳಕೊಟ್ಟು ಅವರೊಂದಿಗೆ ಒಪ್ಪಂದಮಾಡಿಕೊಂಡಿದ್ದೀ. ಅವರ ಸಂಗಮವನ್ನು ಆಶಿಸಿ ಸ್ಥಳವನ್ನು ಸಂಕೇತಮಾಡಿಕೊಂಡಿದ್ದೀ.” (ಯೆಶಾಯ 57:8ಬಿ) ಯೆಹೂದವು ತನ್ನ ಸುಳ್ಳು ದೇವತೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಅವರೊಂದಿಗೆ ನಿಷಿದ್ಧ ಸಂಬಂಧವನ್ನು ಇಟ್ಟುಕೊಂಡಿದೆ. ಆಕೆಗೆ ಈ ದೇವತೆಗಳ ಆರಾಧನೆಯ ವೈಶಿಷ್ಟ್ಯವಾಗಿರುವ ಅನೈತಿಕ ಲೈಂಗಿಕ ಆಚಾರಗಳು, ಪ್ರಾಯಶಃ ಶಿಶ್ನ ಸಂಕೇತಗಳು ಒಳಗೂಡಿರುವ ಆಚಾರಗಳು ವಿಶೇಷವಾಗಿ ಅತಿ ಪ್ರಿಯವಾಗಿವೆ!

8. ನಿರ್ದಿಷ್ಟವಾಗಿ ಯಾವ ಅರಸನ ಆಳ್ವಿಕೆಯ ಕೆಳಗೆ ಯೆಹೂದದಲ್ಲಿ ವಿಗ್ರಹಾರಾಧನೆಯು ವ್ಯಾಪಕವಾಗಿ ಹಬ್ಬಿತು?

8 ತೀರ ಅನೈತಿಕವಾದ ಕ್ರೂರ ವಿಗ್ರಹಾರಾಧನೆಯ ಕುರಿತಾದ ವರ್ಣನೆಯು, ನಮಗೆ ಗೊತ್ತಿರುವ ಯೆಹೂದದ ಅನೇಕ ದುಷ್ಟ ಅರಸರ ನಡತೆಯೊಂದಿಗೆ ಹೋಲುತ್ತದೆ. ಉದಾಹರಣೆಗೆ, ಮನಸ್ಸೆಯು ಉನ್ನತ ಪೂಜಾಸ್ಥಳಗಳನ್ನು ಕಟ್ಟಿ, ಬಾಳನಿಗೆ ಯಜ್ಞವೇದಿಗಳನ್ನು ನಿರ್ಮಿಸಿ, ದೇವಾಲಯದ ಎರಡು ಅಂಗಳಗಳಲ್ಲಿ ಸುಳ್ಳು ಧಾರ್ಮಿಕ ವೇದಿಗಳನ್ನು ನಿರ್ಮಿಸಿದನು. ಅವನು ತನ್ನ ಪುತ್ರರನ್ನು ಬಲಿಕೊಟ್ಟು, ಮಾಯಾವಿದ್ಯೆಯನ್ನು ಆಚರಿಸಿ, ಕಣಿಹೇಳಿಸಿ, ಪ್ರೇತವ್ಯವಹಾರದ ಆಚಾರಗಳನ್ನು ವರ್ಧಿಸಿದನು. ಅರಸನಾದ ಮನಸ್ಸೆಯು ಯೆಹೋವನ ಆಲಯದಲ್ಲಿ ತಾನು ಮಾಡಿಸಿದ ಅಶೇರ ವಿಗ್ರಹಸ್ತಂಭವನ್ನೂ ನಿಲ್ಲಿಸಿದನು. * ಯೆಹೂದವು “ಯೆಹೋವನಿಂದ ಸಂಹೃತರಾದ ಅನ್ಯಜನಾಂಗಗಳಿಗಿಂತಲೂ ದುಷ್ಟ”ವಾಗುವಂತೆ ಮನಸ್ಸೆಯು ಅದನ್ನು ಪ್ರೇರಿಸಿದನು. (2 ಅರಸುಗಳು 21:​2-9) ಮನಸ್ಸೆಯ ಹೆಸರು ಯೆಶಾಯ 1:1ರಲ್ಲಿ ಕಂಡುಬರುವುದಿಲ್ಲವಾದರೂ, ಮನಸ್ಸೆಯೇ ಯೆಶಾಯನನ್ನು ಕೊಲ್ಲಿಸಿದನೆಂದು ಕೆಲವರು ನಂಬುತ್ತಾರೆ.

‘ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ’

9. ಯೆಹೂದವು ರಾಯಭಾರಿಗಳನ್ನು “ದೂರ ದೂರ” ಕಳುಹಿಸುವುದೇಕೆ?

9 ಯೆಹೂದದ ಆಜ್ಞೋಲ್ಲಂಘನೆಗಳು ಸುಳ್ಳು ದೇವರುಗಳನ್ನು ಆರಾಧಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಯೆಶಾಯನನ್ನು ವದನಕನಾಗಿ ಉಪಯೋಗಿಸುತ್ತ ಯೆಹೋವನು ಹೇಳುವುದು: “ಬಹು ಸುಗಂಧದ್ರವ್ಯಗಳನ್ನು ಕೂಡಿಸಿ ತೈಲವನ್ನೂ ತೆಗೆದುಕೊಂಡು ಪರರಾಜನ [“ಮೆಲೆಕ್‌ನ,” NW] ಬಳಿಗೆ ಪ್ರಯಾಣಮಾಡಿದ್ದೀ; ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದೀ; ನಿನ್ನನ್ನು ಪಾತಾಳದ ವರೆಗೂ ತಗ್ಗಿಸಿಕೊಂಡಿದ್ದೀ.” (ಯೆಶಾಯ 57:9) ಅಪನಂಬಿಗಸ್ತ ಯೆಹೂದ ರಾಜ್ಯವು ಹೀಬ್ರು ಭಾಷೆಯಲ್ಲಿ “ರಾಜ” ಎಂಬರ್ಥವಿರುವ “ಮೆಲೆಕ್‌ನ” ಬಳಿಗೆ, ಅಂದರೆ ಪ್ರಾಯಶಃ ಪರರಾಜನ ಬಳಿಗೆ ತೈಲ ಮತ್ತು ಸುಗಂಧದ್ರವ್ಯಗಳಿಂದ ಸೂಚಿತವಾದ ದುಬಾರಿಯಾದ ಮತ್ತು ಆಕರ್ಷಕ ಕೊಡುಗೆಗಳನ್ನು ಹಿಡಿದುಕೊಂಡು ಹೋಗುತ್ತದೆ. ಯೆಹೂದವು ದೂರದೇಶಗಳಿಗೆ ರಾಯಭಾರಿಗಳನ್ನೂ ಕಳುಹಿಸುತ್ತದೆ. ಏಕೆ? ತನ್ನೊಂದಿಗೆ ಈ ಅನ್ಯದೇಶಗಳು ರಾಜಕೀಯ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಅವುಗಳನ್ನು ಒಡಂಬಡಿಸಲಿಕ್ಕಾಗಿಯೇ. ಯೆಹೋವನಿಗೆ ಬೆನ್ನುಹಾಕಿರುವ ಆಕೆ, ಈಗ ವಿದೇಶೀ ಅರಸರ ಮೇಲೆ ಭರವಸೆಯಿಡುತ್ತಾಳೆ.

10. (ಎ) ರಾಜ ಆಹಾಜನು ಅಶ್ಶೂರ ರಾಜನೊಂದಿಗೆ ಹೇಗೆ ಮೈತ್ರಿಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾನೆ? (ಬಿ) ಯೆಹೂದವು ‘ಪಾತಾಳದ ವರೆಗೆ ತಗ್ಗುವುದು’ ಹೇಗೆ?

10 ಇದರ ಒಂದು ಉದಾಹರಣೆಯು ರಾಜ ಆಹಾಜನ ಕಾಲದ್ದಾಗಿದೆ. ಇಸ್ರಾಯೇಲ್‌ ಮತ್ತು ಅರಾಮ್ಯರ ನಡುವಿನ ಮೈತ್ರಿಯ ಕಾರಣ ಬೆದರಿದ ಯೆಹೂದದ ಅಪನಂಬಿಗಸ್ತ ರಾಜನು, ಅಶ್ಶೂರದ IIIನೆಯ ತಿಗ್ಲತ್ಪಿಲೆಸೆರನ ಬಳಿಗೆ ದೂತರನ್ನು ಕಳುಹಿಸಿ ಹೇಳುವುದು: “ನಾನು ನಿನ್ನ ದಾಸನೂ ಮಗನೂ ಆಗಿದ್ದೇನೆ; ನೀನು ಬಂದು ನನ್ನನ್ನು ನನಗೆ ವಿರೋಧವಾಗಿ ಎದ್ದಿರುವ ಅರಾಮ್ಯರ ಮತ್ತು ಇಸ್ರಾಯೇಲ್ಯರ ಅರಸುಗಳ ಕೈಗೆ ಸಿಕ್ಕದಂತೆ ತಪ್ಪಿಸು.” ಆಹಾಜನು ಅಶ್ಶೂರದ ರಾಜನಿಗೆ ಬೆಳ್ಳಿ ಬಂಗಾರಗಳನ್ನು ಲಂಚವಾಗಿ ಕಳುಹಿಸುತ್ತಾನೆ, ಮತ್ತು ಅರಾಮ್ಯರ ಮೇಲೆ ವಿಧ್ವಂಸಕ ಆಕ್ರಮಣವನ್ನು ಎಸಗುವ ಮೂಲಕ ರಾಜನು ಪ್ರತಿಕ್ರಿಯಿಸುತ್ತಾನೆ. (2 ಅರಸುಗಳು 16:7-9) ಅನ್ಯಜನಾಂಗಗಳೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೆಹೂದವು “ಪಾತಾಳದ ವರೆಗೂ” ತನ್ನನ್ನು ತಗ್ಗಿಸಿಕೊಂಡಿದೆ. ಆ ವ್ಯವಹಾರಗಳ ಕಾರಣ ಆಕೆ ಸಾಯಲಿದ್ದಾಳೆ, ಇಲ್ಲವೆ ಅರಸನಿರುವ ಒಂದು ಸ್ವತಂತ್ರ ಜನಾಂಗವಾಗಿ ಇಲ್ಲದೆ ಹೋಗುವಳು.

11. ಯೆಹೂದಕ್ಕೆ ಭದ್ರತೆಯ ಕುರಿತು ಯಾವ ತಪ್ಪು ಭಾವನೆಯಿದೆ?

11 ಯೆಹೋವನು ಯೆಹೂದವನ್ನು ಸಂಬೋಧಿಸುತ್ತಾ ಮುಂದುವರಿಯುವುದು: “ನೀನು ನಡೆದು ನಡೆದು ಆಯಾಸಗೊಂಡರೂ ದಿಕ್ಕಿಲ್ಲವಲ್ಲಾ ಅಂದುಕೊಳ್ಳಲಿಲ್ಲ; ಹೊಸ ಬಲವನ್ನು ತಂದುಕೊಂಡಿ; ಆದದರಿಂದ ನೀನು ಸೋತುಹೋಗಲಿಲ್ಲ.” (ಯೆಶಾಯ 57:10) ಹೌದು ಆ ಜನಾಂಗವು ತನ್ನ ಧರ್ಮಭ್ರಷ್ಟತೆಯಲ್ಲಿ ಬಹಳ ಪ್ರಯಾಸಪಟ್ಟಿದ್ದರೂ, ತನ್ನ ಪ್ರಯಾಸಗಳು ಎಷ್ಟು ನಿರರ್ಥಕವೆಂಬುದನ್ನು ಪರಿಗಣಿಸಲು ಆಕೆ ತಪ್ಪಿಹೋಗುತ್ತಾಳೆ. ಬದಲಾಗಿ, ತನ್ನ ಸ್ವಂತ ಶಕ್ತಿಯಿಂದ ತಾನು ಜಯಹೊಂದುವೆನೆಂದು ನಂಬಿ ತನ್ನನ್ನೇ ವಂಚಿಸಿಕೊಳ್ಳುತ್ತಾಳೆ. ತಾನು ಬಲಶಾಲಿಯೂ ಆರೋಗ್ಯವಂತಳೂ ಆಗಿದ್ದೇನೆಂದು ಆಕೆ ಅಭಿಪ್ರಯಿಸುತ್ತಾಳೆ. ಎಂತಹ ಮೂರ್ಖತನ!

12. ಕ್ರೈಸ್ತಪ್ರಪಂಚದ ಯಾವ ಪರಿಸ್ಥಿತಿಗಳು ಯೆಹೂದದ ಪರಿಸ್ಥಿತಿಗಳನ್ನು ಹೋಲುತ್ತವೆ?

12 ಯೆಶಾಯನ ದಿನಗಳಲ್ಲಿದ್ದ ಯೆಹೂದದ ನಡತೆಯನ್ನು ಜ್ಞಾಪಕಕ್ಕೆ ತರುವ ಒಂದು ಸಂಸ್ಥೆ ಇಂದೂ ಇದೆ. ಕ್ರೈಸ್ತಪ್ರಪಂಚವು ಯೇಸುವಿನ ಹೆಸರನ್ನು ಉಪಯೋಗಿಸುತ್ತದಾದರೂ ಆಕೆ ಜನಾಂಗಗಳೊಂದಿಗೆ ಮೈತ್ರಿಗಾಗಿ ಪ್ರಯತ್ನಿಸಿ ತನ್ನ ಆರಾಧನಾ ಸ್ಥಳಗಳನ್ನು ವಿಗ್ರಹಗಳಿಂದ ತುಂಬಿಸಿದ್ದಾಳೆ. ಆಕೆಯ ಅನುಯಾಯಿಗಳು ತಮ್ಮ ಖಾಸಗಿ ಮನೆಗಳಲ್ಲಿಯೂ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ಕ್ರೈಸ್ತಪ್ರಪಂಚವು ತನ್ನ ಯುವಜನರನ್ನು ಜನಾಂಗಗಳ ಯುದ್ಧಗಳಲ್ಲಿ ಬಲಿಕೊಟ್ಟಿದ್ದಾಳೆ. “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ” ಎಂದು ಕ್ರೈಸ್ತರಿಗೆ ಆಜ್ಞಾಪಿಸುವಂತಹ ಸತ್ಯ ದೇವರಿಗೆ ಇದೆಲ್ಲವೂ ಎಷ್ಟು ಜಿಗುಪ್ಸೆಯನ್ನು ತರುತ್ತಿರಬೇಕು! (1 ಕೊರಿಂಥ 10:14) ಸ್ವತಃ ರಾಜಕೀಯದಲ್ಲಿ ಒಳಗೂಡುವ ಮೂಲಕ ಕ್ರೈಸ್ತಪ್ರಪಂಚವು ‘ಭೂಮಿಯ ಅರಸರೊಂದಿಗೆ ಜಾರತ್ವ ಮಾಡಿದೆ.’ (ಪ್ರಕಟನೆ 17:​1, 2) ವಾಸ್ತವದಲ್ಲಿ, ಆಕೆ ವಿಶ್ವ ಸಂಸ್ಥೆಯ ಪ್ರಧಾನ ಬೆಂಬಲಿಗಳಾಗಿದ್ದಾಳೆ. ಈ ಧಾರ್ಮಿಕ ವೇಶ್ಯೆಗೆ ಮುಂದೆ ಏನು ಕಾದಿದೆ? ರಾಜಧಾನಿಯಾದ ಯೆರೂಸಲೇಮಿನಿಂದ ಪ್ರತಿನಿಧಿಸಲ್ಪಟ್ಟಿರುವ ಆಕೆಯ ಪ್ರಥಮರೂಪವಾದ ಅಪನಂಬಿಗಸ್ತ ಯೆಹೂದಕ್ಕೆ ಯೆಹೋವನು ಏನು ಹೇಳುತ್ತಾನೆ?

‘ಕೂಡಿ ಹಾಕಿಕೊಂಡಿರುವ ವಿಷಯ ನಿನ್ನನ್ನುದ್ಧರಿಸದು’

13. ಯೆಹೂದವು ಯಾವ ‘ಸುಳ್ಳುಹೇಳುವಿಕೆಯನ್ನು’ ಆರಂಭಿಸಿದೆ, ಮತ್ತು ಯೆಹೋವನ ತಾಳ್ಮೆಗೆ ಆಕೆಯ ಪ್ರತಿಕ್ರಿಯೆಯೇನು?

13 ಯೆಹೋವನು ಪ್ರಶ್ನಿಸುವುದು: “ನೀನು ಯಾರಿಗೆ ಬೆದರಿ ಹೆದರಿದ್ದರಿಂದ ನನ್ನನ್ನು ಮರೆತು ನನಗೆ ಮೋಸಮಾಡಿದಿ [“ಸುಳ್ಳು ಹೇಳಿದಿ,” NW]?”ಪ್ರಶ್ನೆ ಎಷ್ಟು ಸೂಕ್ತವಾದದ್ದಾಗಿದೆ! ಯೆಹೂದವು ಯೆಹೋವನಿಗೆ ಹಿತಕರವಾದ, ದೈವಿಕ ಭಯವನ್ನು ತೋರಿಸುವುದಿಲ್ಲವೆಂಬುದು ನಿಶ್ಚಯ. ಹಾಗೆ ಮಾಡುತ್ತಿದ್ದಲ್ಲಿ, ಆಕೆ ಸುಳ್ಳುಗಾರರ, ಅಂದರೆ ಸುಳ್ಳು ದೇವತೆಗಳ ಆರಾಧಕರ ಒಂದು ಜನಾಂಗವಾಗುತ್ತಿರಲಿಲ್ಲ. ಯೆಹೋವನು ಮುಂದುವರಿಸುವುದು: “ಈ ದ್ರೋಹಕ್ಕೂ ಹಿಂದೆಗೆಯಲಿಲ್ಲವಲ್ಲಾ! ನೀನು ನನಗೆ ಅಂಜದೆ ಇರುವದಕ್ಕೆ ನಾನು ಬಹುಕಾಲದಿಂದ ಸುಮ್ಮನೆ ಇದ್ದದ್ದೇ ಕಾರಣವಲ್ಲವೆ.” (ಯೆಶಾಯ 57:11) ಯೆಹೋವನು ಸುಮ್ಮನಿದ್ದನು, ಅಂದರೆ ಆತನು ಯೆಹೂದದ ಮೇಲೆ ಶಿಕ್ಷೆಯನ್ನು ತಂದಿರಲಿಲ್ಲ. ಆದರೆ ಯೆಹೂದವು ಇದನ್ನು ಗಣ್ಯಮಾಡುತ್ತಾಳೊ? ಇಲ್ಲ, ದೇವರ ಈ ತಾಳ್ಮೆಯನ್ನು ಆಕೆ ಉದಾಸೀನಭಾವವಾಗಿ ಪರಿಗಣಿಸುತ್ತಾಳೆ. ಆಕೆಗೆ ಆತನ ಭಯವೇ ಇಲ್ಲ.

14, 15. ಯೆಹೂದದ ಕಾರ್ಯಗಳು ಮತ್ತು ಆಕೆಯು “ಕೂಡಿ ಹಾಕಿಕೊಂಡಿರುವ” ವಸ್ತುಗಳ ಕುರಿತು ಯೆಹೋವನು ಏನನ್ನುತ್ತಾನೆ?

14 ಆದರೆ, ದೇವರ ದೀರ್ಘಶಾಂತಿಯ ಅವಧಿಯು ಮುಗಿಯಲಿದೆ. ಆ ಸಮಯವನ್ನು ಮುನ್ನೋಡುತ್ತ ಯೆಹೋವನು ಹೇಳುವುದು: “ನಾನು ನಿನ್ನ ಧರ್ಮವನ್ನು ಬೈಲಿಗೆ ತರುವೆನು, ನಿನ್ನ ಕಾರ್ಯಗಳೇನೋ ನಿನಗೆ ನಿಷ್ಪ್ರಯೋಜನ. ನೀನು ಕೂಗಿಕೊಳ್ಳುವಾಗ ನೀನು ಕೂಡಿ ಹಾಕಿಕೊಂಡಿರುವ ಇವುಗಳೇ ನಿನ್ನನ್ನುದ್ಧರಿಸಲಿ. ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು, ಬರೀ ಉಸಿರಾದರೂ ಒಯ್ಯುವದು.” (ಯೆಶಾಯ 57:12, 13ಎ) ಯೆಹೂದದ ನೀತಿಯ ನಟನೆಯನ್ನು ಯೆಹೋವನು ಬೈಲಿಗೆ ತರುವನು. ಆಕೆಯ ಕಪಟ ಕಾರ್ಯಗಳು ನಿಷ್ಪ್ರಯೋಜಕವಾಗಿರುವವು. ಆಕೆಯು “ಕೂಡಿ ಹಾಕಿಕೊಂಡಿರುವ” ವಸ್ತುಗಳು, ವಿಗ್ರಹಗಳ ದಾಸ್ತಾನು ಆಕೆಯನ್ನು ರಕ್ಷಿಸವು. ವಿಪತ್ತು ಬಂದೆರಗುವಾಗ, ಆಕೆ ಭರವಸವಿಟ್ಟಿರುವ ದೇವತೆಗಳನ್ನು ಕೇವಲ ಒಂದು ಉಸಿರಿನ ಗಾಳಿಯು ಬಡಿದುಕೊಂಡು ಹೋಗುವುದು.

15 ಯೆಹೋವನ ಮಾತುಗಳು ಸಾ.ಶ.ಪೂ. 607ರಲ್ಲಿ ನೆರವೇರಿದವು. ಆಗ ನೆಬೂಕದ್ನೆಚ್ಚರನು ಯೆರೂಸಲೇಮನ್ನು ನಾಶಮಾಡಿ, ಅದನ್ನು ಸುಟ್ಟುಹಾಕಿ, ಹೆಚ್ಚಿನ ಜನರನ್ನು ಸೆರೆಯಾಳುಗಳಾಗಿ ಒಯ್ದನು. “ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಯಿತು.”​—⁠2 ಅರಸುಗಳು 25:​1-21.

16. ಕ್ರೈಸ್ತಪ್ರಪಂಚಕ್ಕೆ ಮತ್ತು ‘ಮಹಾ ಬಾಬೆಲಿನ’ ಮಿಕ್ಕವರಿಗೆ ಏನು ಕಾದಿದೆ?

16 ತದ್ರೀತಿ, ಕ್ರೈಸ್ತಪ್ರಪಂಚದ ವಿಗ್ರಹಗಳ ದೊಡ್ಡ ದಾಸ್ತಾನು ಯೆಹೋವನ ಕೋಪದ ದಿನದಲ್ಲಿ ಆಕೆಯನ್ನು ರಕ್ಷಿಸಲಾರದು. (ಯೆಶಾಯ 2:​19-22; 2 ಥೆಸಲೊನೀಕ 1:​6-10) ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನ’ ಮಿಕ್ಕವರೊಂದಿಗೆ ಕ್ರೈಸ್ತಪ್ರಪಂಚವೂ ನಾಶವಾಗುವುದು. ಸಾಂಕೇತಿಕವಾದ ರಕ್ತವರ್ಣದ ಕಾಡುಮೃಗ ಮತ್ತು ಅದರ ಹತ್ತು ಕೊಂಬುಗಳು, “[ಮಹಾ ಬಾಬೆಲನ್ನು] ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡು”ವವು. (ಪ್ರಕಟನೆ 17:3, 16, 17) ಆದುದರಿಂದ, “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು” ಎಂಬ ಆಜ್ಞೆಗೆ ವಿಧೇಯರಾದುದಕ್ಕೆ ನಾವೆಷ್ಟು ಆನಂದಿತರು! (ಪ್ರಕಟನೆ 18:4, 5) ನಾವೆಂದಿಗೂ ಆಕೆಯ ಬಳಿಗಾಗಲಿ ಆಕೆಯ ಮಾರ್ಗಗಳಿಗಾಗಲಿ ಹಿಂದಿರುಗದಿರೋಣ.

“ನನ್ನನ್ನು ಆಶ್ರಯಿಸುವವನೋ ದೇಶವನ್ನು” ಅನುಭವಿಸುವನು

17. ‘ಯೆಹೋವನನ್ನು ಆಶ್ರಯಿಸುವವನಿಗೆ’ ಯಾವ ವಾಗ್ದಾನವನ್ನು ಮಾಡಲಾಗಿದೆ, ಮತ್ತು ಅದು ಯಾವಾಗ ನೆರವೇರುತ್ತದೆ?

17 ಯೆಶಾಯನ ಪ್ರವಾದನೆಯ ಮುಂದಿನ ಮಾತುಗಳ ಕುರಿತೇನು? “ನನ್ನನ್ನು ಆಶ್ರಯಿಸುವವನೋ ದೇಶವನ್ನನುಭವಿಸಿ ನನ್ನ ಪರಿಶುದ್ಧಪರ್ವತವನ್ನು ಬಾಧ್ಯವಾಗಿ ಹೊಂದುವನು.” (ಯೆಶಾಯ 57:13ಬಿ) ಈಗ ಯೆಹೋವನು ಯಾರೊಂದಿಗೆ ಮಾತಾಡುತ್ತಿದ್ದಾನೆ? ಆತನು ಬರಲಿರುವ ವಿಪತ್ತಿನಾಚೆಗೆ ನೋಡಿ, ಬಾಬೆಲಿನಿಂದ ತನ್ನ ಜನರ ವಿಮೋಚನೆಯನ್ನು ಮತ್ತು ತನ್ನ ಪವಿತ್ರ ಪರ್ವತವಾದ ಯೆರೂಸಲೇಮಿನಲ್ಲಿ ಸತ್ಯಾರಾಧನೆಯ ಪುನಸ್ಸ್ಥಾಪನೆಯನ್ನು ಮುಂತಿಳಿಸುತ್ತಿದ್ದಾನೆ. (ಯೆಶಾಯ 66:20; ದಾನಿಯೇಲ 9:16) ನಂಬಿಗಸ್ತರಾಗಿ ಉಳಿಯುವ ಯೆಹೂದ್ಯರಿಗೆ ಇದೆಷ್ಟು ಪ್ರೋತ್ಸಾಹಜನಕವಾಗಿದ್ದಿರಬೇಕು! ಯೆಹೋವನು ಇನ್ನೂ ಹೇಳುವುದು: “ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ; ನನ್ನ ಜನರ ದಾರಿಯೊಳಗಿಂದ ಆಟಂಕವನ್ನು ಎತ್ತಿಹಾಕಿರಿ ಎಂದು ಒಂದು ವಾಣಿಯು ನುಡಿಯುತ್ತದೆ.” (ಯೆಶಾಯ 57:14) ದೇವರು ತನ್ನ ಜನರನ್ನು ವಿಮೋಚಿಸುವ ಸಮಯವು ಬರುವಾಗ, ಎಲ್ಲ ಆತಂಕಗಳು ತೆಗೆಯಲ್ಪಟ್ಟು ಮಾರ್ಗವು ಸಿದ್ಧವಾಗಿರುವುದು.​—⁠2 ಪೂರ್ವಕಾಲವೃತ್ತಾಂತ 36:​22, 23.

18. ಯೆಹೋವನ ಉನ್ನತ ಸ್ಥಾನವನ್ನು ಹೇಗೆ ವರ್ಣಿಸಲಾಗಿದೆ, ಆದರೂ ಆತನು ಯಾವ ಪ್ರೀತಿಯ ಚಿಂತೆಯನ್ನು ತೋರಿಸುತ್ತಾನೆ?

18 ಈ ಅಧ್ಯಾಯದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ಮಾತುಗಳನ್ನು ಪ್ರವಾದಿ ಯೆಶಾಯನು ಈಗ ಹೇಳುತ್ತಾನೆ: “ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗನ್ನುತ್ತಾನೆ​—⁠ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.” (ಯೆಶಾಯ 57:15) ಯೆಹೋವನ ಸಿಂಹಾಸನವು ಪರಮೋನ್ನತ ಸ್ವರ್ಗದಲ್ಲಿದೆ. ಅದಕ್ಕಿಂತಲೂ ಉನ್ನತವಾದ ಇಲ್ಲವೆ ಉಚ್ಚ ಸ್ಥಾನವೇ ಇಲ್ಲ. ಅಲ್ಲಿಂದ ಆತನು ಸಕಲವನ್ನೂ, ಅಂದರೆ ದುಷ್ಟರ ಪಾಪಗಳನ್ನಷ್ಟೇಯಲ್ಲ, ಬದಲಾಗಿ ತನ್ನನ್ನು ಸೇವಿಸಲು ಪ್ರಯತ್ನಿಸುವವರ ನೀತಿಯ ಕಾರ್ಯಗಳನ್ನೂ ನೋಡುತ್ತಾನೆಂದು ತಿಳಿಯುವುದು ಎಷ್ಟೊಂದು ಸಾಂತ್ವನದಾಯಕ! (ಕೀರ್ತನೆ 102:19; 103:⁠6) ಇದಲ್ಲದೆ, ಆತನು ಶೋಷಿತರ ನರಳಾಟಗಳನ್ನು ಆಲಿಸುತ್ತಾನೆ ಮತ್ತು ಜಜ್ಜಲ್ಪಟ್ಟವರ ಹೃದಯಗಳನ್ನು ಉಜ್ಜೀವಿಸುತ್ತಾನೆ. ಈ ಮಾತುಗಳು ಪುರಾತನ ಕಾಲಗಳಲ್ಲಿ ಪಶ್ಚಾತ್ತಾಪಪಟ್ಟಿದ್ದಂಥ ಯೆಹೂದ್ಯರ ಹೃದಯಗಳನ್ನು ಸ್ಪರ್ಶಿಸಿದ್ದಿರಬೇಕು. ಇಂದು ಅವು ನಮ್ಮ ಹೃದಯಗಳನ್ನೂ ನಿಶ್ಚಯವಾಗಿ ಸ್ಪರ್ಶಿಸುತ್ತವೆ.

19. ಯೆಹೋವನ ಕೋಪವು ಯಾವಾಗ ನಿಂತುಹೋಗುತ್ತದೆ?

19 ಯೆಹೋವನ ಮುಂದಿನ ಮಾತುಗಳೂ ಸಾಂತ್ವನದಾಯಕವಾಗಿವೆ: “ನಾನು ಸರ್ವದಾ ವ್ಯಾಜ್ಯವಾಡೆನು, ಕಡೆಯ ತನಕ ಕೋಪಿಸಿಕೊಳ್ಳೆನು, ಹೀಗೆ ಮಾಡಿದರೆ ಮನುಷ್ಯಾತ್ಮವೂ ನಾನು ಸೃಷ್ಟಿಸಿದ ಜೀವವೂ ನನ್ನಿಂದ ಕುಂದಿಹೋದಾವು.” (ಯೆಶಾಯ 57:16) ಯೆಹೋವನ ಕೋಪವು ನಿರಂತರವಾಗಿರುವಲ್ಲಿ ಇಲ್ಲವೆ ಕೊನೆಯೇ ಇಲ್ಲದ್ದಾಗಿರುವಲ್ಲಿ, ದೇವರ ಯಾವ ಸೃಷ್ಟಿಜೀವಿಯೂ ಬದುಕಿ ಉಳಿಯಲಾರದು. ಆದರೆ ಸಂತೋಷಕರವಾಗಿ, ದೇವರ ಕೋಪವು ಒಂದು ಸೀಮಿತ ಸಮಯದ ವರೆಗೆ ಮಾತ್ರ ಇರುತ್ತದೆ. ಅದು ತನ್ನ ಉದ್ದೇಶವನ್ನು ಪೂರೈಸಿದ ಬಳಿಕ ತಣ್ಣಗಾಗಿಹೋಗುತ್ತದೆ. ಯೆಹೋವನು ತನ್ನ ಸೃಷ್ಟಿಯ ಕಡೆಗೆ ತೋರಿಸಿರುವ ಪ್ರೀತಿಗೆ ನಾವು ಆಳವಾದ ಗಣ್ಯತೆಯನ್ನು ಬೆಳೆಸಿಕೊಳ್ಳಲು ಈ ಪ್ರೇರಿತ ಒಳನೋಟವು ನಮಗೆ ಸಹಾಯಮಾಡುತ್ತದೆ.

20. (ಎ) ಪಶ್ಚಾತ್ತಾಪಪಡದಂಥ ಒಬ್ಬ ತಪ್ಪಿತಸ್ಥನೊಂದಿಗೆ ಯೆಹೋವನು ಹೇಗೆ ವ್ಯವಹರಿಸುತ್ತಾನೆ? (ಬಿ) ಯೆಹೋವನು ಪಶ್ಚಾತ್ತಾಪಿಯನ್ನು ಯಾವ ವಿಧದಲ್ಲಿ ಸಂತೈಸುತ್ತಾನೆ?

20 ಯೆಹೋವನು ತನ್ನ ಮಾತನ್ನು ಮುಂದುವರಿಸುವಾಗ ನಮಗೆ ಇನ್ನೂ ಹೆಚ್ಚಿನ ಒಳನೋಟವು ದೊರೆಯುತ್ತದೆ. ಆತನು ಮೊದಲಾಗಿ ಹೇಳುವುದು: “ನನ್ನ ಜನರು ಲಾಭವನ್ನು ದೋಚಿಕೊಂಡ ಅನ್ಯಾಯವನ್ನು ನಾನು ನೋಡಿ ಕೋಪಗೊಂಡು ಅವರನ್ನು ಹೊಡೆದೆನು, [ನನ್ನ ಮುಖವನ್ನು] ಮುಚ್ಚಿಕೊಂಡು ರೋಷಭರಿತನಾಗಿದ್ದೆನು; ಅವರೋ ತಿರುಗಿಕೊಂಡು ಮನಸ್ಸಿಗೆ ತೋರಿದ ಹಾಗೆಯೇ ನಡೆಯುತ್ತಾ ಬಂದಿದ್ದಾರೆ.” (ಯೆಶಾಯ 57:17) ಲೋಭದ ಕಾರಣ ಮಾಡಿರುವ ಅನ್ಯಾಯವು ದೇವರ ಕೋಪವನ್ನು ಬರಮಾಡುತ್ತದೆಂಬುದು ಖಂಡಿತ. ಒಬ್ಬನು ಮನಸ್ಸಿನಲ್ಲಿ ಧರ್ಮಪರಿತ್ಯಾಗಿಯಾಗಿರುವಷ್ಟು ಕಾಲ ಯೆಹೋವನು ರೋಷಭರಿತನಾಗಿರುತ್ತಾನೆ. ಆದರೆ ಆ ಧರ್ಮಪರಿತ್ಯಾಗಿಯು ಶಿಸ್ತಿಗೆ ಚೆನ್ನಾಗಿ ಪ್ರತಿಕ್ರಿಯೆ ತೋರಿಸುವಲ್ಲಿ ಆಗೇನು? ಆಗ ಯೆಹೋವನು, ಆತನ ಪ್ರೀತಿ ಮತ್ತು ಸಹಾನುಭೂತಿಯು ಆತನನ್ನು ಹೇಗೆ ವರ್ತಿಸುವಂತೆ ಮಾಡುತ್ತದೆಂದು ತೋರಿಸುತ್ತಾನೆ: “ಅವರ ಮಾರ್ಗಗಳನ್ನು ನೋಡಿದ್ದೇನೆ, ಅವರನ್ನು ಸ್ವಸ್ಥಮಾಡಿ ನಡಿಸುತ್ತಾ ಅವರಿಗೆ, ಅವರಲ್ಲಿಯೂ ದುಃಖಿತರಿಗೆ, ಆದರಣೆಯನ್ನು ಪ್ರತಿಫಲವಾಗಿ ಕೊಡುವೆನು.” (ಯೆಶಾಯ 57:18) ಹೀಗೆ ಶಿಸ್ತನ್ನು ಜಾರಿಗೆ ತಂದ ಬಳಿಕ ಯೆಹೋವನು ಆ ಪಶ್ಚಾತ್ತಾಪಿಯನ್ನು ಗುಣಪಡಿಸಿ, ಅವನನ್ನೂ ಅವನೊಂದಿಗೆ ದುಃಖಪಡುವವರನ್ನೂ ಸಂತೈಸುತ್ತಾನೆ. ಆ ಕಾರಣದಿಂದಲೇ ಸಾ.ಶ.ಪೂ. 537ರಲ್ಲಿ ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಲು ಸಾಧ್ಯವಾಯಿತು. ಅಂದಿನಿಂದ ಇನ್ನೆಂದಿಗೂ ಯೆಹೂದವು, ದಾವೀದನ ವಂಶದಿಂದ ಬಂದಿರುವ ಒಬ್ಬ ರಾಜನ ಕೆಳಗೆ ಒಂದು ಸ್ವತಂತ್ರ ರಾಜ್ಯವಾಗಲಿಲ್ಲವೆಂಬುದು ನಿಜ. ಆದರೂ, ಯೆರೂಸಲೇಮಿನ ದೇವಾಲಯವು ಪುನಃ ಕಟ್ಟಲ್ಪಟ್ಟು ಸತ್ಯಾರಾಧನೆಯು ಪುನಸ್ಸ್ಥಾಪಿಸಲ್ಪಟ್ಟಿತು.

21. (ಎ) ಯೆಹೋವನು 1919ರಲ್ಲಿ ಅಭಿಷಿಕ್ತ ಕ್ರೈಸ್ತರ ಮನೋಭಾವವನ್ನು ಪುನರುಜ್ಜೀವಿಸಿದ್ದು ಹೇಗೆ? (ಬಿ) ನಾವು ವ್ಯಕ್ತಿಪರವಾಗಿ ಯಾವ ಗುಣವನ್ನು ಬೆಳೆಸಿಕೊಳ್ಳುವುದು ಹಿತಕರ?

21 “ಮಹೋನ್ನತ”ನಾದ ಯೆಹೋವನು, 1919ರಲ್ಲಿ ಅಭಿಷಿಕ್ತ ಉಳಿಕೆಯವರ ಹಿತಕ್ಷೇಮದ ವಿಷಯದಲ್ಲಿಯೂ ಚಿಂತೆಯನ್ನು ತೋರಿಸಿದನು. ಅವರ ಪಶ್ಚಾತ್ತಾಪ ಹಾಗೂ ದೀನ ಮನೋಭಾವದ ಕಾರಣ ಮಹಾ ದೇವರಾದ ಯೆಹೋವನು ಅವರ ಸಂಕಟವನ್ನು ನೋಡಿ, ಬಾಬೆಲಿನ ಬಂಧಿವಾಸದಿಂದ ಅವರನ್ನು ವಿಮೋಚಿಸಿದನು. ಆತನು ಅವರಿಗಿದ್ದ ಸಕಲ ಅಡ್ಡಿತಡೆಗಳನ್ನು ನಿವಾರಿಸಿ, ಅವರು ಆತನಿಗೆ ಶುದ್ಧಾರಾಧನೆಯನ್ನು ಸಲ್ಲಿಸುವಂತೆ ಸ್ವಾತಂತ್ರ್ಯಕ್ಕೆ ನಡಿಸಿದನು. ಹೀಗೆ ಯೆಹೋವನು ಯೆಶಾಯನ ಮೂಲಕ ತಿಳಿಸಿದ ಮಾತುಗಳ ಒಂದು ನೆರವೇರಿಕೆಯು ಆಗ ಸಂಭವಿಸಿತು. ಮತ್ತು ಆ ಮಾತುಗಳ ಮರೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ಅನ್ವಯಿಸುವ ನಿತ್ಯ ಮೂಲತತ್ತ್ವಗಳಿವೆ. ಯಾರು ದೀನಮನಸ್ಕರಾಗಿದ್ದಾರೊ ಅವರಿಂದ ಮಾತ್ರ ಯೆಹೋವನು ಆರಾಧನೆಯನ್ನು ಅಂಗೀಕರಿಸುತ್ತಾನೆ. ಮತ್ತು ದೇವರ ಸೇವಕರಲ್ಲಿ ಒಬ್ಬನು ಪಾಪಮಾಡುವಲ್ಲಿ, ಅವನು ತನ್ನ ಪಾಪವನ್ನು ಒಡನೆ ಒಪ್ಪಿಕೊಂಡು, ತಿದ್ದುಪಾಟನ್ನು ಸ್ವೀಕರಿಸಿ ತನ್ನ ಮಾರ್ಗಗಳನ್ನು ತಿದ್ದಿಕೊಳ್ಳಬೇಕು. ಯೆಹೋವನು ದೀನರನ್ನು ಗುಣಪಡಿಸಿ ಸಂತೈಸುತ್ತಾನೆ, ಆದರೆ “ಅಹಂಕಾರಿಗಳನ್ನು ಎದುರಿಸುತ್ತಾನೆ” ಎಂಬುದನ್ನು ನಾವೆಂದಿಗೂ ಮರೆಯದಿರೋಣ.​—⁠ಯಾಕೋಬ 4:⁠6.

‘ದೂರದವನಿಗೂ ಸಮೀಪದವನಿಗೂ ಶಾಂತಿ’

22. ಯೆಹೋವನು (ಎ) ಪಶ್ಚಾತ್ತಾಪಿಗಳಿಗೆ ಮತ್ತು (ಬಿ) ದುಷ್ಟರಿಗೆ ಯಾವ ಭವಿಷ್ಯತ್ತನ್ನು ಮುಂತಿಳಿಸುತ್ತಾನೆ?

22 ಪಶ್ಚಾತ್ತಾಪಪಡುವವರ ಭವಿಷ್ಯವನ್ನು, ದುಷ್ಟ ಮಾರ್ಗಗಳಲ್ಲೇ ಪಟ್ಟುಹಿಡಿದು ಮುಂದುವರಿಯುವವರ ಭವಿಷ್ಯದೊಂದಿಗೆ ಹೋಲಿಸುತ್ತ ಯೆಹೋವನು ಹೇಳುವುದು: “ಮನುಷ್ಯರ ಬಾಯ ಯೋಗ್ಯಫಲವಾಗಿರುವ ಸ್ತೋತ್ರವನ್ನು ಉಂಟುಮಾಡುವವನಾಗಿ​—⁠ದೂರದವನಿಗೂ ಸಮೀಪದವನಿಗೂ ಕ್ಷೇಮವಿರಲಿ [“ಶಾಂತಿಯಿರಲಿ,” NW], . . . ನಾನು ಅವರನ್ನು ಸ್ವಸ್ಥಮಾಡುವೆನು . . . ದುಷ್ಟರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ ಬುರುದೆಯನ್ನೂ ಕಾರುತ್ತಲಿರುತ್ತವೆ. ದುಷ್ಟರಿಗೆ ಸಮಾಧಾನವೇ ಇಲ್ಲ.”​—ಯೆಶಾಯ 57:​19-21.

23. ಬಾಯಿಯ ಯೋಗ್ಯಫಲ ಎಂದರೇನು, ಮತ್ತು ಯೆಹೋವನು ಈ ಫಲವನ್ನು ‘ಉಂಟುಮಾಡುವುದು’ ಯಾವ ವಿಧದಲ್ಲಿ?

23 ಬಾಯಿಯ ಯೋಗ್ಯಫಲವು, ದೇವರಿಗೆ ಸಮರ್ಪಿಸುವ ಸ್ತೋತ್ರಯಜ್ಞವಾಗಿದೆ, ಆತನ ಹೆಸರಿಗೆ ಮಾಡುವ ಬಹಿರಂಗ ಪ್ರಕಟನೆಯಾಗಿದೆ. (ಇಬ್ರಿಯ 13:15) ಯೆಹೋವನು ಆ ಬಹಿರಂಗ ಪ್ರಕಟನೆಯನ್ನು ‘ಉಂಟುಮಾಡುವುದು’ ಹೇಗೆ? ಒಬ್ಬನು ಸ್ತೋತ್ರಯಜ್ಞವನ್ನು ಸಮರ್ಪಿಸಬೇಕಾದರೆ, ಅವನು ಮೊದಲನೆಯದಾಗಿ ದೇವರ ಕುರಿತು ಕಲಿತು ಆತನಲ್ಲಿ ನಂಬಿಕೆಯಿಡಬೇಕು. ಆಗ ದೇವರಾತ್ಮದ ಫಲಗಳಲ್ಲಿ ಒಂದಾದ ನಂಬಿಕೆಯು, ಆ ವ್ಯಕ್ತಿಯು ಏನನ್ನು ಕೇಳಿಸಿಕೊಂಡಿದ್ದಾನೊ ಅದನ್ನು ಇನ್ನಿತರರಿಗೆ ಹೇಳುವಂತೆ ಅವನನ್ನು ಪ್ರಚೋದಿಸುತ್ತದೆ. ಇನ್ನೊಂದು ಮಾತಿನಲ್ಲಿ, ಅವನು ಬಹಿರಂಗವಾದ ಪ್ರಕಟನೆಯನ್ನು ಮಾಡುತ್ತಾನೆ. (ರೋಮಾಪುರ 10:​13-15; ಗಲಾತ್ಯ 5:22) ತನ್ನ ಸೇವಕರು ತನ್ನ ಸ್ತುತಿಯನ್ನು ಮಾಡುವಂತೆ ಅವರನ್ನು ಅಂತಿಮವಾಗಿ ನೇಮಿಸುವಾತನು ಯೆಹೋವನೇ ಆಗಿದ್ದಾನೆಂಬುದನ್ನೂ ನಾವು ನೆನಪಿನಲ್ಲಿಡತಕ್ಕದ್ದು. ಮತ್ತು ತನ್ನ ಜನರು ಸ್ತೋತ್ರಯಜ್ಞವನ್ನು ಸಲ್ಲಿಸಲು ಸಾಧ್ಯವಾಗುವಂತೆ ಅವರನ್ನು ವಿಮೋಚಿಸುವಾತನೂ ಯೆಹೋವನೇ. (1 ಪೇತ್ರ 2:⁠9) ಆದಕಾರಣ, ಬಾಯಿಯ ಈ ಯೋಗ್ಯಫಲವನ್ನು ಉಂಟುಮಾಡುವಾತನು ಯೆಹೋವನೆಂದು ಯೋಗ್ಯವಾಗಿಯೇ ಹೇಳಬಹುದಾಗಿದೆ.

24. (ಎ) ದೇವರ ಸಮಾಧಾನವನ್ನು ಯಾರು ಅನುಭವಿಸುತ್ತಾರೆ, ಮತ್ತು ಫಲಿತಾಂಶವೇನು? (ಬಿ) ಸಮಾಧಾನವನ್ನು ಅನುಭವಿಸದಿರುವವರಾರು, ಮತ್ತು ಅವರಿಗೆ ಸಿಗುವ ಫಲಿತಾಂಶವೇನು?

24 ಯೆಹೂದ್ಯರು ಯೆಹೋವನಿಗೆ ಸ್ತುತಿಗಳನ್ನು ಹಾಡುತ್ತ ತಮ್ಮ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾಗ, ಎಷ್ಟು ರೋಮಾಂಚಕವಾದ ಬಾಯಿಯ ಫಲವನ್ನು ಅವರು ಅರ್ಪಿಸುತ್ತಿದ್ದಿರಬೇಕು! ಅವರು “ದೂರ”ದಲ್ಲಿ, ಅಂದರೆ ಯೆಹೂದಕ್ಕೆ ಹಿಂದಿರುಗಿ ಹೋಗಲು ಕಾಯುತ್ತಿದ್ದು ಯೆಹೂದದಿಂದ ದೂರದಲ್ಲಿರಲಿ, ಇಲ್ಲವೇ “ಸಮೀಪ”ದಲ್ಲಿ ಅಂದರೆ ಆಗಲೇ ತಮ್ಮ ಸ್ವದೇಶದಲ್ಲಿರಲಿ, ದೇವರ ಸಮಾಧಾನವನ್ನು ಅನುಭವಿಸುತ್ತಿರಲು ಅವರು ಹರ್ಷಭರಿತರಾಗಿರಬೇಕು. ಇದಕ್ಕೆ ವ್ಯತಿರಿಕ್ತವಾಗಿ, ದುಷ್ಟರ ಸ್ಥಿತಿಗತಿ ಎಷ್ಟು ಭಿನ್ನವಾಗಿದೆ! ಯೆಹೋವನ ಶಿಸ್ತಿನ ಕ್ರಮಗಳಿಗೆ ಕಿವಿಗೊಡದ ಯಾವ ದುಷ್ಟರಿಗೂ, ಅವರು ಯಾರೇ ಆಗಿರಲಿ, ಎಲ್ಲಿಯೇ ಇರಲಿ ಸಮಾಧಾನವೇ ಇಲ್ಲ. ವಿಶ್ರಾಂತಿಯಿಲ್ಲದೆ ನೊರೆಕಾರುವ ಸಮುದ್ರದಂತೆ, ಅವರು ಬಾಯಿಯ ಯೋಗ್ಯ ಫಲವನ್ನಲ್ಲ, ಬದಲಾಗಿ “ಕೆಸರನ್ನೂ ಬುರುದೆಯನ್ನೂ” ಅಂದರೆ ಅಶುದ್ಧವಾಗಿರುವಂಥದ್ದೆಲ್ಲವನ್ನೂ ಉತ್ಪಾದಿಸುತ್ತ ಇರುತ್ತಾರೆ.

25. ದೂರದಿಂದ ಮತ್ತು ಸಮೀಪದಿಂದ ಅನೇಕರು ಸಮಾಧಾನವನ್ನು ಅನುಭವಿಸುತ್ತಿರುವುದು ಹೇಗೆ?

25 ಇಂದು ಸಹ, ಯೆಹೋವನ ಆರಾಧಕರು ಎಲ್ಲೆಲ್ಲಿಯೂ ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಟಿಸುತ್ತಾರೆ. ದೂರದಲ್ಲಿ ಮತ್ತು ಸಮೀಪದಲ್ಲಿರುವ ಕ್ರೈಸ್ತರು, 230ಕ್ಕೂ ಹೆಚ್ಚು ದೇಶಗಳಲ್ಲಿ ಒಬ್ಬನೇ ಸತ್ಯ ದೇವರ ಸ್ತುತಿಯನ್ನು ಮೊಳಗಿಸುತ್ತ, ತಮ್ಮ ಬಾಯಿಯ ಫಲವನ್ನು ಅರ್ಪಿಸುತ್ತಿದ್ದಾರೆ. ಅವರು ಹಾಡುತ್ತಿರುವ ಸ್ತುತಿಗಳು “ದಿಗಂತಗಳಲ್ಲಿಯೂ” ಕೇಳಿಸುತ್ತವೆ. (ಯೆಶಾಯ 42:​10-12) ಅವರ ಮಾತುಗಳನ್ನು ಕೇಳಿ, ಅದಕ್ಕೆ ಪ್ರತಿಕ್ರಿಯೆ ತೋರಿಸುವವರು, ದೇವರ ವಾಕ್ಯವಾದ ಬೈಬಲಿನ ಸತ್ಯವನ್ನು ಅವಲಂಬಿಸುತ್ತಿದ್ದಾರೆ. ಇಂತಹವರು “ಶಾಂತಿದಾಯಕನಾದ” ದೇವರನ್ನು ಸೇವಿಸುವುದರಿಂದ ಬರುವ ಶಾಂತಿಯನ್ನು ಅನುಭವಿಸುತ್ತಿದ್ದಾರೆ.​—⁠ರೋಮಾಪುರ 16:⁠20.

26. (ಎ) ದುಷ್ಟರಿಗೆ ಮುಂದೆ ಏನು ಕಾದಿದೆ? (ಬಿ) ದೀನರಿಗೆ ಯಾವ ಭವ್ಯ ವಾಗ್ದಾನವನ್ನು ಮಾಡಲಾಗಿದೆ, ಮತ್ತು ನಮ್ಮ ದೃಢನಿರ್ಧಾರ ಏನಾಗಿರಬೇಕು?

26 ದುಷ್ಟರು ರಾಜ್ಯದ ಸಂದೇಶಕ್ಕೆ ಕಿವಿಗೊಡುವುದಿಲ್ಲವೆಂಬುದು ನಿಜ. ಆದರೆ ಬೇಗನೆ, ನೀತಿವಂತರ ಶಾಂತಿಯನ್ನು ಕೆಡಿಸಲು ಅವರಿಗೆ ಅನುಮತಿ ದೊರೆಯದು. ಯೆಹೋವನು ವಚನ ಕೊಡುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು.” ಆದರೆ ಯೆಹೋವನನ್ನು ಆಶ್ರಯಿಸುವವರು ಅದ್ಭುತಕರವಾದ ರೀತಿಯಲ್ಲಿ ಭೂಮಿಗೆ ಬಾಧ್ಯಸ್ಥರಾಗುವರು. “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11, 29) ಆಗ ನಮ್ಮ ಭೂಮಿಯು ಎಷ್ಟೊಂದು ರಮ್ಯವಾದ ಸ್ಥಳವಾಗಿರುವುದು! ಆದುದರಿಂದ, ನಾವು ದೇವರ ಸ್ತುತಿಯನ್ನು ಸದಾಕಾಲಕ್ಕೂ ಹಾಡಲಾಗುವಂತೆ, ದೇವರ ಸಮಾಧಾನವನ್ನು ಎಂದಿಗೂ ಕಳೆದುಕೊಳ್ಳದಿರುವ ದೃಢನಿರ್ಧಾರವನ್ನು ಮಾಡೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 6 “ಮಂಚ” ಎಂಬ ಶಬ್ದವು ಪ್ರಾಯಶಃ ಯಜ್ಞವೇದಿಯನ್ನೊ ಅಥವಾ ವಿಧರ್ಮಿ ಆರಾಧನೆಯ ಸ್ಥಳವನ್ನೊ ಸೂಚಿಸುತ್ತದೆ. ಅದನ್ನು ಮಂಚವೆಂದು ಕರೆದಿರುವುದು, ಅಂತಹ ಆರಾಧನೆಯು ಆತ್ಮಿಕ ವೇಶ್ಯಾವಾಟಿಕೆಯಾಗಿದೆ ಎಂಬುದನ್ನು ಜ್ಞಾಪಕಹುಟ್ಟಿಸುತ್ತದೆ.

^ ಪ್ಯಾರ. 8 ವಿಗ್ರಹಸ್ತಂಭಗಳು ಸ್ತ್ರೀ ಯೋನಿಯನ್ನು ಪ್ರತಿನಿಧಿಸಿದ್ದಿರಬಹುದಾಗಿರುವಾಗ, ಪವಿತ್ರ ಕಲ್ಲುಕಂಬಗಳು ಶಿಶ್ನವನ್ನು ಸೂಚಿಸಿದ್ದಿರಬಹುದು. ಯೆಹೂದದ ಅಪನಂಬಿಗಸ್ತ ನಿವಾಸಿಗಳು ಇವೆರಡನ್ನೂ ಉಪಯೋಗಿಸಿದರು.​—⁠2 ಅರಸುಗಳು 18:4; 23:⁠14.

[ಅಧ್ಯಯನ ಪ್ರಶ್ನೆಗಳು]

[ಪುಟ 263ರಲ್ಲಿರುವ ಚಿತ್ರ]

ಯೆಹೂದವು ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದಡಿಯಲ್ಲಿ ಅನೈತಿಕ ಆರಾಧನೆಯನ್ನು ನಡೆಸುತ್ತದೆ

[ಪುಟ 267ರಲ್ಲಿರುವ ಚಿತ್ರ]

ಯೆಹೂದವು ದೇಶದಲ್ಲೆಲ್ಲ ಯಜ್ಞವೇದಿಗಳನ್ನು ಕಟ್ಟುತ್ತದೆ

[ಪುಟ 275ರಲ್ಲಿರುವ ಚಿತ್ರ]

‘ನಾನು ಬಾಯಿಯ ಯೋಗ್ಯಫಲವನ್ನು ಉಂಟುಮಾಡುತ್ತಿದ್ದೇನೆ’