ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 7

‘ಪ್ರೀತಿಸಲು ಮತ್ತು ಸತ್ಕಾರ್ಯ ಮಾಡಲು ಪ್ರೇರೇಪಿಸುವ’ ಕೂಟಗಳು

‘ಪ್ರೀತಿಸಲು ಮತ್ತು ಸತ್ಕಾರ್ಯ ಮಾಡಲು ಪ್ರೇರೇಪಿಸುವ’ ಕೂಟಗಳು

ಯೆಹೋವನ ಜನರು ಕ್ರಮಬದ್ಧ ರೀತಿಯಲ್ಲಿ ಕೂಡಿಬರುವ ಏರ್ಪಾಡು ಪ್ರಾಚೀನ ಕಾಲದಿಂದಲೂ ಇದೆ. ಉದಾಹರಣೆಗೆ, ಇಸ್ರಾಯೇಲ್‌ ಜನಾಂಗದ ಎಲ್ಲ ಪುರುಷರು ಪ್ರತಿ ವರ್ಷ ಮೂರು ಹಬ್ಬಗಳನ್ನು ಆಚರಿಸಲು ಯೆರೂಸಲೇಮಿನಲ್ಲಿ ಕೂಡಿಬರುತ್ತಿದ್ದರು. (ಧರ್ಮೋ. 16:16) ಒಂದನೇ ಶತಮಾನದಲ್ಲೂ ಕ್ರೈಸ್ತರು ಕ್ರಮವಾಗಿ ಕೂಡಿಬರುತ್ತಿದ್ದರು. ಹೆಚ್ಚಾಗಿ ಸಹೋದರರ ಮನೆಗಳಲ್ಲಿ ಸಭೆ ಸೇರುತ್ತಿದ್ದರು. (ಫಿಲೆ. 1, 2) ಇಂದು ಕೂಡ ನಾವು ಕೂಟ, ಸಮ್ಮೇಳನ, ಅಧಿವೇಶನಗಳಿಗೆ ಕೂಡಿಬರುತ್ತೇವೆ. ಹೀಗೆ ಕೂಡಿಬರುವುದರ ಮುಖ್ಯ ಕಾರಣ, ಅದು ದೇವರಿಗೆ ನಾವು ಸಲ್ಲಿಸುವ ಆರಾಧನೆಯ ಪ್ರಾಮುಖ್ಯ ಭಾಗವಾಗಿರುವುದೇ.—ಕೀರ್ತ. 95:6; ಕೊಲೊ. 3:16.

2 ಅಷ್ಟೇ ಅಲ್ಲ, ಕೂಟಗಳಿಂದ ಎಲ್ಲರಿಗೆ ಪ್ರಯೋಜನವಿದೆ. ಉದಾಹರಣೆಗೆ ಪ್ರತಿ ಏಳನೆಯ ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ‘ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳಲಿಕ್ಕಾಗಿ ಇಸ್ರಾಯೇಲ್ಯ ಸ್ತ್ರೀಪುರುಷರೂ ಮಕ್ಕಳೂ ಅವರ ಮಧ್ಯದಲ್ಲಿ ವಾಸಿಸುತ್ತಿದ್ದ ಅನ್ಯ ಜನರೂ ಕೂಡಿಬರಬೇಕಿತ್ತು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯಲು ಆಗುತ್ತಿತ್ತು.’ (ಧರ್ಮೋ. 31:12) ಈ ವಚನದಿಂದ ನಾವು ಕೂಟಗಳಿಗೆ ಕೂಡಿಬರುವುದರ ಉದ್ದೇಶ ಗೊತ್ತಾಗುತ್ತದೆ. ಅದು ‘ಯೆಹೋವನಿಂದ ಶಿಕ್ಷಣ ಪಡೆಯುವುದೇ.’ (ಯೆಶಾ. 54:13) ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು, ಪ್ರೋತ್ಸಾಹಿಸಲು, ನಂಬಿಕೆಯನ್ನು ಬಲಗೊಳಿಸಲು ಸಹ ಕೂಟಗಳು ನೆರವಾಗುತ್ತವೆ.

ಸಭಾ ಕೂಟಗಳು

3 ಆರಂಭದ ಕ್ರೈಸ್ತ ಕೂಟಗಳಲ್ಲಿ ಏನೆಲ್ಲ ಕಾರ್ಯಕ್ರಮಗಳಿದ್ದವು? ಕ್ರಿ.ಶ. 33ರ ಪಂಚಾಶತ್ತಮ ಹಬ್ಬದ ನಂತರ ಶಿಷ್ಯರೆಲ್ಲರೂ ಸೇರಿಬರುತ್ತಿದ್ದಾಗ ಅಪೊಸ್ತಲರ ಬೋಧನೆಯನ್ನು ಕೇಳಿಸಿಕೊಳ್ಳುತ್ತಿದ್ದರು ಮತ್ತು “ಪ್ರತಿದಿನವೂ ಅವರು ಒಂದೇ ಉದ್ದೇಶದಿಂದ ದೇವಾಲಯದಲ್ಲಿ ಎಡೆಬಿಡದೆ ಕೂಡಿಬರುತ್ತಿದ್ದರು.” (ಅ. ಕಾ. 2:42, 46, NW 2013) ಅನಂತರದ ಸಮಯದಲ್ಲಿ ಕ್ರೈಸ್ತರು ಆರಾಧನೆಗಾಗಿ ಸೇರುತ್ತಿದ್ದಾಗ ಹೀಬ್ರು ಶಾಸ್ತ್ರಗ್ರಂಥವನ್ನು ಹಾಗೂ ಅಪೊಸ್ತಲರೂ ಕೆಲವು ಶಿಷ್ಯರೂ ಬರೆದ ಪತ್ರಗಳನ್ನು ಓದುತ್ತಿದ್ದರು. (1 ಕೊರಿಂ. 1:1, 2; ಕೊಲೊ. 4:16; 1 ಥೆಸ. 1:1; ಯಾಕೋ. 1:1) ಪ್ರಾರ್ಥನೆ ಕೂಡ ಮಾಡುತ್ತಿದ್ದರು. (ಅ. ಕಾ. 4: 24-29; 20:36) ಬೇರೆ ಸ್ಥಳಗಳಲ್ಲಿ ಸೇವೆ ಮಾಡಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸಲಾಗುತ್ತಿತ್ತು. (ಅ. ಕಾ. 11:5-18; 14:27, 28) ಬೈಬಲ್‌ ಬೋಧನೆಗಳು ಹಾಗೂ ಪ್ರವಾದನೆಗಳ ನೆರವೇರಿಕೆಯ ಬಗ್ಗೆ ಚರ್ಚಿಸಲಾಗುತ್ತಿತ್ತು. ಕ್ರೈಸ್ತರ ನಡತೆ ಹೇಗಿರಬೇಕು, ದೇವಭಕ್ತಿ ತೋರಿಸುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲ, ಹುರುಪಿನಿಂದ ಸುವಾರ್ತೆ ಸಾರುವಂತೆ ಪ್ರೋತ್ಸಾಹಿಸಲಾಗುತ್ತಿತ್ತು.—ರೋಮ. 10:9, 10; 1 ಕೊರಿಂ. 11:23-26; 15:58; ಎಫೆ. 5:1-33.

ಕಷ್ಟಕರವಾದ ಈ ಕಡೇ ದಿವಸಗಳಲ್ಲಿ ನಮಗೆ ಪ್ರೋತ್ಸಾಹ ಬೇಕು; ಅಂಥ ಪ್ರೋತ್ಸಾಹ ನಮಗೆ ಸಿಗುವುದು ಕೂಟಗಳಲ್ಲೇ

4 ಅಪೊಸ್ತಲರ ಕಾಲದಲ್ಲಿದ್ದ ರೀತಿಯಲ್ಲೇ ಇಂದು ಸಹ ಕೂಟಗಳನ್ನು ನಡೆಸಲಾಗುತ್ತದೆ. ಹಾಗಾಗಿ ಇಬ್ರಿಯ 10:24, 25 ರಲ್ಲಿ ಹೇಳಿರುವಂತೆ ನಾವು ನಡೆಯಬೇಕು: “ನಾವು ಪರಸ್ಪರ ಹಿತಚಿಂತಕರಾಗಿದ್ದು . . . ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” ಕಷ್ಟಕರವಾದ ಈ ಕಡೇ ದಿವಸಗಳಲ್ಲಿ ದೇವರಲ್ಲಿ ನಮ್ಮ ನಂಬಿಕೆ ಬಲವಾಗಿರಬೇಕಾದರೆ ಮತ್ತು ಆತನಿಗೆ ಕೊನೆವರೆಗೆ ನಂಬಿಗಸ್ತರಾಗಿರಬೇಕಾದರೆ ನಮಗೆ ಹೆಚ್ಚು ಪ್ರೋತ್ಸಾಹ ಬೇಕು. ಅಂಥ ಪ್ರೋತ್ಸಾಹ ನಮಗೆ ಸಿಗುವುದು ಕೂಟಗಳಲ್ಲೇ. ಹಾಗಾಗಿ ತಪ್ಪದೆ ಕೂಟಗಳಿಗೆ ಹಾಜರಾಗಬೇಕು. (ರೋಮ. 1:11, 12) ‘ವಿಕೃತವಾದ ವಕ್ರ ಸಂತತಿಯ ಮಧ್ಯೆ’ ಜೀವಿಸುತ್ತಿರುವ ನಾವು ‘ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ’ ಬಿಟ್ಟುಬಿಟ್ಟಿದ್ದೇವೆ. (ಫಿಲಿ. 2:15, 16; ತೀತ 2:12-14) ಹೀಗಿರುವಾಗ ಯೆಹೋವನ ಜನರೊಂದಿಗಿನ ಸಹವಾಸಕ್ಕಿಂತ ಒಳ್ಳೆಯ ಸಹವಾಸ ನಮಗೆ ಬೇರೆಲ್ಲೂ ಸಿಗುವುದಿಲ್ಲ. (ಕೀರ್ತ. 84:10) ಬೈಬಲ್‌ ಅಧ್ಯಯನದಿಂದ ಸಿಗುವಷ್ಟು ಪ್ರಯೋಜನ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ನಮ್ಮ ಪ್ರಯೋಜನಕ್ಕಾಗಿರುವ ಪ್ರತಿಯೊಂದು ಕೂಟದ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಸಾರ್ವಜನಿಕ ಕೂಟ

5 ‘ಸಾರ್ವಜನಿಕ ಕೂಟ’ ಹೆಚ್ಚಾಗಿ ವಾರದ ಕೊನೆಯಲ್ಲಿ ನಡೆಯುತ್ತದೆ. ಇದಕ್ಕೆ ಸಾರ್ವಜನಿಕ ಕೂಟ ಎಂಬ ಹೆಸರು ಏಕಿದೆ? ಏಕೆಂದರೆ ಅದರಲ್ಲಿ ಮುಖ್ಯವಾಗಿ ಸಾರ್ವಜನಿಕರಿಗೆಂದು ಬೈಬಲ್‌ ಆಧರಿತವಾದ ಒಂದು ಭಾಷಣವನ್ನು ನೀಡಲಾಗುತ್ತದೆ. ಕೆಲವರು ಮೊದಲ ಬಾರಿ ಆ ಕೂಟಕ್ಕೆ ಬಂದಿರಬಹುದು. ಈ ಕೂಟವು ಹೊಸಬರಿಗೂ ಸಭೆಯ ಸದಸ್ಯರಿಗೂ ಬೈಬಲಿನಿಂದ ಮಾರ್ಗದರ್ಶನವನ್ನು ಕೊಡುತ್ತದೆ.—ಅ. ಕಾ. 18:4; 19:9, 10.

6 ಇಂತಹ ಸಾರ್ವಜನಿಕ ಕೂಟವನ್ನು ಕ್ರಿಸ್ತ ಯೇಸುವು, ಅಪೊಸ್ತಲರು, ಇತರ ಶಿಷ್ಯರು ಸಹ ನಡೆಸಿದ್ದರು. ಯೇಸುವಿನಷ್ಟು ಉತ್ತಮ ಸಾರ್ವಜನಿಕ ಭಾಷಣಕಾರನು ಯಾರೂ ಇಲ್ಲ. “ಅವನು ಮಾತಾಡಿದ ರೀತಿಯಲ್ಲಿ ಯಾವ ಮನುಷ್ಯನೂ ಎಂದೂ ಮಾತಾಡಿದ್ದಿಲ್ಲ” ಎಂದು ಕೆಲವರು ಹೇಳಿದರು. (ಯೋಹಾ. 7:46) ದೇವರಿಂದ ಅಧಿಕಾರ ಪಡೆದವನಾಗಿ ಯೇಸು ಮಾತಾಡುತ್ತಿದ್ದ ಕಾರಣ ಜನರು ಆತನ ಮಾತುಗಳನ್ನು ಕೇಳಿ ತುಂಬ ಆಶ್ಚರ್ಯಪಟ್ಟರು. (ಮತ್ತಾ. 7:28, 29) ಆ ಮಾತುಗಳಂತೆ ನಡೆದವರಿಗೆ ಅನೇಕ ಪ್ರಯೋಜನಗಳು ಸಿಕ್ಕಿದವು. (ಮತ್ತಾ. 13:16, 17) ಅಪೊಸ್ತಲರು ಸಹ ಯೇಸುವಿನಂತೆಯೇ ಸಾರ್ವಜನಿಕವಾಗಿ ಜನರಿಗೆ ಬೋಧಿಸಿದರು. ಉದಾಹರಣೆಗೆ, ಪೇತ್ರನು ಕ್ರಿ.ಶ. 33ರ ಪಂಚಾಶತ್ತಮ ಹಬ್ಬದ ದಿನದಂದು ಜನಸಮೂಹಕ್ಕೆ ಮನಮುಟ್ಟುವ ರೀತಿಯಲ್ಲಿ ಭಾಷಣ ಕೊಟ್ಟನು. (ಅ. ಕಾ. 2:14-36) ಅದನ್ನು ಕೇಳಿ ಸಾವಿರಾರು ಮಂದಿಗೆ ತಾವು ಕೇಳಿಸಿಕೊಂಡದ್ದನ್ನು ಕ್ರಿಯೆಯಲ್ಲಿ ಹಾಕಲು ಸ್ಫೂರ್ತಿ ಸಿಕ್ಕಿತು. ಸಮಯಾನಂತರ ಪೌಲನು ಅಥೆನ್ಸಿನಲ್ಲಿ ಒಂದು ಸಾರ್ವಜನಿಕ ಭಾಷಣ ಕೊಟ್ಟನು. ಅದನ್ನು ಕೇಳಿಸಿಕೊಂಡು ಕೆಲವರು ಕ್ರೈಸ್ತರಾದರು.—ಅ. ಕಾ. 17:22-34.

7 ಇಂದು ಸಹ ಪ್ರತಿವಾರ ಸಭೆಗಳಲ್ಲಿ, ಮಾತ್ರವಲ್ಲ ಸಮ್ಮೇಳನ, ಅಧಿವೇಶನಗಳಲ್ಲಿ ಕೊಡಲಾಗುವ ಸಾರ್ವಜನಿಕ ಭಾಷಣಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ. ಬೈಬಲಿನ ಬೋಧನೆಗಳನ್ನು ಯಾವಾಗಲೂ ಮನಸ್ಸಲ್ಲಿಡಲು, ದೇವರ ಸೇವೆಯನ್ನು ಬಿಡದೆ ಮುಂದುವರಿಸಲು ಆ ಭಾಷಣಗಳು ನಮಗೆ ಸಹಾಯ ಮಾಡುತ್ತವೆ. ಸಾರ್ವಜನಿಕ ಭಾಷಣಕ್ಕೆ ಆಸಕ್ತ ಜನರನ್ನೂ ಸಾರ್ವಜನಿಕರನ್ನೂ ಆಮಂತ್ರಿಸುವ ಮೂಲಕ ಬೈಬಲಿನ ಮುಖ್ಯ ಬೋಧನೆಗಳನ್ನು ತಿಳಿದುಕೊಳ್ಳಲು ನಾವು ಅವರಿಗೆ ಸಹಾಯಮಾಡುತ್ತೇವೆ.

8 ಸಾರ್ವಜನಿಕ ಭಾಷಣಗಳು ಬೇರೆ ಬೇರೆ ವಿಷಯಗಳ ಕುರಿತು ಇರುತ್ತವೆ. ಕೆಲವು ಭಾಷಣಗಳು ಬೈಬಲ್‌ ಬೋಧನೆ, ಪ್ರವಾದನೆ, ತತ್ವಗಳು ಹಾಗೂ ಯೆಹೋವನ ಅದ್ಭುತ ಸೃಷ್ಟಿಯ ಕುರಿತು ತಿಳಿಸಿದರೆ ಇನ್ನು ಕೆಲವು ಕುಟುಂಬ ಜೀವನ, ವಿವಾಹ ಬಂಧ, ಯುವಜನರು ಎದುರಿಸುವ ಸವಾಲುಗಳು, ಕ್ರೈಸ್ತ ನೈತಿಕ ಮಟ್ಟಗಳ ಕುರಿತು ತಿಳಿಸುತ್ತವೆ. ಕೆಲವೊಮ್ಮೆ, ಬೈಬಲಿನಲ್ಲಿ ತಿಳಿಸಿರುವ ವ್ಯಕ್ತಿಗಳ ಅಪಾರ ನಂಬಿಕೆ, ಧೈರ್ಯ, ನಿಷ್ಠೆಯ ಬಗ್ಗೆ ವಿವರಿಸಿ ನಾವು ಅವರನ್ನು ಹೇಗೆ ಅನುಕರಿಸಬಹುದೆಂದು ತಿಳಿಸಲಾಗುತ್ತದೆ.

9 ಈ ಕೂಟದಿಂದ ಪೂರ್ಣ ಪ್ರಯೋಜನ ಪಡೆಯಲು ನಾವು ಭಾಷಣವನ್ನು ಕಿವಿಗೊಟ್ಟು ಕೇಳಬೇಕು. ಭಾಷಣಕಾರನು ಹೇಳುವ ವಚನಗಳನ್ನು ನಮ್ಮ ಬೈಬಲಿನಲ್ಲಿ ತೆರೆದು ಅವನು ಓದುವಾಗ ನಾವು ಕೂಡ ನೋಡಬೇಕು, ವಿವರಿಸುವಾಗ ಗಮನ ಕೊಡಬೇಕು. (ಲೂಕ 8:18) ಹೀಗೆ ಭಾಷಣಕಾರನು ಹೇಳುತ್ತಿರುವ ವಿಷಯಗಳನ್ನು ಸ್ವತಃ ಪರೀಕ್ಷಿಸಿ ಖಚಿತಪಡಿಸಿಕೊಂಡರೆ ಅದು ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಮತ್ತು ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವ ದೃಢಮನಸ್ಸು ಮಾಡುತ್ತೇವೆ.—1 ಥೆಸ. 5:21.

10 ಸಭೆಯಲ್ಲಿ ಹೆಚ್ಚು ಭಾಷಣಕಾರರು ಇರುವಲ್ಲಿ ಪ್ರತಿವಾರ ಸಾರ್ವಜನಿಕ ಭಾಷಣವನ್ನು ಏರ್ಪಡಿಸಲಾಗುತ್ತದೆ. ಹತ್ತಿರದ ಸಭೆಗಳಿಂದಲೂ ಭಾಷಣಕಾರರನ್ನು ಆಮಂತ್ರಿಸಲಾಗುತ್ತದೆ. ಹೆಚ್ಚು ಭಾಷಣಕಾರರು ಇಲ್ಲದಿರುವಲ್ಲಿ ಸಾರ್ವಜನಿಕ ಭಾಷಣವನ್ನು ಸಾಧ್ಯವಿರುವಾಗೆಲ್ಲ ಏರ್ಪಡಿಸಬಹುದು.

ಕಾವಲಿನಬುರುಜು ಅಧ್ಯಯನ

11 ಹೆಚ್ಚಾಗಿ ಸಾರ್ವಜನಿಕ ಭಾಷಣದ ನಂತರ ‘ಕಾವಲಿನಬುರುಜು ಅಧ್ಯಯನ’ ಇರುತ್ತದೆ. ಇದು ಕಾವಲಿನಬುರುಜು ಪತ್ರಿಕೆಯ ಅಧ್ಯಯನ ಆವೃತ್ತಿಯಲ್ಲಿರುವ ಲೇಖನದ ಪ್ರಶ್ನೋತ್ತರ ಚರ್ಚೆಯಾಗಿದೆ. ಯೆಹೋವನು ನಮಗೆ ಸಮಯಕ್ಕೆ ಸರಿಯಾದ ಆಧ್ಯಾತ್ಮಿಕ ಆಹಾರವನ್ನು ಈ ಕಾವಲಿನಬುರುಜು ಪತ್ರಿಕೆಯ ಮೂಲಕ ಕೊಡುತ್ತಿದ್ದಾನೆ.

12ಕಾವಲಿನಬುರುಜು ಅಧ್ಯಯನ ಲೇಖನಗಳಲ್ಲಿ ಬೈಬಲ್‌ ತತ್ವಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸುವುದು ಹೇಗೆಂದು ವಿವರಿಸಲಾಗಿರುತ್ತದೆ. “ಲೋಕದ ಮನೋಭಾವ”ವನ್ನು ಪ್ರತಿರೋಧಿಸುವಂತೆ, ಕೆಟ್ಟ ನಡತೆಯಿಂದ ದೂರವಿರುವಂತೆ ಆ ಲೇಖನಗಳು ಕಲಿಸುತ್ತವೆ. (1 ಕೊರಿಂ. 2:12) ಬೈಬಲ್‌ ಬೋಧನೆ, ಪ್ರವಾದನೆಗಳ ಕುರಿತು ಹೆಚ್ಚಿನ ತಿಳಿವಳಿಕೆ ಕೊಡುತ್ತವೆ. ಹೀಗೆ ಬೈಬಲ್‌ ಸತ್ಯಗಳ ಸರಿಯಾದ ಅರ್ಥವನ್ನು ನಾವು ತಿಳಿದು ನೀತಿವಂತರ ಮಾರ್ಗದಲ್ಲೇ ನಡೆಯಲು ಆಗುತ್ತದೆ. (ಕೀರ್ತ. 97:11; ಜ್ಞಾನೋ. 4:18) ಕಾವಲಿನಬುರುಜು ಅಧ್ಯಯನಕ್ಕೆ ನಾವು ಹಾಜರಾಗಿ ಅದರಲ್ಲಿ ಭಾಗವಹಿಸುವುದರಿಂದ, ಯೆಹೋವನು ತರಲಿರುವ ನೀತಿಯ ಹೊಸ ಲೋಕವನ್ನು ಎದುರುನೋಡಲು ಮತ್ತು ಅದನ್ನು ನೆನಸಿ ಆನಂದದಿಂದಿರಲು ಸಾಧ್ಯವಾಗುತ್ತದೆ. (ರೋಮ. 12:12; 2 ಪೇತ್ರ 3:13) ಈ ಕೂಟವು ನಮಗೆ ಪವಿತ್ರಾತ್ಮದ ಫಲದ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಮತ್ತು ಯೆಹೋವನ ಸೇವೆಯನ್ನು ಅತ್ಯಾಸಕ್ತಿಯಿಂದ ಮಾಡುವ ಬಯಕೆಯನ್ನು ಹೆಚ್ಚಿಸುತ್ತದೆ. (ಗಲಾ. 5:22, 23) ಅಷ್ಟೇ ಅಲ್ಲ ಕಷ್ಟನೋವುಗಳನ್ನು ಸಹಿಸಿಕೊಳ್ಳಲು ಬಲ ನೀಡುತ್ತದೆ. “ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು” ಹಾಕಲು ಸಹಾಯಮಾಡುತ್ತದೆ. ಇದರಿಂದ ನಾವು ‘ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿದುಕೊಳ್ಳಲು’ ಆಗುತ್ತದೆ.—1 ತಿಮೊ. 6:19; 1 ಪೇತ್ರ 1:6, 7.

13 ಈ ಆಧ್ಯಾತ್ಮಿಕ ಆಹಾರದಿಂದ ನಾವು ಪೂರ್ಣ ಪ್ರಯೋಜನ ಪಡೆಯಬೇಕಾದರೆ ಪ್ರತಿವಾರ ಅಧ್ಯಯನ ಲೇಖನವನ್ನು ಮುಂಚಿತವಾಗಿ ಓದಿ ತಯಾರಿ ಮಾಡಬೇಕು. ಅದನ್ನು ಒಬ್ಬರೇ ಅಥವಾ ಕುಟುಂಬವಾಗಿ ಮಾಡಬಹುದು. ಕೊಡಲಾಗಿರುವ ಬೈಬಲ್‌ ವಚನಗಳನ್ನು ತೆರೆದು ಓದಬೇಕು. ಮಾತ್ರವಲ್ಲ ಕೂಟದಲ್ಲಿ ಸ್ವಂತ ಮಾತಲ್ಲಿ ಉತ್ತರಿಸಬೇಕು. ಆಗ ಆ ಬೈಬಲ್‌ ಸತ್ಯವು ನಮ್ಮ ಹೃದಯದಲ್ಲಿ ಬೇರೂರುತ್ತದೆ. ನಮ್ಮ ನಂಬಿಕೆಯನ್ನು ಉತ್ತರಗಳಲ್ಲಿ ವ್ಯಕ್ತಪಡಿಸುವಾಗ ಇತರರು ಪ್ರಯೋಜನ ಪಡೆಯುತ್ತಾರೆ. ಇತರರ ಉತ್ತರಗಳನ್ನು ಕಿವಿಗೊಟ್ಟು ಕೇಳಿದರೆ ನಾವು ಪ್ರಯೋಜನ ಪಡೆಯುತ್ತೇವೆ.

“ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ”

14 ನಾವು ಪ್ರತಿವಾರ ಇನ್ನೊಂದು ಕೂಟಕ್ಕಾಗಿ ಸಹ ಸಭೆಯಾಗಿ ಕೂಡಿಬರುತ್ತೇವೆ. ಅದರ ಹೆಸರು “ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ.” ಈ ಕೂಟದಲ್ಲಿ ಮೂರು ಭಾಗಗಳಿರುತ್ತವೆ. ನಾವು ‘ತಕ್ಕಷ್ಟು ಅರ್ಹರಾಗಿರುವ’ ದೇವಸೇವಕರಾಗಲು ಅವು ನೆರವಾಗುತ್ತವೆ. (2 ಕೊರಿಂ. 3:5, 6) ಕೂಟದ ಶೆಡ್ಯೂಲನ್ನು ಹಾಗೂ ಚರ್ಚಿಸುವ ವಿಷಯಗಳನ್ನು ಪ್ರತಿ ತಿಂಗಳು ಬರುವ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆಕೂಟದ ಕೈಪಿಡಿಯಲ್ಲಿ ಕೊಡಲಾಗಿರುತ್ತದೆ. ಕ್ಷೇತ್ರ ಸೇವೆಗಾಗಿ ಮಾದರಿ ನಿರೂಪಣೆಗಳು ಸಹ ಅದರಲ್ಲಿರುತ್ತವೆ.

15 ಈ ಕೂಟದ ಮೊದಲನೇ ಭಾಗ “ಬೈಬಲಿನಲ್ಲಿರುವ ರತ್ನಗಳು.” ಈ ಭಾಗದಲ್ಲಿ ಬೈಬಲ್‌ ವೃತ್ತಾಂತಗಳ ಹಿನ್ನೆಲೆ, ಪೂರ್ವಾಪರವನ್ನು ತಿಳಿದುಕೊಳ್ಳುತ್ತೇವೆ. ಅವುಗಳಿಂದ ಕಲಿಯುವ ಪಾಠವನ್ನು ನಮ್ಮ ಜೀವನದಲ್ಲಿ ಅನ್ವಯಿಸುವುದು ಹೇಗೆಂದು ತಿಳಿಯುತ್ತೇವೆ. ಈ ಭಾಗದಲ್ಲಿ ಒಂದು ಭಾಷಣ, ಓದುವಿಕೆ ಮತ್ತು ಆ ವಾರದ ಬೈಬಲ್‌ ವಾಚನಭಾಗದ ಮೇಲೆ ಆಧರಿಸಿದ ಚರ್ಚೆ ಇರುತ್ತದೆ. ಬೈಬಲ್‌ ವೃತ್ತಾಂತದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲಿಕ್ಕಾಗಿ ಚಿತ್ರಗಳು ಮತ್ತು ಇತರ ಚಟುವಟಿಕೆಗಳು ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಇರುತ್ತವೆ. ಈ ರೀತಿಯಲ್ಲಿ ಬೈಬಲನ್ನು ಚೆನ್ನಾಗಿ ತಿಳಿದುಕೊಳ್ಳುವುದರಿಂದ ನಮಗೆ ವೈಯಕ್ತಿಕವಾಗಿ ಪ್ರಯೋಜನವಾಗುತ್ತದೆ ಹಾಗೂ ಇತರರಿಗೆ ಕಲಿಸಲು ಸುಲಭವಾಗುತ್ತದೆ. ಹೀಗೆ ನಾವು ‘ಪೂರ್ಣ ಸಮರ್ಥರಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧರಾಗುತ್ತೇವೆ.’—2 ತಿಮೊ. 3:16, 17.

16 ಎರಡನೇ ಭಾಗದ ಹೆಸರು “ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ” ಎಂದಾಗಿದೆ. ಈ ಭಾಗದಲ್ಲಿ ನಮಗೆ ಸೇವೆಯನ್ನು ಚೆನ್ನಾಗಿ ಮಾಡಲು ತರಬೇತಿ ಸಿಗುತ್ತದೆ. ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಹಾಗೂ ಇತರ ಸಾಹಿತ್ಯದಲ್ಲಿ ಇರುವ ಸೇವೆಗೆ ಸಂಬಂಧಿಸಿದ ಲೇಖನಗಳನ್ನು, ವಿಡಿಯೋಗಳನ್ನು ಈ ಭಾಗದಲ್ಲಿ ಚರ್ಚಿಸಲಾಗುತ್ತದೆ. ಸಹೋದರ ಸಹೋದರಿಯರು ನಿರೂಪಣೆಗಳನ್ನು, ಪುನರ್ಭೇಟಿ, ಬೈಬಲ್‌ ಅಧ್ಯಯನ ಮಾಡುವುದನ್ನು ಅಭಿನಯಿಸಿ ತೋರಿಸುತ್ತಾರೆ. ಇದರಿಂದ ನಾವೆಲ್ಲರೂ ಸೇವೆಗೆ ಸಿದ್ಧರಾಗಲು ಆಗುತ್ತದೆ. ಈ ಭಾಗದಿಂದ ನಾವು “ಶಿಕ್ಷಿತರ ನಾಲಿಗೆಯನ್ನು” ಪಡೆದುಕೊಳ್ಳುತ್ತೇವೆ. ಹೀಗೆ “ಬಳಲಿಹೋದವರನ್ನು [ತಕ್ಕ, NW 2013] ಮಾತುಗಳಿಂದ ಸುಧಾರಿಸುವದಕ್ಕೆ” ಸಮರ್ಥರಾಗುತ್ತೇವೆ.—ಯೆಶಾ. 50:4.

17 ಮೂರನೇ ಭಾಗ “ನಮ್ಮ ಕ್ರೈಸ್ತ ಜೀವನ.” ಬೈಬಲ್‌ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಅನ್ವಯಿಸುವುದು ಹೇಗೆಂದು ಈ ಭಾಗದಲ್ಲಿ ಕಲಿಯುತ್ತೇವೆ. (ಕೀರ್ತ. 119:105) ಈ ಭಾಗದಲ್ಲಿರುವ ಮುಖ್ಯ ಕಾರ್ಯಕ್ರಮ ‘ಸಭಾ ಬೈಬಲ್‌ ಅಧ್ಯಯನ.’ ಇದು ಕಾವಲಿನಬುರುಜು ಅಧ್ಯಯನದಂತೆ ಪ್ರಶ್ನೋತ್ತರ ಚರ್ಚೆ. ಪ್ಯಾರಗಳನ್ನು ಓದಿ ಪ್ರಶ್ನೆ ಕೇಳಲಾಗುತ್ತದೆ. ಸಭಿಕರು ಉತ್ತರ ಕೊಡುತ್ತಾರೆ. ವಚನಗಳನ್ನು ಓದಲಾಗುತ್ತದೆ. ಸಮಾಪ್ತಿಯ ಗೀತೆ ಹಾಗೂ ಪ್ರಾರ್ಥನೆಗೆ ಮುಂಚೆ ಕೂಟದ ಅಧ್ಯಕ್ಷನು ಇಡೀ ಕೂಟದ ಸಂಕ್ಷಿಪ್ತ ಅವಲೋಕನ ಮಾಡುತ್ತಾನೆ ಹಾಗೂ ಮುಂದಿನ ವಾರದ ಕೂಟದ ಮುನ್ನೋಟ ಕೊಡುತ್ತಾನೆ.

18ಜೀವನ ಮತ್ತು ಸೇವೆ ಕೂಟದ ಕೈಪಿಡಿ ಪ್ರತಿ ತಿಂಗಳು ಸಿಕ್ಕಿದ ಮೇಲೆ ಹಿರಿಯರ ಮಂಡಲಿಯ ಸಂಯೋಜಕನು ಅಥವಾ ಅವನ ಸಹಾಯಕನು ಅದರಲ್ಲಿ ಯಾವೆಲ್ಲ ಕಾರ್ಯಕ್ರಮವಿದೆಯೆಂದು ಗಮನಿಸಿ ಭಾಗಗಳನ್ನು ಜಾಗ್ರತೆಯಿಂದ ನೇಮಿಸುತ್ತಾನೆ. ‘ಜೀವನ ಮತ್ತು ಸೇವೆ ಕೂಟ’ದ ಮೇಲ್ವಿಚಾರಕನಿಂದಲೂ ಸಂಯೋಜಕನು ಸಲಹೆಗಳನ್ನು ಪಡೆದುಕೊಳ್ಳಬೇಕು. ಒಂದೊಂದು ವಾರವೂ ಕೂಟಕ್ಕೆ ಅಧ್ಯಕ್ಷನಾಗಿ ‘ಜೀವನ ಮತ್ತು ಸೇವೆ ಕೂಟ’ದ ಮೇಲ್ವಿಚಾರಕ ಅಥವಾ ಹಿರಿಯರ ಮಂಡಲಿಯು ಒಪ್ಪಿರುವ ಹಾಗೂ ಬೋಧಿಸಲು ಸಮರ್ಥನಾಗಿರುವ ಹಿರಿಯನೊಬ್ಬನು ಇರಬಹುದು. ಕೂಟವು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಮುಗಿಯುವಂತೆ ನೋಡಿಕೊಳ್ಳುವುದು ಮತ್ತು ವಿದ್ಯಾರ್ಥಿ ನೇಮಕಗಳಿದ್ದವರಿಗೆ ಸಲಹೆ ಕೊಡುವುದು ಈ ಅಧ್ಯಕ್ಷನ ಜವಾಬ್ದಾರಿ.

19 ‘ಜೀವನ ಮತ್ತು ಸೇವೆ ಕೂಟ’ಕ್ಕೆ ನಾವು ಪ್ರತಿವಾರ ಚೆನ್ನಾಗಿ ತಯಾರಿಮಾಡಿ, ಹಾಜರಾಗಿ, ಭಾಗವಹಿಸಬೇಕು. ಆಗ ನಾವು ಬೈಬಲಿನ ಹೆಚ್ಚು ಜ್ಞಾನ ಪಡೆಯುತ್ತೇವೆ, ಬೈಬಲ್‌ ತತ್ವಗಳ ಬಗ್ಗೆ ತಿಳಿವಳಿಕೆ ಹೆಚ್ಚುತ್ತದೆ, ಸುವಾರ್ತೆಯನ್ನು ಹೆಚ್ಚು ಭರವಸೆಯಿಂದ ಸಾರಲು ಆಗುತ್ತದೆ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕೌಶಲ ಪಡೆಯುತ್ತೇವೆ. ದೀಕ್ಷಾಸ್ನಾನ ಪಡೆಯದಿರುವವರು ಸಹ ಈ ಕೂಟಕ್ಕೆ ಹಾಜರಾಗುವುದರಿಂದ ಪ್ರಯೋಜನ ಪಡೆಯುವರು. ಸಹೋದರ-ಸಹೋದರಿಯರ ಪ್ರೀತಿಯ ಸಹವಾಸದಲ್ಲಿ ಆನಂದಿಸುವರು ಮತ್ತು ಕೂಟದ ಕಾರ್ಯಕ್ರಮಗಳಿಂದ ನಂಬಿಕೆಯಲ್ಲಿ ಬಲಗೊಳ್ಳುವರು. ಈ ಕೂಟಕ್ಕೆ ಮತ್ತು ಇತರ ಕೂಟಗಳಿಗೆ ನಾವು ತಯಾರಿ ಮಾಡಲಿಕ್ಕಾಗಿ ವಾಚ್‌ಟವರ್‌ ಲೈಬ್ರರಿ, JW ಲೈಬ್ರರಿ, ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯನ್ನು ಅಥವಾ ರಾಜ್ಯ ಸಭಾಗೃಹದಲ್ಲಿರುವ ಗ್ರಂಥಾಲಯವನ್ನು ಬಳಸಬಹುದು. ಸಂಘಟನೆ ಪ್ರಕಾಶಿಸಿದ ಎಲ್ಲ ಸಾಹಿತ್ಯ ರಾಜ್ಯ ಸಭಾಗೃಹದ ಗ್ರಂಥಾಲಯದಲ್ಲಿರುತ್ತವೆ. ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ ಅಥವಾ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ, ಬೈಬಲಿನ ಬೇರೆಬೇರೆ ಭಾಷಾಂತರಗಳು, ಕನ್‌ಕಾರ್ಡನ್ಸ್‌, ಒಂದು ನಿಘಂಟು ಮತ್ತು ಸಂಶೋಧನೆಗಾಗಿ ಇರುವ ಇತರ ಸಾಹಿತ್ಯಗಳು ಇರುತ್ತವೆ. ಕೂಟಕ್ಕಿಂತ ಮುಂಚೆ ಅಥವಾ ನಂತರ ಯಾರು ಬೇಕಾದರೂ ಈ ಗ್ರಂಥಾಲಯವನ್ನು ಬಳಸಬಹುದು.

ಕ್ಷೇತ್ರ ಸೇವಾ ಕೂಟ

20 ಶನಿವಾರ ಭಾನುವಾರ ಮತ್ತು ಬೇರೆ ದಿನಗಳಂದು ಕ್ಷೇತ್ರ ಸೇವಾ ಕೂಟಗಳು ಇರುತ್ತವೆ. ಹೆಚ್ಚಿನ ಪ್ರದೇಶಗಳಲ್ಲಿ ಸಹೋದರರ ಮನೆಗಳಲ್ಲಿ ಅಥವಾ ಬೇರೆ ಯಾವುದಾದರೂ ಸೂಕ್ತ ಸ್ಥಳದಲ್ಲಿ ಈ ಕೂಟವನ್ನು ನಡೆಸಲಾಗುತ್ತದೆ. ರಾಜ್ಯ ಸಭಾಗೃಹದಲ್ಲಿ ಸಹ ಈ ಕೂಟವನ್ನು ನಡೆಸಬಹುದು. ಪ್ರಚಾರಕರನ್ನು ಗುಂಪುಗುಂಪಾಗಿ ವಿಂಗಡಿಸಿ ಆಯಾ ಗುಂಪಿಗೆ ಹತ್ತಿರವಾಗುವ ಸ್ಥಳದಲ್ಲಿ ಕ್ಷೇತ್ರ ಸೇವಾ ಕೂಟವನ್ನು ನಡೆಸುವುದು ಒಳ್ಳೇದು. ಆಗ ಪ್ರಚಾರಕರಿಗೆ ಆ ಕೂಟಕ್ಕೆ ಹಾಜರಾಗಲು ಮತ್ತು ಅಲ್ಲಿಂದ ಸೇವೆಗೆ ಹೋಗಲು ಸುಲಭವಾಗುತ್ತದೆ. ಮೇಲ್ವಿಚಾರಕರು ಪ್ರಚಾರಕರಿಗೆ ಸಂಗಡಿಗರನ್ನು ನೇಮಿಸಿ ತಡಮಾಡದೆ ಸೇವೆಗೆ ಕಳುಹಿಸಲು ಆಗುತ್ತದೆ. ಗುಂಪು ಚಿಕ್ಕದಿದ್ದರೆ ಗುಂಪು ಮೇಲ್ವಿಚಾರಕನು ಪ್ರತಿಯೊಬ್ಬರಿಗೆ ಗಮನ ಕೊಡಲು ಆಗುತ್ತದೆ. ಆದರೆ ಕೆಲವೊಮ್ಮೆ ಅನೇಕ ಗುಂಪುಗಳು ಜೊತೆಯಾಗಿ ಕ್ಷೇತ್ರ ಸೇವಾ ಕೂಟ ನಡೆಸಬೇಕಾಗಬಹುದು. ಮುಖ್ಯವಾಗಿ ವಾರ ಮಧ್ಯದ ದಿನಗಳಲ್ಲಿ ಕೆಲವೇ ಮಂದಿ ಸೇವೆಗೆ ಬರುವಲ್ಲಿ ಎಲ್ಲ ಗುಂಪುಗಳು ಒಟ್ಟಿಗೆ ರಾಜ್ಯ ಸಭಾಗೃಹದಲ್ಲಿ ಅಥವಾ ಬೇರೆ ಕಡೆಯಲ್ಲಿ ಕೂಡಿಬರಬಹುದು. ಆಗ ಎಲ್ಲರಿಗೂ ಸಂಗಡಿಗರು ಸಿಗುತ್ತಾರೆ. ಇತರ ರಜಾದಿನಗಳಲ್ಲಿ ರಾಜ್ಯ ಸಭಾಗೃಹದಲ್ಲಿ ಕೂಡಿಬರುವುದು ಸೂಕ್ತವಾಗಿದ್ದರೆ ಹಾಗೆ ಮಾಡಬಹುದು. ಭಾನುವಾರ ಕಾವಲಿನಬುರುಜು ಅಧ್ಯಯನದ ನಂತರ ಸಹ ಎಲ್ಲ ಗುಂಪುಗಳಿಗೆ ಒಟ್ಟಾಗಿ ಕ್ಷೇತ್ರ ಸೇವಾ ಕೂಟ ನಡೆಸಬಹುದು.

21 ಕ್ಷೇತ್ರ ಸೇವಾ ಗುಂಪು ಪ್ರತ್ಯೇಕವಾಗಿ ಕೂಡಿಬಂದಾಗ ಗುಂಪಿನ ಮೇಲ್ವಿಚಾರಕನು ಕೂಟವನ್ನು ನಡೆಸಬೇಕು. ಕೆಲವೊಮ್ಮೆ ಕೂಟ ನಡೆಸಲು ಅವನು ಸಹಾಯಕನನ್ನು ಅಥವಾ ಗುಂಪಿನಲ್ಲಿರುವ ಅರ್ಹ ಸಹೋದರನನ್ನು ಕೇಳಿಕೊಳ್ಳಬಹುದು. ಚರ್ಚಿಸಲಿರುವ ವಿಷಯವನ್ನು ಮೊದಲೇ ತಯಾರಿ ಮಾಡಿರಬೇಕು. ದಿನದ ವಚನವನ್ನು ಚರ್ಚಿಸದೆ ಸೇವೆಗೆ ಸಹಾಯವಾಗುವ ವಿಷಯವನ್ನು ಚರ್ಚಿಸಬೇಕು. ಅನಂತರ ಯಾರು ಯಾರೊಂದಿಗೆ, ಯಾವ ಕ್ಷೇತ್ರಕ್ಕೆ ಹೋಗಬೇಕೆಂದು ತಿಳಿಸಬೇಕು. ಕೊನೆಯಲ್ಲಿ ಒಬ್ಬ ಸಹೋದರನು ಪ್ರಾರ್ಥನೆ ಮಾಡಬೇಕು. ಈ ಕೂಟ 5-7 ನಿಮಿಷದೊಳಗೆ ಮುಗಿಯಬೇಕು. ಆದರೆ ಸಭಾ ಕೂಟದ ನಂತರ ನಡೆಸಿದರೆ ಅದಕ್ಕಿಂತ ಕಡಿಮೆ ಸಮಯದಲ್ಲಿ ಮುಗಿಸಬೇಕು. ಈ ಕೂಟದಲ್ಲಿ ಸೇವೆಗೆ ಹೋಗುವವರಿಗೆ ಪ್ರೋತ್ಸಾಹ, ಸೇವೆಗೆ ಸಂಬಂಧಿಸಿದ ಸೂಚನೆಗಳು, ಮಾರ್ಗದರ್ಶನ ನೀಡಬೇಕು. ಹೊಸಬರನ್ನು ಅಥವಾ ಸಹಾಯ ಬೇಕಾದವರನ್ನು ಅನುಭವಸ್ಥರೊಂದಿಗೆ ಸೇವೆಗೆ ಕಳುಹಿಸಬಹುದು. ಇದರಿಂದ ಅವರಿಗೆ ತರಬೇತಿ ಸಿಗುತ್ತದೆ.

ಹೊಸ ಅಥವಾ ಚಿಕ್ಕ ಸಭೆಗಳಲ್ಲಿ ಕೂಟದ ಏರ್ಪಾಡು

22 ಹೆಚ್ಚು ಜನರು ಸತ್ಯಕ್ಕೆ ಬಂದಂತೆ ಸಭೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಹೊಸ ಸಭೆಯನ್ನು ಆರಂಭಿಸಲು ಸಂಚರಣ ಮೇಲ್ವಿಚಾರಕರು ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಕೆಲವು ಕಡೆ ಚಿಕ್ಕ ಗುಂಪುಗಳಿರುತ್ತವೆ. ಅಂಥ ಗುಂಪುಗಳನ್ನು ಹತ್ತಿರದ ಸಭೆಯ ಭಾಗವಾಗಿ ಮಾಡಬಹುದು. ಇದರಿಂದ ಆ ಗುಂಪುಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ.

23 ಸಹೋದರಿಯರು ಮಾತ್ರ ಇರುವ ಚಿಕ್ಕ ಸಭೆಗಳಲ್ಲಿ ಸಹೋದರಿಯರೇ ಕೂಟಗಳನ್ನು ನಡೆಸಬೇಕಾಗುತ್ತದೆ ಮತ್ತು ಪ್ರಾರ್ಥಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಬೈಬಲಿನಲ್ಲಿ ಹೇಳಿರುವಂತೆ ಸಹೋದರಿಯು ಮುಸುಕು ಹಾಕಿಕೊಳ್ಳುವುದು ಅವಶ್ಯ. (1 ಕೊರಿಂ. 11:3-16) ಸಾಧ್ಯವಿರುವಲ್ಲಿ ಸಹೋದರಿಯು ಸಭಿಕರಿಗೆ ಮುಖಮಾಡಿ ಕೂತುಕೊಂಡು ಕೂಟಗಳನ್ನು ನಡೆಸುವುದು ಒಳ್ಳೇದು. ಆದರೆ ಭಾಷಣಗಳನ್ನು ಕೊಡಬಾರದು. ಸಂಘಟನೆ ಕೊಟ್ಟಿರುವ ಮಾಹಿತಿಯನ್ನು ಓದಿ ಅದರ ಬಗ್ಗೆ ಹೇಳಿಕೆಗಳನ್ನು ಕೊಡುವುದು ಯೋಗ್ಯ. ಕೆಲವೊಮ್ಮೆ ಮಾಹಿತಿಯನ್ನು ಚರ್ಚೆ ಅಥವಾ ಅಭಿನಯಗಳ ಮೂಲಕವೂ ಸಾದರಪಡಿಸಬಹುದು. ಇಂಥ ಸಭೆಗಳಲ್ಲಿ ಕೂಟಗಳನ್ನು ಸಂಘಟಿಸಲು ಮತ್ತು ಶಾಖೆಯೊಂದಿಗೆ ಪತ್ರವ್ಯವಹಾರ ಮಾಡಲು ಶಾಖೆಯು ಒಬ್ಬ ಸಹೋದರಿಯನ್ನು ಕೇಳಿಕೊಳ್ಳುತ್ತದೆ. ಮುಂದೆ ಯಾರಾದರೂ ಸಹೋದರರು ಅರ್ಹರಾಗುವಲ್ಲಿ ಅವರು ಈ ಜವಾಬ್ದಾರಿಗಳನ್ನು ನೋಡಿಕೊಳ್ಳಬೇಕು.

ಸಮ್ಮೇಳನಗಳು

24 ಒಂದು ಸಂಚರಣ ವಿಭಾಗದಲ್ಲಿರುವ ಎಲ್ಲ ಸಭೆಗಳವರು ಒಂದು ದಿನದ ಸಮ್ಮೇಳನಕ್ಕಾಗಿ ಕೂಡಿಬರುತ್ತಾರೆ. ವರ್ಷದಲ್ಲಿ ಎರಡು ಬಾರಿ ನಡೆಯುವ ಇಂಥ ಸಮ್ಮೇಳನಗಳು ಹರ್ಷಭರಿತ ಸಂದರ್ಭಗಳು. ಎಲ್ಲರೂ ತಮ್ಮ ‘ಹೃದಯಗಳನ್ನು ವಿಶಾಲ ಮಾಡಿಕೊಂಡು’ ಒಬ್ಬರೊಂದಿಗೊಬ್ಬರು ಸ್ನೇಹದ ಒಡನಾಟ ಮಾಡಲು ಅಲ್ಲಿ ಅವಕಾಶ ಸಿಗುತ್ತದೆ. (2 ಕೊರಿಂ. 6:11-13) ಯೆಹೋವನ ಜನರಿಗೆ ಏನು ಅಗತ್ಯವಿದೆ ಎಂದು ಮನಸ್ಸಿನಲ್ಲಿಟ್ಟು ಸಂಘಟನೆಯು ಈ ಸಮ್ಮೇಳನಕ್ಕೆ ಒಂದು ಬೈಬಲ್‌ ಆಧರಿತ ಮುಖ್ಯವಿಷಯವನ್ನು ಆರಿಸುತ್ತದೆ ಮತ್ತು ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಷಣಗಳು, ಅಭಿನಯಗಳು, ಪುನರಭಿನಯಗಳು, ಸ್ವಗತಗಳು, ಸಂದರ್ಶನಗಳು ಇರುತ್ತವೆ. ಇವು ನಮ್ಮ ನಂಬಿಕೆಯನ್ನು ಹೆಚ್ಚು ಮಾಡುತ್ತವೆ. ಯೆಹೋವನಿಗೆ ಸಮರ್ಪಣೆ ಮಾಡಿಕೊಂಡವರಿಗೆ ದೀಕ್ಷಾಸ್ನಾನ ಪಡೆಯುವ ಏರ್ಪಾಡು ಸಹ ಇರುತ್ತದೆ.

ಪ್ರಾದೇಶಿಕ ಅಧಿವೇಶನಗಳು

25 ಅನೇಕ ಸಂಚರಣ ವಿಭಾಗಗಳಲ್ಲಿರುವ ಬೇರೆ ಬೇರೆ ಸಭೆಗಳವರು ವರ್ಷಕ್ಕೊಮ್ಮೆ ಒಟ್ಟುಸೇರುತ್ತಾರೆ. ಇದಕ್ಕೆ ‘ಪ್ರಾದೇಶಿಕ ಅಧಿವೇಶನ’ ಎಂದು ಹೆಸರು. ಇದು ಮೂರು ದಿನಗಳ ಅಧಿವೇಶನ. ಒಂದು ಶಾಖೆಯ ಕ್ಷೇತ್ರದಲ್ಲಿ ಇಂಥ ಅನೇಕ ಅಧಿವೇಶನಗಳನ್ನು ಏರ್ಪಡಿಸಲಾಗುತ್ತದೆ. ಆದರೆ ಶಾಖೆಯ ಕ್ಷೇತ್ರ ಚಿಕ್ಕದಿದ್ದರೆ ಅಲ್ಲಿರುವ ಎಲ್ಲ ಸಭೆಗಳಿಗಾಗಿ ಒಂದೇ ಅಧಿವೇಶನವನ್ನು ಏರ್ಪಡಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಅಲ್ಲಿನ ಸನ್ನಿವೇಶಗಳಿಂದಾಗಿ ಅಥವಾ ಸಂಘಟನೆ ಕೊಟ್ಟಿರುವ ಮಾರ್ಗದರ್ಶನಕ್ಕೆ ಅನುಸಾರವಾಗಿ ಅಧಿವೇಶನಗಳ ಏರ್ಪಾಡು ಭಿನ್ನವಾಗಿರುತ್ತದೆ. ಕೆಲವೊಂದು ದೇಶಗಳಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಅಥವಾ ವಿಶೇಷ ಅಧಿವೇಶನಗಳನ್ನು ಕೆಲವೊಮ್ಮೆ ಯೋಜಿಸಲಾಗುತ್ತದೆ. ಈ ಅಧಿವೇಶನಗಳಿಗೆ ಬೇರೆ ಬೇರೆ ದೇಶಗಳಿಂದ ಸಾವಿರಾರು ಯೆಹೋವನ ಸಾಕ್ಷಿಗಳು ಬರುತ್ತಾರೆ. ಇಂಥ ದೊಡ್ಡ ಅಧಿವೇಶನಗಳ ಬಗ್ಗೆ ನಾವು ಎಲ್ಲ ಕಡೆಗಳಲ್ಲಿ ಪ್ರಕಟಿಸುವುದರಿಂದ ಎಷ್ಟೋ ಜನರು ಅದಕ್ಕೆ ಹಾಜರಾಗಿ ಸತ್ಯವನ್ನು ಕಲಿತಿದ್ದಾರೆ.

26 ಅಧಿವೇಶನಗಳು ಯೆಹೋವನನ್ನು ಒಟ್ಟಾಗಿ ಆರಾಧಿಸುವ ಸಂತೋಷದ ಸಂದರ್ಭಗಳಾಗಿವೆ. ಇಂಥ ಅಧಿವೇಶನಗಳಲ್ಲಿ ಬೈಬಲ್‌ ಸತ್ಯಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಕೊಡಲಾಗಿದೆ. ಹೊಸ ಸಾಹಿತ್ಯವನ್ನು ಬಿಡುಗಡೆ ಮಾಡಲಾಗುತ್ತದೆ. ಅದು ವೈಯಕ್ತಿಕವಾಗಿ, ಸಭೆಯಾಗಿ ಅಧ್ಯಯನ ಮಾಡುವ ಅಥವಾ ಸೇವೆಯಲ್ಲಿ ಬಳಸುವ ಸಾಹಿತ್ಯವಾಗಿರಬಹುದು. ಹೊಸಬರು ದೀಕ್ಷಾಸ್ನಾನ ಪಡೆದುಕೊಳ್ಳುವುದು ಸಹ ಅಧಿವೇಶನದ ಒಂದು ವಿಶೇಷತೆ. ಯೆಹೋವನಿಗೆ ಆಪ್ತರಾಗಲು ಅಧಿವೇಶನಗಳು ನಮಗೆ ತುಂಬ ಸಹಾಯಮಾಡುತ್ತವೆ. ಯೆಹೋವನ ಜನರು ಬೇರೆ ಬೇರೆ ದೇಶಗಳಲ್ಲಿದ್ದರೂ ಐಕ್ಯರಾಗಿದ್ದಾರೆ ಮತ್ತು ಯೇಸು ಕ್ರಿಸ್ತನ ಶಿಷ್ಯರ ಗುರುತಾಗಿರುವ ಪ್ರೀತಿ ಅವರಲ್ಲಿದೆ ಎನ್ನುವುದಕ್ಕೆ ಈ ಅಧಿವೇಶನಗಳೇ ಸಾಕ್ಷಿ.—ಯೋಹಾ. 13:35.

27 ನಾವು ಕೂಟಗಳಿಗೆ ಮಾತ್ರವಲ್ಲ ಸಮ್ಮೇಳನ, ಅಧಿವೇಶನಗಳಿಗೂ ಹಾಜರಾಗುವುದರಿಂದ ಯೆಹೋವನ ಸೇವೆ ಮಾಡುವ ನಮ್ಮ ಬಯಕೆ ಹೆಚ್ಚಾಗುತ್ತದೆ. ನಮ್ಮ ನಂಬಿಕೆಯನ್ನು ಕಡಿಮೆಗೊಳಿಸುವ ಈ ಲೋಕದ ಪ್ರಭಾವವನ್ನು ಎದುರಿಸಲು ಸಹಾಯ ಸಿಗುತ್ತದೆ. ಮಾತ್ರವಲ್ಲ ನಾವು ಯೆಹೋವನಿಗೆ ಸ್ತುತಿ, ಮಹಿಮೆಯನ್ನು ತರುತ್ತೇವೆ. (ಕೀರ್ತ. 35:18; ಜ್ಞಾನೋ. 14:28) ಈ ಕಡೇ ದಿವಸಗಳಲ್ಲಿ ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸಲು ಇಂಥ ಏರ್ಪಾಡು ಮಾಡಿರುವುದಕ್ಕೆ ಯೆಹೋವನಿಗೆ ನಾವು ಎಷ್ಟೊಂದು ಕೃತಜ್ಞರಾಗಿರಬೇಕಲ್ಲವೇ?

ಕ್ರಿಸ್ತನ ಮರಣದ ಸ್ಮರಣೆ

28 ಲೋಕದೆಲ್ಲೆಡೆ ಯೆಹೋವನ ಸಾಕ್ಷಿಗಳು ಪ್ರತಿವರ್ಷ ಯೇಸುವಿನ ಮರಣವನ್ನು ಸ್ಮರಿಸುತ್ತಾರೆ. ಅದಕ್ಕೆ ‘ಕ್ರಿಸ್ತನ ಮರಣದ ಸ್ಮರಣೆ’ ಎಂದು ಹೆಸರು. ‘ಕರ್ತನ ಸಂಧ್ಯಾ ಭೋಜನ’ ಎಂಬ ಹೆಸರೂ ಅದಕ್ಕಿದೆ. (1 ಕೊರಿಂ. 11:20, 23, 24) ಇದು ನಮಗೆ ಇಡೀ ವರ್ಷದಲ್ಲೇ ಅತ್ಯಂತ ಪ್ರಾಮುಖ್ಯ ಕೂಟ. ಕ್ರಿಸ್ತನ ಮರಣವನ್ನು ಸ್ಮರಿಸಬೇಕೆಂಬ ಆಜ್ಞೆ ಬೈಬಲಿನಲ್ಲಿದೆ.—ಲೂಕ 22:19.

29 ಇಸ್ರಾಯೇಲ್ಯರು ಪಸ್ಕವನ್ನು ಆಚರಿಸುತ್ತಿದ್ದ ತಾರೀಖು ಮತ್ತು ಕ್ರಿಸ್ತನ ಮರಣದ ಸ್ಮರಣೆಯ ತಾರೀಖು ಒಂದೇ. ಆ ನಿರ್ದಿಷ್ಟ ತಾರೀಖನ್ನು ಬೈಬಲಿನಲ್ಲಿ ತಿಳಿಸಲಾಗಿದೆ. (ವಿಮೋ. 12:2, 6; ಮತ್ತಾ. 26:17, 20, 26) ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾಗಿ ಬಂದ ದಿನ ಅದು. ಚಂದ್ರಮಾನ ಕ್ಯಾಲೆಂಡರಿನ ಪ್ರಕಾರ ಕ್ರಿ.ಪೂ. 1513ರ ಮೊದಲನೇ ತಿಂಗಳಿನ 14ನೇ ದಿನದಂದು ಇಸ್ರಾಯೇಲ್ಯರು ಪಸ್ಕದ ಕುರಿಯನ್ನು ತಿಂದು ಐಗುಪ್ತದಿಂದ ಹೊರಟುಬರುವಂತೆ ಯೆಹೋವನು ಆಜ್ಞಾಪಿಸಿದನು. (ವಿಮೋ. 12:1-51) ಈ ಬಿಡುಗಡೆಯನ್ನು ಸ್ಮರಿಸಲಿಕ್ಕಾಗಿ ಪ್ರತಿವರ್ಷ ಅದೇ ದಿನದಂದು ಅವರು ಪಸ್ಕವನ್ನು ಆಚರಿಸುತ್ತಿದ್ದರು. ಈ ತಾರೀಖನ್ನು ಇಸ್ರಾಯೇಲ್ಯರು ಹೇಗೆ ಲೆಕ್ಕಿಸುತ್ತಿದ್ದರು? ಯೆರೂಸಲೇಮಿನಲ್ಲಿ ಮೇಷ ಸಂಕ್ರಾಂತಿಗೆ ನಂತರ ಮೊತ್ತಮೊದಲು ಚಂದ್ರನು ಕಾಣಿಸಿದ ದಿನದಿಂದ 13 ದಿನಗಳನ್ನು ಲೆಕ್ಕಿಸುತ್ತಿದ್ದರು. ಅದು ನೈಸಾನ್‌ 14ನೇ ತಾರೀಖಿಗೆ ಬರುತ್ತಿತ್ತು. ಆ ತಾರೀಖಿನಂದು ಪಸ್ಕವನ್ನು ಆಚರಿಸುತ್ತಿದ್ದರು. ಹಾಗಾಗಿ ನಾವು ಮೇಷ ಸಂಕ್ರಾಂತಿಯ ನಂತರ ಬರುವ ಮೊದಲ ಹುಣ್ಣಿಮೆಯಂದು ಕ್ರಿಸ್ತನ ಮರಣವನ್ನು ಸ್ಮರಿಸುತ್ತೇವೆ.

30 ಇದನ್ನು ಹೇಗೆ ಆಚರಿಸಬೇಕೆಂದು ಮತ್ತಾಯ 26:26-28 ರಲ್ಲಿರುವ ಯೇಸುವಿನ ಮಾತುಗಳಿಂದ ಗೊತ್ತಾಗುತ್ತದೆ. ಅನೇಕರು ನೆನಸುವ ಹಾಗೆ ಈ ಆಚರಣೆಯಲ್ಲಿ ಬಳಸುವ ರೊಟ್ಟಿ ದ್ರಾಕ್ಷಾಮದ್ಯವು ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಗುವುದಿಲ್ಲ. ಅವು ಆತನ ದೇಹ ಮತ್ತು ರಕ್ತವನ್ನು ಸೂಚಿಸುತ್ತವಷ್ಟೇ. ಯೇಸು ಕ್ರಿಸ್ತನೊಂದಿಗೆ ಸ್ವರ್ಗದ ರಾಜ್ಯದಲ್ಲಿ ಜೊತೆರಾಜರಾಗಿ ಆಳಲಿರುವವರು ರೊಟ್ಟಿ ದ್ರಾಕ್ಷಾಮದ್ಯವನ್ನು ಸೇವಿಸುತ್ತಾರೆ. (ಲೂಕ 22:28-30) ಇತರ ಎಲ್ಲ ಸಮರ್ಪಿತ ಕ್ರೈಸ್ತರಿಗೂ ಆಸಕ್ತ ಜನರಿಗೂ ಈ ಆಚರಣೆಗೆ ಹಾಜರಾಗಲು ಆಮಂತ್ರಣವಿದೆ. ಆದರೆ ಅವರು ಕೇವಲ ಪ್ರೇಕ್ಷಕರಾಗಿರುತ್ತಾರೆ. ಹೀಗೆ ಅವರು, ಯೇಸು ಕ್ರಿಸ್ತನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟದ್ದಕ್ಕಾಗಿ ಯೆಹೋವನಿಗೆ ಕೃತಜ್ಞತೆ ತೋರಿಸುತ್ತಾರೆ. ಬೈಬಲಿನ ಜ್ಞಾನ ಪಡೆಯುವಂತೆ ಆಸಕ್ತರನ್ನು ಇನ್ನೂ ಹೆಚ್ಚು ಪ್ರಚೋದಿಸಲು ಸ್ಮರಣೆಯ ಮುಂದಿನ ವಾರ ಅಥವಾ ನಂತರದ ವಾರದಲ್ಲಿ ಒಂದು ವಿಶೇಷ ಭಾಷಣ ಇರುತ್ತದೆ.

31 ಯೆಹೋವನ ಜನರಾದ ನಾವು ಒಟ್ಟಾಗಿ ಕೂಡಿಬರಲು ಸಂತೋಷಪಡುತ್ತೇವೆ, ಅದಕ್ಕಾಗಿ ಎದುರುನೋಡುತ್ತೇವೆ. ಅಲ್ಲಿ ‘ನಾವು ಪರಸ್ಪರ ಹಿತಚಿಂತನೆ ತೋರಿಸುತ್ತೇವೆ, ಪ್ರೀತಿಸಲು ಸತ್ಕಾರ್ಯಗಳನ್ನು ಮಾಡಲು ಒಬ್ಬರನ್ನೊಬ್ಬರು ಪ್ರೇರೇಪಿಸುತ್ತೇವೆ.’ (ಇಬ್ರಿ. 10:24) ನಮಗೆ ಆಧ್ಯಾತ್ಮಿಕವಾಗಿ ಏನು ಅಗತ್ಯವಿದೆಯೆಂದು ನಂಬಿಗಸ್ತ ಆಳಿಗೆ ಚೆನ್ನಾಗಿ ಗೊತ್ತಿದೆ ಮತ್ತು ಅದನ್ನು ಒದಗಿಸುತ್ತದೆ. ಅಲ್ಲದೆ, ಯೆಹೋವನ ಸೇವಕರೂ ಆಸಕ್ತ ಜನರೂ ಇಂಥ ಕೂಟಗಳಿಗೆ ಕ್ರಮವಾಗಿ ಹಾಜರಾಗಿ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರೋತ್ಸಾಹಿಸುತ್ತದೆ. ಯೆಹೋವನು ತನ್ನ ಸಂಘಟನೆಯ ಮೂಲಕ ಈ ಎಲ್ಲ ಏರ್ಪಾಡುಗಳನ್ನು ಮಾಡಿರುವುದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು? ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕವೇ. ಇದು ನಾವು ಐಕ್ಯವಾಗಿರಲು ನೆರವಾಗುತ್ತದೆ. ಮಾತ್ರವಲ್ಲ ಯೆಹೋವನಿಗೆ ಸ್ತುತಿ, ಮಹಿಮೆಯನ್ನು ತರುತ್ತದೆ.—ಕೀರ್ತ. 111:1.