ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿದೇಶೀಯರನ್ನು ದೇವರ ಪ್ರಾರ್ಥನಾಲಯಕ್ಕೆ ಒಟ್ಟುಗೂಡಿಸುವುದು

ವಿದೇಶೀಯರನ್ನು ದೇವರ ಪ್ರಾರ್ಥನಾಲಯಕ್ಕೆ ಒಟ್ಟುಗೂಡಿಸುವುದು

ಅಧ್ಯಾಯ ಹದಿನೇಳು

ವಿದೇಶೀಯರನ್ನು ದೇವರ ಪ್ರಾರ್ಥನಾಲಯಕ್ಕೆ ಒಟ್ಟುಗೂಡಿಸುವುದು

ಯೆಶಾಯ 56:1-12

1, 2. ಮೈಜುಮ್ಮೆನ್ನಿಸುವ ಯಾವ ಪ್ರಕಟನೆಯನ್ನು 1935ರಲ್ಲಿ ಮಾಡಲಾಯಿತು, ಮತ್ತು ಇದು ಯಾವುದರ ಭಾಗವಾಗಿತ್ತು?

ಇಸವಿ 1935, ಮೇ 31ರ ಶುಕ್ರವಾರದಂದು, ಜೋಸೆಫ್‌ ಎಫ್‌. ರದರ್‌ಫರ್ಡ್‌ರವರು ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಿದ್ದ ಜನರನ್ನು ಸಂಬೋಧಿಸಿ ಮಾತಾಡಿದರು. ಅಪೊಸ್ತಲ ಯೋಹಾನನು ದರ್ಶನದಲ್ಲಿ ನೋಡಿದ “ಮಹಾ ಸಮೂಹ”ವು ಯಾರೆಂಬುದರ ಕುರಿತಾಗಿ ಅವರು ಚರ್ಚಿಸಿದರು. ಸಹೋದರ ರದರ್‌ಫರ್ಡ್‌ರವರು ತಮ್ಮ ಭಾಷಣದ ಪರಾಕಾಷ್ಠೆಯಲ್ಲಿ, “ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ನಿರೀಕ್ಷೆಯಿರುವ ಎಲ್ಲರೂ ದಯವಿಟ್ಟು ಎದ್ದು ನಿಲ್ಲುವಿರೊ?” ಎಂದು ಕೇಳಿದರು. ಆಗ ಹಾಜರಿದ್ದ ಒಬ್ಬರು ಹೇಳಿದ್ದು: “ಆಗ ಅಲ್ಲಿ ನೆರೆದಿದ್ದವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಎದ್ದು ನಿಂತರು.” ಆಗ ಭಾಷಣಕರ್ತರು ಹೇಳಿದ್ದು: “ಇಗೋ! ಮಹಾ ಜನಸ್ತೋಮ!” ಅಲ್ಲಿ ಹಾಜರಿದ್ದ ಇನ್ನೊಬ್ಬರು ಜ್ಞಾಪಿಸಿಕೊಂಡದ್ದು: “ಮೊದಲು ನಿಶ್ಶಬ್ದವು ಆವರಿಸಿತು, ಬಳಿಕ ಹರ್ಷೋಲ್ಲಾಸದ ಕೂಗು ಉಂಟಾಗಿ, ಜಯಘೋಷವು ಗಟ್ಟಿಯಾಗಿತ್ತು ಮತ್ತು ದೀರ್ಘಾವಧಿಯದ್ದೂ ಆಗಿತ್ತು.”​—⁠ಪ್ರಕಟನೆ 7:⁠9, ಕಿಂಗ್‌ ಜೇಮ್ಸ್‌ ವರ್ಷನ್‌.

2 ಇದು, ಸುಮಾರು 2,700 ವರ್ಷಗಳ ಹಿಂದೆ ಬರೆಯಲ್ಪಟ್ಟಿದ್ದು, ಈಗ ನಮ್ಮ ಬೈಬಲುಗಳಲ್ಲಿ ಯೆಶಾಯ 56ನೆಯ ಅಧ್ಯಾಯವಾಗಿ ತೋರಿಬರುವ ಒಂದು ಪ್ರವಾದನೆಯ ಮುಂದುವರಿಯುತ್ತಿರುವ ನೆರವೇರಿಕೆಯಲ್ಲಿ ಒಂದು ಗಮನಾರ್ಹವಾದ ಕ್ಷಣವಾಗಿತ್ತು. ಯೆಶಾಯನ ಇತರ ಅನೇಕ ಪ್ರವಾದನೆಗಳಂತೆಯೇ, ಇದು ಸಾಂತ್ವನದ ವಾಗ್ದಾನಗಳನ್ನೂ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನೂ ಕೊಡುತ್ತದೆ. ಪ್ರಥಮ ಅನ್ವಯದಲ್ಲಿ, ಇದನ್ನು ಯೆಶಾಯನ ದಿನಗಳ ದೇವರ ಒಡಂಬಡಿಕೆಯ ಜನರಿಗೆ ಸಂಬೋಧಿಸಲಾಗಿರುವುದಾದರೂ, ಅದರ ನೆರವೇರಿಕೆಯು ಶತಮಾನಗಳನ್ನು ವ್ಯಾಪಿಸುತ್ತ ನಮ್ಮ ದಿನಗಳಿಗೆ ತಲಪುತ್ತದೆ.

ರಕ್ಷಣೆಗೆ ಆವಶ್ಯಕವಾಗಿರುವ ಸಂಗತಿ

3. ಯೆಹೂದ್ಯರು ದೇವರಿಂದ ರಕ್ಷಣೆಯನ್ನು ಪಡೆಯಲು ಪ್ರಯತ್ನಿಸುವಲ್ಲಿ ಅವರೇನು ಮಾಡಬೇಕು?

3 ಯೆಶಾಯ 56ನೆಯ ಅಧ್ಯಾಯವು ಯೆಹೂದ್ಯರಿಗೆ ಬುದ್ಧಿಹೇಳುತ್ತ ಆರಂಭಗೊಳ್ಳುತ್ತದೆ. ಆದರೆ, ಆ ಪ್ರವಾದಿಯು ಏನನ್ನು ಬರೆಯುತ್ತಾನೊ ಅದಕ್ಕೆ ಸತ್ಯಾರಾಧಕರೆಲ್ಲರೂ ಕಿವಿಗೊಡಬೇಕು. ನಾವು ಓದುವುದು: “ಯೆಹೋವನು ಹೀಗನ್ನುತ್ತಾನೆ​—⁠ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ; ಏಕಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವದು, ನನ್ನ ರಕ್ಷಣಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವದು. ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು ಸಬ್ಬತ್‌ ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.” (ಯೆಶಾಯ 56:1, 2) ದೇವರಿಂದ ರಕ್ಷಣೆಯನ್ನು ಪಡೆಯಲು ಪ್ರಯತ್ನಿಸುತ್ತಿರುವ ಯೆಹೂದದ ನಿವಾಸಿಗಳು, ನ್ಯಾಯವನ್ನು ಪಾಲಿಸುತ್ತ ಮತ್ತು ನೀತಿಯ ಜೀವನಗಳನ್ನು ನಡೆಸುತ್ತ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಲೇಬೇಕು. ಏಕೆ? ಏಕೆಂದರೆ ಯೆಹೋವನು ತಾನೇ ನೀತಿವಂತನಾಗಿದ್ದಾನೆ. ಮತ್ತು ನೀತಿಯನ್ನು ಹುಡುಕುವವರು ಯೆಹೋವನಿಂದ ಬರುವ ಅನುಗ್ರಹದಿಂದಾಗಿ ಸಂತೋಷವನ್ನು ಅನುಭವಿಸುತ್ತಾರೆ.​—⁠ಕೀರ್ತನೆ 144:15ಬಿ.

4. ಇಸ್ರಾಯೇಲಿನಲ್ಲಿ ಸಬ್ಬತ್ತಿನ ಆಚರಣೆ ಪ್ರಾಮುಖ್ಯವಾಗಿದೆಯೇಕೆ?

4 ಆ ಪ್ರವಾದನೆ ಸಬ್ಬತ್ತಿನ ಆಚರಣೆಯನ್ನು ಎತ್ತಿಹೇಳುತ್ತದೆ, ಏಕೆಂದರೆ ಅದು ಮೋಶೆಯ ಧರ್ಮಶಾಸ್ತ್ರದ ಪ್ರಮುಖ ಅಂಶವಾಗಿದೆ. ಹೌದು, ಯೆಹೂದದ ನಿವಾಸಿಗಳು ಅಂತಿಮವಾಗಿ ದೇಶಭ್ರಷ್ಟರಾಗುವ ಕಾರಣಗಳಲ್ಲೊಂದು ಸಬ್ಬತ್ತಿನ ಆಚರಣೆಯ ಅಸಡ್ಡೆ ಮಾಡುವಿಕೆಯೇ. (ಯಾಜಕಕಾಂಡ 26:​34, 35; 2 ಪೂರ್ವಕಾಲವೃತ್ತಾಂತ 36:​20, 21) ಸಬ್ಬತ್‌ ಯೆಹೋವನಿಗೆ ಯೆಹೂದ್ಯರೊಂದಿಗೆ ಇರುವ ವಿಶೇಷ ಸಂಬಂಧದ ಒಂದು ಗುರುತಾಗಿದೆ. ಮತ್ತು ಸಬ್ಬತ್ತನ್ನು ಆಚರಿಸುವವರು, ಆ ಸಂಬಂಧವನ್ನು ತಾವು ಬೆಲೆಯುಳ್ಳದ್ದಾಗಿ ಎಣಿಸುತ್ತೇವೆಂದು ತೋರಿಸುತ್ತಾರೆ. (ವಿಮೋಚನಕಾಂಡ 31:13) ಅಲ್ಲದೆ, ಸಬ್ಬತ್ತಿನ ಆಚರಣೆಯು ಯೆಹೋವನು ಸೃಷ್ಟಿಕರ್ತನೆಂಬುದನ್ನು ಯೆಶಾಯನ ಸಮಕಾಲೀನರಿಗೆ ಜ್ಞಾಪಕಹುಟ್ಟಿಸುವುದು. ಇಂತಹ ಆಚರಣೆಯು ಅವರ ಕಡೆಗೆ ಯೆಹೋವನು ತೋರಿಸಿರುವ ಕರುಣೆಯನ್ನೂ ಅವರ ಮನಸ್ಸಿಗೆ ತರುವುದು. (ವಿಮೋಚನಕಾಂಡ 20:​8-11; ಧರ್ಮೋಪದೇಶಕಾಂಡ 5:​12-15) ಕೊನೆಯದಾಗಿ, ಸಬ್ಬತ್ತಿನ ಆಚರಣೆಯು ಯೆಹೋವನ ಆರಾಧನೆಗೆ ಒಂದು ಕ್ರಮವಾದ, ಸಂಘಟಿತ ಏರ್ಪಾಡನ್ನು ಒದಗಿಸುವುದು. ತಮ್ಮ ನಿಯಮಿತ ಕೆಲಸದಿಂದ ವಾರಕ್ಕೊಂದು ದಿನ ವಿಶ್ರಮಿಸುವುದು, ಯೆಹೂದದ ನಿವಾಸಿಗಳಿಗೆ ಪ್ರಾರ್ಥನೆ, ಅಧ್ಯಯನ ಮತ್ತು ಮನನಮಾಡಲಿಕ್ಕಾಗಿ ಅವಕಾಶವನ್ನು ನೀಡುವುದು.

5. ಸಬ್ಬತ್ತನ್ನು ಆಚರಿಸುವ ಸಲಹೆಯ ಮೂಲತತ್ತ್ವವನ್ನು ಕ್ರೈಸ್ತರು ಹೇಗೆ ಅನ್ವಯಿಸಬಲ್ಲರು?

5 ಹಾಗಾದರೆ ಕ್ರೈಸ್ತರ ವಿಷಯದಲ್ಲೇನು? ಸಬ್ಬತ್ತನ್ನು ಆಚರಿಸುವಂತೆ ಕೊಡಲ್ಪಟ್ಟಿರುವ ಪ್ರೋತ್ಸಾಹವು ಅವರಿಗೂ ಅನ್ವಯಿಸುತ್ತದೆಯೆ? ನೇರವಾಗಿ ಅನ್ವಯಿಸುವುದಿಲ್ಲ, ಏಕೆಂದರೆ ಕ್ರೈಸ್ತರು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಮತ್ತು ಆ ಕಾರಣ ಅವರು ಸಬ್ಬತ್ತನ್ನು ಆಚರಿಸಬೇಕೆಂದಿರುವುದಿಲ್ಲ. (ಕೊಲೊಸ್ಸೆ 2:​16, 17) ಆದರೂ, ಅಪೊಸ್ತಲ ಪೌಲನು ನಂಬಿಗಸ್ತ ಕ್ರೈಸ್ತರಿಗೆ “ಸಬ್ಬತೆಂಬ ವಿಶ್ರಾಂತಿಯು” ಇನ್ನೂ ಉಂಟೆಂದು ಹೇಳಿದನು. ತಮ್ಮ ಕೆಲಸಗಳ ಮೇಲೆ ಮಾತ್ರ ಆತುಕೊಳ್ಳುವುದನ್ನು ನಿಲ್ಲಿಸಿ, ರಕ್ಷಣೆಗಾಗಿ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವುದು ಈ “ಸಬ್ಬತೆಂಬ ವಿಶ್ರಾಂತಿ”ಯಲ್ಲಿ ಸೇರಿದೆ. (ಇಬ್ರಿಯ 4:​6-10) ಆದಕಾರಣ, ಸಬ್ಬತ್ತಿನ ಕುರಿತಾದ ಯೆಶಾಯನ ಪ್ರವಾದನೆಯ ಮಾತುಗಳು ಇಂದು ಯೆಹೋವನ ಸೇವಕರಿಗೆ, ರಕ್ಷಣೆಗಾಗಿರುವ ದೇವರ ಏರ್ಪಾಡಿನಲ್ಲಿ ನಂಬಿಕೆಯನ್ನಿಡುವ ಮಹತ್ವಪೂರ್ಣ ಅಗತ್ಯವನ್ನು ಜ್ಞಾಪಕಹುಟ್ಟಿಸುತ್ತವೆ. ಯೆಹೋವನೊಂದಿಗೆ ನಿಕಟವಾದ ಸಂಬಂಧವನ್ನಿಟ್ಟುಕೊಳ್ಳಲು ಮತ್ತು ಕ್ರಮವಾದ, ಸತತವಾದ ಆರಾಧನಾಮಾರ್ಗವನ್ನು ನಾವು ಬೆನ್ನಟ್ಟಲು ಇದು ನಮಗೆ ಉತ್ತಮವಾದ ಜ್ಞಾಪನವೂ ಆಗಿದೆ.

ವಿದೇಶೀಯನಿಗೂ ನಪುಂಸಕನಿಗೂ ಸಾಂತ್ವನ

6. ಯಾವ ಎರಡು ಗುಂಪುಗಳ ಕಡೆಗೆ ಈಗ ಗಮನವನ್ನು ಹರಿಸಲಾಗುತ್ತದೆ?

6 ಯೆಹೋವನು ಈಗ ತನ್ನನ್ನು ಸೇವಿಸಲಿಚ್ಫಿಸುವ ಎರಡು ಗುಂಪುಗಳನ್ನು ಸಂಬೋಧಿಸಿ ಮಾತಾಡುತ್ತಾನೆ. ಇವರು ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಯೆಹೂದಿ ಸಭೆಯೊಳಗೆ ಬರಲು ಅನರ್ಹರಾಗಿದ್ದಾರೆ. ನಾವು ಓದುವುದು: “ಯೆಹೋವನನ್ನು ಅವಲಂಬಿಸಿದ ವಿದೇಶೀಯನು​—⁠ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು ಎಂದು ಮಾತಾಡದಿರಲಿ; ಮತ್ತು ನಪುಂಸಕನು​—⁠ಅಯ್ಯೋ, ನಾನು ಗೊಡ್ಡುಮರ ಎಂದು ಅಂದುಕೊಳ್ಳದಿರಲಿ.” (ಯೆಶಾಯ 56:3) ತನ್ನನ್ನು ಇಸ್ರಾಯೇಲಿನಿಂದ ಅಗಲಿಸಲಾಗುವುದು ಎಂಬುದು ವಿದೇಶೀಯನ ಭಯವಾಗಿದೆ. ತನ್ನ ಹೆಸರನ್ನು ಉಳಿಸಿಕೊಳ್ಳಲು ತನಗೆ ಮಕ್ಕಳೇ ಆಗುವುದಿಲ್ಲವಲ್ಲ ಎಂಬುದು ನಪುಂಸಕನ ಚಿಂತೆಯಾಗಿದೆ. ಆದರೆ ಇವೆರಡು ಗುಂಪುಗಳೂ ಧೈರ್ಯತಂದುಕೊಳ್ಳಬೇಕು. ಅದು ಏಕೆಂದು ನೋಡುವ ಮೊದಲು, ಇಸ್ರಾಯೇಲ್‌ ಜನಾಂಗದ ಸಂಬಂಧದಲ್ಲಿ ಧರ್ಮಶಾಸ್ತ್ರದ ಕೆಳಗೆ ಅವರಿಗೆ ಯಾವ ನಿಲುವಿತ್ತು ಎಂಬುದನ್ನು ನಾವು ಪರಿಗಣಿಸೋಣ.

7. ಇಸ್ರಾಯೇಲಿನಲ್ಲಿದ್ದ ವಿದೇಶೀಯರ ಮೇಲೆ ಧರ್ಮಶಾಸ್ತ್ರವು ಯಾವ ಮಿತಿಗಳನ್ನಿಡುತ್ತದೆ?

7 ಸುನ್ನತಿ ಹೊಂದಿರದ ವಿದೇಶೀಯರಿಗೆ ಇಸ್ರಾಯೇಲಿನ ಆರಾಧನೆಯಲ್ಲಿ ಭಾಗವಹಿಸಲಿಕ್ಕಿರಲಿಲ್ಲ. ಉದಾಹರಣೆಗೆ, ಅವರು ಪಸ್ಕದಲ್ಲಿ ಭಾಗವಹಿಸುವಂತೆ ಬಿಡಲಾಗುತ್ತಿರಲಿಲ್ಲ. (ವಿಮೋಚನಕಾಂಡ 12:43) ದೇಶದ ಕಾನೂನುಗಳನ್ನು ನಾಚಿಕೆಗೆಟ್ಟು ಉಲ್ಲಂಘಿಸದಿರುವ ವಿದೇಶೀಯರು ನ್ಯಾಯ ಮತ್ತು ಅತಿಥಿಸತ್ಕಾರವನ್ನು ಅನುಭವಿಸಿದರೂ, ಅವರಿಗೆ ಆ ಜನಾಂಗದೊಂದಿಗೆ ಕಾಯಂ ಸಂಬಂಧವಿರಲಿಲ್ಲ. ಹೌದು, ಕೆಲವರು ಧರ್ಮಶಾಸ್ತ್ರವನ್ನು ಪೂರ್ತಿಯಾಗಿ ಅವಲಂಬಿಸುತ್ತಾರೆ ಮತ್ತು ಇದರ ಗುರುತಾಗಿ ಪುರುಷರು ಸುನ್ನತಿ ಮಾಡಿಸಿಕೊಳ್ಳುತ್ತಾರೆ. ಆಗ ಅವರು ಮತಾವಲಂಬಿಗಳಾಗುತ್ತಾರೆ, ಮತ್ತು ಯೆಹೋವನ ಆಲಯದ ಅಂಗಣದಲ್ಲಿ ಆರಾಧಿಸುವ ಸುಯೋಗವನ್ನು ಪಡೆಯುತ್ತಾರೆ ಮತ್ತು ಇಸ್ರಾಯೇಲ್‌ ಸಭೆಯ ಭಾಗವಾಗಿ ಪರಿಗಣಿಸಲ್ಪಡುತ್ತಾರೆ. (ಯಾಜಕಕಾಂಡ 17:​10-14; 20:2; 24:22) ಆದರೆ, ಮತಾವಲಂಬಿಗಳು ಸಹ ಯೆಹೋವನು ಇಸ್ರಾಯೇಲಿನೊಂದಿಗೆ ಮಾಡಿದ ಒಡಂಬಡಿಕೆಯಲ್ಲಿ ಪೂರ್ತಿ ಪಾಲುಗಾರರಾಗಿರುವುದಿಲ್ಲ ಮತ್ತು ಅವರಿಗೆ ವಾಗ್ದತ್ತ ದೇಶದಲ್ಲಿ ಜಮೀನಿನ ಬಾಧ್ಯತೆಯೂ ಇಲ್ಲ. ಇತರ ವಿದೇಶೀಯರು ಆಲಯದ ಕಡೆಗೆ ತಿರುಗಿ ಪ್ರಾರ್ಥಿಸಬಹುದಿತ್ತು ಮತ್ತು ಯಜ್ಞಗಳು ಧರ್ಮಶಾಸ್ತ್ರಾನುಸಾರವಾಗಿರುವಲ್ಲಿ ಯಾಜಕರ ಮೂಲಕ ಅವರು ಯಜ್ಞಗಳನ್ನು ಅರ್ಪಿಸಬಹುದಾಗಿತ್ತೆಂಬುದಕ್ಕೆ ಪುರಾವೆಯಿದೆ. (ಯಾಜಕಕಾಂಡ 22:25; 1 ಅರಸುಗಳು 8:​41-43) ಆದರೆ ಇಸ್ರಾಯೇಲ್ಯರು ಅವರೊಂದಿಗೆ ನಿಕಟ ಸಂಬಂಧವನ್ನಿಡಬಾರದು.

ನಪುಂಸಕರಿಗೆ ಶಾಶ್ವತನಾಮ ದೊರೆಯುತ್ತದೆ

8. (ಎ) ಧರ್ಮಶಾಸ್ತ್ರಕ್ಕನುಸಾರ ನಪುಂಸಕರನ್ನು ಹೇಗೆ ವೀಕ್ಷಿಸಲಾಗುತ್ತಿತ್ತು? (ಬಿ) ವಿಧರ್ಮಿ ಜನಾಂಗಗಳಲ್ಲಿ ನಪುಂಸಕರನ್ನು ಹೇಗೆ ಉಪಯೋಗಿಸಲಾಗುತ್ತಿತ್ತು, ಮತ್ತು “ನಪುಂಸಕ” ಎಂಬ ಪದವು ಕೆಲವು ಬಾರಿ ಏನನ್ನು ಸೂಚಿಸಬಲ್ಲದು?

8 ನಪುಂಸಕರು ಯೆಹೂದಿ ಹೆತ್ತವರಿಂದ ಹುಟ್ಟಿದರೂ, ಇಸ್ರಾಯೇಲ್‌ ಜನಾಂಗದ ಪೂರ್ಣ ಸದಸ್ಯತನವು ಅವರಿಗೆ ಅಲ್ಲಗಳೆಯಲ್ಪಡುತ್ತದೆ. * (ಧರ್ಮೋಪದೇಶಕಾಂಡ 23:⁠1) ಬೈಬಲ್‌ ಕಾಲಗಳ ಕೆಲವು ವಿಧರ್ಮಿ ಜನಾಂಗಗಳಲ್ಲಿ ನಪುಂಸಕರಿಗೆ ವಿಶೇಷ ಸ್ಥಾನವಿತ್ತು. ಮತ್ತು ಯುದ್ಧದಲ್ಲಿ ಬಂದಿಗಳಾದ ಕೆಲವು ಮಂದಿ ಮಕ್ಕಳನ್ನು ನಿರ್ವೀರ್ಯಗೊಳಿಸುವುದು ವಾಡಿಕೆಯಾಗಿತ್ತು. ನಪುಂಸಕರು ರಾಜರ ಆಸ್ಥಾನಗಳಲ್ಲಿ ಕಂಚುಕಿಗಳಾಗಿ ನೇಮಿಸಲ್ಪಡುತ್ತಿದ್ದರು. ನಪುಂಸಕನು “ಅಂತಃಪುರಪಾಲಕ,” “ಉಪಪತ್ನಿಗಳ ಪಾಲಕ,” ಇಲ್ಲವೆ ರಾಣಿಯ ಸೇವಕನಾಗಿರಬಹುದಿತ್ತು. (ಎಸ್ತೇರಳು 2:​3, 12-15; 4:​4-6, 9) ಆದರೆ ಇಸ್ರಾಯೇಲ್ಯರು ಇಂತಹ ವಾಡಿಕೆಗಳನ್ನು ಅನುಸರಿಸುತ್ತಿದ್ದರು ಇಲ್ಲವೇ ಇಸ್ರಾಯೇಲ್‌ ರಾಜರ ಸೇವೆಮಾಡಲು ನಪುಂಸಕರನ್ನು ವಿಶೇಷವಾಗಿ ಹುಡುಕಲಾಗುತ್ತಿತ್ತು ಎಂಬುದಕ್ಕೆ ಯಾವುದೇ ರುಜುವಾತುಗಳಿಲ್ಲ. *

9. ಯೆಹೋವನು ಶಾರೀರಿಕ ನಪುಂಸಕರಿಗೆ ಯಾವ ಸಾಂತ್ವನದಾಯಕ ಮಾತುಗಳನ್ನು ತಿಳಿಸುತ್ತಾನೆ?

9 ನಪುಂಸಕರು ಸತ್ಯ ದೇವರ ಆರಾಧನೆಯಲ್ಲಿ ಕೇವಲ ಸೀಮಿತವಾದ ರೀತಿಯಲ್ಲಿ ಪಾಲಿಗರಾಗಬಹುದಿತ್ತು, ಅಷ್ಟುಮಾತ್ರವಲ್ಲ ಇಸ್ರಾಯೇಲಿನಲ್ಲಿರುವ ಶಾರೀರಿಕ ನಪುಂಸಕರು ತಮ್ಮ ಕುಟುಂಬದ ಹೆಸರನ್ನು ಮುಂದುವರಿಸಲಿಕ್ಕಾಗಿ ಮಕ್ಕಳನ್ನು ಹುಟ್ಟಿಸಲು ಅಶಕ್ತರಾಗಿರುವ ಕಾರಣ ಮಹಾ ಅವಮಾನವನ್ನು ಅನುಭವಿಸುತ್ತಿದ್ದರು. ಹೀಗಿರುವಾಗ, ಪ್ರವಾದನೆಯ ಮುಂದಿನ ಮಾತುಗಳು ಎಷ್ಟು ಸಾಂತ್ವನದಾಯಕವಾಗಿವೆ! ನಾವು ಓದುವುದು: “ಯೆಹೋವನು ಹೀಗನ್ನುತ್ತಾನೆ​—⁠ಸಬ್ಬತ್‌ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದದ್ದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ನಪುಂಸಕರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರುವಾಸಿಯನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.”​—ಯೆಶಾಯ 56:4, 5.

10. ನಪುಂಸಕರ ಪರಿಸ್ಥಿತಿಯು ಯಾವಾಗ ಬದಲಾವಣೆ ಹೊಂದಿತು, ಮತ್ತು ಅಂದಿನಿಂದ ಅವರಿಗೆ ಯಾವ ಸದವಕಾಶವು ತೆರೆದಿದೆ?

10 ಹೌದು, ಒಬ್ಬನು ಶಾರೀರಿಕ ರೀತಿಯಲ್ಲಿ ನಪುಂಸಕನಾಗಿರುವುದಾದರೂ, ಯೆಹೋವನ ಸೇವಕನಾಗಿ ಪೂರ್ಣವಾಗಿ ಅಂಗೀಕರಿಸಲ್ಪಡಲು ತಡೆಯಾಗದಿರುವ ಸಮಯವು ಬರಲಿರುವುದು. ನಪುಂಸಕರು ವಿಧೇಯರಾಗಿರುವಲ್ಲಿ ಅವರಿಗೆ ಯೆಹೋವನ ಆಲಯದಲ್ಲಿ “ಜ್ಞಾಪಕಾರ್ಥವಾಗಿ ಶಿಲೆ” ಅಥವಾ ಸ್ಥಳವೊಂದಿದ್ದು, ಗಂಡು ಹೆಣ್ಣು ಮಕ್ಕಳಿಗಿಂತಲೂ ಉತ್ತಮವಾದ ಹೆಸರು ಇರುವುದು. ಇದು ಯಾವಾಗ ಸಂಭವಿಸುತ್ತದೆ? ಯೇಸು ಕ್ರಿಸ್ತನ ಮರಣಾನಂತರದ ವರೆಗೆ ಇದು ಸಂಭವಿಸುವುದಿಲ್ಲ. ಆ ಸಮಯದಲ್ಲಿ ಹಳೆಯ ಧರ್ಮಶಾಸ್ತ್ರದ ಒಡಂಬಡಿಕೆಯ ಸ್ಥಾನದಲ್ಲಿ ಹೊಸ ಒಡಂಬಡಿಕೆಯು ಬಂದು, ಮಾಂಸಿಕ ಇಸ್ರಾಯೇಲಿನ ಸ್ಥಾನದಲ್ಲಿ ‘ದೇವರ ಇಸ್ರಾಯೇಲ್‌’ ಅಸ್ತಿತ್ವಕ್ಕೆ ಬಂತು. (ಗಲಾತ್ಯ 6:16) ಅಂದಿನಿಂದ ಹಿಡಿದು ನಂಬಿಕೆಯಿಡುವವರೆಲ್ಲರೂ ದೇವರಿಗೆ ಅಂಗೀಕಾರಯೋಗ್ಯವಾದ ಆರಾಧನೆಯನ್ನು ಅರ್ಪಿಸಶಕ್ತರಾಗಿದ್ದಾರೆ. ಶಾರೀರಿಕ ವಿಶೇಷತೆಗಳು ಮತ್ತು ದೈಹಿಕ ಸ್ಥಿತಿಗಳು ಲೆಕ್ಕಕ್ಕೆ ಬರುವುದಿಲ್ಲ. ನಂಬಿಗಸ್ತಿಕೆಯಿಂದ ತಾಳಿಕೊಳ್ಳುವವರಿಗೆ, ಅವರ ಶಾರೀರಿಕ ಸ್ಥಿತಿಯು ಹೇಗೇ ಇರಲಿ, “ಎಂದಿಗೂ ಅಳಿಯದ ಶಾಶ್ವತನಾಮ” ದೊರೆಯುವುದು. ಯೆಹೋವನು ಅವರನ್ನು ಮರೆತುಬಿಡನು. ಅವರ ಹೆಸರುಗಳು “ಜ್ಞಾಪಕದ ಪುಸ್ತಕದಲ್ಲಿ” ಬರೆಯಲ್ಪಡುವವು ಮತ್ತು ದೇವರ ಕ್ಲುಪ್ತ ಕಾಲದಲ್ಲಿ ಅವರು ನಿತ್ಯಜೀವವನ್ನು ಪಡೆಯುವರು.​—⁠ಮಲಾಕಿಯ 3:16; ಜ್ಞಾನೋಕ್ತಿ 22:1; 1 ಯೋಹಾನ 2:⁠17.

ದೇವರ ಜನರೊಂದಿಗೆ ವಿದೇಶೀಯರು ಆರಾಧಿಸುತ್ತಾರೆ

11. ಆಶೀರ್ವಾದಗಳನ್ನು ಪಡೆಯಲು ವಿದೇಶೀಯರು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ?

11 ಹಾಗಾದರೆ, ವಿದೇಶೀಯರ ವಿಷಯವೇನು? ಈಗ ಆ ಪ್ರವಾದನೆ ಇವರ ಕಡೆಗೆ ತಿರುಗುತ್ತದೆ ಮತ್ತು ಯೆಹೋವನು ಅವರಿಗೆ ಅತಿ ಸಾಂತ್ವನದಾಯಕವಾದ ಮಾತುಗಳನ್ನಾಡುತ್ತಾನೆ. ಯೆಶಾಯನು ಬರೆಯುವುದು: “ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್‌ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ ಯಜ್ಞಗಳೂ ನನಗೆ ಮೆಚ್ಚಿಕೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು.”​—ಯೆಶಾಯ 56:​6, 7.

12. “ಬೇರೆ ಕುರಿಗಳ” ಕುರಿತಾದ ಯೇಸುವಿನ ಪ್ರವಾದನೆಯ ವಿಷಯದಲ್ಲಿ ಒಂದುಕಾಲದಲ್ಲಿ ಯಾವ ತಿಳಿವಳಿಕೆಯಿತ್ತು?

12 ನಮ್ಮ ದಿನಗಳಲ್ಲಿ ಆ “ಅನ್ಯದೇಶೀಯರು” ಅಥವಾ ವಿದೇಶೀಯರು ಕ್ರಮೇಣವಾಗಿ ತಮ್ಮನ್ನು ತೋರಿಸಿಕೊಂಡಿದ್ದಾರೆ. ಒಂದನೆಯ ಲೋಕ ಯುದ್ಧಕ್ಕೆ ಮೊದಲು, ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯಿರುವವರಿಗಿಂತಲೂ ಅಂದರೆ ನಾವು ಇಂದು ದೇವರ ಇಸ್ರಾಯೇಲ್‌ ಎಂದು ಗುರುತಿಸುವವರಿಗಿಂತಲೂ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ರಕ್ಷಣೆ ಪಡೆಯುವರೆಂಬ ತಿಳಿವಳಿಕೆಯಿತ್ತು. ಯೋಹಾನ 10:16ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ಬೈಬಲ್‌ ವಿದ್ಯಾರ್ಥಿಗಳಿಗೆ ತಿಳಿದಿದ್ದವು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು. ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” ಈ “ಬೇರೆ ಕುರಿಗಳು” ಭೂವರ್ಗದವರೆಂದು ತಿಳಿಯಲಾಗಿತ್ತು. ಆದರೆ ಈ ಬೇರೆ ಕುರಿಗಳು ಯೇಸು ಕ್ರಿಸ್ತನ ಸಹಸ್ರವರ್ಷದಾಳಿಕೆಯ ಸಮಯದಲ್ಲಿ ತೋರಿಬರುವರೆಂದು ಈ ಬೈಬಲ್‌ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ನಂಬಿದ್ದರು.

13. ಮತ್ತಾಯ 25ನೆಯ ಅಧ್ಯಾಯದ ಕುರಿಗಳು ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ದಿನಗಳಲ್ಲಿ ತೋರಿಬರಬೇಕೆಂದು ಏಕೆ ತರ್ಕಿಸಲಾಯಿತು?

13 ಕೊನೆಗೆ, ಕುರಿಗಳ ಕುರಿತಾಗಿ ಮಾತಾಡುವ ಇನ್ನೊಂದು ಸಂಬಂಧಿತ ಶಾಸ್ತ್ರವಚನದ ತಿಳಿವಳಿಕೆಯಲ್ಲಿ ಪ್ರಗತಿಯಾಯಿತು. ಮತ್ತಾಯ 25ನೆಯ ಅಧ್ಯಾಯದಲ್ಲಿ, ಕುರಿಗಳ ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯವಿದೆ. ಆ ಸಾಮ್ಯಕ್ಕನುಸಾರ, ಕುರಿಗಳು ಯೇಸುವಿನ ಸಹೋದರರಿಗೆ ಬೆಂಬಲ ಕೊಡುವ ಕಾರಣದಿಂದಲೇ ನಿತ್ಯಜೀವವನ್ನು ಪಡೆಯುತ್ತಾರೆ. ಹೀಗೆ, ಅವರು ಕ್ರಿಸ್ತನ ಅಭಿಷಿಕ್ತ ಸಹೋದರರಿಂದ ಪ್ರತ್ಯೇಕವೂ ಭಿನ್ನವೂ ಆದ ವರ್ಗವಾಗಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯದ ಲಾಸ್‌ ಆ್ಯಂಜಲಿಸ್‌ನಲ್ಲಿ 1923ರಲ್ಲಿ ನಡೆದ ಸಮ್ಮೇಳನವೊಂದರಲ್ಲಿ, ಆ ಕುರಿಗಳು ಸಹಸ್ರವರ್ಷದಾಳಿಕೆಯ ಸಮಯದಲ್ಲಲ್ಲ, ಬದಲಾಗಿ ಈ ವಿಷಯಗಳ ವ್ಯವಸ್ಥೆಯ ಕೊನೆಯ ದಿನಗಳಲ್ಲೇ ತೋರಿಬರುವರೆಂದು ವಿವರಿಸಲಾಯಿತು. ಏಕೆ? ಏಕೆಂದರೆ, ಯೇಸು ಈ ಸಾಮ್ಯವನ್ನು, “ಅವು ಯಾವಾಗ ಸಂಭವಿಸುವವು? ನಿನ್ನ ಸಾನ್ನಿಧ್ಯಕ್ಕೂ ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?” ಎಂಬ ಪ್ರಶ್ನೆಗೆ ಕೊಟ್ಟ ಉತ್ತರದ ಭಾಗವಾಗಿ ಹೇಳಿದ್ದರಿಂದಲೇ.​—⁠ಮತ್ತಾಯ 24:​3, NW.

14, 15. ಅಂತ್ಯಕಾಲದಲ್ಲಿ ಬೇರೆ ಕುರಿಗಳ ಸ್ಥಾನದ ಕುರಿತಾದ ತಿಳಿವಳಿಕೆಯಲ್ಲಿ ಹೇಗೆ ಪ್ರಗತಿಯಾಯಿತು?

14 ಬೈಬಲ್‌ ವಿದ್ಯಾರ್ಥಿಗಳೊಂದಿಗೆ ಕೂಡಿಕೊಂಡಿದ್ದ ಕೆಲವರಿಗೆ, 1920ಗಳಲ್ಲಿ ಯೆಹೋವನ ಆತ್ಮವು ತಮಗೆ ಸ್ವರ್ಗೀಯ ಕರೆಯಿದೆಯೆಂಬುದಾಗಿ ಸಾಕ್ಷಿಹೇಳುವುದಿಲ್ಲವೆಂದು ಅನಿಸತೊಡಗಿತು. ಆದರೂ ಅವರು ಸರ್ವೋನ್ನತ ದೇವರ ಹುರುಪಿನ ಸೇವಕರಾಗಿದ್ದರು. 1931ರಲ್ಲಿ ನಿರ್ದೋಷೀಕರಣ (ಇಂಗ್ಲಿಷ್‌) ಎಂಬ ಪುಸ್ತಕವು ಪ್ರಕಟಿಸಲ್ಪಟ್ಟಾಗ, ಇವರ ಸ್ಥಾನವನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತಾಯಿತು. ಬೈಬಲಿನ ಯೆಹೆಜ್ಕೇಲ ಪುಸ್ತಕದ ವಚನಗಳ ಅನುಕ್ರಮವಾದ ಚರ್ಚೆಯ ಭಾಗವಾಗಿದ್ದ ನಿರ್ದೋಷೀಕರಣ ಪುಸ್ತಕವು, ಲೇಖಕನ ದೌತಿಯಿರುವ “ಪುರುಷ”ನ ದರ್ಶನವನ್ನು ವಿವರಿಸಿತು. (ಯೆಹೆಜ್ಕೇಲ 9:​1-11) ಈ “ಪುರುಷನು” ಯೆರೂಸಲೇಮನ್ನು ಸುತ್ತಾಡಿ, ಅಲ್ಲಿ ನಡೆಯುತ್ತಿರುವ ಅಸಹ್ಯಕಾರ್ಯಗಳನ್ನು ನೋಡಿ ನರಳಿ ಗೋಳಾಡುವವರ ಹಣೆಯ ಮೇಲೆ ಗುರುತು ಹಾಕುವುದನ್ನು ನೋಡಲಾಗುತ್ತದೆ. ಆ “ಪುರುಷನು” ಯೇಸುವಿನ ಸಹೋದರರನ್ನು, ಅಂದರೆ ಸೂಚಿತರೂಪದ ಯೆರೂಸಲೇಮ್‌ ಆಗಿರುವ ಕ್ರೈಸ್ತಪ್ರಪಂಚದ ಮೇಲೆ ನಡೆಯುತ್ತಿರುವ ನ್ಯಾಯತೀರ್ಪಿನ ಸಮಯದಲ್ಲಿ ಭೂಮಿಯ ಮೇಲೆ ಜೀವಿಸುತ್ತಿರುವ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರನ್ನು ಪ್ರತಿನಿಧಿಸುತ್ತಾನೆ. ಮತ್ತು ಗುರುತು ಹಾಕಿಸಿಕೊಳ್ಳುವವರು, ಆ ಸಮಯದಲ್ಲಿ ಜೀವಿಸುತ್ತಿರುವ ಬೇರೆ ಕುರಿಗಳಾಗಿದ್ದಾರೆ. ಆ ದರ್ಶನದಲ್ಲಿ ತೋರಿಸಲ್ಪಟ್ಟಿರುವಂತೆ, ಯೆಹೋವನ ವಧಕಾರರು ಆ ಧರ್ಮಭ್ರಷ್ಟ ನಗರದ ಮೇಲೆ ಸೇಡು ತೀರಿಸುವಾಗ, ಇವರು ಸುರಕ್ಷಿತರಾಗಿರುತ್ತಾರೆ.

15 ಇಸ್ರಾಯೇಲಿನ ಅರಸನಾದ ಯೇಹು ಮತ್ತು ಯೆಹೂದ್ಯೇತರ ಬೆಂಬಲಿಗನಾಗಿದ್ದ ಯೆಹೋನಾದಾಬನ ಪ್ರವಾದನ ನಾಟಕದ ಕುರಿತಾಗಿ 1932ರಲ್ಲಿ ಪಡೆಯಲಾದ ಆಳವಾದ ತಿಳಿವಳಿಕೆಯು, ಬಾಳನ ಆರಾಧನೆಯನ್ನು ನಾಶಮಾಡುವುದರಲ್ಲಿ ಯೇಹುವನ್ನು ಬೆಂಬಲಿಸಿದ ಯೆಹೋನಾದಾಬನಂತೆ, ಈ ಬೇರೆ ಕುರಿಗಳು ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ಹೇಗೆ ಬೆಂಬಲಿಸುತ್ತಾರೆಂಬುದನ್ನು ಸೂಚಿಸಿತು. ಕೊನೆಗೆ 1935ರಲ್ಲಿ, ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಜೀವಿಸುತ್ತಿರುವ ಬೇರೆ ಕುರಿಗಳು, ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡ ಮಹಾ ಸಮೂಹವೆಂದು ಗುರುತಿಸಲಾಯಿತು. ಇದು ಮೊತ್ತಮೊದಲ ಬಾರಿ, ಆರಂಭದಲ್ಲೇ ತಿಳಿಸಲ್ಪಟ್ಟಿರುವ ವಾಷಿಂಗ್ಟನ್‌ ಡಿ.ಸಿ. ಅಧಿವೇಶನದಲ್ಲಿ, ಜೋಸೆಫ್‌ ಎಫ್‌. ರದರ್‌ಫರ್ಡ್‌ರವರು ಭೂನಿರೀಕ್ಷೆಯಿರುವವರನ್ನು ಸೂಚಿಸುತ್ತಾ, “ಮಹಾ ಜನಸ್ತೋಮ” ಎಂದು ಹೇಳಿದ ಸಂದರ್ಭದಲ್ಲಿ ವಿವರಿಸಲ್ಪಟ್ಟಿತು.

16. “ವಿದೇಶೀಯರು” ಯಾವ ಸುಯೋಗಗಳು ಮತ್ತು ಜವಾಬ್ದಾರಿಗಳಲ್ಲಿ ಆನಂದಿಸುತ್ತಾರೆ?

16 ಹೀಗೆ, ‘ವಿದೇಶೀಯರಿಗೆ’ ಈ ಅಂತ್ಯಕಾಲದಲ್ಲಿ ಯೆಹೋವನ ಉದ್ದೇಶಗಳಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಲಿಕ್ಕಿದೆಯೆಂಬ ವಿಷಯವನ್ನು ಕ್ರಮೇಣವಾಗಿ ಗ್ರಹಿಸಲಾಯಿತು. ಅವರು ದೇವರ ಇಸ್ರಾಯೇಲ್‌ನ ಬಳಿಗೆ ಬರುವ ಕಾರಣವು ಯೆಹೋವನನ್ನು ಆರಾಧಿಸಲಿಕ್ಕಾಗಿಯೇ. (ಜೆಕರ್ಯ 8:23) ಅವರು ಆ ಆತ್ಮಿಕ ಜನಾಂಗದೊಂದಿಗೆ ದೇವರಿಗೆ ಅಂಗೀಕಾರಾರ್ಹವಾದ ಯಜ್ಞಗಳನ್ನು ಅರ್ಪಿಸಿ, ಸಬ್ಬತ್ತಿನ ವಿಶ್ರಾಂತಿಯನ್ನು ಪ್ರವೇಶಿಸುತ್ತಾರೆ. (ಇಬ್ರಿಯ 13:​15, 16) ಇದಲ್ಲದೆ, ಅವರು ದೇವರ ಆತ್ಮಿಕಾಲಯದಲ್ಲಿ ಆರಾಧಿಸುತ್ತಾರೆ. ಇದು ಯೆರೂಸಲೇಮಿನ ದೇವಾಲಯದಂತೆ “ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ” ಆಗಿದೆ. (ಮಾರ್ಕ 11:17) ಅವರು ‘ಕುರಿಮರಿಯ ರಕ್ತದಲ್ಲಿ ತಮ್ಮ ಉಡುಪುಗಳನ್ನು ತೊಳೆದು ಶುಭ್ರ ಮಾಡಿ,’ ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುತ್ತಾರೆ. ಅವರು “ಹಗಲಿರುಳು ಆತನ ಸೇವೆ”ಮಾಡುತ್ತ, ಹೀಗೆ ಎಡೆಬಿಡದೆ ಯೆಹೋವನನ್ನು ಸೇವಿಸುತ್ತಾರೆ.​—⁠ಪ್ರಕಟನೆ 7:​14, 15.

17. ಆಧುನಿಕ ದಿನಗಳ ವಿದೇಶೀಯರು ಹೊಸ ಒಡಂಬಡಿಕೆಯನ್ನು ಹೇಗೆ ಭದ್ರವಾಗಿ ಹಿಡಿದುಕೊಳ್ಳುತ್ತಾರೆ?

17 ಈ ಆಧುನಿಕ ದಿನಗಳ ವಿದೇಶೀಯರು ದೇವರ ಇಸ್ರಾಯೇಲಿನೊಂದಿಗೆ ಸಹವಾಸಿಸುವುದರಿಂದ, ಹೊಸ ಒಡಂಬಡಿಕೆಯ ಮೂಲಕ ಬರುವ ಪ್ರಯೋಜನಗಳಲ್ಲಿ ಮತ್ತು ಆಶೀರ್ವಾದಗಳಲ್ಲಿ ಆನಂದಿಸುವ ಅರ್ಥದಲ್ಲಿ ಹೊಸ ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಳ್ಳುತ್ತಾರೆ. ಅವರು ಆ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವುದಿಲ್ಲವಾದರೂ, ಅದರೊಂದಿಗೆ ಜೊತೆಗೂಡಿರುವ ನಿಯಮಗಳಿಗೆ ಹೃತ್ಪೂರ್ವಕವಾಗಿ ಅಧೀನರಾಗುತ್ತಾರೆ. ಹೀಗೆ, ಯೆಹೋವನ ನಿಯಮವು ಅವರ ಹೃದಯಗಳಲ್ಲಿರುವುದರಿಂದ, ಅವರು ಯೆಹೋವನನ್ನು ತಮ್ಮ ಸ್ವರ್ಗೀಯ ತಂದೆಯೆಂದೂ ಪರಮ ಪ್ರಧಾನ ಪ್ರಭುವೆಂದೂ ತಿಳಿಯತೊಡಗುತ್ತಾರೆ.​—⁠ಯೆರೆಮೀಯ 31:​33, 34; ಮತ್ತಾಯ 6:9; ಯೋಹಾನ 17:⁠3.

18. ಈ ಅಂತ್ಯಕಾಲದಲ್ಲಿ ಒಟ್ಟುಗೂಡಿಸುವ ಯಾವ ಕೆಲಸವು ಸಾಧಿಸಲ್ಪಡುತ್ತಾ ಇದೆ?

18 ಯೆಶಾಯನ ಪ್ರವಾದನೆಯು ಮುಂದುವರಿಯುವುದು: “ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನಂದರೆ​—⁠ನಾನು ಕೂಡಿಸಿದ ಇಸ್ರಾಯೇಲ್ಯರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು ಎಂಬದೇ.” (ಯೆಶಾಯ 56:8) ಅಂತ್ಯದ ಸಮಯದಲ್ಲಿ ಯೆಹೋವನು “ದೇಶಭ್ರಷ್ಟರನ್ನು,” ಅಂದರೆ ಅಭಿಷಿಕ್ತ ಉಳಿಕೆಯವರನ್ನು ಕೂಡಿಸಿದ್ದಾನೆ. ಇದಕ್ಕೆ ಕೂಡಿಸಿ, ಆತನು ಇತರರನ್ನು ಅಂದರೆ ಮಹಾ ಸಮೂಹದವರನ್ನು ಒಟ್ಟುಗೂಡಿಸುತ್ತಿದ್ದಾನೆ. ಯೆಹೋವನ ಮತ್ತು ಆತನ ಸಿಂಹಾಸನಾರೂಢನಾದ ರಾಜ ಕ್ರಿಸ್ತ ಯೇಸುವಿನ ಮೇಲ್ವಿಚಾರಣೆಯ ಕೆಳಗೆ ಇವರು ಜೊತೆಯಾಗಿ ಶಾಂತಿ ಮತ್ತು ಸಾಮರಸ್ಯದಿಂದ ಆರಾಧಿಸುತ್ತಾರೆ. ಕ್ರಿಸ್ತನ ಮೂಲಕ ಇರುವ ಯೆಹೋವನ ಸರಕಾರಕ್ಕೆ ಅವರು ತೋರಿಸುವ ನಿಷ್ಠೆಯ ಕಾರಣ, ಒಳ್ಳೆಯ ಕುರುಬನು ಅವರನ್ನು ಒಂದು ಐಕ್ಯವುಳ್ಳ ಉಲ್ಲಾಸಭರಿತ ಹಿಂಡಾಗಿ ರಚಿಸಿದ್ದಾನೆ.

ಕುರುಡ ಕಾವಲುಗಾರರು, ಮೂಗನಾಯಿಗಳು

19. ಕಾಡುಮೃಗಗಳಿಗೆ ಮತ್ತು ಅರಣ್ಯಮೃಗಗಳಿಗೆ ಯಾವ ಆಮಂತ್ರಣವನ್ನು ಕೊಡಲಾಗುತ್ತದೆ?

19 ಮೇಲೆ ಹೇಳಲಾಗಿರುವ ಹುರಿದುಂಬಿಸುವ, ಭಕ್ತಿವೃದ್ಧಿಮಾಡುವ ಮಾತುಗಳ ನಂತರ ಗಮನಸೆಳೆಯುವಂಥ, ಹೆಚ್ಚುಕಡಿಮೆ ಆಘಾತಕರವಾಗಿರುವಂಥ ವ್ಯತಿರಿಕ್ತವಾದ ಮಾತುಗಳು ಕೇಳಿಬರುತ್ತವೆ. ಯೆಹೋವನು ವಿದೇಶೀಯರು ಮತ್ತು ನಪುಂಸಕರೊಂದಿಗೆ ಕರುಣೆಯಿಂದ ವರ್ತಿಸಲು ಸಿದ್ಧನಾಗಿದ್ದಾನೆ. ಆದರೆ, ದೇವರ ಸಭೆಯ ಸದಸ್ಯರೆಂದು ಹೇಳಿಕೊಳ್ಳುವವರಲ್ಲೇ ಅನೇಕರು ಖಂಡಿಸಲ್ಪಟ್ಟು, ತೀರ್ಪನ್ನು ಪಡೆಯುವವರ ಸಾಲಿನಲ್ಲಿದ್ದಾರೆ. ಅಷ್ಟೇ ಅಲ್ಲ, ಅವರು ಮರ್ಯಾದೆಯಿಂದ ಹೂಣಲ್ಪಡುವುದಕ್ಕೂ ಅನರ್ಹರಾಗಿದ್ದು, ಹಸಿದ ಮೃಗಗಳಿಂದ ಗಪಗಪನೆ ತಿನ್ನಲ್ಪಡಲು ಮಾತ್ರ ಅರ್ಹರಾಗಿದ್ದಾರೆ. ಆದಕಾರಣ ನಾವು ಓದುವುದು: “ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವದಕ್ಕೆ ಬನ್ನಿರಿ!” (ಯೆಶಾಯ 56:9) ಈ ಕಾಡುಮೃಗಗಳು ಏನನ್ನು ತಿನ್ನಲು ಹೋಗುತ್ತವೆ? ಪ್ರವಾದನೆಯು ಅದನ್ನು ವಿವರಿಸಲಿದೆ. ಹಾಗೆ ವಿವರಿಸುವಾಗ, ಬರಲಿರುವ ಯುದ್ಧವಾದ ಹರ್ಮಗೆದೋನಿನಲ್ಲಿ ದೇವರನ್ನು ವಿರೋಧಿಸುವವರಿಗೆ ಕಾದಿರುವ ಗತಿಯನ್ನು ಅದು ನಮಗೆ ಜ್ಞಾಪಕಹುಟ್ಟಿಸಬಹುದು. ಆಗ ಅವರ ಹತಿಸಲ್ಪಟ್ಟ ದೇಹಗಳನ್ನು ಆಕಾಶದ ಪಕ್ಷಿಗಳು ತಿನ್ನುವಂತೆ ಬಿಡಲಾಗುವುದು.​—⁠ಪ್ರಕಟನೆ 19:​17, 18.

20, 21. ಧಾರ್ಮಿಕ ಮುಖಂಡರ ಯಾವ ನ್ಯೂನತೆಗಳು ಅವರನ್ನು ವ್ಯರ್ಥ ಆತ್ಮಿಕ ಮಾರ್ಗದರ್ಶಕರಾಗಿ ಮಾಡುತ್ತವೆ?

20 ಪ್ರವಾದನೆಯು ಮುಂದುವರಿಸುವುದು: “ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳುವಳಿಕೆಯಿಲ್ಲ; ಇವರೆಲ್ಲರೂ ಬೊಗಳಲಾರದ ಮೂಗನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು. ಮತ್ತು ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು. ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ, ಇವರಲ್ಲಿ ಯಾವನೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ. ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ; ನಾಳೆಯೂ ಈ ದಿನದಂತೆ ಕೇವಲ ಅತ್ಯಂತವಿಶೇಷದಿನವಾಗಿರುವದು [ಎಂದು ಹರಟಿಕೊಳ್ಳುವರು].”​ಯೆಶಾಯ 56:​10-12.

21 ಯೆಹೂದದ ಧಾರ್ಮಿಕ ಮುಖಂಡರು ತಾವು ಯೆಹೋವನನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುತ್ತಾರೆ. ತಾವು ಆತನ “ಕಾವಲುಗಾರರು” ಎಂದು ಅವರು ವಾದಿಸುತ್ತಾರೆ. ಆದರೆ ಅವರು ಆತ್ಮಿಕವಾಗಿ ಕುರುಡರೂ, ಮೂಕರೂ, ತೂಕಡಿಸುವವರೂ ಆಗಿದ್ದಾರೆ. ಅವರು ಎಚ್ಚರದಿಂದಿರದೆ, ಅಪಾಯದ ಎಚ್ಚರಿಕೆಯನ್ನು ಕೊಡದಿರುವಲ್ಲಿ, ಅವರಿಂದ ಏನು ಪ್ರಯೋಜನವಿದೆ? ಅಂತಹ ಧಾರ್ಮಿಕ ಕಾವಲುಗಾರರು ತಿಳಿವಳಿಕೆಯಿಲ್ಲದವರು, ಕುರಿಸದೃಶರಿಗೆ ಆತ್ಮಿಕ ಮಾರ್ಗದರ್ಶನವನ್ನು ಕೊಡುವ ಸ್ಥಾನದಲ್ಲಿಲ್ಲದವರಾಗಿದ್ದಾರೆ. ಅಲ್ಲದೆ, ಅವರು ಭ್ರಷ್ಟರು, ತಣಿಸಲಾಗದ ಸ್ವಾರ್ಥದಾಶೆಗಳನ್ನು ತೋರಿಸುವವರಾಗಿದ್ದಾರೆ. ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವ ಬದಲು ಅವರು ತಮ್ಮ ಮಾರ್ಗವನ್ನೇ ಅನುಸರಿಸಲು ಪ್ರಯತ್ನಿಸಿ, ಅನ್ಯಾಯದ ಲಾಭವನ್ನು ಪಡೆದು, ಅಮಲು ಬರಿಸುವ ಮದ್ಯವನ್ನು ಅತಿಯಾಗಿ ಸೇವಿಸಿ, ಇತರರೂ ಹಾಗೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ದೇವರ ಬರಲಿರುವ ನ್ಯಾಯತೀರ್ಪನ್ನು ಅವರು ಎಷ್ಟು ಅಸಡ್ಡೆಮಾಡುತ್ತಾರೆಂದರೆ, ಎಲ್ಲವೂ ಸರಿಯಾಗಿಹೋಗುವುದೆಂದು ಅವರು ಜನರಿಗೆ ಹೇಳುತ್ತಾರೆ.

22. ಯೇಸುವಿನ ದಿನಗಳ ಧಾರ್ಮಿಕ ಮುಖಂಡರು ಯಾವ ರೀತಿಯಲ್ಲಿ ಪ್ರಾಚೀನ ಯೆಹೂದದ ಧಾರ್ಮಿಕ ಮುಖಂಡರಂತೆಯೇ ಇದ್ದಾರೆ?

22 ತನ್ನ ಪ್ರವಾದನೆಯ ಮೊದಲಲ್ಲಿ ಯೆಶಾಯನು ಯೆಹೂದದ ಅಪನಂಬಿಗಸ್ತ ಧಾರ್ಮಿಕ ಮುಖಂಡರನ್ನು ವರ್ಣಿಸಲು ಇದೇ ರೀತಿಯ ವರ್ಣನೆಯನ್ನು, ಅಂದರೆ ಆತ್ಮಿಕವಾಗಿ ಕುಡುಕರು, ಅರೆನಿದ್ದೆಯಲ್ಲಿರುವವರು, ತಿಳಿವಳಿಕೆಯ ಕೊರತೆಯಿರುವವರು ಎಂಬ ವರ್ಣನೆಯನ್ನು ಉಪಯೋಗಿಸಿದ್ದಾನೆ. ಅವರು ಜನರ ಮೇಲೆ ಮನುಷ್ಯರ ಸಂಪ್ರದಾಯಗಳ ಹೊರೆಯನ್ನು ಹೇರಿದ್ದಾರೆ, ಧಾರ್ಮಿಕ ಸುಳ್ಳುಗಳನ್ನಾಡಿದ್ದಾರೆ, ಸಹಾಯಕ್ಕಾಗಿ ದೇವರ ಕಡೆಗೆ ನೋಡುವ ಬದಲು ಅಶ್ಶೂರದ ಮೇಲೆ ಭರವಸೆಯಿಟ್ಟಿದ್ದಾರೆ. (2 ಅರಸುಗಳು 16:​5-9; ಯೆಶಾಯ 29:​1, 9-14) ಅವರು ಯಾವುದೇ ಪಾಠವನ್ನು ಕಲಿತಿಲ್ಲವೆಂಬುದು ತೀರ ಸ್ಪಷ್ಟ. ದುಃಖಕರವಾದ ವಿಷಯವೇನಂದರೆ, ಒಂದನೆಯ ಶತಮಾನದಲ್ಲಿಯೂ ಇದೇ ರೀತಿಯ ಮುಖಂಡರಿದ್ದರು. ದೇವರ ಸ್ವಂತ ಕುಮಾರನು ತಮ್ಮ ಬಳಿಗೆ ತಂದ ಸುವಾರ್ತೆಯನ್ನು ಸ್ವೀಕರಿಸುವ ಬದಲು, ಅವರು ಯೇಸುವನ್ನು ನಿರಾಕರಿಸಿ ಅವನನ್ನು ಮರಣಕ್ಕೊಪ್ಪಿಸಲು ಒಳಸಂಚನ್ನು ನಡೆಸಿದರು. ಯೇಸು ಅವರನ್ನು ಮುಚ್ಚುಮರೆಯಿಲ್ಲದೆ, ‘ದಾರಿ ತೋರಿಸುವ ಕುರುಡರು’ ಎಂದು ಕರೆದು, “ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು” ಎಂದು ಕೂಡಿಸಿ ಹೇಳಿದನು.​—⁠ಮತ್ತಾಯ 15:⁠14.

ಇಂದಿನ ಕಾವಲುಗಾರರು

23. ಧಾರ್ಮಿಕ ಮುಖಂಡರ ಕುರಿತಾದ ಪೇತ್ರನ ಯಾವ ಪ್ರವಾದನೆಯು ನೆರವೇರಿದೆ?

23 ಕ್ರೈಸ್ತರನ್ನು ತಪ್ಪುದಾರಿಗೆಳೆಯಲು ಸುಳ್ಳು ಬೋಧಕರು ಸಹ ಎದ್ದುಬರುವರೆಂದು ಅಪೊಸ್ತಲ ಪೇತ್ರನು ಎಚ್ಚರಿಸಿದನು. ಅವನು ಬರೆದುದು: “ಆದರೆ ಇಸ್ರಾಯೇಲ್‌ ಜನರಲ್ಲಿ ಸುಳ್ಳುಪ್ರವಾದಿಗಳೂ ಎದ್ದರಲ್ಲಾ; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳುಬೋಧಕರು ಇರುವರು. ಅವರು ನಾಶಕರವಾದ ಮತಭೇದಗಳನ್ನು ಕಳ್ಳತನದಿಂದ ಹುಟ್ಟಿಸುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಕೂಡ ತಾವು ಅರಿಯೆವು ಎಂದು ಹೇಳುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶವನ್ನು ಬರಮಾಡಿಕೊಳ್ಳುವರು.” (2 ಪೇತ್ರ 2:1) ಇಂತಹ ಸುಳ್ಳು ಬೋಧಕರ ಸುಳ್ಳು ಬೋಧನೆಗಳು ಮತ್ತು ಪಂಥಗಳ ಪ್ರತಿಫಲವೇನು? ಅದು ಕ್ರೈಸ್ತಪ್ರಪಂಚವೇ. ಅದರ ಧಾರ್ಮಿಕ ಮುಖಂಡರು ಇಂದು ತಮ್ಮ ರಾಜಕೀಯ ಮಿತ್ರರ ಮೇಲೆ ದೇವರ ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ಬಳಿಕ ಉಜ್ವಲವಾದ ಭವಿಷ್ಯವನ್ನು ವಾಗ್ದಾನಿಸುತ್ತಾರೆ. ಹೀಗೆ ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಆತ್ಮಿಕ ವಿಷಯಗಳಲ್ಲಿ ಕುರುಡರು, ಮೂಕರು, ಮತ್ತು ನಿದ್ರಿಸುವವರಾಗಿ ಪರಿಣಮಿಸಿದ್ದಾರೆ.

24. ಆತ್ಮಿಕ ಇಸ್ರಾಯೇಲ್‌ ಮತ್ತು ವಿದೇಶೀಯರ ಮಧ್ಯೆ ಯಾವ ಐಕ್ಯಭಾವವಿದೆ?

24 ಆದರೂ, ಯೆಹೋವನು ತನ್ನ ಮಹಾ ಪ್ರಾರ್ಥನಾಲಯದಲ್ಲಿ ದೇವರ ಇಸ್ರಾಯೇಲಿನ ಕೊನೆಯವರೊಂದಿಗೆ ಆರಾಧಿಸುವಂತೆ, ಲಕ್ಷಾಂತರ ಮಂದಿ ವಿದೇಶೀಯರನ್ನು ಕರೆತರುತ್ತಿದ್ದಾನೆ. ಈ ವಿದೇಶೀಯರು, ಅನೇಕ ಜನಾಂಗ, ಕುಲ, ಭಾಷೆಗಳವರಾದರೂ, ಅವರು ಪರಸ್ಪರವಾಗಿ ಮತ್ತು ದೇವರ ಇಸ್ರಾಯೇಲ್‌ನೊಂದಿಗೆ ಐಕ್ಯವಾಗಿದ್ದಾರೆ. ರಕ್ಷಣೆಯು ಯೆಹೋವ ದೇವರಿಂದ ಯೇಸು ಕ್ರಿಸ್ತನ ಮೂಲಕ ಮಾತ್ರ ಬರಸಾಧ್ಯವಿದೆ ಎಂಬ ಮನವರಿಕೆ ಅವರಿಗಾಗಿದೆ. ಅವರು ಯೆಹೋವನ ಮೇಲಿರುವ ಪ್ರೀತಿಯಿಂದ ಪ್ರಚೋದಿತರಾಗಿ, ತಮ್ಮ ನಂಬಿಕೆಗೆ ಸ್ವರವನ್ನು ಕೂಡಿಸುವುದರಲ್ಲಿ ಕ್ರಿಸ್ತನ ಅಭಿಷಿಕ್ತ ಸಹೋದರರೊಂದಿಗೆ ಜೊತೆಗೂಡುತ್ತಾರೆ. ಮತ್ತು ಅವರು ಪ್ರೇರಿತ ಅಪೊಸ್ತಲನು ಬರೆದ ಈ ಮಾತುಗಳಿಂದ ಬಹಳವಾಗಿ ಸಂತೈಸಲ್ಪಡುತ್ತಾರೆ: “ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವದು.”​—⁠ರೋಮಾಪುರ 10:⁠9.

[ಪಾದಟಿಪ್ಪಣಿಗಳು]

^ ಪ್ಯಾರ. 8 “ನಪುಂಸಕ” ಎಂಬ ಪದವು, ಲೈಂಗಿಕ ಅಂಗಚ್ಛೇದನಕ್ಕೆ ಸೂಚಿತವಾಗಿರದೇ, ಅರಸನ ಆಸ್ಥಾನದ ಅಧಿಕಾರಿ (ಕಂಚುಕಿ)ಗೂ ಅನ್ವಯಿಸತೊಡಗಿತು. ಫಿಲಿಪ್ಪನು ದೀಕ್ಷಾಸ್ನಾನ ಮಾಡಿಸಿದ ಐಥಿಯೋಪ್ಯದ ವ್ಯಕ್ತಿಯು ಮತಾವಲಂಬಿಯಾಗಿದ್ದದರಿಂದ, ಅವನು ಈ ಅರ್ಥದಲ್ಲಿ ನಪುಂಸಕ (ಕಂಚುಕಿ)ನಾಗಿದ್ದಿರಬೇಕು. ಸುನ್ನತಿಯಾಗಿರದ ಯೆಹೂದ್ಯೇತರರಿಗೆ ದಾರಿಯು ತೆರೆಯಲ್ಪಡುವ ಮೊದಲೇ ಅವನು ದೀಕ್ಷಾಸ್ನಾನ ಪಡೆದನು.​—⁠ಅ. ಕೃತ್ಯಗಳು 8:​27-39.

^ ಪ್ಯಾರ. 8 ಯೆರೆಮೀಯನ ಸಹಾಯಕ್ಕೆ ಬಂದ ಮತ್ತು ಚಿದ್ಕೀಯ ರಾಜನ ಸನ್ನಿಧಿಗೆ ನೇರವಾಗಿ ಹೋಗಲು ಅವಕಾಶವಿದ್ದ ಎಬೆದ್ಮೆಲೆಕನನ್ನು ಕಂಚುಕಿ (ನಪುಂಸಕ) ಎಂದು ಕರೆಯಲಾಗಿದೆ. ಅವನು ಶಾರೀರಿಕವಾಗಿ ಲೈಂಗಿಕ ಅಂಗವಿಕಲನಾಗಿರುವ ಕಾರಣದಿಂದ ಹಾಗೆ ಕರೆಯಲ್ಪಡದೆ, ಆಸ್ಥಾನದ ಅಧಿಕಾರಿಯಾಗಿದ್ದ ಕಾರಣದಿಂದಲೇ ಅವನನ್ನು ಹಾಗೆ ಕರೆಯಲಾಗಿದೆ ಎಂದು ತೋರಿಬರುತ್ತದೆ.​—⁠ಯೆರೆಮೀಯ 38:​7-13.

[ಅಧ್ಯಯನ ಪ್ರಶ್ನೆಗಳು]

[ಪುಟ 250ರಲ್ಲಿರುವ ಚಿತ್ರ]

ಸಬ್ಬತ್‌ ದಿನವು ಪ್ರಾರ್ಥನೆ, ಅಧ್ಯಯನ ಮತ್ತು ಮನನಕ್ಕೆ ಅವಕಾಶವನ್ನು ನೀಡುತ್ತದೆ

[ಪುಟ 256ರಲ್ಲಿರುವ ಚಿತ್ರಗಳು]

ಬೇರೆ ಕುರಿಗಳ ಸ್ಥಾನವೇನೆಂಬುದನ್ನು 1935ರ ವಾಷಿಂಗ್ಟನ್‌ ಡಿ.ಸಿ.ಯ ಅಧಿವೇಶನದಲ್ಲಿ ಸ್ಪಷ್ಟವಾಗಿ ವಿವರಿಸಲಾಯಿತು (ಕೆಳಗೆ ದೀಕ್ಷಾಸ್ನಾನದ ಚಿತ್ರ, ಬಲಕ್ಕೆ ಕಾರ್ಯಕ್ರಮ)

[ಪುಟ 259ರಲ್ಲಿರುವ ಚಿತ್ರ]

ಕಾಡುಮೃಗಗಳನ್ನು ಔತಣಕ್ಕೆ ಕರೆಯಲಾಗುತ್ತದೆ

[ಪುಟ 261ರಲ್ಲಿರುವ ಚಿತ್ರಗಳು]

ವಿದೇಶೀಯರು ಮತ್ತು ದೇವರ ಇಸ್ರಾಯೇಲ್ಯರು ಪರಸ್ಪರ ಐಕ್ಯದಿಂದಿದ್ದಾರೆ