ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆರಾಧನೆಗೆ ಹಿಂದಿರುಗುವಿಕೆ

ಯೆಹೋವನ ಆರಾಧನೆಗೆ ಹಿಂದಿರುಗುವಿಕೆ

ಅಧ್ಯಾಯ ಏಳು

ಯೆಹೋವನ ಆರಾಧನೆಗೆ ಹಿಂದಿರುಗುವಿಕೆ

ಯೆಶಾಯ 46:​1-13

1. ಬಾಬೆಲಿನ ಮುಖ್ಯ ದೇವತೆಗಳಲ್ಲಿ ಇಬ್ಬರ ಹೆಸರೇನು, ಮತ್ತು ಅವರ ಕುರಿತು ಏನನ್ನು ಮುಂತಿಳಿಸಲಾಗಿದೆ?

ಇಸ್ರಾಯೇಲು ಬಾಬೆಲಿಗೆ ದೇಶಭ್ರಷ್ಟರಾಗಿ ಹೋಗುವಾಗ ಅದರ ಸುತ್ತಮುತ್ತ ಮಿಥ್ಯಾರಾಧನೆಯಿರುವುದು. ಯೆಶಾಯನ ಕಾಲದಲ್ಲಿ, ಯೆಹೋವನ ಜನರು ದೇವಾಲಯ ಮತ್ತು ಯಾಜಕತ್ವವಿದ್ದ ತಮ್ಮ ಸ್ವದೇಶದಲ್ಲೇ ಇನ್ನೂ ಇದ್ದಾರೆ. ಆದರೂ ದೇವರಿಗೆ ಸಮರ್ಪಿತವಾದ ಆ ಜನಾಂಗದಲ್ಲಿ ಅನೇಕರು ವಿಗ್ರಹಾರಾಧನೆಗೆ ಬಲಿ ಬಿದ್ದಿದ್ದಾರೆ. ಆದುದರಿಂದ, ಬಾಬೆಲಿನ ಸುಳ್ಳು ದೇವತೆಗಳಿಂದ ಭಯವಿಸ್ಮಿತರಾಗಿ ಅವುಗಳನ್ನು ಸೇವಿಸುವ ಶೋಧನೆಗೆ ಒಳಗಾಗದಿರುವಂತೆ ಅವರನ್ನು ಮುಂಚಿತವಾಗಿಯೇ ಸಿದ್ಧಗೊಳಿಸುವುದು ಮಹತ್ವದ ವಿಷಯವಾಗಿದೆ. ಆದಕಾರಣ, ಬಾಬೆಲಿನ ಎರಡು ಮುಖ್ಯ ದೇವತೆಗಳ ಕುರಿತು ಪ್ರವಾದನಾರೂಪವಾಗಿ ಮಾತಾಡುತ್ತ ಯೆಶಾಯನು ಹೇಳುವುದು: “ಬೇಲ್‌ ದೇವತೆಯು ಬೊಗ್ಗಿದೆ, ನೆಬೋ ದೇವತೆಯು ಕುಗ್ಗಿದೆ, ಅವುಗಳ ಬೊಂಬೆಗಳು ದನ ಮೊದಲಾದವುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳನ್ನು ಬಳಲಿಸಿವೆ.” (ಯೆಶಾಯ 46:1) ಕಸ್ದೀಯರ ವಿಗ್ರಹ ದೇವತೆಗಳಲ್ಲಿ ಬೇಲ್‌ ಮುಖ್ಯನು. ನೆಬೋ ದೇವತೆಯನ್ನು ವಿವೇಕ ಮತ್ತು ಶಿಕ್ಷಣದ ದೇವತೆಯಾಗಿ ಪೂಜಿಸಲಾಗುತ್ತಿತ್ತು. ಈ ಎರಡು ದೇವತೆಗಳನ್ನು ಅನೇಕರು ಗೌರವಿಸಿದರೆಂಬುದನ್ನು, ಬಾಬೆಲಿನವರ ವೈಯಕ್ತಿಕ ಹೆಸರುಗಳಿಗೆ ಈ ಹೆಸರುಗಳು ಜೋಡಿಸಲ್ಪಟ್ಟಿರುವುದರಿಂದ ನಾವು ನೋಡಬಹುದು. ಬೇಲ್ಶಚ್ಚರ, ನೆಬೋಪೊಲಾಸರ, ನೆಬೂಕದ್ನೆಚ್ಚರ ಮತ್ತು ನೆಬೂಜರದಾನ ಎಂಬವು ಅವುಗಳಲ್ಲಿ ಕೆಲವಾಗಿವೆ.

2. ಬಾಬೆಲಿನ ದೇವತೆಗಳ ನಿಸ್ಸಹಾಯಕತೆ ಹೇಗೆ ಒತ್ತಿಹೇಳಲ್ಪಡುತ್ತದೆ?

2 ಬೇಲ್‌ ದೇವತೆಯು “ಬೊಗ್ಗಿದೆ,” ಮತ್ತು ನೆಬೋ ದೇವತೆಯು “ಕುಗ್ಗಿದೆ” ಎಂದು ಯೆಶಾಯನು ಹೇಳುತ್ತಾನೆ. ಈ ಸುಳ್ಳು ದೇವತೆಗಳ ಸೊಕ್ಕು ಅಡಗಿಸಲ್ಪಡುವುದು. ಯೆಹೋವನು ಬಾಬೆಲಿನ ವಿರುದ್ಧ ತನ್ನ ನ್ಯಾಯತೀರ್ಪನ್ನು ಬರಮಾಡುವಾಗ ಈ ದೇವತೆಗಳು ತಮ್ಮ ಆರಾಧಕರ ಸಹಾಯಕ್ಕೆ ಬರಲಾರರು. ಅಷ್ಟೇಕೆ, ಅವರು ತಮ್ಮನ್ನೇ ರಕ್ಷಿಸಿಕೊಳ್ಳಲಾರರು! ಬಾಬೆಲಿನ ಹೊಸ ವರ್ಷದ ಹಬ್ಬದ ಮೆರವಣಿಗೆಯಂತಹ ಸಂದರ್ಭಗಳಲ್ಲಿ ಮಾಡಲ್ಪಡುತ್ತಿದ್ದಂತೆ, ಬೇಲ್‌ ಮತ್ತು ನೆಬೋ ದೇವತೆಗಳು ಗೌರವದ ಸ್ಥಾನಗಳಲ್ಲಿ ಒಯ್ಯಲ್ಪಡರು. ಬದಲಿಗೆ, ಆರಾಧಕರು ಅವರನ್ನು ಸಾಮಾನ್ಯವಾದ ಗಂಟುಮೂಟೆಯಂತೆ ಒಯ್ಯಬೇಕಾಗುವುದು. ಅವರಿಗೆ ಕೊಡಲ್ಪಡುತ್ತಿರುವ ಸ್ತುತಿ ಮತ್ತು ತೋರಿಸಲಾಗುವ ಪೂಜ್ಯ ಭಾವನೆಯು, ತಿರಸ್ಕಾರ ಮತ್ತು ಧಿಕ್ಕಾರಗಳಾಗಿ ಬದಲಾಗುವವು.

3. (ಎ) ಬಾಬೆಲಿನವರಿಗೆ ಯಾವ ವಿಷಯದಲ್ಲಿ ಆಘಾತವಾಗುವುದು? (ಬಿ) ಬಾಬೆಲಿನ ದೇವರುಗಳಿಗೆ ಏನು ಸಂಭವಿಸಿತೊ ಅದರಿಂದ ಇಂದು ನಾವು ಏನನ್ನು ಕಲಿಯಸಾಧ್ಯವಿದೆ?

3 ತಮ್ಮ ನೆಚ್ಚಿನ ವಿಗ್ರಹಗಳು, ದಣಿದಿರುವ ಹೇರುಪ್ರಾಣಿಗಳಿಗೆ ಹೊರಲು ಕೇವಲ ಒಂದು ಹೊರೆಯಾಗಿಬಿಟ್ಟಿವೆಯೆಂದು ತಿಳಿದುಬರುವಾಗ ಬಾಬೆಲಿನವರಿಗೆ ಎಂಥ ಆಘಾತವಾಗುವುದು! ಹಾಗೆಯೇ ಇಂದು ಲೋಕದ ದೇವರುಗಳು, ಅಂದರೆ ಜನರು ಯಾವುದರಲ್ಲಿ ಭರವಸೆಯಿಟ್ಟು ತಮ್ಮ ಶಕ್ತಿಯನ್ನು ಮತ್ತು ಜೀವವನ್ನು ಸಹ ಕೊಡಲು ಸಿದ್ಧರಾಗಿರುತ್ತಾರೊ ಆ ವಸ್ತುಗಳು ಭ್ರಮೆಯಾಗಿವೆ. ಐಶ್ವರ್ಯ, ಶಸ್ತ್ರಾಸ್ತ್ರಗಳು, ಸುಖವಿಲಾಸ, ಧುರೀಣರು, ಮಾತೃಭೂಮಿ ಮತ್ತು ಅದರ ಚಿಹ್ನೆಗಳು ಹಾಗೂ ಇನ್ನೂ ಅನೇಕ ವಸ್ತುಗಳು ಭಕ್ತಿಸೂಚಕ ವಸ್ತುಗಳಾಗಿಬಿಟ್ಟಿವೆ. ಇಂತಹ ದೇವರುಗಳ ವ್ಯರ್ಥತೆಯು ಯೆಹೋವನ ಕ್ಲುಪ್ತ ಸಮಯದಲ್ಲಿ ಬಯಲಾಗುವುದು.​—⁠ದಾನಿಯೇಲ 11:38; ಮತ್ತಾಯ 6:24; ಅ. ಕೃತ್ಯಗಳು 12:22; ಫಿಲಿಪ್ಪಿ 3:19; ಕೊಲೊಸ್ಸೆ 3:5; ಪ್ರಕಟನೆ 13:​14, 15.

4. ಬಾಬೆಲಿನ ದೇವತೆಗಳು ಯಾವ ಅರ್ಥದಲ್ಲಿ “ಕುಗ್ಗಿ ಬೊಗ್ಗಿ”ರುತ್ತವೆ?

4 ಬಾಬೆಲಿನ ದೇವತೆಗಳ ಪೂರ್ಣ ವೈಫಲ್ಯವನ್ನು ಇನ್ನೂ ಒತ್ತಿಹೇಳುತ್ತ ಪ್ರವಾದನೆ ಹೀಗೆ ಮುಂದುವರಿಯುತ್ತದೆ: “ಒಟ್ಟಿಗೆ ಕುಗ್ಗಿ ಬೊಗ್ಗಿವೆ, ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋಗಿವೆ.” (ಯೆಶಾಯ 46:2) ಬಾಬೆಲಿನ ದೇವತೆಗಳು ಯುದ್ಧದಲ್ಲಿ ಗಾಯಗೊಂಡು, ಇಲ್ಲವೆ ಮುದಿಪ್ರಾಯದಿಂದ ನಿತ್ರಾಣಿಗಳಾಗಿ “ಕುಗ್ಗಿ ಬೊಗ್ಗಿ”ರುವಂತೆ ತೋರುತ್ತವೆ. ತಮ್ಮ ಹೊರೆಯನ್ನು ಇಳಿಸಿಕೊಳ್ಳಲು ಅಥವಾ ತಮ್ಮನ್ನು ಹೊತ್ತಿರುವ ಪ್ರಾಣಿಗಳಿಗೆ ರಕ್ಷಣೆಯನ್ನು ಒದಗಿಸಲು ಕೂಡ ಅವುಗಳಿಗೆ ಶಕ್ತಿಯಿಲ್ಲ. ಆದಕಾರಣ, ಯೆಹೋವನ ಒಡಂಬಡಿಕೆಯ ಜನರು ಬಾಬೆಲಿನಲ್ಲಿ ಬಂದಿಗಳಾಗಿರುವುದಾದರೂ ಅವರು ಅವುಗಳಿಗೆ ಗೌರವವನ್ನು ಕೊಡಬೇಕೊ? ಖಂಡಿತವಾಗಿಯೂ ಕೊಡಬಾರದು! ಇದೇ ರೀತಿಯಲ್ಲಿ, ಯೆಹೋವನ ಅಭಿಷಿಕ್ತ ಸೇವಕರು, ಆತ್ಮಿಕ ರೀತಿಯಲ್ಲಿ ಬಂದಿಗಳಾಗಿರುವಾಗಲೂ ‘ಮಹಾ ಬಾಬೆಲಿನ’ ಸುಳ್ಳು ದೇವತೆಗಳಿಗೆ ಯಾವ ಮಾನವನ್ನೂ ಕೊಡಲಿಲ್ಲ. ಈ ದೇವತೆಗಳು 1919ರಲ್ಲಾದ ಮಹಾ ಬಾಬೆಲಿನ ಪತನವನ್ನು ತಡೆಯಲು ಶಕ್ತರಾಗಿರಲಿಲ್ಲ, ಮತ್ತು “ಮಹಾ ಸಂಕಟ”ದ ಸಮಯದಲ್ಲಿ ಅದರ ಮೇಲೆ ಬರಲಿರುವ ವಿಪತ್ತಿನಿಂದಲೂ ಅದನ್ನು ರಕ್ಷಿಸಲು ಸಾಧ್ಯವಿಲ್ಲ.​—⁠ಪ್ರಕಟನೆ 18:​2, 21; ಮತ್ತಾಯ 24:⁠21.

5. ಇಂದು ಕ್ರೈಸ್ತರು, ವಿಗ್ರಹಾರಾಧಕರಾದ ಬಾಬೆಲಿನವರು ಮಾಡಿದ ತಪ್ಪುಗಳನ್ನು ಹೇಗೆ ಪುನರಾವರ್ತಿಸುವುದಿಲ್ಲ?

5 ಇಂದು ಸತ್ಯ ಕ್ರೈಸ್ತರು ಯಾವುದೇ ರೀತಿಯ ವಿಗ್ರಹಗಳಿಗೆ ಅಡ್ಡಬೀಳುವುದಿಲ್ಲ. (1 ಯೋಹಾನ 5:21) ಶಿಲುಬೆಗಳು, ಜಪಮಾಲೆಗಳು ಮತ್ತು ಸಂತರ ವಿಗ್ರಹಗಳು ಸೃಷ್ಟಿಕರ್ತನನ್ನು ಹೆಚ್ಚು ಸುಲಭವಾಗಿ ಸಂಪರ್ಕಿಸುವಂತೆ ಸಹಾಯಮಾಡುವುದಿಲ್ಲ. ಅವು ನಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಲಾರವು. ಒಂದನೆಯ ಶತಮಾನದಲ್ಲಿ ಯೇಸು ತನ್ನ ಶಿಷ್ಯರಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು” ಎಂದು ಹೇಳಿದಾಗ, ದೇವರನ್ನು ಆರಾಧಿಸುವ ಸರಿಯಾದ ವಿಧವನ್ನು ಅವರಿಗೆ ಕಲಿಸಿದನು.​—⁠ಯೋಹಾನ 14:6, 14.

“ಗರ್ಭದಿಂದ ಹೊರುತ್ತಿದ್ದೇನೆ”

6. ಯೆಹೋವನು ಜನಾಂಗಗಳ ದೇವತೆಗಳಿಂದ ಹೇಗೆ ಭಿನ್ನನಾಗಿದ್ದಾನೆ?

6 ಬಾಬೆಲಿನವರ ವಿಗ್ರಹ ದೇವತೆಗಳನ್ನು ಆರಾಧಿಸುವ ನಿರರ್ಥಕತೆಯನ್ನು ಬಯಲುಪಡಿಸಿದ ಬಳಿಕ, ಯೆಹೋವನು ತನ್ನ ಜನರಿಗೆ ಹೇಳುವುದು: “ಯಾಕೋಬವಂಶವೇ, ಇಸ್ರಾಯೇಲ್‌ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ.” (ಯೆಶಾಯ 46:3) ಯೆಹೋವನು ಮತ್ತು ಬಾಬೆಲಿನ ಕೈಯಿಂದ ಕೆತ್ತಿರುವ ವಿಗ್ರಹಗಳ ಮಧ್ಯೆ ಎಷ್ಟೊಂದು ವ್ಯತ್ಯಾಸವಿದೆ! ಬಾಬೆಲಿನ ದೇವತೆಗಳು ಅವುಗಳ ಆರಾಧಕರಿಗೆ ಯಾವ ಸಹಾಯವನ್ನೂ ಮಾಡಲಾರವು. ಅವುಗಳು ಚಲಿಸಬೇಕಾದರೆ ಹೇರುಪ್ರಾಣಿಗಳು ಅವುಗಳನ್ನು ಒಯ್ಯಬೇಕು. ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವನು ತನ್ನ ಜನರನ್ನು ಹೊತ್ತುಕೊಂಡು ಸಾಗಿಸುತ್ತಾನೆ. ಆತನು ಅವರನ್ನು “ಗರ್ಭದಿಂದ” ಪೋಷಿಸಿದ್ದಾನೆ, ಅಂದರೆ ಆ ಜನಾಂಗವು ರೂಪಿಸಲ್ಪಟ್ಟಂದಿನಿಂದಲೂ ಅದನ್ನು ಪರಾಮರಿಸಿದ್ದಾನೆ. ಯೆಹೋವನು ತಮ್ಮನ್ನು ಹೊತ್ತುಕೊಂಡು ಹೋಗಿದ್ದ ಆ ಸವಿನೆನಪುಗಳು, ವಿಗ್ರಹಾರಾಧನೆಯನ್ನು ತ್ಯಜಿಸುವಂತೆಯೂ ಪಿತನೂ ಮಿತ್ರನೂ ಆದ ಆತನಲ್ಲಿ ಭರವಸೆಯಿಡುವಂತೆಯೂ ಯೆಹೂದ್ಯರನ್ನು ಪ್ರೋತ್ಸಾಹಿಸಬೇಕು.

7. ಯೆಹೋವನು ತನ್ನ ಆರಾಧಕರನ್ನು ಕೋಮಲವಾಗಿ ಪರಾಮರಿಸುವ ರೀತಿಯು, ಮಾನವ ಹೆತ್ತವರು ತಮ್ಮ ಮಕ್ಕಳನ್ನು ಪರಾಮರಿಸುವ ರೀತಿಗಿಂತಲೂ ಮಿಗಿಲಾಗಿರುವುದು ಹೇಗೆ?

7 ಯೆಹೋವನ ಬಳಿ ತನ್ನ ಜನರಿಗಾಗಿ ಇನ್ನೂ ಕೋಮಲವಾದ ಮಾತುಗಳಿವೆ: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.” (ಯೆಶಾಯ 46:4) ಯೆಹೋವನು ತನ್ನ ಜನರನ್ನು ಪರಾಮರಿಸುವ ರೀತಿಯು, ಅತಿ ಹೆಚ್ಚು ಪರಾಮರಿಕೆಮಾಡುವ ಮಾನವ ಹೆತ್ತವರನ್ನೂ ಮೀರಿಸುತ್ತದೆ. ಮಕ್ಕಳು ಬೆಳೆದಂತೆ, ಅವರ ಕಡೆಗಿನ ಜವಾಬ್ದಾರಿಯು ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೆತ್ತವರಿಗೆ ಅನಿಸಬಹುದು. ಮತ್ತು ಹೆತ್ತವರು ಮುದಿಪ್ರಾಯದವರಾಗುವಾಗ, ಅನೇಕ ವೇಳೆ ಮಕ್ಕಳು ಅವರನ್ನು ಪರಾಮರಿಸುತ್ತಾರೆ. ಆದರೆ ಯೆಹೋವನ ಸಂಬಂಧದಲ್ಲಿ ವಿಷಯವು ಹೀಗಿರುವುದೇ ಇಲ್ಲ. ಆತನು ತನ್ನ ಮಾನವ ಮಕ್ಕಳ ಪರಾಮರಿಕೆಯನ್ನು ಅವರ ಮುದಿಪ್ರಾಯದಲ್ಲಿಯೂ ನಿಲ್ಲಿಸುವುದಿಲ್ಲ. ದೇವರ ಆರಾಧಕರು ಇಂದು ತಮ್ಮ ಸೃಷ್ಟಿಕರ್ತನಲ್ಲಿ ಭರವಸವಿಟ್ಟು, ಆತನನ್ನು ಪ್ರೀತಿಸಿ, ಯೆಶಾಯನ ಪ್ರವಾದನೆಯ ಈ ಮಾತುಗಳಿಂದ ತುಂಬ ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ. ಈ ವಿಷಯಗಳ ವ್ಯವಸ್ಥೆಯಲ್ಲಿ ತಾವು ಕಳೆಯಲೇಬೇಕಾದ ಉಳಿದಿರುವ ದಿನಗಳು ಮತ್ತು ವರುಷಗಳ ಬಗ್ಗೆ ಅವರು ಚಿಂತೆಪಡಬೇಕಾಗಿಲ್ಲ. ಮುದಿಪ್ರಾಯದವರನ್ನು ತಾನು ‘ಹೊತ್ತು ಸಹಿಸುವೆನು’ ಎಂಬ ಯೆಹೋವನ ವಚನವು ಅವರಿಗೆ ತಾಳಿಕೊಳ್ಳಲು ಮತ್ತು ನಂಬಿಗಸ್ತರಾಗಿ ಉಳಿಯಲು ಬೇಕಾದ ಬಲವನ್ನು ಕೊಡುತ್ತದೆ. ಆತನು ಅವರನ್ನು ಹೊತ್ತುಕೊಂಡು, ಬಲಪಡಿಸಿ, ರಕ್ಷಣೆಯನ್ನು ಒದಗಿಸುವನು.​—⁠ಇಬ್ರಿಯ 6:⁠10.

ಆಧುನಿಕ ದಿನಗಳ ವಿಗ್ರಹಗಳ ಕುರಿತು ಎಚ್ಚರಿಕೆ

8. ಯೆಶಾಯನ ಸ್ವದೇಶಸ್ಥರಲ್ಲಿ ಕೆಲವರು ಯಾವ ಅಕ್ಷಮ್ಯ ಪಾಪವನ್ನು ಮಾಡಿದ್ದಾರೆ?

8 ವಿಗ್ರಹಗಳಲ್ಲಿ ಭರವಸೆಯಿಟ್ಟ ಬಾಬೆಲಿನವರ ಮುಂದಿರುವ ನಿರಾಶೆಯನ್ನು ಭಾವಿಸಿಕೊಳ್ಳಿ! ಅವು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿ ಪರಿಣಮಿಸುವವು. ಆ ದೇವತೆಗಳು ಯೆಹೋವನಿಗೆ ಸರಿಸಮಾನರೆಂದು ಇಸ್ರಾಯೇಲ್ಯರು ನಂಬಬೇಕೊ? ಖಂಡಿತ ನಂಬಬಾರದು. ಯೆಹೋವನು ನ್ಯಾಯವಾಗಿ ಹೀಗೆ ಕೇಳುತ್ತಾನೆ: “ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸೀರಿ, ಇಬ್ಬರೂ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡೀರಿ?” (ಯೆಶಾಯ 46:5) ಯೆಶಾಯನ ಸ್ವದೇಶಸ್ಥರಲ್ಲಿ ಕೆಲವರು ಮಾತುಬಾರದ, ನಿರ್ಜೀವ ಮತ್ತು ಸಹಾಯಶೂನ್ಯ ವಿಗ್ರಹಗಳನ್ನು ಆರಾಧಿಸಲು ತೊಡಗಿರುವುದು ಅದೆಷ್ಟು ಅಕ್ಷಮ್ಯ! ಯೆಹೋವನನ್ನು ತಿಳಿದಿರುವ ಜನಾಂಗವು ಮಾನವರಿಂದ ರಚಿಸಲ್ಪಟ್ಟ ನಿರ್ಜೀವ, ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ವಿಗ್ರಹಗಳಲ್ಲಿ ನಂಬಿಕೆಯಿಡುವುದು ಮೂರ್ಖತನವೇ ಸರಿ.

9. ಕೆಲವು ವಿಗ್ರಹಾರಾಧಕರ ಪೊಳ್ಳುತಲೆಯ ತರ್ಕವನ್ನು ವರ್ಣಿಸಿರಿ.

9 ವಿಗ್ರಹಾರಾಧಕರ ಪೊಳ್ಳುತಲೆಯ ತರ್ಕವನ್ನು ಪರಿಗಣಿಸಿರಿ. ಪ್ರವಾದನೆ ಮುಂದುವರಿಸುತ್ತ ಹೇಳುವುದು: “ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿನಲ್ಲಿ ಬೆಳ್ಳಿಯನ್ನು ತೂಗಿ ಅಕ್ಕಸಾಲಿಗನಿಗೆ ಕೊಟ್ಟು ಕೂಲಿ ಗೊತ್ತುಮಾಡಿ ದೇವರನ್ನು ಮಾಡಿಸಿ ಅದಕ್ಕೆ ಎರಗಿ ಪೂಜೆಮಾಡುವರು.” (ಯೆಶಾಯ 46:6) ಹೆಚ್ಚು ಬೆಲೆಬಾಳುವ ಒಂದು ವಿಗ್ರಹವು, ಮರದಿಂದ ಮಾಡಲ್ಪಟ್ಟ ವಿಗ್ರಹಕ್ಕಿಂತ ಹೆಚ್ಚು ರಕ್ಷಣೆಯನ್ನು ಒದಗಿಸುವುದೋ ಎಂಬಂತೆ, ವಿಗ್ರಹಾರಾಧಕರು ತಮ್ಮ ವಿಗ್ರಹವನ್ನು ತಯಾರಿಸಲು ಭಾರಿ ಮೊತ್ತದ ಹಣವನ್ನು ವ್ಯಯಿಸಲು ಮನಃಪೂರ್ವಕವಾಗಿ ಸಿದ್ಧರಿದ್ದಾರೆ. ಆದರೆ, ಎಷ್ಟೇ ಹೆಚ್ಚು ಪ್ರಯತ್ನವು ಮಾಡಲ್ಪಡಲಿ ಇಲ್ಲವೇ ವಸ್ತುಗಳು ಎಷ್ಟೇ ಬೆಲೆಬಾಳುವಂಥದ್ದಾಗಿರಲಿ, ಒಂದು ನಿರ್ಜೀವ ವಿಗ್ರಹವು ನಿರ್ಜೀವವಾಗಿಯೇ ಉಳಿಯುತ್ತದೆ, ಇನ್ನೇನೂ ಅಲ್ಲ.

10. ವಿಗ್ರಹಾರಾಧನೆಯು ಎಷ್ಟು ನಿರರ್ಥಕವೆಂಬುದನ್ನು ಹೇಗೆ ವರ್ಣಿಸಲಾಗಿದೆ?

10 ವಿಗ್ರಹಾರಾಧನೆಯ ಮೂರ್ಖತನವನ್ನು ಇನ್ನೂ ಒತ್ತಿಹೇಳುತ್ತ ಪ್ರವಾದನೆಯು ಮುಂದುವರಿಸುವುದು: “ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು.” (ಯೆಶಾಯ 46:7) ಕೇಳಿಸಿಕೊಳ್ಳಲು ಇಲ್ಲವೆ ಕ್ರಿಯೆಗೈಯಲು ಸಾಮರ್ಥ್ಯವಿಲ್ಲದಂತಹ ಒಂದು ವಿಗ್ರಹಕ್ಕೆ ಪ್ರಾರ್ಥಿಸುವುದು ಅದೆಷ್ಟು ಹಾಸ್ಯಾಸ್ಪದ! ಇಂತಹ ಆರಾಧನಾ ವಸ್ತುಗಳ ನಿರರ್ಥಕತೆಯನ್ನು ಕೀರ್ತನೆಗಾರನು ಚೆನ್ನಾಗಿ ವರ್ಣಿಸುತ್ತಾನೆ: “ಅವರ ವಿಗ್ರಹಗಳೋ ಬೆಳ್ಳಿಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. ಅವು ಬಾಯಿದ್ದರೂ ಮಾತಾಡುವದಿಲ್ಲ; ಕಣ್ಣಿದ್ದರೂ ನೋಡುವದಿಲ್ಲ. ಕಿವಿಯಿದ್ದರೂ ಕೇಳುವದಿಲ್ಲ; ಮೂಗಿದ್ದರೂ ಮೂಸುವದಿಲ್ಲ. ಕೈಯುಂಟು, ಮುಟ್ಟುವದಿಲ್ಲ; ಕಾಲುಂಟು, ನಡೆಯುವದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ. ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.”​—⁠ಕೀರ್ತನೆ 115:4-8.

“ಧೈರ್ಯ ತಂದುಕೊಳ್ಳಿ”

11. ಸಂಶಯಪಡುವವರು “ಧೈರ್ಯ ತಂದು”ಕೊಳ್ಳುವಂತೆ ಯಾವುದು ಸಹಾಯ ಮಾಡುವುದು?

11 ವಿಗ್ರಹಾರಾಧನೆಯ ವ್ಯರ್ಥತೆಯನ್ನು ತೋರಿಸಿದ ಮೇಲೆ, ಯೆಹೋವನು ಈಗ ತನ್ನ ಜನರಿಗೆ ಅವರೇಕೆ ತನ್ನನ್ನು ಆರಾಧಿಸಬೇಕೆಂಬುದಕ್ಕೆ ಕಾರಣಗಳನ್ನು ಕೊಡುತ್ತಾನೆ: “ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಗಮನಿಸಿ ಮನುಷ್ಯರಿಗೆ ತಕ್ಕಂತೆ ನಡೆಯಿರಿ [“ಧೈರ್ಯ ತಂದುಕೊಳ್ಳಿರಿ,” NW]! ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ.” (ಯೆಶಾಯ 46:​8, 9) ಸತ್ಯಾರಾಧನೆ ಮತ್ತು ವಿಗ್ರಹಾರಾಧನೆಯ ಮಧ್ಯೆ ಇರುವ ವ್ಯತ್ಯಾಸದ ಕುರಿತು ಸಂಶಯಪಡುವವರು ಇತಿಹಾಸವನ್ನು ಜ್ಞಾಪಿಸಿಕೊಳ್ಳಬೇಕು. ಯೆಹೋವನು ಮಾಡಿರುವ ಸಂಗತಿಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದು ಅವರು ಧೈರ್ಯ ತಂದುಕೊಂಡು ಸರಿಯಾದ ನಿರ್ಣಯವನ್ನು ಮಾಡುವಂತೆ ಸಹಾಯಮಾಡುವುದು. ಅವರು ಯೆಹೋವನ ಆರಾಧನೆಗೆ ಹಿಂದಿರುಗಲು ಇದು ಅವರಿಗೆ ಸಹಾಯಮಾಡುವುದು.

12, 13. ಕ್ರೈಸ್ತರು ಯಾವ ಹೋರಾಟದಲ್ಲಿ ತೊಡಗಿದ್ದಾರೆ, ಮತ್ತು ಅವರು ಹೇಗೆ ಜಯಶಾಲಿಗಳಾಗಬಲ್ಲರು?

12 ಈ ಪ್ರೋತ್ಸಾಹದ ಅಗತ್ಯ ಇಂದು ಸಹ ಇದೆ. ಇಸ್ರಾಯೇಲ್ಯರಂತೆ, ಯಥಾರ್ಥ ಕ್ರೈಸ್ತರು ದುಷ್ಪ್ರೇರಣೆ ಹಾಗೂ ಸ್ವಂತ ಅಪರಿಪೂರ್ಣತೆಗಳೊಂದಿಗೆ ಹೋರಾಡಬೇಕಾಗಿದೆ. (ರೋಮಾಪುರ 7:​21-24) ಇದಲ್ಲದೆ ಅವರು, ಅದೃಶ್ಯನಾದರೂ ಅತಿ ಬಲಾಢ್ಯನಾದ ಒಬ್ಬ ವೈರಿಯೊಂದಿಗೆ ಒಂದು ಹೋರಾಟದಲ್ಲಿ ತೊಡಗಿದ್ದಾರೆ. ಅಪೊಸ್ತಲ ಪೌಲನು ಹೇಳುವುದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.”​—⁠ಎಫೆಸ 6:⁠12.

13 ಕ್ರೈಸ್ತರನ್ನು ಸತ್ಯಾರಾಧನೆಯಿಂದ ತಿರುಗಿಸಲು ಸೈತಾನನೂ ಅವನ ದೆವ್ವಗಳೂ ತಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುವರು. ಹೋರಾಟದಲ್ಲಿ ಜಯಶಾಲಿಗಳಾಗಬೇಕಾದರೆ, ಕ್ರೈಸ್ತರು ಯೆಹೋವನ ಸಲಹೆಯನ್ನು ಅನುಸರಿಸಿ ಧೈರ್ಯತಂದುಕೊಳ್ಳಬೇಕು. ಹೇಗೆ? ಅಪೊಸ್ತಲ ಪೌಲನು ತಿಳಿಸುವುದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.” ಯೆಹೋವನು ತನ್ನ ಸೇವಕರನ್ನು ಸಾಕಷ್ಟು ಶಸ್ತ್ರಗಳಿಲ್ಲದವರಾಗಿ ಯುದ್ಧಕ್ಕೆ ಕಳುಹಿಸುವುದಿಲ್ಲ. ಅವರ ಆತ್ಮಿಕ ಶಸ್ತ್ರಾಸ್ತ್ರಗಳಲ್ಲಿ “ನಂಬಿಕೆಯೆಂಬ ಗುರಾಣಿ” ಇದೆ. ಅದರಿಂದ ಅವರು, “ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತ”ರಾಗುವರು. (ಎಫೆಸ 6:11, 16) ಯೆಹೋವನು ತಮಗಾಗಿ ಮಾಡಿದ ಆತ್ಮಿಕ ಒದಗಿಸುವಿಕೆಗಳನ್ನು ಅಸಡ್ಡೆಮಾಡಿದ ಕಾರಣ ಇಸ್ರಾಯೇಲ್ಯರು ನಿಯಮಗಳನ್ನು ಉಲ್ಲಂಘಿಸುವವರಾದರು. ಯೆಹೋವನು ಪದೇ ಪದೇ ತಮ್ಮ ಪರವಾಗಿ ಮಾಡಿದ ಪ್ರಬಲ ಕಾರ್ಯಗಳ ಕುರಿತು ಅವರು ಮನನಮಾಡುತ್ತಿದ್ದಲ್ಲಿ, ಅಸಹ್ಯವಾದ ವಿಗ್ರಹಾರಾಧನೆಗೆ ಅವರು ಎಂದಿಗೂ ತಿರುಗುತ್ತಿರಲಿಲ್ಲ. ಅವರ ಉದಾಹರಣೆಯಿಂದ ನಾವು ಪಾಠವನ್ನು ಕಲಿತುಕೊಂಡು, ಯಾವುದು ಸರಿಯಾಗಿದೆಯೋ ಅದನ್ನು ಮಾಡುವ ಹೋರಾಟದಲ್ಲಿ ಎಂದಿಗೂ ಹಿಂಜರಿಯದಿರೋಣ.​—⁠1 ಕೊರಿಂಥ 10:⁠11.

14. ತಾನೊಬ್ಬನೇ ಸತ್ಯ ದೇವರೆಂದು ತೋರಿಸಲು ಯೆಹೋವನು ತನ್ನ ಯಾವ ಸಾಮರ್ಥ್ಯವನ್ನು ಸೂಚಿಸುತ್ತಾನೆ?

14 ಯೆಹೋವನು ಹೇಳುವುದು: “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.” (ಯೆಶಾಯ 46:10) ಈ ವಿಷಯದಲ್ಲಿ ಇನ್ನಾವ ದೇವರು ಯೆಹೋವನಿಗೆ ಸರಿಸಮಾನನಾದಾನು? ಭವಿಷ್ಯತ್ತನ್ನು ಮುಂತಿಳಿಸುವ ಸಾಮರ್ಥ್ಯವು ಸೃಷ್ಟಿಕರ್ತನ ದೇವತ್ವದ ಕುರಿತು ಇರುವ ಒಂದು ಮಹತ್ವವುಳ್ಳ ರುಜುವಾತಾಗಿದೆ. ಆದರೂ, ಮುಂತಿಳಿಸಿದ ವಿಷಯಗಳನ್ನು ನೆರವೇರುವಂತೆ ಮಾಡಲು ಮುನ್ನೋಟಕ್ಕಿಂತ ಹೆಚ್ಚಿನ ಸಾಮರ್ಥ್ಯ ಅಗತ್ಯ. “ನನ್ನ ಸಂಕಲ್ಪವು ನಿಲ್ಲುವದು” ಎಂಬ ಘೋಷಣೆಯು, ದೇವರ ಸ್ಥಾಪಿತ ಉದ್ದೇಶದ ಬದಲಾಗದಿರುವಿಕೆಯನ್ನು ಒತ್ತಿಹೇಳುತ್ತದೆ. ಯೆಹೋವನಿಗೆ ಅಪರಿಮಿತವಾದ ಶಕ್ತಿಯಿರುವುದರಿಂದ, ವಿಶ್ವದಲ್ಲಿರುವ ಯಾವ ವಿಷಯವೂ ಆತನು ತನ್ನ ಚಿತ್ತವನ್ನು ನೆರವೇರಿಸುವುದನ್ನು ತಡೆದು ಹಿಡಿಯದು. (ದಾನಿಯೇಲ 4:35) ಆದುದರಿಂದ, ಇನ್ನೂ ನೆರವೇರಲಿಕ್ಕಿರುವ ಪ್ರವಾದನೆಗಳು ದೇವರ ತಕ್ಕ ಸಮಯದಲ್ಲಿ ನೆರವೇರುವವೆಂಬ ಖಾತ್ರಿ ನಮಗಿದೆ.​—⁠ಯೆಶಾಯ 55:⁠11.

15. ಭವಿಷ್ಯವನ್ನು ಮುಂತಿಳಿಸಲು ಯೆಹೋವನಿಗಿದ್ದ ಸಾಮರ್ಥ್ಯದ ಯಾವ ಗಮನಾರ್ಹ ಉದಾಹರಣೆಯು ನಮ್ಮ ಗಮನಕ್ಕೆ ತರಲ್ಪಟ್ಟಿದೆ?

15 ಭವಿಷ್ಯದ ಘಟನೆಗಳನ್ನು ಮುಂತಿಳಿಸಿ, ಆ ಬಳಿಕ ಅವುಗಳನ್ನು ನೆರವೇರಿಸುವ ಯೆಹೋವನ ಸಾಮರ್ಥ್ಯದ ಒಂದು ಗಮನಾರ್ಹ ಉದಾಹರಣೆಯನ್ನು ಯೆಶಾಯನ ಪ್ರವಾದನೆಯು ಮುಂದೆ ನಮ್ಮ ಗಮನಕ್ಕೆ ತರುತ್ತದೆ: “ಮೂಡಲಿಂದ ಹದ್ದು ಎರಗಲಿ ಎಂದು, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.” (ಯೆಶಾಯ 46:11) “ಆರಂಭದಲ್ಲಿಯೇ ಅಂತ್ಯವನ್ನು” ತಿಳಿಸುವಾತನಾದ ಯೆಹೋವ ದೇವರು, ತನ್ನ ಮಾತುಗಳು ನೆರವೇರುವಂತೆ ಮಾನವ ಸನ್ನಿವೇಶಗಳನ್ನು ರೂಪಿಸುವನು. ಆತನು ಮೂಡಲಿಂದ ಅಥವಾ ಕೋರೆಷನಿಗೆ ಪ್ರಿಯವಾಗಿದ್ದ ರಾಜಧಾನಿಯಾದ ಪಸಾರ್ಗಡೀ ನಗರವಿದ್ದ ಪೂರ್ವ ದಿಕ್ಕಿನ ಪರ್ಷಿಯದಿಂದ ಅವನನ್ನು ಕರೆಯಲಿದ್ದನು. ಕೋರೆಷನು ‘ಹದ್ದಿನಂತೆ’ ಇರುವನು. ಅವನು ಥಟ್ಟನೆ ಮತ್ತು ಅನಿರೀಕ್ಷಿತವಾಗಿ ಬಾಬೆಲಿನ ಮೇಲೆ ಎರಗಲಿದ್ದನು.

16. ಬಾಬೆಲಿನ ಕುರಿತಾದ ತನ್ನ ಭವಿಷ್ಯವಾಣಿಯನ್ನು ಯೆಹೋವನು ಹೇಗೆ ದೃಢೀಕರಿಸುತ್ತಾನೆ?

16 “ನಾನು ನುಡಿದಿದ್ದೇನೆ, ಈಡೇರಿಸುವೆನು” ಎಂಬ ಮಾತುಗಳಿಂದ, ಬಾಬೆಲಿನ ಕುರಿತಾದ ಯೆಹೋವನ ಭವಿಷ್ಯವಾಣಿಯ ನಿಶ್ಚಿತವಾದ ನೆರವೇರಿಕೆಯು ದೃಢೀಕರಿಸಲ್ಪಡುತ್ತದೆ. ಅಪರಿಪೂರ್ಣ ಮಾನವನು ಹಿಂದೆಮುಂದೆ ನೋಡದೆ ವಾಗ್ದಾನಮಾಡುವ ಪ್ರವೃತ್ತಿಯುಳ್ಳವನಾಗಿರುವುದು ನಿಜವಾದರೂ, ಸೃಷ್ಟಿಕರ್ತನು ತನ್ನ ಮಾತನ್ನು ನೆರವೇರಿಸಲು ತಪ್ಪುವುದಿಲ್ಲ. ಯೆಹೋವನು “ಸುಳ್ಳಾಡದ” ದೇವರಾಗಿರುವುದರಿಂದ, ಆತನು ‘ಆಲೋಚಿಸಿದ್ದಾನೆ’ ಮತ್ತು ಖಂಡಿತವಾಗಿಯೂ ‘ಸಾಧಿಸುವನು.’​—⁠ತೀತ 1:⁠2.

ನಂಬಿಕೆಯಿಲ್ಲದ ಹೃದಯಗಳು

17, 18. (ಎ) ಪುರಾತನ ಸಮಯಗಳಲ್ಲಿ ಮತ್ತು (ಬಿ) ಇಂದು ಯಾರನ್ನು “ಹೃದಯದಲ್ಲಿ ಪ್ರಬಲರು” ಎಂದು ವರ್ಣಿಸಬಹುದು?

17 ಯೆಹೋವನು ಪುನಃ ಪ್ರವಾದನಾರೂಪವಾಗಿ ಬಾಬೆಲಿನವರ ಕಡೆಗೆ ದೃಷ್ಟಿ ಹರಿಸುತ್ತಾ ಹೀಗನ್ನುತ್ತಾನೆ: “ಧರ್ಮಕ್ಕೆ ದೂರರಾದ ಹಟಗಾರರೇ [“ಹೃದಯದಲ್ಲಿ ಪ್ರಬಲರೇ,” NW] ನನ್ನ ಮಾತಿಗೆ ಕಿವಿಗೊಡಿರಿ.” (ಯೆಶಾಯ 46:12) “ಹೃದಯದಲ್ಲಿ ಪ್ರಬಲರು” ಎಂಬ ಮಾತುಗಳು, ಹಟಮಾರಿಗಳನ್ನು ಮತ್ತು ದೇವರ ಚಿತ್ತವನ್ನು ವಿರೋಧಿಸುವುದರಲ್ಲಿ ದೃಢಚಿತ್ತರಾಗಿರುವವರನ್ನು ವರ್ಣಿಸುತ್ತವೆ. ಬಾಬೆಲಿನವರು ದೇವರಿಂದ ದೂರವಾಗಿದ್ದಾರೆಂಬುದು ನಿಶ್ಚಯ. ಅವರಿಗೆ ಯೆಹೋವನ ಮತ್ತು ಆತನ ಜನರ ಮೇಲಿರುವ ದ್ವೇಷವು, ಅವರು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಮಾಡಿ, ಅದರ ನಿವಾಸಿಗಳನ್ನು ದೇಶಭ್ರಷ್ಟರಾಗಿ ಒಯ್ಯುವಂತೆ ಪ್ರಚೋದಿಸುತ್ತದೆ.

18 ಇಂದು ಸಂದೇಹವಾದಿಗಳೂ ಅಪನಂಬಿಗಸ್ತ ಹೃದಯಿಗಳೂ, ಜನವಾಸವಿರುವ ಭೂಮಿಯಲ್ಲೆಲ್ಲ ಸಾರಲ್ಪಡುತ್ತಿರುವ ರಾಜ್ಯದ ಸಂದೇಶಕ್ಕೆ ಕಿವಿಗೊಡಲು ಹಟಮಾರಿತನದಿಂದ ನಿರಾಕರಿಸುತ್ತಾರೆ. (ಮತ್ತಾಯ 24:14) ಯೆಹೋವನು ನ್ಯಾಯವಾದ ಹಕ್ಕುಳ್ಳ ಪರಮಾಧಿಕಾರಿ ಎಂಬುದನ್ನು ಒಪ್ಪಿಕೊಳ್ಳಲು ಅವರು ಬಯಸುವುದಿಲ್ಲ. (ಕೀರ್ತನೆ 83:18; ಪ್ರಕಟನೆ 4:11) “ಧರ್ಮಕ್ಕೆ ದೂರ”ವಾದ ಹೃದಯಗಳಿರುವ ಅವರು ಆತನ ಚಿತ್ತವನ್ನು ಪ್ರತಿರೋಧಿಸುತ್ತಾರೆ ಮತ್ತು ವಿರೋಧಿಸುತ್ತಾರೆ. (2 ತಿಮೊಥೆಯ 3:​1-5) ಬಾಬೆಲಿನವರಂತೆ ಅವರು ಯೆಹೋವನಿಗೆ ಕಿವಿಗೊಡಲು ನಿರಾಕರಿಸುತ್ತಾರೆ.

ದೇವರ ರಕ್ಷಣೆಯು ತಡವಾಗದು

19. ಯೆಹೋವನು ಯಾವ ವಿಧದಲ್ಲಿ ಇಸ್ರಾಯೇಲಿನ ಪರವಾಗಿ ನೀತಿಯ ಕ್ರಿಯೆಯನ್ನು ನಡಿಸುವನು?

19 ಯೆಶಾಯ 46ನೆಯ ಅಧ್ಯಾಯದ ಸಮಾಪ್ತಿಯ ವಚನಗಳು, ಯೆಹೋವನ ವ್ಯಕ್ತಿತ್ವದ ಅಂಶಗಳನ್ನು ಎತ್ತಿತೋರಿಸುತ್ತವೆ: “ನನ್ನ ಧರ್ಮವನ್ನು [“ನೀತಿಯನ್ನು,” NW] ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು; ಚೀಯೋನಿನಲ್ಲಿ ರಕ್ಷಣಾಕಾರ್ಯವನ್ನು ನಡಿಸಿ ಇಸ್ರಾಯೇಲಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು.” (ಯೆಶಾಯ 46:13) ದೇವರು ನಡೆಸುವ ಇಸ್ರಾಯೇಲಿನ ವಿಮೋಚನೆಯು ನೀತಿಯ ಕ್ರಿಯೆಯಾಗಿರುವುದು. ತನ್ನ ಜನರು ದೇಶಭ್ರಷ್ಟರಾಗಿ ನರಳುವಂತೆ ಆತನು ಬಿಡನು. ಚೀಯೋನಿನ ರಕ್ಷಣೆಯು ಸಕಾಲದಲ್ಲಿ ಬರುವುದು, “ತಡವಾಗದು.” ಇಸ್ರಾಯೇಲ್ಯರು ತಮ್ಮ ಬಿಡುಗಡೆಯ ನಂತರ ಸುತ್ತಲಿನ ಜನಾಂಗಗಳಿಗೆ ಮನೋಹರ ದೃಶ್ಯವಾಗಿರುವರು. ತನ್ನ ಜನಾಂಗಕ್ಕೆ ಯೆಹೋವನು ಮಾಡಿದ ಬಿಡುಗಡೆಯು ಆತನ ರಕ್ಷಣಾಶಕ್ತಿಗೆ ಸಾಕ್ಷಿಯಾಗಿರುವುದು. ಬೇಲ್‌ ಮತ್ತು ನೆಬೋ ಎಂಬ ಬಾಬೆಲಿನ ದೇವರುಗಳ ನಿರರ್ಥಕತೆಯು, ಅವರ ಶಕ್ತಿಹೀನತೆಯು ಸರ್ವರಿಗೂ ವ್ಯಕ್ತವಾಗುವುದು.​—⁠1 ಅರಸುಗಳು 18:​39, 40.

20. ಯೆಹೋವನ “ರಕ್ಷಣೆಯು ತಡವಾಗದು” ಎಂದು ಕ್ರೈಸ್ತರು ಹೇಗೆ ಖಾತ್ರಿಯಿಂದಿರಬಲ್ಲರು?

20 ಯೆಹೋವನು 1919ರಲ್ಲಿ ತನ್ನ ಜನರನ್ನು ಆತ್ಮಿಕ ಬಂಧನದಿಂದ ಬಿಡುಗಡೆಮಾಡಿದನು. ಆತನು ತಡಮಾಡಲಿಲ್ಲ. ಆ ಘಟನೆ ಹಾಗೂ ಪುರಾತನ ಕಾಲದಲ್ಲಿ ಬಾಬೆಲು ಕೋರೆಷನ ಮುಂದೆ ಸೋತುಹೋದ ಘಟನೆಗಳು ಇಂದು ನಮ್ಮನ್ನು ತುಂಬ ಪ್ರೋತ್ಸಾಹಿಸುತ್ತವೆ. ಯೆಹೋವನು ಮಿಥ್ಯಾರಾಧನೆಯ ಸಮೇತ ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವ ವಾಗ್ದಾನವನ್ನು ಮಾಡಿದ್ದಾನೆ. (ಪ್ರಕಟನೆ 19:​1, 2, 17-21) ಕೆಲವು ಮಂದಿ ಕ್ರೈಸ್ತರು ಮಾನವ ದೃಷ್ಟಿಕೋನದಿಂದ ನೋಡುತ್ತ, ರಕ್ಷಣೆ ಇನ್ನೂ ತಡವಾಗಿ ಬರಲಿದೆ ಎಂದು ಅಭಿಪ್ರಯಿಸಬಹುದು. ಆದರೂ, ಆ ವಾಗ್ದಾನವನ್ನು ತನ್ನ ತಕ್ಕ ಸಮಯದಲ್ಲಿ ನೆರವೇರಿಸುವ ವರೆಗೆ ಯೆಹೋವನು ತೋರಿಸುವ ತಾಳ್ಮೆಯು, ನಿಜವಾಗಿಯೂ ನೀತಿಯ ಕ್ರಿಯೆಯಾಗಿದೆ. ಎಷ್ಟೆಂದರೂ ಯೆಹೋವನು “ಯಾವನಾದರೂ ನಾಶವಾಗುವದರಲ್ಲಿ . . . ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸು”ತ್ತಾನೆ. (2 ಪೇತ್ರ 3:9) ಆದಕಾರಣ, ಪೂರ್ವಕಾಲದ ಇಸ್ರಾಯೇಲಿಗಾದಂತೆಯೇ, “ರಕ್ಷಣೆಯು ತಡವಾಗದು” ಎಂಬ ಖಾತ್ರಿ ನಿಮಗಿರಲಿ. ಮತ್ತು ಆ ರಕ್ಷಣೆಯ ದಿನವು ನಿಕಟವಾಗುತ್ತಿರುವಾಗ, ಯೆಹೋವನು ಪ್ರೀತಿಯಿಂದ ಈ ಆಮಂತ್ರಣವನ್ನು ಕೊಡುತ್ತ ಮುಂದುವರಿಯುತ್ತಾನೆ: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ; ಆತನು ಮಹಾಕೃಪೆಯಿಂದ ಕ್ಷಮಿಸುವನು.”​—⁠ಯೆಶಾಯ 55:6, 7.

[ಅಧ್ಯಯನ ಪ್ರಶ್ನೆಗಳು]

[ಪುಟ 94ರಲ್ಲಿರುವ ಚಿತ್ರಗಳು]

ಬಾಬೆಲಿನ ದೇವರುಗಳು ಬಾಬೆಲನ್ನು ನಾಶವಾಗುವುದರಿಂದ ಕಾಪಾಡುವುದಿಲ್ಲ

[ಪುಟ 98ರಲ್ಲಿರುವ ಚಿತ್ರಗಳು]

ಕ್ರೈಸ್ತರು ಇಂದು ಆಧುನಿಕ ದಿನದ ವಿಗ್ರಹಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು

[ಪುಟ 101ರಲ್ಲಿರುವ ಚಿತ್ರಗಳು]

ಸರಿಯಾದುದನ್ನು ಮಾಡಲು ಧೈರ್ಯ ತಂದುಕೊಳ್ಳಿ