ಅಧ್ಯಾಯ 4
ಕ್ರೈಸ್ತ ಸಭೆಯನ್ನು ಹೇಗೆ ಸುವ್ಯವಸ್ಥಿತವಾಗಿ ನಡೆಸಲಾಗುತ್ತದೆ?
ದೇವರ ಕುರಿತು ಒಂದು ಪ್ರಾಮುಖ್ಯ ಸತ್ಯವನ್ನು ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರದಲ್ಲಿ ತಿಳಿಸಿದನು. ಅದೇನೆಂದರೆ, “ದೇವರು ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ.” ಅನಂತರ ಸಭಾ ಕೂಟಗಳ ಬಗ್ಗೆ ಹೀಗೆ ಹೇಳಿದನು: ‘ಎಲ್ಲವು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ.’—1 ಕೊರಿಂ. 14:33, 40.
2 ಕೊರಿಂಥ ಸಭೆಯವರಲ್ಲಿ ಜಗಳ, ವಾಗ್ವಾದಗಳು ಇದ್ದವು. ಹಾಗಾಗಿ ಪೌಲನು ಅವರಿಗೆ ಬರೆದ ಮೊದಲ ಪತ್ರದ ಆರಂಭದಲ್ಲಿ ಬುದ್ಧಿಮಾತುಗಳನ್ನು ಹೇಳಿದನು. ಸಭೆಯಲ್ಲಿರುವವರ ‘ಮಾತುಗಳು ಒಮ್ಮತದಿಂದ’ ಇರಬೇಕು ಮತ್ತು ‘ಏಕಮನಸ್ಸು, ಏಕವಿಚಾರಧಾರೆಯಿಂದ ಹೊಂದಿಕೊಂಡವರಾಗಿ ಐಕ್ಯದಿಂದ ಇರಬೇಕು’ ಎಂದು ಹೇಳಿದನು. (1 ಕೊರಿಂ. 1:10, 11) ಸಭೆಯ ಒಗ್ಗಟ್ಟನ್ನು ಹಾಳುಮಾಡುತ್ತಿದ್ದ ವಿಷಯಗಳ ಬಗ್ಗೆ ಕೂಡ ಅವನು ಎಚ್ಚರಿಸಿದನು. ಸಭೆಯನ್ನು ಮಾನವ ದೇಹಕ್ಕೆ ಹೋಲಿಸುತ್ತಾ ಸಭೆಯಲ್ಲಿ ಒಗ್ಗಟ್ಟು ಮತ್ತು ಸಹಕಾರ ಎಷ್ಟು ಅವಶ್ಯಕ ಎಂದು ಅರ್ಥಮಾಡಿಸಿದನು. ಸಭೆಯಲ್ಲಿರುವವರಿಗೆ ಯಾವುದೇ ಜವಾಬ್ದಾರಿಯಿರಲಿ, ಯಾವುದೇ ನೇಮಕವಿರಲಿ ಅವರು ಒಬ್ಬರಿಗೊಬ್ಬರು ಪ್ರೀತಿಯಿಂದ ಕಾಳಜಿವಹಿಸುವಂತೆ ಪ್ರೋತ್ಸಾಹಿಸಿದನು. (1 ಕೊರಿಂ. 12:12-26) ಅಪೊಸ್ತಲ ಪೌಲ ಹೇಳಿದಂತೆ ಸಹೋದರರು ಹೊಂದಾಣಿಕೆ ಮತ್ತು ಸಹಕಾರದಿಂದ ಐಕ್ಯರಾಗಿ ಇರಬೇಕಾದರೆ ಸಭೆಯಲ್ಲಿ ಸುವ್ಯವಸ್ಥೆ ಇರಲೇಬೇಕು.
3 ಆದರೆ ಲೋಕವ್ಯಾಪಕವಾಗಿ ಇರುವ ಕ್ರೈಸ್ತ ಸಭೆಗಳನ್ನು ಹೇಗೆ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ? ಅವುಗಳನ್ನು ಸಂಘಟಿಸುವುದು ಯಾರು? ಕ್ರೈಸ್ತ ಸಭೆಗಳ ರಚನೆ ಹೇಗಿರುತ್ತದೆ? ಸಭೆಗಳಲ್ಲಿ ಜವಾಬ್ದಾರಿಗಳನ್ನು ವಹಿಸುವವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವನ್ನು ಬೈಬಲ್ ಕೊಡುತ್ತದೆ. ನಾವೀಗ ಅದನ್ನು ನೋಡೋಣ.—1 ಕೊರಿಂ. 4:6.
ಒಂದನೇ ಶತಮಾನದಲ್ಲಿ ಸಭೆಯನ್ನು ಹೇಗೆ ಸಂಘಟಿಸಲಾಗಿತ್ತು?
4 ಕ್ರೈಸ್ತ ಸಭೆಯು ಕ್ರಿ.ಶ. 33ರ ಪಂಚಾಶತ್ತಮ ಹಬ್ಬದ ದಿನದಂದು ಸ್ಥಾಪನೆಯಾಯಿತು. ಆ ಕ್ರೈಸ್ತ ಸಭೆಯನ್ನು ಸ್ಥಾಪಿಸಿದ್ದು, ಸಂಘಟಿಸಿದ್ದು “ದೇವರು.” ಆತನೇ ಅದರ “ಆಧಿಪತ್ಯ” ನಡೆಸುತ್ತಿದ್ದನು. * (ಅ. ಕಾ. 2:1-47) ಅಭಿಷಿಕ್ತ ಕ್ರೈಸ್ತರಿದ್ದ ಆ ಸಭೆಯನ್ನು ದೇವರ ಕಟ್ಟಡ, ದೇವರ ಮನೆವಾರ್ತೆ ಅಂದರೆ ಮನೆಯವರು ಎಂದು ಹೇಳಲಾಗಿದೆ. (1 ಕೊರಿಂ. 3:9; ಎಫೆ. 2:19) ಒಂದನೇ ಶತಮಾನದಂತೆಯೇ ಇಂದಿರುವ ಕ್ರೈಸ್ತ ಸಭೆಯನ್ನು ಸಹ ದೇವರೇ ಸಂಘಟಿಸಿದ್ದಾನೆ ಮತ್ತು ಅದೇ ರೀತಿಯಲ್ಲಿ ನಡೆಸುತ್ತಿದ್ದಾನೆ.
ಒಂದನೇ ಶತಮಾನದಂತೆಯೇ ಇಂದಿರುವ ಕ್ರೈಸ್ತ ಸಭೆಯನ್ನು ದೇವರೇ ಸಂಘಟಿಸಿದ್ದಾನೆ ಮತ್ತು ಅದೇ ರೀತಿಯಲ್ಲಿ ನಡೆಸುತ್ತಿದ್ದಾನೆ
5 ಕ್ರೈಸ್ತ ಸಭೆಯು ಆರಂಭವಾದಾಗ ಸುಮಾರು 120 ಮಂದಿಯಿದ್ದರು. ದೇವರು ಇವರ ಮೇಲೆ ಮೊದಲು ಪವಿತ್ರಾತ್ಮವನ್ನು ಸುರಿಸಿದನು. ಇದು ಯೋವೇಲ 2:28, 29 ರಲ್ಲಿರುವ ಪ್ರವಾದನೆಯ ನೆರವೇರಿಕೆಯಾಗಿತ್ತು. (ಅ. ಕಾ. 2:16-18) ಅದೇ ದಿನದಂದು ಸುಮಾರು 3,000 ಮಂದಿ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಸ್ವೀಕರಿಸಿ ದೀಕ್ಷಾಸ್ನಾನ ಪಡೆದುಕೊಂಡರು. ಇವರೂ ಸಭೆಯ ಭಾಗವಾದರು. ಅಂದಿನಿಂದ ಇವರು ಅಪೊಸ್ತಲರ ಬೋಧನೆಗೆ ಕಿವಿಗೊಡುವುದರಲ್ಲಿ ನಿರತರಾದರು. ‘ಯೆಹೋವನು ರಕ್ಷಿಸಲ್ಪಡುತ್ತಿದ್ದವರನ್ನು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಾ ಇದ್ದನು.’—ಅ. ಕಾ. 2:41, 42, 47.
6 ಯೆರೂಸಲೇಮಿನಲ್ಲಿದ್ದ ಸಭೆ ಬಹುಬೇಗನೆ ಅಭಿವೃದ್ಧಿಯಾಯಿತು. ಅನೇಕ ಯೆಹೂದಿ ಯಾಜಕರು ಸಹ ಕ್ರೈಸ್ತರಾಗಿ ಸಭೆಯ ಭಾಗವಾದರು! ಹಾಗಾಗಿಯೇ ಯೆಹೂದಿ ಮಹಾಯಾಜಕನು ‘ನೀವು ಯೆರೂಸಲೇಮನ್ನು ನಿಮ್ಮ ಬೋಧನೆಯಿಂದ ತುಂಬಿಸಿಬಿಟ್ಟಿದ್ದೀರಿ’ ಎಂದನು.—ಅ. ಕಾ. 5:27, 28; 6:7.
7 ಆದರೆ ‘ಶಿಷ್ಯರ ಮೇಲೆ ಪವಿತ್ರಾತ್ಮವು ಬಂದಾಗ ಅವರು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿ ಮಾತ್ರವಲ್ಲ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ತನಗೆ ಸಾಕ್ಷಿಗಳಾಗಿರುವರು’ ಎಂದು ಯೇಸುವು ಹೇಳಿದ್ದನು. (ಅ. ಕಾ. 1:8) ಇದು ನಿಜವಾಯಿತು. ಸ್ತೆಫನನ ಕೊಲೆಯ ನಂತರ ಯೆರೂಸಲೇಮಿನಲ್ಲಿ ಹಿಂಸೆ ತುಂಬ ಹೆಚ್ಚಾದ ಕಾರಣ ಶಿಷ್ಯರು ಯೆರೂಸಲೇಮನ್ನು ಬಿಟ್ಟು ಯೂದಾಯ ಮತ್ತು ಸಮಾರ್ಯದಲ್ಲೆಲ್ಲ ಚೆದರಿಹೋದರು. ಅವರು ಎಲ್ಲೆಲ್ಲ ಹೋದರೋ ಅಲ್ಲೆಲ್ಲ ಸುವಾರ್ತೆ ಸಾರಿದರು, ತುಂಬ ಜನರನ್ನು ಶಿಷ್ಯರನ್ನಾಗಿ ಮಾಡಿದರು. ಸಮಾರ್ಯದವರಲ್ಲಿ ಸಹ ಕೆಲವರು ಶಿಷ್ಯರಾದರು. (ಅ. ಕಾ. 8:1-13) ಅದರ ನಂತರ ಸುನ್ನತಿಯಾಗದ ಅನ್ಯ ಜನರಿಗೂ ಸುವಾರ್ತೆ ಸಾರಲಾಯಿತು. ಅವರಲ್ಲಿ ಅನೇಕರು ಶಿಷ್ಯರಾದರು. (ಅ. ಕಾ. 10:1-48) ಹೀಗೆ ಶಿಷ್ಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಯೆರೂಸಲೇಮನ್ನು ಬಿಟ್ಟು ಬೇರೆ ಪ್ರದೇಶಗಳಲ್ಲೂ ಸಭೆಗಳು ಸ್ಥಾಪನೆಯಾದವು.—ಅ. ಕಾ. 11:19-21; 14:21-23.
8 ಈ ಹೊಸ ಸಭೆಗಳು ಸಂಘಟಿತವಾಗಿ ಮತ್ತು ದೇವರು ಬಯಸುವಂಥ ರೀತಿಯಲ್ಲಿ ನಡೆಯಲಿಕ್ಕಾಗಿ ಯಾವ ಏರ್ಪಾಡುಗಳನ್ನು ಮಾಡಲಾಯಿತು? ಕ್ರೈಸ್ತ ಸಭೆಯನ್ನು ನೋಡಿಕೊಳ್ಳಲು ಪವಿತ್ರಾತ್ಮದ ಮಾರ್ಗದರ್ಶನದ ಪ್ರಕಾರ ಹಿರಿಯರನ್ನು ನೇಮಿಸಲಾಯಿತು. ಪೌಲ ಮತ್ತು ಬಾರ್ನಬರು ತಮ್ಮ ಮೊದಲನೇ ಮಿಷನರಿ ಪ್ರಯಾಣದ ಸಂದರ್ಭದಲ್ಲಿ ಯಾವೆಲ್ಲ ಸಭೆಗಳನ್ನು ಭೇಟಿಮಾಡಿದರೋ ಅಲ್ಲೆಲ್ಲ ಸಭಾ ಹಿರಿಯರನ್ನು ನೇಮಿಸಿದರು. (ಅ. ಕಾ. 14:23) ಒಮ್ಮೆ ಪೌಲನು ಎಫೆಸ ಸಭೆಯ ಹಿರಿಯರಿಗೆ ಹೀಗಂದನು: “ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ.” (ಅ. ಕಾ. 20:17, 28) ಬೈಬಲಿನಲ್ಲಿ ಹೇಳಿರುವ ಅರ್ಹತೆಗಳಿದ್ದ ಸಹೋದರರನ್ನೇ ಸಭೆಯ ಹಿರಿಯರಾಗಿ ನೇಮಕ ಮಾಡಲಾಯಿತು. (1 ತಿಮೊ. 3:1-7) ಕ್ರೇತ ದ್ವೀಪದಲ್ಲಿದ್ದ ಸಭೆಗಳಲ್ಲಿ ಹಿರಿಯರನ್ನು ನೇಮಿಸುವ ಜವಾಬ್ದಾರಿಯನ್ನು ಪೌಲನು ತನ್ನ ಜೊತೆಕೆಲಸಗಾರನಾಗಿದ್ದ ತೀತನಿಗೆ ವಹಿಸಿದನು.—ತೀತ 1:5.
9 ಸಮಯ ಕಳೆದಂತೆ ಹೆಚ್ಚು ಸಭೆಗಳು ಸ್ಥಾಪನೆಯಾದವು. ಆಗಲೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರೀಪುರುಷರು ಎಲ್ಲ
ಪ್ರದೇಶಗಳಲ್ಲಿದ್ದ ಸಭೆಗಳ ಪ್ರಮುಖ ಮೇಲ್ವಿಚಾರಕರಾಗಿ ಸೇವೆಮಾಡಿದರು. ಅವರೇ ಆಗಿನ ಆಡಳಿತ ಮಂಡಲಿಯಾಗಿದ್ದರು.10 ಅಪೊಸ್ತಲ ಪೌಲನು ಎಫೆಸ ಸಭೆಗೆ ಬರೆದ ಪತ್ರದಲ್ಲಿ ಸಭೆ ಒಗ್ಗಟ್ಟಿನಿಂದ ಇರಲು ಮತ್ತು ಎಲ್ಲರೂ ಶಾಂತಿ ಸಮಾಧಾನದಿಂದ ಇರಲು ಏನು ಮಾಡಬೇಕೆಂದು ತಿಳಿಸಿದನು. ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರ ನಡೆಯಬೇಕು ಮತ್ತು ಯೇಸು ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗಬೇಕು, ಕ್ರೈಸ್ತರು ದೀನಮನಸ್ಸನ್ನೂ ‘ಪವಿತ್ರಾತ್ಮದ ಮೂಲಕ ಏಕತೆಯನ್ನೂ’ ಬೆಳೆಸಿಕೊಳ್ಳಬೇಕು ಎಂದು ಪೌಲ ಹೇಳಿದನು. (ಎಫೆ. 4:1-6) ಅನಂತರ ಪೌಲನು ಕೀರ್ತನೆ 68:18 ರಲ್ಲಿರುವ ವಿಷಯವನ್ನು ಉಲ್ಲೇಖಿಸಿದನು. ಅದನ್ನು ಸಭೆಯ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಯೆಹೋವ ದೇವರು ಮಾಡಿರುವ ಏರ್ಪಾಡಿಗೆ ಅನ್ವಯಿಸಿದನು. ಆ ಏರ್ಪಾಡು ಯಾವುದೆಂದರೆ ಅರ್ಹತೆಯಿರುವ ಪುರುಷರನ್ನು ಯೆಹೋವನು ಉಡುಗೊರೆಯಾಗಿ ಕೊಟ್ಟಿರುವುದೇ. ಈ ಪುರುಷರು ಸಭೆಯಲ್ಲಿ ಅಪೊಸ್ತಲರಾಗಿ, ಪ್ರವಾದಿಗಳಾಗಿ, ಸೌವಾರ್ತಿಕರಾಗಿ, ಕುರುಬರಾಗಿ, ಬೋಧಕರಾಗಿ ಸೇವೆಮಾಡುತ್ತಾ ಯೆಹೋವನಿಗೆ ವಿಧೇಯರಾಗಲು ಸಭೆಯಲ್ಲಿರುವವರಿಗೆ ಬೇಕಾದ ಎಲ್ಲ ಸಹಾಯವನ್ನು ಕೊಟ್ಟರು. ಇದನ್ನು ಯೆಹೋವನು ಬಹಳ ಮೆಚ್ಚಿದನು.—ಎಫೆ. 4:7-16.
ಇಂದು ಸಭೆಗಳನ್ನು ಹೇಗೆ ಸಂಘಟಿಸಲಾಗಿದೆ?
11 ಒಂದನೇ ಶತಮಾನದ ಸಭೆಗಳು ಸಂಘಟಿಸಲ್ಪಟ್ಟಿದ್ದ ರೀತಿಯಲ್ಲೇ ಇಂದು ಯೆಹೋವನ ಸಾಕ್ಷಿಗಳ ಎಲ್ಲ ಸಭೆಗಳು ಸಂಘಟಿಸಲ್ಪಟ್ಟಿವೆ. ಈ ಎಲ್ಲ ಸಭೆಗಳು ಒಟ್ಟಾಗಿ ಸೇರಿ ಒಂದೇ ಲೋಕವ್ಯಾಪಕ ಸಭೆಯಂತಿದೆ. ಅಭಿಷಿಕ್ತ ಕ್ರೈಸ್ತರು ಅದರ ನೇತೃತ್ವ ವಹಿಸುತ್ತಾರೆ. (ಜೆಕ. 8:23) ಈ ಏಕತೆ ಸಾಧ್ಯವಾಗಿರುವುದು ಯೇಸು ಕ್ರಿಸ್ತನ ಸಹಾಯದಿಂದ. ಆತನು ಮಾತು ಕೊಟ್ಟಂತೆಯೇ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ” ನಿಷ್ಠೆಯಿಂದ ತನ್ನ ಅಭಿಷಿಕ್ತ ಶಿಷ್ಯರೊಂದಿಗಿದ್ದು ಅವರಿಗೆ ಸಹಾಯಮಾಡುತ್ತಿದ್ದಾನೆ. ಹಾಗಾಗಿ ಜನರು ಸುವಾರ್ತೆಯನ್ನು ಕೇಳಿಸಿಕೊಂಡು ಅದರಲ್ಲಿ ನಂಬಿಕೆಯಿಟ್ಟು ಸಂಪೂರ್ಣ ಹೃದಯದಿಂದ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತಿದ್ದಾರೆ. ದೀಕ್ಷಾಸ್ನಾನ ಪಡೆದುಕೊಂಡು ಯೇಸುವಿನ ಶಿಷ್ಯರಾಗುತ್ತಿದ್ದಾರೆ. ಹೀಗೆ ಸಭೆಗಳು ಬೆಳೆಯುತ್ತಿವೆ. (ಮತ್ತಾ. 28:19, 20; ಮಾರ್ಕ 1:14; ಅ. ಕಾ. 2:41) ‘ಒಳ್ಳೆಯ ಕುರುಬನಾಗಿರುವ’ ಯೇಸು ಕ್ರಿಸ್ತನೇ ದೇವರ ಮಂದೆಯಾಗಿರುವ ಸಭೆಯ ನಾಯಕನೆಂದು ಅವರು ಒಪ್ಪಿಕೊಳ್ಳುತ್ತಾರೆ. ಈ ಮಂದೆಯಲ್ಲಿ ಅಭಿಷಿಕ್ತರೂ “ಬೇರೆ ಕುರಿಗಳೂ” ಇದ್ದಾರೆ. (ಯೋಹಾ. 10:14, 16; ಎಫೆ. 1:22, 23) ಇವರೆಲ್ಲರೂ ಒಗ್ಗಟ್ಟಿನಿಂದ ‘ಒಂದೇ ಹಿಂಡಾಗಿ’ ಇರುತ್ತಾರೆ. ಅವರು ಕ್ರಿಸ್ತನ ನಾಯಕತ್ವವನ್ನು ಒಪ್ಪಿಕೊಂಡು ಅದಕ್ಕೆ ನಿಷ್ಠರಾಗಿರುವುದರಿಂದ ಮತ್ತು ಕ್ರಿಸ್ತನು ನೇಮಿಸಿರುವ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಅಧೀನತೆ ತೋರಿಸುವುದರಿಂದ ಒಗ್ಗಟ್ಟಿನಿಂದಿದ್ದಾರೆ. ಈ ನಂಬಿಗಸ್ತ ಆಳಿನ ಮೇಲೆ ನಾವು ಯಾವಾಗಲೂ ಸಂಪೂರ್ಣ ಭರವಸೆ ಇಡೋಣ.—ಮತ್ತಾ. 24:45.
ಕಾನೂನುಬದ್ಧ ಏರ್ಪಾಡುಗಳು
12 ತಕ್ಕ ಸಮಯದಲ್ಲಿ ನಾವು ಬೈಬಲ್ ಸಾಹಿತ್ಯವನ್ನು ಪಡೆಯಲು ಮತ್ತು ಅಂತ್ಯ ಬರುವ ಮುಂಚೆ ಸುವಾರ್ತೆಯನ್ನು ಸಾರಿ ಮುಗಿಸಲು ಸಾಧ್ಯವಾಗುವಂತೆ ಅನೇಕ ದೇಶಗಳಲ್ಲಿ ಅಲ್ಲಿನ ಕಾನೂನಿಗನುಸಾರ ನಿಗಮಗಳನ್ನು ಸ್ಥಾಪಿಸಲಾಗಿದೆ. ಈ ನಿಗಮಗಳು ಪರಸ್ಪರ ಸಹಾಯಮಾಡುತ್ತಾ ಲೋಕವ್ಯಾಪಕ ಸಾರುವ ಕೆಲಸವನ್ನು ಬೆಂಬಲಿಸುತ್ತವೆ.
ಶಾಖೆಯನ್ನು ಹೇಗೆ ಸಂಘಟಿಸಲಾಗಿದೆ?
13 ಒಂದು ದೇಶದಲ್ಲಿ ಒಂದು ಶಾಖೆಯನ್ನು (ಬ್ರಾಂಚ್) ಆರಂಭಿಸಿದಾಗ ಶಾಖಾ ಸಮಿತಿಯನ್ನು (ಬ್ರಾಂಚ್ ಕಮಿಟಿ) ಕೂಡ ಸ್ಥಾಪಿಸಲಾಗುತ್ತದೆ. ಆ ಸಮಿತಿಯಲ್ಲಿ ಮೂರು ಅಥವಾ ಹೆಚ್ಚು ಮಂದಿ ಹಿರಿಯರಿರುತ್ತಾರೆ. ಅವರಲ್ಲಿ ಒಬ್ಬರು ಶಾಖಾ ಸಮಿತಿಯ ಸಂಯೋಜಕರಾಗಿ ಇರುತ್ತಾರೆ. ಶಾಖೆಯು ಆ ದೇಶದ ಅಥವಾ ಇತರ ಕೆಲವು ದೇಶಗಳಲ್ಲಿನ ಸಾರುವ ಕೆಲಸವನ್ನು ನೋಡಿಕೊಳ್ಳುತ್ತದೆ.
14 ಒಂದು ಶಾಖೆಯ ವ್ಯಾಪ್ತಿಯಲ್ಲಿ ಬರುವ ಸಭೆಗಳನ್ನು ಅನೇಕ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಗುಂಪುಗಳಿಗೆ ‘ಸಂಚರಣ ವಿಭಾಗ’ (ಸರ್ಕಿಟ್) ಎಂದು ಹೆಸರು. ಪ್ರದೇಶ, ಸಭೆಯ ಭಾಷೆ ಮತ್ತು ಶಾಖೆಯ ವ್ಯಾಪ್ತಿಯಲ್ಲಿ ಎಷ್ಟು ಸಭೆಗಳಿವೆ ಎನ್ನುವುದನ್ನು ನೋಡಿ ಸಂಚರಣ ವಿಭಾಗದಲ್ಲಿ ಎಷ್ಟು ಸಭೆಗಳು ಇರಬೇಕೆಂದು ಶಾಖೆಯು ನಿರ್ಧರಿಸುತ್ತದೆ. ಪ್ರತಿಯೊಂದು ಸಂಚರಣ ವಿಭಾಗಕ್ಕೆ ಒಬ್ಬ
ಸಂಚರಣ ಮೇಲ್ವಿಚಾರಕನನ್ನು ನೇಮಿಸುತ್ತದೆ. ಅವರ ಜವಾಬ್ದಾರಿಗಳನ್ನು ಪತ್ರಗಳ ಮೂಲಕ ಆಗಾಗ ತಿಳಿಸುತ್ತದೆ.15 ಸಂಘಟನೆಯಲ್ಲಿ ಎಲ್ಲರ ಪ್ರಯೋಜನಕ್ಕಾಗಿ ಮಾಡಿರುವ ಈ ಎಲ್ಲ ಏರ್ಪಾಡುಗಳನ್ನು ಸಭೆಯಲ್ಲಿರುವವರು ಒಪ್ಪಿಕೊಂಡು ಅದಕ್ಕೆ ಅಧೀನರಾಗುತ್ತಾರೆ. ಶಾಖೆಯಲ್ಲಿ, ಸಂಚರಣ ವಿಭಾಗದಲ್ಲಿ ಅಥವಾ ಸಭೆಯಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸುವ ಹಿರಿಯರಿಗೆ ಅವರು ಬೆಂಬಲ ಕೊಡುತ್ತಾರೆ. ತಮಗೆ ತಕ್ಕ ಸಮಯದಲ್ಲಿ ಆಧ್ಯಾತ್ಮಿಕ ಆಹಾರ ಸಿಗುವುದು ಕೇವಲ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನಿಂದ ಮಾತ್ರ ಎಂದು ತಿಳಿದಿದ್ದಾರೆ ಮತ್ತು ಅದನ್ನು ಪಡೆದುಕೊಳ್ಳಲು ಸಂತೋಷಿಸುತ್ತಾರೆ. ಹಾಗೆಯೇ ನಂಬಿಗಸ್ತ ಆಳು ಸಹ ಕ್ರಿಸ್ತನ ನಾಯಕತ್ವಕ್ಕೆ ಸಂಪೂರ್ಣ ಅಧೀನತೆ ತೋರಿಸುತ್ತದೆ, ಬೈಬಲ್ ತತ್ವಗಳಿಗನುಸಾರ ಕೆಲಸಮಾಡುತ್ತದೆ. ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸುತ್ತದೆ. ಹೀಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡುವಾಗ ಏನು ಫಲಿತಾಂಶ ಸಿಗುತ್ತದೆ? ಒಂದನೇ ಶತಮಾನದಲ್ಲಿ ಆದಂತೆಯೇ ‘ಸಭೆಗಳು ನಂಬಿಕೆಯಲ್ಲಿ ಬಲಗೊಳ್ಳುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬರುತ್ತವೆ.’—ಅ. ಕಾ. 16:5.
[ಪಾದಟಿಪ್ಪಣಿ]
^ ಪ್ಯಾರ. 4 “ದೇವರು” (ಗ್ರೀಕ್ ಭಾಷೆಯಲ್ಲಿ ಥೀಯಾಸ್) ಮತ್ತು “ಆಧಿಪತ್ಯ” (ಗ್ರೀಕ್ ಭಾಷೆಯಲ್ಲಿ ಕ್ರೇಟಾಸ್) ಎಂಬ ಪದಗಳು 1 ಪೇತ್ರ 5:10, 11 ರಲ್ಲಿ (ಸತ್ಯವೇದವು) ಇವೆ.