ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳಲಾಗುವ ಪ್ರಶ್ನೆಗಳು

ಭಾಗ 3 ಯೆಹೋವನ ಏರ್ಪಾಡುಗಳಿಗೆ ವಿಧೇಯತೆ

ಭಾಗ 3 ಯೆಹೋವನ ಏರ್ಪಾಡುಗಳಿಗೆ ವಿಧೇಯತೆ

ಮಾನವಕುಲದ ಆರಂಭದಲ್ಲಿದ್ದಂತೆಯೇ ಎಲ್ಲವು ಮತ್ತೆ ತನ್ನ ಅಧೀನದಲ್ಲಿ ಬರುವಂತೆ ಮಾಡುವುದೇ ಯೆಹೋವನ ಉದ್ದೇಶವಾಗಿದೆ. ಈ ಉದ್ದೇಶದ ಬಗ್ಗೆ ನೀವು ಬೈಬಲ್‌ ಅಧ್ಯಯನದಲ್ಲಿ ಕಲಿತಿರಿ. (1 ಕೊರಿಂ. 15:24-28; ಎಫೆ. 1:8-10) ಇದನ್ನು ಕಲಿತ ಮೇಲೆ ಯೆಹೋವನು ತನ್ನ ಆರಾಧನೆಗಾಗಿ ಮಾಡಿರುವ ಏರ್ಪಾಡಿನಲ್ಲಿ ನಿಮ್ಮ ಜವಾಬ್ದಾರಿಯೇನೆಂದು ತಿಳಿಯಲು, ಆತನ ಆಳ್ವಿಕೆಗೆ ಅಧೀನರಾಗಿರಲು ಕಾತರದಿಂದ ಕಾಯುತ್ತಿದ್ದೀರಿ. ಕೆಲವು ಪ್ರಶ್ನೆಗಳು ಮತ್ತು ಬೈಬಲ್‌ ವಚನಗಳನ್ನು ಮುಂದೆ ಕೊಡಲಾಗಿದೆ. ಅವು ಸಭೆಯಲ್ಲಿ, ಕುಟುಂಬದಲ್ಲಿ, ಈ ಲೋಕದಲ್ಲಿರುವ ಅಧಿಕಾರಿಗಳ ಸಂಬಂಧದಲ್ಲಿ ಯೆಹೋವನು ಮಾಡಿರುವ ಏರ್ಪಾಡಿಗೆ ಅಧೀನರಾಗುವುದರ ಕುರಿತು ನಿಮಗೆಷ್ಟು ತಿಳಿವಳಿಕೆ ಇದೆಯೆಂದು ಪರೀಕ್ಷಿಸಿಕೊಳ್ಳಲು ನಿಮಗೆ ಸಹಾಯಮಾಡುತ್ತವೆ. ಇದರಿಂದ ಯೆಹೋವನು ತನ್ನ ಜನರಿಗೆ ಕಲಿಸಲು ಮತ್ತು ನಂಬಿಕೆಯನ್ನು ಬಲಗೊಳಿಸಲು ಮಾಡಿರುವ ಏರ್ಪಾಡುಗಳ ಕಡೆಗೆ ನಿಮ್ಮ ಗೌರವ ಹೆಚ್ಚಾಗುತ್ತದೆ. ಕ್ರೈಸ್ತ ಕೂಟಗಳು ಕೂಡ ಅಂಥದ್ದೇ ಒಂದು ಏರ್ಪಾಡಾಗಿದೆ. ಇವುಗಳಿಗೆ ನೀವು ಹಾಜರಾಗಿ ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಅದರಲ್ಲಿ ಭಾಗವಹಿಸಲು ಪ್ರಯತ್ನಿಸಬೇಕು.

ನೀವು ಯೆಹೋವನ ಬಗ್ಗೆ ಮತ್ತು ಆತನು ಮನುಷ್ಯರಿಗಾಗಿ ಏನೆಲ್ಲ ಮಾಡುತ್ತಿದ್ದಾನೆ ಎನ್ನುವುದರ ಬಗ್ಗೆ ಇತರರಿಗೆ ತಿಳಿಸುವುದನ್ನು ನಿಲ್ಲಿಸದಿರುವುದು ಎಷ್ಟು ಪ್ರಾಮುಖ್ಯ ಎನ್ನುವುದನ್ನು ತಿಳಿದುಕೊಳ್ಳಲು ಈ ಭಾಗ ನಿಮಗೆ ಸಹಾಯಮಾಡುತ್ತದೆ. (ಮತ್ತಾ. 24:14; 28:19, 20) ಮಾತ್ರವಲ್ಲ, ನೀವು ಯೆಹೋವ ದೇವರಿಗೆ ಮಾಡಿಕೊಂಡಿರುವ ಸಮರ್ಪಣೆ ಮತ್ತು ಪಡೆಯಲಿರುವ ದೀಕ್ಷಾಸ್ನಾನ ಎಷ್ಟು ಗಂಭೀರವಾದದ್ದು ಎನ್ನುವುದನ್ನು ಮನಗಾಣಿಸುತ್ತದೆ. ನಿಮಗೆ ಯೆಹೋವನು ತೋರಿಸಿರುವ ಅಪಾತ್ರ ದಯೆಯನ್ನು ನೀವು ಮನಃಪೂರ್ವಕವಾಗಿ ಸ್ವೀಕರಿಸಿರುವುದಕ್ಕೆ ಆತನಿಗೆ ನಿಜಕ್ಕೂ ಸಂತೋಷವಾಗಿದೆ ಎನ್ನುವ ಖಾತ್ರಿ ನಿಮಗಿರಲಿ.

1. ದೇವರು ಮಾಡಿರುವ ವಿವಾಹದ ಏರ್ಪಾಡಿನಲ್ಲಿ ಹೆಂಡತಿಗೆ ಶಿರಸ್ಸು ಯಾರು?

“ಹೆಂಡತಿಯರೇ, ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಯೋಗ್ಯವಾದದ್ದಾಗಿದೆ.”—ಕೊಲೊ. 3:18.

“ಕರ್ತನಿಗೆ ಹೇಗೋ ಹಾಗೆಯೇ ಹೆಂಡತಿಯರು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಲಿ, ಏಕೆಂದರೆ ಕ್ರಿಸ್ತನು ಸಭೆಯೆಂಬ ದೇಹದ ರಕ್ಷಕನಾಗಿದ್ದು ಅದರ ಶಿರಸ್ಸಾಗಿರುವಂತೆಯೇ ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ.”—ಎಫೆ. 5:22, 23.

2. ಗಂಡನು ಹೆಂಡತಿಯ ಮೇಲೆ ತನಗಿರುವ ಅಧಿಕಾರವನ್ನು ಹೇಗೆ ಉಪಯೋಗಿಸಬೇಕು?

“ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ; ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ; ಕ್ರಿಸ್ತನು ಸಹ ಸಭೆಯನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆ. 5:28, 29.

“ಗಂಡಂದಿರೇ, ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ.”—ಕೊಲೊ. 3:19.

3. ಗಂಡ ಸತ್ಯದಲ್ಲಿಲ್ಲದಿದ್ದರೆ ಕ್ರೈಸ್ತ ಹೆಂಡತಿ ಅವನಿಗೆ ಅಧೀನಳಾಗಿರಬೇಕಾ?

“ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.”—1 ಪೇತ್ರ 3:1, 2.

4. ಮಕ್ಕಳಿಗೆ ಶಿಸ್ತು, ತರಬೇತಿ ಕೊಡುವ ಜವಾಬ್ದಾರಿಯನ್ನು ಮುಖ್ಯವಾಗಿ ದೇವರು ಯಾರಿಗೆ ವಹಿಸಿದ್ದಾನೆ?

“ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.”—ಎಫೆ. 6:4.

“ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.”—ಜ್ಞಾನೋ. 1:8.

5. ಕುಟುಂಬದ ಏರ್ಪಾಡಿನಲ್ಲಿ ಮಕ್ಕಳಿಗೆ ಯಾವ ಜವಾಬ್ದಾರಿ ಇದೆ?

“ಮಕ್ಕಳೇ, ಕರ್ತನೊಂದಿಗೆ ಐಕ್ಯದಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ನೀತಿಯಾಗಿದೆ. ವಾಗ್ದಾನಸಹಿತವಾದ ಮೊದಲ ಆಜ್ಞೆಯೇನೆಂದರೆ, ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸು. ಸನ್ಮಾನಿಸಿದರೆ ನಿನಗೆ ಮೇಲಾಗುವುದು ಮತ್ತು ನೀನು ಭೂಮಿಯ ಮೇಲೆ ಬಹುಕಾಲ ಬಾಳುವಿ.’”—ಎಫೆ. 6:1-3.

“ಮಕ್ಕಳೇ, ಎಲ್ಲ ವಿಷಯಗಳಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಬಹು ಮೆಚ್ಚಿಕೆಯಾದದ್ದಾಗಿದೆ.”—ಕೊಲೊ. 3:20.

6. ಕ್ರೈಸ್ತರಿಗೆ ಲೋಕದ ಅಧಿಕಾರಿಗಳ ಬಗ್ಗೆ ಯಾವ ಮನೋಭಾವ ಇರಬೇಕು?

“ಪ್ರತಿಯೊಬ್ಬನು ಮೇಲಧಿಕಾರಿಗಳಿಗೆ ಅಧೀನನಾಗಿರಲಿ; ಏಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವುದಿಲ್ಲ; ಇರುವ ಅಧಿಕಾರಿಗಳು ತಮ್ಮ ಸಾಪೇಕ್ಷ ಸ್ಥಾನಗಳಲ್ಲಿ ದೇವರಿಂದ ಇರಿಸಲ್ಪಟ್ಟಿದ್ದಾರೆ.”—ರೋಮ. 13:1.

‘ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಬೇಕು.’—ತೀತ 3:1.

7. ಕಾನೂನು ಕೇಳುವ ಎಲ್ಲ ತೆರಿಗೆ ಮತ್ತು ಶುಲ್ಕಗಳನ್ನು ಕ್ರೈಸ್ತರು ಕಟ್ಟಬೇಕು ಏಕೆ?

“ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು, ಯಾರಿಗೆ ಭಯವೋ ಅವರಿಗೆ ಅಂಥ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಅಂಥ ಮರ್ಯಾದೆಯನ್ನು ಸಲ್ಲಿಸಿರಿ.”—ರೋಮ. 13:7.

ಇದನ್ನೂ ನೋಡಿ: ಲೂಕ 20:21-25

8. ಕ್ರೈಸ್ತರು ಲೋಕದ ಅಧಿಕಾರಿಗಳಿಗೆ ವಿಧೇಯತೆ ತೋರಿಸಬಾರದ ಸಂದರ್ಭಗಳು ಇವೆಯಾ?

“ಅವರನ್ನು ಕರೆದು, ಎಲ್ಲಿಯೂ ಯೇಸುವಿನ ಹೆಸರಿನ ಆಧಾರದ ಮೇಲೆ ಮಾತಾಡಲೂಬಾರದು ಬೋಧಿಸಲೂಬಾರದು ಎಂದು ಖಂಡಿತವಾಗಿ ಆಜ್ಞಾಪಿಸಿದರು. ಇದಕ್ಕೆ ಉತ್ತರವಾಗಿ ಪೇತ್ರ ಯೋಹಾನರು ಅವರಿಗೆ, ‘ದೇವರಿಗೆ ಬದಲಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ನ್ಯಾಯವಾಗಿದೆಯೋ ಎಂಬುದನ್ನು ನೀವೇ ತೀರ್ಪುಮಾಡಿಕೊಳ್ಳಿರಿ. ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು’ ಎಂದು ಹೇಳಿದರು.”—ಅ. ಕಾ. 4:18-20.

“ಪೇತ್ರನೂ ಇತರ ಅಪೊಸ್ತಲರೂ, ‘ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ’” ಎಂದು ಹೇಳಿದರು.—ಅ. ಕಾ. 5:29.

9. ಬೈಬಲ್‌ ತತ್ವಗಳಿಗೆ ವಿರುದ್ಧವಾಗಿರದ ಕಾನೂನು ನಿಯಮಗಳಿಗೆ ಕ್ರೈಸ್ತರು ವಿಧೇಯರಾಗಬೇಕಾ? ಉದಾಹರಣೆಗೆ: ಮದುವೆ ರಿಜಿಸ್ಟರ್‌ ಮಾಡುವುದು, ಜನನದ ನೋಂದಣಿ ಮಾಡಿಸುವುದು, ಜನಗಣತಿಗೆ ಹೆಸರು ಕೊಡುವುದು, ಲೈಸೆನ್ಸ್‌ ಮತ್ತು ಪರವಾನಗಿ ಪಡೆಯುವುದು ಇತ್ಯಾದಿ.

‘ಆ ದಿನಗಳಲ್ಲಿ ಇಡೀ ನಿವಾಸಿತ ಭೂಮಿಯು ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಆಜ್ಞೆಯು ಹೊರಡಿಸಲ್ಪಟ್ಟಿತು; ಯೋಸೇಫನು ಸಹ ಗಲಿಲಾಯದಿಂದ ಹೊರಟು ತನ್ನ ಪತ್ನಿಯಾಗಿದ್ದ ಮರಿಯಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಲಿಕ್ಕಾಗಿ ಹೋದನು.’—ಲೂಕ 2:1-5.

‘ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಬೇಕು.’—ತೀತ 3:1.

10. ಮುಂದಾಳತ್ವ ವಹಿಸಲು ಯೆಹೋವನು ಯಾವ ಏರ್ಪಾಡನ್ನು ಮಾಡಿದ್ದಾನೆ?

“ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ.”—1 ಕೊರಿಂ. 11:3.

11. ಕ್ರೈಸ್ತ ಸಭೆಯ ನಾಯಕನು ಯಾರು?

“[ಕ್ರಿಸ್ತನು] ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ ಆಗಿದ್ದಾನೆ. ಏಕೆಂದರೆ ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು, ಅವು ಸಿಂಹಾಸನಗಳಾಗಿರಲಿ ಪ್ರಭುತ್ವಗಳಾಗಿರಲಿ ಸರಕಾರಗಳಾಗಿರಲಿ ಅಧಿಕಾರಗಳಾಗಿರಲಿ ಎಲ್ಲವೂ ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು. ಇದಲ್ಲದೆ ಅವನು ಇತರ ಎಲ್ಲವುಗಳಿಗಿಂತ ಮೊದಲು ಇದ್ದವನು ಮತ್ತು ಅವನ ಮೂಲಕವಾಗಿಯೇ ಎಲ್ಲವೂ ಅಸ್ತಿತ್ವಕ್ಕೆ ತರಲ್ಪಟ್ಟಿತು. ಅವನು ಸಭೆಯೆಂಬ ದೇಹಕ್ಕೆ ಶಿರಸ್ಸಾಗಿದ್ದಾನೆ.”—ಕೊಲೊ. 1:15-18.

12. ಆಡಳಿತ ಮಂಡಲಿ ಇಂದು ಯಾವ ಕೆಲಸವನ್ನು ಮಾಡುತ್ತಿದೆ?

“ಯೂದಾಯದಿಂದ ಕೆಲವರು ಬಂದು, ‘ಮೋಶೆಯ ಪದ್ಧತಿಗನುಸಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನೀವು ರಕ್ಷಣೆಯನ್ನು ಹೊಂದಲಾರಿರಿ’ ಎಂದು ಸಹೋದರರಿಗೆ ಬೋಧಿಸಲಾರಂಭಿಸಿದರು. ಆಗ ಅವರೊಂದಿಗೆ ಪೌಲ ಬಾರ್ನಬರಿಗೆ ಮಹಾ ಭಿನ್ನಾಭಿಪ್ರಾಯ ಮತ್ತು ವಾಗ್ವಾದ ನಡೆದುದರಿಂದ ಅವರು ಈ ವಾಗ್ವಾದದ ಕುರಿತು ತಿಳಿಸಲಿಕ್ಕಾಗಿ ಪೌಲ ಬಾರ್ನಬರೂ ತಮ್ಮಲ್ಲಿ ಬೇರೆ ಕೆಲವರೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರೀಪುರುಷರ ಬಳಿಗೆ ಹೋಗುವಂತೆ ಏರ್ಪಡಿಸಿದರು.”—ಅ. ಕಾ. 15:1, 2.

“ಅವರು ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರೀಪುರುಷರೂ ತೀರ್ಮಾನಿಸಿದ ನಿಯಮಗಳನ್ನು ಪಾಲಿಸುವಂತೆ ಆ ಜನರಿಗೆ ತಿಳಿಯಪಡಿಸಿದರು. ಆದುದರಿಂದ ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.”—ಅ. ಕಾ. 16:4, 5.

“ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು? ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು! ಅವನು ಆ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.”—ಮತ್ತಾ. 24:45-47.

13. ಸಭೆಯಲ್ಲಿ ಕ್ರಿಸ್ತನು ಯಾರ ಮೂಲಕ ನಾಯಕತ್ವ ವಹಿಸುತ್ತಾನೆ?

“ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ.”—ಅ. ಕಾ. 20:28.

“ನಾನು ನಿಮ್ಮಲ್ಲಿರುವ ಹಿರೀಪುರುಷರಿಗೆ ಈ ಬುದ್ಧಿವಾದವನ್ನು ಕೊಡುತ್ತೇನೆ . . . ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ. ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.”—1 ಪೇತ್ರ 5:1-3.

14. ಕ್ರಿಸ್ತನ ನಾಯಕತ್ವಕ್ಕೆ ಸಭೆಯಲ್ಲಿರುವ ಎಲ್ಲರು ಹೇಗೆ ಅಧೀನತೆ ತೋರಿಸಬೇಕು?

“ದೇವರ ವಾಕ್ಯದ ಕುರಿತು ನಿಮಗೆ ತಿಳಿಸಿ ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ ಮತ್ತು ಅವರ ನಡತೆಯ ಪರಿಣಾಮವನ್ನು ಅವಲೋಕಿಸುವಾಗ ಅವರ ನಂಬಿಕೆಯನ್ನು ಅನುಕರಿಸಿರಿ.”—ಇಬ್ರಿ. 13:7.

“ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.”—ಇಬ್ರಿ. 13:17.

15. ಬೈಬಲಿನಲ್ಲಿ ಯಾರ ಆಲೋಚನೆಗಳಿವೆ? ನೀವು ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡಬೇಕು ಮತ್ತು ಪ್ರತಿವಾರ ಕುಟುಂಬ ಆರಾಧನೆಗಾಗಿ ಸಮಯ ಮಾಡಿಕೊಳ್ಳಬೇಕು ಏಕೆ?

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ. ಇದರಿಂದಾಗಿ ದೇವರ ಮನುಷ್ಯನು ಪೂರ್ಣ ಸಮರ್ಥನಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧನಾಗುವನು.”—2 ತಿಮೊ. 3:16, 17.

“[ಯಾವನು] ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತ. 1:2, 3.

ಇದನ್ನೂ ನೋಡಿ: ಧರ್ಮೋ. 17:18-20; ಜ್ಞಾನೋ. 2:1-6; 1 ಥೆಸ. 2:13.

16. ಸಭೆಯು ಏರ್ಪಡಿಸುವ ಕೂಟಗಳಿಗೆ ಹಾಜರಾಗುವುದು ಪ್ರಾಮುಖ್ಯವೇಕೆ? ಕೂಟಗಳಿಗೆ ಹಾಜರಾಗಲು ನೀವು ಯಾವ ಪ್ರಯತ್ನ ಹಾಕುತ್ತಿದ್ದೀರಿ?

“ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು.”—ಕೀರ್ತ. 26:12.

“ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.”—ಇಬ್ರಿ. 10:24, 25.

ಇದನ್ನೂ ನೋಡಿ: ಕೀರ್ತ. 35:18; 149:1.

17. ಕೂಟಗಳಲ್ಲಿ ನಿಮ್ಮಿಂದಾದಷ್ಟು ಭಾಗವಹಿಸಲು ಪ್ರಯತ್ನಿಸಬೇಕು ಏಕೆ?

“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.”—ಕೀರ್ತ. 22:22.

“ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.”—ಜ್ಞಾನೋ. 27:17.

“ನಾವು ದೇವರಿಗೆ ಯಾವಾಗಲೂ, ಆತನ ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು ಅರ್ಪಿಸೋಣ.”—ಇಬ್ರಿ. 13:15.

18. ದೇವರಲ್ಲಿ ನಮಗಿರುವ ನಂಬಿಕೆಯನ್ನು ಕಾರ್ಯಗಳಲ್ಲಿ ಏಕೆ ತೋರಿಸಬೇಕು?

“ನಂಬಿಕೆಯಲ್ಲಿ ಕ್ರಿಯೆಗಳಿಲ್ಲದಿದ್ದರೆ ಅದು ಸತ್ತದ್ದೇ ಆಗಿದೆ. ಆದರೂ ಒಬ್ಬನು, ‘ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ. ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸು, ನಾನು ನನ್ನ ಕ್ರಿಯೆಗಳ ಮೂಲಕ ನನ್ನ ನಂಬಿಕೆಯನ್ನು ತೋರಿಸುತ್ತೇನೆ’ ಎಂದು ಹೇಳುವನು. ಜೀವವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯು ಸಹ ಸತ್ತದ್ದಾಗಿದೆ.”—ಯಾಕೋ. 2:17, 18, 26.

19. ಕ್ರೈಸ್ತರೆಲ್ಲರೂ ತುರ್ತಿನಿಂದ ಮಾಡಬೇಕಾದ ಕೆಲಸ ಯಾವುದು?

“ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾ. 24:14.

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.”—ಮತ್ತಾ. 28:19,20.

20. ದೇವರ ರಾಜ್ಯದ ಸುವಾರ್ತೆಯನ್ನು ನಾವು ಯಾರಿಗೆಲ್ಲ ತಿಳಿಸಬೇಕು?

“ನಾನು ನಿಮಗೆ ಪ್ರಯೋಜನಕರವಾದ ಯಾವುದೇ ವಿಷಯಗಳನ್ನು ಹೇಳಲು ಅಥವಾ ಸಾರ್ವಜನಿಕವಾಗಿಯೂ ಮನೆಮನೆಯಲ್ಲಿಯೂ ನಿಮಗೆ ಬೋಧಿಸಲು ಹಿಂಜರಿಯಲಿಲ್ಲ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಂತೆ ಮತ್ತು ನಮ್ಮ ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡುವಂತೆ ನಾನು ಯೆಹೂದ್ಯರಿಗೂ ಗ್ರೀಕರಿಗೂ ಕೂಲಂಕಷವಾಗಿ ಸಾಕ್ಷಿನೀಡಿದ್ದೇನೆ.”—ಅ. ಕಾ. 20:20, 21.

“ಅವನು . . . ಪ್ರತಿದಿನ ಪೇಟೆಯಲ್ಲಿ ಸಿಗುತ್ತಿದ್ದ ಜನರೊಂದಿಗೂ ತರ್ಕಿಸಲಾರಂಭಿಸಿದನು.”—ಅ. ಕಾ. 17:17.

21. ಸುವಾರ್ತೆ ಸಾರುವ ಜವಾಬ್ದಾರಿಯನ್ನು ನಾವೇಕೆ ಗಂಭೀರವಾಗಿ ತಕ್ಕೊಳ್ಳಬೇಕು?

“ನಾನು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧನಾಗಿದ್ದೇನೆ ಎಂದು ಇಂದೇ ನಿಮ್ಮಿಂದ ಪ್ರಮಾಣವನ್ನು ಕೋರುತ್ತೇನೆ. ಏಕೆಂದರೆ ನಾನು ದೇವರ ಸಂಕಲ್ಪವನ್ನೆಲ್ಲ ನಿಮಗೆ ತಿಳಿಯಪಡಿಸಲು ಸ್ವಲ್ಪವೂ ಹಿಂಜರಿಯಲಿಲ್ಲ.”—ಅ. ಕಾ. 20:26, 27.

“ನಾನು ಸುವಾರ್ತೆಯನ್ನು ಸಾರುತ್ತಿರುವುದಾದರೆ ಹೊಗಳಿಕೊಳ್ಳಲು ನನಗೆ ಆಸ್ಪದವಿಲ್ಲ; ಏಕೆಂದರೆ ಅದನ್ನು ಸಾರಲೇಬೇಕಾದ ಆವಶ್ಯಕತೆ ನನಗುಂಟು. ವಾಸ್ತವದಲ್ಲಿ ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!”—1 ಕೊರಿಂ. 9:16.

22. ದೇವರ ಸೇವೆಗೆ ನಾವು ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡಬಹುದು?

“ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು. ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿ ತುಳುಕುವದು.”—ಜ್ಞಾನೋ. 3:9, 10.

“ಯಾರು ಸ್ವಲ್ಪವಾಗಿ ಬಿತ್ತುತ್ತಾನೋ ಅವನು ಸ್ವಲ್ಪವಾಗಿ ಕೊಯ್ಯುವನು; ಯಾರು ಬಹಳವಾಗಿ ಬಿತ್ತುತ್ತಾನೋ ಅವನು ಬಹಳವಾಗಿ ಕೊಯ್ಯುವನು. ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂ. 9:6, 7.

23. ಕಷ್ಟದಲ್ಲಿರುವ ಸಹೋದರ ಸಹೋದರಿಯರಿಗೆ ನಾವು ಹೇಗೆ ಪ್ರೀತಿ ತೋರಿಸಬಹುದು?

“ಒಬ್ಬ ಸಹೋದರನಿಗೆ ಅಥವಾ ಸಹೋದರಿಗೆ ಬಟ್ಟೆಯೂ ಆ ದಿನಕ್ಕೆ ಬೇಕಾಗಿರುವಷ್ಟು ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರ ದೇಹಕ್ಕೆ ಅಗತ್ಯವಿರುವವುಗಳನ್ನು ಕೊಡದೆ, ‘ಸಮಾಧಾನದಿಂದ ಹೋಗಿ, ಬೆಚ್ಚಗಿಟ್ಟುಕೊಳ್ಳಿ, ಹೊಟ್ಟೆ ತುಂಬಿಸಿಕೊಳ್ಳಿ’ ಎಂದು ಹೇಳುವುದಾದರೆ ಅದರಿಂದ ಪ್ರಯೋಜನವೇನು?”—ಯಾಕೋ. 2:15, 16.

ಇದನ್ನೂ ನೋಡಿ: ಜ್ಞಾನೋ. 3:27; ಯಾಕೋ. 1:27.

24. ನಮ್ಮ ಸಮಯ, ಶಕ್ತಿ, ಕೌಶಲ, ಸಂಪತ್ತನ್ನು ಯೆಹೋವನ ಸೇವೆಗಾಗಿ ಉಪಯೋಗಿಸುವ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕು?

“ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.”—1 ಪೂರ್ವ. 29:14.

“ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂ. 9:7.

25. ನಮ್ಮ ನಂಬಿಕೆಗೆ ಪರೀಕ್ಷೆಗಳು ಬಂದಾಗ ಅಥವಾ ಹಿಂಸೆ ಬಂದಾಗ ನಮ್ಮ ಮನೋಭಾವ ಹೇಗಿರಬೇಕು?

“ನೀತಿಯ ನಿಮಿತ್ತ ಹಿಂಸಿಸಲ್ಪಟ್ಟಿರುವವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು. ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು. ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ; ಏಕೆಂದರೆ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಅವರು ಅದೇ ರೀತಿಯಲ್ಲಿ ಹಿಂಸೆಪಡಿಸಿದರು.”—ಮತ್ತಾ. 5:10-12.

“ನನ್ನ ಸಹೋದರರೇ, ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದವರಾಗಿದ್ದು ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ.”—ಯಾಕೋ. 1:2, 3.

“ಅವನ ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು.”—ಅ. ಕಾ. 5:41.

26. ನಾವು ಯಾರಿಗೆ ಪ್ರಾರ್ಥಿಸಬೇಕು? ಯಾರ ಹೆಸರಿನಲ್ಲಿ ಪ್ರಾರ್ಥಿಸಬೇಕು?

“ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”—ಕೀರ್ತ. 65:2.

“ಆ ದಿನದಲ್ಲಿ ನೀವು ನನಗೆ ಯಾವುದೇ ಪ್ರಶ್ನೆಯನ್ನು ಕೇಳುವುದಿಲ್ಲ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ತಂದೆಯನ್ನು ಏನೇ ಬೇಡಿಕೊಳ್ಳುವುದಾದರೂ ಅದನ್ನು ಆತನು ನನ್ನ ಹೆಸರಿನಲ್ಲಿ ನಿಮಗೆ ಕೊಡುವನು.”—ಯೋಹಾ. 16:23.

ಇದನ್ನೂ ನೋಡಿ: ಯೋಹಾ. 14:6.

27. ನಾವು ಹೇಗೆ ಪ್ರಾರ್ಥಿಸಬೇಕು?

“ನೀವು ಪ್ರಾರ್ಥನೆಮಾಡುವಾಗ ಕಪಟಿಗಳಂತೆ ಇರಬಾರದು; ಏಕೆಂದರೆ ಅವರು ಜನರಿಗೆ ಕಾಣುವಂತೆ ಸಭಾಮಂದಿರಗಳಲ್ಲಿಯೂ ಅಗಲವಾದ ಬೀದಿಯ ಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡಲು ಇಷ್ಟಪಡುತ್ತಾರೆ. ಅವರು ಪೂರ್ಣ ರೀತಿಯಲ್ಲಿ ಪ್ರತಿಫಲವನ್ನು ಹೊಂದುತ್ತಿದ್ದಾರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆಮಾಡುವಾಗ ನಿನ್ನ ಖಾಸಗಿ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿದ ಬಳಿಕ ರಹಸ್ಯವಾದ ಸ್ಥಳದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ರಹಸ್ಯವಾದ ಸ್ಥಳದಿಂದ ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು. ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ; ಏಕೆಂದರೆ ತಾವು ತುಂಬ ಮಾತುಗಳನ್ನು ಉಪಯೋಗಿಸುವುದಾದರೆ ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ ಎಂದು ಅವರು ನೆನಸುತ್ತಾರೆ. ಆದುದರಿಂದ ನೀವು ನಿಮ್ಮನ್ನು ಅವರಂತೆ ಮಾಡಿಕೊಳ್ಳಬೇಡಿ; ಏಕೆಂದರೆ ನೀವು ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ಆತನಿಗೆ ತಿಳಿದಿದೆ.”—ಮತ್ತಾ. 6:5-8.

28. ನಾವು ಪ್ರಾರ್ಥಿಸಬಹುದಾದ ಕೆಲವು ವಿಷಯಗಳು ಯಾವುವು?

“ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: ‘ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು; ನಮಗೆ ಪಾಪಮಾಡಿದವರನ್ನು ನಾವು ಕ್ಷಮಿಸಿರುವಂತೆ ನಮ್ಮ ಪಾಪಗಳನ್ನೂ ಕ್ಷಮಿಸು. ನಮ್ಮನ್ನು ಪ್ರಲೋಭನೆಯೊಳಗೆ ಸೇರಿಸದೆ ಕೆಡುಕನಿಂದ ನಮ್ಮನ್ನು ತಪ್ಪಿಸು.’”—ಮತ್ತಾ. 6:9-13.

“ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.”—1 ಯೋಹಾ. 5:14.

29. ನಮ್ಮ ನಡತೆ ಹೇಗಿದ್ದರೂ ದೇವರು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನಾ?

“ಗಂಡಂದಿರೇ, ನೀವು ಅದೇ ರೀತಿಯಲ್ಲಿ ಅವರೊಂದಿಗೆ ಜ್ಞಾನಾನುಸಾರವಾಗಿ ಬಾಳುವೆ ಮಾಡಿರಿ; ದುರ್ಬಲ ಪಾತ್ರೆಗೋ ಎಂಬಂತೆ ಸ್ತ್ರೀಯರಿಗೆ ಗೌರವವನ್ನು ಸಲ್ಲಿಸಿರಿ, ಏಕೆಂದರೆ ಅವರೊಂದಿಗೆ ನೀವು ಸಹ ಜೀವದ ಅಪಾರ ಅನುಗ್ರಹಕ್ಕೆ ಬಾಧ್ಯರಾಗಿದ್ದೀರಿ. ಹೀಗೆ ಮಾಡುವುದಾದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗುವುದಿಲ್ಲ. ಏಕೆಂದರೆ ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ; ಆದರೆ ಯೆಹೋವನ ಮುಖವು ಕೆಟ್ಟದ್ದನ್ನು ಮಾಡುವವರ ವಿರುದ್ಧವಾಗಿದೆ.”—1 ಪೇತ್ರ 3:7, 12.

ಇದನ್ನೂ ನೋಡಿ: ಯೆಶಾ. 1:15-17.

30. ಬೈಬಲ್‌ ಬೋಧನೆಗಳಲ್ಲಿ ನಂಬಿಕೆಯಿಟ್ಟು ಅದನ್ನು ಅನುಸರಿಸುವವರಿಗೆ ಏಕೆ ನೀರಿನ ದೀಕ್ಷಾಸ್ನಾನ ಕೊಡಲಾಗುತ್ತದೆ?

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ.”—ಮತ್ತಾ. 28:19.

“ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಬಂದು ಯೋರ್ದನ್‌ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು.”—ಮಾರ್ಕ 1:9.

31. ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದವರನ್ನು ‘ಯೆಹೋವನ ಸಾಕ್ಷಿಗಳು’ ಎಂದು ಕರೆಯುವುದು ಸೂಕ್ತವೇಕೆ?

“ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ ಇದನ್ನು ನಡಿಸಿದೆನು; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ. ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು.”—ಯೆಶಾ. 43:10-12.

 ದೀಕ್ಷಾಸ್ನಾನದ ಅಭ್ಯರ್ಥಿಯೊಂದಿಗೆ ಕೊನೆಯಲ್ಲಿ ಮಾಡಬೇಕಾದ ಚರ್ಚೆ

ಸಾಮಾನ್ಯವಾಗಿ ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ದೀಕ್ಷಾಸ್ನಾನ ಪಡೆಯಲು ಏರ್ಪಾಡು ಮಾಡಲಾಗುತ್ತದೆ. ಅಲ್ಲಿ ಕೊಡಲಾಗುವ ದೀಕ್ಷಾಸ್ನಾನದ ಭಾಷಣದ ಕೊನೆಯಲ್ಲಿ ಭಾಷಣಕಾರನು ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಎದ್ದುನಿಲ್ಲುವಂತೆ ಹೇಳುತ್ತಾನೆ ಹಾಗೂ ಮುಂದಿನ ಎರಡು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿಕೊಳ್ಳುತ್ತಾನೆ:

1. ಯೇಸು ಕ್ರಿಸ್ತನ ಯಜ್ಞದಲ್ಲಿ ನಂಬಿಕೆಯಿಟ್ಟು ನೀವು ನಿಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಯೆಹೋವನ ಚಿತ್ತವನ್ನು ಮಾಡಲು ನಿಮ್ಮನ್ನೇ ಆತನಿಗೆ ಸಮರ್ಪಿಸಿಕೊಂಡಿದ್ದೀರಾ?

2. ನೀವು ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದ ಮೇಲೆ ಒಬ್ಬ ಯೆಹೋವನ ಸಾಕ್ಷಿಯಾಗುತ್ತೀರಿ ಮತ್ತು ದೇವರ ಸಂಘಟನೆಯ ಭಾಗವಾಗುತ್ತೀರಿ ಎನ್ನುವುದು ನಿಮಗೆ ತಿಳಿದಿದೆಯಾ?

ಈ ಎರಡು ಪ್ರಶ್ನೆಗಳಿಗೆ ದೀಕ್ಷಾಸ್ನಾನದ ಅಭ್ಯರ್ಥಿಗಳು “ಹೌದು” ಎಂದು ಉತ್ತರಿಸುವ ಮೂಲಕ ವಿಮೋಚನಾ ಮೌಲ್ಯದಲ್ಲಿ ತಾವು ನಂಬಿಕೆ ಇಟ್ಟಿದ್ದೇವೆಂದು ಮತ್ತು ತಮ್ಮನ್ನು ಸಂಪೂರ್ಣವಾಗಿ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೇವೆಂದು ‘ಬಹಿರಂಗವಾಗಿ ಪ್ರಕಟಿಸುತ್ತಾರೆ.’ (ರೋಮ. 10:9, 10) ಅಭ್ಯರ್ಥಿಗಳು ತಮ್ಮ ನಂಬಿಕೆಗೆ ಅನುಸಾರವಾಗಿ ಸರಿಯಾದ ಉತ್ತರ ಕೊಡಲು ಆಗುವಂತೆ ಆ ಪ್ರಶ್ನೆಗಳ ಕುರಿತು ಮೊದಲೇ ಯೋಚಿಸಿ ಪ್ರಾರ್ಥಿಸಿರಬೇಕು.

ದೀಕ್ಷಾಸ್ನಾನದ ಸಂದರ್ಭದಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? (ಯೋಹಾ. 15:19; ಫಿಲಿ. 1:10; 1 ತಿಮೊ. 2:9)

ಆ ಸಂದರ್ಭದ ಮಹತ್ವವನ್ನು ಮನಸ್ಸಿನಲ್ಲಿಟ್ಟು ಅಭ್ಯರ್ಥಿಗಳು ಸಭ್ಯ ಬಟ್ಟೆ ಧರಿಸಬೇಕು. ತೆಳುವಾದ, ಮೈಕಾಣಿಸುವಂಥ, ನೀಟಾಗಿಲ್ಲದ, ಕೊಳಕಾದ ಬಟ್ಟೆ ಧರಿಸಬಾರದು. ಬರಹಗಳು, ಚಿತ್ರಗಳು ಮತ್ತು ಘೋಷಣೆ ವಾಕ್ಯಗಳು ಬಟ್ಟೆಗಳ ಮೇಲೆ ಇರಬಾರದು. ದೀಕ್ಷಾಸ್ನಾನದ ಏರ್ಪಾಡಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆಗ ನಾವು ಲೋಕದ ಜನರಿಗಿಂತ ಭಿನ್ನರಾಗಿ ಕಾಣುತ್ತೇವೆ.

ದೀಕ್ಷಾಸ್ನಾನ ಪಡೆಯುವಾಗ ಅಭ್ಯರ್ಥಿಯು ಹೇಗೆ ನಡೆದುಕೊಳ್ಳಬೇಕು? (ಲೂಕ 3:21, 22)

ಯೇಸು ದೀಕ್ಷಾಸ್ನಾನ ಪಡೆದ ವಿಧ ಇಂದಿನ ಕ್ರೈಸ್ತರಿಗೆ ಒಂದು ಒಳ್ಳೇ ಮಾದರಿಯಾಗಿದೆ. ದೀಕ್ಷಾಸ್ನಾನವು ಒಂದು ಗಂಭೀರ ಹೆಜ್ಜೆಯಾಗಿದೆಯೆಂದು ಆತನು ಅರ್ಥಮಾಡಿಕೊಂಡು ಅದನ್ನು ತನ್ನ ಮನೋಭಾವ ಮತ್ತು ಕಾರ್ಯದಲ್ಲಿ ತೋರಿಸಿದನು. ಅದೇ ರೀತಿ ಅಭ್ಯರ್ಥಿಗಳು ಕೂಡ ದೀಕ್ಷಾಸ್ನಾನದ ಮಹತ್ವವನ್ನು ಕಡಿಮೆಗೊಳಿಸುವ ಯಾವುದನ್ನೂ ಮಾಡಬಾರದು. ಅಲ್ಲಿ ಈಜಾಡುವುದಾಗಲಿ ನಗಾಡಿಸುವುದಾಗಲಿ ಮಾಡಬಾರದು. ದೀಕ್ಷಾಸ್ನಾನ ಪಡೆದು ಬಂದ ಮೇಲೆ ಏನೋ ವಿಜಯ ಸಾಧಿಸಿ ಬಂದವರ ಹಾಗೆ ವರ್ತಿಸಬಾರದು. ದೀಕ್ಷಾಸ್ನಾನ ಪಡೆಯುವುದು ಖುಷಿ ತರುತ್ತೆ ನಿಜ ಆದರೆ ಆ ಖುಷಿಯನ್ನು ವ್ಯಕ್ತಪಡಿಸುವಾಗಲೂ ಗೌರವದಿಂದ ನಡೆದುಕೊಳ್ಳಬೇಕು.

ದೀಕ್ಷಾಸ್ನಾನವಾದ ಮೇಲೂ ನೀವು ವೈಯಕ್ತಿಕ ಅಧ್ಯಯನ ಮಾಡುವ ರೂಢಿಯನ್ನು ಮುಂದುವರಿಸುವುದು ಮತ್ತು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವುದು ಯಾಕೆ ಪ್ರಾಮುಖ್ಯ?

ನೀವು ಸಮರ್ಪಣೆ ಮಾಡಿಕೊಂಡಾಗ ಯೆಹೋವನಿಗೆ ಕೊಟ್ಟ ಮಾತಿನಂತೆ ನಡೆಯಲು ಸಭೆಯೊಂದಿಗೆ ಯಾವಾಗಲೂ ಸಹವಾಸ ಮಾಡುವುದು ಹೇಗೆ ನೆರವಾಗುತ್ತದೆ?

ಆದಷ್ಟು ಬೇಗ ದೀಕ್ಷಾಸ್ನಾನ ಪಡೆಯಲು ನೀವು ಸಿದ್ಧರಿದ್ದೀರಾ?

ಸಭಾ ಹಿರಿಯರಿಗೆ ಸೂಚನೆಗಳು

ಪ್ರಚಾರಕರೊಬ್ಬರು ದೀಕ್ಷಾಸ್ನಾನ ಪಡೆಯುವ ಬಯಕೆಯನ್ನು ನಿಮಗೆ ತಿಳಿಸಿದಾಗ ಅವರಿಗೆ ಪುಟ 170-208ರಲ್ಲಿರುವ “ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳಲಾಗುವ ಪ್ರಶ್ನೆಗಳು” ಎಂಬ ಭಾಗವನ್ನು ಓದಿ ಅಧ್ಯಯನ ಮಾಡುವಂತೆ ಹೇಳಿ. ಅವರೊಂದಿಗೆ ಹಿರಿಯರು ಮಾಡಲಿರುವ ಚರ್ಚೆಗೆ ತಯಾರಿಸುವುದು ಹೇಗೆಂದು ಪುಟ 167ರಲ್ಲಿರುವ “ದೀಕ್ಷಾಸ್ನಾನವಾಗಿರದ ಪ್ರಚಾರಕರಿಗೆ ಸಲಹೆಗಳು” ಎಂಬ ಭಾಗದಲ್ಲಿ ತಿಳಿಸಲಾಗಿದೆ. ಅದನ್ನು ಓದಲು ಹೇಳಿ. ಆ ಭಾಗದಲ್ಲಿ ಹೇಳಿದಂತೆ ದೀಕ್ಷಾಸ್ನಾನದ ಅಭ್ಯರ್ಥಿಯು ತಾನು ಬರೆದಿಟ್ಟ ಟಿಪ್ಪಣಿಗಳನ್ನು ಮತ್ತು ಈ ಪುಸ್ತಕವನ್ನು ಚರ್ಚೆಯ ಸಮಯದಲ್ಲಿ ಉಪಯೋಗಿಸಬಹುದು. ಹಿರಿಯರು ಚರ್ಚಿಸುವ ಮುಂಚೆಯೇ ಯಾರೂ ಅವನೊಟ್ಟಿಗೆ ಆ ಪ್ರಶ್ನೆಗಳನ್ನು ಚರ್ಚಿಸುವ ಅಗತ್ಯವಿಲ್ಲ.

ಪ್ರಚಾರಕರೊಬ್ಬರು ದೀಕ್ಷಾಸ್ನಾನ ಪಡೆಯುವ ಬಯಕೆಯಿದೆ ಎಂದು ತಿಳಿಸಿದ್ದನ್ನು ಹಿರಿಯರ ಮಂಡಲಿಯ ಸಂಯೋಜಕನಿಗೆ ಹೇಳಬೇಕು. ಅವನು ಪ್ರಚಾರಕನೊಟ್ಟಿಗೆ ಮೇಲೆ ಹೇಳಲಾದ ಮಾಹಿತಿಯನ್ನು ಚರ್ಚಿಸಲು ಕೆಲವು ಹಿರಿಯರನ್ನು ನೇಮಿಸಬೇಕು. ಪ್ರಚಾರಕನಿಗೆ ಆ ಮಾಹಿತಿಯನ್ನು ಓದಿ ಅಧ್ಯಯನ ಮಾಡಲು ಸಾಕಷ್ಟು ಸಮಯ ಕೊಡಬೇಕು. ಈ ಚರ್ಚೆ ನಡೆಸಲು ಹಿರಿಯರು ಯಾವುದಾದರೂ ಸಮ್ಮೇಳನ ಅಥವಾ ಅಧಿವೇಶನದ ದಿನಾಂಕ ತಿಳಿದು ಬರುವ ವರೆಗೆ ಕಾಯಬೇಕಾಗಿಲ್ಲ. ಮೂರು ಭಾಗಗಳನ್ನು ಬೇರೆ ಬೇರೆ ಹಿರಿಯರು ಚರ್ಚೆಮಾಡಿದರೆ ಚೆನ್ನಾಗಿರುತ್ತದೆ. ಪ್ರತಿಯೊಂದು ಭಾಗಕ್ಕೆ ಒಂದು ತಾಸು ತಕ್ಕೊಳ್ಳಬಹುದು. ಅಗತ್ಯವಿದ್ದಲ್ಲಿ ಹೆಚ್ಚು ಸಮಯ ತಕ್ಕೊಳ್ಳಬಹುದು. ಚರ್ಚೆಯ ಸಮಯದಲ್ಲಿ ಹಿರಿಯರಾಗಲಿ ಅಭ್ಯರ್ಥಿಯಾಗಲಿ ಅವಸರ ಮಾಡಬಾರದು. ಅಷ್ಟೇ ಅಲ್ಲ, ಈ ಚರ್ಚೆ ಮಾಡಲು ನೇಮಿಸಲಾಗಿರುವ ಹಿರಿಯರು ಅದನ್ನು ಮುಂದೂಡದೆ ಮೊದಲು ಇದಕ್ಕೆ ಸಮಯ ಮಾಡಿಕೊಳ್ಳಬೇಕು. ಪ್ರತಿ ಚರ್ಚೆಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ಪ್ರಾರ್ಥನೆ ಮಾಡುವುದು ಒಳ್ಳೇದು.

ಈ ಚರ್ಚೆಯನ್ನು ಗುಂಪಿನೊಟ್ಟಿಗೆ ಮಾಡದೆ ಒಬ್ಬೊಬ್ಬರೊಟ್ಟಿಗೆ ಮಾಡುವುದು ಒಳ್ಳೇದು. ಈ ರೀತಿ ಮಾಡುವುದಾದರೆ ಪ್ರತಿ ಪ್ರಶ್ನೆಗೆ ಅಭ್ಯರ್ಥಿ ಕೊಡುವ ಉತ್ತರದಿಂದ ಅವನಿಗೆ ಬೈಬಲ್‌ ಜ್ಞಾನ ಎಷ್ಟಿದೆ ಎಂದು ಮತ್ತು ಅವನು ದೀಕ್ಷಾಸ್ನಾನಕ್ಕೆ ತಯಾರಿದ್ದಾನಾ ಎಂದು ಸರಿಯಾಗಿ ತಿಳಿದುಕೊಳ್ಳಲು ಆಗುತ್ತದೆ. ಅಷ್ಟೇ ಅಲ್ಲ ಅಭ್ಯರ್ಥಿಗಳಿಗೂ ತಮ್ಮ ಭಾವನೆಗಳನ್ನು ಹಿಂಜರಿಕೆಯಿಲ್ಲದೆ ತಿಳಿಸಲು ಆಗುತ್ತದೆ. ಗಂಡಹೆಂಡತಿಯಿರುವಲ್ಲಿ ಇಬ್ಬರಿಗೂ ಒಟ್ಟಿಗೆ ಪ್ರಶ್ನೆಗಳನ್ನು ಕೇಳಬಹುದು.

ದೀಕ್ಷಾಸ್ನಾನದ ಅಭ್ಯರ್ಥಿಯು ಸಹೋದರಿಯಾಗಿರುವಲ್ಲಿ ಆ ಚರ್ಚೆಯನ್ನು ಬೇರೆಯವರಿಗೆ ಕಾಣುವ ಸ್ಥಳದಲ್ಲಿ ಮಾಡಬೇಕು. ಆದರೆ ಇತರರು ಕೇಳಿಸಿಕೊಳ್ಳುವ ಹಾಗೆ ಇರಬಾರದು. ಇನ್ನೊಬ್ಬರು ನಿಮ್ಮೊಟ್ಟಿಗೆ ಇರುವ ಅಗತ್ಯವಿದ್ದಲ್ಲಿ ಒಬ್ಬ ಹಿರಿಯ ಅಥವಾ ಸಹಾಯಕ ಸೇವಕನನ್ನು ಕರೆದುಕೊಳ್ಳಬಹುದು. ಭಾಗ 1 ಮತ್ತು ಭಾಗ 3ನ್ನು ಚರ್ಚಿಸುವಾಗ ಸಹಾಯಕ ಸೇವಕನನ್ನು ಕರೆದುಕೊಳ್ಳಿ. ಆದರೆ ಭಾಗ 2ನ್ನು ಚರ್ಚಿಸುವಾಗ ಸಭಾ ಹಿರಿಯನನ್ನೇ ಕರೆದುಕೊಳ್ಳಬೇಕು.

ಹೆಚ್ಚು ಮಂದಿ ಹಿರಿಯರು ಇಲ್ಲದಿರುವ ಸಭೆಗಳಲ್ಲಿ ಸರಿ ತಪ್ಪನ್ನು ವಿವೇಚಿಸಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಹಾಯಕ ಸೇವಕರು ದೀಕ್ಷಾಸ್ನಾನದ ಅಭ್ಯರ್ಥಿಗಳೊಟ್ಟಿಗೆ ಬೈಬಲಿನ ಮುಖ್ಯ ಬೋಧನೆಗಳಿಗೆ ಸಂಬಂಧಿಸಿದ ಭಾಗಗಳನ್ನು (ಭಾಗ 1 ಮತ್ತು  ಭಾಗ 3) ಚರ್ಚಿಸಬಹುದು. ಆದರೆ ಭಾಗ 2ನ್ನು ಹಿರಿಯರೇ ಅಭ್ಯರ್ಥಿಯೊಂದಿಗೆ ಚರ್ಚಿಸಬೇಕು. ಒಂದುವೇಳೆ ಸಭೆಯಲ್ಲಿ ಸಾಕಷ್ಟು ಅರ್ಹ ಸಹೋದರರು ಇಲ್ಲದಿರುವಲ್ಲಿ ಹತ್ತಿರದ ಸಭೆಯ ಹಿರಿಯನು ಸಹಾಯ ನೀಡಲು ಆಗುತ್ತಾ ಎಂದು ಸಂಚರಣ ಮೇಲ್ವಿಚಾರಕನಿಗೆ ಕೇಳಬಹುದು.

ಅಭ್ಯರ್ಥಿಯು ಬೈಬಲಿನ ಮುಖ್ಯ ಬೋಧನೆಗಳ ಕುರಿತು ತಕ್ಕಮಟ್ಟಿಗಿನ ಜ್ಞಾನವನ್ನು ಪಡೆದುಕೊಂಡಿದ್ದಾನೆ ಎನ್ನುವುದನ್ನು ಹಿರಿಯರು ಖಚಿತಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲ ಮುಂದೆ ಯೆಹೋವನ ಸಾಕ್ಷಿಯಾಗಲಿರುವ ಅವನು ಸತ್ಯವನ್ನು ಮನದಾಳದಿಂದ ಗಣ್ಯ ಮಾಡುತ್ತಾನಾ ಮತ್ತು ಯೆಹೋವನ ಸಂಘಟನೆಯನ್ನು ಗೌರವಿಸುತ್ತಾನಾ ಎನ್ನುವುದನ್ನು ತಿಳಿದುಕೊಳ್ಳಬೇಕು. ಒಂದುವೇಳೆ ಆ ವ್ಯಕ್ತಿ ಬೈಬಲಿನ ಮುಖ್ಯ ಬೋಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದನಿಸಿದರೆ ಅವನಿಗೆ ನೆರವು ಸಿಗುವಂತೆ ಹಿರಿಯರು ಏರ್ಪಾಡು ಮಾಡಬೇಕು. ಇದರಿಂದ ಅವನು ಮುಂದೆ ದೀಕ್ಷಾಸ್ನಾನ ಪಡೆಯಲು ಅರ್ಹನಾಗಬಹುದು. ಇನ್ನು ಕೆಲವರಿಗೆ ಕ್ಷೇತ್ರ ಸೇವೆಯಲ್ಲಿ ಹೆಚ್ಚು ಭಾಗವಹಿಸಲು ಮತ್ತು ಸಂಘಟನೆಯ ಏರ್ಪಾಡುಗಳನ್ನು ದೀನತೆಯಿಂದ ಬೆಂಬಲಿಸಲು ಕಲಿಯಲಿಕ್ಕಾಗಿ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಹಿರಿಯರು ಅಭ್ಯರ್ಥಿಯೊಂದಿಗೆ ಚರ್ಚೆ ಮಾಡುವಾಗ ಅವನು ದೀಕ್ಷಾಸ್ನಾನ ಪಡೆಯಲು ನಿಜಕ್ಕೂ ಅರ್ಹನಾಗಿದ್ದಾನಾ ಎಂದು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಆ ಒಂದು ತಾಸಿನ ಚರ್ಚೆಯಲ್ಲಿ ಯಾವ ಪ್ರಶ್ನೆಗೆ ಎಷ್ಟು ಸಮಯ ತಕ್ಕೊಳ್ಳಬೇಕು ಎನ್ನುವುದನ್ನು ಹಿರಿಯರು ಜಾಣ್ಮೆಯಿಂದ ಯೋಚಿಸಿ ನಿರ್ಣಯಿಸಬೇಕು. ಕೆಲವು ಪ್ರಶ್ನೆಗಳನ್ನು ಚರ್ಚಿಸಲು ಹೆಚ್ಚು ಸಮಯ ಬೇಕಿದ್ದರೆ ಇನ್ನೂ ಕೆಲವು ಪ್ರಶ್ನೆಗಳಿಗೆ ಕಡಿಮೆ ಸಮಯ ಬೇಕಾಗಬಹುದು. ಆದರೆ ಎಲ್ಲ ಪ್ರಶ್ನೆಗಳನ್ನು ಕೇಳಲೇಬೇಕು.

ಮೂರೂ ಭಾಗಗಳನ್ನು ವಿದ್ಯಾರ್ಥಿಯೊಂದಿಗೆ ಚರ್ಚಿಸಿದ ಹಿರಿಯರು ನಂತರ ಒಟ್ಟಾಗಿ ಬಂದು ಅಭ್ಯರ್ಥಿಯು ದೀಕ್ಷಾಸ್ನಾನ ಪಡೆಯಲು ಅರ್ಹನಾ ಇಲ್ಲವಾ ಎಂದು ನಿರ್ಣಯಿಸಬೇಕು. ಅಭ್ಯರ್ಥಿಯ ಹಿನ್ನೆಲೆ, ಸಾಮರ್ಥ್ಯ ಮತ್ತು ಸನ್ನಿವೇಶಗಳನ್ನು ಹಿರಿಯರು ಮನಸ್ಸಿನಲ್ಲಿಡಬೇಕು. ಹಿರಿಯರು ಮುಖ್ಯವಾಗಿ ನೋಡಬೇಕಾಗಿರುವುದು ಅಭ್ಯರ್ಥಿಗೆ ನಿಜವಾಗಿಯೂ ಯೆಹೋವನ ಮೇಲೆ ಪ್ರೀತಿಯಿದೆಯಾ ಮತ್ತು ಬೈಬಲಿನ ಮುಖ್ಯ ಸತ್ಯಗಳು ಅವನಿಗೆ ಅರ್ಥವಾಗಿದೆಯಾ ಎಂದು. ನೀವು ನೀಡುವ ಈ ಎಲ್ಲ ಪ್ರೀತಿಯ ನೆರವಿನಿಂದಾಗಿ ದೀಕ್ಷಾಸ್ನಾನ ಪಡೆಯಲಿರುವ ವ್ಯಕ್ತಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ತನ್ನ ಮುಖ್ಯ ನೇಮಕವನ್ನು ಪೂರೈಸಲು ಪೂರ್ಣವಾಗಿ ಸಿದ್ಧನಾಗುವನು.

ತದನಂತರ, ಹಿರಿಯರಲ್ಲಿ ಒಬ್ಬರು ಅಥವಾ ಇಬ್ಬರು ಅಭ್ಯರ್ಥಿಯನ್ನು ಭೇಟಿಮಾಡಿ ಅವನು ದೀಕ್ಷಾಸ್ನಾನ ಪಡೆಯಲು ಅರ್ಹನಾಗಿದ್ದಾನಾ ಇಲ್ಲವಾ ಎಂದು ತಿಳಿಸಬೇಕು. ಒಂದುವೇಳೆ ಅಭ್ಯರ್ಥಿಯು ಅರ್ಹನಾಗಿರುವಲ್ಲಿ 209-210ರಲ್ಲಿರುವ “ ದೀಕ್ಷಾಸ್ನಾನದ ಅಭ್ಯರ್ಥಿಯೊಂದಿಗೆ ಕೊನೆಯಲ್ಲಿ ಮಾಡಬೇಕಾದ ಚರ್ಚೆ” ಎಂಬ ಭಾಗವನ್ನು ಚರ್ಚಿಸಬೇಕು. ಅಭ್ಯರ್ಥಿಯು ಬೈಬಲ್‌ ಬೋಧಿಸುತ್ತದೆ ಅಥವಾ “ದೇವರ ಪ್ರೀತಿ” ಪುಸ್ತಕದ ಅಧ್ಯಯನವನ್ನು ಇನ್ನೂ ಮುಗಿಸಿರದಿದ್ದಲ್ಲಿ ದೀಕ್ಷಾಸ್ನಾನದ ನಂತರ ಮುಗಿಸುವಂತೆ ಪ್ರೋತ್ಸಾಹಿಸಬೇಕು. ಈ ಚರ್ಚೆಗೆ 10 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯ ಸಾಕು.

ಅಭ್ಯರ್ಥಿ ದೀಕ್ಷಾಸ್ನಾನ ಪಡೆದು ಒಂದು ವರ್ಷವಾದ ನಂತರ ಇಬ್ಬರು ಹಿರಿಯರು ಅವನನ್ನು ಭೇಟಿಯಾಗಿ ಪ್ರೋತ್ಸಾಹಿಸಬೇಕು ಮತ್ತು ನೆರವಾಗುವ ಸಲಹೆಗಳನ್ನು ನೀಡಬೇಕು. ಆ ಇಬ್ಬರು ಹಿರಿಯರಲ್ಲಿ ಒಬ್ಬರು ಅವನ ಗುಂಪು ಮೇಲ್ವಿಚಾರಕರಾಗಿರಬೇಕು. ಒಂದುವೇಳೆ ದೀಕ್ಷಾಸ್ನಾನ ಪಡೆದವನು ಚಿಕ್ಕ ಪ್ರಾಯದವನಾಗಿದ್ದರೆ ಸತ್ಯದಲ್ಲಿರುವ ಅವನ ತಂದೆತಾಯಿ ಕೂಡ ಉಪಸ್ಥಿತರಿರಬೇಕು. ಈ ಭೇಟಿಯ ಮುಖ್ಯ ಉದ್ದೇಶ ಅವನನ್ನು ಪ್ರೋತ್ಸಾಹಿಸುವುದೇ ಆಗಿದೆ. ಅವನು ಆಧ್ಯಾತ್ಮಿಕವಾಗಿ ಏನೆಲ್ಲ ಪ್ರಗತಿ ಮಾಡಿದ್ದಾನೆ ಎನ್ನುವುದನ್ನು ಹಿರಿಯರು ಹೇಳಬೇಕು. ವೈಯಕ್ತಿಕ ಅಧ್ಯಯನ, ಬೈಬಲ್‌ ಓದುವುದು, ಕುಟುಂಬ ಆರಾಧನೆ, ಕೂಟಗಳಿಗೆ ಹಾಜರಾಗಿ ಭಾಗವಹಿಸುವುದು, ಸೇವೆ, ಇದೆಲ್ಲವನ್ನು ಅವನು ತಪ್ಪದೆ ಮಾಡಲು ಯಾವುದು ಸಹಾಯ ಮಾಡುತ್ತದೆ ಎಂದು ಅವನೊಟ್ಟಿಗೆ ಹಿರಿಯರು ಚರ್ಚಿಸಬೇಕು. (ಫಿಲಿ. 3:16) ಬೈಬಲ್‌ ಬೋಧಿಸುತ್ತದೆ ಮತ್ತು “ದೇವರ ಪ್ರೀತಿ” ಪುಸ್ತಕದ ಅಧ್ಯಯನವನ್ನು ಅವನು ಇನ್ನೂ ಮುಗಿಸಿರದಿದ್ದಲ್ಲಿ ಯಾರಾದರೂ ಅವನೊಟ್ಟಿಗೆ ಅಧ್ಯಯನ ಮಾಡುವಂತೆ ಏರ್ಪಾಡು ಮಾಡಬೇಕು. ಹಿರಿಯರು ಅವನನ್ನು ಮನಸಾರೆ ಪ್ರಶಂಸಿಸಬೇಕು. ಒಂದೆರಡು ವಿಷಯಗಳಲ್ಲಿ ಸಲಹೆ ಕೊಟ್ಟರೆ ಸಾಕು.