ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ—“ನೀತಿಯ ದೇವರು ಮತ್ತು ರಕ್ಷಕನು”

ಯೆಹೋವ—“ನೀತಿಯ ದೇವರು ಮತ್ತು ರಕ್ಷಕನು”

ಅಧ್ಯಾಯ ಆರು

ಯೆಹೋವ​—⁠“ನೀತಿಯ ದೇವರು ಮತ್ತು ರಕ್ಷಕನು”

ಯೆಶಾಯ 45:​1-25

1, 2. ಯೆಶಾಯ 45ನೆಯ ಅಧ್ಯಾಯದಲ್ಲಿ ಯಾವ ಆಶ್ವಾಸನೆಗಳು ಕೊಡಲ್ಪಟ್ಟಿವೆ, ಮತ್ತು ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?

ಯೆಹೋವನ ವಾಗ್ದಾನಗಳು ಭರವಸಾರ್ಹವಾಗಿವೆ. ಆತನು ಪ್ರಕಟನೆಯ ದೇವರು ಹಾಗೂ ಸೃಷ್ಟಿಯ ದೇವರಾಗಿದ್ದಾನೆ. ಆತನು ಆಗಿಂದಾಗ್ಗೆ ಒಬ್ಬ ನೀತಿಯ ದೇವರೂ, ಎಲ್ಲ ಜನಾಂಗಗಳ ಜನರ ರಕ್ಷಕನೂ ಆಗಿ ತನ್ನನ್ನು ತೋರಿಸಿಕೊಟ್ಟಿದ್ದಾನೆ. ಯೆಶಾಯ 45ನೆಯ ಅಧ್ಯಾಯದಲ್ಲಿ ಕಂಡುಬರುವ ಹೃದಯೋತ್ತೇಜಕ ಆಶ್ವಾಸನೆಗಳಲ್ಲಿ ಇವು ಕೆಲವಾಗಿವೆ.

2 ಇದಲ್ಲದೆ, ಯೆಶಾಯ 45ನೆಯ ಅಧ್ಯಾಯದಲ್ಲಿ ಯೆಹೋವನ ಪ್ರವಾದನ ಸಾಮರ್ಥ್ಯದ ಗಮನಾರ್ಹವಾದ ಉದಾಹರಣೆಯೂ ಇದೆ. ದೇವರ ಆತ್ಮವು, ಯೆಶಾಯನು ದೂರದ ದೇಶಗಳನ್ನು ದಿಟ್ಟಿಸಿ ನೋಡಿ, ಮುಂದಿನ ಶತಮಾನಗಳಲ್ಲಿ ಸಂಭವಿಸುವ ಘಟನೆಗಳನ್ನು ಅವಲೋಕಿಸುವಂತೆ ಸಾಧ್ಯಮಾಡುತ್ತದೆ. ಮತ್ತು ಸತ್ಯ ಪ್ರವಾದನೆಯ ದೇವರಾದ ಯೆಹೋವನು ಮಾತ್ರ ಅಷ್ಟು ನಿಷ್ಕೃಷ್ಟವಾಗಿ ಮುಂತಿಳಿಸಬಲ್ಲ ಘಟನಾವಳಿಯೊಂದನ್ನು ವರ್ಣಿಸುವಂತೆ ಅವನನ್ನು ಪ್ರೇರಿಸುತ್ತದೆ. ಆ ಘಟನಾವಳಿಯೇನು? ಯೆಶಾಯನ ದಿನಗಳಲ್ಲಿದ್ದ ದೇವಜನರ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಇಂದು ನಮಗೆ ಇದರ ಸೂಚಿತಾರ್ಥವೇನು? ನಾವೀಗ ಆ ಪ್ರವಾದಿಯ ಮಾತುಗಳನ್ನು ಪರೀಕ್ಷಿಸೋಣ.

ಬಾಬೆಲಿಗೆದುರಾಗಿ ಯೆಹೋವನ ಘೋಷಣೆ

3. ಯೆಶಾಯ 45:​1-3, ಕೋರೆಷನ ವಿಜಯವನ್ನು ಯಾವ ಸುವ್ಯಕ್ತವಾದ ಮಾತುಗಳಿಂದ ವರ್ಣಿಸುತ್ತದೆ?

3“ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು ರಾಜರ ನಡುಕಟ್ಟನ್ನು ಬಿಚ್ಚಿ ಯಾವನ ಮುಂದೆ ಬಾಗಿಲುಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ​—⁠ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡುವೆನು, ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು. . . . ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.”​—ಯೆಶಾಯ 45:​1-3.

4. (ಎ) ಯೆಹೋವನು ಕೋರೆಷನನ್ನು ತಾನು ‘ಅಭಿಷೇಕಿಸಿದವನು’ ಎಂದು ಕರೆಯುವುದೇಕೆ? (ಬಿ) ಯೆಹೋವನು ಕೋರೆಷನಿಗೆ ವಿಜಯವನ್ನು ಹೇಗೆ ಕೊಡಲಿದ್ದನು?

4 ಯೆಹೋವನು ಯೆಶಾಯನ ಮೂಲಕ ಕೋರೆಷನಿಗೆ, ಅವನು ಆಗ ಜೀವಿಸುತ್ತಿದ್ದನೊ ಎಂಬಂತೆ ಮಾತಾಡುತ್ತಾನೆ. ಆದರೆ ಯೆಶಾಯನ ದಿನಗಳಲ್ಲಿ ಕೋರೆಷನು ಹುಟ್ಟಿರಲೂ ಇಲ್ಲ. (ರೋಮಾಪುರ 4:17) ಯೆಹೋವನು ಕೋರೆಷನನ್ನು ಒಂದು ನಿರ್ದಿಷ್ಟ ಕೆಲಸವನ್ನು ಮಾಡಲಿಕ್ಕಾಗಿ ಮುಂದಾಗಿಯೇ ನೇಮಿಸಿರುವುದರಿಂದ, ಕೋರೆಷನು ದೇವರು “ಅಭಿಷೇಕಿಸಿದ” ವ್ಯಕ್ತಿ ಎಂದು ಹೇಳಸಾಧ್ಯವಿದೆ. ಮತ್ತು ದೇವರು ಅವನನ್ನು ನಡೆಸುವ ಕಾರಣ ಅವನು ಜನಾಂಗಗಳನ್ನು ಜಯಿಸಿ, ಅರಸರನ್ನು ಬಲಹೀನರನ್ನಾಗಿಯೂ ಅವನನ್ನು ತಡೆಯಲು ಅಶಕ್ತರನ್ನಾಗಿಯೂ ಮಾಡುವನು. ಮತ್ತು ಕೋರೆಷನು ಬಾಬೆಲಿನ ಮೇಲೆ ಆಕ್ರಮಣ ಮಾಡುವಾಗ, ನಗರದ ಹೆಬ್ಬಾಗಿಲುಗಳು ತೆರೆದಿರುವಂತೆ ಯೆಹೋವನು ನೋಡಿಕೊಳ್ಳುವನು. ಹೀಗೆ, ಅದರ ಪ್ರವೇಶದ್ವಾರಗಳು ಮುರಿದು ಹೋಗಿರುವಷ್ಟು ನಿರರ್ಥಕವಾಗಿರುವವು. ಆತನು ಕೋರೆಷನ ಮುಂದಿನಿಂದ ಹೋಗಿ, ಮಾರ್ಗದಲ್ಲಿರುವ ಎಲ್ಲ ತಡೆಗಳನ್ನು ತೆಗೆದುಬಿಡುವನು. ಅಂತಿಮವಾಗಿ ಕೋರೆಷನ ಪಡೆಗಳು ನಗರವನ್ನು ಸೋಲಿಸಿ, ಕತ್ತಲಿನ ನೆಲಮಾಳಿಗೆಗಳಲ್ಲಿ “ಬಚ್ಚಿಟ್ಟಿರುವ ಆಸ್ತಿಪಾಸ್ತಿ”ಯನ್ನು ವಶಪಡಿಸಿಕೊಳ್ಳುವವು. ಯೆಶಾಯನು ಇದನ್ನೇ ಮುಂತಿಳಿಸುತ್ತಾನೆ. ಆದರೆ ಅವನ ಮಾತುಗಳು ನಿಜವಾಗಿ ಪರಿಣಮಿಸುತ್ತವೆಯೆ?

5, 6. ಬಾಬೆಲಿನ ಪತನದ ಕುರಿತಾದ ಪ್ರವಾದನೆಯು ಯಾವಾಗ ಮತ್ತು ಹೇಗೆ ನೆರವೇರಿತು?

5 ಸಾ.ಶ.ಪೂ. 539ರಲ್ಲಿ, ಅಂದರೆ ಯೆಶಾಯನು ಈ ಪ್ರವಾದನೆಯನ್ನು ಬರೆದು ಮುಗಿಸಿ ಸುಮಾರು 200 ವರ್ಷಗಳಾದ ನಂತರ, ಕೋರೆಷನು ಬಾಬೆಲಿನ ಆಕ್ರಮಣಕ್ಕಾಗಿ ನಗರದ ಗೋಡೆಗಳ ಬಳಿಗೆ ಬಂದು ತಲಪುತ್ತಾನೆ. (ಯೆರೆಮೀಯ 51:​11, 12) ಆದರೆ ಬಾಬೆಲಿನವರಿಗೆ ಇದರ ಪರಿವೆಯೇ ಇರುವುದಿಲ್ಲ. ತಮ್ಮ ನಗರವನ್ನು ಯಾರೂ ಜಯಿಸಲಾರರು ಎಂಬುದು ಅವರ ಅನಿಸಿಕೆ. ಯೂಫ್ರೇಟೀಸ್‌ ನದಿಯ ನೀರಿನಿಂದ ತುಂಬಿದ ಆಳವಾದ ಕಂದಕಗಳ ಆಚೆ, ಎತ್ತರವಾದ ಗೋಡೆಗಳಿವೆ. ಆ ನದಿಯು, ನಗರದ ರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದೆ. ನೂರಕ್ಕೂ ಹೆಚ್ಚು ವರ್ಷಗಳಲ್ಲಿ ಯಾವ ವೈರಿಯೂ ಬಾಬೆಲನ್ನು ಲಗ್ಗೆಹತ್ತಿ ವಶಪಡಿಸಿಕೊಂಡದ್ದಿಲ್ಲ! ವಾಸ್ತವವೇನಂದರೆ, ಬಾಬೆಲಿನಲ್ಲಿಯೇ ವಾಸಿಸುತ್ತಿದ್ದ ರಾಜ ಬೇಲ್ಶಚ್ಚರನಿಗೆ ಎಷ್ಟು ಸುರಕ್ಷೆಯ ಅನಿಸಿಕೆಯಾಗುತ್ತದೆಂದರೆ, ಅವನು ತನ್ನ ಆಸ್ಥಾನಿಕರೊಂದಿಗೆ ಔತಣದ ಸಂಭ್ರಮದಲ್ಲಿರುತ್ತಾನೆ. (ದಾನಿಯೇಲ 5:⁠1) ಆದರೆ ಅದೇ ರಾತ್ರಿ, ಅಂದರೆ ಅಕ್ಟೋಬರ್‌ 5/6ರ ರಾತ್ರಿ, ಕೋರೆಷನು ಬಹಳ ಯಶಸ್ವಿಯಾದ ಒಂದು ಯುದ್ಧತಂತ್ರವನ್ನು ಹೂಡುತ್ತಾನೆ.

6 ಕೋರೆಷನ ಯಂತ್ರಜ್ಞರು ಬಾಬೆಲಿನ ಮೇಲ್‌ಪ್ರವಾಹದಿಂದ ಹರಿದು ಬರುತ್ತಿರುವ ಯೂಫ್ರೇಟೀಸ್‌ ನದಿಯ ದಡವನ್ನು ಕಡಿದು, ನೀರನ್ನು ಬೇರೆ ದಿಕ್ಕಿಗೆ ತಿರುಗಿಸಿದ್ದಾರೆ. ಹೀಗಿರುವುದರಿಂದ ಆ ನದಿಯ ನೀರು ದಕ್ಷಿಣ ದಿಕ್ಕಿಗೆ ನಗರಾಭಿಮುಖವಾಗಿ ಹರಿಯುವುದಿಲ್ಲ. ಸ್ವಲ್ಪದರಲ್ಲಿ, ಬಾಬೆಲಿನ ಒಳಗೆ ಮತ್ತು ಸುತ್ತಲಿನ ನದಿಯ ನೀರಿನ ಮಟ್ಟವು ಎಷ್ಟರ ಮಟ್ಟಿಗೆ ಕೆಳಗಿಳಿಯುತ್ತದೆಂದರೆ, ಕೋರೆಷನ ಪಡೆಗಳು ನದಿತಳದಲ್ಲಿ ನಡೆಯುತ್ತ ನಗರದ ಮಧ್ಯಭಾಗಕ್ಕೆ ಹೋಗಶಕ್ತವಾಗುತ್ತವೆ. (ಯೆಶಾಯ 44:27; ಯೆರೆಮೀಯ 50:38) ಆಶ್ಚರ್ಯಕರವಾಗಿ, ಯೆಶಾಯನು ಮುಂತಿಳಿಸಿದಂತೆಯೇ ನದಿಯ ಪಕ್ಕದ ಪುರದ್ವಾರಗಳು ತೆರೆದಿರುತ್ತವೆ. ಕೋರೆಷನ ಪಡೆಗಳು ಬಾಬೆಲನ್ನು ಮುತ್ತಿ, ಅರಮನೆಯನ್ನು ವಶಪಡಿಸಿಕೊಂಡು ರಾಜ ಬೇಲ್ಶಚ್ಚರನನ್ನು ವಧಿಸುತ್ತವೆ. (ದಾನಿಯೇಲ 5:30) ಒಂದೇ ರಾತ್ರಿಯಲ್ಲಿ ಅವರಿಗೆ ವಿಜಯವು ಸಿಗುತ್ತದೆ. ಬಾಬೆಲು ಪತನಗೊಂಡಿದೆ ಮತ್ತು ಆ ಪ್ರವಾದನೆಯು ಅಕ್ಷರಶಃವಾಗಿ ನೆರವೇರಿದೆ.

7. ಕೋರೆಷನ ಕುರಿತಾದ ಯೆಶಾಯನ ಪ್ರವಾದನೆಯ ಗಮನಾರ್ಹ ನೆರವೇರಿಕೆಯಿಂದ ಕ್ರೈಸ್ತರು ಹೇಗೆ ಬಲಗೊಳ್ಳುತ್ತಾರೆ?

7 ಈ ಪ್ರವಾದನೆಯ ಚಾಚೂತಪ್ಪದ ನೆರವೇರಿಕೆಯು, ಇಂದಿನ ಕ್ರೈಸ್ತರ ನಂಬಿಕೆಯನ್ನು ಬಲಪಡಿಸುತ್ತದೆ. ಇನ್ನೂ ನೆರವೇರಿರದಂಥ ಬೈಬಲ್‌ ಪ್ರವಾದನೆಗಳು ಸಹ ಸಂಪೂರ್ಣವಾಗಿ ಭರವಸಾರ್ಹವಾಗಿವೆ ಎಂದು ನಂಬಲು ಇದು ಅವರಿಗೆ ಬಲವಾದ ಕಾರಣವನ್ನು ಕೊಡುತ್ತದೆ. (2 ಪೇತ್ರ 1:​20, 21) ಸಾ.ಶ.ಪೂ. 539ರಲ್ಲಿ ನಡೆದ ಬಾಬೆಲಿನ ಪತನದಿಂದ ಮುನ್‌ಸೂಚಿಸಲ್ಪಟ್ಟಿರುವ ಘಟನೆಯು, ಅಂದರೆ ‘ಮಹಾ ಬಾಬೆಲಿನ’ ಪತನವು 1919ರಲ್ಲಾಗಲೇ ಸಂಭವಿಸಿದೆಯೆಂದು ಯೆಹೋವನ ಆರಾಧಕರಿಗೆ ಗೊತ್ತು. ಆದರೆ ಅವರಿನ್ನೂ, ಆ ಆಧುನಿಕ ದಿನಗಳ ಧಾರ್ಮಿಕ ಸಂಸ್ಥೆಯ ನಾಶನವನ್ನು ಹಾಗೂ ಸೈತಾನನ ಹಿಡಿತದಲ್ಲಿರುವ ರಾಜಕೀಯ ವ್ಯವಸ್ಥೆಯ ವಾಗ್ದತ್ತ ನಿರ್ಮೂಲನ, ಅಧೋಲೋಕಕ್ಕೆ ಸೈತಾನನ ದೊಬ್ಬುವಿಕೆ ಮತ್ತು ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ ಬರೋಣವನ್ನು ಎದುರುನೋಡುತ್ತಿದ್ದಾರೆ. (ಪ್ರಕಟನೆ 18:​2, 21; 19:​19-21; 20:​1-3, 12, 13; 21:​1-4) ಯೆಹೋವನ ಪ್ರವಾದನೆಗಳು ಬರಿದಾದ ವಾಗ್ದಾನಗಳಲ್ಲ, ಅವು ನಿಶ್ಚಿತವಾದ ಭಾವೀ ಘಟನೆಗಳ ವರ್ಣನೆಗಳಾಗಿವೆ ಎಂಬುದು ಅವರಿಗೆ ಗೊತ್ತಿದೆ. ಬಾಬೆಲಿನ ಪತನದ ಕುರಿತಾದ ಯೆಶಾಯನ ಪ್ರವಾದನೆಯ ಸಕಲ ವಿವರಣೆಗಳು ನೆರವೇರಿದವು ಎಂಬುದನ್ನು ಸತ್ಯ ಕ್ರೈಸ್ತರು ಜ್ಞಾಪಿಸಿಕೊಳ್ಳುವಾಗ, ಅವರ ಭರವಸೆಯು ಇನ್ನೂ ಬಲಗೊಳ್ಳುತ್ತದೆ. ಯೆಹೋವನು ತನ್ನ ಮಾತನ್ನು ಸದಾ ನೆರವೇರಿಸುತ್ತಾನೆಂದು ಅವರು ಬಲ್ಲರು.

ಯೆಹೋವನು ಕೋರೆಷನಿಗೆ ಏಕೆ ಅನುಗ್ರಹ ತೋರಿಸುವನು?

8. ಯೆಹೋವನು ಕೋರೆಷನಿಗೆ ಬಾಬೆಲಿನ ಮೇಲೆ ವಿಜಯವನ್ನು ದೊರಕಿಸಿಕೊಡಲು ಒಂದು ಕಾರಣವೇನು?

8 ಬಾಬೆಲನ್ನು ಯಾರು ಜಯಿಸಲಿದ್ದಾನೆ ಮತ್ತು ಹೇಗೆ ಎಂದು ಹೇಳಿದ ಬಳಿಕ, ತಾನು ಕೋರೆಷನಿಗೆ ವಿಜಯವನ್ನು ನೀಡುತ್ತಿರುವ ಒಂದು ಕಾರಣವನ್ನು ಯೆಹೋವನು ತಿಳಿಯಪಡಿಸುತ್ತಾನೆ. “ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ” ಕಾರಣಕ್ಕಾಗಿಯೆಂದು ಯೆಹೋವನು ಪ್ರವಾದನಾರೂಪದಲ್ಲಿ ಕೋರೆಷನೊಂದಿಗೆ ಮಾತಾಡುತ್ತ ಹೇಳುತ್ತಾನೆ. (ಯೆಶಾಯ 45:3ಎ) ಬೈಬಲ್‌ ಇತಿಹಾಸದ ನಾಲ್ಕನೆಯ ಲೋಕಶಕ್ತಿಯ ಅರಸನು, ತನಗೆ ಸಿಕ್ಕಿದ ಈ ಅತ್ಯಂತ ಮಹಾ ವಿಜಯವು ತನಗಿಂತಲೂ ಹೆಚ್ಚು ದೊಡ್ಡವನೂ ವಿಶ್ವ ಪರಮಾಧಿಕಾರಿಯೂ ಆದ ಯೆಹೋವನ ಬೆಂಬಲದಿಂದ ಸಿಕ್ಕಿದೆ ಎಂದು ತಿಳಿಯುವುದು ಯೋಗ್ಯವಾಗಿದೆ. ತನ್ನನ್ನು ಕರೆದಾತನು ಅಂದರೆ ತನ್ನನ್ನು ನೇಮಿಸಿದಾತನು ಇಸ್ರಾಯೇಲಿನ ದೇವರಾದ ಯೆಹೋವನು ಎಂದು ಕೋರೆಷನು ಒಪ್ಪಿಕೊಳ್ಳಬೇಕಾಗಿದೆ. ಮತ್ತು, ಕೋರೆಷನು ತನ್ನ ಮಹಾ ವಿಜಯವು ಯೆಹೋವನಿಂದಲೇ ಬಂದಿತ್ತೆಂದು ನಿಜವಾಗಿಯೂ ಒಪ್ಪಿಕೊಂಡನೆಂದು ಬೈಬಲ್‌ ದಾಖಲೆಯು ತೋರಿಸುತ್ತದೆ.​—⁠ಎಜ್ರ 1:​2, 3.

9. ಯೆಹೋವನು ಕೋರೆಷನಿಗೆ ಬಾಬೆಲಿನ ಮೇಲೆ ವಿಜಯವನ್ನು ಕೊಡಲು ಎರಡನೆಯ ಕಾರಣವೇನು?

9 ಈಗ ಯೆಹೋವನು, ಬಾಬೆಲಿನ ಮೇಲೆ ಕೋರೆಷನಿಗೆ ವಿಜಯವನ್ನು ಕೊಡುವುದಕ್ಕಾಗಿ ಎರಡನೆಯ ಕಾರಣವನ್ನು ತಿಳಿಸುತ್ತಾನೆ: “ನನ್ನ ಸೇವಕನಾದ ಯಾಕೋಬಿಗಾಗಿ, ನಾನು ಆದುಕೊಂಡ ಇಸ್ರಾಯೇಲಿಗಾಗಿ ಹೆಸರುಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಬಿರುದನ್ನು ದಯಪಾಲಿಸಿದ್ದೇನೆ.” (ಯೆಶಾಯ 45:4) ಬಾಬೆಲಿನ ಮೇಲೆ ಕೋರೆಷನ ವಿಜಯವು ಬಹುಮುಖ್ಯವಾದದ್ದಾಗಿದೆ. ಅದು, ಒಂದು ಲೋಕಶಕ್ತಿಯ ಪತನವನ್ನು ಮತ್ತು ಇನ್ನೊಂದರ ಆರೋಹಣವನ್ನು ಗುರುತಿಸಿ, ಮುಂದಿನ ಅನೇಕ ಪೀಳಿಗೆಗಳ ವರೆಗೆ ಇತಿಹಾಸದ ಮೇಲೆ ಶಾಶ್ವತವಾದ ಪರಿಣಾಮವನ್ನು ಬಿಟ್ಟುಹೋಗುತ್ತದೆ. ಆದರೂ, ಕಾತರದಿಂದ ಘಟನೆಗಳನ್ನು ಅವಲೋಕಿಸುತ್ತಿರುವ ನೆರೆಯ ರಾಷ್ಟ್ರಗಳ ಜನರು, ಇದೆಲ್ಲವೂ ಬಾಬೆಲಿನಲ್ಲಿ ಸೆರೆಯಾಳುಗಳಾಗಿರುವ, ಯಾಕೋಬನ ಸಂತತಿಯವರಾಗಿರುವ ಕೇವಲ ಕೆಲವೇ ಸಾವಿರ ಮಂದಿ “ಕ್ಷುಲ್ಲಕ” ಯೆಹೂದ್ಯರ ಸಲುವಾಗಿ ನಡೆಯುತ್ತಿದೆಯೆಂಬುದನ್ನು ತಿಳಿದುಕೊಂಡು ಪ್ರಾಯಶಃ ಆಶ್ಚರ್ಯಪಡುವರು. ಆದರೆ ಯೆಹೋವನ ದೃಷ್ಟಿಯಲ್ಲಿ, ಪುರಾತನ ಇಸ್ರಾಯೇಲ್‌ ಜನಾಂಗದ ಬದುಕಿ ಉಳಿದಿದ್ದ ಈ ಜನರು ಕ್ಷುಲ್ಲಕರಾಗಿರಲಿಲ್ಲ, ಅವರು ಆತನ “ಸೇವಕನು” ಆಗಿದ್ದಾರೆ. ಭೂಜನಾಂಗಗಳೆಲ್ಲವುಗಳಲ್ಲಿ, ಇವರು ಆತನ “ಚುನಾಯಿತನು” ಆಗಿದ್ದಾರೆ. ಈ ಹಿಂದೆ ಕೋರೆಷನಿಗೆ ಯೆಹೋವನ ಪರಿಚಯವಿರದಿದ್ದರೂ, ಯೆಹೋವನು ಅವನನ್ನು ತನ್ನ ಅಭಿಷಿಕ್ತನಾಗಿ, ಸೆರೆಯಾಳುಗಳನ್ನು ಬಿಡುಗಡೆಮಾಡಲು ನಿರಾಕರಿಸುತ್ತಿದ್ದ ಆ ನಗರವನ್ನು ಸೋಲಿಸಲು ಉಪಯೋಗಿಸಿದನು. ತನ್ನ ಚುನಾಯಿತ ಜನರು ಸದಾಕಾಲ ವಿದೇಶದಲ್ಲಿ ನರಳುವುದು ದೇವರ ಉದ್ದೇಶವಾಗಿರುವುದಿಲ್ಲ.

10. ಲೋಕಶಕ್ತಿಯಾದ ಬಾಬೆಲನ್ನು ಅಂತ್ಯಗೊಳಿಸಲಿಕ್ಕಾಗಿ ಯೆಹೋವನು ಕೋರೆಷನನ್ನು ಉಪಯೋಗಿಸಲು ಅತಿ ಪ್ರಾಮುಖ್ಯ ಕಾರಣವೇನು?

10 ಕೋರೆಷನು ಬಾಬೆಲನ್ನು ಸೋಲಿಸಲು ಯೆಹೋವನು ಅವನನ್ನು ಉಪಯೋಗಿಸಿದ್ದಕ್ಕೆ ಇನ್ನೂ ಹೆಚ್ಚು ಮುಖ್ಯವಾದ ಮೂರನೆಯ ಕಾರಣವೊಂದಿದೆ. ಯೆಹೋವನು ಹೇಳುವುದು: “ನಾನೇ ಯೆಹೋವ, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು. ಮೂಡಲಿಂದ ಪಡುವಲ ತನಕ ಇರುವವರೆಲ್ಲರೂ ಇದನ್ನು ನೋಡಿ ನನ್ನ ವಿನಹ ಯಾರೂ ಇಲ್ಲ, ನಾನೇ ಯೆಹೋವನು, ಇನ್ನು ಯಾವನೂ ಅಲ್ಲ . . . ಎಂದು ತಿಳಿದುಕೊಳ್ಳುವರು.” (ಯೆಶಾಯ 45:5-7) ಹೌದು, ಲೋಕಶಕ್ತಿಯಾದ ಬಾಬೆಲಿನ ಪತನವು ಯೆಹೋವನ ದೇವತ್ವದ ಒಂದು ಪ್ರದರ್ಶನವಾಗಿದ್ದು, ಆರಾಧನೆಗೆ ಆತನೊಬ್ಬನೇ ಯೋಗ್ಯನೆಂಬುದಕ್ಕೆ ಎಲ್ಲರಿಗೂ ಇರುವ ರುಜುವಾತಾಗಿದೆ. ದೇವಜನರಿಗಾಗುವ ಬಿಡುಗಡೆಯ ಕಾರಣ, ಮೂಡಲಿಂದ ಪಡುವಲ ತನಕ ಇರುವ ಅನೇಕ ಜನಾಂಗಗಳ ಜನರು, ಯೆಹೋವ ದೇವರೊಬ್ಬನೇ ಸತ್ಯ ದೇವರೆಂದು ಒಪ್ಪಿಕೊಳ್ಳುವರು.​—⁠ಮಲಾಕಿಯ 1:⁠11.

11. ಯೆಹೋವನಿಗೆ ಬಾಬೆಲಿನ ಕುರಿತಾದ ತನ್ನ ಉದ್ದೇಶವನ್ನು ನೆರವೇರಿಸುವ ಶಕ್ತಿ ಇದೆಯೆಂಬುದನ್ನು ಆತನು ಹೇಗೆ ಚಿತ್ರಿಸುತ್ತಾನೆ?

11 ಯೆಶಾಯನ ಈ ಪ್ರವಾದನೆಯು ಆ ಘಟನೆಯು ನಡೆಯುವುದಕ್ಕಿಂತಲೂ ಸುಮಾರು 200 ವರ್ಷಗಳ ಹಿಂದೆ ಬರೆಯಲ್ಪಟ್ಟಿತ್ತೆಂಬುದು ನೆನಪಿರಲಿ. ಇದರ ಸುದ್ದಿ ತಿಳಿದು ಬಂದಾಗ ಕೆಲವರು, ‘ಇದನ್ನು ನೆರವೇರಿಸಲು ಯೆಹೋವನಿಗೆ ನಿಜವಾಗಿಯೂ ಶಕ್ತಿ ಇದ್ದೀತೆ?’ ಎಂದು ಪ್ರಶ್ನಿಸಿದ್ದಿರಬಹುದು. ಇತಿಹಾಸವು ಸಾಕ್ಷ್ಯವನ್ನು ಕೊಡುವಂತೆ, ಆತನಿಗೆ ಆ ಶಕ್ತಿ ಇದೆ. ಆತನು ಏನನ್ನು ಹೇಳುತ್ತಾನೊ ಅದನ್ನು ನೆರವೇರಿಸಲು ಶಕ್ತನೆಂದು ನಂಬುವುದು ಏಕೆ ನ್ಯಾಯಸಮ್ಮತವೆಂಬುದನ್ನು ಯೆಹೋವನು ಹೀಗೆ ಹೇಳುತ್ತ ವಿವರಿಸುತ್ತಾನೆ: “ನಾನು ಬೆಳಕಿಗೂ ಕತ್ತಲಿಗೂ ಸೃಷ್ಟಿಕರ್ತನು, ಮೇಲನ್ನೂ ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಯಿಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.” (ಯೆಶಾಯ 45:7) ಸೃಷ್ಟಿಯಲ್ಲಿರುವ ಸಕಲವೂ ಅಂದರೆ ಬೆಳಕಿನಿಂದ ಹಿಡಿದು ಕತ್ತಲೆಯ ವರೆಗೆ, ಮತ್ತು ಇತಿಹಾಸದಲ್ಲಿರುವ ಸಕಲವೂ ಅಂದರೆ ಮೇಲು ಮತ್ತು ಕೇಡು ಯೆಹೋವನ ನಿಯಂತ್ರಣದಲ್ಲಿದೆ. ಆತನು ಹಗಲಿನ ಬೆಳಕನ್ನು ಮತ್ತು ರಾತ್ರಿಯ ಕತ್ತಲೆಯನ್ನು ಸೃಷ್ಟಿಸುವಂತೆಯೇ, ಇಸ್ರಾಯೇಲಿಗೆ ಶಾಂತಿಯನ್ನು ಮತ್ತು ಬಾಬೆಲಿಗೆ ವಿಪತ್ತನ್ನು ತರುವನು. ಯೆಹೋವನಲ್ಲಿ ವಿಶ್ವವನ್ನು ಸೃಷ್ಟಿಸುವ ಶಕ್ತಿ ಇರುವಲ್ಲಿ, ತನ್ನ ಪ್ರವಾದನೆಯನ್ನು ನೆರವೇರಿಸುವ ಶಕ್ತಿಯೂ ಇರುವುದು. ಇದು ಕ್ರೈಸ್ತರಿಗೆ, ಅಂದರೆ ಪ್ರವಾದನ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಾಸಿಸುವವರಿಗೆ ಪುನರಾಶ್ವಾಸನೀಯವಾಗಿದೆ.

12. (ಎ) ಸಾಂಕೇತಿಕ ಆಕಾಶ ಮತ್ತು ಭೂಮಿ ಏನನ್ನು ಉತ್ಪಾದಿಸುವಂತೆ ಯೆಹೋವನು ಮಾಡುತ್ತಾನೆ? (ಬಿ) ಯೆಶಾಯ 45:8ರ ವಚನಗಳಲ್ಲಿ ಇಂದಿನ ಕ್ರೈಸ್ತರಿಗೆ ಸಾಂತ್ವನದ ಯಾವ ವಾಗ್ದಾನವಿದೆ?

12 ಬಂದಿಗಳಾಗಿದ್ದ ಯೆಹೂದ್ಯರಿಗಾಗಿ ಮುಂದೆ ಕಾದಿದ್ದ ವಿಷಯಗಳನ್ನು ಚಿತ್ರಿಸಲು ಯೆಹೋವನು ಸಮಂಜಸವಾಗಿಯೇ, ಸೃಷ್ಟಿಯಲ್ಲಿ ಕ್ರಮವಾಗಿ ಸಂಭವಿಸುವ ಸಂಗತಿಗಳನ್ನು ಉಪಯೋಗಿಸುತ್ತಾನೆ: “ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ವರ್ಷಿಸು, ಗಗನವು ಸುರಿಸಲಿ; ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ ಅದರೊಡನೆ ನೀತಿಫಲವನ್ನು ಬೆಳೆಯಿಸಲಿ, ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.” (ಯೆಶಾಯ 45:8) ಅಕ್ಷರಾರ್ಥದ ಆಕಾಶವು ಜೀವದಾಯಕವಾದ ಮಳೆಯನ್ನು ಸುರಿಸುವಂತೆಯೇ, ಯೆಹೋವನು ಸಂಕೇತಾರ್ಥದ ಆಕಾಶದಿಂದ ತನ್ನ ಜನರ ಮೇಲೆ ನೀತಿಯ ಪ್ರಭಾವಗಳ ಮಳೆಗರೆಯುವಂತೆ ಮಾಡುವನು. ಮತ್ತು ಅಕ್ಷರಶಃ ಭೂಮಿಯು ಒಡೆದು ಹೇರಳವಾದ ಫಸಲನ್ನು ಕೊಡುವಂತೆಯೇ, ಸಾಂಕೇತಿಕ ಭೂಮಿಯು ತನ್ನ ನೀತಿಯ ಉದ್ದೇಶಕ್ಕನುಸಾರ, ವಿಶೇಷವಾಗಿ ಬಾಬೆಲಿನಲ್ಲಿ ಸೆರೆಯಾಳುಗಳಾಗಿರುವ ತನ್ನ ಜನರ ರಕ್ಷಣೆಗಾಗಿ ಘಟನೆಗಳನ್ನು ಉತ್ಪಾದಿಸುವಂತೆ ಯೆಹೋವನು ಮಾಡುವನು. ಅದೇ ರೀತಿಯಲ್ಲಿ, ಯೆಹೋವನು 1919ರಲ್ಲಿ ತನ್ನ ಜನರನ್ನು ವಿಮೋಚಿಸಲು ‘ಆಕಾಶ’ ಮತ್ತು “ಭೂಮಿ” ಘಟನೆಗಳನ್ನು ಉತ್ಪಾದಿಸುವಂತೆ ಮಾಡಿದನು. ಇಂತಹ ಸಂಗತಿಗಳನ್ನು ನೋಡುವುದು ಇಂದಿನ ಕ್ರೈಸ್ತರನ್ನು ಹರ್ಷಿಸುವಂತೆ ಮಾಡುತ್ತದೆ. ಏಕೆ? ಏಕೆಂದರೆ ಈ ಘಟನೆಗಳು, ಅವರು ಸಾಂಕೇತಿಕ ಆಕಾಶವಾಗಿರುವ ದೇವರ ರಾಜ್ಯವು ನೀತಿಯ ಭೂಮಿಗೆ ಆಶೀರ್ವಾದಗಳನ್ನು ತರುವ ಸಮಯಕ್ಕಾಗಿ ಎದುರು ನೋಡುತ್ತಿರುವಾಗ ಅವರ ನಂಬಿಕೆಯನ್ನು ಬಲಪಡಿಸುತ್ತವೆ. ಆ ಸಮಯದಲ್ಲಿ, ಸಾಂಕೇತಿಕ ಆಕಾಶ ಮತ್ತು ಭೂಮಿಯಿಂದ ಬರಲಿರುವ ನೀತಿ ಮತ್ತು ರಕ್ಷಣೆಯು, ಬಾಬೆಲ್‌ ಪತನಗೊಂಡಾಗ ದೊರಕಿದ ನೀತಿ ಮತ್ತು ರಕ್ಷಣೆಗಿಂತ ಎಷ್ಟೋ ಮಿಗಿಲಾದದ್ದಾಗಿರುವುದು. ಅದು, ಯೆಶಾಯನ ಮಾತುಗಳ ಎಂತಹ ಮಹಿಮಾಭರಿತ ಅಂತಿಮ ನೆರವೇರಿಕೆಯಾಗಿರುವುದು!​—⁠2 ಪೇತ್ರ 3:13; ಪ್ರಕಟನೆ 21:⁠1.

ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುವುದರಿಂದ ಬರುವ ಆಶೀರ್ವಾದಗಳು

13. ಮಾನವರು ಯೆಹೋವನ ಉದ್ದೇಶಗಳ ವಿಷಯದಲ್ಲಿ ಸವಾಲೊಡ್ಡುವುದು ಹಾಸ್ಯಾಸ್ಪದವೇಕೆ?

13 ಈ ಭಾವೀ ಹರ್ಷಕರ ಆಶೀರ್ವಾದಗಳ ಕುರಿತಾದ ವರ್ಣನೆಯ ಬಳಿಕ, ಪ್ರವಾದನೆಯ ಬರಹ ಶೈಲಿಯು ಒಮ್ಮೆಲೇ ಬದಲಾಗುತ್ತದೆ. ಯೆಶಾಯನು ಈಗ ಇಮ್ಮಡಿ ದುರ್ಗತಿಯೊಂದನ್ನು ಪ್ರವಾದಿಸುತ್ತಾನೆ: “ಅಯ್ಯೋ, ತನ್ನನ್ನು ರೂಪಿಸಿದಾತನ ಸಂಗಡ ವ್ಯಾಜ್ಯವಾಡುವವನ ಗತಿ ಏನು! ಮಣ್ಣುಮಡಿಕೆಗಳಲ್ಲಿ ಅವನೂ ಒಂದು ಮಡಿಕೆಯಲ್ಲವೆ. ಮಣ್ಣು​—⁠ಏನು ಮಾಡುತ್ತೀ ಎಂದು ರೂಪಿಸುವವನನ್ನು ಕೇಳುವದುಂಟೇ? ನಿನ್ನ ಕಾರ್ಯವು [ನಿನ್ನ ವಿಷಯವಾಗಿ] ಅವನಿಗೆ ಕೈಯಿಲ್ಲ ಅಂದೀತೇ? ನೀನು ಹುಟ್ಟಿಸುವದೇನು ಎಂದು ತಂದೆಯನ್ನು ಕೇಳುವವನ ಪಾಡು ಪಾಡೇ! ನೀನು ಹೆರುವದೇನು ಎಂದು ಹೆಂಗಸನ್ನು ಕೇಳುವವನ ಗತಿ ಗತಿಯೇ!” (ಯೆಶಾಯ 45:​9, 10) ಯೆಹೋವನು ಮುಂತಿಳಿಸುವ ವಿಷಯದ ಕುರಿತು ಇಸ್ರಾಯೇಲ್ಯರು ಆಕ್ಷೇಪವೆತ್ತುತ್ತಾರೆಂದು ಸ್ಪಷ್ಟವಾಗುತ್ತದೆ. ಯೆಹೋವನು ತನ್ನ ಜನರನ್ನು ದೇಶಭ್ರಷ್ಟತೆಗೆ ಹೋಗಲು ಬಿಡನು ಎಂದು ಪ್ರಾಯಶಃ ಅವರು ನಂಬಿಕೊಂಡಿರಬಹುದು. ಇಲ್ಲವೆ, ದಾವೀದನ ವಂಶಸ್ಥನಾದ ರಾಜನ ಬದಲು ಅನ್ಯ ಜನಾಂಗದ ರಾಜನ ಮೂಲಕ ಇಸ್ರಾಯೇಲು ಬಿಡುಗಡೆ ಹೊಂದುವ ವಿಷಯದಲ್ಲಿ ಅವರು ತಪ್ಪು ಕಂಡುಹಿಡಿಯುತ್ತಿದ್ದಿರಬಹುದು. ಇಂತಹ ಆಕ್ಷೇಪಣೆಗಳ ಹುಚ್ಚುತನವನ್ನು ಚಿತ್ರಿಸಲು ಯೆಶಾಯನು, ಹಾಗೆ ಆಕ್ಷೇಪಿಸುವವರನ್ನು ಬಿಸಾಡಿ ಬಿಟ್ಟಿದ್ದ ಜೇಡಿಮಣ್ಣು ಮತ್ತು ಮಡಕೆಯ ಚೂರುಗಳು ತಮ್ಮ ರಚಕನ ವಿವೇಕವನ್ನು ಪ್ರಶ್ನಿಸುವಷ್ಟು ಅಹಂಕಾರವನ್ನು ತೋರಿಸುವುದಕ್ಕೆ ಹೋಲಿಸುತ್ತಾನೆ. ಕುಂಬಾರನೇ ರೂಪಿಸಿದ ವಸ್ತು ಈಗ ಆ ಕುಂಬಾರನಿಗೆ ಕೈಯಿಲ್ಲ ಅಥವಾ ರೂಪಿಸುವ ಶಕ್ತಿಯಿಲ್ಲ ಎಂದು ಹೇಳುತ್ತದೆ. ಎಂಥ ಮೂರ್ಖತನ! ಈ ಆಕ್ಷೇಪಕರು ತಂದೆತಾಯಿಗಳ ಅಧಿಕಾರವನ್ನು ಟೀಕಿಸುವಷ್ಟು ಮುಂದುವರಿದಿರುವ ಚಿಕ್ಕ ಮಕ್ಕಳಂತಿದ್ದಾರೆ.

14, 15. ‘ಪವಿತ್ರನು’ ಮತ್ತು ‘ರಚಕನು’ ಎಂಬ ಮಾತುಗಳು ಯೆಹೋವನ ವಿಷಯದಲ್ಲಿ ಏನನ್ನು ತಿಳಿಯಪಡಿಸುತ್ತವೆ?

14 ಇಂತಹ ಆಕ್ಷೇಪಕರಿಗೆ ಯೆಹೋವನು ಕೊಡುವ ಉತ್ತರವನ್ನು ಯೆಶಾಯನು ತಿಳಿಯಪಡಿಸುತ್ತಾನೆ: [ಆದರೂ] ಇಸ್ರಾಯೇಲ್ಯರ ಸದಮಲಸ್ವಾಮಿಯೂ [“ಪವಿತ್ರನೂ,” NW] ಸೃಷ್ಟಿಕರ್ತನೂ [“ರಚಕನೂ,” NW] ಆದ ಯೆಹೋವನ ಮಾತನ್ನು ಕೇಳಿರಿ​—⁠ಭವಿಷ್ಯತ್ತುಗಳ ವಿಷಯವಾಗಿ ನನ್ನನ್ನು ವಿಚಾರಿಸಿರಿ, ನಾನೇ ನಿರ್ಮಿಸಿದ ನನ್ನ ಮಕ್ಕಳ ವಿಷಯದಲ್ಲಿ ನನಗೆ ಏನನ್ನು ವಿಧಿಸಿದರೂ ವಿಧಿಸಿರಿ. ಭೂಲೋಕವನ್ನುಂಟುಮಾಡಿ ಅದರಲ್ಲಿನ ಮನುಷ್ಯರನ್ನು ಸೃಷ್ಟಿಸಿದವನು ನಾನೇ; ನನ್ನ ಕೈಗಳೇ ಆಕಾಶಮಂಡಲವನ್ನು ಹರಡಿದವು; ನಕ್ಷತ್ರಸೈನ್ಯಕ್ಕೆ ಅಪ್ಪಣೆಕೊಟ್ಟವನೂ ನಾನೇ. ನಾನು ಕೋರೆಷನನ್ನು ಧರ್ಮೋದ್ದೇಶದಿಂದ ಉನ್ನತಿಗೆ ತಂದು ನೇಮಿಸಿದ್ದೇನೆ, ಅವನ ಮಾರ್ಗಗಳನ್ನೆಲ್ಲಾ ಸರಾಗಮಾಡುವೆನು; ಅವನು ನನ್ನ ಪಟ್ಟಣವನ್ನು ತಿರಿಗಿ ಕಟ್ಟಿ ಕ್ರಯವನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ಸೆರೆಯಾದ ನನ್ನ ಜನರನ್ನು ಬಿಡುಗಡೆ ಮಾಡುವನು ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.”​—ಯೆಶಾಯ 45:​11-13.

15 ಯೆಹೋವನನ್ನು ‘ಪವಿತ್ರನು’ ಎಂದು ವರ್ಣಿಸುವುದು ಆತನ ಪವಿತ್ರತೆಯನ್ನು ಒತ್ತಿಹೇಳುತ್ತದೆ. ಮತ್ತು ಆತನನ್ನು ‘ರಚಕನು’ ಎಂದು ಕರೆಯುವುದು, ವಿಷಯಗಳು ಹೇಗೆ ವಿಕಾಸಗೊಳ್ಳಬೇಕು ಎಂಬುದನ್ನು ನಿರ್ಣಯಿಸುವ ಹಕ್ಕು ಸೃಷ್ಟಿಕರ್ತನಾದ ಆತನಿಗಿದೆ ಎಂಬುದನ್ನು ಒತ್ತಿಹೇಳುತ್ತದೆ. ಬರಲಿರುವ ಸಂಗತಿಗಳನ್ನು ಇಸ್ರಾಯೇಲ್ಯರಿಗೆ ತಿಳಿಸಲು ಮತ್ತು ತನ್ನ ಕೈಕೆಲಸವಾಗಿರುವ ಜನರನ್ನು ಪರಾಮರಿಸಲು ಯೆಹೋವನು ಶಕ್ತನಾಗಿದ್ದಾನೆ. ಮತ್ತೊಮ್ಮೆ, ಸೃಷ್ಟಿ ಮತ್ತು ಪ್ರಕಟನೆಯ ಮೂಲತತ್ತ್ವಗಳು ಒಂದಕ್ಕೊಂದು ಸಂಬಂಧಿಸಿವೆಯೆಂಬುದನ್ನು ತೋರಿಸಲಾಗುತ್ತದೆ. ಇಡೀ ವಿಶ್ವದ ಸೃಷ್ಟಿಕರ್ತನಾದ ಆತನಿಗೆ ಘಟನೆಗಳನ್ನು ತಾನು ನಿರ್ಣಯಿಸುವಂತೆ ನಡೆಸುವ ಹಕ್ಕಿದೆ. (1 ಪೂರ್ವಕಾಲವೃತ್ತಾಂತ 29:​11, 12) ಈಗ ಚರ್ಚಿಸಲ್ಪಡುತ್ತಿರುವ ವಿಷಯದಲ್ಲಾದರೊ, ಪರಮಪ್ರಭುವು ಅನ್ಯನಾದ ಕೋರೆಷನನ್ನು ಇಸ್ರಾಯೇಲಿನ ವಿಮೋಚಕನಾಗಿ ನೇಮಿಸಲು ನಿರ್ಣಯಿಸಿದ್ದಾನೆ. ಕೋರೆಷನ ಬರೋಣವು ಇನ್ನೂ ಭವಿಷ್ಯದಲ್ಲಿ ಆಗಬೇಕಾದರೂ, ಅದು ಆಕಾಶ ಮತ್ತು ಭೂಮಿಯು ಅಸ್ತಿತ್ವದಲ್ಲಿರುವುದು ಎಷ್ಟು ನಿಜವೊ ಅಷ್ಟೇ ಖಂಡಿತವಾಗಿದೆ. ಹಾಗಿರುವಾಗ, ಇಸ್ರಾಯೇಲ್ಯರಲ್ಲಿ ಯಾವನು “ಸೇನಾಧೀಶ್ವರನಾದ ಯೆಹೋವ”ನಾಗಿರುವ ತಂದೆಯನ್ನು ಟೀಕಿಸಲು ಸಾಹಸಪಟ್ಟಾನು?

16. ಯೆಹೋವನ ಸೇವಕರು ಆತನಿಗೆ ಏಕೆ ಅಧೀನರಾಗಿರಬೇಕು?

16 ಯೆಶಾಯನ ಈ ಮಾತುಗಳಲ್ಲೇ ದೇವರ ಸೇವಕರು ಆತನಿಗೆ ಏಕೆ ಅಧೀನರಾಗಿರಬೇಕೆಂಬುದಕ್ಕೆ ಇನ್ನೊಂದು ಕಾರಣವು ಅಡಕವಾಗಿದೆ. ಆತನ ನಿರ್ಣಯಗಳು ಸದಾ ಆತನ ಸೇವಕರ ಪರಮಹಿತಕ್ಕಾಗಿರುತ್ತವೆ. (ಯೋಬ 36:⁠3) ತನ್ನ ಜನರು ತಾವೇ ಪ್ರಯೋಜನ ಪಡೆದುಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ ಆತನು ನಿಯಮಗಳನ್ನು ಮಾಡಿದನು. (ಯೆಶಾಯ 48:17) ಕೋರೆಷನ ದಿನಗಳಲ್ಲಿ ಯೆಹೋವನ ಪರಮಾಧಿಕಾರವನ್ನು ಒಪ್ಪಿಕೊಂಡ ಯೆಹೂದ್ಯರು ಇದು ನಿಜವೆಂದು ಕಂಡುಕೊಳ್ಳುತ್ತಾರೆ. ಆಗ, ಯೆಹೋವನ ನೀತಿಗನುಸಾರ ವರ್ತಿಸಿದ ಕೋರೆಷನು ಅವರು ದೇವಾಲಯವನ್ನು ಕಟ್ಟಸಾಧ್ಯವಾಗುವಂತೆ ಅವರನ್ನು ಸ್ವದೇಶಕ್ಕೆ ಕಳುಹಿಸುತ್ತಾನೆ. (ಎಜ್ರ 6:3-5) ಹಾಗೆಯೇ ಇಂದು ಕೂಡ, ದೇವರ ನಿಯಮಗಳನ್ನು ದೈನಂದಿನ ಜೀವಿತಗಳಲ್ಲಿ ಅನ್ವಯಿಸಿಕೊಂಡು ಆತನ ಪರಮಾಧಿಕಾರಕ್ಕೆ ಅಧೀನರಾಗುವವರು ಆಶೀರ್ವಾದಗಳನ್ನು ಅನುಭವಿಸುತ್ತಾರೆ.​—⁠ಕೀರ್ತನೆ 1:​1-3; 19:7; 119:105; ಯೋಹಾನ 8:​31, 32.

ಬೇರೆ ಜನಾಂಗಗಳಿಗೆ ಆಶೀರ್ವಾದಗಳು

17. ಯೆಹೋವನ ರಕ್ಷಣಾಕಾರ್ಯಗಳಿಂದ ಇಸ್ರಾಯೇಲ್ಯರಲ್ಲದೆ ಇನ್ನಾರು ಪ್ರಯೋಜನ ಪಡೆಯುವರು, ಮತ್ತು ಹೇಗೆ?

17 ಬಾಬೆಲಿನ ಪತನದಿಂದ ಪ್ರಯೋಜನ ಸಿಗುವುದು ಇಸ್ರಾಯೇಲಿಗೆ ಮಾತ್ರವಲ್ಲ. ಯೆಶಾಯನು ಹೇಳುವುದು: “ಯೆಹೋವನ ಈ ಮಾತನ್ನು ಕೇಳಿರಿ​—⁠ಐಗುಪ್ತದ ಆದಾಯವೂ [“ಕೂಲಿ ಪಡೆದಿರದ ಕಾರ್ಮಿಕರೂ,” NW] ಕೂಷಿನ ವ್ಯಾಪಾರವೂ [“ವ್ಯಾಪಾರಿಗಳೂ,” NW] ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು​—⁠ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.” (ಯೆಶಾಯ 45:14) ಮೋಶೆಯ ದಿನಗಳಲ್ಲಿ ಇಸ್ರಾಯೇಲ್ಯರು ಐಗುಪ್ತದಿಂದ ಹೊರಟಾಗ, “ಬಹುಮಂದಿ ಅನ್ಯರು” ಅವರೊಂದಿಗೆ ಜೊತೆಗೂಡಿದರು. (ವಿಮೋಚನಕಾಂಡ 12:​37, 38) ಅದೇ ರೀತಿ, ಬಾಬೆಲಿನಿಂದ ಸ್ವದೇಶಕ್ಕೆ ಹೋಗುವ ಯೆಹೂದ್ಯರೊಂದಿಗೆ ವಿದೇಶೀಯರೂ ಜೊತೆಗೂಡಲಿದ್ದರು. ಈ ಇಸ್ರಾಯೇಲ್ಯೇತರರು ಜೊತೆಗೆ ಹೋಗುವಂತೆ ಒತ್ತಾಯಿಸಲ್ಪಟ್ಟಿಲ್ಲ, ಬದಲಾಗಿ ತಾವೇ ‘ಅವರಲ್ಲಿಗೆ ಸೇರುವರು.’ “ನಿಮ್ಮ ಮುಂದೆ ಅಡ್ಡ”ಬೀಳುವರು, “ಅರಿಕೆಮಾಡುವರು” ಎಂದು ಯೆಹೋವನು ಹೇಳುವಾಗ, ಈ ವಿದೇಶೀಯರು ಇಸ್ರಾಯೇಲ್ಯರಿಗೆ ತೋರಿಸುವ ಮನಃಪೂರ್ವಕ ಅಧೀನತೆ ಮತ್ತು ನಿಷ್ಠೆಯನ್ನು ಸೂಚಿಸುತ್ತಾನೆ. ಅವರು “ಸಂಕೋಲೆಗಳನ್ನು ಕಟ್ಟಿಕೊಂಡು” ಬರುವುದಾದರೆ ಅದು ಅವರ ಸ್ವಂತ ಇಷ್ಟದಿಂದ ಆಗಿರುವುದು. ಮತ್ತು ಇದು ಯಾರಿಗೆ ಅವರು “ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ” ಎಂದು ಹೇಳುತ್ತಾರೊ ಆ ದೇವರ ಒಡಂಬಡಿಕೆಯ ಜನರ ಸೇವೆಮಾಡಲು ತಮಗಿರುವ ಸ್ವಪ್ರೇರಣೆಯನ್ನು ಸೂಚಿಸುತ್ತದೆ. ಅವರು ಯೆಹೋವನನ್ನು, ಇಸ್ರಾಯೇಲ್ಯರೊಂದಿಗೆ ಆತನು ಮಾಡಿದ ಒಡಂಬಡಿಕೆಯ ಷರತ್ತುಗಳಿಗನುಸಾರ ಯೆಹೂದಿ ಮತಾವಲಂಬಿಗಳಾಗಿ ಆರಾಧಿಸುವರು.​—⁠ಯೆಶಾಯ 56:⁠6.

18. ಯೆಹೋವನು ‘ದೇವರ ಇಸ್ರಾಯೇಲನ್ನು’ ಬಿಡುಗಡೆಮಾಡಿದ್ದರಿಂದ ಯಾರು ಪ್ರಯೋಜನ ಪಡೆದಿದ್ದಾರೆ, ಮತ್ತು ಯಾವ ವಿಧಗಳಲ್ಲಿ?

18 ‘ದೇವರ ಇಸ್ರಾಯೇಲ್‌’ ಆತ್ಮಿಕ ಬಂಧನದಿಂದ ಬಿಡುಗಡೆಹೊಂದಿದ ವರ್ಷವಾದ 1919ರಿಂದ, ಯೆಶಾಯನ ಮಾತುಗಳು ಕೋರೆಷನ ದಿನಗಳಿಗಿಂತ ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವೇರಿವೆ. ಯೆಹೋವನನ್ನು ಸೇವಿಸಲು ಭೂವ್ಯಾಪಕವಾಗಿ ಲಕ್ಷಾಂತರ ಜನರು ಮನಃಪೂರ್ವಕವಾಗಿ ಸಿದ್ಧರಿದ್ದಾರೆ. (ಗಲಾತ್ಯ 6:16; ಜೆಕರ್ಯ 8:23) ಯೆಶಾಯನು ತಿಳಿಸಿದ ‘ಕಾರ್ಮಿಕರು’ ಮತ್ತು “ವ್ಯಾಪಾರಿ”ಗಳಂತೆ, ಅವರು ಸತ್ಯಾರಾಧನೆಯನ್ನು ಬೆಂಬಲಿಸಲಿಕ್ಕಾಗಿ ತಮ್ಮ ಶಾರೀರಿಕ ಬಲವನ್ನೂ ಆರ್ಥಿಕ ಸಂಪತ್ತುಗಳನ್ನೂ ಸಂತೋಷದಿಂದ ಉಪಯೋಗಿಸುತ್ತಾರೆ. (ಮತ್ತಾಯ 25:34-40; ಮಾರ್ಕ 12:⁠30) ಅವರು ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡು, ಆತನ ಮಾರ್ಗಗಳಲ್ಲಿ ನಡೆದು ಸಂತೋಷದಿಂದ ಆತನ ದಾಸರಾಗುತ್ತಾರೆ. (ಲೂಕ 9:23) ಯೆಹೋವನೊಂದಿಗೆ ವಿಶೇಷ ರೀತಿಯ ಒಡಂಬಡಿಕೆಯಲ್ಲಿರುವ ದೇವರ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನ ಜೊತೆ ಸಹವಾಸಿಸುವುದರಿಂದ ಬರುವ ಪ್ರಯೋಜನಗಳನ್ನು ಸವಿಯುತ್ತ, ಅವರು ಯೆಹೋವನನ್ನು ಮಾತ್ರ ಆರಾಧಿಸುತ್ತಾರೆ. (ಮತ್ತಾಯ 24:​45-47; 26:28; ಇಬ್ರಿಯ 8:​8-13) ಅವರು ಆ ಒಡಂಬಡಿಕೆಯಲ್ಲಿ ಭಾಗಿಗಳಾಗಿರದಿದ್ದರೂ, ಆ ‘ಕಾರ್ಮಿಕರು’ ಮತ್ತು ‘ವ್ಯಾಪಾರಿಗಳು’ ಅದರಿಂದ ಪ್ರಯೋಜನವನ್ನು ಪಡೆಯುತ್ತಾರೆ. ಅವರು ಅದರ ನಿಯಮಗಳಿಗೆ ವಿಧೇಯತೆ ತೋರಿಸುತ್ತ, “ಇನ್ನು ಯಾವ ದೇವರೂ ಇಲ್ಲವೇ ಇಲ್ಲ”ವೆಂದು ಧೈರ್ಯದಿಂದ ಪ್ರಕಟಿಸುತ್ತಾರೆ. ಇಂತಹ ಸ್ವಪ್ರೇರಣೆಯ ಬೆಂಬಲಿಗರ ಸಂಖ್ಯೆಯಲ್ಲಿ ಆಗುತ್ತಿರುವ ಮಹಾ ಅಭಿವೃದ್ಧಿಗೆ ಇಂದು ಪ್ರತ್ಯಕ್ಷ ಸಾಕ್ಷಿಗಳಾಗಿರುವುದು ಅದೆಷ್ಟು ರೋಮಾಂಚನೀಯವಾದದ್ದಾಗಿದೆ!​—⁠ಯೆಶಾಯ 60:⁠22.

19. ವಿಗ್ರಹಗಳನ್ನು ಆರಾಧಿಸಲು ಪಟ್ಟುಹಿಡಿಯುವವರಿಗೆ ಏನಾಗುವುದು?

19 ಜನಾಂಗಗಳ ಜನರು ಯೆಹೋವನನ್ನು ಆರಾಧಿಸುವುದರಲ್ಲಿ ಜೊತೆಗೂಡುತ್ತಾರೆಂದು ತಿಳಿಸಿದ ಬಳಿಕ, ಆ ಪ್ರವಾದಿಯು ಗಟ್ಟಿಯಾಗಿ ಹೇಳುವುದು: “ಇಸ್ರಾಯೇಲ್ಯರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ”! (ಯೆಶಾಯ 45:15) ಯೆಹೋವನು ಈಗ ತನ್ನ ಶಕ್ತಿಯನ್ನು ತೋರಿಸುವುದನ್ನು ತಡೆದು ಹಿಡಿಯುತ್ತಾನಾದರೂ, ಭವಿಷ್ಯತ್ತಿನಲ್ಲಿ ಆತನು ತನ್ನನ್ನು ಮರೆಮಾಡಿಕೊಳ್ಳನು. ತಾನು ಇಸ್ರಾಯೇಲ್ಯರ ದೇವರು, ತನ್ನ ಜನರ ರಕ್ಷಕನು ಎಂಬುದನ್ನು ಆತನು ತೋರಿಸಿಕೊಡುವನು. ಆದರೆ ಯೆಹೋವನು ವಿಗ್ರಹಗಳಲ್ಲಿ ಭರವಸೆಯಿಡುವವರಿಗೆ ರಕ್ಷಕನಾಗುವುದಿಲ್ಲ. ಇಂತಹವರ ವಿಷಯದಲ್ಲಿ ಯೆಶಾಯನು ಹೇಳುವುದು: “ಮೂರ್ತಿಗಳನ್ನುಂಟುಮಾಡುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು, ಹೌದು, ಒಟ್ಟಿಗೆ ಅವಮಾನದಲ್ಲಿ ಮುಣುಗುವರು.” (ಯೆಶಾಯ 45:16) ಅವರಿಗಾಗುವ ಅವಮಾನವು ತಾತ್ಕಾಲಿಕವಾದ ಅಪಕೀರ್ತಿ ಅಥವಾ ನಾಚಿಕೆಯಾಗಿರದು. ಯೆಹೋವನು ಇಸ್ರಾಯೇಲಿಗೆ ಮುಂದೆ ನೀಡುವ ವಾಗ್ದಾನಕ್ಕೆ ಪ್ರತಿಕೂಲವಾಗಿರುವ ಮರಣವು ಅದಾಗಿರುವುದು.

20. ಇಸ್ರಾಯೇಲು “ಶಾಶ್ವತರಕ್ಷಣೆ”ಯನ್ನು ಪಡೆಯುವುದು ಯಾವ ವಿಧದಲ್ಲಿ?

20“ಇಸ್ರಾಯೇಲಿಗೋ ಯೆಹೋವನಿಂದ [“ಯೆಹೋವನೊಂದಿಗೆ ಐಕ್ಯದಿಂದ,” NW] ಶಾಶ್ವತರಕ್ಷಣೆ ದೊರೆಯುವದು; ಯುಗಯುಗಾಂತರಕ್ಕೂ ನೀವು ನಾಚಿಕೆಗೀಡಾಗುವದಿಲ್ಲ, ಮಾನಭಂಗಪಡುವದಿಲ್ಲ.” (ಯೆಶಾಯ 45:17) ಯೆಹೋವನು ಇಸ್ರಾಯೇಲಿಗೆ ನಿತ್ಯ ರಕ್ಷಣೆಯನ್ನು ವಾಗ್ದಾನಿಸುತ್ತಾನಾದರೂ ಅದು ಷರತ್ತುಳ್ಳದ್ದಾಗಿದೆ. ಇಸ್ರಾಯೇಲು “ಯೆಹೋವನೊಂದಿಗೆ ಐಕ್ಯದಿಂದ” ಇರಬೇಕಾಗಿದೆ. ಮೆಸ್ಸೀಯನಾದ ಯೇಸುವನ್ನು ತಿರಸ್ಕರಿಸುವ ಮೂಲಕ ಆ ಐಕ್ಯವನ್ನು ಇಸ್ರಾಯೇಲ್‌ ಮುರಿಯುವಲ್ಲಿ, ಅದಕ್ಕಿರುವ “ಶಾಶ್ವತರಕ್ಷಣೆ”ಯ ಪ್ರತೀಕ್ಷೆಯನ್ನು ಅದು ಕಳೆದುಕೊಳ್ಳುವುದು. ಆದರೂ, ಇಸ್ರಾಯೇಲಿನಲ್ಲಿ ಕೆಲವರು ಯೇಸುವಿನಲ್ಲಿ ನಂಬಿಕೆಯಿಡುವರು ಮತ್ತು ಅವರು ದೇವರ ಇಸ್ರಾಯೇಲಿನ ಕೇಂದ್ರಭಾಗವಾಗಿ ಪರಿಣಮಿಸುವರು. ಹೀಗೆ ಅವರು ಮಾಂಸಿಕ ಇಸ್ರಾಯೇಲಿನ ಸ್ಥಾನವನ್ನು ತೆಗೆದುಕೊಳ್ಳುವರು. (ಮತ್ತಾಯ 21:43; ಗಲಾತ್ಯ 3:​28, 29; 1 ಪೇತ್ರ 2:⁠9) ಈ ಆತ್ಮಿಕ ಇಸ್ರಾಯೇಲು ಎಂದಿಗೂ ಅವಮಾನಕ್ಕೊಳಗಾಗದು. ಅದು “ಶಾಶ್ವತವಾದ ಒಡಂಬಡಿಕೆ”ಯೊಳಗೆ ತರಲ್ಪಡುವುದು.​—⁠ಇಬ್ರಿಯ 13:⁠20.

ಸೃಷ್ಟಿಯಲ್ಲಿ ಮತ್ತು ಪ್ರಕಟನೆಯಲ್ಲಿ ಯೆಹೋವನು ಭರವಸಾರ್ಹನು

21. ಸೃಷ್ಟಿಯಲ್ಲಿಯೂ ಪ್ರಕಟನೆಯಲ್ಲಿಯೂ ತಾನು ಪೂರ್ತಿ ಭರವಸಾರ್ಹನೆಂದು ಯೆಹೋವನು ತೋರಿಸುವುದು ಹೇಗೆ?

21 ಇಸ್ರಾಯೇಲಿಗೆ ಕೊಟ್ಟ ಯೆಹೋವನ ನಿತ್ಯರಕ್ಷಣೆಯ ವಾಗ್ದಾನದಲ್ಲಿ ಯೆಹೂದ್ಯರು ಭರವಸೆಯಿಡಬಲ್ಲರೊ? ಯೆಶಾಯನು ಉತ್ತರ ಕೊಡುವುದು: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ​—⁠ನಾನೇ ಯೆಹೋವನು, ಇನ್ನು ಯಾವನೂ ಅಲ್ಲ. ನಾನು ರಹಸ್ಯದಲ್ಲಿ ನುಡಿದವನಲ್ಲ, ತಮೋಲೋಕದೊಳಗಿಂದ ಮಾತಾಡಿದವನಲ್ಲ, ಶೂನ್ಯವನ್ನೋ ಎಂಬಂತೆ ನನ್ನನ್ನು ಹುಡುಕಿರಿ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೇ ಆಡುತ್ತೇನೆ.” (ಯೆಶಾಯ 45:18, 19) ಈ ಅಧ್ಯಾಯದಲ್ಲಿ ನಾಲ್ಕನೆಯ ಮತ್ತು ಕೊನೆಯ ಬಾರಿ, ಯೆಶಾಯನು ಒಂದು ಮಹತ್ವಪೂರ್ಣ ಪ್ರವಾದನ ಭಾಗವನ್ನು, “ಯೆಹೋವನ ಮಾತನ್ನು ಕೇಳಿರಿ” ಎಂದು ಹೇಳಿ ಪ್ರಾರಂಭಿಸುತ್ತಾನೆ. (ಯೆಶಾಯ 45:​1, 11, 14) ಯೆಹೋವನು ಅನ್ನುವುದೇನು? ಸೃಷ್ಟಿಯಲ್ಲಿಯೂ ಪ್ರಕಟನೆಯಲ್ಲಿಯೂ ತಾನು ಭರವಸಾರ್ಹನೆಂದೇ. ಆತನು ಭೂಮಿಯನ್ನು “ಶೂನ್ಯಸ್ಥಾನವಾಗಿರಲೆಂದು” ಸೃಷ್ಟಿಸಲಿಲ್ಲ. ಅದೇ ರೀತಿ, ತನ್ನ ಜನರಾದ ಇಸ್ರಾಯೇಲ್ಯರು ತನ್ನನ್ನು “ಶೂನ್ಯವನ್ನೋ ಎಂಬಂತೆ” ಹುಡುಕಬೇಕೆಂದು ಆತನು ಹೇಳುವುದಿಲ್ಲ. ಭೂಮಿಯ ಕಡೆಗಿರುವ ದೇವರ ಉದ್ದೇಶವು ಹೇಗೆ ನೆರವೇರುವುದೊ ಹಾಗೆಯೇ ತನ್ನ ಚುನಾಯಿತ ಜನರ ಕಡೆಗಿರುವ ದೇವರ ಉದ್ದೇಶವೂ ನೆರವೇರಲಿರುವುದು. ಸುಳ್ಳು ದೇವರುಗಳನ್ನು ಸೇವಿಸುವವರ ಅಸ್ಪಷ್ಟವಾದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಯೆಹೋವನ ಮಾತುಗಳು ಬಹಿರಂಗವಾಗಿ ಹೇಳಲ್ಪಟ್ಟಿರುತ್ತವೆ. ಆತನ ಮಾತುಗಳು ಸಾಧಾರವಾದವುಗಳು ಮತ್ತು ಖಂಡಿತ ನೆರವೇರುವವು. ಆತನ ಸೇವೆಮಾಡುವವರು ಆತನನ್ನು ವ್ಯರ್ಥವಾಗಿ ಸೇವಿಸರು.

22. (ಎ) ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರು ಯಾವುದರ ಕುರಿತು ಖಾತ್ರಿಯಿಂದಿರಸಾಧ್ಯವಿತ್ತು? (ಬಿ) ಇಂದು ಕ್ರೈಸ್ತರಿಗೆ ಯಾವ ಆಶ್ವಾಸನೆಯಿದೆ?

22 ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ದೇವಜನರಿಗೆ ಈ ಮಾತುಗಳು ವಾಗ್ದಾನ ದೇಶವು ಹಾಳುಬಿದ್ದಿರುವುದಿಲ್ಲವೆಂಬುದಕ್ಕೆ ಆಶ್ವಾಸನೆಯಾಗಿವೆ. ಅದರಲ್ಲಿ ಜನರು ಪುನಃ ಜೀವಿಸಲಿದ್ದರು. ಮತ್ತು ಯೆಹೋವನು ಅವರಿಗೆ ಕೊಟ್ಟ ಈ ವಾಗ್ದಾನಗಳು ನೆರವೇರಿದವು. ವಿಸ್ತರಣಾರ್ಥದಲ್ಲಿ, ಯೆಶಾಯನ ಮಾತುಗಳು ಇಂದಿನ ದೇವಜನರಿಗೆ ಈ ಭೂಮಿಯು ಹಾಳುಬೀಳುವುದಿಲ್ಲವೆಂಬುದಕ್ಕೆ ಆಶ್ವಾಸನೆಯಾಗಿವೆ. ಅಂದರೆ, ಕೆಲವರು ಹೇಳುವಂತೆ ಅದು ಬೆಂಕಿಯಿಂದ ಸುಟ್ಟು ಹೋಗುವುದೂ ಇಲ್ಲ, ಇಲ್ಲವೆ ಇನ್ನಿತರರು ಭಯಪಡುವಂತೆ, ನ್ಯೂಕ್ಲಿಯರ್‌ ಬಾಂಬುಗಳಿಂದ ನಾಶಗೊಳ್ಳುವುದೂ ಇಲ್ಲ. ಭೂಮಿಯು ಸದಾಕಾಲ ಇದ್ದು, ಪರದೈಸಿನ ಸೌಂದರ್ಯದಿಂದ ಆವೃತವಾಗಿ, ನೀತಿವಂತರಿಂದ ನಿವಾಸಿತವಾಗಬೇಕೆಂದು ದೇವರು ಉದ್ದೇಶಿಸುತ್ತಾನೆ. (ಕೀರ್ತನೆ 37:​11, 29; 115:16; ಮತ್ತಾಯ 6:​9, 10; ಪ್ರಕಟನೆ 21:​3, 4) ಹೌದು, ಇಸ್ರಾಯೇಲ್ಯರ ಸಂಬಂಧದಲ್ಲಿ ಯೆಹೋವನ ಮಾತುಗಳು ವಿಶ್ವಾಸಾರ್ಹವಾದಂತೆಯೇ ಈಗಲೂ ಆಗುವವು.

ಯೆಹೋವನು ತನ್ನ ಕರುಣೆಯ ಹಸ್ತವನ್ನು ಚಾಚುತ್ತಾನೆ

23. ವಿಗ್ರಹಗಳನ್ನು ಆರಾಧಿಸುವವರಿಗೆ ಏನಾಗುತ್ತದೆ, ಮತ್ತು ಯೆಹೋವನನ್ನು ಆರಾಧಿಸುವವರಿಗೆ ಏನಾಗುತ್ತದೆ?

23 ಯೆಹೋವನ ಮುಂದಿನ ಮಾತುಗಳಲ್ಲಿ ಇಸ್ರಾಯೇಲಿಗಾಗುವ ರಕ್ಷಣೆಯನ್ನು ಒತ್ತಿಹೇಳಲಾಗುತ್ತದೆ: “ತಪ್ಪಿಸಿಕೊಂಡ ಅನ್ಯಜನರೇ, ನೆರೆದು ಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ಬೊಂಬೆಯನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನಯಿಸುವವರು ಏನೂ ತಿಳಿಯದವರಾಗಿದ್ದಾರೆ. ಹೇಳಿರಿ, ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ, ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಆಲೋಚಿಸಿಕೊಳ್ಳಲಿ. ಪೂರ್ವದಿಂದಲೂ ಈ ಸಂಗತಿಯನ್ನು ಪ್ರಕಟಿಸಿದವರು ಯಾರು? ಅದು ನಡೆಯುವದಕ್ಕೆ ಮುಂಚೆ ಯಾರು ತಿಳಿಸಿದರು? ಯೆಹೋವನೆಂಬ ನಾನಲ್ಲವೆ. ನಾನು ಹೊರತು ಇನ್ನು ಯಾವ ದೇವರೂ ಇಲ್ಲ, ನನ್ನ ವಿನಹ ಸತ್ಯಸ್ವರೂಪನೂ ರಕ್ಷಕನೂ ಆದ ದೇವರು [“ನೀತಿಯ ದೇವರು ಮತ್ತು ರಕ್ಷಕನು,” NW] ಇಲ್ಲವೇ ಇಲ್ಲ.” (ಯೆಶಾಯ 45:20, 21) ಯೆಹೋವನು “ತಪ್ಪಿಸಿಕೊಂಡ” ಜನರನ್ನು ಕರೆದು, ಅವರು ತಮ್ಮ ರಕ್ಷಣೆಯನ್ನು ವಿಗ್ರಹಾರಾಧಕರಿಗೆ ಸಂಭವಿಸುವ ಗತಿಗೆ ಹೋಲಿಸಿ ನೋಡುವಂತೆ ಹೇಳುತ್ತಾನೆ. (ಧರ್ಮೋಪದೇಶಕಾಂಡ 30:3; ಯೆರೆಮೀಯ 29:14; 50:28) ವಿಗ್ರಹಾರಾಧಕರು ತಮ್ಮನ್ನು ರಕ್ಷಿಸಲಾರದಂಥ ಶಕ್ತಿಹೀನ ದೇವರುಗಳಿಗೆ ಪ್ರಾರ್ಥಿಸಿ, ಅವರನ್ನು ಸೇವಿಸುವುದರಿಂದ “ಏನೂ ತಿಳಿಯದವರಾಗಿದ್ದಾರೆ.” ಅವರ ಆರಾಧನೆ ನಿಷ್ಪ್ರಯೋಜಕವಾಗಿದೆ, ವ್ಯರ್ಥವಾಗಿದೆ. ಆದರೂ, ಯೆಹೋವನನ್ನು ಆರಾಧಿಸುವವರು, ಆತನು “ಪೂರ್ವದಿಂದಲೂ” ಮುಂತಿಳಿಸಿದಂಥ ಘಟನೆಗಳನ್ನು, ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದವರ ರಕ್ಷಣೆಯನ್ನು ಸಹ ನೆರವೇರಿಸುವ ಶಕ್ತಿ ಆತನಿಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇಂತಹ ಶಕ್ತಿ ಹಾಗೂ ದೂರದೃಷ್ಟಿಯು ಯೆಹೋವನನ್ನು ಇತರ ದೇವರುಗಳಿಂದ ಪ್ರತ್ಯೇಕವಾಗಿರಿಸುತ್ತದೆ. ಆತನು “ನೀತಿಯ ದೇವರು ಮತ್ತು ರಕ್ಷಕನು” ಆಗಿರುವುದು ನಿಜ.

‘ರಕ್ಷಣೆಯುಂಟಾದದಕ್ಕಾಗಿ ನಮ್ಮ ದೇವರಿಗೆ ಸ್ತೋತ್ರ’

24, 25. (ಎ) ಯೆಹೋವನು ಯಾವ ಆಮಂತ್ರಣವನ್ನು ಕೊಡುತ್ತಾನೆ, ಮತ್ತು ಆತನ ವಾಗ್ದಾನದ ನೆರವೇರಿಕೆ ಏಕೆ ನಿಶ್ಚಯವಾಗಿದೆ? (ಬಿ) ಯೆಹೋವನು ನ್ಯಾಯವಾಗಿ ಏನನ್ನು ಕೇಳಿಕೊಳ್ಳುತ್ತಾನೆ?

24 ಯೆಹೋವನ ಕರುಣೆಯು ಆತನು ಈ ಆಮಂತ್ರಣವನ್ನು ಕೊಡುವಂತೆ ಪ್ರೇರಿಸುತ್ತದೆ: “ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ. ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಯೆಹೋವನಲ್ಲಿ ಮಾತ್ರ ಸತ್ಯಕಾರ್ಯಗಳೂ ಶಕ್ತಿಯೂ ಉಂಟು; ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಪಟ್ಟು ಆತನನ್ನು ಮರೆಹೊಗುವರು; ಇಸ್ರಾಯೇಲಿನ ಸಮಸ್ತಸಂತತಿಯವರೂ ಯೆಹೋವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು ಎಂದು ನನ್ನ ವಿಷಯವಾಗಿ ಜನರು ಅಂದುಕೊಳ್ಳುತ್ತಾರೆ.”​—ಯೆಶಾಯ 45:​22-25.

25 ಬಾಬೆಲಿನಲ್ಲಿದ್ದು ತನ್ನ ಕಡೆಗೆ ತಿರುಗುವವರೆಲ್ಲರನ್ನು ರಕ್ಷಿಸುತ್ತೇನೆಂದು ಯೆಹೋವನು ಮಾತುಕೊಡುತ್ತಾನೆ. ಆತನ ಈ ಪ್ರವಾದನೆಯು ವಿಫಲಗೊಳ್ಳುವುದಂತೂ ಅಸಾಧ್ಯ, ಏಕೆಂದರೆ ಯೆಹೋವನಿಗೆ ತನ್ನ ಜನರನ್ನು ರಕ್ಷಿಸಲು ಇಷ್ಟವೂ ಇದೆ, ಸಾಮರ್ಥ್ಯವೂ ಇದೆ. (ಯೆಶಾಯ 55:11) ದೇವರ ಮಾತುಗಳು ತಾವೇ ಭರವಸಾರ್ಹವಾಗಿವೆಯಾದರೂ, ಅವುಗಳನ್ನು ದೃಢೀಕರಿಸಲು ಯೆಹೋವನು ಆಣೆಯನ್ನಿಡುವಾಗ ಅವು ಇನ್ನೂ ಹೆಚ್ಚು ಭರವಸಾರ್ಹವಾಗುತ್ತವೆ. (ಇಬ್ರಿಯ 6:13) ಆತನು ತನ್ನ ಅನುಗ್ರಹವನ್ನು ಪಡೆಯಲಿಚ್ಛಿಸುವವರಿಂದ ಅಧೀನತೆ (‘ಎಲ್ಲರೂ ಅಡ್ಡಬೀಳುವರು’) ಮತ್ತು ಬದ್ಧತೆ (‘ಎಲ್ಲರೂ ಪ್ರತಿಜ್ಞೆಮಾಡುವರು’)ಗಳನ್ನು ನ್ಯಾಯವಾಗಿ ಕೇಳಿಕೊಳ್ಳುತ್ತಾನೆ. ಯೆಹೋವನ ಆರಾಧನೆಯಲ್ಲಿ ಮುಂದುವರಿಯುವ ಇಸ್ರಾಯೇಲ್ಯರು ರಕ್ಷಿಸಲ್ಪಡುವರು. ಯೆಹೋವನು ತಮ್ಮ ಪರವಾಗಿ ಮಾಡುವ ವಿಷಯಗಳಲ್ಲಿ ಅವರು ಹೆಚ್ಚಳಪಡಲು ಶಕ್ತರಾಗಿರುವರು.​—⁠2 ಕೊರಿಂಥ 10:⁠17.

26. ತನ್ನ ಕಡೆಗೆ ತಿರುಗಲು ಯೆಹೋವನು ಕೊಡುವ ಆಮಂತ್ರಣಕ್ಕೆ ಸಕಲ ಜನಾಂಗಗಳ ಮಹಾ ಸಮೂಹವೊಂದು ಹೇಗೆ ಓಗೊಡುತ್ತಿದೆ?

26 ತನ್ನ ಕಡೆಗೆ ತಿರುಗಲು ದೇವರು ಕೊಟ್ಟ ಕರೆಯು ಪುರಾತನ ಕಾಲದ ಬಾಬೆಲಿನಲ್ಲಿದ್ದ ಸೆರೆಯಾಳುಗಳಿಗೆ ಮಾತ್ರ ಆಗಿರಲಿಲ್ಲ. (ಅ. ಕೃತ್ಯಗಳು 14:​14, 15; 15:19; 1 ತಿಮೊಥೆಯ 2:​3, 4) ಈ ಆಮಂತ್ರಣ ಈಗಲೂ ಕೊಡಲ್ಪಡುತ್ತಿದೆ ಮತ್ತು ‘ಸಕಲ ಜನಾಂಗಗಳ ಮಹಾ ಸಮೂಹವೊಂದು’ ಇದಕ್ಕೆ ಓಗೊಟ್ಟು, “ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ [ಯೇಸು] ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ” ಎಂದು ಘೋಷಣೆ ಮಾಡುತ್ತಿದೆ. (ಪ್ರಕಟನೆ 7:​9, 10; 15:⁠4) ಪ್ರತಿ ವರ್ಷ ಸಾವಿರಾರು ಮಂದಿ ಹೊಸಬರು ದೇವರ ಕಡೆಗೆ ತಿರುಗುತ್ತ, ಆತನ ಪರಮಾಧಿಕಾರವನ್ನು ಒಪ್ಪಿಕೊಂಡು, ಆತನಿಗೆ ತಮ್ಮ ನಿಷ್ಠೆಯನ್ನು ಬಹಿರಂಗವಾಗಿ ಪ್ರಕಟಿಸುವ ಮಹಾ ಸಮೂಹದ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಇದಕ್ಕೆ ಸೇರಿಸಿ, ಅವರು ‘ಅಬ್ರಹಾಮನ ಸಂತಾನ’ವಾಗಿರುವ ಆತ್ಮಿಕ ಇಸ್ರಾಯೇಲನ್ನು ನಿಷ್ಠೆಯಿಂದ ಬೆಂಬಲಿಸುತ್ತಾರೆ. (ಗಲಾತ್ಯ 3:29) “ಯೆಹೋವನಲ್ಲಿ ಮಾತ್ರ ಸತ್ಯಕಾರ್ಯಗಳೂ [“ಪೂರ್ಣ ನೀತಿ,” NW] ಶಕ್ತಿಯೂ ಉಂಟು” ಎಂದು ಲೋಕಾದ್ಯಂತ ಘೋಷಣೆ ಮಾಡುವ ಮೂಲಕ ಅವರು ಯೆಹೋವನ ನೀತಿಯ ಆಳ್ವಿಕೆಗಾಗಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. * ಜೀವದಿಂದಿರುವ ಎಲ್ಲರೂ ಕಟ್ಟಕಡೆಗೆ ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸಿ, ಆತನ ನಾಮವನ್ನು ಸತತವಾಗಿ ಸ್ತುತಿಸುವರು ಎಂಬುದನ್ನು ತೋರಿಸಲು, ರೋಮಾಪುರದವರಿಗೆ ಬರೆಯುವಾಗ ಅಪೊಸ್ತಲ ಪೌಲನು ಯೆಶಾಯ 45:23ರ ಸೆಪ್ಟ್ಯುಅಜಿಂಟ್‌ ಭಾಷಾಂತರವನ್ನು ಉಲ್ಲೇಖಿಸುತ್ತಾನೆ.​—⁠ರೋಮಾಪುರ 14:11; ಫಿಲಿಪ್ಪಿ 2:​9-11; ಪ್ರಕಟನೆ 21:​22-27.

27. ಇಂದು ಕ್ರೈಸ್ತರಿಗೆ ಯೆಹೋವನ ವಾಗ್ದಾನಗಳಲ್ಲಿ ಪೂರ್ತಿ ಭರವಸೆ ಏಕೆ ಇರಸಾಧ್ಯವಿದೆ?

27 ದೇವರ ಕಡೆಗೆ ತಿರುಗುವುದರಿಂದ ರಕ್ಷಣೆ ದೊರೆಯುವುದೆಂದು ಮಹಾ ಸಮೂಹದವರು ಏಕೆ ಭರವಸವಿಡಬಲ್ಲರು? ಯೆಶಾಯ 45ನೆಯ ಅಧ್ಯಾಯದಲ್ಲಿ ಕಂಡುಬರುವ ಪ್ರವಾದನ ವಾಕ್ಯಗಳು ಸ್ಪಷ್ಟವಾಗಿ ತೋರಿಸುವಂತೆ, ಯೆಹೋವನ ವಾಗ್ದಾನಗಳು ಭರವಸಾರ್ಹವಾಗಿರುವುದರಿಂದಲೇ. ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಲು ಯೆಹೋವನ ಬಳಿ ಹೇಗೆ ಶಕ್ತಿ ಮತ್ತು ವಿವೇಕ ಇತ್ತೊ ಹಾಗೆಯೇ ಪ್ರವಾದನೆಗಳನ್ನು ನಿಜವಾಗಿಸಲು ಬೇಕಾದ ಶಕ್ತಿ ವಿವೇಕಗಳೂ ಆತನಲ್ಲಿವೆ. ಕೋರೆಷನ ಕುರಿತಾದ ಪ್ರವಾದನೆಯು ನಿಜವಾಗುವಂತೆ ಆತನು ನೋಡಿಕೊಂಡಂತೆಯೇ ಇನ್ನೂ ನೆರವೇರಲಿರುವ ಇತರ ಯಾವುದೇ ಬೈಬಲ್‌ ಪ್ರವಾದನೆಯನ್ನೂ ಆತನು ನೆರವೇರಿಸುವನು. ಆದಕಾರಣ, ಬೇಗನೆ ಯೆಹೋವನು ಪುನಃ “ನೀತಿಯ ದೇವರು ಮತ್ತು ರಕ್ಷಕನು” ಆಗಿ ಪರಿಣಮಿಸುವನೆಂದು ಯೆಹೋವನ ಆರಾಧಕರು ದೃಢಭರವಸೆಯಿಂದಿರಬಲ್ಲರು.

[ಪಾದಟಿಪ್ಪಣಿ]

^ ಪ್ಯಾರ. 26 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಇಲ್ಲಿ “ಪೂರ್ಣ ನೀತಿ” ಎಂಬ ಪದವನ್ನು ಉಪಯೋಗಿಸುತ್ತದೆ, ಏಕೆಂದರೆ ಹೀಬ್ರು ಮೂಲಗ್ರಂಥದಲ್ಲಿ “ನೀತಿ” ಎಂಬ ಪದವು ಬಹುವಚನದಲ್ಲಿದೆ. ಯೆಹೋವನ ನೀತಿಯ ಸಮೃದ್ಧ ಮಟ್ಟವನ್ನು ಸೂಚಿಸಲು ಇಲ್ಲಿ ಬಹುವಚನವನ್ನು ಉಪಯೋಗಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 80, 81ರಲ್ಲಿರುವ ಚಿತ್ರಗಳು]

ಬೆಳಕನ್ನು ರಚಿಸಿ ಕತ್ತಲೆಯನ್ನು ಸೃಷ್ಟಿಸುವ ಯೆಹೋವನು, ಶಾಂತಿಯನ್ನು ರಚಿಸಿ ವಿಪತ್ತನ್ನು ಸೃಷ್ಟಿಸಬಲ್ಲನು

[ಪುಟ 83ರಲ್ಲಿರುವ ಚಿತ್ರ]

ಯೆಹೋವನು, “ಆಕಾಶಮಂಡಲ”ವು ಆಶೀರ್ವಾದಗಳ ಮಳೆಗರೆಯುವಂತೆಯೂ “ಭೂಮಿ”ಯು ರಕ್ಷಣೆಯನ್ನು ಹುಟ್ಟಿಸುವಂತೆಯೂ ಮಾಡುವನು

[ಪುಟ 84ರಲ್ಲಿರುವ ಚಿತ್ರ]

ಬಿಸಾಡಲ್ಪಟ್ಟಿರುವ ಜೇಡಿಮಣ್ಣಿನ ಮಡಕೆಯ ಚೂರುಗಳು ತಮ್ಮ ರಚಕನ ವಿವೇಕವನ್ನು ಪ್ರಶ್ನಿಸಬೇಕೊ?

[ಪುಟ 89ರಲ್ಲಿರುವ ಚಿತ್ರ]

ಯೆಹೋವನು ಭೂಮಿಯನ್ನು ಶೂನ್ಯಸ್ಥಾನವಾಗಿರಲು ಸೃಷ್ಟಿಸಲಿಲ್ಲ