ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮ ಒಳಿತಿಗಾಗಿ ಬೋಧಿಸುತ್ತಾನೆ

ಯೆಹೋವನು ನಮ್ಮ ಒಳಿತಿಗಾಗಿ ಬೋಧಿಸುತ್ತಾನೆ

ಅಧ್ಯಾಯ ಒಂಬತ್ತು

ಯೆಹೋವನು ನಮ್ಮ ಒಳಿತಿಗಾಗಿ ಬೋಧಿಸುತ್ತಾನೆ

ಯೆಶಾಯ 48:​1-22

1. ವಿವೇಕಿಗಳು ಯೆಹೋವನ ಮಾತುಗಳಿಗೆ ಹೇಗೆ ಪ್ರತಿವರ್ತನೆ ತೋರಿಸುತ್ತಾರೆ?

ಯೆಹೋವನು ಮಾತಾಡುವಾಗ, ವಿವೇಕಿಗಳು ಅತಿ ಗೌರವದಿಂದ ಆತನ ಮಾತುಗಳಿಗೆ ಕಿವಿಗೊಡುತ್ತಾರೆ ಮತ್ತು ಪ್ರತಿವರ್ತನೆ ತೋರಿಸುತ್ತಾರೆ. ಯೆಹೋವನ ಪ್ರತಿಯೊಂದು ಮಾತೂ ನಮ್ಮ ಪ್ರಯೋಜನಾರ್ಥವಾಗಿದೆ. ಮತ್ತು ಆತನು ನಮ್ಮ ಯೋಗಕ್ಷೇಮದಲ್ಲಿ ತೀರ ಆಸಕ್ತನಾಗಿದ್ದಾನೆ. ಉದಾಹರಣೆಗೆ, ಯೆಹೋವನು ತನ್ನ ಪುರಾತನ ಕಾಲದ ಒಡಂಬಡಿಕೆಯ ಜನರನ್ನು, “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಸಂಬೋಧಿಸುವ ವಿಧವು ಎಷ್ಟೋ ಹೃದಯೋಲ್ಲಾಸಕರವಾಗಿದೆ. (ಯೆಶಾಯ 48:18) ದೇವರ ಬೋಧನೆಗಳ ಸಾಬೀತಾಗಿರುವ ಮೌಲ್ಯವು, ನಾವು ಆತನಿಗೆ ಕಿವಿಗೊಟ್ಟು ಆತನ ಮಾರ್ಗದರ್ಶನವನ್ನು ಅನುಸರಿಸುವಂತೆ ನಮ್ಮನ್ನು ಪ್ರಚೋದಿಸಬೇಕು. ಏಕೆಂದರೆ ನೆರವೇರಿರುವ ಪ್ರವಾದನೆಗಳ ದಾಖಲೆಯು, ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುವ ವಿಷಯದಲ್ಲಿ ಆತನಿಗಿರುವ ದೃಢತೆಯ ಕುರಿತು ನಮಗಿರುವ ಯಾವುದೇ ಸಂದೇಹವನ್ನು ಹೋಗಲಾಡಿಸುತ್ತದೆ.

2. ಯೆಶಾಯ 48ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳು ಯಾರಿಗಾಗಿ ಬರೆಯಲ್ಪಟ್ಟವು, ಮತ್ತು ಅವುಗಳಿಂದ ಯಾರು ಕೂಡ ಪ್ರಯೋಜನಪಡೆಯಬಲ್ಲರು?

2 ಯೆಶಾಯ ಪುಸ್ತಕದ 48ನೆಯ ಅಧ್ಯಾಯದ ಮಾತುಗಳು, ದೇಶಭ್ರಷ್ಟರಾಗಿ ಬಾಬೆಲಿನಲ್ಲಿರುವ ಯೆಹೂದ್ಯರ ಪ್ರಯೋಜನಾರ್ಥವಾಗಿ ಬರೆಯಲ್ಪಟ್ಟಿದ್ದಿರಬೇಕು. ಅಷ್ಟುಮಾತ್ರವಲ್ಲ, ಕ್ರೈಸ್ತರು ಇಂದು ಅಸಡ್ಡೆಮಾಡಲಾರದಂಥ ಒಂದು ಸಂದೇಶವೂ ಈ ಮಾತುಗಳಲ್ಲಿದೆ. ಯೆಶಾಯ 47ರಲ್ಲಿ ಬಾಬೆಲಿನ ಪತನವನ್ನು ಬೈಬಲು ಮುಂತಿಳಿಸಿತು. ಈಗ ಯೆಹೋವನು ಆ ನಗರದಲ್ಲಿರುವ ಯೆಹೂದಿ ದೇಶಭ್ರಷ್ಟರ ಸಂಬಂಧದಲ್ಲಿ ತನಗಿರುವ ಉದ್ದೇಶವನ್ನು ವರ್ಣಿಸುತ್ತಾನೆ. ತನ್ನ ಚುನಾಯಿತ ಜನರ ಕಪಟ ಮನೋಭಾವ ಮತ್ತು ತನ್ನ ವಾಗ್ದಾನಗಳಲ್ಲಿ ಅವರಿಗಿದ್ದ ಹಟಮಾರಿತನದ ಅಪನಂಬಿಕೆಯ ಕುರಿತು ಯೆಹೋವನು ನೊಂದಿದ್ದಾನೆ. ಆದರೂ ಅವರ ಒಳಿತಿಗಾಗಿ ಆತನು ಅವರಿಗೆ ಉಪದೇಶ ನೀಡಲು ಬಯಸುತ್ತಾನೆ. ಆತನು ಮುಂದೆ ಬರಲಿದ್ದ ಶುದ್ಧೀಕರಣದ ಒಂದು ಸಮಯವನ್ನು ಮುನ್ನೋಡುತ್ತಾನೆ. ಇದು ಅವರಲ್ಲಿ ನಂಬಿಗಸ್ತ ಉಳಿಕೆಯವರನ್ನು ಅವರ ಸ್ವದೇಶದಲ್ಲಿನ ಪುನಸ್ಸ್ಥಾಪನೆಗೆ ನಡಿಸುತ್ತದೆ.

3. ಯೆಹೂದದ ಆರಾಧನೆಯಲ್ಲಿ ಯಾವ ದೋಷವಿತ್ತು?

3 ಯೆಹೋವನ ಜನರು ಸತ್ಯಾರಾಧನೆಯಿಂದ ಎಷ್ಟು ದೂರಹೋಗಿದ್ದಾರೆ! ಯೆಶಾಯನ ಆರಂಭದ ಮಾತುಗಳು ತುಂಬ ಗಂಭೀರವಾಗಿವೆ: “ಇಸ್ರಾಯೇಲೆಂಬ ಹೆಸರಿನವರೂ ಯೆಹೂದ ವಂಶೋತ್ಪನ್ನರೂ ಆದ ಯಾಕೋಬನ ಮನೆತನದವರೇ, ನೀವು ಯೆಹೋವನ ನಾಮದ ಮೇಲೆ ಆಣೆಯಿಟ್ಟು ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ, ನಿಜ, ಆದರೆ ಈ ನಿಮ್ಮ ಕಾರ್ಯಗಳು ಸತ್ಯಕ್ಕೂ ಧರ್ಮಕ್ಕೂ ಅನುಸಾರವಾಗಿಲ್ಲ. ಇವರು ತಮ್ಮನ್ನು ಪರಿಶುದ್ಧ ಪಟ್ಟಣದವರು ಎಂದುಕೊಂಡು ದೇವರು ಇಸ್ರಾಯೇಲಿನವನೇ ಎಂದು ಆತನ ಮೇಲೆ ಭರವಸವಿಟ್ಟುಕೊಂಡಿರುತ್ತಾರೆ. ಆತನ ಹೆಸರೋ ಸಕಲಸೈನ್ಯಗಳ ಅಧೀಶ್ವರನಾದ ಯೆಹೋವನೆಂಬದು.” (ಯೆಶಾಯ 48:1, 2) ಎಂತಹ ಕಪಟತನ! “ಯೆಹೋವನ ನಾಮದ ಮೇಲೆ ಆಣೆಯಿಟ್ಟು” ಮಾತಾಡುವುದೆಂದರೆ, ದೇವರ ನಾಮವನ್ನು ಕಾಟಾಚಾರಕ್ಕಾಗಿ ಉಪಯೋಗಿಸುವುದೆಂದೇ ಅರ್ಥ. (ಚೆಫನ್ಯ 1:⁠5) ಬಾಬೆಲಿಗೆ ದೇಶಭ್ರಷ್ಟರಾಗಿ ಹೋಗುವ ಮೊದಲು ಯೆಹೂದ್ಯರು “ಪರಿಶುದ್ಧ ಪಟ್ಟಣ”ವಾದ ಯೆರೂಸಲೇಮಿನಲ್ಲಿ ಯೆಹೋವನನ್ನು ಆರಾಧಿಸಿದರು. ಆದರೆ ಅವರ ಆರಾಧನೆ ಕಪಟವಾಗಿತ್ತು. ಅವರ ಹೃದಯಗಳು ದೇವರಿಂದ ದೂರಹೋಗಿದ್ದವು. ಅವರ ಆರಾಧನಾ ಕಾರ್ಯಗಳು “ಸತ್ಯಕ್ಕೂ ಧರ್ಮಕ್ಕೂ ಅನುಸಾರ”ವಾಗಿರಲಿಲ್ಲ. ಅವರ ಮೂಲಪಿತೃಗಳಲ್ಲಿದ್ದ ನಂಬಿಕೆ ಅವರಲ್ಲಿರಲಿಲ್ಲ.​—⁠ಮಲಾಕಿಯ 3:⁠7.

4. ಯೆಹೋವನಿಗೆ ಯಾವ ರೀತಿಯ ಆರಾಧನೆ ಇಷ್ಟ?

4 ಆರಾಧನೆಯು ಯಾಂತ್ರಿಕವಾದದ್ದಾಗಿರಬಾರದೆಂದು ಯೆಹೋವನ ಮಾತುಗಳು ನಮಗೆ ಜ್ಞಾಪಕ ಹುಟ್ಟಿಸುತ್ತವೆ. ಅದು ಹೃತ್ಪೂರ್ವಕವಾದದ್ದಾಗಿರಬೇಕು. ಕೇವಲ ನಾಮಮಾತ್ರದ ಸೇವೆ, ಇತರರನ್ನು ಮೆಚ್ಚಿಸಲು ಅಥವಾ ಪ್ರಭಾವಿಸಲು ಮಾತ್ರ ಮಾಡುವಂತಹ ಸೇವೆ, “ದೈವಿಕ ಭಕ್ತಿಯ ಕೃತ್ಯ”ವಾಗಿರುವುದಿಲ್ಲ. (2 ಪೇತ್ರ 3:​11, NW) ಕ್ರೈಸ್ತನೆಂದು ಕರೆಯಲ್ಪಡುವ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಆರಾಧನೆಯು ದೇವರಿಗೆ ಸ್ವೀಕಾರಯೋಗ್ಯವಾಗುವುದಿಲ್ಲ. (2 ತಿಮೊಥೆಯ 3:⁠5) ಯೆಹೋವನು ಇದ್ದಾನೆ ಎಂದು ನಂಬುವುದು ಅತ್ಯಾವಶ್ಯಕವಾಗಿರುವುದಾದರೂ, ಅದು ಕೇವಲ ಆರಂಭವಷ್ಟೆ. ಯೆಹೋವನು ಬಯಸುವುದು ಪೂರ್ಣಪ್ರಾಣದ, ಆಳವಾದ ಪ್ರೀತಿ ಮತ್ತು ಗಣ್ಯತೆಯಿಂದ ಪ್ರೇರಿತವಾದ ಆರಾಧನೆಯನ್ನೇ.​—⁠ಕೊಲೊಸ್ಸೆ 3:⁠23.

ಹೊಸ ವಿಷಯಗಳನ್ನು ಮುಂತಿಳಿಸುವುದು

5. ಯೆಹೋವನು ಮುಂತಿಳಿಸಿರುವ ಕೆಲವು ‘ಪ್ರಥಮ ಸಂಗತಿಗಳು’ ಯಾವುವು?

5 ಬಾಬೆಲಿನಲ್ಲಿದ್ದ ಯೆಹೂದ್ಯರಿಗೆ ಅವರ ನೆನಪುಗಳನ್ನು ನವೀಕರಿಸುವ ಅಗತ್ಯವಿದ್ದಿರಬೇಕು. ಆದಕಾರಣ, ಯೆಹೋವನು ಪುನಃ ತಾನು ಸತ್ಯ ಪ್ರವಾದನೆಯ ದೇವರೆಂದು ಅವರಿಗೆ ಜ್ಞಾಪಕ ಹುಟ್ಟಿಸುತ್ತಾನೆ: “ಈ ವರೆಗೂ ನಡೆದ [“ಪ್ರಥಮ,” NW] ಸಂಗತಿಗಳನ್ನು ಪುರಾತನಕಾಲದಲ್ಲಿಯೇ ತಿಳಿಸಿದೆನು, ಹೌದು, ನನ್ನ ಬಾಯಿಂದ ಹೊರಟವು, ಪ್ರಕಟಿಸಿದೆನು; ನಾನು ತಟ್ಟನೆ ನಡಿಸಲು ನೆರವೇರಿದವು.” (ಯೆಶಾಯ 48:3) ‘ಪ್ರಥಮ ಸಂಗತಿಗಳು’ ದೇವರು ಈಗಾಗಲೇ ನೆರವೇರಿಸಿದ್ದ, ಇಸ್ರಾಯೇಲ್ಯರಿಗೆ ಐಗುಪ್ತದಿಂದ ಆದ ಬಿಡುಗಡೆ, ವಾಗ್ದಾನ ದೇಶವನ್ನು ಅವರಿಗೆ ಸ್ವಾಸ್ಥ್ಯವಾಗಿ ನೀಡಿದಂತಹ ಸಂಗತಿಗಳಾಗಿದ್ದವು. (ಆದಿಕಾಂಡ 13:​14, 15; 15:​13, 14) ಇಂತಹ ಭವಿಷ್ಯನುಡಿಗಳು ದೇವರ ಬಾಯಿಂದ ಹೊರಡುತ್ತವೆ, ಅವು ದೈವಿಕ ಮೂಲದಿಂದ ಬರುತ್ತವೆ. ದೇವರು ತನ್ನ ಆಜ್ಞೆಗಳನ್ನು ಮನುಷ್ಯರು ಕೇಳಿಸಿಕೊಳ್ಳುವಂತೆ ಮಾಡುತ್ತಾನೆ ಮತ್ತು ಹಾಗೆ ಕೇಳಿಸಿಕೊಂಡಂತಹ ವಿಷಯಗಳು ಅವರನ್ನು ವಿಧೇಯರಾಗುವಂತೆ ಪ್ರಚೋದಿಸಬೇಕು. (ಧರ್ಮೋಪದೇಶಕಾಂಡ 28:15) ತಾನು ಮುಂತಿಳಿಸಿದಂಥದ್ದನ್ನು ನೆರವೇರಿಸಲು ದೇವರು ಥಟ್ಟನೆ ಕ್ರಮ ಕೈಕೊಳ್ಳುತ್ತಾನೆ. ಯೆಹೋವನು ಸರ್ವಶಕ್ತನಾಗಿರುವ ನಿಜತ್ವವು ತಾನೇ ಆತನ ಉದ್ದೇಶವು ನೆರವೇರುವುದೆಂಬ ಖಾತ್ರಿಯನ್ನು ಕೊಡುತ್ತದೆ.​—⁠ಯೆಹೋಶುವ 21:45; 23:⁠14.

6. ಯೆಹೂದ್ಯರು ಎಷ್ಟರ ಮಟ್ಟಿಗೆ “ಮೊಂಡರೂ ಅವಿಧೇಯರೂ” ಆಗಿದ್ದಾರೆ?

6 ಯೆಹೋವನ ಜನರು “ಮೊಂಡರೂ ಅವಿಧೇಯರೂ” ಆಗಿದ್ದಾರೆ. (ಕೀರ್ತನೆ 78:⁠7) ಆತನು ಅವರಿಗೆ ಮುಚ್ಚುಮರೆಯಿಲ್ಲದೆ ಹೇಳುವುದು: “ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ತಾಮ್ರ.” (ಯೆಶಾಯ 48:⁠4) ಯೆಹೂದ್ಯರು ಲೋಹಗಳಂತೆ ಸುಲಭವಾಗಿ ಬಗ್ಗುವವರಲ್ಲ, ಅಂದರೆ ಮಣಿಯುವವರಲ್ಲ. ಯೆಹೋವನು ಸಂಗತಿಗಳು ಸಂಭವಿಸುವ ಮೊದಲೇ ಅವುಗಳನ್ನು ತಿಳಿಯಪಡಿಸುವ ಒಂದು ಕಾರಣವು ಇದಾಗಿದೆ. ಇಲ್ಲದಿರುವಲ್ಲಿ, ಆತನ ಜನರು ಯೆಹೋವನು ಮಾಡಿರುವ ವಿಷಯಗಳ ಕುರಿತು ಹೀಗೆ ಹೇಳುವರು: “ಈ ಕಾರ್ಯಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ಬೊಂಬೆ, ಎರಕದ ಪುತ್ತಳಿ ಇವುಗಳನ್ನು ವಿಧಿಸಿದೆ.” (ಯೆಶಾಯ 48:⁠5) ಯೆಹೋವನು ಈಗ ಹೇಳುತ್ತಿರುವ ಮಾತುಗಳು ಆ ಅಪನಂಬಿಗಸ್ತ ಯೆಹೂದ್ಯರ ಮೇಲೆ ಸ್ವಲ್ಪವಾದರೂ ಪರಿಣಾಮ ಬೀರುವವೋ? ದೇವರು ಅವರಿಗೆ ಹೇಳುವುದು: [ಆಗಲೇ] ಕೇಳಿದಿಯಲ್ಲಾ, [ಈಗ] ನಡೆದದ್ದನ್ನೆಲ್ಲಾ ನೋಡು, ನಿನ್ನವರೇ ಪ್ರಸಿದ್ಧಿಪಡಿಸಲಿ, ಇಂದಿನಿಂದ ಹೊಸ ಸಂಗತಿಗಳನ್ನು, ನೀನು ತಿಳಿಯದಿದ್ದ ಗುಪ್ತವಿಷಯಗಳನ್ನು, ನಿನಗೆ ಅರುಹುತ್ತೇನೆ. ಈಗಲೇ ಉಂಟಾಗುತ್ತಿವೆ, ಪುರಾತನಕಾಲದಲ್ಲಿ ಆಗಿಲ್ಲ; ಆಹಾ, ಮೊದಲೇ ನಾನು ತಿಳಿದುಕೊಂಡಿದ್ದೆನು ಎಂದು ನೀನು ಅಂದುಕೊಳ್ಳದ ಹಾಗೆ ಈ ದಿನಕ್ಕೆ ಮುಂಚೆ ನಾನು ನಿನಗೆ ಕೇಳಗೊಡಿಸಲಿಲ್ಲ.”​—ಯೆಶಾಯ 48:6, 7.

7. ದೇಶಭ್ರಷ್ಟರಾಗಿದ್ದ ಯೆಹೂದ್ಯರು ಏನನ್ನು ಒಪ್ಪಿಕೊಳ್ಳಬೇಕಾಗುವುದು, ಮತ್ತು ಅವರು ಏನನ್ನು ನಿರೀಕ್ಷಿಸಬಲ್ಲರು?

7 ಬಾಬೆಲಿನ ಪತನದ ಕುರಿತಾದ ಭವಿಷ್ಯನುಡಿಯನ್ನು ದೀರ್ಘಕಾಲಕ್ಕೆ ಮುಂಚೆಯೇ ಯೆಶಾಯನು ದಾಖಲಿಸಿದನು. ಆದರೆ ಈಗ ಬಾಬೆಲಿನಲ್ಲಿ ದೇಶಭ್ರಷ್ಟರಾಗಿರುವ ಯೆಹೂದ್ಯರು, ಆ ಭವಿಷ್ಯನುಡಿಯ ನೆರವೇರಿಕೆಯ ಕುರಿತು ಯೋಚಿಸುವಂತೆ ಪ್ರವಾದನಾರೂಪವಾಗಿ ಆಜ್ಞಾಪಿಸಲ್ಪಡುತ್ತಾರೆ. ಯೆಹೋವನು ನೆರವೇರಿರುವ ಪ್ರವಾದನೆಗಳ ದೇವರೆಂಬುದನ್ನು ಅವರು ಅಲ್ಲಗಳೆಯಬಲ್ಲರೊ? ಮತ್ತು ಯೆಹೂದದ ನಿವಾಸಿಗಳು ಯೆಹೋವನು ಸತ್ಯ ದೇವರೆಂಬುದನ್ನು ಕಂಡು ಕೇಳಿರುವುದರಿಂದ, ಈ ಸತ್ಯವನ್ನು ಅವರು ಇತರರಿಗೂ ತಿಳಿಯಪಡಿಸಬಾರದೊ? ಯೆಹೋವನ ಪ್ರಕಟಿತ ವಾಕ್ಯವು ಇನ್ನೂ ನೆರವೇರಿರದ ಸಂಗತಿಗಳನ್ನು, ಬಾಬೆಲಿನ ಮೇಲೆ ಕೋರೆಷನ ವಿಜಯ ಮತ್ತು ಯೆಹೂದ್ಯರ ಬಿಡುಗಡೆಯಂತಹ ವಿಷಯಗಳನ್ನು ಮುಂತಿಳಿಸುತ್ತದೆ. (ಯೆಶಾಯ 48:​14-16) ಇಂತಹ ಭಯಚಕಿತ ಸಂಗತಿಗಳು ಅನಿರೀಕ್ಷಿತವಾಗಿ ಸಂಭವಿಸುವಂತೆ ಕಾಣುತ್ತವೆ. ಲೋಕ ಪರಿಸ್ಥಿತಿಗಳ ಬೆಳವಣಿಗೆಯನ್ನು ಕೇವಲ ಅವಲೋಕಿಸಿ ಯಾವ ವ್ಯಕ್ತಿಯೂ ಆ ಘಟನೆಗಳನ್ನು ಮುನ್ನೋಡಸಾಧ್ಯವಿರಲಿಲ್ಲ. ಅವು ಕಾರಣವಿಲ್ಲದೆಯೊ ಎಂಬಂತೆ ಸಂಭವಿಸುತ್ತವೆ. ಈ ಘಟನೆಗಳನ್ನು ಆಗಿಸುವಾತನು ಯಾರು? ಯೆಹೋವನು ಇವುಗಳನ್ನು ಸುಮಾರು 200 ವರ್ಷಗಳಿಗೆ ಮುಂಚಿತವಾಗಿ ಮುಂತಿಳಿಸುವುದರಿಂದ, ಮೇಲಿನ ಪ್ರಶ್ನೆಗೆ ಉತ್ತರವು ಸುವ್ಯಕ್ತ.

8. ಕ್ರೈಸ್ತರು ಇಂದು ಯಾವ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ, ಮತ್ತು ಅವರಿಗೆ ಯೆಹೋವನ ಪ್ರವಾದನ ವಾಕ್ಯದಲ್ಲಿ ಏಕೆ ಸಂಪೂರ್ಣ ಭರವಸೆಯಿದೆ?

8 ಅಷ್ಟೇ ಅಲ್ಲ, ಯೆಹೋವನು ತನ್ನ ಸ್ವಂತ ವೇಳಾಪಟ್ಟಿಗನುಸಾರ ತನ್ನ ಮಾತನ್ನು ನೆರವೇರಿಸುತ್ತಾನೆ. ನೆರವೇರಿದ ಪ್ರವಾದನೆಗಳು ಆತನ ದೇವತ್ವವನ್ನು ಪುರಾತನ ಕಾಲದ ಯೆಹೂದ್ಯರಿಗೆ ರುಜುಪಡಿಸಿರುವುದು ಮಾತ್ರವಲ್ಲ, ಇಂದಿನ ಕ್ರೈಸ್ತರಿಗೂ ರುಜುಪಡಿಸುತ್ತವೆ. ಹಿಂದಿನ ಕಾಲದಲ್ಲಿ ನೆರವೇರಿರುವ ಅನೇಕಾನೇಕ ಪ್ರವಾದನೆಗಳಾದ ‘ಪ್ರಥಮ ಸಂಗತಿಗಳು,’ ಯೆಹೋವನು ವಾಗ್ದಾನಿಸಿರುವ ಹೊಸ ವಿಷಯಗಳು, ಅಂದರೆ ಬರಲಿರುವ “ಮಹಾ ಸಂಕಟ,” ಆ ಸಂಕಟದಿಂದ ಪಾರಾಗಲಿರುವ “ಮಹಾ ಸಮೂಹ,” “ನೂತನ ಭೂಮಂಡಲ,” ಮತ್ತು ಇನ್ನೂ ಹೆಚ್ಚಿನ ವಿಷಯಗಳು ನೆರವೇರುವವು ಎಂಬುದಕ್ಕೆ ಆಶ್ವಾಸನೆಯಾಗಿವೆ. (ಪ್ರಕಟನೆ 7:​9, 14, 15; 21:​4, 5; 2 ಪೇತ್ರ 3:​13) ಇಂದು ಆ ಆಶ್ವಾಸನೆಯು ಯೋಗ್ಯ ಹೃದಯದ ಜನರು ಆತನ ಕುರಿತು ಹುರುಪಿನಿಂದ ಮಾತಾಡುವಂತೆ ಅವರನ್ನು ಪ್ರಚೋದಿಸುತ್ತದೆ. ಅವರು ಕೀರ್ತನೆಗಾರನ ಈ ಅನಿಸಿಕೆಗಳಲ್ಲಿ ಭಾಗಿಗಳಾಗುತ್ತಾರೆ: “ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು ಧಾರಾಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ.”​—⁠ಕೀರ್ತನೆ 40:⁠9.

ಯೆಹೋವನು ಸ್ವನಿಯಂತ್ರಣವನ್ನು ತೋರಿಸುತ್ತಾನೆ

9. ಇಸ್ರಾಯೇಲ್‌ ಜನಾಂಗವು ಹೇಗೆ “ಆಗರ್ಭದ್ರೋಹಿ”ಯಾಗಿತ್ತು?

9 ಯೆಹೋವನ ಪ್ರವಾದನೆಗಳನ್ನು ಯೆಹೂದ್ಯರು ನಂಬದೇ ಇರುವ ಮೂಲಕ ತೋರಿಸಿದ ಪ್ರತಿವರ್ತನೆಯು, ಅವರು ಆತನ ಎಚ್ಚರಿಕೆಗಳಿಗೆ ಕಿವಿಗೊಡುವುದರಿಂದ ಅವರನ್ನು ತಡೆಯಿತು. ಆ ಕಾರಣದಿಂದಲೇ ಆತನು ಅವರಿಗೆ ಹೇಳುವುದು: “ನೀನು ಕೇಳಿಲ್ಲ, ತಿಳಿದೂ ಇಲ್ಲ, ಪುರಾತನಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ನೀನು ದೊಡ್ಡ ವಂಚಕನು, ಆಗರ್ಭದ್ರೋಹಿ ಎನಿಸಿಕೊಂಡವನು ಎಂದು ನಾನು ತಿಳಿದುಕೊಂಡಿದ್ದೆನಷ್ಟೆ.” (ಯೆಶಾಯ 48:⁠8) ಯೆಹೂದವು ಯೆಹೋವನ ಶುಭವಾರ್ತೆಗೆ ಕಿವಿಗೊಡಲು ನಿರಾಕರಿಸಿತು. (ಯೆಶಾಯ 29:10) ದೇವರ ಒಡಂಬಡಿಕೆಯ ಜನರ ವರ್ತನಾ ರೀತಿಯು, ಆ ಜನಾಂಗವು “ಆಗರ್ಭದ್ರೋಹಿ”ಯಾಗಿತ್ತೆಂಬುದನ್ನು ತೋರಿಸುತ್ತದೆ. ಇಸ್ರಾಯೇಲ್‌ ಜನಾಂಗದ ಹುಟ್ಟಿನಿಂದ ಹಿಡಿದು ಅದರ ಇಡೀ ಇತಿಹಾಸವನ್ನು ನೋಡುವುದಾದರೆ, ಆದು ದ್ರೋಹದ ದಾಖಲೆಯನ್ನಿಟ್ಟಿದೆ. ನಿಯಮೋಲ್ಲಂಘನೆ ಮತ್ತು ದ್ರೋಹಗಳು ಆ ಜನರು ರೂಢಿಗತವಾಗಿ ಮಾಡಿದ ತಪ್ಪುಗಳಾಗಿದ್ದವೇ ಹೊರತು ಎಂದೋ ಒಮ್ಮೊಮ್ಮೆ ಮಾಡಿದ ಪಾಪಗಳಾಗಿರಲಿಲ್ಲ.​—⁠ಕೀರ್ತನೆ 95:10; ಮಲಾಕಿಯ 2:⁠11.

10. ಯೆಹೋವನು ತನ್ನನ್ನು ನಿಗ್ರಹಿಸಿಕೊಳ್ಳುವುದೇಕೆ?

10 ಹಾಗಾದರೆ, ಅದಕ್ಕೆ ಯಾವುದೇ ನಿರೀಕ್ಷೆಯಿಲ್ಲವೊ? ಇದೆ. ಯೆಹೂದವು ದಂಗೆ ಮತ್ತು ದ್ರೋಹಗಳಲ್ಲಿ ತೊಡಗಿದ್ದರೂ, ಯೆಹೋವನು ಸದಾ ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ. ಆತನ ಮಹಾನ್‌ ಹೆಸರಿನ ಗೌರವಾರ್ಥವಾಗಿ, ಆತನು ತನ್ನ ರೌದ್ರದ ಸುರಿಮಳೆಯನ್ನು ನಿಯಂತ್ರಿಸುತ್ತಾನೆ. ಆತನು ಹೇಳುವುದು: “ನನ್ನ ಹೆಸರು ಕೆಡದಂತೆ ನಿನ್ನ ಮೇಲಣ ಕೋಪವನ್ನು ತಡೆದು ನನ್ನ ಕೀರ್ತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.” (ಯೆಶಾಯ 48:9) ಎಷ್ಟೊಂದು ವ್ಯತ್ಯಾಸ! ಯೆಹೋವನ ಜನರಾಗಿದ್ದ ಇಸ್ರಾಯೇಲ್‌ ಮತ್ತು ಯೆಹೂದದವರು ಆತನಿಗೆ ಅಪನಂಬಿಗಸ್ತರಾಗಿದ್ದರು. ಆದರೆ ಯೆಹೋವನು ತನ್ನ ನಾಮಕ್ಕೆ ಸ್ತುತಿ ಮತ್ತು ಗೌರವವು ತರಲ್ಪಡುವಂಥ ರೀತಿಯಲ್ಲಿ ವರ್ತಿಸಿ, ಅದನ್ನು ಪವಿತ್ರೀಕರಿಸುತ್ತಾನೆ. ಈ ಕಾರಣಕ್ಕಾಗಿ, ಆತನು ತನ್ನ ಚುನಾಯಿತ ಜನರನ್ನು ತನ್ನಿಂದ ಬೇರ್ಪಡಿಸನು.​—⁠ಯೋವೇಲ 2:​13, 14.

11. ತನ್ನ ಜನರು ಪೂರ್ತಿ ನಾಶವಾಗುವಂತೆ ದೇವರು ಏಕೆ ಬಿಡನು?

11 ದೇಶಭ್ರಷ್ಟ ಯೆಹೂದ್ಯರ ಮಧ್ಯೆ ಇದ್ದ ಯೋಗ್ಯ ಹೃದಯದ ಜನರು, ದೇವರ ಖಂಡನೆಯ ಕಾರಣ ಎಚ್ಚೆತ್ತುಕೊಂಡು, ಆತನ ಬೋಧನೆಗಳಿಗೆ ಕಿವಿಗೊಡಲು ದೃಢನಿಶ್ಚಯ ಮಾಡಿಕೊಳ್ಳುತ್ತಾರೆ. ಇಂಥವರಿಗೆ ಈ ಕೆಳಗಿನ ಪ್ರಕಟನೆ ಅತಿ ಪುನರಾಶ್ವಾಸನೀಯವಾಗಿರುತ್ತದೆ: “ನೋಡು, ನಿನ್ನನ್ನು ಶೋಧಿಸಿದ್ದೇನೆ, ಆದರೆ ಬೆಳ್ಳಿಯಷ್ಟು ಶೋಧಿಸಲಿಲ್ಲ; ಸಂಕಟವೆಂಬ ಪುಟಕ್ಕೆ ಹಾಕಿ ನಿನ್ನನ್ನು ಪರೀಕ್ಷಿಸಿದ್ದೇನೆ. ನನಗಾಗಿ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಕೆಡಬಾರದಷ್ಟೆ; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.” (ಯೆಶಾಯ 48:10, 11) ಯೆಹೋವನು ತನ್ನ ಜನರ ಮೇಲೆ ಬರುವಂತೆ ಬಿಟ್ಟಿರುವ “ಸಂಕಟವೆಂಬ ಪುಟ”ದ ಉಗ್ರ ಪರೀಕ್ಷೆಗಳು, ಅವರ ಹೃದಯಗಳಲ್ಲಿ ಏನಿದೆಯೆಂಬುದನ್ನು ತೋರಿಸಿಕೊಡುವಂತೆ ಅವರನ್ನು ಪರೀಕ್ಷಿಸಿ, ಶೋಧಿಸಿವೆ. ಇದು ಕೆಲವು ಶತಮಾನಗಳ ಹಿಂದೆಯೂ ನಡೆದಿತ್ತು. ಆಗ ಮೋಶೆಯು ಈ ಜನರ ಪೂರ್ವಿಕರಿಗೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.” (ಧರ್ಮೋಪದೇಶಕಾಂಡ 8:⁠2) ಅವರು ದಂಗೆಕೋರ ಮನೋಭಾವವನ್ನು ತೋರಿಸಿದರೂ, ಆ ಸಮಯದಲ್ಲಿ ಯೆಹೋವನು ಆ ಜನಾಂಗವನ್ನು ನಾಶಮಾಡಲಿಲ್ಲ. ಹಾಗೆಯೇ ಈಗಲೂ ಆತನು ಅವರನ್ನು ಪೂರ್ತಿ ನಾಶಮಾಡುವುದಿಲ್ಲ. ಹೀಗೆ ಆತನ ನಾಮವೂ ಗೌರವವೂ ಸಮರ್ಥಿಸಲ್ಪಡುವುದು. ಆತನ ಜನರು ಬಾಬೆಲಿನವರಿಂದ ನಾಶಗೊಳ್ಳುವಲ್ಲಿ, ಆತನು ತನ್ನ ಒಡಂಬಡಿಕೆಗೆ ನಂಬಿಗಸ್ತನಾಗಿರುವುದಿಲ್ಲ ಮತ್ತು ಆತನ ನಾಮವು ಕಳಂಕಿತವಾಗುವುದು. ಇದಲ್ಲದೆ, ಇಸ್ರಾಯೇಲ್ಯರ ದೇವರು ತನ್ನ ಜನಾಂಗವನ್ನು ರಕ್ಷಿಸಲು ಅಸಮರ್ಥನೋ ಎಂಬಂತೆ ತೋರಿಬರುವುದು.​—⁠ಯೆಹೆಜ್ಕೇಲ 20:⁠9.

12. ಸತ್ಯ ಕ್ರೈಸ್ತರು ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಹೇಗೆ ಶೋಧಿಸಲ್ಪಟ್ಟರು?

12 ಯೆಹೋವನ ಜನರು ಶೋಧಿಸಲ್ಪಡುವ ಅಗತ್ಯವು ಆಧುನಿಕ ಸಮಯಗಳಲ್ಲಿಯೂ ಇತ್ತು. 20ನೆಯ ಶತಮಾನದ ಆರಂಭದ ದಿನಗಳಲ್ಲಿ, ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಗುಂಪಿನಲ್ಲಿದ್ದ ಅನೇಕರು, ದೇವರನ್ನು ಮೆಚ್ಚಿಸುವ ಯಥಾರ್ಥವಾದ ಬಯಕೆಯಿಂದ ಆತನನ್ನು ಸೇವಿಸಿದರೂ, ಕೆಲವರು ಪ್ರಮುಖರಾಗಬೇಕೆಂಬಂಥ ಕೆಟ್ಟ ಉದ್ದೇಶಗಳಿಂದ ಆತನನ್ನು ಸೇವಿಸಿದರು. ಆದುದರಿಂದ ಆ ಚಿಕ್ಕ ಗುಂಪು, ಅಂತ್ಯಕಾಲಕ್ಕಾಗಿ ಮುಂತಿಳಿಸಲ್ಪಟ್ಟ ಲೋಕವ್ಯಾಪಕ ಸುವಾರ್ತಾ ಸಾರುವಿಕೆಯ ಸಂಬಂಧದಲ್ಲಿ ನಾಯಕತ್ವವನ್ನು ವಹಿಸುವ ಮೊದಲು, ಅದನ್ನು ಶುದ್ಧೀಕರಿಸುವ ಅಗತ್ಯವಿತ್ತು. (ಮತ್ತಾಯ 24:14) ಯೆಹೋವನು ತನ್ನ ಆಲಯಕ್ಕೆ ಬರುವ ಸಂಬಂಧದಲ್ಲಿ ಇಂತಹ ಶೋಧಿಸುವ ಕೆಲಸವೊಂದು ನಡೆಯುವುದೆಂದು ಪ್ರವಾದಿಯಾದ ಮಲಾಕಿಯನು ಪ್ರವಾದಿಸಿದ್ದನು. (ಮಲಾಕಿಯ 3:​1-4) ಅವನ ಮಾತುಗಳು 1918ರಲ್ಲಿ ನೆರವೇರಿದವು. ಒಂದನೆಯ ಲೋಕ ಯುದ್ಧದ ಆವೇಶದ ಸಮಯದಲ್ಲಿ ಸತ್ಯ ಕ್ರೈಸ್ತರು ಅಗ್ನಿಪರೀಕ್ಷೆಯ ಸಮಯವೊಂದನ್ನು ದಾಟಿದರು. ಆ ಪರೀಕ್ಷೆಯು, ವಾಚ್‌ ಟವರ್‌ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೋಸೆಫ್‌ ಎಫ್‌. ರದರ್‌ಫರ್ಡ್‌ ಮತ್ತು ಅದರ ಕೆಲವು ಪ್ರಮುಖ ಅಧಿಕಾರಿಗಳ ಬಂಧನಕ್ಕೆ ನಡೆಸಿತು. ಆ ಯಥಾರ್ಥ ಕ್ರೈಸ್ತರು ಆ ಶುದ್ಧೀಕರಣ ವಿಧಾನದಿಂದ ಪ್ರಯೋಜನ ಪಡೆದರು. ಒಂದನೆಯ ಲೋಕ ಯುದ್ಧ ಮುಗಿದ ಬಳಿಕ, ಅವರು ತಮ್ಮ ಮಹಾನ್‌ ದೇವರನ್ನು ಆತನು ಸೂಚಿಸುವ ವಿಧದಲ್ಲಿ ಸೇವಿಸಲು ಹೆಚ್ಚು ದೃಢನಿಶ್ಚಿತರಾಗಿದ್ದರು.

13. ಒಂದನೆಯ ಲೋಕ ಯುದ್ಧದ ಅನಂತರದ ವರುಷಗಳಲ್ಲಿ ಯೆಹೋವನ ಸಾಕ್ಷಿಗಳು ಹಿಂಸೆಗೆ ಹೇಗೆ ಪ್ರತಿವರ್ತನೆ ತೋರಿಸಿದ್ದಾರೆ?

13 ಆ ದಿನಗಳಿಂದ ಹಿಡಿದು, ಯೆಹೋವನ ಸಾಕ್ಷಿಗಳು ಪದೇ ಪದೇ ಹಿಂಸೆಯನ್ನು ಅತಿ ಕ್ರೂರವಾದ ರೂಪಗಳಲ್ಲಿ ಎದುರಿಸಿದ್ದಾರೆ. ಆದರೆ ತಮ್ಮ ಸೃಷ್ಟಿಕರ್ತನ ಮಾತನ್ನು ಅವರು ಸಂಶಯಿಸುವಂತೆ ಇದು ಮಾಡಿಲ್ಲ. ಬದಲಿಗೆ, ಅಪೊಸ್ತಲ ಪೇತ್ರನು ತನ್ನ ದಿನಗಳಲ್ಲಿ ಹಿಂಸಿಸಲ್ಪಡುತ್ತಿದ್ದ ಕ್ರೈಸ್ತರಿಗೆ ಬರೆದ ಮಾತುಗಳನ್ನು ಅವರು ಗಮನದಲ್ಲಿಟ್ಟಿದ್ದಾರೆ: “ನೀವು ಸದ್ಯಕ್ಕೆ ಸ್ವಲ್ಪಕಾಲ ದೇವರ ಚಿತ್ತಾನುಸಾರ ನಾನಾ ಕಷ್ಟಗಳಲ್ಲಿದ್ದು . . . ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.” (1 ಪೇತ್ರ 1:​6, 7) ತೀಕ್ಷ್ಣ ಹಿಂಸೆಯು ಸತ್ಯ ಕ್ರೈಸ್ತರ ಸಮಗ್ರತೆಯನ್ನು ನಾಶಮಾಡುವುದಿಲ್ಲ. ಇದಕ್ಕೆ ಬದಲಾಗಿ, ಅದು ಅವರ ಉದ್ದೇಶಗಳು ಎಷ್ಟು ಯಥಾರ್ಥವಾಗಿವೆ ಎಂಬುದನ್ನು ಪ್ರಕಟಪಡಿಸುತ್ತದೆ. ಅದು ಅವರ ನಂಬಿಕೆಗೆ ಶೋಧಿತ ಗುಣವನ್ನು ಕೂಡಿಸಿ, ಅವರ ಭಕ್ತಿ ಮತ್ತು ಪ್ರೀತಿಯ ಅಗಾಧತೆಯನ್ನು ತೋರಿಸುತ್ತದೆ.​—⁠ಜ್ಞಾನೋಕ್ತಿ 17:⁠3.

“ನಾನೇ ಆದಿ, ಅಂತವೂ ನಾನೇ”

14. (ಎ) ಯೆಹೋವನು ‘ಆದಿಯೂ ಅಂತವೂ’ ಆಗಿರುವುದು ಯಾವ ವಿಧದಲ್ಲಿ? (ಬಿ) ತನ್ನ “ಕೈ”ಯ ಮೂಲಕ ಯೆಹೋವನು ಯಾವ ಬಲಿಷ್ಠ ಕೆಲಸಗಳನ್ನು ಸಾಧಿಸಿದ್ದಾನೆ?

14 ಈಗ ಯೆಹೋವನು ತನ್ನ ಒಡಂಬಡಿಕೆಯ ಜನರನ್ನು ಉದ್ದೇಶಿಸಿ ಆದರದಿಂದ ಹೀಗೆ ಕೇಳಿಕೊಳ್ಳುತ್ತಾನೆ: “ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ನಾನೇ ಪರಮಾತ್ಮನು; ನಾನೇ ಆದಿ, ಅಂತವೂ ನಾನೇ. ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಕರೆದ ಕೂಡಲೆ ಅವೆರಡೂ ಸಿದ್ಧವಾಗಿ ನಿಲ್ಲುವವು.” (ಯೆಶಾಯ 48:12, 13) ಮನುಷ್ಯನು ಶಾಶ್ವತನಲ್ಲ, ಆದರೆ ದೇವರು ಶಾಶ್ವತನೂ, ಎಂದೂ ಬದಲಾಗದಿರುವವನೂ ಆಗಿದ್ದಾನೆ. (ಮಲಾಕಿಯ 3:⁠6) ಪ್ರಕಟನೆ ಪುಸ್ತಕದಲ್ಲಿ ಯೆಹೋವನು ಹೇಳುವುದು: “ನಾನೇ ಆದಿಯೂ ಅಂತವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.” (ಪ್ರಕಟನೆ 22:13) ಯೆಹೋವನಿಗಿಂತ ಮುಂಚೆ ಯಾವ ಸರ್ವಶಕ್ತ ದೇವರೂ ಇರಲಿಲ್ಲ, ಆತನ ಬಳಿಕವೂ ಇರುವುದಿಲ್ಲ. ಆತನು ಪರಮಶ್ರೇಷ್ಠನು, ನಿತ್ಯನು, ಸೃಷ್ಟಿಕರ್ತನು. ಆತನ “ಕೈ,” ಅಂದರೆ ಪ್ರಯೋಗಿಸಲ್ಪಟ್ಟ ಶಕ್ತಿಯು ಭೂಮಿಯನ್ನು ಸ್ಥಾಪಿಸಿ ನಕ್ಷತ್ರಮಯ ಆಕಾಶವನ್ನು ಹರಡಿಸಿತು. (ಯೋಬ 38:4; ಕೀರ್ತನೆ 102:25) ಆತನು ತನ್ನ ಸೃಷ್ಟಿಕ್ರಿಯೆಗಳನ್ನು ಕರೆಯುವಾಗ, ಅವು ಆತನನ್ನು ಸೇವಿಸಲು ಸಿದ್ಧವಾಗಿ ನಿಲ್ಲುತ್ತವೆ.​—⁠ಕೀರ್ತನೆ 147:⁠4.

15. ಕೋರೆಷನು ಯೆಹೋವನ “ಪ್ರೀತಿಪಾತ್ರ”ನಾದದ್ದು ಯಾವ ವಿಧದಲ್ಲಿ ಮತ್ತು ಯಾವ ಉದ್ದೇಶದಿಂದ?

15 ಯೆಹೂದ್ಯರಿಗೂ ಯೆಹೂದ್ಯೇತರರಿಗೂ ಒಂದು ಮುಖ್ಯ ಆಮಂತ್ರಣವನ್ನು ಕೊಡಲಾಗುತ್ತದೆ: “ನೀವೆಲ್ಲರು ಕೂಡಿಕೊಂಡು ಕೇಳಿರಿ! ಇವರಲ್ಲಿನ ಯಾವ ದೇವರು ಈ ಸಂಗತಿಗಳನ್ನು ಅರುಹಿದ್ದಾನೆ? ಯೆಹೋವನ ಪ್ರೀತಿಪಾತ್ರನು ಬಾಬೆಲಿನಲ್ಲಿ ಆತನ ಇಷ್ಟವನ್ನು ನೆರವೇರಿಸುವನು, ಕಸ್ದೀಯರ ಮೇಲೆ ಕೈಮಾಡುವನು. ನಾನೇ, ನಾನೇ ಬಾಯಿಬಿಟ್ಟು ಅವನನ್ನು ಕರೆದು ಬರಮಾಡಿದ್ದೇನೆ; ಅವನ ಮಾರ್ಗವು ಸಾರ್ಥಕವಾಗುವದು.” (ಯೆಶಾಯ 48:14, 15) ಯೆಹೋವನೊಬ್ಬನೇ ಸರ್ವಶಕ್ತನಾಗಿದ್ದು, ಘಟನೆಗಳನ್ನು ಚಾಚೂತಪ್ಪದೆ ಮುಂತಿಳಿಸಬಲ್ಲಾತನಾಗಿದ್ದಾನೆ. “ಇವರಲ್ಲಿ” ಅಂದರೆ ಕೆಲಸಕ್ಕೆ ಬಾರದ ವಿಗ್ರಹಗಳಲ್ಲಿ ಯಾವನೂ ಹೀಗೆ ಮುಂತಿಳಿಸಲು ಶಕ್ತನಾಗಿಲ್ಲ. ಕೋರೆಷನನ್ನು “ಪ್ರೀತಿಪಾತ್ರ”ನನ್ನಾಗಿ ಮಾಡಿದವನು, ಅಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಚುನಾಯಿಸಿದವನು ಯೆಹೋವನೇ, ಆ ವಿಗ್ರಹಗಳಲ್ಲ. (ಯೆಶಾಯ 41:2; 44:28; 45:​1, 13; 46:11) ಆತನು ಲೋಕರಂಗದಲ್ಲಿ ಕೋರೆಷನ ಬರುವಿಕೆಯನ್ನು ಮುನ್ನೋಡಿ, ಅವನನ್ನು ಬಾಬೆಲಿನ ಭಾವೀ ವಿಜೇತನಾಗಿ ಪ್ರತ್ಯೇಕಿಸಿದ್ದಾನೆ.

16, 17. (ಎ) ದೇವರು ತನ್ನ ಭವಿಷ್ಯನುಡಿಗಳನ್ನು ಗುಟ್ಟಾಗಿ ಕೊಡಲಿಲ್ಲವೆಂದು ಏಕೆ ಹೇಳಸಾಧ್ಯವಿದೆ? (ಬಿ) ಯೆಹೋವನು ತನ್ನ ಉದ್ದೇಶಗಳನ್ನು ಇಂದು ಹೇಗೆ ಪ್ರಚುರಪಡಿಸಿದ್ದಾನೆ?

16 ಯೆಹೋವನು ಆಮಂತ್ರಣದಾಯಕ ಸ್ವರದಿಂದ ಮುಂದುವರಿಸುವುದು: “ನನ್ನ ಬಳಿಗೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, [ಭೂಮಿಯು] ಉಂಟಾದಂದಿನಿಂದ ಅಲ್ಲಿ ಇದ್ದೇನೆ.” (ಯೆಶಾಯ 48:16ಎ) ಯೆಹೋವನಿಂದ ಕೊಡಲಾಗಿರುವ ಭವಿಷ್ಯನುಡಿಗಳು ಗುಟ್ಟಾಗಿ ಕೊಡಲ್ಪಡಲಿಲ್ಲ ಇಲ್ಲವೆ ಕೆಲವೇ ಜನರಿಗೆ ತಿಳಿಸಲ್ಪಟ್ಟಿಲ್ಲ. ಯೆಹೋವನ ಪ್ರವಾದಿಗಳು ದೇವರ ಪರವಾಗಿ ಮುಚ್ಚುಮರೆಯಿಲ್ಲದೆ ಮಾತಾಡುವವರಾಗಿದ್ದರು. (ಯೆಶಾಯ 61:⁠1) ಅವರು ದೇವರ ಚಿತ್ತವನ್ನು ಬಹಿರಂಗವಾಗಿ ಘೋಷಿಸಿದರು. ಉದಾಹರಣೆಗೆ, ಕೋರೆಷನಿಗೆ ಸಂಬಂಧಪಟ್ಟ ಘಟನೆಗಳು ದೇವರಿಗೆ ಹೊಸ ಸಂಗತಿಗಳಾಗಿರಲೂ ಅಲ್ಲ, ಅನಿರೀಕ್ಷಿತವೂ ಆಗಿರಲಿಲ್ಲ. ಸುಮಾರು 200 ವರುಷಗಳಿಗೆ ಮುಂಚಿತವಾಗಿ ದೇವರು ಅವುಗಳನ್ನು ಯೆಶಾಯನ ಮುಖಾಂತರ ಬಹಿರಂಗವಾಗಿ ಮುಂತಿಳಿಸಿದನು.

17 ಅದೇ ರೀತಿ, ಇಂದು ಸಹ ತನ್ನ ಉದ್ದೇಶಗಳನ್ನು ಯೆಹೋವನು ಗುಟ್ಟಾಗಿಡುವುದಿಲ್ಲ. ನೂರಾರು ದೇಶಗಳಲ್ಲಿ ಮತ್ತು ದ್ವೀಪಗಳಲ್ಲಿರುವ ಲಕ್ಷಾಂತರ ಜನರು, ಮನೆಯಿಂದ ಮನೆಗೆ, ಬೀದಿಗಳಲ್ಲಿ, ಮತ್ತು ತಮಗೆ ಸಾಧ್ಯವಿರುವಲ್ಲೆಲ್ಲ ಈ ವಿಷಯಗಳ ವ್ಯವಸ್ಥೆಯ ಮೇಲೆ ಬರಲಿರುವ ಅಂತ್ಯದ ವಿಷಯವಾದ ಎಚ್ಚರಿಕೆಯನ್ನು ಘೋಷಿಸಿ, ದೇವರ ರಾಜ್ಯದ ಕೆಳಗೆ ಬರಲಿರುವ ಆಶೀರ್ವಾದಗಳ ಕುರಿತಾದ ಸುವಾರ್ತೆಯನ್ನು ಸಾರುತ್ತಾರೆ. ಯೆಹೋವನು ತನ್ನ ಉದ್ದೇಶಗಳನ್ನು ತಿಳಿಯಪಡಿಸುವ ದೇವರೆಂಬುದು ಸತ್ಯ.

“ನನ್ನ ಆಜ್ಞೆಗಳನ್ನು” ಕೇಳು

18. ತನ್ನ ಜನರ ವಿಷಯದಲ್ಲಿ ಯೆಹೋವನ ಬಯಕೆಯೇನು?

18 ಯೆಹೋವನ ಆತ್ಮದಿಂದ ಶಕ್ತಿಹೊಂದಿದವನಾಗಿ, ಪ್ರವಾದಿಯು ಹೀಗೆ ಹೇಳುತ್ತಾನೆ: (ಈಗ ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ.) ನಿನ್ನ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾಮಿಯೂ ಆದ ಯೆಹೋವನು ಹೀಗನ್ನುತ್ತಾನೆ​—⁠ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” (ಯೆಶಾಯ 48:16ಬಿ, 17) ಯೆಹೋವನ ಪರಾಮರಿಕೆಯ ಕುರಿತಾದ ಈ ಪ್ರೀತಿಪೂರ್ವಕವಾದ ಹೇಳಿಕೆಯು, ದೇವರು ಇಸ್ರಾಯೇಲ್‌ ಜನಾಂಗವನ್ನು ಬಾಬೆಲಿನಿಂದ ವಿಮೋಚಿಸುವನೆಂಬ ಪುನರಾಶ್ವಾಸನೆಯನ್ನು ಕೊಡಬೇಕಾಗಿತ್ತು. ಆತನು ಅವರ ವಿಮೋಚಕನಾಗಿದ್ದಾನೆ. (ಯೆಶಾಯ 54:⁠5) ಇಸ್ರಾಯೇಲ್ಯರು ತನ್ನೊಂದಿಗೆ ಪುನಃ ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂಬುದೂ ತನ್ನ ಆಜ್ಞೆಗಳಿಗೆ ಗಮನಕೊಡಬೇಕೆಂಬುದೂ ಯೆಹೋವನ ಹೃತ್ಪೂರ್ವಕವಾದ ಬಯಕೆಯಾಗಿತ್ತು. ಸತ್ಯಾರಾಧನೆಯು ದೈವಿಕ ಸೂಚನೆಗಳಿಗೆ ವಿಧೇಯತೆಯನ್ನು ತೋರಿಸುವುದರ ಮೇಲೆ ಆಧಾರಿತವಾಗಿದೆ. “ನಡೆಯಬೇಕಾದ ದಾರಿಯಲ್ಲಿ” ಹೋಗಲು ಕಲಿಸಿದ ಹೊರತು ಇಸ್ರಾಯೇಲ್ಯರು ಸರಿಯಾದ ದಾರಿಯಲ್ಲಿ ನಡೆಯಲು ಅಶಕ್ತರಾಗಿದ್ದಾರೆ.

19. ಯೆಹೋವನು ಹೃತ್ಪೂರ್ವಕವಾದ ಯಾವ ಬಿನ್ನಹವನ್ನು ಮಾಡುತ್ತಾನೆ?

19 ತನ್ನ ಜನರು ವಿಪತ್ತನ್ನು ತಪ್ಪಿಸಿಕೊಂಡು, ಜೀವನದಲ್ಲಿ ಆನಂದಿಸಬೇಕೆಂಬ ಯೆಹೋವನ ಬಯಕೆಯು ಇಲ್ಲಿ ಸೊಗಸಾಗಿ ವ್ಯಕ್ತಪಡಿಸಲ್ಪಟ್ಟಿದೆ: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:18) ಸರ್ವಶಕ್ತನಾದ ಸೃಷ್ಟಿಕರ್ತನಿಂದ ಎಂತಹ ಹೃತ್ಪೂರ್ವಕ ಬಿನ್ನಹವಿದು! (ಧರ್ಮೋಪದೇಶಕಾಂಡ 5:29; ಕೀರ್ತನೆ 81:13) ದೇಶಭ್ರಷ್ಟರಾಗಿ ಹೋಗುವ ಬದಲಾಗಿ ಇಸ್ರಾಯೇಲ್ಯರು ಶಾಂತಿಯನ್ನು, ಅಂದರೆ ಹರಿಯುತ್ತಿರುವ ನದೀ ನೀರಿನಷ್ಟು ಪುಷ್ಕಳವಾದ ಶಾಂತಿಯನ್ನು ಅನುಭವಿಸಸಾಧ್ಯವಿತ್ತು. (ಕೀರ್ತನೆ 119:165) ಅವರ ನೀತಿಯ ಕೃತ್ಯಗಳು ಸಮುದ್ರದ ಅಲೆಗಳಷ್ಟು ಅಸಂಖ್ಯಾತವಾಗಿರುವವು. (ಆಮೋಸ 5:24) ಇಸ್ರಾಯೇಲ್ಯರಲ್ಲಿ ನಿಜವಾಗಿಯೂ ಆಸಕ್ತಿಯುಳ್ಳವನಾಗಿರುವ ಯೆಹೋವನು, ಅವರು ನಡೆಯಬೇಕಾದ ದಾರಿಯನ್ನು ಪ್ರೀತಿಯಿಂದ ತೋರಿಸುತ್ತ, ಅವರಿಗೆ ಮನವಿ ಮಾಡುತ್ತಾನೆ. ಅವರು ಸ್ವಲ್ಪವಾದರೂ ಕಿವಿಗೊಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

20. (ಎ) ಇಸ್ರಾಯೇಲಿನ ದಂಗೆಯ ಹೊರತಾಗಿಯೂ ಅವರ ಸಂಬಂಧದಲ್ಲಿ ದೇವರ ಬಯಕೆಯೇನು? (ಬಿ) ತನ್ನ ಜನರೊಂದಿಗೆ ಯೆಹೋವನು ವರ್ತಿಸಿದ ರೀತಿಯಿಂದ ನಾವು ಆತನ ಕುರಿತು ಏನು ಕಲಿಯುತ್ತೇವೆ? (133ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿ.)

20 ಆ ಇಸ್ರಾಯೇಲ್‌ ಜನಾಂಗವು ಪಶ್ಚಾತ್ತಾಪಪಡುವಲ್ಲಿ ಯಾವ ಆಶೀರ್ವಾದಗಳು ದೊರಕಲಿವೆ? ಯೆಹೋವನು ಹೇಳುವುದು: “ನಿನ್ನ ಸಂತತಿಯವರು ಮರಳಿನೋಪಾದಿಯಲ್ಲಿಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟಿದವರು ಉಸುಬಿನ ಅಣುರೇಣುಗಳ ಪ್ರಕಾರವೂ ಅಸಂಖ್ಯಾತರಾಗುತ್ತಿದ್ದರು; ಅವರ ಹೆಸರು ನನ್ನ ಮುಂದೆ ನಿರ್ಮೂಲವಾಗಿ ಹಾಳಾಗುತ್ತಿರಲಿಲ್ಲ.” (ಯೆಶಾಯ 48:19) ಯೆಹೋವನು ತನ್ನ ಜನರಿಗೆ, ತಾನು ಅಬ್ರಹಾಮನ ಸಂತಾನವನ್ನು “ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ” ಅನೇಕರನ್ನಾಗಿ ಮಾಡುವೆನೆಂಬ ವಾಗ್ದಾನದ ಕುರಿತು ಜ್ಞಾಪಕ ಹುಟ್ಟಿಸುತ್ತಾನೆ. (ಆದಿಕಾಂಡ 22:17; 32:12) ಆದರೆ ಅಬ್ರಹಾಮನ ಸಂತಾನದವರಾದ ಇವರು ದಂಗೆಕೋರರಾಗಿರುವುದರಿಂದ, ಆ ವಾಗ್ದಾನದ ನೆರವೇರಿಕೆಯನ್ನು ಪಡೆಯುವ ಹಕ್ಕು ಅವರಿಗಿರುವುದಿಲ್ಲ. ಅವರ ನಡತೆಯ ದಾಖಲೆ ಎಷ್ಟು ಕೆಟ್ಟದ್ದಾಗಿದೆಯೆಂದರೆ, ಯೆಹೋವನ ಸ್ವಂತ ಧರ್ಮಶಾಸ್ತ್ರಕ್ಕನುಸಾರ ಒಂದು ಜನಾಂಗದೋಪಾದಿ ಅವರ ಹೆಸರು ರದ್ದಾಗಬೇಕು. (ಧರ್ಮೋಪದೇಶಕಾಂಡ 28:45) ಹೀಗಿದ್ದರೂ, ಯೆಹೋವನು ತನ್ನ ಜನರ ನಾಶನವನ್ನು ಅಪೇಕ್ಷಿಸುವುದಿಲ್ಲ ಮತ್ತು ಸಂಪೂರ್ಣವಾಗಿ ಅವರ ಕೈಬಿಡಲು ಬಯಸುವುದಿಲ್ಲ.

21. ಯೆಹೋವನ ಶಿಕ್ಷಣವನ್ನು ಅನುಸರಿಸುವಲ್ಲಿ ನಾವು ಇಂದು ಯಾವ ಆಶೀರ್ವಾದಗಳನ್ನು ಪಡೆಯುತ್ತೇವೆ?

21 ಈ ಪ್ರಬಲವಾದ ಭಾಗದಲ್ಲಿ ಅಡಗಿರುವ ಮೂಲತತ್ತ್ವಗಳು ಇಂದು ಯೆಹೋವನ ಆರಾಧಕರಿಗೆ ಅನ್ವಯಿಸುತ್ತವೆ. ಯೆಹೋವನು ಜೀವದ ಮೂಲನಾಗಿರುವುದರಿಂದ, ನಾವು ನಮ್ಮ ಜೀವಗಳನ್ನು ಹೇಗೆ ಉಪಯೋಗಿಸಬೇಕೆಂದು ಇನ್ನಾವನಿಗಿಂತಲೂ ಆತನಿಗೇ ಹೆಚ್ಚು ಉತ್ತಮವಾಗಿ ತಿಳಿದಿದೆ. (ಕೀರ್ತನೆ 36:⁠9) ಇದರ ವಿಷಯದಲ್ಲಿ ಆತನು ನಮಗೆ ಮಾರ್ಗದರ್ಶನವನ್ನು ಕೊಟ್ಟಿದ್ದಾನೆ. ಆತನು ಅದನ್ನು ಜೀವನದ ಸಂತೋಷಗಳನ್ನು ನಮ್ಮಿಂದ ಕಸಿದುಕೊಳ್ಳಲಿಕ್ಕಾಗಿ ಅಲ್ಲ, ಬದಲಾಗಿ ನಮ್ಮ ಪ್ರಯೋಜನಕ್ಕಾಗಿಯೇ ಕೊಟ್ಟಿದ್ದಾನೆ. ನಿಜ ಕ್ರೈಸ್ತರು ಯೆಹೋವನಿಂದ ಶಿಕ್ಷಣವನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಮೂಲಕ ಇದಕ್ಕೆ ಪ್ರತಿವರ್ತನೆ ತೋರಿಸುತ್ತಾರೆ. (ಮೀಕ 4:⁠2) ಆತನ ಮಾರ್ಗದರ್ಶಕ ಸೂಚನೆಗಳು ನಮ್ಮ ಆತ್ಮಿಕತೆಯನ್ನೂ ನಮಗೆ ಆತನೊಂದಿಗಿರುವ ಸಂಬಂಧವನ್ನೂ ಕಾಪಾಡಿ, ಸೈತಾನನ ಭ್ರಷ್ಟಗೊಳಿಸುವ ಪ್ರಭಾವದಿಂದ ನಮ್ಮನ್ನು ರಕ್ಷಿಸುತ್ತವೆ. ದೇವರ ನಿಯಮಗಳ ಹಿಂದಿರುವ ಮೂಲತತ್ತ್ವಗಳನ್ನು ನಾವು ಗಣ್ಯಮಾಡುವಾಗ, ಯೆಹೋವನು ನಮ್ಮ ಹಿತಕ್ಕಾಗಿ ನಮಗೆ ಕಲಿಸುತ್ತಾನೆ ಎಂಬುದನ್ನು ನಾವು ಮನಗಾಣುತ್ತೇವೆ. “ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ. ಮತ್ತು ನಾವು ಜೀವನಷ್ಟಪಡೆವು.​—⁠1 ಯೋಹಾನ 2:17; 5:⁠3.

“ಬಾಬೆಲಿನಿಂದ ಹೊರಡಿರಿ”

22. ನಂಬಿಗಸ್ತ ಯೆಹೂದ್ಯರು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ, ಮತ್ತು ಅವರಿಗೆ ಯಾವ ಆಶ್ವಾಸನೆಗಳು ಕೊಡಲ್ಪಟ್ಟಿವೆ?

22 ಬಾಬೆಲು ಪತನಗೊಳ್ಳುವಾಗ ಯೆಹೂದ್ಯರಲ್ಲಿ ಯಾರಾದರೂ ಯೋಗ್ಯ ಮನಃಸ್ಥಿತಿಯನ್ನು ತೋರಿಸುವರೊ? ಅವರು ದೇವರ ಬಿಡುಗಡೆಯ ಪ್ರಯೋಜನವನ್ನು ಪಡೆದುಕೊಂಡು, ತಮ್ಮ ಸ್ವದೇಶಕ್ಕೆ ಹಿಂದೆರಳಿ, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವರೊ? ಹೌದು, ಏಕೆಂದರೆ ಯೆಹೋವನ ಮುಂದಿನ ಮಾತುಗಳು ಆತನಿಗೆ ಈ ಭರವಸೆಯಿದೆ ಎಂದು ತೋರಿಸುತ್ತವೆ. “ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆಯಿಂದ ಹಾರಿಹೋಗಿರಿ; ಹರ್ಷಧ್ವನಿಯಿಂದ ಇದನ್ನು ತಿಳಿಸಿರಿ, ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯ ವರೆಗೂ ಪ್ರಚಾರಪಡಿಸಿರಿ; ಯೆಹೋವನು ತನ್ನ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾನೆಂದು ಹೇಳಿರಿ. ಆತನು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು.” (ಯೆಶಾಯ 48:​20, 21) ಯೆಹೋವನ ಜನರು ತಡಮಾಡದೆ ಬಾಬೆಲಿನಿಂದ ಹೊರಟುಹೋಗಬೇಕೆಂದು ಪ್ರವಾದನಾರೂಪವಾಗಿ ಪ್ರೋತ್ಸಾಹಿಸಲ್ಪಡುತ್ತಾರೆ. (ಯೆರೆಮೀಯ 50:⁠8) ಅವರ ರಕ್ಷಣೆಯನ್ನು ಲೋಕದ ಕಟ್ಟಕಡೆಯ ವರೆಗೆ ಪ್ರಕಟಿಸಬೇಕು. (ಯೆರೆಮೀಯ 31:10) ಜನರು ಐಗುಪ್ತದಿಂದ ಹೊರಟುಹೋದ ಬಳಿಕ, ಮರುಭೂಮಿಯನ್ನು ದಾಟುವಾಗ ಯೆಹೋವನು ಅವರ ಆವಶ್ಯಕತೆಗಳನ್ನು ಪೂರೈಸಿದನು. ಹಾಗೆಯೇ ಈಗ ತನ್ನ ಜನರು ಬಾಬೆಲಿನಿಂದ ಸ್ವದೇಶಕ್ಕೆ ತೆರಳುವಾಗ ಆತನು ಅವರಿಗೆ ಬೇಕಾಗಿರುವುದನ್ನು ಒದಗಿಸುವನು.​—⁠ಧರ್ಮೋಪದೇಶಕಾಂಡ 8:​15, 16.

23. ದೇವದತ್ತ ಸಮಾಧಾನವನ್ನು ಯಾರು ಅನುಭವಿಸರು?

23 ಯೆಹೋವನ ರಕ್ಷಣಾಕಾರ್ಯಗಳ ಕುರಿತು ಯೆಹೂದ್ಯರು ಅತ್ಯಾವಶ್ಯಕವಾದ ಇನ್ನೊಂದು ಮೂಲತತ್ತ್ವವನ್ನು ಮನಸ್ಸಿನಲ್ಲಿಡತಕ್ಕದ್ದು. ತಮ್ಮ ಪಾಪಗಳ ನಿಮಿತ್ತ ನೀತಿಯ ಪ್ರವೃತ್ತಿಯುಳ್ಳವರು ಕಷ್ಟಾನುಭವಿಸಬಹುದಾದರೂ, ಅವರು ನಾಶಗೊಳಿಸಲ್ಪಡರು. ಆದರೆ ಅನೀತಿವಂತರ ವಿಷಯದಲ್ಲಿ ಇದು ಭಿನ್ನವಾಗಿರುವುದು. “ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಯೆಹೋವನು ನುಡಿಯುತ್ತಾನೆ.” (ಯೆಶಾಯ 48:22) ದೇವರನ್ನು ಪ್ರೀತಿಸುವವರಿಗಾಗಿ ಆತನು ಕಾದಿರಿಸಿರುವ ಸಮಾಧಾನವು, ಪಶ್ಚಾತ್ತಾಪಪಡದ ಪಾಪಿಗಳಿಗೆ ದೊರೆಯದು. ರಕ್ಷಣೆಯ ಕಾರ್ಯಗಳು ಮೊಂಡರಾದ ದುಷ್ಟರಿಗಾಗಿಯೂ ಅವಿಶ್ವಾಸಿಗಳಿಗಾಗಿಯೂ ಇಡಲ್ಪಟ್ಟಿರುವುದಿಲ್ಲ. ಅಂತಹ ಕಾರ್ಯಗಳು ನಂಬಿಕೆಯುಳ್ಳವರಿಗಾಗಿ ಮಾತ್ರ ಇಡಲ್ಪಟ್ಟಿವೆ. (ತೀತ 1:​15, 16; ಪ್ರಕಟನೆ 22:​14, 15) ದೇವರಿಂದ ಬರುವ ಸಮಾಧಾನವು ದುಷ್ಟರ ಸ್ವತ್ತಾಗಿರುವುದಿಲ್ಲ.

24. ಆಧುನಿಕ ದಿನಗಳಲ್ಲಿ ದೇವಜನರಿಗೆ ಯಾವುದು ಹರ್ಷವನ್ನು ನೀಡಿತು?

24 ಸಾ.ಶ.ಪೂ. 537ರಲ್ಲಿ ಬಾಬೆಲನ್ನು ಬಿಟ್ಟುಹೋಗುವ ಅವಕಾಶವು ನಂಬಿಗಸ್ತ ಇಸ್ರಾಯೇಲ್ಯರಿಗೆ ಮಹಾ ಸಂತೋಷವನ್ನು ಕೊಟ್ಟಿತು. ಬಾಬೆಲಿನ ಬಂಧನದಿಂದ ದೇವಜನರಿಗೆ 1919ರಲ್ಲಾದ ಬಿಡುಗಡೆಯು, ಅವರು ಹರ್ಷಿಸುವಂತೆ ಮಾಡಿತು. (ಪ್ರಕಟನೆ 11:​11, 12) ಅವರು ನಿರೀಕ್ಷೆಯಿಂದ ತುಂಬಿದವರಾಗಿ, ತಮ್ಮ ಚಟುವಟಿಕೆಗಳನ್ನು ವಿಸ್ತರಿಸುವರೆ ಆ ಅವಕಾಶವನ್ನು ಉಪಯೋಗಿಸಿದರು. ಕ್ರೈಸ್ತರ ಆ ಚಿಕ್ಕ ಗುಂಪು, ಈ ದ್ವೇಷಭರಿತ ಲೋಕದಲ್ಲಿ ಸಾರುವ ಹೊಸ ಸಾಧ್ಯತೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಅದಕ್ಕೆ ಧೈರ್ಯವು ಬೇಕಾಗಿತ್ತೆಂಬುದು ನಿಜ. ಆದರೆ ಯೆಹೋವನ ಸಹಾಯದಿಂದ ಅವರು ಸುವಾರ್ತೆ ಸಾರುವ ಕೆಲಸವನ್ನು ಮಾಡತೊಡಗಿದರು. ಮತ್ತು ಅವರನ್ನು ಯೆಹೋವನು ಆಶೀರ್ವದಿಸಿದನೆಂಬುದಕ್ಕೆ ಇತಿಹಾಸವು ಪುರಾವೆ ನೀಡುತ್ತದೆ.

25. ದೇವರ ನೀತಿಯ ಆಜ್ಞೆಗಳಿಗೆ ನಿಕಟವಾಗಿ ಗಮನಕೊಡುವುದು ಏಕೆ ಪ್ರಾಮುಖ್ಯವಾಗಿದೆ?

25 ಯೆಶಾಯನ ಪ್ರವಾದನೆಯ ಈ ಭಾಗವು, ಯೆಹೋವನು ನಮ್ಮ ಒಳಿತಿಗಾಗಿ ನಮಗೆ ಬೋಧಿಸುತ್ತಾನೆಂಬುದನ್ನು ಒತ್ತಿಹೇಳುತ್ತದೆ. ದೇವರ ನೀತಿಯ ಆಜ್ಞೆಗಳಿಗೆ ನಿಕಟವಾಗಿ ಗಮನಕೊಡುವುದು ಅತಿ ಪ್ರಾಮುಖ್ಯವಾಗಿದೆ. (ಪ್ರಕಟನೆ 15:​2-4) ನಾವು ದೇವರ ವಿವೇಕ ಮತ್ತು ಪ್ರೀತಿಯನ್ನು ಜ್ಞಾಪಿಸಿಕೊಳ್ಳುವಲ್ಲಿ, ಯೆಹೋವನು ಯಾವುದನ್ನು ಸರಿಯೆನ್ನುತ್ತಾನೋ ಅದಕ್ಕನುಗುಣವಾಗಿ ನಡೆಯುವಂತೆ ಅದು ನಮಗೆ ಸಹಾಯ ಮಾಡುವುದು. ಆತನ ಸಕಲ ಆಜ್ಞೆಗಳು ನಮ್ಮ ಪ್ರಯೋಜನಾರ್ಥವಾಗಿ ಇವೆ.​—⁠ಯೆಶಾಯ 48:​17, 18.

[ಅಧ್ಯಯನ ಪ್ರಶ್ನೆಗಳು]

[ಪುಟ 133ರಲ್ಲಿರುವ ಚೌಕ/ಚಿತ್ರಗಳು]

ಸರ್ವಶಕ್ತನಾದ ದೇವರು ತನ್ನನ್ನು ನಿಗ್ರಹಿಸಿಕೊಳ್ಳುತ್ತಾನೆ

“ನಿನ್ನ ಮೇಲಣ ಕೋಪವನ್ನು ತಡೆದು . . . ತಾಳಿಕೊಳ್ಳುವೆನು,” ಎಂದು ಯೆಹೋವನು ಧರ್ಮಭ್ರಷ್ಟರಾದ ಇಸ್ರಾಯೇಲ್ಯರಿಗೆ ಹೇಳಿದನು. (ಯೆಶಾಯ 48:9) ಇಂತಹ ಹೇಳಿಕೆಗಳು, ತನ್ನ ಶಕ್ತಿಯನ್ನು ಎಂದಿಗೂ ದುರುಪಯೋಗಿಸದಿರುವ ವಿಷಯದಲ್ಲಿ ದೇವರು ಪರಿಪೂರ್ಣವಾದ ಮಾದರಿಯನ್ನಿಡುತ್ತಾನೆ ಎಂಬುದನ್ನು ನಾವು ನೋಡುವಂತೆ ಸಹಾಯಮಾಡುತ್ತವೆ. ದೇವರಿಗಿಂತ ಹೆಚ್ಚು ಶಕ್ತಿಯುಳ್ಳ ಯಾವನೂ ಇಲ್ಲವೆಂಬುದು ನಿಜ. ಈ ಕಾರಣದಿಂದಲೇ ನಾವು ಆತನನ್ನು ಸರ್ವಾಧಿಕಾರಿ, ಸರ್ವಶಕ್ತನು ಎಂದು ಕರೆಯುತ್ತೇವೆ. “ಸರ್ವಶಕ್ತ” ಎಂಬ ಬಿರುದನ್ನು ಆತನು ತನಗೆ ಅನ್ವಯಿಸಿಕೊಳ್ಳುವುದು ನ್ಯಾಯವಾಗಿದೆ. (ಆದಿಕಾಂಡ 17:⁠1) ಆತನಿಗೆ ಅಪರಿಮಿತ ಶಕ್ತಿಯಿರುವುದು ಮಾತ್ರವಲ್ಲ, ತಾನು ಸೃಷ್ಟಿಸಿರುವ ಈ ವಿಶ್ವದ ಪರಮಾಧಿಕಾರಿಯ ಸ್ಥಾನದಲ್ಲಿ ಆತನಿರುವುದರಿಂದ ಆತನಿಗೆ ಸರ್ವಾಧಿಕಾರವೂ ಇದೆ. ಆದುದರಿಂದಲೇ, ಯಾವನೂ ಆತನ ಕೈಯನ್ನು ತಡೆದು ಹಿಡಿಯಶಕ್ತನಾಗುವುದೂ ಇಲ್ಲ, “ನೀನು ಏನು ಮಾಡುತ್ತೀ” ಎಂದು ಆತನಿಗೆ ಹೇಳಶಕ್ತನಾಗುವುದೂ ಇಲ್ಲ.​—⁠ದಾನಿಯೇಲ 4:⁠35.

ಆದರೂ, ತನ್ನ ಶತ್ರುಗಳ ವಿರುದ್ಧ ಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿರುವಾಗಲೂ ದೇವರು ದೀರ್ಘಶಾಂತನಾಗಿದ್ದಾನೆ. (ನಹೂಮ 1:⁠3) ಯೆಹೋವನು ‘ಕೋಪವನ್ನು ತಡೆಯ’ಬಲ್ಲನು ಮತ್ತು ಆತನನ್ನು “ಕೋಪಕ್ಕೆ ನಿಧಾನಿ” ಎಂದು ವರ್ಣಿಸಿರುವುದು ಸೂಕ್ತವಾದದ್ದಾಗಿದೆ. ಏಕೆಂದರೆ ಕೋಪವಲ್ಲ, ಬದಲಾಗಿ ಪ್ರೀತಿಯೇ ಆತನ ಪ್ರಧಾನ ಗುಣವಾಗಿದೆ. ಆತನ ಕೋಪವು ವ್ಯಕ್ತವಾಗುವಾಗ, ಅದು ಸದಾ ನೀತಿಯದ್ದೂ, ಸದಾ ನ್ಯಾಯವಾದದ್ದೂ, ಸದಾ ನಿಯಂತ್ರಿತವೂ ಆಗಿರುತ್ತದೆ.​—⁠ವಿಮೋಚನಕಾಂಡ 34:​6, NW; 1 ಯೋಹಾನ 4:⁠8.

ಯೆಹೋವನು ಏಕೆ ಈ ವಿಧದಲ್ಲಿ ಕಾರ್ಯನಡಿಸುತ್ತಾನೆ? ಏಕೆಂದರೆ ಆತನು ತನ್ನ ಸರ್ವಶಕ್ತಿಯನ್ನು ಇನ್ನೂ ಮೂರು ಪ್ರಮುಖ ಗುಣಗಳೊಂದಿಗೆ, ಅಂದರೆ ವಿವೇಕ, ನ್ಯಾಯ ಮತ್ತು ಪ್ರೀತಿಗಳೊಂದಿಗೆ ಸರಿಹೊಂದಿಸುತ್ತಾನೆ. ಆತನು ಯಾವಾಗಲೂ ಈ ಇತರ ಗುಣಗಳೊಂದಿಗೆ ಹೊಂದಿಕೆಯಲ್ಲಿ ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ.

[ಪುಟ 122ರಲ್ಲಿರುವ ಚಿತ್ರ]

ಪುನಸ್ಸ್ಥಾಪನೆಯ ಕುರಿತಾದ ಯೆಶಾಯನ ಸಂದೇಶವು, ದೇಶಭ್ರಷ್ಟತೆಯಲ್ಲಿದ್ದ ನಂಬಿಗಸ್ತ ಯೆಹೂದ್ಯರಿಗೆ ಆಶಾಕಿರಣವನ್ನು ಒದಗಿಸುತ್ತದೆ

[ಪುಟ 124ರಲ್ಲಿರುವ ಚಿತ್ರಗಳು]

ಯೆಹೋವನ ಕಾರ್ಯಗಳನ್ನು ವಿಗ್ರಹಗಳು ಮಾಡಿದವೆಂದು ಹೇಳುವ ಪ್ರವೃತ್ತಿ ಯೆಹೂದ್ಯರಿಗಿತ್ತು

1. ಇಷ್ಟಾರ್‌. 2. ಬಾಬೆಲಿನ ಪ್ರೊಸೆಶನಲ್‌ ವೇಯಿಂದ ತೆಗೆದ ಗಾಜುಮೆರಗಿನ ಇಟ್ಟಿಗೆಯ ಅಲಂಕರಣ ಪಟ್ಟಿ 3. ಮಾರ್ಡುಕ್‌ ದೇವತೆಯ ಘಟಸರ್ಪ ಚಿಹ್ನೆ

[ಪುಟ 127ರಲ್ಲಿರುವ ಚಿತ್ರ]

ಯೆಹೋವನನ್ನು ಸೇವಿಸುವ ನಮ್ಮ ಉದ್ದೇಶವು ಶುದ್ಧವೊ ಅಲ್ಲವೊ ಎಂಬುದನ್ನು “ಸಂಕಟವೆಂಬ ಪುಟ” ತೋರಿಸಿ ಕೊಡಬಲ್ಲದು

[ಪುಟ 128ರಲ್ಲಿರುವ ಚಿತ್ರಗಳು]

ಸತ್ಯ ಕ್ರೈಸ್ತರು ಹಿಂಸೆಯ ಅತಿ ಕ್ರೂರವಾದ ರೂಪಗಳನ್ನು ಎದುರಿಸಿದ್ದಾರೆ