ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

“ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ”

“ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ”

ದೇವರಿಗೆ ಸಮರ್ಪಿಸಿಕೊಂಡಿರುವ ನಮಗೆ ಒಂದು ಕರ್ತವ್ಯ ಇದೆ. ಏನದು? ನಾವು ಆಡುವ ಪ್ರತಿಯೊಂದು ಮಾತಿನಲ್ಲೂ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯೆಹೋವನಿಗೆ ಮಹಿಮೆ ತರುವುದೇ. ಆದ್ದರಿಂದ ಅಪೊಸ್ತಲ ಪೌಲನು ಹೀಗೆ ಬರೆದನು: “ನೀವು ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.” (1 ಕೊರಿಂ. 10:31) ಇದನ್ನು ಮಾಡಲು ನಾವು ಯೆಹೋವನ ಮಟ್ಟಗಳನ್ನು ಪಾಲಿಸಬೇಕು. ಆ ಮಟ್ಟಗಳು ನೀತಿಯುತವಾಗಿವೆ ಮತ್ತು ಪರಿಪೂರ್ಣವಾಗಿವೆ. ಏಕೆಂದರೆ ಯೆಹೋವನು ಪರಿಪೂರ್ಣನು. ನಾವು ಆತನನ್ನು ಅನುಕರಿಸಬೇಕು.—ಎಫೆ. 5:1, 2; ಕೊಲೊ. 3:10.

2 ಇದನ್ನೇ ಅಪೊಸ್ತಲ ಪೇತ್ರನು ಸಹ ಕ್ರೈಸ್ತರ ಗಮನಕ್ಕೆ ತರುತ್ತಾ ಹೀಗೆ ಬರೆದನು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ಇಚ್ಛೆಗಳಿಗನುಸಾರ ನಡೆಯುತ್ತಿದ್ದಂತೆ ಈಗ ನಡೆಯುವುದನ್ನು ಬಿಟ್ಟುಬಿಡಿರಿ. ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರ ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ. ಏಕೆಂದರೆ, ‘ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.” (1 ಪೇತ್ರ 1:14-16) ಇಸ್ರಾಯೇಲ್ಯರಿಗೆ ಹೇಳಿದಂತೆಯೇ ಯೆಹೋವನು ಕ್ರೈಸ್ತರಾಗಿರುವ ನಮಗೆ ಕೂಡ ಯಾವಾಗಲೂ ಪವಿತ್ರರಾಗಿರಬೇಕೆಂದು ಹೇಳಿದ್ದಾನೆ. ಪವಿತ್ರರಾಗಿರುವುದು ಅಂದರೆ ಪಾಪ ಮತ್ತು ಈ ಲೋಕದ ಮನೋಭಾವವೆಂಬ ಅಶುದ್ಧತೆ ನಮಗೆ ಅಂಟಿಕೊಳ್ಳದಂತೆ ನೋಡಿಕೊಳ್ಳುವುದಾಗಿದೆ. ಆಗ ನಾವು ಯೆಹೋವನ ಪವಿತ್ರ ಸೇವೆಗೆ ಮೀಸಲಾದ ಜನರಾಗುತ್ತೇವೆ.—ವಿಮೋ. 20:5.

3 ನಾವು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದಾಗ ಯೆಹೋವನ ಬಗ್ಗೆ, ಆತನು ಏನು ಬಯಸುತ್ತಾನೆ ಎನ್ನುವುದರ ಬಗ್ಗೆ ತಿಳಿದುಕೊಂಡೆವು. ಆತನಿಗೆ ಹೆಚ್ಚು ಆಪ್ತರಾದೆವು. ಅಧ್ಯಯನ ಮಾಡುತ್ತಾ ಹೋದಂತೆ ಯೆಹೋವನಿಗೆ ಮತ್ತು ಆತನ ಸೇವೆಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕೆಂದು ತಿಳಿದೆವು. (ಮತ್ತಾ. 6:33; ರೋಮ. 12:2) ಅದಕ್ಕಾಗಿ ಹಳೇ ಸ್ವಭಾವವನ್ನು ಬಿಟ್ಟು ಹೊಸ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶುರುಮಾಡಿದೆವು. (ಎಫೆ. 4:22-24) ನಾವು ಪವಿತ್ರರಾಗಿಯೇ ಉಳಿಯಬೇಕಾದರೆ ಬೈಬಲಿನಲ್ಲಿರುವ ಯೆಹೋವನ ನಿಯಮ ಮತ್ತು ತತ್ವಗಳಿಗೆ ವಿಧೇಯರಾಗುತ್ತಾ ಇರಬೇಕು.—2 ತಿಮೊ. 3:16.

ಶುದ್ಧ ಆರಾಧನೆ ಮತ್ತು ನೈತಿಕ ಶುದ್ಧತೆ

4 ಯಾವಾಗಲೂ ಯೆಹೋವನ ನೀತಿಯ ಮಟ್ಟಗಳಿಗನುಸಾರ ನಡೆಯುವುದು ಸುಲಭವೇನಲ್ಲ. ಏಕೆಂದರೆ ಒಂದು ಕಡೆ ನಮ್ಮ ವೈರಿಯಾದ ಸೈತಾನನು ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುತ್ತಾ ಇರುತ್ತಾನೆ. ಇನ್ನೊಂದು ಕಡೆ ಈ ಲೋಕದ ಕೆಟ್ಟ ವಿಷಯಗಳು ಮತ್ತು ನಮ್ಮಲ್ಲೇ ಇರುವ ಪಾಪಭರಿತ ಪ್ರವೃತ್ತಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತಾ ಇರುತ್ತವೆ. ಆದ್ದರಿಂದ ನಾವು ಯೆಹೋವನಿಗೆ ಮಾಡಿದ ಸಮರ್ಪಣೆಗನುಸಾರ ಜೀವಿಸಲು ಹೋರಾಟ ಮಾಡಬೇಕು. ಯೆಹೋವನ ನೀತಿಯ ಮಟ್ಟಗಳನ್ನು ಅನುಸರಿಸುವವರಿಗೆ ಕಷ್ಟಗಳು ಬಂದೇ ಬರುತ್ತವೆ ಎಂದು ಬೈಬಲಿನಲ್ಲಿ ಈಗಾಗಲೇ ಹೇಳಲಾಗಿದೆ. (2 ತಿಮೊ. 3:12) ಹಾಗಾಗಿ ನಮಗೆ ಕಷ್ಟ ಪರೀಕ್ಷೆಗಳು ಬಂದರೆ ನಾವು ಯೆಹೋವನು ಬಯಸುವಂಥ ರೀತಿಯಲ್ಲಿ ಜೀವಿಸುತ್ತಿದ್ದೇವೆ ಎಂದರ್ಥ. ಇದನ್ನು ಮನಸ್ಸಿನಲ್ಲಿಟ್ಟರೆ ಕಷ್ಟಗಳು ಬಂದರೂ ನಾವು ಕಳವಳಪಡದೆ ಸಂತೋಷದಿಂದಿರುತ್ತೇವೆ.—1 ಪೇತ್ರ 3:14-16; 4:12, 14-16.

5 ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದರೂ ಆತನಿಗೆ ಬಂದ ಕಷ್ಟ ಪರೀಕ್ಷೆಗಳಿಂದ ವಿಧೇಯತೆಯನ್ನು ಕಲಿತನು. ಸೈತಾನನ ಆಮಿಷಗಳಿಗೆ ಯಾವತ್ತೂ ಬಗ್ಗಲಿಲ್ಲ. ಈ ಲೋಕದಲ್ಲಿ ಮಹಾ ಸಾಧನೆ ಮಾಡಬೇಕೆಂಬ ಆಸೆ ಕಿಂಚಿತ್ತೂ ಆತನಲ್ಲಿರಲಿಲ್ಲ. (ಮತ್ತಾ. 4:1-11; ಯೋಹಾ. 6:15) ದೇವರಲ್ಲಿದ್ದ ನಂಬಿಕೆಯನ್ನು ಬಿಟ್ಟುಬಿಡುವ ಯೋಚನೆ ಒಮ್ಮೆ ಸಹ ಆತನಲ್ಲಿ ಬರಲಿಲ್ಲ. ಯೆಹೋವನಿಗೆ ನಂಬಿಗಸ್ತನಾಗಿದ್ದ ಕಾರಣ ಜನರೆಲ್ಲರು ಯೇಸುವನ್ನು ದ್ವೇಷಿಸಿದರೂ ಆತನು ದೇವರ ಮಟ್ಟಗಳನ್ನು ಪಾಲಿಸುವುದನ್ನು ಬಿಟ್ಟುಬಿಡಲಿಲ್ಲ. ತನ್ನ ಶಿಷ್ಯರನ್ನೂ ಜನರು ದ್ವೇಷಿಸುತ್ತಾರೆ ಎಂದು ಯೇಸು ಸಾಯುವ ಮುಂಚೆ ಹೇಳಿದನು. ಆತನ ಮಾತಿನಂತೆಯೇ ಶಿಷ್ಯರಿಗೆ ಅಂದಿನಿಂದ ಇಂದಿನವರೆಗೆ ಕಷ್ಟ-ಹಿಂಸೆಗಳು ಬರುತ್ತಲೇ ಇವೆ. ಆದರೆ ಯೇಸು ಈ ಲೋಕವನ್ನು ಜಯಿಸಿದ್ದಾನೆ ಎಂಬ ನಿಜಾಂಶವು ಅವರಲ್ಲಿ ಧೈರ್ಯ ತುಂಬಿದೆ.—ಯೋಹಾ. 15:19; 16:33; 17:16.

6 ನಮ್ಮ ನಾಯಕನಾದ ಯೇಸುವಿನಂತೆ ನಾವು ಈ ಲೋಕದ ಭಾಗವಾಗಿ ಇರಬಾರದಾದರೆ ಯೆಹೋವನ ನೀತಿಯ ಮಟ್ಟಗಳಿಗನುಸಾರ ನಡೆಯಬೇಕು. ಈ ಲೋಕದಲ್ಲಿರುವ ರಾಜಕೀಯ, ಸಾಮಾಜಿಕ ವಿಷಯಗಳಲ್ಲಿ ಸೇರಬಾರದು, ಈ ಲೋಕದ ಕೀಳ್ಮಟ್ಟದ ನಡತೆಯನ್ನು ಸ್ವಲ್ಪವೂ ಅನುಸರಿಸಬಾರದು. “ಎಲ್ಲ ಕಶ್ಮಲತೆಯನ್ನು ಮತ್ತು ಅಧಿಕವಾದ ಕೆಟ್ಟತನವನ್ನು ತೆಗೆದುಹಾಕಿ ನಿಮ್ಮ ಪ್ರಾಣಗಳನ್ನು ರಕ್ಷಿಸಲು ಶಕ್ತವಾಗಿರುವ ವಾಕ್ಯದ ನೆಡುವಿಕೆಯನ್ನು ಸೌಮ್ಯಭಾವದಿಂದ ಸ್ವೀಕರಿಸಿರಿ” ಎಂಬ ಮಾತುಗಳನ್ನು ನಾವು ಗಂಭೀರವಾಗಿ ತಕ್ಕೊಳ್ಳಬೇಕು. (ಯಾಕೋ. 1:21) ಬೈಬಲ್‌ ಅಧ್ಯಯನ ಮಾಡುವುದರಿಂದ, ಕೂಟಗಳಿಗೆ ಹಾಜರಾಗುವುದರಿಂದ ದೇವರ ‘ವಾಕ್ಯವನ್ನು ನಾವು ನಮ್ಮ ಮನಸ್ಸಿನಲ್ಲಿ ನೆಡಲು’ ಆಗುತ್ತದೆ. ಆಗ ಈ ಲೋಕದಲ್ಲಿರುವ ವಿಷಯಗಳು ಬೇಕೆಂಬ ಆಸೆ ಕೂಡ ನಮ್ಮಲ್ಲಿ ಬರುವುದಿಲ್ಲ. ಯಾಕೋಬನು ಹೀಗೆ ಬರೆದನು: ‘ಲೋಕದೊಂದಿಗಿನ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ ಎಂಬುದು ನಿಮಗೆ ತಿಳಿಯದೊ? ಆದುದರಿಂದ ಯಾವನಾದರೂ ಲೋಕಕ್ಕೆ ಸ್ನೇಹಿತನಾಗಲು ಬಯಸುವುದಾದರೆ ಅವನು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ.’ (ಯಾಕೋ. 4:4) ನಾವು ದೇವರ ವೈರಿಗಳಾಗಬಾರದು ಎಂಬ ಕಾರಣದಿಂದಲೇ ಬೈಬಲ್‌ ನಮಗೆ ಯೆಹೋವನ ನೀತಿಯ ಮಟ್ಟಗಳ ಪ್ರಕಾರ ಜೀವಿಸಿರಿ ಹಾಗೂ ಈ ಲೋಕದಿಂದ ಪ್ರತ್ಯೇಕರಾಗಿ ಉಳಿಯಿರಿ ಎಂದು ಎಚ್ಚರಿಸುತ್ತದೆ.

7 ಬೈಬಲ್‌ ಈ ಎಚ್ಚರಿಕೆ ಕೊಡುತ್ತದೆ: “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ.” (ಎಫೆ. 5:3) ಹಾಗಾಗಿ ಯಾವುದೇ ಅಶ್ಲೀಲವಾದ, ನಾಚಿಕೆಗೆಟ್ಟ ಹೀನ ಕೃತ್ಯಗಳ ಬಗ್ಗೆ ಆಲೋಚನೆ ನಮ್ಮ ಮನಸ್ಸಿನಲ್ಲಿ ಸುಳಿಯಲು ಬಿಡಬಾರದು. ಅಂಥ ವಿಷಯಗಳ ಬಗ್ಗೆ ಮಾತಾಡಲೂಬಾರದು. ಆಗ ಯೆಹೋವನ ನೀತಿಯ ಹಾಗೂ ಶುದ್ಧವಾದ ಮಟ್ಟಗಳಿಗನುಸಾರ ಜೀವಿಸಲು ನಾವು ಬಯಸುತ್ತೇವೆಂದು ತೋರಿಸುತ್ತೇವೆ.

ಶಾರೀರಿಕ ಶುದ್ಧತೆ

8 ಶುದ್ಧ ಆರಾಧನೆ ಮತ್ತು ನೈತಿಕವಾಗಿ ಶುದ್ಧರಾಗಿರುವುದರ ಜೊತೆಗೆ ಶಾರೀರಿಕವಾಗಿ ಕೂಡ ಶುದ್ಧರಾಗಿರುವುದು ಪ್ರಾಮುಖ್ಯ. ಪವಿತ್ರನಾಗಿರುವ ಯೆಹೋವ ದೇವರು ಪ್ರಾಚೀನ ಇಸ್ರಾಯೇಲ್ಯರಿಗೆ ತಮ್ಮ ಪಾಳೆಯವನ್ನು ಶುದ್ಧವಾಗಿಡುವಂತೆ ಹೇಳಿದ್ದನು. ಅದೇ ರೀತಿ ನಾವು ಕೂಡ ಶುದ್ಧರಾಗಿರಬೇಕು. ಯೆಹೋವನಿಗೆ ನಮ್ಮಲ್ಲಿ ‘ಅಶುದ್ಧವೇನೂ ಕಂಡುಬರಬಾರದು.’—ಧರ್ಮೋ. 23:14.

9 ನಾವು ಪವಿತ್ರರಾಗಿರುವುದಕ್ಕೂ ಶಾರೀರಿಕವಾಗಿ ಶುದ್ಧರಾಗಿರುವುದಕ್ಕೂ ಸಂಬಂಧವಿದೆ ಎಂದು ಬೈಬಲ್‌ ತೋರಿಸುತ್ತದೆ. ಉದಾಹರಣೆಗೆ ಪೌಲನು ಏನು ಬರೆದನೆಂದು ಗಮನಿಸಿ: “ಪ್ರಿಯರೇ, . . . ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.” (2 ಕೊರಿಂ. 7:1) ಹಾಗಾಗಿ ನಾವು ನಮ್ಮ ಶರೀರವನ್ನು ಯಾವಾಗಲೂ ಶುದ್ಧವಾಗಿಡಬೇಕು. ಕ್ರಮವಾಗಿ ಸ್ನಾನ ಮಾಡಬೇಕು, ಬಟ್ಟೆ ಒಗೆಯಬೇಕು. ಎಲ್ಲ ಕಡೆ ಒಂದೇ ರೀತಿಯ ಪರಿಸ್ಥಿತಿ ಇರುವುದಿಲ್ಲವಾದರೂ ನಮ್ಮನ್ನೂ ನಮ್ಮ ಮಕ್ಕಳನ್ನೂ ಶುದ್ಧರಾಗಿಡಲು ಬೇಕಾಗುವಷ್ಟು ಸಾಬೂನು, ನೀರು ಸಾಮಾನ್ಯವಾಗಿ ಲಭ್ಯವಿರುತ್ತದೆ.

10 ನಾವು ಸುವಾರ್ತೆ ಸಾರುವುದರಿಂದ ತುಂಬ ಜನರಿಗೆ ನಮ್ಮ ಪರಿಚಯವಿರುತ್ತದೆ. ಹಾಗಾಗಿ ನಮ್ಮ ಮನೆಯ ಒಳಗೆ ಹೊರಗೆ ಸ್ವಚ್ಛವಾಗಿದ್ದರೆ ಅದೇ ನಮ್ಮ ನೆರೆಹೊರೆಯವರಿಗೆ ಒಳ್ಳೇ ಸಾಕ್ಷಿ ಕೊಡುತ್ತದೆ. ಹೀಗೆ ಸ್ವಚ್ಛವಾಗಿಡುವುದು ಇಡೀ ಕುಟುಂಬದ ಜವಾಬ್ದಾರಿ. ಸಹೋದರರು ಮನೆ, ಅಂಗಳ, ಸುತ್ತಮುತ್ತಲು ನೀಟಾಗಿಡುವುದಕ್ಕೆ ಹೆಚ್ಚು ಗಮನ ಕೊಡಬೇಕು. ಹೀಗೆ ಮಾಡುವಾಗ ಮತ್ತು ಕುಟುಂಬದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ ವಹಿಸುವಾಗ ಅವರು ‘ತಮ್ಮ ಸ್ವಂತ ಮನೆಯವರನ್ನು ಒಳ್ಳೇ ರೀತಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು’ ತೋರಿಸುತ್ತಾರೆ. (1 ತಿಮೊ. 3:4, 12) ಸಹೋದರಿಯರು ಮುಖ್ಯವಾಗಿ ಮನೆಯ ಒಳಗೆ ಎಲ್ಲವನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಡಬೇಕು. (ತೀತ 2:4, 5) ಇದೆಲ್ಲವು ನೋಡುವವರ ಮೇಲೆ ಒಳ್ಳೇ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಸಹ ಶುದ್ಧರಾಗಿರುವಂತೆ, ತಮ್ಮ ಕೋಣೆಯನ್ನು ನೀಟಾಗಿಡುವಂತೆ ತರಬೇತಿ ಕೊಡಬೇಕು. ಹೀಗೆ ಇಡೀ ಕುಟುಂಬವು ಹೊಸ ಲೋಕದ ಜೀವನಕ್ಕೆ ಬೇಕಾದ ಶುದ್ಧತೆಯ ರೂಢಿಗಳನ್ನು ಈಗಿನಿಂದಲೇ ಬೆಳೆಸಿಕೊಳ್ಳಲು ಆಗುತ್ತದೆ.

11 ಅನೇಕ ಸಹೋದರರ ಬಳಿ ಸ್ವಂತ ವಾಹನಗಳಿವೆ. ಕೆಲವು ಪ್ರದೇಶಗಳಲ್ಲಿ ಸೇವೆಗೆ, ಕೂಟಗಳಿಗೆ ಹೋಗಲು ಕಾರು ಅಥವಾ ಯಾವುದಾದರೂ ಸ್ವಂತ ವಾಹನ ಬೇಕೇಬೇಕಾಗುತ್ತದೆ. ನಾವು ನಮ್ಮ ವಾಹನಗಳನ್ನು ಶುದ್ಧವಾಗಿ, ಸುಸ್ಥಿತಿಯಲ್ಲಿ ಇಟ್ಟುಕೊಂಡಿರಬೇಕು. ನಮ್ಮ ಮನೆ, ವಾಹನಗಳನ್ನು ನೋಡಿ ನಾವು ಯೆಹೋವನನ್ನು ಆರಾಧಿಸುವ ಶುದ್ಧ ಹಾಗೂ ಪವಿತ್ರ ಜನರೆಂದು ಗೊತ್ತಾಗುವ ಹಾಗೆ ಇರಬೇಕು. ನಮ್ಮ ಬ್ಯಾಗ್‌, ಬೈಬಲ್‌ ಕೂಡ ನೀಟಾಗಿರಬೇಕು.

12 ನಮ್ಮ ಬಟ್ಟೆ, ಅಲಂಕಾರ ಬೈಬಲ್‌ ತತ್ವಗಳಿಗೆ ಅನುಸಾರ ಇರಬೇಕು. ನಾವು ಒಬ್ಬ ಗಣ್ಯ ವ್ಯಕ್ತಿಯ ಹತ್ತಿರ ತೀರಾ ಮಾಮೂಲು ಬಟ್ಟೆ ಧರಿಸಿ ಹೋಗುತ್ತೇವಾ? ಇಲ್ಲ ಅಲ್ಲವೇ? ಹೀಗಿರುವಾಗ ಜನರ ಮುಂದೆ ಮತ್ತು ಕೂಟಗಳಲ್ಲಿ ವೇದಿಕೆಯ ಮೇಲೆ ಯೆಹೋವನನ್ನು ಪ್ರತಿನಿಧಿಸುವಾಗ ನಮ್ಮ ಉಡುಗೆ-ತೊಡುಗೆ ಬಗ್ಗೆ ಇನ್ನೆಷ್ಟು ಜಾಗ್ರತೆ ವಹಿಸಬೇಕೆಂದು ಯೋಚಿಸಿ. ಜನರು ನಮ್ಮ ಬಟ್ಟೆ, ಅಲಂಕಾರ ನೋಡಿ ಸತ್ಯವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಹಾಗಾಗಿ ನಾವು ಅಸಭ್ಯವಾದ, ಬೇರೆಯವರ ಭಾವನೆಗಳಿಗೆ ಬೆಲೆಕೊಡದಂಥ ರೀತಿಯಲ್ಲಿ ಬಟ್ಟೆ ಧರಿಸುವುದು ಯೋಗ್ಯವಲ್ಲ. (ಮೀಕ 6:8; 1 ಕೊರಿಂ. 10:31-33; 1 ತಿಮೊ. 2:9, 10) ಸೇವೆಗೆ, ಕೂಟಗಳಿಗೆ, ಸಮ್ಮೇಳನ, ಅಧಿವೇಶನಗಳಿಗೆ ಹೋಗುವಾಗ ಶಾರೀರಿಕ ಶುದ್ಧತೆ ಮತ್ತು ಸಭ್ಯ ಉಡುಗೆ-ತೊಡುಗೆ ಬಗ್ಗೆ ಬೈಬಲಿನ ಬುದ್ಧಿವಾದವನ್ನು ಪಾಲಿಸಬೇಕು. ಹಾಗೆ ಮಾಡುವಲ್ಲಿ ನಾವು ಎಲ್ಲ ಸಮಯದಲ್ಲೂ ಯೆಹೋವನಿಗೆ ಗೌರವ, ಮಹಿಮೆಯನ್ನು ತರುತ್ತೇವೆ.

ದೇವರಿಗೆ ಸಮರ್ಪಿಸಿಕೊಂಡಿರುವ ನಮಗೆ ಮಾತಿನಲ್ಲೂ ಕಾರ್ಯದಲ್ಲೂ ಯೆಹೋವನಿಗೆ ಮಹಿಮೆ ತರುವ ಕರ್ತವ್ಯ ಇದೆ

13 ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯ ಅಥವಾ ಶಾಖೆಗಳಿಗೆ “ಬೆತೆಲ್‌” ಎಂದು ಹೆಸರು. ಬೆತೆಲ್‌ ಎಂಬ ಪದದ ಅರ್ಥ “ದೇವರ ಮನೆ.” ಹಾಗಾಗಿ ಅಲ್ಲಿಗೆ ಹೋಗುವಾಗ ನಮ್ಮ ಉಡುಗೆ-ತೊಡುಗೆಗೆ ತುಂಬ ಗಮನ ಕೊಡಬೇಕು. ಕೂಟಗಳಿಗೆ ಹೋಗುವಾಗ ನಮ್ಮ ಬಟ್ಟೆ, ನಡತೆ ಹೇಗಿರುತ್ತದೋ ಬೆತೆಲಿಗೆ ಹೋಗುವಾಗಲೂ ಅದೇ ರೀತಿ ಇರಬೇಕು.

14 ಬೇರೆ ಸಂದರ್ಭಗಳಲ್ಲೂ ನಮ್ಮ ಉಡುಗೆ-ತೊಡುಗೆ ಸಭ್ಯವಾಗಿರಬೇಕು. ‘ನಾನು ಹಾಕಿರುವ ಬಟ್ಟೆಯಿಂದಾಗಿ ನನಗೆ ಸಾಕ್ಷಿ ಕೊಡಲು ಮುಜುಗರವಾಗುತ್ತದಾ?’ ಎಂದು ಕೇಳಿಕೊಳ್ಳಬೇಕು.

ಒಳ್ಳೆಯ ಮನರಂಜನೆ

15 ನಾವು ಕೆಲಸದಲ್ಲೇ ಮುಳುಗಿಹೋಗಬಾರದು. ಆರೋಗ್ಯದಿಂದಿರಲು ವಿಶ್ರಾಂತಿ ಮತ್ತು ಮನರಂಜನೆ ಸಹ ಅಗತ್ಯ. ಒಮ್ಮೆ ಯೇಸು ತನ್ನ ಶಿಷ್ಯರಿಗೆ ತನ್ನೊಂದಿಗೆ ಏಕಾಂತ ಸ್ಥಳಕ್ಕೆ ಬಂದು “ತುಸು ದಣಿವಾರಿಸಿಕೊಳ್ಳುವಂತೆ’ ಹೇಳಿದನು. (ಮಾರ್ಕ 6:31) ವಿಶ್ರಾಂತಿ ಹಾಗೂ ಒಳ್ಳೆಯ ಮನರಂಜನೆ ಮನಸ್ಸಿಗೆ ಸಂತೋಷ ಕೊಡುತ್ತದೆ. ನಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಾ ಹೋಗಲು ನಮ್ಮಲ್ಲಿ ಚೈತನ್ಯ ತುಂಬುತ್ತದೆ.

16 ಇಂದು ಮನರಂಜನೆಗೇನೂ ಕೊರತೆಯಿಲ್ಲ. ಎಷ್ಟೋ ವಿಧದ ಮನರಂಜನೆ ಲಭ್ಯವಿದೆ. ಆದ್ದರಿಂದ ಕ್ರೈಸ್ತರು ಬೈಬಲ್‌ ತತ್ವಗಳನ್ನು ಮನಸ್ಸಿನಲ್ಲಿಟ್ಟು ಒಳ್ಳೇ ಮನರಂಜನೆಯನ್ನು ಆರಿಸಿಕೊಳ್ಳಬೇಕು. ಮನರಂಜನೆ ನಮಗೆ ಅಗತ್ಯವಾದರೂ ಅದೇ ಜೀವನದಲ್ಲಿ ಮುಖ್ಯವಲ್ಲ. ‘ಕಡೇ ದಿವಸಗಳಲ್ಲಿ ದೇವರನ್ನು ಪ್ರೀತಿಸುವ ಬದಲು ಭೋಗವನ್ನೇ ಪ್ರೀತಿಸುವವರು’ ಇರುತ್ತಾರೆಂದು ಬೈಬಲಿನಲ್ಲಿ ಹೇಳಲಾಗಿದೆ. (2 ತಿಮೊ. 3:1, 4) ನಾವು ಹಾಗಿರಬಾರದು. ಈಗಿರುವ ಹೆಚ್ಚಿನ ಮನರಂಜನೆ ಸಹ ಯೆಹೋವನ ನೀತಿಯ ಮಟ್ಟಗಳನ್ನು ಪಾಲಿಸುವವರಿಗೆ ಯೋಗ್ಯವಾಗಿಲ್ಲ.

17 ಆರಂಭದ ಕ್ರೈಸ್ತರ ಒಳ್ಳೇ ಮಾದರಿ ನಮಗಿದೆ. ಅವರ ಸುತ್ತಮುತ್ತಲಿದ್ದ ಜನರಿಗೆ ಮೋಜು ಮಜಾವೆಂದರೆ ಇಷ್ಟವಾಗುತ್ತಿತ್ತು. ರೋಮ್‌ನ ರಂಗಸ್ಥಳಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಕೆಲವರನ್ನು ಹಿಂಸೆಪಡಿಸುತ್ತಿದ್ದರು. ರಕ್ತಪಾತ, ಲೈಂಗಿಕ ಅನೈತಿಕತೆಯ ಕೃತ್ಯಗಳನ್ನು ತೋರಿಸುತ್ತಿದ್ದರು. ಆದರೆ ಕ್ರೈಸ್ತರು ಈ ಎಲ್ಲವುಗಳಿಂದ ದೂರವಿದ್ದರು. ಇಂದಿರುವ ಹೆಚ್ಚಿನ ಮನರಂಜನೆ ರೋಮ್‌ನಲ್ಲಿದ್ದ ಮನರಂಜನೆಯಂತೆಯೇ ಇದೆ. ಜನರ ಹೀನ ಆಸೆಗಳಿಗೆ ತಕ್ಕಂತೆ ಮನರಂಜನೆಯನ್ನು ಸಿದ್ಧಗೊಳಿಸಲಾಗುತ್ತದೆ. ಹಾಗಾಗಿ ನಾವು ಎಂಥ ಮನರಂಜನೆಯನ್ನು ಆಯ್ಕೆ ಮಾಡುತ್ತೇವೆಂದು ‘ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.’ ದೇವರಿಗೆ ನಾವು ತೋರಿಸುವ ನಂಬಿಗಸ್ತಿಕೆಯನ್ನು ಬಿಟ್ಟುಬಿಡುವಂತೆ ಮಾಡುವ ಎಲ್ಲ ವಿಷಯಗಳಿಂದ ನಾವು ದೂರವಿರಬೇಕು. (ಎಫೆ. 5:15, 16; ಕೀರ್ತ. 11:5) ಕೆಲವೊಮ್ಮೆ ಮನರಂಜನೆ ಒಳ್ಳೆಯದೇ ಆಗಿರುತ್ತದೆ. ಆದರೆ ಆ ಸ್ಥಳದಲ್ಲಿರುವ ಜನರು ಮತ್ತು ಅಲ್ಲಿನ ವಾತಾವರಣ ಕೆಟ್ಟದಾಗಿರುತ್ತದೆ. ಹಾಗಾಗಿ ನಾವು ಜಾಗ್ರತೆ ವಹಿಸಬೇಕು.—1 ಪೇತ್ರ 4:1-4.

18 ಹಾಗಂತ ಕ್ರೈಸ್ತರು ಆನಂದಿಸಬಹುದಾದ ಮನರಂಜನೆಗಳೇ ಇಲ್ಲವೆಂದಲ್ಲ. ಮನರಂಜನೆ ಬಗ್ಗೆ ಬೈಬಲ್‌ ಕೊಡುವ ಬುದ್ಧಿವಾದವನ್ನು ಮತ್ತು ಬೈಬಲ್‌ ಸಾಹಿತ್ಯದಲ್ಲಿರುವ ಉತ್ತಮ ಸಲಹೆಗಳನ್ನು ಅನುಸರಿಸುವ ಮೂಲಕ ನಾವು ಒಳ್ಳೇ ಮನರಂಜನೆಯಲ್ಲಿ ಆನಂದಿಸಲು ಸಾಧ್ಯ.

19 ಉದಾಹರಣೆಗೆ, ಕೆಲವು ಕುಟುಂಬಗಳನ್ನು ಮನೆಗೆ ಆಮಂತ್ರಿಸಿ ಸಹವಾಸದಲ್ಲಿ ಆನಂದಿಸಬಹುದು ಅಥವಾ ಸಹೋದರ ಸಹೋದರಿಯರನ್ನು ಮದುವೆಯ ಔತಣ ಇಲ್ಲವೆ ಬೇರೆ ವಿಶೇಷ ಸಂದರ್ಭಗಳಿಗೆ ಆಮಂತ್ರಿಸಬಹುದು. (ಯೋಹಾ. 2:2) ಇಂಥ ಸಮಯದಲ್ಲಿ ಎಲ್ಲವೂ ಯೋಗ್ಯವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಮಂತ್ರಿಸಿದವರದ್ದು. ಎಷ್ಟು ಜನರನ್ನು ಆಮಂತ್ರಿಸುತ್ತೇವೆ ಎನ್ನುವುದರ ಬಗ್ಗೆ ಜಾಗ್ರತೆ ವಹಿಸಬೇಕು. ಏಕೆಂದರೆ ತುಂಬ ಮಂದಿಯಿದ್ದರೆ ಎಲ್ಲ ವಿಷಯಗಳ ಮೇಲೆ ನಿಗಾ ಇಡಲು ಕಷ್ಟ. ಇದರಿಂದ ಕೆಲವರು ತಮ್ಮ ನಡತೆಯಲ್ಲಿ, ತಿನ್ನುವುದರಲ್ಲಿ, ಕುಡಿಯುವುದರಲ್ಲಿ ಎಲ್ಲೆ ಮೀರಿ ಹೋಗಿದ್ದಾರೆ. ಗಂಭೀರ ತಪ್ಪುಗಳೂ ನಡೆದಿವೆ. ಹಾಗಾಗಿ ಸ್ವಲ್ಪವೇ ಮಂದಿಯನ್ನು ಆಮಂತ್ರಿಸಿ ಸಂತೋಷಕೂಟವನ್ನು ಬೇಗನೆ ಮುಗಿಸುವುದು ವಿವೇಕವಾಗಿದೆ. ಮದ್ಯವನ್ನು ಕೊಡುವಲ್ಲಿ ಅದು ಮಿತವಾಗಿರಬೇಕು. (ಫಿಲಿ. 4:5) ಇಂಥ ಸಂದರ್ಭದಲ್ಲಿ ತಿನ್ನುವುದು ಕುಡಿಯುವುದು ಪ್ರಾಮುಖ್ಯವಲ್ಲ. ಎಲ್ಲವೂ ಯೆಹೋವನು ಮೆಚ್ಚುವಂತೆ ಹಾಗೂ ಎಲ್ಲರ ನಂಬಿಕೆಯನ್ನು ಹೆಚ್ಚಿಸುವಂತೆ ಇರುವುದೇ ಪ್ರಾಮುಖ್ಯ.

20 ಅತಿಥಿಸತ್ಕಾರ ಮಾಡುವುದು ತುಂಬ ಒಳ್ಳೆಯ ಗುಣ. (1 ಪೇತ್ರ 4:9) ನಮ್ಮ ಮನೆಗೆ ಯಾರನ್ನಾದರೂ ಊಟಕ್ಕೆ, ಉಪಹಾರಕ್ಕೆ ಅಥವಾ ನಮ್ಮೊಂದಿಗೆ ಸಮಯ ಕಳೆಯಲಿಕ್ಕೆ ಕರೆಯುವಾಗ ಬಡ ಸಹೋದರರನ್ನು ಮರೆಯಬಾರದು. (ಲೂಕ 14:12-14) ಒಂದುವೇಳೆ ನಮ್ಮನ್ನು ಬೇರೆಯವರು ಆಮಂತ್ರಿಸಿರುವಲ್ಲಿ ನಮ್ಮ ನಡತೆ ಮಾರ್ಕ 12:31 ಕ್ಕೆ ಅನುಸಾರ ಇರಬೇಕು. ಮಾತ್ರವಲ್ಲ ಅವರು ತೋರಿಸಿದ ಪ್ರೀತಿಗೆ ಕೃತಜ್ಞತೆ ತೋರಿಸಲು ಮರೆಯಬಾರದು.

21 ಯೆಹೋವನು ನಮಗೆ ಹೇರಳ ಉಡುಗೊರೆಗಳನ್ನು ಕೊಟ್ಟಿದ್ದಾನೆ. ಅದೆಲ್ಲವೂ ನಮ್ಮ ಸಂತೋಷಕ್ಕಾಗಿಯೇ. ನಾವು ‘ಪ್ರಯಾಸಪಟ್ಟು ಕೆಲಸಮಾಡಿ ಅನ್ನಪಾನಗಳನ್ನು ತೆಗೆದುಕೊಳ್ಳುವುದು’ ಸಹ ಆತನು ಕೊಟ್ಟಿರುವ ಉಡುಗೊರೆ. (ಪ್ರಸಂ. 3:12,13) ಇದೆಲ್ಲವನ್ನು ‘ದೇವರಿಗೆ ಮಹಿಮೆ ತರುವಂಥ ರೀತಿಯಲ್ಲಿ’ ಮಾಡಿದಾಗ ಬಂದವರಿಗೂ ಕರೆದವರಿಗೂ ಹೆಚ್ಚು ಆನಂದವಾಗುತ್ತದೆ. ಮುಂದೆ ಅದನ್ನು ನೆನಪಿಸಿಕೊಳ್ಳುವಾಗ ಅದು ನಂಬಿಕೆಯನ್ನು ಹೆಚ್ಚಿಸುವಂತಿತ್ತು ಎಂಬ ಸಂತೃಪ್ತಿ ಎಲ್ಲರಿಗೆ ಇರುತ್ತದೆ.

ಶಾಲಾ ಚಟುವಟಿಕೆಗಳು

22 ಯೆಹೋವನ ಸಾಕ್ಷಿಗಳ ಮಕ್ಕಳು ಶಾಲೆಯಲ್ಲಿ ಮೂಲಭೂತ ಶಿಕ್ಷಣ ಪಡೆಯುವುದರಿಂದ ಓದಲು, ಬರೆಯಲು ಚೆನ್ನಾಗಿ ಕಲಿಯುತ್ತಾರೆ. ಪಠ್ಯವಿಷಯಗಳಿಂದ ಜ್ಞಾನ ಪಡೆಯುತ್ತಾರೆ. ಇದರಿಂದ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟುವಾಗ ಅವರಿಗೆ ತುಂಬ ಪ್ರಯೋಜನವಾಗುತ್ತದೆ. ಮಕ್ಕಳು ಶಾಲೆಗೆ ಹೋಗುತ್ತಿರುವಾಗಲೂ ಯೆಹೋವನಿಗೆ ಹಾಗೂ ಆತನ ಸೇವೆಗೆ ಮೊದಲ ಸ್ಥಾನ ಕೊಡಬೇಕು. ಹೀಗೆ ‘ತಮ್ಮ ಮಹಾನ್‌ ಸೃಷ್ಟಿಕರ್ತನನ್ನು ಸ್ಮರಿಸಬೇಕು.’—ಪ್ರಸಂ. 12:1.

23 ನೀವು ಶಾಲೆಗೆ ಹೋಗುವ ಯುವಕ, ಯುವತಿಯಾಗಿರುವಲ್ಲಿ ಶಾಲೆಯ ಮಕ್ಕಳೊಟ್ಟಿಗೆ ಅಗತ್ಯಕ್ಕಿಂತ ಹೆಚ್ಚು ಸಹವಾಸ ಮಾಡಬೇಡಿ. (2 ತಿಮೊ. 3:1, 2) ಯೆಹೋವನ ಸಂರಕ್ಷಣೆ ನಿಮಗಿದೆ. ಆದರೂ ಲೋಕದ ಜನರು ಕೆಟ್ಟ ಪ್ರಭಾವಬೀರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು. (ಕೀರ್ತ. 23:4; 91:1,2) ಹಾಗಾಗಿ ನಿಮ್ಮನ್ನು ರಕ್ಷಿಸಲು ಆತನು ಕೊಟ್ಟಿರುವ ಸಹಾಯಕಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಿ.—ಕೀರ್ತ. 23:5.

24 ಕ್ರೈಸ್ತ ಮಕ್ಕಳಲ್ಲಿ ಹೆಚ್ಚಿನವರು ಲೋಕದಿಂದ ಪ್ರತ್ಯೇಕವಾಗಿರಲು ಬಯಸುವುದರಿಂದ ಪಠ್ಯವಿಷಯಗಳನ್ನು ಬಿಟ್ಟು ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಏಕೆ ಭಾಗವಹಿಸುವುದಿಲ್ಲ ಎಂದು ಶಿಕ್ಷಕರಿಗೆ, ಸಹಪಾಠಿಗಳಿಗೆ ಅರ್ಥವಾಗಲಿಕ್ಕಿಲ್ಲ. ಆದರೆ ನಮಗೆ ಯೆಹೋವನನ್ನು ಖುಷಿಪಡಿಸುವುದೇ ಮುಖ್ಯ. ಅದಕ್ಕಾಗಿ ನಾವೇನು ಮಾಡಬೇಕು? ಬೈಬಲ್‌ ಹೇಳುವುದಕ್ಕೆ ಅನುಸಾರ ನಿರ್ಣಯಗಳನ್ನು ಮಾಡಬೇಕು ಮತ್ತು ಲೋಕದ ಸ್ಪರ್ಧಾ ಮನೋಭಾವ, ರಾಷ್ಟ್ರೀಯತೆಯಿಂದ ದೂರವಿರಲು ವೈಯಕ್ತಿಕ ನಿರ್ಧಾರ ಮಾಡಬೇಕು. (ಗಲಾ. 5:19, 26) ಮಕ್ಕಳೇ, ನಿಮ್ಮ ಹೆತ್ತವರು ಕೊಡುವ ಬೈಬಲ್‌ ಆಧರಿತ ಸಲಹೆಗಳನ್ನು ಸ್ವೀಕರಿಸಿ. ಸಭೆಯಲ್ಲಿ ಸಹೋದರ ಸಹೋದರಿಯರೊಂದಿಗೆ ಆಪ್ತ ಸಹವಾಸ ಮಾಡಿ. ಆಗ ನಿಮಗೆ ಶಾಲೆಯಲ್ಲಿಯೂ ಯೆಹೋವನ ನೀತಿಯ ಮಟ್ಟಗಳನ್ನು ಪಾಲಿಸಲು ಸಾಧ್ಯವಾಗುತ್ತದೆ.

ಉದ್ಯೋಗ ಮತ್ತು ಸಹೋದ್ಯೋಗಿಗಳು

25 ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸುವ ಜವಾಬ್ದಾರಿ ಕುಟುಂಬದ ಯಜಮಾನನದ್ದು. (1 ತಿಮೊ. 5:8) ಅದಕ್ಕಾಗಿ ಅವನು ಪ್ರಯಾಸಪಟ್ಟು ದುಡಿಯಬೇಕಾಗುತ್ತದೆ. ಹಾಗಿದ್ದರೂ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಬೇಕೆಂದು ಅವನು ಮನಸ್ಸಿನಲ್ಲಿಡಬೇಕು. (ಮತ್ತಾ. 6:33; ರೋಮ. 11:13) ಅವನು ದೇವಭಕ್ತಿಯಿಂದ ಜೀವಿಸುವಲ್ಲಿ ಹಾಗೂ ಊಟಬಟ್ಟೆಯಲ್ಲೇ ತೃಪ್ತನಾಗಿರುವಲ್ಲಿ ಹಣ-ಸಂಪತ್ತಿನಿಂದ ಬರುವ ಚಿಂತೆಗಳಿಲ್ಲದೆ ನೆಮ್ಮದಿಯಿಂದಿರುತ್ತಾನೆ. ಸೈತಾನನ ಪಾಶಗಳಿಂದಲೂ ತಪ್ಪಿಸಿಕೊಳ್ಳಲು ಆಗುತ್ತದೆ.—1 ತಿಮೊ. 6:6-10.

26 ಕ್ರೈಸ್ತರೆಲ್ಲರು ಬೈಬಲ್‌ ತತ್ವಗಳನ್ನು ಯಾವಾಗಲೂ ಪಾಲಿಸಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ದೇವರ ನಿಯಮಗಳನ್ನು ಹಾಗೂ ದೇಶದ ನಿಯಮಗಳನ್ನು ಉಲ್ಲಂಘಿಸುವ ಕೆಲಸಗಳಿಗೆ ಕೈಹಾಕಬಾರದು. (ರೋಮ. 13:1, 2; 1 ಕೊರಿಂ. 6:9, 10) ಕೆಟ್ಟ ಸಹವಾಸ ಮಾಡಿದರೆ ಅಪಾಯಗಳು ಇದ್ದೇ ಇವೆ ಎನ್ನುವುದನ್ನು ಮರೆಯಬಾರದು. ನಾವು ಕ್ರಿಸ್ತನ ಸೈನಿಕರು. ಹಾಗಾಗಿ ದೇವರ ನೀತಿಯ ಮಟ್ಟಗಳನ್ನು ಉಲ್ಲಂಘಿಸುವ, ಕ್ರೈಸ್ತ ತಾಟಸ್ಥ್ಯವನ್ನು ಮುರಿಯುವ ಹಾಗೂ ನಮ್ಮ ನಂಬಿಕೆಯನ್ನು ಹಾಳುಮಾಡುವ ವಾಣಿಜ್ಯ ವ್ಯವಹಾರಗಳಲ್ಲಿ ಒಳಗೂಡಬಾರದು. (ಯೆಶಾ. 2:4; 2 ತಿಮೊ. 2:4) ಯೆಹೋವ ದೇವರ ಶತ್ರುವಾಗಿರುವ “ಮಹಾ ಬಾಬೆಲ್‌” ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು.—ಪ್ರಕ. 18:2, 4; 2 ಕೊರಿಂ. 6:14-17.

27 ನಾವು ದೇವರ ನೀತಿಯ ಮಟ್ಟಗಳಿಗನುಸಾರ ಜೀವಿಸುವುದರಿಂದ ಕೂಟ, ಸಮ್ಮೇಳನ, ಅಧಿವೇಶನಗಳ ಸಂದರ್ಭಗಳನ್ನು ವ್ಯಾಪಾರಕ್ಕಾಗಿ ಅಥವಾ ನಮ್ಮ ಸ್ವಾರ್ಥ ಲಾಭಕ್ಕಾಗಿ ಬಳಸಿಕೊಳ್ಳುವುದಿಲ್ಲ. ಏಕೆಂದರೆ ನಾವಲ್ಲಿ ಯೆಹೋವನನ್ನು ಆರಾಧಿಸಲು, ಆಧ್ಯಾತ್ಮಿಕ ಆಹಾರವನ್ನು ಸೇವಿಸಲು, ‘ಪರಸ್ಪರ ಉತ್ತೇಜನವನ್ನು ವಿನಿಮಯ ಮಾಡಿಕೊಳ್ಳಲು’ ಸೇರಿಬರುತ್ತೇವೆ. (ರೋಮ. 1:11, 12; ಇಬ್ರಿ. 10:24, 25) ಹಾಗಾಗಿ ನಂಬಿಕೆಯನ್ನು ಹೆಚ್ಚು ಮಾಡುವಂಥ ವಿಷಯಗಳನ್ನು ಮಾತ್ರ ಮಾತಾಡಬೇಕು.

ಐಕ್ಯ ಜನರು

28 ತನ್ನ ಜನರು ‘ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಏಕತೆಯಿಂದ’ ಇರಬೇಕೆಂದು ಯೆಹೋವನು ಬಯಸುತ್ತಾನೆ. (ಎಫೆ. 4:1-3) ಹಾಗಾಗಿ ನಮ್ಮ ಸಂತೋಷವನ್ನೇ ನೋಡಿಕೊಳ್ಳುವ ಬದಲು ನಾವು ಇತರರಿಗೆ ಒಳ್ಳೇದನ್ನು ಮಾಡಲು ಪ್ರಯತ್ನಿಸುತ್ತೇವೆ. (1 ಥೆಸ. 5:15) ನಿಮ್ಮ ಸಭೆಯಲ್ಲಿ ಸಹ ಇದೇ ರೀತಿಯ ಮನೋಭಾವ ಇರುವುದನ್ನು ನೀವು ನೋಡಿರಬಹುದು. ನಮ್ಮ ಕುಲ, ದೇಶ ಯಾವುದೇ ಆಗಿರಲಿ, ನಾವು ಶ್ರೀಮಂತರಾಗಿರಲಿ ಬಡವರಾಗಿರಲಿ, ಓದಿರಲಿ ಓದದೇ ಇರಲಿ, ನಗರದಲ್ಲಿರಲಿ ಹಳ್ಳಿಯಲ್ಲಿರಲಿ ನಾವೆಲ್ಲರೂ ಯೆಹೋವನ ನೀತಿಯ ಮಟ್ಟಗಳನ್ನೇ ಪಾಲಿಸುತ್ತೇವೆ. ಇದು ನಮ್ಮನ್ನು ಐಕ್ಯಗೊಳಿಸಿದೆ. ನಮ್ಮ ಈ ಅಸಾಮಾನ್ಯ ಐಕ್ಯವು ಬೇರೆಯವರ ಗಮನಕ್ಕೂ ಬಂದಿದೆ.—1 ಪೇತ್ರ 2:12.

29 ಈ ಐಕ್ಯಕ್ಕಿರುವ ಕಾರಣವನ್ನು ಇನ್ನೂ ಒತ್ತಿಹೇಳುತ್ತಾ ಪೌಲನು ಹೀಗಂದನು: “ಇರುವುದು ಒಂದೇ ದೇಹ ಮತ್ತು ಒಂದೇ ಪವಿತ್ರಾತ್ಮ. ನೀವು ಯಾವುದಕ್ಕಾಗಿ ಕರೆಯಲ್ಪಟ್ಟಿರೋ ಆ ನಿರೀಕ್ಷೆ ಒಂದೇ; ಒಬ್ಬನೇ ಕರ್ತ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ ಮತ್ತು ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮೂಲಕವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.” (ಎಫೆ. 4:4-6) ಇಲ್ಲಿ ಹೇಳುವಂತೆ ನಮ್ಮ ಐಕ್ಯಕ್ಕೆ ಕಾರಣ ನಮಗೆಲ್ಲರಿಗೂ ಬೈಬಲಿನ ಮುಖ್ಯ ಬೋಧನೆ ಮತ್ತು ಆಳವಾದ ಸತ್ಯಗಳ ಬಗ್ಗೆ ಒಂದೇ ರೀತಿಯ ತಿಳಿವಳಿಕೆ ಇರುವುದೇ. ಈ ತಿಳಿವಳಿಕೆಯನ್ನು ಪಡೆಯುವ ಮೂಲಕ, ‘ಯೆಹೋವನು ಎಲ್ಲರ ಮೇಲೆಯೂ ಇರುವಾತನು’ ಎಂದು ನಾವು ನಂಬುತ್ತೇವೆಂದು ಮತ್ತು ಆತನ ಮಾರ್ಗದರ್ಶನ ನಮಗೆ ಬೇಕೆಂದು ತೋರಿಸುತ್ತೇವೆ. ಯೆಹೋವನು ತನ್ನೆಲ್ಲ ಜನರಿಗೆ ಸತ್ಯವೆಂಬ ಶುದ್ಧ ಭಾಷೆಯನ್ನು ಕಲಿಸಿದ್ದಾನೆ. ಇದರಿಂದಾಗಿ ನಾವೆಲ್ಲರೂ “ಒಂದೇ ಮನಸ್ಸಿನಿಂದ” ಕೆಲಸಮಾಡಲು ಸಾಧ್ಯವಾಗಿದೆ.—ಚೆಫ. 3:9.

30 ಕ್ರೈಸ್ತ ಸಭೆಯಲ್ಲಿ ಶಾಂತಿ, ಐಕ್ಯ ಇರುವುದರಿಂದ ಅಲ್ಲಿ ಯೆಹೋವನನ್ನು ಆರಾಧಿಸಲು ಕೂಡಿಬರುವವರೆಲ್ಲರೂ ಚೈತನ್ಯ ಪಡೆಯುತ್ತಾರೆ. “ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು” ಎಂಬ ಮಾತನ್ನು ಯೆಹೋವನು ನಿಜಗೊಳಿಸಿರುವುದು ನಮ್ಮ ಅನುಭವಕ್ಕೆ ಬಂದಿದೆ. (ಮೀಕ 2:12) ಈ ಐಕ್ಯವನ್ನು ನಾವು ಕಾಪಾಡಿಕೊಂಡು ಹೋಗಬೇಕಾದರೆ ಯೆಹೋವನ ನೀತಿಯ ಮಟ್ಟಗಳನ್ನು ಯಾವಾಗಲೂ ಪಾಲಿಸಬೇಕು.

31 ಯೆಹೋವನ ಸಭೆಯ ಭಾಗವಾಗುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ! ಯೆಹೋವನ ಹೆಸರಿನಿಂದ ಕರೆಸಿಕೊಳ್ಳುವ ಸುಯೋಗದ ಮುಂದೆ ಯಾವುದೂ ಸಾಟಿಯಿಲ್ಲ. ಅದಕ್ಕಾಗಿ ನಾವು ಮಾಡಿರುವ ಎಲ್ಲ ತ್ಯಾಗಗಳು ಸಾರ್ಥಕ. ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳುತ್ತಾ ಯಾವಾಗಲೂ ಆತನ ಮಟ್ಟಗಳಿಗೆ ಅನುಸಾರ ಜೀವಿಸಲು ನಾವು ಶತಪ್ರಯತ್ನ ಹಾಕೋಣ. ಆ ಮಟ್ಟಗಳು ಎಷ್ಟು ಉತ್ತಮವಾಗಿವೆ ಎಂದು ಬೇರೆಯವರಿಗೂ ತಿಳಿಸೋಣ.—2 ಕೊರಿಂ. 3:18.