ಅಧ್ಯಾಯ 3
‘ಮುಂದಾಳತ್ವ ವಹಿಸುವವರನ್ನು ಜ್ಞಾಪಿಸಿಕೊಳ್ಳಿ’
ಇಬ್ರಿಯ 13:7 ರಲ್ಲಿರುವ ಮೇಲಿನ ಮಾತುಗಳನ್ನು, “ನಿಮ್ಮ ಮಧ್ಯೆ ಆಡಳಿತ ನಡೆಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ” ಎಂದೂ ಅನುವಾದಿಸಬಹುದು. ಕ್ರಿ.ಶ. 33ರ ಪಂಚಾಶತ್ತಮ ಹಬ್ಬದ ದಿನದಿಂದ ಯೇಸು ಕ್ರಿಸ್ತನ ಅಪೊಸ್ತಲರು ಒಂದು ಆಡಳಿತ ಮಂಡಲಿಯಾಗಿ ಕೆಲಸಮಾಡಲು ಆರಂಭಿಸಿದರು. ಅವರು ಎಲ್ಲ ಸ್ಥಳಗಳಲ್ಲಿದ್ದ ಕ್ರೈಸ್ತ ಸಭೆಗಳಿಗೆ ನಿರ್ದೇಶನಗಳನ್ನು ಕೊಡುವುದರಲ್ಲಿ ಮುಂದಾಳತ್ವ ವಹಿಸಿದರು. (ಅ. ಕಾ. 6:2-4) ಕ್ರಿ.ಶ. 49ರಷ್ಟಕ್ಕೆ ಆಡಳಿತ ಮಂಡಲಿಯಲ್ಲಿ ಯೇಸುವಿನ ಅಪೊಸ್ತಲರು ಮಾತ್ರವಲ್ಲ ಬೇರೆ ಕ್ರೈಸ್ತರೂ ಇದ್ದರು. ಅದು ಹೇಗೆ ಗೊತ್ತಾಗುತ್ತದೆಂದರೆ, ಅದೇ ವರ್ಷ ಸುನ್ನತಿಯ ವಿಷಯದಲ್ಲಿ ನಿರ್ಣಯ ತೆಗೆದುಕೊಂಡಾಗ ಆಡಳಿತ ಮಂಡಲಿಯಲ್ಲಿ ‘ಅಪೊಸ್ತಲರೂ ಇತರ ಹಿರೀಪುರುಷರೂ’ ಇದ್ದರು. (ಅ. ಕಾ. 15:1, 2) ಕ್ರೈಸ್ತರಿಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ನೋಡಿಕೊಳ್ಳುವುದು ಈ ಮಂಡಲಿಯ ಜವಾಬ್ದಾರಿಯಾಗಿತ್ತು. ಹಾಗಾಗಿ ಅವರು ತಾವು ತೀರ್ಮಾನಿಸಿದ ವಿಷಯಗಳನ್ನು ಪತ್ರಗಳ ಮೂಲಕ ಸಭೆಗಳಿಗೆ ತಿಳಿಸುತ್ತಿದ್ದರು. ಇದರಿಂದ ಸಭೆಗಳು ನಂಬಿಕೆಯಲ್ಲಿ ಬಲಗೊಂಡವು. ಕ್ರೈಸ್ತರು ಬೇರೆಬೇರೆ ಕಡೆಗಳಲ್ಲಿ ಇದ್ದರೂ ಯೋಚನೆ ಮತ್ತು ಕಾರ್ಯದಲ್ಲಿ ಒಂದಾಗಿರಲು ಸಾಧ್ಯವಾಯಿತು. ಆಡಳಿತ ಮಂಡಲಿಯ ಮಾರ್ಗದರ್ಶನಕ್ಕೆ ಎಲ್ಲರು ವಿಧೇಯತೆ, ಅಧೀನತೆ ತೋರಿಸಿದ್ದರಿಂದ ಯೆಹೋವನು ಅವರನ್ನು ಆಶೀರ್ವದಿಸಿದನು. ಸಭೆಗಳ ಸಂಖ್ಯೆಯೂ ಹೆಚ್ಚಾಯಿತು.—ಅ. ಕಾ. 8:1, 14, 15; 15:22-31; 16:4, 5; ಇಬ್ರಿ. 13:17.
2 ಅಪೊಸ್ತಲರೆಲ್ಲರೂ ತೀರಿಹೋದ ನಂತರ ಸಭೆಯೊಳಗೆ ಧರ್ಮಭ್ರಷ್ಟತೆ ನುಸುಳಿತು. (2 ಥೆಸ. 2:3-12) ಗೋದಿ ಮತ್ತು ಕಳೆಗಳ ದೃಷ್ಟಾಂತದಲ್ಲಿ ಯೇಸು ಹೇಳಿದಂತೆಯೇ ಗೋದಿಯ (ಅಭಿಷಿಕ್ತ ಕ್ರೈಸ್ತರು) ಮಧ್ಯದಲ್ಲಿ ಕಳೆಗಳನ್ನು (ಸುಳ್ಳು ಕ್ರೈಸ್ತರು) ಬಿತ್ತಲಾಯಿತು. ಕೊಯ್ಲಿನ ವರೆಗೆ ಅಂದರೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ವರೆಗೆ ಎರಡನ್ನೂ ಒಟ್ಟಿಗೆ ಬೆಳೆಯುವಂತೆ ಬಿಡಲಾಯಿತು. (ಮತ್ತಾ. 13:24-30, 36-43) ಆ ಸಮಯಾವಧಿಯಲ್ಲಿ ಪ್ರತಿಯೊಬ್ಬ ಅಭಿಷಿಕ್ತನ ಮೇಲೆ ಯೇಸುವಿನ ಅನುಗ್ರಹವಿತ್ತು. ಆದರೆ ಆಗ ಯೇಸುವು ಅವರಿಗೆ ನಿರ್ದೇಶನಗಳನ್ನು ಕೊಡಲು ಯಾವುದೇ ಮಾಧ್ಯಮ ಅಂದರೆ ಆಡಳಿತ ಮಂಡಲಿ ಇರಲಿಲ್ಲ. (ಮತ್ತಾ. 28:20) ಈ ಸನ್ನಿವೇಶವು ಯೇಸು ಹೇಳಿದಂತೆಯೇ ಕೊಯ್ಲಿನ ಸಮಯದಲ್ಲಿ ಬದಲಾಗಲಿತ್ತು.
3 ಯೇಸು “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಬಗ್ಗೆ ಸೂಚನೆಯನ್ನು ಕೊಡುವಾಗ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” ಎಂಬ ಪ್ರಶ್ನೆ ಹಾಕಿದನು. (ಮತ್ತಾ. 24:3, 42-47) ಈ ಆಳು ದೇವಜನರಿಗೆ ಆಧ್ಯಾತ್ಮಿಕ ಆಹಾರವನ್ನು “ತಕ್ಕ ಸಮಯಕ್ಕೆ” ಕೊಡುವುದರಲ್ಲಿ ಕಾರ್ಯಮಗ್ನವಾಗಿರುತ್ತದೆ ಎಂದನವನು. ಒಂದನೇ ಶತಮಾನದ ದೇವಜನರಲ್ಲಿ ಮುಂದಾಳತ್ವ ವಹಿಸಲು ಯೇಸು ಕೇವಲ ಒಬ್ಬ ವ್ಯಕ್ತಿಯನ್ನಲ್ಲ, ಪುರುಷರ ಒಂದು ಗುಂಪನ್ನು ಬಳಸಿದನು. ಅದೇ ರೀತಿ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಸಹ ಆತನು ಬಳಸುವ “ಆಳು” ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಗುಂಪಾಗಿದೆ.
ನಂಬಿಗಸ್ತ, ವಿವೇಚನೆಯುಳ್ಳ ಆಳು ಯಾರು?
4 ತನ್ನ ಹಿಂಬಾಲಕರಿಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸಲು ಯೇಸು ಯಾರನ್ನು ನೇಮಿಸಿದ್ದಾನೆ? ಆತನು ಭೂಮಿಯಲ್ಲಿರುವ ಅಭಿಷಿಕ್ತರನ್ನು ಬಳಸುತ್ತಿದ್ದಾನೆ. ಅವರನ್ನು ‘ರಾಜವಂಶಸ್ಥರಾದ ಯಾಜಕರು’ ಎಂದು ಬೈಬಲ್ ಕರೆಯುತ್ತದೆ. ‘ತಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವ’ ನೇಮಕ ಅವರಿಗಿದೆ. (1 ಪೇತ್ರ 2:9; ಮಲಾ. 2:7; ಪ್ರಕ. 12:17) ಇದರರ್ಥ ಎಲ್ಲ ಅಭಿಷಿಕ್ತರು ನಂಬಿಗಸ್ತ ಆಳು ಆಗಿದ್ದಾರಾ? ಇಲ್ಲ. ಯೇಸು ಭೂಮಿಯಲ್ಲಿರುವಾಗ ಒಮ್ಮೆ 5,000ಕ್ಕಿಂತಲೂ ಹೆಚ್ಚು ಜನರಿಗೆ ಅದ್ಭುತವಾಗಿ ಆಹಾರ ಒದಗಿಸಿದನು. ಆಗ ಆತನು ಆಹಾರವನ್ನು ಮೊದಲು ಶಿಷ್ಯರ ಕೈಗೆ ಕೊಟ್ಟನು. ಅವರದನ್ನು ಜನರಿಗೆ ದಾಟಿಸಿದರು. (ಮತ್ತಾ. 14:19) ಹೀಗೆ ಯೇಸು ಕೆಲವೇ ಕೈಗಳಿಂದ ಅನೇಕರಿಗೆ ಉಣಿಸಿದನು. ಅದೇರೀತಿ ಇಂದು ಆಧ್ಯಾತ್ಮಿಕ ಆಹಾರವನ್ನು ದಾಟಿಸಲು ಯೇಸು ಕೆಲವು ಅಭಿಷಿಕ್ತರನ್ನು ಮಾತ್ರ ಬಳಸುತ್ತಿದ್ದಾನೆ.
5 ಹಾಗಾದರೆ ಈ ‘ನಂಬಿಗಸ್ತ ಆಳು’ ಯಾರು? ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಆಧ್ಯಾತ್ಮಿಕ ಆಹಾರವನ್ನು ತಯಾರಿಸಿ ಹಂಚುವುದರಲ್ಲಿ ನೇರವಾಗಿ ಒಳಗೂಡಿರುವ ಅಭಿಷಿಕ್ತ ಸಹೋದರರ ಚಿಕ್ಕ ಗುಂಪೇ ಆ ಆಳು. ಇವರನ್ನು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಮನೆವಾರ್ತೆಯವನು” ಎಂದು ಲೂಕ 12:42) ನಂಬಿಗಸ್ತ ಆಳಾಗಿ ಕೆಲಸಮಾಡುವ ಅಭಿಷಿಕ್ತ ಸಹೋದರರು ಈ ಕಡೇ ದಿವಸಗಳಾದ್ಯಂತ ಮುಖ್ಯ ಕಾರ್ಯಾಲಯದಲ್ಲಿ ಒಟ್ಟಾಗಿ ಕೆಲಸಮಾಡುತ್ತಾ ಬಂದಿದ್ದಾರೆ. ಇಂದು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಆ “ಆಳು” ಆಗಿದೆ.
ಸಹ ಕರೆಯಲಾಗಿದೆ. (6 ಈ ಆಡಳಿತ ಮಂಡಲಿಯ ಮೂಲಕ ಕ್ರಿಸ್ತನು ಆಧ್ಯಾತ್ಮಿಕ ಆಹಾರವನ್ನು ಹಂಚುತ್ತಿದ್ದಾನೆ. ಬೈಬಲ್ ಪ್ರವಾದನೆಗಳ ನೆರವೇರಿಕೆಯ ಕುರಿತು ಮತ್ತು ಬೈಬಲಿನ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸಬೇಕೆಂಬುದರ ಕುರಿತು ತಿಳಿಸುತ್ತಿದ್ದಾನೆ. ಈ ಮಾಹಿತಿಯನ್ನು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಎಲ್ಲರಿಗೆ ವಿತರಿಸಲಾಗುತ್ತದೆ. (ಯೆಶಾ. 43:10; ಗಲಾ. 6:16) ಪ್ರಾಚೀನ ಸಮಯದಲ್ಲಿ ಮನೆವಾರ್ತೆಯವನು ಯಜಮಾನನ ಮನೆಯ ಕೆಲಸಕಾರ್ಯಗಳನ್ನೆಲ್ಲ ನೋಡಿಕೊಳ್ಳುತ್ತಿದ್ದನು. ಅದೇರೀತಿ ಇಂದು ನಂಬಿಕೆಯಲ್ಲಿ ಒಂದೇ ಮನೆಯವರಂತೆ ಇರುವವರನ್ನು ನೋಡಿಕೊಳ್ಳುವ ಜವಾಬ್ದಾರಿ ನಂಬಿಗಸ್ತ ಆಳಿಗಿದೆ. ಹಾಗಾಗಿ ಎಲ್ಲ ಸ್ವತ್ತುಗಳು, ಸಾರುವ ಕೆಲಸ, ಅಧಿವೇಶನ ಸಮ್ಮೇಳನಗಳ ಕಾರ್ಯಕ್ರಮಗಳು, ಮೇಲ್ವಿಚಾರಕರ ನೇಮಕಾತಿ, ಬೈಬಲ್ ಆಧರಿತ ಸಾಹಿತ್ಯದ ತಯಾರಿ ಈ ಎಲ್ಲವುಗಳನ್ನು ನಂಬಿಗಸ್ತ ಆಳು ಮೇಲ್ವಿಚಾರಣೆ ಮಾಡುತ್ತದೆ. ಇದು “ಮನೆಯವರಿಗೆ” ಪ್ರಯೋಜನ ತರುತ್ತದೆ.—ಮತ್ತಾ. 24:45.
7 “ಮನೆಯವರು” ಯಾರು? ಯಾರೆಲ್ಲ ಆಧ್ಯಾತ್ಮಿಕ ಆಹಾರವನ್ನು ಸೇವಿಸುತ್ತಾರೋ ಅವರೆಲ್ಲರು “ಮನೆಯವರು.” ಆರಂಭದಲ್ಲಿ ನಂಬಿಗಸ್ತ ಆಳು ಕೊಡುತ್ತಿದ್ದ ಆಧ್ಯಾತ್ಮಿಕ ಆಹಾರವನ್ನು ಅಭಿಷಿಕ್ತರು ಮಾತ್ರ ಪಡೆದುಕೊಳ್ಳುತ್ತಿದ್ದರು. ಅನಂತರ ಬೇರೆ ಕುರಿಗಳೂ ಅಭಿಷಿಕ್ತರೊಂದಿಗೆ ಸೇರಿಕೊಂಡರು. ಹಾಗಾಗಿ ಆಧ್ಯಾತ್ಮಿಕ ಆಹಾರದಿಂದ ಪ್ರಯೋಜನ ಪಡೆದುಕೊಳ್ಳುವ ಈ ಎರಡೂ ಗುಂಪಿನವರು ಮನೆಯವರಾಗಿದ್ದಾರೆ.—ಯೋಹಾ. 10:16.
8 ಮಹಾ ಸಂಕಟದ ಸಮಯದಲ್ಲಿ ಯೇಸು ಈ ದುಷ್ಟ ಲೋಕಕ್ಕೆ ನ್ಯಾಯತೀರ್ಪನ್ನು ವಿಧಿಸಿ ಜಾರಿಗೊಳಿಸಲು ಬರುವಾಗ ನಂಬಿಗಸ್ತ ಆಳನ್ನು “ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವನು.” (ಮತ್ತಾ. 24:46, 47) ನಂಬಿಗಸ್ತ ಆಳಾಗಿ ಸೇವೆಮಾಡುತ್ತಿರುವವರು ಸ್ವರ್ಗೀಯ ಜೀವನದ ಬಹುಮಾನ ಪಡೆಯುವರು. ಅವರು ಇತರ ಅಭಿಷಿಕ್ತರಂತೆಯೇ ಕ್ರಿಸ್ತನೊಂದಿಗೆ ಆಳುವರು. ಅದರ ನಂತರ ಭೂಮಿಯಲ್ಲಿ ನಂಬಿಗಸ್ತ ಆಳು ಇರುವುದಿಲ್ಲ. ಆದರೆ ಭೂಪ್ರಜೆಗಳಲ್ಲಿ ಕೆಲವರನ್ನು “ಅಧಿಕಾರಿಗಳನ್ನಾಗಿ” [ಪ್ರಧಾನರಾಗಿ, ಪವಿತ್ರ ಗ್ರಂಥ ಬೈಬಲ್] ನೇಮಿಸಲಾಗುವುದು. ಅವರ ಮೂಲಕ ಯೆಹೋವನು ಮತ್ತು ಯೇಸು ಭೂಮಿಯಲ್ಲಿರುವವರಿಗೆ ಮಾರ್ಗದರ್ಶನವನ್ನು ಒದಗಿಸುವರು.—ಕೀರ್ತ. 45:16.
ಮುಂದಾಳತ್ವ ವಹಿಸುವವರನ್ನು ಏಕೆ ಜ್ಞಾಪಿಸಿಕೊಳ್ಳಬೇಕು?
9 ಮುಂದಾಳತ್ವ ವಹಿಸುವವರನ್ನು ಜ್ಞಾಪಿಸಿಕೊಳ್ಳಲು ಮತ್ತು ಅವರಲ್ಲಿ ಭರವಸೆಯಿಡಲು ನಮಗೆ ಅನೇಕ ಕಾರಣಗಳಿವೆ. ಅಪೊಸ್ತಲ ಪೌಲ ಹೇಳಿದನು: “ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.” (ಇಬ್ರಿ. 13:17) ಮುಂದಾಳತ್ವ ವಹಿಸುವವರು ಕೊಡುವ ಮಾರ್ಗದರ್ಶನಕ್ಕೆ ನಾವು ವಿಧೇಯರಾಗಬೇಕು ಮತ್ತು ಅಧೀನರಾಗಿರಬೇಕು. ಯಾಕೆಂದರೆ ಅವರು ನಮಗೆ ಭಾವನಾತ್ಮಕವಾಗಿ, ಶಾರೀರಿಕವಾಗಿ ಸಹಾಯ ಕೊಡುತ್ತಾರೆ ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಯಾವುದೂ ಹಾನಿ ಮಾಡದಂತೆ ನೋಡಿಕೊಳ್ಳುತ್ತಾರೆ.
10 ‘ನೀವು ಏನೇ ಮಾಡಿದರೂ ಎಲ್ಲವನ್ನೂ ಪ್ರೀತಿಯಿಂದ ಮಾಡಿರಿ’ ಎಂದು ಪೌಲ ಹೇಳಿದನು. (1 ಕೊರಿಂ. 16:14) ದೇವಜನರ ವಿಷಯದಲ್ಲಿ ತಕ್ಕೊಳ್ಳುವ ಪ್ರತಿಯೊಂದು ನಿರ್ಣಯವನ್ನು ಅತಿ ಶ್ರೇಷ್ಠ ಗುಣವಾದ ಪ್ರೀತಿ ಪ್ರಭಾವಿಸುತ್ತದೆ. ಈ ಪ್ರೀತಿಯ ಕುರಿತು 1 ಕೊರಿಂಥ 13:4-8 ಹೇಳುವುದು: “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅದು ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ, ಆದರೆ ಸತ್ಯದಲ್ಲಿ ಹರ್ಷಿಸುತ್ತದೆ. ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” ನಮ್ಮ ಪ್ರಯೋಜನಕ್ಕಾಗಿ ತಕ್ಕೊಳ್ಳಲಾಗುವ ಪ್ರತಿ ನಿರ್ಣಯಕ್ಕೆ ಪ್ರೀತಿಯೇ ಆಧಾರ. ಹಾಗಾಗಿ ನಮಗೆ ಸಿಗುವ ಮಾರ್ಗದರ್ಶನವನ್ನು ಹಿಂಜರಿಕೆಯಿಲ್ಲದೆ ಪಾಲಿಸಬೇಕು. ಆ ಮಾರ್ಗದರ್ಶನದ ಮೂಲಕ ಯೆಹೋವನ ಪ್ರೀತಿ ನಮಗೆ ತೋರಿಬರುತ್ತದೆ.
ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಯಾವುದೂ ಹಾನಿಮಾಡದಂತೆ ನೋಡಿಕೊಳ್ಳುವ ಹಿರಿಯರಿಗೆ ನಾವು ಅಧೀನರಾಗಿರಬೇಕು
11 ಒಂದನೇ ಶತಮಾನದಂತೆಯೇ ಇಂದು ಸಹ ಯೆಹೋವನು ತನ್ನ ಜನರ ಮುಂದಾಳತ್ವ ವಹಿಸಲು ಅಪರಿಪೂರ್ಣ ಮಾನವರನ್ನು ನೇಮಿಸಿದ್ದಾನೆ. ಪ್ರಾಚೀನ ಕಾಲದಲ್ಲೂ ಅಪರಿಪೂರ್ಣ ಮಾನವರನ್ನು ಬಳಸಿ ತನ್ನ ಚಿತ್ತವನ್ನು ನೆರವೇರಿಸಿದನು. ಉದಾಹರಣೆಗೆ, ನಾವೆಯನ್ನು ಕಟ್ಟಲು, ಜಲಪ್ರಳಯದ ಕುರಿತು ಜನರಿಗೆ ತಿಳಿಸಲು ನೋಹನನ್ನು ಉಪಯೋಗಿಸಿದನು. (ಆದಿ. 6:13, 14, 22; 2 ಪೇತ್ರ 2:5) ಐಗುಪ್ತದಿಂದ ತನ್ನ ಜನರನ್ನು ಬಿಡಿಸಲು ಮೋಶೆಯನ್ನು ನೇಮಿಸಿದನು. (ವಿಮೋ. 3:10) ಇಡೀ ಬೈಬಲನ್ನು ಬರೆಯಲು ಅಪರಿಪೂರ್ಣ ಪುರುಷರನ್ನೇ ಪ್ರೇರಿಸಿದನು. (2 ತಿಮೊ. 3:16; 2 ಪೇತ್ರ 1:21) ಇಂದು ಯೆಹೋವನು ಅಪರಿಪೂರ್ಣ ಮಾನವರ ಮೂಲಕ ಸಾರುವ, ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ನಿರ್ದೇಶಿಸುತ್ತಿರುವುದು ಆತನ ಸಂಘಟನೆಯಲ್ಲಿ ನಮ್ಮ ಭರವಸೆಯನ್ನು ಕಡಿಮೆ ಮಾಡಬಾರದು, ಬದಲಿಗೆ ಇನ್ನೂ ಹೆಚ್ಚಿಸಬೇಕು. ಏಕೆಂದರೆ ಸಂಘಟನೆಯು ಇಂದು ಸಾಧಿಸುತ್ತಿರುವ ವಿಷಯಗಳು ಯೆಹೋವನ ಸಹಾಯವಿಲ್ಲದಿದ್ದರೆ ಖಂಡಿತ ಆಗುತ್ತಿರಲಿಲ್ಲ. ನಂಬಿಗಸ್ತ ಆಳು ಅನೇಕ ಸಂಕಷ್ಟಗಳನ್ನು ಹಿಂಸೆಯನ್ನು ಅನುಭವಿಸಿದೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ಪವಿತ್ರಾತ್ಮವು ತಮ್ಮನ್ನು ಮಾರ್ಗದರ್ಶಿಸುತ್ತಿದೆ ಎಂದು ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ಯೆಹೋವನು ತನ್ನ ಸಂಘಟನೆಯ ಭೂಭಾಗದ ಮೇಲೆ ಹೇರಳ ಆಶೀರ್ವಾದಗಳನ್ನು ಸುರಿಸುತ್ತಿದ್ದಾನೆ. ಹಾಗಾಗಿ ನಾವು ಆತನ ಸಂಘಟನೆಗೆ ಹೃತ್ಪೂರ್ವಕ ಬೆಂಬಲ ಕೊಡೋಣ, ಅದರ ಮೇಲೆ ಸಂಪೂರ್ಣ ಭರವಸೆ ಇಡೋಣ.
ನಮ್ಮ ಭರವಸೆಯನ್ನು ತೋರಿಸುವುದು ಹೇಗೆ?
12 ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮಗೆ ವಹಿಸಲಾದ ಕೆಲಸಗಳನ್ನು, ನೇಮಕಗಳನ್ನು ನಂಬಿಗಸ್ತಿಕೆಯಿಂದ ನಿರ್ವಹಿಸುವ ಮೂಲಕ ಸಂಘಟನೆಯ ಮೇಲೆ ತಮಗೆ ಭರವಸೆಯಿದೆ ಎಂದು ತೋರಿಸುತ್ತಾರೆ. (ಅ. ಕಾ. 20:28) ಪ್ರಚಾರಕರಾದ ನಾವು ಹುರುಪಿನಿಂದ ಸಾರುವ ಮೂಲಕ, ಪುನರ್ಭೇಟಿಗಳನ್ನೂ ಬೈಬಲ್ ಅಧ್ಯಯನಗಳನ್ನೂ ಮಾಡುವ ಮೂಲಕ ನಮ್ಮ ಭರವಸೆಯನ್ನು ತೋರಿಸುತ್ತೇವೆ. (ಮತ್ತಾ. 24:14; 28:19, 20) ನಂಬಿಗಸ್ತ ಆಳು ಕೊಡುವ ಹೇರಳ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯಲು ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡುತ್ತೇವೆ ಮತ್ತು ಹಾಜರಾಗುತ್ತೇವೆ. ಸಮ್ಮೇಳನ, ಅಧಿವೇಶನಗಳಿಗೆ ಹಾಜರಾಗುತ್ತೇವೆ. ಎಲ್ಲರೊಂದಿಗೆ ಸಹವಾಸಮಾಡುತ್ತಾ ಪರಸ್ಪರ ಪ್ರೋತ್ಸಾಹ ಪಡೆಯುತ್ತೇವೆ.—ಇಬ್ರಿ. 10:24, 25.
13 ಹಣ, ವಸ್ತುಗಳನ್ನು ಕಾಣಿಕೆಯಾಗಿ ಕೊಡುವ ಮೂಲಕ, ನಮ್ಮ ಸಹೋದರರಿಗೆ ಅಗತ್ಯವಿರುವಾಗ ತಡಮಾಡದೆ ಎಲ್ಲ ನೆರವನ್ನು ನೀಡುವ ಮೂಲಕ ಸಹ ಸಂಘಟನೆಯ ಮೇಲಿರುವ ಭರವಸೆಯನ್ನು ನಾವು ತೋರಿಸಬಹುದು. (ಜ್ಞಾನೋ. 3:9, 10; ಗಲಾ. 6:10; 1 ತಿಮೊ. 6:18) ಇದನ್ನು ನಾವು, ಸಹೋದರರ ಮೇಲಿರುವ ಪ್ರೀತಿಯನ್ನು ಮತ್ತು ಯೆಹೋವನಿಗೂ ಆತನ ಸಂಘಟನೆಗೂ ಕೃತಜ್ಞತೆಯನ್ನು ತೋರಿಸಲು ಒಂದು ಅವಕಾಶವಾಗಿ ಕಾಣುತ್ತೇವೆ. ಯೆಹೋವನು ನಮಗೆ ಎಷ್ಟೋ ಒಳ್ಳೇದನ್ನು ಮಾಡಿರುವುದರಿಂದ ಇಂಥ ಅವಕಾಶಗಳಿಗಾಗಿ ನಾವು ಹುಡುಕುತ್ತಾ ಇರಬೇಕು!—ಯೋಹಾ. 13:35.
14 ಸಂಘಟನೆ ಮಾಡುವ ನಿರ್ಣಯಗಳಿಗೆ ವಿಧೇಯರಾಗುವ ಮೂಲಕವೂ ನಮ್ಮ ಭರವಸೆಯನ್ನು ತೋರಿಸಬಹುದು. ಇದರಲ್ಲಿ ಸಂಚರಣ ಮೇಲ್ವಿಚಾರಕರು, ಸಭಾ ಹಿರಿಯರು, ಮೇಲ್ವಿಚಾರಕ ಸ್ಥಾನದಲ್ಲಿರುವ ಇತರರು ಕೊಡುವ ನಿರ್ದೇಶನಕ್ಕೆ ವಿಧೇಯರಾಗುವುದೂ ಅಧೀನರಾಗುವುದೂ ಸೇರಿದೆ. ಏಕೆಂದರೆ ಇವರೂ ‘ನಮ್ಮ ಮಧ್ಯೆ ಮುಂದಾಳತ್ವ ವಹಿಸುವವರಾಗಿದ್ದಾರೆ.’ (ಇಬ್ರಿ. 13:7, 17) ಕೆಲವು ನಿರ್ಣಯಗಳಿಗೆ ಕಾರಣ ನಮಗೆ ಅರ್ಥವಾಗದಿದ್ದರೂ ಅವು ನಮ್ಮ ಒಳ್ಳೇದಕ್ಕೇ ಎಂದು ಮನಸ್ಸಿನಲ್ಲಿಡುತ್ತೇವೆ. ಹೀಗೆ ನಾವು ನಮ್ಮ ಯಜಮಾನನಾದ ಯೇಸು ಕ್ರಿಸ್ತನಿಗೆ ಅಧೀನರಾಗುತ್ತೇವೆ. ದೇವರ ವಾಕ್ಯಕ್ಕೆ, ಸಂಘಟನೆಗೆ ವಿಧೇಯತೆ ತೋರಿಸಿದ್ದಕ್ಕಾಗಿ ಯೆಹೋವನು ನಮ್ಮನ್ನು ಆಶೀರ್ವದಿಸುವನು.
15 ನಂಬಿಗಸ್ತ, ವಿವೇಚನೆಯುಳ್ಳ ಆಳಿನಲ್ಲಿ ಭರವಸೆಯಿಡಲು ನಮಗೆ ಎಷ್ಟೆಲ್ಲ ಕಾರಣಗಳಿವೆ! ಈ ದುಷ್ಟ ಲೋಕದ ದೇವನಾಗಿರುವ ಸೈತಾನನು ಯೆಹೋವನಿಗೂ ಆತನ ಸಂಘಟನೆಗೂ ಕೆಟ್ಟ ಹೆಸರು ತರಲು ಎಲ್ಲ ಪ್ರಯತ್ನ ಮಾಡುತ್ತಿದ್ದಾನೆ. (2 ಕೊರಿಂ. 4:4) ಅವನ ಕುತಂತ್ರಗಳಿಗೆ ಮೋಸಹೋಗಬೇಡಿ! (2 ಕೊರಿಂ. 2:11) ‘ಸ್ವಲ್ಪವೇ ಸಮಯದಲ್ಲಿ’ ಸೈತಾನನನ್ನು ಅಗಾಧ ಸ್ಥಳಕ್ಕೆ ದೊಬ್ಬಲಾಗುತ್ತದೆ. ಹಾಗಾಗಿ ಅವನು ಆದಷ್ಟು ಹೆಚ್ಚು ದೇವಜನರನ್ನು ಯೆಹೋವನಿಂದ ದೂರಮಾಡಲು ಪಣತೊಟ್ಟಿದ್ದಾನೆ. (ಪ್ರಕ. 12:12) ಅವನೆಷ್ಟೇ ಪ್ರಯತ್ನಿಸಲಿ ನಾವು ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗೋಣ. ಯೆಹೋವನಲ್ಲೂ ನಂಬಿಗಸ್ತ ಆಳಿನಲ್ಲೂ ಪೂರ್ಣ ಭರವಸೆಯಿಡೋಣ. ಆಗ ನಾವೆಲ್ಲರೂ ಐಕ್ಯರಾಗಿರುತ್ತೇವೆ.