ಅಧ್ಯಾಯ 15
ದೇವರು ಮಾಡಿರುವ ಏರ್ಪಾಡಿಗೆ ಅಧೀನರಾಗಿರಿ
ಇಡೀ ವಿಶ್ವದ ಒಡೆಯನಾದ ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರಾಗಿ ಇರಬೇಕಾದರೆ ಆತನಿಗೆ ಅಧೀನರಾಗಿರಲೇಬೇಕು. ಜೊತೆಗೆ ಕ್ರೈಸ್ತ ಸಭೆಗೆ ಯೇಸು ನಾಯಕನೆಂದು ಅಂಗೀಕರಿಸಿ ಆತನಿಗೆ ವಿಧೇಯರಾಗಬೇಕು. ನಮ್ಮ ಜೀವನದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಧಿಕಾರದ ವಿಷಯದಲ್ಲಿ ಯೆಹೋವನು ಮಾಡಿರುವ ಏರ್ಪಾಡಿಗೆ ಅಧೀನರಾಗಬೇಕು. ಇದರಿಂದ ಎಲ್ಲರಿಗೆ ಪ್ರಯೋಜನವಿದೆ.
2 ಅಧಿಕಾರದ ಏರ್ಪಾಡಿನ ಕುರಿತು ಯೆಹೋವನು ಮಾನವರಿಗೆ ಮೊದಲು ತಿಳಿಸಿದ್ದು ಏದೆನ್ ತೋಟದಲ್ಲಿ. ಆದಿಕಾಂಡ 1:28 ಮತ್ತು 2:16, 17 ರಲ್ಲಿ ಆತನು ಆದಾಮಹವ್ವರಿಗೆ ಕೊಟ್ಟಿರುವ ಆಜ್ಞೆಗಳಿಂದ ಅದು ಗೊತ್ತಾಗುತ್ತದೆ. ಎಲ್ಲ ಪ್ರಾಣಿ, ಪಕ್ಷಿ, ಜೀವಜಂತುಗಳು ಆದಾಮಹವ್ವರ ಅಧೀನದಲ್ಲಿ ಇರಬೇಕಿತ್ತು. ಆದಾಮಹವ್ವರು ದೇವರ ಅಧಿಕಾರಕ್ಕೂ ಆತನ ಚಿತ್ತಕ್ಕೂ ಅಧೀನರಾಗಿರಬೇಕಿತ್ತು. ಹಾಗೆ ಮಾಡುವಾಗ ಶಾಂತಿ ಮತ್ತು ಒಳ್ಳೇ ಕ್ರಮಬದ್ಧತೆ ಇರಲಿತ್ತು. ದೇವರು ಮಾಡಿರುವ ತಲೆತನದ ಏರ್ಪಾಡಿನ ಬಗ್ಗೆ ತುಂಬ ಸಮಯದ ನಂತರ ಅಪೊಸ್ತಲ ಪೌಲನು ಹೀಗಂದನು: “ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ.” (1 ಕೊರಿಂ. 11:3) ಯೆಹೋವನನ್ನು ಬಿಟ್ಟು ಬೇರೆಲ್ಲರೂ ಅಧಿಕಾರದ ಕೆಳಗಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ.
3 ಆದರೆ ಈ ತಲೆತನದ ತತ್ವವನ್ನು ಇಂದು ಹೆಚ್ಚಿನ ಜನರು ಒಪ್ಪಿಕೊಳ್ಳುವುದಿಲ್ಲ, ಅದಕ್ಕೆ ಅಧೀನರಾಗುವುದೂ ಇಲ್ಲ. ಇಂಥ ಮನೋಭಾವ ಶುರುವಾದದ್ದು ನಮ್ಮ ಮೊದಲ ಹೆತ್ತವರಾದ ಆದಾಮಹವ್ವರಿಂದ. ಅವರು ವಿಶ್ವದ ರಾಜನಾದ ಯೆಹೋವನ ಅಧಿಕಾರದ ಕೆಳಗಿರಲು ಬಯಸದೆ ಆತನನ್ನು ಬೇಕುಬೇಕೆಂದು ತಿರಸ್ಕರಿಸಿದರು. (ಆದಿ. 3:4, 5) ಪರಿಣಾಮವಾಗಿ ಅವರು ಎಣಿಸಿದಂತೆ ಸ್ವಾತಂತ್ರ್ಯ ಸಿಗುವ ಬದಲು ದುಷ್ಟ ಆತ್ಮಜೀವಿಯಾದ ಸೈತಾನನ ದಬ್ಬಾಳಿಕೆಯ ಕೆಳಗೆ ಬಂದರು. ಅವರಿಂದಾಗಿ ಅವರ ಸಂತತಿಯೂ ದೇವರಿಂದ ದೂರವಾಯಿತು. (ಕೊಲೊ. 1:21) ಆದುದರಿಂದಲೇ ಇಂದು ಮಾನವಕುಲದಲ್ಲಿ ಹೆಚ್ಚಿನವರು ಕೆಡುಕನಾದ ಸೈತಾನನ ಕೈಕೆಳಗೆ ಇದ್ದಾರೆ.—1 ಯೋಹಾ. 5:19.
4 ಬೈಬಲ್ ಸತ್ಯವನ್ನು ಕಲಿತು ಅದಕ್ಕೆ ತಕ್ಕಂತೆ ಜೀವಿಸುವ ಮೂಲಕ ನಾವು ಸೈತಾನನ ಪ್ರಭಾವದಿಂದ ಹೊರಬಂದಿದ್ದೇವೆ. ನಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಾಗ ಆತನನ್ನು ನಮ್ಮ ಒಡೆಯನಾಗಿ ಸ್ವೀಕರಿಸಿದ್ದೇವೆ. ರಾಜ ದಾವೀದನಂತೆ ನಾವು ಸಹ ಯೆಹೋವನು ‘ಸರ್ವವನ್ನೂ ಆಳುವವನು’ ಎಂದು ಅಂಗೀಕರಿಸಿದ್ದೇವೆ. (1 ಪೂರ್ವ. 29:11) “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ; ನಾವು ಆತನವರು. ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ” ಎಂದು ದೀನತೆಯಿಂದ ಒಪ್ಪಿಕೊಂಡಿದ್ದೇವೆ. (ಕೀರ್ತ. 100:3) ಯೆಹೋವನು ಎಲ್ಲದರ ಸೃಷ್ಟಿಕರ್ತನಾದ್ದರಿಂದ ಆತನು ಮಹೋನ್ನತನೂ ನಮ್ಮ ಸಂಪೂರ್ಣ ವಿಧೇಯತೆಗೆ ಅರ್ಹನೂ ಆಗಿದ್ದಾನೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. (ಪ್ರಕ. 4:11) ಸತ್ಯ ದೇವರ ಸೇವಕರಾದ ನಾವು ಆತನಿಗೆ ಅಧೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಪರಿಪೂರ್ಣ ಮಾದರಿಯನ್ನು ಅನುಸರಿಸುತ್ತೇವೆ.
5 ಯೇಸು ಭೂಮಿಯಲ್ಲಿ ಅನುಭವಿಸಿದ ಕಷ್ಟಗಳಿಂದ ಏನು ಕಲಿತನೆಂದು ಇಬ್ರಿಯ 5:8 ತಿಳಿಸುತ್ತದೆ: “[ದೇವರ] ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” ಕಷ್ಟನೋವುಗಳನ್ನು ಅನುಭವಿಸುವಾಗಲೂ ಯೇಸು ಯೆಹೋವನಿಗೆ ನಿಷ್ಠೆಯಿಂದ ಅಧೀನನಾಗಿದ್ದನು. ಒಂದೇ ಒಂದು ವಿಷಯವನ್ನೂ ತನ್ನ ಇಷ್ಟದಂತೆ ಮಾಡಲಿಲ್ಲ. ತನಗೆ ಸರಿಕಂಡಂತೆ ಮಾತಾಡಲಿಲ್ಲ, ತನಗೆ ಮಹಿಮೆ ಸಿಗಬೇಕೆಂದೂ ಪ್ರಯತ್ನಿಸಲಿಲ್ಲ. (ಯೋಹಾ. 5:19, 30; 6:38; 7:16-18) ಬದಲಾಗಿ ತನ್ನ ತಂದೆಗೆ ಇಷ್ಟವಾದದ್ದನ್ನು ಸಂತೋಷದಿಂದ ಮಾಡಿದನು. ಇದರಿಂದಾಗಿ ವಿರೋಧ ಹಿಂಸೆ ಬಂತಾದರೂ ಅವನು ದೇವರಿಗೆ ಅಧೀನನಾಗಿದ್ದನು. (ಯೋಹಾ. 15:20) ‘ಯಾತನಾಕಂಬದ ಮೇಲೆ ಮರಣವನ್ನೂ ಹೊಂದುವಷ್ಟು ತನ್ನನ್ನು ತಗ್ಗಿಸಿಕೊಂಡನು.’ ಅವನು ಯೆಹೋವನಿಗೆ ಸಂಪೂರ್ಣ ಅಧೀನತೆ ತೋರಿಸಿದ್ದರಿಂದ ಮಾನವರೆಲ್ಲರಿಗೆ ನಿತ್ಯ ರಕ್ಷಣೆ ಸಿಕ್ಕಿದೆ, ಯೇಸು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟಿದ್ದಾನೆ, ಯೆಹೋವನಿಗೆ ಮಹಿಮೆ ಉಂಟಾಗಿದೆ.—ಫಿಲಿ. 2:5-11; ಇಬ್ರಿ. 5:9.
ಯಾರಿಗೆಲ್ಲ ಅಧೀನತೆ ತೋರಿಸಬೇಕು?
6 ಯೆಹೋವನ ಅಧಿಕಾರಕ್ಕೆ ಅಧೀನರಾಗುವುದರಿಂದ ಅಂದರೆ ಆತನು ಬಯಸುವ ಹಾಗೆ ನಡೆಯುವುದರಿಂದ ನಮಗೇನು ಪ್ರಯೋಜನ? ಹಾಗೆ ನಡೆಯದವರಿಗೆ ಆಗುವ ಆಶಾಭಂಗ, ಚಿಂತೆ-ಕಳವಳ ನಮಗಿರುವುದಿಲ್ಲ. ಆದರೆ ನೆನಪಿಡಿ, ನಮ್ಮ ವಿರೋಧಿಯಾಗಿರುವ ಸೈತಾನನು ನಮ್ಮನ್ನು ನುಂಗಲು ಸದಾ ಹೊಂಚುಹಾಕುತ್ತಿರುತ್ತಾನೆ. ನಾವು ಅವನನ್ನು ಎದುರಿಸಿ ಯೆಹೋವನು ಹೇಳುವುದನ್ನೇ ಮಾಡಿದರೆ ಅವನಿಂದ ತಪ್ಪಿಸಿಕೊಳ್ಳಲು ಆಗುತ್ತದೆ.—ಮತ್ತಾ. 6:10, 13; 1 ಪೇತ್ರ 5:6-9.
7 ಕ್ರೈಸ್ತ ಸಭೆಯಲ್ಲಿ ನಾವು ಹೇಗೆ ಅಧೀನತೆ ತೋರಿಸಬೇಕು? ಕ್ರಿಸ್ತನು ಸಭೆಯ ನಾಯಕನೆಂದು ಅಂಗೀಕರಿಸಬೇಕು. ‘ನಂಬಿಗಸ್ತ ವಿವೇಚನೆಯುಳ್ಳ ಆಳಿಗೆ’ ಆತನು ಅಧಿಕಾರ ವಹಿಸಿದ್ದಾನೆಂದು ಒಪ್ಪಿಕೊಳ್ಳಬೇಕು. ಆಗ ಸಭೆಯಲ್ಲಿರುವ ಎಲ್ಲರೊಂದಿಗೆ ನಾವು ಪ್ರೀತಿಯಿಂದ ಇರುತ್ತೇವೆ. ಸೇವೆ, ಕೂಟಗಳಿಗೆ ಹಾಜರಾಗುವುದು ಮತ್ತು ಭಾಗವಹಿಸುವುದು, ಹಿರಿಯರೊಂದಿಗೆ ನಮ್ಮ ಸಂಬಂಧ, ಸಂಘಟನೆಯ ಏರ್ಪಾಡುಗಳಿಗೆ ಸಹಕಾರ ಇತ್ಯಾದಿ ವಿಷಯಗಳಲ್ಲಿ ಬೈಬಲ್ ಹೇಳುವಂತೆಯೇ ನಡೆದುಕೊಳ್ಳುತ್ತೇವೆ.—ಮತ್ತಾ. 24:45-47; 28:19, 20; ಇಬ್ರಿ. 10:24, 25; 13:7, 17.
8 ನಾವು ದೇವರಿಗೆ ಅಧೀನರಾಗಿದ್ದರೆ ಕ್ರೈಸ್ತ ಸಭೆಯಲ್ಲಿ ಶಾಂತಿ-ಭದ್ರತೆ, ಕ್ರಮಬದ್ಧತೆ ಇರುತ್ತದೆ. ಅಲ್ಲದೆ ಯೆಹೋವನಲ್ಲಿರುವ ಗುಣಗಳನ್ನು ನಾವು ತೋರಿಸುತ್ತೇವೆ. (1 ಕೊರಿಂ. 14:33, 40) ದೇವಜನರ ಮತ್ತು ದುಷ್ಟರ ಮಧ್ಯೆ ಇರುವ ವ್ಯತ್ಯಾಸವನ್ನು ಗಮನಿಸಿದ ರಾಜ ದಾವೀದನು “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು” ಎಂದನು. ನಾವು ಯೆಹೋವನ ಸಂಘಟನೆಯಲ್ಲಿ ಏನು ನೋಡಿದ್ದೇವೋ ಅನುಭವಿಸಿದ್ದೇವೋ ಅದರ ಕುರಿತು ಯೋಚಿಸುವಾಗ ನಮಗೂ ದಾವೀದನಂತೆ ಅನಿಸುತ್ತದೆ.—ಕೀರ್ತ. 144:15.
9 ಕುಟುಂಬದಲ್ಲಿ “ಸ್ತ್ರೀಗೆ ಪುರುಷನು ತಲೆ.” ಹಾಗೆಯೇ ಪುರುಷನಿಗೆ ಕ್ರಿಸ್ತನು ತಲೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ. (1 ಕೊರಿಂ. 11:3) ಹೆಂಡತಿಯು ಗಂಡನಿಗೆ ಅಧೀನಳಾಗಿರಬೇಕು. ಮಕ್ಕಳು ತಂದೆತಾಯಿಗೆ ಅಧೀನರಾಗಿರಬೇಕು. (ಎಫೆ. 5:22-24; 6:1) ಈ ಏರ್ಪಾಡಿಗೆ ಕುಟುಂಬದಲ್ಲಿ ಎಲ್ಲರೂ ವಿಧೇಯರಾದರೆ ಶಾಂತಿ ನೆಮ್ಮದಿ ಇರುತ್ತದೆ.
10 ಗಂಡನು ಹೆಂಡತಿಯ ಮೇಲೆ ತನಗಿರುವ ಅಧಿಕಾರವನ್ನು ಕ್ರಿಸ್ತನಂತೆ ಪ್ರೀತಿಯಿಂದ ಬಳಸಬೇಕು. (ಎಫೆ. 5:25-29) ಅದನ್ನು ದುರುಪಯೋಗಿಸಬಾರದು. ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳದೆ ಅದನ್ನು ಉತ್ತಮವಾಗಿ ನಿರ್ವಹಿಸಬೇಕು. ಆಗ ಹೆಂಡತಿ ಮಕ್ಕಳಿಗೆ ಅವನ ಅಧೀನದಲ್ಲಿರಲು ಖುಷಿಯಾಗುತ್ತದೆ. ಹೆಂಡತಿಯು ಗಂಡನಿಗೆ ಸರಿಹೊಂದುವವಳೂ ಸಹಕಾರಿಣಿಯೂ ಆಗಿರಬೇಕು. (ಆದಿ. 2:18) ಆಕೆ ತಾಳ್ಮೆಯಿಂದ ಗಂಡನಿಗೆ ಬೆಂಬಲ ಕೊಡಬೇಕು. ಅವನಿಗೆ ಗೌರವ ತೋರಿಸಬೇಕು. ಆಗ ಗಂಡನು ಆಕೆಯನ್ನು ಮೆಚ್ಚುತ್ತಾನೆ ಮಾತ್ರವಲ್ಲ ಯೆಹೋವನಿಗೂ ಮಹಿಮೆ ಸಲ್ಲುತ್ತದೆ. (1 ಪೇತ್ರ 3:1-4) ಹೀಗೆ ಗಂಡನೂ ಹೆಂಡತಿಯೂ ಯೆಹೋವನು ಮಾಡಿರುವ ಏರ್ಪಾಡಿಗೆ ವಿಧೇಯರಾದರೆ ಮಕ್ಕಳು ಅದನ್ನು ಗಮನಿಸುತ್ತಾರೆ, ಅವರೂ ದೇವರಿಗೆ ಅಧೀನರಾಗಿರಲು ಕಲಿಯುತ್ತಾರೆ.
ಅಧಿಕಾರದ ವಿಷಯದಲ್ಲಿ ದೇವರು ಮಾಡಿರುವ ಎಲ್ಲ ಏರ್ಪಾಡಿಗೆ ನಾವು ಅಧೀನರಾಗಿರಬೇಕು
11 ನಾವು ದೇವರಿಗೆ ಅಧೀನರಾಗಿದ್ದರೆ ಲೋಕದಲ್ಲಿ ಅಧಿಕಾರದ ಸ್ಥಾನದಲ್ಲಿರುವವರಿಗೂ ಅಧೀನರಾಗುತ್ತೇವೆ. ಏಕೆಂದರೆ ಅವರು ಆ ಸ್ಥಾನದಲ್ಲಿರುವಂತೆ ದೇವರೇ ಅನುಮತಿಸಿದ್ದಾನೆ. (ರೋಮ. 13:1-7) ಆದ್ದರಿಂದ ಕ್ರೈಸ್ತರಾದ ನಾವು ಕಾನೂನು ನಿಯಮಗಳನ್ನು ಪಾಲಿಸುತ್ತೇವೆ. ತೆರಿಗೆಗಳನ್ನು ಕಟ್ಟುತ್ತೇವೆ. ಹೀಗೆ ‘ಕೈಸರನದನ್ನು ಕೈಸರನಿಗೆ ಕೊಡುತ್ತೇವೆ. ಆದರೆ ದೇವರದನ್ನು ದೇವರಿಗೆ ಕೊಡುತ್ತೇವೆ.’ (ಮತ್ತಾ. 22:21) ಯೆಹೋವನ ನೀತಿಯ ನಿಯಮಗಳಿಗೆ ವಿರುದ್ಧವಾಗಿಲ್ಲದ ಎಲ್ಲ ವಿಷಯಗಳಲ್ಲಿ ನಾವು ಅಧಿಕಾರಿಗಳಿಗೆ ವಿಧೇಯರಾಗುತ್ತೇವೆ ಮತ್ತು ಅಧೀನರಾಗಿರುತ್ತೇವೆ. ಹಾಗೆ ಮಾಡಿದರೆ ಅವರು ಸಾರುವ ಕೆಲಸವನ್ನು ಮುಂದುವರಿಸಲು ನಮಗೆ ಅನುಮತಿಸುತ್ತಾರೆ. ನಾವೂ ನಮ್ಮ ಪೂರ್ಣ ಗಮನವನ್ನು ಸಾರುವ ಕೆಲಸಕ್ಕೆ ಕೊಡಲು ಆಗುತ್ತದೆ.—ಮಾರ್ಕ 13:10; ಅ. ಕಾ. 5:29.
12 ಅಧಿಕಾರದ ವಿಷಯದಲ್ಲಿ ದೇವರು ಮಾಡಿರುವ ಎಲ್ಲ ಏರ್ಪಾಡಿಗೆ ನಾವು ಅಧೀನರಾಗಿರಬೇಕು. ಎಲ್ಲ ಮಾನವರು ಯೆಹೋವ ದೇವರಿಗೆ ಅಧೀನರಾಗಿರುವ ಸಮಯ ಮುಂದೆ ಬರಲಿದೆ. ಅದನ್ನು ನಾವು ನಂಬಿಕೆಯ ಕಣ್ಣುಗಳಿಂದ ನೋಡಬಲ್ಲೆವು. (1 ಕೊರಿಂ. 15:27, 28) ನಾವು ಯೆಹೋವನ ಪರಮಾಧಿಕಾರವನ್ನು ಒಪ್ಪಿಕೊಂಡು ಎಂದೆಂದಿಗೂ ಆತನಿಗೆ ಅಧೀನರಾಗಿ ಉಳಿಯುವ ಆ ಸಮಯದಲ್ಲಿ ಆತನಿಂದ ಹೇರಳ ಆಶೀರ್ವಾದಗಳನ್ನು ಪಡೆಯುವೆವು.