ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಕೈ ಮೋಟುಗೈಯಲ್ಲ

ಯೆಹೋವನ ಕೈ ಮೋಟುಗೈಯಲ್ಲ

ಅಧ್ಯಾಯ ಇಪ್ಪತ್ತು

ಯೆಹೋವನ ಕೈ ಮೋಟುಗೈಯಲ್ಲ

ಯೆಶಾಯ 59:1-21

1. ಯೆಹೂದದಲ್ಲಿ ಯಾವ ಪರಿಸ್ಥಿತಿಯಿದೆ, ಮತ್ತು ಅನೇಕರಿಗಿರುವ ಕುತೂಹಲವೇನು?

ಯೆಹೂದ ಜನಾಂಗವು ತಾನು ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿದ್ದೇನೆಂದು ವಾದಿಸುತ್ತದಾದರೂ, ಎಲ್ಲೆಲ್ಲಿಯೂ ತೊಂದರೆಗಳೇ ತುಂಬಿಕೊಂಡಿವೆ. ನ್ಯಾಯದ ಕೊರತೆ ಅತಿಯಾಗಿದೆ, ಪಾತಕ ಮತ್ತು ದಬ್ಬಾಳಿಕೆಯು ವ್ಯಾಪಕವಾಗಿ ಹಬ್ಬಿದೆ. ಮತ್ತು ಸುಧಾರಣೆಯಾಗುವ ನಿರೀಕ್ಷೆಗಳು ನೆರವೇರದೆ ಹೋಗುತ್ತವೆ. ಇದಕ್ಕೆ ಪ್ರಬಲವಾದ ಕಾರಣ ಇದ್ದೇ ಇದೆ. ಯೆಹೋವನು ವಿಷಯಗಳನ್ನು ತಿದ್ದಿ ಸರಿಪಡಿಸುವ ಕಾಲ ಬರಲಿದೆಯೊ ಇಲ್ಲವೊ ಎಂದು ಅನೇಕರು ಕುತೂಹಲಪಡುತ್ತಾರೆ. ಇದು ಯೆಶಾಯನ ದಿನಗಳ ಪರಿಸ್ಥಿತಿ. ಆದರೆ ಈ ಕಾಲದ ಕುರಿತು ಯೆಶಾಯನು ಕೊಡುವ ವೃತ್ತಾಂತವು ಕೇವಲ ಹಳೆಯ ಇತಿಹಾಸವಲ್ಲ. ಅವನ ಮಾತುಗಳಲ್ಲಿ, ಯಾರು ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಂಡು ಆತನ ನಿಯಮಗಳನ್ನು ಅಸಡ್ಡೆಮಾಡುತ್ತಾರೊ ಅಂತಹವರಿಗೆ ಪ್ರವಾದನಾತ್ಮಕವಾದ ಎಚ್ಚರಿಕೆಗಳು ಅಡಕವಾಗಿವೆ. ಮತ್ತು ಯೆಶಾಯ 59ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಪ್ರೇರಿತ ಪ್ರವಾದನೆಯು, ಕಷ್ಟಕರ ಹಾಗೂ ಅಪಾಯಕರವಾದ ಸಮಯಗಳಲ್ಲಿ ಜೀವಿಸುತ್ತಿದ್ದರೂ ಯೆಹೋವನನ್ನು ಸೇವಿಸಲು ಪ್ರಯತ್ನಿಸುವವರೆಲ್ಲರಿಗೆ ಹೃದಯೋಲ್ಲಾಸದ ಪ್ರೋತ್ಸಾಹನೆಯನ್ನು ನೀಡುತ್ತದೆ.

ಸತ್ಯ ದೇವರಿಂದ ದೂರವಾಗಿರುವುದು

2, 3. ಯೆಹೋವನು ಯೆಹೂದವನ್ನು ಏಕೆ ರಕ್ಷಿಸುವುದಿಲ್ಲ?

2 ತುಸು ಊಹಿಸಿಕೊಳ್ಳಿ! ಯೆಹೋವನ ಒಡಂಬಡಿಕೆಯ ಜನರೇ ಧರ್ಮಭ್ರಷ್ಟರಾಗಿದ್ದಾರೆ! ತಮ್ಮ ನಿರ್ಮಾಣಿಕನಿಗೆ ಅವರು ಬೆನ್ನುಹಾಕಿ, ಆತನ ರಕ್ಷಣಾ ಹಸ್ತದಿಂದ ದೂರಸರಿದಿದ್ದಾರೆ. ಈ ಕಾರಣದಿಂದ ಅವರು ಕಠಿನ ಕ್ಷೋಭೆಯನ್ನು ಅನುಭವಿಸುತ್ತಿದ್ದಾರೆ. ತಮ್ಮ ಮೇಲೆ ಬಂದಿರುವ ಕಷ್ಟಕಾಲಗಳಿಗೆ ಅವರು ಯೆಹೋವನನ್ನು ಪ್ರಾಯಶಃ ದೂರುತ್ತಾರೊ? ಯೆಶಾಯನು ಅವರಿಗನ್ನುವುದು: “ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ. ಆದರೆ ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನ್ನು ಅಗಲಿಸುತ್ತಾ ಬಂದಿವೆ; ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ.”​—ಯೆಶಾಯ 59:1, 2.

3 ಆ ಮಾತುಗಳು ಯಥಾರ್ಥವೂ, ಸತ್ಯವೂ ಆಗಿವೆ. ಯೆಹೋವನು ಈಗಲೂ ರಕ್ಷಣೆಯ ದೇವರಾಗಿದ್ದಾನೆ. “ಪ್ರಾರ್ಥನೆಯನ್ನು ಕೇಳುವವ”ನೋಪಾದಿ ಆತನು ತನ್ನ ನಂಬಿಗಸ್ತ ಸೇವಕರ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ. (ಕೀರ್ತನೆ 65:2) ಆದರೆ ಆತನು ತಪ್ಪಿತಸ್ಥರನ್ನು ಆಶೀರ್ವದಿಸುವುದಿಲ್ಲ. ದೇವರಿಂದ ವಿಮುಖರಾಗಿರುವುದಕ್ಕೆ ಸ್ವತಃ ಆ ಜನರೇ ಜವಾಬ್ದಾರರು. ಆತನು ಅವರಿಂದ ಮುಖವನ್ನು ತಿರುಗಿಸಿಕೊಳ್ಳಲು ಅವರ ದುಷ್ಟತನವೇ ಕಾರಣವಾಗಿದೆ.

4. ಯೆಹೂದದ ಮೇಲೆ ಯಾವ ಆರೋಪಗಳನ್ನು ಹೊರಿಸಲಾಗಿದೆ?

4 ಇದರ ನಿಜವಾದ ಕಾರಣವು, ಯೆಹೂದದ ಭಯಂಕರ ದುಷ್ಟತ್ವದ ದಾಖಲೆಯೇ. ಅವರ ಮೇಲೆ ಹೊರಿಸಲ್ಪಟ್ಟಿರುವ ಕೆಲವು ಆರೋಪಗಳ ಪಟ್ಟಿಯನ್ನು ಯೆಶಾಯನು ಕೊಡುತ್ತಾನೆ: “ನಿಮ್ಮ ಕೈಗಳು ರಕ್ತದಿಂದ ಹೊಲಸಾಗಿವೆ, ನಿಮ್ಮ ಬೆರಳುಗಳು ಅಪರಾಧದಿಂದ ಅಶುದ್ಧವಾಗಿವೆ; ನಿಮ್ಮ ತುಟಿಗಳು ಸುಳ್ಳಾಡುತ್ತವೆ, ನಿಮ್ಮ ನಾಲಿಗೆಯು ಕೆಡುಕನ್ನು ನುಡಿಯುತ್ತದೆ.” (ಯೆಶಾಯ 59:3) ಜನರು ಸುಳ್ಳಾಡಿ ಅನೀತಿಯ ವಿಷಯಗಳನ್ನು ಮಾತಾಡುತ್ತಾರೆ. ‘ರಕ್ತದಿಂದ ಹೊಲಸಾಗಿರುವ ಕೈಗಳು,’ ಕೆಲವರು ಕೊಲೆಯನ್ನೂ ಮಾಡಿದ್ದಾರೆಂಬುದನ್ನು ಸೂಚಿಸುತ್ತದೆ. ಯಾರ ಆಜ್ಞೆಯು ನರಹತ್ಯೆಯನ್ನು ನಿಷೇಧಿಸುವುದಷ್ಟೇಯಲ್ಲ, “ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು” ಎಂದೂ ಹೇಳುತ್ತದೊ ಆ ದೇವರಿಗೆ ಇದು ಎಂತಹ ಅಗೌರವ! (ಯಾಜಕಕಾಂಡ 19:17) ಯೆಹೂದದ ನಿವಾಸಿಗಳ ಹತೋಟಿ ಮೀರಿದ ಪಾಪಕಾರ್ಯಗಳು ಮತ್ತು ಅದರ ಅನಿವಾರ್ಯ ಪ್ರತಿಫಲವು, ನಾವು ನಮ್ಮ ಪಾಪಪೂರ್ಣ ಆಲೋಚನೆಗಳು ಮತ್ತು ಅನಿಸಿಕೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬುದನ್ನು ಇಂದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಜ್ಞಾಪಕಹುಟ್ಟಿಸಬೇಕು. ಇಲ್ಲದಿರುವಲ್ಲಿ, ದೇವರಿಂದ ನಮ್ಮನ್ನು ಪ್ರತ್ಯೇಕಿಸುವ ದುಷ್ಕೃತ್ಯಗಳನ್ನು ನಡೆಸುವಂಥ ಹಂತವನ್ನು ನಾವು ತಲಪಬಲ್ಲೆವು.​—⁠ರೋಮಾಪುರ 12:9; ಗಲಾತ್ಯ 5:15; ಯಾಕೋಬ 1:​14, 15.

5. ಯೆಹೂದದ ಭ್ರಷ್ಟತೆ ಎಲ್ಲಿಯ ವರೆಗೆ ತಲಪಿದೆ?

5 ಪಾಪವೆಂಬ ರೋಗವು ಇಡೀ ಜನಾಂಗಕ್ಕೆ ಸೋಂಕಿದೆ. ಪ್ರವಾದನೆಯು ತಿಳಿಸುವುದು: [ಇವರಲ್ಲಿ] ಯಾರೂ ನ್ಯಾಯವಾಗಿ ನ್ಯಾಯಸ್ಥಾನಕ್ಕೆ ಹೋಗುವದಿಲ್ಲ, ಯಾರೂ ಸತ್ಯವಾಗಿ [“ನೀತಿಯಿಂದ,” NW] ವಾದಿಸುವದಿಲ್ಲ; ಇವರು ಶೂನ್ಯವಾಗಿರುವದನ್ನು ನಂಬಿಕೊಂಡು ಅಬದ್ಧವನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.” (ಯೆಶಾಯ 59:4) ನೀತಿಯನ್ನು ಮಾತಾಡುವವರೇ ಇಲ್ಲದೆ ಹೋಗಿದ್ದಾರೆ. ನ್ಯಾಯಸ್ಥಾನಗಳಲ್ಲಿಯೂ ಭರವಸಾರ್ಹರನ್ನಾಗಲಿ ನಂಬಿಗಸ್ತರನ್ನಾಗಲಿ ಕಂಡುಹಿಡಿಯುವುದು ಕಷ್ಟ. ಯೆಹೂದವೆಂಬಾಕೆಯು ಯೆಹೋವನಿಗೆ ಬೆನ್ನುಹಾಕಿ, ಅನ್ಯಜನಾಂಗಗಳೊಂದಿಗೆ ಮತ್ತು ನಿರ್ಜೀವ ವಿಗ್ರಹಗಳೊಂದಿಗೂ ಒಪ್ಪಂದವನ್ನು ಮಾಡಿಕೊಂಡಿದ್ದಾಳೆ. ಇವೆಲ್ಲವೂ “ಶೂನ್ಯ,” ಅಂದರೆ ಬೆಲೆಯೇ ಇಲ್ಲದವುಗಳಾಗಿವೆ. (ಯೆಶಾಯ 40:​17, 23; 41:29) ಇದರ ಪರಿಣಾಮವಾಗಿ, ಮಾತುಗಳು ಧಾರಾಳವಾಗಿರುವುದಾದರೂ ಅವೆಲ್ಲವೂ ನಿಷ್ಪ್ರಯೋಜಕ. ಯೋಜನೆಗಳು ಕಲ್ಪಿಸಲ್ಪಟ್ಟರೂ ಅವುಗಳಿಂದಾಗುವ ಫಲವು ತೊಂದರೆ ಮತ್ತು ವೇದನೆಯೇ.

6. ಕ್ರೈಸ್ತಪ್ರಪಂಚದ ದಾಖಲೆಯು ಯೆಹೂದದ ದಾಖಲೆಯಂತೆಯೇ ಇರುವುದು ಹೇಗೆ?

6 ಯೆಹೂದದ ಅನೀತಿ ಮತ್ತು ಹಿಂಸಾಚಾರದ ಗಮನಾರ್ಹವಾದ ಸಮಾನ ರೂಪವು ಕ್ರೈಸ್ತಪ್ರಪಂಚದಲ್ಲಿದೆ. (294ನೆಯ ಪುಟದಲ್ಲಿರುವ “ಧರ್ಮಭ್ರಷ್ಟ ಯೆರೂಸಲೇಮ್‌​—⁠ಕ್ರೈಸ್ತಪ್ರಪಂಚದ ಸಮಾನ ರೂಪ” ಎಂಬ ರೇಖಾಚೌಕವನ್ನು ನೋಡಿ.) ಕ್ರೈಸ್ತರೆನಿಸಿಕೊಂಡಿರುವ ಜನಾಂಗಗಳನ್ನೊಳಗೊಂಡ ಎರಡು ಕ್ರೂರ ಲೋಕ ಯುದ್ಧಗಳು ನಡೆದಿವೆ. ಈ ವರೆಗೂ ಕ್ರೈಸ್ತಪ್ರಪಂಚದ ಧಾರ್ಮಿಕ ವ್ಯವಸ್ಥೆಯು, ತನ್ನ ಸ್ವಂತ ಸದಸ್ಯರು ನಡೆಸುವ ಕುಲಸಂಬಂಧಿತ ಹತ್ಯೆಗಳು ಮತ್ತು ಅಂತರ್‌ಗೋತ್ರ ಸಂಹಾರವನ್ನು ನಿಲ್ಲಿಸಲು ಶಕ್ತವಾಗಿಲ್ಲ. (2 ತಿಮೊಥೆಯ 3:⁠5) ಯೇಸು ತನ್ನ ಹಿಂಬಾಲಕರಿಗೆ ದೇವರ ರಾಜ್ಯದಲ್ಲಿ ಭರವಸೆಯಿಡಬೇಕೆಂದು ಕಲಿಸಿದರೂ, ಕ್ರೈಸ್ತಪ್ರಪಂಚದ ಜನಾಂಗಗಳಾದರೊ ಭದ್ರತೆಗಾಗಿ ಮಿಲಿಟರಿ ಶಸ್ತ್ರಾಗಾರದಲ್ಲಿ ಮತ್ತು ರಾಜಕೀಯ ಮೈತ್ರಿಗಳಲ್ಲಿ ಭರವಸೆಯಿಡುತ್ತವೆ. (ಮತ್ತಾಯ 6:10) ಹೌದು, ಲೋಕದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ತಯಾರಕರು ಕ್ರೈಸ್ತಪ್ರಪಂಚದ ಜನಾಂಗಗಳಲ್ಲಿದ್ದಾರೆ! ಹೌದು, ಭದ್ರ ಭವಿಷ್ಯಕ್ಕಾಗಿ ಕ್ರೈಸ್ತಪ್ರಪಂಚವು ಮಾನವ ಪ್ರಯತ್ನಗಳು ಮತ್ತು ಸಂಸ್ಥೆಗಳಲ್ಲಿ ಭರವಸೆಯಿಡುವಾಗ, ಆಕೆಯೂ “ಶೂನ್ಯ”ದಲ್ಲಿ ಭರವಸೆಯಿಡುತ್ತಾಳೆ.

ಕಹಿಯಾದ ಫಲವನ್ನು ಕೊಯ್ಯುವುದು

7. ಯೆಹೂದದ ಯೋಜನೆಗಳು ಹಾನಿಕರ ವಿಷಯಗಳನ್ನು ಮಾತ್ರ ಫಲಿಸುವುದೇಕೆ?

7 ವಿಗ್ರಹಾರಾಧನೆಯೂ ಅಪ್ರಾಮಾಣಿಕತೆಯೂ ಆರೋಗ್ಯಕರವಾದ ಸಮಾಜವೊಂದನ್ನು ರಚಿಸಲಾರದು. ಅಂತಹ ಕೆಲಸಗಳನ್ನು ಅವಲಂಬಿಸಿದ್ದರಿಂದ, ಅಪನಂಬಿಗಸ್ತ ಯೆಹೂದ್ಯರು ಸ್ವತಃ ಬಿತ್ತಿರುವ ತೊಂದರೆಯನ್ನು ಈಗ ಕೊಯ್ಯುತ್ತಿದ್ದಾರೆ. ನಾವು ಓದುವುದು: “ಹಾವಿನಂತೆ [ಕೇಡಿನ] ಮೊಟ್ಟೆಗಳನ್ನು ಮರಿಮಾಡುತ್ತಾರೆ, ಜಾಡರ ಹುಳದಂತೆ ಬಲೆಯನ್ನು ನೇಯುತ್ತಾರೆ; ಆ ಮೊಟ್ಟೆಗಳನ್ನು ತಿನ್ನುವವನಿಗೆ ಮರಣವಾಗುವದು, ಒಡೆದುಬಿಡುವವನಿಗೆ ವಿಷದ ಮರಿ ಹೊರಡುವದು.” (ಯೆಶಾಯ 59:5) ಯೆಹೂದದ ಯೋಜನೆಗಳು, ಆರಂಭದಿಂದ ಹಿಡಿದು ಅವು ಕಾರ್ಯರೂಪಕ್ಕೆ ಹಾಕಲ್ಪಡುವ ವರೆಗೂ ಸ್ಥಿರವಾದದ್ದೇನನ್ನೂ ಉತ್ಪಾದಿಸುವುದಿಲ್ಲ. ವಿಷದ ಹಾವಿನ ಮೊಟ್ಟೆ ವಿಷದ ಹಾವುಗಳನ್ನು ಮಾತ್ರ ಹುಟ್ಟಿಸುವಂತೆ, ಅವರ ತಪ್ಪು ಯೋಚನೆಗಳು ಕೆಟ್ಟದ್ದನ್ನು ಮಾತ್ರ ಉಂಟುಮಾಡುತ್ತವೆ. ಆಗ ಆ ಜನಾಂಗವು ಕಷ್ಟಾನುಭವಿಸುತ್ತದೆ.

8. ಯೆಹೂದದ ಯೋಚನಾ ರೀತಿಯು ದೋಷಪೂರ್ಣವಾಗಿದೆ ಎಂಬುದನ್ನು ಯಾವುದು ತೋರಿಸುತ್ತದೆ?

8 ಯೆಹೂದದ ಕೆಲವು ನಿವಾಸಿಗಳು ತಮ್ಮನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಹಿಂಸಾಕೃತ್ಯಗಳನ್ನು ನಡೆಸಬಹುದಾದರೂ ಅವರು ವಿಫಲಗೊಳ್ಳುವರು. ಏಕೆಂದರೆ, ಕೆಟ್ಟ ಹವಾಮಾನದ ಸಮಯದಲ್ಲಿ ಜೇಡರ ಬಲೆಯು ಹೇಗೆ ಬಟ್ಟೆಗೆ ಬದಲಿಯಾಗಿರಸಾಧ್ಯವಿಲ್ಲವೊ ಹಾಗೆಯೇ ಯೆಹೋವನ ಮೇಲೆ ಭರವಸೆ ಮತ್ತು ನೀತಿಕ್ರಿಯೆಗಳಿಗೆ ಬದಲಿಯಾಗಿ ಶಾರೀರಿಕ ಶಕ್ತಿಯು ಸಂರಕ್ಷಣೆಯನ್ನು ಒದಗಿಸಲಾರದು. ಯೆಶಾಯನು ಪ್ರಕಟಿಸುವುದು: “ಇವರ ಬಲೆಯ ದಾರವು ಬಟ್ಟೆಯಾಗದು, ಇವರು ನೇಯ್ದದ್ದು ಹೊದಿಕೆಯಾಗದು; ಇವರ ಕಾರ್ಯಗಳು ಅಧರ್ಮಕಾರ್ಯಗಳು, ಇವರ ಕೈಯಲ್ಲಿ ಬಲಾತ್ಕಾರವೇ. ಇವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುತ್ತವೆ, ಇವರು ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ, ಇವರ ಯೋಚನೆಗಳು ಅಧರ್ಮದ ಯೋಚನೆಗಳೇ, ಇವರು ಹೋದ ದಾರಿಗಳಲ್ಲಿ ಭಂಗವೂ ನಾಶನವೂ ಉಂಟಾಗುತ್ತವೆ.” (ಯೆಶಾಯ 59:6, 7) ಯೆಹೂದದ ಆಲೋಚನಾ ರೀತಿಯಲ್ಲಿ ದೋಷವಿದೆ. ತನ್ನ ಸಮಸ್ಯೆಗಳನ್ನು ಬಗೆಹರಿಸಲು ಹಿಂಸಾಚಾರಕ್ಕೆ ಕೈಹಾಕುವ ಮೂಲಕ ಆಕೆ ದೈವಿಕವಲ್ಲದ ಮನೋಭಾವವನ್ನು ಪ್ರದರ್ಶಿಸುತ್ತಾಳೆ. ಆಕೆಯ ಬಲಿಪಶುಗಳಲ್ಲಿ ಅನೇಕರು ಅಮಾಯಕರು ಮತ್ತು ಕೆಲವರು ದೇವರ ನಿಜ ಸೇವಕರಾಗಿದ್ದಾರೆಂಬುದರ ಬಗ್ಗೆ ಆಕೆಗೆ ಚಿಂತೆಯೇ ಇಲ್ಲ.

9. ನಿಜ ಶಾಂತಿಯು ಕ್ರೈಸ್ತಪ್ರಪಂಚದ ಮುಖಂಡರಿಗೆ ದೊರೆಯದೇಕೆ?

9 ಈ ಪ್ರೇರಿತ ಮಾತುಗಳು ಕ್ರೈಸ್ತಪ್ರಪಂಚದ ರಕ್ತಮಯ ದಾಖಲೆಯನ್ನು ನಮಗೆ ಜ್ಞಾಪಕಹುಟ್ಟಿಸುತ್ತವೆ. ಆಕೆಯು ಭೀಕರವಾದ ರೀತಿಯಲ್ಲಿ ಕ್ರೈಸ್ತತ್ವವನ್ನು ತಪ್ಪಾಗಿ ಪ್ರತಿನಿಧಿಸಿರುವುದಕ್ಕಾಗಿ ಯೆಹೋವನು ಆಕೆಯಿಂದ ಲೆಕ್ಕವನ್ನು ಕೇಳುವುದು ಖಂಡಿತ! ಯೆಶಾಯನ ದಿನಗಳ ಯೆಹೂದ್ಯರಂತೆ ಕ್ರೈಸ್ತಪ್ರಪಂಚವು ನೈತಿಕವಾಗಿ ವಕ್ರವಾಗಿರುವ ಮಾರ್ಗವನ್ನು ಹಿಡಿದುಕೊಂಡಿದೆ. ಏಕೆಂದರೆ ಆಕೆಯ ಮುಖಂಡರು ಅದೊಂದೇ ಪ್ರಾಯೋಗಿಕ ಮಾರ್ಗವೆಂದು ನಂಬಿದ್ದಾರೆ. ಅವರು ಶಾಂತಿಯ ಕುರಿತಾಗಿ ಮಾತಾಡಿ, ಅದೇ ಸಮಯದಲ್ಲಿ ಅನ್ಯಾಯದಿಂದ ವರ್ತಿಸುತ್ತಾರೆ. ಎಂತಹ ಮೋಸಗಾರಿಕೆ! ಕ್ರೈಸ್ತಪ್ರಪಂಚದ ನಾಯಕರು ಈ ತಂತ್ರವನ್ನು ಬಳಸುತ್ತಾ ಇರುವ ಕಾರಣ, ಅವರಿಗೆ ನಿಜ ಶಾಂತಿ ದೊರೆಯದು. ಪ್ರವಾದನೆಯು ಹೇಳುವಂತೆಯೇ ಅದಿರುವುದು: “ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ, ತಮ್ಮ ಮಾರ್ಗಗಳನ್ನು ವಕ್ರಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವ ಯಾವನೂ ಸಮಾಧಾನವನ್ನರಿಯನು.”​—ಯೆಶಾಯ 59:⁠8.

ಆತ್ಮಿಕ ಅಂಧಕಾರದಲ್ಲಿ ಅಲೆದಾಡುತ್ತಿರುವುದು

10. ಯೆಶಾಯನು ಯೆಹೂದದ ಪರವಾಗಿ ಯಾವ ಪಾಪ ಅರಿಕೆಮಾಡುತ್ತಾನೆ?

10 ಯೆಹೋವನು ಯೆಹೂದದ ಮೋಸಕರ ಹಾಕೂ ನಾಶಕರವಾದ ಮಾರ್ಗಗಳನ್ನು ಆಶೀರ್ವದಿಸಲಾರನು. (ಕೀರ್ತನೆ 11:⁠5) ಆದಕಾರಣ, ಇಡೀ ಜನಾಂಗದ ಪರವಾಗಿ ಮಾತಾಡುತ್ತ ಯೆಶಾಯನು ಯೆಹೂದದ ಪಾಪ ಅರಿಕೆಮಾಡುತ್ತಾನೆ: [ಯೆಹೋವನ] ನ್ಯಾಯನಿರ್ಣಯವು ನಮಗೆ ದೂರವಾಗಿದೆ. [ಆತನ] ರಕ್ಷಣಧರ್ಮದ ಕಾರ್ಯವು ನಮಗೆ ಸಂಧಿಸುವದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ. ಕುರುಡರಂತೆ ಗೋಡೆಯನ್ನು ತಡವರಿಸುತ್ತೇವೆ, ಹೌದು, ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ, ಮಧ್ಯಾಹ್ನದಲ್ಲಿ ಸಂಜೆಯಂತೆ ಎಡವುತ್ತೇವೆ, ಪುಷ್ಟರ ನಡುವೆ ಸತ್ತವರ ಹಾಗಿದ್ದೇವೆ. ನಾವೆಲ್ಲರೂ ಕರಡಿಗಳಂತೆ ಗುರುಗುಟ್ಟುತ್ತೇವೆ, ಪಾರಿವಾಳಗಳಂತೆ ಮೂಲುಗುತ್ತಲೇ ಇದ್ದೇವೆ.” (ಯೆಶಾಯ 59:​9-11ಎ) ಯೆಹೂದ್ಯರು ದೇವರ ವಾಕ್ಯವನ್ನು ತಮ್ಮ ಪಾದಗಳಿಗೆ ದೀಪವೂ ದಾರಿಗೆ ಬೆಳಕೂ ಆಗುವಂತೆ ಬಿಟ್ಟಿರುವುದಿಲ್ಲ. (ಕೀರ್ತನೆ 119:105) ಇದರ ಪರಿಣಾಮವಾಗಿ, ಎಲ್ಲವೂ ಮೊಬ್ಬಾಗಿ ಕಾಣಿಸುತ್ತದೆ. ನಡುಮಧ್ಯಾಹ್ನದಲ್ಲಿಯೂ ಅವರು ಅದು ರಾತ್ರಿಯೊ ಎಂಬಂತೆ ತಡವರಿಸುತ್ತ ಹೋಗುತ್ತಾರೆ. ಅವರು ಸತ್ತುಹೋದವರಂತಿದ್ದಾರೆ. ತಮಗೆ ಉಪಶಮನ ದೊರೆಯಬೇಕೆಂದು ಆಶಿಸುತ್ತ ಅವರು ಹಸಿದಿರುವ ಅಥವಾ ಗಾಯಗೊಂಡಿರುವ ಕರಡಿಗಳಂತೆ ಗುರುಗುಟ್ಟುತ್ತಾರೆ. ಕೆಲವರು ಒಂಟಿ ಪಾರಿವಾಳಗಳಂತೆ ವಿಷಾದಕರವಾಗಿ ಮೂಲುಗುತ್ತಾರೆ.

11. ನ್ಯಾಯ ಮತ್ತು ರಕ್ಷಣೆಗಾಗಿರುವ ಯೆಹೂದದ ನಿರೀಕ್ಷೆಗಳು ವ್ಯರ್ಥವೇಕೆ?

11 ಯೆಹೂದದ ಶೋಚನೀಯ ಸ್ಥಿತಿಗೆ ಕಾರಣ, ದೇವರ ವಿರುದ್ಧವಾಗಿ ಅವರೆಬ್ಬಿಸಿರುವ ದಂಗೆಯೇ ಎಂಬುದು ಯೆಶಾಯನಿಗೆ ಚೆನ್ನಾಗಿ ತಿಳಿದಿದೆ. ಅವನು ಹೇಳುವುದು: “ನಾವು [ಯೆಹೋವನ] ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ಸಿಕ್ಕದು, [ಆತನ] ರಕ್ಷಣಕಾರ್ಯವನ್ನು ನಿರೀಕ್ಷಿಸಿದರೂ ಅದು ನಮಗೆ ದೂರ. ಏಕೆಂದರೆ ನಮ್ಮ ತಪ್ಪುಗಳು ನಿನ್ನ ದೃಷ್ಟಿಗೆ ಹೆಚ್ಚಾಗಿ ಬಿದ್ದಿವೆ, ನಮ್ಮ ಪಾಪಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ತಪ್ಪುಗಳು ನಮ್ಮ ಸಂಗಡಲೇ ಇವೆ, ನಮ್ಮ ಅಪರಾಧಗಳನ್ನು ನಾವೇ ಬಲ್ಲೆವು. ಹೌದು, ಯೆಹೋವನಿಗೆ ತಪ್ಪಿ ನಡೆದು ಆತನನ್ನು ಅಲ್ಲಗಳೆದಿದ್ದೇವೆ, ನಮ್ಮ ದೇವರ ಅನುಸರಣೆಯನ್ನು ಬಿಟ್ಟು ತಿರುಗಿಕೊಂಡಿದ್ದೇವೆ, ಅನ್ಯಾಯವನ್ನೂ ದ್ರೋಹವನ್ನೂ ನುಡಿದಿದ್ದೇವೆ, ಹೃದಯಪೂರ್ವಕವಾಗಿ ಸುಳ್ಳುಮಾತುಗಳನ್ನು ಕಲ್ಪಿಸಿ ಆಡಿದ್ದೇವೆ.” (ಯೆಶಾಯ 59:11ಬಿ-13) ಯೆಹೂದದ ನಿವಾಸಿಗಳು ಪಶ್ಚಾತ್ತಾಪಪಡದೆ ಇರುವ ಕಾರಣ ಅವರಿಗೆ ಪಾಪಕ್ಷಮೆಯಾಗುವುದಿಲ್ಲ. ಜನರು ಯೆಹೋವನನ್ನು ತ್ಯಜಿಸಿರುವ ಕಾರಣ ನ್ಯಾಯವು ಆ ದೇಶವನ್ನು ತ್ಯಜಿಸಿದೆ. ಅವರು ಪ್ರತಿಯೊಂದು ವಿಧದಲ್ಲಿ ತಮ್ಮನ್ನು ಸುಳ್ಳುಗಾರರಾಗಿ ತೋರಿಸಿಕೊಟ್ಟಿದ್ದಾರೆ, ಮತ್ತು ತಮ್ಮ ಸಹೋದರರಿಗೂ ಅನ್ಯಾಯವನ್ನು ಮಾಡಿದ್ದಾರೆ. ಇಂದಿನ ಕ್ರೈಸ್ತಪ್ರಪಂಚಕ್ಕೂ ಇವರಿಗೂ ಎಷ್ಟು ಹೋಲಿಕೆಯಿದೆ! ಅನೇಕರು ನ್ಯಾಯವನ್ನು ಅಸಡ್ಡೆಮಾಡುವುದಲ್ಲದೆ, ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುವ ಯೆಹೋವನ ನಂಬಿಗಸ್ತ ಸಾಕ್ಷಿಗಳನ್ನು ಕ್ರಿಯಾಶೀಲರಾಗಿ ಹಿಂಸಿಸುತ್ತಾರೆ ಕೂಡ.

ಯೆಹೋವನು ನ್ಯಾಯತೀರಿಸುತ್ತಾನೆ

12. ಯೆಹೂದದಲ್ಲಿ ನ್ಯಾಯತೀರಿಸುವ ಜವಾಬ್ದಾರಿಯುಳ್ಳವರ ಮನೋಭಾವವೇನಾಗಿದೆ?

12 ಯೆಹೂದದಲ್ಲಿ ನ್ಯಾಯ, ನೀತಿ ಅಥವಾ ಸತ್ಯವು ಇಲ್ಲದಿರುವಂತೆ ತೋರುತ್ತದೆ. “ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ, ಧರ್ಮವು ದೂರದಲ್ಲಿ ನಿಂತಿದೆ, ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ, ಯಥಾರ್ಥವು ಪ್ರವೇಶಿಸಲಾರದು.” (ಯೆಶಾಯ 59:14) ಯೆಹೂದದ ಊರುಬಾಗಲುಗಳ ಹಿಂದೆ ಹಿರಿಯರು ಮೊಕದ್ದಮೆಗಳನ್ನು ಕೇಳಲು ಕುಳಿತುಕೊಳ್ಳುವ ಸಾರ್ವಜನಿಕ ಕಟ್ಟೆಗಳಿವೆ. (ರೂತಳು 4:​1, 2, 11) ಅಂತಹ ಪುರುಷರು ನೀತಿಯಿಂದ ವಿಚಾರಣೆ ನಡೆಸಿ, ನ್ಯಾಯವನ್ನು ಬೆನ್ನಟ್ಟಬೇಕಾಗಿತ್ತು ಮತ್ತು ಅವರು ಲಂಚವನ್ನು ತೆಗೆದುಕೊಳ್ಳಬಾರದಿತ್ತು. (ಧರ್ಮೋಪದೇಶಕಾಂಡ 16:​18-20) ಇದಕ್ಕೆ ಬದಲಾಗಿ ಅವರು ತಮ್ಮ ಸ್ವಂತ ಸ್ವಾರ್ಥಪರ ವಿಚಾರಗಳ ಮೇಲೆ ನ್ಯಾಯತೀರಿಸುತ್ತಿದ್ದಾರೆ. ಇನ್ನೂ ಕೆಟ್ಟ ಸಂಗತಿಯೇನೆಂದರೆ, ಯಾವನಾದರೂ ಯಥಾರ್ಥವಾಗಿ ಒಳ್ಳೇದನ್ನು ಮಾಡಲು ಪ್ರಯತ್ನಿಸುವವನಾಗಿದ್ದರೆ, ಅಂಥವನನ್ನು ಅವರು ಸುಲಭವಾದ ಬಲಿಪಶುವಾಗಿ ಪರಿಗಣಿಸುತ್ತಿದ್ದರು. ನಾವು ಓದುವುದು: “ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಸೂರೆಯಾಗುತ್ತಾನೆ.”​—ಯೆಶಾಯ 59:15.

13. ಯೆಹೂದದ ನ್ಯಾಯಾಧಿಪತಿಗಳು ಕರ್ತವ್ಯಲೋಪವನ್ನು ತೋರಿಸುತ್ತಿರುವುದರಿಂದ ಯೆಹೋವನು ಏನು ಮಾಡಲಿದ್ದಾನೆ?

13 ನೈತಿಕ ಪಥಭ್ರಷ್ಟತೆಯ ವಿರುದ್ಧ ಮಾತಾಡಲು ತಪ್ಪುವವರು, ದೇವರು ಕುರುಡನು, ಬುದ್ಧಿಗೇಡಿ ಅಥವಾ ಬಲಹೀನನಾಗಿರುವುದಿಲ್ಲವೆಂಬುದನ್ನು ಮರೆತುಬಿಡುತ್ತಾರೆ. ಯೆಶಾಯನು ಬರೆಯುವುದು: “ಯೆಹೋವನು ಇದನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು; ಉದ್ಧಾರಕನಾದ ಯಾವ ಪುರುಷನೂ ಇಲ್ಲವೆಂದು ಕಂಡು ಸ್ತಬ್ಧನಾದನು; ಆಗ ಆತನ ಸ್ವಹಸ್ತವೇ ಆತನಿಗೆ ರಕ್ಷಣಸಾಧನವಾಯಿತು, ಆತನ ಧರ್ಮವೇ ಆತನಿಗೆ ಆಧಾರವಾಯಿತು.” (ಯೆಶಾಯ 59:⁠16) ಹೀಗೆ, ನೇಮಿತ ನ್ಯಾಯಾಧಿಪತಿಗಳು ಕರ್ತವ್ಯಲೋಪವನ್ನು ತೋರಿಸುತ್ತಿರುವುದರಿಂದ, ಯೆಹೋವನೇ ಆ ವಿಷಯಕ್ಕೆ ಕೈಹಾಕಲಿದ್ದಾನೆ. ಹೀಗೆ ಮಾಡುವಾಗ ಆತನು ನೀತಿಯಿಂದ ಮತ್ತು ಶಕ್ತಿಯಿಂದ ಕ್ರಿಯೆಗೈಯುವನು.

14. (ಎ) ಇಂದು ಅನೇಕರಿಗೆ ಯಾವ ಮನೋಭಾವವಿದೆ? (ಬಿ) ಯೆಹೋವನು ಕ್ರಿಯೆಗೈಯಲು ತನ್ನನ್ನು ಹೇಗೆ ಸಿದ್ಧಪಡಿಸಿಕೊಳ್ಳುತ್ತಾನೆ?

14 ಅದೇ ರೀತಿಯ ಪರಿಸ್ಥಿತಿ ಇಂದೂ ಇದೆ. ಅನೇಕರು ‘ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟಿರುವ’ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. (ಎಫೆಸ 4:19) ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕಲು ಯೆಹೋವನು ಹಸ್ತಕ್ಷೇಪ ಮಾಡುವನೆಂಬುದನ್ನು ನಂಬುವವರೇ ಕಡಿಮೆ. ಆದರೆ ಯೆಹೋವನು ಮಾನವ ವ್ಯವಹಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾನೆಂದು ಯೆಶಾಯನ ಪ್ರವಾದನೆಯು ತೋರಿಸುತ್ತದೆ. ಆತನು ನ್ಯಾಯತೀರ್ಪನ್ನು ಮಾಡಿ, ತನ್ನದೇ ಆದ ಸಮಯದಲ್ಲಿ ಆ ತೀರ್ಪಿಗನುಸಾರ ಕ್ರಮ ಕೈಕೊಳ್ಳುತ್ತಾನೆ. ಆದರೆ ಆತನ ತೀರ್ಪುಗಳು ನ್ಯಾಯವಾದವುಗಳೊ? ಹೌದೆಂದು ಯೆಶಾಯನು ತೋರಿಸುತ್ತಾನೆ. ಯೆಹೂದ ಜನಾಂಗದ ವಿಷಯದಲ್ಲಿ ಅವನು ಬರೆಯುವುದು: “ಧರ್ಮವನ್ನು ವಜ್ರಕವಚವನ್ನಾಗಿ ತೊಟ್ಟು ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡನು; ರೋಷವೆಂಬ ವಸ್ತ್ರವನ್ನು ಉಡುಪುಮಾಡಿಕೊಂಡು ಆಗ್ರಹವನ್ನು ನಿಲುವಂಗಿಯನ್ನಾಗಿ ಹಾಕಿಕೊಂಡನು.” (ಯೆಶಾಯ 59:17) ಈ ಪ್ರವಾದನ ಮಾತುಗಳು ಯೆಹೋವನನ್ನು, ಯುದ್ಧಕ್ಕೆ ಸಿದ್ಧನಾಗುತ್ತಿರುವ ಒಬ್ಬ ಯೋಧನಾಗಿ ಚಿತ್ರಿಸುತ್ತವೆ. ತನ್ನ ಆ ಉದ್ದೇಶವನ್ನು ಯಶಸ್ವಿಕರವಾಗಿ ಪೂರ್ಣಗೊಳಿಸುವ ದೃಢನಿರ್ಧಾರವು ಆತನಿಗಿದೆ. ತನ್ನ ನೀತಿಯು ಪರಮಶ್ರೇಷ್ಠವಾದದ್ದು ಮತ್ತು ಟೀಕೆಗೆ ಆಸ್ಪದವಿಲ್ಲದ್ದು ಎಂಬ ಖಾತ್ರಿ ಆತನಿಗಿದೆ. ಮತ್ತು ತನ್ನ ನ್ಯಾಯತೀರ್ಪಿನ ಕೃತ್ಯಗಳ ವಿಷಯದಲ್ಲಿ ಆತನು ನಿರ್ಭೀತಿಯಿಂದ ಹುರುಪುಳ್ಳವನಾಗಿರುವನು. ನೀತಿಯು ವಿಜಯಿಯಾಗುವುದೆಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ.

15. (ಎ) ಯೆಹೋವನು ನ್ಯಾಯತೀರ್ಪನ್ನು ವಿಧಿಸುವಾಗ ಸತ್ಯ ಕ್ರೈಸ್ತರು ಹೇಗೆ ನಡೆದುಕೊಳ್ಳುವರು? (ಬಿ) ಯೆಹೋವನ ನ್ಯಾಯತೀರ್ಪುಗಳ ಕುರಿತು ಏನು ಹೇಳಸಾಧ್ಯವಿದೆ?

15 ಇಂದು ಕೆಲವು ದೇಶಗಳಲ್ಲಿ ಸತ್ಯದ ವಿರೋಧಿಗಳು, ಸುಳ್ಳಾದ ಮತ್ತು ಹೆಸರು ಕೆಡಿಸುವಂಥ ಅಪಪ್ರಚಾರದ ಮೂಲಕ ಯೆಹೋವನ ಸೇವಕರ ಕೆಲಸವನ್ನು ತಡೆಯಲು ಪ್ರಯತ್ನಿಸುತ್ತಾರೆ. ಆಗ ಸತ್ಯ ಕ್ರೈಸ್ತರು ಸತ್ಯದ ಪರವಾಗಿ ಎದ್ದುನಿಂತು ಹೋರಾಡಲು ಹಿಂಜರಿಯುವುದಿಲ್ಲವಾದರೂ, ವೈಯಕ್ತಿಕವಾದ ರೀತಿಯಲ್ಲಿ ಸೇಡನ್ನು ತೀರಿಸಿಕೊಳ್ಳಲು ಅವರು ಎಂದಿಗೂ ಪ್ರಯತ್ನಿಸುವುದಿಲ್ಲ. (ರೋಮಾಪುರ 12:19) ಯೆಹೋವನು ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಲೆಕ್ಕವನ್ನು ತೀರಿಸುವಾಗಲೂ, ಭೂಮಿಯಲ್ಲಿರುವ ಆತನ ಆರಾಧಕರು ಆಕೆಯ ನಾಶನದಲ್ಲಿ ಭಾಗವಹಿಸರು. ಸೇಡು ತೀರಿಸುವ ಕೆಲಸವು ಯೆಹೋವನಿಗೆ ಸೇರಿದ್ದಾಗಿದೆಯೆಂದೂ ಆ ಸಮಯವು ಬರುವಾಗ ಆತನು ತಕ್ಕ ಕ್ರಮವನ್ನು ಕೈಕೊಳ್ಳುವನೆಂದೂ ಅವರಿಗೆ ತಿಳಿದಿದೆ. ಪ್ರವಾದನೆಯು ನಮಗೆ ಆಶ್ವಾಸನೆ ನೀಡುವುದು: “ತನ್ನ ವಿರೋಧಿಗಳಲ್ಲಿಟ್ಟ ಕ್ರೋಧವನ್ನು ಈಡೇರಿಸಿ ತನ್ನ ಶತ್ರುಗಳಿಗೆ ದಂಡನೆಯನ್ನು ವಿಧಿಸಿ ಅವರವರ ಕೃತ್ಯಗಳಿಗೆ ತಕ್ಕಂತೆ ಮುಯ್ಯಿತೀರಿಸುವನು; ಕರಾವಳಿಯವರಿಗೂ [“ದ್ವೀಪಗಳಿಗೂ,” NW] ಪ್ರತಿಕ್ರಿಯೆಮಾಡುವನು.” (ಯೆಶಾಯ 59:18) ಯೆಶಾಯನ ದಿನಗಳಂತೆ, ಯೆಹೋವನ ನ್ಯಾಯತೀರ್ಪುಗಳು ನ್ಯಾಯವಾಗಿರುವವು ಮಾತ್ರವಲ್ಲ, ಅವು ಸಮಗ್ರವೂ ಆಗಿರುವವು. ಅವು “ದ್ವೀಪಗಳಿಗೂ” ಅಂದರೆ ದೂರ ದೂರದ ಪ್ರದೇಶಗಳಿಗೂ ತಲಪುವವು. ಯಾವ ವ್ಯಕ್ತಿಯೂ ಯೆಹೋವನ ನ್ಯಾಯತೀರ್ಪಿನ ಕೃತ್ಯಗಳು ತಲಪದಿರುವಷ್ಟು ದೂರವಿರಲಾರನು.

16. ಯೆಹೋವನು ನ್ಯಾಯತೀರಿಸುವಾಗ ಯಾರು ಬದುಕಿ ಉಳಿಯುವರು, ಮತ್ತು ತಮ್ಮ ಬದುಕಿ ಉಳಿಯುವಿಕೆಯಿಂದ ಅವರು ಯಾವ ಪಾಠವನ್ನು ಕಲಿಯುವರು?

16 ಸರಿಯಾದದ್ದನ್ನು ಮಾಡಲು ಶ್ರಮಪಡುವವರನ್ನು ಯೆಹೋವನು ನೀತಿವಂತರೆಂದು ತೀರ್ಪು ಕೊಡುವನು. ಅಂಥವರು ದಿಗಂತದಿಂದ ದಿಗಂತದ ವರೆಗೆ, ಅಂದರೆ ಭೂಮಿಯಾದ್ಯಂತ ಬದುಕಿ ಉಳಿಯುವರೆಂದು ಯೆಶಾಯನು ಮುಂತಿಳಿಸುತ್ತಾನೆ. ಮತ್ತು ಅವರು ಯೆಹೋವನಿಂದ ಸಂರಕ್ಷಣೆಯನ್ನು ಅನುಭವಿಸುವಾಗ, ಆತನಿಗಾಗಿ ಅವರಿಗಿರುವ ಪೂಜ್ಯಭಾವನೆ ಮತ್ತು ಗೌರವವು ಇನ್ನೂ ಹೆಚ್ಚು ಬಲಗೊಳ್ಳುವುದು. (ಮಲಾಕಿಯ 1:11) ನಾವು ಓದುವುದು: “ಹೀಗಿರಲು ಪಡುವಣವರು ಯೆಹೋವನ ನಾಮಕ್ಕೆ ಹೆದರುವರು, ಮೂಡಣವರು ಆತನ ಮಹಿಮೆಗೆ ಅಂಜುವರು; ಬಿರುಗಾಳಿಯಿಂದ ಹೊಡೆಯಲ್ಪಟ್ಟು ಇಕ್ಕಟ್ಟಿನಲ್ಲಿ ಹರಿಯುವ ತೊರೆಯ ಹಾಗೆ ಆತನು ರಭಸದಿಂದ ಬರುವನಷ್ಟೆ.” (ಯೆಶಾಯ 59:19) ಬಲವಾದ ಬಿರುಗಾಳಿಯೊಂದು ಅದರ ಮುಂದಿನಿಂದ ನಾಶಕಾರಕವಾದ ನೀರಿನ ಗೋಡೆಯೊಂದನ್ನು ದೂಡಿಕೊಂಡು, ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆಯೇ, ಯೆಹೋವನ ಆತ್ಮವು ಆತನ ಚಿತ್ತವು ನೆರವೇರುವುದಕ್ಕೆ ಅಡ್ಡಬರುವ ಸಕಲ ತಡೆಗಳನ್ನೂ ನಿವಾರಿಸುವುದು. ಆತನ ಆತ್ಮವು ಮನುಷ್ಯನಲ್ಲಿರುವ ಯಾವುದೇ ಶಕ್ತಿಗಿಂತಲೂ ಹೆಚ್ಚು ಶಕ್ತಿಯುತವಾದದ್ದಾಗಿದೆ. ಆತನು ಅದನ್ನು ಮನುಷ್ಯರ ಮೇಲೆ ಮತ್ತು ಜನಾಂಗಗಳ ಮೇಲೆ ನ್ಯಾಯವಿಧಿಸಲು ಉಪಯೋಗಿಸುವಾಗ, ಆತನಿಗೆ ಖಡಾಖಂಡಿತವಾದ ಮತ್ತು ಸಂಪೂರ್ಣವಾದ ವಿಜಯವು ದೊರೆಯುವುದು.

ಪಶ್ಚಾತ್ತಾಪಿಗಳಿಗೆ ನಿರೀಕ್ಷೆ ಮತ್ತು ಆಶೀರ್ವಾದ

17. ಚೀಯೋನನ್ನು ವಿಮೋಚಿಸುವವನಾರು, ಮತ್ತು ಆತನು ಚೀಯೋನನ್ನು ಯಾವಾಗ ವಿಮೋಚಿಸುತ್ತಾನೆ?

17 ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಇಸ್ರಾಯೇಲ್ಯನು ತನ್ನನ್ನೇ ದಾಸತ್ವಕ್ಕೆ ಮಾರಿಕೊಂಡರೆ, ವಿಮೋಚಕನಾದ ಒಬ್ಬ ವ್ಯಕ್ತಿಯು ಅವನಿಗಾಗಿ ಈಡುಕೊಟ್ಟು ಅವನನ್ನು ದಾಸತ್ವದಿಂದ ಬಿಡಿಸಿಕೊಳ್ಳಬಹುದಿತ್ತು. ಈ ಹಿಂದೆ, ಯೆಶಾಯನ ಪ್ರವಾದನ ಪುಸ್ತಕದಲ್ಲಿ ಯೆಹೋವನನ್ನು ಪಶ್ಚಾತ್ತಾಪಪಡುವ ವ್ಯಕ್ತಿಗಳ ವಿಮೋಚಕನಾಗಿ ಚಿತ್ರಿಸಲಾಗಿತ್ತು. (ಯೆಶಾಯ 48:17) ಈಗ ಪುನಃ ಒಮ್ಮೆ ಆತನನ್ನು ಪಶ್ಚತ್ತಾಪಪಡುವವರ ವಿಮೋಚಕನಾಗಿ ವರ್ಣಿಸಲಾಗುತ್ತದೆ. ಯೆಹೋವನ ವಾಗ್ದಾನವನ್ನು ಯೆಶಾಯನು ದಾಖಲಿಸುತ್ತಾನೆ: “ಆದರೆ ಚೀಯೋನಿಗೂ ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ವಿಮೋಚಕನಾಗಿ ಬರುವನು. ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 59:20) ಪುನರಾಶ್ವಾಸನೆಯನ್ನು ಕೊಡುವ ಈ ವಾಗ್ದಾನವು ಸಾ.ಶ.ಪೂ. 537ರಲ್ಲಿ ನೆರವೇರಿತಾದರೂ, ಅದಕ್ಕೆ ಇನ್ನೊಂದು ನೆರವೇರಿಕೆಯಿದೆ. ಈ ಮಾತುಗಳನ್ನು ಅಪೊಸ್ತಲ ಪೌಲನು ಸೆಪ್ಟ್ಯುಅಜಿಂಟ್‌ ಭಾಷಾಂತರದಿಂದ ಉಲ್ಲೇಖಿಸಿ, ಅವುಗಳನ್ನು ಕ್ರೈಸ್ತರಿಗೆ ಅನ್ವಯಿಸಿದ್ದಾನೆ. ಅವನು ಬರೆದುದು: “ಆ ಮೇಲೆ ಇಸ್ರಾಯೇಲ್‌ ಜನವೆಲ್ಲಾ ರಕ್ಷಣೆಹೊಂದುವದು. ಇದಕ್ಕೆ ಆಧಾರವಾಗಿ ಶಾಸ್ತ್ರದಲ್ಲಿ​—⁠ಬಿಡಿಸುವವನು ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು. ನಾನು ಅವರ ಸಂಗಡ ಮಾಡಿಕೊಂಡ ಈ ಒಡಂಬಡಿಕೆಯು ನಾನು ಅವರ ಪಾಪಗಳನ್ನು ಪರಿಹರಿಸುವಾಗ ನೆರವೇರುವದು ಎಂದು ಬರೆದದೆ.” (ರೋಮಾಪುರ 11:​26, 27) ಹೌದು, ಯೆಶಾಯನ ಪ್ರವಾದನೆಗೆ ಹೆಚ್ಚು ವಿಸ್ತಾರವಾದ ಅನ್ವಯವಿದೆ, ಅಂದರೆ ನಮ್ಮ ದಿನಗಳ ವರೆಗೂ ಮುಟ್ಟಿ ಅದನ್ನು ದಾಟಿಹೋಗುವ ಅನ್ವಯವಿದೆ. ಅದು ಹೇಗೆ?

18. ಯೆಹೋವನು ‘ದೇವರ ಇಸ್ರಾಯೇಲನ್ನು’ ಯಾವಾಗ ಮತ್ತು ಹೇಗೆ ಅಸ್ತಿತ್ವಕ್ಕೆ ತಂದನು?

18 ಒಂದನೆಯ ಶತಮಾನದಲ್ಲಿ, ಇಸ್ರಾಯೇಲ್‌ ಜನಾಂಗದ ಒಂದು ಚಿಕ್ಕ ಜನಶೇಷವು ಯೇಸುವನ್ನು ಮೆಸ್ಸೀಯನಾಗಿ ಅಂಗೀಕರಿಸಿತು. (ರೋಮಾಪುರ 9:27; 11:⁠5) ಸಾ.ಶ. 33ರ ಪಂಚಾಶತ್ತಮದಂದು ಯೆಹೋವನು ಈ ವಿಶ್ವಾಸಿಗಳಲ್ಲಿ ಸುಮಾರು 120 ಮಂದಿಯ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸಿ, ಅವರನ್ನು ಯೇಸು ಕ್ರಿಸ್ತನ ಮಧ್ಯಸ್ಥಿಕೆಯ ಮೂಲಕ ಮಾಡಲ್ಪಟ್ಟ ತನ್ನ ಹೊಸ ಒಡಂಬಡಿಕೆಯೊಳಗೆ ತಂದನು. (ಯೆರೆಮೀಯ 31:​31-33; ಇಬ್ರಿಯ 9:15) ಆ ದಿನ, ‘ದೇವರ ಇಸ್ರಾಯೇಲ್‌’ ಅಸ್ತಿತ್ವಕ್ಕೆ ಬಂತು. ಈ ಹೊಸ ಜನಾಂಗದ ಸದಸ್ಯರ ವೈಶಿಷ್ಟ್ಯವೇನೆಂದರೆ, ಅವರು ಅಬ್ರಹಾಮನ ಶಾರೀರಿಕ ವಂಶಜರಲ್ಲ, ಬದಲಾಗಿ ದೇವರಾತ್ಮದಿಂದ ಹುಟ್ಟಿದವರಾಗಿದ್ದಾರೆ. (ಗಲಾತ್ಯ 6:16) ಕೊರ್ನೇಲ್ಯನಿಂದ ಆರಂಭಿಸುತ್ತಾ, ಈ ಹೊಸ ಜನಾಂಗದಲ್ಲಿ ಸುನ್ನತಿ ಹೊಂದಿರದ ಅನ್ಯರೂ ಸೇರಿರುತ್ತಾರೆ. (ಅ. ಕೃತ್ಯಗಳು 10:24-48; ಪ್ರಕಟನೆ 5:​9, 10) ಹೀಗೆ, ಯೆಹೋವ ದೇವರು ಅವರನ್ನು ದತ್ತುತೆಗೆದುಕೊಂಡನು ಮತ್ತು ಅವರು ಆತನ ಆತ್ಮಿಕ ಪುತ್ರರೂ ಕ್ರಿಸ್ತನ ಜೊತೆ ಬಾಧ್ಯಸ್ಥರೂ ಆದರು.​—⁠ರೋಮಾಪುರ 8:​16, 17.

19. ದೇವರ ಇಸ್ರಾಯೇಲಿನೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡುತ್ತಾನೆ?

19 ಈಗ ಯೆಹೋವನು ದೇವರ ಇಸ್ರಾಯೇಲಿನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ನಾವು ಓದುವುದು: “ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ; ನಿಮ್ಮಲ್ಲಿ ಆವೇಶಿಸಿರುವ ನನ್ನ ಆತ್ಮವೂ ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ ನಿಮ್ಮ ಬಾಯಿಂದಾಗಲಿ ನಿಮ್ಮ ಸಂತತಿಯ ಬಾಯಿಂದಾಗಲಿ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 59:21) ಈ ಮಾತುಗಳು ಸ್ವತಃ ಯೆಶಾಯನಿಗೆ ಅನ್ವಯಿಸಿರಲಿ ಇಲ್ಲದಿರಲಿ, ಅವು ಖಂಡಿತವಾಗಿಯೂ ‘ಅವನು ತನ್ನ ಸಂತಾನವನ್ನು ನೋಡುವನು’ ಎಂಬ ಆಶ್ವಾಸನೆಯನ್ನು ಪಡೆದ ಯೇಸುವಿನಲ್ಲಿ ನೆರವೇರಿದವು. (ಯೆಶಾಯ 53:10) ಯೇಸು ಯೆಹೋವನಿಂದ ಕಲಿತಿದ್ದ ಮಾತುಗಳನ್ನು ಹೇಳಿದನು ಮತ್ತು ಅವನ ಮೇಲೆ ಯೆಹೋವನ ಆತ್ಮವು ನೆಲೆಸಿತು. (ಯೋಹಾನ 1:18; 7:16) ಯೋಗ್ಯವಾಗಿಯೇ, ಅವನ ಸಹೋದರರೂ ಜೊತೆ ಬಾಧ್ಯಸ್ಥರೂ ಆದ ದೇವರ ಇಸ್ರಾಯೇಲಿನ ಸದಸ್ಯರು ಸಹ ಯೆಹೋವನ ಪವಿತ್ರಾತ್ಮವನ್ನು ಪಡೆಯುತ್ತಾರೆ ಮತ್ತು ತಮ್ಮ ಸ್ವರ್ಗೀಯ ಪಿತನಿಂದ ಅವರು ಕಲಿತಿರುವ ಸಂದೇಶವೊಂದನ್ನು ಸಾರುತ್ತಾರೆ. ಅವರೆಲ್ಲರೂ “ಯೆಹೋವನಿಂದ ಶಿಕ್ಷಿತರಾಗಿರುವ” ವ್ಯಕ್ತಿಗಳಾಗಿದ್ದಾರೆ. (ಯೆಶಾಯ 54:13; ಲೂಕ 12:12; ಅ. ಕೃತ್ಯಗಳು 2:38) ಒಂದೊ ಯೆಶಾಯನ ಮೂಲಕ ಇಲ್ಲವೆ ಯೆಶಾಯನು ಪ್ರವಾದನಾರೂಪವಾಗಿ ಚಿತ್ರಿಸಿದ ಯೇಸುವಿನ ಮೂಲಕ ಯೆಹೋವನು ಈಗ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ಅದೇನೆಂದರೆ, ಇನ್ನೆಂದಿಗೂ ಅವರ ಸ್ಥಾನಪಲ್ಲಟಗೊಳಿಸದೇ ಅವರನ್ನು ಸದಾಕಾಲಕ್ಕೂ ತನ್ನ ಸಾಕ್ಷಿಗಳಾಗಿ ಉಪಯೋಗಿಸುವನೆಂಬುದೇ. (ಯೆಶಾಯ 43:10) ಆದರೆ ಈ ಒಡಂಬಡಿಕೆಯಿಂದ ಪ್ರಯೋಜನ ಪಡೆಯುವ ಅವರ “ಸಂತಾನ”ದವರು ಯಾರಾಗಿದ್ದಾರೆ?

20. ಯೆಹೋವನು ಅಬ್ರಹಾಮನಿಗೆ ಕೊಟ್ಟಿದ್ದ ವಾಗ್ದಾನವು ಒಂದನೆಯ ಶತಮಾನದಲ್ಲಿ ಹೇಗೆ ನೆರವೇರಿತು?

20 ಪುರಾತನ ಕಾಲದಲ್ಲಿ ಯೆಹೋವನು ಅಬ್ರಹಾಮನಿಗೆ, “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು” ಎಂಬ ವಾಗ್ದಾನ ಮಾಡಿದನು. (ಆದಿಕಾಂಡ 22:18) ಇದಕ್ಕೆ ಹೊಂದಿಕೆಯಲ್ಲಿ, ಮೆಸ್ಸೀಯನನ್ನು ಅಂಗೀಕರಿಸಿದ ಮಾಂಸಿಕ ಇಸ್ರಾಯೇಲ್ಯರ ಚಿಕ್ಕ ಜನಶೇಷವು, ಅನೇಕ ಜನಾಂಗಗಳಿಗೆ ಹೋಗಿ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಸಾರಿತು. ಕೊರ್ನೇಲ್ಯನಿಂದ ಆರಂಭಿಸಿ, ಸುನ್ನತಿಯಾಗಿರದ ಅನೇಕ ಮಂದಿ ಅನ್ಯರು ಅಬ್ರಹಾಮನ ಸಂತಾನವಾದ ಯೇಸುವಿನ ಮೂಲಕ ತಮ್ಮನ್ನು ‘ಆಶೀರ್ವದಿಸಿ’ಕೊಂಡರು. ಅವರು ದೇವರ ಇಸ್ರಾಯೇಲಿನ ಭಾಗವೂ ಅಬ್ರಹಾಮನ ಸಂತಾನದ ದ್ವಿತೀಯ ಭಾಗವೂ ಆದರು. ಅವರು ಯೆಹೋವನ “ಪವಿತ್ರ ಜನಾಂಗ”ದ ಭಾಗವಾಗಿದ್ದು, ‘ಅವರನ್ನು ಕತ್ತಲೆಯೊಳಗಿಂದ ಕರೆದು ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ ಮಾಡುವುದೇ’ ಅವರ ನೇಮಕವಾಗಿದೆ.​—⁠1 ಪೇತ್ರ 2:​9, NW; ಗಲಾತ್ಯ 3:​7-9, 14, 26-29.

21. (ಎ) ದೇವರ ಇಸ್ರಾಯೇಲ್‌ ಈ ಆಧುನಿಕ ದಿನಗಳಲ್ಲಿ ಯಾವ “ಸಂತಾನ”ವನ್ನು ಹುಟ್ಟಿಸಿದೆ? (ಬಿ) ಯೆಹೋವನು ದೇವರ ಇಸ್ರಾಯೇಲಿನೊಂದಿಗೆ ಮಾಡಿದ ಒಡಂಬಡಿಕೆ ಅಥವಾ ಒಪ್ಪಂದದಿಂದ ಆ “ಸಂತಾನ”ವು ಹೇಗೆ ಸಂತೈಸಲ್ಪಡುತ್ತದೆ?

21 ಇಂದು ದೇವರ ಇಸ್ರಾಯೇಲಿನ ಪೂರ್ಣ ಸಂಖ್ಯೆಯು ಒಟ್ಟುಗೂಡಿಸಲ್ಪಟ್ಟಿರುವಂತೆ ತೋರುತ್ತದೆ. ಆದರೂ ಜನಾಂಗಗಳು ದೊಡ್ಡ ಪ್ರಮಾಣದಲ್ಲಿ ಆಶೀರ್ವದಿಸಲ್ಪಡುತ್ತ ಇವೆ. ಅದು ಹೇಗೆ? ಹೇಗಂದರೆ, ದೇವರ ಇಸ್ರಾಯೇಲಿಗೆ “ಸಂತಾನ” ಹುಟ್ಟಿದೆ. ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯುಳ್ಳ ಯೇಸುವಿನ ಶಿಷ್ಯರೇ ಇವರಾಗಿದ್ದಾರೆ. (ಕೀರ್ತನೆ 37:​11, 29) ಈ “ಸಂತಾನ” ಸಹ ಯೆಹೋವನಿಂದ ಕಲಿಸಲ್ಪಟ್ಟಿದೆ ಮತ್ತು ಆತನ ಮಾರ್ಗಗಳ ಕುರಿತು ಉಪದೇಶವನ್ನು ಪಡೆದಿದೆ. (ಯೆಶಾಯ 2:​2-4) ಇವರಿಗೆ ಪವಿತ್ರಾತ್ಮದಿಂದ ದೀಕ್ಷಾಸ್ನಾನವಾಗಿಲ್ಲವಾದರೂ ಇವರು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವುದಿಲ್ಲವಾದರೂ, ಸೈತಾನನು ಅವರ ಸಾರುವ ಕಾರ್ಯದ ಮುಂದೆ ಹಾಕಿರುವ ಸಕಲ ತಡೆಗಳನ್ನು ಜಯಿಸುವಂತೆ ಯೆಹೋವನ ಪವಿತ್ರಾತ್ಮವು ಅವರನ್ನು ಬಲಪಡಿಸುತ್ತದೆ. (ಯೆಶಾಯ 40:28-31) ಅವರ ಸಂಖ್ಯೆಯು ಈಗ ದಶಲಕ್ಷಗಳನ್ನು ತಲಪಿದೆ ಮತ್ತು ಅವರು ತಮ್ಮದೇ ಆದ ಸಂತಾನವನ್ನು ಪಡೆಯುತ್ತಿರುವಾಗ ಅದು ವೃದ್ಧಿಯಾಗುತ್ತ ಹೋಗುತ್ತದೆ. ಅಭಿಷಿಕ್ತರೊಂದಿಗೆ ಯೆಹೋವನು ಮಾಡಿರುವ ಒಡಂಬಡಿಕೆ ಅಥವಾ ಒಪ್ಪಂದವು, ಯೆಹೋವನು ತಮ್ಮನ್ನು ಸಹ ಆತನ ವದನಕರಾಗಿ ಸದಾಕಾಲಕ್ಕೂ ಉಪಯೋಗಿಸುತ್ತ ಮುಂದುವರಿಯುವನೆಂಬ ಭರವಸೆಯನ್ನು ಈ ‘ಸಂತಾನಕ್ಕೆ’ ಕೊಡುತ್ತದೆ.​—⁠ಪ್ರಕಟನೆ 21:​3, 4, 7.

22. ನಮಗೆ ಯೆಹೋವನಲ್ಲಿ ಯಾವ ಭರವಸೆಯಿರಸಾಧ್ಯವಿದೆ, ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು?

22 ಹೀಗಿರುವುದರಿಂದ, ನಾವೆಲ್ಲರೂ ಯೆಹೋವನಲ್ಲಿ ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುತ್ತಾ ಹೋಗೋಣ. ಆತನು ನಮ್ಮನ್ನು ರಕ್ಷಿಸಲು ಬಯಸುತ್ತಾನೆ ಮಾತ್ರವಲ್ಲ, ಅದನ್ನು ಮಾಡಲು ಶಕ್ತನೂ ಆಗಿದ್ದಾನೆ! ಆತನ ಕೈ ಎಂದಿಗೂ ಮೋಟಾಗಿರದು; ಆತನು ತನ್ನ ನಂಬಿಗಸ್ತ ಜನರನ್ನು ಸದಾ ವಿಮೋಚಿಸುವನು. ಆತನಲ್ಲಿ ಭರವಸೆಯಿಡುವವರೆಲ್ಲರೂ ಆತನ ಸುವಾಕ್ಯಗಳನ್ನು “ಇಂದಿನಿಂದ ಎಂದಿಗೂ” ತಮ್ಮ ಬಾಯಿಗಳಲ್ಲಿ ಇಟ್ಟುಕೊಳ್ಳುವರು.

[ಅಧ್ಯಯನ ಪ್ರಶ್ನೆಗಳು]

[ಪುಟ 294ರಲ್ಲಿರುವ ಚೌಕ]

ಧರ್ಮಭ್ರಷ್ಟ ಯೆರೂಸಲೇಮ್‌​—⁠ಕ್ರೈಸ್ತಪ್ರಪಂಚದ ಸಮಾನ ರೂಪ

ದೇವರು ಆಯ್ದುಕೊಂಡ ಜನಾಂಗದ ರಾಜಧಾನಿಯಾದ ಯೆರೂಸಲೇಮ್‌, ಆತ್ಮಿಕ ಜೀವಿಗಳ ದೇವರ ಸ್ವರ್ಗೀಯ ಸಂಸ್ಥೆಯನ್ನು ಮಾತ್ರವಲ್ಲ ಕ್ರಿಸ್ತನ ಮದಲಗಿತ್ತಿಯೋಪಾದಿ ಸ್ವರ್ಗಕ್ಕೆ ಪುನರುತ್ಥಾನವಾಗಿರುವ ಅಭಿಷಿಕ್ತ ಕ್ರೈಸ್ತರ ಸಮುದಾಯವನ್ನೂ ಚಿತ್ರಿಸುತ್ತದೆ. (ಗಲಾತ್ಯ 4:​25, 26; ಪ್ರಕಟನೆ 21:⁠2) ಆದರೆ ಅನೇಕವೇಳೆ, ಯೆರೂಸಲೇಮಿನ ನಿವಾಸಿಗಳು ಯೆಹೋವನಿಗೆ ಅಪನಂಬಿಗಸ್ತರಾದುದರಿಂದ ಆ ನಗರವನ್ನು ವೇಶ್ಯೆ ಮತ್ತು ವ್ಯಭಿಚಾರಿಣಿಯಾಗಿ ವರ್ಣಿಸಲಾಯಿತು. (ಯೆಹೆಜ್ಕೇಲ 16:​3, 15, 30-42) ಆ ಸ್ಥಿತಿಯಲ್ಲಿ ಯೆರೂಸಲೇಮ್‌, ಧರ್ಮಭ್ರಷ್ಟ ಕ್ರೈಸ್ತಪ್ರಪಂಚಕ್ಕೆ ಯೋಗ್ಯವಾದ ಮಾದರಿಯಾಗಿತ್ತು.

ಯೇಸು ಯೆರೂಸಲೇಮನ್ನು, “ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ” ಎಂದು ಕರೆದನು. (ಲೂಕ 13:34; ಮತ್ತಾಯ 16:21) ಅಪನಂಬಿಗಸ್ತ ಯೆರೂಸಲೇಮಿನಂತೆ ಕ್ರೈಸ್ತಪ್ರಪಂಚವು ತಾನು ಸತ್ಯ ದೇವರನ್ನು ಆರಾಧಿಸುತ್ತೇನೆಂದು ಹೇಳಿಕೊಳ್ಳುವುದಾದರೂ, ಆತನ ನೀತಿಯ ಮಾರ್ಗದಿಂದ ಅದು ತುಂಬ ದೂರ ಹೋಗಿದೆ. ಯೆಹೋವನು ಧರ್ಮಭ್ರಷ್ಟ ಯೆರೂಸಲೇಮಿಗೆ ನ್ಯಾಯತೀರಿಸಿದ ನೀತಿಯ ಮಟ್ಟಗಳ ಆಧಾರದ ಮೇಲೆಯೇ ಕ್ರೈಸ್ತಪ್ರಪಂಚಕ್ಕೂ ನ್ಯಾಯತೀರಿಸುವನೆಂಬ ಭರವಸೆ ನಮಗಿರಸಾಧ್ಯವಿದೆ.

[ಪುಟ 296ರಲ್ಲಿರುವ ಚಿತ್ರ]

ಒಬ್ಬ ನ್ಯಾಯಾಧಿಪತಿಯು ನೀತಿಯಿಂದ ನ್ಯಾಯತೀರಿಸಬೇಕು, ನ್ಯಾಯವನ್ನು ಬೆನ್ನಟ್ಟಬೇಕು ಮತ್ತು ಯಾವುದೇ ಲಂಚವನ್ನು ತೆಗೆದುಕೊಳ್ಳಬಾರದು

[ಪುಟ 298ರಲ್ಲಿರುವ ಚಿತ್ರ]

ನೆರೆತುಂಬಿ ಹರಿಯುವ ನದಿಯಂತೆ ಯೆಹೋವನ ನ್ಯಾಯತೀರ್ಪುಗಳು, ಆತನ ಚಿತ್ತವನ್ನು ನೆರವೇರಿಸಲು ಅಡ್ಡಬರುವ ಎಲ್ಲ ತಡೆಗಳನ್ನು ತೊಲಗಿಸುವವು

[ಪುಟ 302ರಲ್ಲಿರುವ ಚಿತ್ರ]

ತನ್ನ ಜನರು ತನ್ನ ಸಾಕ್ಷಿಗಳಾಗಿರುವ ಸುಯೋಗವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲವೆಂದು ಯೆಹೋವನು ಒಡಂಬಡಿಕೆ ಮಾಡುತ್ತಾನೆ