ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 2

ದೇವರ ಉದ್ದೇಶದಲ್ಲಿ ಕ್ರಿಸ್ತನ ಪಾತ್ರವನ್ನು ಅಂಗೀಕರಿಸಿ

ದೇವರ ಉದ್ದೇಶದಲ್ಲಿ ಕ್ರಿಸ್ತನ ಪಾತ್ರವನ್ನು ಅಂಗೀಕರಿಸಿ

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” ಆತನು ಉಂಟುಮಾಡಿದ್ದೆಲ್ಲವೂ ‘ತುಂಬ ಒಳ್ಳೇದಾಗಿತ್ತು.’ (ಆದಿ. 1:1, 31) ಯೆಹೋವನು ಆದಾಮಹವ್ವರನ್ನು ಸೃಷ್ಟಿಸಿ ಅವರಿಗೆ ಭೂಮಿಯ ಮೇಲೆ ಸಂತೋಷದಿಂದ ನಿತ್ಯನಿರಂತರ ಜೀವಿಸುವ ಅದ್ಭುತ ಅವಕಾಶ ಕೊಟ್ಟನು. ಆದರೆ ಅವರು ದೇವರಿಗೆ ಅವಿಧೇಯರಾದ ಕಾರಣ ಅವರಿಗೂ ಅವರ ವಂಶಜರಿಗೂ ಆ ಅವಕಾಶ ತಪ್ಪಿಹೋಯಿತು. ಅಲ್ಲಿಗೇ ಎಲ್ಲ ಮುಗಿಯಿತು ಎಂದಲ್ಲ. ಯೆಹೋವನು ಭೂಮಿಯನ್ನು ಮತ್ತು ಮಾನವರನ್ನು ಯಾವ ಉದ್ದೇಶದಿಂದ ಸೃಷ್ಟಿಸಿದನೋ ಆ ಉದ್ದೇಶವನ್ನು ಖಂಡಿತ ನೆರವೇರಿಸುತ್ತಾನೆ. ಹಾಗಾಗಿಯೇ ಆತನು ವಿಧೇಯ ಮಾನವರೆಲ್ಲರಿಗೆ ಒಂದು ಉತ್ತಮ ಭವಿಷ್ಯತ್ತನ್ನು ತರುತ್ತೇನೆಂದು ಏದೆನ್‌ ತೋಟದಲ್ಲೇ ವಾಗ್ದಾನಿಸಿದನು. ಎಲ್ಲರು ಸತ್ಯಾರಾಧನೆಯನ್ನು ಮಾಡುವ ಕಾಲವನ್ನು ತರುವೆನೆಂದು ಮತ್ತು ಸೈತಾನನನ್ನೂ ಅವನ ಎಲ್ಲ ಕೆಟ್ಟತನವನ್ನೂ ನಾಶ ಮಾಡುತ್ತೇನೆಂದು ಮಾತುಕೊಟ್ಟನು. (ಆದಿ. 3:15) ನಿಜ, ಪುನಃ ಎಲ್ಲವೂ ‘ತುಂಬ ಒಳ್ಳೇದಾಗುವಂತೆ’ ಯೆಹೋವನು ಮಾಡಲಿದ್ದಾನೆ. ಇದನ್ನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಸಾಧಿಸಲಿದ್ದಾನೆ. (1 ಯೋಹಾ. 3:8) ಆದುದರಿಂದ ದೇವರು ತನ್ನ ಉದ್ದೇಶವನ್ನು ನೆರವೇರಿಸುವುದರಲ್ಲಿ ಯೇಸುವಿಗೆ ಯಾವ ಪಾತ್ರವನ್ನು ವಹಿಸಿದ್ದಾನೆಂದು ತಿಳಿದುಕೊಳ್ಳುವುದು ತುಂಬ ಪ್ರಾಮುಖ್ಯ.—ಅ. ಕಾ. 4:12; ಫಿಲಿ. 2:9, 11.

ಕ್ರಿಸ್ತನ ಪಾತ್ರವೇನು?

2 ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಕ್ರಿಸ್ತನಿಗೆ ಅನೇಕ ಪಾತ್ರಗಳಿವೆ. ವಿಮೋಚಕ, ಮಹಾ ಯಾಜಕ, ಕ್ರೈಸ್ತ ಸಭೆಯ ನಾಯಕ, ಮಾತ್ರವಲ್ಲ ಈಗ ದೇವರ ರಾಜ್ಯದ ರಾಜನೂ ಆಗಿದ್ದಾನೆ. ಯೇಸುವಿನ ಈ ಎಲ್ಲ ಪಾತ್ರಗಳ ಬಗ್ಗೆ ನಾವು ಆಳವಾಗಿ ಧ್ಯಾನಿಸಬೇಕು. ಆಗ ನಮ್ಮ ರಕ್ಷಣೆಗೋಸ್ಕರ ಏರ್ಪಾಡನ್ನು ಮಾಡಿದ್ದಕ್ಕಾಗಿ ಯೆಹೋವನಿಗೆ ಹೆಚ್ಚು ಕೃತಜ್ಞರಾಗಿರುತ್ತೇವೆ. ಕ್ರಿಸ್ತ ಯೇಸುವಿನ ಮೇಲೆ ಸಹ ನಮ್ಮ ಪ್ರೀತಿ ಹೆಚ್ಚುತ್ತದೆ. ನಾವೀಗ ಯೇಸುವಿನ ಪಾತ್ರಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ನೋಡೋಣ.

ಮಾನವರ ವಿಷಯದಲ್ಲಿ ಯೆಹೋವನಿಗಿದ್ದ ಉದ್ದೇಶವನ್ನು ನೆರವೇರಿಸುವುದರಲ್ಲಿ ಯೇಸುವು ಅತಿ ಪ್ರಮುಖ ಪಾತ್ರವಹಿಸುವ ವ್ಯಕ್ತಿ

3 ಯೇಸು ವಿಮೋಚಕನಾಗಿ ಹೇಗೆ ಕಾರ್ಯನಡಿಸಿದನು? ದೇವರೊಂದಿಗೆ ಕಡಿದುಹೋಗಿದ್ದ ಸಂಬಂಧವನ್ನು ವಿಧೇಯ ಮಾನವರು ಪುನಃ ಗಳಿಸುವಂತೆ ಕ್ರಿಸ್ತನು ಸಾಧ್ಯಮಾಡಿದನು. (ಯೋಹಾ. 14:6) ಅನೇಕರನ್ನು ಪಾಪಮರಣದಿಂದ ಬಿಡಿಸಲು ಯೇಸು ತನ್ನನ್ನೇ ವಿಮೋಚನಾ ಮೌಲ್ಯವಾಗಿ ಅರ್ಪಿಸಿದನು. (ಮತ್ತಾ. 20:28) ಆದುದರಿಂದ ಯೇಸು ನಮಗೆ ಆದರ್ಶ ವ್ಯಕ್ತಿ ಮಾತ್ರ ಅಲ್ಲ, ಮಾನವರ ವಿಷಯದಲ್ಲಿ ಯೆಹೋವನಿಗಿದ್ದ ಉದ್ದೇಶವನ್ನು ನೆರವೇರಿಸುವುದರಲ್ಲಿ ಅತಿ ಪ್ರಮುಖ ಪಾತ್ರವಹಿಸುವ ವ್ಯಕ್ತಿ. ಆತನ ಮೂಲಕ ಮಾತ್ರ ನಮಗೆ ದೇವರ ಅನುಗ್ರಹ ಸಿಗುತ್ತದೆ. (ಅ. ಕಾ. 5:31; 2 ಕೊರಿಂ. 5:18, 19) ಯೇಸುವಿನ ಮರಣ ಮತ್ತು ಪುನರುತ್ಥಾನದಿಂದ ಮಾನವರೆಲ್ಲರಿಗೆ ಅದ್ಭುತ ಆಶೀರ್ವಾದಗಳನ್ನು ಪಡೆಯುವ ಅವಕಾಶ ಸಿಕ್ಕಿದೆ. ದೇವರ ರಾಜ್ಯವು ಭೂಮಿಯನ್ನು ಆಳುವಾಗ ಆ ಆಶೀರ್ವಾದಗಳು ನಿತ್ಯನಿರಂತರಕ್ಕೂ ನಮ್ಮದಾಗುವವು.

4 ಯೇಸು ನಮ್ಮ ಮಹಾ ಯಾಜಕನು ಹೇಗೆ? ಆತನು ನಮ್ಮ ಬಲಹೀನತೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಯೆಹೋವನಿಗೆ ಸಮರ್ಪಿಸಿಕೊಂಡವರ ಪಾಪಗಳಿಗೆ ದೋಷಪರಿಹಾರವನ್ನು ಅರ್ಪಿಸಿದ್ದಾನೆ. ಅಪೊಸ್ತಲ ಪೌಲ ಹೀಗೆ ಬರೆದನು: “ನಮಗಿರುವ ಮಹಾ ಯಾಜಕನು ನಮ್ಮ ಬಲಹೀನತೆಗಳ ಕಡೆಗೆ ಅನುತಾಪಪಡಲು ಸಾಧ್ಯವಿಲ್ಲದವನಲ್ಲ, ಬದಲಿಗೆ ಅವನು ನಮ್ಮಂತೆಯೇ ಎಲ್ಲ ವಿಷಯಗಳಲ್ಲಿ ಪರೀಕ್ಷಿತನಾದರೂ ಪಾಪರಹಿತನಾಗಿದ್ದಾನೆ.” ಬಳಿಕ ಪೌಲನು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರು ಏನು ಮಾಡಬೇಕೆಂದು ಕೂಡ ಹೇಳಿದನು: ‘ನಾವು ಕರುಣೆಯನ್ನು ಹೊಂದುವಂತೆಯೂ ಅಪಾತ್ರ ದಯೆಯಿಂದ ಸಮಯೋಚಿತವಾದ ಸಹಾಯವನ್ನು ಕಂಡುಕೊಳ್ಳುವಂತೆಯೂ ಅಪಾತ್ರ ದಯೆಯ ಸಿಂಹಾಸನವನ್ನು ವಾಕ್ಸರಳತೆಯಿಂದ ಸಮೀಪಿಸೋಣ.’ ಇದರ ಅರ್ಥವೇನು? ಮಾನವರು ತನ್ನೊಂದಿಗೆ ಪುನಃ ಒಳ್ಳೇ ಸಂಬಂಧವನ್ನು ಬೆಳೆಸಲಿಕ್ಕಾಗಿ ಯೆಹೋವನು ವಿಮೋಚನಾ ಮೌಲ್ಯದ ಏರ್ಪಾಡು ಮಾಡಿದ್ದಾನೆ. ಅದರಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ನಮ್ಮಿಂದಾಗುವ ಎಲ್ಲ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು.—ಇಬ್ರಿ. 4:14-16; 1 ಯೋಹಾ. 2:2.

5 ಯೇಸುವು ಕ್ರೈಸ್ತ ಸಭೆಯ ‘ತಲೆ’ ಅಂದರೆ ನಾಯಕನಾಗಿದ್ದಾನೆ. ಒಂದನೇ ಶತಮಾನದಲ್ಲಿದ್ದ ಕ್ರಿಸ್ತನ ಹಿಂಬಾಲಕರಂತೆ ಇಂದು ನಮಗೆ ಕೂಡ ಯೇಸುವೇ ನಾಯಕ. ಯಾವ ಮನುಷ್ಯನೂ ನಮಗೆ ನಾಯಕನಾಗಿರುವ ಅಗತ್ಯವಿಲ್ಲ. ಯೇಸುವು ಪವಿತ್ರಾತ್ಮದ ಮೂಲಕ ಮತ್ತು ಸಭಾ ಹಿರಿಯರ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತಾನೆ. ಈ ಹಿರಿಯರು ತಾವು ಕ್ರೈಸ್ತ ಸಭೆಯನ್ನು ಹೇಗೆ ಆರೈಕೆ ಮಾಡುತ್ತೇವೆ ಎಂಬುದರ ಬಗ್ಗೆ ಯೇಸುವಿಗೂ ಯೆಹೋವನಿಗೂ ಲೆಕ್ಕ ಒಪ್ಪಿಸಬೇಕು. (ಇಬ್ರಿ. 13:17; 1 ಪೇತ್ರ 5:2, 3) ಯೇಸುವಿನ ವಿಷಯದಲ್ಲಿ ಯೆಹೋವನೇ ಹೀಗೆ ಮುಂತಿಳಿಸಿದ್ದನು: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” (ಯೆಶಾ. 55:4) ಈ ಪ್ರವಾದನೆ ನೆರವೇರಿದ್ದರಿಂದ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “‘ನಾಯಕರು’ ಎಂದು ಕರೆಸಿಕೊಳ್ಳಬೇಡಿರಿ; ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ನಾಯಕನು.”—ಮತ್ತಾ. 23:10.

6 ನಮಗೆ ಸಹಾಯಮಾಡಲು ಯೇಸುವಿಗೆ ಮನಸ್ಸಿದೆ ಎನ್ನುವುದು ಆತನ ಈ ಮಾತುಗಳಿಂದ ಗೊತ್ತಾಗುತ್ತದೆ: “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.” (ಮತ್ತಾ. 11:28-30) ಯೇಸು ಕ್ರೈಸ್ತ ಸಭೆಯನ್ನು ಸೌಮ್ಯಭಾವದಿಂದ ಮತ್ತು ಎಲ್ಲರಿಗೆ ಚೈತನ್ಯ ತರುವಂಥ ರೀತಿಯಲ್ಲಿ ಮೇಲ್ವಿಚಾರಣೆ ಮಾಡುತ್ತಾನೆ. ಹೀಗೆ ತನ್ನ ತಂದೆಯಾದ ಯೆಹೋವನಂತೆ ತಾನೂ “ಒಳ್ಳೆಯ ಕುರುಬ” ಎಂದು ತೋರಿಸಿಕೊಟ್ಟಿದ್ದಾನೆ.—ಯೋಹಾ. 10:11; ಯೆಶಾ. 40:11.

7 ಯೇಸು ಕ್ರಿಸ್ತನು ರಾಜನಾಗಿಯೂ ಆಳುತ್ತಾನೆ. ಈ ಕುರಿತು ಪೌಲನು ಕೊರಿಂಥದವರಿಗೆ ಬರೆದ ಮೊದಲನೇ ಪತ್ರದಲ್ಲಿ ತಿಳಿಸಿದ್ದು: “ದೇವರು ಎಲ್ಲ ವೈರಿಗಳನ್ನು ಅವನ ಪಾದಗಳ ಕೆಳಗೆ ಹಾಕುವ ತನಕ ಅವನು ಅರಸನಾಗಿ ಆಳುವುದು ಆವಶ್ಯಕ. ಆದರೆ ಎಲ್ಲವೂ ಅವನಿಗೆ ಅಧೀನಮಾಡಲ್ಪಟ್ಟ ಬಳಿಕ ಮಗನು ಎಲ್ಲವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಎಲ್ಲರಿಗೂ ಎಲ್ಲವೂ ಆಗುವನು.” (1 ಕೊರಿಂ. 15:25, 28) ಮೊತ್ತಮೊದಲ ಸೃಷ್ಟಿಯಾಗಿದ್ದ ಯೇಸು ಭೂಮಿಗೆ ಬರುವ ಮುಂಚೆ ದೇವರ ನಿಪುಣ ಕೆಲಸಗಾರನಾಗಿದ್ದನು. (ಜ್ಞಾನೋ. 8:22-31) ಭೂಮಿಗೆ ಬಂದ ಮೇಲೂ ಯೇಸು ಎಲ್ಲ ಸಮಯದಲ್ಲಿ ದೇವರ ಚಿತ್ತದಂತೆ ನಡೆದನು. ಅತಿ ದೊಡ್ಡ ಪರೀಕ್ಷೆಯನ್ನು ತಾಳಿಕೊಂಡನು ಮತ್ತು ಸಾಯುವ ತನಕ ತನ್ನ ತಂದೆಗೆ ನಂಬಿಗಸ್ತನಾಗಿ, ನಿಷ್ಠನಾಗಿ ಉಳಿದನು. (ಯೋಹಾ. 4:34; 15:10) ಆದುದರಿಂದ ಯೆಹೋವನು ಆತನನ್ನು ಪುನರುತ್ಥಾನಗೊಳಿಸಿದನು. ಮಾತ್ರವಲ್ಲ ಸ್ವರ್ಗದ ರಾಜ್ಯದ ರಾಜನಾಗಿ ಆಳುವ ಹಕ್ಕನ್ನು ಕೊಟ್ಟನು. (ಅ. ಕಾ. 2:32-36) ರಾಜನಾಗಿರುವ ಕ್ರಿಸ್ತ ಯೇಸುವಿಗೆ ಅತಿ ದೊಡ್ಡ ನೇಮಕ ಸಿಕ್ಕಿದೆ. ಲಕ್ಷೋಪಲಕ್ಷ ಬಲಿಷ್ಠ ದೇವದೂತರನ್ನು ಮುನ್ನಡೆಸುತ್ತಾ ಭೂಮಿಯಲ್ಲಿರುವ ಮಾನವ ಆಳ್ವಿಕೆಯನ್ನು ಪೂರ್ಣವಾಗಿ ತೆಗೆದುಹಾಕಿ ದುಷ್ಟತನ ಇಲ್ಲದಂತೆ ಮಾಡುವುದೇ ಆ ನೇಮಕ. (ಜ್ಞಾನೋ. 2:21, 22; 2 ಥೆಸ. 1:6-9; ಪ್ರಕ. 19:11-21; 20:1-3) ಆಗ ಇಡೀ ಭೂಮಿಯ ಮೇಲೆ ಒಂದೇ ಸರ್ಕಾರ ಇರುವುದು. ಅದು ಕ್ರಿಸ್ತನು ರಾಜನಾಗಿರುವ ದೇವರ ರಾಜ್ಯವೇ.—ಪ್ರಕ. 11:15.

ಯೇಸುವಿನ ಪಾತ್ರವನ್ನು ಅಂಗೀಕರಿಸುವುದರ ಅರ್ಥವೇನು?

8 ನಮ್ಮ ಆದರ್ಶನಾಗಿರುವ ಯೇಸು ಕ್ರಿಸ್ತನು ಪರಿಪೂರ್ಣನು. ನಮ್ಮ ಕಾಳಜಿ ವಹಿಸುವ ಜವಾಬ್ದಾರಿ ಆತನಿಗಿದೆ. ಆತನು ನಮ್ಮನ್ನು ಪ್ರೀತಿಯಿಂದ ಜಾಗರೂಕತೆಯಿಂದ ನೋಡಿಕೊಳ್ಳುತ್ತಾನೆ. ಆ ಆರೈಕೆ ನಮಗೆ ಸಿಗಬೇಕಾದರೆ ಯೆಹೋವನಿಗೆ ಯಾವಾಗಲೂ ನಿಷ್ಠರಾಗಿ ಇರಬೇಕು ಮತ್ತು ಆತನ ಸಂಘಟನೆಯ ಜೊತೆಯಲ್ಲೇ ಸಾಗಬೇಕು.

9 ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸು ಯಾವೆಲ್ಲ ಪಾತ್ರಗಳನ್ನು ವಹಿಸುತ್ತಾನೆಂದು ಆರಂಭದ ಕ್ರೈಸ್ತರು ತಿಳಿದುಕೊಂಡು ಅದನ್ನು ಒಪ್ಪಿಕೊಂಡರು. ಅದನ್ನು ಅವರು ಕಾರ್ಯಗಳಲ್ಲಿ ಸಹ ತೋರಿಸಿದರು. ಹೇಗೆ? ಯೇಸುವಿನ ನಾಯಕತ್ವದ ಕೆಳಗೆ ಒಗ್ಗಟ್ಟಿನಿಂದ ಕೆಲಸಮಾಡಿದರು ಮತ್ತು ಪವಿತ್ರಾತ್ಮದ ಮೂಲಕ ಯೇಸುವು ಕೊಡುತ್ತಿದ್ದ ಮಾರ್ಗದರ್ಶನೆಗೆ ಅಧೀನರಾದರು. (ಅ. ಕಾ. 15:12-21) ಅಭಿಷಿಕ್ತ ಕ್ರೈಸ್ತರು ಹೇಗೆ ಒಗ್ಗಟ್ಟಿನಿಂದ ಕೆಲಸಮಾಡುತ್ತಾರೆ ಎಂಬ ಬಗ್ಗೆ ಅಪೊಸ್ತಲ ಪೌಲನು ಹೀಗೆ ಹೇಳಿದನು: “ಸತ್ಯವನ್ನು ಮಾತಾಡುವವರಾಗಿ ಎಲ್ಲ ವಿಷಯಗಳಲ್ಲಿಯೂ ನಾವು ಶಿರಸ್ಸಾಗಿರುವ ಕ್ರಿಸ್ತನಲ್ಲಿ ಪ್ರೀತಿಯಿಂದ ಬೆಳೆಯೋಣ. ಅವನಿಂದ ಇಡೀ ದೇಹವು, ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ ಮತ್ತು ಪ್ರತಿಯೊಂದು ಅಂಗವು ಸೂಕ್ತವಾದ ಪ್ರಮಾಣದಲ್ಲಿ ಅದರದರ ಕಾರ್ಯವನ್ನು ಮಾಡುವ ಮೂಲಕ ಪ್ರೀತಿಯಲ್ಲಿ ತನ್ನದೇ ಅಭಿವೃದ್ಧಿಗೋಸ್ಕರ ದೇಹದ ಬೆಳವಣಿಗೆಗೆ ನೆರವಾಗುತ್ತದೆ.”—ಎಫೆ. 4:15, 16.

10 ಕ್ರೈಸ್ತ ಸಭೆ ಒಂದು ದೇಹದಂತಿದೆ. ಅಭಿಷಿಕ್ತ ಕ್ರೈಸ್ತರು ಮತ್ತು ‘ಬೇರೆ ಕುರಿಗಳು’ ಒಂದೇ ದೇಹದಲ್ಲಿರುವ ವಿವಿಧ ಅಂಗಗಳಂತೆ ಇದ್ದಾರೆ. ಆದುದರಿಂದ ಸಭೆಯಲ್ಲಿ ಎಲ್ಲರು ಒಬ್ಬರಿಗೊಬ್ಬರು ಸಹಕಾರ ಕೊಡುತ್ತಾ ಕ್ರಿಸ್ತನ ನಾಯಕತ್ವದ ಕೆಳಗೆ ಸ್ನೇಹ-ಸೌಹಾರ್ದದಿಂದ ಇರಬೇಕು. ಆಗ ಸಭೆಯು ಅಭಿವೃದ್ಧಿಯಾಗುತ್ತದೆ, ಸಭೆಯಲ್ಲಿ ಹೃತ್ಪೂರ್ವಕ ಪ್ರೀತಿ ನೆಲೆಸಿರುತ್ತದೆ. ಈ ಪ್ರೀತಿ “ಐಕ್ಯದ ಪರಿಪೂರ್ಣ ಬಂಧವಾಗಿದೆ.”—ಯೋಹಾ. 10:16; ಕೊಲೊ. 3:14; 1 ಕೊರಿಂ. 12:14-26.

11 ಬೈಬಲ್‌ ಪ್ರವಾದನೆಗಳಲ್ಲಿ ತಿಳಿಸಿದಂತೆಯೇ ಲೋಕದ ಘಟನೆಗಳು ನಡೆಯುತ್ತಿವೆ. ಇದು, ಯೇಸು ಕ್ರಿಸ್ತನು 1914ರಿಂದ ರಾಜನಾಗಿ ಆಳುತ್ತಿದ್ದಾನೆ ಮತ್ತು ಈಗ ವೈರಿಗಳ ಮಧ್ಯೆ ದೊರೆತನ ಮಾಡುತ್ತಿದ್ದಾನೆ ಎಂದು ರುಜುಪಡಿಸುತ್ತದೆ. (ಕೀರ್ತ. 2:1-12; 110:1, 2) ಇದರಿಂದ ನಮಗೇನು ಗೊತ್ತಾಗುತ್ತದೆ? ಯೇಸುವು ರಾಜರ ರಾಜನೂ ಕರ್ತರ ಕರ್ತನೂ ಆಗಿ ವೈರಿಗಳನ್ನು ನಾಶಮಾಡುವ ಸಮಯ ತುಂಬ ಹತ್ತಿರದಲ್ಲಿದೆ. (ಪ್ರಕ. 11:15; 12:10; 19:16) ಆ ನಾಶನದ ಬಳಿಕ ಏದೆನ್‌ ತೋಟದಲ್ಲಿ ಯೆಹೋವನು ನೀತಿವಂತರ ರಕ್ಷಣೆಯ ಕುರಿತು ಮುಂತಿಳಿಸಿದ್ದ ಮಾತು ನೆರವೇರುವುದು. ಕ್ರಿಸ್ತನ ಬಲಗಡೆಯಲ್ಲಿರುವವರು ಆಶೀರ್ವಾದಗಳನ್ನು ಪಡೆಯುವರು. (ಮತ್ತಾ. 25:34) ದೇವರ ಉದ್ದೇಶದಲ್ಲಿ ಕ್ರಿಸ್ತನಿಗಿರುವ ಪಾತ್ರವನ್ನು ನಾವು ಅರ್ಥಮಾಡಿಕೊಂಡು ಒಪ್ಪಿಕೊಂಡಿರುವುದು ನಿಜಕ್ಕೂ ಸಂತೋಷದ ವಿಷಯ. ಈ ಕಡೇ ದಿವಸಗಳಲ್ಲಿ ಭೂಮಿಯಲ್ಲೆಲ್ಲ ಸುವಾರ್ತೆಯನ್ನು ತಿಳಿಸಲು ನಾವು ಕ್ರಿಸ್ತನ ನಾಯಕತ್ವದ ಕೆಳಗೆ ಒಗ್ಗಟ್ಟಿನಿಂದ ಸೇವೆಮಾಡುತ್ತಿರೋಣ.